ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೌವನಸ್ಥರೇ, ಸಮಾನಸ್ಥರ ಒತ್ತಡವನ್ನು ಎದುರಿಸಿರಿ

ಯೌವನಸ್ಥರೇ, ಸಮಾನಸ್ಥರ ಒತ್ತಡವನ್ನು ಎದುರಿಸಿರಿ

ಯೌವನಸ್ಥರೇ, ಸಮಾನಸ್ಥರ ಒತ್ತಡವನ್ನು ಎದುರಿಸಿರಿ

“ನಿಮ್ಮ ಮಾತು . . . ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.”—ಕೊಲೊ. 4:6.

1, 2. ಅನೇಕ ಯೌವನಸ್ಥರಿಗೆ ಇತರರಿಗಿಂತ ಭಿನ್ನರಾಗಿರುವುದರ ಬಗ್ಗೆ ಹೇಗನಿಸುತ್ತದೆ? ಏಕೆ?

“ಸಮಾನಸ್ಥರ ಒತ್ತಡ” ಎಂಬ ಪದವನ್ನು ನೀವು ಕೇಳಿದ್ದೀರಿ, ಮಾತ್ರವಲ್ಲ ಅದೇನೆಂಬುದನ್ನು ಅನುಭವದಿಂದಲೂ ತಿಳಿದಿದ್ದೀರಿ. ನಿಮಗೆ ತಪ್ಪೆಂದು ತಿಳಿದಿರುವ ಒಂದು ವಿಷಯವನ್ನು ಮಾಡುವಂತೆ ಯಾರಾದರೂ ನಿಮ್ಮನ್ನು ಎಂದಾದರೂ ಒತ್ತಾಯಿಸಿದ್ದರೋ? ಆಗ ನಿಮಗೆ ಹೇಗನಿಸಿತು? ಶಾಲೆಯಲ್ಲಿ ಒತ್ತಡಕ್ಕೊಳಗಾದ 14 ವಯಸ್ಸಿನ ಕ್ರಿಸ್ಟಫರ್‌ ಹೇಳುವುದು: “ನಾನಿಲ್ಲಿಗೆ ಬರಲೇ ಬಾರದಿತ್ತು ಇಲ್ಲಾಂದ್ರೆ ನಾನೂ ನನ್ನ ಸಹಪಾಠಿಗಳ ಹಾಗೆಯೇ ಇರ್ಬೇಕಿತ್ತು. ಆಗ ಅವರು ನನ್ನನ್ನು ವಿಚಿತ್ರ ಪ್ರಾಣಿ ಎಂದೆಣಿಸುತ್ತಿರಲಿಲ್ಲ.”

2 ನಿಮ್ಮ ಸಮಾನಸ್ಥರಿಂದ ನೀವು ಬಲವಾಗಿ ಪ್ರಭಾವಿಸಲ್ಪಡುತ್ತಿದ್ದೀರೋ? ಹೌದಾದರೆ ಏಕೆ? ನಿಮ್ಮನ್ನು ಅವರು ಇಷ್ಟಪಡಬೇಕು ಎಂದು ನೀವು ಬಯಸುವುದರಿಂದಲೇ ಇರಬಹುದೋ? ಹಾಗೆ ಬಯಸುವುದು ತಪ್ಪೇನಲ್ಲ. ನಿಜವೇನೆಂದರೆ ತಮ್ಮ ಸಮಾನಸ್ಥರು ತಮ್ಮನ್ನು ಇಷ್ಟಪಡಬೇಕೆಂದು ವಯಸ್ಕರು ಸಹ ಬಯಸುತ್ತಾರೆ. ಚಿಕ್ಕವರಿಗಾಗಲಿ ದೊಡ್ಡವರಿಗೇ ಆಗಲಿ ತಿರಸ್ಕಾರ ಎಂಬುದು ನುಂಗಲಾಗದ ಕಹಿ ತುತ್ತಿನಂತೆ. ಆದರೂ ಸರಿಯಾದದ್ದನ್ನು ಮಾಡಲು ದೃಢನಿಲ್ಲುವಾಗ ಬೇರೆಯವರು ನಿಮ್ಮನ್ನು ಯಾವಾಗಲೂ ಹಾಡಿಹೊಗಳುವುದಿಲ್ಲ ಎಂದು ನೆನಪಿಡಿ. ಇದು ಯೇಸುವಿನ ಅನುಭವ ಕೂಡ ಆಗಿತ್ತು. ಆದರೂ ಅವನು ಯಾವಾಗಲೂ ಸರಿಯಾದದ್ದನ್ನೇ ಮಾಡಿದನು. ಕೆಲವರು ಅವನನ್ನು ಹಿಂಬಾಲಿಸಿ ಅವನ ಶಿಷ್ಯರಾದರು, ಆದರೆ ಇನ್ನಿತರರು ದೇವರ ಮಗನಾದ ಅವನನ್ನು ಧಿಕ್ಕರಿಸಿದರು, “ಅವನನ್ನು ಲಕ್ಷ್ಯಕ್ಕೇ ತರಲಿಲ್ಲ.”—ಯೆಶಾ. 53:3.

ಸಮಾನಸ್ಥರ ಒತ್ತಡವೆಷ್ಟು ತೀಕ್ಷ್ಣ?

3. ನಿಮ್ಮ ಸಮಾನಸ್ಥರ ಮಟ್ಟಗಳಿಗೆ ನಿಮ್ಮನ್ನು ಹೊಂದಿಸಿಕೊಳ್ಳುವುದು ತಪ್ಪೇಕೆ?

3 ಸಮಾನಸ್ಥರ ತಿರಸ್ಕಾರ ಪಡೆಯಬಾರದೆಂಬ ಕಾರಣ ಮಾತ್ರಕ್ಕೆ ಕೆಲವೊಮ್ಮೆ ನಿಮಗೆ ಅವರ ಮಟ್ಟಗಳಿಗೆ ಹೊಂದಿಸಿಕೊಳ್ಳುವ ಮನಸ್ಸಾಗಬಹುದು. ಆದರೆ ಅದು ತಪ್ಪು. ಏಕೆಂದರೆ ಕ್ರೈಸ್ತರು ‘ಕೂಸುಗಳಂತಿದ್ದು ಅಲೆಗಳಿಂದ ಅತ್ತಿತ್ತ ಹೊಯ್ದಾಡಲ್ಪಡಬಾರದು.’ (ಎಫೆ. 4:14) ಚಿಕ್ಕ ಮಕ್ಕಳು ಚಂಚಲ ಮನಸ್ಕರಾಗಿರುವುದರಿಂದ ಇತರರು ಸುಲಭವಾಗಿಯೇ ಅವರ ಮೇಲೆ ಪ್ರಭಾವ ಬೀರಬಲ್ಲರು. ಯೌವನಸ್ಥರಾದ ನೀವಾದರೋ ಪ್ರೌಢತೆಗೆ ಬೆಳೆಯುವ ಹಾದಿಯಲ್ಲಿದ್ದೀರಿ. ಆದುದರಿಂದ ಯೆಹೋವನ ಮಟ್ಟಗಳು ನಿಮ್ಮ ಒಳ್ಳೇದಕ್ಕಾಗಿಯೇ ಇವೆ ಎಂದು ನೀವು ನಂಬುವುದಾದರೆ ಆ ನಂಬಿಕೆಗೆ ಅನುಗುಣವಾಗಿ ನಡೆಯುವುದು ನಿಮ್ಮ ಹಂಗು. (ಧರ್ಮೋ. 10:12, 13) ಹಾಗೆ ಮಾಡದಿದ್ದರೆ ನಿಮ್ಮ ಬದುಕನ್ನೇ ಬೇರೆಯವರ ಹತೋಟಿಗೆ ಒಪ್ಪಿಸಿದಂತಾಗುತ್ತದೆ. ನಿಜವೇನೆಂದರೆ, ಇತರರ ಒತ್ತಡಕ್ಕೆ ಮಣಿದರೆ ನೀವು ಅವರ ಕೈಗೊಂಬೆಯಾಗುತ್ತೀರಿ ಅಷ್ಟೇ.—2 ಪೇತ್ರ 2:19 ಓದಿ.

4, 5. (ಎ) ಆರೋನನು ಹೇಗೆ ಸಮಾನಸ್ಥರ ಒತ್ತಡಕ್ಕೆ ಮಣಿದನು? ಇದರಿಂದ ನೀವು ಯಾವ ಪಾಠ ಕಲಿಯುತ್ತೀರಿ? (ಬಿ) ಸಮಾನಸ್ಥರು ನಿಮ್ಮ ಮೇಲೆ ಒತ್ತಡ ಹೇರಲು ಯಾವ ವಿಧಾನಗಳನ್ನು ಉಪಯೋಗಿಸಬಹುದು?

4 ಮೋಶೆಯ ಅಣ್ಣ ಆರೋನನು ಒಮ್ಮೆ ಸಮಾನಸ್ಥರ ಒತ್ತಡಕ್ಕೆ ಮಣಿದನು. ತಮಗಾಗಿ ಒಂದು ದೇವರನ್ನು ಮಾಡಿಕೊಡಬೇಕೆಂದು ಇಸ್ರಾಯೇಲ್ಯರು ಅವನನ್ನು ಒತ್ತಾಯಿಸಿದಾಗ ಅವರು ಹೇಳಿದಂತೆಯೇ ಅವನು ಮಾಡಿದನು. ಆರೋನನು ಪುಕ್ಕಲು ಸ್ವಭಾವದವನೇನಲ್ಲ. ಈ ಮುಂಚೆ ಈಜಿಪ್ಟ್‌ನ ಅತಿ ಶಕ್ತಿಶಾಲಿ ಫರೋಹನ ಎದುರುನಿಂತಾಗ ಅವನು ಮೋಶೆಯೊಂದಿಗಿದ್ದನು. ಆಗ ಆರೋನನು ಧೈರ್ಯದಿಂದ ದೇವರ ಸಂದೇಶವನ್ನು ಫರೋಹನಿಗೆ ಘೋಷಿಸಿದನು ಕೂಡ. ಆದರೆ ಜೊತೆ ಇಸ್ರಾಯೇಲ್ಯರು ಒತ್ತಡ ಹೇರಿದಾಗ ಆರೋನನು ಮಣಿದು ಬಿದ್ದುಬಿಟ್ಟನು. ಸಮಾನಸ್ಥರ ಒತ್ತಡ ಎಷ್ಟೊಂದು ಪ್ರಬಲ! ಆರೋನನು ಈಜಿಪ್ಟ್‌ನ ರಾಜನನ್ನೇ ಎದುರಿಸಿನಿಂತನಾದರೂ ತನ್ನ ಸಮಾನಸ್ಥರನ್ನು ಎದುರಿಸಿನಿಲ್ಲಲು ಮಾತ್ರ ಅವನು ಶಕ್ತನಾಗಲಿಲ್ಲ!—ವಿಮೋ. 7:1, 2; 32:1-4.

5 ಆರೋನನ ಉದಾಹರಣೆಯು ತೋರಿಸುವ ಪ್ರಕಾರ ಸಮಾನಸ್ಥರ ಒತ್ತಡವು ಕೇವಲ ಎಳೆಯರಿಗೆ ಅಥವಾ ಕೆಟ್ಟದ್ದನ್ನು ಮಾಡಬಯಸುವವರಿಗೆ ಮಾತ್ರ ಸೀಮಿತವಲ್ಲ. ನೀವೂ ಸೇರಿದಂತೆ, ಸರಿಯಾದದ್ದನ್ನು ಮಾಡಲು ಯಥಾರ್ಥವಾಗಿ ಬಯಸುವವರನ್ನು ಸಹ ಅದು ಪ್ರಭಾವಿಸಬಲ್ಲದು. ನಿಮ್ಮ ಸಮಾನಸ್ಥರು ನಿಮ್ಮ ಎದೆಗಾರಿಕೆಗೆ ಸವಾಲುಹಾಕುವ ಮೂಲಕ, ಆರೋಪ ಹೊರಿಸುವ ಮೂಲಕ ಹಾಗೂ ಅಣಕಿಸುವ ಮೂಲಕ ತಪ್ಪನ್ನು ಮಾಡುವಂತೆ ಒತ್ತಡ ಹಾಕಲು ಪ್ರಯತ್ನಿಸಬಹುದು. ಅವರದನ್ನು ಹೇಗೇ ಮಾಡಲಿ ಸಮಾನಸ್ಥರ ಒತ್ತಡವನ್ನು ಎದುರಿಸುವುದಂತೂ ತುಂಬ ಕಷ್ಟಕರ. ಅದನ್ನು ಯಶಸ್ವಿಯಾಗಿ ಎದುರಿಸಬೇಕಾದರೆ ನೀವು ನಂಬುವ ವಿಷಯಗಳು ಸರಿ ಎಂದು ಮೊದಲಾಗಿ ನಿಮಗೇ ದೃಢನಿಶ್ಚಯವಿರಬೇಕು.

“ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣಿಕರಿಸುತ್ತಾ ಇರಿ”

6, 7. (ಎ) ನಿಮ್ಮ ನಂಬಿಕೆಗಳ ಕುರಿತು ದೃಢನಿಶ್ಚಯವಿರುವುದು ಏಕೆ ಪ್ರಾಮುಖ್ಯ? ಅದನ್ನು ಹೇಗೆ ಬೆಳೆಸಿಕೊಳ್ಳಬಲ್ಲಿರಿ? (ಬಿ) ನಿಮ್ಮ ದೃಢನಿಶ್ಚಯವನ್ನು ಬಲಪಡಿಸಲು ನೀವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

6 ಸಮಾನಸ್ಥರ ಒತ್ತಡವನ್ನು ಎದುರಿಸಬೇಕಾದರೆ, ನಿಮ್ಮ ನಂಬಿಕೆಗಳು ಹಾಗೂ ಮಟ್ಟಗಳು ಸರಿಯಾದವುಗಳೆಂಬ ದೃಢನಿಶ್ಚಯ ಮೊದಲು ನಿಮಗಿರಬೇಕು. (2 ಕೊರಿಂಥ 13:5 ಓದಿ.) ಒಂದುವೇಳೆ ನೀವು ಸುಲಭವಾಗಿ ಗಾಬರಿಗೊಳ್ಳುವ ಸ್ವಭಾವದವರಾದರೂ ಆ ದೃಢನಿಶ್ಚಯವು ನೀವು ಧೈರ್ಯಶಾಲಿಗಳಾಗುವಂತೆ ಮಾಡುವುದು. (2 ತಿಮೊ. 1:7, 8) ಆದರೆ ಒಬ್ಬನು ಸಹಜವಾಗಿ ಧೈರ್ಯವಂತನಾಗಿದ್ದರೂ ವಿಷಯಗಳನ್ನು ಅರೆಮನಸ್ಸಿನಿಂದ ನಂಬುವುದಾದರೆ ಅದಕ್ಕಾಗಿ ಸ್ಥಿರವಾಗಿ ನಿಲ್ಲುವುದು ಅವನಿಗೆ ಕಷ್ಟವಾದೀತು. ಆದುದರಿಂದ ಬೈಬಲಿನಿಂದ ನಿಮಗೆ ಕಲಿಸಲಾಗಿರುವ ವಿಷಯವು ನಿಜವಾಗಿ ಸತ್ಯವೆಂದು ಸ್ವತಃ ಪ್ರಮಾಣೀಕರಿಸಲು ಅಥವಾ ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸಿರಿ. ಮೂಲಭೂತ ಬೋಧನೆಗಳಿಂದ ಆರಂಭಿಸಿ. ಉದಾಹರಣೆಗೆ, ದೇವರಿದ್ದಾನೆಂದು ನೀವು ನಂಬುತ್ತೀರಿ, ಮಾತ್ರವಲ್ಲ ದೇವರ ಅಸ್ತಿತ್ವವನ್ನು ನಂಬಲು ಇತರರು ಕೊಡುವ ಕಾರಣಗಳನ್ನೂ ನೀವು ಕೇಳಿದ್ದೀರಿ. ಹಾಗಾದರೆ ಈಗ ಹೀಗೆ ಕೇಳಿಕೊಳ್ಳಿ: ‘ದೇವರು ಇದ್ದಾನೆಂದು ನಾನು ಏಕೆ ದೃಢವಾಗಿ ನಂಬುತ್ತೇನೆ?’ ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಉದ್ದೇಶ ಸಂದೇಹ ಎಬ್ಬಿಸಲಿಕ್ಕಾಗಿ ಅಲ್ಲ, ನಿಮ್ಮ ನಂಬಿಕೆಯನ್ನು ಬಲಪಡಿಸಲಿಕ್ಕಾಗಿಯೇ. ತದ್ರೀತಿ, ಈ ಪ್ರಶ್ನೆಗಳನ್ನೂ ಕೇಳಿಕೊಳ್ಳಿ: ‘ಬೈಬಲ್‌ ದೇವಪ್ರೇರಣೆಯಿಂದಲೇ ಬರೆಯಲ್ಪಟ್ಟಿತು ಎಂದು ನನಗೆ ಹೇಗೆ ಗೊತ್ತು?’ (2 ತಿಮೊ. 3:16) ‘ಇವು “ಕಡೇ ದಿವಸಗಳು” ಎಂದು ನಾನೇಕೆ ದೃಢವಾಗಿ ನಂಬುತ್ತೇನೆ?’ (2 ತಿಮೊ. 3:1-5) ‘ಯೆಹೋವನ ಮಟ್ಟಗಳು ನನ್ನ ಒಳ್ಳೇದಕ್ಕಾಗಿಯೇ ಇವೆ ಎಂದು ನಾನು ನಂಬಲು ಕಾರಣವೇನು?’—ಯೆಶಾ. 48:17, 18.

7 ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಲು ನೀವು ಹಿಂಜರಿಯಬಹುದು. ಏಕೆಂದರೆ ನಿಮಗದರ ಉತ್ತರ ಗೊತ್ತಿಲ್ಲ ಎಂಬ ಹೆದರಿಕೆಯಿಂದಲೇ. ನೆನಸಿ, ನಿಮ್ಮ ಕಾರಿನ ಇಂಧನ ಮಾಪನವು ಪೆಟ್ರೋಲ್‌ ‘ಖಾಲಿ’ ಎಂದು ಸೂಚಿಸುತ್ತಿದೆ. ಆದರೆ ನೀವು ಭಯದಿಂದ ಅದರ ಕಡೆಗೆ ನೋಡಲು ಹಿಂಜರಿಯುತ್ತೀರಿ. ಇಂಧನ ಖಾಲಿಯೆಂದು ನಿಮಗೆ ತಿಳಿದರೆ ತಾನೇ ಅದನ್ನು ಭರ್ತಿಮಾಡಲು ನಿಮಗೆ ಸಾಧ್ಯವಾಗುವುದು? ತದ್ರೀತಿಯಲ್ಲಿ ನಿಮ್ಮ ಭರವಸೆಯಲ್ಲಿ ಯಾವುದೇ ಕೊರತೆ ಕಂಡುಬಂದರೆ ಭಯಪಡದೆ ಅದರ ಬಗ್ಗೆ ಕ್ರಿಯೆಗೈದು ನಿಮ್ಮ ಭರವಸೆಯನ್ನು ಬಲಪಡಿಸಿಕೊಳ್ಳಿ.—ಅ. ಕಾ. 17:11.

8. ಜಾರತ್ವವನ್ನು ವರ್ಜಿಸುವ ಕುರಿತ ದೇವರ ಆಜ್ಞೆಯು ವಿವೇಕಯುತವೆಂಬ ನಿಮ್ಮ ಭರವಸೆಯನ್ನು ಹೇಗೆ ಬಲಪಡಿಸಬಲ್ಲಿರೆಂದು ವಿವರಿಸಿ.

8 ಒಂದು ಉದಾಹರಣೆಯನ್ನು ಪರಿಗಣಿಸಿ. “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂದು ಬೈಬಲ್‌ ನಿಮಗೆ ಬುದ್ಧಿ ಹೇಳುತ್ತದೆ. ‘ಈ ಆಜ್ಞೆಯನ್ನು ನಾನು ಪಾಲಿಸುವುದು ಏಕೆ ವಿವೇಕಯುತ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ನಿಮ್ಮ ಸಮಾನಸ್ಥರು ಇಂಥ ನಡತೆಯಲ್ಲಿ ಒಳಗೂಡಲು ಕಾರಣಗಳೇನೆಂದು ಯೋಚಿಸಿರಿ. ಮಾತ್ರವಲ್ಲ, ಜಾರತ್ವ ನಡೆಸುವವನು ಹೇಗೆ “ತನ್ನ ದೇಹಕ್ಕೇ ವಿರುದ್ಧವಾಗಿ ಪಾಪಮಾಡುವವನಾಗಿದ್ದಾನೆ” ಎಂಬುದರ ಕುರಿತೂ ಯೋಚಿಸಿರಿ. (1 ಕೊರಿಂ. 6:18) ಈಗ ಆ ಕಾರಣಗಳನ್ನು ವಿಶ್ಲೇಷಿಸುತ್ತಾ ಹೀಗೆ ಕೇಳಿಕೊಳ್ಳಿ: ‘ಲೈಂಗಿಕ ದುರ್ನಡತೆಯಲ್ಲಿ ಒಳಗೂಡುವುದು ನನಗೆ ಒಳ್ಳೆಯದೋ ಹಾನಿಕರವೋ?’ ಅದರ ಕುರಿತು ಇನ್ನೂ ಯೋಚಿಸುತ್ತಾ, ‘ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದ ಮೇಲೆ ನನಗೆ ಹೇಗನಿಸಬಹುದು?’ ಎಂದು ಕೇಳಿಕೊಳ್ಳಿ. ನೀವು ಅದರಲ್ಲಿ ಒಳಗೂಡಿದ್ದಕ್ಕಾಗಿ ನಿಮ್ಮ ಸಮಾನಸ್ಥರಲ್ಲಿ ಕೆಲವರು ನಿಮ್ಮ ಬೆನ್ನುತಟ್ಟಬಹುದು. ಆದರೆ ನಂತರ ನಿಮ್ಮ ಹೆತ್ತವರೊಂದಿಗೆ ಅಥವಾ ರಾಜ್ಯ ಸಭಾಗೃಹದಲ್ಲಿ ಜೊತೆಕ್ರೈಸ್ತರೊಂದಿಗೆ ಇರುವಾಗ ನಿಮಗೆ ಹೇಗನಿಸುವುದು? ನೀವು ಶುದ್ಧ ಮನಸ್ಸಿನಿಂದ ದೇವರಿಗೆ ಪ್ರಾರ್ಥಿಸಬಲ್ಲಿರೋ? ನಿಮ್ಮ ಸಹಪಾಠಿಗಳನ್ನು ಮೆಚ್ಚಿಸುವ ಒಂದೇ ಕಾರಣಕ್ಕಾಗಿ ದೇವರ ಮುಂದೆ ನಿಮಗಿರುವ ಶುದ್ಧ ನಿಲುವನ್ನೇ ತ್ಯಜಿಸಿಬಿಡುವಿರೋ?

9, 10. ನಿಮ್ಮ ನಂಬಿಕೆಗಳ ಕುರಿತು ನಿಮಗಿರುವ ದೃಢನಿಶ್ಚಯವು ಸಮಾನಸ್ಥರೊಂದಿಗೆ ಹೆಚ್ಚು ಭರವಸೆಯಿಂದ ಮಾತಾಡಲು ಹೇಗೆ ಸಹಾಯಮಾಡುವುದು?

9 ನೀವು ಹದಿವಯಸ್ಕರಾಗಿರುವಲ್ಲಿ, ನಿಮ್ಮ ‘ವಿವೇಚನಾಶಕ್ತಿಯು’ ಎಂದಿಗಿಂತಲೂ ಹೆಚ್ಚು ವೃದ್ಧಿಯಾಗುತ್ತಿರುವ ಜೀವನಘಟ್ಟದಲ್ಲಿ ನೀವಿದ್ದೀರಿ. (ರೋಮನ್ನರಿಗೆ. 12:1, 2 ಓದಿ.) ನೀವು ಒಬ್ಬ ಯೆಹೋವನ ಸಾಕ್ಷಿಯಾಗಿರುವುದು ನಿಮಗೆ ಮಹತ್ವದ್ದೇಕೆ ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಲಿಕ್ಕಾಗಿ ಈ ಸಮಯವನ್ನು ಉಪಯೋಗಿಸಿ. ಹೀಗೆ ಮನನ ಮಾಡುವುದು ನಿಮ್ಮ ನಂಬಿಕೆಗಳ ಬಗ್ಗೆ ದೃಢನಿಶ್ಚಯದಿಂದಿರಲು ಸಹಾಯಕರ. ಇದರಿಂದ ಸಮಾನಸ್ಥರ ಒತ್ತಡವನ್ನು ಎದುರಿಸುವಾಗ ನೀವು ಕೂಡಲೆ ದೃಢಭರವಸೆಯಿಂದ ಉತ್ತರಕೊಡಲು ಶಕ್ತರಾಗುವಿರಿ. ಒಬ್ಬಾಕೆ ಕ್ರೈಸ್ತ ಯುವ ಸಹೋದರಿಯಂತೆ ನಿಮಗೂ ಅನಿಸಬಹುದು. ಆಕೆ ಹೇಳುವುದು: “ನಾನು ಸಮಾನಸ್ಥರ ಒತ್ತಡವನ್ನು ಎದುರಿಸುವಾಗ ನನ್ನ ನಂಬಿಕೆಯನ್ನು ಆತ್ಮವಿಶ್ವಾಸದಿಂದ ವ್ಯಕ್ತಪಡಿಸುವ ಮೂಲಕ ನಾನು ಯಾರೆಂದು ತಿಳಿಯಪಡಿಸುತ್ತೇನೆ ಅಷ್ಟೆ. ಏಕೆಂದರೆ ನನ್ನ ಧರ್ಮ ನನಗೆ ತುಂಬ ಮಹತ್ವದ್ದು, ಅದು ನನ್ನ ಜೀವನ ಮಾರ್ಗ. ನನ್ನ ಯೋಚನೆ, ಗುರಿಗಳು, ನೈತಿಕತೆ ಮಾತ್ರವಲ್ಲ ನನ್ನ ಇಡೀ ಬದುಕಿನ ಕೇಂದ್ರಬಿಂದುವೇ ಅದು!”

10 ಯಾವುದು ಸರಿ ಎಂದು ನಂಬುತ್ತೀರೋ ಅದಕ್ಕೆ ದೃಢವಾಗಿ ಅಂಟಿ ನಿಲ್ಲುವುದು ನಿಮಗೆ ಸುಲಭವೇನಲ್ಲ, ಪ್ರಯತ್ನ ಅಗತ್ಯ. (ಲೂಕ 13:24) ಇಷ್ಟೆಲ್ಲ ಮಾಡುವುದು ನಿಜವಾಗಿ ಸಾರ್ಥಕವೋ ಎಂದೂ ನೀವು ಯೋಚಿಸಬಹುದು. ಆದರೆ ಇದನ್ನು ನೆನಪಿಡಿ, ಏನೆಂದರೆ, ನೀವೇನೋ ತಪ್ಪು ಮಾಡುತ್ತಿದ್ದೀರೆಂಬಂತೆ ವರ್ತಿಸಿದರೆ ಅಥವಾ ನಾಚಿಕೆಪಡುವುದಾದರೆ ಬೇರೆಯವರಿಗೆ ಅದು ಗೊತ್ತಾಗುತ್ತದೆ. ಆಗ ಅವರು ನಿಮ್ಮ ಮೇಲೆ ಇನ್ನಷ್ಟು ಒತ್ತಡ ತಂದಾರು. ಆದರೆ ನೀವು ದೃಢನಿಶ್ಚಯದಿಂದ ಮಾತಾಡುವುದಾದರೆ ನಿಮ್ಮ ಸಮಾನಸ್ಥರು ಎಷ್ಟು ಬೇಗನೆ ಹಿಮ್ಮೆಟ್ಟುವರು ಎಂದು ನೋಡಿ ನೀವು ಆಶ್ಚರ್ಯಪಡುವಿರಿ.—ಲೂಕ 4:12, 13 ಹೋಲಿಸಿ.

‘ವಿವೇಚಿಸಿ ಉತ್ತರಕೊಡಿರಿ’

11. ಸಮಾನಸ್ಥರ ಒತ್ತಡವನ್ನು ಎದುರಿಸುವಾಗ ಮುನ್‌ತಯಾರಿಯು ಹೇಗೆ ಪ್ರಯೋಜನಕರ?

11 ಸಮಾನಸ್ಥರ ಒತ್ತಡವನ್ನು ಎದುರಿಸುವ ಇನ್ನೊಂದು ಪ್ರಮುಖ ಹೆಜ್ಜೆಯೇ ತಯಾರಿ. (ಜ್ಞಾನೋಕ್ತಿ 15:28 ಓದಿ.) ತಯಾರಾಗಿರುವುದು ಅಂದರೆ ಯಾವ ಪರಿಸ್ಥಿತಿ ಎದುರಾಗಬಹುದು ಎಂದು ಮುಂಚಿತವಾಗಿ ಆಲೋಚಿಸುವುದೇ. ಕೆಲವೊಮ್ಮೆ ಸ್ವಲ್ಪ ಮುಂದಾಲೋಚನೆಯು ದೊಡ್ಡ ಸಮಸ್ಯೆಯನ್ನೇ ತಡೆಯುತ್ತದೆ. ಉದಾಹರಣೆಗೆ, ನಿಮ್ಮ ಸಹಪಾಠಿಗಳ ಗುಂಪೊಂದು ಸ್ವಲ್ಪ ದೂರದಲ್ಲಿ ಬರುವುದನ್ನು ನೀವು ಕಾಣುತ್ತೀರಿ ಎಂದು ನೆನಸಿ. ಅವರು ಸಿಗರೇಟ್‌ ಸೇದುತ್ತಿದ್ದಾರೆ. ಅವರು ನಿಮಗೆ ಸಿಗರೇಟ್‌ ಸೇದುವಂತೆ ಹೇಳುವ ಸಂಭಾವ್ಯತೆಯಿದೆಯೋ? ಸಮಸ್ಯೆಯನ್ನು ಮುನ್ನೋಡುತ್ತಲೇ ನೀವೇನು ಮಾಡಬಹುದು? ಜ್ಞಾನೋಕ್ತಿ 22:3 ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು.” ನೀವು ಬೇರೆ ದಾರಿಯಾಗಿ ಹೋಗುವುದಾದರೆ ಆ ಸಮಸ್ಯೆಯಿಂದಲೇ ಪಾರಾಗುವಿರಿ. ನೀವು ಪುಕ್ಕಲರು ಎಂದಲ್ಲ, ವಿವೇಕದಿಂದ ಕ್ರಿಯೆಗೈಯುತ್ತಿದ್ದೀರಿ ಅಷ್ಟೆ.

12. ತೀವ್ರ ಒತ್ತಡವು ಪ್ರತ್ಯಕ್ಷವಾಗಿ ಎದುರಾದಾಗ ನೀವದನ್ನು ಹೇಗೆ ನಿಭಾಯಿಸಬಹುದು?

12 ಸಮಸ್ಯೆಯು ಪ್ರತ್ಯಕ್ಷವಾಗಿ ಎದುರಾದಾಗ ಹಾಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಿದ್ದಲ್ಲಿ ಆಗೇನು? ಉದಾಹರಣೆಗೆ, ಸಹಪಾಠಿಯೊಬ್ಬಳು ಆಶ್ಚರ್ಯದಿಂದ, “ಈ ತನಕ ಯಾರೊಡನೆಯೂ ಸೆಕ್ಸ್‌ ಮಾಡಿಲ್ವಾ ನೀನು?” ಎಂದು ನಿಮ್ಮನ್ನು ಕೇಳುವಲ್ಲಿ? ಕೊಲೊಸ್ಸೆ 4:6ರ ಮಾತುಗಳನ್ನು ಪಾಲಿಸುವುದೇ ಕೀಲಿಕೈ. ಅಲ್ಲಿ ಹೇಳುವುದು: “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರ ಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.” ಈ ವಚನ ಸೂಚಿಸುವಂತೆ ನೀವು ಸನ್ನಿವೇಶಕ್ಕನುಸಾರ ಪ್ರಶ್ನೆಗೆ ಉತ್ತರ ಕೊಡಬೇಕು. ಬೈಬಲ್‌ ವಿಷಯಗಳ ದೊಡ್ಡ ಭಾಷಣವನ್ನೇ ಬಿಗಿಯಬೇಕೆಂದಿಲ್ಲ. ಬದಲಿಗೆ ದೃಢತೆಯಿಂದ ಹೇಳುವ ಚುಟುಕಾದ ಉತ್ತರವಷ್ಟೇ ಸಾಕು. ಉದಾಹರಣೆಗೆ, ಮೇಲೆ ಹೇಳಿದ ಪ್ರಶ್ನೆಗೆ ಉತ್ತರ ಕೊಡುವಾಗ, ನೀವು ಕೇವಲ “ಇಲ್ಲ. ಅದು ನನ್ನ ಸ್ವಂತ ವಿಷಯ” ಎಂದಷ್ಟೇ ಹೇಳಬಹುದು.

13. ಸಮಾನಸ್ಥರ ಅಣಕದ ಮಾತಿಗೆ ಉತ್ತರಿಸುವಾಗ ವಿವೇಚನೆ ಏಕೆ ಅಗತ್ಯ?

13 ಕೆಲವು ಸಂದರ್ಭಗಳಲ್ಲಿ ಹೆಚ್ಚು ಮಾತಾಡುವುದರಿಂದ ಏನೂ ಪ್ರಯೋಜನವಿಲ್ಲ. ಅಂಥ ಸಂದರ್ಭಗಳಲ್ಲಿ ಯೇಸು ಸಹ ಅನೇಕವೇಳೆ ಚುಟುಕಾಗಿ ಉತ್ತರಿಸಿದನು. ವಾಸ್ತವದಲ್ಲಿ ಹೆರೋದನು ಪ್ರಶ್ನಿಸಿದಾಗ ಯೇಸು ಒಂದು ಮಾತನ್ನೂ ಆಡಲಿಲ್ಲ. (ಲೂಕ 23:8, 9) ಅಸಂಬದ್ಧ ಪ್ರಶ್ನೆಗಳಿಗೆ ಹೆಚ್ಚಾಗಿ ಮೌನವೇ ತಕ್ಕ ಉತ್ತರ. (ಜ್ಞಾನೋ. 26:4; ಪ್ರಸಂ. 3:1, 7) ಇನ್ನೊಂದು ಕಡೆಯಲ್ಲಿ, ಈ ಮುಂಚೆ ನಿಮ್ಮನ್ನು ನಿಂದಿಸಿದವರು ಈಗ ನಿಮ್ಮ ನಡತೆಯನ್ನು ನೋಡಿ ಆಶ್ಚರ್ಯಗೊಂಡು ನಿಮ್ಮ ಕುರಿತು ತಿಳಿದುಕೊಳ್ಳಲು ಯಥಾರ್ಥವಾಗಿ ಬಯಸಬಹುದು. ಉದಾಹರಣೆಗೆ, ಲೈಂಗಿಕ ನೈತಿಕತೆಯ ಕುರಿತು ಪ್ರಶ್ನಿಸಬಹುದು. (1 ಪೇತ್ರ 4:4) ಹೀಗಿದ್ದಲ್ಲಿ ನಿಮ್ಮ ಬೈಬಲಾಧಾರಿತ ನಿಲುವಿನ ಕುರಿತು ಹೆಚ್ಚು ವಿವರಣೆ ಕೊಡುವುದು ಉತ್ತಮ. ಆಗ ಮಾತಾಡಲು ಹೆದರಿ ಸುಮ್ಮನಿರಬೇಡಿ, “ಉತ್ತರ ಹೇಳುವುದಕ್ಕೆ ಯಾವಾಗಲೂ” ಸಿದ್ಧರಾಗಿರ್ರಿ.—1 ಪೇತ್ರ 3:15.

14. ಕೆಲವೊಂದು ಸನ್ನಿವೇಶಗಳಲ್ಲಿ ನೀವು ಹೇಗೆ ಸಮಾನಸ್ಥರ ಒತ್ತಡವನ್ನು ಜಾಣ್ಮೆಯಿಂದ ಹಿಂದಿರುಗಿಸಬಹುದು?

14 ಕೆಲವೊಂದು ಸನ್ನಿವೇಶಗಳಲ್ಲಿ ನೀವು ಅವರ ಮೇಲೆಯೇ ಒತ್ತಡ ಹಾಕಬಹುದು. ಆದರೆ ಇದನ್ನು ತುಂಬ ಜಾಣ್ಮೆಯಿಂದ ಮಾಡಬೇಕು. ಉದಾಹರಣೆಗೆ, ಸಹಪಾಠಿಯು ಸಿಗರೇಟ್‌ ಸೇದುವಂತೆ ಒತ್ತಾಯಿಸುತ್ತಾ ನಿಮ್ಮ ಎದೆಗಾರಿಕೆಯನ್ನು ಪ್ರಶ್ನಿಸುವಲ್ಲಿ ನೀವು ಹೀಗೆ ಹೇಳಬಹುದು: “ಬೇಡ, ಥ್ಯಾಂಕ್ಸ್‌. ನಿನ್ನಂಥ ಜಾಣ ಸಿಗರೇಟ್‌ ಸೇದ್ತಾನಂತ ನನಗೆ ನಂಬಲಿಕ್ಕೇ ಆಗಲ್ಲ!” ನಿಮ್ಮ ಮೇಲೆ ಒತ್ತಡ ಹಾಕಿದವನಿಗೇ ಒತ್ತಡವನ್ನು ಹೇಗೆ ಹಿಂದಿರುಗಿಸಬಹುದೆಂದು ತಿಳಿಯಿತಾ? ಸಿಗರೇಟ್‌ ಏಕೆ ಸೇದುವುದಿಲ್ಲ ಎಂದು ನೀವು ವಿವರಿಸುವ ಬದಲಿಗೆ, ತಾನೇಕೆ ಸೇದುತ್ತೇನೆಂದು ಅವನೀಗ ಯೋಚಿಸಬೇಕಾಗುತ್ತದೆ!

15. ನಿಮ್ಮ ಮೇಲೆ ಒತ್ತಡ ಹಾಕುವ ಸಮಾನಸ್ಥರನ್ನು ಬಿಟ್ಟು ಹೊರಡುವುದು ಯಾವಾಗ ಸೂಕ್ತ? ಏಕೆ?

15 ನೀವು ಇಷ್ಟೆಲ್ಲ ಪ್ರಯತ್ನಿಸಿದರೂ ಅವರು ಇನ್ನೂ ಒತ್ತಡ ಹಾಕುತ್ತಾರಾದರೆ? ಹಾಗಿದ್ದರೆ ಅಲ್ಲಿಂದ ಹೊರಟುಹೋಗುವುದು ಉತ್ತಮ. ಅಲ್ಲಿ ಹೆಚ್ಚು ಹೊತ್ತು ನಿಂತುಬಿಟ್ಟರೆ ನೀವು ಯಾವುದಾದರೂ ರೀತಿಯಲ್ಲಿ ರಾಜಿಮಾಡಿಕೊಳ್ಳುವ ಸಂಭವ ಹೆಚ್ಚು. ಆದುದರಿಂದ ಅಲ್ಲಿಂದ ಬೇಗನೆ ಹೊರಟುಬಿಡಿ. ಹೇಡಿಯೆಂಬ ಅಳುಕು ನಿಮಗೆ ಬೇಡ. ಎಷ್ಟೆಂದರೂ ನೀವು ಪರಿಸ್ಥಿತಿಯನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಂಡಿರಿ, ನಿಮ್ಮ ಸಮಾನಸ್ಥರ ಕೈಗೊಂಬೆ ಆಗಲಿಲ್ಲ. ಹೀಗೆ ನೀವು ಯೆಹೋವನ ಮನಸ್ಸನ್ನು ಸಂತೋಷಪಡಿಸಿದಿರಿ.—ಜ್ಞಾನೋ. 27:11.

“ಯತ್ನಗಳಿಂದ ಸಮೃದ್ಧಿ”

16. ಕ್ರೈಸ್ತರೆಂದು ಹೇಳಿಕೊಳ್ಳುವ ಕೆಲವರಿಂದ ಹೇಗೆ ಒತ್ತಡ ಬರಬಹುದು?

16 ಯೆಹೋವನ ಸೇವಕರೆಂದು ಹೇಳಿಕೊಳ್ಳುವ ಇತರ ಯೌವನಸ್ಥರು ಸಹ ನೀವು ತಪ್ಪುಮಾಡುವಂತೆ ಕೆಲವೊಮ್ಮೆ ನಿಮ್ಮ ಮೇಲೆ ಒತ್ತಡ ಹಾಕಬಹುದು. ಉದಾಹರಣೆಗೆ, ಅಂಥ ಒಬ್ಬ ಯೌವನಸ್ಥನಿಂದ ಏರ್ಪಡಿಸಲಾದ ಪಾರ್ಟಿಗೆ ನೀವು ಹೋಗಿದ್ದೀರಿ ಎಂದು ನೆನಸಿ. ಆ ಪಾರ್ಟಿಗೆ ದೊಡ್ಡವರ ಮೇಲ್ವಿಚಾರಣೆ ಇಲ್ಲ ಎಂದು ಹೋದನಂತರ ನಿಮಗೆ ತಿಳಿದುಬರುತ್ತದೆ. ಆಗೇನು? ಅಥವಾ ಸಾಕ್ಷಿಯೆಂದು ಹೇಳಿಕೊಳ್ಳುವ ಯುವಕನೊಬ್ಬನು ಪಾರ್ಟಿಗೆ ಮದ್ಯವನ್ನು ತರುತ್ತಾನೆ ಮತ್ತು ನೀವ್ಯಾರೂ ಮದ್ಯಪಾನ ಮಾಡಲು ಕಾನೂನುಬದ್ಧ ವಯಸ್ಸಿನವರಲ್ಲದಿದ್ದಲ್ಲಿ ಆಗೇನು? ಇಂಥ ಹಲವಾರು ಸನ್ನಿವೇಶಗಳಲ್ಲಿ ನೀವು ನಿಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಪ್ರಕಾರ ನಡೆದುಕೊಳ್ಳಬೇಕು. ಹದಿವಯಸ್ಸಿನ ಕ್ರೈಸ್ತಳೊಬ್ಬಳು ಹೇಳುವುದು: “ಹೊಲಸು ಭಾಷೆಯಿಂದ ತುಂಬಿದ್ದ ಚಲನಚಿತ್ರ ನೋಡುವುದನ್ನು ಮಧ್ಯದಲ್ಲೇ ಬಿಟ್ಟು ನಾನು ಮತ್ತು ನನ್ನ ತಂಗಿ ಹೊರನಡೆದೆವು. ನಮ್ಮೊಂದಿಗಿದ್ದ ಇತರರು ಅಲ್ಲೇ ಇದ್ದು ಅದನ್ನು ವೀಕ್ಷಿಸಿದರು. ನಾವು ಮಾಡಿದ್ದು ಸರಿಯೆಂದು ಹೆತ್ತವರು ನಮ್ಮನ್ನು ಹೊಗಳಿದರು. ಆದರೆ ಗುಂಪಿನಲ್ಲಿದ್ದ ಇತರರು ನಮ್ಮ ಮೇಲೆ ಕೋಪಗೊಂಡರು. ಏಕೆಂದರೆ ನಮ್ಮಿಂದಾಗಿ ಅವರು ಕೆಟ್ಟವರೋ ಎಂಬಂತೆ ಕಂಡುಬಂದರು.”

17. ಒಂದು ಪಾರ್ಟಿಯನ್ನು ಹಾಜರಾಗುವಾಗ ದೇವರ ನೀತಿಯ ಮಟ್ಟಗಳಿಗೆ ವಿಧೇಯರಾಗಲು ನೀವು ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತಕ್ಕೊಳ್ಳಬಲ್ಲಿರಿ?

17 ಮೇಲಿನ ಅನುಭವ ತೋರಿಸುವಂತೆ, ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಪ್ರಕಾರ ನಡೆದುಕೊಳ್ಳುವುದು ನಿಮ್ಮನ್ನು ಪೇಚಿಗೆ ಸಿಲುಕಿಸಬಹುದು. ಆದರೆ ಯಾವುದು ಸರಿಯೆಂದು ನೀವು ದೃಢವಾಗಿ ನಂಬುತ್ತೀರೋ ಅದನ್ನೇ ಮಾಡಿರಿ. ಇಂಥ ಸನ್ನಿವೇಶಗಳಿಗೆ ತಯಾರಾಗಿರ್ರಿ. ಪಾರ್ಟಿಗೆ ಹೋಗಲಿರುವಲ್ಲಿ, ಅಲ್ಲಿ ವಿಷಯಗಳು ನೀವೆಣಿಸಿದಂತೆ ಇರದಿದ್ದರೆ ಅಲ್ಲಿಂದ ಹೇಗೆ ಹೊರಬರಬಹುದೆಂದು ಮೊದಲೇ ಯೋಜಿಸಿರಿ. ಕೆಲವು ಯೌವನಸ್ಥರು ಮುಂಚೆಯೇ ತಮ್ಮ ಹೆತ್ತವರಿಗೆ ಹೇಳಿಡುತ್ತಾರೆ ಏನೆಂದರೆ, ಒಂದುವೇಳೆ ತಾವು ಪಾರ್ಟಿಯ ಮಧ್ಯದಲ್ಲಿ ಫೋನ್‌ ಮಾಡಿದಲ್ಲಿ ಅವರು ಕೂಡಲೆ ಬಂದು ತಮ್ಮನ್ನು ಕರೆದುಕೊಂಡು ಹೋಗಬೇಕು ಎಂದು. (ಕೀರ್ತ. 26:4, 5) ಇಂಥ “ಯತ್ನಗಳಿಂದ ಸಮೃದ್ಧಿ” ಅಂದರೆ ಮೊದಲೇ ಯೋಜಿಸುವುದು ಪ್ರಯೋಜನಕರ.—ಜ್ಞಾನೋ. 21:5.

ಯೌವನ “ಪ್ರಾಯದಲ್ಲಿ ಆನಂದಿಸು”

18, 19. (ಎ) ನೀವು ಸಂತೋಷವಾಗಿ ಇರಬೇಕೆಂಬುದು ಯೆಹೋವನ ಇಚ್ಛೆ ಎಂಬ ಖಾತ್ರಿ ನಿಮಗಿರಬಲ್ಲದು ಏಕೆ? (ಬಿ) ಸಮಾನಸ್ಥರ ಒತ್ತಡವನ್ನು ಎದುರಿಸುವವರ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ?

18 ಜೀವನದಲ್ಲಿ ಆನಂದಿಸುವ ಸಾಮರ್ಥ್ಯದೊಂದಿಗೆ ಯೆಹೋವನು ನಿಮ್ಮನ್ನು ಸೃಷ್ಟಿಸಿದ್ದಾನೆ ಮತ್ತು ನೀವು ಸಂತೋಷವಾಗಿರಬೇಕೆಂದು ಆತನು ಬಯಸುತ್ತಾನೆ. (ಪ್ರಸಂಗಿ 11:9 ಓದಿ.) ನಿಮ್ಮ ಸಮಾನಸ್ಥರಲ್ಲಿ ಹೆಚ್ಚಿನವರು ಕೇವಲ ‘ಪಾಪದ ತಾತ್ಕಾಲಿಕ ಸುಖಾನುಭವವನ್ನು’ ಅನುಭವಿಸುತ್ತಿದ್ದಾರೆಂದು ನೆನಪಿಡಿ. (ಇಬ್ರಿ. 11:25) ಆದರೆ ಸತ್ಯ ದೇವರು ಬಯಸುವುದು ನೀವು ಎಷ್ಟೋ ಅತ್ಯುತ್ತಮವಾದದ್ದನ್ನು ಅನುಭವಿಸಬೇಕೆಂದೇ. ಸದಾಕಾಲಕ್ಕೂ ನೀವು ಸಂತೋಷವಾಗಿರಬೇಕೆಂದೇ ಆತನಿಚ್ಛೆ. ಆದುದರಿಂದ ದೇವರ ದೃಷ್ಟಿಯಲ್ಲಿ ಕೆಟ್ಟದ್ದೆಂದು ತಿಳಿದಿರುವುದನ್ನು ಮಾಡುವ ಪ್ರಲೋಭನೆ ನಿಮಗೆ ಎದುರಾದಾಗ ಇದನ್ನು ನೆನಪಿಡಿ, ಏನೆಂದರೆ ಯೆಹೋವನು ನಿಮ್ಮಿಂದ ಕೇಳಿಕೊಳ್ಳುವಂಥದ್ದು ಯಾವಾಗಲೂ ನಿಮ್ಮ ಒಳ್ಳೇದಕ್ಕಾಗಿಯೇ.

19 ಯೌವನಸ್ಥರೇ, ಇದನ್ನು ಮನಸ್ಸಿನಲ್ಲಿಡಿ. ಈಗ ನೀವು ನಿಮ್ಮ ಸಮಾನಸ್ಥರ ಮೆಚ್ಚಿಗೆಯನ್ನು ಒಂದುವೇಳೆ ಪಡೆದುಕೊಂಡರೂ ಕೆಲವೇ ವರ್ಷಗಳಲ್ಲಿ ಅವರಲ್ಲಿ ಹೆಚ್ಚಿನವರಿಗೆ ನಿಮ್ಮ ಹೆಸರು ಕೂಡ ನೆನಪಿರಲಿಕ್ಕಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಸಮಾನಸ್ಥರ ಒತ್ತಡವನ್ನು ನೀವು ಯಶಸ್ವಿಯಾಗಿ ಎದುರಿಸುವಾಗ ಯೆಹೋವನು ಅದನ್ನು ಗಮನಕ್ಕೆ ತರುತ್ತಾನೆ ಮತ್ತು ನಿಮ್ಮನ್ನಾಗಲಿ ನಿಮ್ಮ ನಂಬಿಗಸ್ತಿಕೆಯನ್ನಾಗಲಿ ಆತನೆಂದೂ ಮರೆಯನು. ಆತನು ‘ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವನು.’ (ಮಲಾ. 3:10) ಅದಲ್ಲದೆ, ಈಗ ನಿಮ್ಮಲ್ಲಿರಬಹುದಾದ ಯಾವುದೇ ಬಲಹೀನತೆಯನ್ನು ನೀಗಿಸಲಿಕ್ಕಾಗಿ ಆತನು ತನ್ನ ಪವಿತ್ರಾತ್ಮವನ್ನು ಉದಾರವಾಗಿ ದಯಪಾಲಿಸುವನು. ಹೌದು, ಸಮಾನಸ್ಥರ ಒತ್ತಡವನ್ನು ಎದುರಿಸಲು ಯೆಹೋವನು ನಿಮಗೆ ಖಂಡಿತ ಸಹಾಯಮಾಡುವನು!

ನಿಮಗೆ ನೆನಪಿದೆಯೇ?

• ಸಮಾನಸ್ಥರ ಒತ್ತಡ ಎಷ್ಟು ಪ್ರಬಲವಾಗಿದೆ?

• ಸಮಾನಸ್ಥರ ಒತ್ತಡವನ್ನು ಎದುರಿಸುವುದರಲ್ಲಿ ದೃಢನಿಶ್ಚಯವು ಎಷ್ಟು ಪ್ರಾಮುಖ್ಯ?

• ಸಮಾನಸ್ಥರ ಒತ್ತಡವನ್ನು ಎದುರಿಸಲು ನೀವು ಹೇಗೆ ಮುನ್‌ತಯಾರಿ ಮಾಡಬಲ್ಲಿರಿ?

• ಯೆಹೋವನಿಗೆ ನಿಮ್ಮ ನಂಬಿಗಸ್ತಿಕೆಯು ಅಮೂಲ್ಯವಾಗಿದೆ ಎಂದು ನಿಮಗೆ ಹೇಗೆ ಗೊತ್ತು?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರ]

ಚಿನ್ನದ ಬಸವನನ್ನು ಮಾಡುವ ಒತ್ತಡಕ್ಕೆ ಆರೋನನು ಮಣಿದನೇಕೆ?

[ಪುಟ 10ರಲ್ಲಿರುವ ಚಿತ್ರ]

ಏನು ಹೇಳಬೇಕೆಂದು ಮುಂಚಿತವಾಗಿ ತೀರ್ಮಾನಿಸಿ, ತಯಾರಾಗಿರ್ರಿ