ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾ ವಿಸ್ತರಣೆಯ ಸಮಯದಲ್ಲಿ ಸೇವೆ

ಮಹಾ ವಿಸ್ತರಣೆಯ ಸಮಯದಲ್ಲಿ ಸೇವೆ

ಮಹಾ ವಿಸ್ತರಣೆಯ ಸಮಯದಲ್ಲಿ ಸೇವೆ

ಹಾರ್ಲೆ ಹ್ಯಾರಿಸ್‌ರವರು ಹೇಳಿದಂತೆ

ಸಮಯ 1950ರ ಸೆಪ್ಟೆಂಬರ್‌ 2ನೇ ತಾರೀಖು. ಸ್ಥಳ ಅಮೆರಿಕದ ಮಿಸ್ಸೌರಿಯ ಕೆನಟ್‌ ಎಂಬ ಪಟ್ಟಣ. ಅಲ್ಲಿ ನಾವು ಸರ್ಕಿಟ್‌ ಸಮ್ಮೇಳನಕ್ಕೆ ಹಾಜರಿದ್ದೆವು. ಸುತ್ತಲೂ ನಮ್ಮನ್ನು ಆವರಿಸಿತ್ತು ಜನರ ದೊಂಬಿ. ಶಿಸ್ತಿಗೆ ಬಗ್ಗದ ಆ ದೊಂಬಿಯಿಂದ ನಮ್ಮನ್ನು ಕಾಪಾಡಲು ನಗರಾಧ್ಯಕ್ಷರು ನ್ಯಾಷನಲ್‌ ಗಾರ್ಡ್‌ ಸೈನಿಕರನ್ನು ತಂದಿದ್ದರು. ದಾರಿಯುದ್ದಕ್ಕೂ ಸೈನಿಕರು ಕೋವಿ ಬಂದೂಕುಗಳನ್ನು ಗುರಿಯಿಟ್ಟು ಹಿಡಿದು ನಿಂತಿದ್ದರು. ಆ ಮಧ್ಯೆ ನಾವು ನಿಂದೆ ಮೂದಲಿಕೆಗಳನ್ನು ಎದುರಿಸುತ್ತಾ ನಮ್ಮ ಕಾರುಗಳ ಬಳಿಗೆ ತ್ವರೆಯಾಗಿ ನಡೆದು ನಮ್ಮ ಸಮ್ಮೇಳನದ ಉಳಿದ ಕಾರ್ಯಕ್ರಮಕ್ಕಾಗಿ ಮಿಸ್ಸೌರಿಯ ಕೇಪ್‌ ಗರಾರ್ಡೋ ಎಂಬ ಸ್ಥಳಕ್ಕೆ ಹೊರಟೆವು. ನಾನು ದೀಕ್ಷಾಸ್ನಾನ ಪಡೆದದ್ದು ಅಲ್ಲಿಯೇ. ನನಗಾಗ 14 ವಯಸ್ಸು. ಆದರೆ ಈ ಗಲಭೆ ಗೊಂದಲಗಳ ಸಮಯದಲ್ಲಿ ಯೆಹೋವನ ಸೇವೆಯನ್ನು ನಾನು ಆರಂಭಿಸಿದ್ದು ಹೇಗೆ? ನಾನದನ್ನು ಹೇಳುತ್ತೇನೆ ಕೇಳಿ.

ಇಸವಿ 1930ರುಗಳ ಆರಂಭದಲ್ಲಿ ನನ್ನ ಅಜ್ಜಅಜ್ಜಿ ಮತ್ತು ಅವರ ಎಂಟು ಮಕ್ಕಳು ಸಹೋದರ ರದರ್‌ಫರ್ಡ್‌ರ ಭಾಷಣದ ಕೆಲವು ಧ್ವನಿಮುದ್ರಣಗಳನ್ನು ಕೇಳಿಸಿಕೊಂಡರು. ತಾವು ಸತ್ಯವನ್ನು ಕಂಡುಕೊಂಡೆವೆಂಬ ಖಾತ್ರಿ ಅವರಿಗಾಯಿತು. ನನ್ನ ಹೆತ್ತವರಾದ ಬೇ ಮತ್ತು ಮಿಲ್ಡ್ರಡ್‌ ಹ್ಯಾರಿಸ್‌ ದೀಕ್ಷಾಸ್ನಾನ ಪಡೆದದ್ದು 1935ರಲ್ಲಿ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆದ ಅಧಿವೇಶನದಲ್ಲಿ. ಒಂದು “ಮಹಾ ಜನಸ್ತೋಮ” ಅಥವಾ ‘ಮಹಾ ಸಮೂಹದ’ ಭಾಗವಾಗಿರುವುದಕ್ಕಾಗಿ ಅವರೆಷ್ಟು ಉಲ್ಲಾಸದಿಂದಿದ್ದರು! ಆ ಅಧಿವೇಶನದಲ್ಲಿ ಆಗಷ್ಟೇ ಮಹಾ ಸಮೂಹದವರು ಯಾರೆಂಬದನ್ನು ಪ್ರಕಟಿಸಲಾಗಿತ್ತು.—ಪ್ರಕ. 7:9, 14; ಕಿಂಗ್‌ ಜೇಮ್ಸ್‌ ವರ್ಷನ್‌.

ನಾನು ಹುಟ್ಟಿದ್ದು ಮರುವರ್ಷ. ಒಂದು ವರ್ಷದ ನಂತರ ನನ್ನ ಹೆತ್ತವರು ಮಿಸ್ಸಿಸಿಪಿಯಲ್ಲಿ ಒಂದು ದೂರದ ಕ್ಷೇತ್ರಕ್ಕೆ ಸ್ಥಳಾಂತರಿಸಿದರು. ನಾವು ಆ ಕ್ಷೇತ್ರದಲ್ಲಿ ಜೀವಿಸಿದ್ದಾಗ ಸಂಚರಣ ಮೇಲ್ವಿಚಾರಕರ ಯಾವ ಸಂದರ್ಶನವೂ ನಮಗಿದ್ದಿರಲಿಲ್ಲ. ನಮ್ಮ ಕುಟುಂಬವು ಬೆತೆಲ್‌ನೊಂದಿಗೆ ಪತ್ರವ್ಯವಹಾರ ಮಾಡಿ ಸಮ್ಮೇಳನಗಳನ್ನು ಹಾಜರಾಗುತ್ತಿತ್ತು. ಕೆಲವು ಸಮಯದ ತನಕ ಸಹೋದರರೊಂದಿಗೆ ನಮಗಿದ್ದ ಸಹವಾಸವು ಅಷ್ಟು ಮಾತ್ರ.

ಹಿಂಸೆಯ ಕೆಳಗೆ ಸಹನೆ

ಯೆಹೋವನ ಸಾಕ್ಷಿಗಳು ಎರಡನೇ ಲೋಕಯುದ್ಧದ ಸಮಯದಲ್ಲಿ ತಮ್ಮ ತಟಸ್ಥ ನಿಲುವಿಗಾಗಿ ಬಹಳ ಹಿಂಸೆಯನ್ನು ಅನುಭವಿಸಿದರು. ನಾವು ಆರ್ಕನ್ಸಾಸ್‌ನ ಮೌಂಟೇನ್‌ ಹೋಮ್‌ಗೆ ಆಗ ಸ್ಥಳಾಂತರ ಮಾಡಿದ್ದೆವು. ಒಂದು ದಿನ ನನ್ನ ತಂದೆ ಮತ್ತು ನಾನು ಬೀದಿ ಸಾಕ್ಷಿಕಾರ್ಯ ಮಾಡುತ್ತಿದ್ದೆವು. ಎಲ್ಲಿಂದಲೋ ಒಬ್ಬ ಮನುಷ್ಯ ತಟ್ಟನೆ ಬಂದು ನನ್ನ ತಂದೆಯಿಂದ ಪತ್ರಿಕೆಗಳನ್ನು ಕಸಿದುಕೊಂಡು ಅವಕ್ಕೆ ಅಲ್ಲಿಯೇ ಬೆಂಕಿಯಿಟ್ಟನು. ಯುದ್ಧಮಾಡದ ಹೇಡಿಗಳೆಂದು ನಮ್ಮನ್ನು ಜರೆದನು. ನಾನಾಗ ಐದು ವರ್ಷದ ಬಾಲಕ, ತುಂಬ ಅತ್ತುಬಿಟ್ಟೆ. ನನ್ನ ತಂದೆ ಆ ಮನುಷ್ಯನು ಹೋಗುವ ತನಕ ಅವನನ್ನು ಶಾಂತರಾಗಿ ನೋಡಿದರು; ಒಂದೇ ಒಂದು ಮಾತನ್ನಾಡಲಿಲ್ಲ.

ನಮ್ಮ ಹಿತವನ್ನು ಬಯಸಿದ ಸಜ್ಜನರು ಅಲ್ಲಿ ಇರಲಿಲ್ಲವೆಂದಲ್ಲ. ಇದ್ದರು. ಒಂದು ಸಲ ದೊಂಬಿಯೊಂದು ನಮ್ಮ ಕಾರಿಗೆ ಮುತ್ತಿಗೆ ಹಾಕಿತು. ಆ ದಾರಿಯಾಗಿ ಬಂದ ಸ್ಥಳೀಕ ವಕೀಲರೊಬ್ಬರು “ಏನು ನಡೀತಾ ಇದೆ?” ಎಂದು ವಿಚಾರಿಸಿದರು. ಒಬ್ಬನು ಮುಂದೆ ಬಂದು, “ಇವರು ಯೆಹೋವನ ಸಾಕ್ಷಿಗಳು; ದೇಶಕ್ಕಾಗಿ ಹೋರಾಡದ ಪುಕ್ಕಲರು” ಎಂದನು. ಆಗ ವಕೀಲರು ನಮ್ಮ ಕಾರಿನ ಪಕ್ಕಕ್ಕೆ ಹತ್ತುತ್ತಾ ಕೂಗಿ ಹೇಳಿದ್ದು: “ಒಂದನೇ ಲೋಕಯುದ್ಧದಲ್ಲಿ ಹೋರಾಡಿದವನು ನಾನು. ಎರಡನೆಯ ಯುದ್ಧದಲ್ಲೂ ಹೋರಾಡುವೆ! ಇವರನ್ನು ಮಾತ್ರ ಬಿಟ್ಟುಬಿಡಿ. ಇವರು ಯಾರಿಗೂ ಹಾನಿಮಾಡುವವರಲ್ಲ.” ಆಗ ಜನಸಂದಣಿ ಮೆಲ್ಲನೆ ಚದರಿಹೋಯಿತು. ಮಾನವೀಯ ದಯೆಯನ್ನು ತೋರಿಸಿದ ಇಂಥ ಸಜ್ಜನರನ್ನು ನಾವು ತುಂಬ ಗಣ್ಯಮಾಡಿದೆವು!—ಅ. ಕಾ. 27:3.

ಅಧಿವೇಶನಗಳು ಬಲವರ್ಧಕ

ಮಿಸ್ಸೌರಿಯ ಸೇಂಟ್‌ ಲೂಯಿಯಲ್ಲಿ 1941ರಲ್ಲಿ ನಡೆದ ಅಧಿವೇಶನವು ನಮ್ಮನ್ನು ಬಲಗೊಳಿಸಿತು. ಒಂದು ಅಂದಾಜಿಗನುಸಾರ 1,15,000ಕ್ಕಿಂತಲೂ ಹೆಚ್ಚು ಮಂದಿ ಅಲ್ಲಿ ಹಾಜರಿದ್ದರು. ಆಶ್ಚರ್ಯಕರವಾಗಿ 3,903 ಮಂದಿಗೆ ಅಲ್ಲಿ ದೀಕ್ಷಾಸ್ನಾನವಾಯಿತು. ಸಹೋದರ ರದರ್‌ಫರ್ಡ್‌ರವರು “ರಾಜನ ಮಕ್ಕಳು” ಎಂಬ ಭಾಷಣವನ್ನು ಕೊಟ್ಟದ್ದು ನನಗೆ ಇನ್ನೂ ನೆನಪಿದೆ. ಮಕ್ಕಳಾದ ನಮ್ಮನ್ನು ನೇರವಾಗಿ ಉದ್ದೇಶಿಸಿ ಅವರು ಮಾತಾಡಿದರು. ಮಕ್ಕಳು (ಇಂಗ್ಲಿಷ್‌) ಎಂಬ ನೀಲವರ್ಣದ ಸುಂದರ ಪುಸ್ತಕವನ್ನು ನಾವು ಪಡೆದೆವು. ಮುಂದಿನ ವರ್ಷದಲ್ಲಿ ಅಂದರೆ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ಆರಂಭಿಸಲಿಕ್ಕಿದ್ದಾಗ ನಂಬಿಕೆಯ ಪರೀಕ್ಷೆಯನ್ನು ಎದುರಿಸಲು ಈ ಅಧಿವೇಶನ ನನ್ನನ್ನು ಬಲಗೊಳಿಸಿತು. ಧ್ವಜವಂದನೆ ಮಾಡದ್ದಕ್ಕಾಗಿ ನನ್ನನ್ನು ಮತ್ತು ನನ್ನ ಸೋದರ ಸಂಬಂಧಿಗಳನ್ನು ಶಾಲೆಯಿಂದ ತೆಗೆದುಹಾಕಿದರು. ಆದರೆ ನಾವು, ಶಾಲಾ ನಿರ್ದೇಶಕರು ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೊ ಎಂದು ನೋಡಲು ಪ್ರತಿದಿನವೂ ಶಾಲೆಗೆ ಹಾಜರಾದೆವು. ಅನೇಕ ದಿನ ಬೆಳಗಾತ ನಾವು ಕಾಡಿನ ಮಾರ್ಗವಾಗಿ ನಡೆದು ಶಾಲೆ ಸೇರುತ್ತಿದ್ದೆವಾದರೂ ಸೀದಾ ಹಿಂದೆ ಮನೆಗೆ ಕಳುಹಿಸಲ್ಪಡುತ್ತಿದ್ದೆವು. ಆದರೂ ಈ ರೀತಿ ನಾವು ದೇವರ ರಾಜ್ಯಕ್ಕೆ ನಮ್ಮ ನಿಷ್ಠೆಯನ್ನು ತೋರಿಸುತ್ತಿದ್ದೇವೆ ಎಂದು ನನಗನಿಸಿತು.

ಸ್ವಲ್ಪದರಲ್ಲೇ ಧ್ವಜವಂದನೆಯು ಕಡ್ಡಾಯವಲ್ಲ ಎಂಬ ತೀರ್ಪನ್ನು ಅಮೆರಿಕದ ಸುಪ್ರೀಮ್‌ ಕೋರ್ಟ್‌ ಹೊರಡಿಸಿತು. ಕೊನೆಗೂ ನಾವು ಶಾಲೆಗೆ ಹಾಜರಾಗಲು ಶಕ್ತರಾದೆವು. ನಾವು ಕಳೆದುಕೊಂಡಿದ್ದ ಪಾಠಗಳನ್ನು ಉಪಾಧ್ಯಾಯರು ದಯೆಯಿಂದ ಹೇಳಿಕೊಟ್ಟರು. ನಮ್ಮ ಸಹಪಾಠಿಗಳು ಸಹ ನಮ್ಮನ್ನು ಗೌರವದಿಂದ ಉಪಚರಿಸಿದರು.

ಓಹಾಯೋದ ಕ್ಲೀವ್‌ಲ್ಯಾಂಡ್‌ನ 1942ರ ಅಧಿವೇಶನವೂ ನನಗೆ ನೆನಪಿದೆ. ಅಲ್ಲಿ ಸಹೋದರ ನೇತನ್‌ ಎಚ್‌. ನಾರ್‌ರವರು “ಶಾಂತಿ—ಬಾಳುವುದೊ?” ಎಂಬ ಭಾಷಣವನ್ನು ಕೊಟ್ಟಿದ್ದರು. ಪ್ರಕಟನೆ 17ನೇ ಅಧ್ಯಾಯದ ಈ ವಿಶ್ಲೇಷಣೆಯು, ಎರಡನೇ ಲೋಕಯುದ್ಧದ ನಂತರ ಸಾಪೇಕ್ಷ ಶಾಂತಿಯ ಒಂದು ಅವಧಿಯು ಬರುವುದೆಂದು ಸೂಚಿಸಿತ್ತು. ಹೀಗೆ ಹೆಚ್ಚಿನ ವಿಸ್ತರಣೆಯನ್ನು ಮುನ್ನೋಡಲಾಯಿತು. ಅಂಥ ವಿಸ್ತರಣೆಗಾಗಿ ತಯಾರಿಸಲು 1943ರಲ್ಲಿ ಗಿಲ್ಯಡ್‌ ಶಾಲೆಯನ್ನು ತೆರೆಯಲಾಯಿತು. ಇದು ನನ್ನ ಭವಿಷ್ಯತ್ತಿನ ಜೀವನವನ್ನು ಹೇಗೆ ಪ್ರಭಾವಿಸಲಿತ್ತೆಂದು ಆಗ ನಾನು ತಿಳಿದಿರಲೇ ಇಲ್ಲ. ಯುದ್ಧೋತ್ತರ ಶಾಂತಿಯು ಬಂತು ನಿಶ್ಚಯ, ಹಿಂಸೆಯ ಬಿರುಸು ಸಹ ಕಡಿಮೆಯಾಯಿತು. ಆದರೂ 1950ರಲ್ಲಿ ಕೊರಿಯನ್‌ ಯುದ್ಧ ಆರಂಭಿಸಿದಾಗ ನಮ್ಮ ಸಾರುವಿಕೆಗೆ ವಿರೋಧವು ಪುನಃ ಭಗ್ಗನೆ ಹೊತ್ತಿಕೊಂಡಿತು. ಆರಂಭದಲ್ಲಿ ನಾನು ಇದನ್ನೇ ವರ್ಣಿಸಿದ್ದೆ.

ವಿಸ್ತರಣೆಯಲ್ಲಿ ಹೆಚ್ಚು ಪೂರ್ಣ ಪಾಲು

ನಾನು ಹೈಸ್ಕೂಲಿನ ಶಿಕ್ಷಣ ಮುಗಿಸಿದ್ದು 1954ರಲ್ಲಿ. ಒಂದು ತಿಂಗಳ ನಂತರ ಪಯನೀಯರ್‌ ಸೇವೆಯನ್ನು ಆರಂಭಿಸಿದೆ. 1950ರಲ್ಲಿ ಎಲ್ಲಿ ದೊಂಬಿಯು ನಮ್ಮನ್ನು ಸುತ್ತುವರಿದಿತ್ತೋ ಆ ಮಿಸ್ಸೌರಿಯ ಕೆನಟ್‌ ಪಟ್ಟಣದಲ್ಲಿ ಸೇವೆಮಾಡಿದ ನಂತರ ಮಾರ್ಚ್‌ 1955ರಲ್ಲಿ ನನ್ನನ್ನು ಬೆತೆಲಿಗೆ ಆಮಂತ್ರಿಸಲಾಯಿತು. ನ್ಯೂ ಯಾರ್ಕ್‌ ಸಿಟಿಯ ಮಧ್ಯದಲ್ಲಿದ್ದ ಜನನಿಬಿಡ ಟೈಮ್ಸ್‌ ಸ್ಕ್ವೇರ್‌, ನಾನು ನೇಮಿಸಲ್ಪಟ್ಟ ಸಭೆಯ ಟೆರಿಟೊರಿಯ ಭಾಗವಾಗಿತ್ತು. ಅದು ಗ್ರಾಮ್ಯ ಜೀವನಕ್ಕಿಂತ ಬಲು ಭಿನ್ನವಾಗಿತ್ತು! ನಮ್ಮ ಪತ್ರಿಕೆಗಳಿಂದ ವಿಚಾರಪ್ರೇರಕ ಲೇಖನವನ್ನು ತೆರೆದು “ನೀವೆಂದಾದರೂ ಈ ಪ್ರಶ್ನೆಯನ್ನು ಕೇಳಿದ್ದೀರೋ?” ಎಂದು ಹೇಳುವ ಮೂಲಕ ಕಾರ್ಯನಿರತ ನ್ಯೂ ಯಾರ್ಕ್‌ ನಿವಾಸಿಗಳ ಗಮನವನ್ನು ನಾನು ಸೆಳೆಯಶಕ್ತನಾದೆ. ಅನೇಕರು ಪತ್ರಿಕೆಗಳನ್ನು ಸ್ವೀಕರಿಸಿದರು.

ಬೆತೆಲಿನಲ್ಲಿ ಸಹೋದರ ನಾರ್‌ರವರಿಂದ ನಡೆಸಲ್ಪಡುತ್ತಿದ್ದ ಬೆಳಗಿನ ಆರಾಧನೆಯು ನನ್ನ ಅಚ್ಚುಮೆಚ್ಚಿನ ವಿಷಯಗಳಲ್ಲಿ ಒಂದಾಗಿತ್ತು. ಬೈಬಲಿನ ವಚನಗಳನ್ನು ಸಜೀವವಾಗಿ ವಿವರಿಸಿ ಎಷ್ಟು ವ್ಯಾವಹಾರಿಕವಾಗಿ ಅವನ್ನು ಅವರು ನಮಗೆ ಅನ್ವಯಿಸುತ್ತಿದ್ದರು! ತಂದೆಯು ಮಗನೊಂದಿಗೆ ಮಾತಾಡುವಂತೆ ಅವರು ಯುವಕರಾದ ನಮಗೆ ಬೋಧಿಸುತ್ತಿದ್ದರು. ಭಿನ್ನಲಿಂಗದವರೊಂದಿಗೆ ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಆಗಾಗ್ಗೆ ಉತ್ತಮ ಸಲಹೆ ಕೊಡುತ್ತಿದ್ದರು.

ನಾನು ವಿವಾಹವಾಗಲು ನಿಶ್ಚಯಿಸಿದ್ದು 1960ರಲ್ಲಿ. ಬೆತೆಲನ್ನು ಬಿಟ್ಟುಹೋಗಲು ನಾನು ಮೂವತ್ತು ದಿನಗಳ ಮುಂಚೆ ನೋಟಿಸ್‌ ಕೊಟ್ಟೆ. ಆದರೂ ನನಗೆ ಪ್ರತ್ಯುತ್ತರ ಬಂದಿರಲಿಲ್ಲ. ನನ್ನದು ಬಹಳ ಸಂಕೋಚ ಪ್ರಕೃತಿ. ಹೇಗೂ 30 ದಿನಗಳ ಕೊನೆಯಲ್ಲಿ, ಬೆತೆಲನ್ನು ಯಾವ ತಾರೀಖಿಗೆ ಬಿಡಬೇಕೆಂದು ಕೇಳಲು ನಾನು ಧೈರ್ಯ ತಂದು ಫೋನ್‌ ಮಾಡಿದೆ. ಸಹೋದರ ರಾಬರ್ಟ್‌ ವಾಲನ್‌ರು ಫೋನ್‌ ತಕ್ಕೊಂಡರು. ನಾನು ಕೆಲಸಮಾಡುತ್ತಿದ್ದ ಸ್ಥಳಕ್ಕೆ ಬಂದು, ‘ವಿಶೇಷ ಪಯನೀಯರ್‌ ಸೇವೆ ಅಥವಾ ಸರ್ಕಿಟ್‌ ಸೇವೆ ಮಾಡಲು ನಿನಗೆ ಮನಸ್ಸಿದೆಯೊ?’ ಎಂದು ಕೇಳಿದರು. “ನಾನು ಬರೇ 24 ವರ್ಷದವನು. ನನಗೆ ಅನುಭವವಿಲ್ಲ ಸಹೋದರರೇ” ಎಂದು ಮೆಲ್ಲನೆ ಉಸುರಿದೆ.

ಸರ್ಕಿಟ್‌ ಸೇವೆಯಲ್ಲಿ

ಆ ದಿನ ರಾತ್ರಿ ನನ್ನ ಕೋಣೆಯಲ್ಲಿ ಒಂದು ದೊಡ್ಡ ಲಕೋಟೆ ನನಗಾಗಿ ಕಾದಿತ್ತು. ಅದರಲ್ಲಿ ವಿಶೇಷ ಪಯನೀಯರ್‌ ಸೇವೆ ಮತ್ತು ಸರ್ಕಿಟ್‌ ಸೇವೆಗಾಗಿ ಅರ್ಜಿಗಳಿದ್ದವು. ನಾನು ಬೆಕ್ಕಸಬೆರಗಾದೆ! ಇದೆಂಥ ಮಹಾ ಸುಯೋಗ! ನೈರುತ್ಯ ಮಿಸ್ಸೌರಿಯಲ್ಲಿ ಮತ್ತು ಪೂರ್ವ ಕಾನ್‌ಸಾಸ್‌ನ ಸರ್ಕಿಟ್‌ನಲ್ಲಿ ನನ್ನ ಸಹೋದರರ ಸೇವೆ ಮಾಡುವ ಸದವಕಾಶ ಅದಾಗಿತ್ತು. ಬೆತೆಲನ್ನು ಬಿಡುವ ಮುಂಚೆ ಸಂಚರಣ ಮೇಲ್ವಿಚಾರಕರ ಒಂದು ಕೂಟಕ್ಕೆ ನಾನು ಹಾಜರಾದೆ. ಮುಕ್ತಾಯದ ಹೇಳಿಕೆಯಲ್ಲಿ ಸಹೋದರ ನಾರ್‌ರವರು ಹೇಳಿದ್ದು: “ಸರ್ಕಿಟ್‌ ಮತ್ತು ಡಿಸ್ಟ್ರಿಕ್ಟ್‌ ಮೇಲ್ವಿಚಾರಕರಾಗುವುದೆಂದರೆ ಸ್ಥಳೀಕ ಸಹೋದರರಿಗಿಂತ ನಿಮಗೆ ಹೆಚ್ಚು ತಿಳಿದಿದೆ ಎಂದರ್ಥವಲ್ಲ. ಅವರಲ್ಲಿ ಕೆಲವರಿಗೆ ನಿಮಗಿಂತಲೂ ಹೆಚ್ಚು ಅನುಭವವಿದೆ. ಆದರೆ ಪರಿಸ್ಥಿತಿಗಳಿಂದಾಗಿ ಅವರಿಗೆ ನಿಮ್ಮಂತೆ ಸರ್ಕಿಟ್‌ ಸೇವೆ ಮಾಡಲಾಗುವುದಿಲ್ಲ ಅಷ್ಟೇ. ಆದರೆ ಅವರಿಂದ ನೀವು ಹೆಚ್ಚನ್ನು ಕಲಿಯಬಲ್ಲಿರಿ.”

ಅವರು ಹೇಳಿದ ಮಾತು ಎಷ್ಟು ಸತ್ಯವಾಗಿತ್ತು! ನಾನು ಕಲಿಯಸಾಧ್ಯವಿದ್ದ ಉತ್ತಮ ಮಾದರಿಗಳು ಸಹೋದರ ಫ್ರೆಡ್‌ ಮಾಲಹ್ಯಾನ್‌ ಹಾಗೂ ಅವರ ಪತ್ನಿ ಮತ್ತು ಫ್ರೆಡ್‌ರವರ ಅಣ್ಣ ಚಾರ್ಲೀಯವರದ್ದು. ಇವರು ಕಾನ್‌ಸಾಸ್‌ನ ಪಾರ್ಸನ್ಸ್‌ ಎಂಬ ಪಟ್ಟಣದವರು. ಇವರು ಸತ್ಯ ಕಲಿತದ್ದು ಹಿಂದೆ 1900ರುಗಳ ಆರಂಭದಲ್ಲಿ. ನಾನು ಹುಟ್ಟುವುದಕ್ಕಿಂತಲೂ ಮುಂಚೆ ಅವರಿಗಾಗಿದ್ದ ಅನುಭವಗಳನ್ನು ಕೇಳಿಸಿಕೊಳ್ಳುವುದು ಎಷ್ಟೊಂದು ಉತ್ತೇಜಕ! ಇನ್ನೊಬ್ಬ ಸಹೋದರರು ಯಾರೆಂದರೆ ಜಾನ್‌ ರಿಸ್ಟನ್‌ರವರು. ಇವರು ಅನೇಕ ವರ್ಷಗಳಿಂದ ಮಿಸ್ಸೌರಿಯ ಜಾಪ್ಲಿನ್‌ನಲ್ಲಿ ಪಯನೀಯರ್‌ ಸೇವೆ ಮಾಡಿದ್ದ ದಯಾಪರ ವೃದ್ಧ ಸಹೋದರರು. ಈ ಪ್ರಿಯ ಸಹೋದರರಲ್ಲಿ ಯೆಹೋವನ ಸಂಘಟನೆಗಾಗಿ ಆಳವಾದ ಗೌರವವಿತ್ತು. ನಾನು ಯುವಕನಾಗಿದ್ದರೂ ನನ್ನನ್ನು ತಮ್ಮ ಸರ್ಕಿಟ್‌ ಮೇಲ್ವಿಚಾರಕನಾಗಿ ಅವರು ತುಂಬ ಗಣ್ಯಮಾಡಿದರು.

ಕ್ಲಾರಿಸ್‌ ನೋಕ್‌ ಎಂಬ ನಸುಗೆಂಪು ಕೂದಲಿನ ಚುರುಕು ಪಯನೀಯರಳನ್ನು ನಾನು ಮದುವೆಯಾದದ್ದು 1962ರಲ್ಲಿ. ಅವಳೊಂದಿಗೆ ಜೊತೆಗೂಡಿ ನಾನು ಸರ್ಕಿಟ್‌ ಸೇವೆಯನ್ನು ಮುಂದುವರಿಸಿದೆ. ಸಹೋದರರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದದರಿಂದ ಸಹೋದರರ ಒಳ್ಳೇ ಪರಿಚಯ ನಮಗಾಯಿತು. ಯುವ ಜನರು ಪೂರ್ಣ ಸಮಯದ ಸೇವೆಯನ್ನು ಮಾಡುವಂತೆ ನಾವು ಉತ್ತೇಜನ ಕೊಟ್ಟೆವು. ಸರ್ಕಿಟ್‌ನಲ್ಲಿದ್ದ ಇಬ್ಬರು ಹದಿವಯಸ್ಕರಾಗಿದ್ದ ಜೇ ಕೋಸಿನ್‌ಸ್ಕೀ ಮತ್ತು ಜೊಆ್ಯನ್‌ ಕ್ರೆಸ್ಮನ್‌ ಅಂಥ ಉತ್ತೇಜನಕ್ಕಾಗಿಯೇ ಕಾಯುತ್ತಿದ್ದರು. ಅವರೊಂದಿಗೆ ಸೇವೆಮಾಡಿ ಸ್ವತ್ಯಾಗದ ಜೀವನಾನಂದದ ಅನುಭವಗಳನ್ನು ಹಂಚಿಕೊಂಡೆವು. ಇದು ಅವರಿಗೆ ಗುರಿಗಳನ್ನಿಡುವಂತೆ ಪ್ರಚೋದನೆ ಕೊಟ್ಟಿತು. ಜೊಆ್ಯನ್‌ ವಿಶೇಷ ಪಯನೀಯರಳಾದಳು ಮತ್ತು ಜೇ ಬೆತೆಲಿನಲ್ಲಿ ಸೇವೆಮಾಡಿದನು. ಅನಂತರ ಅವರಿಬ್ಬರೂ ಮದುವೆಯಾಗಿ ಈಗ ಸುಮಾರು 30 ವರ್ಷಗಳಿಂದ ಸರ್ಕಿಟ್‌ ಸೇವೆಯನ್ನು ಮಾಡುತ್ತಿದ್ದಾರೆ.

ಮಿಷನೆರಿ ಸೇವೆ

ನಮಗೆ ಪರದೇಶದ ಸೇವೆಯಲ್ಲಿ ಆಸಕ್ತಿಯಿದೆಯೋ ಎಂದು ಸಹೋದರ ನಾರ್‌ರವರು 1966ರಲ್ಲಿ ನಮ್ಮನ್ನು ಕೇಳಿದರು. “ಪರವಾಗಿಲ್ಲ ನಾವಿಲ್ಲಿ ಸಂತೋಷದಿಂದಿದ್ದೇವೆ. ಆದರೆ ಬೇರೆ ಕಡೆ ಅಗತ್ಯವಿರುವುದಾದರೆ ನಾವು ಹೋಗಲು ಸಿದ್ಧ” ಎಂದು ಉತ್ತರಿಸಿದೆವು. ಒಂದು ವಾರದ ತರುವಾಯ ನಮ್ಮನ್ನು ಗಿಲ್ಯಡ್‌ ಶಾಲೆಗೆ ಆಮಂತ್ರಿಸಲಾಯಿತು. ಶಾಲೆಗೆ ಹಾಜರಾಗಲು ಪುನಃ ಬೆತೆಲಿಗೆ ಹಿಂದಿರುಗಿದ್ದೂ, ನಾನು ಪ್ರೀತಿಸಿ ಗೌರವಿಸಿದ್ದ ಅನೇಕ ಸ್ನೇಹಿತರ ಜೊತೆಗಿದ್ದದ್ದೂ ಅದೆಷ್ಟು ಉತ್ತೇಜಕವಾಗಿತ್ತು! ಜೊತೆ ವಿದ್ಯಾರ್ಥಿಗಳೊಂದಿಗೂ ನಾವು ಸ್ನೇಹಸಂಬಂಧವನ್ನು ಬೆಳೆಸಿದೆವು. ಅವರು ಈ ತನಕವೂ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಲಾರಿಸ್‌ ಮತ್ತು ನಾನು ಮಿಷನೆರಿಗಳಾಗಿ ದಕ್ಷಿಣ ಅಮೆರಿಕದ ಎಕ್ವಡಾರ್‌ಗೆ ಕಳುಹಿಸಲ್ಪಟ್ಟೆವು. ನಮ್ಮೊಂದಿಗೆ, ಡೆನಿಸ್‌ ಮತ್ತು ಎಡ್ವಿನ ಕ್ರಿಸ್ಟ್‌, ಆನಾ ರಾಡ್ರೀಗಸ್‌, ಡೇಲ್ಯಾ ಸಾಂಚೆಸ್‌ ಇದ್ದರು. ಕ್ರಿಸ್ಟ್‌ ದಂಪತಿ ರಾಜಧಾನಿ ಕೀಟೋಗೆ ಹೋದರು. ನಮ್ಮಂತೆ ಆನಾ ಮತ್ತು ಡೇಲ್ಯಾರನ್ನು ಎಕ್ವಡಾರ್‌ನ ಮೂರನೇ ದೊಡ್ಡ ಪಟ್ಟಣ ಕ್ವೆನ್ಕಕ್ಕೆ ನೇಮಿಸಲಾಯಿತು. ಆ ಟೆರಿಟೊರಿಯಲ್ಲಿ ಎರಡು ಪ್ರಾಂತಗಳಿದ್ದವು. ಕ್ವೆನ್ಕದ ಮೊದಲನೇ ಸಭೆ ಆರಂಭವಾದದ್ದು ನಮ್ಮ ವಾಸದ ಕೊಠಡಿಯಲ್ಲೇ. ನಾವು ನಾಲ್ಕು ಮಂದಿ ಮತ್ತು ಇನ್ನು ಕೆಲವರು ಅದರಲ್ಲಿ ಕೂಡಿದ್ದೆವು. ಸಾರುವ ಕಾರ್ಯವನ್ನು ನಾವು ಹೇಗೆ ಮಾಡಿ ಮುಗಿಸುವೆವೋ ಎಂಬ ಯೋಚನೆ ನಮ್ಮನ್ನು ಕಾಡಿತ್ತು.

ಕ್ವೆನ್ಕವು ಚರ್ಚುಗಳಿಂದ ತುಂಬಿಹೋಗಿತ್ತು. ಪವಿತ್ರ ದಿನಗಳ ಆಚರಣೆಗಳಲ್ಲಿ ಪಟ್ಟಣ ತುಂಬಾ ಧಾರ್ಮಿಕ ಮೆರವಣಿಗೆಗಳೇ ಮೆರವಣಿಗೆಗಳು. ಆದರೂ ಕ್ವೆನ್ಕದ ಜನರಿಗೆ ಅನೇಕ ಪ್ರಶ್ನೆಗಳಿದ್ದವು. ಉದಾಹರಣೆಗಾಗಿ, ಕ್ವೆನ್ಕದ ಸೈಕಲ್‌ ಪಟು ಮಾರಿಯೋ ಪೊಲೊನನ್ನು ನಾನು ಮೊದಲಾಗಿ ಸಂಧಿಸಿದಾಗ ಅವನು ಕೇಳಿದ ಪ್ರಶ್ನೆ ನನ್ನನ್ನು ಅಚ್ಚರಿಗೊಳಿಸಿತ್ತು. “ಪ್ರಕಟನೆಯಲ್ಲಿ ತಿಳಿಸಲಾದ ವೇಶ್ಯೆ ಯಾರು?” ಎಂದು ಅವನು ಕೇಳಿದ್ದ.

ಇನ್ನೊಮ್ಮೆ ಮಾರಿಯೋ ನಮ್ಮ ಮನೆಗೆ ಬಂದಾಗ ತುಂಬ ಚಿಂತಿತನಾಗಿದ್ದಂತೆ ಕಂಡನು. ಒಬ್ಬ ಸೌವಾರ್ತಿಕ ಪಾದ್ರಿಯು ಅವನಿಗೆ ಕೆಲವು ಪ್ರಕಾಶನಗಳನ್ನು ಕೊಟ್ಟಿದ್ದನು. ಅವು ಯೆಹೋವನ ಸಾಕ್ಷಿಗಳ ವಿರುದ್ಧ ಕಟು ದೋಷಾರೋಪವನ್ನು ಮಾಡಿದ್ದವು. ಆರೋಪಕ್ಕೆ ಗುರಿಯಾದವನು ತನ್ನನ್ನು ಸಮರ್ಥಿಸಿಕೊಳ್ಳುವಂತೆ ಬಿಡಬೇಕು ಎಂದು ನಾನು ಮಾರಿಯೋಗೆ ಹೇಳಿದೆ. ಆದ್ದರಿಂದ ಮರುದಿನ ಮಾರಿಯೋ ಆ ಪಾದ್ರಿಯನ್ನು ಮತ್ತು ನನ್ನನ್ನು ದೋಷಾರೋಪಗಳಿಗೆ ಉತ್ತರ ಕೊಡಲು ಮನೆಗೆ ಆಮಂತ್ರಿಸಿದನು. ನಾವು ತ್ರಯೈಕ್ಯದ ಕುರಿತು ಮಾತಾಡೋಣವೇ ಎಂದು ಕೂಟದಲ್ಲಿ ನಾನು ಸೂಚಿಸಿದೆ. ಪಾದ್ರಿಯು ಯೋಹಾನ 1:1ನ್ನು ಓದಿದಾಗ ಗ್ರೀಕ್‌ ಭಾಷೆಯಲ್ಲಿ “ದೇವರು” ಮತ್ತು “ದೇವನು” ಎಂಬುದರ ನಡುವೆ ಇರುವ ವ್ಯತ್ಯಾಸವನ್ನು ಮಾರಿಯೋ ತಾನೇ ವಿವರಿಸಿದನು. ಉಲ್ಲೇಖಿಸಲಾದ ಪ್ರತಿಯೊಂದು ಬೈಬಲ್‌ ವಚನವನ್ನೂ ಅವನೇ ವಿವರಿಸಿದನು. ಪಾದ್ರಿಯು ತ್ರಯೈಕ್ಯವನ್ನು ರುಜುಪಡಿಸದೇ ಅಲ್ಲಿಂದ ಹೊರಟು ಹೋದನು. ನಮ್ಮಲ್ಲಿ ಸತ್ಯವಿತ್ತೆಂಬುದು ಮಾರಿಯೋ ಮತ್ತು ಅವನ ಪತ್ನಿಗೆ ಇದರಿಂದ ಖಾತ್ರಿಯಾಯಿತು. ಅವರು ಬೈಬಲ್‌ ಬೋಧನೆಗಳ ಅತ್ಯುತ್ತಮ ಸಮರ್ಥಕರಾದರು. ಹೀಗೆ ನಮ್ಮ ಮೊದಲನೇ ನೇಮಕವಾದ ವಿಸ್ತಾರ ಟೆರಿಟೊರಿ ಕ್ವೆನ್ಕ ಶಹರದಲ್ಲಿ ಸಭೆಗಳ ಸಂಖ್ಯೆ 33ರಿಂದ 63ಕ್ಕೆ ಏರಿದ್ದನ್ನು ನೋಡುವುದು ಎಂಥ ಸಂತೋಷ! ಅದು ನಿಶ್ಚಯವಾಗಿಯೂ ಮಹಾ ವಿಸ್ತರಣೆ!

ಬ್ರಾಂಚ್‌ನಿಂದ ವಿಸ್ತರಣೆಯ ನೋಟ

1970ರಲ್ಲಿ ಆ್ಯಲ್‌ ಶೂಲೋ ಎಂಬವರೊಂದಿಗೆ ಗಯಾಕ್ವಿಲ್‌ನ ಬ್ರಾಂಚ್‌ಗೆ ಹೋಗುವಂತೆ ನನಗೆ ಹೇಳಲಾಯಿತು. ನಾವಿಬ್ಬರೂ ಬ್ರಾಂಚ್‌ ಆಫೀಸಿನ ಕೆಲಸವನ್ನು ನೋಡಿಕೊಂಡೆವು. ಜೋ ಸೆಕರ್ಯಾಕ್‌ ಎಂಬವರು ಇಡೀ ದೇಶದ 46 ಸಭೆಗಳಿಗಾಗಿ ಪ್ರಕಾಶನಗಳನ್ನು ಪ್ಯಾಕ್‌ ಮಾಡಲು ಪಾರ್ಟ್‌ ಟೈಮ್‌ ಕೆಲಸ ಮಾಡಿದರು. ಕ್ಲಾರಿಸ್‌ ಸ್ವಲ್ಪ ಸಮಯದ ತನಕ ಕ್ಷೇತ್ರ ಮಿಷನೆರಿಯಾಗಿ ಸೇವೆ ನಡಿಸಿದಾಗ ನಾನಾದರೋ ಬೆತೆಲಿನಲ್ಲಿ ಕೆಲಸಮಾಡಿದೆ. ಆಕೆ 55 ಜನರನ್ನು ದೀಕ್ಷಾಸ್ನಾನಕ್ಕೆ ನಡಿಸಲು ನೆರವಾದಳು. ಆಗಾಗ್ಗೆ ಸಮ್ಮೇಳನದಲ್ಲಿ ದೀಕ್ಷಾಸ್ನಾನವಾಗಲು ಅವಳ 3-5 ವಿದ್ಯಾರ್ಥಿಗಳಾದರೂ ಇರುತ್ತಿದ್ದರು.

ಉದಾಹರಣೆಗೆ, ಲೂಕ್ರೆಸ್ಯಾ ಎಂಬ ಸ್ತ್ರೀಯೊಂದಿಗೆ ಕ್ಲಾರಿಸ್‌ ಬೈಬಲ್‌ ಅಧ್ಯಯನ ಮಾಡಿದಳು. ಗಂಡನ ವಿರೋಧವಿದ್ದರೂ ಲೂಕ್ರೆಸ್ಯಾ ಕೊನೆಗೆ ದೀಕ್ಷಾಸ್ನಾನ ಹೊಂದಿದಳು, ರೆಗ್ಯುಲರ್‌ ಪಯನೀಯರಳಾದಳು. ತನ್ನ ಮಕ್ಕಳಿಗೆ ಯೆಹೋವನ ಮಾರ್ಗಗಳನ್ನು ಕಲಿಸಿದಳು. ಅವಳ ಇಬ್ಬರು ಗಂಡುಮಕ್ಕಳು ಈಗ ಹಿರಿಯರು, ಮತ್ತೊಬ್ಬನು ವಿಶೇಷ ಪಯನೀಯರನು. ಮಗಳು ಕೂಡ ಪಯನೀಯರ್‌ ಆಗಿದ್ದಾಳೆ. ಮೊಮ್ಮಗಳು ಒಬ್ಬ ಸಹೋದರನನ್ನು ಮದುವೆಯಾಗಿ ಈಗ ಇಬ್ಬರೂ ವಿಶೇಷ ಪಯನೀಯರರಾಗಿ ಇದ್ದಾರೆ. ಈ ಕುಟುಂಬವು ಅನೇಕರಿಗೆ ಸತ್ಯವನ್ನು ಕಲಿಯಲು ಸಹಾಯಮಾಡಿದೆ.

ಎಕ್ವಡಾರ್‌ನಲ್ಲಿ 1980ರೊಳಗೆ ಸುಮಾರು 5,000 ಪ್ರಚಾರಕರಿದ್ದರು. ಇಷ್ಟು ಜನರಿಗೆ ನಮ್ಮ ಬ್ರಾಂಚ್‌ ಈಗ ಚಿಕ್ಕದಾಯಿತು. ಸಹೋದರನೊಬ್ಬನು ಗಯಾಕ್ವಿಲ್‌ನ ಹೊರ ಪ್ರದೇಶದಲ್ಲಿ ಸುಮಾರು 80 ಎಕರೆ ಸ್ಥಳವನ್ನು ನಮಗೆ ನೀಡಿದನು. 1984ರಲ್ಲಿ ಈ ಸ್ಥಳದಲ್ಲಿ ನಾವು ಹೊಸ ಬ್ರಾಂಚ್‌ ಆಫೀಸ್‌ ಮತ್ತು ಎಸಂಬ್ಲಿ ಹಾಲ್‌ ಕಟ್ಟತೊಡಗಿದೆವು. 1987ರಲ್ಲಿ ಅವುಗಳ ಸಮರ್ಪಣೆಯಾಯಿತು.

ವಿಸ್ತರಣೆಗೆ ಸಹಾಯಹಸ್ತ

ವರ್ಷಗಳು ದಾಟಿದಷ್ಟಕ್ಕೆ ಬೇರೆ ದೇಶಗಳಿಂದ ಅನೇಕ ಪ್ರಚಾರಕರು ಮತ್ತು ಪಯನೀಯರರು ಎಕ್ವಡಾರ್‌ಗೆ ಬಂದು ರಾಜ್ಯ ಪ್ರಚಾರಕರ ಅಗತ್ಯವಿದ್ದಲ್ಲಿ ನೆರವು ನೀಡುವುದನ್ನು ನೋಡುವುದು ಹೃದಯೋಲ್ಲಾಸದ ಸಂಗತಿ. ನನ್ನ ಮನಸ್ಸಿನಲ್ಲಿ ಹಚ್ಚಹಸುರಾಗಿ ಉಳಿದಿರುವ ಒಂದು ಉದಾಹರಣೆಯು, ಕೆನಡದ ನಿವೃತ್ತ ಶಾಲಾ ಅಧ್ಯಾಪಕ ಆ್ಯಂಡೀ ಕಿಡ್‌ ಎಂಬವರದ್ದು. ಅವರು 1985ರಲ್ಲಿ 70 ವಯಸ್ಸಿನವರಿದ್ದಾಗ ಎಕ್ವಡಾರಿಗೆ ಸ್ಥಳಾಂತರಿಸಿದರು ಮತ್ತು ಮರಣದ ತನಕ ನಂಬಿಗಸ್ತರಾಗಿ ಸೇವೆ ಮಾಡುತ್ತಾ 2008ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ತೀರಿಕೊಂಡರು. ನಾನು ಮೊದಲಾಗಿ ಅವರನ್ನು ತಮ್ಮ ನೇಮಕದಲ್ಲಿ ಕಂಡಾಗ ಅವರು ಒಂದು ಚಿಕ್ಕ ಸಭೆಯಲ್ಲಿ ಒಬ್ಬರೇ ಮೇಲ್ವಿಚಾರಕರಾಗಿ ಸೇವೆಮಾಡುತ್ತಿದ್ದರು. ಸ್ಪ್ಯಾನಿಷ್‌ ಭಾಷೆಯನ್ನಾಡಲು ಒದ್ದಾಡುತ್ತಾ ಸಾರ್ವಜನಿಕ ಭಾಷಣವನ್ನು ಕೊಡುತ್ತಿದ್ದರು ಮತ್ತು ನಂತರ ಕಾವಲಿನಬುರುಜು ಅಧ್ಯಯನವನ್ನು ನಡೆಸುತ್ತಿದ್ದರು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಹಾಗೂ ಸೇವಾ ಕೂಟದಲ್ಲಿನ ಹೆಚ್ಚಿನ ಭಾಗಗಳನ್ನು ಸಹ ಅವರು ನಿರ್ವಹಿಸುತ್ತಿದ್ದರು! ಇಂದು ಆ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಎರಡು ಸಭೆಗಳಿವೆ. ಅಲ್ಲಿ ಸುಮಾರು 200 ಪ್ರಚಾರಕರೂ ಅನೇಕ ಸ್ಥಳೀಕ ಹಿರಿಯರೂ ಇದ್ದಾರೆ.

ಅರ್ನೆಸ್ಟೋ ಡಾಯಸ್‌ ಎಂಬ ಇನ್ನೊಬ್ಬ ಸಹೋದರನು ಅಮೆರಿಕದಿಂದ ತನ್ನ ಕುಟುಂಬದೊಂದಿಗೆ ಎಕ್ವಡಾರ್‌ಗೆ ಬಂದು ಎಂಟು ತಿಂಗಳಾದ ಮೇಲೆ ಅಂದದ್ದು: “ನಮ್ಮ ಮೂವರು ಮಕ್ಕಳು ಭಾಷೆಯನ್ನು ಚೆನ್ನಾಗಿ ಕಲಿತು ಈಗ ಅತ್ಯುತ್ತಮ ಬೋಧಕರಾಗಿದ್ದಾರೆ. ತಂದೆಯಾದ ನಾನು ಈ ವ್ಯವಸ್ಥೆಯಲ್ಲಿ ಅಶಕ್ಯವೆಂದು ಕಂಡುಬಂದಿದ್ದ ಗುರಿಯನ್ನು ಮುಟ್ಟಿದ್ದೇನೆ, ಅಂದರೆ ರೆಗ್ಯುಲರ್‌ ಪಯನೀಯರನಾಗಿ ನನ್ನ ಕುಟುಂಬದೊಂದಿಗೆ ಪೂರ್ಣ ಸಮಯದ ಸೇವೆಯಲ್ಲಿ ಭಾಗವಹಿಸುತ್ತಿದ್ದೇನೆ. ಒಟ್ಟಾಗಿ ನಾವು 25 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೇವೆ. ಇದೆಲ್ಲವೂ ನಮ್ಮ ಕುಟುಂಬವನ್ನು ಹೆಚ್ಚು ಐಕ್ಯಗೊಳಿಸಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನಾವು ಹಿಂದೆಂದೂ ಅನುಭವಿಸದೇ ಇದ್ದ ರೀತಿಯಲ್ಲಿ ಯೆಹೋವನಿಗೆ ಆಪ್ತರಾಗಿದ್ದೇವೆ.” ಇಂಥ ಪ್ರಿಯ ಸಹೋದರ ಸಹೋದರಿಯರನ್ನು ನಾವು ತುಂಬಾ ಗಣ್ಯಮಾಡುತ್ತೇವೆ!

ಅಧಿಕ ಬ್ರಾಂಚ್‌ ವಿಸ್ತರಣಾಕಾರ್ಯವು 1994ರಲ್ಲಾಯಿತು. ಸಾಧನ ಸೌಕರ್ಯಗಳನ್ನು ಇಮ್ಮಡಿಗೊಳಿಸಬೇಕಾಯಿತು. 2005ರಲ್ಲಿ ನಾವು 50,000 ಪ್ರಚಾರಕರ ಸಂಖ್ಯೆಯನ್ನು ದಾಟಿದೆವು; ಇನ್ನೂ ಹೆಚ್ಚಿನ ಬ್ರಾಂಚ್‌ ವಿಸ್ತರಣೆ ಬೇಕಾಗಿತ್ತು. ದೊಡ್ಡ ಎಸಂಬ್ಲಿ ಹಾಲ್‌, ನಿವಾಸಕ್ಕಾಗಿ ಹೊಸ ಕಟ್ಟಡ, ಭಾಷಾಂತರದ ಆಫೀಸುಗಳೂ ಇದರಲ್ಲಿ ಕೂಡಿದ್ದವು. ಈ ಹೊಸ ಸೌಕರ್ಯಗಳನ್ನು ಅಕ್ಟೋಬರ್‌ 31, 2009ರಲ್ಲಿ ಸಮರ್ಪಣೆ ಮಾಡಲಾಯಿತು.

ಹಿಂದೆ 1942ರಲ್ಲಿ ನನ್ನನ್ನು ಶಾಲೆಯಿಂದ ಹೊರಹಾಕಿದಾಗ ಅಮೆರಿಕದಲ್ಲಿ ಸುಮಾರು 60,000 ಸಾಕ್ಷಿಗಳಿದ್ದರು. ಈಗ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಇದ್ದಾರೆ. ನಾವು ಎಕ್ವಡಾರಿಗೆ 1966ರಲ್ಲಿ ಬಂದಾಗ ಅಲ್ಲಿದ್ದ ರಾಜ್ಯ ಪ್ರಚಾರಕರು 1,400 ಮಂದಿ. ಈಗ 68,000ಕ್ಕಿಂತಲೂ ಹೆಚ್ಚಿದ್ದಾರೆ. ಅಲ್ಲಿ 1,20,000 ಬೈಬಲ್‌ ಅಧ್ಯಯನಗಳು ನಡೆಸಲ್ಪಡುವುದನ್ನು ಮತ್ತು 2009ರಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ 2,32,000 ಮಂದಿ ಹಾಜರಿದ್ದದ್ದನ್ನು ನೋಡುವಾಗ ಇನ್ನೂ ಹೆಚ್ಚು ಜನರು ಬರಲಿದ್ದಾರೆಂಬುದು ನಿಶ್ಚಯ. ನಿಜವಾಗಿಯೂ ಯೆಹೋವನು ನಾವೆಂದೂ ನಿರೀಕ್ಷಿಸದಿದ್ದ ರೀತಿಯಲ್ಲಿ ತನ್ನ ಜನರನ್ನು ಆಶೀರ್ವದಿಸಿದ್ದಾನೆ. ಇಂಥ ಮಹಾ ವಿಸ್ತರಣೆಯ ಸಮಯದಲ್ಲಿ ಹಾಗೂ ಸ್ಥಳದಲ್ಲಿ ಜೀವಿಸುತ್ತಾ ಇರುವುದು ಅದೆಷ್ಟು ರೋಮಾಂಚಕ! *

[ಪಾದಟಿಪ್ಪಣಿ]

^ ಪ್ಯಾರ. 34 ಈ ಲೇಖನವು ಪ್ರಕಾಶಿಸಲ್ಪಡಲು ಸಿದ್ಧವಾಗುತ್ತಿದ್ದ ಸಮಯಾವಧಿಯಲ್ಲಿ ಹಾರ್ಲೆ ಹ್ಯಾರಿಸ್‌ರವರು ಯೆಹೋವನಿಗೆ ನಂಬಿಗಸ್ತರಾಗಿ ತೀರಿಕೊಂಡರು.

[ಪುಟ 5ರಲ್ಲಿರುವ ಚಿತ್ರಗಳು]

ಹೊರಾಂಗಣ ಸಮ್ಮೇಳನ (1981) ಮತ್ತು ಅದೇ ಸ್ಥಳದಲ್ಲಿರುವ ಗಯಾಕ್ವಿಲ್‌ ಎಸಂಬ್ಲಿ ಹಾಲ್‌ (2009)