ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾ ಆಧ್ಯಾತ್ಮಿಕ ಕೊಯ್ಲಿನಲ್ಲಿ ಪೂರ್ಣವಾಗಿ ಭಾಗವಹಿಸಿ

ಮಹಾ ಆಧ್ಯಾತ್ಮಿಕ ಕೊಯ್ಲಿನಲ್ಲಿ ಪೂರ್ಣವಾಗಿ ಭಾಗವಹಿಸಿ

ಮಹಾ ಆಧ್ಯಾತ್ಮಿಕ ಕೊಯ್ಲಿನಲ್ಲಿ ಪೂರ್ಣವಾಗಿ ಭಾಗವಹಿಸಿ

‘ಕರ್ತನ ಕೆಲಸವನ್ನು ಹೇರಳವಾಗಿ ಮಾಡುವವರಾಗಿರಿ.’—1 ಕೊರಿಂ. 15:58.

1. ಯೇಸು ತನ್ನ ಶಿಷ್ಯರಿಗೆ ಯಾವ ಆಮಂತ್ರಣ ನೀಡಿದನು?

ಕ್ರಿಸ್ತ ಶಕ 30ರ ಕೊನೆಯಲ್ಲಿ ಯೇಸು ಸಮಾರ್ಯ ಪ್ರಾಂತವನ್ನು ದಾಟಿಹೋಗುತ್ತಿದ್ದಾಗ ಸಿಖರ್‌ ಎಂಬ ಊರಿನ ಪಕ್ಕದಲ್ಲಿದ್ದ ಬಾವಿಯ ಬಳಿ ಸ್ವಲ್ಪ ದಣಿವಾರಿಸಿಕೊಳ್ಳಲು ಕುಳಿತನು. ಅಲ್ಲಿ ಅವನು ತನ್ನ ಶಿಷ್ಯರಿಗೆ, “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಕೊಯ್ಲಿಗೆ ಸಿದ್ಧವಾಗಿವೆ” ಎಂದು ಹೇಳಿದನು. (ಯೋಹಾ. 4:35) ಯೇಸು ಅಕ್ಷರಶಃವಾದ ಕೊಯ್ಲಿನ ಬಗ್ಗೆ ಮಾತಾಡುತ್ತಿರಲಿಲ್ಲ. ಬದಲಿಗೆ ಸಹೃದಯದ ವ್ಯಕ್ತಿಗಳ ಆಧ್ಯಾತ್ಮಿಕ ಒಟ್ಟುಗೂಡಿಸುವಿಕೆಗೆ ಸೂಚಿಸುತ್ತಿದ್ದನು. ಆ ವ್ಯಕ್ತಿಗಳು ಅವನ ಹಿಂಬಾಲಕರಾಗಲಿದ್ದರು. ವಾಸ್ತವದಲ್ಲಿ ಆ ಕೊಯ್ಲಿನಲ್ಲಿ ಭಾಗವಹಿಸುವಂತೆ ಅವನು ಶಿಷ್ಯರಿಗೆ ಆಮಂತ್ರಣ ಕೊಟ್ಟನು. ಅಲ್ಲಿ ಹೇರಳ ಕೆಲಸ ಮಾಡಲಿಕ್ಕಿತ್ತು, ಆದರೆ ಅದನ್ನು ಮಾಡಿ ಪೂರೈಸಲು ಸ್ವಲ್ಪವೇ ಸಮಯವಿತ್ತು!

2, 3. (ಎ) ಕೊಯ್ಲಿನ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಯಾವುದು ತೋರಿಸುತ್ತದೆ? (ಬಿ) ಈ ಲೇಖನ ಏನನ್ನು ಪರಿಗಣಿಸುವುದು?

2 ಕೊಯ್ಲಿನ ಕುರಿತ ಯೇಸುವಿನ ಮಾತುಗಳಲ್ಲಿ ನಮ್ಮ ದಿನಗಳಿಗೆ ವಿಶೇಷಾರ್ಥವಿದೆ. ಮಾನವಕುಲದ ಹೊಲವೆಂಬ ಲೋಕವು ‘ಕೊಯ್ಲಿಗೆ ಸಿದ್ಧವಾಗಿರುವ’ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಜೀವದಾಯಕ ಸತ್ಯವನ್ನು ಕಲಿಯುವ ಆಮಂತ್ರಣವನ್ನು ಪಡೆಯುತ್ತಿದ್ದಾರೆ, ಅನೇಕ ಸಾವಿರ ಮಂದಿ ಹೊಸ ಶಿಷ್ಯರು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ಎಂದಿಗಿಂತಲೂ ಅತಿ ಮಹತ್ತಾದ ಈ ಕೊಯ್ಲಿನಲ್ಲಿ ಭಾಗವಹಿಸುವ ಸುಯೋಗ ನಮ್ಮದಾಗಿದೆ. ಕೊಯ್ಲಿನ ಯಜಮಾನನಾದ ಯೆಹೋವ ದೇವರ ಮೇಲ್ವಿಚಾರಣೆಯ ಕೆಳಗೆ ಇದು ನಡೆಸಲ್ಪಡುತ್ತಿದೆ. ಈ ಕೊಯ್ಲಿನ ಕೆಲಸವನ್ನು ನೀವು ‘ಹೇರಳವಾಗಿ ಮಾಡುತ್ತಿದ್ದೀರೊ?’—1 ಕೊರಿಂ. 15:58.

3 ತನ್ನ ಮೂರುವರೆ ವರ್ಷಗಳ ಭೂಶುಶ್ರೂಷೆಯ ಸಮಯದಲ್ಲಿ ಯೇಸು ತನ್ನ ಶಿಷ್ಯರನ್ನು ಈ ಕೊಯ್ಲಿನ ಕೆಲಸ ಮಾಡಲು ಸಿದ್ಧಗೊಳಿಸಿದನು. ಯೇಸು ತನ್ನ ಶಿಷ್ಯರಿಗೆ ಕಲಿಸಿದ ಅನೇಕ ಪ್ರಮುಖ ಪಾಠಗಳಲ್ಲಿ ಮೂರನ್ನು ಈ ಲೇಖನವು ಪರಿಗಣಿಸುವುದು. ಪ್ರತಿಯೊಂದು ಪಾಠವು ಒಂದೊಂದು ಗುಣವನ್ನು ಎತ್ತಿತೋರಿಸುತ್ತದೆ. ಆಧುನಿಕ ದಿನದ ಶಿಷ್ಯರನ್ನು ಒಟ್ಟುಗೂಡಿಸುವ ಈ ಕೆಲಸದಲ್ಲಿ ಅತ್ಯುತ್ತಮ ಸೇವೆಯನ್ನು ಮಾಡಲು ಶ್ರಮಿಸುತ್ತಿರುವಾಗ ನಮಗೆ ಈ ಗುಣಗಳು ಅತ್ಯಮೂಲ್ಯವಾಗಿವೆ. ಈ ಗುಣಗಳನ್ನು ನಾವು ಒಂದೊಂದಾಗಿ ಪರಿಗಣಿಸೋಣ.

ತಗ್ಗುತನ ಅವಶ್ಯ

4. ಯೇಸು ತಗ್ಗುತನದ ಪ್ರಮುಖತೆಯನ್ನು ಹೇಗೆ ದೃಷ್ಟಾಂತಿಸಿದನು?

4 ಈ ದೃಶ್ಯವನ್ನು ಮನಸ್ಸಿಗೆ ತಂದುಕೊಳ್ಳಿ: ತಮ್ಮಲ್ಲಿ ಯಾರು ಅತಿ ದೊಡ್ಡವರೆಂದು ಶಿಷ್ಯರು ಆಗತಾನೇ ವಾಗ್ವಾದ ಮಾಡಿದ್ದರು. ಸಂಶಯ ಮತ್ತು ದ್ವೇಷ ಭಾವನೆಗಳು ಅವರ ಮುಖಗಳಲ್ಲಿ ಪ್ರಾಯಶಃ ಇನ್ನೂ ಸುಳಿದಾಡುತ್ತಿದ್ದವು. ಆದುದರಿಂದ ಯೇಸು ಒಂದು ಚಿಕ್ಕ ಮಗುವನ್ನು ಕರೆದು ಅವರ ಮಧ್ಯದಲ್ಲಿ ನಿಲ್ಲಿಸುತ್ತಾನೆ. ಆ ಪುಟ್ಟ ಮಗುವಿನ ಕಡೆ ಗಮನಹರಿಸುತ್ತಾ ಅವನು ಹೇಳುವುದು: “ಈ ಚಿಕ್ಕ ಮಗುವಿನಂತೆ ಯಾರು ತನ್ನನ್ನು ತಗ್ಗಿಸಿಕೊಳ್ಳುವನೋ ಅವನೇ ಸ್ವರ್ಗದ ರಾಜ್ಯದಲ್ಲಿ ಅತಿ ದೊಡ್ಡವನಾಗಿದ್ದಾನೆ.” (ಮತ್ತಾಯ 18:1-4 ಓದಿ.) ಲೋಕವು ಒಬ್ಬ ವ್ಯಕ್ತಿಯ ದೊಡ್ಡತನವನ್ನು ಅವನ ಅಧಿಕಾರ, ಆಸ್ತಿಪಾಸ್ತಿ, ಸ್ಥಾನಮಾನದ ಆಧಾರದಲ್ಲಿ ಅಳೆಯುತ್ತದೆ. ಆದರೆ ಶಿಷ್ಯರಾದರೋ ಇತರರ ದೃಷ್ಟಿಯಲ್ಲಿ ‘ತಮ್ಮನ್ನು ಚಿಕ್ಕದಾಗಿಸಿಕೊಳ್ಳುವುದರ’ ಮೇಲೆ ತಮ್ಮ ದೊಡ್ಡತನ ಹೊಂದಿಕೊಂಡಿದೆಯೆಂದು ಅರ್ಥಮಾಡಿಕೊಳ್ಳಬೇಕಿತ್ತು. ಅವರು ನಿಜ ತಗ್ಗುತನವನ್ನು ತೋರಿಸಿದಲ್ಲಿ ಮಾತ್ರ ಯೆಹೋವನು ಅವರನ್ನು ಆಶೀರ್ವದಿಸಿ ತನ್ನ ಸೇವೆಯಲ್ಲಿ ಉಪಯೋಗಿಸುವನು.

5, 6. ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸಲು ನೀವೇಕೆ ತಗ್ಗುತನ ತೋರಿಸಬೇಕು? ದೃಷ್ಟಾಂತಿಸಿ.

5 ಈ ದಿನಗಳ ತನಕವೂ ಲೋಕದ ಅನೇಕರು ಅಧಿಕಾರ, ಆಸ್ತಿಪಾಸ್ತಿ, ಸ್ಥಾನಮಾನವನ್ನು ಗಳಿಸಲಿಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಫಲಿತಾಂಶವಾಗಿ ಅವರಿಗೆ ಆಧ್ಯಾತ್ಮಿಕ ವಿಷಯಗಳಿಗಾಗಿ ಸ್ವಲ್ಪವೇ ಅಥವಾ ಏನೂ ಸಮಯ ಸಿಗುವುದಿಲ್ಲ. (ಮತ್ತಾ. 13:22) ಇದಕ್ಕೆ ವ್ಯತ್ಯಾಸದಲ್ಲಿ ಯೆಹೋವನ ಜನರು ಕೊಯ್ಲಿನ ಯಜಮಾನನ ಆಶೀರ್ವಾದ ಮತ್ತು ಅನುಗ್ರಹವನ್ನು ಗಳಿಸಲು ಇತರರ ದೃಷ್ಟಿಯಲ್ಲಿ ‘ತಮ್ಮನ್ನು ಚಿಕ್ಕದಾಗಿಸಿಕೊಳ್ಳಲು’ ಸಂತೋಷಿಸುತ್ತಾರೆ.—ಮತ್ತಾ. 6:24; 2 ಕೊರಿಂ. 11:7; ಫಿಲಿ. 3:8.

6 ಸಹೋದರ ಫ್ರಾನ್ಸೀಸ್ಕೂರವರ ಉದಾಹರಣೆಯನ್ನು ಪರಿಗಣಿಸಿ. ಅವರು ದಕ್ಷಿಣ ಅಮೆರಿಕದಲ್ಲಿ ಹಿರಿಯರಾಗಿ ಸೇವೆ ಸಲ್ಲಿಸುತ್ತಾರೆ. ಪಯನೀಯರರಾಗಲಿಕ್ಕಾಗಿ ಅವರು ಯುವಕರಾಗಿದ್ದಾಗ ವಿಶ್ವವಿದ್ಯಾನಿಲಯದ ಉನ್ನತ ವ್ಯಾಸಂಗವನ್ನು ಬಿಟ್ಟು ಕೊಟ್ಟರು. ಅವರು ಹಿನ್ನೋಟ ಬೀರುತ್ತಾ ಹೇಳುವುದು: ನನ್ನ ಮದುವೆಯ ನಿಶ್ಚಿತಾರ್ಥವಾದಾಗ ನನಗೂ ಮತ್ತು ನನ್ನ ಹೆಂಡತಿಗೂ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಕೊಡಬಲ್ಲ ಉದ್ಯೋಗವನ್ನು ನಾನು ಪಡೆಯಸಾಧ್ಯವಿತ್ತು. ಆದರೆ ನಾವು ನಮ್ಮ ಜೀವನವನ್ನು ಸರಳವಾಗಿಸಿ ಪೂರ್ಣ ಸಮಯದ ಸೇವೆಯನ್ನು ಜೊತೆಯಾಗಿ ಮುಂದುವರಿಸುವ ನಿರ್ಧಾರ ಮಾಡಿದೆವು. ಬಳಿಕ ನಮಗೆ ಮಕ್ಕಳಾದವು, ಕಷ್ಟಗಳು ಹೆಚ್ಚಾದವು. ಆದರೆ ನಮ್ಮ ನಿರ್ಧಾರಕ್ಕೆ ಅಂಟಿಕೊಳ್ಳುವಂತೆ ಯೆಹೋವನು ಸಹಾಯಮಾಡಿದನು. ಸಮಾಪ್ತಿಯಲ್ಲಿ ಫ್ರಾನ್ಸೀಸ್ಕೂ ಹೇಳುವುದು: ಕಳೆದ 30ಕ್ಕಿಂತ ಹೆಚ್ಚು ವರ್ಷಗಳಲ್ಲಿ ನಾನು ಹಿರಿಯನಾಗಿ ಸೇವೆ ಸಲ್ಲಿಸುವ ಸುಯೋಗದಲ್ಲಿ ಆನಂದಿಸಿದ್ದೇನೆ. ಅದರೊಂದಿಗೆ ಇನ್ನು ಅನೇಕ ವಿಶೇಷ ನೇಮಕಗಳೂ ಸಿಕ್ಕಿದವು. ಸರಳ ಜೀವನವನ್ನು ನಡಿಸಿದಕ್ಕಾಗಿ ನಾವೆಂದೂ ಒಂದು ನಿಮಿಷವಾದರೂ ವಿಷಾದಿಸಿದ್ದಿಲ್ಲ.

7. ರೋಮನ್ನರಿಗೆ 12:16ರಲ್ಲಿರುವ ಸಲಹೆಯನ್ನು ಅನ್ವಯಿಸಲು ನೀವು ವೈಯಕ್ತಿಕವಾಗಿ ಹೇಗೆ ಪ್ರಯತ್ನಿಸಿದ್ದೀರಿ?

7 ಈ ಲೋಕದ ‘ಅಹಂಭಾವದ ವಿಷಯಗಳಿಗೆ’ ಬೆನ್ನುಹಾಕಿ ‘ದೀನ ವಿಷಯಗಳಿಂದ ನಡೆಸಲ್ಪಡಲು’ ಅನುಮತಿಸುವಲ್ಲಿ ನೀವು ಸಹ ಕೊಯ್ಲಿನ ಕೆಲಸದಲ್ಲಿ ಅನೇಕ ಹೆಚ್ಚಿನ ಆಶೀರ್ವಾದಗಳನ್ನು ಮತ್ತು ಸುಯೋಗಗಳನ್ನು ಎದುರುನೋಡಬಲ್ಲಿರಿ.—ರೋಮ. 12:16; ಮತ್ತಾ. 4:19, 20; ಲೂಕ 18:28-30.

ಕಾರ್ಯಶ್ರದ್ಧೆ ಪ್ರತಿಫಲ ತರುತ್ತದೆ

8, 9. (ಎ) ತಲಾಂತುಗಳ ಕುರಿತ ಯೇಸುವಿನ ದೃಷ್ಟಾಂತದ ಸಾರಾಂಶ ತಿಳಿಸಿ. (ಬಿ) ಈ ದೃಷ್ಟಾಂತ ವಿಶೇಷವಾಗಿ ಯಾರಿಗೆ ಉತ್ತೇಜನ ನೀಡಬಲ್ಲದು?

8 ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸಲು ನಮಗೆ ಬೇಕಾದ ಇನ್ನೊಂದು ಗುಣ ಕಾರ್ಯಶ್ರದ್ಧೆ. ತಲಾಂತುಗಳ ಕುರಿತ ಸಾಮ್ಯದಲ್ಲಿ ಯೇಸು ಇದನ್ನು ದೃಷ್ಟಾಂತಿಸಿದನು. * ವಿದೇಶಕ್ಕೆ ಪ್ರಯಾಣಿಸುವ ಮುಂಚೆ ತನ್ನ ಆಸ್ತಿಯನ್ನು ಮೂವರು ಆಳುಗಳ ವಶಕ್ಕೆ ಒಪ್ಪಿಸಿಕೊಟ್ಟ ಒಬ್ಬ ಮನುಷ್ಯನ ಕುರಿತ ದೃಷ್ಟಾಂತ ಅದು. ಮೊದಲನೇ ಮತ್ತು ಎರಡನೇ ಆಳು ಐದು ಮತ್ತು ಎರಡು ತಲಾಂತುಗಳನ್ನು ಪಡೆದರು; ಮೂರನೆಯವನು ಒಂದು ತಲಾಂತನ್ನು ಪಡೆದನು. ಯಜಮಾನನು ಹೋದ ನಂತರ ಮೊದಲ ಇಬ್ಬರು ಆಳುಗಳು ಕಾರ್ಯಶ್ರದ್ಧೆಯಿಂದ ಕ್ರಿಯೆಗೈಯುತ್ತಾ ತಮ್ಮ ತಲಾಂತುಗಳಿಂದ ಕೂಡಲೆ ‘ವ್ಯಾಪಾರಮಾಡಿದರು.’ ಆದರೆ ಮೂರನೇ ಆಳು “ಮೈಗಳ್ಳ.” ಅವನು ತನ್ನ ತಲಾಂತನ್ನು ನೆಲದಲ್ಲಿ ಬಚ್ಚಿಟ್ಟನು. ಯಜಮಾನನು ಹಿಂದಿರುಗಿದಾಗ ಅವನು ಮೊದಲ ಇಬ್ಬರು ಆಳುಗಳನ್ನು “ಅನೇಕ ವಿಷಯಗಳ ಮೇಲೆ” ನೇಮಿಸುವ ಮೂಲಕ ಅವರಿಗೆ ಪ್ರತಿಫಲ ಕೊಟ್ಟನು. ಮೂರನೇ ಆಳಿಗೆ ಕೊಟ್ಟ ತಲಾಂತನ್ನು ಯಜಮಾನನು ತೆಗೆದುಕೊಂಡು ಆ ಆಳನ್ನು ತನ್ನ ಮನೆಯಿಂದ ಹೊರಗೆ ಹಾಕಿದನು.—ಮತ್ತಾ. 25:14-30.

9 ಯೇಸುವಿನ ಸಾಮ್ಯದ ಆ ಕಾರ್ಯಶ್ರದ್ಧ ಆಳುಗಳನ್ನು ನೀವು ಸಹ ಅನುಕರಿಸುತ್ತೀರಿ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಿಮ್ಮಿಂದಾದಷ್ಟು ಪೂರ್ಣವಾಗಿ ಭಾಗವಹಿಸಲು ಹೃದಯದಾಳದಿಂದ ಬಯಸುತ್ತೀರಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಸದ್ಯದಲ್ಲಿ ನೀವು ಮಾಡುವ ಸೇವೆಯನ್ನು ಸನ್ನಿವೇಶಗಳು ತುಂಬ ಸೀಮಿತಗೊಳಿಸುತ್ತಿರುವಲ್ಲಿ ಆಗೇನು? ಪ್ರಾಯಶಃ ಕಠಿಣಕರ ಆರ್ಥಿಕ ಪರಿಸ್ಥಿತಿಗಳು ನಿಮ್ಮ ಕುಟುಂಬದ ಪರಿಪಾಲನೆಗಾಗಿ ತುಂಬ ತಾಸು ದುಡಿಯುವಂತೆ ನಿಮ್ಮನ್ನು ನಿರ್ಬಂಧಿಸಬಹುದು. ಅಥವಾ ಮೊದಲಿದ್ದ ಆ ಯೌವನದ ಶಕ್ತಿ ಮತ್ತು ಒಳ್ಳೇ ಆರೋಗ್ಯ ಈಗ ನಿಮ್ಮಲ್ಲಿ ಇರಲಿಕ್ಕಿಲ್ಲ. ಹೀಗಿದ್ದಲ್ಲಿ ತಲಾಂತುಗಳ ಸಾಮ್ಯದಲ್ಲಿ ನಿಮಗೊಂದು ಉತ್ತೇಜನೀಯ ಸಂದೇಶವಿದೆ.

10. ತಲಾಂತುಗಳ ದೃಷ್ಟಾಂತದಲ್ಲಿದ್ದ ಯಜಮಾನನು ವಿವೇಚನೆಯನ್ನು ತೋರಿಸಿದ್ದು ಹೇಗೆ? ಇದು ನಿಮಗೆ ಉತ್ತೇಜನದಾಯಕವೇಕೆ?

10 ಸಾಮ್ಯದಲ್ಲಿನ ಯಜಮಾನನು ತನ್ನ ಆಳುಗಳಲ್ಲಿ ಪ್ರತಿಯೊಬ್ಬನಲ್ಲಿದ್ದ ವಿಭಿನ್ನ ಸಾಮರ್ಥ್ಯದ ಕುರಿತು ತಿಳಿದಿದ್ದನು ಎಂಬುದನ್ನು ಗಮನಿಸಿ. ಅವನು “ಪ್ರತಿಯೊಬ್ಬನಿಗೆ ಅವನವನ ಸ್ವಂತ ಸಾಮರ್ಥ್ಯಕ್ಕನುಸಾರ” ತಲಾಂತುಗಳನ್ನು ಕೊಟ್ಟಾಗ ಇದನ್ನು ಸೂಚಿಸಿದನು. (ಮತ್ತಾ. 25:15) ನಿರೀಕ್ಷಿಸಿದಂತೆಯೇ ಮೊದಲನೇ ಆಳು ಎರಡನೇ ಆಳಿಗಿಂತ ಗಮನಾರ್ಹವಾಗಿ ಹೆಚ್ಚು ಲಾಭ ತಂದನು. ಆದರೆ ಯಜಮಾನನು ಈ ಇಬ್ಬರೂ ಆಳುಗಳನ್ನು “ನಂಬಿಗಸ್ತನಾದ ಒಳ್ಳೇ ಆಳು” ಎಂದು ಕರೆಯುವ ಮೂಲಕ ಮತ್ತು ಅವರಿಗೆ ತದ್ರೂಪದ ಪ್ರತಿಫಲಗಳನ್ನು ಕೊಡುವ ಮೂಲಕ ಅವರ ಕಾರ್ಯಶ್ರದ್ಧೆಯನ್ನು ಮಾನ್ಯಮಾಡಿದನು. (ಮತ್ತಾ. 25:21, 23) ತದ್ರೀತಿಯಲ್ಲಿ ನೀವು ಯೆಹೋವನ ಸೇವೆಯಲ್ಲಿ ಎಷ್ಟು ಮಾಡಶಕ್ತರು ಎಂಬುದರ ಮೇಲೆ ನಿಮ್ಮ ಸನ್ನಿವೇಶಗಳು ಪ್ರಭಾವ ಬೀರುತ್ತವೆ ಎಂಬುದು ಕೊಯ್ಲಿನ ಯಜಮಾನ ಯೆಹೋವ ದೇವರಿಗೆ ತಿಳಿದಿದೆ. ಆತನ ಸೇವೆಮಾಡುವುದರಲ್ಲಿ ನೀವು ಹಾಕುವ ಪೂರ್ಣ ಪ್ರಾಣದ ಪ್ರಯತ್ನಗಳನ್ನು ಗುರುತಿಸಲು ಮತ್ತು ಅದಕ್ಕನುಸಾರ ಪ್ರತಿಫಲವನ್ನು ಕೊಡಲು ಆತನು ಎಂದೂ ತಪ್ಪಲಾರನು.—ಮಾರ್ಕ 14:3-9; ಲೂಕ 21:1-4 ಓದಿ.

11. ಕಷ್ಟದ ಸನ್ನಿವೇಶಗಳಲ್ಲಿ ಕಾರ್ಯಶ್ರದ್ಧೆಯನ್ನು ತೋರಿಸುವುದು ಹೇರಳ ಆಶೀರ್ವಾದಗಳನ್ನು ತರಬಲ್ಲದು ಹೇಗೆ ಎಂಬುದನ್ನು ದೃಷ್ಟಾಂತಿಸಿ.

11 ಬ್ರಸಿಲ್‌ ದೇಶದ ಕ್ರೈಸ್ತ ಸಹೋದರಿ ಸೆಲ್ಮೀರಳ ಉದಾಹರಣೆಯನ್ನು ಗಮನಿಸಿ. ದೇವರ ಸೇವೆಯಲ್ಲಿ ಕಾರ್ಯಶ್ರದ್ಧೆಯಿಂದಿರುವುದು ಜೀವನದ ಅನುಕೂಲಕರ ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿಲ್ಲ ಎಂದು ಅದು ತೋರಿಸುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಅವಳ ಗಂಡನು ದರೋಡೆಕೋರರ ಗುಂಡೇಟಿಗೆ ಬಲಿಯಾದನು. ಮೂವರು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಅವಳ ಮೇಲೆ ಬಿತ್ತು. ಅವಳು ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಜೀವನೋಪಾಯ ನಡೆಸುತ್ತಿದ್ದಳು. ಅದು ಅನೇಕ ತಾಸುಗಳ ಕೆಲಸವಾಗಿತ್ತು. ಜನರಿಂದ ಕಿಕ್ಕಿರಿದ ವಾಹನಗಳಲ್ಲಿ ಕಷ್ಟಕರ ಪ್ರಯಾಣವನ್ನೂ ಅವಳು ಮಾಡಬೇಕಿತ್ತು. ಈ ಕಷ್ಟಗಳ ಮಧ್ಯೆಯೂ ಆಕೆ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡಲು ಸಾಧ್ಯವಾಗುವಂತೆ ತನ್ನ ಕೆಲಸಕಾರ್ಯಗಳನ್ನು ಸಂಘಟಿಸಿದಳು. ಅವಳ ಮೂವರು ಮಕ್ಕಳಲ್ಲಿ ಇಬ್ಬರು ತದನಂತರ ಅವಳೊಂದಿಗೆ ಪಯನೀಯರ್‌ ಸೇವೆಯಲ್ಲಿ ಜೊತೆಗೂಡಿದರು. ಸೆಲ್ಮೀರ ಹೇಳುವುದು: “ಈ ಎಲ್ಲ ವರ್ಷಗಳಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಮಂದಿಯೊಂದಿಗೆ ನಾನು ಬೈಬಲ್‌ ಅಧ್ಯಯನ ಮಾಡಿದೆ ಮತ್ತು ಅವರು ನನ್ನ ಮನೆಮಂದಿಯಂತೆ ಇದ್ದಾರೆ. ಈ ದಿನದ ತನಕ ನಾನು ಅವರ ಪ್ರೀತಿ ಮತ್ತು ಸ್ನೇಹದಲ್ಲಿ ಆನಂದಿಸುತ್ತೇನೆ. ಇದು ಹಣ ಕೊಟ್ಟು ಖರೀದಿಸಲಾಗದ ನಿಕ್ಷೇಪ.” ಕೊಯ್ಲಿನ ಯಜಮಾನನು ಸೆಲ್ಮೀರಳ ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಖಂಡಿತ ಆಶೀರ್ವದಿಸಿದ್ದಾನೆ!

12. ನಾವು ಸಾರುವ ಕೆಲಸದಲ್ಲಿ ಹೇಗೆ ಕಾರ್ಯಶ್ರದ್ಧೆಯನ್ನು ತೋರಿಸಬಲ್ಲೆವು?

12 ನಿಮ್ಮ ಜೀವನದ ಸನ್ನಿವೇಶಗಳು ಶುಶ್ರೂಷೆಯಲ್ಲಿ ನೀವು ವ್ಯಯಿಸಸಾಧ್ಯವಿರುವ ಸಮಯವನ್ನು ಸೀಮಿತಗೊಳಿಸುವಲ್ಲಿ ಆಗೇನು? ಆಗ ಕೂಡ ನೀವು ನಿಮ್ಮ ಶುಶ್ರೂಷೆಯನ್ನು ಹೆಚ್ಚು ಫಲಕಾರಿಯಾಗಿ ಮಾಡುವ ಮೂಲಕ ಕೊಯ್ಲಿನ ಕೆಲಸದಲ್ಲಿ ನಿಮ್ಮ ಪಾಲನ್ನು ಹೆಚ್ಚಿಸಲು ಪ್ರಯತ್ನಿಸಬಹುದು. ಸಾಪ್ತಾಹಿಕ ಸೇವಾ ಕೂಟದಲ್ಲಿ ಕೊಡಲ್ಪಡುವ ಪ್ರಾಯೋಗಿಕ ಸೂಚನೆಗಳನ್ನು ಜಾಗರೂಕತೆಯಿಂದ ಅನ್ವಯಿಸಿದಲ್ಲಿ ನಿಮ್ಮ ಸಾರುವಿಕೆಯ ಕೌಶಲಗಳನ್ನು ಉತ್ತಮಗೊಳಿಸಬಲ್ಲಿರಿ ಮತ್ತು ಸಾಕ್ಷಿಕೊಡಲು ಬೇರೆ ಬೇರೆ ವಿಧಾನಗಳನ್ನು ಕಂಡುಕೊಳ್ಳುವಿರಿ. (2 ತಿಮೊ. 2:15) ಅಲ್ಲದೆ ಸಾಧ್ಯವಿರುವಲ್ಲಿ ಅನಾವಶ್ಯಕ ವಿಷಯಗಳನ್ನು ಬೇರೊಂದು ಸಮಯದಲ್ಲಿ ಮಾಡುವ ಮೂಲಕ ಅಥವಾ ಅವನ್ನು ಬಿಟ್ಟುಬಿಡುವ ಮೂಲಕ ಸಭಾ ಕ್ಷೇತ್ರ ಸೇವಾ ಏರ್ಪಾಡುಗಳಿಗೆ ಕ್ರಮದ ಬೆಂಬಲವನ್ನು ನೀಡಬಲ್ಲಿರಿ.—ಕೊಲೊ. 4:5.

13. ಕಾರ್ಯಶ್ರದ್ಧೆಯನ್ನು ಬೆಳೆಸಿಕೊಂಡು ಕಾಪಾಡಿಕೊಳ್ಳಲು ಯಾವುದು ಅವಶ್ಯ?

13 ಕಾರ್ಯಶ್ರದ್ಧೆಯು ಗಣ್ಯತಾಭರಿತ ಹೃದಯದಿಂದ ಹೊರಹೊಮ್ಮುತ್ತದೆ ಎಂಬುದನ್ನು ಮನಸ್ಸಿನಲ್ಲಿಡಿ. (ಕೀರ್ತ. 40:8) ಯೇಸುವಿನ ಸಾಮ್ಯದಲ್ಲಿ ತಿಳಿಸಲ್ಪಟ್ಟ ಮೂರನೇ ಆಳಿಗೆ ಯಜಮಾನನೆಂದರೆ ಬಹಳ ಭಯ. ಯಾಕೆಂದರೆ ಯಜಮಾನನು ತೃಪ್ತಿಯೇ ಇಲ್ಲದ ತಗಾದೆಗಾರ, ಅನ್ಯಾಯವಾಗಿ ವರ್ತಿಸುವವನು ಎಂದು ಅವನು ನೆನಸಿದ್ದನು. ಫಲಿತಾಂಶವಾಗಿ ಅವನು ತನ್ನ ತಲಾಂತನ್ನು ನೆಲದಲ್ಲಿ ಹುದುಗಿಟ್ಟನು. ಯಜಮಾನನ ಆಸ್ತಿಯನ್ನು ಹೆಚ್ಚಿಸಲು ಅದನ್ನು ಉಪಯೋಗಿಸಲಿಲ್ಲ. ಇಂಥ ದುರ್ಲಕ್ಷಭಾವದಿಂದ ದೂರವಿರಲು ನಾವು ಕೊಯ್ಲಿನ ಯಜಮಾನ ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಮತ್ತು ಅದನ್ನು ಅವಶ್ಯವಾಗಿ ಕಾಪಾಡಿಕೊಳ್ಳಬೇಕು. ಆತನ ಪ್ರೀತಿ, ತಾಳ್ಮೆ, ಕರುಣೆಯಂಥ ಮನಮುಟ್ಟುವ ಗುಣಗಳ ಬಗ್ಗೆ ಅಧ್ಯಯನಮಾಡಿ ಧ್ಯಾನಿಸಲು ಸಮಯವನ್ನು ಬದಿಗಿರಿಸಬೇಕು. ಹೀಗೆ ಮಾಡುವಲ್ಲಿ ಆತನ ಸೇವೆಯನ್ನು ನಿಮ್ಮಿಂದಾದಷ್ಟು ಉತ್ತಮವಾಗಿ ಮಾಡಲು ಹೃದಯದಾಳದಿಂದ ಪ್ರೇರಿಸಲ್ಪಡುವಿರಿ.—ಲೂಕ 6:45; ಫಿಲಿ. 1:9-11.

‘ನೀವು ಪವಿತ್ರರಾಗಿರಬೇಕು’

14. ಕೊಯ್ಲಿನ ಕೆಲಸಗಾರರಾಗಿರಲು ಬಯಸುವವರು ಯಾವ ಪ್ರಾಮುಖ್ಯ ಆವಶ್ಯಕತೆಯನ್ನು ಮುಟ್ಟಬೇಕು?

14 ಹೀಬ್ರು ಶಾಸ್ತ್ರಗ್ರಂಥದಿಂದ ಉಲ್ಲೇಖಿಸುತ್ತಾ ತನ್ನ ಭೂಸೇವಕರಿಗಾಗಿ ಇರುವ ದೇವರ ಚಿತ್ತವನ್ನು ಅಪೊಸ್ತಲ ಪೇತ್ರನು ತಿಳಿಸಿ ಹೇಳಿದ್ದು: “ನಿಮ್ಮನ್ನು ಕರೆದಾತನು ಪವಿತ್ರನಾಗಿರುವ ಪ್ರಕಾರ ವಿಧೇಯ ಮಕ್ಕಳಂತೆ ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು ಸಹ ಪವಿತ್ರರಾಗಿರಿ. ಏಕೆಂದರೆ, ‘ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು’ ಎಂದು ಬರೆಯಲ್ಪಟ್ಟಿದೆ.” (1 ಪೇತ್ರ 1:15, 16; ಯಾಜ. 19:2; ಧರ್ಮೋ. 18:13) ಕೊಯ್ಲಿನ ಕೆಲಸಗಾರರು ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಶುದ್ಧರಾಗಿರುವ ಅಗತ್ಯವನ್ನು ಈ ವಚನವು ಎತ್ತಿಹೇಳುತ್ತದೆ. ಸಾಂಕೇತಿಕವಾಗಿ ತೊಳೆಯಲ್ಪಟ್ಟು ಶುದ್ಧರಾಗಲು ಹೆಜ್ಜೆಗಳನ್ನು ತಕ್ಕೊಳ್ಳುವ ಮೂಲಕ ಆ ಪ್ರಾಮುಖ್ಯ ಆವಶ್ಯಕತೆಯನ್ನು ನಾವು ಮುಟ್ಟಬಲ್ಲೆವು. ಅದನ್ನು ಹೇಗೆ ಮಾಡಸಾಧ್ಯವಿದೆ? ದೇವರ ಸತ್ಯವಾಕ್ಯದ ಸಹಾಯದಿಂದಲೇ.

15. ದೇವರ ವಾಕ್ಯದ ಸತ್ಯಕ್ಕೆ ನಮ್ಮ ಪರವಾಗಿ ಏನು ಮಾಡುವ ಶಕ್ತಿಯಿದೆ?

15 ದೇವರ ಸತ್ಯವಾಕ್ಯವು ಶುದ್ಧೀಕರಿಸುವ ನೀರಿಗೆ ಹೋಲಿಸಲ್ಪಟ್ಟಿದೆ. ಉದಾಹರಣೆಗಾಗಿ, ಅಭಿಷಿಕ್ತ ಕ್ರೈಸ್ತರ ಸಭೆಯು ಕ್ರಿಸ್ತನಿಗೆ ಶುದ್ಧಳಾದ ವಧುವಿನಂತೆ ದೇವರ ದೃಷ್ಟಿಯಲ್ಲಿ ಶುದ್ಧವಾಗಿದೆ ಎಂದು ಅಪೊಸ್ತಲ ಪೌಲನು ಬರೆದನು. ಕ್ರಿಸ್ತನು ಅದನ್ನು ‘ಪವಿತ್ರವೂ ದೋಷವಿಲ್ಲದ್ದೂ ಆಗಿರುವಂತೆ ವಾಕ್ಯದ ಮೂಲಕ ಜಲಸ್ನಾನದಿಂದ ಶುದ್ಧೀಕರಿಸಿದನು.’ (ಎಫೆ. 5:25-27) ಇದಕ್ಕೆ ಮುಂಚಿತವಾಗಿ ಯೇಸು ಕೂಡ ತಾನು ಸಾರಿದ್ದ ದೇವರ ವಾಕ್ಯಕ್ಕೆ ಇರುವ ಶುದ್ಧೀಕರಣ ಶಕ್ತಿಯ ಕುರಿತು ಮಾತಾಡಿದ್ದನು. ತನ್ನ ಶಿಷ್ಯರೊಂದಿಗೆ ಮಾತಾಡುವಾಗ ಯೇಸು ಹೇಳಿದ್ದು: “ನಾನು ನಿಮಗೆ ಆಡಿದ ಮಾತುಗಳಿಂದಾಗಿ ನೀವು ಈಗಾಗಲೇ ಶುದ್ಧರಾಗಿದ್ದೀರಿ.” (ಯೋಹಾ. 15:3) ಆದಕಾರಣ ದೇವರ ವಾಕ್ಯದ ಸತ್ಯಕ್ಕೆ ನೈತಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣ ಮಾಡುವ ಶಕ್ತಿಯಿದೆ. ಈ ರೀತಿಯಲ್ಲಿ ದೇವರ ಸತ್ಯವು ನಮ್ಮನ್ನು ತೊಳೆದು ಶುದ್ಧಮಾಡುವಂತೆ ಬಿಟ್ಟರೆ ಮಾತ್ರ ನಮ್ಮ ಆರಾಧನೆಯು ದೇವರಿಗೆ ಸ್ವೀಕರಣೀಯವಾಗಿರುವುದು.

16. ನಾವು ಆಧ್ಯಾತ್ಮಿಕವಾಗಿ ಮತ್ತು ನೈತಿಕವಾಗಿ ಹೇಗೆ ಶುದ್ಧರಾಗಿಯೇ ಉಳಿಯಬಲ್ಲೆವು?

16 ಹೀಗೆ, ದೇವರ ಕೊಯ್ಲಿನ ಕೆಲಸಗಾರರಾಗಿ ಪರಿಣಮಿಸಲು ಮೊತ್ತಮೊದಲಾಗಿ ನಾವು ನಮ್ಮ ಜೀವನದಿಂದ ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಭ್ರಷ್ಟಗೊಳಿಸುವ ಎಲ್ಲ ವಿಷಯಗಳನ್ನು ತೆಗೆದುಹಾಕಬೇಕು. ಹೌದು, ಕೊಯ್ಲಿನ ಕೆಲಸಗಾರರಾಗಿರುವ ಸುಯೋಗಕ್ಕೆ ಅರ್ಹರಾಗಿ ಉಳಿಯಬೇಕಾದರೆ ಯೆಹೋವನ ಉನ್ನತ ನೈತಿಕ ಮತ್ತು ಆಧ್ಯಾತ್ಮಿಕ ಮಟ್ಟಗಳನ್ನು ಎತ್ತಿಹಿಡಿಯುವುದರಲ್ಲಿ ನಾವು ಆದರ್ಶಪ್ರಾಯರಾಗಿರಬೇಕು. (1 ಪೇತ್ರ 1:14-16 ಓದಿ.) ನಮ್ಮ ಶಾರೀರಿಕ ನೈರ್ಮಲ್ಯಕ್ಕೆ ನಾವು ಸದಾ ಗಮನಕೊಡುವಂತೆಯೇ ದೇವರ ಸತ್ಯ ವಾಕ್ಯದ ಶುದ್ಧೀಕರಿಸುವ ಪ್ರಭಾವಕ್ಕೆ ನಮ್ಮನ್ನು ಕ್ರಮವಾಗಿ ಅಧೀನಪಡಿಸಿಕೊಳ್ಳಬೇಕು. ಇದರಲ್ಲಿ ಬೈಬಲನ್ನು ಓದುವುದು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಸೇರಿದೆ. ನಮ್ಮ ಜೀವನದಲ್ಲಿ ದೇವರ ಮರುಜ್ಞಾಪನಗಳನ್ನು ಅನ್ವಯಿಸಲು ಯಥಾರ್ಥ ಪ್ರಯತ್ನಮಾಡುವುದೂ ಇದರಲ್ಲಿ ಒಳಗೂಡಿದೆ. ಹೀಗೆ ಮಾಡುವುದರಿಂದ ನಮ್ಮ ಸ್ವಂತ ಪಾಪಭರಿತ ಪ್ರವೃತ್ತಿಗಳ ವಿರುದ್ಧ ಹೋರಾಡಲು ಹಾಗೂ ಈ ಲೋಕದ ಭ್ರಷ್ಟಕಾರಕ ಪ್ರಭಾವಗಳನ್ನು ಎದುರಿಸಲು ನಮಗೆ ಶಕ್ತಿ ಸಿಗುವುದು. (ಕೀರ್ತ. 119:9; ಯಾಕೋ. 1:21-25) ಹೌದು, ದೇವರ ವಾಕ್ಯದ ಸತ್ಯದ ಸಹಾಯದಿಂದ ನಾವು ಗಂಭೀರವಾದ ಪಾಪದಿಂದಲೂ ‘ತೊಳೆದು ಶುದ್ಧೀಕರಿಸಲ್ಪಡಲು’ ಸಾಧ್ಯವಿದೆ ಎಂದು ತಿಳಿಯುವುದು ಎಷ್ಟು ಸಾಂತ್ವನದಾಯಕ!—1 ಕೊರಿಂ. 6:9-11.

17. ಶುದ್ಧರಾಗಿ ಉಳಿಯಲು ನಾವು ಯಾವ ಬೈಬಲ್‌ ಸಲಹೆಯನ್ನು ಪಾಲಿಸಬೇಕು?

17 ದೇವರ ಸತ್ಯ ವಾಕ್ಯದ ಶುದ್ಧೀಕಾರಕ ಪ್ರಭಾವವನ್ನು ನೀವು ನಿಮ್ಮ ಜೀವನದಲ್ಲಿ ಸ್ವೀಕರಿಸುತ್ತೀರೋ? ಉದಾಹರಣೆಗೆ, ಈ ಲೋಕದ ಕೀಳುಮಟ್ಟದ ಮನೋರಂಜನೆಯ ಅಪಾಯಗಳ ಕುರಿತು ಎಚ್ಚರಿಸಲ್ಪಟ್ಟಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? (ಕೀರ್ತ. 101:3) ನಿಮ್ಮ ನಂಬಿಕೆಗಳಲ್ಲಿ ಪಾಲಿಗರಾಗಿಲ್ಲದ ಸಹಪಾಠಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ಒಡನಾಟವನ್ನು ನೀವು ವರ್ಜಿಸುತ್ತೀರೊ? (1 ಕೊರಿಂ. 15:33) ಯೆಹೋವನ ದೃಷ್ಟಿಯಲ್ಲಿ ನಿಮ್ಮನ್ನು ಅಪವಿತ್ರಗೊಳಿಸಬಹುದಾದ ವೈಯಕ್ತಿಕ ದೌರ್ಬಲ್ಯಗಳನ್ನು ಜಯಿಸಲು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೀರೊ? (ಕೊಲೊ. 3:5) ಈ ಲೋಕದ ರಾಜಕೀಯ ಕಚ್ಚಾಟಗಳು ಮತ್ತು ಹೆಚ್ಚಿನ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಹಬ್ಬಿ-ಹರಡಿಕೊಂಡಿರುವ ರಾಷ್ಟ್ರೀಯತಾಭಾವದಿಂದ ನೀವು ಪ್ರತ್ಯೇಕವಾಗಿರುತ್ತೀರೊ?—ಯಾಕೋ. 4:4.

18. ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧರಾಗಿರುವುದು ಫಲಕಾರಿ ಕೊಯ್ಲುಗಾರರಾಗಿರಲು ನಮಗೆ ಹೇಗೆ ಸಹಾಯಮಾಡುವುದು?

18 ಇಂಥ ವಿಷಯಗಳಲ್ಲಿ ನೀವು ತೋರಿಸುವ ನಂಬಿಗಸ್ತ ವಿಧೇಯತೆಯು ಅತ್ಯುತ್ತಮ ಫಲಿತಾಂಶಗಳನ್ನು ತರುವುದು. ತನ್ನ ಅಭಿಷಿಕ್ತ ಶಿಷ್ಯರನ್ನು ದ್ರಾಕ್ಷೇಬಳ್ಳಿಯ ಕೊಂಬೆಗಳಿಗೆ ಹೋಲಿಸುತ್ತಾ ಯೇಸು ಹೇಳಿದ್ದು: “ನನ್ನಲ್ಲಿದ್ದುಕೊಂಡು ಫಲವನ್ನು ಕೊಡದಿರುವ ಪ್ರತಿಯೊಂದು ಕೊಂಬೆಯನ್ನು [ನನ್ನ ತಂದೆ] ತೆಗೆದುಹಾಕುತ್ತಾನೆ ಮತ್ತು ಫಲವನ್ನು ಕೊಡುವ ಪ್ರತಿಯೊಂದು ಕೊಂಬೆಯು ಇನ್ನೂ ಹೆಚ್ಚು ಫಲವನ್ನು ಕೊಡುವಂತೆ ಅದನ್ನು ಹಸನುಗೊಳಿಸುತ್ತಾನೆ” ಅಥವಾ ಶುದ್ಧಪಡಿಸುತ್ತಾನೆ. (ಯೋಹಾ. 15:2) ಬೈಬಲ್‌ ಸತ್ಯದ ಶುದ್ಧೀಕರಿಸುವ ನೀರಿಗೆ ನೀವು ನಿಮ್ಮನ್ನು ಅಧೀನಪಡಿಸಿಕೊಳ್ಳುವಾಗ ಇನ್ನೂ ಹೆಚ್ಚು ಫಲವನ್ನು ಕೊಡುವಿರಿ.

ಆಶೀರ್ವಾದಗಳು—ಇಂದೂ ಮುಂದೂ

19. ಕೊಯ್ಲಿನ ಕೆಲಸಗಾರರಾಗಿ ಯೇಸುವಿನ ಶಿಷ್ಯರು ಮಾಡಿದ ಪ್ರಯತ್ನಗಳು ಹೇಗೆ ಆಶೀರ್ವದಿಸಲ್ಪಟ್ಟವು?

19 ಯೇಸುವಿನ ತರಬೇತಿಗೆ ಪ್ರತಿಕ್ರಿಯಿಸಿದ ನಂಬಿಗಸ್ತ ಶಿಷ್ಯರು ನಂತರ ಕ್ರಿ.ಶ. 33ರ ಪಂಚಾಶತ್ತಮದಂದು ಪವಿತ್ರಾತ್ಮ ಶಕ್ತಿಯನ್ನು ಪಡೆದುಕೊಂಡು “ಭೂಮಿಯ ಕಟ್ಟಕಡೆಯ ವರೆಗೂ” ಸಾಕ್ಷಿಕೊಡುವವರಾದರು. (ಅ. ಕಾ. 1:8) ಅವರು ಮುಂದೆ ಆಡಳಿತ ಮಂಡಲಿಯ ಸದಸ್ಯರಾಗಿ, ಮಿಷನೆರಿಗಳಾಗಿ ಮತ್ತು ಸಂಚರಣ ಹಿರಿಯರಾಗಿ ಸೇವೆ ಸಲ್ಲಿಸುತ್ತಾ “ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ” ಸುವಾರ್ತೆ ಸಾರುವುದರಲ್ಲಿ ಮುಖ್ಯ ಪಾತ್ರ ವಹಿಸಿದರು. (ಕೊಲೊ. 1:23) ಅವರು ಅಪಾರ ಆಶೀರ್ವಾದಗಳನ್ನು ಪಡೆದುಕೊಂಡರು ಮಾತ್ರವಲ್ಲ ಇತರರಿಗೆ ಮಹಾನಂದವನ್ನು ತಂದರು!

20. (ಎ) ಆಧ್ಯಾತ್ಮಿಕ ಕೊಯ್ಲಿನಲ್ಲಿ ಪೂರ್ಣವಾಗಿ ಭಾಗವಹಿಸುವುದರಿಂದ ನೀವು ಯಾವ ಆಶೀರ್ವಾದಗಳನ್ನು ಪಡೆದುಕೊಂಡಿದ್ದೀರಿ? (ಬಿ) ನಿಮ್ಮ ದೃಢತೀರ್ಮಾನಗಳೇನು?

20 ಹೌದು, ತಗ್ಗುತನ ಮತ್ತು ಕಾರ್ಯಶ್ರದ್ಧೆಯನ್ನು ತೋರಿಸುವ ಮೂಲಕ ಹಾಗೂ ದೇವರ ವಾಕ್ಯದ ಉನ್ನತ ಮಟ್ಟಗಳನ್ನು ಎತ್ತಿಹಿಡಿಯುವ ಮೂಲಕ ಈಗ ನಡೆಯುತ್ತಿರುವ ಮಹಾ ಆಧ್ಯಾತ್ಮಿಕ ಕೊಯ್ಲಿನಲ್ಲಿ ನಾವು ಮುಂದಕ್ಕೂ ಪೂರ್ಣವಾದ ಅರ್ಥಭರಿತ ಪಾಲನ್ನು ಹೊಂದುವೆವು. ಅನೇಕರು ಈ ಲೋಕದ ಪ್ರಾಪಂಚಿಕ ಮತ್ತು ಸುಖಭೋಗಾಸಕ್ತ ಜೀವನ ಶೈಲಿಯೊಂದಿಗೆ ಬರುವ ನೋವು ಮತ್ತು ಹತಾಶೆಯನ್ನು ಎದುರಿಸುತ್ತಿರುವಾಗ ನಾವಾದರೋ ನಿಜ ಆನಂದ ಮತ್ತು ಸಂತೃಪ್ತಿಯನ್ನು ಅನುಭವಿಸುತ್ತೇವೆ. (ಕೀರ್ತ. 126:6) ಎಲ್ಲಕ್ಕಿಂತ ಮುಖ್ಯವಾಗಿ ನಾವು “ಕರ್ತನ ಸಂಬಂಧದಲ್ಲಿ ಪಡುವ ಪ್ರಯಾಸವು ವ್ಯರ್ಥವಾಗುವುದಿಲ್ಲ.” (1 ಕೊರಿಂ. 15:58) ಕೊಯ್ಲಿನ ಯಜಮಾನನಾದ ಯೆಹೋವ ದೇವರು ‘ನಮ್ಮ ಕೆಲಸಕ್ಕಾಗಿಯೂ ಆತನ ಹೆಸರಿಗಾಗಿ ನಾವು ತೋರಿಸುವ ಪ್ರೀತಿಗಾಗಿಯೂ’ ನಮ್ಮನ್ನು ಸದಾಕಾಲಕ್ಕೂ ಆಶೀರ್ವದಿಸುವನು.—ಇಬ್ರಿ. 6:10-12.

[ಪಾದಟಿಪ್ಪಣಿ]

^ ಪ್ಯಾರ. 8 ತಲಾಂತುಗಳ ಕುರಿತ ಸಾಮ್ಯ ಮುಖ್ಯವಾಗಿ ಯೇಸು ತನ್ನ ಅಭಿಷಿಕ್ತ ಶಿಷ್ಯರೊಂದಿಗೆ ವ್ಯವಹರಿಸುವ ವಿಧದ ಕುರಿತಾಗಿದೆ. ಆದರೆ ಅದರಲ್ಲಿರುವ ಮೂಲತತ್ತ್ವಗಳು ಕ್ರೈಸ್ತರೆಲ್ಲರಿಗೆ ಅನ್ವಯಿಸುತ್ತವೆ.

ನಿಮಗೆ ಜ್ಞಾಪಕವಿದೆಯೊ?

ನೀವು ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸಲು ಶ್ರಮಿಸುತ್ತಿರುವಾಗ . . .

• ತಗ್ಗುತನ ತೋರಿಸುವುದು ಏಕೆ ಪ್ರಾಮುಖ್ಯ?

• ಹೇಗೆ ಕಾರ್ಯಶ್ರದ್ಧೆಯನ್ನು ಬೆಳೆಸಿಕೊಂಡು ಕಾಪಾಡಿಕೊಳ್ಳಬಲ್ಲಿರಿ?

• ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧರಾಗಿ ಉಳಿಯುವುದು ಏಕೆ ಅವಶ್ಯ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ರಾಜ್ಯದ ಹಿತಾಸಕ್ತಿಗಳ ಮೇಲೆ ಕೇಂದ್ರಿತವಾದ ಸರಳ ಜೀವನ ನಡೆಸಲು ನಮಗೆ ತಗ್ಗುತನವು ಸಹಾಯಮಾಡಬಲ್ಲದು