ಜನಾಭಿಪ್ರಾಯದ ಒತ್ತಡವನ್ನು ಎದುರಿಸಿರಿ
ಜನಾಭಿಪ್ರಾಯದ ಒತ್ತಡವನ್ನು ಎದುರಿಸಿರಿ
ಯಾವುದು ಸೂಕ್ತ ಅಥವಾ ಸೂಕ್ತವಲ್ಲ ಮತ್ತು ಯಾವುದು ಪ್ರಸಂಶನೀಯ ಅಥವಾ ನಿಂದನೀಯ ಎಂಬುದರ ಕುರಿತ ಅಭಿಪ್ರಾಯಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ. ಕಾಲಸಂದಂತೆ ಅವು ಬದಲಾಗುತ್ತಲೂ ಇವೆ. ಆದುದರಿಂದ ಬಹಳ ಕಾಲದ ಹಿಂದೆ ಸಂಭವಿಸಿದ ಘಟನೆಗಳ ಬೈಬಲ್ ವೃತ್ತಾಂತಗಳನ್ನು ಓದುವಾಗ ಬೈಬಲಿನ ಕಾಲದ ಜನಪ್ರಿಯ ಅಭಿಪ್ರಾಯ ಮತ್ತು ಮೌಲ್ಯಗಳನ್ನು ಪರಿಗಣಿಸುವ ಅಗತ್ಯ ನಮಗಿದೆ. ನಾವೇನು ಓದುತ್ತೇವೊ ಅದನ್ನು ನಮ್ಮ ಸ್ವಂತ ಮಾನದಂಡದಿಂದ ಅಳೆಯಬಾರದು.
ಉದಾಹರಣೆಗಾಗಿ, ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ಪದೇ ಪದೇ ತಿಳಿಸಲಾದ ಎರಡು ಭಾವರೂಪಗಳಾದ ಗೌರವ ಮತ್ತು ಅವಮಾನವನ್ನು ತೆಗೆದುಕೊಳ್ಳಿ. ಗೌರವ ಮತ್ತು ಅವಮಾನದ ಕುರಿತು ತಿಳಿಸುವ ವಚನಗಳ ಉತ್ತಮ ತಿಳಿವಳಿಕೆಯನ್ನು ಪಡೆಯಲಿಕ್ಕಾಗಿ ಆ ಕಾಲದಲ್ಲಿ ಜೀವಿಸುತ್ತಿದ್ದ ಜನರು ಅವನ್ನು ಹೇಗೆ ವೀಕ್ಷಿಸುತ್ತಿದ್ದರು ಎಂಬುದನ್ನು ನಾವು ಪರ್ಯಾಲೋಚಿಸತಕ್ಕದ್ದು.
ಪ್ರಥಮ ಶತಮಾನದ ಮೌಲ್ಯಗಳು
“ಗ್ರೀಕರು, ರೋಮನ್ನರು, ಯೂದಾಯದವರು ಇವರೆಲ್ಲರೂ ಗೌರವ ಮತ್ತು ಅವಮಾನವನ್ನು ತಮ್ಮ ಸಂಸ್ಕೃತಿಯ ಅತಿ ಪ್ರಾಮುಖ್ಯ ಮೌಲ್ಯಗಳಾಗಿ ಪರಿಗಣಿಸಿದರು” ಎಂದು ಒಬ್ಬ ಪಂಡಿತರು ಹೇಳುತ್ತಾರೆ. “ಗೌರವ, ಕೀರ್ತಿ, ಖ್ಯಾತಿ, ಮೆಚ್ಚಿಗೆ ಮತ್ತು ಸನ್ಮಾನವನ್ನು ಗಳಿಸಲಿಕ್ಕಾಗಿಯೇ ಜನರು ಜೀವಿಸಿದರು ಮತ್ತು ಸಾಯಲೂ ಸಿದ್ಧರಾಗಿದ್ದರು.” ಅಂಥ ಮೌಲ್ಯಗಳು ಅವರನ್ನು ಇತರರ ಅಭಿಪ್ರಾಯಗಳಿಗೆ ಸುಲಭವಾಗಿ ಬಲಿಬೀಳುವಂತೆ ಮಾಡಿದವು.
ಕುಲೀನತೆಯಿಂದ ಹಿಡಿದು ದಾಸತ್ವದ ವರೆಗಿನ ಅಂತಸ್ತಿನಿಂದ ಅತಿಯಾಗಿ ಪ್ರಭಾವಿಸಲ್ಪಟ್ಟಿದ್ದ ಸಮಾಜದಲ್ಲಿ ಅಂತಸ್ತು, ಸ್ಥಾನಮಾನ, ಗೌರವಗಳೇ ಸರ್ವಸ್ವ. ಗೌರವವು ವ್ಯಕ್ತಿಯೊಬ್ಬನ ಮೌಲ್ಯವಾಗಿ ಇದ್ದದ್ದು ಅವನ ಸ್ವಂತ ದೃಷ್ಟಿಯಲ್ಲಿ ಮಾತ್ರವಲ್ಲ ಇತರರ ದೃಷ್ಟಿಯಲ್ಲಿ ಸಹ. ವ್ಯಕ್ತಿಯೊಬ್ಬನನ್ನು ಗೌರವಿಸುವುದೆಂದರೆ, ಇತರರು ಅವನಿಂದ ಏನನ್ನು ಅಪೇಕ್ಷಿಸಿದ್ದರೋ ಅದನ್ನು ಅವನು ಮಾಡಿದನು ಎಂದು ಬಹಿರಂಗವಾಗಿ ಪ್ರಶಂಸಿಸುವುದಾಗಿತ್ತು. ಗೌರವ ಸಲ್ಲಿಸುವುದು ಎಂದರೆ ವ್ಯಕ್ತಿಯೊಬ್ಬನ ಐಶ್ವರ್ಯ, ಸ್ಥಾನಮಾನ ಅಥವಾ ಕುಲೀನತೆಯಿಂದ ಬಾಹ್ಯ ರೀತಿಯಲ್ಲಿ ಪ್ರಭಾವಿತರಾಗಿ ಅವನಿಗೆ ಸಲ್ಲತಕ್ಕ ಗೌರವ ಕೊಡುವದು ಎಂದೂ ಅರ್ಥವಾಗಿತ್ತು. ಸತ್ಕಾರ್ಯಗಳನ್ನು ಮಾಡುವ ಮೂಲಕ ಅಥವಾ ಇತರರನ್ನು ಕೆಲಸದಲ್ಲಿ ಅತಿಶಯಿಸುವ ಮೂಲಕ ಗೌರವವನ್ನು ಗಳಿಸಸಾಧ್ಯವಿತ್ತು. ಇದಕ್ಕೆ ವ್ಯತ್ಯಾಸದಲ್ಲಿ, ಅವಮಾನ ಮತ್ತು ಅಗೌರವದಲ್ಲಿ ಬಹಿರಂಗ ಮುಖಭಂಗ ಮತ್ತು ನಿಂದೆ ಒಳಗೂಡಿತ್ತು. ತಮ್ಮ ಸ್ವಂತ ಭಾವನೆ ಅಥವಾ ಮನಸ್ಸಾಕ್ಷಿಗಿಂತ ಸಾಮಾಜಿಕ ಖಂಡನೆಯಿಂದಾಗುವ ಅವಮಾನವನ್ನು ಅವರು ದೊಡ್ಡದಾಗಿ ಪರಿಗಣಿಸುತ್ತಿದ್ದರು.
ಔತಣದಲ್ಲಿ ಕೂಡ್ರಲು ಒಬ್ಬನಿಗೆ “ಅತಿ ಶ್ರೇಷ್ಠ ಸ್ಥಾನ” ಅಥವಾ “ಅತಿ ಕೆಳಗಿನ ಸ್ಥಾನ” ನೇಮಿಸಲ್ಪಡುವ ಕುರಿತು ಯೇಸು ಮಾತಾಡಿದಾಗ, ಆ ಕಾಲದ ಸಂಸ್ಕೃತಿಗೆ ಅನುಸಾರವಾಗಿ ಅದು ಗೌರವಾರ್ಹ ಅಥವಾ ಅವಮಾನದ ವಿಷಯವಾಗಿತ್ತು. (ಲೂಕ 14:8-10) ಕಡಿಮೆಪಕ್ಷ ಎರಡು ಸಂದರ್ಭಗಳಲ್ಲಿ ಯೇಸುವಿನ ಶಿಷ್ಯರು “ತಮ್ಮೊಳಗೆ ಯಾರು ಅತಿ ದೊಡ್ಡವನು ಎಂಬ ವಿಷಯದಲ್ಲಿ” ವಾಗ್ವಾದಮಾಡಿದರು. (ಲೂಕ 9:46; 22:24) ಅವರು ತಾವು ಜೀವಿಸಿದ ಸಮಾಜದಲ್ಲಿದ್ದ ಒಂದು ಮುಖ್ಯ ಚಿಂತನೆಯನ್ನು ವ್ಯಕ್ತಪಡಿಸುತ್ತಿದ್ದರು. ಅದೇ ಸಮಯದಲ್ಲಿ, ಬಿಂಕದವರೂ ಮೇಲುಗೈ ಸಾಧಿಸಲು ಹುಡುಕುವವರೂ ಆಗಿದ್ದ ಯೆಹೂದಿ ಧಾರ್ಮಿಕ ಮುಖಂಡರು ಯೇಸುವಿನ ಸಾರುವಿಕೆಯನ್ನು ತಮ್ಮ ಗೌರವ ಮತ್ತು ಅಧಿಕಾರಕ್ಕೆ ಒಂದು ಸವಾಲಾಗಿ ಕಂಡರು. ಸಾರ್ವಜನಿಕ ವಾದವಿವಾದಗಳಲ್ಲಿ ಜನರ ಮುಂದೆ ಅವನನ್ನು ಸೋಲಿಸಲು ಅವರು ಮಾಡಿದ ಪ್ರಯತ್ನಗಳಾದರೋ ಯಾವಾಗಲೂ ವಿಫಲಗೊಂಡವು.—ಲೂಕ 13:11-17.
ಪ್ರಥಮ ಶತಮಾನದ ಯೆಹೂದಿ, ಗ್ರೀಕ್ ಮತ್ತು ರೋಮನ್ನರಲ್ಲಿ ಪ್ರಚಲಿತವಾಗಿದ್ದ ಇನ್ನೊಂದು ಅಭಿಪ್ರಾಯವೇನಂದರೆ “ಬಂಧಿಸಲ್ಪಟ್ಟು, ಬಹಿರಂಗವಾಗಿ ತಪ್ಪಿತಸ್ಥನೆಂಬ ಆರೋಪಕ್ಕೆ ಗುರಿಯಾಗುವುದು” ಅವಮಾನಕರ ವಿಷಯವೆಂಬುದೇ. ಒಬ್ಬ ವ್ಯಕ್ತಿಯು ಬಂಧಿಸಲ್ಪಡುವುದು ಅಥವಾ ಸೆರೆಗೆ ಹಾಕಲ್ಪಡುವುದು ಒಂದು ಕೀಳಾದ ವಿಷಯವಾಗಿ ವೀಕ್ಷಿಸಲ್ಪಟ್ಟಿತ್ತು. ಒಬ್ಬನು ಆ ಪಾತಕಕ್ಕೆ ಅಪರಾಧಿಯಾಗಿದ್ದಿರಲಿ ಇಲ್ಲದಿರಲಿ, ಅಂಥ ಉಪಚಾರವು ಸ್ನೇಹಿತರು, ಪರಿವಾರ ಮತ್ತು ಜನಸಮುದಾಯದ ಮುಂದೆ ಅವನನ್ನು ಮೂದಲಿಕೆಗೆ ಗುರಿಮಾಡುತ್ತಿತ್ತು. ತದನಂತರ ಅವನ ಕೀರ್ತಿಗೆ ಹತ್ತಿಕೊಳ್ಳುವ ಕಳಂಕವು ಅವನ ಆತ್ಮಗೌರವವನ್ನು ನುಚ್ಚುನೂರುಮಾಡಿ ಇತರರೊಂದಿಗಿನ ಅವನ ಸಂಬಂಧವನ್ನು ಹಾನಿಗೊಳಿಸಸಾಧ್ಯವಿತ್ತು. ಬಂಧನಕ್ಕಿಂತಲೂ ಹೆಚ್ಚಿನ ಅವಮಾನಕರ ಹೀನೈಕೆಯು ವಿವಸ್ತ್ರಗೊಳಿಸಲ್ಪಟ್ಟು ಚಾಟಿಯೇಟುಗಳಿಗೆ
ಗುರಿಯಾಗುವುದಾಗಿತ್ತು. ಅಂಥ ದುರುಪಚಾರವು ಧಿಕ್ಕಾರ ಮತ್ತು ಪರಿಹಾಸ್ಯವನ್ನು ಪ್ರಚೋದಿಸಿ, ವ್ಯಕ್ತಿಯ ಗೌರವಭಂಗ ಮಾಡುತ್ತಿತ್ತು.ಯಾತನಾಕಂಬದ ಮೇಲಿನ ಮರಣಶಿಕ್ಷೆಯು ವ್ಯಕ್ತಿಯನ್ನು ಸಕಲ ಅವಮಾನಗಳಲ್ಲಿ ಅತ್ಯಂತ ಹೀನಾಯಕರ ಅವಮಾನಕ್ಕೆ ಗುರಿಮಾಡುತ್ತಿತ್ತು. ಅಂಥ ಮರಣ ಶಿಕ್ಷೆಯು “ಗುಲಾಮರಿಗೆ ವಿಧಿಸಲ್ಪಡುತ್ತಿದ್ದ ಶಿಕ್ಷೆ. ಆದ್ದರಿಂದ ಅದು ಅತಿರೇಕ ಅಪಮಾನ, ಮುಖಭಂಗ, ಚಿತ್ರಹಿಂಸೆಯನ್ನು ಸೂಚಿಸಿತ್ತು” ಎಂದು ಮಾರ್ಟೀನ್ ಹೆಂಗಲ್ ಎಂಬ ಪಂಡಿತರು ಹೇಳುತ್ತಾರೆ. ಈ ರೀತಿಯಲ್ಲಿ ಅವಮಾನಿಸಲ್ಪಟ್ಟ ವ್ಯಕ್ತಿಯನ್ನು ತಿರಸ್ಕರಿಸಿಬಿಡಲು ಅವನ ಕುಟುಂಬ ಮತ್ತು ಮಿತ್ರರ ಮೇಲೆ ಸಮಾಜವು ಒತ್ತಡ ಹಾಕುತ್ತಿತ್ತು. ಕ್ರಿಸ್ತನು ಇದೇ ರೀತಿ ಸತ್ತಕಾರಣ, ಕ್ರಿ.ಶ. ಒಂದನೇ ಶತಮಾನದಲ್ಲಿ ಕ್ರೈಸ್ತರಾಗಲು ಬಯಸಿದವರೆಲ್ಲರು ಸಾರ್ವಜನಿಕ ಗೇಲಿಯನ್ನು ಎದುರಿಸಬೇಕಿತ್ತು. ಶೂಲಕ್ಕೇರಿಸಲ್ಪಟ್ಟ ಒಬ್ಬ ವ್ಯಕ್ತಿಯ ಹಿಂಬಾಲಕನೆಂದು ಹೇಳಿಕೊಳ್ಳುವುದು ಸಹ ತೀರ ಹಾಸ್ಯಾಸ್ಪದ ಎಂದು ಹೆಚ್ಚಿನ ಜನರು ಪರಿಗಣಿಸಿದ್ದಿರಬೇಕು. ಅಪೊಸ್ತಲ ಪೌಲನು ಬರೆದುದು: “ನಾವು ಶೂಲಕ್ಕೇರಿಸಲ್ಪಟ್ಟ ಕ್ರಿಸ್ತನ ಕುರಿತು ಸಾರುತ್ತೇವೆ. ಇದು ಯೆಹೂದ್ಯರಿಗೆ ಎಡವಲು ಕಾರಣವಾಗಿಯೂ ಅನ್ಯಜನಾಂಗಗಳಿಗೆ ಹುಚ್ಚುಮಾತಾಗಿಯೂ ಇದೆ.” (1 ಕೊರಿಂ. 1:23) ಆದಿ ಕ್ರೈಸ್ತರು ಈ ಸವಾಲನ್ನು ಹೇಗೆ ಎದುರಿಸಿದರು?
ಭಿನ್ನವಾದ ಮೌಲ್ಯಗಳು
ಪ್ರಥಮ ಶತಮಾನದ ಕ್ರೈಸ್ತರು ನಿಯಮವನ್ನು ಪಾಲಿಸಿದರು ಮತ್ತು ಕೆಟ್ಟ ನಡವಳಿಕೆಯಿಂದ ಬರುವ ಅವಮಾನವನ್ನು ವರ್ಜಿಸಲು ಪ್ರಯತ್ನಿಸಿದರು. “ನಿಮ್ಮಲ್ಲಿ ಯಾವನೂ ಕೊಲೆಗಾರನಾಗಿ, ಕಳ್ಳನಾಗಿ, ದುಷ್ಟನಾಗಿ ಅಥವಾ ಬೇರೆಯವರ ವಿಷಯಗಳಲ್ಲಿ ತಲೆಹಾಕುವವನಾಗಿ ಕಷ್ಟವನ್ನು ಅನುಭವಿಸದಿರಲಿ” ಎಂದು ಅಪೊಸ್ತಲ ಪೇತ್ರನು ಬರೆದನು. (1 ಪೇತ್ರ 4:15) ಆದರೂ ತನ್ನ ಹೆಸರಿನ ನಿಮಿತ್ತವಾಗಿ ತನ್ನ ಹಿಂಬಾಲಕರು ಹಿಂಸಿಸಲ್ಪಡುವರು ಎಂದು ಯೇಸು ಮುಂತಿಳಿಸಿದನು. (ಯೋಹಾ. 15:20) “[ಒಬ್ಬ ವ್ಯಕ್ತಿಯು] ಕ್ರೈಸ್ತನಾಗಿದ್ದು ಕಷ್ಟವನ್ನು ಅನುಭವಿಸುವುದಾದರೆ ಅವನು [ಅವಮಾನಪಡದೆ] ಈ ಹೆಸರಿನಲ್ಲಿಯೇ ದೇವರನ್ನು ಮಹಿಮೆಪಡಿಸುತ್ತಾ ಇರಲಿ” ಎಂದು ಪೇತ್ರನು ಬರೆದನು. (1 ಪೇತ್ರ 4:16) ಕ್ರಿಸ್ತನ ಹಿಂಬಾಲಕನಾಗಿ ಕಷ್ಟವನ್ನು ಅನುಭವಿಸಿದರೂ ಅವಮಾನಪಡದಿರುವುದು ಆ ಕಾಲದಲ್ಲಿ ರೂಢಿಯಾಗಿದ್ದ ಸಾಮಾಜಿಕ ಅಭಿಪ್ರಾಯವನ್ನು ತಿರಸ್ಕರಿಸುವುದಕ್ಕೆ ಸಮಾನವಾಗಿತ್ತು.
ಬೇರೆ ಜನರ ಮಟ್ಟಗಳು, ಅಭಿಪ್ರಾಯಗಳು ತಮ್ಮ ನಡವಳಿಕೆಯನ್ನು ಮಾರ್ಕ 8:38.
ನಿರ್ದೇಶಿಸುವಂತೆ ಕ್ರೈಸ್ತರು ಬಿಡಸಾಧ್ಯವಿರಲಿಲ್ಲ. ಶೂಲಕ್ಕೇರಿಸಲ್ಪಟ್ಟಿದ್ದ ಒಬ್ಬನನ್ನು ಮೆಸ್ಸೀಯನಾಗಿ ವೀಕ್ಷಿಸುವುದು ಪ್ರಥಮ ಶತಮಾನದ ಸಮಾಜದಲ್ಲಿ ಹುಚ್ಚುತನವಾಗಿ ಪರಿಗಣಿಸಲ್ಪಟ್ಟಿತ್ತು. ಆ ನೋಟವು ಅಂಗೀಕೃತ ಜನಾಭಿಪ್ರಾಯಕ್ಕೆ ತಮ್ಮನ್ನು ಹೊಂದಿಸಿಕೊಳ್ಳುವ ಒತ್ತಡಕ್ಕೆ ಕ್ರೈಸ್ತರನ್ನು ಗುರಿಪಡಿಸಸಾಧ್ಯವಿತ್ತು. ಅವರು ಅಪಹಾಸ್ಯಕ್ಕೆ ಗುರಿಯಾಗಿದ್ದರೂ ಆತನನ್ನು ಹಿಂಬಾಲಿಸುವಂತೆ, ಯೇಸುವೇ ಮೆಸ್ಸೀಯನೆಂಬ ಅವರ ದೃಢನಂಬಿಕೆಯು ಅವಶ್ಯಪಡಿಸಿತು. ಯೇಸು ಹೇಳಿದ್ದು: “ಈ ವ್ಯಭಿಚಾರದ ಮತ್ತು ಪಾಪಿಷ್ಠ ಸಂತತಿಯಲ್ಲಿ ಯಾವನು ನನ್ನ ವಿಷಯವಾಗಿಯೂ ನನ್ನ ಮಾತುಗಳ ವಿಷಯವಾಗಿಯೂ [ಅವಮಾನಪಡುವನೊ] ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆಯಲ್ಲಿ ಪವಿತ್ರ ದೇವದೂತರೊಡನೆ ಬರುವಾಗ [ಅವಮಾನಪಡುವನು.]”—ಇಂದು ಸಹ ನಾವು ಕ್ರೈಸ್ತತ್ವವನ್ನು ತ್ಯಜಿಸಿಬಿಡುವ ಒತ್ತಡಗಳಿಗೆ ಗುರಿಯಾಗಬಹುದು. ಇವು ನಮ್ಮ ಸಹಪಾಠಿಗಳಿಂದ, ನೆರೆಯವರಿಂದ ಅಥವಾ ಸಹೋದ್ಯೋಗಿಗಳಿಂದ ಬರಬಹುದು. ನಮ್ಮನ್ನು ಅನೈತಿಕ, ಅಪ್ರಾಮಾಣಿಕ ಅಥವಾ ಇತರ ಸಂಶಯಾಸ್ಪದ ಚಟುವಟಿಕೆಗಳಲ್ಲಿ ಒಳಗೂಡುವಂತೆ ಮಾಡುವ ಮೂಲಕ ಅವರಿದನ್ನು ಮಾಡಬಹುದು. ಯೋಗ್ಯ ಮೂಲತತ್ತ್ವಗಳಿಗಾಗಿ ನಮ್ಮ ನಿಲುವಿನ ಕಾರಣ ನಾವು ಅವಮಾನಿತರಾಗುವಂತೆ ಮಾಡಲು ಅಂಥವರು ಪ್ರಯತ್ನಿಸಬಹುದು. ನಾವು ಹೇಗೆ ಪ್ರತಿಕ್ರಿಯಿಸಬೇಕು?
ಅವಮಾನವನ್ನು ಅಲಕ್ಷ್ಯಮಾಡಿದವರನ್ನು ಅನುಕರಿಸಿ
ಯೆಹೋವನಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯೇಸು ಅತ್ಯಂತ ಅವಮಾನಕರ ಮರಣ ಶಿಕ್ಷೆಯನ್ನು ಅನುಭವಿಸಿದನು. ಅವನು ‘ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು ಸಹಿಸಿಕೊಂಡನು.’ (ಇಬ್ರಿ. 12:2) ಯೇಸುವಿನ ಶತ್ರುಗಳು ಅವನ ಮುಖಕ್ಕೆ ಹೊಡೆದರು, ಅವನ ಮೇಲೆ ಉಗುಳಿದರು, ವಿವಸ್ತ್ರಗೊಳಿಸಿದರು, ಚಡಿಗಳಿಂದ ಹೊಡೆದರು, ಶೂಲಕ್ಕೇರಿಸಿದರು ಮತ್ತು ಅಪಹಾಸ್ಯಮಾಡಿದರು. (ಮಾರ್ಕ 14:65; 15:29-32) ಆದರೂ ಅವರು ತನ್ನ ಮೇಲೆ ಹೇರಲು ಪ್ರಯತ್ನಿಸಿದ ಅವಮಾನವನ್ನು ಯೇಸು ಅಲಕ್ಷಿಸಿದನು. ಹೇಗೆ? ಅಂಥ ದುರುಪಚಾರದ ಮಧ್ಯೆಯೂ ಹಿಂಜರಿಯಲು ನಿರಾಕರಿಸಿದ ಮೂಲಕವೇ. ಯೆಹೋವನ ದೃಷ್ಟಿಯಲ್ಲಿ ತಾನು ಯಾವ ಘನತೆಯನ್ನೂ ಕಳೆದುಕೊಳ್ಳಲಿಲ್ಲ ಎಂಬುದು ಯೇಸುವಿಗೆ ಗೊತ್ತಿತ್ತು. ಅವನು ಮನುಷ್ಯರಿಂದ ನಿಶ್ಚಯವಾಗಿ ಯಾವ ಘನತೆಯನ್ನೂ ಕೋರಲಿಲ್ಲ. ಯೇಸು ಒಬ್ಬ ದಾಸನ ಮರಣವನ್ನು ಅನುಭವಿಸಿದರೂ ಯೆಹೋವನು ಅವನನ್ನು ಪುನರುತ್ಥಾನಗೊಳಿಸುವ ಮೂಲಕ ಮತ್ತು ತನಗೆ ದ್ವಿತೀಯವಾದ ಅತಿ ಗೌರವಾರ್ಹ ಸ್ಥಾನವನ್ನು ನೀಡುವ ಮೂಲಕ ಘನಪಡಿಸಿದನು. ಫಿಲಿಪ್ಪಿಯ 2:8-11ರಲ್ಲಿ ನಾವು ಓದುವುದು: “[ಕ್ರಿಸ್ತ ಯೇಸು] ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು. ಇದೇ ಕಾರಣಕ್ಕಾಗಿ ದೇವರು ಸಹ ಅವನನ್ನು ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು. ಆದುದರಿಂದ ಸ್ವರ್ಗದಲ್ಲಿರುವವರೂ ಭೂಮಿಯಲ್ಲಿರುವವರೂ ನೆಲದ ಕೆಳಗಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಬೇಕು ಮತ್ತು ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನೇ ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಬಹಿರಂಗವಾಗಿ ಒಪ್ಪಿಕೊಳ್ಳಬೇಕು.”
ತನ್ನ ಮರಣ ಶಿಕ್ಷೆಯಲ್ಲಿ ಒಳಗೂಡಿದ್ದ ಮಾನಹಾನಿಯ ಅನಿಸಿಕೆಗಳಿಗೆ ಯೇಸು ಅಸಂವೇದಿಯಾಗಿರಲಿಲ್ಲ. ದೇವದೂಷಣೆಗಾಗಿ ತಾನು ಖಂಡಿಸಲ್ಪಟ್ಟ ವಿಷಯದಿಂದಾಗಿ ತಂದೆಗೆ ಬರುವ ಸಂಭಾವ್ಯ ಅಗೌರವವು ದೇವಕುಮಾರ ಯೇಸುವನ್ನು ಚಿಂತೆಗೀಡುಮಾಡಿತ್ತು. ಅಂಥ ಅವಮಾನವನ್ನು ತನ್ನಿಂದ ದೂರವಿರಿಸುವಂತೆ ಯೇಸು ಯೆಹೋವನನ್ನು ಬೇಡಿಕೊಂಡನು. “ಈ ಪಾತ್ರೆಯನ್ನು ನನ್ನಿಂದ ತೊಲಗಿಸು” ಎಂದು ಅವನು ಪ್ರಾರ್ಥಿಸಿದನು. ಆದರೂ ಯೇಸು ದೇವರ ಚಿತ್ತಕ್ಕೆ ಅಧೀನನಾದನು. (ಮಾರ್ಕ 14:36) ತನ್ನ ಮೇಲೆ ತರಲಾದ ಒತ್ತಡಗಳನ್ನು ಯೇಸು ಎದುರಿಸಿದನು ಮತ್ತು ಅವಮಾನವನ್ನು ಅಲಕ್ಷ್ಯಮಾಡಿದನು. ತಮ್ಮ ದಿನಗಳಲ್ಲಿ ರೂಢಿಯಲ್ಲಿದ್ದ ಮೌಲ್ಯಗಳೇ ಪ್ರಾಮುಖ್ಯವೆಂದು ನೆನಸಿದವರಿಗೆ ಮಾತ್ರ ಅದು ಅವಮಾನಕರವಾಗಿ ತೋರುತ್ತಿತ್ತು. ಆದರೆ ಯೇಸು ಅಂಥ ಮೌಲ್ಯಗಳನ್ನು ಸ್ವೀಕರಿಸಲಿಲ್ಲ ಎಂಬುದು ಸುಸ್ಪಷ್ಟ.
ಯೇಸುವಿನ ಶಿಷ್ಯರು ಸಹ ಬಂಧಿಸಲ್ಪಟ್ಟರು ಮತ್ತು ಅವರನ್ನು ಚಡಿಗಳಿಂದ ಹೊಡೆಯಲಾಯಿತು. ಇಂಥ ದುರುಪಚಾರವು ಅನೇಕರ ದೃಷ್ಟಿಯಲ್ಲಿ ಅವರನ್ನು ಗೌರವಹೀನರಾಗಿ ಮಾಡಿತು. ಅವರನ್ನು ಕೀಳಾಗಿಯೂ ಹೀನವಾಗಿಯೂ ನೋಡಲಾಯಿತು. ಆದರೂ ಅವರು ಧೈರ್ಯಗೆಡಲಿಲ್ಲ. ನಿಜ ಶಿಷ್ಯರು ಜನಾಭಿಪ್ರಾಯದ ಒತ್ತಡವನ್ನು ಎದುರಿಸಿದರು ಮತ್ತು ಅವಮಾನವನ್ನು ಅಲಕ್ಷ್ಯಮಾಡಿದರು. (ಮತ್ತಾ. 10:17; ಅ. ಕಾ. 5:40; 2 ಕೊರಿಂ. 11:23-25) ತಾವು ‘ತಮ್ಮ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ಯೇಸುವನ್ನು ಹಿಂಬಾಲಿಸಬೇಕಿತ್ತು’ ಎಂಬುದು ಅವರಿಗೆ ಗೊತ್ತಿತ್ತು.—ಲೂಕ 9:23, 26.
ಇಂದು ನಮ್ಮ ಕುರಿತು ಏನು? ಲೋಕವು ಅವಿವೇಕ, ಬಲಹೀನ ಮತ್ತು ಹೀನಾಯವೆಂದು ಪರಿಗಣಿಸುವ ವಿಷಯಗಳನ್ನು ದೇವರು ವಿವೇಕಯುತ, ಬಲಿಷ್ಠ, ಮತ್ತು ಗೌರವಾರ್ಹವೆಂದು ವೀಕ್ಷಿಸುತ್ತಾನೆ. (1 ಕೊರಿಂ. 1:25-28) ಆದುದರಿಂದ ಜನಾಭಿಪ್ರಾಯದಿಂದ ಪೂರಾ ರೀತಿಯಲ್ಲಿ ಪ್ರಭಾವಿಸಲ್ಪಡುವುದು ಹುಚ್ಚುತನವೂ ದೂರದೃಷ್ಟಿಯಿಲ್ಲದ್ದೂ ಆಗಿರುವುದಿಲ್ಲವೊ?
ಐಹಿಕ ಗೌರವವನ್ನೇ ಬಯಸುವ ಯಾವನಿಗೂ ಲೋಕವು ತನ್ನ ಬಗ್ಗೆ ನೀಡುವ ಅಭಿಪ್ರಾಯವೇ ಮುಖ್ಯ. ನಮಗಾದರೊ ಯೇಸು ಮತ್ತು ಆತನ ಪ್ರಥಮ ಶತಮಾನದ ಹಿಂಬಾಲಕರಂತೆ ಯೆಹೋವನು ನಮ್ಮ ಸ್ನೇಹಿತನಾಗಿರುವುದೇ ಮುಖ್ಯ. ಆದುದರಿಂದ ನಾವು ಆತನ ದೃಷ್ಟಿಯಲ್ಲಿ ಗೌರವಾರ್ಹವಾಗಿರುವುದನ್ನು ಗೌರವಿಸುವೆವು ಮತ್ತು ಆತನ ದೃಷ್ಟಿಯಲ್ಲಿ ಅವಮಾನಕರವಾದುದನ್ನು ಅವಮಾನಕರವೆಂದು ವೀಕ್ಷಿಸುವೆವು.
[ಪುಟ 4ರಲ್ಲಿರುವ ಚಿತ್ರ]
ಅವಮಾನದ ವಿಷಯದಲ್ಲಿ ಲೌಕಿಕ ಅಭಿಪ್ರಾಯಗಳಿಂದ ಯೇಸು ಪ್ರಭಾವಿತನಾಗಲಿಲ್ಲ