ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೆವನಗಳನ್ನು ಯೆಹೋವನು ವೀಕ್ಷಿಸುವ ವಿಧ

ನೆವನಗಳನ್ನು ಯೆಹೋವನು ವೀಕ್ಷಿಸುವ ವಿಧ

ನೆವನಗಳನ್ನು ಯೆಹೋವನು ವೀಕ್ಷಿಸುವ ವಿಧ

“ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು” ಎಂದನು ಆ ಪುರುಷ. ಆಗ ಸ್ತ್ರೀ ಅಂದದ್ದು: “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು.” ಈ ಮಾತುಗಳನ್ನು ಮೊದಲ ಮಾನವ ಹೆತ್ತವರಾದ ಆದಾಮಹವ್ವರು ದೇವರಿಗೆ ಹೇಳಿದಾಗ ಮಾನವಕುಲದಲ್ಲಿ ನೆವನಗಳನ್ನು ಕೊಡುವ ದೀರ್ಘ ಇತಿಹಾಸ ಆರಂಭಗೊಂಡಿತು.—ಆದಿ. 3:12, 13.

ಬೇಕುಬೇಕೆಂದು ಅವಿಧೇಯರಾದ ಆದಾಮಹವ್ವರಿಗೆ ಯೆಹೋವನು ವಿಧಿಸಿದ ಶಿಕ್ಷೆಯು ತಾನೆ ಆತನು ಅವರ ನೆವನಗಳನ್ನು ಒಪ್ಪಲಿಲ್ಲವೆಂದು ತೋರಿಸುತ್ತದೆ. (ಆದಿ. 3:16-19) ಹಾಗಾದರೆ ಯೆಹೋವನು ನಮ್ಮಿಂದ ಕೇಳಿಕೊಳ್ಳುವುದನ್ನು ಮಾಡದಿರುವಾಗ ನಾವು ಯಾವುದೇ ಕಾರಣವನ್ನು ಕೊಡುವಲ್ಲಿ ಆತನು ಒಪ್ಪುವುದೇ ಇಲ್ಲವೆಂದೊ? ಯೋಗ್ಯ ಕಾರಣಗಳನ್ನು ಆತನು ಒಪ್ಪುತ್ತಾನೊ? ನೆವನಗಳಿಗೂ ಯೋಗ್ಯ ಕಾರಣಗಳಿಗೂ ಇರುವ ವ್ಯತ್ಯಾಸವೇನು? ಉತ್ತರಕ್ಕಾಗಿ ನಾವು ಮೊದಲು ಇವುಗಳ ಅರ್ಥವೇನೆಂದು ತಿಳಿದುಕೊಳ್ಳೋಣ.

ಒಂದು ವಿಷಯವನ್ನು ಏಕೆ ಮಾಡಲಾಗಿದೆ, ಏಕೆ ಮಾಡಲಾಗಿಲ್ಲ ಅಥವಾ ಏಕೆ ಮಾಡಲಾಗುವುದಿಲ್ಲ ಎಂಬುದಕ್ಕೆ ಕೊಡಲಾಗುವ ಸತ್ಯ ವಿವರಣೆಯೇ ಯೋಗ್ಯ ಕಾರಣ. ಇದರಲ್ಲಿ, ಏನನ್ನೋ ಮಾಡಲು ತಪ್ಪಿದ್ದಕ್ಕಾಗಿ ಯಥಾರ್ಥವಾಗಿ ಕ್ಷಮೆಯಾಚಿಸುವುದೂ ಒಳಗೂಡಿದೆ. ದಯೆತೋರಿಸಲು ಹಾಗೂ ಕ್ಷಮಿಸಿಬಿಡಲು ಇದು ಒಂದು ಆಧಾರವಾಗಿರುತ್ತದೆ. ಆದರೆ ಆದಾಮಹವ್ವರು ಮಾಡಿದಂತೆ ನಿಜಸತ್ಯವನ್ನು ಮುಚ್ಚಿಡಲಿಕ್ಕಾಗಿ ಕೊಡುವ ಸಬೂಬು ಅಥವಾ ಸುಳ್ಳು ತರ್ಕವು ನೆವನವಾಗಿದೆ. ನೆವನ ಕೊಡಲು ಹೆಚ್ಚಾಗಿ ಇದೇ ಕಾರಣವಿರುವುದರಿಂದ ಹಾಗೆ ಹೇಳುವವರನ್ನು ಸಾಮಾನ್ಯವಾಗಿ ಸಂಶಯದಿಂದ ನೋಡಲಾಗುತ್ತದೆ.

ನಾವು ಕಾರಣಗಳನ್ನು ಕೊಡುತ್ತೇವೆ ನಿಜ, ಆದರೆ ಮುಖ್ಯವಾಗಿ ದೇವರ ಸೇವೆಯ ಸಂಬಂಧದಲ್ಲಿ ಕಾರಣ ಕೊಡುವಾಗ ‘ಸುಳ್ಳಾದ ತರ್ಕಗಳಿಂದ ನಮ್ಮನ್ನು ಮೋಸಗೊಳಿಸಿಕೊಳ್ಳದಂತೆ’ ನಾವು ಎಚ್ಚರವಹಿಸಬೇಕು. (ಯಾಕೋ. 1:22) ಆದುದರಿಂದ ‘ಕರ್ತನಿಗೆ ಯಾವುದು ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ’ ನಾವೀಗ ಕೆಲವು ಬೈಬಲ್‌ ಉದಾಹರಣೆಗಳನ್ನು ಹಾಗೂ ಮೂಲತತ್ತ್ವಗಳನ್ನು ಪರಿಶೀಲಿಸೋಣ.—ಎಫೆ. 5:10.

ದೇವರು ನಮ್ಮಿಂದ ಅಪೇಕ್ಷಿಸುವ ಸಂಗತಿ

ಯೆಹೋವನ ಜನರಾದ ನಾವು ಪಾಲಿಸಬೇಕಾದ ನಿರ್ದಿಷ್ಟ ಆಜ್ಞೆಗಳು ಬೈಬಲಿನಲ್ಲಿವೆ. ಉದಾಹರಣೆಗೆ, “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಕ್ರಿಸ್ತನ ಆಜ್ಞೆಯು ಅವನ ಎಲ್ಲ ನಿಜ ಹಿಂಬಾಲಕರಿಗೆ ಈಗಲೂ ಅನ್ವಯಿಸುತ್ತದೆ. (ಮತ್ತಾ. 28:19, 20) ಈ ಆಜ್ಞೆಯನ್ನು ಪಾಲಿಸುವುದು ಎಷ್ಟು ಪ್ರಾಮುಖ್ಯವೆಂಬುದನ್ನು ಅಪೊಸ್ತಲ ಪೌಲನ ಮಾತುಗಳು ತೋರಿಸುತ್ತವೆ. ಅವನಂದದ್ದು: “ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ!”—1 ಕೊರಿಂ. 9:16.

ಕೆಲವರು ತುಂಬ ಸಮಯದಿಂದ ಬೈಬಲ್‌ ಅಧ್ಯಯನ ಮಾಡುತ್ತಿದ್ದಾರೆ. ಆದರೂ ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಅವರಿಗೆ ಬಹಳ ಹಿಂಜರಿಕೆ. (ಮತ್ತಾ. 24:14) ಇನ್ನೂ ಕೆಲವರು ಈ ಮುಂಚೆ ಸಾರುವ ಕೆಲಸವನ್ನು ಮಾಡುತ್ತಿದ್ದರೂ ಈಗ ಸಾರುವುದನ್ನೇ ನಿಲ್ಲಿಸಿದ್ದಾರೆ. ಇದಕ್ಕೆ ಕೆಲವೊಮ್ಮೆ ಅವರು ಯಾವ ಕಾರಣಗಳನ್ನು ಕೊಡುತ್ತಾರೆ? ಹಿಂದಿನ ಕಾಲದಲ್ಲಿ ತನ್ನ ನಿರ್ದಿಷ್ಟ ಆಜ್ಞೆಗಳನ್ನು ಪಾಲಿಸಲು ತನ್ನ ಸೇವಕರು ಹಿಂಜರಿದಾಗ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?

ನೆವನಗಳನ್ನು ದೇವರು ಮೆಚ್ಚುವುದಿಲ್ಲ

“ಇದು ತುಂಬ ಕಷ್ಟ.” ಸಂಕೋಚ ಸ್ವಭಾವದವರಿಗಂತೂ ಸುವಾರ್ತೆ ಸಾರುವುದು ತಮ್ಮಿಂದಾಗದ ಕಷ್ಟಕೆಲಸ ಎಂದೆನಿಸಬಹುದು. ಯೋನನನ್ನು ತಕ್ಕೊಳ್ಳಿರಿ. ಅವನಿಂದ ನಾವೇನನ್ನು ಕಲಿಯಬಹುದು? ಯೆಹೋವನು ಕೊಟ್ಟ ನೇಮಕವು ಅವನಿಗೆ ತುಂಬ ಕಷ್ಟಕರವೆಂದು ಕಂಡಿತು. ಏಕೆಂದರೆ ನಿನೆವೆಯ ಮೇಲೆ ಯೆಹೋವನು ತರಲಿದ್ದ ನಾಶನವನ್ನು ಅವನು ಪ್ರಕಟಿಸಬೇಕಿತ್ತು. ಇದನ್ನು ಮಾಡಲು ಯೋನನು ಹೆದರಿದನು. ಹೆದರಲು ಕಾರಣವೂ ಇತ್ತು. ಏಕೆಂದರೆ ನಿನೆವೆ ಅಶ್ಶೂರದ ರಾಜಧಾನಿ. ಅಶ್ಶೂರ್ಯರು ತಮ್ಮ ಕ್ರೌರ್ಯಕ್ಕೆ ಕುಪ್ರಸಿದ್ಧರಾಗಿದ್ದರು. ಹಾಗಾಗಿ, ‘ನಾನು ಆ ಜನರ ಮಧ್ಯೆ ಹೇಗೆ ಬದುಕಿ ಉಳಿಯುವೆನೋ? ಅವರು ನನ್ನನ್ನು ಸುಮ್ಮನೆ ಬಿಟ್ಟಾರೇ?’ ಎಂದು ಯೋನನು ಯೋಚಿಸಿದ್ದಿರಬಹುದು. ಅವನು ಕೂಡಲೆ ಅಲ್ಲಿಂದ ಕಾಲುಕಿತ್ತನು. ಆದರೆ ಯೋನನ ಈ ನೆವನವನ್ನು ಯೆಹೋವನು ಒಪ್ಪಲಿಲ್ಲ. ನಿನೆವೆಗೆ ಹೋಗಿ ಸಾರುವಂತೆ ಪುನಃ ಅವನಿಗೆ ನೇಮಕವನ್ನು ಕೊಟ್ಟನು. ಈ ಸಾರಿ ಯೋನನು ನಿನೆವೆಯ ಜನರಿಗೆ ಧೈರ್ಯದಿಂದ ಸಾರಿದನು ಮತ್ತು ಯೆಹೋವನು ಅವನ ಕೆಲಸವನ್ನು ಆಶೀರ್ವದಿಸಿದನು.—ಯೋನ 1:1-3; 3:3, 4, 10.

ಸುವಾರ್ತೆ ಸಾರುವುದು ಕಷ್ಟದ ಕೆಲಸವೆಂದು ಅನಿಸುವುದಾದರೆ ಇದನ್ನು ನೆನಪಿನಲ್ಲಿಡಿ, ಏನೆಂದರೆ “ದೇವರಿಗೆ ಎಲ್ಲವೂ ಸಾಧ್ಯ.” (ಮಾರ್ಕ 10:27) ಸಹಾಯಕ್ಕಾಗಿ ಯೆಹೋವನಿಗೆ ಬೇಡುತ್ತಾ ಇರುವುದಾದರೆ ಆತನು ನಿಮ್ಮನ್ನು ಬಲಪಡಿಸುವನು ಮತ್ತು ಧೈರ್ಯ ತಕ್ಕೊಂಡು ಶುಶ್ರೂಷೆಯಲ್ಲಿ ಭಾಗವಹಿಸುವುದಾದರೆ ಆತನು ನಿಮ್ಮನ್ನು ಆಶೀರ್ವದಿಸುವನು ಎಂಬ ಭರವಸೆ ನಿಮಗಿರಲಿ.—ಲೂಕ 11:9-13.

“ನನಗೆ ಮನಸ್ಸೇ ಇಲ್ಲ.” ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸಲು ನಿಮಗೆ ಹೃತ್ಪೂರ್ವಕ ಇಚ್ಛೆ ಇಲ್ಲದಿರುವಲ್ಲಿ ಆಗೇನು? ಯೆಹೋವನು ನಿಮ್ಮಲ್ಲಿ ಕಾರ್ಯನಡಿಸಿ ನಿಮ್ಮ ಇಚ್ಛೆಗಳನ್ನು ಪ್ರಭಾವಿಸಶಕ್ತನೆಂದು ನೆನಪಿನಲ್ಲಿಡಿ. ಪೌಲನು ಹೇಳಿದ್ದು: “ತನ್ನ ಸುಸಂತೋಷದಿಂದ ನೀವು ಉದ್ದೇಶಿಸಿ ಕ್ರಿಯೆಗೈಯುವಂತೆ ನಿಮ್ಮಲ್ಲಿ ಕಾರ್ಯನಡಿಸುವಾತನು ದೇವರೇ ಆಗಿದ್ದಾನೆ.” (ಫಿಲಿ. 2:13) ಆದುದರಿಂದ ಆತನ ಚಿತ್ತವನ್ನು ಮಾಡುವ ಇಚ್ಛೆಯನ್ನು ನಿಮ್ಮಲ್ಲಿ ಉಂಟುಮಾಡುವಂತೆ ನೀವು ದೇವರನ್ನು ಕೇಳಿಕೊಳ್ಳಿರಿ. ರಾಜ ದಾವೀದನು ಮಾಡಿದ್ದೂ ಅದನ್ನೇ. “ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸು” ಎಂದವನು ಯೆಹೋವನನ್ನು ಬೇಡಿಕೊಂಡನು. (ಕೀರ್ತ. 25:4, 5) ಯೆಹೋವನಿಗೆ ಮೆಚ್ಚಿಕೆಯಾದದ್ದನ್ನು ಮಾಡಲು ನಿಮ್ಮನ್ನು ಪ್ರೇರಿಸುವಂತೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸುವ ಮೂಲಕ ನೀವು ಇದನ್ನೇ ಮಾಡಬಲ್ಲಿರಿ.

ನಾವು ತುಂಬ ದಣಿದಿರುವಾಗ ಅಥವಾ ನಿರುತ್ತೇಜನಗೊಂಡಿರುವಾಗ ರಾಜ್ಯ ಸಭಾಗೃಹದಲ್ಲಿ ಕೂಟಕ್ಕೆ ಹಾಜರಾಗಲು ಅಥವಾ ಶುಶ್ರೂಷೆಯಲ್ಲಿ ಭಾಗವಹಿಸಲು ಕೆಲವೊಮ್ಮೆ ನಮ್ಮನ್ನು ಒತ್ತಾಯಪಡಿಸಬೇಕಾಗುತ್ತದೆ ನಿಜ. ಹಾಗಾಗುವಲ್ಲಿ ನಮಗೆ ಯೆಹೋವನ ಮೇಲೆ ನಿಜವಾಗಿಯೂ ಪ್ರೀತಿಯಿಲ್ಲ ಎಂದನಿಸಬೇಕೊ? ಖಂಡಿತ ಇಲ್ಲ. ಹಿಂದಿನ ಕಾಲದ ನಂಬಿಗಸ್ತ ದೇವಸೇವಕರು ಸಹ ದೇವರ ಚಿತ್ತವನ್ನು ಮಾಡಲು ತುಂಬ ಶ್ರಮಪಡಬೇಕಾಯಿತು. ಉದಾಹರಣೆಗೆ, ದೇವರ ಆಜ್ಞೆಗಳಿಗೆ ವಿಧೇಯನಾಗಲಿಕ್ಕಾಗಿ ಪೌಲನು ತನ್ನ ‘ದೇಹವನ್ನು ಜಜ್ಜಿಕೊಂಡನೋ’ ಎಂಬಂತೆ ಪ್ರಯಾಸಪಟ್ಟನು. (1 ಕೊರಿಂ. 9:26, 27) ಆದುದರಿಂದ ಶುಶ್ರೂಷೆಯಲ್ಲಿ ಭಾಗವಹಿಸಲು ನಮ್ಮನ್ನು ಒತ್ತಾಯಿಸಿಕೊಳ್ಳಬೇಕಾದಾಗಲೂ ಯೆಹೋವನು ನಮ್ಮನ್ನು ಆಶೀರ್ವದಿಸುವನೆಂಬ ಖಾಚಿತ್ಯ ನಮಗಿರಬಲ್ಲದು. ಏಕೆ? ಏಕೆಂದರೆ ನಾವು ದೇವರ ಚಿತ್ತ ಮಾಡಲು ಪ್ರಯಾಸಪಡುವುದು ಯೋಗ್ಯವಾದ ಕಾರಣಕ್ಕಾಗಿಯೇ, ಅಂದರೆ ಯೆಹೋವನ ಮೇಲಿನ ಪ್ರೀತಿಯಿಂದಲೇ. ಹೀಗೆ ಮಾಡುವ ಮೂಲಕ, ಪರೀಕ್ಷೆಗಳ ಎದುರಲ್ಲಿ ದೇವರ ಸೇವಕರು ಆತನನ್ನು ತೊರೆದುಬಿಡುವರೆಂಬ ಸೈತಾನನ ವಾದವನ್ನು ನಾವು ಸುಳ್ಳೆಂದು ರುಜುಪಡಿಸುವೆವು.—ಯೋಬ 2:4.

“ನನಗೆ ಸ್ವಲ್ಪವೂ ಸಮಯವಿಲ್ಲ.” ತುಂಬ ಕಾರ್ಯಮಗ್ನರೆಂದು ನಿಮಗೆ ಅನಿಸುವ ಕಾರಣ ನೀವು ಶುಶ್ರೂಷೆಯಲ್ಲಿ ಭಾಗವಹಿಸದಿರಬಹುದು. ಹಾಗಿದ್ದಲ್ಲಿ ನೀವು ನಿಮ್ಮ ಆದ್ಯತೆಗಳನ್ನು ಮರುಪರಿಶೀಲಿಸುವುದು ಅತಿ ಮಹತ್ವ. ‘ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ’ ಎಂದು ಯೇಸು ಹೇಳಿದನಲ್ಲಾ. (ಮತ್ತಾ. 6:33) ಆ ಮಾರ್ಗದರ್ಶಕ ಮೂಲತತ್ತ್ವವನ್ನು ಅನುಸರಿಸಲಿಕ್ಕಾಗಿ ನೀವು ನಿಮ್ಮ ಜೀವನಶೈಲಿಯನ್ನು ಸರಳೀಕರಿಸಬೇಕಾಗಬಹುದು ಅಥವಾ ಮನೋರಂಜನೆಗೆ ಕೊಡುವ ಸಮಯವನ್ನು ಶುಶ್ರೂಷೆಗಾಗಿ ಬಳಸಬೇಕಾಗಬಹುದು. ಮನೋರಂಜನೆ ಹಾಗೂ ಇತರ ವೈಯಕ್ತಿಕ ಹವ್ಯಾಸಗಳು ಬೇಕು ನಿಜ. ಆದರೆ ಶುಶ್ರೂಷೆಯನ್ನು ಅಲಕ್ಷಿಸಲು ಅದು ಯೋಗ್ಯ ಕಾರಣವಲ್ಲ. ದೇವರ ಸೇವಕನು ತನ್ನ ಜೀವನದಲ್ಲಿ ಮೊದಲ ಸ್ಥಾನವನ್ನು ದೇವರ ರಾಜ್ಯಕ್ಕೆ ಕೊಡುತ್ತಾನೆ.

“ನಾನು ಇದಕ್ಕೆ ತಕ್ಕವನಲ್ಲ.” ಒಂದುವೇಳೆ ನೀವು ಸುವಾರ್ತೆಯ ಶುಶ್ರೂಷಕರಾಗಿರಲು ಅರ್ಹರಲ್ಲ ಎಂದು ನಿಮಗನಿಸೀತು. ಬೈಬಲ್‌ ಸಮಯದಲ್ಲಿ ಯೆಹೋವನ ಕೆಲವು ನಂಬಿಗಸ್ತ ಸೇವಕರಿಗೂ ಹೀಗೆಯೇ ಅನಿಸಿತು. ಆತನು ನೇಮಿಸಿದ ಕೆಲಸವನ್ನು ಮಾಡಲು ತಾವು ಯೋಗ್ಯರಲ್ಲ ಎಂದು ಅವರು ನೆನಸಿದರು. ಉದಾಹರಣೆಗಾಗಿ ಮೋಶೆಯನ್ನು ತಕ್ಕೊಳ್ಳಿ. ಯೆಹೋವನು ಅವನಿಗೆ ಒಂದು ನೇಮಕವನ್ನು ಕೊಟ್ಟಾಗ ಮೋಶೆಯು, “ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು; ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು. ತಾನು ಸಹಾಯಮಾಡುತ್ತೇನೆಂದು ಯೆಹೋವನು ಆಶ್ವಾಸನೆ ಕೊಟ್ಟ ಮೇಲೂ “ಸ್ವಾಮೀ, ಈ ಕಾರ್ಯಕ್ಕೆ ಬೇರೊಬ್ಬನನ್ನು ನೇಮಿಸಬೇಕು” ಎಂದು ಮೋಶೆ ಕೇಳಿಕೊಂಡನು. (ವಿಮೋ. 4:10-13) ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?

ಯೆಹೋವನು ಮೋಶೆಯಿಂದ ಆ ನೇಮಕವನ್ನು ಹಿಂದೆಗೆಯಲಿಲ್ಲ. ಆದರೆ ಆ ನೇಮಕವನ್ನು ಪೂರೈಸಲು ಅವನಿಗೆ ಸಹಾಯಕನಾಗಿ ಆರೋನನನ್ನು ನೇಮಿಸಿದನು. (ವಿಮೋ. 4:14-17) ಅಷ್ಟೇ ಅಲ್ಲದೆ ಮುಂದಣ ವರ್ಷಗಳಲ್ಲಿ ಯೆಹೋವನು ಮೋಶೆಗೆ ಬೆಂಬಲವಾಗಿದ್ದು ಅವನ ದೇವದತ್ತ ನೇಮಕಗಳನ್ನು ಯಶಸ್ವಿಯಾಗಿ ಪೂರೈಸಲು ಬೇಕಾದದ್ದೆಲ್ಲವನ್ನೂ ಒದಗಿಸಿದನು. ಇಂದು ನಿಮಗೂ ಶುಶ್ರೂಷೆಯನ್ನು ಪೂರೈಸಲು ಬೇಕಾದ ಸಹಾಯ ನೀಡುವಂತೆ ಯೆಹೋವನು ಅನುಭವೀ ಜೊತೆವಿಶ್ವಾಸಿಗಳನ್ನು ಪ್ರೇರಿಸುವನು ಎಂಬ ಭರವಸೆಯಿರಲಿ. ಎಲ್ಲಕ್ಕಿಂತಲೂ ಹೆಚ್ಚಾಗಿ ತಾನು ಆಜ್ಞಾಪಿಸಿರುವ ಕೆಲಸಕ್ಕೆ ದೇವರು ನಮ್ಮನ್ನು ಅರ್ಹರನ್ನಾಗಿ ಮಾಡುತ್ತಾನೆ ಎಂದು ಆತನ ವಾಕ್ಯವು ನಮಗೆ ಆಶ್ವಾಸನೆಯನ್ನೀಯುತ್ತದೆ.—2 ಕೊರಿಂ. 3:5; “ನನ್ನ ಜೀವನದ ಅತ್ಯಾನಂದಕರ ವರುಷಗಳು” ಚೌಕ ನೋಡಿ.

“ಒಬ್ಬರಿಂದ ನನಗೆ ತುಂಬ ನೋವಾಗಿದೆ.” ಕೆಲವು ಸಾರಿ ಜೊತೆವಿಶ್ವಾಸಿಗಳಿಂದ ನಮ್ಮ ಮನಸ್ಸಿಗೆ ನೋವಾಗುತ್ತದೆ. ಈ ಕಾರಣದಿಂದ ಕೆಲವರು ಶುಶ್ರೂಷೆಯಲ್ಲಿ ಭಾಗವಹಿಸುವುದನ್ನೂ ಕೂಟಗಳಿಗೆ ಹಾಜರಾಗುವುದನ್ನೂ ಬಿಟ್ಟುಬಿಡುತ್ತಾರೆ. ಹೀಗೆ ಆಧ್ಯಾತ್ಮಿಕವಾಗಿ ನಿಷ್ಕ್ರಿಯರಾಗಲು ಅವರು ಕೊಡುವ ಈ ಕಾರಣವನ್ನು ಯೆಹೋವನು ಖಂಡಿತವಾಗಿಯೂ ಒಪ್ಪುತ್ತಾನೆಂದು ಅವರೆಣಿಕೆ. ಯಾರಾದರೂ ನಮ್ಮನ್ನು ನೋಯಿಸಿದಾಗ ಅದು ನಮ್ಮ ಮನಸ್ಸನ್ನು ಕಲಕಿಸುತ್ತದೆ ನಿಜ. ಆದರೆ ಕ್ರೈಸ್ತ ಚಟುವಟಿಕೆಗಳನ್ನು ನಿಲ್ಲಿಸಿಬಿಡಲು ಅದು ಯೋಗ್ಯ ಕಾರಣವೊ? ಪೌಲ ಮತ್ತು ಅವನ ಜೊತೆವಿಶ್ವಾಸಿಯಾದ ಬಾರ್ನಬನನ್ನು ಪರಿಗಣಿಸಿ. ಭಿನ್ನಾಭಿಪ್ರಾಯದಿಂದಾಗಿ ಅವರ ಮಧ್ಯೆ ‘ತೀಕ್ಷ್ಣ ವಾಗ್ವಾದವುಂಟಾಯಿತು.’ ಇದರಿಂದ ಅವರ ಮನಸ್ಸಿಗೆ ನೋವಾಗಿದ್ದಿರಬಹುದು. (ಅ. ಕಾ. 15:39) ಆದರೆ ಈ ಕಾರಣಕ್ಕಾಗಿ ಅವರಲ್ಲಿ ಒಬ್ಬರಾದರೂ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಲಿಲ್ಲ, ಖಂಡಿತ ಇಲ್ಲ!

ತದ್ರೀತಿ, ಜೊತೆವಿಶ್ವಾಸಿಯು ನಿಮ್ಮ ಮನನೋಯಿಸಿದಾಗ ಒಂದು ವಿಷಯವನ್ನು ಮನಸ್ಸಿನಲ್ಲಿಡಿ, ಏನೆಂದರೆ ನಿಮ್ಮ ವಿರೋಧಿಯು ಅಪರಿಪೂರ್ಣನಾದ ಆ ಕ್ರೈಸ್ತ ಸಹೋದರನಲ್ಲ ಬದಲಿಗೆ ನಿಮ್ಮನ್ನು ನುಂಗಲು ಬಯಸುವ ಸೈತಾನನೇ. ಆದರೂ ‘ನೀವು ನಂಬಿಕೆಯಲ್ಲಿ ಸ್ಥಿರರಾಗಿದ್ದು ಪಿಶಾಚನನ್ನು ಎದುರಿಸಿದರೆ’ ಅವನು ಸೋತುಹೋಗುವನು. (1 ಪೇತ್ರ 5:8, 9; ಗಲಾ. 5:15) ಅಂಥ ಸ್ಥಿರ ನಂಬಿಕೆ ನಿಮ್ಮಲ್ಲಿರುವುದಾದರೆ ನೀವು ಎಂದಿಗೂ “ಆಶಾಭಂಗಪಡುವುದಿಲ್ಲ.”—ರೋಮ. 9:33.

ಬಯಸಿದಷ್ಟು ಸೇವೆ ಮಾಡಲಾಗದಿದ್ದರೆ?

ನೆವನಗಳ ಈ ಕೆಲವು ಉದಾಹರಣೆಗಳಿಂದ ನಮಗೇನು ತಿಳಿದುಬರುತ್ತದೆ? ಸುವಾರ್ತೆ ಸಾರುವ ನೇಮಕವೂ ಸೇರಿದಂತೆ ದೇವರ ನಿರ್ದಿಷ್ಟ ಆಜ್ಞೆಗಳನ್ನು ನಾವು ಪಾಲಿಸದಿರಲು ನ್ಯಾಯವಾದ ಯಾವುದೇ ಬೈಬಲಾಧಾರಿತ ಕಾರಣಗಳಿಲ್ಲ. ಆದಾಗ್ಯೂ ಶುಶ್ರೂಷೆಯನ್ನು ಪೂರ್ಣವಾಗಿ ಪೂರೈಸಲಾಗದಿರಲು ಕೆಲವೊಮ್ಮೆ ನಿಜವಾದ ಕಾರಣಗಳಿರಬಹುದು. ಬೈಬಲಾಧಾರಿತವಾದ ಇತರ ಜವಾಬ್ದಾರಿಗಳು ನಮಗಿರುವಾಗ ಸುವಾರ್ತೆ ಸಾರುವುದಕ್ಕೆ ಹೆಚ್ಚು ಸಮಯ ಕೊಡಲು ಆಗಲಿಕ್ಕಿಲ್ಲ. ಇನ್ನು ಕೆಲವೊಮ್ಮೆ ನಾವು ತೀರಾ ದಣಿದವರೂ ತುಂಬ ಅಸ್ವಸ್ಥರೂ ಆಗಿ ಯೆಹೋವನ ಸೇವೆಯಲ್ಲಿ ಬಯಸಿದಷ್ಟನ್ನು ಮಾಡಲು ಆಗಲಿಕ್ಕಿಲ್ಲ. ಹಾಗಿದ್ದರೂ ಯೆಹೋವನು ನಮ್ಮ ಹೃತ್ಪೂರ್ವಕ ಇಚ್ಛೆಯನ್ನು ಬಲ್ಲನು ಹಾಗೂ ನಮ್ಮ ಇತಿಮಿತಿಗಳನ್ನು ಪರಿಗಣನೆಗೆ ತಕ್ಕೊಳ್ಳುತ್ತಾನೆಂದು ಆತನ ವಾಕ್ಯ ಆಶ್ವಾಸನೆ ನೀಡುತ್ತದೆ.—ಕೀರ್ತ. 103:14; 2 ಕೊರಿಂ. 8:12.

ಆದುದರಿಂದ ಈ ಎಲ್ಲ ವಿಷಯಗಳಲ್ಲಿ ನಮ್ಮನ್ನಾಗಲಿ ಬೇರೆಯವರನ್ನಾಗಲಿ ಕಠಿನವಾಗಿ ತೀರ್ಪುಮಾಡದಂತೆ ನಾವು ಜಾಗ್ರತೆವಹಿಸಬೇಕು. ಅಪೊಸ್ತಲ ಪೌಲನು ಹೇಳಿದ್ದು: “ಇನ್ನೊಬ್ಬನ ಮನೆಯ ಸೇವಕನ ವಿಷಯವಾಗಿ ತೀರ್ಪುಮಾಡುವುದಕ್ಕೆ ನೀನು ಯಾರು? ಅವನು ನಿಂತರೂ ಬಿದ್ದರೂ ಅವನ ಯಜಮಾನನಿಗೆ ಸೇರಿದ್ದು.” (ರೋಮ. 14:4) ಹೀಗಾಗಿ ನಮ್ಮ ಸನ್ನಿವೇಶವನ್ನು ಇತರರೊಂದಿಗೆ ಹೋಲಿಸದೆ “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕ ಒಪ್ಪಿಸುವನು” ಎಂಬುದನ್ನು ನಾವು ಮನಸ್ಸಿನಲ್ಲಿಡಬೇಕು. (ರೋಮ. 14:12; ಗಲಾ. 6:4, 5) ಆದುದರಿಂದ ನಾವು ಪ್ರತಿಯೊಬ್ಬರು ಯೆಹೋವನಿಗೆ ಪ್ರಾರ್ಥಿಸುವಾಗ ಮತ್ತು ನಮ್ಮ ಕಾರಣಗಳನ್ನು ತಿಳಿಸುವಾಗ ಅದನ್ನು ‘ಪ್ರಾಮಾಣಿಕವಾದ ಮನಸ್ಸಾಕ್ಷಿಯಿಂದ’ ಮಾಡೋಣ.—ಇಬ್ರಿ. 13:18.

ಯೆಹೋವನ ಸೇವೆ ಏಕೆ ಆನಂದಕರ?

ನಮ್ಮ ಜೀವನದ ಸನ್ನಿವೇಶಗಳು ಹೇಗೆಯೇ ಇರಲಿ ನಾವೆಲ್ಲರೂ ಯೆಹೋವನ ಸೇವೆಯನ್ನು ಹೃದಯಾನಂದದಿಂದ ಮಾಡಸಾಧ್ಯವಿದೆ. ಏಕೆಂದರೆ ಆತನು ನಮ್ಮಿಂದ ಅಪೇಕ್ಷಿಸುವ ವಿಷಯಗಳು ಯಾವಾಗಲೂ ನ್ಯಾಯಸಮ್ಮತವೂ ಶಕ್ಯವೂ ಆಗಿವೆ. ಅದು ನಮಗೆ ಹೇಗೆ ಗೊತ್ತು?

“ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ” ಎನ್ನುತ್ತದೆ ದೇವರ ವಾಕ್ಯ. (ಜ್ಞಾನೋ. 3:27) ನೀವು ಈ ಜ್ಞಾನೋಕ್ತಿಯಲ್ಲಿ ದೇವರು ನಮ್ಮಿಂದ ಅಪೇಕ್ಷಿಸುವ ವಿಷಯಗಳ ಕುರಿತು ಏನನ್ನು ಗಮನಿಸಿದಿರಿ? ನಿಮ್ಮ ಸಹೋದರನ ಕೈಲಾದಷ್ಟನ್ನೇ ನೀವೂ ಮಾಡುವಂತೆ ಯೆಹೋವನು ಇಲ್ಲಿ ಆಜ್ಞಾಪಿಸುತ್ತಿಲ್ಲ ಬದಲಾಗಿ ‘ನಿಮ್ಮ ಕೈಲಾದಷ್ಟು’ ಸೇವೆ ಮಾಡುವಂತೆ ಯೆಹೋವನು ಆಜ್ಞಾಪಿಸುತ್ತಾನೆ. ಹೌದು, ನಾವು ನಮ್ಮ ಕೈಲಾದಷ್ಟು ಎಷ್ಟನ್ನೇ ಮಾಡಲಿ, ನಮ್ಮಲ್ಲಿ ಪ್ರತಿಯೊಬ್ಬನು ಯೆಹೋವನ ಸೇವೆಯನ್ನು ಪೂರ್ಣ ಹೃದಯದಿಂದ ಮಾಡಸಾಧ್ಯವಿದೆ.—ಲೂಕ 10:27; ಕೊಲೊ. 3:23.

[ಪುಟ 14ರಲ್ಲಿರುವ ಚೌಕ/ ಚಿತ್ರ]

“ನನ್ನ ಜೀವನದ ಅತ್ಯಾನಂದಕರ ವರುಷಗಳು”

ನಮಗೆ ಶಾರೀರಿಕವಾಗಿ ಅಥವಾ ಭಾವನಾತ್ಮಕವಾಗಿ ಗಂಭೀರ ಬಲಹೀನತೆಗಳಿದ್ದರೂ ಅವು ನಮ್ಮನ್ನು ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸುವುದನ್ನು ತಡೆಯುವವು ಎಂದು ದುಡುಕಿ ತೀರ್ಮಾನಿಸದಿರಿ. ಉದಾಹರಣೆಗೆ ಕೆನಡದ ಅರ್ನಸ್ಟ್‌ ಎಂಬ ಕ್ರೈಸ್ತ ಸಹೋದರನನ್ನು ಪರಿಗಣಿಸಿರಿ.

ಅರ್ನಸ್ಟ್‌ ತೊದಲು ಮಾತಾಡುತ್ತಿದ್ದನು ಮತ್ತು ತುಂಬ ನಾಚಿಕೆ ಸ್ವಭಾವದವನು. ಅವನು ನಿರ್ಮಾಣ ಕೆಲಸಗಾರನು. ಒಮ್ಮೆ ಅವನ ಬೆನ್ನಿಗೆ ಗಂಭೀರ ಪೆಟ್ಟಾದಾಗ ಕೆಲಸವನ್ನು ಬಿಡಬೇಕಾಯಿತು. ದೇಹ ದೌರ್ಬಲ್ಯ ಇದ್ದರೂ ಅವನು ಶುಶ್ರೂಷೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಶಕ್ತನಾದನು. ಸಭಾ ಕೂಟಗಳಲ್ಲಿ ಆಕ್ಸಿಲಿಯರಿ ಪಯನೀಯರ್‌ ಸೇವೆಗೆ ಉತ್ತೇಜನ ಕೊಟ್ಟಾಗ ಅರ್ನಸ್ಟ್‌ನ ಹೃದಯಾಪೇಕ್ಷೆ ಚಿಮ್ಮಿತು! ಆದರೆ ತಾನು ಆ ಶುಶ್ರೂಷೆಗೆ ಅರ್ಹನಲ್ಲ ಎಂದು ಅವನಿಗನಿಸಿತು.

ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಲು ತನ್ನಿಂದ ಸಾಧ್ಯವಿದೆಯೋ ಎಂದು ನೋಡಲು ಅರ್ನಸ್ಟ್‌ ಒಂದು ತಿಂಗಳ ಸೇವೆಗಾಗಿ ಅರ್ಜಿ ಸಲ್ಲಿಸಿದನು. ಅದನ್ನು ಪೂರ್ಣವಾಗಿ ಮಾಡಲು ಅವನು ಶಕ್ತನಾದಾಗ ಅವನಿಗೆ ಆಶ್ಚರ್ಯ! ‘ಆದರೆ ಪುನಃ ಒಮ್ಮೆ ಇದನ್ನು ಮಾಡಲು ನನ್ನಿಂದಾಗದು’ ಎಂದು ಅನಿಸಿತು ಅವನಿಗೆ. ಅದು ಸಾಧ್ಯವೋ ಎಂದು ನೋಡಲು ಎರಡನೇ ತಿಂಗಳು ಕೂಡ ಅರ್ಜಿ ಸಲ್ಲಿಸಿದನು. ಈ ಬಾರಿಯೂ ಅದನ್ನು ಪೂರ್ಣವಾಗಿ ಮಾಡಶಕ್ತನಾದನು.

ಹೀಗೆ ಒಂದು ವರ್ಷದ ತನಕ ಅರ್ನಸ್ಟ್‌ ಆಕ್ಸಿಲಿಯರಿ ಪಯನೀಯರನಾಗಿ ಸೇವೆಮಾಡಿದನು. ಆದರೆ, “ನಾನೆಂದೂ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡಲಾರೆ” ಎಂದುಕೊಂಡನು. ಮತ್ತೆ ತನ್ನಿಂದ ಮಾಡಸಾಧ್ಯವೋ ಎಂದು ನೋಡಲು ರೆಗ್ಯುಲರ್‌ ಪಯನೀಯರ್‌ ಸೇವೆಗೆ ಅರ್ಜಿ ಹಾಕಿದನು. ಒಂದು ವರ್ಷದ ಪಯನೀಯರ್‌ ಸೇವೆಯನ್ನು ಪೂರ್ಣಗೊಳಿಸಿದಾಗ ಅವನಿಗಾದ ಆಶ್ಚರ್ಯವನ್ನಾದರೋ ಹೇಳತೀರದು. ಹೀಗೆ ಎರಡು ವರ್ಷ ಅಂದರೆ ಅವನು ತೀವ್ರ ಅಸ್ವಸ್ಥನಾಗಿ ಮರಣಹೊಂದುವ ತನಕ ಆ ಸೇವೆಯನ್ನು ಮುಂದುವರಿಸಿದನು. ಮರಣಕ್ಕೆ ಮುಂಚೆ ತನ್ನನ್ನು ಸಂದರ್ಶಿಸಿದ ಅನೇಕರಿಗೆ ಅವನು ಹೇಳಿದ್ದು: “ಪಯನೀಯರನಾಗಿ ಯೆಹೋವನ ಸೇವೆಮಾಡಿದ ಆ ವರುಷಗಳೇ ನನ್ನ ಜೀವನದ ಅತ್ಯಾನಂದಕರ ವರುಷಗಳು.” ಹಾಗೆ ಹೇಳುವಾಗ ಅವನ ಕಣ್ಗಳು ಹನಿಗೂಡುತ್ತಿದ್ದವು.

[ಪುಟ 13ರಲ್ಲಿರುವ ಚಿತ್ರ]

ನಮ್ಮ ಶುಶ್ರೂಷೆಯನ್ನು ನಿಲ್ಲಿಸುವ ಯಾವುದೇ ಅಡ್ಡಿತಡೆಗಳನ್ನು ನಾವು ಜಯಿಸಬಲ್ಲೆವು

[ಪುಟ 15ರಲ್ಲಿರುವ ಚಿತ್ರ]

ನಮ್ಮ ಸನ್ನಿವೇಶಗಳು ಅನುಮತಿಸುವಂಥ ಎಲ್ಲವನ್ನೂ ಪೂರ್ಣ ಹೃದಯದಿಂದ ಮಾಡುವಾಗ ಯೆಹೋವನು ಮೆಚ್ಚುತ್ತಾನೆ