ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೌವನಸ್ಥರೇ, ಜೀವನದಲ್ಲಿ ನೀವೇನನ್ನು ಸಾಧಿಸಲಿದ್ದೀರಿ?

ಯೌವನಸ್ಥರೇ, ಜೀವನದಲ್ಲಿ ನೀವೇನನ್ನು ಸಾಧಿಸಲಿದ್ದೀರಿ?

ಯೌವನಸ್ಥರೇ, ಜೀವನದಲ್ಲಿ ನೀವೇನನ್ನು ಸಾಧಿಸಲಿದ್ದೀರಿ?

“ನಾನು ಗಾಳಿಯನ್ನು ಗುದ್ದುವವನಂತೆ ಗುದ್ದುತ್ತಿಲ್ಲ.”—1 ಕೊರಿಂ. 9:26.

1, 2. ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ನೀವು ಯಶಸ್ವಿಯಾಗಬೇಕಾದರೆ ನಿಮಗೇನು ತಿಳಿದಿರಬೇಕು?

ಅಪರಿಚಿತ ಸ್ಥಳವೊಂದಕ್ಕೆ ನೀವು ಪ್ರಯಾಣಿಸುತ್ತಿದ್ದೀರಿ ಎಂದು ನೆನಸಿ. ನಿಮ್ಮೊಂದಿಗೆ ಒಂದು ನಕ್ಷೆ ಹಾಗೂ ದಿಕ್ಸೂಚಿಯನ್ನು ಕೊಂಡೊಯ್ಯತ್ತೀರಿ. ನಕ್ಷೆಯ ಸಹಾಯದಿಂದ ನೀವಿರುವ ಸ್ಥಳವನ್ನು ಗುರುತಿಸಿ ಸರಿಯಾದ ಮಾರ್ಗದಲ್ಲಿ ಮುಂದೆ ಸಾಗಬಲ್ಲಿರಿ. ದಿಕ್ಸೂಚಿಯ ಸಹಾಯದಿಂದ ನೀವು ಸರಿಯಾದ ದಿಕ್ಕಿನಲ್ಲೇ ಪ್ರಯಾಣಿಸುತ್ತೀರಿ. ಆದರೆ ತಲಪಬೇಕಾದ ಸ್ಥಳವೇ ನಿಮಗೆ ತಿಳಿದಿಲ್ಲವಾದರೆ ನಕ್ಷೆ, ದಿಕ್ಸೂಚಿ ಇದ್ದೂ ಏನೂ ಪ್ರಯೋಜನವಿಲ್ಲ. ನೀವು ಗೊತ್ತುಗುರಿಯಿಲ್ಲದೆ ಅಲೆಯಬಾರದಾದರೆ ನಿಮ್ಮ ಗಮ್ಯಸ್ಥಾನವು ನಿಮಗೆ ಸ್ಪಷ್ಟವಾಗಿ ತಿಳಿದಿರಬೇಕು.

2 ಯೌವನಸ್ಥರಾದ ನೀವು ಪ್ರೌಢಾವಸ್ಥೆಗೆ ಕಾಲಿಡುವಾಗ ಇಂಥದ್ದೇ ಸನ್ನಿವೇಶದಲ್ಲಿರುತ್ತೀರಿ. ನಿಮ್ಮ ಹತ್ತಿರ ಭರವಸಾರ್ಹ ನಕ್ಷೆಯೂ ಇದೆ, ದಿಕ್ಸೂಚಿಯೂ ಇದೆ. ನಿಮಗಿರುವ ನಕ್ಷೆಯೇ ಬೈಬಲ್‌. ಅದು ನೀವು ಯಾವ ಮಾರ್ಗವಾಗಿ ಹೋಗಬೇಕೆಂದು ತೋರಿಸುತ್ತದೆ. (ಜ್ಞಾನೋ. 3:5, 6) ದಿಕ್ಸೂಚಿಯಂತೆ ಕೆಲಸಮಾಡುವುದು ನಿಮ್ಮ ಮನಸ್ಸಾಕ್ಷಿ. ಅದನ್ನು ಚೆನ್ನಾಗಿ ತರಬೇತುಗೊಳಿಸಿದರೆ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಅದು ನಿಮಗೆ ನೆರವಾಗುತ್ತದೆ. (ರೋಮ. 2:15) ಆದರೆ ನಿಮ್ಮ ಜೀವನವು ಯಶಸ್ವಿಯಾಗಬೇಕಾದರೆ ಎಲ್ಲಿಗೆ ಹೋಗಿ ತಲಪಬೇಕೆಂಬುದು ಕೂಡ ನಿಮಗೆ ತಿಳಿದಿರಬೇಕು. ಅಂದರೆ ನಿಮಗೆ ಖಚಿತ ಗುರಿಗಳಿರಬೇಕು.

3. ಗುರಿಗಳನ್ನು ಇಡುವುದರಿಂದ ಯಾವ ಪ್ರಯೋಜನವಿದೆಯೆಂದು ಪೌಲನು 1 ಕೊರಿಂಥ 9:26ರಲ್ಲಿ ತಿಳಿಸುತ್ತಾನೆ?

3 ಗುರಿಗಳನ್ನಿಡುವ ಹಾಗೂ ಆ ಗುರಿಗಳನ್ನು ಮುಟ್ಟಲು ಪ್ರಯತ್ನಿಸುವುದರ ಪ್ರಯೋಜನಗಳನ್ನು ಅಪೊಸ್ತಲ ಪೌಲನು ಈ ಮಾತುಗಳಲ್ಲಿ ಸಾರಾಂಶಿಸಿದನು: “ನಾನು ಗೊತ್ತುಗುರಿಯಿಲ್ಲದೆ ಓಡುತ್ತಿಲ್ಲ; ನಾನು ಗಾಳಿಯನ್ನು ಗುದ್ದುವವನಂತೆ ಗುದ್ದುತ್ತಿಲ್ಲ.” (1 ಕೊರಿಂ. 9:26) ಗುರಿಗಳಿರುವಲ್ಲಿ ನೀವು ಜೀವನದ ಓಟದಲ್ಲಿ ದೃಢನಿಶ್ಚಯದಿಂದ ಓಡಬಲ್ಲಿರಿ. ಶೀಘ್ರದಲ್ಲೇ ನಿಮಗೆ ಪ್ರಮುಖ ನಿರ್ಣಯಗಳನ್ನು ಮಾಡಲಿಕ್ಕಿದೆ. ಆರಾಧನೆ, ಉದ್ಯೋಗ, ವಿವಾಹ, ಕುಟುಂಬ ಮೊದಲಾದವು ಅವುಗಳಲ್ಲಿ ಕೆಲವು. ನಿಮ್ಮ ಮುಂದೆ ಎಷ್ಟೊಂದು ಆಯ್ಕೆಗಳಿವೆಯೆಂದರೆ ಯಾವುದನ್ನು ಆರಿಸಲಿ ಎಂಬ ವಿಷಯದಲ್ಲಿ ನಿಮಗೆ ಗಲಿಬಿಲಿಯಾದೀತು. ಆದರೆ ನೀವು ಮುಂಚಿತವಾಗಿ ನಿಮ್ಮ ಆಯ್ಕೆಗಳನ್ನು ಜಾಗ್ರತೆಯಿಂದ ಯೋಜಿಸಿ ಅವನ್ನು ದೇವರ ವಾಕ್ಯದಲ್ಲಿರುವ ಸತ್ಯ ಹಾಗೂ ಮೂಲತತ್ತ್ವಗಳ ಮೇಲೆ ಆಧರಿಸಿದ್ದಲ್ಲಿ ತಪ್ಪುದಾರಿಯಲ್ಲಿ ನಡೆಯಲು ಪ್ರೇರಿಸಲ್ಪಡಲಾರಿರಿ.—2 ತಿಮೊ. 4:4, 5.

4, 5. (ಎ) ನೀವು ನಿಮಗಾಗಿ ಗುರಿಗಳನ್ನಿಡದಿದ್ದಲ್ಲಿ ಏನಾಗಸಾಧ್ಯವಿದೆ? (ಬಿ) ದೇವರನ್ನು ಮೆಚ್ಚಿಸುವ ಅಪೇಕ್ಷೆಯಿಂದಲೇ ನೀವು ಆಯ್ಕೆಗಳನ್ನು ಮಾಡಬೇಕು ಏಕೆ?

4 ನೀವು ನಿಮಗಾಗಿ ಗುರಿಗಳನ್ನು ಇಡದಿದ್ದಲ್ಲಿ ನಿಮ್ಮ ಸಮಾನಸ್ಥರು ಮತ್ತು ಶಿಕ್ಷಕರು ತಮಗೆ ಸರಿಕಂಡ ಗುರಿಗಳನ್ನು ನೀವು ಇಡುವಂತೆ ನಿಮ್ಮನ್ನು ಪ್ರೇರಿಸಾರು. ನೀವು ಖಚಿತ ಗುರಿಗಳನ್ನಿಟ್ಟಿದ್ದರೂ ಕೆಲವರು ಮತ್ತೂ ತಮ್ಮ ಸಲಹೆಗಳನ್ನು ಕೊಡಬಹುದು ನಿಶ್ಚಯ. ಅವರು ಸಲಹೆಗಳನ್ನು ಕೊಡುವಾಗ ಹೀಗೆ ಕೇಳಿಕೊಳ್ಳಿ: ‘ಅವರು ತಿಳಿಸುವ ಗುರಿಗಳು ನಾನು ಯೌವನದಲ್ಲಿ ನನ್ನ ಸೃಷ್ಟಿಕರ್ತನನ್ನು ಸ್ಮರಿಸುವಂತೆ ಸಹಾಯಮಾಡುತ್ತವೋ ಅಥವಾ ಹಾಗೆ ಮಾಡುವುದರಿಂದ ಅವು ನನ್ನನ್ನು ತಡೆಯುತ್ತವೋ?’—ಪ್ರಸಂಗಿ 12:1 ಓದಿ.

5 ದೇವರನ್ನು ಮೆಚ್ಚಿಸುವ ಅಪೇಕ್ಷೆಯಿಂದಲೇ ನೀವು ಜೀವನದಲ್ಲಿ ಆಯ್ಕೆಗಳನ್ನು ಮಾಡಬೇಕು ಏಕೆ? ಒಂದು ಕಾರಣವೇನೆಂದರೆ ನಮ್ಮಲ್ಲಿರುವ ಸಕಲ ಒಳ್ಳೆಯ ವಿಷಯಗಳು ಯೆಹೋವನಿಂದ ಬಂದವುಗಳು. (ಯಾಕೋ. 1:17) ಆದುದರಿಂದ ಪ್ರತಿಯೊಬ್ಬರು ಯೆಹೋವನಿಗೆ ಕೃತಜ್ಞರಾಗಿರಲೇಬೇಕು. (ಪ್ರಕ. 4:11) ನೀವು ಗುರಿಗಳನ್ನಿಡುವಾಗ ಯೆಹೋವನ ಚಿತ್ತವನ್ನು ಮನಸ್ಸಿನಲ್ಲಿಡಿರಿ. ಈ ರೀತಿ ಆತನಿಗೆ ಗಣ್ಯತೆ ತೋರಿಸುವುದಕ್ಕಿಂತ ಉತ್ತಮ ವಿಧಾನ ಬೇರೆ ಯಾವುದೂ ಇಲ್ಲ. ಹಾಗಾದರೆ, ಯಾವ ಗುರಿಗಳನ್ನಿಡುವುದು ಸಾರ್ಥಕ ಮತ್ತು ಅವುಗಳನ್ನು ಮುಟ್ಟಲು ನೀವೇನು ಮಾಡಬೇಕು ಎಂಬುದನ್ನು ಪರಿಗಣಿಸೋಣ.

ನೀವು ಇಡತಕ್ಕ ಗುರಿಗಳು

6. ಮೊತ್ತಮೊದಲಾಗಿ ನೀವು ಯಾವ ಗುರಿಯನ್ನಿಡಸಾಧ್ಯವಿದೆ? ಏಕೆ?

6 ಹಿಂದಿನ ಲೇಖನದಲ್ಲಿ ಹೇಳಿದಂತೆ, ಬೈಬಲಿನಿಂದ ಕಲಿತ ವಿಷಯಗಳನ್ನು ಸತ್ಯವೆಂದು ಸ್ವತಃ ಮನವರಿಕೆ ಮಾಡಿಕೊಳ್ಳುವುದೇ ನೀವಿಡಬಲ್ಲ ಮೊತ್ತಮೊದಲ ಗುರಿ. (ರೋಮ. 12:2; 2 ಕೊರಿಂ. 13:5) ನಿಮ್ಮ ಸಮಾನಸ್ಥರು ವಿಕಾಸವಾದ ಮತ್ತಿತರ ಸುಳ್ಳು ಧಾರ್ಮಿಕ ಬೋಧನೆಗಳನ್ನು ನಂಬಬಹುದು. ಏಕೆಂದರೆ ಅವನ್ನು ನಂಬಬೇಕೆಂದು ಇತರರು ಅವರಿಗೆ ಹೇಳಿದ್ದಾರೆ. ನಿಮ್ಮ ನಂಬಿಕೆಗಳ ವಿಷಯದಲ್ಲಾದರೋ ಹಾಗಲ್ಲ. ಇತರರು ಹೇಳುತ್ತಾರೆಂಬ ಕಾರಣಕ್ಕೆ ನೀವು ಯಾವುದನ್ನೂ ನಂಬಬೇಕಾಗಿಲ್ಲ. ಏಕೆಂದರೆ ನೀವು ನಿಮ್ಮ ಪೂರ್ಣ ಮನಸ್ಸಿನಿಂದ ಅಂದರೆ ಪೂರ್ಣ ಮನವರಿಕೆಯಿಂದ ತನ್ನ ಸೇವೆ ಮಾಡಬೇಕೆಂದು ಯೆಹೋವನು ಬಯಸುತ್ತಾನೆ ಎಂದು ನೆನಪಿಡಿ. (ಮತ್ತಾಯ 22:36, 37 ಓದಿ.) ಆದುದರಿಂದ ನಿಮ್ಮ ನಂಬಿಕೆಗೆ ನಿಜವಾದ ಆಧಾರವಿರಬೇಕೆಂದೇ ಸ್ವರ್ಗೀಯ ತಂದೆಯ ಅಪೇಕ್ಷೆ.—ಇಬ್ರಿ. 11:1.

7, 8. (ಎ) ಯಾವ ಚಿಕ್ಕ ಚಿಕ್ಕ ಗುರಿಗಳನ್ನಿಡುವುದು ನಿಮ್ಮ ನಂಬಿಕೆಯನ್ನು ಬಲಗೊಳಿಸುವುದು? (ಬಿ) ಅಲ್ಪಕಾಲಿಕ ಗುರಿಗಳಲ್ಲಿ ಕೆಲವನ್ನು ಮುಟ್ಟಿದಂತೆ ನಿಮಗೆ ಯಾವ ಅನಿಸಿಕೆಯಾಗುವುದು?

7 ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಸಹಾಯವಾಗುವಂತೆ ಅಲ್ಪಾವಧಿಯಲ್ಲಿ ಮುಟ್ಟಬಲ್ಲ ಕೆಲವು ಚಿಕ್ಕ ಚಿಕ್ಕ ಗುರಿಗಳನ್ನು ನೀವು ಇಡಬಹುದಲ್ಲವೇ? ಪ್ರತಿದಿನ ತಪ್ಪದೆ ಪ್ರಾರ್ಥಿಸುವುದು ಆ ಗುರಿಗಳಲ್ಲೊಂದು. ನಿಮ್ಮ ಪ್ರಾರ್ಥನೆಯು ನಿರ್ದಿಷ್ಟವಾಗಿರಲಿ ಮತ್ತು ಹೇಳಿದ್ದನ್ನೇ ಹೇಳಬೇಡಿ. ಅದಕ್ಕಾಗಿ ನೀವು ಆ ದಿನದಲ್ಲಿ ನಡೆದ ನಿರ್ದಿಷ್ಟ ಸಂಗತಿಗಳನ್ನು ಮನಸ್ಸಿನಲ್ಲಿಡಿ ಅಥವಾ ಬರೆದಿಡಿ. ನೀವು ಎದುರಿಸಿದ ಸಮಸ್ಯೆಗಳನ್ನು ಮಾತ್ರವಲ್ಲ, ನೀವು ಆನಂದಿಸಿದ ವಿಷಯಗಳನ್ನೂ ಪ್ರಾರ್ಥನೆಯಲ್ಲಿ ಹೇಳಲು ಮರೆಯದಿರಿ. (ಫಿಲಿ. 4:6) ಇನ್ನೊಂದು ಗುರಿ ಬೈಬಲನ್ನು ಪ್ರತಿದಿನ ಓದುವುದೇ. ನೀವು ಪ್ರತಿದಿನ ಬೈಬಲಿನ ನಾಲ್ಕು ಪುಟಗಳನ್ನು ಓದುವುದಾದರೆ ಒಂದೇ ವರ್ಷದಲ್ಲಿ ಇಡೀ ಬೈಬಲನ್ನು ಓದಿಮುಗಿಸುವಿರಿ ಎಂಬುದು ನಿಮಗೆ ಗೊತ್ತೋ? * ಕೀರ್ತನೆ 1:1, 2 ಹೇಳುವುದು: “ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು.”

8 ನೀವಿಡಬಲ್ಲ ಮೂರನೇ ಅಲ್ಪಕಾಲಿಕ ಗುರಿ ಪ್ರತಿ ಸಭಾಕೂಟದಲ್ಲಿ ಉತ್ತರಕೊಡಲು ತಯಾರಿಮಾಡುವುದೇ. ಮೊದಮೊದಲು ನೀವು ಉತ್ತರವನ್ನು ಓದಿಹೇಳಬಹುದು ಅಥವಾ ಒಂದು ವಚನವನ್ನು ಓದಬಹುದು. ನಂತರ ಸ್ವಂತ ಮಾತಿನಲ್ಲಿ ಉತ್ತರ ಹೇಳುವ ಗುರಿಯಿಡಿರಿ. ನೀವು ಕೊಡುವ ಪ್ರತಿಯೊಂದು ಉತ್ತರ ಯೆಹೋವನಿಗೆ ಒಂದು ಸ್ತುತಿಯರ್ಪಣೆಯಾಗಿದೆ. (ಇಬ್ರಿ. 13:15) ಈ ಗುರಿಗಳಲ್ಲಿ ಕೆಲವನ್ನು ನೀವು ಮುಟ್ಟಿದಂತೆ ನಿಮ್ಮ ಆತ್ಮವಿಶ್ವಾಸ ಹಾಗೂ ಯೆಹೋವನ ಕಡೆಗಿನ ಗಣ್ಯತೆ ಹೆಚ್ಚುವುದು. ಈಗ ನೀವು ದೀರ್ಘಕಾಲಿಕ ದೊಡ್ಡ ಗುರಿಗಳನ್ನಿಡಲು ಸಿದ್ಧರಾಗಿರುವಿರಿ.

9. ನೀವಿನ್ನೂ ರಾಜ್ಯ ಪ್ರಚಾರಕರಾಗಿಲ್ಲವಾದರೆ ನಿಮಗಾಗಿ ಯಾವ ದೀರ್ಘಕಾಲಿಕ ಗುರಿಗಳನ್ನಿಡಬಲ್ಲಿರಿ?

9 ನೀವು ನಿಮಗಾಗಿ ಯಾವ ದೀರ್ಘಕಾಲಿಕ ಗುರಿಗಳನ್ನು ಇಡಬಲ್ಲಿರಿ? ನೀವಿನ್ನೂ ಸುವಾರ್ತೆಯನ್ನು ಸಾರ್ವಜನಿಕವಾಗಿ ಸಾರುತ್ತಿಲ್ಲವಾದರೆ, ನಿಮ್ಮ ದೀರ್ಘಕಾಲಿಕ ಗುರಿಯು ರಾಜ್ಯ ಪ್ರಚಾರಕರಾಗುವುದೇ. ಈ ಗೌರವಾರ್ಹ ಗುರಿಯನ್ನು ಒಮ್ಮೆ ಮುಟ್ಟಿಯಾದ ಮೇಲೆ ಕ್ರಮದ ಹಾಗೂ ಪರಿಣಾಮಕಾರಿ ಪ್ರಚಾರಕರಾಗಲು ನೀವು ಬಯಸುವಿರಿ. ಆಮೇಲೆ ಒಂದೇ ಒಂದು ತಿಂಗಳಾದರೂ ನೀವದನ್ನು ತಪ್ಪಿಸಬಾರದು. ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸಲೂ ನೀವು ಕಲಿಯಬೇಕು. ಹೀಗೆ ಮಾಡುತ್ತಾ ಹೋದಂತೆ ನೀವು ಸಾರುವ ಕೆಲಸದಲ್ಲಿ ಇನ್ನೂ ಹೆಚ್ಚು ಆನಂದಿಸುವಿರಿ. ತದನಂತರ ಮನೆ-ಮನೆ ಸಾಕ್ಷಿಕಾರ್ಯದಲ್ಲಿ ಹೆಚ್ಚು ತಾಸುಗಳನ್ನು ವ್ಯಯಿಸಲು ಅಥವಾ ಬೈಬಲ್‌ ಅಧ್ಯಯನ ನಡೆಸಲೂ ಪ್ರಯತ್ನಿಸಸಾಧ್ಯವಿದೆ. ಅಸ್ನಾತ ಪ್ರಚಾರಕರಾದ ಮೇಲೆ ನೀವು ಇನ್ಯಾವ ಗುರಿಯನ್ನಿಡಬಹುದು? ದೀಕ್ಷಾಸ್ನಾನಕ್ಕೆ ಅರ್ಹರಾಗುವ ಗುರಿ. ಯೆಹೋವ ದೇವರ ಸಮರ್ಪಿತ ಹಾಗೂ ಸ್ನಾತ ಸಾಕ್ಷಿಯಾಗುವ ಗುರಿಗಿಂತ ಉತ್ತಮವಾದದ್ದು ಮತ್ತೊಂದಿಲ್ಲ.

10, 11. ಸ್ನಾತ ಯೌವನಸ್ಥರು ಯಾವ ದೀರ್ಘಕಾಲಿಕ ಗುರಿಗಳನ್ನಿಡಬಲ್ಲರು?

10 ನೀವು ಈಗಾಗಲೇ ಯೆಹೋವನ ಸ್ನಾತ ಸೇವಕರಾಗಿದ್ದರೆ ನೀವು ಮುಟ್ಟಬಲ್ಲ ಕೆಲವು ದೀರ್ಘಕಾಲಿಕ ಗುರಿಗಳು ಇಲ್ಲಿವೆ. ವಿರಳವಾಗಿ ಆವರಿಸಲಾದ ಟೆರಿಟೊರಿಯಲ್ಲಿ ಸಾರಲು ಸಭೆಗಳಿಗೆ ನೀವು ಆಗಾಗ್ಗೆ ಸಹಾಯಮಾಡಬಲ್ಲಿರಿ. ನಿಮ್ಮ ಶಕ್ತಿ ಹಾಗೂ ಒಳ್ಳೇ ಆರೋಗ್ಯವನ್ನು ಆಕ್ಸಿಲಿಯರಿ ಅಥವಾ ರೆಗ್ಯುಲರ್‌ ಪಯನೀಯರ್‌ ಸೇವೆಮಾಡಲು ಬಳಸಲೂಬಹುದು. ಪೂರ್ಣ ಸಮಯದ ಸೇವೆಯು ಯೌವನದಲ್ಲಿ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸುವ ಸಂತೃಪ್ತಿಕರ ವಿಧ ಎಂಬುದು ಹತ್ತಾರು ಸಾವಿರ ಸಂತೋಷಿತ ಪಯನೀಯರರ ಅನುಭವ. ಈ ಗುರಿಗಳನ್ನು ನೀವು ಚಿಕ್ಕ ವಯಸ್ಸಿನಲ್ಲೇ ಮುಟ್ಟಬಹುದು. ನೀವು ಈ ಗುರಿಗಳನ್ನು ಮುಟ್ಟುವುದರಿಂದ ಸ್ಥಳೀಯ ಸಭೆಯೂ ಪ್ರಯೋಜನಪಡೆಯುವುದು.

11 ಬೇರೆ ದೀರ್ಘಕಾಲಿಕ ಗುರಿಗಳು ನಿಮ್ಮನ್ನು ಸ್ಥಳೀಯ ಸಭೆಗೆ ಮಾತ್ರವಲ್ಲ ಬೇರೆ ಸಭೆಗಳಿಗೂ ಸಹಾಯನೀಡಲು ನಡೆಸಬಹುದು. ಉದಾಹರಣೆಗೆ, ಹೆಚ್ಚು ಅಗತ್ಯವಿರುವ ಬೇರೊಂದು ಕ್ಷೇತ್ರದಲ್ಲಿ ಅಥವಾ ದೇಶದಲ್ಲಿ ಸೇವೆಮಾಡಲು ನೀವು ಯೋಜಿಸಬಹುದು. ವಿದೇಶಗಳಲ್ಲಿ ರಾಜ್ಯ ಸಭಾಗೃಹಗಳು ಅಥವಾ ಬ್ರಾಂಚ್‌ ಆಫೀಸುಗಳನ್ನು ಕಟ್ಟಲು ಸಹಾಯಮಾಡಬಲ್ಲಿರಿ. ಬೆತೆಲ್‌ ಸೇವೆ ಅಥವಾ ಮಿಷನೆರಿ ಸೇವೆಯನ್ನು ಮಾಡಲು ಸಹ ಶಕ್ತರಾಗಬಹುದು. ಆದರೆ ಇಲ್ಲಿ ತಿಳಿಸಲಾದ ಎಲ್ಲ ದೀರ್ಘಕಾಲಿಕ ಗುರಿಗಳನ್ನು ಮುಟ್ಟುವ ಮೊದಲು ನೀವು ಮುಟ್ಟಬೇಕಾದ ಮೊದಲನೇ ಮೈಲಿಗಲ್ಲು ದೀಕ್ಷಾಸ್ನಾನ ಪಡೆಯುವುದೇ. ನಿಮಗಿನ್ನೂ ದೀಕ್ಷಾಸ್ನಾನವಾಗಿರದಿದ್ದರೆ ನಿಮ್ಮ ಜೀವನದ ಈ ಮೈಲಿಗಲ್ಲನ್ನು ಮುಟ್ಟಲು ಏನೆಲ್ಲ ಮಾಡಬೇಕೆಂದು ಪರಿಗಣಿಸಿ.

ದೀಕ್ಷಾಸ್ನಾನ ಹೊಂದುವ ಗುರಿ ಮುಟ್ಟಿರಿ

12. ಕೆಲವರು ಯಾವ ಕಾರಣಗಳಿಗಾಗಿ ದೀಕ್ಷಾಸ್ನಾನ ಹೊಂದುತ್ತಾರೆ? ಆ ಕಾರಣಗಳಿಗಾಗಿ ದೀಕ್ಷಾಸ್ನಾನ ಹೊಂದಬಾರದೇಕೆ?

12 ದೀಕ್ಷಾಸ್ನಾನದ ಉದ್ದೇಶವನ್ನು ನೀವು ಹೇಗೆ ವಿವರಿಸುತ್ತೀರಿ? ಪಾಪದಲ್ಲಿ ಬೀಳದಂತೆ ಅದು ತಮ್ಮನ್ನು ಕಾಪಾಡುತ್ತದೆಂದು ಕೆಲವರು ನೆನಸುತ್ತಾರೆ. ತಮ್ಮ ಸಮಾನಸ್ಥರಿಗೆ ದೀಕ್ಷಾಸ್ನಾನವಾದ ಕಾರಣ ತಮಗೂ ಆಗಬೇಕೆಂಬ ಭಾವನೆ ಇನ್ನು ಕೆಲವರದ್ದು. ಇತರ ಯೌವನಸ್ಥರಾದರೋ ಹೆತ್ತವರನ್ನು ಮೆಚ್ಚಿಸಲಿಕ್ಕಾಗಿ ದೀಕ್ಷಾಸ್ನಾನ ಹೊಂದುತ್ತಾರೆ. ಆದರೆ ನೀವೇನನ್ನುತ್ತೀರಿ? ನೀವು ಗುಟ್ಟಾಗಿ ಮಾಡಲಿಚ್ಛಿಸುವ ಕೆಟ್ಟ ವಿಷಯಗಳನ್ನು ದೀಕ್ಷಾಸ್ನಾನ ತಡೆಯುತ್ತದೆಂದು ನೆನಸಬೇಡಿ. ಅಥವಾ ಇತರರ ಒತ್ತಡಕ್ಕೆ ಮಣಿದು ಸಹ ನೀವು ದೀಕ್ಷಾಸ್ನಾನ ಪಡೆಯಬಾರದು. ಯೆಹೋವನ ಸಾಕ್ಷಿಯಾಗಿರುವುದರ ಅರ್ಥವೇನು ಎಂಬುದು ನಿಮಗೆ ಪೂರ್ಣವಾಗಿ ತಿಳಿದಿರುವಾಗ ಹಾಗೂ ಆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಸಿದ್ಧರೂ ಅಪೇಕ್ಷೆಯುಳ್ಳವರೂ ಆಗಿದ್ದೀರಿ ಎಂಬುದು ಖಚಿತವಿರುವಾಗ ಮಾತ್ರ ನೀವು ದೀಕ್ಷಾಸ್ನಾನ ಪಡೆದುಕೊಳ್ಳಬೇಕು.—ಪ್ರಸಂ. 5:4, 5.

13. ಯಾವ ಕಾರಣಕ್ಕಾಗಿ ನೀವು ದೀಕ್ಷಾಸ್ನಾನ ಪಡಕೊಳ್ಳಬೇಕು?

13 ದೀಕ್ಷಾಸ್ನಾನ ಪಡಕೊಳ್ಳಲು ಒಂದು ಕಾರಣವೇನೆಂದರೆ “ಶಿಷ್ಯರನ್ನಾಗಿ ಮಾಡಿರಿ . . . ಅವರಿಗೆ ದೀಕ್ಷಾಸ್ನಾನ ಮಾಡಿಸಿ” ಎಂದು ಯೇಸು ಆಜ್ಞೆಯಿತ್ತದ್ದೇ. ಅವನು ಸ್ವತಃ ದೀಕ್ಷಾಸ್ನಾನ ಹೊಂದುವ ಮೂಲಕ ಮಾದರಿಯನ್ನಿಟ್ಟನು. (ಮತ್ತಾಯ 28:19, 20; ಮಾರ್ಕ 1:9 ಓದಿ.) ಅಷ್ಟುಮಾತ್ರವಲ್ಲ, ರಕ್ಷಣೆ ಪಡೆಯಲು ಬಯಸುವವರು ತೆಗೆದುಕೊಳ್ಳಬೇಕಾದ ಪ್ರಮುಖ ಹೆಜ್ಜೆ ದೀಕ್ಷಾಸ್ನಾನ. ನೋಹನು ನಾವೆಯನ್ನು ಕಟ್ಟಿ ತನ್ನ ಕುಟುಂಬದೊಂದಿಗೆ ಜಲಪ್ರಳಯದಿಂದ ಪಾರಾದ ಕುರಿತು ತಿಳಿಸಿದ ನಂತರ ಅಪೊಸ್ತಲ ಪೇತ್ರನು ಹೇಳಿದ್ದು: “ಇದಕ್ಕೆ ಅನುರೂಪವಾದದ್ದು, ಅಂದರೆ ದೀಕ್ಷಾಸ್ನಾನವು ಸಹ . . . ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಿಮ್ಮನ್ನು ರಕ್ಷಿಸುತ್ತಿದೆ.” (1 ಪೇತ್ರ 3:20, 21) ಹಾಗಿದ್ದರೂ ದೀಕ್ಷಾಸ್ನಾನವು, ವಿಪತ್ತು ಸಂಭವಿಸುವಲ್ಲಿ ಸುರಕ್ಷೆಗೆಂದು ತೆಗೆದುಗೊಳ್ಳುವ ಇನ್ಷೂರೆನ್ಸ್‌ ಪಾಲಿಸಿಯಂತೆ ಇಲ್ಲ. ಬದಲಾಗಿ ಯೆಹೋವನನ್ನು ಪ್ರೀತಿಸುವುದರಿಂದ ಹಾಗೂ ಪೂರ್ಣ ಹೃದಯ, ಪ್ರಾಣ, ಮನಸ್ಸು, ಬಲದಿಂದ ಆತನ ಸೇವೆಮಾಡುವ ಅಪೇಕ್ಷೆಯ ಕಾರಣದಿಂದ ನೀವು ತೆಗೆದುಕೊಳ್ಳಬೇಕಾದ ಹೆಜ್ಜೆಯಾಗಿದೆ.—ಮಾರ್ಕ 12:29, 30.

14. ಕೆಲವರು ದೀಕ್ಷಾಸ್ನಾನ ಹೊಂದಲು ಹಿಂಜರಿಯುವುದಕ್ಕೆ ಕಾರಣವೇನು? ನಿಮಗೆ ಯಾವ ಆಶ್ವಾಸನೆಯಿದೆ?

14 ಕೆಲವರು ದೀಕ್ಷಾಸ್ನಾನ ಹೊಂದಲು ಹಿಂಜರಿಯುತ್ತಾರೆ. ಏಕೆಂದರೆ ತದನಂತರ ಏನಾದರೂ ತಪ್ಪುಮಾಡಿದರೆ ಎಲ್ಲಿ ಬಹಿಷ್ಕಾರವಾಗುತ್ತದೋ ಎಂಬ ಭಯ ಅವರಿಗೆ. ಈ ಭಯ ನಿಮಗಿದೆಯೋ? ಹಾಗಿದ್ದಲ್ಲಿ ಅಂಥ ಭಯವಿರುವುದು ತಾನೇ ತಪ್ಪಲ್ಲ. ಯೆಹೋವನ ಸಾಕ್ಷಿಯಾಗುವುದರಿಂದ ಬರುವ ಗಂಭೀರ ಜವಾಬ್ದಾರಿಯನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಅದು ತೋರಿಸಬಲ್ಲದು. ದೀಕ್ಷಾಸ್ನಾನವನ್ನು ಮುಂದೂಡಲು ಬೇರೆ ಕಾರಣವಿರಬಹುದೋ? ಒಂದುವೇಳೆ ದೇವರ ಮಟ್ಟಗಳಿಗನುಸಾರ ಜೀವಿಸುವುದೇ ಅತ್ಯುತ್ತಮ ಜೀವನಮಾರ್ಗ ಎಂಬ ಖಾತ್ರಿ ನಿಮಗಿನ್ನೂ ಆಗಿರಲಿಕ್ಕಿಲ್ಲ. ಹಾಗಿದ್ದಲ್ಲಿ, ಬೈಬಲ್‌ ಮಟ್ಟಗಳನ್ನು ತಿರಸ್ಕರಿಸುವವರು ಅನುಭವಿಸುವ ದುಷ್ಪರಿಣಾಮಗಳ ಕುರಿತು ಯೋಚಿಸುವುದು ಸರಿಯಾದ ನಿರ್ಣಯ ಮಾಡಲು ನಿಮಗೆ ಸಹಾಯಮಾಡಬಲ್ಲದು. ಇನ್ನೊಂದು ಕಡೆ, ನೀವು ದೇವರ ಮಟ್ಟಗಳನ್ನು ಪ್ರೀತಿಸುತ್ತೀರಾದರೂ ಅವುಗಳಿಗನುಸಾರ ಜೀವಿಸಬಲ್ಲಿರಿ ಎಂಬ ಭರವಸೆ ನಿಮಗಿಲ್ಲದಿರಬಹುದು. ಹಾಗನಿಸುವುದು ಒಳ್ಳೆಯದೇ. ಏಕೆಂದರೆ ನಿಮ್ಮಲ್ಲಿ ದೀನತೆ ಇದೆ ಎಂದು ಅದು ತೋರಿಸುತ್ತದೆ. ಎಷ್ಟೆಂದರೂ ಮನುಷ್ಯರೆಲ್ಲರ ಹೃದಯವು ವಂಚಕ ಎಂದು ಬೈಬಲ್‌ ಸಹ ಹೇಳುತ್ತದೆ. (ಯೆರೆ. 17:9) ಆದರೆ ಸದಾ ‘ದೇವರ ವಾಕ್ಯವನ್ನು ಗಮನಿಸಿ ನಡೆಯುವುದಾದರೆ’ ನೀವು ಯಶಸ್ವಿಗಳಾಗುವಿರಿ. (ಕೀರ್ತನೆ 119:9 ಓದಿ.) ದೀಕ್ಷಾಸ್ನಾನ ಹೊಂದಲು ಹಿಂಜರಿಯುವುದಕ್ಕೆ ಯಾವುದೇ ಕಾರಣಗಳಿರಲಿ ಅಂಥ ಚಿಂತೆ ಸಂದೇಹಗಳನ್ನು ಪರಿಹರಿಸಿಕೊಳ್ಳುವುದು ಅಗತ್ಯ. *

15, 16. ನೀವು ದೀಕ್ಷಾಸ್ನಾನಕ್ಕೆ ಸಿದ್ಧರಾಗಿದ್ದೀರೋ ಇಲ್ಲವೋ ಎಂದು ಹೇಗೆ ಹೇಳಬಲ್ಲಿರಿ?

15 ನೀವು ದೀಕ್ಷಾಸ್ನಾನಕ್ಕೆ ಸಿದ್ಧರಾಗಿದ್ದೀರೋ ಇಲ್ಲವೋ ಎಂದು ಹೇಗೆ ಹೇಳಬಲ್ಲಿರಿ? ಒಂದು ವಿಧ, ಈ ಪ್ರಶ್ನೆಗಳನ್ನು ನೀವು ಕೇಳಿಕೊಳ್ಳುವುದೇ: ‘ಬೈಬಲಿನ ಮೂಲಭೂತ ಬೋಧನೆಗಳನ್ನು ನಾನು ಇತರರಿಗೆ ವಿವರಿಸಶಕ್ತನೋ? ಒಂದುವೇಳೆ ನನ್ನ ಹೆತ್ತವರು ಶುಶ್ರೂಷೆಯಲ್ಲಿ ಭಾಗವಹಿಸದಿದ್ದಾಗಲೂ ನಾನು ಭಾಗವಹಿಸುತ್ತೇನೋ? ಎಲ್ಲ ಕ್ರೈಸ್ತ ಕೂಟಗಳನ್ನು ಹಾಜರಾಗಲು ಶ್ರಮಿಸುತ್ತೇನೋ? ಸಮಾನಸ್ಥರ ಒತ್ತಡವನ್ನು ನಾನು ಎದುರಿಸಿ ನಿಂತ ಸಂದರ್ಭಗಳಿವೆಯೋ? ಒಂದುವೇಳೆ ನನ್ನ ಹೆತ್ತವರು, ಸ್ನೇಹಿತರು ಯೆಹೋವನ ಸೇವೆಯನ್ನು ಬಿಟ್ಟುಬಿಟ್ಟರೂ ನಾನು ಮುಂದುವರಿಸುವೆನೋ? ದೇವರೊಂದಿಗಿನ ನನ್ನ ಸುಸಂಬಂಧ ಎಷ್ಟು ಮಹತ್ವದ್ದೆಂದು ನಾನು ಪ್ರಾರ್ಥನೆಯಲ್ಲಿ ತಿಳಿಸಿದ್ದೇನೋ? ನಾನು ಪ್ರಾರ್ಥನೆಯಲ್ಲಿ ಯೆಹೋವನಿಗೆ ಮನಃಪೂರ್ವಕ ಸಮರ್ಪಣೆಯನ್ನು ನಿಜವಾಗಿಯೂ ಮಾಡಿದ್ದೇನೋ?’

16 ದೀಕ್ಷಾಸ್ನಾನವು ಜೀವನವನ್ನು ಪರಿವರ್ತಿಸುವ ಒಂದು ಹೆಜ್ಜೆ. ಅದನ್ನು ಲಘುವಾಗಿ ಎಣಿಸಬಾರದು. ಈ ಹೆಜ್ಜೆಯನ್ನು ಗಂಭೀರವಾಗಿ ತಕ್ಕೊಳ್ಳುವಷ್ಟು ಪ್ರೌಢರು ನೀವಾಗಿದ್ದೀರೋ? ಪ್ರೌಢತೆಯೆಂದರೆ ವೇದಿಕೆಯಿಂದ ಅತ್ಯುತ್ತಮ ಭಾಷಣಗಳನ್ನು ಕೊಡುವುದಕ್ಕಿಂತ ಅಥವಾ ಕೂಟಗಳಲ್ಲಿ ಪ್ರಭಾವಶಾಲಿ ಉತ್ತರ ಕೊಡುವುದಕ್ಕಿಂತ ಹೆಚ್ಚಿನದ್ದಾಗಿದೆ. ಬೈಬಲ್‌ ಮೂಲತತ್ತ್ವಗಳ ಆಧಾರದಲ್ಲಿ ನಿರ್ಣಯಗಳನ್ನು ಮಾಡಲು ಶಕ್ತರಾಗಿರುವುದೇ ಪ್ರೌಢತೆ. (ಇಬ್ರಿಯ 5:14 ಓದಿ.) ಇದನ್ನು ಮಾಡಲು ನೀವು ಸಮರ್ಥರಾಗಿರುವಲ್ಲಿ, ಪೂರ್ಣಹೃದಯದಿಂದ ಯೆಹೋವನ ಸೇವೆ ಮಾಡುವ ಹಾಗೂ ಆತನಿಗೆ ಸಂಪೂರ್ಣ ಸಮರ್ಪಿತರೆಂದು ತೋರಿಸುವ ವಿಧದಲ್ಲಿ ಜೀವಿಸುವ ಭವ್ಯ ಸದವಕಾಶ ಈಗ ನಿಮ್ಮ ಮುಂದಿದೆ.

17. ದೀಕ್ಷಾಸ್ನಾನದ ನಂತರ ಬರುವ ಪರೀಕ್ಷೆಗಳನ್ನು ಎದುರಿಸಲು ಯಾವುದು ನಿಮಗೆ ಸಹಾಯಮಾಡುವುದು?

17 ದೀಕ್ಷಾಸ್ನಾನವಾದ ಆರಂಭದಲ್ಲಿ ನಿಮಗೆ ದೇವರ ಸೇವೆ ಮಾಡಲು ಅತಿ ಹೆಚ್ಚು ಹುರುಪಿರುತ್ತದೆ ನಿಜ. ಆದರೂ ಬೇಗನೆ ನಿಮ್ಮ ನಂಬಿಕೆ ಮತ್ತು ಸ್ಥಿರತೆಯನ್ನು ಪರೀಕ್ಷೆಗೊಡ್ಡುವ ಸಂಕಷ್ಟಗಳನ್ನು ನೀವು ಎದುರಿಸಬಹುದು. (2 ತಿಮೊ. 3:12) ಈ ಪರೀಕ್ಷೆಗಳನ್ನು ನೀವು ಒಬ್ಬಂಟಿಗರಾಗಿ ಎದುರಿಸಬೇಕು ಎಂದು ನೆನಸದಿರಿ. ಹೆತ್ತವರ ಸಲಹೆ ಪಡೆಯಿರಿ. ಸಭೆಯಲ್ಲಿರುವ ಪ್ರೌಢ ಕ್ರೈಸ್ತರ ಸಹಾಯಕೋರಿರಿ. ನಿಮ್ಮನ್ನು ಬೆಂಬಲಿಸುವಂಥವರ ಸ್ನೇಹ ಮಾಡಿರಿ. ಯೆಹೋವನಿಗೆ ನಿಮ್ಮ ಬಗ್ಗೆ ಚಿಂತೆಯಿದೆ, ಯಾವುದೇ ಸನ್ನಿವೇಶವನ್ನು ಎದುರಿಸಲು ಬೇಕಾದ ಬಲವನ್ನು ಆತನು ಕೊಡುತ್ತಾನೆಂಬುದನ್ನು ಎಂದೂ ಮರೆಯದಿರಿ.—1 ಪೇತ್ರ 5:6, 7.

ಗುರಿ ಮುಟ್ಟುವುದು ಹೇಗೆ?

18, 19. ನಿಮ್ಮ ಆದ್ಯತೆಗಳನ್ನು ಪರಿಶೀಲಿಸುವುದರಿಂದ ಯಾವ ಪ್ರಯೋಜನವಿದೆ?

18 ನಿಮ್ಮ ಹೇತುಗಳು ಅತ್ಯುತ್ತಮವಾಗಿರುವುದಾದರೂ ನೀವು ಮಾಡಬಯಸುವ ಮತ್ತು ಮಾಡಲೇಬೇಕಾದ ವಿಷಯಗಳಿಗೆ ಸಾಕಷ್ಟು ಸಮಯವೇ ಇಲ್ಲ ಎಂದು ನಿಮಗನಿಸುತ್ತದೋ? ಹಾಗಿದ್ದಲ್ಲಿ ನೀವು ನಿಮ್ಮ ಆದ್ಯತೆಗಳನ್ನು ಪರಿಶೀಲಿಸಬೇಕು. ದೃಷ್ಟಾಂತಕ್ಕೆ: ಒಂದು ಪ್ಲ್ಯಾಸ್ಟಿಕ್‌ ಬಕೆಟನ್ನು ತಕ್ಕೊಳ್ಳಿ. ಅದರಲ್ಲಿ ಮೊದಲು ಅನೇಕ ದೊಡ್ಡ ಕಲ್ಲುಗಳನ್ನು ಹಾಕಿರಿ. ನಂತರ ಅದರಲ್ಲಿ ಮರಳು ತುಂಬಿಸಿ. ಈಗ ನಿಮ್ಮ ಬಕೆಟ್‌ ಕಲ್ಲು ಮತ್ತು ಮರಳಿನಿಂದ ಪೂರ್ಣವಾಗಿ ತುಂಬಿಕೊಂಡಿದೆ. ಬಕೆಟನ್ನು ಈಗ ಖಾಲಿಮಾಡಿ. ಕಲ್ಲುಗಳನ್ನೂ ಮರಳನ್ನೂ ಪಕ್ಕಕ್ಕಿಡಿ. ಈ ಬಾರಿ ಬಕೆಟಿನಲ್ಲಿ ಮೊದಲು ಮರಳನ್ನು ತುಂಬಿಸಿ. ನಂತರ ಕಲ್ಲುಗಳನ್ನು ತುಂಬಿಸಲು ಪ್ರಯತ್ನಿಸಿ. ಆದರೆ ಎಲ್ಲ ಕಲ್ಲುಗಳನ್ನು ಬಕೆಟಿನಲ್ಲಿ ತುಂಬಿಸಲಿಕ್ಕೆ ನಿಮಗೆ ಆಗುವುದಿಲ್ಲ ಅಲ್ಲವೇ? ಏಕೆ? ಏಕೆಂದರೆ ನೀವು ಮೊದಲು ಕಲ್ಲನ್ನು ತುಂಬಿಸಬೇಕಿತ್ತು ಮತ್ತೆ ಮರಳನ್ನು.

19 ನೀವು ಸಮಯವನ್ನು ಬಳಸುವ ವಿಷಯದಲ್ಲೂ ಇದೇ ಸಮಸ್ಯೆಯನ್ನು ಎದುರಿಸುತ್ತೀರಿ. ವಿನೋದ-ವಿಹಾರದಂಥ ವಿಷಯಗಳಿಗೆ ಪ್ರಥಮ ಆದ್ಯತೆ ಕೊಡುವುದಾದರೆ ಜೀವನದಲ್ಲಿ ಪ್ರಮುಖವಾದ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಎಂದೂ ಸಾಕಷ್ಟು ಸಮಯವಿರದು. ಆದರೆ ಬೈಬಲಿನ ಬುದ್ಧಿವಾದವನ್ನು ಅನುಸರಿಸುತ್ತಾ ನೀವು ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವುದಾದರೆ’ ಆಧ್ಯಾತ್ಮಿಕ ವಿಷಯಗಳಿಗೂ, ತಕ್ಕಷ್ಟು ವಿನೋದ-ವಿಹಾರಕ್ಕೂ ಸಮಯ ಸಿಗುವುದು.—ಫಿಲಿ. 1:10.

20. ಗುರಿಗಳನ್ನು ಮುಟ್ಟಲು ಶ್ರಮಿಸುತ್ತಿರುವಾಗ ನಿಮ್ಮಲ್ಲಿ ಚಿಂತೆ, ಸಂದೇಹಗಳು ಏಳುವುದಾದರೆ ಏನು ಮಾಡಬೇಕು?

20 ದೀಕ್ಷಾಸ್ನಾನವೂ ಸೇರಿದಂತೆ ನಿಮ್ಮ ಗುರಿಗಳನ್ನು ಮುಟ್ಟಲು ಶ್ರಮಿಸುತ್ತಿರುವಾಗ ಕೆಲವೊಮ್ಮೆ ನಿಮ್ಮಲ್ಲಿ ಚಿಂತೆ, ಸಂದೇಹಗಳು ಏಳಬಹುದು. ಹಾಗಾಗುವಾಗ ‘ನಿಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಿರಿ; ಆತನು ನಿಮ್ಮನ್ನು ಉದ್ಧಾರಮಾಡುವನು.’ (ಕೀರ್ತ. 55:22) ಮಾನವ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಹಾಗೂ ರೋಮಾಂಚಕ ಕೆಲಸದಲ್ಲಿ ಪಾಲ್ಗೊಳ್ಳುವ ಸದವಕಾಶ ಈಗ ನಿಮ್ಮ ಮುಂದಿದೆ. ಅದು ಲೋಕವ್ಯಾಪಕ ಸಾರುವ ಮತ್ತು ಕಲಿಸುವ ಕೆಲಸವೇ ಆಗಿದೆ. (ಅ. ಕಾ. 1:8) ಆ ಕೆಲಸವನ್ನು ಇತರರು ಮಾಡುವಾಗ ನೀವು ಕೇವಲ ಪ್ರೇಕ್ಷಕರಾಗಿರುತ್ತೀರೋ ಅಥವಾ ನೀವು ಸ್ವತಃ ಆ ಕೆಲಸದಲ್ಲಿ ಭಾಗಿಗಳಾಗಿರುತ್ತೀರೋ? ಆಯ್ಕೆ ನಿಮ್ಮದು. ದೇವರ ಸೇವೆಯಲ್ಲಿ ಹಾಗೂ ಆತನ ರಾಜ್ಯವನ್ನು ಬೆಂಬಲಿಸುವುದರಲ್ಲಿ ನಿಮ್ಮ ಕೌಶಲಗಳನ್ನು ಉಪಯೋಗಿಸಲು ಹಿಂಜರಿಯಬೇಡಿ. ಹೀಗೆ ‘ಯೌವನದಲ್ಲಿಯೇ ನಿಮ್ಮ ಸೃಷ್ಟಿಕರ್ತನ’ ಸೇವೆ ಮಾಡಿದ್ದಕ್ಕಾಗಿ ನೀವೆಂದೂ ವಿಷಾದಿಸಲಾರಿರಿ.—ಪ್ರಸಂ. 12:1.

[ಪಾದಟಿಪ್ಪಣಿಗಳು]

^ ಪ್ಯಾರ. 7 2010, ಜನವರಿ-ಮಾರ್ಚ್‌ ಕಾವಲಿನಬುರುಜು ಸಂಚಿಕೆ ಪುಟ 23-26 ನೋಡಿ.

^ ಪ್ಯಾರ. 14 ಹೆಚ್ಚಿನ ಮಾಹಿತಿಗಾಗಿ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 2 (ಇಂಗ್ಲಿಷ್‌) ಪುಸ್ತಕದ ಅಧ್ಯಾಯ 34 ನೋಡಿ.

ನಿಮ್ಮ ಉತ್ತರವೇನು?

• ನೀವು ಏಕೆ ಗುರಿಗಳನ್ನು ಇಡಬೇಕು?

• ಸಾಧಿಸಲು ಸಾರ್ಥಕವಾದ ಕೆಲವು ಗುರಿಗಳು ಯಾವುವು?

• ದೀಕ್ಷಾಸ್ನಾನ ಹೊಂದುವ ಗುರಿ ಮುಟ್ಟಲು ಏನು ಮಾಡುವ ಅಗತ್ಯವಿದೆ?

• ಗುರಿಗಳನ್ನು ಮುಟ್ಟಲು ನಿಮ್ಮ ಆದ್ಯತೆಗಳನ್ನು ಪರಿಶೀಲಿಸುವುದು ಹೇಗೆ ಸಹಾಯಕಾರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಪ್ರತಿದಿನ ಬೈಬಲ್‌ ಓದುವ ಗುರಿ ನಿಮಗಿದೆಯೋ?

[ಪುಟ 15ರಲ್ಲಿರುವ ಚಿತ್ರ]

ದೀಕ್ಷಾಸ್ನಾನ ಹೊಂದುವ ಗುರಿಯನ್ನು ಮುಟ್ಟಲು ಯಾವುದು ನಿಮಗೆ ಸಹಾಯಮಾಡುವುದು?

[ಪುಟ 16ರಲ್ಲಿರುವ ಚಿತ್ರ]

ಈ ದೃಷ್ಟಾಂತದಿಂದ ನೀವು ಯಾವ ಪಾಠ ಕಲಿಯುತ್ತೀರಿ?