ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೊತೆವಿಶ್ವಾಸಿಗಳನ್ನು ಗೌರವಿಸಲು ಮುಂದಾಗಿರಿ

ಜೊತೆವಿಶ್ವಾಸಿಗಳನ್ನು ಗೌರವಿಸಲು ಮುಂದಾಗಿರಿ

ಜೊತೆವಿಶ್ವಾಸಿಗಳನ್ನು ಗೌರವಿಸಲು ಮುಂದಾಗಿರಿ

“ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.”—ರೋಮ. 12:10.

1, 2. (ಎ) ರೋಮನ್ನರಿಗೆ ಬರೆದ ಪತ್ರದಲ್ಲಿ ಪೌಲನು ಯಾವ ಬುದ್ಧಿವಾದವನ್ನು ಕೊಡುತ್ತಾನೆ? (ಬಿ) ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸುವೆವು?

ಕ್ರೈಸ್ತರಾದ ನಾವು ಸಭೆಯಲ್ಲಿ ಪರಸ್ಪರ ಪ್ರೀತಿಯನ್ನು ತೋರಿಸುವುದು ಎಷ್ಟು ಪ್ರಾಮುಖ್ಯವೆಂಬುದನ್ನು ಅಪೊಸ್ತಲ ಪೌಲನು ರೋಮನ್ನರಿಗೆ ಬರೆದ ತನ್ನ ಪತ್ರದಲ್ಲಿ ಒತ್ತಿಹೇಳುತ್ತಾನೆ. ನಮ್ಮ ಪ್ರೀತಿಯು ‘ನಿಷ್ಕಪಟವಾಗಿರಬೇಕು’ ಎಂದು ನಮಗೆ ನೆನಪಿಸುತ್ತಾನೆ. “ಸಹೋದರ ಪ್ರೀತಿಯ” ಕುರಿತು ಸಹ ತಿಳಿಸುತ್ತಾ ನಾವದನ್ನು ‘ಕೋಮಲ ಮಮತೆಯಿಂದ’ ತೋರಿಸಬೇಕು ಎಂದು ಹೇಳಿದ್ದಾನೆ.—ರೋಮ. 12:9, 10ಎ.

2 ಸಹೋದರ ಪ್ರೀತಿ ತೋರಿಸುವುದೆಂದರೆ ಇತರರ ಕಡೆಗೆ ಬರೇ ಸ್ನೇಹಪರ ಭಾವನೆಗಳು ಇರುವುದಷ್ಟೇ ಅಲ್ಲ. ಅಂಥ ಭಾವನೆಗಳನ್ನು ಕ್ರಿಯೆಗಳಿಂದ ತೋರಿಸಬೇಕು. ಎಷ್ಟೆಂದರೂ ಪ್ರೀತಿಯನ್ನು ನಾವು ಕ್ರಿಯೆಯಲ್ಲಿ ತೋರಿಸಿದ ಹೊರತು ನಮಗೆ ಇತರರಲ್ಲಿರುವ ಪ್ರೀತಿ, ಮಮತೆಯನ್ನು ಯಾರೂ ತಿಳಿಯಲಾರರು. ಆದುದರಿಂದಲೇ “ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ” ಎಂಬ ಬುದ್ಧಿವಾದವನ್ನು ಪೌಲನು ಕೂಡಿಸಿದನು. (ರೋಮ. 12:10ಬಿ) ಗೌರವ ತೋರಿಸುವುದರಲ್ಲಿ ಏನೆಲ್ಲಾ ಸೇರಿದೆ? ಜೊತೆ ವಿಶ್ವಾಸಿಗಳಿಗೆ ಗೌರವ ತೋರಿಸುವುದರಲ್ಲಿ ಮುಂದಾಗಿರುವುದು ಏಕೆ ಪ್ರಾಮುಖ್ಯ? ನಾವು ಅದನ್ನು ಮಾಡುವುದು ಹೇಗೆ?

ಇತರರನ್ನು ಗೌರವಿಸುವುದರ ಅರ್ಥ

3. ಬೈಬಲಿನ ಮೂಲ ಭಾಷೆಗಳಲ್ಲಿ “ಗೌರವ” ಎಂಬ ಶಬ್ದಕ್ಕೆ ಯಾವ ಅರ್ಥವಿದೆ?

3 “ಗೌರವ” ಎಂಬ ಶಬ್ದದ ಮುಖ್ಯ ಹೀಬ್ರು ಪದರೂಪಕ್ಕೆ “ಭಾರ” ಎಂಬ ಅಕ್ಷರಾರ್ಥವಿದೆ. ಗೌರವಿಸಲಾಗುವ ವ್ಯಕ್ತಿಯನ್ನು ಭಾರವುಳ್ಳ ಅಥವಾ ಪ್ರಭಾವವುಳ್ಳ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ. ಅದೇ ಹೀಬ್ರು ಪದರೂಪವನ್ನು ಬೈಬಲು ಅನೇಕಾವರ್ತಿ “ಘನತೆ” ಎಂದೂ ಭಾಷಾಂತರಿಸಿದೆ. ಇದು ಗೌರವಾನ್ವಿತ ವ್ಯಕ್ತಿಗೆ ತೋರಿಸಲಾಗುವ ಹೆಚ್ಚಿನ ಮರ್ಯಾದೆಯನ್ನು ಸೂಚಿಸುತ್ತದೆ. (ಆದಿ. 45:13, NIBV) ಬೈಬಲಿನಲ್ಲಿ “ಗೌರವ” ಎಂದು ಭಾಷಾಂತರಿಸಲಾದ ಗ್ರೀಕ್‌ ಪದಕ್ಕೆ ಮಾನ್ಯತೆ, ಮೌಲ್ಯ, ಅಮೂಲ್ಯ ಎಂಬ ಅರ್ಥವಿದೆ. (ಲೂಕ 14:10) ಹೌದು, ನಾವು ಗೌರವಿಸುವಂಥ ಜನರು ನಮಗೆ ಮಾನ್ಯರೂ ಅಮೂಲ್ಯರೂ ಆಗಿದ್ದಾರೆ.

4, 5. ಗೌರವದಿಂದ ವೀಕ್ಷಿಸುವುದು ಮತ್ತು ಗೌರವದಿಂದ ಉಪಚರಿಸುವುದು ಹೇಗೆ ಒಂದಕ್ಕೊಂದು ಸಂಬಂಧಿಸಿವೆ? ದೃಷ್ಟಾಂತಿಸಿರಿ.

4 ಇತರರಿಗೆ ಗೌರವ ತೋರಿಸುವುದರಲ್ಲಿ ಏನು ಒಳಗೂಡಿದೆ? ನಾವು ಇತರರಿಗೆ ಗೌರವ ತೋರಿಸಬೇಕಾದರೆ ಮೊದಲು ಅವರನ್ನು ಗೌರವದಿಂದ ವೀಕ್ಷಿಸಬೇಕು ಅಂದರೆ ಅವರ ಬಗ್ಗೆ ನಮ್ಮ ಹೃದಯದಲ್ಲಿ ಆದರಗೌರವ ಇರಬೇಕು. ನಮ್ಮ ಈ ವೀಕ್ಷಣೆಯು ನಾವು ಬೇರೆಯವರನ್ನು ಹೇಗೆ ಉಪಚರಿಸುತ್ತೇವೆ ಎಂಬುದರ ಮೇಲೂ ಪರಿಣಾಮ ಬೀರುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಾವು ಪ್ರಥಮವಾಗಿ ನಮ್ಮ ಸಹೋದರರನ್ನು ಗೌರವದಿಂದ ವೀಕ್ಷಿಸಿದರೆ ಮಾತ್ರ ನಾವು ಅವರನ್ನು ಗೌರವದಿಂದ ಉಪಚರಿಸಲು ಸಾಧ್ಯ.

5 ಕ್ರೈಸ್ತನೊಬ್ಬನು ಜೊತೆ ವಿಶ್ವಾಸಿಗಳನ್ನು ಹೃತ್ಪೂರ್ವಕ ಆದರದಿಂದ ಕಾಣದಿದ್ದರೆ ಅವರಿಗೆ ನಿಜ ಗೌರವವನ್ನು ತೋರಿಸುವುದು ಹೇಗೆ? (3 ಯೋಹಾ. 9, 10) ಸಸಿಯು ಒಳ್ಳೇ ಮಣ್ಣಲ್ಲಿ ಬೇರೂರಿದ್ದರೆ ಮಾತ್ರವೇ ಸಮೃದ್ಧವಾಗಿ ಬೆಳೆದು ಬಾಳುವುದು. ಹಾಗೆಯೇ ಗೌರವವು ಹೃದಯದಲ್ಲಿ ಆಳವಾಗಿ ಬೇರೂರಿದ್ದರೆ ಮಾತ್ರ ಯಥಾರ್ಥವಾಗಿ ಬೆಳೆದು ಬಾಳುವುದು. ನಾವು ಇತರರನ್ನು ಹೃತ್ಪೂರ್ವಕವಾಗಿ ಗೌರವಿಸದಿದ್ದಲ್ಲಿ ಅವರ ಕಡೆಗಿನ ನಮ್ಮ ಗೌರವವು ಇಂದೊ ನಾಳೆಯೊ ಬಾಡಿಹೋಗುವುದು, ಕೆಟ್ಟ ಮಣ್ಣಿನಲ್ಲಿ ಬೇರುಬಿಟ್ಟ ಸಸಿಯು ಬಾಡಿಹೋಗುವಂತೆಯೇ. ಆದುದರಿಂದಲೇ ಪೌಲನು ಗೌರವ ತೋರಿಸಬೇಕೆಂಬ ತನ್ನ ಬುದ್ಧಿವಾದಕ್ಕೆ ಮುಂಚಿತವಾಗಿ, “ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ” ಎಂಬ ಸ್ಪಷ್ಟ ಹೇಳಿಕೆಯನ್ನು ತಿಳಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ.—ರೋಮ. 12:9; 1 ಪೇತ್ರ 1:22 ಓದಿ.

“ದೇವರ ಸ್ವರೂಪದಲ್ಲಿ” ನಿರ್ಮಿಸಲ್ಪಟ್ಟವರಿಗೆ ಗೌರವ

6, 7. ಇತರರನ್ನು ನಾವು ಗೌರವದಿಂದ ಕಾಣಬೇಕು ಏಕೆ?

6 ಗೌರವದಿಂದ ಉಪಚರಿಸುವುದಕ್ಕೆ ಗೌರವದಿಂದ ವೀಕ್ಷಿಸುವದು ಅಗತ್ಯವಾಗಿರಲಾಗಿ ನಮ್ಮ ಸಹೋದರರೆಲ್ಲರನ್ನು ಗೌರವದಿಂದ ಕಾಣಲು ನಮಗಿರುವ ಬೈಬಲಾಧಾರಿತ ಕಾರಣಗಳನ್ನು ನಾವೆಂದೂ ನಿರ್ಲಕ್ಷಿಸಬಾರದು. ಅವುಗಳಲ್ಲಿ ಎರಡು ಕಾರಣಗಳನ್ನು ನಾವೀಗ ಪರಿಗಣಿಸೋಣ.

7 ಭೂಮಿಯಲ್ಲಿರುವ ಬೇರೆ ಜೀವಿಗಳಿಗಿಂತ ಭಿನ್ನವಾಗಿ ಮಾನವರಾದರೋ “ದೇವರ ಸ್ವರೂಪದಲ್ಲಿ” ನಿರ್ಮಿಸಲ್ಪಟ್ಟರು. (ಯಾಕೋ. 3:9) ಆದ್ದರಿಂದ ನಾವು ದೇವರಲ್ಲಿರುವ ಪ್ರೀತಿ, ವಿವೇಕ, ನ್ಯಾಯ ಎಂಬ ಗುಣಗಳನ್ನು ಹೊಂದಿದ್ದೇವೆ. ನಮ್ಮ ನಿರ್ಮಾಣಿಕನಿಂದ ನಾವು ಬೇರೇನನ್ನು ಹೊಂದಿದ್ದೇವೆ ಎಂಬುದನ್ನೂ ಗಮನಿಸಿ. ಕೀರ್ತನೆಗಾರನು ಹೇಳಿದ್ದು: “ಯೆಹೋವನೇ, . . . ಆಕಾಶಮಂಡಲದಲ್ಲಿ ನಿನ್ನ ವೈಭವವನ್ನು ಪ್ರಕಾಶಪಡಿಸಿದ್ದೀ. . . . [ಮನುಷ್ಯನನ್ನು] ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದಿಯಲ್ಲಾ; ಪ್ರಭಾವವನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿ.” (ಕೀರ್ತ. 8:1, 4, 5; 104:1) * ದೇವರು ಮನುಷ್ಯರಿಗೆ ಸ್ವಲ್ಪಮಟ್ಟಿನ ಪ್ರಭಾವ, ಮಾನ, ವೈಭವವನ್ನು ಕಿರೀಟವಾಗಿ ಇಲ್ಲವೆ ಭೂಷಣವಾಗಿ ಕೊಟ್ಟಿದ್ದಾನೆ. ಹೀಗೆ ನಾವು ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸುವಾಗ ವಾಸ್ತವದಲ್ಲಿ ಮಾನವ ಘನಮಾನಕ್ಕೆ ಯೆಹೋವನೇ ಮೂಲನೆಂದು ಅಂಗೀಕರಿಸುತ್ತೇವೆ. ಸಾಮಾನ್ಯ ಜನತೆಯನ್ನು ಗೌರವದಿಂದ ಕಾಣಲು ನಮಗೆ ಸಾಕಷ್ಟು ಸಕಾರಣಗಳಿರಲಾಗಿ ನಮ್ಮ ಜೊತೆವಿಶ್ವಾಸಿಗಳನ್ನು ನಾವೆಷ್ಟು ಹೆಚ್ಚು ಗೌರವದಿಂದ ಕಾಣಬೇಕು!—ಯೋಹಾ. 3:16; ಗಲಾ. 6:10.

ಒಂದೇ ಕುಟುಂಬಕ್ಕೆ ಸೇರಿದವರು

8, 9. ಜೊತೆವಿಶ್ವಾಸಿಗಳನ್ನು ಗೌರವದಿಂದ ಕಾಣಲು ಪೌಲನು ಯಾವ ಕಾರಣವನ್ನು ಕೊಡುತ್ತಾನೆ?

8 ನಾವು ಒಬ್ಬರನ್ನೊಬ್ಬರು ಏಕೆ ಗೌರವದಿಂದ ಕಾಣುತ್ತೇವೆಂಬುದಕ್ಕೆ ಇನ್ನೊಂದು ಕಾರಣವನ್ನು ಪೌಲನು ತಿಳಿಸಿದ್ದಾನೆ. ಗೌರವ ತೋರಿಸುವ ಕುರಿತ ತನ್ನ ಬುದ್ಧಿವಾದಕ್ಕೆ ಮುಂಚಿತವಾಗಿ ಅವನಂದದ್ದು: “ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ.” ಇಲ್ಲಿ “ಕೋಮಲ ಮಮತೆ” ಎಂದು ಭಾಷಾಂತರಿಸಲಾದ ಗ್ರೀಕ್‌ ಅಭಿವ್ಯಕ್ತಿಯು, ಪ್ರೀತಿಸುವ ಹಾಗೂ ಬೆಂಬಲಿಸುವ ಕುಟುಂಬದ ಬಲವಾದ ಐಕ್ಯಬಂಧಕ್ಕೆ ಸೂಚಿತವಾಗಿದೆ. ಹೀಗೆ ಆ ಅಭಿವ್ಯಕ್ತಿಯನ್ನು ಉಪಯೋಗಿಸುವ ಮೂಲಕ ಸಭೆಯಲ್ಲಿರುವ ಸಂಬಂಧವು ಸಹ ಅನ್ಯೋನ್ಯ ಕುಟುಂಬದಂತೆ ದೃಢವೂ ಪ್ರೀತಿಪರವೂ ಆಗಿರಬೇಕೆಂದು ಪೌಲನು ಒತ್ತಿಹೇಳುತ್ತಾನೆ. (ರೋಮ. 12:5) ಅಷ್ಟಲ್ಲದೆ ಈ ಮಾತುಗಳನ್ನು ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಬರೆದನೆಂದು ನೆನಪಿಡಿ. ಅವರೆಲ್ಲರೂ ಒಬ್ಬನೇ ತಂದೆಯಾದ ಯೆಹೋವನ ದತ್ತು ಮಕ್ಕಳು. ಆದ್ದರಿಂದ ಅವರು ಗಮನಾರ್ಹ ರೀತಿಯಲ್ಲಿ ಒಂದು ಅನ್ಯೋನ್ಯ ಕುಟುಂಬವಾಗಿದ್ದರು. ಆದಕಾರಣ ಪೌಲನ ದಿನದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೆ ಒಬ್ಬರನ್ನೊಬ್ಬರು ಗೌರವದಿಂದ ಕಾಣಲು ನಿಜವಾಗಿಯೂ ಬಲವಾದ ಕಾರಣವಿತ್ತು. ಇಂದಿನ ಅಭಿಷಿಕ್ತ ಕ್ರೈಸ್ತರ ವಿಷಯದಲ್ಲಿಯೂ ಇದು ಸತ್ಯ.

9 ‘ಬೇರೆ ಕುರಿಗಳ’ ಕುರಿತೇನು? (ಯೋಹಾ. 10:16) ಅವರಿನ್ನೂ ದೇವರ ದತ್ತು ಮಕ್ಕಳಾಗಿ ಸ್ವೀಕರಿಸಲ್ಪಡದಿದ್ದರೂ ಅವರು ಒಬ್ಬರನ್ನೊಬ್ಬರು ಸಹೋದರ ಮತ್ತು ಸಹೋದರಿ ಎಂದು ಕರೆಯುವುದು ಯಥಾಯೋಗ್ಯವಾಗಿದೆ. ಏಕೆಂದರೆ ಅವರು ಲೋಕವ್ಯಾಪಕವಾಗಿ ಐಕ್ಯವಾಗಿರುವ ಒಂದೇ ಕ್ರೈಸ್ತ ಕುಟುಂಬವಾಗಿದ್ದಾರೆ. (1 ಪೇತ್ರ 2:17; 5:9) ಹೀಗೆ ಈ ಬೇರೆ ಕುರಿಗಳವರು ಒಬ್ಬರನ್ನೊಬ್ಬರು “ಸಹೋದರ” ಅಥವಾ “ಸಹೋದರಿ” ಎಂದು ಕರೆಯುವುದನ್ನು ಪೂರ್ಣವಾಗಿ ಗಣ್ಯಮಾಡುವಲ್ಲಿ ಜೊತೆಕ್ರೈಸ್ತರನ್ನು ಹೃತ್ಪೂರ್ವಕ ಗೌರವದಿಂದ ಕಾಣಲು ಅವರಿಗೂ ಬಲವಾದ ಕಾರಣವಿದೆ.—1 ಪೇತ್ರ 3:8 ಓದಿ.

ಅಷ್ಟು ಪ್ರಾಮುಖ್ಯವೇಕೆ?

10, 11. ಜೊತೆವಿಶ್ವಾಸಿಗಳನ್ನು ಗೌರವದಿಂದ ವೀಕ್ಷಿಸುವುದೂ ಗೌರವದಿಂದ ಉಪಚರಿಸುವುದೂ ಏಕೆ ಅಷ್ಟು ಪ್ರಾಮುಖ್ಯ?

10 ಜೊತೆವಿಶ್ವಾಸಿಗಳನ್ನು ಗೌರವದಿಂದ ವೀಕ್ಷಿಸುವುದು ಮತ್ತು ಗೌರವದಿಂದ ಉಪಚರಿಸುವುದು ಅಷ್ಟು ಪ್ರಾಮುಖ್ಯವೇಕೆ? ಏಕೆಂದರೆ, ನಮ್ಮ ಸಹೋದರ ಸಹೋದರಿಯರಿಗೆ ಗೌರವವನ್ನು ತೋರಿಸುವಾಗ ನಾವು ಇಡೀ ಸಭೆಯ ಸುಕ್ಷೇಮ ಮತ್ತು ಐಕ್ಯಕ್ಕೆ ಮಹತ್ತಾದ ನೆರವನ್ನು ನೀಡುತ್ತೇವೆ.

11 ಯೆಹೋವನೊಂದಿಗಿನ ಆಪ್ತ ಸಂಬಂಧ ಮತ್ತು ಆತನ ಪವಿತ್ರಾತ್ಮದ ಬೆಂಬಲವೇ ನಿಜ ಕ್ರೈಸ್ತರಾದ ನಮ್ಮ ಬಲದ ಅತ್ಯಂತ ಮಹತ್ತಮ ಮೂಲಗಳು. (ಕೀರ್ತ. 36:7; ಯೋಹಾ. 14:26) ಅದೇ ಸಮಯದಲ್ಲಿ ಜೊತೆವಿಶ್ವಾಸಿಗಳು ನಮ್ಮನ್ನು ಗಣ್ಯಮಾಡುತ್ತಾರೆಂದು ತೋರಿಸುವಾಗ ನಾವು ಹುರಿದುಂಬಿಸಲ್ಪಡುತ್ತೇವೆ. (ಜ್ಞಾನೋ. 25:11) ಯಾರಾದರೂ ನಮ್ಮನ್ನು ಗೌರವದಿಂದ ಉದ್ದೇಶಿಸಿ ಮಾತಾಡುವಾಗ ಅಥವಾ ಉಪಚರಿಸುವಾಗ ನಾವು ಸಂತೋಷದಿಂದ ಹಿಗ್ಗುತ್ತೇವೆ. ಮಾತ್ರವಲ್ಲ ಜೀವದ ಮಾರ್ಗದಲ್ಲಿ ಹರ್ಷದಿಂದಲೂ ದೃಢಸಂಕಲ್ಪದಿಂದಲೂ ನಡೆಯುತ್ತಾ ಇರಲು ಬೇಕಾದ ಹೆಚ್ಚಿನ ಬಲವನ್ನು ಅದು ನಮಗೆ ಕೊಡುತ್ತದೆ. ನಿಮಗೂ ಇಂಥ ಅನುಭವವಾಗಿರಬಹುದು.

12. ನಾವು ಪ್ರತಿಯೊಬ್ಬರು ಸಭೆಯ ಸ್ನೇಹಪರ ಹಾಗೂ ಪ್ರೀತಿಪರ ಪರಿಸರಕ್ಕೆ ಹೇಗೆ ನೆರವಾಗಬಹುದು?

12 ಇತರರು ನಮ್ಮನ್ನು ಗೌರವದಿಂದ ವೀಕ್ಷಿಸಬೇಕೆಂಬ ನಮ್ಮ ಸ್ವಭಾವಸಿದ್ಧ ಅಪೇಕ್ಷೆಯನ್ನು ಯೆಹೋವನು ಬಲ್ಲನು. ಆದ್ದರಿಂದ ಆತನ ವಾಕ್ಯವು “ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ” ಎಂದು ಯೋಗ್ಯವಾಗಿಯೇ ನಮ್ಮನ್ನು ಪ್ರೇರೇಪಿಸುತ್ತದೆ. (ರೋಮ. 12:10; ಮತ್ತಾಯ 7:12 ಓದಿ.) ಈ ಕಾಲಾತೀತ ಸಲಹೆಯನ್ನು ಹೃತ್ಪೂರ್ವಕವಾಗಿ ಪಾಲಿಸುವ ಕ್ರೈಸ್ತರೆಲ್ಲರೂ ಕ್ರೈಸ್ತ ಸಹೋದರತ್ವದಲ್ಲಿನ ಸ್ನೇಹಪರ ಹಾಗೂ ಪ್ರೀತಿಪರ ಪರಿಸರಕ್ಕೆ ಇಂಬುಕೊಡುತ್ತಾರೆ. ಆದಕಾರಣ ನಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ನಾನು ಸಭೆಯಲ್ಲಿ ಸಹೋದರ-ಸಹೋದರಿಯರಿಗೆ ನನ್ನ ನಡೆನುಡಿಯ ಮೂಲಕ ಹೃತ್ಪೂರ್ವಕ ಗೌರವವನ್ನು ತೋರಿಸದೆ ಎಷ್ಟು ಸಮಯವಾಯಿತು?’—ರೋಮ. 13:8.

ಎಲ್ಲರಿಗೂ ನಿರ್ದಿಷ್ಟ ನೇಮಕ

13. (ಎ) ಗೌರವ ತೋರಿಸುವುದರಲ್ಲಿ ಯಾರು ಮುಂದಾಗಿರಬೇಕು? (ಬಿ) ರೋಮನ್ನರಿಗೆ 1:7ರಲ್ಲಿರುವ ಪೌಲನ ಮಾತುಗಳು ಏನನ್ನು ಸೂಚಿಸುತ್ತವೆ?

13 ಗೌರವ ತೋರಿಸುವುದರಲ್ಲಿ ಯಾರು ಮುಂದಾಗಬೇಕು? ಇಬ್ರಿಯರಿಗೆ ಬರೆದ ಪತ್ರದಲ್ಲಿ ಪೌಲನು ಕ್ರೈಸ್ತ ಹಿರಿಯರನ್ನು ‘ಮುಂದಾಳುತ್ವ ವಹಿಸುತ್ತಿರುವವರಾಗಿ’ ವರ್ಣಿಸುತ್ತಾನೆ. (ಇಬ್ರಿ. 13:17) ಹಿರಿಯರು ಅನೇಕ ಚಟುವಟಿಕೆಗಳಲ್ಲಿ ಮುಂದಾಳುತ್ವ ವಹಿಸುತ್ತಾರೆ ನಿಜ. ಆದರೆ ಮಂದೆಯ ಕುರುಬರಾಗಿರುವ ಅವರು ಜೊತೆವಿಶ್ವಾಸಿಗಳನ್ನು ಗೌರವಿಸುವುದರಲ್ಲಿ ಮಾತ್ರವಲ್ಲ ಜೊತೆಹಿರಿಯರನ್ನು ಗೌರವಿಸುವುದರಲ್ಲಿ ನಿಶ್ಚಯವಾಗಿಯೂ ಮುಂದಾಗುವ ಅಗತ್ಯವಿದೆ. ಉದಾಹರಣೆಗಾಗಿ ಸಭೆಯ ಆಧ್ಯಾತ್ಮಿಕ ಅಗತ್ಯಗಳನ್ನು ಚರ್ಚಿಸಲಿಕ್ಕಾಗಿ ಹಿರಿಯರು ಒಟ್ಟುಗೂಡುವಾಗ ಜೊತೆಹಿರಿಯರಲ್ಲೊಬ್ಬನು ಹೇಳುವ ಮಾತುಗಳಿಗೆ ಜಾಗ್ರತೆಯಿಂದ ಕಿವಿಗೊಡುವ ಮೂಲಕ ಪರಸ್ಪರ ಗೌರವ ತೋರಿಸುತ್ತಾರೆ. ಅದಲ್ಲದೆ ತೀರ್ಮಾನವನ್ನು ಮಾಡುವಾಗ ಎಲ್ಲ ಹಿರಿಯರ ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳನ್ನು ಪರಿಗಣನೆಗೆ ತಕ್ಕೊಳ್ಳುವ ಮೂಲಕ ಅವರು ಒಬ್ಬರಿಗೊಬ್ಬರು ಗೌರವ ತೋರಿಸುತ್ತಾರೆ. (ಅ. ಕಾ. 15:6-15) ಆದರೂ ನಾವು ನೆನಪಿನಲ್ಲಿಡಬೇಕು ಏನೆಂದರೆ ಪೌಲನು ರೋಮನ್ನರಿಗೆ ಬರೆದ ಪತ್ರವನ್ನು ಹಿರಿಯರಿಗೆ ಮಾತ್ರವಲ್ಲ ಇಡೀ ಸಭೆಗೆ ನಿರ್ದೇಶಿಸಿದ್ದನು. (ರೋಮ. 1:7) ಹೀಗೆ ಗೌರವವನ್ನು ತೋರಿಸುವುದರಲ್ಲಿ ಮುಂದಾಗುವ ಬುದ್ಧಿವಾದವು ವಿಸ್ತಾರವಾದ ಅರ್ಥದಲ್ಲಿ ಇಂದು ನಮಗೆಲ್ಲರಿಗೂ ಅನ್ವಯಿಸುತ್ತದೆ.

14. (ಎ) ಗೌರವ ತೋರಿಸುವುದರಲ್ಲಿ ಮತ್ತು ಗೌರವ ತೋರಿಸಲು ಮುಂದಾಗುವುದರಲ್ಲಿ ಇರುವ ವ್ಯತ್ಯಾಸವನ್ನು ದೃಷ್ಟಾಂತಿಸಿ. (ಬಿ) ನಾವು ಸ್ವತಃ ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬಹುದು?

14 ಪೌಲನ ಸಲಹೆಯ ಈ ಅಂಶವನ್ನು ಸಹ ಗಮನಿಸಿ. ರೋಮ್‌ನ ತನ್ನ ಜೊತೆವಿಶ್ವಾಸಿಗಳಿಗೆ ಬರೇ ಗೌರವ ತೋರಿಸುವಂತೆ ಅವನು ಪ್ರಬೋಧಿಸಲಿಲ್ಲ; ಗೌರವ ತೋರಿಸುವುದರಲ್ಲಿ ಮುಂದಾಗಿರಿ ಎಂದೂ ಹೇಳಿದನು. ಇದರಲ್ಲಿರುವ ವ್ಯತ್ಯಾಸವೇನು? ಈ ಉದಾಹರಣೆಯ ಕುರಿತು ಯೋಚಿಸಿರಿ. ಓದುಬಲ್ಲ ವಿದ್ಯಾರ್ಥಿಗಳ ಗುಂಪಿಗೆ ಓದಲು ಕಲಿಯುವಂತೆ ಉಪಾಧ್ಯಾಯನೊಬ್ಬನು ಬುದ್ಧಿ ಹೇಳುವನೊ? ಇಲ್ಲ. ಏಕೆಂದರೆ ಅವರಿಗೆ ಈ ಮೊದಲೇ ಓದು ತಿಳಿದಿದೆ. ಅದಕ್ಕೆ ಬದಲಾಗಿ ಉಪಾಧ್ಯಾಯನು ಅವರು ಇನ್ನೂ ಚೆನ್ನಾಗಿ ಓದಲು ಕಲಿಯುವಂತೆ ನೆರವಾಗಲು ಬಯಸುತ್ತಾನೆ. ತದ್ರೀತಿಯಲ್ಲಿ ನಿಜ ಕ್ರೈಸ್ತರ ಗುರುತುಚಿಹ್ನೆಯಾಗಿರುವ ಪ್ರೀತಿಯು ನಮ್ಮಲ್ಲಿರುವುದರಿಂದ ನಾವು ಈಗಾಗಲೇ ಒಬ್ಬರಿಗೊಬ್ಬರು ಗೌರವ ತೋರಿಸುತ್ತಿದ್ದೇವೆ. (ಯೋಹಾ. 13:35) ಆದರೂ ತಮ್ಮ ವಾಚನ ಕೌಶಲವನ್ನು ಪ್ರಗತಿಗೊಳಿಸುವ ಮೂಲಕ ಓದುಬಲ್ಲ ವಿದ್ಯಾರ್ಥಿಗಳು ಹೇಗೆ ಹೆಚ್ಚು ಪ್ರಗತಿಮಾಡಬಲ್ಲರೋ ಹಾಗೆಯೇ ನಾವು ಗೌರವ ತೋರಿಸುವುದರಲ್ಲಿ ಮುಂದಾಗಿರುವ ಮೂಲಕ ಹೆಚ್ಚಿನ ಪ್ರಗತಿ ಮಾಡಬಲ್ಲೆವು. (1 ಥೆಸ. 4:9, 10) ಆ ನಿರ್ದಿಷ್ಟ ನೇಮಕವನ್ನು ನಮ್ಮಲ್ಲಿ ಪ್ರತಿಯೊಬ್ಬನಿಗೆ ಕೊಡಲಾಗಿದೆ. ನಮ್ಮನ್ನು ಹೀಗೆ ಕೇಳಿಕೊಳ್ಳೋಣ: ‘ನಾನದನ್ನು ಮಾಡುತ್ತಿದ್ದೇನೋ? ಅಂದರೆ ಸಭೆಯಲ್ಲಿ ಇತರರಿಗೆ ಗೌರವ ತೋರಿಸಲು ಮುಂದಾಗುತ್ತಿದ್ದೇನೋ?’

“ಬಡವರಿಗೆ” ಗೌರವ ತೋರಿಸಿರಿ

15, 16. (ಎ) ಗೌರವವನ್ನು ತೋರಿಸುವಾಗ ನಾವು ಯಾರನ್ನು ನಿರ್ಲಕ್ಷಿಸಬಾರದು? ಏಕೆ? (ಬಿ) ನಮ್ಮ ಸಹೋದರ ಸಹೋದರಿಯರೆಲ್ಲರ ಕಡೆಗೆ ನಮಗೆ ಹೃತ್ಪೂರ್ವಕ ಗೌರವವಿದೆಯೆಂದು ಯಾವುದು ತೋರಿಸಿಕೊಡುತ್ತದೆ?

15 ಗೌರವ ತೋರಿಸುವ ವಿಷಯದಲ್ಲಿ ಸಭೆಯಲ್ಲಿರುವ ಯಾರನ್ನು ನಾವು ನಿರ್ಲಕ್ಷಿಸಬಾರದು? ದೇವರ ವಾಕ್ಯ ಹೀಗನ್ನುತ್ತದೆ: “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.” (ಜ್ಞಾನೋ. 19:17) ಈ ಮಾತುಗಳಲ್ಲಿರುವ ಮೂಲತತ್ತ್ವವು ಗೌರವ ತೋರಿಸುವುದರಲ್ಲಿ ಮುಂದಾಗಲು ಪ್ರಯತ್ನಿಸುತ್ತಿರುವಾಗ ನಮ್ಮನ್ನು ಹೇಗೆ ಪ್ರಭಾವಿಸಬೇಕು?

16 ಸಾಮಾನ್ಯವಾಗಿ ಹೆಚ್ಚಿನ ಜನರು ತಮಗಿಂತ ಮೇಲಿನ ಸ್ಥಾನಮಾನಗಳಲ್ಲಿ ಇರುವವರಿಗೆ ಗೌರವತೋರಿಸುತ್ತಾರೆ. ಆದರೆ ಇದೇ ಜನರು ತಮಗಿಂತ ಕೆಳಗಿನ ಸ್ಥಾನದಲ್ಲಿರುವವರಿಗೆ ಅಥವಾ ಕನಿಷ್ಠರಿಗೆ ಸ್ವಲ್ಪವೂ ಗೌರವ ಕೊಡಲಿಕ್ಕಿಲ್ಲ. ಯೆಹೋವನಾದರೊ ಹಾಗಿಲ್ಲ. ಆತನನ್ನುವುದು: “ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು.” (1 ಸಮು. 2:30; ಕೀರ್ತ. 113:5-7) ತನ್ನನ್ನು ಸೇವಿಸುವ ಮತ್ತು ಗೌರವಿಸುವ ಎಲ್ಲರನ್ನು ಯೆಹೋವನು ಗೌರವಿಸುತ್ತಾನೆ. ‘ಬಡವರನ್ನು’ ಆತನು ನಿರ್ಲಕ್ಷಿಸುವುದಿಲ್ಲ. (ಯೋಬ 34:19 ಓದಿ; 2 ಪೂರ್ವ. 16:9) ಯೆಹೋವನನ್ನು ನಾವು ಅನುಕರಿಸಲು ಬಯಸುತ್ತೇವೆ ನಿಶ್ಚಯ. ಆದ್ದರಿಂದ ನಿಜ ಗೌರವವನ್ನು ತೋರಿಸುವುದರಲ್ಲಿ ನಾವೆಷ್ಟು ಪ್ರಾಮಾಣಿಕರಾಗಿದ್ದೇವೆಂದು ಪರೀಕ್ಷಿಸಲು ನಮ್ಮನ್ನು ಹೀಗೆ ಕೇಳಿಕೊಳ್ಳೋಣ: ‘ಸಭೆಯಲ್ಲಿ ಯಾವುದೇ ಪ್ರಮುಖ ಅಥವಾ ಜವಾಬ್ದಾರಿಯುತ ಸ್ಥಾನವಿಲ್ಲದವರನ್ನು ನಾನು ಹೇಗೆ ಉಪಚರಿಸುತ್ತೇನೆ?’ (ಯೋಹಾ. 13:14, 15) ಈ ಪ್ರಶ್ನೆಗೆ ಉತ್ತರವು ಇತರರ ಕಡೆಗೆ ನಮಗೆ ಎಷ್ಟರ ಮಟ್ಟಿಗಿನ ಹೃತ್ಪೂರ್ವಕ ಗೌರವವಿದೆ ಎಂಬುದನ್ನು ತೋರಿಸಿಕೊಡುತ್ತದೆ.—ಫಿಲಿಪ್ಪಿ 2:3, 4 ಓದಿ.

ನಿಮ್ಮ ಸಮಯ ಕೊಡಿ

17. ಗೌರವ ತೋರಿಸುವುದರಲ್ಲಿ ಮುಂದಾಗುವ ಒಂದು ಮುಖ್ಯ ವಿಧ ಯಾವುದು? ಹಾಗೇಕೆ?

17 ಸಭೆಯಲ್ಲಿರುವ ಎಲ್ಲರಿಗೂ ಗೌರವ ತೋರಿಸುವುದರಲ್ಲಿ ನಾವು ಮುಂದಾಗಬಲ್ಲ ಒಂದು ಮುಖ್ಯ ವಿಧ ಯಾವುದು? ನಮ್ಮ ಸಮಯವನ್ನು ಇತರರಿಗಾಗಿ ಕೊಡುವುದೇ. ಅದು ಹೇಗೆ? ಕ್ರೈಸ್ತರಾದ ನಮ್ಮ ಜೀವನವು ಕಾರ್ಯಮಗ್ನ ನಿಜ. ನಮ್ಮ ಹೆಚ್ಚಿನ ಸಮಯವು ಸಭೆಯ ಪ್ರಮುಖ ಚಟುವಟಿಕೆಗಳನ್ನು ನಿರ್ವಹಿಸುವುದಕ್ಕೆ ಬೇಕು. ಹೀಗೆ ನಮ್ಮ ಸಮಯವು ಅಮೂಲ್ಯವೆಂಬುದರಲ್ಲಿ ಆಶ್ಚರ್ಯವಿಲ್ಲ. ನಮ್ಮ ಸಹೋದರ ಸಹೋದರಿಯರು ತಮ್ಮ ಸಮಯದ ಹೆಚ್ಚಿನಾಂಶವನ್ನು ನಮಗಾಗಿ ಕೊಡಲೇಬೇಕೆಂದು ನಾವು ನಿರ್ಬಂಧಿಸಬಾರದು. ಅದೇರೀತಿ ಸಭೆಯಲ್ಲಿರುವ ಇತರರು ನಮ್ಮ ಸಮಯಕ್ಕಾಗಿ ತಗಾದೆಮಾಡಿ ಕೇಳದಿರುವಾಗ ಅದನ್ನು ನಾವು ಗಣ್ಯಮಾಡುತ್ತೇವೆ.

18. ಪುಟ 18ರಲ್ಲಿರುವ ಚಿತ್ರವು ತೋರಿಸುವ ಪ್ರಕಾರ ಜೊತೆವಿಶ್ವಾಸಿಗಳಿಗಾಗಿ ಸ್ವಲ್ಪ ಸಮಯ ಕೊಡಲು ಮನಸ್ಸಿದೆಯೆಂದು ನಾವು ಹೇಗೆ ಸೂಚಿಸಬಹುದು?

18 ಆದರೂ ನಾವು, ವಿಶೇಷವಾಗಿ ಸಭೆಯಲ್ಲಿ ಕುರುಬರಾಗಿರುವವರು ನಮ್ಮ ಜೊತೆವಿಶ್ವಾಸಿಗಳಿಗೆ ಸ್ವಲ್ಪ ಸಮಯ ಕೊಡಲಿಕ್ಕಾಗಿ ಸಿದ್ಧಮನಸ್ಸಿನಿಂದ ನಮ್ಮ ಕೆಲಸವನ್ನು ಸ್ವಲ್ಪ ನಿಲ್ಲಿಸುವುದು ಇತರರ ಕಡೆಗೆ ನಮಗಿರುವ ಗೌರವವನ್ನು ತೋರಿಸುತ್ತದೆ. ಯಾವ ವಿಧದಲ್ಲಿ? ನಮ್ಮ ಸಹೋದರರಿಗೆ ಸಮಯ ಕೊಡಲು ನಮ್ಮ ಚಟುವಟಿಕೆಗಳನ್ನು ನಿಲ್ಲಿಸುವ ಮೂಲಕ, ‘ನನ್ನ ಕೆಲಸಕ್ಕಿಂತ ನಿಮಗೆ ತುಸು ಸಮಯ ಕೊಡುವುದು ಹೆಚ್ಚು ಮಹತ್ವವೆಂದು ನನ್ನೆಣಿಕೆ. ಏಕೆಂದರೆ ನೀವು ನನ್ನ ನೆಚ್ಚಿನವರು’ ಎಂದು ಹೇಳುವಂತಿದೆ. (ಮಾರ್ಕ 6:30-34) ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ಸಹೋದರರಿಗೆ ತುಸು ಸಮಯ ಕೊಡಲಿಕ್ಕಾಗಿ ನಮ್ಮ ಕೆಲಸವನ್ನು ನಿಲ್ಲಿಸಲು ಮನಸ್ಸಿಲ್ಲದಿದ್ದರೆ ಅವರು ನಮಗೆ ಬೇಕಾಗಿಲ್ಲ ಎಂಬ ಭಾವನೆಯನ್ನು ಅವರಲ್ಲಿ ಹುಟ್ಟಿಸೇವು. ನಿಶ್ಚಯವಾಗಿ ತುರ್ತು ಕೆಲಸಗಳಿರುವಾಗ ನಾವದನ್ನು ಮಧ್ಯೆ ನಿಲ್ಲಿಸಸಾಧ್ಯವಿಲ್ಲ ಎಂಬುದು ಒಪ್ಪತಕ್ಕದ್ದೇ. ಆದರೂ ಸಹೋದರ ಸಹೋದರಿಯರಿಗೆ ಸ್ವಲ್ಪ ಸಮಯ ಕೊಡಲು ಅಥವಾ ಕೊಡದಿರಲು ನಮಗಿರುವ ಮನೋಭಾವವು ನಮ್ಮ ಹೃದಯದಲ್ಲಿ ಅವರ ಕಡೆಗೆ ಗೌರವವಿದೆಯೋ ಇಲ್ಲವೋ ಎಂಬುದನ್ನು ತಿಳಿಯಪಡಿಸುತ್ತದೆ.—1 ಕೊರಿಂ. 10:24.

ಮುಂದಾಗಲು ದೃಢಸಂಕಲ್ಪ ಮಾಡಿ

19. ಸಮಯವನ್ನು ಕೊಡುವುದಲ್ಲದೆ ಬೇರೆ ಯಾವ ವಿಧದಲ್ಲಿ ನಾವು ಜೊತೆವಿಶ್ವಾಸಿಗಳಿಗೆ ಗೌರವ ತೋರಿಸುತ್ತೇವೆ?

19 ಜೊತೆವಿಶ್ವಾಸಿಗಳಿಗೆ ಗೌರವ ತೋರಿಸಬಲ್ಲ ಬೇರೆ ಅನೇಕ ಪ್ರಮುಖ ವಿಧಗಳಿವೆ. ಉದಾಹರಣೆಗೆ, ನಮ್ಮ ಸಮಯವನ್ನು ಕೊಡುವಾಗ ನಮ್ಮ ಗಮನವನ್ನು ಕೂಡ ಅವರಿಗೆ ಕೊಡಬೇಕು. ಇಲ್ಲಿ ಕೂಡ ಯೆಹೋವನು ಮಾದರಿಯಿಟ್ಟಿದ್ದಾನೆ. ಕೀರ್ತನೆಗಾರ ದಾವೀದನು ಹೇಳುವುದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.” (ಕೀರ್ತ. 34:15) ವಿಶೇಷವಾಗಿ ನಮ್ಮ ಸಹೋದರರು ಸಹಾಯಕ್ಕಾಗಿ ಕೇಳುವಾಗ ನಮ್ಮ ಕಣ್ಣು ಮತ್ತು ಕಿವಿಗಳನ್ನು ಅಂದರೆ ಪೂರ್ಣ ಗಮನವನ್ನು ಅವರ ಕಡೆಗೆ ತಿರುಗಿಸುವ ಮೂಲಕ ನಾವು ಯೆಹೋವನನ್ನು ಅನುಕರಿಸಲು ಪ್ರಯತ್ನಿಸುತ್ತೇವೆ. ಹೀಗೆ ನಾವು ಅವರಿಗೆ ಗೌರವ ತೋರಿಸುತ್ತೇವೆ.

20. ಗೌರವ ತೋರಿಸುವ ಕುರಿತ ಯಾವ ವಿಷಯಗಳನ್ನು ನಾವು ನೆನಪಿನಲ್ಲಿಡಬೇಕು?

20 ನಾವು ಪರಿಗಣಿಸಿದ ಪ್ರಕಾರ, ಜೊತೆವಿಶ್ವಾಸಿಗಳನ್ನು ನಾವೇಕೆ ಹೃತ್ಪೂರ್ವಕ ಗೌರವದಿಂದ ವೀಕ್ಷಿಸಬೇಕೆಂಬುದನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿಡಿ. ಅಷ್ಟಲ್ಲದೆ ಎಲ್ಲರಿಗೂ, ಬಡವರಿಗೆ ಸಹ ಗೌರವವನ್ನು ತೋರಿಸುವುದರಲ್ಲಿ ಮುಂದಾಗಲು ಅವಕಾಶಗಳಿಗಾಗಿ ನಾವು ಹುಡುಕುತ್ತೇವೆ. ಈ ಹೆಜ್ಜೆಗಳನ್ನು ತಕ್ಕೊಳ್ಳುವ ಮೂಲಕ ಸಭೆಯಲ್ಲಿ ಸಹೋದರ ಪ್ರೀತಿ ಮತ್ತು ಐಕ್ಯದ ಬಂಧವನ್ನು ನಾವು ಬಲಗೊಳಿಸುವೆವು. ಆದ್ದರಿಂದ ನಾವೆಲ್ಲರೂ ಒಬ್ಬರಿಗೊಬ್ಬರು ಗೌರವವನ್ನು ತೋರಿಸುವುದು ಮಾತ್ರವಲ್ಲ ಗೌರವ ತೋರಿಸುವುದರಲ್ಲಿ ಮುಂದಾಗುತ್ತಾ ಇರೋಣ. ಇದನ್ನೇ ಮಾಡುವುದು ನಿಮ್ಮ ದೃಢಸಂಕಲ್ಪವೊ?

[ಪಾದಟಿಪ್ಪಣಿ]

^ ಪ್ಯಾರ. 7 ಎಂಟನೇ ಕೀರ್ತನೆಯ ದಾವೀದನ ಮಾತುಗಳು ಪ್ರವಾದನಾರೂಪವೂ ಆಗಿವೆ. ಅವು ಪರಿಪೂರ್ಣ ಮನುಷ್ಯನಾದ ಯೇಸು ಕ್ರಿಸ್ತನಿಗೆ ಸೂಚಿತವಾಗಿವೆ.—ಇಬ್ರಿ. 2:6-9.

ನಿಮಗೆ ನೆನಪಿದೆಯೊ?

• ಗೌರವದಿಂದ ವೀಕ್ಷಿಸುವುದು ಮತ್ತು ಗೌರವದಿಂದ ಉಪಚರಿಸುವುದು ಒಂದಕ್ಕೊಂದು ಹೇಗೆ ಸಂಬಂಧಿಸಿವೆ?

• ನಮ್ಮ ಜೊತೆವಿಶ್ವಾಸಿಗಳನ್ನು ಗೌರವಿಸಲು ನಮಗೆ ಯಾವ ಕಾರಣಗಳಿವೆ?

• ಒಬ್ಬರಿಗೊಬ್ಬರು ಗೌರವ ತೋರಿಸುವುದು ಏಕೆ ಪ್ರಾಮುಖ್ಯ?

• ನಮ್ಮ ಜೊತೆವಿಶ್ವಾಸಿಗಳಿಗೆ ಯಾವ ವಿಧಗಳಲ್ಲಿ ನಾವು ಗೌರವ ತೋರಿಸುತ್ತೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರ]

ಜೊತೆವಿಶ್ವಾಸಿಗಳಿಗೆ ನಾವು ಹೇಗೆ ಗೌರವ ತೋರಿಸಬಹುದು?