ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಕತೆ—ಸತ್ಯಾರಾಧನೆಯ ಗುರುತು

ಏಕತೆ—ಸತ್ಯಾರಾಧನೆಯ ಗುರುತು

ಏಕತೆ—ಸತ್ಯಾರಾಧನೆಯ ಗುರುತು

“ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು.”—ಮೀಕ 2:12.

1. ಯೆಹೋವನ ವಿವೇಕಕ್ಕೆ ಸೃಷ್ಟಿ ಹೇಗೆ ರುಜುವಾತು ಕೊಡುತ್ತದೆ?

ಕೀರ್ತನೆಗಾರನು ಆಶ್ಚರ್ಯದಿಂದ ಉದ್ಗರಿಸಿದ್ದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ [ವಿವೇಕದಿಂದಲೇ, NW] ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.” (ಕೀರ್ತ. 104:24) ಭೂಮಿಯ ವಿಸ್ಮಯಭರಿತ ಹಾಗೂ ಜಟಿಲವಾದ ಜೀವಜಾಲದಲ್ಲಿ ಲಕ್ಷಾನುಗಟ್ಟಲೆ ವಿಧದ ಸಸ್ಯಗಳು, ಕೀಟಗಳು, ಪ್ರಾಣಿಗಳು ಹಾಗೂ ಬ್ಯಾಕ್ಟೀರಿಯಗಳು ಇವೆ. ಇವುಗಳ ಮಧ್ಯೆ ಇರುವ ಪರಸ್ಪರಾವಲಂಬನೆ ಯೆಹೋವನ ವಿವೇಕದ ರುಜುವಾತಾಗಿದೆ. ಮಾತ್ರವಲ್ಲ, ನಿಮ್ಮ ದೇಹದಲ್ಲಿ ಸಹ ಸಾವಿರಾರು ಭಿನ್ನಭಿನ್ನವಾದ ಸಂಯೋಜನೆಗಳಿವೆ. ದೊಡ್ಡ ಅಂಗಾಂಗಗಳಿಂದ ಹಿಡಿದು ನಿಮ್ಮ ಜೀವಕೋಶಗಳಲ್ಲಿರುವ ಅಣುವಿನಷ್ಟು ಚಿಕ್ಕ ಭಾಗಗಳ ವರೆಗೆ ಎಲ್ಲವೂ ಒಟ್ಟಿಗೆ ಕೆಲಸಮಾಡುತ್ತವೆ. ಹೀಗೆ ಅವು ನಿಮ್ಮನ್ನು ಒಬ್ಬ ಸಂಪೂರ್ಣ ಹಾಗೂ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡುತ್ತವೆ.

2. ಪುಟ 13ರ ಚಿತ್ರವು ತೋರಿಸುವಂತೆ, ಕ್ರೈಸ್ತರಲ್ಲಿರುವ ಏಕತೆಯು ಏಕೆ ಅದ್ಭುತವೆಂಬಂತೆ ಕಂಡಿತ್ತು?

2 ಪರಸ್ಪರಾವಲಂಬಿಗಳಾಗಿ ಇರುವಂತೆ ಯೆಹೋವನು ಮಾನವಕುಲವನ್ನು ಸೃಷ್ಟಿಮಾಡಿದನು. ಆದರೂ ಮಾನವಕುಲವು ರೂಪದಲ್ಲಿ, ವ್ಯಕ್ತಿತ್ವದಲ್ಲಿ ಹಾಗೂ ಪ್ರತಿಭೆಯಲ್ಲಿ ವೈವಿಧ್ಯವುಳ್ಳದ್ದಾಗಿದೆ. ಅಷ್ಟೇ ಅಲ್ಲದೆ ಮೊದಲ ಮಾನವರಿಗೆ ದೇವರು ದೈವಿಕ ಗುಣಗಳನ್ನೂ ಅನುಗ್ರಹಿಸಿದನು. ಈ ಗುಣಗಳು ಅವರನ್ನು ಪರಸ್ಪರ ಸಹಕರಿಸುವಂತೆ, ಪರಸ್ಪರ ಅವಲಂಬಿಗಳಾಗಿರುವಂತೆ ಸಹಾಯಮಾಡಲಿದ್ದವು. (ಆದಿ. 1:27; 2:18) ಆದಾಗ್ಯೂ ಸಾಮಾನ್ಯ ಮಾನವಕುಲವು ಇಂದು ದೇವರಿಂದ ದೂರಸರಿದಿದೆ ಮಾತ್ರವಲ್ಲ ಅದು ಒಟ್ಟಾಗಿ ಎಂದೂ ಐಕ್ಯದಿಂದ ಇದ್ದದ್ದಿಲ್ಲ. (1 ಯೋಹಾ. 5:19) ಆದುದರಿಂದಲೇ, ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ ಯಾರೆಲ್ಲ ಕೂಡಿದ್ದರೆಂಬುದನ್ನು ನೋಡುವಾಗ ಅವರ ಏಕತೆ ಒಂದು ಅದ್ಭುತವೆಂಬಂತೆ ತೋರಿದ್ದಿರಬೇಕು. ಏಕೆಂದರೆ ಅದರಲ್ಲಿ ಭಿನ್ನ ಭಿನ್ನ ರೀತಿಯ ಜನರಿದ್ದರು, ಅಂದರೆ ಎಫೆಸದ ದಾಸರು, ಪ್ರಮುಖ ಗ್ರೀಕ್‌ ಸ್ತ್ರೀಯರು, ಶಿಕ್ಷಣಪಡೆದ ಯೆಹೂದಿ ಪುರುಷರು ಮತ್ತು ವಿಗ್ರಹಗಳ ಆರಾಧನೆಯನ್ನು ವರ್ಜಿಸಿದವರು ಇದ್ದರು.—ಅ. ಕಾ. 13:1; 17:4; 1 ಥೆಸ. 1:9; 1 ತಿಮೊ. 6:1.

3. ಕ್ರೈಸ್ತರ ಐಕ್ಯವನ್ನು ಬೈಬಲ್‌ ಹೇಗೆ ವರ್ಣಿಸುತ್ತದೆ? ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿಕ್ಕಿದ್ದೇವೆ?

3 ಸತ್ಯಾರಾಧನೆಯು ಜನರನ್ನು ತಾವು ಒಂದೇ ದೇಹದ ಭಾಗಗಳೋ ಎಂಬಂತೆ ಸಾಮರಸ್ಯದಿಂದ ಸಹಕರಿಸುವಂತೆ ಸಹಾಯಮಾಡುತ್ತದೆ. (1 ಕೊರಿಂಥ 12:12, 13 ಓದಿ.) ಸತ್ಯಾರಾಧನೆಯು ಜನರನ್ನು ಹೇಗೆ ಐಕ್ಯಗೊಳಿಸುತ್ತದೆ? ಎಲ್ಲ ಜನಾಂಗಗಳ ಲಕ್ಷಗಟ್ಟಲೆ ಜನರನ್ನು ಐಕ್ಯಗೊಳಿಸಲು ಯೆಹೋವನೊಬ್ಬನೇ ಶಕ್ತನು ಏಕೆ? ಐಕ್ಯಕ್ಕಿರುವ ಯಾವ ಅಡ್ಡಿಗಳನ್ನು ಜಯಿಸಲು ಯೆಹೋವನು ನಮಗೆ ಸಹಾಯಮಾಡುತ್ತಾನೆ? ಏಕತೆಯ ವಿಷಯದಲ್ಲಿ ನಿಜ ಕ್ರೈಸ್ತತ್ವಕ್ಕೂ ಕ್ರೈಸ್ತಪ್ರಪಂಚಕ್ಕೂ ಯಾವ ವ್ಯತ್ಯಾಸವಿದೆ? ಈ ಕೆಲವು ವಿಷಯಗಳನ್ನು ನಾವು ಈ ಲೇಖನದಲ್ಲಿ ಚರ್ಚಿಸಲಿಕ್ಕಿದ್ದೇವೆ.

ಸತ್ಯಾರಾಧನೆಯು ಜನರನ್ನು ಹೇಗೆ ಐಕ್ಯಗೊಳಿಸುತ್ತದೆ?

4. ಸತ್ಯಾರಾಧನೆಯು ಜನರನ್ನು ಹೇಗೆ ಐಕ್ಯಗೊಳಿಸುತ್ತದೆ?

4 ಯೆಹೋವನೇ ಎಲ್ಲವನ್ನು ಸೃಷ್ಟಿಸಿದವನಾದ್ದರಿಂದ ಆತನೇ ವಿಶ್ವದ ನ್ಯಾಯಬದ್ಧ ಪರಮಾಧಿಕಾರಿ ಎಂಬುದನ್ನು ಸತ್ಯಾರಾಧನೆಯನ್ನು ಅನುಸರಿಸುವ ಜನರು ಒಪ್ಪಿಕೊಳ್ಳುತ್ತಾರೆ. (ಪ್ರಕ. 4:11) ಆದುದರಿಂದ ನಿಜ ಕ್ರೈಸ್ತರು ಬೇರೆ ಬೇರೆ ಸಮಾಜಗಳಲ್ಲಿ ಹಾಗೂ ಭಿನ್ನ ಭಿನ್ನ ಸನ್ನಿವೇಶಗಳಲ್ಲಿ ಜೀವಿಸುವುದಾದರೂ ದೇವರು ಕೊಟ್ಟ ಅದೇ ನಿಯಮಗಳಿಗೆ ವಿಧೇಯರಾಗುತ್ತಾರೆ ಹಾಗೂ ಅದೇ ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸುತ್ತಾರೆ. ಎಲ್ಲ ಸತ್ಯಾರಾಧಕರು ತಕ್ಕದಾಗಿಯೇ ಯೆಹೋವ ದೇವರನ್ನು “ತಂದೆ” ಎಂದು ಕರೆಯತ್ತಾರೆ. (ಯೆಶಾ. 64:8; ಮತ್ತಾ. 6:9) ಹೀಗೆ ಅವರೆಲ್ಲರು ಆಧ್ಯಾತ್ಮಿಕ ಸಹೋದರರಾಗಿದ್ದು, ಕೀರ್ತನೆಗಾರನು ವರ್ಣಿಸಿರುವ ಹಿತವಾದ ಐಕ್ಯದಲ್ಲಿ ಆನಂದಿಸಶಕ್ತರಾಗಿದ್ದಾರೆ: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!”—ಕೀರ್ತ. 133:1.

5. ಸತ್ಯಾರಾಧಕರ ಐಕ್ಯಕ್ಕೆ ಯಾವ ಗುಣ ಸಹಾಯಕಾರಿ?

5 ಸತ್ಯ ಕ್ರೈಸ್ತರು ಅಪರಿಪೂರ್ಣರೆಂಬುದು ನಿಜವಾದರೂ ಅವರು ಐಕ್ಯದಿಂದ ಒಟ್ಟಾಗಿ ದೇವರನ್ನು ಆರಾಧಿಸುತ್ತಾರೆ. ಏಕೆಂದರೆ ಅವರು ಒಬ್ಬರನ್ನೊಬ್ಬರು ಪ್ರೀತಿಸಲು ಕಲಿತಿದ್ದಾರೆ. ಇಂಥ ಪ್ರೀತಿಯನ್ನು ತೋರಿಸುವಂತೆ ಯೆಹೋವನೇ ಅವರಿಗೆ ಕಲಿಸುತ್ತಾನೆ, ಬೇರೆ ಯಾರೂ ಅದನ್ನು ಕಲಿಸಲು ಶಕ್ತರಲ್ಲ. (1 ಯೋಹಾನ 4:7, 8 ಓದಿ.) ಆತನ ವಾಕ್ಯವು ಹೇಳುವುದು: “ನೀವು ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ. ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಜೊತೆಗೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.” (ಕೊಲೊ. 3:12-14) ಹೌದು, ಐಕ್ಯದ ಪರಿಪೂರ್ಣ ಬಂಧವಾಗಿರುವ ಈ ಪ್ರೀತಿಯೇ ನಿಜ ಕ್ರೈಸ್ತರನ್ನು ಪ್ರಧಾನವಾಗಿ ಗುರುತಿಸುವ ಗುಣ. ಏಕತೆಯು ಸತ್ಯಾರಾಧನೆಯ ವೈಶಿಷ್ಟ್ಯಪೂರ್ಣ ಅಂಶ ಎಂಬುದನ್ನು ನೀವು ನಿಮ್ಮ ಸ್ವಂತ ಅನುಭವದಿಂದಲೂ ಕಂಡುಕೊಂಡಿದ್ದೀರಲ್ಲವೆ?—ಯೋಹಾ. 13:35.

6. ನಾವು ಐಕ್ಯದಲ್ಲಿ ಆನಂದಿಸಲು ರಾಜ್ಯದ ನಿರೀಕ್ಷೆ ಹೇಗೆ ಸಹಾಯಮಾಡುತ್ತದೆ?

6 ಸತ್ಯಾರಾಧಕರು ಐಕ್ಯರಾಗಿರಲು ಇನ್ನೊಂದು ಕಾರಣ ಮಾನವಕುಲಕ್ಕಿರುವ ಒಂದೇ ಒಂದು ನಿರೀಕ್ಷೆ ದೇವರ ರಾಜ್ಯ ಎಂದು ಅವರು ಭರವಸೆಯಿಟ್ಟಿರುವುದೇ. ದೇವರ ರಾಜ್ಯವು ಬೇಗನೆ ಮಾನವ ಸರಕಾರಗಳನ್ನು ತೆಗೆದುಹಾಕಿ ತನ್ನ ಆಳ್ವಿಕೆಯನ್ನು ಆರಂಭಿಸುವುದು ಮತ್ತು ವಿಧೇಯ ಮಾನವರಿಗೆ ನಿಜವಾದ ಹಾಗೂ ನಿರಂತರ ಶಾಂತಿಯನ್ನು ಕೊಡುವ ಮೂಲಕ ಅವರನ್ನು ಆಶೀರ್ವದಿಸುವುದು ಎಂಬುದು ಅವರಿಗೆ ತಿಳಿದಿದೆ. (ಯೆಶಾ. 11:4-9; ದಾನಿ. 2:44) ಹೀಗೆ ಕ್ರೈಸ್ತರು “ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ” ಎಂದು ಯೇಸು ತನ್ನ ಹಿಂಬಾಲಕರ ಕುರಿತು ಹೇಳಿದ ಮಾತುಗಳಿಗನುಸಾರ ನಡೆಯುತ್ತಾರೆ. (ಯೋಹಾ. 17:16) ನಿಜ ಕ್ರೈಸ್ತರು ಈ ಲೋಕದ ಯುದ್ಧಗಳಲ್ಲಿ ಭಾಗವಹಿಸದೆ ತಟಸ್ಥರಾಗಿ ಉಳಿಯುತ್ತಾರೆ. ಆದುದರಿಂದಲೇ ತಮ್ಮ ಸುತ್ತಮುತ್ತಲಿರುವವರು ಒಬ್ಬರೊಂದಿಗೊಬ್ಬರು ಯುದ್ಧ ಮಾಡುತ್ತಿರುವಾಗಲೂ ಅವರು ಐಕ್ಯದಲ್ಲಿ ಆನಂದಿಸಶಕ್ತರಾಗಿದ್ದಾರೆ.

ಆಧ್ಯಾತ್ಮಿಕ ಶಿಕ್ಷಣದ ಏಕೈಕ ಮೂಲ

7, 8. ಬೈಬಲಾಧಾರಿತ ಶಿಕ್ಷಣವು ಯಾವ ವಿಧದಲ್ಲಿ ನಮ್ಮ ಐಕ್ಯಕ್ಕೆ ಸಹಾಯಮಾಡುತ್ತದೆ?

7 ಪ್ರಥಮ ಶತಮಾನದ ಕ್ರೈಸ್ತರು ಐಕ್ಯದಲ್ಲಿ ಆನಂದಿಸಿದರು ಏಕೆಂದರೆ ಅವರು ಉತ್ತೇಜನವನ್ನು ಒಂದೇ ಮೂಲದಿಂದ ಪಡೆದರು. ಅಪೊಸ್ತಲರು ಹಾಗೂ ಹಿರೀಪುರುಷರಿಂದ ಕೂಡಿದ್ದ ಯೆರೂಸಲೇಮಿನ ಆಡಳಿತ ಮಂಡಲಿಯ ಮೂಲಕ ಯೇಸು ಸಭೆಗಳಿಗೆ ಬೋಧಿಸುತ್ತಿದ್ದನು ಮತ್ತು ಮಾರ್ಗದರ್ಶಿಸುತ್ತಿದ್ದನು ಎಂಬುದನ್ನು ಅವರು ಅಂಗೀಕರಿಸಿದರು. ಆಡಳಿತ ಮಂಡಲಿಯ ಈ ಶ್ರದ್ಧೆಯುಳ್ಳ ಪುರುಷರು ದೇವರ ವಾಕ್ಯದ ಮೇಲೆ ಆಧರಿಸಿ ನಿರ್ಣಯಗಳನ್ನು ಮಾಡುತ್ತಿದ್ದರು ಹಾಗೂ ಆ ನಿರ್ದೇಶನಗಳನ್ನು ಸಂಚರಣ ಮೇಲ್ವಿಚಾರಕರ ಮೂಲಕ ಬೇರೆ ಬೇರೆ ಸ್ಥಳಗಳಲ್ಲಿರುವ ಸಭೆಗಳಿಗೆ ದಾಟಿಸುತ್ತಿದ್ದರು. ಅಂಥ ಕೆಲವು ಮೇಲ್ವಿಚಾರಕರ ಕುರಿತು ಬೈಬಲ್‌ ಹೀಗೆ ಹೇಳುತ್ತದೆ: “ಅವರು ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಾ ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಹಿರೀಪುರುಷರೂ ತೀರ್ಮಾನಿಸಿದ ನಿಯಮಗಳನ್ನು ಪಾಲಿಸುವಂತೆ ಆ ಜನರಿಗೆ ತಿಳಿಯಪಡಿಸಿದರು.”—ಅ. ಕಾ. 15:6, 19-22; 16:4.

8 ತದ್ರೀತಿಯಲ್ಲಿ ಇಂದು ಸಹ, ಆತ್ಮಾಭಿಷಿಕ್ತ ಕ್ರೈಸ್ತರಿಂದ ರಚಿಸಲ್ಪಟ್ಟಿರುವ ಆಡಳಿತ ಮಂಡಲಿಯು ಲೋಕಾದ್ಯಂತವಿರುವ ಸಭೆಗಳ ಐಕ್ಯಕ್ಕೆ ನೆರವಾಗುತ್ತದೆ. ಈ ಮಂಡಲಿಯು ಆಧ್ಯಾತ್ಮಿಕವಾಗಿ ಪ್ರೋತ್ಸಾಹದಾಯಕ ಸಾಹಿತ್ಯವನ್ನು ಅನೇಕ ಭಾಷೆಗಳಲ್ಲಿ ಪ್ರಕಟಿಸುತ್ತದೆ. ಈ ಆಧ್ಯಾತ್ಮಿಕ ಆಹಾರವು ದೇವರ ವಾಕ್ಯದ ಮೇಲೆ ಆಧರಿಸಿರುತ್ತದೆ. ಹೀಗೆ ಕಲಿಸಲಾಗುವ ವಿಷಯಗಳು ಮನುಷ್ಯರಿಂದ ಬಂದವುಗಳಲ್ಲ ಬದಲಾಗಿ ಯೆಹೋವನಿಂದಲೇ ಬಂದವುಗಳಾಗಿವೆ.—ಯೆಶಾ. 54:13.

9. ನಮಗೆ ದೇವರು ಕೊಟ್ಟಿರುವ ಕೆಲಸವು ನಾವು ಐಕ್ಯರಾಗಿರುವಂತೆ ಹೇಗೆ ನೆರವಾಗುತ್ತದೆ?

9 ಕ್ರೈಸ್ತ ಮೇಲ್ವಿಚಾರಕರು ಸಹ ಸಾರುವ ಕೆಲಸದಲ್ಲಿ ನೇತೃತ್ವ ವಹಿಸುವ ಮೂಲಕ ಐಕ್ಯವನ್ನು ಹೆಚ್ಚಿಸುತ್ತಾರೆ. ದೇವರ ಸೇವೆಯಲ್ಲಿ ಜೊತೆಗೂಡಿ ಕೆಲಸಮಾಡುವವರ ಮಧ್ಯೆ ಇರುವ ಆಪ್ತ ಸಂಬಂಧವು, ಕೇವಲ ಸಾಮಾಜಿಕ ಸಾಹಚರ್ಯ ಮಾಡುವ ಲೋಕದ ಜನರಲ್ಲಿರುವ ಸಂಬಂಧಕ್ಕಿಂತ ಎಷ್ಟೋ ಹೆಚ್ಚು ಬಲವಾದದ್ದು. ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟದ್ದು ಕೇವಲ ಸಾಮಾಜಿಕ ಒಡನಾಟ ಮಾಡುವ ಉದ್ದೇಶದಿಂದಲ್ಲ, ಬದಲಿಗೆ ಯೆಹೋವನನ್ನು ಸನ್ಮಾನಿಸಲು ಹಾಗೂ ಒಂದು ಕೆಲಸವನ್ನು ಮಾಡಿಮುಗಿಸಲು ಅಂದರೆ ಸುವಾರ್ತೆ ಸಾರುವ, ಶಿಷ್ಯರನ್ನಾಗಿ ಮಾಡುವ ಮತ್ತು ಸಭೆಯ ಭಕ್ತಿವೃದ್ಧಿಮಾಡುವ ಕೆಲಸವನ್ನು ಮಾಡಿಮುಗಿಸುವ ಉದ್ದೇಶದಿಂದಲೇ. (ರೋಮ. 1:11, 12; 1 ಥೆಸ. 5:11; ಇಬ್ರಿ. 10:24, 25) ಆದುದರಿಂದಲೇ, ಕ್ರೈಸ್ತರ ಕುರಿತು ಅಪೊಸ್ತಲ ಪೌಲನು, “ನೀವು ಒಂದೇ ಮನಸ್ಸಿನಲ್ಲಿ ದೃಢವಾಗಿ ನಿಂತು ಒಂದೇ ಪ್ರಾಣದೊಂದಿಗೆ ಸುವಾರ್ತೆಯ ನಂಬಿಕೆಗೋಸ್ಕರ ಒಂದಾಗಿ ಹೋರಾಡುತ್ತಿದ್ದೀರಿ” ಎಂದು ಹೇಳಶಕ್ತನಾಗಿದ್ದನು.—ಫಿಲಿ. 1:27.

10. ದೇವಜನರಾದ ನಾವು ಐಕ್ಯರಾಗಿರುವ ಕೆಲವು ವಿಧಗಳು ಯಾವುವು?

10 ಇದಕ್ಕನುಸಾರ, ಯೆಹೋವನ ಜನರೋಪಾದಿ ನಾವು ಐಕ್ಯರಾಗಿದ್ದೇವೆ ಏಕೆಂದರೆ ನಾವು ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸುತ್ತೇವೆ, ನಮ್ಮ ಸಹೋದರರನ್ನು ಪ್ರೀತಿಸುತ್ತೇವೆ, ದೇವರ ರಾಜ್ಯದಲ್ಲಿ ನಮ್ಮ ನಿರೀಕ್ಷೆಯನ್ನಿಡುತ್ತೇವೆ ಹಾಗೂ ನಮ್ಮ ನೇತೃತ್ವ ವಹಿಸಲು ದೇವರು ಉಪಯೋಗಿಸುವವರನ್ನು ಗೌರವಿಸುತ್ತೇವೆ. ಅದಲ್ಲದೆ ಕೆಲವು ಕೆಟ್ಟ ಮನೋಭಾವಗಳನ್ನು ತೆಗೆದುಹಾಕುವಂತೆ ಯೆಹೋವನು ನಮಗೆ ಸಹಾಯಮಾಡುತ್ತಾನೆ. ಏಕೆಂದರೆ ನಮ್ಮ ಅಪರಿಪೂರ್ಣತೆಯಿಂದಾಗಿ ಅವು ನಮ್ಮ ಐಕ್ಯವನ್ನು ಹಾಳುಗೆಡವಬಲ್ಲವು.—ರೋಮ. 12:2.

ಹೆಮ್ಮೆ ಮತ್ತು ಹೊಟ್ಟೆಕಿಚ್ಚು

11. ಹೆಮ್ಮೆಯು ಜನರ ಮಧ್ಯೆ ವಿಭಜನೆಯನ್ನು ಉಂಟುಮಾಡುತ್ತದೆ ಏಕೆ? ಹೆಮ್ಮೆಯನ್ನು ಜಯಿಸಲು ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ?

11 ಹೆಮ್ಮೆಯು ಜನರ ಮಧ್ಯೆ ವಿಭಜನೆಯನ್ನು ಉಂಟುಮಾಡುತ್ತದೆ. ಹೆಮ್ಮೆಯುಳ್ಳ ಒಬ್ಬ ವ್ಯಕ್ತಿ ತನ್ನನ್ನೇ ಶ್ರೇಷ್ಠನೆಂದು ಪರಿಗಣಿಸಲು ಇಷ್ಟಪಡುತ್ತಾನೆ ಹಾಗೂ ಜಂಭಕೊಚ್ಚಿಕೊಳ್ಳುವುದರಲ್ಲಿ ಸ್ವಾರ್ಥಪರ ಸಂತಸವನ್ನು ಪಡೆಯುತ್ತಾನೆ. ಆದರೆ ಇದು ಅನೇಕವೇಳೆ ನಮ್ಮ ಐಕ್ಯಕ್ಕೆ ತಡೆಯಾಗುತ್ತದೆ. ಒಬ್ಬನು ಜಂಭಕೊಚ್ಚಿಕೊಳ್ಳುವುದನ್ನು ಇತರರು ಕೇಳಿಸಿಕೊಂಡಾಗ ಅವರು ಹೊಟ್ಟೆಕಿಚ್ಚು ಪಡಬಹುದು. ಆದುದರಿಂದಲೇ “ಈ ರೀತಿಯ ಎಲ್ಲ ಹೆಮ್ಮೆಪಡುವಿಕೆಯು ಕೆಟ್ಟದ್ದೇ” ಎಂದು ಶಿಷ್ಯ ಯಾಕೋಬನು ನಮಗೆ ಮುಚ್ಚುಮರೆಯಿಲ್ಲದೆ ತಿಳಿಸಿದ್ದಾನೆ. (ಯಾಕೋ. 4:16) ಇತರರನ್ನು ಕೀಳಾಗಿ ನೋಡುವುದು ಪ್ರೀತಿರಹಿತ ಕ್ರಿಯೆ. ಆದರೆ ಯೆಹೋವನು ನಮ್ಮಂಥ ಪಾಪಿಗಳೊಂದಿಗೆ ವ್ಯವಹರಿಸುವ ಮೂಲಕ ದೀನತೆಯ ಮಾದರಿಯನ್ನು ತೋರಿಸಿದ್ದಾನೆ ಎಂಬುದನ್ನು ನಾವು ಗಮನದಲ್ಲಿಡಬೇಕು. ದಾವೀದನು ಬರೆದದ್ದು: “ನಿನ್ನ [ದೇವರ] ಕೃಪಾಕಟಾಕ್ಷವು [ದೀನತೆಯು, NW] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.” (2 ಸಮು. 22:36) ಯೋಗ್ಯ ವಿವೇಚನೆಯನ್ನು ಉಪಯೋಗಿಸಲು ಕಲಿಸುವ ಮೂಲಕ ದೇವರ ವಾಕ್ಯವು ಹೆಮ್ಮೆಯನ್ನು ಜಯಿಸಲು ನಮಗೆ ಸಹಾಯಮಾಡುತ್ತದೆ. ಪೌಲನು ಪ್ರೇರಿತನಾಗಿ ಹೀಗೆ ಕೇಳಿದನು: “ನಿನ್ನನ್ನು ಇನ್ನೊಬ್ಬನಿಗಿಂತ ಭಿನ್ನವಾಗಿ ಮಾಡುವಾತನು ಯಾರು? ಹೊಂದದೇ ಇರುವಂಥದ್ದು ನಿನ್ನಲ್ಲಿ ಯಾವುದಿದೆ? ನೀನು ಅದನ್ನು ಹೊಂದಿದ್ದೇ ಆದ ಮೇಲೆ ಹೊಂದದೇ ಇರುವವನಂತೆ ಏಕೆ ಹೆಮ್ಮೆಪಡುತ್ತೀ?”—1 ಕೊರಿಂ. 4:7.

12, 13. (ಎ) ಹೊಟ್ಟೆಕಿಚ್ಚು ನಮ್ಮಲ್ಲಿ ಸುಲಭವಾಗಿ ಹುಟ್ಟುತ್ತದೆ ಏಕೆ? (ಬಿ) ಇತರರನ್ನು ಯೆಹೋವನು ವೀಕ್ಷಿಸುವ ರೀತಿಯಲ್ಲೇ ವೀಕ್ಷಿಸುವುದರ ಫಲಿತಾಂಶವೇನು?

12 ಐಕ್ಯಕ್ಕೆ ಇನ್ನೊಂದು ಸಾಮಾನ್ಯ ತಡೆ ಹೊಟ್ಟೆಕಿಚ್ಚು. ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿರುವುದರಿಂದ ನಮ್ಮೆಲ್ಲರಲ್ಲಿ “ಅಸೂಯೆಪಡುವ ಪ್ರವೃತ್ತಿ” ಇದೆ. ಅನೇಕ ವರ್ಷಗಳಿಂದ ಕ್ರೈಸ್ತರಾಗಿದ್ದವರು ಸಹ ಕೆಲವೊಮ್ಮೆ ಇತರರ ಸನ್ನಿವೇಶ, ಸ್ವತ್ತು, ಸುಯೋಗ ಅಥವಾ ಸಾಮರ್ಥ್ಯಗಳನ್ನು ನೋಡಿ ಹೊಟ್ಟೆಕಿಚ್ಚುಪಟ್ಟಾರು. (ಯಾಕೋ. 4:5) ಉದಾಹರಣೆಗೆ, ಒಬ್ಬ ಕುಟುಂಬಸ್ಥ ಸಹೋದರನು ಪೂರ್ಣ ಸಮಯ ಸೇವೆಯಲ್ಲಿರುವ ಸಹೋದರನ ಸುಯೋಗಗಳನ್ನು ನೋಡಿ ಹೊಟ್ಟೆಕಿಚ್ಚು ಪಡಬಹುದು, ಆದರೆ ತನಗೆ ಮಕ್ಕಳಿರುವುದನ್ನು ನೋಡಿ ಆ ಸಹೋದರನಿಗೂ ಸ್ವಲ್ಪ ಹೊಟ್ಟೆಕಿಚ್ಚಾಗಬಹುದೆಂದು ಅವನು ಅರ್ಥಮಾಡಿಕೊಳ್ಳಲಿಕ್ಕಿಲ್ಲ. ಹಾಗಾದರೆ ಇಂಥ ಹೊಟ್ಟೆಕಿಚ್ಚು ನಮ್ಮ ಐಕ್ಯವನ್ನು ಭಂಗಪಡಿಸದಂತೆ ನಾವು ಹೇಗೆ ತಡೆಗಟ್ಟಬಲ್ಲೆವು?

13 ಬೈಬಲ್‌ ಕ್ರೈಸ್ತ ಸಭೆಯ ಅಭಿಷಿಕ್ತ ಸದಸ್ಯರನ್ನು ಮಾನವ ದೇಹದ ಅಂಗಗಳಿಗೆ ಹೋಲಿಸುತ್ತದೆ. ಇದನ್ನು ಮನಸ್ಸಿನಲ್ಲಿಡುವುದು ಹೊಟ್ಟೆಕಿಚ್ಚನ್ನು ಬಿಟ್ಟುಬಿಡಲು ಸಹಾಯಮಾಡುವುದು. (1 ಕೊರಿಂಥ 12:14-18 ಓದಿ.) ಉದಾಹರಣೆಗೆ ನಮ್ಮ ಕಣ್ಣು ನಮ್ಮ ಹೃದಯಕ್ಕಿಂತ ಹೆಚ್ಚು ಎದ್ದುಕಾಣುವ ದೃಶ್ಯ ಅಂಗ. ಆದರೂ ಆ ಎರಡೂ ಅಂಗಗಳು ನಮಗೆ ಅತ್ಯಮೂಲ್ಯವಾಗಿವೆ ಅಲ್ಲವೆ? ಅದೇ ರೀತಿ, ಸಭೆಯ ಸದಸ್ಯರಲ್ಲಿ ಕೆಲವರು ಕೆಲವೊಮ್ಮೆ ಇತರರಿಗಿಂತ ಪ್ರಮುಖರಾಗಿ ಎದ್ದುಕಾಣಬಹುದಾದರೂ ಯೆಹೋವನಿಗೆ ಎಲ್ಲ ಸದಸ್ಯರೂ ಅಮೂಲ್ಯರು. ಆದುದರಿಂದ ನಮ್ಮ ಸಹೋದರರನ್ನು ಯೆಹೋವನು ವೀಕ್ಷಿಸುವ ರೀತಿಯಲ್ಲೇ ವೀಕ್ಷಿಸೋಣ. ಬೇರೆಯವರನ್ನು ನೋಡಿ ಹೊಟ್ಟೆಕಿಚ್ಚುಪಡುವ ಬದಲು ಅವರ ಕಡೆಗೆ ಕಾಳಜಿ ಹಾಗೂ ವೈಯಕ್ತಿಕ ಆಸಕ್ತಿಯನ್ನು ತೋರಿಸೋಣ. ಹಾಗೆ ಮಾಡುವ ಮೂಲಕ ನಿಜ ಕ್ರೈಸ್ತರು ಹಾಗೂ ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿರುವವರ ಮಧ್ಯೆ ಇರುವ ವ್ಯತ್ಯಾಸವನ್ನು ನಾವು ತೋರಿಸಿಕೊಡುತ್ತೇವೆ.

ಅನೈಕ್ಯ—ಕ್ರೈಸ್ತಪ್ರಪಂಚದ ಗುರುತು

14, 15. ಧರ್ಮಭ್ರಷ್ಟ ಕ್ರೈಸ್ತತ್ವವು ಹೇಗೆ ವಿಭಜನೆಗೊಂಡಿತು?

14 ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿರುವ ಕಲಹ ಕಚ್ಚಾಟಗಳಿಗೆ ಪ್ರತಿವಿರುದ್ಧವಾಗಿ ನಿಜ ಕ್ರೈಸ್ತರಲ್ಲಾದರೋ ನಿಜ ಐಕ್ಯವು ನೆಲೆಸಿದೆ. ನಾಲ್ಕನೇ ಶತಮಾನದಷ್ಟಕ್ಕೆ ಧರ್ಮಭ್ರಷ್ಟ ಕ್ರೈಸ್ತತ್ವವು ಎಷ್ಟು ವ್ಯಾಪಿಸಿತ್ತೆಂದರೆ ರೋಮಿನ ವಿಧರ್ಮಿ ಸಾಮ್ರಾಟನೊಬ್ಬನು ಅದನ್ನು ನಂಬಿ ತನ್ನ ಅಧಿಕಾರದ ಕೆಳಗೆ ತೆಗೆದುಕೊಂಡು ಕ್ರೈಸ್ತಪ್ರಪಂಚದ ಬೆಳವಣಿಗೆಗೆ ನೆರವಾದನು. ಅನಂತರ ಉಂಟಾದ ಭಿನ್ನ ಭಿನ್ನ ಪಂಗಡಗಳಿಂದಾಗಿ ಅನೇಕ ರಾಜ್ಯಗಳು ತಮ್ಮನ್ನು ರೋಮಿನಿಂದ ಬೇರ್ಪಡಿಸಿಕೊಂಡು ತಮ್ಮದೇ ಆದ ರಾಷ್ಟ್ರೀಯ ಚರ್ಚುಗಳನ್ನು ಸ್ಥಾಪಿಸಿಕೊಂಡವು.

15 ಶತಮಾನಗಳಾದ್ಯಂತ ಅವುಗಳಲ್ಲಿ ಅನೇಕ ರಾಜ್ಯಗಳು ಒಂದಕ್ಕೊಂದರ ವಿರುದ್ಧ ಯುದ್ಧಮಾಡಿವೆ. 17ನೇ ಮತ್ತು 18ನೇ ಶತಮಾನಗಳ ಸಮಯದಲ್ಲಿ ಬ್ರಿಟನ್‌, ಫ್ರಾನ್ಸ್‌ ಮತ್ತು ಅಮೆರಿಕದ ಜನರು ದೇಶಭಕ್ತಿಗೆ ಒತ್ತಾಸೆ ನೀಡಿದರು. ಹೀಗೆ ರಾಷ್ಟ್ರೀಯತೆಯನ್ನು ಧರ್ಮವಾಗಿ ಪರಿಗಣಿಸಲಾಯಿತು. 19ನೇ ಮತ್ತು 20ನೇ ಶತಮಾನಗಳಲ್ಲಿ ರಾಷ್ಟ್ರೀಯತೆಯು ಮಾನವಕುಲದ ಹೆಚ್ಚಿನವರ ಮನಸ್ಸಿನ ಮೇಲೆ ಪ್ರಬಲವಾದ ಪ್ರಭಾವ ಬೀರಲು ಪ್ರಾರಂಭಿಸಿತು. ಕಾಲಕ್ರಮೇಣ ಕ್ರೈಸ್ತಪ್ರಪಂಚದ ಚರ್ಚುಗಳು ಅನೇಕ ಪಂಗಡಗಳಾಗಿ ವಿಭಜನೆಗೊಂಡವು. ಮತ್ತು ಈ ಪಂಗಡಗಳಲ್ಲಿ ಹೆಚ್ಚಿನವು ರಾಷ್ಟ್ರೀಯತೆಗೆ ಅವಕಾಶ ಕೊಟ್ಟವು. ಮಾತ್ರವಲ್ಲ, ಚರ್ಚ್‌ನಿಷ್ಠರು ಬೇರೆ ದೇಶದಲ್ಲಿರುವ ತಮ್ಮ ಜೊತೆ ವಿಶ್ವಾಸಿಗಳ ವಿರುದ್ಧ ಯುದ್ಧಮಾಡಲೂ ಮುಂದೊತ್ತಿದ್ದಾರೆ. ಇಂದು ಕ್ರೈಸ್ತಪ್ರಪಂಚವು ಪಂಥೀಯ ನಂಬಿಕೆಗಳಿಂದಾಗಿ ಹಾಗೂ ರಾಷ್ಟ್ರೀಯತೆಯಿಂದಾಗಿ ವಿಭಜನೆಗೊಂಡಿದೆ.

16. ಕ್ರೈಸ್ತಪ್ರಪಂಚದವರನ್ನು ಯಾವ ವಿಷಯಗಳು ವಿಭಜಿಸುತ್ತವೆ?

16 ಇಪ್ಪತ್ತನೇ ಶತಮಾನದಲ್ಲಿ ಕ್ರೈಸ್ತಪ್ರಪಂಚದ ನೂರಾರು ಪಂಗಡಗಳಲ್ಲಿ ಕೆಲವು ಪಂಗಡಗಳು ಐಕ್ಯವನ್ನು ಸಾಧಿಸುವ ಪ್ರಯತ್ನದಲ್ಲಿ ವಿಶ್ವಕ್ರೈಸ್ತ ಏಕತೆಯ ಚಳವಳಿಯನ್ನು ಆರಂಭಿಸಿದವು. ಆದರೆ ಅನೇಕ ದಶಕಗಳ ಪ್ರಯತ್ನಗಳ ತರುವಾಯವೂ ಕೇವಲ ಕೆಲವೇ ಚರ್ಚುಗಳು ಮಾತ್ರ ಒಂದಾಗಿವೆ. ಆದರೂ ಚರ್ಚಿನ ಸದಸ್ಯರಿಗೆ ವಿಕಾಸವಾದ, ಗರ್ಭಪಾತ, ಸಲಿಂಗಿಕಾಮ ಮತ್ತು ಸ್ತ್ರೀಯರ ಪಾದ್ರಿದೀಕ್ಷೆ ಮುಂತಾದ ವಿಷಯಗಳ ಕುರಿತು ಇನ್ನೂ ಭಿನ್ನಾಭಿಪ್ರಾಯಗಳಿವೆ. ಕ್ರೈಸ್ತಪ್ರಪಂಚದ ಕೆಲವು ಭಾಗಗಳಲ್ಲಾದರೋ, ಈ ಮುಂಚೆ ಭಿನ್ನಾಭಿಪ್ರಾಯಗಳಿದ್ದ ಬೋಧನೆಗಳಿಗೆ ಹೆಚ್ಚು ಮಹತ್ವ ಕೊಡದೆ ಚರ್ಚಿನ ಮುಖಂಡರು ವಿವಿಧ ಪಂಗಡಗಳ ಜನರನ್ನು ಒಂದುಗೂಡಿಸಲು ಪ್ರಯತ್ನಿಸುತ್ತಾರೆ. ಆದರೆ ಹೀಗೆ ಬೋಧನೆಗಳ ಮಹತ್ವವನ್ನು ಕಡಿಮೆಗೊಳಿಸುವುದು ಜನರ ನಂಬಿಕೆಯನ್ನು ಶಿಥಿಲಗೊಳಿಸುತ್ತದೆ ಮಾತ್ರವಲ್ಲ ವಿಭಜಿತಗೊಂಡ ಕ್ರೈಸ್ತಪ್ರಪಂಚವನ್ನು ಐಕ್ಯಗೊಳಿಸಲಾರದು.

ಸತ್ಯಾರಾಧನೆಯು ರಾಷ್ಟ್ರೀಯತೆಯಿಂದ ಪ್ರಭಾವಿಸಲ್ಪಡದು

17. “ಅಂತ್ಯಕಾಲದಲ್ಲಿ” ಸತ್ಯಾರಾಧನೆಯು ಜನರನ್ನು ಐಕ್ಯಗೊಳಿಸುವುದೆಂಬುದನ್ನು ಹೇಗೆ ಮುಂತಿಳಿಸಲಾಗಿತ್ತು?

17 ಇಂದು ಮಾನವಕುಲವು ಹಿಂದೆಂದಿಗಿಂತಲೂ ಹೆಚ್ಚು ಭೀಕರವಾಗಿ ವಿಭಜನೆಗೊಂಡಿರುವುದಾದರೂ ಸತ್ಯಾರಾಧಕರು ಮಾತ್ರ ಐಕ್ಯರಾಗಿಯೇ ಉಳಿದಿದ್ದಾರೆ. ದೇವರ ಪ್ರವಾದಿ ಮೀಕನು ಮುಂತಿಳಿಸಿದ್ದು: “ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು.” (ಮೀಕ 2:12) ಎಲ್ಲ ರೀತಿಯ ಆರಾಧನೆಗಳು, ಅವು ಸುಳ್ಳು ದೇವರಗಳ ಆರಾಧನೆಯಾಗಿರಲಿ ರಾಷ್ಟ್ರದ ಆರಾಧನೆಯಾಗಿರಲಿ ಅವೆಲ್ಲವುಗಳಿಗಿಂತ ಸತ್ಯಾರಾಧನೆಯು ಉನ್ನತಕ್ಕೇರಿಸಲ್ಪಡುವುದು ಎಂದು ಮೀಕನು ಮುಂತಿಳಿಸಿದನು. ಅವನು ಬರೆದದ್ದು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು. ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ . . . ನಡೆಯುವೆವು.”—ಮೀಕ 4:1, 5.

18. ಸತ್ಯಾರಾಧನೆಯು ಯಾವ ಬದಲಾವಣೆಗಳನ್ನು ಮಾಡಲು ನಮಗೆ ಸಹಾಯಮಾಡಿದೆ?

18 ಈ ಮೊದಲು ವೈರಿಗಳಾಗಿದ್ದವರನ್ನು ಸತ್ಯಾರಾಧನೆಯು ಹೇಗೆ ಐಕ್ಯಗೊಳಿಸುವುದು ಎಂಬುದನ್ನೂ ಮೀಕನು ವರ್ಣಿಸಿದನು. “ಹೊರಟುಬಂದ ಬಹು ದೇಶಗಳವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. . . . ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ” ಎಂದವನು ಮುಂತಿಳಿಸಿದನು. (ಮೀಕ 4:2, 3) ಯೆಹೋವ ದೇವರನ್ನು ಆರಾಧಿಸಲಿಕ್ಕಾಗಿ ಮಾನವನಿರ್ಮಿತ ದೇವದೇವತೆಗಳ ಅಥವಾ ರಾಷ್ಟ್ರಗಳ ಆರಾಧನೆಯನ್ನು ಯಾರು ವರ್ಜಿಸುತ್ತಾರೋ ಅವರು ಭೂವ್ಯಾಪಕ ಐಕ್ಯದಲ್ಲಿ ಆನಂದಿಸುತ್ತಾರೆ. ಪ್ರೀತಿಯ ಮಾರ್ಗಗಳಲ್ಲಿ ನಡೆಯಲು ದೇವರು ಅವರಿಗೆ ಬೋಧನೆ ಮಾಡುತ್ತಾನೆ.

19. ಲಕ್ಷಗಟ್ಟಲೆ ಜನರು ಸತ್ಯಾರಾಧನೆಯಲ್ಲಿ ಐಕ್ಯರಾಗುತ್ತಿರುವುದು ಯಾವುದರ ಸ್ಪಷ್ಟ ಪುರಾವೆ?

19 ಇಂದು ಸತ್ಯಾರಾಧಕರಲ್ಲಿರುವ ಭೂವ್ಯಾಪಕ ಐಕ್ಯವು ಅನನ್ಯವಾದದ್ದು ಮತ್ತು ಇದು ಯೆಹೋವನು ಪವಿತ್ರಾತ್ಮದ ಮೂಲಕ ತನ್ನ ಜನರನ್ನು ಮಾರ್ಗದರ್ಶಿಸುತ್ತಿದ್ದಾನೆ ಎಂಬುದಕ್ಕೆ ಸ್ಪಷ್ಟ ಪುರಾವೆ. ಹೀಗೆ ಸಕಲ ಜನಾಂಗಗಳ ಜನರು ಐಕ್ಯರಾಗುತ್ತಿರುವುದನ್ನು ಮಾನವ ಇತಿಹಾಸವು ಹಿಂದೆಂದೂ ಕಂಡಿಲ್ಲ. ಇದು ಪ್ರಕಟನೆ 7:9, 14ರಲ್ಲಿ ಸೂಚಿಸಲ್ಪಟ್ಟ ವಿಷಯದ ಗಮನಾರ್ಹ ನೆರವೇರಿಕೆ ಮಾತ್ರವಲ್ಲ ಸದ್ಯದ ದುಷ್ಟ ಲೋಕವನ್ನು ನಾಶಮಾಡಲಿರುವ “ಗಾಳಿಗಳನ್ನು” ದೇವದೂತರು ಅತಿ ಬೇಗನೆ ಬಿಟ್ಟುಬಿಡಲಿದ್ದಾರೆ ಎಂಬುದಕ್ಕೂ ಸೂಚನೆ. (ಪ್ರಕಟನೆ 7:1-4, 9, 10, 14 ಓದಿ.) ಹಾಗಾದರೆ ಈ ಲೋಕವ್ಯಾಪಕ ಸಹೋದರತ್ವದಲ್ಲಿ ನಾವು ಐಕ್ಯರಾಗಿರುವುದು ಒಂದು ಸುಯೋಗವಲ್ಲವೆ? ನಮ್ಮಲ್ಲಿ ಪ್ರತಿಯೊಬ್ಬರು ಈ ಐಕ್ಯಕ್ಕೆ ಹೇಗೆ ಹೆಚ್ಚನ್ನು ಕೂಡಿಸಬಲ್ಲೆವು? ಇದನ್ನೇ ನಾವು ಮುಂದಿನ ಲೇಖನದಲ್ಲಿ ಚರ್ಚಿಸಲಿರುವೆವು.

ನಿಮ್ಮ ಉತ್ತರವೇನು?

• ಸತ್ಯಾರಾಧನೆಯು ಜನರನ್ನು ಹೇಗೆ ಐಕ್ಯಗೊಳಿಸುತ್ತದೆ?

• ಹೊಟ್ಟೆಕಿಚ್ಚು ನಮ್ಮ ಐಕ್ಯವನ್ನು ಭಂಗಪಡಿಸದಂತೆ ನಾವು ಹೇಗೆ ತಡೆಗಟ್ಟಬಲ್ಲೆವು?

• ಸತ್ಯಾರಾಧಕರನ್ನು ರಾಷ್ಟ್ರೀಯತೆಯು ಏಕೆ ವಿಭಜಿತಗೊಳಿಸುವುದಿಲ್ಲ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಪ್ರಥಮ ಶತಮಾನದ ಕ್ರೈಸ್ತರು ಅನೇಕ ಹಿನ್ನೆಲೆಗಳ ಜನರಾಗಿದ್ದರು

[ಪುಟ 15ರಲ್ಲಿರುವ ಚಿತ್ರಗಳು]

ರಾಜ್ಯ ಸಭಾಗೃಹ ನಿರ್ಮಾಣ ಯೋಜನೆಯಲ್ಲಿ ನೀವು ಭಾಗವಹಿಸುವುದು ಐಕ್ಯವನ್ನು ಹೆಚ್ಚಿಸುತ್ತದೆ ಹೇಗೆ?