ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಯನಿಷ್ಠೆ ಏಕೆ ಬೇಕು?

ಸಮಯನಿಷ್ಠೆ ಏಕೆ ಬೇಕು?

ಸಮಯನಿಷ್ಠೆ ಏಕೆ ಬೇಕು?

ಸಮಯನಿಷ್ಠೆ ತೋರಿಸುವುದು ಅಥವಾ ಸಮಯಕ್ಕೆ ಸರಿಯಾಗಿ ಕ್ರಿಯೆಗೈಯುವುದು ಅಷ್ಟೇನೂ ಸುಲಭವಲ್ಲ. ಏಕೆಂದರೆ ಬಹಳ ದೂರದ ಪ್ರಯಾಣ, ವಾಹನ ದಟ್ಟಣೆ ಮತ್ತು ಕಾರ್ಯನಿರತ ದಿನಚರಿಗಳಂಥ ಅನೇಕ ಸವಾಲುಗಳು ನಮ್ಮ ಮುಂದಿರಬಹುದು. ಆದರೂ ಸಮಯಕ್ಕೆ ಸರಿಯಾಗಿ ಕಾರ್ಯನಡಿಸುವುದು ಪ್ರಾಮುಖ್ಯ. ಉದಾಹರಣೆಗೆ, ಕೆಲಸದ ಸ್ಥಳದಲ್ಲಿ ಸಮಯನಿಷ್ಠೆಯುಳ್ಳವನನ್ನು ಸಾಮಾನ್ಯವಾಗಿ ಭರವಸಾರ್ಹನೂ ಶ್ರದ್ಧೆಯುಳ್ಳವನೂ ಎಂದು ಪರಿಗಣಿಸಲಾಗುತ್ತದೆ. ಆದರೆ ಸಮಯ ಮೀರಿ ಬರುವವನು ಬೇರೆಯವರ ಕೆಲಸವನ್ನು ಹಾಗೂ ಉತ್ಪಾದನೆ ಅಥವಾ ಸೇವೆಗಳ ಗುಣಮಟ್ಟವನ್ನೂ ಬಾಧಿಸುತ್ತಾನೆ. ವಿದ್ಯಾರ್ಥಿಯು ತಡವಾಗಿ ಬರುವುದಾದರೆ ಕೆಲವೊಂದು ತರಗತಿಗಳು ತಪ್ಪಿಹೋಗುತ್ತವೆ. ಹೀಗೆ ಅವನ ಶೈಕ್ಷಣಿಕ ಪ್ರಗತಿಯು ಕುಂಠಿತಗೊಳ್ಳಬಹುದು. ದಂತವೈದ್ಯ ಅಥವಾ ಇತರ ವೈದ್ಯರ ಭೇಟಿಗೆ ಗೊತ್ತುಪಡಿಸಿದ ಸಮಯದಲ್ಲಿ ಹೋಗದಿದ್ದರೆ ಅದು ನಮ್ಮ ಔಷಧೋಪಚಾರ ಅಥವಾ ಚಿಕಿತ್ಸೆಯನ್ನು ಬಾಧಿಸಬಹುದು.

ಆದರೆ ಕೆಲವೊಂದು ಸ್ಥಳಗಳಲ್ಲಿ ಸಮಯನಿಷ್ಠೆಗೆ ಅಷ್ಟೊಂದು ಮಹತ್ವವನ್ನು ಕೊಡಲಾಗುವುದಿಲ್ಲ. ಅಂಥ ಪರಿಸರದಲ್ಲಿ ಬೆಳೆದವರಿಗೆ ತಡವಾಗಿ ಬರುವುದು ವಾಡಿಕೆಯಾಗಿ ಹೋಗಬಹುದು. ನಮ್ಮ ಕುರಿತು ಇದು ನಿಜವಾಗಿರುವಲ್ಲಿ ಸಮಯಕ್ಕೆ ಸರಿಯಾಗಿ ಬರುವ ಅಪೇಕ್ಷೆಯನ್ನು ಬೆಳೆಸಿಕೊಳ್ಳುವುದು ಪ್ರಾಮುಖ್ಯ. ಸಮಯನಿಷ್ಠೆಯ ಮಹತ್ವವನ್ನು ಗಣ್ಯಮಾಡುವುದು ನಾವು ಸಮಯನಿಷ್ಠರಾಗಿರುವಂತೆ ಖಂಡಿತ ಸಹಾಯಮಾಡುತ್ತದೆ. ನಾವೇಕೆ ಸಮಯನಿಷ್ಠರಾಗಿರಬೇಕು? ಸಮಯನಿಷ್ಠೆ ತೋರಿಸುವುದನ್ನು ಕಷ್ಟಕರವನ್ನಾಗಿ ಮಾಡುವ ಸವಾಲುಗಳನ್ನು ಹೇಗೆ ಎದುರಿಸಬಲ್ಲೆವು? ಸಮಯನಿಷ್ಠರಾಗಿರುವುದರಿಂದ ಯಾವ ಪ್ರಯೋಜನಗಳು ಸಿಗಬಲ್ಲವು?

ಯೆಹೋವನು ಸಮಯನಿಷ್ಠೆಯುಳ್ಳ ದೇವರು

ನಾವು ಆರಾಧಿಸುವ ದೇವರನ್ನು ಅನುಕರಿಸಲು ಬಯಸುವುದೇ ನಾವು ಸಮಯನಿಷ್ಠರಾಗಿರಲು ಪ್ರಮುಖ ಕಾರಣ. (ಎಫೆ. 5:1) ಸಮಯನಿಷ್ಠೆಯಲ್ಲಿ ಯೆಹೋವನು ಅತ್ಯುತ್ತಮ ಮಾದರಿಯಿಟ್ಟಿದ್ದಾನೆ. ಆತನು ಎಂದೂ ತಡಮಾಡುವುದಿಲ್ಲ. ತನ್ನ ಉದ್ದೇಶಗಳ ನೆರವೇರಿಕೆಯ ಸಂಬಂಧದಲ್ಲಿ ಆತನು ಕಟ್ಟುನಿಟ್ಟಾಗಿ ತನ್ನ ಕಾರ್ಯತಖ್ತೆಗೆ ಅನುಸಾರವಾಗಿ ವಿಷಯಗಳನ್ನು ಮಾಡುತ್ತಾನೆ. ಉದಾಹರಣೆಗೆ, ಯೆಹೋವನು ಲೋಕದಲ್ಲಿರುವ ಭಕ್ತಿಹೀನ ಜನರನ್ನು ಜಲಪ್ರಳಯದಲ್ಲಿ ನಾಶಮಾಡಲು ನಿರ್ಣಯಿಸಿದಾಗ ಆತನು ನೋಹನಿಗೆ, “ನೀನು ತುರಾಯಿ ಮರದಿಂದ ನಾವೆಯನ್ನು ಮಾಡಿಕೋ” ಎಂದು ಹೇಳಿದನು. ನಾಶನದ ಸಮಯ ಹತ್ತಿರಕ್ಕೆ ಬಂದಂತೆ ಯೆಹೋವನು ನೋಹನಿಗೆ ನಾವೆಯ ಒಳಗೆ ಹೋಗಲು ಹೇಳಿದನು ಮತ್ತು “ಏಳು ದಿನಗಳನಂತರ ನಾನು ಭೂಮಿಯ ಮೇಲೆ ನಾಲ್ವತ್ತು ದಿವಸ ಹಗಲಿರುಳು ಮಳೆಯನ್ನು ಸುರಿಸಿ ನನ್ನಿಂದಾದ ಜೀವರಾಶಿಗಳನ್ನೆಲ್ಲಾ ಭೂಮಿಯ ಮೇಲಿನಿಂದ ಅಳಿಸಿಬಿಡುತ್ತೇನೆ” ಎಂದೂ ಹೇಳಿದನು. ಮತ್ತು ಸರಿಯಾಗಿ ಅದೇ ಸಮಯಕ್ಕೆ ಅಂದರೆ “ಆ ಏಳು ದಿವಸಗಳಾದನಂತರ ಜಲಪ್ರಳಯವು ಭೂಮಿಯ ಮೇಲೆ ಬಂತು.” (ಆದಿ. 6:14; 7:4, 10) ನೋಹ ಮತ್ತು ಅವನ ಕುಟುಂಬದವರು ಸಮಯಕ್ಕೆ ಸರಿಯಾಗಿ ನಾವೆಯ ಒಳಗೆ ಹೋಗಿರದಿದ್ದಲ್ಲಿ ಏನಾಗುತ್ತಿತ್ತು ಎಂದು ಸ್ವಲ್ಪ ಊಹಿಸಿ! ಅವರು ಆರಾಧಿಸುತ್ತಿದ್ದ ದೇವರಂತೆಯೇ ಅವರು ಸಹ ಸಮಯನಿಷ್ಠರಾಗಿರಬೇಕಿತ್ತು.

ಜಲಪ್ರಳಯವಾಗಿ ಸುಮಾರು 450 ವರ್ಷಗಳ ನಂತರ, ಯೆಹೋವನು ಪೂರ್ವಜ ಅಬ್ರಹಾಮನೊಂದಿಗೆ ಮಾತಾಡುತ್ತಾ ಅವನಿಗೆ ಒಬ್ಬ ಮಗನು ಹುಟ್ಟುವನೆಂದೂ ಅವನಿಂದಲೇ ವಾಗ್ದತ್ತ ಸಂತಾನ ಬರುವುದೆಂದೂ ಹೇಳಿದನು. (ಆದಿ. 17:15-17) “ಬರುವ ವರುಷ ಇದೇ ಕಾಲದಲ್ಲಿ” ಇಸಾಕನು ಹುಟ್ಟುವನು ಎಂದು ದೇವರಂದನು. ಹಾಗೆಯೇ ಸಂಭವಿಸಿತೊ? “ಸಾರಳು ಬಸುರಾಗಿ ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಮಗನನ್ನು ಹೆತ್ತಳು” ಎಂದು ಬೈಬಲ್‌ ಹೇಳುತ್ತದೆ.—ಆದಿ. 17:21; 21:2.

ದೇವರ ಸಮಯನಿಷ್ಠೆಯನ್ನು ತೋರಿಸುವ ಅನೇಕಾನೇಕ ಉದಾಹರಣೆಗಳು ಬೈಬಲಿನಲ್ಲಿವೆ. (ಯೆರೆ. 25:11-13; ದಾನಿ. 4:20-25; 9:25) ಭವಿಷ್ಯತ್ತಿನಲ್ಲಿ ಬರಲಿರುವ ಯೆಹೋವನ ನ್ಯಾಯತೀರ್ಪಿನ ದಿನಕ್ಕೆ ನಾವು ಕಾದುಕೊಂಡಿರುವಂತೆ ಬೈಬಲ್‌ ಹೇಳುತ್ತದೆ. ಆ ದಿನವು ಮಾನವದೃಷ್ಟಿಯಲ್ಲಿ ‘ತಡವಾಗುತ್ತಿರುವಂತೆ’ ಕಾಣಬಹುದಾದರೂ “ಅದು ತಾಮಸವಾಗದು” ಎಂಬ ಆಶ್ವಾಸನೆಯನ್ನು ನಮಗೆ ಕೊಡಲಾಗಿದೆ.—ಹಬ. 2:3.

ಆರಾಧನೆಯಲ್ಲಿ ಸಮಯನಿಷ್ಠೆ ಪ್ರಾಮುಖ್ಯ

ಎಲ್ಲ ಇಸ್ರಾಯೇಲ್ಯರು ‘ಯೆಹೋವನಿಂದ ನೇಮಕವಾದ ಹಬ್ಬಗಳ ದಿನಗಳಲ್ಲಿ’ ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ಸ್ಥಳದಲ್ಲಿ ಉಪಸ್ಥಿತರಿರಬೇಕಿತ್ತು. (ಯಾಜ. 23:2, 4) ಮಾತ್ರವಲ್ಲ ನಿರ್ದಿಷ್ಟ ಯಜ್ಞಗಳನ್ನು ಯಾವ ಸಮಯದಲ್ಲಿ ಅರ್ಪಿಸಬೇಕಿತ್ತೆಂಬದನ್ನೂ ದೇವರು ನಿಶ್ಚಯಿಸಿದ್ದನು. (ವಿಮೋ. 29:38, 39; ಯಾಜ. 23:37, 38) ಇದು, ತನ್ನ ಸೇವಕರು ಆರಾಧನೆಯಲ್ಲಿ ಸಮಯನಿಷ್ಠರಾಗಿರಲು ದೇವರು ಬಯಸುತ್ತಾನೆಂದು ಸೂಚಿಸುವುದಿಲ್ಲವೊ?

ಒಂದನೇ ಶತಮಾನದಲ್ಲಿ ಅಪೊಸ್ತಲ ಪೌಲನು ಕೊರಿಂಥ ಸಭೆಯವರಿಗೆ ಕ್ರೈಸ್ತ ಕೂಟಗಳು ಯಾವ ರೀತಿಯಲ್ಲಿ ನಡೆಸಲ್ಪಡಬೇಕೆಂಬುದರ ಕುರಿತು ನಿರ್ದೇಶನ ಕೊಟ್ಟಾಗ, “ಎಲ್ಲವುಗಳು ಸಭ್ಯವಾಗಿಯೂ ಕ್ರಮವಾಗಿಯೂ ನಡೆಯಲಿ” ಎಂದು ಹೇಳಿದನು. (1 ಕೊರಿಂ. 14:40) ಅದೇ ರೀತಿ, ಆರಾಧನೆಗಾಗಿರುವ ಕ್ರೈಸ್ತ ಕೂಟಗಳು ನೇಮಿತ ಸಮಯದಲ್ಲಿ ಆರಂಭಗೊಳ್ಳಬೇಕು. ಏಕೆಂದರೆ ಸಮಯನಿಷ್ಠೆಯ ಕುರಿತು ಯೆಹೋವನ ದೃಷ್ಟಿಕೋನ ಬದಲಾಗಿಲ್ಲ. (ಮಲಾ. 3:6) ಹಾಗಾದರೆ ಕ್ರೈಸ್ತ ಕೂಟಗಳಲ್ಲಿ ಸಮಯನಿಷ್ಠರಾಗಿರಲು ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಲ್ಲೆವು?

ಸಮಯನಿಷ್ಠೆಗೆ ಎದುರಾಗುವ ಸವಾಲನ್ನು ಜಯಿಸುವುದು

ಮುಂಚಿತವಾಗಿ ಯೋಜಿಸುವುದು ತುಂಬ ಸಹಾಯಕರ ಎಂದು ಅನೇಕರು ಕಂಡುಕೊಂಡಿದ್ದಾರೆ. (ಜ್ಞಾನೋ. 21:5) ಉದಾಹರಣೆಗೆ, ಒಂದು ನಿಶ್ಚಿತ ಸಮಯಕ್ಕೆ ನಾವು ಒಂದು ನಿರ್ದಿಷ್ಟ ಸ್ಥಳದಲ್ಲಿರಬೇಕಾದರೆ ಅದನ್ನು ಮುಟ್ಟಲು ಪ್ರಯಾಣಕ್ಕೆ ಸರಿಯಾಗಿ ಎಷ್ಟು ಸಮಯ ಬೇಕೋ ಅಷ್ಟೇ ಮುಂಚಿತವಾಗಿ ಹೊರಡುವುದು ವಿವೇಕಯುತವಾಗಿರುವುದೋ? ಪ್ರಯಾಣ ಮಧ್ಯದಲ್ಲಿ ಏನಾದರೂ “ಮುಂಗಾಣದ ಘಟನೆ” ಸಂಭವಿಸಿ ನಾವು ತಡವಾಗಿ ತಲಪದಂತೆ ಸಾಕಷ್ಟು ನಿಮಿಷ ಮುಂಚಿತವಾಗಿ ಹೊರಡುವುದು ವಿವೇಕದ ನಿರ್ಣಯವಾಗಿರುವುದಿಲ್ಲವೊ? (ಪ್ರಸಂ. 9:11, NW) ಸಮಯನಿಷ್ಠೆ ತೋರಿಸುವ ಹೋಸೇ ಎಂಬ ಯುವಕನು ಹೇಳುವಂತೆ, “ಸರಿಯಾದ ಸಮಯಕ್ಕೆ ತಲಪಲು ಒಬ್ಬನಿಗೆ ಸಹಾಯಮಾಡುವ ವಿಷಯವು ಪ್ರಯಾಣಕ್ಕೆ ಎಷ್ಟು ಸಮಯ ತಗಲುವುದು ಎಂಬುದನ್ನು ಸರಿಯಾಗಿ ತಿಳಿದಿರುವುದೇ.” *

ಕೆಲವರಿಗಾದರೋ ಕ್ರೈಸ್ತ ಕೂಟಗಳಿಗೆ ಸರಿಯಾದ ಸಮಯಕ್ಕೆ ಬರಬೇಕಾದರೆ ಕೆಲಸದ ಸ್ಥಳದಿಂದ ಸಾಕಷ್ಟು ಬೇಗನೆ ಹೊರಡಲು ಏರ್ಪಾಡನ್ನು ಮಾಡಬೇಕಾದೀತು. ಇದನ್ನೇ ಇಥಿಯೋಪಿಯದ ಒಬ್ಬ ಸಾಕ್ಷಿಯು ಮಾಡಿದನು. ಅವನ ಕೆಲಸದ ಶಿಫ್ಟ್‌ನಲ್ಲಿ ಆಗುವ ಬದಲಾವಣೆಯಿಂದಾಗಿ ಕೂಟಗಳಿಗೆ 45 ನಿಮಿಷ ತಡವಾಗಿ ತಲುಪುತ್ತಾನೆಂದು ಅವನು ಗ್ರಹಿಸಿದನು. ಆದುದರಿಂದ ಕೂಟಗಳ ರಾತ್ರಿಗಳಲ್ಲಿ ತನ್ನ ನಂತರದ ಶಿಫ್ಟ್‌ನ ಕೆಲಸಗಾರನು ಬೇಗನೆ ಬರುವಂತೆ ಅವನು ಏರ್ಪಾಡು ಮಾಡಿದನು. ಮತ್ತು ಇದಕ್ಕೆ ಬದಲಿಯಾಗಿ ಆ ಕೆಲಸಗಾರನಿಗಾಗಿ ತಾನು ಇನ್ನೂ ಏಳು ತಾಸಿನ ಒಂದು ಶಿಫ್ಟ್‌ನಲ್ಲಿ ಕೆಲಸಮಾಡಲು ಒಪ್ಪಿಕೊಂಡನು.

ನಮಗೆ ಚಿಕ್ಕ ಮಕ್ಕಳಿರುವಾಗ ಕೂಟಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗುವುದು ದೊಡ್ಡ ಸವಾಲೇ ಸರಿ. ಸಾಮಾನ್ಯವಾಗಿ ಮಕ್ಕಳನ್ನು ತಯಾರುಗೊಳಿಸುವ ಜವಾಬ್ದಾರಿ ತಾಯಿಯ ಮೇಲೆ ಬೀಳುತ್ತದಾದರೂ ಕುಟುಂಬದ ಇತರ ಸದಸ್ಯರೂ ಸಹಾಯಮಾಡಬಹುದು, ಮಾಡಬೇಕು ಕೂಡ. ಮೆಕ್ಸಿಕೊದ ಎಸ್ಪರಾಂಜಾ ಎಂಬ ತಾಯಿ ಎಂಟು ಮಕ್ಕಳನ್ನು ಒಬ್ಬಳೇ ಸಲಹಿದ್ದಳು. ಈಗ ಮಕ್ಕಳು 5ರಿಂದ 23 ವರ್ಷ ಪ್ರಾಯದವರು. ಆದರೂ ಅವರ ಕುಟುಂಬವು ಸಮಯನಿಷ್ಠರಾಗಿರಲು ಹೇಗೆ ಸಾಧ್ಯವಾಗುತ್ತದೆಂದು ಎಸ್ಪರಾಂಜಾ ಹೇಳುತ್ತಾಳೆ. “ನನ್ನ ಹಿರಿಯ ಪುತ್ರಿಯರು ಕಿರಿಯರಿಗೆ ಬೇಗನೆ ತಯಾರಾಗುವಂತೆ ಸಹಾಯಮಾಡುತ್ತಾರೆ. ಇದರಿಂದ ನಾನು ಮನೆಕೆಲಸವನ್ನು ಮುಗಿಸಿ ಕೂಟಕ್ಕೆ ನಿಶ್ಚಿತ ಸಮಯಕ್ಕೆ ಹೊರಡಲು ಸಹಾಯವಾಗುತ್ತದೆ.” ಈ ಕುಟುಂಬ ಮನೆಯಿಂದ ಹೊರಡಲು ಒಂದು ನಿಶ್ಚಿತ ಸಮಯವನ್ನು ಮಾಡಿಕೊಂಡಿದೆ. ಮತ್ತು ಆ ಸಮಯಕ್ಕೆ ಹೊರಡಲು ಎಲ್ಲರೂ ಸಹಕರಿಸುತ್ತಾರೆ.

ಆರಾಧನೆಯಲ್ಲಿ ಸಮಯನಿಷ್ಠೆಯ ಪ್ರಯೋಜನ

ಕ್ರೈಸ್ತ ಕೂಟಗಳಿಗೆ ಸಮಯಕ್ಕೆ ಸರಿಯಾಗಿ ಬರುವುದರಿಂದ ಸಿಗುವ ಆಶೀರ್ವಾದಗಳ ಕುರಿತು ಆಲೋಚಿಸುವುದು ನಾವು ಸಮಯನಿಷ್ಠರಾಗಿರಲು ಸಾಧ್ಯವಿರುವುದೆಲ್ಲವನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಹೆಚ್ಚಿಸಬಲ್ಲದು. ತಕ್ಕ ಸಮಯಕ್ಕೆ ಕೂಟಕ್ಕೆ ಬರುವ ರೂಢಿಯನ್ನು ಮಾಡಿಕೊಂಡಿರುವ ಯುವ ಸಹೋದರಿ ಸಾಂಡ್ರಾ ಹೇಳುವುದು: “ಬೇಗ ಬರಲು ನಾನು ಇಷ್ಟಪಡುವುದರ ಕಾರಣವೇನೆಂದರೆ ನನಗೆ ಸಹೋದರ ಸಹೋದರಿಯರನ್ನು ವಂದಿಸಲು, ಅವರೊಂದಿಗೆ ಮಾತನಾಡಲು, ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವಕಾಶ ಸಿಗುತ್ತದೆ.” ಹೌದು, ರಾಜ್ಯ ಸಭಾಗೃಹಕ್ಕೆ ನಾವು ಬೇಗನೆ ಬರುವುದಾದರೆ ಅಲ್ಲಿ ಹಾಜರಿರುವವರ ತಾಳ್ಮೆ ಹಾಗೂ ನಂಬಿಗಸ್ತಿಕೆಯ ಸೇವೆಯ ಕುರಿತು ತಿಳಿದುಕೊಂಡು ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ನಮ್ಮ ಉಪಸ್ಥಿತಿ ಹಾಗೂ ಭಕ್ತಿವರ್ಧಕ ಸಂಭಾಷಣೆಯ ಮೂಲಕ ನಾವು ನಮ್ಮ ಸಹೋದರ ಸಹೋದರಿಯರ ಮೇಲೆ ಉತ್ತಮ ಪರಿಣಾಮ ಬೀರಿ ‘ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಪ್ರೇರೇಪಿಸಬಲ್ಲೆವು.’—ಇಬ್ರಿ. 10:24, 25.

ಪ್ರತಿಯೊಂದು ಕೂಟವನ್ನು ಪ್ರಾರಂಭಿಸುವ ಗೀತೆ ಹಾಗೂ ಪ್ರಾರ್ಥನೆಯು ನಮ್ಮ ಆರಾಧನೆಯ ಅತ್ಯಗತ್ಯ ಭಾಗವಾಗಿದೆ. (ಕೀರ್ತ. 149:1) ನಾವು ಹಾಡುವ ಗೀತೆಗಳು ಯೆಹೋವನನ್ನು ಸ್ತುತಿಸುತ್ತವೆ, ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂಬುದನ್ನು ನೆನಪುಹುಟ್ಟಿಸುತ್ತವೆ, ಶುಶ್ರೂಷೆಯಲ್ಲಿ ಅತ್ಯಾನಂದದಿಂದ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತವೆ. ಆರಂಭದ ಪ್ರಾರ್ಥನೆಯ ಕುರಿತೇನು? ಪುರಾತನ ಕಾಲದಲ್ಲಿ ಯೆಹೋವನು ದೇವಾಲಯವನ್ನು ತನ್ನ “ಪ್ರಾರ್ಥನಾಲಯ” ಎಂದು ಕರೆದನು. (ಯೆಶಾ. 56:7) ಇಂದು ನಾವು ಯೆಹೋವನಿಗೆ ಪ್ರಾರ್ಥನೆಗಳನ್ನು ಸಲ್ಲಿಸಲು ಕೂಟಗಳಲ್ಲಿ ಕೂಡಿಬರುತ್ತೇವೆ. ಆರಂಭದ ಪ್ರಾರ್ಥನೆಯು ಯೆಹೋವನ ಮಾರ್ಗದರ್ಶನೆ ಹಾಗೂ ಪವಿತ್ರಾತ್ಮಕ್ಕಾಗಿ ಕೇಳಿಕೊಳ್ಳುವುದು ಮಾತ್ರವಲ್ಲ ಪರಿಗಣಿಸಲಿರುವ ಮಾಹಿತಿಯನ್ನು ಸ್ವೀಕರಿಸಲು ನಮ್ಮ ಹೃದಮನಗಳನ್ನು ಸಿದ್ಧಗೊಳಿಸುತ್ತದೆ ಸಹ. ಆದುದರಿಂದ ಆರಂಭದ ಗೀತೆ ಹಾಗೂ ಪ್ರಾರ್ಥನೆಗೆ ಉಪಸ್ಥಿತರಿರುವಂತೆ ಕೂಟಗಳಿಗೆ ಸರಿಯಾದ ಸಮಯಕ್ಕೆ ಬರಲು ನಾವು ದೃಢನಿಶ್ಚಯ ಮಾಡಬೇಕು.

23 ವರ್ಷದ ಹೆಲನ್‌ ಕೂಟಗಳಿಗೆ ಬೇಗನೆ ಬರಲು ಕಾರಣವನ್ನು ವಿವರಿಸುತ್ತಾ ಹೇಳುವುದು: “ಕೂಟಗಳಲ್ಲಿ ಪ್ರಸ್ತುತಪಡಿಸುವ ಎಲ್ಲ ಮಾಹಿತಿಯನ್ನು, ಗೀತೆಗಳನ್ನು ಹಾಗೂ ಆರಂಭದ ಪ್ರಾರ್ಥನೆಯನ್ನು ಸಹ ಯೆಹೋವನೇ ಒದಗಿಸುವುದರಿಂದ ಕೂಟಕ್ಕೆ ಬೇಗನೆ ಬರುವುದು ಯೆಹೋವನ ಮೇಲಿನ ನನ್ನ ಪ್ರೀತಿಯನ್ನು ತೋರಿಸುವ ಒಂದು ವಿಧ ಎಂದು ನನಗನಿಸುತ್ತದೆ.” ನಮಗೆ ಕೂಡ ಹೀಗೆಯೇ ಅನಿಸಬೇಕಲ್ಲವೆ? ಹೌದು, ಖಂಡಿತವಾಗಿಯೂ. ಆದುದರಿಂದ ನಮ್ಮೆಲ್ಲ ಚಟುವಟಿಕೆಗಳಲ್ಲಿ, ವಿಶೇಷವಾಗಿ ಸತ್ಯದೇವರ ನಮ್ಮ ಆರಾಧನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಸಮಯನಿಷ್ಠರಾಗಿರುವ ರೂಢಿಯನ್ನು ಬೆಳೆಸಿಕೊಳ್ಳಲು ಶ್ರಮಿಸೋಣ.

[ಪಾದಟಿಪ್ಪಣಿ]

^ ಪ್ಯಾರ. 12 ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 26ರಲ್ಲಿರುವ ಚಿತ್ರ]

ಮುಂಚಿತವಾಗಿ ತಯಾರಾಗಿರ್ರಿ

[ಪುಟ 26ರಲ್ಲಿರುವ ಚಿತ್ರ]

‘ಮುಂಗಾಣದ ಘಟನೆಗಾಗಿ’ ಸ್ವಲ್ಪ ಹೆಚ್ಚು ಸಮಯ ಇಟ್ಟುಕೊಳ್ಳಿ

[ಪುಟ 26ರಲ್ಲಿರುವ ಚಿತ್ರಗಳು]

ಕೂಟಗಳಿಗೆ ಬೇಗನೆ ಬಂದು ಪ್ರಯೋಜನ ಪಡೆಯಿರಿ