ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಪವಿತ್ರಾತ್ಮ ದೇವರ ಅಗಾಧ ವಿಷಯಗಳನ್ನು ಪರಿಶೋಧಿಸುತ್ತದೆ’

‘ಪವಿತ್ರಾತ್ಮ ದೇವರ ಅಗಾಧ ವಿಷಯಗಳನ್ನು ಪರಿಶೋಧಿಸುತ್ತದೆ’

‘ಪವಿತ್ರಾತ್ಮ ದೇವರ ಅಗಾಧ ವಿಷಯಗಳನ್ನು ಪರಿಶೋಧಿಸುತ್ತದೆ’

“ಪವಿತ್ರಾತ್ಮವು ಎಲ್ಲ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನೂ ಪರಿಶೋಧಿಸುತ್ತದೆ.” —1 ಕೊರಿಂ. 2:10.

1. ಒಂದನೇ ಕೊರಿಂಥ 2:10ರಲ್ಲಿ ಪವಿತ್ರಾತ್ಮದ ಯಾವ ಪಾತ್ರವನ್ನು ಪೌಲನು ಎತ್ತಿಹೇಳಿದ್ದಾನೆ? ಯಾವ ಪ್ರಶ್ನೆಗಳು ಏಳುತ್ತವೆ?

ಯೆಹೋವನ ಪವಿತ್ರಾತ್ಮದ ಕಾರ್ಯಕ್ಕಾಗಿ ನಾವೆಷ್ಟು ಆಭಾರಿಗಳಾಗಿರಬಲ್ಲೆವು! ಬೈಬಲ್‌ ಪವಿತ್ರಾತ್ಮವನ್ನು ಒಬ್ಬ ಸಹಾಯಕ, ಒಂದು ವರದಾನ, ಒಂದು ಸಾಕ್ಷಿಯೆಂದೂ ಮತ್ತು ಅದು ನಮಗೋಸ್ಕರ ಬೇಡಿಕೊಳ್ಳುತ್ತದೆ ಎಂದೂ ತಿಳಿಸುತ್ತದೆ. (ಯೋಹಾ. 14:16; ಅ. ಕಾ. 2:38; ರೋಮ. 8:16, 26, 27) ಪವಿತ್ರಾತ್ಮ ನಿರ್ವಹಿಸುವ ಇನ್ನೊಂದು ಮುಖ್ಯ ಪಾತ್ರವನ್ನು ಅಪೊಸ್ತಲ ಪೌಲನು ಎತ್ತಿತೋರಿಸುತ್ತಾ ಅಂದದ್ದು: “ಪವಿತ್ರಾತ್ಮವು ಎಲ್ಲ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನೂ ಪರಿಶೋಧಿಸುತ್ತದೆ.” (1 ಕೊರಿಂ. 2:10) ಅಗಾಧ ಆಧ್ಯಾತ್ಮಿಕ ಸತ್ಯಗಳನ್ನು ಪ್ರಕಟಪಡಿಸಲು ಯೆಹೋವನು ತನ್ನ ಪವಿತ್ರಾತ್ಮವನ್ನು ಉಪಯೋಗಿಸುತ್ತಾನೆ ನಿಶ್ಚಯ. ಅದರ ಸಹಾಯದ ಹೊರತು ನಾವು ಯೆಹೋವನ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುತ್ತಿದ್ದೆವೊ? ಇಲ್ಲ ಖಂಡಿತ. (1 ಕೊರಿಂಥ 2:9-12 ಓದಿ.) ಆದರೆ ಹಲವಾರು ಪ್ರಶ್ನೆಗಳು ಏಳುತ್ತವೆ: ‘ಪವಿತ್ರಾತ್ಮವು ದೇವರ ಅಗಾಧ ವಿಷಯಗಳನ್ನು ಹೇಗೆ ಪರಿಶೋಧಿಸುತ್ತದೆ’? ಕ್ರಿ.ಶ. ಮೊದಲನೇ ಶತಮಾನದಲ್ಲಿ ಯೆಹೋವನು ಈ ವಿಷಯಗಳನ್ನು ಯಾರ ಮೂಲಕ ಪ್ರಕಟಪಡಿಸಿದನು? ನಮ್ಮ ದಿನದಲ್ಲಿ ಹೇಗೆ ಮತ್ತು ಯಾರ ಮೂಲಕ ಪವಿತ್ರಾತ್ಮ ಈ ಅಗಾಧ ವಿಷಯಗಳನ್ನು ಪರಿಶೋಧಿಸುತ್ತದೆ?

2. ಪವಿತ್ರಾತ್ಮ ಯಾವ ಎರಡು ವಿಧಗಳಲ್ಲಿ ಕಾರ್ಯನಡಿಸುತ್ತದೆ?

2 ಪವಿತ್ರಾತ್ಮ ಎರಡು ವಿಧದಲ್ಲಿ ಕಾರ್ಯನಡಿಸುತ್ತದೆ ಎಂದು ಯೇಸು ಸೂಚಿಸಿದನು. ತನ್ನ ಮರಣಕ್ಕೆ ಸ್ವಲ್ಪ ಮುಂಚೆ ಅವನು ತನ್ನ ಅಪೊಸ್ತಲರಿಗೆ ಹೇಳಿದ್ದು: “ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಸಹಾಯಕ, ಅಂದರೆ ಆ ಒಬ್ಬನಾದ ಪವಿತ್ರಾತ್ಮ ನಿಮಗೆ ಎಲ್ಲ ವಿಷಯಗಳನ್ನು ಬೋಧಿಸುವನು ಮತ್ತು ನಾನು ನಿಮಗೆ ಹೇಳಿದ ಎಲ್ಲ ವಿಷಯಗಳನ್ನು ನಿಮ್ಮ ಮನಸ್ಸಿಗೆ ತರುವನು.” (ಯೋಹಾ. 14:26) ಹೀಗೆ ಪವಿತ್ರಾತ್ಮ ಒಬ್ಬ ಶಿಕ್ಷಕನಂತೆ ಮತ್ತು ನೆನಪು ಹುಟ್ಟಿಸುವವನಂತೆ ಕಾರ್ಯನಡಿಸುವುದು. ಶಿಕ್ಷಕನಂತೆ ಅದು, ಈ ಹಿಂದೆ ಅರ್ಥಮಾಡಿಕೊಂಡಿಲ್ಲದ ವಿಷಯಗಳನ್ನು ಗ್ರಹಿಸಿಕೊಳ್ಳಲು ಕ್ರೈಸ್ತರಿಗೆ ಸಹಾಯಮಾಡುವುದು. ನೆನಪು ಹುಟ್ಟಿಸುವವನಂತೆ ಅದು, ವಿವರಿಸಲ್ಪಟ್ಟ ವಿಷಯವನ್ನು ನೆನಪಿಗೆ ತಂದು ಸರಿಯಾಗಿ ಅನ್ವಯಿಸಿಕೊಳ್ಳಲು ಸಹಾಯಮಾಡುವುದು.

ಪ್ರಥಮ ಶತಮಾನದಲ್ಲಿ

3. ‘ದೇವರ ಅಗಾಧ ವಿಷಯಗಳು’ ಪ್ರಗತಿಪರವಾಗಿ ಪ್ರಕಟಿಸಲ್ಪಡುವವು ಎಂಬುದನ್ನು ಯೇಸುವಿನ ಯಾವ ಮಾತುಗಳು ಸೂಚಿಸಿದವು?

3 ತನ್ನ ಶಿಷ್ಯರಿಗೆ ಹೊಸದಾಗಿದ್ದ ಅನೇಕ ವಿಷಯಗಳನ್ನು ಸ್ವತಃ ಯೇಸು ಅವರಿಗೆ ಕಲಿಸಿದನು. ಆದರೂ ಅವರಿಗೆ ಇನ್ನೂ ಹೆಚ್ಚನ್ನು ಕಲಿಯಲಿಕ್ಕಿತ್ತು. ಯೇಸು ಅಪೊಸ್ತಲರಿಗೆ ಅಂದದ್ದು: “ನಾನು ನಿಮಗೆ ಇನ್ನೂ ಅನೇಕ ವಿಷಯಗಳನ್ನು ಹೇಳಲಿಕ್ಕಿದೆ, ಆದರೆ ಸದ್ಯಕ್ಕೆ ನೀವು ಅವುಗಳನ್ನು ಸಹಿಸಿಕೊಳ್ಳಲಾರಿರಿ. ಆದರೂ ಆ ಒಬ್ಬನು, ಸತ್ಯದ ಪವಿತ್ರಾತ್ಮ ಬರುವಾಗ ಅವನು ನಿಮ್ಮನ್ನು ಮಾರ್ಗದರ್ಶಿಸಿ ನೀವು ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುವನು.” (ಯೋಹಾ. 16:12, 13) ಹೀಗೆ ಪವಿತ್ರಾತ್ಮದ ಮೂಲಕ ಅಗಾಧ ಆಧ್ಯಾತ್ಮಿಕ ವಿಷಯಗಳು ಪ್ರಗತಿಪರವಾಗಿ ಪ್ರಕಟಿಸಲ್ಪಡುವವು ಎಂಬುದನ್ನು ಯೇಸು ಸೂಚಿಸಿದನು.

4. ಕ್ರಿ.ಶ. 33ರ ಪಂಚಾಶತ್ತಮದಂದು ಪವಿತ್ರಾತ್ಮ ಹೇಗೆ ಒಬ್ಬ ಶಿಕ್ಷಕನಂತೆ ಮತ್ತು ನೆನಪು ಹುಟ್ಟಿಸುವವನಂತೆ ಕಾರ್ಯನಡಿಸಿತು?

4 ಕ್ರಿ.ಶ. 33ರ ಪಂಚಾಶತ್ತಮದಂದು ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಸುಮಾರು 120 ಮಂದಿ ಕ್ರೈಸ್ತರ ಮೇಲೆ ಸುರಿಸಲ್ಪಡುವ ಮೂಲಕ “ಸತ್ಯದ ಪವಿತ್ರಾತ್ಮ” ಆಗಮಿಸಿತು. ಇದಕ್ಕೆ ದೃಷ್ಟಿಗೋಚರ ಮತ್ತು ಶ್ರವಣಗೋಚರ ಪುರಾವೆಗಳು ಅಲ್ಲಿದ್ದವು. (ಅ. ಕಾ. 1:4, 5, 15; 2:1-4) ಶಿಷ್ಯರು “ದೇವರ ಮಹೋನ್ನತ ಕಾರ್ಯಗಳ ವಿಷಯವಾಗಿ” ವಿಭಿನ್ನ ಭಾಷೆಗಳಲ್ಲಿ ಮಾತಾಡಿದರು. (ಅ. ಕಾ. 2:5-11) ಯಾವುದೋ ಹೊಸ ವಿಷಯವನ್ನು ಪ್ರಕಟಗೊಳಿಸುವ ಸಮಯವೂ ಅದಾಗಿತ್ತು. ಪವಿತ್ರಾತ್ಮವು ಈ ರೀತಿಯಲ್ಲಿ ಸುರಿಸಲ್ಪಡುವುದರ ಕುರಿತು ಪ್ರವಾದಿ ಯೋವೇಲನು ಮುಂತಿಳಿಸಿದ್ದನು. (ಯೋವೇ. 2:28-32) ತಾವು ನಿರೀಕ್ಷಿಸದೇ ಇದ್ದ ರೀತಿಯಲ್ಲಿ ಯೋವೇಲನ ಆ ಪ್ರವಾದನೆಯು ನೆರವೇರುವುದನ್ನು ಪ್ರೇಕ್ಷಕರು ಕಂಡರು. ಪೇತ್ರನು ಈ ಘಟನೆಯನ್ನು ವಿವರಿಸಲು ಎದ್ದು ನಿಂತನು. (ಅ. ಕಾರ್ಯಗಳು 2:14-18 ಓದಿ.) ಶಿಷ್ಯರ ಮೇಲೆ ಆಗ ತಾನೇ ಘಟಿಸಿದ ವಿಷಯವು ಯೋವೇಲನ ಪ್ರಾಚೀನ ಪ್ರವಾದನೆಯ ನೆರವೇರಿಕೆಯಾಗಿತ್ತು ಎಂದು ಪೇತ್ರನಿಗೆ ಸ್ಪಷ್ಟಪಡಿಸುವ ಮೂಲಕ ಪವಿತ್ರಾತ್ಮವು ಶಿಕ್ಷಕನಂತೆ ಕಾರ್ಯನಡಿಸಿತು. ಪವಿತ್ರಾತ್ಮ ನೆನಪು ಹುಟ್ಟಿಸುವವನಂತೆಯೂ ಕಾರ್ಯನಡಿಸಿತು, ಹೇಗೆಂದರೆ ಪೇತ್ರನು ಯೋವೇಲ ಪುಸ್ತಕದಿಂದ ಮಾತ್ರವಲ್ಲದೆ ದಾವೀದನ ಎರಡು ಕೀರ್ತನೆಗಳಿಂದಲೂ ಉಲ್ಲೇಖಗಳನ್ನು ಮಾಡಿದನು. (ಕೀರ್ತ. 16:8-11; 110:1; ಅ. ಕಾ. 2:25-28, 34, 35) ಅಲ್ಲಿ ಕೂಡಿದ್ದವರು ನೋಡಿದ್ದು ಮತ್ತು ಕೇಳಿಸಿಕೊಂಡದ್ದು ನಿಜಕ್ಕೂ ದೇವರ ಅಗಾಧ ವಿಷಯಗಳಾಗಿದ್ದವು.

5, 6. (ಎ) ಕ್ರಿ.ಶ. 33ರ ಪಂಚಾಶತ್ತಮದ ನಂತರ ಹೊಸ ಒಡಂಬಡಿಕೆಯ ಕುರಿತ ಯಾವ ಪ್ರಾಮುಖ್ಯ ಪ್ರಶ್ನೆಗಳನ್ನು ಉತ್ತರಿಸುವುದು ಅವಶ್ಯವಾಗಿತ್ತು? (ಬಿ) ಯಾರ ಮೂಲಕ ಈ ಪ್ರಶ್ನೆಗಳು ಎಬ್ಬಿಸಲ್ಪಟ್ಟವು? ತೀರ್ಮಾನಗಳು ಹೇಗೆ ಮಾಡಲ್ಪಟ್ಟವು?

5 ಪ್ರಥಮ ಶತಮಾನದ ಕ್ರೈಸ್ತರಿಗೆ ಇನ್ನೂ ಅನೇಕ ವಿಷಯಗಳ ಸ್ಪಷ್ಟೀಕರಣ ಬೇಕಾಗಿತ್ತು. ಉದಾಹರಣೆಗೆ, ಪಂಚಾಶತ್ತಮ ದಿನದಂದು ಜಾರಿಗೆ ತರಲ್ಪಟ್ಟ ಹೊಸ ಒಡಂಬಡಿಕೆಯ ಬಗ್ಗೆ ಪ್ರಶ್ನೆಗಳಿದ್ದವು. ಹೊಸ ಒಡಂಬಡಿಕೆ ಯೆಹೂದ್ಯರಿಗೆ ಮತ್ತು ಯೆಹೂದಿ ಮತಾವಲಂಬಿಗಳಿಗೆ ಮಾತ್ರ ಸೀಮಿತವಾಗಿತ್ತೊ? ಅನ್ಯಜನಾಂಗಗಳವರು ಸಹ ಅದರಲ್ಲಿ ಸೇರಿಸಲ್ಪಟ್ಟು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡುವರೊ? (ಅ. ಕಾ. 10:45) ಅನ್ಯಜನಾಂಗಗಳ ಪುರುಷರು ಮೊದಲು ಸುನ್ನತಿ ಮಾಡಿಸಿಕೊಂಡು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಬೇಕಿತ್ತೋ? (ಅ. ಕಾ. 15:1, 5) ಇವು ಬಹು ಪ್ರಾಮುಖ್ಯ ಪ್ರಶ್ನೆಗಳಾಗಿದ್ದವು. ಈ ಅಗಾಧ ವಿಷಯಗಳನ್ನು ಪರಿಶೋಧಿಸಲು ಯೆಹೋವನ ಪವಿತ್ರಾತ್ಮ ಬೇಕಾಗಿತ್ತು. ಆದರೆ ಅದು ಯಾರ ಮೂಲಕ ಕಾರ್ಯನಡಿಸುವುದು?

6 ಮೇಲೆ ತಿಳಿಸಲಾದ ಪ್ರತಿಯೊಂದು ಪ್ರಶ್ನೆಯು ಪರಿಗಣನೆಗೆ ತರಲ್ಪಟ್ಟದ್ದು ಜವಾಬ್ದಾರಿಯುತ ಸಹೋದರರ ಮೂಲಕವೇ. ಪೇತ್ರ, ಪೌಲ ಮತ್ತು ಬಾರ್ನಬರು ಆಡಳಿತ ಮಂಡಲಿಯ ಆ ಕೂಟದಲ್ಲಿ ಹಾಜರಿದ್ದರು ಮತ್ತು ಸುನ್ನತಿಯಿಲ್ಲದ ಅನ್ಯಜನಾಂಗದವರ ಕಡೆಗೆ ಯೆಹೋವನು ತನ್ನ ಗಮನವನ್ನು ತಿರುಗಿಸಿದ್ದರ ಕುರಿತು ಅವರು ತಿಳಿಸಿದರು. (ಅ. ಕಾ. 15:7-12) ಈ ವಿಷಯಗಳನ್ನು ಹೀಬ್ರು ಶಾಸ್ತ್ರಗಳಲ್ಲಿರುವ ಸೂಚನೆಗಳ ಆಧಾರದ ಮೇಲೆ ಮತ್ತು ಪವಿತ್ರಾತ್ಮದ ಸಹಾಯದಿಂದ ಪರಿಗಣಿಸಿದ ತರುವಾಯ ಆಡಳಿತ ಮಂಡಲಿ ಒಂದು ತೀರ್ಮಾನ ಮಾಡಿತು. ಅನಂತರ ಅವರು ಆ ತೀರ್ಮಾನದ ಕುರಿತು ಸಭೆಗಳಿಗೆ ಪತ್ರಗಳ ಮೂಲಕ ತಿಳಿಸಿದರು.—ಅ. ಕಾರ್ಯಗಳು 15:25-30; 16:4, 5 ಓದಿ; ಎಫೆ. 3:5, 6.

7. ಯಾವುದರ ಮೂಲಕ ಅಗಾಧ ಸತ್ಯಗಳು ಪ್ರಕಟಿಸಲ್ಪಟ್ಟವು?

7 ಇನ್ನಿತರ ಅನೇಕ ವಿಷಯಗಳು ಯೋಹಾನ, ಪೇತ್ರ, ಯಾಕೋಬ ಮತ್ತು ಪೌಲರು ಬರೆದ ಪ್ರೇರಿತ ಬರಹಗಳ ಮೂಲಕ ಸ್ಪಷ್ಟೀಕರಿಸಲ್ಪಟ್ಟವು. ಆದರೆ ಕ್ರೈಸ್ತ ಶಾಸ್ತ್ರಗ್ರಂಥವು ಬರೆದು ಮುಗಿಸಲ್ಪಟ್ಟ ನಂತರದ ಒಂದು ಹಂತದಲ್ಲಿ ಪ್ರವಾದಿಸುವ ಮತ್ತು ಅದ್ಭುತಕರ ಜ್ಞಾನಪ್ರಕಾಶದ ವರಗಳು ನಿಂತುಹೋದವು. (1 ಕೊರಿಂ. 13:8) ಇದರ ನಂತರವೂ ಪವಿತ್ರಾತ್ಮವು ಶಿಕ್ಷಕನಂತೆ ಮತ್ತು ನೆನಪು ಹುಟ್ಟಿಸುವವನಂತೆ ಕಾರ್ಯನಡಿಸುವುದೊ? ದೇವರ ಅಗಾಧ ವಿಷಯಗಳನ್ನು ಪರಿಶೋಧಿಸಲು ಅದು ಕ್ರೈಸ್ತರಿಗೆ ಸಹಾಯಮಾಡುವುದನ್ನು ಮುಂದುವರಿಸುವುದೊ? ಹೌದೆಂದು ಪ್ರವಾದನೆ ಸೂಚಿಸಿತ್ತು.

ಅಂತ್ಯಕಾಲದಲ್ಲಿ

8, 9. ಅಂತ್ಯಕಾಲದಲ್ಲಿ ಯಾರು ಆಧ್ಯಾತ್ಮಿಕ ಒಳನೋಟದೊಂದಿಗೆ “ಪ್ರಕಾಶಿಸುವರು”?

8 ಅಂತ್ಯಕಾಲದ ಕುರಿತು ಮಾತಾಡುತ್ತಾ ಒಬ್ಬ ದೇವದೂತನು ಮುಂತಿಳಿಸಿದ್ದು: “[ಒಳನೋಟವುಳ್ಳವರು] ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು; ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು. . . . ತಿಳುವಳಿಕೆಯು ಹೆಚ್ಚುವದು.” (ದಾನಿ. 12:3, 4) ಒಳನೋಟವುಳ್ಳವರು ಯಾರಾಗಿರುವರು ಮತ್ತು ಯಾರು ಪ್ರಕಾಶಿಸುವರು? ಗೋದಿ ಮತ್ತು ಕಳೆಗಳ ದೃಷ್ಟಾಂತದಲ್ಲಿ ಯೇಸು ಒಂದು ಸುಳಿವನ್ನು ಕೊಟ್ಟನು. ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ ಕುರಿತು ಮಾತಾಡುತ್ತಾ ಅವನು ಹೇಳಿದ್ದು: “ಆ ಸಮಯದಲ್ಲಿ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು.” (ಮತ್ತಾ. 13:39, 43) ತಾನು ಕೊಟ್ಟ ವಿವರಣೆಯಲ್ಲಿ ಆ “ನೀತಿವಂತರು” ಅಭಿಷಿಕ್ತರಾದ “ರಾಜ್ಯದ ಪುತ್ರರು” ಎಂದು ಯೇಸು ಗುರುತಿಸಿದನು.—ಮತ್ತಾ. 13:38.

9 ಅಭಿಷಿಕ್ತ ಕ್ರೈಸ್ತರೆಲ್ಲರೂ ‘ಪ್ರಕಾಶಿಸುವರೊ’? ಒಂದರ್ಥದಲ್ಲಿ ಹೌದು. ಏಕೆಂದರೆ ಸಾರುವ, ಶಿಷ್ಯರನ್ನಾಗಿ ಮಾಡುವ ಮತ್ತು ಕೂಟಗಳಲ್ಲಿ ಪರಸ್ಪರ ಭಕ್ತಿವೃದ್ಧಿಗೊಳಿಸುವ ವಿಷಯದಲ್ಲಿ ಕ್ರೈಸ್ತರೆಲ್ಲರೂ ಭಾಗವಹಿಸುವರು. ಆದರೆ ಇದಕ್ಕೆ ಮಾದರಿಯನ್ನಿಡುವವರು ಅಭಿಷಿಕ್ತರು. (ಜೆಕ. 8:23) ಇದಲ್ಲದೆ ಅಗಾಧ ವಿಷಯಗಳು ಅಂತ್ಯಕಾಲದಲ್ಲಿ ಪ್ರಕಟಗೊಳ್ಳಲಿಕ್ಕಿದ್ದವು. ಆ ಕಾಲದ ವರೆಗೆ ದಾನಿಯೇಲನು ದಾಖಲಿಸಿದ ಅದೇ ಪ್ರವಾದನೆಗೆ ‘ಮುದ್ರೆ ಹಾಕಲ್ಪಟ್ಟಿತ್ತು.’ (ದಾನಿ. 12:9) ಈ ಅಗಾಧ ವಿಷಯಗಳನ್ನು ಪವಿತ್ರಾತ್ಮವು ಹೇಗೆ ಮತ್ತು ಯಾರ ಮೂಲಕ ಪರಿಶೋಧಿಸುವುದು?

10. (ಎ) ಕಡೇ ದಿವಸಗಳಲ್ಲಿ ಪವಿತ್ರಾತ್ಮ ಯಾರ ಮೂಲಕ ಅಗಾಧ ವಿಷಯಗಳನ್ನು ಪ್ರಕಟಪಡಿಸುತ್ತದೆ? (ಬಿ) ಯೆಹೋವನ ಮಹಾ ಆಧ್ಯಾತ್ಮಿಕ ಆಲಯದ ಕುರಿತ ಸತ್ಯಗಳು ಹೇಗೆ ಸ್ಪಷ್ಟೀಕರಿಸಲ್ಪಟ್ಟವು ಎಂದು ವಿವರಿಸಿ.

10 ನಮ್ಮ ದಿನದಲ್ಲಿ ಒಂದು ಆಧ್ಯಾತ್ಮಿಕ ವಿಷಯವನ್ನು ಸರಿಯಾಗಿ ಸ್ಪಷ್ಟೀಕರಿಸುವ ಸಮಯ ಬಂದಾಗ ಏನಾಗುತ್ತದೆ? ಈ ಹಿಂದೆ ಅರ್ಥವಾಗದ ಗಾಢ ಸತ್ಯಗಳನ್ನು ಗ್ರಹಿಸಿಕೊಳ್ಳಲು ಮುಖ್ಯ ಕಾರ್ಯಾಲಯದಲ್ಲಿ ಕೆಲಸಮಾಡುವ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಜವಾಬ್ದಾರಿಯುತ ಪ್ರತಿನಿಧಿಗಳಿಗೆ ಪವಿತ್ರಾತ್ಮವು ಸಹಾಯಮಾಡುತ್ತದೆ. (ಮತ್ತಾ. 24:45; 1 ಕೊರಿಂ. 2:13) ಆಡಳಿತ ಮಂಡಲಿಯು ಒಟ್ಟುಗೂಡಿ ಸರಿಹೊಂದಿಸಿದ ಆ ವಿವರಣೆಗಳನ್ನು ಪರಿಶೀಲಿಸುತ್ತದೆ. (ಅ. ಕಾ. 15:6) ಅವರಿಗೇನು ತಿಳಿದುಬರುತ್ತದೋ ಅದನ್ನು ಅವರು ಎಲ್ಲರ ಪ್ರಯೋಜನಾರ್ಥವಾಗಿ ಪ್ರಕಾಶನದಲ್ಲಿ ಪ್ರಕಟಿಸುತ್ತಾರೆ. (ಮತ್ತಾ. 10:27) ಸಮಯ ಕಳೆದಂತೆ ಹೆಚ್ಚಿನ ಸ್ಪಷ್ಟೀಕರಣಗಳು ಬೇಕಾಗಬಹುದು. ಅವನ್ನು ಸಹ ಪ್ರಾಮಾಣಿಕವಾಗಿ ವಿವರಿಸಲಾಗುತ್ತದೆ.—“ಆಧ್ಯಾತ್ಮಿಕ ಆಲಯದ ಅರ್ಥವನ್ನು ಪವಿತ್ರಾತ್ಮ ಪ್ರಕಟಪಡಿಸಿದ ವಿಧ” ಎಂಬ ಚೌಕ ನೋಡಿ.

ಇಂದು ಪವಿತ್ರಾತ್ಮ ವಹಿಸುವ ಪಾತ್ರದಿಂದ ಪ್ರಯೋಜನ

11. ದೇವರ ಅಗಾಧ ವಿಷಯಗಳನ್ನು ಪ್ರಕಟಪಡಿಸುವುದರಲ್ಲಿ ಪವಿತ್ರಾತ್ಮ ವಹಿಸುವ ಪಾತ್ರದಿಂದ ಇಂದು ಕ್ರೈಸ್ತರೆಲ್ಲರೂ ಹೇಗೆ ಪ್ರಯೋಜನ ಹೊಂದುತ್ತಾರೆ?

11 ದೇವರ ಅಗಾಧ ವಿಷಯಗಳನ್ನು ಪ್ರಕಟಪಡಿಸುವುದರಲ್ಲಿ ಪವಿತ್ರಾತ್ಮ ವಹಿಸುವ ಪಾತ್ರದಿಂದ ಎಲ್ಲ ನಂಬಿಗಸ್ತ ಕ್ರೈಸ್ತರು ಪ್ರಯೋಜನ ಹೊಂದುತ್ತಾರೆ. ಪ್ರಥಮ ಶತಮಾನದ ಕ್ರೈಸ್ತರಂತೆ, ಪವಿತ್ರಾತ್ಮವು ಅರ್ಥಮಾಡಿಕೊಳ್ಳಲು ಸಹಾಯಮಾಡುವ ಮಾಹಿತಿಯನ್ನು ನಾವಿಂದು ಅಧ್ಯಯನ ಮಾಡಿ, ನಂತರ ನೆನಪಿಗೆ ತಂದು ಅನ್ವಯಿಸಿಕೊಳ್ಳುತ್ತೇವೆ. (ಲೂಕ 12:11, 12) ಪ್ರಕಟಿಸಲ್ಪಟ್ಟಿರುವ ಅಗಾಧ ಆಧ್ಯಾತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಹೆಚ್ಚಿನ ಲೌಕಿಕ ಶಿಕ್ಷಣ ಬೇಕಾಗಿಲ್ಲ. (ಅ. ಕಾ. 4:13) ದೇವರ ಅಗಾಧ ವಿಷಯಗಳ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲು ನಾವೇನು ಮಾಡಬಲ್ಲೆವು? ಕೆಲವು ಸಲಹೆಗಳನ್ನು ಪರಿಗಣಿಸಿ.

12. ನಾವು ಪವಿತ್ರಾತ್ಮಕ್ಕಾಗಿ ಯಾವಾಗ ಪ್ರಾರ್ಥಿಸಬೇಕು?

12ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ. ನಾವು ಶಾಸ್ತ್ರಾಧಾರಿತ ಮಾಹಿತಿಯನ್ನು ಪರಿಗಣಿಸಲಿಕ್ಕಿರುವಾಗ ಪವಿತ್ರಾತ್ಮ ನಮ್ಮನ್ನು ಮಾರ್ಗದರ್ಶಿಸುವಂತೆ ಮೊದಲು ಪ್ರಾರ್ಥನೆಯಲ್ಲಿ ವಿನಂತಿಸಬೇಕು. ನಾವು ಒಬ್ಬರೇ ಇರಲಿ ಅಥವಾ ನಮಗಿರುವ ಸಮಯ ಕೊಂಚವೇ ಆಗಿರಲಿ ಪವಿತ್ರಾತ್ಮಕ್ಕಾಗಿ ನಾವು ಪ್ರಾರ್ಥಿಸತಕ್ಕದ್ದು. ಇಂಥ ದೀನ ವಿನಂತಿಗಳು ನಮ್ಮ ಸ್ವರ್ಗೀಯ ತಂದೆಯ ಹೃದಯವನ್ನು ಖಂಡಿತ ಸಂತೋಷಗೊಳಿಸುವವು. ಯೇಸು ಸೂಚಿಸಿದಂತೆ ಯೆಹೋವನು ನಮ್ಮ ಹೃತ್ಪೂರ್ವಕ ಬೇಡಿಕೆಗೆ ಸ್ಪಂದಿಸುತ್ತಾ ತನ್ನ ಪವಿತ್ರಾತ್ಮವನ್ನು ಉದಾರವಾಗಿ ಕೊಡುವನು.—ಲೂಕ 11:13.

13, 14. ದೇವರ ಅಗಾಧ ವಿಷಯಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕೂಟಗಳ ತಯಾರಿ ಯಾವ ಪಾತ್ರ ವಹಿಸುತ್ತದೆ?

13ಕೂಟಗಳಿಗಾಗಿ ತಯಾರಿಸಿ. ಆಳು ವರ್ಗದ ಮೂಲಕ “ತಕ್ಕ ಸಮಯಕ್ಕೆ ಆಹಾರವನ್ನು” ನಾವು ಪಡೆದುಕೊಳ್ಳುತ್ತೇವೆ. ಈ “ಆಳು” ಶಾಸ್ತ್ರಾಧಾರಿತ ಮಾಹಿತಿಯನ್ನು ಒದಗಿಸುವ ಮೂಲಕ ಮತ್ತು ಅಧ್ಯಯನ ಹಾಗೂ ಕೂಟಗಳಿಗಾಗಿ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ಮೂಲಕ ತನ್ನ ನೇಮಕವನ್ನು ಪೂರೈಸುತ್ತಾನೆ. ಒಂದು ನಿರ್ದಿಷ್ಟ ಮಾಹಿತಿಯನ್ನು “ಸಹೋದರರ ಇಡೀ ಬಳಗ” ಪರಿಗಣಿಸಬೇಕೆಂದು ಕೇಳಿಕೊಳ್ಳುವುದಕ್ಕೆ ಸರಿಯಾದ ಹಾಗೂ ಜಾಗ್ರತೆಯಿಂದ ಪರಿಶೀಲಿಸಲ್ಪಟ್ಟ ಕಾರಣಗಳಿರುತ್ತವೆ. (1 ಪೇತ್ರ 2:17; ಕೊಲೊ. 4:16; ಯೂದ 3) ಶಿಫಾರಸ್ಸು ಮಾಡಲ್ಪಟ್ಟ ಮಾಹಿತಿಯನ್ನು ಅನುಸರಿಸಲು ನಮ್ಮಿಂದಾದ ಎಲ್ಲವನ್ನೂ ಮಾಡುವಾಗ ನಾವು ಪವಿತ್ರಾತ್ಮದೊಂದಿಗೆ ಸಹಕರಿಸುವವರಾಗುತ್ತೇವೆ.—ಪ್ರಕ. 2:29.

14 ಕ್ರೈಸ್ತ ಕೂಟಗಳಿಗಾಗಿ ತಯಾರಿಸುವಾಗ ಉದ್ಧೃತ ಶಾಸ್ತ್ರವಚನಗಳನ್ನು ತೆರೆದು, ಪರಿಗಣಿಸಲ್ಪಡುತ್ತಿರುವ ವಿಷಯಕ್ಕೆ ಪ್ರತಿಯೊಂದು ವಚನ ಹೇಗೆ ಸಂಬಂಧಿಸಿದೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೇದು. ಈ ಅಭ್ಯಾಸವು ನಮ್ಮ ಬೈಬಲ್‌ ತಿಳಿವಳಿಕೆಯನ್ನು ಕ್ರಮೇಣ ಗಾಢಗೊಳಿಸುವುದು. (ಅ. ಕಾ. 17:11, 12) ವಚನಗಳನ್ನು ತೆರೆದು ನೋಡುವುದರಿಂದ ಅದು ಮನಸ್ಸಿನಲ್ಲಿ ಅಚ್ಚೊತ್ತಲ್ಪಡುತ್ತದೆ ಮತ್ತು ಅದನ್ನು ನೆನಪಿಗೆ ತರಲು ಪವಿತ್ರಾತ್ಮ ನಮಗೆ ಸಹಾಯಮಾಡಬಲ್ಲದು. ಮಾತ್ರವಲ್ಲದೆ ಬೈಬಲಿನಲ್ಲಿ ಆ ವಚನವು ಪುಟದ ಯಾವ ಭಾಗದಲ್ಲಿದೆ ಎಂದು ತಿಳಿಯುವುದರಿಂದ ನಮ್ಮ ಮನಸ್ಸು ಆ ಸ್ಥಳವನ್ನು ನೆನಪಿನಲ್ಲಿಟ್ಟು ಬೇಕಾದಾಗ ಆ ವಚನವನ್ನು ತೆರೆಯಲು ಸಹಾಯಮಾಡಬಲ್ಲದು.

15. ಪ್ರಕಾಶನಗಳ ಸದ್ಯೋಚಿತ ಮಾಹಿತಿಯನ್ನು ನಾವೇಕೆ ತಪ್ಪದೆ ಓದಬೇಕು? ನೀವು ವೈಯಕ್ತಿಕವಾಗಿ ಇದನ್ನು ಹೇಗೆ ಸಾಧಿಸುತ್ತೀರಿ?

15ಪ್ರಕಾಶನಗಳ ಸದ್ಯೋಚಿತ ಮಾಹಿತಿಯನ್ನು ತಪ್ಪದೆ ಪಡೆದುಕೊಳ್ಳಿ. ಕೆಲವು ಪ್ರಕಾಶಿತ ಮಾಹಿತಿಗಳನ್ನು ನಮ್ಮ ಕೂಟಗಳಲ್ಲಿ ಚರ್ಚಿಸಲಾಗುವುದಿಲ್ಲ ನಿಜ, ಆದರೆ ಅವು ನಮ್ಮ ಪ್ರಯೋಜನಕ್ಕಾಗಿ ತಯಾರಿಸಲ್ಪಟ್ಟಿವೆ. ಸಾರ್ವಜನಿಕರಿಗೆ ಕೊಡಲಾಗುವ ಪ್ರಕಾಶನಗಳ ಸಂಚಿಕೆಗಳು ಸಹ ನಮ್ಮನ್ನು ಮನಸ್ಸಿನಲ್ಲಿಟ್ಟು ತಯಾರಿಸಲ್ಪಡುತ್ತವೆ. ಈ ಜಟಿಲವಾದ ಕಾರ್ಯಮಗ್ನ ಲೋಕದಲ್ಲಿ ನಾವು ಅನೇಕವೇಳೆ ಯಾವುದಕ್ಕಾದರೂ ಅಥವಾ ಯಾರಿಗಾದರೂ ಕಾಯುತ್ತಾ ಇರುವ ಸಂದರ್ಭ ಬರುತ್ತದೆ. ಹಾಗೆ ಸುಮ್ಮನೆ ಕಾಯುತ್ತಾ ನಿಂತಿರುವ ಬದಲಿಗೆ ನಾವು ಓದಿರದ ಅಥವಾ ಸ್ವಲ್ಪ ಮಾತ್ರ ಓದಿರುವ ಒಂದು ಪ್ರಕಾಶನವನ್ನು ನಮ್ಮೊಂದಿಗೆ ಒಯ್ಯುವುದಾದರೆ ಅದನ್ನು ಆ ಸಮಯದಲ್ಲಿ ಓದಬಲ್ಲೆವು. ಕೆಲವರು ಸದ್ಯೋಚಿತ ಮಾಹಿತಿಯನ್ನು ಕಳಕೊಳ್ಳದಿರಲಿಕ್ಕಾಗಿ ನಡೆಯುವಾಗಲೋ ವಾಹನದಲ್ಲಿ ಪ್ರಯಾಣಿಸುವಾಗಲೋ ನಮ್ಮ ಪ್ರಕಾಶನಗಳ ಧ್ವನಿ ಮುದ್ರಣಗಳನ್ನು ಕೇಳಿಸಿಕೊಳ್ಳುತ್ತಾರೆ. ಜಾಗ್ರತೆಯಿಂದ ಸಂಶೋಧಿಸಲ್ಪಟ್ಟಿದ್ದರೂ ಸಾಮಾನ್ಯ ಓದುಗರ ಆನಂದಕ್ಕಾಗಿ ಬರೆಯಲ್ಪಟ್ಟ ಆ ಎಲ್ಲ ಮಾಹಿತಿಯು ಆಧ್ಯಾತ್ಮಿಕ ವಿಷಯಗಳಿಗಾಗಿರುವ ನಮ್ಮ ಗಣ್ಯತೆಯನ್ನು ಹೆಚ್ಚಿಸುತ್ತದೆ.—ಹಬ. 2:2.

16. ನಮ್ಮ ಮನಸ್ಸಿಗೆ ಬರಬಹುದಾದ ಪ್ರಶ್ನೆಗಳನ್ನು ಬರೆದಿಟ್ಟುಕೊಂಡು ಅವುಗಳ ಕುರಿತು ಹೆಚ್ಚನ್ನು ಕಲಿಯಲು ಪ್ರಯತ್ನಿಸುವುದರಿಂದ ಯಾವ ಪ್ರಯೋಜನವಿದೆ?

16ಧ್ಯಾನಿಸಿರಿ. ಬೈಬಲನ್ನು ಅಥವಾ ಬೈಬಲಾಧಾರಿತ ಪ್ರಕಾಶನಗಳನ್ನು ಓದುವಾಗ ನೀವು ಓದುತ್ತಿರುವ ವಿಷಯದ ಕುರಿತು ಯೋಚಿಸಲು ಸಮಯ ತೆಗೆದುಕೊಳ್ಳಿ. ವಿಚಾರಧಾರೆಯನ್ನು ನೀವು ಜಾಗ್ರತೆಯಿಂದ ಅನುಸರಿಸುವಾಗ ಪ್ರಶ್ನೆಗಳು ಏಳಬಹುದು. ನೀವು ಅಂಥ ಪ್ರಶ್ನೆಗಳನ್ನು ಬರೆದಿಟ್ಟುಕೊಂಡು ಅನಂತರ ಅವುಗಳ ಕುರಿತು ಹೆಚ್ಚನ್ನು ಕಲಿಯಬಹುದು. ನಾವು ಹೆಚ್ಚಾಗಿ ವಿಷಯವನ್ನು ಆಳವಾಗಿ ಅಧ್ಯಯನ ಮಾಡುವುದು ಯಾವಾಗವೆಂದರೆ ನಮಗೆ ಆಸಕ್ತಿಕರವಾಗಿರುವ ವಿಷಯಗಳನ್ನು ಪರಿಶೋಧಿಸಲು ಪ್ರಯತ್ನಿಸುವಾಗಲೇ. ನಮಗೆ ಸಿಗುವ ತಿಳಿವಳಿಕೆಯು ನಮಗೆ ಬೇಕಾದಾಗ ಹೊರತರಬಲ್ಲ ವೈಯಕ್ತಿಕ ಬೊಕ್ಕಸದ ಭಾಗವಾಗುವುದು.—ಮತ್ತಾ. 13:52.

17. ಕುಟುಂಬ ಅಥವಾ ವೈಯಕ್ತಿಕ ಅಧ್ಯಯನದಲ್ಲಿ ನೀವು ಏನನ್ನು ಪರಿಗಣಿಸುತ್ತೀರಿ?

17ಕುಟುಂಬ ಆರಾಧನೆಗಾಗಿ ಸಮಯ ನಿಗದಿಪಡಿಸಿ. ಪ್ರತಿ ವಾರ ಯಾವುದಾದರೊಂದು ಸಂಜೆಯನ್ನು ಅಥವಾ ಬೇರೊಂದು ಅವಧಿಯನ್ನು ವೈಯಕ್ತಿಕ ಇಲ್ಲವೆ ಕುಟುಂಬ ಅಧ್ಯಯನಕ್ಕಾಗಿ ಬದಿಗಿರಿಸಬೇಕು ಎಂದು ಆಡಳಿತ ಮಂಡಲಿ ನಮ್ಮೆಲ್ಲರನ್ನೂ ಪ್ರೋತ್ಸಾಹಿಸಿದೆ. ನಮ್ಮ ಕೂಟದ ಶೆಡ್ಯೂಲಿನಲ್ಲಿ ಮಾಡಲಾಗಿರುವ ಹೊಂದಾಣಿಕೆಯು ಈ ಸಲಹೆಯನ್ನು ಅನ್ವಯಿಸಲು ಅವಕಾಶಮಾಡಿಕೊಡುತ್ತದೆ. ಕುಟುಂಬ ಆರಾಧನೆಯ ಸಂಜೆಗಳಲ್ಲಿ ನೀವು ಏನನ್ನು ಪರಿಗಣಿಸುತ್ತೀರಿ? ಕೆಲವರು ಬೈಬಲನ್ನು ಓದುತ್ತಾರೆ. ವಚನಗಳನ್ನು ಓದುವಾಗ ತಮ್ಮ ಮನಸ್ಸಿಗೆ ಬರುವ ಪ್ರಶ್ನೆಗಳ ಕುರಿತು ಸಂಶೋಧನೆ ಮಾಡುತ್ತಾ ತಮ್ಮ ಬೈಬಲಿನಲ್ಲಿ ಸಂಕ್ಷಿಪ್ತ ವಿವರಣಾತ್ಮಕ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಾರೆ. ಅನೇಕ ಕುಟುಂಬಗಳು ತಾವು ಅಧ್ಯಯನ ಮಾಡುವ ವಿಷಯವನ್ನು ತಮ್ಮ ಕುಟುಂಬಕ್ಕೆ ಅನ್ವಯಿಸಲು ಸಮಯ ತೆಗೆದುಕೊಳ್ಳುತ್ತವೆ. ಕೆಲವು ಕುಟುಂಬ ತಲೆಗಳು ತಮ್ಮ ಕುಟುಂಬಕ್ಕೆ ಅವಶ್ಯವೆಂದು ನೆನಸುವ ಮಾಹಿತಿಯನ್ನು ಆರಿಸಿಕೊಳ್ಳುತ್ತಾರೆ ಅಥವಾ ಕುಟುಂಬವು ಪರಿಗಣಿಸಬೇಕೆಂದು ಬಯಸುವ ವಿಷಯಗಳನ್ನು ಅಥವಾ ಪ್ರಶ್ನೆಗಳನ್ನು ಚರ್ಚಿಸುತ್ತಾರೆ. ಸಮಯ ಸಂದಂತೆ ನೀವು ಪರಿಗಣಿಸಲು ಬಯಸುವ ಇತರ ವಿಷಯಗಳನ್ನೂ ಆರಿಸಿಕೊಳ್ಳುವಿರಿ ನಿಜ. *

18. ದೇವರ ವಾಕ್ಯದ ಗಾಢ ಸತ್ಯಗಳನ್ನು ಅಧ್ಯಯನಮಾಡುವುದರಿಂದ ನಾವೇಕೆ ಹಿಂಜರಿಯಬಾರದು?

18 ಪವಿತ್ರಾತ್ಮ ಸಹಾಯಕನಂತೆ ಕಾರ್ಯನಡಿಸುತ್ತದೆ ಎಂದು ಯೇಸು ಹೇಳಿದನು. ಆದುದರಿಂದ ನಾವು ದೇವರ ವಾಕ್ಯದ ಅಗಾಧ ಸತ್ಯಗಳನ್ನು ಅಧ್ಯಯನಮಾಡುವುದರಿಂದ ಹಿಂಜರಿಯಬಾರದು. ಅಂಥ ಸತ್ಯಗಳು ಅಮೂಲ್ಯ ‘ದೈವಜ್ಞಾನದ’ ಭಾಗವಾಗಿವೆ. ಅವುಗಳನ್ನು ಹುಡುಕಿನೋಡುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ. (ಜ್ಞಾನೋಕ್ತಿ 2:1-5 ಓದಿ.) ಅವು “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸಿರುವ ವಿಷಯಗಳನ್ನು” ಕುರಿತು ಹೆಚ್ಚನ್ನು ತಿಳಿಯಪಡಿಸುತ್ತವೆ. ಯೆಹೋವನ ವಾಕ್ಯದ ಕುರಿತು ಹೆಚ್ಚನ್ನು ಕಲಿಯಲು ನಾವು ಪ್ರಯತ್ನಿಸುವಾಗ ಪವಿತ್ರಾತ್ಮ ನಮಗೆ ಸಹಾಯಮಾಡುವುದು. ಏಕೆಂದರೆ “ಪವಿತ್ರಾತ್ಮವು ಎಲ್ಲ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನೂ ಪರಿಶೋಧಿಸುತ್ತದೆ.”—1 ಕೊರಿಂ. 2:9, 10.

[ಪಾದಟಿಪ್ಪಣಿ]

^ ಪ್ಯಾರ. 17 ಅಕ್ಟೋಬರ್‌ 2008ರ ನಮ್ಮ ರಾಜ್ಯ ಸೇವೆಯ ಪುಟ 8 ಸಹ ನೋಡಿ.

ನಿಮ್ಮ ಉತ್ತರವೇನು?

• ‘ದೇವರ ಅಗಾಧ ವಿಷಯಗಳನ್ನು’ ಪರಿಶೋಧಿಸಲು ಪವಿತ್ರಾತ್ಮ ನಮಗೆ ಸಹಾಯಮಾಡುವ ಎರಡು ವಿಧಗಳು ಯಾವುವು?

• ಪ್ರಥಮ ಶತಮಾನದಲ್ಲಿ ಯಾರ ಮೂಲಕ ಪವಿತ್ರಾತ್ಮ ಅಗಾಧ ಸತ್ಯಗಳನ್ನು ಪ್ರಕಟಪಡಿಸಿತು?

• ನಮ್ಮ ದಿನಗಳಲ್ಲಿ ವಿಷಯಗಳನ್ನು ಸ್ಪಷ್ಟೀಕರಿಸಲು ಪವಿತ್ರಾತ್ಮ ಹೇಗೆ ಕಾರ್ಯನಡಿಸುತ್ತದೆ?

• ಪವಿತ್ರಾತ್ಮ ವಹಿಸುವ ಪಾತ್ರದಿಂದ ಪ್ರಯೋಜನ ಹೊಂದಲು ನೀವೇನು ಮಾಡಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 22ರಲ್ಲಿರುವ ಚೌಕ]

ಆಧ್ಯಾತ್ಮಿಕ ಆಲಯದ ಅರ್ಥವನ್ನು ಪವಿತ್ರಾತ್ಮ ಪ್ರಕಟಪಡಿಸಿದ ವಿಧ

ಪ್ರಥಮ ಶತಮಾನದಲ್ಲಿ ಪ್ರಕಟಪಡಿಸಲ್ಪಟ್ಟ ‘ದೇವರ ಅಗಾಧ ವಿಷಯಗಳಲ್ಲಿ’ ಗುಡಾರ ಹಾಗೂ ನಂತರದ ದೇವಾಲಯಗಳು ಕೂಡಿದ್ದವು. ಅವು ಒಂದು ಅಧಿಕ ಮಹತ್ತಾದ ಆಧ್ಯಾತ್ಮಿಕ ನಿಜತ್ವವನ್ನು ಮುನ್‌ಚಿತ್ರಿಸಿದವು. ಪೌಲನು ಆ ನಿಜತ್ವವನ್ನು “ಮನುಷ್ಯನಲ್ಲ ಯೆಹೋವನೇ ಹಾಕಿದ ನಿಜವಾದ ಗುಡಾರ” ಎಂದು ಕರೆದನು. (ಇಬ್ರಿ. 8:2) ಇದು ಮಹಾ ಆಧ್ಯಾತ್ಮಿಕ ಆಲಯವಾಗಿತ್ತು, ಯೇಸು ಕ್ರಿಸ್ತನ ಯಜ್ಞ ಮತ್ತು ಯಾಜಕತ್ವದ ಮೂಲಕ ದೇವರನ್ನು ಸಮೀಪಿಸಲು ಸಾಧ್ಯಗೊಳಿಸಲ್ಪಟ್ಟ ಏರ್ಪಾಡಾಗಿತ್ತು.

ಕ್ರಿ.ಶ. 29ರಲ್ಲಿ ಯೇಸು ದೀಕ್ಷಾಸ್ನಾನ ಪಡೆದುಕೊಂಡಾಗ ಮತ್ತು ಯೆಹೋವನು ಅವನನ್ನು ಪರಿಪೂರ್ಣ ಯಜ್ಞವಾಗಲಿದ್ದವನಾಗಿ ಸ್ವೀಕರಿಸಿದಾಗ “ನಿಜವಾದ ಗುಡಾರ” ಅಸ್ತಿತ್ವಕ್ಕೆ ಬಂತು. (ಇಬ್ರಿ. 10:5-10) ತನ್ನ ಮರಣ ಮತ್ತು ಪುನರುತ್ಥಾನದ ನಂತರ ಯೇಸು ಸ್ವರ್ಗದಲ್ಲಿ ಆಧ್ಯಾತ್ಮಿಕ ಆಲಯದ ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸಿ “ದೇವರ ಸಮ್ಮುಖದಲ್ಲಿ” ತನ್ನ ಯಜ್ಞದ ಮೌಲ್ಯವನ್ನು ಅರ್ಪಿಸಿದನು.—ಇಬ್ರಿ. 9:11, 12, 24.

ಬೇರೆ ಕಡೆ ಅಪೊಸ್ತಲ ಪೌಲನು ಅಭಿಷಿಕ್ತ ಕ್ರೈಸ್ತರ ಕುರಿತು ಬರೆಯುತ್ತಾ ನೀವು “ಯೆಹೋವನಿಗಾಗಿರುವ ಒಂದು ಪವಿತ್ರ ಆಲಯವಾಗಿ ವೃದ್ಧಿಯಾಗುತ್ತಾ” ಇದ್ದೀರಿ ಎಂದು ಹೇಳಿದನು. (ಎಫೆ. 2:20-22) ಈ ಆಲಯವೂ ತದನಂತರ ಅವನು ಇಬ್ರಿಯರಿಗೆ ಬರೆದ ಪತ್ರದಲ್ಲಿ ತಿಳಿಸಿದ ‘ನಿಜವಾದ ಗುಡಾರವೂ’ ಒಂದೇ ಆಗಿದೆಯೊ? ಹಲವಾರು ದಶಕಗಳ ತನಕ ಯೆಹೋವನ ಸೇವಕರು ಹಾಗೆಯೇ ನೆನಸಿದರು. ಯೆಹೋವನ ಸ್ವರ್ಗೀಯ ಆಲಯದಲ್ಲಿ ‘ಕಲ್ಲುಗಳಾಗಲು’ ಅಭಿಷಿಕ್ತ ಕ್ರೈಸ್ತರು ಭೂಮಿಯಲ್ಲಿ ಸಿದ್ಧಗೊಳಿಸಲ್ಪಡುತ್ತಿದ್ದರು ಎಂದು ಎಣಿಸಲಾಗಿತ್ತು.—1 ಪೇತ್ರ 2:5.

ಆದರೂ, ಇಸವಿ 1971ರಷ್ಟಕ್ಕೆ ಆಳು ವರ್ಗದ ಜವಾಬ್ದಾರಿಯುತ ಸದಸ್ಯರು, ಎಫೆಸ ಪುಸ್ತಕದಲ್ಲಿ ಪೌಲನು ತಿಳಿಸಿದ ಆಲಯವು ಯೆಹೋವನ ಮಹಾ ಆಧ್ಯಾತ್ಮಿಕ ಆಲಯವಾಗಿರಲು ಸಾಧ್ಯವಿಲ್ಲ ಎಂದು ಗ್ರಹಿಸಲಾರಂಭಿಸಿದರು. ‘ನಿಜವಾದ ಗುಡಾರವು’ ಪುನರುತ್ಥಿತ ಅಭಿಷಿಕ್ತ ಕ್ರೈಸ್ತರಿಂದ ರಚಿಸಲ್ಪಟ್ಟಿರುವಲ್ಲಿ, ಅದು ಮೊದಲು ಅಸ್ತಿತ್ವಕ್ಕೆ ಬರುವುದು “ಕರ್ತನ ಸಾನ್ನಿಧ್ಯದ” ಸಮಯದಲ್ಲಿ ಅವರ ಪುನರುತ್ಥಾನವು ಆರಂಭಿಸಿದ ನಂತರವೇ. (1 ಥೆಸ. 4:15-17) ಆದರೆ ಆ ಗುಡಾರಕ್ಕೆ ಸೂಚಿಸುತ್ತಾ ಪೌಲನು ಬರೆದದ್ದು: “ಈ ಗುಡಾರವು ಈಗ ಬಂದಿರುವ ನೇಮಿತ ಕಾಲಕ್ಕೆ ಒಂದು ನಿದರ್ಶನವಾಗಿದೆ.”—ಇಬ್ರಿ. 9:9.

ಈ ವಚನಗಳನ್ನು ಮತ್ತು ಬೇರೆ ವಚನಗಳನ್ನು ಜಾಗ್ರತೆಯಿಂದ ಹೋಲಿಸಿನೋಡುವ ಮೂಲಕ ಆಧ್ಯಾತ್ಮಿಕ ಆಲಯವು ಕಟ್ಟಲ್ಪಡುತ್ತಾ ಇಲ್ಲ ಮತ್ತು ಅಭಿಷಿಕ್ತ ಕ್ರೈಸ್ತರು ಅದರಲ್ಲಿ ಸೇರಿಸಲ್ಪಡುವ “ಕಲ್ಲುಗಳಾಗಿದ್ದು” ಭೂಮಿಯ ಮೇಲೆ ರೂಪುಗೊಳ್ಳುತ್ತಿಲ್ಲ ಎಂಬುದು ಸ್ಪಷ್ಟವಾಯಿತು. ಬದಲಾಗಿ ಅಭಿಷಿಕ್ತ ಕ್ರೈಸ್ತರು ಆಧ್ಯಾತ್ಮಿಕ ಆಲಯದ ಅಂಗಳ ಮತ್ತು ಪವಿತ್ರ ಸ್ಥಳದಲ್ಲಿ ಸೇವೆಸಲ್ಲಿಸುತ್ತಾ ದೇವರಿಗೆ ಪ್ರತಿ ದಿನ “ಸ್ತೋತ್ರಯಜ್ಞವನ್ನು” ಅರ್ಪಿಸುತ್ತಾ ಇದ್ದಾರೆ.—ಇಬ್ರಿ. 13:15.

[ಪುಟ 23ರಲ್ಲಿರುವ ಚಿತ್ರ]

‘ದೇವರ ಅಗಾಧ ವಿಷಯಗಳ’ ನಮ್ಮ ತಿಳಿವಳಿಕೆಯನ್ನು ನಾವು ಹೇಗೆ ಹೆಚ್ಚಿಸಿಕೊಳ್ಳಬಲ್ಲೆವು?