ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ದಿನ ಬಯಲುಗೊಳಿಸುವ ವಿಷಯಗಳು

ಯೆಹೋವನ ದಿನ ಬಯಲುಗೊಳಿಸುವ ವಿಷಯಗಳು

ಯೆಹೋವನ ದಿನ ಬಯಲುಗೊಳಿಸುವ ವಿಷಯಗಳು

“ಯೆಹೋವನ ದಿನವು ಕಳ್ಳನಂತೆ ಬರುವುದು; . . . ಭೂಮಿಯೂ ಅದರಲ್ಲಿರುವ ಕೆಲಸಗಳೂ ಬಯಲಾಗುವವು.”—2 ಪೇತ್ರ 3:10.

1, 2. (ಎ) ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯು ಹೇಗೆ ಅಂತ್ಯಗೊಳ್ಳುವುದು? (ಬಿ) ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸುವೆವು?

ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯು ಒಂದು ಮೂಲಭೂತ ಸುಳ್ಳಿನ ತಳಪಾಯದ ಮೇಲೆ ನಿಂತಿದೆ. ಯೆಹೋವನ ಸಹಾಯವಿಲ್ಲದೇ ಮಾನವನು ಈ ಭೂಮಿಯನ್ನು ಯಶಸ್ವಿಕರವಾಗಿ ಆಳಬಲ್ಲನು ಎಂಬುದೇ ಆ ಸುಳ್ಳು. (ಕೀರ್ತ. 2:2, 3) ಸುಳ್ಳಿನ ಮೇಲೆ ಆಧರಿಸಿರುವ ಯಾವುದೇ ವಿಷಯ ಸದಾಕಾಲ ದೃಢವಾಗಿ ನಿಲ್ಲಸಾಧ್ಯವೊ? ಖಂಡಿತ ಸಾಧ್ಯವಿಲ್ಲ! ಆದರೂ ಸೈತಾನನ ಲೋಕವು ತನ್ನಿಂದ ತಾನೇ ಅಂತ್ಯಗೊಳ್ಳುವ ಸಮಯಕ್ಕಾಗಿ ನಾವು ಕಾಯುವ ಅವಶ್ಯಕತೆಯಿಲ್ಲ. ಬದಲಾಗಿ ಅದು ದೇವರಿಂದ ನಾಶನಕ್ಕೊಳಗಾಗುವುದು. ಆತನು ತನ್ನ ನೇಮಿತ ಸಮಯದಲ್ಲಿ ಮತ್ತು ತನ್ನ ಸ್ವಂತ ವಿಧದಲ್ಲಿ ಅದನ್ನು ನಾಶ ಮಾಡುವನು. ಈ ದುಷ್ಟ ಲೋಕದ ವಿರುದ್ಧ ದೇವರು ಮಾಡುವ ಆ ಕ್ರಿಯೆಯು ಆತನ ನ್ಯಾಯ ಮತ್ತು ಪ್ರೀತಿಯನ್ನು ಪರಿಪೂರ್ಣವಾಗಿ ತೋರಿಸುವುದು.—ಕೀರ್ತ. 92:7; ಜ್ಞಾನೋ. 2:21, 22.

2 “ಯೆಹೋವನ ದಿನವು ಕಳ್ಳನಂತೆ ಬರುವುದು; ಆಗ ಆಕಾಶವು ಹಿಸ್ಸೆಂಬ ಶಬ್ದದಿಂದ ಗತಿಸಿಹೋಗುವುದು; ಘಟಕಾಂಶಗಳು ತೀಕ್ಷ್ಣವಾದ ಕಾವಿನಿಂದಾಗಿ ಉರಿದು ಕರಗಿ ಹೋಗುವವು; ಭೂಮಿಯೂ ಅದರಲ್ಲಿರುವ ಕೆಲಸಗಳೂ ಬಯಲಾಗುವವು” ಎಂದು ಅಪೊಸ್ತಲ ಪೇತ್ರನು ಬರೆದನು. (2 ಪೇತ್ರ 3:10) ಇಲ್ಲಿ ತಿಳಿಸಲಾಗಿರುವ “ಆಕಾಶ” ಮತ್ತು “ಭೂಮಿ” ಅಂದರೇನು? ಉರಿದು ಕರಗಿ ಹೋಗಲಿರುವ “ಘಟಕಾಂಶಗಳು” ಯಾವುವು? “ಭೂಮಿಯೂ ಅದರಲ್ಲಿರುವ ಕೆಲಸಗಳೂ ಬಯಲಾಗುವವು” ಎಂದು ಪೇತ್ರನು ಹೇಳಿದ್ದರ ಅರ್ಥವೇನು? ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದಿರುವುದು ಭವಿಷ್ಯತ್ತಿನಲ್ಲಿ ಬೇಗನೆ ನಡೆಯಲಿಕ್ಕಿರುವ ಭಯಪ್ರೇರಕ ಘಟನೆಗಳಿಗಾಗಿ ಸಿದ್ಧರಾಗಿರಲು ನಮಗೆ ಸಹಾಯಮಾಡುವುದು.

ಗತಿಸಿಹೋಗಲಿರುವ ಆಕಾಶ ಮತ್ತು ಭೂಮಿ

3. ಎರಡನೇ ಪೇತ್ರ 3:10ರಲ್ಲಿ ತಿಳಿಸಲಾಗಿರುವ “ಆಕಾಶ” ಏನನ್ನು ಸೂಚಿಸುತ್ತದೆ, ಮತ್ತು ಅದು ಹೇಗೆ ಗತಿಸಿಹೋಗುವುದು?

3 ಬೈಬಲಿನಲ್ಲಿ “ಆಕಾಶ” ಎಂಬ ಪದವನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಅದು ಅನೇಕವೇಳೆ ಆಳುತ್ತಿರುವ ಪ್ರಭುತ್ವಗಳಿಗೆ ಸೂಚಿಸುತ್ತದೆ. ಪ್ರಭುತ್ವಗಳು ತಮ್ಮ ಪ್ರಜೆಗಳಿಗಿಂತ ಉನ್ನತವಾಗಿ ಅಂದರೆ ಮೇಲಿನ ಸ್ಥಾನದಲ್ಲಿವೆ. (ಯೆಶಾ. 14:13, 14; ಪ್ರಕ. 21:1, 2) ‘ಗತಿಸಿಹೋಗಲಿರುವ ಆಕಾಶವು’ ಭಕ್ತಿಹೀನ ಮಾನವ ಸಮಾಜವನ್ನು ಆಳುವ ಮನುಷ್ಯನ ಆಳ್ವಿಕೆಯನ್ನು ಸೂಚಿಸುತ್ತದೆ. ಅವು ಗಟ್ಟಿಯಾದ “ಹಿಸ್ಸೆಂಬ ಶಬ್ದದಿಂದ” ಅಥವಾ ಇನ್ನೊಂದು ಭಾಷಾಂತರಕ್ಕನುಸಾರ “ಮಹಾಘೋಷದಿಂದ” ಗತಿಸಿಹೋಗುವುದು ಎಂಬುದು ಈ ಆಕಾಶದ ಕ್ಷಿಪ್ರ ನಾಶನಕ್ಕೆ ಸೂಚಿಸಬಹುದು.

4. “ಭೂಮಿ” ಏನನ್ನು ಸೂಚಿಸುತ್ತದೆ, ಮತ್ತು ಅದು ಹೇಗೆ ನಾಶಗೊಳಿಸಲ್ಪಡುವುದು?

4 ‘ಭೂಮಿಯು’ ದೇವರಿಂದ ವಿಮುಖವಾಗಿರುವ ಮಾನವ ಲೋಕವನ್ನು ಸೂಚಿಸುತ್ತದೆ. ಇಂಥ ಒಂದು ಲೋಕ ನೋಹನ ದಿನದಲ್ಲಿ ಅಸ್ತಿತ್ವದಲ್ಲಿತ್ತು. ಅದು ದೇವಾಜ್ಞೆಯ ಮೇರೆಗೆ ಜಲಪ್ರಳಯದಲ್ಲಿ ಅಂತ್ಯವನ್ನು ಕಂಡಿತು. “ಅದೇ ವಾಕ್ಯದ ಮೂಲಕ ಈಗ ಇರುವ ಆಕಾಶ ಮತ್ತು ಭೂಮಿಯು ಬೆಂಕಿಗಾಗಿ ಇಡಲ್ಪಟ್ಟಿದ್ದು, ನ್ಯಾಯತೀರ್ಪಿನ ದಿನಕ್ಕಾಗಿ ಮತ್ತು ದೇವಭಕ್ತಿಯಿಲ್ಲದ ಜನರ ನಾಶನಕ್ಕಾಗಿ ಕಾದಿರಿಸಲ್ಪಡುತ್ತಿವೆ.” (2 ಪೇತ್ರ 3:7) ಜಲಪ್ರಳಯವು ದೇವಭಕ್ತಿಯಿಲ್ಲದ ಜನರನ್ನು ಎಲ್ಲಾ ಒಂದೇ ದಾಳಿಯಲ್ಲೋ ಎಂಬಂತೆ ನಾಶಮಾಡಿತು. ಆದರೆ ಬರಲಿರುವ ನಾಶನವು ‘ಮಹಾ ಸಂಕಟದ’ ಸಮಯದಲ್ಲಿ ಹಂತಹಂತವಾಗಿ ನಡೆಯುವುದು. (ಪ್ರಕ. 7:14) ಆ ಸಂಕಟದ ಮೊದಲ ಹಂತದಲ್ಲಿ ‘ಮಹಾ ಬಾಬೆಲನ್ನು’ ನಾಶಮಾಡುವಂತೆ ದೇವರು ಈ ಲೋಕದ ರಾಜಕೀಯ ಧುರೀಣರನ್ನು ಪ್ರೇರಿಸುವನು. ಹೀಗೆ ಆ ಧಾರ್ಮಿಕ ವೇಶ್ಯೆಯ ಮೇಲಿರುವ ತನ್ನ ತಿರಸ್ಕಾರವನ್ನು ವ್ಯಕ್ತಪಡಿಸುವನು. (ಪ್ರಕ. 17:5, 16; 18:8) ನಂತರ ಮಹಾ ಸಂಕಟದ ಕೊನೆಯ ಹಂತವಾದ ಅರ್ಮಗೆದೋನ್‌ ಯುದ್ಧದಲ್ಲಿ ಯೆಹೋವನು ತಾನೇ ಸೈತಾನನ ಲೋಕದ ಉಳಿದ ಭಾಗವನ್ನು ಅಳಿಸಿಹಾಕುವನು.—ಪ್ರಕ. 16:14, 16; 19:19-21.

“ಘಟಕಾಂಶಗಳು . . . ಉರಿದು ಕರಗಿ ಹೋಗುವವು”

5. ಸಾಂಕೇತಿಕ ಘಟಕಾಂಶಗಳಲ್ಲಿ ಏನು ಒಳಗೂಡಿದೆ?

5 ‘ಉರಿದು ಕರಗಿ ಹೋಗಲಿರುವ ಘಟಕಾಂಶಗಳು’ ಯಾವುವು? ಪೇತ್ರನಿಂದ ತಿಳಿಸಲಾದ “ಘಟಕಾಂಶಗಳು” ಈ ಲೋಕದಲ್ಲಿರುವ ಭಕ್ತಿಹೀನ ಗುಣಲಕ್ಷಣಗಳು, ಮನೋಭಾವಗಳು, ಕಾರ್ಯವಿಧಾನಗಳು ಮತ್ತು ಗುರಿಗಳ ಮೂಲಭೂತ ಅಂಶಗಳಿಗೆ ಸೂಚಿಸುತ್ತವೆ. ಈ ‘ಘಟಕಾಂಶಗಳಲ್ಲಿ’ “ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯನಡೆಸುತ್ತಿರುವ” ‘ಲೋಕದ ಮನೋಭಾವ’ ಒಳಗೂಡಿದೆ. (1 ಕೊರಿಂ. 2:12; ಎಫೆಸ 2:1-3 ಓದಿ.) ಈ ಮನೋಭಾವ ಅಥವಾ “ವಾಯು” ಸೈತಾನನ ಲೋಕದಲ್ಲಿ ತುಂಬಿಕೊಂಡಿದೆ. ಅದು ‘ವಾಯುಮಂಡಲದಲ್ಲಿ ಅಧಿಕಾರ ನಡೆಸುವ [ದುರಹಂಕಾರಿ ಪ್ರತಿಭಟಕ] ಅಧಿಪತಿಯಾದ’ ಸೈತಾನನ ಮನೋಭಾವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಆಲೋಚಿಸುವಂತೆ, ಯೋಜಿಸುವಂತೆ, ಮಾತಾಡುವಂತೆ ಮತ್ತು ಕ್ರಿಯೆಗೈಯುವಂತೆ ಜನರನ್ನು ಪ್ರೇರಿಸುತ್ತದೆ.

6. ಲೋಕದ ಮನೋಭಾವವು ತನ್ನನ್ನು ತೋರ್ಪಡಿಸಿಕೊಳ್ಳುವುದು ಹೇಗೆ?

6 ಆದುದರಿಂದ ತಿಳಿದೋ ತಿಳಿಯದೆಯೋ ಲೋಕದ ಮನೋಭಾವದಿಂದ ಸೋಂಕಿತರಾದವರು ತಮ್ಮ ಹೃದಮನಗಳ ಮೇಲೆ ಸೈತಾನನು ಪ್ರಭಾವ ಬೀರುವಂತೆ ಬಿಡುತ್ತಾರೆ. ಇದರಿಂದ ಅವರು ಅವನ ಆಲೋಚನಾರೀತಿ ಮತ್ತು ಮನೋಭಾವವನ್ನು ಬಿಂಬಿಸುತ್ತಾರೆ. ಇದರ ಫಲಿತಾಂಶವಾಗಿ ದೇವರ ಚಿತ್ತದ ಪರಿವೆಯೇ ಇಲ್ಲದೆ ಅವರು ಮನಸ್ಸೋ ಇಚ್ಛೆಯಂತೆ ವರ್ತಿಸುತ್ತಾರೆ. ವಿವಿಧ ಸನ್ನಿವೇಶಗಳು ಎದುರಾದಾಗ ಅಹಂಕಾರದಿಂದ ಅಥವಾ ಸ್ವಾರ್ಥದಿಂದ ಅವುಗಳಿಗೆ ಪ್ರತಿಕ್ರಿಯಿಸುತ್ತಾರೆ. ಅಧಿಕಾರದ ಕಡೆಗೆ ದಂಗೆಕೋರ ಮನೋಭಾವವನ್ನು ವ್ಯಕ್ತಪಡಿಸುತ್ತಾರೆ. ‘ಶರೀರದಾಶೆ ಮತ್ತು ಕಣ್ಣಿನಾಶೆಯ’ ಕಪಿಮುಷ್ಠಿಗೆ ತಮ್ಮನ್ನು ಒಪ್ಪಿಸಿಕೊಡುತ್ತಾರೆ.—1 ಯೋಹಾನ 2:15-17 ಓದಿ.

7. ನಾವು ‘ನಮ್ಮ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು’ ಏಕೆ?

7 ಆದುದರಿಂದ ನಾವು ಆರಿಸಿಕೊಳ್ಳುವ ಸಂಗಡಿಗರು, ಓದುವ ಮಾಹಿತಿ, ಮನೋರಂಜನೆ ಮತ್ತು ಇಂಟರ್‌ನೆಟ್‌ನಲ್ಲಿ ನೋಡುವ ವೆಬ್‌ ಸೈಟ್‌ಗಳ ವಿಷಯದಲ್ಲಿ ದೈವಿಕ ವಿವೇಕವನ್ನು ತೋರಿಸುವ ಮೂಲಕ ‘ನಮ್ಮ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು’ ತುಂಬ ಪ್ರಾಮುಖ್ಯವಲ್ಲವೆ? (ಜ್ಞಾನೋ. 4:23) ಅಪೊಸ್ತಲ ಪೌಲನು ಬರೆದದ್ದು: “ಎಚ್ಚರವಾಗಿರಿ! ಕ್ರಿಸ್ತನಿಗೆ ಅನುಸಾರವಾಗಿರದೆ ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿಯೂ ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಿಗೆ ಅನುಸಾರವಾಗಿಯೂ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.” (ಕೊಲೊ. 2:8) ಯೆಹೋವನ ದಿನವು ಹತ್ತಿರವಾಗುತ್ತಾ ಇರುವಾಗ ಆ ಅಪ್ಪಣೆಯು ಇನ್ನಷ್ಟು ತುರ್ತಿನದ್ದಾಗುತ್ತದೆ. ಏಕೆಂದರೆ ಅದರ ಅಸಾಧಾರಣವಾದ ‘ಕಾವು’ ಸೈತಾನನ ವ್ಯವಸ್ಥೆಯ ‘ಘಟಕಾಂಶಗಳನ್ನೆಲ್ಲಾ’ ಕರಗಿಸಿಬಿಟ್ಟು ಅವುಗಳಲ್ಲಿ ಅಗ್ನಿನಿರೋಧಕ ಶಕ್ತಿ ಅಲ್ಪಮಾತ್ರವೂ ಇಲ್ಲ ಎಂಬುದನ್ನು ಬಯಲುಪಡಿಸುವುದು. ಇದು ಮಲಾಕಿಯ 4:1ರ ಮಾತುಗಳನ್ನು ನೆನಪಿಗೆ ತರುತ್ತದೆ: “ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ; ಸಕಲ ಅಹಂಕಾರಿಗಳೂ ದುಷ್ಕರ್ಮಿಗಳೂ ಹೊಟ್ಟಿನಂತಿರುವರು; ಬರುತ್ತಿರುವ ಆ ದಿನವು ಅವರಿಗೆ ಅಗ್ನಿಪ್ರಲಯವಾಗುವದು.”

“ಭೂಮಿಯೂ ಅದರಲ್ಲಿರುವ ಕೆಲಸಗಳೂ ಬಯಲಾಗುವವು”

8. ಭೂಮಿಯೂ ಅದರಲ್ಲಿರುವ ಕೆಲಸಗಳೂ ಹೇಗೆ “ಬಯಲಾಗುವವು”?

8 “ಭೂಮಿಯೂ ಅದರಲ್ಲಿರುವ ಕೆಲಸಗಳೂ ಬಯಲಾಗುವವು” ಎಂದು ಪೇತ್ರನು ಬರೆದಾಗ ಅದರ ಅರ್ಥ ಏನಾಗಿತ್ತು? “ಬಯಲಾಗುವವು” ಎಂಬ ಪದವನ್ನು “ಹೊರಗೆಡಹಲ್ಪಡುವವು” ಅಥವಾ “ಬಹಿರಂಗವಾಗುವವು” ಎಂದು ಸಹ ತರ್ಜುಮೆ ಮಾಡಸಾಧ್ಯ. ಮಹಾ ಸಂಕಟದ ಸಮಯದಲ್ಲಿ ಯೆಹೋವನು ಸೈತಾನನ ಲೋಕವನ್ನು ಬಯಲುಪಡಿಸುತ್ತಾ ಅದು ತನ್ನ ಮತ್ತು ತನ್ನ ರಾಜ್ಯದ ವಿರುದ್ಧವಾಗಿದೆ, ಆದುದರಿಂದ ನಾಶನಕ್ಕೆ ಅರ್ಹವಾಗಿದೆ ಎಂದು ಬಹಿರಂಗಪಡಿಸುವನು ಎಂಬುದು ಪೇತ್ರನ ಮಾತುಗಳ ತಾತ್ಪರ್ಯ. ಆ ಸಮಯದ ಕುರಿತು ಪ್ರವಾದನಾತ್ಮಕವಾಗಿ ಮಾತಾಡುತ್ತಾ ಯೆಶಾಯ 26:21 ಹೇಳುವುದು: “ಯೆಹೋವನು ಭೂನಿವಾಸಿಗಳಿಗೆ ಅವರ ಪಾಪಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ವ್ಯಕ್ತಗೊಳಿಸುವದು, ತನ್ನ ನಿವಾಸಿಗಳಲ್ಲಿ ಹತರಾಗಿದ್ದವರನ್ನು ಇನ್ನು ಮರೆಮಾಜದು.”

9. (ಎ) ನಾವು ಯಾವುದನ್ನು ತ್ಯಜಿಸಬೇಕು, ಮತ್ತು ಏಕೆ? (ಬಿ) ನಾವು ಏನನ್ನು ಬೆಳೆಸಿಕೊಳ್ಳಬೇಕು, ಮತ್ತು ಏಕೆ?

9 ಈ ಲೋಕದಿಂದ ಮತ್ತು ಅದರ ದುಷ್ಟ ಮನೋಭಾವದಿಂದ ರೂಪಿಸಲ್ಪಟ್ಟವರು ಯೆಹೋವನ ದಿನದಲ್ಲಿ ತಮ್ಮ ನಿಜ ಬಣ್ಣ ತೋರಿಸುವರು. ಒಬ್ಬರನ್ನೊಬ್ಬರು ಹತಿಸಲಿಕ್ಕೂ ಅವರು ಹೇಸುವುದಿಲ್ಲ. ವಾಸ್ತವದಲ್ಲಿ ಇಂದು ಜನಪ್ರಿಯವಾಗಿರುವ ವಿವಿಧ ರೀತಿಯ ಹಿಂಸಾತ್ಮಕ ಮನೋರಂಜನೆಯು “ಒಬ್ಬರ ಮೇಲೊಬ್ಬರು ಕೈಯೆತ್ತುವ” ಸಮಯಕ್ಕಾಗಿ ಅನೇಕರ ಮನಸ್ಸುಗಳನ್ನು ಸಿದ್ಧಗೊಳಿಸುತ್ತಿದೆ ಎಂದು ಹೇಳುವುದು ಸೂಕ್ತ. (ಜೆಕ. 14:13) ಆದುದರಿಂದ ದೇವರು ಹೇಸುವ ಅಹಂಕಾರ ಮತ್ತು ಹಿಂಸಾಸಕ್ತಿಯಂಥ ಪ್ರವೃತ್ತಿಗಳನ್ನು ನಮ್ಮಲ್ಲಿ ಬೆಳೆಸಬಹುದಾದ ಯಾವುದೇ ವಿಷಯವನ್ನು—ಚಲನಚಿತ್ರಗಳು, ಪುಸ್ತಕಗಳು, ವಿಡಿಯೋ ಗೇಮ್‌ಗಳು ಇತ್ಯಾದಿಯನ್ನು ತ್ಯಜಿಸುವುದು ಎಷ್ಟು ಪ್ರಾಮುಖ್ಯ! (2 ಸಮು. 22:28; ಕೀರ್ತ. 11:5) ಅದರ ಬದಲಿಗೆ ದೇವರ ಪವಿತ್ರಾತ್ಮದ ಫಲವನ್ನು ಬೆಳೆಸಿಕೊಳ್ಳೋಣ. ಯೆಹೋವನ ದಿನದಲ್ಲಿ ಸಾಂಕೇತಿಕ ಕಾವು ಏರುವಾಗ ಬೆಂಕಿಯ ಶಕ್ತಿಯನ್ನು ಇಂಥ ಗುಣಗಳು ಎದುರಿಸಿ ನಿಲ್ಲಲು ಶಕ್ತವಾಗುವವು.—ಗಲಾ. 5:22, 23.

‘ನೂತನ ಆಕಾಶವೂ ನೂತನ ಭೂಮಿಯೂ’

10, 11. “ನೂತನ ಆಕಾಶ” ಮತ್ತು “ನೂತನ ಭೂಮಿ” ಅಂದರೇನು?

10ಎರಡನೇ ಪೇತ್ರ 3:13 ಓದಿ. ‘ನೂತನ ಆಕಾಶವು’ ದೇವರ ಸ್ವರ್ಗೀಯ ರಾಜ್ಯ. ಇದು 1914ರಲ್ಲಿ “ಅನ್ಯಜನಾಂಗಗಳ ನೇಮಿತ ಕಾಲಗಳು” ಅಂತ್ಯಗೊಂಡಾಗ ಸ್ಥಾಪಿಸಲ್ಪಟ್ಟಿತು. (ಲೂಕ 21:24) ಈ ರಾಜವೈಭವದ ಸರಕಾರವು ಕ್ರಿಸ್ತ ಯೇಸು ಮತ್ತು ಅವನ 1,44,000 ಮಂದಿ ಜೊತೆ ಅರಸರಿಂದ ರಚಿಸಲ್ಪಟ್ಟಿದೆ. ಇವರಲ್ಲಿ ಹೆಚ್ಚಿನವರು ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದಾಗಿದೆ. ಆರಿಸಲ್ಪಟ್ಟ ಈ ವ್ಯಕ್ತಿಗಳನ್ನು ‘ತನ್ನ ಗಂಡನಿಗಾಗಿ ಅಲಂಕರಿಸಿಕೊಂಡ ವಧುವಿನಂತೆ ಸಿದ್ಧವಾಗಿದ್ದು ಸ್ವರ್ಗದಿಂದ ದೇವರ ಬಳಿಯಿಂದ ಇಳಿದುಬರುವ ಪವಿತ್ರ ನಗರವಾದ ಹೊಸ ಯೆರೂಸಲೇಮ್‌’ ಎಂದು ಪ್ರಕಟನೆ ಪುಸ್ತಕದಲ್ಲಿ ಚಿತ್ರಿಸಲಾಗಿದೆ. (ಪ್ರಕ. 21:1, 2, 22-24) ಪ್ರಾಚೀನ ಇಸ್ರಾಯೇಲಿನಲ್ಲಿ ಭೌಮಿಕ ಯೆರೂಸಲೇಮ್‌ ಸರಕಾರದ ಮುಖ್ಯ ಕೇಂದ್ರವಾಗಿದ್ದ ಹಾಗೆಯೇ ಹೊಸ ಯೆರೂಸಲೇಮ್‌ ಮತ್ತು ಅದರ ಗಂಡನು ಹೊಸ ವಿಷಯಗಳ ವ್ಯವಸ್ಥೆಯ ಸರಕಾರವಾಗಿದ್ದಾರೆ. ಈ ದಿವ್ಯ ನಗರವು ಭೂಮಿಯ ಕಡೆಗೆ ತನ್ನ ಗಮನವನ್ನು ತಿರುಗಿಸುವ ಮೂಲಕ ಅಂದರೆ ಭೂಮಿಯ ವಿಷಯಗಳನ್ನು ನಿಯಂತ್ರಣದಲ್ಲಿ ತೆಗೆದುಕೊಳ್ಳುವ ಮೂಲಕ ‘ಸ್ವರ್ಗದಿಂದ ಇಳಿದುಬರುವುದು.’

11 ‘ನೂತನ ಭೂಮಿಯು’ ಮಾನವರ ಹೊಸ ಭೌಮಿಕ ಸಮಾಜಕ್ಕೆ ಸೂಚಿಸುತ್ತದೆ. ಈ ಮಾನವರು ದೇವರ ರಾಜ್ಯಕ್ಕೆ ತಮ್ಮ ಸಿದ್ಧಮನಸ್ಸಿನ ಅಧೀನತೆಯನ್ನು ತೋರಿಸಿರುವರು. ದೇವಜನರು ಇಂದು ಸಹ ಆಧ್ಯಾತ್ಮಿಕ ಪರದೈಸಿನಲ್ಲಿ ಆನಂದಿಸುತ್ತಿದ್ದಾರೆ. ಆದರೆ ಇದು ‘ಬರಲಿರುವ [ಆ ಸುಂದರವಾದ] ನಿವಾಸಿತ ಭೂಮಿಯಲ್ಲಿ’ ತನ್ನ ನ್ಯಾಯವಾದ ಸ್ಥಾನವನ್ನು ಹೊಂದಿರುವುದು. (ಇಬ್ರಿ. 2:5) ನಾವು ಹೇಗೆ ಆ ಹೊಸ ವಿಷಯಗಳ ವ್ಯವಸ್ಥೆಯ ಭಾಗವಾಗಿರಬಲ್ಲೆವು?

ಯೆಹೋವನ ಮಹಾ ದಿನಕ್ಕಾಗಿ ತಯಾರಾಗಿರಿ

12. ಯೆಹೋವನ ದಿನವು ಲೋಕಕ್ಕೆ ಆಘಾತದಂತೆ ಬರಲಿದೆ ಏಕೆ?

12 ಯೆಹೋವನ ದಿನವು “ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ” ಅಂದರೆ ಗೊತ್ತಾಗದಂತೆ, ಅನಿರೀಕ್ಷಿತವಾಗಿ ಬರುವುದೆಂದು ಪೌಲ ಮತ್ತು ಪೇತ್ರರಿಬ್ಬರೂ ಮುಂತಿಳಿಸಿದ್ದಾರೆ. (1 ಥೆಸಲೊನೀಕ 5:1, 2 ಓದಿ.) ಆ ದಿನವನ್ನು ಎದುರುನೋಡುತ್ತಿರುವ ನಿಜ ಕ್ರೈಸ್ತರು ಸಹ ಅದರ ಫಕ್ಕನೆ ಬರುವಿಕೆಯ ವಿಷಯದಲ್ಲಿ ಆಶ್ಚರ್ಯಗೊಳ್ಳುವರು. (ಮತ್ತಾ. 24:44) ಈ ಲೋಕವಾದರೋ ಆಶ್ಚರ್ಯಕ್ಕಿಂತಲೂ ಎಷ್ಟೋ ಹೆಚ್ಚಿನದ್ದನ್ನು ಅನುಭವಿಸಲಿಕ್ಕಿದೆ. ಪೌಲನು ಬರೆದದ್ದು: “ಅವರು [ಯೆಹೋವನಿಂದ ವಿಮುಖರಾದವರು] ‘ಶಾಂತಿ ಮತ್ತು ಭದ್ರತೆ’ ಎಂದು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರವೇ ಫಕ್ಕನೆ ಬರುವುದು ಮತ್ತು ಅವರು ಹೇಗೂ ತಪ್ಪಿಸಿಕೊಳ್ಳಲಾರರು.”—1 ಥೆಸ. 5:3.

13. “ಶಾಂತಿ ಮತ್ತು ಭದ್ರತೆ” ಎಂಬ ಕೂಗು ನಮ್ಮನ್ನು ಮೋಸಗೊಳಿಸದಂತೆ ನಾವು ಹೇಗೆ ದೂರವಿರಬಲ್ಲೆವು?

13 “ಶಾಂತಿ ಮತ್ತು ಭದ್ರತೆ” ಎಂಬ ಕೂಗು ಕೇವಲ ಇನ್ನೊಂದು ದೆವ್ವಪ್ರೇರಿತ ಸುಳ್ಳು! ಯೆಹೋವನ ಸೇವಕರಂತೂ ಅದರಿಂದ ಮೋಸಹೋಗುವವರಲ್ಲ. “ಆ ದಿನವು ಕಳ್ಳರ ಮೇಲೆ ಬರುವಂತೆ ನಿಮ್ಮ ಮೇಲೆ ಫಕ್ಕನೆ ಬರಬಾರದು, ಏಕೆಂದರೆ ನೀವು ಕತ್ತಲೆಯಲ್ಲಿಲ್ಲ. ನೀವೆಲ್ಲರೂ ಬೆಳಕಿನ ಪುತ್ರರೂ ಹಗಲಿನ ಪುತ್ರರೂ ಆಗಿದ್ದೀರಿ” ಎಂದು ಪೌಲನು ಬರೆದನು. (1 ಥೆಸ. 5:4, 5) ಆದುದರಿಂದ ನಾವು ಬೆಳಕಿನಲ್ಲಿ ಉಳಿಯೋಣ. ಸೈತಾನನ ಲೋಕದ ಕತ್ತಲೆಯಿಂದ ದೂರವಾಗಿರೋಣ. ಪೇತ್ರನು ಬರೆದದ್ದು: “ಪ್ರಿಯರೇ, ಈ ವಿಷಯಗಳನ್ನು ನೀವು ಮುಂದಾಗಿಯೇ ತಿಳಿದುಕೊಂಡಿರುವುದರಿಂದ ನಿಯಮವನ್ನು ಉಲ್ಲಂಘಿಸುವಂಥ ಜನರ [ಕ್ರೈಸ್ತ ಸಭೆಯ ಒಳಗಣ ಸುಳ್ಳು ಬೋಧಕರ] ತಪ್ಪಿನಿಂದ ನೀವು ಅವರೊಂದಿಗೆ ನಡೆಸಲ್ಪಟ್ಟು ನಿಮ್ಮ ಸ್ಥಿರತೆಯನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ.”—2 ಪೇತ್ರ 3:17.

14, 15. (ಎ) ಯೆಹೋವನು ನಮ್ಮನ್ನು ಹೇಗೆ ಘನಪಡಿಸುತ್ತಾನೆ? (ಬಿ) ಯಾವ ಪ್ರೇರಿತ ಮಾತುಗಳನ್ನು ನಾವು ಮನಸ್ಸಿಗೆ ತಕ್ಕೊಳ್ಳಬೇಕು?

14 “ಎಚ್ಚರಿಕೆಯಾಗಿರಿ” ಎಂದು ನಮಗೆ ಬರೇ ಹೇಳಿ ಯೆಹೋವನು ಅಷ್ಟಕ್ಕೇ ಬಿಟ್ಟುಬಿಡಲಿಲ್ಲ ಎಂಬುದನ್ನು ಗಮನಿಸಿ. ಭವಿಷ್ಯತ್ತಿನಲ್ಲಿ ಏನು ಸಂಭವಿಸಲಿಕ್ಕಿದೆ ಎಂಬುದನ್ನು ‘ಮುಂದಾಗಿಯೇ ತಿಳಿದುಕೊಳ್ಳಲು’ ಅದರ ಕುರಿತಾದ ಮೂಲಭೂತ ವಿವರಣೆಯನ್ನು ದಯಪಾಲಿಸುವ ಮೂಲಕ ಆತನು ನಮ್ಮನ್ನು ಘನಪಡಿಸುತ್ತಾನೆ.

15 ಆದರೂ ಕೆಲವರು ಎಚ್ಚರವಾಗಿ ಉಳಿಯಲು ಕೊಟ್ಟಿರುವ ಮರುಜ್ಞಾಪನಗಳನ್ನು ಹಗುರವಾಗಿ ತೆಗೆದುಕೊಂಡಿರುವುದು ಅಥವಾ ದುರ್ಲಕ್ಷಿಸಿರುವುದು ಸಹ ವಿಷಾದನೀಯ. ‘ನಾವಿದೇ ಕಥೆಯನ್ನು ಪುನಃ ಪುನಃ ಹಲವಾರು ದಶಕಗಳಿಂದ ಕೇಳಿದ್ದೇವೆ’ ಎಂದವರು ಹೇಳಬಹುದು. ಆದರೂ ಆ ವ್ಯಕ್ತಿಗಳು ಇದನ್ನು ನೆನಪಿನಲ್ಲಿಡಬೇಕು ಏನೆಂದರೆ, ಆ ರೀತಿ ಹೇಳುವ ಮೂಲಕ ಅವರು ಕೇವಲ ನಂಬಿಗಸ್ತ ಆಳು ವರ್ಗವನ್ನಲ್ಲ ಕಾರ್ಯತಃ ಯೆಹೋವನನ್ನೂ ಆತನ ಪುತ್ರನನ್ನೂ ಪ್ರಶ್ನಿಸುತ್ತಿದ್ದಾರೆ. ಯೆಹೋವನಾದರೋ “ಅದಕ್ಕೆ ಕಾದಿರು” ಎಂದು ಹೇಳಿದ್ದಾನೆ. (ಹಬ. 2:3) ಅಂತೆಯೇ ಯೇಸು ಸಹ, “ನಿಮ್ಮ ಕರ್ತನು ಯಾವ ದಿನದಲ್ಲಿ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲದ ಕಾರಣ ಸದಾ ಎಚ್ಚರವಾಗಿರಿ” ಎಂದು ಹೇಳಿದ್ದಾನೆ. (ಮತ್ತಾ. 24:42) ಅದಲ್ಲದೆ ಪೇತ್ರನು ಬರೆದದ್ದು: “ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು, ಏಕೆಂದರೆ ನೀವು ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ ಇದ್ದೀರಲ್ಲಾ.” (2 ಪೇತ್ರ 3:11, 12) ನಂಬಿಗಸ್ತ ಆಳು ವರ್ಗವಾಗಲಿ, ಅದರ ಆಡಳಿತ ಮಂಡಲಿಯಾಗಲಿ ಅಂಥ ಪ್ರಾಮಾಣಿಕ ಮಾತುಗಳನ್ನು ಎಂದೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ!

16. ಯಾವ ಮನೋಭಾವವನ್ನು ನಾವು ವರ್ಜಿಸಬೇಕು, ಮತ್ತು ಏಕೆ?

16 ಯಜಮಾನನು ತಡಮಾಡುತ್ತಿದ್ದಾನೆಂದು ತೀರ್ಮಾನಿಸುವವನು ನಿಶ್ಚಯವಾಗಿ “ಕೆಟ್ಟ ಆಳು” ಆಗಿದ್ದಾನೆ. (ಮತ್ತಾ. 24:48) ಆ ಕೆಟ್ಟ ಆಳು 2 ಪೇತ್ರ 3:3, 4ರಲ್ಲಿ ವಿವರಿಸಲಾದ ಗುಂಪಿನ ಭಾಗವಾಗಿದ್ದಾನೆ. ಯೆಹೋವನ ದಿನವನ್ನು ವಿಧೇಯತೆಯಿಂದ ಮನಸ್ಸಿನಲ್ಲಿ ನಿಕಟವಾಗಿಡುವವರನ್ನು ಗೇಲಿಮಾಡುತ್ತಾ ‘ತಮ್ಮ ಸ್ವಂತ ಇಚ್ಛೆಗನುಸಾರ ನಡೆಯುವ ಕುಚೋದ್ಯಗಾರರು ಕಡೇ ದಿವಸಗಳಲ್ಲಿ ಬರುವರು’ ಎಂದು ಪೇತ್ರನು ಬರೆದನು. ಹೌದು, ಅಂಥ ಕುಚೋದ್ಯಗಾರರು ರಾಜ್ಯ ಹಿತಾಸಕ್ತಿಗಳ ಮೇಲೆ ಗಮನವಿಡುವ ಬದಲಾಗಿ ತಮ್ಮ ಮೇಲೆ ಹಾಗೂ ತಮ್ಮ ಸ್ವಂತ ಆಶೆಗಳ ಮೇಲೆ ಮನಸ್ಸಿಡುತ್ತಾರೆ. ನಾವು ಅಂಥ ಅವಿಧೇಯ ಹಾಗೂ ಅಪಾಯಕರ ಮನೋಭಾವವನ್ನು ಎಂದೂ ಬೆಳೆಸದಿರೋಣ! ಬದಲಾಗಿ ರಾಜ್ಯದ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವಿಕೆಯಲ್ಲಿ ಮಗ್ನರಾಗಿರುವ ಮೂಲಕ ‘ನಮ್ಮ ಕರ್ತನ ತಾಳ್ಮೆಯನ್ನು ರಕ್ಷಣೆಯಾಗಿ ಎಣಿಸಿಕೊಳ್ಳೋಣ.’ ಯೆಹೋವ ದೇವರ ಅಧಿಕಾರದೊಳಗಿರುವ ಘಟನೆಗಳ ಕಾಲ ಮತ್ತು ಸಮಯಗಳ ಕುರಿತು ತೀರ ಹೆಚ್ಚಾಗಿ ಚಿಂತಿಸದಿರೋಣ.—2 ಪೇತ್ರ 3:15; ಅ. ಕಾರ್ಯಗಳು 1:6, 7 ಓದಿ.

ರಕ್ಷಣೆಯ ದೇವರಲ್ಲಿ ಭರವಸವಿಡಿರಿ

17. ಯೆರೂಸಲೇಮನ್ನು ಬಿಟ್ಟು ಓಡಿಹೋಗಲು ಯೇಸು ಕೊಟ್ಟ ಬುದ್ಧಿವಾದಕ್ಕೆ ನಂಬಿಗಸ್ತ ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಿದರು? ಏಕೆ?

17 ಕ್ರಿ.ಶ. 66ರಲ್ಲಿ ರೋಮನ್‌ ಸೇನೆಗಳು ಯೂದಾಯಕ್ಕೆ ಮುತ್ತಿಗೆಹಾಕಿದ ನಂತರ ನಂಬಿಗಸ್ತ ಕ್ರೈಸ್ತರು ಏನು ಮಾಡಿದರು? ದೊರೆತ ಮೊತ್ತಮೊದಲ ಅವಕಾಶದಲ್ಲೇ ಅವರು ಯೇಸುವಿನ ಬುದ್ಧಿವಾದವನ್ನು ಪಾಲಿಸಿ ಯೆರೂಸಲೇಮ್‌ ಪಟ್ಟಣವನ್ನು ಬಿಟ್ಟು ಓಡಿಹೋದರು. (ಲೂಕ 21:20-23) ಅವರು ಅಷ್ಟು ಕ್ಷಿಪ್ರವಾಗಿ ಮತ್ತು ನಿರ್ಣಾಯಕವಾಗಿ ಕ್ರಿಯೆಗೈದದ್ದೇಕೆ? ಯೇಸುವಿನ ಎಚ್ಚರಿಕೆಯ ಬುದ್ಧಿವಾದವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟದ್ದರಿಂದಲೇ ಎಂಬುದು ನಿಸ್ಸಂದೇಹ. ಕ್ರಿಸ್ತನು ಮುನ್ನೆಚ್ಚರಿಕೆ ಕೊಟ್ಟ ಪ್ರಕಾರವೇ ತಮ್ಮ ನಿರ್ಣಯವು ಕಷ್ಟಾಪತ್ತುಗಳಿಂದ ಒಳಗೂಡಲಿತ್ತು ಎಂಬುದನ್ನು ಅವರು ನಿರೀಕ್ಷಿಸಿದ್ದರು ನಿಶ್ಚಯ. ಆದರೆ ಅದೇ ಸಮಯದಲ್ಲಿ ಯೆಹೋವನು ತನ್ನ ನಿಷ್ಠಾವಂತರನ್ನು ಎಂದೂ ಕೈಬಿಡನು ಎಂಬುದು ಸಹ ಅವರಿಗೆ ಗೊತ್ತಿತ್ತು.—ಕೀರ್ತ. 55:22.

18. ಲೂಕ 21:25-28ರಲ್ಲಿರುವ ಯೇಸುವಿನ ಮಾತುಗಳು ಬರಲಿರುವ ಮಹಾ ಸಂಕಟದ ನಿಮ್ಮ ದೃಷ್ಟಿಕೋನವನ್ನು ಹೇಗೆ ಪ್ರಭಾವಿಸುತ್ತವೆ?

18 ನಾವು ಸಹ ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಡಬೇಕು. ಏಕೆಂದರೆ ಮಾನವ ಇತಿಹಾಸದಲ್ಲಿ ಅತಿ ದೊಡ್ಡದಾದ ಮಹಾ ಸಂಕಟವನ್ನು ಸದ್ಯದ ವ್ಯವಸ್ಥೆಯು ಅನುಭವಿಸುವಾಗ ಆತನೊಬ್ಬನೇ ನಮ್ಮ ಉದ್ಧಾರಕನು. ಆ ಮಹಾ ಸಂಕಟದ ಆರಂಭದ ನಂತರದ ಒಂದು ಹಂತದಲ್ಲಿ ಹಾಗೂ ಉಳಿದ ಲೋಕದ ಮೇಲೆ ಆತನ ದಂಡನಾತೀರ್ಪು ನಿರ್ವಹಿಸಲ್ಪಡುವ ಮೊದಲು “ನಿವಾಸಿತ ಭೂಮಿಗೆ ಬರುತ್ತಿರುವ ಸಂಗತಿಗಳ ನಿಮಿತ್ತ ಜನರು ಭಯದಿಂದ ಮತ್ತು ನಿರೀಕ್ಷಣೆಯಿಂದ ಮೂರ್ಛೆಹೋದಂತಾಗುವರು.” ದೇವರ ಶತ್ರುಗಳು ಭಯದಿಂದ ತತ್ತರಿಸುವಾಗ ಯೆಹೋವನ ನಿಷ್ಠಾವಂತ ಸೇವಕರಾದರೋ ನಿರ್ಭಯವಾಗಿ ನಿಲ್ಲುವರು. ಅಷ್ಟೇ ಅಲ್ಲ ತಮ್ಮ ಬಿಡುಗಡೆಯು ಸಮೀಪವಾಗಿದೆ ಎಂದು ತಿಳಿದವರಾಗಿ ಅವರು ಉಲ್ಲಾಸಿಸುವರು.—ಲೂಕ 21:25-28 ಓದಿ.

19. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

19 ಹೌದು, ಈ ಲೋಕದಿಂದ ಮತ್ತು ಅದರ ‘ಘಟಕಾಂಶಗಳಿಂದ’ ಪ್ರತ್ಯೇಕವಾಗಿ ಉಳಿಯುವವರಿಗೆ ಎಂಥ ರೋಮಾಂಚಕರ ಭವಿಷ್ಯತ್ತು ಕಾದಿದೆ! ಆದರೆ ಮುಂದಿನ ಲೇಖನವು ವಿವರಿಸುವ ಮೇರೆಗೆ ನಮಗೆ ಜೀವ ಬೇಕಾಗಿರುವಲ್ಲಿ ನಾವು ಕೆಟ್ಟದ್ದನ್ನು ಹೇಸಿದರೆ ಮಾತ್ರವೇ ಸಾಲದು. ಯೆಹೋವನಿಗೆ ಮೆಚ್ಚಿಕೆಯಾದ ಗುಣಗಳನ್ನು ಬೆಳೆಸಿಕೊಂಡು ಆತನಿಗೆ ಸ್ವೀಕರಣೀಯವಾದ ಕ್ರಿಯೆಗಳನ್ನು ಕೂಡ ನಡಿಸಬೇಕು.—2 ಪೇತ್ರ 3:11.

ನೀವು ವಿವರಿಸಬಲ್ಲಿರೊ?

• ಸದ್ಯದ ‘ಆಕಾಶ ಮತ್ತು ಭೂಮಿ’ ಎಂದರೇನು?

• “ಘಟಕಾಂಶಗಳು” ಎಂದರೇನು?

• ‘ನೂತನ ಆಕಾಶ ಮತ್ತು ನೂತನ ಭೂಮಿ’ ಏನನ್ನು ಪ್ರತಿನಿಧಿಸುತ್ತವೆ?

• ನಾವು ದೇವರಲ್ಲಿ ಪೂರ್ಣ ಭರವಸೆಯನ್ನಿಡುವುದು ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 5ರಲ್ಲಿರುವ ಚಿತ್ರ]

ನೀವು ‘ನಿಮ್ಮ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು’ ಲೋಕದಿಂದ ಪ್ರತ್ಯೇಕವಾಗಿ ಹೇಗೆ ಉಳಿಯಬಲ್ಲಿರಿ?

[ಪುಟ 6ರಲ್ಲಿರುವ ಚಿತ್ರ]

ನಾವು ‘ನಮ್ಮ ಕರ್ತನ ತಾಳ್ಮೆಯನ್ನು ರಕ್ಷಣೆಯಾಗಿ ಎಣಿಸಿಕೊಳ್ಳುತ್ತೇವೆಂದು’ ಹೇಗೆ ತೋರಿಸುತ್ತೇವೆ?