ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚನ ಮತ್ತು ಅಧ್ಯಯನ ಪ್ರೇಮಿಗಳಾಗಲು ಮಕ್ಕಳಿಗೆ ಕಲಿಸಿ

ವಾಚನ ಮತ್ತು ಅಧ್ಯಯನ ಪ್ರೇಮಿಗಳಾಗಲು ಮಕ್ಕಳಿಗೆ ಕಲಿಸಿ

ವಾಚನ ಮತ್ತು ಅಧ್ಯಯನ ಪ್ರೇಮಿಗಳಾಗಲು ಮಕ್ಕಳಿಗೆ ಕಲಿಸಿ

ನಿಮ್ಮ ಮಕ್ಕಳ ಭವಿಷ್ಯತ್ತನ್ನು ರೂಪಿಸುವುದಕ್ಕೆ ವಾಚನ ಮತ್ತು ಅಧ್ಯಯನಕ್ಕಿಂತ ಮಿಗಿಲಾದದ್ದು ಬೇರೊಂದಿಲ್ಲ. ನಿಮ್ಮ ಮಕ್ಕಳಿಗೆ ಅವನ್ನು ಕಲಿಸಲು ನೀವು ಮಾಡುವ ಗಂಭೀರ ಪ್ರಯತ್ನವು ಸದಾ ಸಾರ್ಥಕ. ಅಲ್ಲದೆ ಈ ಚಟುವಟಿಕೆಯು ತರಬಲ್ಲ ಸಂತಸವಾದರೊ ಅದೆಷ್ಟು! ಹೆತ್ತವರು ಪುಸ್ತಕದಿಂದ ಓದಿಹೇಳಿದ್ದ ವಿಷಯಗಳು ಕೆಲವು ವ್ಯಕ್ತಿಗಳ ಬಾಲ್ಯದ ಅಚ್ಚುಮೆಚ್ಚಿನ ಸ್ಮರಣೆಗಳಾಗಿ ಉಳಿದಿವೆ. ವಾಚನವು ತಾನೇ ಉಲ್ಲಾಸಕರ, ಅದರ ಫಲಿತಾಂಶಗಳು ಸಹ. ದೇವರ ಸೇವಕರಲ್ಲಿ ಇದು ವಿಶೇಷವಾಗಿ ಸತ್ಯ. ಏಕೆಂದರೆ ಆಧ್ಯಾತ್ಮಿಕ ಬೆಳವಣಿಗೆಯ ಅಧಿಕ ವರ್ಧನೆಯಾಗುವುದು ಬೈಬಲ್‌ ಅಧ್ಯಯನದ ಮೂಲಕವೇ. ಕ್ರೈಸ್ತ ಹೆತ್ತವರೊಬ್ಬರು ಹೇಳಿದ್ದು: “ನಮಗೆ ಅತ್ಯಮೂಲ್ಯವಾಗಿರುವ ವಿಷಯಗಳು ಜೊತೆಗೂಡಿರುವದು ಅಧ್ಯಯನ ಹಾಗೂ ವಾಚನದಲ್ಲೇ.”

ಅಧ್ಯಯನದ ಸುಹವ್ಯಾಸಗಳು ದೇವರೊಂದಿಗೆ ಹೆಚ್ಚು ನಿಕಟ ಸಂಬಂಧವನ್ನಿಡಲು ನಿಮ್ಮ ಮಕ್ಕಳಿಗೆ ಸಹಾಯಕರ. (ಕೀರ್ತ. 1:1-3, 6) ರಕ್ಷಣೆಗಾಗಿ ಓದು ಗೊತ್ತಿರುವ ಆವಶ್ಯಕತೆಯಿಲ್ಲ, ಆದರೂ ವಾಚನ ಕಲೆಯನ್ನು ಬೈಬಲ್‌ ಮಹಾ ಆಧ್ಯಾತ್ಮಿಕ ಪ್ರಯೋಜನಗಳೊಂದಿಗೆ ಜತೆಗೂಡಿಸಿದೆ. ಉದಾಹರಣೆಗೆ ಪ್ರಕಟನೆ 1:3 ಹೇಳುವುದು: “ಈ ಪ್ರವಾದನ ವಾಕ್ಯಗಳನ್ನು ಗಟ್ಟಿಯಾಗಿ ಓದುವವನೂ ಕೇಳುವವರೂ . . . ಸಂತೋಷಿತರು.” ಅದಲ್ಲದೆ ಅಧ್ಯಯನದ ಪ್ರಧಾನ ಅಂಶವಾದ ಏಕಾಗ್ರತೆಯ ಮೂಲ್ಯವನ್ನು ಪೌಲನು ತಿಮೊಥೆಯನಿಗೆ ಬರೆದ ತನ್ನ ಪ್ರೇರಿತ ಪತ್ರದಲ್ಲಿ ಸೂಚಿಸಿದ್ದು: “ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು.” ಏಕೆ? “ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 4:15.

ಆದರೆ ವಾಚನ ಮತ್ತು ಅಧ್ಯಯನ ಮಾಡುವ ವಿಧವನ್ನು ಬರೇ ತಿಳಿದಿರುವುದು ಮಾತ್ರವೇ ಅದು ವ್ಯಕ್ತಿಗೆ ಪ್ರಯೋಜನಕರ ಎಂಬ ಖಾತ್ರಿಯಿಲ್ಲ. ಏಕೆಂದರೆ ಈ ಕುಶಲತೆಯುಳ್ಳ ಅನೇಕರು ಅವುಗಳ ಬಳಕೆಯನ್ನು ಅಲಕ್ಷಿಸುತ್ತಾರೆ. ಬದಲಾಗಿ ತಮ್ಮ ಸಮಯವನ್ನು ಹೆಚ್ಚು ಉಪಯುಕ್ತವಲ್ಲದ ಹವ್ಯಾಸಗಳನ್ನು ಬೆನ್ನಟ್ಟಲು ಬಳಸುತ್ತಾರೆ. ಹೀಗಿರಲಾಗಿ ತಮ್ಮ ಮಕ್ಕಳಲ್ಲಿ ಉಪಯುಕ್ತ ಜ್ಞಾನಾರ್ಜನೆಯ ಅಪೇಕ್ಷೆಯನ್ನು ಹೆತ್ತವರು ಹೇಗೆ ಬೆಳೆಸಬಲ್ಲರು?

ನಿಮ್ಮ ಪ್ರೀತಿ ಮತ್ತು ಮಾದರಿ

ಅಧ್ಯಯನ ಅವಧಿಗಳು ಪ್ರೀತಿಪೂರ್ವಕವಾಗಿ ನಡೆಸಲ್ಪಡುವಾಗ ಮಕ್ಕಳು ಅದರಲ್ಲಿ ಆನಂದವನ್ನು ಕಂಡುಕೊಳ್ಳುತ್ತಾರೆ. ಕ್ರೈಸ್ತ ದಂಪತಿ ಓಅನ್‌ ಮತ್ತು ಕ್ಲಾಡೀಯ ತಮ್ಮ ಇಬ್ಬರು ಮಕ್ಕಳ ಕುರಿತು ನೆನಪಿಸುವುದು: “ಅವರು ಅಧ್ಯಯನದ ಸಮಯಕ್ಕಾಗಿ ಆತುರದಿಂದ ಮುನ್ನೋಡಿದರು. ಯಾಕಂದರೆ ಅದು ಖುಷಿಭರಿತ ಸಮಯವಾಗಿತ್ತು. ಅದರಲ್ಲಿ ಅವರಿಗೆ ಭದ್ರತೆ ಮತ್ತು ಆರಾಮವೆನಿಸುತಿತ್ತು. ಆ ಚಟುವಟಿಕೆಯಲ್ಲಿದ್ದ ಪ್ರೀತಿಯ ಪರಿಸರದಲ್ಲಿ ಅವರು ಭಾಗಿಗಳಾದರು.” ಮಕ್ಕಳು ಸಾಮಾನ್ಯವಾಗಿ ಹೆಚ್ಚು ಕ್ಲೇಶಕರವಾಗಿರುವ ಹದಿಹರೆಯವನ್ನು ಮುಟ್ಟುವಾಗಲೂ ಕುಟುಂಬದ ಅಧ್ಯಯನದಲ್ಲಿ ಕೂಡಿರುವ ಪ್ರೀತಿಪರ ಪರಿಸರವು ಅವರ ದೃಷ್ಟಿಕೋನವನ್ನು ರೂಪಿಸುತ್ತಾ ಇರುವುದು. ಓಅನ್‌ ಮತ್ತು ಕ್ಲಾಡೀಯರ ಮಕ್ಕಳು ಈಗ ಪಯನೀಯರರು. ಬಾಲ್ಯದಿಂದಲೇ ತಮಗೆ ಕಲಿಸಲ್ಪಟ್ಟ ವಾಚನ ಮತ್ತು ಅಧ್ಯಯನ ಪ್ರೇಮದಿಂದ ಅವರು ಇನ್ನೂ ಪ್ರಯೋಜನ ಹೊಂದುತ್ತಾ ಇದ್ದಾರೆ.

ಪ್ರೀತಿಯ ಒಂದು ಪ್ರಮುಖ ಸಹಾಯವು ಮಾದರಿಯೇ. ತಮ್ಮ ಹೆತ್ತವರು ಅನೇಕವೇಳೆ ಓದುತ್ತಾ ಅಧ್ಯಯನ ಮಾಡುತ್ತಾ ಇರುವುದನ್ನು ಕಾಣುವಾಗ ಮಕ್ಕಳು ಅದನ್ನು ತಮ್ಮ ಸ್ವಂತ ಜೀವನದ ಸಹಜ ಭಾಗವಾಗಿ ಕಾಣುವ ಸಂಭಾವ್ಯತೆ ಹೆಚ್ಚು. ಆದರೆ ಓದುವಿಕೆಯು ಸ್ವತಃ ಹೆತ್ತವರಾದ ನಿಮಗೆ ಕಷ್ಟಕರವಾಗಿದ್ದಲ್ಲಿ ನೀವು ಹೇಗೆ ಅಂಥ ಮಾದರಿಯನ್ನಿಡಬಲ್ಲಿರಿ? ವಾಚನಕ್ಕೆ ನೀವು ಕೊಡುವ ಆದ್ಯತೆಗಳನ್ನು ಅಥವಾ ಅದರ ಕಡೆಗಿನ ನಿಮ್ಮ ಮನೋಭಾವವನ್ನು ಹೊಂದಿಸಿಕೊಳ್ಳುವ ಅಗತ್ಯ ನಿಮಗಿರಬಹುದು. (ರೋಮ. 2:21) ವಾಚನವು ನಿಮ್ಮ ದಿನನಿತ್ಯ ರೂಢಿಯ ಪ್ರಧಾನ ಭಾಗವಾಗಿದ್ದಲ್ಲಿ ನಿಮ್ಮ ಮಕ್ಕಳ ಮೇಲೆ ಅದು ಆಳವಾದ ಪ್ರಭಾವ ಬೀರುವುದು. ವಿಶೇಷವಾಗಿ ಬೈಬಲ್‌ ವಾಚನದಲ್ಲಿ, ಕೂಟಗಳಿಗಾಗಿ ತಯಾರಿಯಲ್ಲಿ, ಕುಟುಂಬ ಅಧ್ಯಯನದಲ್ಲಿ ನೀವು ತೋರಿಸುವ ಶ್ರಮಶೀಲತೆಯು ಅಂಥ ಚಟುವಟಿಕೆಗಳ ಮಹತ್ವವನ್ನು ಸ್ಪಷ್ಟವಾಗಿ ತೋರಿಸಿಕೊಡುವುದು.

ಹೀಗೆ ನಿಮ್ಮ ಮಕ್ಕಳಲ್ಲಿ ವಾಚನದ ಅಪೇಕ್ಷೆಯನ್ನು ಬೇರೂರಿಸುವುದರಲ್ಲಿ ನಿಮ್ಮ ಪ್ರೀತಿ ಮತ್ತು ಮಾದರಿಯು ಪ್ರಾಮುಖ್ಯ. ಆದರೆ ಅವರನ್ನು ಪ್ರೋತ್ಸಾಹಿಸಲು ಯಾವ ವ್ಯಾವಹಾರಿಕ ಹೆಜ್ಜೆಗಳನ್ನು ನೀವು ತಕ್ಕೊಳ್ಳಬಲ್ಲಿರಿ?

ವಾಚನದಲ್ಲಿ ಪ್ರಾರಂಭಗೊಳ್ಳುವ ಪ್ರೀತಿ

ನಿಮ್ಮ ಮಕ್ಕಳು ವಾಚನ ಪ್ರೇಮಿಗಳಾಗುವ ಗುರಿಯನ್ನು ಮುಟ್ಟುವುದಕ್ಕಾಗಿ ನೀವು ತಕ್ಕೊಳ್ಳಬೇಕಾದ ಕೆಲವು ಪ್ರಮುಖ ಹೆಜ್ಜೆಗಳಾವುವು? ಚಿಕ್ಕಂದಿನಿಂದಲೇ ಅವರಿಗೆ ಪುಸ್ತಕಗಳನ್ನು ಲಭ್ಯಗೊಳಿಸಿರಿ. ತನ್ನ ಹೆತ್ತವರಿಂದ ವಾಚನ ಪ್ರೇಮವನ್ನು ಕಲಿತುಕೊಂಡ ಕ್ರೈಸ್ತ ಹಿರಿಯನೊಬ್ಬನು ಹೇಳುವುದು: “ಪುಸ್ತಕವನ್ನು ಕೈಯಲ್ಲಿ ಹಿಡಿದು ಅದನ್ನು ಉಪಯೋಗಿಸುವ ಅಭ್ಯಾಸವನ್ನು ಮಕ್ಕಳು ಮಾಡಲಿ. ಇದರಿಂದಾಗಿ ಪುಸ್ತಕಗಳು ಮಕ್ಕಳ ಸ್ನೇಹಿತರಾಗಿ ಅವರ ಜೀವನದ ಭಾಗವಾಗುವವು.” ಹೀಗೆ ಮಹಾ ಬೋಧಕನಿಂದ ಕಲಿಯಿರಿ ಹಾಗೂ ಬೈಬಲ್‌ ಕಥೆಗಳ ನನ್ನ ಪುಸ್ತಕಗಳಂಥ ಬೈಬಲಾಧಾರಿತ ಪ್ರಕಾಶನಗಳು ಅನೇಕ ಮಕ್ಕಳಿಗೆ ಓದುಬರಹ ಬರುವ ಬಹಳ ಮುಂಚೆಯೇ ಆಪ್ತ ಮಿತ್ರರಾಗುತ್ತವೆ. ನಿಮ್ಮ ಮಕ್ಕಳೊಂದಿಗೆ ಅಂಥ ಪ್ರಕಾಶನಗಳನ್ನು ಓದುವಾಗ ಅವರಿಗೆ ಭಾಷಾಜ್ಞಾನವನ್ನು ಕೊಡುತ್ತೀರಿ ಮಾತ್ರವಲ್ಲ “ಆಧ್ಯಾತ್ಮಿಕ ವಿಷಯಗಳನ್ನು” ಮತ್ತು ‘ಆಧ್ಯಾತ್ಮಿಕ ಮಾತುಗಳ’ ಪರಿಚಯವನ್ನೂ ಮಾಡಿಸುತ್ತೀರಿ.—1 ಕೊರಿಂ. 2:13.

ಕ್ರಮವಾಗಿ ಗಟ್ಟಿಯಾಗಿ ಓದಿರಿ. ನಿಮ್ಮ ಮಕ್ಕಳೊಂದಿಗೆ ಪ್ರತಿ ದಿನ ಓದುವುದನ್ನು ರೂಢಿಯಾಗಿಸಿರಿ. ಹಾಗೆ ಮಾಡುವುದು ಅವರಿಗೆ ಸರಿಯಾದ ಉಚ್ಚಾರವನ್ನು ಕಲಿಸುತ್ತದೆ ಮತ್ತು ವಾಚನದ ಹವ್ಯಾಸವನ್ನು ದೃಢಗೊಳಿಸುತ್ತದೆ. ನೀವು ಓದುವಂಥ ವಿಧಾನವು ಸಹ ಪ್ರಾಮುಖ್ಯ. ತುಂಬ ಉತ್ಸಾಹದಿಂದ ಓದಿ, ಆಗ ಅವರು ಸಹ ಹಾಗೆಯೇ ಓದುತ್ತಾರೆ. ವಾಸ್ತವದಲ್ಲಿ ಒಂದೇ ಕಥೆಯನ್ನು ನೀವು ಪುನಃ ಪುನಃ ಓದಿಹೇಳುವಂತೆ ಮಕ್ಕಳು ನಿಮ್ಮನ್ನು ಕೇಳಿಕೊಂಡಾರು. ಅವರ ಮನದಿಚ್ಛೆಯನ್ನು ಪೂರೈಸಿ! ಸಮಯಾನಂತರ ಅವರು ಹೊಸ ಹೊಸ ವಿಷಯಗಳನ್ನು ಪರಿಶೋಧಿಸಾರು. ಆದರೆ ನಿಮ್ಮ ಮಗು ನಿಮ್ಮೊಂದಿಗೆ ಓದಲೇಬೇಕೆಂದು ಒತ್ತಾಯಪಡಿಸದಿರಿ. ತನಗೆ ಕಿವಿಗೊಡುವವರು “ಗ್ರಹಿಸಲು ಶಕ್ತರಾಗಿರುವ ಮಟ್ಟಿಗೆ” ಮಾತ್ರ ಕಲಿಸುವ ಮೂಲಕ ಯೇಸು ಮಾದರಿಯನ್ನಿಟ್ಟನು. (ಮಾರ್ಕ 4:33) ನೀವು ಮಕ್ಕಳನ್ನು ಒತ್ತಾಯಿಸದೇ ಇದ್ದಲ್ಲಿ ಪ್ರತಿ ವಾಚನ ಅವಧಿಯನ್ನು ಅವರು ಆತುರದಿಂದ ಮುನ್ನೋಡುವರು. ಅಲ್ಲದೆ ಅವರಲ್ಲಿ ವಾಚನ ಪ್ರೇಮವನ್ನು ಬೇರೂರಿಸುವ ನಿಮ್ಮ ಗುರಿಯು ನಿಮ್ಮ ನಿಲುಕಿಗೆ ಹತ್ತಿರವಾಗುತ್ತಾ ಇರುವುದು.

ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿರಿ, ಓದಿದ್ದನ್ನು ಚರ್ಚಿಸಿ. ನಿಮ್ಮ ಚಿಕ್ಕ ಮಕ್ಕಳು ಶೀಘ್ರದಲ್ಲೇ ಅನೇಕ ಶಬ್ದಗಳ ಪರಿಚಯಮಾಡಿಕೊಂಡು, ಉಚ್ಚರಿಸಿ, ಅವುಗಳ ಅರ್ಥವನ್ನು ಗ್ರಹಿಸಿಕೊಳ್ಳುವಾಗ ನೀವು ಸಂತಸಗೊಳ್ಳುವಿರಿ. ನೀವು ಓದಿದ್ದನ್ನು ಚರ್ಚೆಮಾಡುವುದು ಕೂಡ ಅವರ ಪ್ರಗತಿಯನ್ನು ಬಹಳವಾಗಿ ಹೆಚ್ಚಿಸಬಲ್ಲದು. ಸಂಭಾಷಣೆಯು ಮಕ್ಕಳಿಗೆ “ಮುಂದಕ್ಕೆ ಓದುವಾಗ ಗುರುತಿಸಬೇಕಾದ ಮತ್ತು ಗ್ರಹಿಸಬೇಕಾದ ಶಬ್ದಗಳನ್ನು ಕಲಿಯಲು” ನೆರವಾಗುತ್ತದೆ ಎಂದು ಮಕ್ಕಳು ಒಳ್ಳೇ ಓದುಗರಾಗಲು ಸಹಾಯಮಾಡುವ ಒಂದು ಪುಸ್ತಕವು ವಿವರಿಸುತ್ತದೆ. ಅದೇ ಪುಸ್ತಕವು ಮತ್ತೂ ಹೇಳುವುದು: ‘ಬೆಳೆಯುತ್ತಿರುವ ಮಕ್ಕಳ ಮನಸ್ಸು ಸಾಕ್ಷರತೆಯನ್ನು ಪಡೆಯಲು ತವಕಿಸುತ್ತಿರುತ್ತದೆ. ಆದುದರಿಂದ ನಾವು ಚಿಕ್ಕ ಮಕ್ಕಳೊಂದಿಗೆ ಮಾತಾಡುವುದು ಅವಶ್ಯ. ನಮ್ಮ ಸಂಭಾಷಣೆ ಎಷ್ಟು ಅರ್ಥಭರಿತವಾಗಿರುತ್ತದೋ ಅಷ್ಟು ಒಳ್ಳೇದು.’

ನಿಮ್ಮ ಮಕ್ಕಳು ನಿಮಗೆ ಓದಿಹೇಳುವಂತೆ ಮತ್ತು ಪ್ರಶ್ನೆಕೇಳುವಂತೆ ಉತ್ತೇಜಿಸಿರಿ. ನೀವು ಸಹ ಅವರಿಗೆ ಪ್ರಶ್ನೆ ಕೇಳಲು ಬಯಸಬಹುದು, ಸಂಭಾವ್ಯ ಉತ್ತರವನ್ನೂ ಸೂಚಿಸಬಹುದು. ಆ ರೀತಿಯಲ್ಲಿ ಪುಸ್ತಕಗಳು ಮಾಹಿತಿಯ ಮೂಲವೆಂದೂ ಮತ್ತು ತಾವು ಓದುವ ಶಬ್ದಗಳಿಗೆ ಅರ್ಥವಿದೆ ಎಂದೂ ಮಕ್ಕಳು ಕಲಿಯುತ್ತಾರೆ. ಈ ವಿಧಾನವು ವಿಶೇಷವಾಗಿ ನಿಮ್ಮ ವಾಚನವು ದೇವರ ವಾಕ್ಯದ ಮೇಲೆ ಆಧರಿಸಿರುವಾಗ ಸಹಾಯಕಾರಿ. ಏಕೆಂದರೆ ದೇವರ ವಾಕ್ಯವು ಎಲ್ಲಾದಕ್ಕಿಂತ ಹೆಚ್ಚು ಅರ್ಥಭರಿತ ಗ್ರಂಥ.—ಇಬ್ರಿ. 4:12.

ಆದರೂ ವಾಚನವು ಒಂದು ಜಟಿಲವಾದ ಕಲೆ ಎಂಬುದನ್ನು ಎಂದಿಗೂ ಮರೆಯಬೇಡಿ. ಆ ಕಲೆಯಲ್ಲಿ ನುರಿತವರಾಗಲು ಸಮಯವೂ ಅಭ್ಯಾಸವೂ ಅಗತ್ಯ. * ಆದ್ದರಿಂದ ಎಳೆಯರ ವಾಚನ ಪ್ರೇಮವನ್ನು ಪ್ರೋತ್ಸಾಹಿಸಲು ಉದಾರವಾಗಿ ಪ್ರಶಂಸೆ ನೀಡಿ. ನಿಮ್ಮ ಮಕ್ಕಳನ್ನು ಶ್ಲಾಘಿಸುವುದು ಅವರು ವಾಚನ ಪ್ರೇಮಿಗಳಾಗುವಂತೆ ಪ್ರೋತ್ಸಾಹಿಸುವುದು.

ಪ್ರತಿಫಲದಾಯಕ ಹಾಗೂ ಹರ್ಷಕರ

ಅಧ್ಯಯನ ಮಾಡುವುದು ಹೇಗೆಂದು ಮಕ್ಕಳಿಗೆ ಕಲಿಸುವುದು ವಾಚನಕ್ಕೆ ಉದ್ದೇಶವನ್ನು ಕೊಡುತ್ತದೆ. ನಿಜತ್ವಗಳನ್ನು ಕಲಿಯುವುದು ಮತ್ತು ಅವು ಒಂದಕ್ಕೊಂದು ಹೇಗೆ ಸಂಬಂಧಿಸಿವೆ ಎಂಬುದನ್ನು ಗ್ರಹಿಸುವುದೂ ಅಧ್ಯಯನದಲ್ಲಿ ಸೇರಿದೆ. ಅದಕ್ಕೆ ಸಂಘಟಿಸುವ, ನೆನಪಿನಲ್ಲಿಡುವ ಸಾಮರ್ಥ್ಯವು ಬೇಕು ಹಾಗೂ ಮಾಹಿತಿಯನ್ನು ಉಪಯೋಗಕ್ಕೆ ಹಾಕಬೇಕು. ಅಧ್ಯಯನ ಮಾಡುವುದು ಹೇಗೆ ಎಂಬುದನ್ನು ಒಮ್ಮೆ ಮಗು ಕಲಿತಾಗ ಮತ್ತು ಅಧ್ಯಯನದ ವ್ಯಾವಹಾರಿಕ ಮೂಲ್ಯವನ್ನು ಕಾಣಶಕ್ತವಾದಾಗ ಅಧ್ಯಯನ ಪ್ರತಿಫಲದಾಯಕವೂ ಹರ್ಷಕರವೂ ಆಗಿ ಪರಿಣಮಿಸುತ್ತದೆ.—ಪ್ರಸಂ. 10:10.

ಅಧ್ಯಯನದ ಪ್ರಮುಖಾಂಶಗಳನ್ನು ಕಲಿಸಿರಿ. ಕುಟುಂಬ ಆರಾಧನೆಯ ಸಂಜೆಗಳು, ದಿನದ ವಚನದ ಚರ್ಚೆಗಳು ಹಾಗೂ ತದ್ರೀತಿಯ ಸಂದರ್ಭಗಳು ನಿಮ್ಮ ಮಕ್ಕಳಲ್ಲಿ ಅಧ್ಯಯನ ಕೌಶಲಗಳನ್ನು ಬೆಳೆಸಲು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ. ಮೌನವಾಗಿ ಕೂತು ಒಂದು ನಿರ್ದಿಷ್ಟ ವಿಷಯದ ಕುರಿತು ಸ್ವಲ್ಪ ಸಮಯ ಮನಸ್ಸನ್ನು ಕೇಂದ್ರೀಕರಿಸುವುದು ಮಕ್ಕಳಿಗೆ ಚಿತ್ತೈಕಾಗ್ರತೆಯನ್ನು ಕಲಿಸುತ್ತದೆ. ಚಿತ್ತೈಕಾಗ್ರತೆಯು ಕಲಿಕೆಯ ಅತ್ಯಾವಶ್ಯಕ ಅಂಶ. ಅದಲ್ಲದೆ, ನಿಮ್ಮ ಮಗನು ಆಗತಾನೇ ಕಲಿತ ವಿಷಯವು ಅವನು ಈ ಮೊದಲೇ ತಿಳಿದಿರುವ ವಿಷಯಗಳಿಗೆ ಹೇಗೆ ಸಂಬಂಧಿಸಿದೆ ಎಂದು ನಿಮಗೆ ಹೇಳುವಂತೆ ನೀವು ಉತ್ತೇಜಿಸಬಹುದು. ಇದು ಅವನಿಗೆ ಹೋಲಿಕೆಗಳನ್ನು ಮಾಡುವಂತೆ ಕಲಿಸುತ್ತದೆ. ನಿಮ್ಮ ಮಗಳು ಈವಾಗಲೇ ಓದಿದ ವಿಷಯವನ್ನು ತನ್ನ ಸ್ವಂತ ಮಾತುಗಳಲ್ಲಿ ಸಾರಾಂಶಿಸಿ ಹೇಳುವಂತೆಯೂ ಕೇಳಬಹುದು. ಓದಿದ ವಿಷಯದ ಅರ್ಥವನ್ನು ಗ್ರಹಿಸಿಕೊಳ್ಳುವಂತೆ ಮತ್ತು ನೆನಪಿನಲ್ಲಿಡುವಂತೆ ಇದು ಅವಳಿಗೆ ನೆರವಾಗುವುದು. ಪುನರ್ವಿಮರ್ಶೆ ಅಂದರೆ ಲೇಖನವನ್ನು ಓದಿದ ನಂತರ ಮುಖ್ಯ ಅಂಶಗಳನ್ನು ಪುನಃ ಪರಿಶೀಲಿಸುವುದು ನೀವು ಮಕ್ಕಳಿಗೆ ಕಲಿಸಬಲ್ಲ ಇನ್ನೊಂದು ಸ್ಮರಣಸಾಧನ. ಅಧ್ಯಯನ ಅವಧಿಗಳಲ್ಲಿ ಅಥವಾ ಸಭಾ ಕೂಟಗಳಲ್ಲಿ ಸಂಕ್ಷಿಪ್ತ ನೋಟ್ಸ್‌ ತಕ್ಕೊಳ್ಳುವಂತೆಯೂ ಎಳೆಯ ಮಕ್ಕಳಿಗೆ ಕೂಡ ಕಲಿಸಸಾಧ್ಯವಿದೆ. ಇದು ಅವರ ಚಿತ್ತೈಕಾಗ್ರತೆಗೆ ಎಷ್ಟೊಂದು ಪ್ರಯೋಜನಕರವಾಗಿರಬಲ್ಲದು! ಈ ಸರಳ ಕೌಶಲ್ಯಗಳು ಕಲಿಕಾವಿಧಾನವನ್ನು ನಿಮಗೂ ನಿಮ್ಮ ಮಕ್ಕಳಿಗೂ ಆಸಕ್ತಿಕರವೂ ಅರ್ಥಭರಿತವೂ ಆಗಿಡುತ್ತವೆ.

ಅಧ್ಯಯನದ ಪ್ರವರ್ಧನೆಗಾಗಿ ಸನ್ನಿವೇಶವನ್ನು ನಿರ್ಮಿಸಿ. ಒಳ್ಳೇ ಗಾಳಿಸಂಚಾರ, ಬೆಳಕು ಇರುವ ಸ್ಥಳ ಹಾಗೂ ಶಾಂತವೂ ಆರಾಮಕರವೂ ಆಗಿರುವ ಸನ್ನಿವೇಶ ಏಕಾಗ್ರತೆಯನ್ನು ಸುಲಭಸಾಧ್ಯವನ್ನಾಗಿ ಮಾಡುವುದು. ನಿಶ್ಚಯವಾಗಿ ಅಧ್ಯಯನದ ಬಗ್ಗೆ ಹೆತ್ತವರಿಗಿರುವ ಮನೋಭಾವವು ಅತಿ ಪ್ರಾಮುಖ್ಯ. “ವಾಚನ ಮತ್ತು ಅಧ್ಯಯನಕ್ಕಾಗಿ ಸಮಯವನ್ನು ಬದಿಗಿಡುವುದರಲ್ಲಿ ಕ್ರಮತೆ ಮತ್ತು ದೃಢತೆ ಮುಖ್ಯ. ಇದು ನಿಮ್ಮ ಮಕ್ಕಳಿಗೆ ಕ್ರಮಬದ್ಧತೆಯನ್ನು ಕಲಿಸುತ್ತದೆ. ಒಂದು ನಿರ್ದಿಷ್ಟ ಸಮಯದಲ್ಲಿ ಇಂಥಿಂಥ ಕೆಲಸವನ್ನು ಮಾಡಿ ಮುಗಿಸುವ ಅಗತ್ಯವನ್ನು ಅವರು ಕಲಿಯುತ್ತಾರೆ” ಎನ್ನುತ್ತಾಳೆ ಒಬ್ಬಾಕೆ ತಾಯಿ. ಅನೇಕ ಹೆತ್ತವರು ಅಧ್ಯಯನದ ಸಮಯದಲ್ಲಿ ಬೇರೆ ಯಾವುದೇ ಚಟುವಟಿಕೆಗಳನ್ನು ಅನುಮತಿಸುವುದಿಲ್ಲ. ಈ ವಿಧಾನವು ಮಕ್ಕಳಿಗೆ ಅಧ್ಯಯನದ ಒಳ್ಳೇ ಹವ್ಯಾಸಗಳನ್ನು ಕಲಿಸುವುದರಲ್ಲಿ ಗಾಢ ಪ್ರಭಾವ ಬೀರುತ್ತದೆ ಎಂದು ಒಬ್ಬ ಅಧಿಕಾರಿ ಹೇಳುತ್ತಾರೆ.

ಅಧ್ಯಯನದ ಮೂಲ್ಯವನ್ನು ಎತ್ತಿಹೇಳಿ. ಕೊನೆಯದಾಗಿ, ಅಧ್ಯಯನದ ವ್ಯಾವಹಾರಿಕ ಪ್ರಯೋಜನಗಳನ್ನು ಕಾಣುವಂತೆ ನಿಮ್ಮ ಮಕ್ಕಳಿಗೆ ಸಹಾಯಮಾಡಿ. ತಾವು ಕಲಿತ ಮಾಹಿತಿಯನ್ನು ಉಪಯೋಗಕ್ಕೆ ಹಾಕುವುದೇ ಅಧ್ಯಯನದ ನಿಜ ಉದ್ದೇಶ. ಒಬ್ಬ ಯುವ ಸಹೋದರನು ಹೇಳುವುದು: “ನಾನು ಅಧ್ಯಯನ ಮಾಡುವ ವಿಷಯದಲ್ಲಿ ಯಾವುದೇ ವ್ಯಾವಹಾರಿಕ ಪ್ರಯೋಜನ ಇಲ್ಲದಿದ್ದಲ್ಲಿ ಅದನ್ನು ಅಭ್ಯಸಿಸುವುದು ನನಗೆ ನಿಜಕ್ಕೂ ಪ್ರಯಾಸಕರ. ಆದರೆ ವೈಯಕ್ತಿಕವಾಗಿ ಅದನ್ನು ಅನ್ವಯಿಸ ಸಾಧ್ಯವಿದ್ದಲ್ಲಿ ಅದನ್ನು ತಿಳುಕೊಳ್ಳುವ ಲವಲವಿಕೆ ಉಂಟಾಗುತ್ತದೆ.” ಅಧ್ಯಯನವು ಒಂದು ಪ್ರಮುಖ ಉದ್ದೇಶವನ್ನು ಪೂರೈಸುತ್ತದೆ ಎಂಬುದನ್ನು ಯುವ ಜನರು ಕಾಣುವಾಗ ಅದರಲ್ಲಿ ಮನಸಾರೆ ತಲ್ಲೀನರಾಗುತ್ತಾರೆ. ವಾಚನಕ್ಕಾಗಿ ಮುನ್ನೋಡಿದ ಪ್ರಕಾರವೇ ಅಧ್ಯಯನಕ್ಕಾಗಿಯೂ ತವಕದಿಂದ ಮುನ್ನೋಡುವರು.

ಅತ್ಯುತ್ತಮ ಉಡುಗೊರೆ

ನಿಮ್ಮ ಮಕ್ಕಳಲ್ಲಿ ವಾಚನ ಪ್ರೇಮವನ್ನು ಬೇರೂರಿಸುವುದರಿಂದ ಸಿಗುವ ಧನಾತ್ಮಕ ಪ್ರಯೋಜನಗಳನ್ನು ಪಟ್ಟಿಮಾಡಲು ಹೋದರೆ ಸಂಪುಟಗಳೇ ಸಾಲವು. ಶಾಲೆಯಲ್ಲಿ, ಕೆಲಸದಲ್ಲಿ, ಮಾನವ ಸಂಬಂಧಗಳಲ್ಲಿ, ನಾವಿರುವ ಲೋಕವನ್ನು ತಿಳುಕೊಳ್ಳುವುದರಲ್ಲಿ, ಹೆತ್ತವರ ಮತ್ತು ಮಕ್ಕಳ ನಡುವೆ ಪ್ರೀತಿಯ ಬಂಧವನ್ನು ಬೆಸೆಯುವುದರಲ್ಲಿ ದೊರೆಯುವ ಸಾಫಲ್ಯ ಇವು ಕೆಲವು. ಅದಲ್ಲದೆ ವಾಚನ ಮತ್ತು ಅಧ್ಯಯನವು ತರುವಂಥ ನಿಜ ಸಂತೃಪ್ತಿಯ ಸವಿಯನ್ನು ಬೇರೆ ಹೇಳಬೇಕಾಗಿಲ್ಲ.

ಎಲ್ಲದಕ್ಕಿಂತ ಹೆಚ್ಚಾಗಿ, ಅಧ್ಯಯನ ಪ್ರೇಮವು ನಿಮ್ಮ ಮಕ್ಕಳನ್ನು ಆಧ್ಯಾತ್ಮಿಕ ಮನಸ್ಸಿನ ವ್ಯಕ್ತಿಗಳನ್ನಾಗಿ ಮಾಡಲು ನೆರವಾಗಬಲ್ಲದು. ಬೈಬಲ್‌ ಸತ್ಯದ ‘ಅಗಲ ಉದ್ದ ಎತ್ತರ ಮತ್ತು ಆಳವನ್ನು’ ತಿಳಿಯಲಿಕ್ಕಾಗಿ ಅವರ ಹೃದಮನಗಳನ್ನು ತೆರೆಯುವುದಕ್ಕೆ ಅಧ್ಯಯನ ಪ್ರೇಮವು ಕೀಲಿಕೈ. (ಎಫೆ. 3:18) ನಿಶ್ಚಯವಾಗಿ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಕಲಿಸತಕ್ಕ ಅನೇಕ ವಿಷಯಗಳಿವೆ. ಹೆತ್ತವರು ತಮ್ಮ ಸಮಯ ಮತ್ತು ಗಮನವನ್ನು ಮಕ್ಕಳಿಗೆ ಮೀಸಲಾಗಿಡುವಾಗ ಮತ್ತು ಜೀವನದಲ್ಲಿ ಅವರಿಗೆ ಒಳ್ಳೇ ಆರಂಭವನ್ನು ಕೊಡಲು ಸಾಧ್ಯವಾದದ್ದೆಲ್ಲವನ್ನು ಮಾಡುವಾಗ, ಕಾಲಾನಂತರ ತಮ್ಮ ಮಕ್ಕಳು ಯೆಹೋವನ ಆರಾಧಕರಾಗಲು ಆರಿಸಿಕೊಳ್ಳುವರು ಎಂದು ನಿರೀಕ್ಷಿಸಬಲ್ಲರು. ಒಳ್ಳೇ ಅಧ್ಯಯನ ಹವ್ಯಾಸಗಳನ್ನು ನಿಮ್ಮ ಮಕ್ಕಳಿಗೆ ಕಲಿಸುವುದು ಅವರ ಆಧ್ಯಾತ್ಮಿಕ ಸುಕ್ಷೇಮವನ್ನು ಸಂರಕ್ಷಿಸಲು ಮತ್ತು ದೇವರೊಂದಿಗೆ ಸುಸಂಬಂಧವನ್ನು ಕಟ್ಟಲು ಸಾಧನ. ಆದುದರಿಂದ ನಿಮ್ಮ ಮಕ್ಕಳಲ್ಲಿ ವಾಚನ ಮತ್ತು ಅಧ್ಯಯನ ಪ್ರೇಮವನ್ನು ಪ್ರಚೋದಿಸಲು ನೀವು ಶ್ರಮಿಸುವಾಗ ಪ್ರಾರ್ಥನಾಪೂರ್ವಕವಾಗಿ ಯೆಹೋವನ ಆಶೀರ್ವಾದವನ್ನು ಅವಶ್ಯವಾಗಿ ಕೋರಿರಿ.—ಜ್ಞಾನೋ. 22:6.

[ಪಾದಟಿಪ್ಪಣಿ]

^ ಪ್ಯಾರ. 14 ಕಲಿಕೆ ದೌರ್ಬಲ್ಯಗಳಿರುವ ಮಕ್ಕಳಿಗೆ ವಾಚನ ಮತ್ತು ಅಧ್ಯಯನವು ಹೆಚ್ಚು ಕಷ್ಟಕರ ಸವಾಲು. ಇಂಥವರಿಗೆ ಸಹಾಯಮಾಡಲು ಹೆತ್ತವರು ಏನು ಮಾಡಬಲ್ಲರು ಎಂದು ತಿಳಿಯಲು 1997, ಮಾರ್ಚ್‌ 8ರ ಎಚ್ಚರ! ಪತ್ರಿಕೆಯ ಪುಟ 3-10 ನೋಡಿ.

[ಪುಟ 26ರಲ್ಲಿರುವ ಚೌಕ/ಚಿತ್ರಗಳು]

ವಾಚನ . . .

• ಪುಸ್ತಕಗಳನ್ನು ಲಭ್ಯಗೊಳಿಸಿ

• ಗಟ್ಟಿಯಾಗಿ ಓದಿರಿ

• ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿರಿ

• ಓದಿದ್ದನ್ನು ಚರ್ಚಿಸಿ

• ನಿಮ್ಮ ಮಕ್ಕಳು ನಿಮಗೆ ಓದಿಹೇಳಲಿ

• ಪ್ರಶ್ನೆಗಳನ್ನು ಕೇಳುವಂತೆ ಮಕ್ಕಳನ್ನು ಉತ್ತೇಜಿಸಿರಿ

ಅಧ್ಯಯನ . . .

• ಹೆತ್ತವರಾಗಿ ಒಳ್ಳೇ ಮಾದರಿಯಿಡಿ

• ನಿಮ್ಮ ಮಕ್ಕಳಿಗೆ . . .

○ ಚಿತ್ತೈಕಾಗ್ರತೆಯಿಡಲು

○ ಹೋಲಿಕೆ ಮಾಡಲು

○ ಸಾರಾಂಶಿಸಲು

○ ಪುನರ್ವಿಮರ್ಶಿಸಲು

○ ನೋಟ್ಸ್‌ ತೆಗೆದುಕೊಳ್ಳಲು ತರಬೇತು ಕೊಡಿ

• ಅಧ್ಯಯನದ ಪ್ರವರ್ಧನೆಗಾಗಿ ಸನ್ನಿವೇಶಗಳನ್ನು ನಿರ್ಮಿಸಿ

• ಅಧ್ಯಯನದ ಮೂಲ್ಯವನ್ನು ಎತ್ತಿಹೇಳಿ