ದೇವರನ್ನು ಮಹಿಮೆಪಡಿಸುವ ಕ್ರೈಸ್ತ ಏಕತೆ
ದೇವರನ್ನು ಮಹಿಮೆಪಡಿಸುವ ಕ್ರೈಸ್ತ ಏಕತೆ
“ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುವವರಾಗಿರಿ.”—ಎಫೆ. 4:3.
1. ಎಫೆಸದಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರು ದೇವರಿಗೆ ಹೇಗೆ ಮಹಿಮೆಯನ್ನು ತಂದರು?
ಪು ರಾತನ ಎಫೆಸದಲ್ಲಿದ್ದ ಕ್ರೈಸ್ತ ಸಭೆಯ ಐಕ್ಯವು ಸತ್ಯದೇವರಾದ ಯೆಹೋವನಿಗೆ ಮಹಿಮೆಯನ್ನು ತಂದಿತ್ತು. ಆ ಸಮೃದ್ಧ ವ್ಯಾಪಾರ ಕೇಂದ್ರವಾಗಿದ್ದ ಎಫೆಸದಲ್ಲಿದ್ದ ಕೆಲವು ಕ್ರೈಸ್ತ ಸಹೋದರರು ದಾಸರನ್ನು ಕೆಲಸಕ್ಕಿಟ್ಟುಕೊಂಡಿದ್ದ ಶ್ರೀಮಂತ ಯಜಮಾನರಾಗಿದ್ದರು. ಇನ್ನು ಕೆಲವು ಸಹೋದರರು ಸ್ವತಃ ದಾಸರಾಗಿದ್ದು ಪ್ರಾಯಶಃ ಕಡು ಬಡವರಾಗಿದ್ದರು. (ಎಫೆ. 6:5, 9) ಇನ್ನು ಕೆಲವರು ಅಪೊಸ್ತಲ ಪೌಲನು ಸಭಾಮಂದಿರದಲ್ಲಿ ಮೂರು ತಿಂಗಳ ಕಾಲ ಭಾಷಣ ನೀಡಿದಾಗ ಸತ್ಯ ಕಲಿತ ಯೆಹೂದ್ಯರು. ಇನ್ನಿತರರು ಈ ಮುಂಚೆ ಅರ್ತೆಮೀದೇವಿಯನ್ನು ಆರಾಧಿಸಿದವರೂ ಮಾಟಮಂತ್ರಗಳನ್ನು ಮಾಡುತ್ತಿದ್ದವರೂ ಆಗಿದ್ದರು. (ಅ. ಕಾ. 19:8, 19, 26) ಹೀಗೆ ನಿಜ ಕ್ರೈಸ್ತತ್ವವು ಬೇರೆ ಬೇರೆ ಹಿನ್ನೆಲೆಯ ಜನರನ್ನು ಒಟ್ಟಾಗಿ ಸೇರಿಸಿತ್ತು. ಆ ಸಭೆಯಲ್ಲಿದ್ದ ಐಕ್ಯವು ಯೆಹೋವನಿಗೆ ಮಹಿಮೆ ತಂದಿತ್ತು ಎಂಬುದನ್ನು ಅಪೊಸ್ತಲ ಪೌಲನು ತಿಳಿದಿದ್ದನು. ಆದುದರಿಂದಲೇ ಅವನು, ‘ಸಭೆಯಿಂದ ದೇವರಿಗೆ ಮಹಿಮೆಯು ಉಂಟಾಗಲಿ’ ಎಂದು ಬರೆದನು.—ಎಫೆ. 3:21.
2. ಎಫೆಸದ ಕ್ರೈಸ್ತರ ಐಕ್ಯವನ್ನು ಯಾವುದು ಅಪಾಯಕ್ಕೊಡ್ಡಿತು?
2 ಆದರೆ ಎಫೆಸದಲ್ಲಿದ್ದ ಆ ಆಶೀರ್ವದಿತ ಐಕ್ಯವು ಅಪಾಯಕ್ಕೊಡ್ಡಲ್ಪಟ್ಟಿತ್ತು. ಆದ್ದರಿಂದ ಪೌಲನು ಸಭಾಹಿರಿಯರನ್ನು ಎಚ್ಚರಿಸುತ್ತಾ, “ನಿಮ್ಮೊಳಗಿಂದಲೇ ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು” ಎಂದು ಹೇಳಿದನು. (ಅ. ಕಾ. 20:30) ಅಷ್ಟು ಮಾತ್ರವಲ್ಲದೆ, ‘ಅವಿಧೇಯತೆಯ ಪುತ್ರರಲ್ಲಿ ಕಾರ್ಯನಡಿಸುತ್ತದೆ’ ಎಂದು ಪೌಲನು ಎಚ್ಚರಿಸಿದ್ದ ಅನೈಕ್ಯದ ಪ್ರವೃತ್ತಿಯನ್ನು ಕೆಲವು ಸಹೋದರರು ಇನ್ನೂ ಪೂರ್ತಿಯಾಗಿ ಬಿಟ್ಟಿರಲಿಲ್ಲ.—ಎಫೆ. 2:2; 4:22.
ಏಕತೆಗೆ ಮಹತ್ವಕೊಡುವ ಒಂದು ಪತ್ರ
3, 4. ಪೌಲನು ಎಫೆಸದವರಿಗೆ ಬರೆದ ಪತ್ರವು ಏಕತೆಯನ್ನು ಹೇಗೆ ಎತ್ತಿಹೇಳುತ್ತದೆ?
3 ಕ್ರೈಸ್ತರು ಪರಸ್ಪರ ಸೌಹಾರ್ದತೆಯಿಂದ ಸಹಕರಿಸುತ್ತಾ ಮುಂದುವರಿಯಬೇಕಾದರೆ ಅವರಲ್ಲಿ ಪ್ರತಿಯೊಬ್ಬರು ಐಕ್ಯವನ್ನು ಹೆಚ್ಚಿಸಲು ಶ್ರದ್ಧಾಪೂರ್ವಕ ಪ್ರಯತ್ನ ಮಾಡಲೇಬೇಕು ಎಂಬುದನ್ನು ಪೌಲನು ಅರಿತಿದ್ದನು. ಏಕತೆಯು ಮುಖ್ಯ ವಿಷಯವಾಗಿದ್ದ ಒಂದು ಪತ್ರವನ್ನು ಎಫೆಸದವರಿಗೆ ಬರೆಯುವಂತೆ ದೇವರು ಪೌಲನನ್ನು ಪ್ರೇರಿಸಿದನು. ಉದಾಹರಣೆಗೆ, ‘ಸಮಸ್ತವನ್ನು ಕ್ರಿಸ್ತನಲ್ಲಿ ಪುನಃ ಒಂದುಗೂಡಿಸುವ’ ದೇವರ ಉದ್ದೇಶದ ಕುರಿತು ಪೌಲನು ಬರೆದನು. (ಎಫೆ. 1:10) ಮಾತ್ರವಲ್ಲ, ಅವನು ಅಭಿಷಿಕ್ತ ಕ್ರೈಸ್ತರನ್ನು ಕಟ್ಟಡವಾಗಿ ಕಟ್ಟಲ್ಪಡುವ ಬೇರೆ ಬೇರೆ ಕಲ್ಲುಗಳಿಗೂ ಹೋಲಿಸಿದನು. ಆ “ಇಡೀ ಕಟ್ಟಡವು . . . ಐಕ್ಯದಲ್ಲಿ ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ಯೆಹೋವನಿಗಾಗಿರುವ ಒಂದು ಪವಿತ್ರ ಆಲಯವಾಗಿ ವೃದ್ಧಿಯಾಗುತ್ತಾ ಇದೆ” ಎಂದನು ಅವನು. (ಎಫೆ. 2:20, 21) ಅದಲ್ಲದೆ ಪೌಲನು ಯೆಹೂದಿ ಮತ್ತು ಅನ್ಯ ಕ್ರೈಸ್ತರ ಮಧ್ಯೆಯಿರುವ ಏಕತೆಯನ್ನು ಎತ್ತಿಹೇಳಿದನು. ಮಾತ್ರವಲ್ಲ ಅವರೆಲ್ಲರೂ ದೇವರಿಂದ ಸೃಷ್ಟಿಸಲ್ಪಟ್ಟವರೆಂಬುದನ್ನೂ ನೆನಪಿಸಿದನು. ಅವನು ಯೆಹೋವನನ್ನು “ತಂದೆ” ಎಂದು ಸಂಬೋಧಿಸಿ ‘ಆತನಿಂದಲೇ ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಕುಟುಂಬವು ತನ್ನ ಹೆಸರನ್ನು ಹೊಂದಿದೆ’ ಎಂದನವನು.—ಎಫೆ. 3:5, 6, 14, 15.
4 ಎಫೆಸ 4ನೇ ಅಧ್ಯಾಯವನ್ನು ನಾವು ಪರೀಕ್ಷಿಸುವಾಗ, ಐಕ್ಯರಾಗಿರಲು ಪ್ರಯತ್ನ ಅಗತ್ಯವೇಕೆ, ನಾವು ಐಕ್ಯರಾಗಿರಲು ಯೆಹೋವನು ಹೇಗೆ ಸಹಾಯಮಾಡುತ್ತಾನೆ ಹಾಗೂ ಐಕ್ಯರಾಗಿ ಉಳಿಯಲು ಯಾವ ಗುಣಗಳು ನಮಗೆ ಸಹಾಯಮಾಡುತ್ತವೆ ಎಂಬುದನ್ನು ನೋಡಲಿದ್ದೇವೆ. ಈ ಲೇಖನದ ಅಧ್ಯಯನದಿಂದ ನೀವು ಇನ್ನೂ ಹೆಚ್ಚು ಪ್ರಯೋಜನ ಪಡೆಯಲಿಕ್ಕಾಗಿ ಆ ಇಡೀ ಅಧ್ಯಾಯವನ್ನು ಓದಿನೋಡಿರಿ.
ಏಕತೆಗೆ ಶ್ರದ್ಧಾಪೂರ್ವಕ ಪ್ರಯತ್ನವೇಕೆ ಬೇಕು?
5. ದೇವದೂತರು ಐಕ್ಯದಿಂದ ಸೇವೆ ಮಾಡಲು ಸಾಧ್ಯವಾಗಿರುವುದು ಹೇಗೆ? ನಮಗೆ ಏಕತೆಯು ಹೆಚ್ಚು ಕಷ್ಟಕರವೇಕೆ?
5 “ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುವವರಾಗಿರಿ” ಎಂದು ಪೌಲನು ಎಫೆಸದ ತನ್ನ ಸಹೋದರರನ್ನು ಕೇಳಿಕೊಂಡನು. (ಎಫೆ. 4:3) ಇದಕ್ಕಾಗಿ ಪ್ರಯತ್ನವನ್ನು ಮಾಡುವ ಅಗತ್ಯವೇಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ದೇವದೂತರ ವಿಷಯವನ್ನು ಪರಿಗಣಿಸಿರಿ. ಭೂಮಿಯಲ್ಲಿರುವ ಯಾವುದೇ ಎರಡು ಸಜೀವ ಜೀವಿಗಳು ಪೂರ್ಣವಾಗಿ ಒಂದೇ ರೀತಿಯಾಗಿ ಇರಲಾರವು. ಆದುದರಿಂದ ಯೆಹೋವನು ತನ್ನ ಲಕ್ಷೋಪಲಕ್ಷ ದೇವದೂತರಲ್ಲಿ ಪ್ರತಿಯೊಬ್ಬನಿಗೆ ಅಸದೃಶತೆಯನ್ನು ದಯಪಾಲಿಸಿದ್ದಾನೆ ಅಂದರೆ ಅವರನ್ನು ಭಿನ್ನ ಭಿನ್ನವಾಗಿ ಸೃಷ್ಟಿಸಿದ್ದಾನೆಂದು ನಾವು ನ್ಯಾಯವಾಗಿ ನಿರ್ಣಯಿಸಬಲ್ಲೆವು. (ದಾನಿ. 7:10) ಆದರೂ ಅವರು ಯೆಹೋವನ ಸೇವೆಯನ್ನು ಐಕ್ಯದಿಂದ ಮಾಡಬಲ್ಲರು. ಏಕೆಂದರೆ ಅವರೆಲ್ಲರೂ ಯೆಹೋವನಿಗೆ ಕಿವಿಗೊಡುತ್ತಾರೆ ಹಾಗೂ ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಮಾಡುತ್ತಾರೆ. (ಕೀರ್ತನೆ 103:20, 21 ಓದಿ.) ನಂಬಿಗಸ್ತ ದೇವದೂತರಲ್ಲಿ ವಿಭಿನ್ನ ಗುಣಲಕ್ಷಣಗಳಿರುವಾಗ, ಕ್ರೈಸ್ತರಲ್ಲಾದರೋ ವಿಭಿನ್ನ ಗುಣಲಕ್ಷಣಗಳೊಂದಿಗೆ ವಿಭಿನ್ನ ನ್ಯೂನತೆಗಳೂ ಇವೆ. ಇದು ಐಕ್ಯವನ್ನು ಇನ್ನಷ್ಟು ಕಷ್ಟಕರವನ್ನಾಗಿ ಮಾಡಬಲ್ಲದು.
6. ನಮಗಿಂತ ಭಿನ್ನವಾದ ನ್ಯೂನತೆಗಳುಳ್ಳ ಸಹೋದರರೊಂದಿಗೆ ಸಹಕರಿಸಲು ಯಾವ ಗುಣಗಳು ನಮಗೆ ಸಹಾಯಮಾಡುವವು?
6 ಅಪರಿಪೂರ್ಣ ಜನರು ಒಬ್ಬರೊಂದಿಗೊಬ್ಬರು ಸಹಕರಿಸಲು ಪ್ರಯತ್ನಿಸುವಾಗ ಸಮಸ್ಯೆಗಳು ಸುಲಭವಾಗಿ ಉದ್ಭವಿಸಬಲ್ಲವು. ಉದಾಹರಣೆಗೆ ಯೆಹೋವನ ಇಬ್ಬರು ಸೇವಕರು ಇದ್ದಾರೆಂದು ನೆನಸಿ. ಅವರಿಬ್ಬರೂ ತೀರ ಭಿನ್ನ ಭಿನ್ನ ಮನೋಭಾವದವರು. ಒಬ್ಬನು ಸೌಮ್ಯಭಾವದವನು, ಆದರೆ ಎಲ್ಲ ಕೆಲಸಕ್ಕೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇನ್ನೊಬ್ಬನು ಸಮಯಕ್ಕೆ ಸರಿಯಾಗಿ ಬರುತ್ತಾನೆ, ಆದರೆ ಮುಂಗೋಪಿ. ಆಗ ಏನಾಗುತ್ತದೆ? ಇಬ್ಬರೂ ಸಹೋದರರು ತಮ್ಮ ಸ್ವಂತ ತಪ್ಪನ್ನು ಅರ್ಥಮಾಡಿಕೊಳ್ಳುವ ಬದಲಿಗೆ ತಪ್ಪು ಇನ್ನೊಬ್ಬನದೇ ಎಂದು ಯೋಚಿಸಬಹುದು. ಎಫೆ. 4:1-3.
ಇಂಥ ಇಬ್ಬರು ಸಹೋದರರು ಯೆಹೋವನ ಸೇವೆಯನ್ನು ಹೇಗೆ ಸಾಮರಸ್ಯದಿಂದ ಮಾಡಬಲ್ಲರು? ಪೌಲನು ತನ್ನ ಮಾತುಗಳಲ್ಲಿ ಶಿಫಾರಸ್ಸು ಮಾಡಿರುವ ಗುಣಗಳು ಅವರಿಗೆ ಹೇಗೆ ಸಹಾಯಮಾಡಬಲ್ಲವೆಂದು ಗಮನಿಸಿ. ಅನಂತರ, ಆ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ನಾವು ಹೇಗೆ ಐಕ್ಯವನ್ನು ಹೆಚ್ಚಿಸಬಲ್ಲೆವು ಎಂಬುದರ ಕುರಿತು ಯೋಚಿಸಿರಿ. ಪೌಲನು ಬರೆದದ್ದು: “[ನೀವು] ಯೋಗ್ಯರಾಗಿ ನಡೆದುಕೊಳ್ಳುವಂತೆ . . . ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಪೂರ್ಣ ದೀನಮನಸ್ಸಿನಿಂದಲೂ ಸೌಮ್ಯಭಾವದಿಂದಲೂ ದೀರ್ಘ ಸಹನೆಯಿಂದಲೂ ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುವವರಾಗಿರಿ.”—7. ಇತರ ಅಪರಿಪೂರ್ಣ ಕ್ರೈಸ್ತರೊಂದಿಗೆ ಐಕ್ಯದಿಂದಿರಲು ಪ್ರಯತ್ನಿಸುವುದು ಅತ್ಯಗತ್ಯವೇಕೆ?
7 ಸತ್ಯಾರಾಧಕರು ಒಂದೇ ದೇಹದಂತಿದ್ದಾರೆ. ಆದುದರಿಂದ ಇತರ ಅಪರಿಪೂರ್ಣ ಜನರೊಂದಿಗೆ ಏಕತೆಯಿಂದ ದೇವರ ಸೇವೆ ಮಾಡಲು ಕಲಿಯುವುದು ಅತ್ಯಗತ್ಯ. “ಇರುವುದು ಒಂದೇ ದೇಹ ಮತ್ತು ಒಂದೇ ಪವಿತ್ರಾತ್ಮ. ನೀವು ಯಾವುದಕ್ಕಾಗಿ ಕರೆಯಲ್ಪಟ್ಟಿರೋ ಆ ನಿರೀಕ್ಷೆ ಒಂದೇ; ಒಬ್ಬನೇ ಕರ್ತ, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ ಮತ್ತು ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ.” (ಎಫೆ. 4:4-6) ಯೆಹೋವನು ಉಪಯೋಗಿಸುತ್ತಿರುವ ಸಹೋದರರ ಒಂದೇ ಬಳಗಕ್ಕೆ ಆತನ ಪವಿತ್ರಾತ್ಮ ಹಾಗೂ ಆಶೀರ್ವಾದವಿದೆ. ಸಭೆಯಲ್ಲಿರುವ ಯಾರಾದರೂ ನಮ್ಮ ಮನನೋಯಿಸಿದ್ದಲ್ಲಿ ಸಹ ನಾವು ಅದನ್ನು ಬಿಟ್ಟು ಬೇರೆಲ್ಲಿಗೂ ಹೋಗಸಾಧ್ಯವಿಲ್ಲ. ನಿತ್ಯಜೀವದ ಮಾತುಗಳು ನಮಗೆ ಬೇರೆಲ್ಲಿಯೂ ಸಿಕ್ಕಲಾರವು!—ಯೋಹಾ. 6:68.
‘ಮನುಷ್ಯರಲ್ಲಿ ದಾನಗಳು’ ಏಕತೆಯನ್ನು ವರ್ಧಿಸುತ್ತಾರೆ
8. ಸಭೆಯಲ್ಲಿ ಅನೈಕ್ಯವನ್ನು ತರುವ ಪ್ರಭಾವಗಳನ್ನು ಎದುರಿಸುವಂತೆ ಸಹಾಯಮಾಡಲು ಯೇಸು ಯಾರನ್ನು ಉಪಯೋಗಿಸುತ್ತಾನೆ?
8 ಸಭೆಯನ್ನು ಐಕ್ಯಗೊಳಿಸುವುದರಲ್ಲಿ ಸಹಾಯಮಾಡಲು ಯೇಸು “ಮನುಷ್ಯರಲ್ಲಿ ದಾನಗಳನ್ನು” ಒದಗಿಸಿದ್ದಾನೆ. ಇದು ಹೇಗೆಂದು ದೃಷ್ಟಾಂತಿಸಲು ಪೌಲನು ಪುರಾತನ ಕಾಲದ ಸೈನಿಕರಲ್ಲಿದ್ದ ಒಂದು ಸಾಮಾನ್ಯ ರೂಢಿಯನ್ನು ಬಳಸಿದನು. ಆ ಕಾಲದಲ್ಲಿ ವಿಜೇತ ಸೈನಿಕನು ಒಬ್ಬ ವಿದೇಶಿ ಸೆರೆಯಾಳನ್ನು ದಾಸನಾಗಿ ಮನೆಗೆ ತಂದು ಹೆಂಡತಿಗೆ ಮನೆಗೆಲಸದಲ್ಲಿ ಸಹಾಯಕ್ಕಾಗಿ ಇಟ್ಟುಕೊಳ್ಳಬಹುದಿತ್ತು. (ಕೀರ್ತ. 68:1, 12, 18) ಅದೇ ರೀತಿ ಯೇಸು ಲೋಕವನ್ನು ಜಯಿಸಿದ್ದರಿಂದ ಅವನಿಗೆ ಅನೇಕ ಸಿದ್ಧಮನಸ್ಸಿನ ದಾಸರು ಸಿಕ್ಕಿದ್ದಾರೆ. (ಎಫೆಸ 4:7, 8 ಓದಿ.) ಸಾಂಕೇತಿಕವಾಗಿ ಸೆರೆಹಿಡಿದ ಆ ಜನರನ್ನು ಯೇಸು ಹೇಗೆ ಉಪಯೋಗಿಸಿದನು? ‘ಅವನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಕುರುಬರು ಮತ್ತು ಬೋಧಕರನ್ನಾಗಿಯೂ ಕೊಟ್ಟನು. ಇವರು ಪವಿತ್ರ ಜನರನ್ನು ಸರಿಹೊಂದಿಸುವ ದೃಷ್ಟಿಯಿಂದಲೂ ಶುಶ್ರೂಷೆಯ ಕೆಲಸಕ್ಕಾಗಿಯೂ ಕ್ರಿಸ್ತನ ದೇಹವನ್ನು ಕಟ್ಟುವುದಕ್ಕಾಗಿಯೂ ಕೊಡಲ್ಪಟ್ಟರು. ನಾವೆಲ್ಲರೂ ನಂಬಿಕೆಯಲ್ಲಿ ಏಕತೆಯನ್ನು ಹೊಂದುವ ತನಕ ಇವರನ್ನು ಅನುಗ್ರಹಿಸಿದನು.’—ಎಫೆ. 4:11-13.
9. (ಎ) ಐಕ್ಯವನ್ನು ಕಾಪಾಡಿಕೊಳ್ಳಲು ‘ಮನುಷ್ಯರಲ್ಲಿ ದಾನಗಳು’ ಹೇಗೆ ಸಹಾಯಮಾಡುತ್ತಾರೆ? (ಬಿ) ಸಭೆಯ ಪ್ರತಿಯೊಬ್ಬ ಸದಸ್ಯನು ಸಭೆಯ ಏಕತೆಯನ್ನು ವರ್ಧಿಸಲು ಸಹಾಯಮಾಡಬೇಕು ಏಕೆ?
9 ಪ್ರೀತಿಭರಿತ ಕುರುಬರಂತಿರುವ ಈ ‘ಮನುಷ್ಯರಲ್ಲಿ ದಾನಗಳು’ ನಮ್ಮ ಐಕ್ಯವನ್ನು ಕಾಪಾಡಲು ಸಹಾಯಮಾಡುತ್ತಾರೆ. ಉದಾಹರಣೆಗೆ, ಇಬ್ಬರು ಸಹೋದರರು ಮೇಲುಗೈ ಪಡೆಯಲು ‘ಒಬ್ಬರೊಂದಿಗೊಬ್ಬರು ಸ್ಪರ್ಧೆಗಿಳಿಯುವುದನ್ನು’ ಒಬ್ಬ ಹಿರಿಯನು ಗಮನಿಸುವಲ್ಲಿ ಅವನು ಅವರನ್ನು “ಸೌಮ್ಯಭಾವದಿಂದ ಸರಿಹೊಂದಿಸಲು” ಬೇಕಾದ ಸಲಹೆಯನ್ನು ಖಾಸಗಿಯಾಗಿ ಕೊಡಬಲ್ಲನು. ಹೀಗೆ ಆ ಹಿರಿಯನು ಸಭೆಯ ಐಕ್ಯಕ್ಕೆ ದೊಡ್ಡ ಸಹಾಯವನ್ನು ಮಾಡುತ್ತಾನೆ. ಗಲಾ. 5:26–6:1) ಬೋಧಕರೋಪಾದಿ ಈ ‘ಮನುಷ್ಯರಲ್ಲಿ ದಾನಗಳು’ ಬೈಬಲ್ ಬೋಧನೆಗಳ ಮೇಲಾಧಾರಿತ ದೃಢ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯಮಾಡುತ್ತಾರೆ. ಹೀಗೆ ಅವರು ಐಕ್ಯವನ್ನು ವರ್ಧಿಸುತ್ತಾರೆ ಹಾಗೂ ನಾವು ಕ್ರೈಸ್ತ ಪ್ರೌಢತೆಗೆ ಬೆಳೆಯಲು ನೆರವಾಗುತ್ತಾರೆ. ಅವರು ಹೀಗೆ ಮಾಡುವುದು “ನಾವು ಇನ್ನು ಮುಂದೆ ಕೂಸುಗಳಾಗಿರಬಾರದು ಮತ್ತು ಅಲೆಗಳಿಂದ ಅತ್ತಿತ್ತ ಹೊಯ್ದಾಡಲ್ಪಟ್ಟು ಮನುಷ್ಯರ ಕುಯುಕ್ತಿಯಿಂದಲೂ ವಂಚನಾತ್ಮಕ ಕುತಂತ್ರದಿಂದಲೂ ಕೂಡಿದ ಬೋಧನೆಯ ಪ್ರತಿಯೊಂದು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು” ಎಂಬ ಕಾರಣದಿಂದಲೇ ಎಂದು ಪೌಲನು ಬರೆದನು. (ಎಫೆ. 4:13, 14) ನಮ್ಮ ಶರೀರದಲ್ಲಿನ ಪ್ರತಿಯೊಂದು ಅಂಗವು ಬೇರೆ ಅಂಗಗಳಿಗೆ ಬೇಕಾದದ್ದನ್ನು ಪಡೆದುಕೊಳ್ಳಲು ಸಹಾಯಮಾಡುತ್ತದೆ. ಈ ಮೂಲಕ ಅವುಗಳ ಬೆಳವಣಿಗೆಗೆ ನೆರವಾಗುತ್ತದೆ. ಅಂತೆಯೇ ಪ್ರತಿಯೊಬ್ಬ ಕ್ರೈಸ್ತನು ಸಹೋದರ ಬಳಗದ ಐಕ್ಯವನ್ನು ವರ್ಧಿಸಲು ಸಹಾಯಮಾಡಬೇಕು.—ಎಫೆಸ 4:15, 16 ಓದಿ.
(ಒಳ್ಳೇ ಮನೋಭಾವಗಳನ್ನು ಬೆಳೆಸಿಕೊಳ್ಳಿರಿ
10. ಅನೈತಿಕ ನಡತೆಯು ನಮ್ಮ ಐಕ್ಯವನ್ನು ಹೇಗೆ ಅಪಾಯಕ್ಕೊಡ್ಡಬಲ್ಲದು?
10 ಪ್ರೌಢ ಕ್ರೈಸ್ತರೋಪಾದಿ ಐಕ್ಯವನ್ನು ಸಾಧಿಸಲು ಕ್ರಿಯಾಶೀಲ ಪ್ರೀತಿಯು ಕೀಲಿಕೈ. ಇದನ್ನು ಪೌಲನು ಎಫೆಸದವರಿಗೆ ಬರೆದ ಪತ್ರದ ನಾಲ್ಕನೇ ಅಧ್ಯಾಯವು ತೋರಿಸುವುದನ್ನು ನೀವು ಗಮನಿಸಿದಿರೊ? ಪ್ರೀತಿಯಲ್ಲಿ ಏನೆಲ್ಲ ಒಳಗೂಡಿದೆ ಎಂಬುದನ್ನು ಆ ಅಧ್ಯಾಯವು ನಂತರದ ಭಾಗದಲ್ಲಿ ತೋರಿಸುತ್ತದೆ. ಉದಾಹರಣೆಗೆ, ಪ್ರೀತಿಯ ಮಾರ್ಗವನ್ನು ಅನುಸರಿಸುವುದು ಜಾರತ್ವ ಹಾಗೂ ಸಡಿಲು ನಡತೆಯನ್ನು ತಡೆಗಟ್ಟುತ್ತದೆ. ‘ಅನ್ಯಜನಾಂಗಗಳು ನಡೆಯುವಂತೆ ನಡೆಯಬಾರದು’ ಎಂದು ಪೌಲನು ತನ್ನ ಸಹೋದರರಿಗೆ ಸಲಹೆಕೊಟ್ಟನು. ಅನ್ಯಜನರಾದರೋ ‘ಸಂಪೂರ್ಣ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡವರಾಗಿ ತಮ್ಮನ್ನು ತಾವೇ ಸಡಿಲು ನಡತೆಗೆ ಒಪ್ಪಿಸಿಕೊಟ್ಟಿದ್ದಾರೆ.’ (ಎಫೆ. 4:17-19) ನಾವು ಜೀವಿಸುತ್ತಿರುವ ಈ ಅನೈತಿಕ ಲೋಕವು ನಮ್ಮ ಐಕ್ಯವನ್ನು ಅಪಾಯಕ್ಕೊಡ್ಡುತ್ತದೆ. ಜನರಿಗೆ ಜಾರತ್ವವು ತಮಾಷೆಯ ವಿಷಯವಾಗಿದೆ, ಅದರ ಕುರಿತು ಹಾಡುಗಳನ್ನು ಹಾಡುತ್ತಾರೆ, ಮನೋರಂಜನೆಗಾಗಿ ಅದನ್ನು ವೀಕ್ಷಿಸುತ್ತಾರೆ ಮತ್ತು ಗುಟ್ಟಾಗಿ ಅಥವಾ ಬಹಿರಂಗವಾಗಿ ಅದನ್ನು ನಡಿಸುತ್ತಾರೆ ಸಹ. ಆದರೆ ಚೆಲ್ಲಾಟವಾಡುವುದು ಅಂದರೆ ವಿವಾಹವಾಗುವ ಉದ್ದೇಶವಿಲ್ಲದೆ ಒಬ್ಬ ವ್ಯಕ್ತಿಯ ಕಡೆಗೆ ಲೈಂಗಿಕವಾಗಿ ಆಕರ್ಷಿತರಾಗಿದ್ದೀರಿ ಎಂಬಂತೆ ನಡೆದುಕೊಳ್ಳುವುದು ಸಹ ನಿಮ್ಮನ್ನು ಯೆಹೋವನಿಂದ ಹಾಗೂ ಸಭೆಯಿಂದ ದೂರಸರಿಸಬಲ್ಲದು. ಏಕೆ? ಏಕೆಂದರೆ ಇದು ತುಂಬ ಸುಲಭವಾಗಿ ಜಾರತ್ವಕ್ಕೆ ನಡೆಸಬಲ್ಲದು. ಮಾತ್ರವಲ್ಲ ವಿವಾಹಿತ ವ್ಯಕ್ತಿಯನ್ನು ವ್ಯಭಿಚಾರಕ್ಕೆ ನಡೆಸುವ ಚೆಲ್ಲಾಟವು ಮಕ್ಕಳನ್ನು ತಮ್ಮ ಹೆತ್ತವರಿಂದ ಹಾಗೂ ಮುಗ್ಧ ಸಂಗಾತಿಗಳನ್ನು ತಮ್ಮ ವಿವಾಹಜೊತೆಗಳಿಂದ ಕ್ರೂರವಾಗಿ ಬೇರ್ಪಡಿಸಬಲ್ಲದು. ಇದು ನಿಜವಾಗಿ ಒಡಕನ್ನುಂಟುಮಾಡುವ ವಿಷಯ! ಆದುದರಿಂದಲೇ ಪೌಲನು ಹೇಳಿದ್ದು: “ಕ್ರಿಸ್ತನು ಅಂಥವನೆಂದು ನೀವು ಕಲಿಯಲಿಲ್ಲ”!—ಎಫೆ. 4:20, 21.
11. ಕ್ರೈಸ್ತರು ಯಾವ ಬದಲಾವಣೆಯನ್ನು ಮಾಡುವಂತೆ ಬೈಬಲ್ ಉತ್ತೇಜಿಸುತ್ತದೆ?
11 ಒಡಕನ್ನು ಉಂಟುಮಾಡುವ ಯೋಚನೆಗಳನ್ನು ಬಿಟ್ಟುಬಿಟ್ಟು ಇತರರೊಂದಿಗೆ ಸಾಮರಸ್ಯದಿಂದ ಜೀವಿಸಲು ನೆರವಾಗುವ ಮನೋಭಾವಗಳನ್ನು ನಾವು ಬೆಳೆಸಿಕೊಳ್ಳಬೇಕೆಂದು ಪೌಲನು ಒತ್ತಿಹೇಳಿದನು. ಅವನಂದದ್ದು: “ನೀವು ನಿಮ್ಮ ಹಿಂದಿನ ನಡತೆಗೆ ಹೊಂದಿಕೆಯಲ್ಲಿರುವ ಮತ್ತು ಅದರ ಮೋಸಕರವಾದ ಇಚ್ಛೆಗಳಿಗನುಸಾರ ಭ್ರಷ್ಟಗೊಳಿಸಲ್ಪಡುತ್ತಿರುವ ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿಬಿಡಬೇಕು; ನೀವು ನಿಮ್ಮ ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ನವೀಕರಿಸಲ್ಪಡಬೇಕು ಮತ್ತು ದೇವರ ಚಿತ್ತಕ್ಕನುಸಾರ ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು.” (ಎಫೆ. 4:22-24) ನಾವು ‘ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ನವೀಕರಿಸಲ್ಪಡುವುದು’ ಹೇಗೆ? ಬೈಬಲಿನಿಂದ ಹಾಗೂ ಪ್ರೌಢ ಕ್ರೈಸ್ತರ ಒಳ್ಳೇ ಮಾದರಿಯಿಂದ ಕಲಿತ ವಿಷಯಗಳನ್ನು ಗಣ್ಯತಾಭಾವದಿಂದ ಧ್ಯಾನಿಸುವುದು ನಾವು ಕಲಿತದ್ದನ್ನು ಅನ್ವಯಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಇದು ‘ದೇವರ ಚಿತ್ತಕ್ಕನುಸಾರ ಸೃಷ್ಟಿಸಲ್ಪಟ್ಟ’ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ನಮಗೆ ಸಹಾಯಮಾಡುತ್ತದೆ.
ನಿಮ್ಮ ಮಾತುಗಳು ಹಿತಕರವಾಗಿರಲಿ
12. ಸತ್ಯವನ್ನಾಡುವುದು ಐಕ್ಯವನ್ನು ಹೆಚ್ಚಿಸುತ್ತದೆ ಹೇಗೆ? ಸತ್ಯವನ್ನಾಡುವುದು ಕೆಲವರಿಗೆ ಕಷ್ಟಕರವೇಕೆ?
12 ಕುಟುಂಬದಲ್ಲಿ ಅಥವಾ ಸಭೆಯಲ್ಲಿ ಒಬ್ಬರಿಗೊಬ್ಬರು ಸತ್ಯವನ್ನಾಡುವುದು ಅತಿ ಅವಶ್ಯ. ಯಥಾರ್ಥವಾದ, ಮುಕ್ತವಾದ ಹಾಗೂ ದಯಾಭರಿತ ಮಾತು ಜನರನ್ನು ಒಮ್ಮತಕ್ಕೆ, ಏಕತೆಗೆ ತರಬಲ್ಲದು. (ಯೋಹಾ. 15:15) ಆದರೆ ಒಬ್ಬನು ಮನೆಮಂದಿಯೊಂದಿಗೆ ಅಥವಾ ಸಭೆಯಲ್ಲಿ ತನ್ನ ಸಹೋದರನೊಂದಿಗೆ ಸುಳ್ಳಾಡುತ್ತಾನಾದರೆ? ಅದು ಸುಳ್ಳೆಂದು ತಿಳಿದುಬರುವಾಗ ಅವರ ಮಧ್ಯೆಯಿರುವ ಭರವಸೆಯ ಬಂಧವು ದುರ್ಬಲಗೊಳ್ಳುತ್ತದೆ. ಆದುದರಿಂದಲೇ ಪೌಲನು, “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನೊಂದಿಗೆ ಸತ್ಯವನ್ನೇ ಆಡಲಿ; ಏಕೆಂದರೆ ನಾವು ಒಬ್ಬರಿಗೊಬ್ಬರು ಸೇರಿರುವ ಅಂಗಗಳಾಗಿದ್ದೇವೆ” ಎಂದು ಹೇಳಿದ್ದೇಕೆಂದು ನೀವು ಅರ್ಥಮಾಡಿಕೊಳ್ಳಬಲ್ಲಿರಿ. (ಎಫೆ. 4:25) ಸುಳ್ಳುಹೇಳುವ ಚಾಳಿಯಿರುವ ಒಬ್ಬನು, ಪ್ರಾಯಶಃ ಚಿಕ್ಕಂದಿನಿಂದಲೇ ಅದನ್ನು ಆರಂಭಿಸಿದ್ದಲ್ಲಿ ಈಗ ಸತ್ಯವನ್ನಾಡಲು ತೊಡಗುವುದು ಅವನಿಗೆ ಕಷ್ಟವಾದೀತು. ಆದರೆ ಇಂಥ ಬದಲಾವಣೆಯನ್ನು ಮಾಡಲು ಅವನು ಶ್ರಮಪಡುವುದಾದರೆ ಅದನ್ನು ಯೆಹೋವನು ಗಣ್ಯಮಾಡುತ್ತಾನೆ ಮಾತ್ರವಲ್ಲ ಅವನಿಗೆ ಸಹಾಯವನ್ನೂ ಮಾಡುತ್ತಾನೆ.
13. ನಿಂದಾತ್ಮಕ ಮಾತುಗಳನ್ನು ನಮ್ಮಿಂದ ತೆಗೆದುಹಾಕಲು ಏನು ಮಾಡಬೇಕು?
13 ನಾವು ಮಾತಾಡುವ ರೀತಿಯ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನಿಡುವ ಮೂಲಕ ಯೆಹೋವನು ನಮಗೆ ಸಭೆಯಲ್ಲಿ ಹಾಗೂ ಕುಟುಂಬದಲ್ಲಿ ಗೌರವ ಮತ್ತು ಐಕ್ಯವನ್ನು ವರ್ಧಿಸುವುದು ಹೇಗೆಂದು ಕಲಿಸುತ್ತಾನೆ. “ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ; . . . ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ.” (ಎಫೆ. 4:29, 31) ಮನನೋಯಿಸುವ ಮಾತನ್ನಾಡುವುದನ್ನು ತಡೆಗಟ್ಟುವ ಒಂದು ವಿಧವು ಬೇರೆಯವರ ಕಡೆಗೆ ಹೆಚ್ಚು ಗೌರವಭರಿತ ಮನೋಭಾವವನ್ನು ಬೆಳೆಸಿಕೊಳ್ಳುವುದೇ ಆಗಿದೆ. ಉದಾಹರಣೆಗೆ, ತನ್ನ ಹೆಂಡತಿಗೆ ನಿಂದಾತ್ಮಕ ಮಾತುಗಳನ್ನಾಡುವ ಗಂಡನು ಆಕೆಯ ಕಡೆಗಿನ ತನ್ನ ಮನೋಭಾವವನ್ನು ಬದಲಾಯಿಸಲು ಶ್ರಮಿಸಬೇಕು. ಯೆಹೋವನು ಸ್ತ್ರೀಯರನ್ನು ಹೇಗೆ ಗೌರವಿಸುತ್ತಾನೆ ಎಂಬುದನ್ನು ತಿಳಿಯುವಾಗಲಂತೂ ಹೀಗೆ ಮಾಡುವುದು ಹೆಚ್ಚು ಪ್ರಾಮುಖ್ಯ. ಕ್ರಿಸ್ತನೊಂದಿಗೆ ರಾಜರಾಗಿ ಆಳುವ ಪ್ರತೀಕ್ಷೆಯನ್ನು ಕೊಡುತ್ತಾ ದೇವರು ಕೆಲವು ಸ್ತ್ರೀಯರನ್ನು ಸಹ ಪವಿತ್ರಾತ್ಮದಿಂದ ಅಭಿಷೇಕಿಸುತ್ತಾನೆ. (ಗಲಾ. 3:28; 1 ಪೇತ್ರ 3:7) ಹಾಗೆಯೇ, ಗಂಡನೊಂದಿಗೆ ಕೋಪದಿಂದ ಕಿರಿಚಿ ಮಾತಾಡುವ ಅಭ್ಯಾಸ ಹೆಂಡತಿಗೆ ಇರುವುದಾದರೆ ಅವಳೇನು ಮಾಡಬೇಕು? ಯೇಸುವು ದೂಷಿಸಲ್ಪಟ್ಟಾಗ ಪ್ರತಿಯಾಗಿ ದೂಷಿಸಲಿಲ್ಲ, ತನ್ನನ್ನು ತಡೆದುಹಿಡಿದನು ಎಂಬುದನ್ನು ಅರಿತವಳಾದ ಆಕೆ ತನ್ನ ಗುಣಗಳನ್ನು ಬದಲಾಯಿಸಿಕೊಳ್ಳಬೇಕು.—1 ಪೇತ್ರ 2:21-23.
14. ಕೋಪಕ್ರೋಧದಿಂದ ವರ್ತಿಸುವುದು ಅಪಾಯಕಾರಿಯೇಕೆ?
14 ನಿಂದಾತ್ಮಕ ಮಾತುಗಳಿಗೂ ಕೋಪವನ್ನು ಅಂಕೆಯಲ್ಲಿಡಲು ತಪ್ಪುವುದಕ್ಕೂ ಅತಿ ಹತ್ತಿರದ ಸಂಬಂಧವಿದೆ. ಏಕೆಂದರೆ ಅಂಥ ಕೋಪದಿಂದಲೇ ನಿಂದಾತ್ಮಕ ಮಾತುಗಳು ಹೊರಡುತ್ತವೆ. ಇದು ಸಹ ಆಪ್ತ ಸಂಬಂಧದಲ್ಲಿರುವವರನ್ನು ಬೇರ್ಪಡಿಸಬಲ್ಲದು. ಕೋಪವು ಬೆಂಕಿ ಇದ್ದಂತೆ. ಇದು ಬೇಗನೆ ಅಂಕೆಮೀರಿ ಹೋಗಿ ಅಪಾಯವನ್ನು ತಂದೊಡ್ಡಬಹುದು. (ಜ್ಞಾನೋ. 29:22) ಕೋಪಮಾಡಲು ಒಬ್ಬನಿಗೆ ಸಕಾರಣವಿದ್ದಾಗಲೂ ಅವನು ಜಾಗ್ರತೆಯಿಂದ ತನ್ನ ಕೋಪವನ್ನು ಅಂಕೆಯಲ್ಲಿಡಬೇಕು. ಇಲ್ಲದಿದ್ದರೆ ಅದು ಇತರರೊಂದಿಗಿನ ನಮ್ಮ ಅಮೂಲ್ಯ ಸಂಬಂಧಗಳನ್ನು ಹಾಳುಗೆಡವಬಲ್ಲದು. ಕ್ರೈಸ್ತರು ಒಬ್ಬರನ್ನೊಬ್ಬರು ಕ್ಷಮಿಸುವವರಾಗಿರಬೇಕು. ಅವರು ಅಸಮಾಧಾನವನ್ನು ಮನಸ್ಸಿನಲ್ಲಿಟ್ಟುಕೊಳ್ಳಬಾರದು ಮತ್ತು ಅದೇ ವಿಷಯವನ್ನು ಪುನಃ ಪುನಃ ಕೆದಕಬಾರದು. (ಕೀರ್ತ. 37:8; 103:8, 9; ಜ್ಞಾನೋ. 17:9) ಪೌಲನು ಎಫೆಸದವರಿಗೆ ಹೀಗೆ ಸಲಹೆ ಕೊಟ್ಟನು: “ನೀವು ಕೋಪಗೊಂಡರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ. ಪಿಶಾಚನಿಗೆ ಅವಕಾಶಕೊಡಬೇಡಿ.” (ಎಫೆ. 4:26, 27) ಹೌದು, ಕೋಪವನ್ನು ಅಂಕೆಯಲ್ಲಿಡಲು ತಪ್ಪುವುದು ಸಭೆಯಲ್ಲಿ ಅನೈಕ್ಯವನ್ನು, ಜಗಳಗಳನ್ನೂ ಬಿತ್ತಲು ಪಿಶಾಚನಿಗೆ ಅವಕಾಶಕೊಡುತ್ತದೆ.
15. ನಮ್ಮದಲ್ಲದ ಸ್ವತ್ತುಗಳನ್ನು ತೆಗೆದುಕೊಳ್ಳುವುದು ಯಾವ ಪರಿಣಾಮವನ್ನು ಉಂಟುಮಾಡಬಲ್ಲದು?
15 ಬೇರೆಯವರ ಸ್ವತ್ತುಗಳನ್ನು ಗೌರವದಿಂದ ಕಾಣುವುದು ಸಹ ಸಭೆಯ ಐಕ್ಯಕ್ಕೆ ನೆರವಾಗುತ್ತದೆ. ಬೈಬಲ್ ಹೀಗೆ ಹೇಳುತ್ತದೆ: ‘ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದಿರಲಿ.’ (ಎಫೆ. 4:28) ಯೆಹೋವನ ಜನರಲ್ಲಿ ಭರವಸೆಯ ಸಾಮಾನ್ಯ ಭಾವವು ಬೆಳೆದುಬಂದಿದೆ. ಒಬ್ಬ ಕ್ರೈಸ್ತನು ತನ್ನದಲ್ಲದ ಸ್ವತ್ತನ್ನು ತೆಗೆದುಕೊಳ್ಳುವ ಮೂಲಕ ಆ ಭರವಸೆಯನ್ನು ದುರುಪಯೋಗಿಸಿಕೊಳ್ಳುವುದಾದರೆ ಆ ಸಂತೋಷಕರ ಐಕ್ಯವನ್ನು ಅವನು ಹಾಳುಗೆಡಹುತ್ತಾನೆ.
ದೇವರ ಮೇಲಣ ಪ್ರೀತಿ ನಮ್ಮನ್ನು ಐಕ್ಯಗೊಳಿಸುತ್ತದೆ
16. ನಮ್ಮ ಐಕ್ಯವನ್ನು ಬಲಗೊಳಿಸಲು ಭಕ್ತಿವೃದ್ಧಿ ಮಾಡುವಂಥ ಮಾತುಗಳನ್ನು ನಾವು ಹೇಗೆ ಉಪಯೋಗಿಸಬಲ್ಲೆವು?
16 ಸಭೆಯ ಸದಸ್ಯರೆಲ್ಲರೂ ದೇವರನ್ನು ಪ್ರೀತಿಸುತ್ತಾರೆ. ಈ ಪ್ರೀತಿಯು ಅವರು ಇತರರನ್ನು ಪ್ರೀತಿಸುವಂತೆ ಪ್ರಚೋದಿಸುತ್ತದೆ. ಕ್ರೈಸ್ತ ಸಭೆಯಲ್ಲಿರುವ ಐಕ್ಯಕ್ಕೆ ಇದೇ ಕಾರಣ. ಯೆಹೋವನು ತೋರಿಸಿರುವ ದಯೆಗೆ ನಮಗಿರುವ ಗಣ್ಯತೆಯು ನಾವು ಈ ಮುಂದಿನ ಸಲಹೆಯನ್ನು ಅನ್ವಯಿಸಿಕೊಳ್ಳುವಂತೆ ಪ್ರಚೋದಿಸುತ್ತದೆ: “ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು. . . . ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ ದೇವರು ಕ್ರಿಸ್ತನ ಮೂಲಕ ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ.” (ಎಫೆ. 4:29, 32) ಅಪರಿಪೂರ್ಣರಾದ ನಮ್ಮನ್ನು ಯೆಹೋವನು ದಯೆಯಿಂದ ಕ್ಷಮಿಸುತ್ತಾನೆ. ಅಂತೆಯೇ ನಾವು ಸಹ ಇತರರ ಅಪರಿಪೂರ್ಣತೆಗಳನ್ನು ನೋಡುವಾಗ ಅವರನ್ನು ಕ್ಷಮಿಸಬೇಕಲ್ಲವೆ?
17. ಏಕತೆಯನ್ನು ಹೆಚ್ಚಿಸಲು ನಾವೇಕೆ ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಬೇಕು?
17 ದೇವಜನರ ಏಕತೆಯು ಯೆಹೋವನನ್ನು ಮಹಿಮೆಪಡಿಸುತ್ತದೆ. ಐಕ್ಯವನ್ನು ಹೆಚ್ಚಿಸುವಂತೆ ದೇವರ ಪವಿತ್ರಾತ್ಮವು ನಮ್ಮನ್ನು ಬೇರೆ ಬೇರೆ ವಿಧಗಳಲ್ಲಿ ಪ್ರಚೋದಿಸುತ್ತದೆ. ಪವಿತ್ರಾತ್ಮದ ಈ ಮಾರ್ಗದರ್ಶನೆಯನ್ನು ಪ್ರತಿಭಟಿಸಲು ನಾವು ಖಂಡಿತವಾಗಿಯೂ ಬಯಸಲಾರೆವು. “ದೇವರ ಪವಿತ್ರಾತ್ಮವನ್ನು ದುಃಖಪಡಿಸಬೇಡಿರಿ” ಎಂದು ಪೌಲನು ಬರೆದನು. (ಎಫೆ. 4:30) ಏಕತೆಯು ಅಮೂಲ್ಯ. ಅದನ್ನು ಕಾಪಾಡುವುದು ಸಾರ್ಥಕ. ಏಕೆಂದರೆ ಐಕ್ಯವಾಗಿರುವವರೆಲ್ಲರಿಗೆ ಅದು ಆನಂದವನ್ನು ಹಾಗೂ ಯೆಹೋವನಿಗೆ ಮಹಿಮೆಯನ್ನು ತರುತ್ತದೆ. ‘ಆದುದರಿಂದ ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ ಮತ್ತು ಆತನ ಪ್ರೀತಿಯಲ್ಲಿ ನಡೆಯುತ್ತಾ ಇರಿ.’—ಎಫೆ. 5:1, 2.
ನಿಮ್ಮ ಉತ್ತರವೇನು?
• ಯಾವ ಮನೋಭಾವಗಳು ಕ್ರೈಸ್ತರಲ್ಲಿ ಐಕ್ಯವನ್ನು ಹೆಚ್ಚಿಸುತ್ತವೆ?
• ನಮ್ಮ ನಡತೆಯು ಸಭೆಯ ಏಕತೆಯನ್ನು ಹೇಗೆ ಹೆಚ್ಚಿಸಬಲ್ಲದು?
• ಇತರರೊಂದಿಗೆ ಸಹಕರಿಸಲು ನಮ್ಮ ಮಾತು ಹೇಗೆ ಸಹಾಯ ಮಾಡಬಲ್ಲದು?
[ಅಧ್ಯಯನ ಪ್ರಶ್ನೆಗಳು]
[ಪುಟ 17ರಲ್ಲಿರುವ ಚಿತ್ರ]
ಬೇರೆ ಬೇರೆ ಹಿನ್ನೆಲೆಗಳ ಜನರು ಐಕ್ಯರಾಗಿದ್ದಾರೆ
[ಪುಟ 18ರಲ್ಲಿರುವ ಚಿತ್ರ]
ಚೆಲ್ಲಾಟವಾಡುವುದರ ಅಪಾಯಗಳು ನಿಮಗೆ ತಿಳಿದಿವೆಯೊ?