ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನಮುರಿದವರ ಮೊರೆಯನ್ನು ಲಾಲಿಸುವ ಯೆಹೋವ

ಮನಮುರಿದವರ ಮೊರೆಯನ್ನು ಲಾಲಿಸುವ ಯೆಹೋವ

ಮನಮುರಿದವರ ಮೊರೆಯನ್ನು ಲಾಲಿಸುವ ಯೆಹೋವ

ಪುರಾತನ ಇಸ್ರಾಯೇಲಿನ ವಿವೇಕಿ ರಾಜ ಸೊಲೊಮೋನನು ಹೇಳಿದಂತೆ “ಕಾಲವೂ ಪ್ರಾಪ್ತಿಯೂ . . . [ನಮಗೆ] ತಪ್ಪಿದ್ದಲ್ಲ.” (ಪ್ರಸಂ. 9:11) ಒಂದು ದುರಂತ ಅಥವಾ ತೀವ್ರ ಸಂಕಷ್ಟವು ನಮ್ಮ ಜೀವನವನ್ನು ಕದಡಿಸಬಲ್ಲದು. ಉದಾಹರಣೆಗೆ, ಕುಟುಂಬದಲ್ಲಿ ಆಪ್ತರೊಬ್ಬರ ಆಕಸ್ಮಿಕ ಮರಣವು ನಮ್ಮನ್ನು ಭಾವನಾತ್ಮಕವಾಗಿ ಕಂಗೆಡಿಸುತ್ತದೆ. ದಿನ, ತಿಂಗಳುಗಳೇ ಉರುಳಿದರೂ ದುಃಖದುಮ್ಮಾನಗಳು ಉಮ್ಮಳಿಸಿ ಬರಬಹುದು. ವ್ಯಕ್ತಿಯು ಎಷ್ಟು ದಿಗ್ಭ್ರಾಂತನಾಗಬಹುದೆಂದರೆ ಯೆಹೋವನಿಗೆ ಪ್ರಾರ್ಥನೆ ಮಾಡಲು ಸಹ ತಾನು ಅನರ್ಹನೆಂದು ಅವನು ಭಾವಿಸಾನು.

ಅಂಥ ಸನ್ನಿವೇಶದಲ್ಲಿ ಒಬ್ಬನಿಗೆ ಅಗತ್ಯವಾಗಿ ಬೇಕಾಗಿರುವುದು ಪ್ರೋತ್ಸಾಹ, ಪರಿಗಣನೆ, ಪ್ರೀತಿಯೇ. ಕೀರ್ತನೆಗಾರ ದಾವೀದನು ಈ ಆಶ್ವಾಸನೆ ಕೊಡುತ್ತಾ ಹಾಡಿದ್ದು: “ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.” (ಕೀರ್ತ. 145:14) “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎನ್ನುತ್ತದೆ ಬೈಬಲ್‌ ನಮಗೆ. (2 ಪೂರ್ವ. 16:9) ಆತನು ‘ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುತ್ತಾನೆ.’ (ಯೆಶಾ. 57:15) ಜಜ್ಜಿಹೋದ ದೀನರಿಗೆ ಇಲ್ಲವೆ ಮನಮುರಿದವರಿಗೆ ಯೆಹೋವನು ಹೇಗೆ ಬೆಂಬಲ ಮತ್ತು ಸಾಂತ್ವನವನ್ನು ಕೊಡುತ್ತಾನೆ?

“ಸಮಯೋಚಿತ” ಮಾತು

ಯೆಹೋವನು ಮನಗುಂದಿದವರಿಗೆ ಸಮಯೋಚಿತ ಸಹಾಯ ಕೊಡುವ ಒಂದು ವಿಧವು ಕ್ರೈಸ್ತ ಸಹೋದರತ್ವದ ಮೂಲಕವೇ. “ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ” ಮಾತಾಡುವಂತೆ ಕ್ರೈಸ್ತರಿಗೆ ಬುದ್ಧಿಹೇಳಲಾಗಿದೆ. (1 ಥೆಸ. 5:14) ಅನುಕಂಪವಿರುವ ಜೊತೆವಿಶ್ವಾಸಿಗಳು ನುಡಿಯುವ ಪ್ರೀತಿ, ಕಾಳಜಿಯ ಮಾತುಗಳು ತೀವ್ರ ಕಳವಳ ಮತ್ತು ದುಃಖದಲ್ಲಿರುವ ವ್ಯಕ್ತಿಗೆ ಸಮಚಿತ್ತಕ್ಕೆ ಬರಲು ನೆರವಾಗುತ್ತವೆ. ಚಿಕ್ಕದಾದ ಸಂಭಾಷಣೆಯಲ್ಲಿ ಕೂಡ ಹೇಳುವ ಸಾಂತ್ವನದ ಮಾತುಗಳು ಎದೆಗುಂದಿದವನ ಮನಸ್ಸನ್ನು ಚೇತರಿಸಲು ಹೆಚ್ಚನ್ನು ಮಾಡಬಲ್ಲವು. ಅಂಥ ಚಿಂತನೆಯ ಮಾತುಗಳು ತದ್ರೀತಿಯ ಮಾನಸಿಕ, ಭಾವನಾತ್ಮಕ ಬೇಗುದಿಯನ್ನು ತಾಳಿಕೊಂಡವರಿಂದ ಬಂದಾವು. ಅಥವಾ ಜೀವನದಲ್ಲಿ ಹೆಚ್ಚು ಅನುಭವ ಪಡೆದ ಸ್ನೇಹಿತರೊಬ್ಬರು ಅಂಥ ವಿವೇಕಯುತ ಮಾತುಗಳನ್ನಾಡಬಹುದು. ಅತಿ ಪ್ರಾಯೋಗಿಕವಾದ ಈ ವಿಧಗಳಲ್ಲಿ ಯೆಹೋವನು ಜಜ್ಜಿಹೋದವನ ಮನಸ್ಸನ್ನು ಉಜ್ಜೀವಿಸುತ್ತಾನೆ.

ಉದಾಹರಣೆಗೆ ಆಲಿಕ್ಸ್‌ ಎಂಬ ಕ್ರೈಸ್ತ ಹಿರಿಯನನ್ನು ಪರಿಗಣಿಸಿ. ಅವನು ವಿವಾಹವಾದ ಹೊಸದರಲ್ಲೇ ಅವನ ಹೆಂಡತಿ ಗಂಭೀರ ಕಾಯಿಲೆಯಿಂದ ಮೃತಳಾದಳು. ಈ ಅನಿರೀಕ್ಷಿತ ಘಟನೆಯು ಅವನನ್ನು ಕಂಗೆಡಿಸಿತು. ಅನುಕಂಪವುಳ್ಳ ಸಂಚರಣ ಮೇಲ್ವಿಚಾರಕನೊಬ್ಬನು ಆಲಿಕ್ಸ್‌ನೊಂದಿಗೆ ಸಾಂತ್ವನದ ಮಾತುಗಳನ್ನಾಡಲು ಯೋಜಿಸಿದನು. ಇವನು ಕೂಡ ತನ್ನ ಪತ್ನಿಯನ್ನು ಮರಣದಲ್ಲಿ ಕಳಕೊಂಡಿದ್ದನು ಮತ್ತು ಮರುವಿವಾಹವಾಗಿದ್ದನು. ತನ್ನ ದುಃಖದ ಸಮಯದಲ್ಲಿ ತಾನು ಹೇಗೆ ಭಾವನಾತ್ಮಕವಾಗಿ ಕಂಗೆಟ್ಟುಹೋಗಿದ್ದೆ ಎಂಬುದನ್ನು ಸಂಚರಣ ಮೇಲ್ವಿಚಾರಕನು ತಿಳಿಸಿದನು. ಶುಶ್ರೂಷೆ, ಸಭಾಕೂಟಗಳಲ್ಲಿ ಇತರರೊಂದಿಗೆ ಇರುವಾಗ ತನ್ನ ನೋವು ಒಂದು ತಹಬಂದಿಗೆ ಬರುತ್ತಿತ್ತಾದರೂ ಮನೆಯೊಳಗೆ ಕಾಲಿಟ್ಟೊಡನೆ ಮನ ತನ್ನನ್ನು ಅರಸುವ ಕಣ್ಣುಗಳಿಗಾಗಿ ಹುಡುಕಿ ಸೋಲುತ್ತಿತ್ತು, ಒಂಟಿತನ ಕಾಡುತ್ತಿತ್ತು ಎಂದವನು ಹೇಳಿದನು. ಆಲಿಕ್ಸ್‌ ಹೇಳುವುದು: “ನಾನು ಅನುಭವಿಸುತ್ತಿದ್ದ ಭಾವನೆಗಳು ಸಹಜವಾದದ್ದೇ, ಇತರರಿಗೂ ಹಾಗೆ ಅನಿಸುತ್ತದೆ ಎಂದು ತಿಳಿದು ನನಗೆ ತುಂಬ ಉಪಶಮನವಾಯಿತು.” ನಿಶ್ಚಯವಾಗಿಯೂ “ಸಮಯೋಚಿತ” ಮಾತುಗಳು ದುಃಖದ ಸಮಯದಲ್ಲಿ ಸಾಂತ್ವನಕರ ಬೆಂಬಲವನ್ನು ನೀಡಬಲ್ಲವು.—ಜ್ಞಾನೋ. 15:23.

ಇನ್ನೊಬ್ಬ ಕ್ರೈಸ್ತ ಹಿರಿಯನು ಸಹ ಆಲಿಕ್ಸ್‌ಗೆ ಕೆಲವು ಉತ್ತೇಜನದ ಮಾತುಗಳನ್ನು ಹೇಳಿದನು. ಬಾಳಸಂಗಾತಿಯನ್ನು ಮರಣದಲ್ಲಿ ಕಳಕೊಂಡ ಹಲವರ ಪರಿಚಯ ಅವನಿಗಿತ್ತು. ನಮಗೆ ಹೇಗನಿಸುತ್ತದೆ, ಏನು ಅಗತ್ಯವಿದೆ ಎಂದು ಯೆಹೋವನು ಬಲ್ಲನೆಂದು ಅವನು ಅನುಕಂಪದಿಂದಲೂ ಪ್ರೀತಿಯಿಂದಲೂ ನುಡಿದನು. “ಮುಂದಣ ದಿನಗಳಲ್ಲಿ ಸಂಗಾತಿಯ ಅಗತ್ಯ ನಿಮಗಿದೆಯೆಂದು ಅನಿಸುವುದಾದರೆ ಈಗ ಯೆಹೋವನ ಪ್ರೀತಿಪರ ಏರ್ಪಾಡು ಮರುವಿವಾಹವೇ” ಎಂದನು ಆ ಸಹೋದರನು. ಸಂಗಾತಿಯನ್ನು ಮರಣದಲ್ಲಿ ಕಳಕೊಂಡು ಸಮಯಾನಂತರ ಮರುವಿವಾಹವಾಗಲು ಇಚ್ಛಿಸುವ ಎಲ್ಲರೂ ಪುನಃ ವಿವಾಹವಾಗಶಕ್ತರಲ್ಲ ನಿಜ. ಆದರೆ ಆ ಕ್ರೈಸ್ತ ಹಿರಿಯನ ಮಾತುಗಳನ್ನು ಯೋಚಿಸುತ್ತಾ ಆಲಿಕ್ಸ್‌ ಹೇಳಿದ್ದು, “ಮರುವಿವಾಹವು ಯೆಹೋವನ ಏರ್ಪಾಡು ಎಂಬುದನ್ನು ಮರುಕಳಿಸುವುದು ಯಾವುದೇ ದೋಷಿಭಾವನೆಯನ್ನು ತೆಗೆದುಹಾಕುತ್ತದೆ. ಏಕೆಂದರೆ ಮುಂದಕ್ಕೆ ಮದುವೆಯಾದರೆ ಹಿಂದಿನ ಸಂಗಾತಿಗೆ ಅಥವಾ ಯೆಹೋವನ ವಿವಾಹದ ಏರ್ಪಾಡಿಗೆ ನಿಷ್ಠರಾಗಿಲ್ಲವೇನೋ ಎಂಬ ಯೋಚನೆ ಇರುವುದಿಲ್ಲ.”—1 ಕೊರಿಂ. 7:8, 9, 39.

ಸ್ವತಃ ಅನೇಕ ಕಷ್ಟನೋವುಗಳನ್ನು ಅನುಭಸಿದ ಕೀರ್ತನೆಗಾರ ದಾವೀದನು ಒಪ್ಪಿಕೊಂಡದ್ದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.” (ಕೀರ್ತ. 34:15) ಖಂಡಿತವಾಗಿಯೂ ಯೆಹೋವನು ಕುಗ್ಗಿಹೋದವರ ಮೊರೆಯನ್ನು ತಕ್ಕ ಸಮಯದಲ್ಲಿ ಉತ್ತರಿಸುವನು. ಹೇಗೆಂದರೆ ಅನುಕಂಪವುಳ್ಳ ಪ್ರೌಢ ಜೊತೆಕ್ರೈಸ್ತರ ವಿವೇಕಯುತವೂ ವಿವೇಚನೆಯೂ ಉಳ್ಳ ಮಾತುಗಳಿಂದಲೇ. ಯೆಹೋವನ ಈ ಏರ್ಪಾಡು ಅಮೂಲ್ಯವೂ ವ್ಯಾವಹಾರಿಕವೂ ಆಗಿದೆ.

ಕ್ರೈಸ್ತ ಕೂಟಗಳ ಮೂಲಕ ಸಹಾಯ

ಕುಗ್ಗಿಹೋದ ವ್ಯಕ್ತಿಯು ತನ್ನನ್ನು ಸುಲಭವಾಗಿ ಏಕಾಂತಕ್ಕೆ ತಳ್ಳಬಹುದಾದ ನಕಾರಾತ್ಮಕ ಯೋಚನೆಗೆ ಬಲಿಬೀಳಬಲ್ಲನು. ಆದರೂ ಜ್ಞಾನೋಕ್ತಿ 18:1 ಎಚ್ಚರಿಸುವುದು: “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” ಆಲಿಕ್ಸ್‌ ಒಪ್ಪಿಕೊಂಡದ್ದು: “ಸಂಗಾತಿಯನ್ನು ಕಳಕೊಂಡಾಗ ಮನಸ್ಸು ನಾನಾ ತರದ ನಿರಾಶೆಯ ಭಾವನೆಗಳಿಂದ ಮುಳುಗಿಹೋಗುತ್ತದೆ.” ಅವನು ತನ್ನನ್ನೇ ಕೇಳುತ್ತಿದ್ದದ್ದು: “‘ನಾನು ಬೇರೆ ಏನಾದರೂ ಮಾಡಬೇಕಿತ್ತೇನೋ? ಆಕೆಯೊಂದಿಗೆ ಇನ್ನಷ್ಟು ಹೆಚ್ಚು ಪರಿಗಣನೆ, ತಿಳಿವಳಿಕೆಯಿಂದ ನಡೆದುಕೊಳ್ಳಬೇಕಿತ್ತೇನೋ?’ ಈ ಎಲ್ಲ ಯೋಚನೆ ನನ್ನನ್ನು ಕಾಡುತ್ತಿತ್ತು. ಒಂಟಿಯಾಗಿರಲು ನಾನು ಬಯಸಲಿಲ್ಲ. ಏಕಾಂಗಿತನವೂ ಬೇಡವಿತ್ತು. ಈ ವಿಚಾರಧಾರೆಯನ್ನು ತೆಗೆದುಹಾಕುವುದು ತುಂಬ ಕಷ್ಟ, ಏಕೆಂದರೆ ಪ್ರತಿದಿನ ‘ನೀನು ಒಂಟಿಗ, ಒಂಟಿಗ’ ಎಂಬ ಭಾವನೆ ಸದಾ ಮನಸ್ಸಿಗೆ ಬರುತ್ತಿತ್ತು.”

ಇಂಥ ಸಮಯದಲ್ಲಿ ಜಜ್ಜಿದ ಮನಸ್ಸುಳ್ಳವರಿಗೆ ಹಿತಕರ ಸಹವಾಸ ಎಂದಿಗಿಂತಲೂ ಹೆಚ್ಚು ಅಗತ್ಯ. ಇದು ಸಭಾಕೂಟಗಳಲ್ಲಿ ಸುಲಭಲಭ್ಯ. ಅಂಥ ವಾತಾವರಣದಲ್ಲಿ ದೇವರು ಕೊಡುವ ಬಲವರ್ಧಕವಾದ ಸುವಿಚಾರಗಳನ್ನು ಮನಸ್ಸಿನಲ್ಲಿ ತುಂಬಿಸಲು ಸಾಧ್ಯ.

ಕ್ರೈಸ್ತ ಕೂಟಗಳು ನಮ್ಮ ಸನ್ನಿವೇಶವನ್ನು ಸಮತೂಕವಾಗಿಡಲು ನೆರವು ನೀಡುತ್ತವೆ. ದೇವರ ವಾಕ್ಯಕ್ಕೆ ಕಿವಿಗೊಡುವಾಗ ಮತ್ತು ಧ್ಯಾನಿಸುವಾಗ ನಿಜವಾಗಿಯೂ ಪ್ರಾಮುಖ್ಯ ವಿಷಯಗಳ ಮೇಲೆ ಅಂದರೆ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ, ಆತನ ನಾಮದ ಪವಿತ್ರೀಕರಣದ ಮೇಲೆ ಗಮನ ಕೇಂದ್ರೀಕರಿಸುತ್ತೇವೆ; ಕೇವಲ ಸ್ವಂತ ಕಷ್ಟಾನುಭವಗಳ ಮೇಲಲ್ಲ. ಅಷ್ಟಲ್ಲದೆ ಆಧ್ಯಾತ್ಮಿಕ ಪ್ರಬೋಧನೆಯ ಅಂಥ ಸಮಯಗಳಲ್ಲಿ ನಾವಿದನ್ನು ತಿಳುಕೊಳ್ಳುತ್ತೇವೆ, ಏನೆಂದರೆ ನಮ್ಮ ಬೇಗುದಿಯು ಇತರರಿಗೆ ತಿಳಿಯದಿದ್ದರೂ ಅಥವಾ ಅರ್ಥವಾಗದಿದ್ದರೂ ಯೆಹೋವನು ಅದನ್ನು ಖಂಡಿತ ತಿಳಿದಿದ್ದಾನೆ, ಅರ್ಥಮಾಡಿಕೊಳ್ಳುತ್ತಾನೆ. ಈ ಅರಿವಿನಿಂದ ನಾವು ಬಲಹೊಂದುತ್ತೇವೆ. “ಹೃದಯವೇದನೆಯಿಂದ ಆತ್ಮವು ಕುಂದಿಹೋಗುತ್ತದೆ” ಎಂಬುದನ್ನೂ ಸತ್ಯ ದೇವರು ಬಲ್ಲನು. (ಜ್ಞಾನೋ. 15:13, NIBV) ಆತನು ನಮಗೆ ಸಹಾಯ ಮಾಡಬಯಸುತ್ತಾನೆ. ಬಾಳಪಥದಲ್ಲಿ ಮುಂದೆಸಾಗಲು ಇದು ತಾನೇ ಪ್ರಚೋದನೆಯನ್ನೂ ಬಲವನ್ನೂ ಕೊಡುತ್ತದೆ.—ಕೀರ್ತ. 27:14.

ರಾಜ ದಾವೀದನು ತನ್ನ ವಿರೋಧಿಗಳಿಂದ ತೀವ್ರ ಒತ್ತಡಕ್ಕೊಳಗಾದಾಗ ದೇವರಿಗೆ ಹೀಗೆ ಮೊರೆಯಿಟ್ಟನು: “ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ.” (ಕೀರ್ತ. 143:4) ಹೌದು, ಸಂಕಷ್ಟಗಳು ಅನೇಕವೇಳೆ ದೈಹಿಕ, ಭಾವನಾತ್ಮಕ ಬಲವನ್ನು ಉಡುಗಿಸಿ ಮನಸ್ಸನ್ನೇ ಜಜ್ಜಿಬಿಡುತ್ತವೆ. ಅಸ್ವಸ್ಥತೆ ಅಥವಾ ದೀರ್ಘಕಾಲದ ಶಾರೀರಿಕ ದೌರ್ಬಲ್ಯಗಳಂಥ ಕಷ್ಟಗಳು ನಮಗೆ ಬರಬಹುದು. ಆದರೆ ತಾಳಿಕೊಳ್ಳಲು ಬಲವನ್ನು ಯೆಹೋವನು ಕೊಡುವನೆಂಬ ಭರವಸೆ ನಮಗಿರಬಲ್ಲದು. (ಕೀರ್ತ. 41:1-3) ಇಂದು ಆತನು ಯಾರನ್ನೂ ಅದ್ಭುತಕರವಾಗಿ ವಾಸಿಮಾಡುವುದಿಲ್ಲವಾದರೂ ಬಾಧಿತನಿಗೆ ತಾಳಿಕೊಳ್ಳಲು ಬೇಕಾದ ವಿವೇಕವನ್ನೂ ಸ್ಥೈರ್ಯವನ್ನೂ ಖಂಡಿತ ಕೊಡುವನು. ದಾವೀದನು ಕಷ್ಟಪರೀಕ್ಷೆಗಳ ಕೆಳಗೆ ಕುಗ್ಗಿಹೋದಾಗ ಸಹಾಯಕ್ಕಾಗಿ ಯೆಹೋವನೆಡೆಗೆ ತಿರುಗಿದನಲ್ಲಾ. ಅವನು ಹಾಡಿದ್ದು: “ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.”—ಕೀರ್ತ. 143:5.

ಇಂಥ ಭಾವಪೂರ್ಣ ಮಾತುಗಳು ದೇವರ ವಾಕ್ಯದಲ್ಲಿ ದಾಖಲಾಗಿರುವ ನಿಜತ್ವವು ತಾನೇ ಯೆಹೋವನು ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನೆಂದು ತೋರಿಸುತ್ತದೆ. ಮಾತ್ರವಲ್ಲ ಆ ಮಾತುಗಳು ನಮ್ಮ ಮೊರೆಗಳನ್ನು ಆತನು ಲಾಲಿಸುತ್ತಾನೆಂಬ ಖಾಚಿತ್ಯ ಕೊಡುತ್ತವೆ. ಯೆಹೋವನ ಸಹಾಯವನ್ನು ನಾವು ಸ್ವೀಕರಿಸುವುದಾದರೆ, ‘ಆತನೇ ನಮಗೆ ಆಧಾರವಾಗಿರುವನು.’—ಕೀರ್ತ. 55:22, NIBV.

“ಎಡೆಬಿಡದೆ ಪ್ರಾರ್ಥನೆಮಾಡಿರಿ”

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎನ್ನುತ್ತದೆ ಯಾಕೋಬ 4:8. ದೇವರ ಸಮೀಪಕ್ಕೆ ಬರುವ ಒಂದು ವಿಧ ಪ್ರಾರ್ಥನೆಯ ಮೂಲಕವೇ. “ಎಡೆಬಿಡದೆ ಪ್ರಾರ್ಥನೆಮಾಡಿರಿ” ಎಂದು ಅಪೊಸ್ತಲ ಪೌಲನು ನಮಗೆ ಸಲಹೆ ಕೊಡುತ್ತಾನೆ. (1 ಥೆಸ. 5:17) ನಮ್ಮ ಭಾವನೆಗಳು ಮಾತಿನಲ್ಲಿ ಹೊರಡದಿದ್ದಾಗ “ಮಾತಿನಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲದ ನರಳಾಟದೊಂದಿಗೆ ಪವಿತ್ರಾತ್ಮವು ತಾನೇ ನಮಗೋಸ್ಕರ ಬೇಡಿಕೊಳ್ಳುತ್ತದೆ.” (ರೋಮ. 8:26, 27) ಹೌದು ನಮಗೆ ಹೇಗನಿಸುತ್ತದೆಂದು ಯೆಹೋವನು ನಿಶ್ಚಯವಾಗಿಯೂ ಅರಿತುಕೊಳ್ಳುತ್ತಾನೆ.

ಯೆಹೋವನೊಂದಿಗೆ ಅಂಥ ಆಪ್ತತೆಯಿರುವ ಮೋನಿಕ ಹೇಳುವುದು: “ಪ್ರಾರ್ಥನೆ, ಬೈಬಲ್‌ ವಾಚನ, ವೈಯಕ್ತಿಕ ಅಧ್ಯಯನದಿಂದಾಗಿ ಯೆಹೋವನು ನನಗೆ ಅತ್ಯಾಪ್ತ ಸ್ನೇಹಿತನಾಗಿದ್ದಾನೆ. ಆತನು ನನಗೆ ಎಷ್ಟು ನೈಜನಾಗಿದ್ದಾನೆಂದರೆ ನನ್ನ ಬಾಳಲ್ಲಿ ಸದಾ ಆತನ ಸಹಾಯಹಸ್ತವಿರುವುದನ್ನು ನಾನು ಕಾಣುತ್ತೇನೆ. ದುಃಖದಿಂದ ನನ್ನ ಭಾವನೆಗಳು ಮಾತುಗಳಲ್ಲಿ ಹೊರಡದಿದ್ದಾಗಲೂ ಆತನು ಅರ್ಥಮಾಡಿಕೊಳ್ಳುತ್ತಾನೆ. ಇದು ನನಗೆ ತುಂಬ ಸಾಂತ್ವನ ಕೊಟ್ಟಿದೆ. ಆತನ ದಯೆಉಪಕಾರಗಳು, ಆಶೀರ್ವಾದಗಳು ಸದಾಕಾಲ ಇರುವವೆಂದು ನನಗೆ ಗೊತ್ತಿದೆ.”

ಆದುದರಿಂದ ನಾವು ಜೊತೆ ಕ್ರೈಸ್ತರ ಪ್ರೀತಿಪರ ಹಾಗೂ ಸಾಂತ್ವನದಾಯಕ ಮಾತುಗಳನ್ನು ಅವಶ್ಯವಾಗಿ ಆಲಿಸೋಣ. ಕ್ರೈಸ್ತ ಕೂಟಗಳಲ್ಲಿ ಕಿವಿಗೊಟ್ಟ ದಯಾಪರ ಸಲಹೆ, ನಂಬಿಕೆವರ್ಧಕ ಜ್ಞಾಪನಗಳನ್ನು ಅನ್ವಯಿಸೋಣ. ಪ್ರಾರ್ಥನೆಯಲ್ಲಿ ಯೆಹೋವನಿಗೆ ನಮ್ಮ ಹೃದಯವನ್ನು ತೋಡಿಕೊಳ್ಳೋಣ. ಈ ಎಲ್ಲ ಸಮಯೋಚಿತ ಏರ್ಪಾಡುಗಳು ಯೆಹೋವನು ನಮ್ಮ ಕಾಳಜಿವಹಿಸುತ್ತಾನೆಂದು ತೋರಿಸುವ ವಿಧಗಳು. ಆಲಿಕ್ಸ್‌ ಸ್ವಂತ ಅನುಭವದಿಂದ ಅಂದದ್ದು, “ಆಧ್ಯಾತ್ಮಿಕವಾಗಿ ದೃಢವಾಗಿ ಉಳಿಯಲಿಕ್ಕಾಗಿ ಯೆಹೋವ ದೇವರು ನೀಡುವ ಎಲ್ಲ ಒದಗಿಸುವಿಕೆಗಳನ್ನು ಸದುಪಯೋಗಿಸಿಕೊಳ್ಳುವಾಗ ಎದುರಾಗುವ ಯಾವುದೇ ಕಷ್ಟಸಂಕಟಗಳನ್ನು ತಾಳಿಕೊಳ್ಳಲು ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ’ ನಮ್ಮಲ್ಲಿರುವುದು.”—2 ಕೊರಿಂ. 4:7.

[ಪುಟ 18ರಲ್ಲಿರುವ ಚೌಕ/ಚಿತ್ರ]

ಮನಮುರಿದವರಿಗೆ ಸಾಂತ್ವನ

ಕೀರ್ತನೆಗಳು ಪುಸ್ತಕವು ಮಾನವನ ಭಾವನೆಗಳಿಗೆ ಹಿಡಿದ ಕನ್ನಡಿ. ಮಾತ್ರವಲ್ಲ ಭಾವನಾತ್ಮಕ ಒತ್ತಡದಿಂದ ಕುಗ್ಗಿದ ಮನಸ್ಸುಳ್ಳವನ ಮೊರೆಯನ್ನು ಯೆಹೋವನು ಖಂಡಿತ ಕೇಳುತ್ತಾನೆಂಬ ಆಶ್ವಾಸನೆಯನ್ನು ಅದು ಪದೇ ಪದೇ ಕೊಡುತ್ತದೆ. ಆ ಕೀರ್ತನೆಗಳ ಕೆಲವು ಚರಣಗಳನ್ನು ಪರಿಗಣಿಸಿ:

“ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಶಬ್ದವನ್ನು ಕೇಳಿದನು; ನನ್ನ ಕೂಗು ಆತನ ಸನ್ನಿಧಿಗೆ ಸೇರಿ ಕೇಳಿಸಿತು.”—ಕೀರ್ತ. 18:6.

“ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತ. 34:18.

“ಮುರಿದ ಮನಸ್ಸುಳ್ಳವರನ್ನು [ಯೆಹೋವನು] ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ.”—ಕೀರ್ತ. 147:3.

[ಪುಟ 17ರಲ್ಲಿರುವ ಚಿತ್ರ]

ಸಂಕಷ್ಟದ ದಿನದಲ್ಲಿ “ಸಮಯೋಚಿತ” ಮಾತು ಎಷ್ಟೊಂದು ಸಾಂತ್ವನಕರ!