ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಮಾಡಿದ ಸತ್ಕ್ರಿಯೆಗಳು ದೇವರ ನೆನಪಿನಲ್ಲಿವೆ

ಅವರು ಮಾಡಿದ ಸತ್ಕ್ರಿಯೆಗಳು ದೇವರ ನೆನಪಿನಲ್ಲಿವೆ

ಅವರು ಮಾಡಿದ ಸತ್ಕ್ರಿಯೆಗಳು ದೇವರ ನೆನಪಿನಲ್ಲಿವೆ

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಲ್ಲಿ ಒಬ್ಬರಾದ ಥಿಯೊಡೋರ್‌ ಜಾರಕ್ಸ್‌ರವರು 2010, ಜೂನ್‌ 9ರ ಬುಧವಾರ ಬೆಳಗಾತ ತಮ್ಮ ಭೂಜೀವಿತವನ್ನು ಮುಗಿಸಿದರು. ಅವರಿಗೆ ಆಗ 84 ವಯಸ್ಸು. ಅವರು 53 ವರ್ಷ ಸಹಬಾಳ್ವೆ ನಡೆಸಿದ ಪತ್ನಿ ಮೆಲಿಟರನ್ನು ಅಗಲಿದ್ದಾರೆ. ಉಳಿದಿರುವ ಇತರರೆಂದರೆ ಅವರ ಅಕ್ಕ, ಆಕೆಯ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ.

ಅಮೆರಿಕದ ಕೆಂಟಕಿಯ ಪೈಕ್‌ ಕೌಂಟಿ ಎಂಬಲ್ಲಿ 1925, ಸೆಪ್ಟೆಂಬರ್‌ 28ರಂದು ಜನಿಸಿದ ಸಹೋದರ ಜಾರಕ್ಸ್‌ರವರು ತಮ್ಮ 15ನೇ ವಯಸ್ಸಿನಲ್ಲಿ ಅಂದರೆ 1941, ಆಗಸ್ಟ್‌ 10ರಂದು ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡರು. ಎರಡು ವರ್ಷಗಳ ನಂತರ ತಮ್ಮ 17ನೇ ವಯಸ್ಸಿನಲ್ಲಿ ಅವರು ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಆರಂಭಿಸಿ, ಹೀಗೆ ಸುಮಾರು 67 ವರ್ಷಗಳ ಸುದೀರ್ಘ ಪೂರ್ಣ ಸಮಯದ ಸೇವೆಯನ್ನು ಮಾಡಿದರು.

20ನೇ ವಯಸ್ಸಿನಲ್ಲಿ ಅಂದರೆ 1946ರಲ್ಲಿ ಸಹೋದರ ಜಾರಕ್ಸ್‌ರವರು ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 7ನೇ ಕ್ಲಾಸನ್ನು ಹಾಜರಾದರು. ಪದವೀಧರರಾದ ನಂತರ ಅವರು ಅಮೆರಿಕದ ಕ್ಲೀವ್‌ಲ್ಯಾಂಡ್‌ ಒಹಾಯೋ ಪ್ರದೇಶದಲ್ಲಿ ಸಂಚರಣ ಮೇಲ್ವಿಚಾರಕರಾಗಿ ಸೇವೆಮಾಡಲು ನೇಮಿಸಲ್ಪಟ್ಟರು. 1951ರಲ್ಲಿ ಅವರಿಗೆ ಆಸ್ಟ್ರೇಲಿಯ ಬ್ರಾಂಚ್‌ನ ಮೇಲ್ವಿಚಾರವನ್ನು ಮಾಡಲು ನೇಮಿಸಲಾಯಿತು. 1983ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕವು (ಇಂಗ್ಲಿಷ್‌) ಸಹೋದರ ಜಾರಕ್ಸ್‌ರ ಕುರಿತು ಹೀಗೆಂದು ವರದಿಸಿತು: “ದೇವಪ್ರಭುತ್ವಾತ್ಮಕ ಕ್ರಮತೆ ಮತ್ತು ಕ್ಷೇತ್ರ ಸೇವೆಯಲ್ಲಿ ತಮ್ಮ ದಕ್ಷ ಮುಂದಾಳತ್ವದ ಮೂಲಕ ಅವರು ಇಡೀ ದೇಶದ ಸಹೋದರರಿಗೆ ತುಂಬ ಉತ್ತೇಜನ ನೀಡಿದರು.”

ಅಮೆರಿಕಕ್ಕೆ ಹಿಂತಿರುಗಿ ಬಂದ ಮೇಲೆ ಸಹೋದರ ಜಾರಕ್ಸ್‌ರವರು 1956, ಡಿಸೆಂಬರ್‌ 10ರಂದು ಮೆಲಿಟ ಲ್ಯಾಸ್ಕೋ ಎಂಬಾಕೆಯನ್ನು ವಿವಾಹವಾದರು. ಅವರು ತಮ್ಮ ವೈವಾಹಿಕ ಜೀವನವನ್ನು ಆರಂಭಿಸಿದ್ದು ಸಂಚರಣ ಸೇವೆಯಲ್ಲಿ. ಸರ್ಕಿಟ್‌ ಮತ್ತು ಡಿಸ್ಟ್ರಿಕ್ಟ್‌ ಸೇವೆಯಲ್ಲಿ ಅವರು ಅಮೆರಿಕದ ಹೆಚ್ಚಿನ ಕ್ಷೇತ್ರವನ್ನು ಶ್ರದ್ಧೆಯಿಂದ ಆವರಿಸಿದರು. 1974ರ ಕೊನೆಯಲ್ಲಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗುವಂತೆ ಸಹೋದರ ಜಾರಕ್ಸ್‌ರನ್ನು ಆಮಂತ್ರಿಸಲಾಯಿತು.

ದೇವಪ್ರಭುತ್ವಾತ್ಮಕ ಚಟುವಟಿಕೆಯಲ್ಲಿ ಪೂರ್ಣ ಹೃದಯದಿಂದ ಭಾಗವಹಿಸಿದ ಸಹೋದರ ಜಾರಕ್ಸ್‌ರನ್ನು ಯೆಹೋವನ ಸಮರ್ಪಿತ ಹಾಗೂ ನಿಷ್ಠಾವಂತ ಸೇವಕರಾಗಿ ಯಾವಾಗಲೂ ನೆನಪಿಸಿಕೊಳ್ಳಲಾಗುವುದು. ಅವರು ಪ್ರೀತಿ, ಅಕ್ಕರೆಯ ಪತಿಯಾಗಿದ್ದರು, ತನ್ನದಕ್ಕಿಂತ ಇತರರ ಅಭಿರುಚಿಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟ ಆಧ್ಯಾತ್ಮಿಕ ಪುರುಷರಾಗಿದ್ದರು. (1 ಕೊರಿಂ. 13:4, 5) ಇತರರಲ್ಲಿ ಅವರಿಗಿದ್ದ ಈ ಯಥಾರ್ಥ ಅಭಿರುಚಿಯು ಎಲ್ಲರನ್ನು ನ್ಯಾಯದಿಂದಲೂ ಕರುಣೆಯಿಂದಲೂ ಉಪಚರಿಸಬೇಕೆಂಬ ಅವರ ಗಾಢ ಚಿಂತನೆಯಿಂದ ಪ್ರತ್ಯಕ್ಷವಾಗಿ ತೋರಿಬಂದಿತು. ಅದಲ್ಲದೆ ಜನರ ಮೇಲೆ ಅವರಿಗಿದ್ದ ಕಳೆಗುಂದದ ಪ್ರೀತಿ ಮತ್ತು ಚಿಂತೆಯು ಕ್ಷೇತ್ರ ಸೇವೆಗಾಗಿ ಅವರಿಗಿದ್ದ ಹುರುಪಿನಿಂದ ಪ್ರತಿಬಿಂಬಿಸಿತು.

ಬೆತೆಲ್‌ ಕುಟುಂಬದ ಹಾಗೂ ಲೋಕವ್ಯಾಪಕ ಸಹೋದರತ್ವದ ಅತಿ ಪ್ರಿಯ ಸದಸ್ಯರೂ ಶ್ರಮಜೀವಿಯೂ ಆದ ಸಹೋದರ ಜಾರಕ್ಸ್‌ರ ನಿಧನವು ನಮ್ಮನ್ನು ಆಳವಾಗಿ ದುಃಖದಲ್ಲಿ ಮುಳುಗಿಸಿದೆಯಾದರೂ ಯೆಹೋವನಿಗೆ ಅವರು ಅನೇಕ ದಶಕಗಳ ವರೆಗೆ ಸಲ್ಲಿಸಿದ ನಿಷ್ಠಾವಂತ ಸೇವೆಗಾಗಿ ನಾವು ಉಲ್ಲಾಸಿಸುತ್ತೇವೆ. ಅವರು ‘ಮರಣದ ತನಕವೂ ನಂಬಿಗಸ್ತರಾಗಿದ್ದು ಜೀವದ ಕಿರೀಟವನ್ನು’ ಪಡೆದಿದ್ದಾರೆ ಎಂಬ ದೃಢಭರವಸೆ ನಮಗಿದೆ. (ಪ್ರಕ. 2:10) ಅಲ್ಲದೆ, ಅವರು ಮಾಡಿದ ಸತ್ಕ್ರಿಯೆಗಳು ದೇವರ ನೆನಪಿನಲ್ಲಿವೆ ಎಂದು ನಿಶ್ಚಯವಾಗಿ ನಾವು ಹೇಳಬಲ್ಲೆವು.—ಪ್ರಕ. 14:13.