ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಸ್ವರ್ಗದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರತಕ್ಕದ್ದು” ಎಂದನು ಯೇಸು ತನ್ನ ಕೇಳುಗರಿಗೆ. ಮಾನವರು ಇಂದು ‘ಪರಿಪೂರ್ಣರಾಗಿರಲು’ ಹೇಗೆ ಸಾಧ್ಯ?—ಮತ್ತಾ. 5:48.

ಸ್ಪಷ್ಟ ಉತ್ತರಕ್ಕಾಗಿ, ಬೈಬಲಿನಲ್ಲಿ “ಪರಿಪೂರ್ಣ” ಮತ್ತು “ಪರಿಪೂರ್ಣತೆ” ಎಂಬ ಪದಗಳನ್ನು ಹೇಗೆ ಬಳಸಲಾಗಿದೆ ಎಂದು ನಾವು ಮುಖ್ಯವಾಗಿ ತಿಳಿಯಬೇಕು. ಬೈಬಲಿನಲ್ಲಿ “ಪರಿಪೂರ್ಣ” ಎಂದು ವರ್ಣಿಸಲಾದ ಪ್ರತಿಯೊಂದು ವಿಷಯವು ಪೂರ್ಣಾರ್ಥದಲ್ಲಿ ಪರಿಪೂರ್ಣ ಆಗಿರಲೇಬೇಕೆಂದಿಲ್ಲ. ಹಾಗೆ ಪೂರ್ಣಾರ್ಥದಲ್ಲಿ ಪರಿಪೂರ್ಣತೆ ಇರುವವನು ಯೆಹೋವನು ಮಾತ್ರ. ಜನರು ಅಥವಾ ವಸ್ತುಗಳು ಪರಿಪೂರ್ಣವಾಗಿರುವುದು ಕೇವಲ ಸಂಬಂಧಿತ ಅರ್ಥದಲ್ಲಿ. “ಪರಿಪೂರ್ಣ” ಎಂದು ಭಾಷಾಂತರವಾದ ಹೀಬ್ರು ಮತ್ತು ಗ್ರೀಕ್‌ ಬೈಬಲ್‌ ಪದಗಳು “ಪೂರ್ಣತೆ” “ಪ್ರೌಢ” “ದೋಷರಹಿತ” ಎಂಬ ಅರ್ಥವನ್ನು ಕೊಡುತ್ತವೆ. ಅಂದರೆ ಒಬ್ಬ ಅಧಿಕಾರಿ ಇಟ್ಟಿರುವ ಮಟ್ಟಗಳನ್ನು ಪೂರ್ಣವಾಗಿ ಪಾಲಿಸುವುದನ್ನು ಸೂಚಿಸುತ್ತವೆ. ಆಡುಮಾತಿನಲ್ಲಿ ಈ ಪದವನ್ನು ನಾವು ಸಾಮಾನ್ಯವಾಗಿ ಸಂಬಂಧಿತ ಅರ್ಥದಲ್ಲಿ ಬಳಸುತ್ತೇವೆ. “ಪರಿಪೂರ್ಣ ಆರೋಗ್ಯ” ಎಂಬ ಅಭಿವ್ಯಕ್ತಿ ಅದಕ್ಕೊಂದು ಉದಾಹರಣೆ.

ಆದಾಮಹವ್ವರು ನೈತಿಕ, ಆಧ್ಯಾತ್ಮಿಕ, ಶಾರೀರಿಕ ಪರಿಪೂರ್ಣತೆಯೊಂದಿಗೆ ನಿರ್ಮಿಸಲ್ಪಟ್ಟಿದ್ದರು. ತಮ್ಮ ನಿರ್ಮಾಣಿಕನ ಮಟ್ಟಕ್ಕನುಸಾರ ಅವರು ಪರಿಪೂರ್ಣರಾಗಿದ್ದರು. ಅವಿಧೇಯತೆಯ ಕಾರಣ ಅವರು ಈ ಮಟ್ಟಕ್ಕನುಸಾರ ಜೀವಿಸಲಿಲ್ಲ, ಹೀಗೆ ತಮ್ಮ ಮತ್ತು ತಮ್ಮ ಸಂತತಿಯ ಪರಿಪೂರ್ಣತೆಯನ್ನು ಕಳಕೊಂಡರು. ಹೀಗೆ ಆದಾಮನ ಮೂಲಕ ಪಾಪ, ಅಪರಿಪೂರ್ಣತೆ, ಮರಣ ಮಾನವಕುಲದಲ್ಲೆಲ್ಲಾ ವ್ಯಾಪಿಸಿತು.—ರೋಮ. 5:12.

ಆದರೆ ಪರ್ವತ ಪ್ರಸಂಗದಲ್ಲಿ ಯೇಸು ಸ್ಪಷ್ಟವಾಗಿ ತಿಳಿಸಿದಂತೆ ಅಪರಿಪೂರ್ಣ ಜನರು ಸಹ ಸಂಬಂಧಿತ ಅರ್ಥದಲ್ಲಿ ಪರಿಪೂರ್ಣರಾಗಿರಬಲ್ಲರು. ಆ ಪ್ರಸಂಗದಲ್ಲಿ ಯೇಸು ಪ್ರೀತಿಯ ಕುರಿತು ತಿಳಿಸುತ್ತಾ ಪರಿಪೂರ್ಣ ಅಥವಾ ಪೂರ್ಣ ಪ್ರೀತಿಗೆ ಮಟ್ಟಗಳನ್ನಿಟ್ಟನು. ಈ ಪ್ರೀತಿಯು ದೇವರು ಮಾನವಕುಲಕ್ಕೆ ತೋರಿಸಿದ ಪ್ರೀತಿಯಂತಿದೆ. ಯೇಸು ಅಂದದ್ದು: “ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ. ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುವಿರಿ; ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾ. 5:44, 45) ಇಷ್ಟು ವಿಶಾಲವಾದ ಪ್ರೀತಿಯನ್ನು ತೋರಿಸುವ ಮೂಲಕ ಯೇಸುವಿನ ಶಿಷ್ಯರು ದೇವರ ಪರಿಪೂರ್ಣ ಮಾದರಿಯನ್ನು ಅನುಕರಿಸುವವರಾಗಿ ಇರುವರು.

ಇಂದು ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳು ಇತರರಿಗಾಗಿ ಅಂಥ ಉತ್ಕೃಷ್ಟ ಮಟ್ಟದ ಪ್ರೀತಿಯನ್ನು ತೋರಿಸಲು ಶ್ರಮಿಸುತ್ತಾರೆ. ಬೈಬಲ್‌ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯುವಂತೆ ಅವರು ಎಲ್ಲ ವಿವಿಧ ಹಿನ್ನೆಲೆ, ಜಾತಿ, ಧರ್ಮಗಳ ಜನರಿಗೆ ನೆರವಾಗಲು ಅಪೇಕ್ಷಿಸುತ್ತಾರೆ. ಇಂದು ಸಾಕ್ಷಿಗಳು ಆಸಕ್ತ ಜನರೊಂದಿಗೆ 236 ದೇಶಗಳಲ್ಲಿ 70 ಲಕ್ಷಕ್ಕಿಂತಲೂ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡಿಸುತ್ತಿದ್ದಾರೆ.

“ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸುವುದಾದರೆ ನಿಮಗೆ ಯಾವ ಪ್ರತಿಫಲವಿದೆ? ತೆರಿಗೆ ವಸೂಲಿಮಾಡುವವರು ಸಹ ಇದನ್ನೇ ಮಾಡುತ್ತಾರಲ್ಲವೆ? ನೀವು ನಿಮ್ಮ ಸಹೋದರರನ್ನು ಮಾತ್ರ ವಂದಿಸುವುದಾದರೆ ಯಾವ ಅಸಾಮಾನ್ಯ ಕಾರ್ಯವನ್ನು ಮಾಡಿದಂತಾಯಿತು? ಅನ್ಯಜನರು ಸಹ ಇದನ್ನೇ ಮಾಡುತ್ತಾರಲ್ಲವೆ?” ಎಂದು ಯೇಸು ಕೇಳಿದನು. (ಮತ್ತಾ. 5:46, 47) ಆದ್ದರಿಂದ ನಿಜ ಕ್ರೈಸ್ತರು ನಿರ್ದಿಷ್ಟ ಶೈಕ್ಷಣಿಕ ಅಥವಾ ಜಾತೀಯ ಹಿನ್ನೆಲೆಗಳ ಜನರನ್ನು ಮಾತ್ರವೇ ಪ್ರೀತಿಸುವುದಿಲ್ಲ. ಇಲ್ಲವೆ ಪ್ರೀತಿ ತೋರಿಸುವವರಿಗೆ ಮಾತ್ರ ಅವರು ಪ್ರೀತಿ ತೋರಿಸುವುದಿಲ್ಲ. ಅವರು ಬಡವರಿಗೂ ಅಸ್ವಸ್ಥರಿಗೂ ಎಳೆಯರಿಗೂ ವೃದ್ಧರಿಗೂ ಸಹಾಯ ನೀಡುತ್ತಾರೆ. ಈ ವಿಧಗಳಲ್ಲಿ ಕ್ರೈಸ್ತರು ಯೆಹೋವನ ಪ್ರೀತಿಯನ್ನು ಅನುಕರಿಸಬಲ್ಲರು. ಹೀಗೆ ಸಂಬಂಧಿತ ಅರ್ಥದಲ್ಲಿ ಪರಿಪೂರ್ಣರಾಗಿರಬಲ್ಲರು.

ಆದಾಮನು ಕಳಕೊಂಡ ಪರಿಪೂರ್ಣತೆಯನ್ನು ನಾವೆಂದಾದರೂ ಪುನಃ ಹಿಂದೆ ಪಡೆಯಸಾಧ್ಯವೋ? ಖಂಡಿತ ಸಾಧ್ಯ. ‘ದೇವರ ಮಗನು ಪಿಶಾಚನ ಕೆಲಸಗಳನ್ನು ಭಂಗಗೊಳಿಸುವಾಗ’ ಅಂದರೆ ಕ್ರಿಸ್ತನ ಸಾವಿರ ವರ್ಷದ ಆಳಿಕೆಯಲ್ಲಿ ವಿಧೇಯ ಮಾನವರು ಯೇಸುವಿನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯ ಮೂಲಕ ಪೂರ್ಣಾರ್ಥದಲ್ಲಿ ಪರಿಪೂರ್ಣತೆಯನ್ನು ಮುಟ್ಟುವರು.—1 ಯೋಹಾ. 3:8.