ದೇವರ ಸೇವೆಗೆ ಮುಪ್ಪು ತಡೆಯಲ್ಲ!
ದೇವರ ಸೇವೆಗೆ ಮುಪ್ಪು ತಡೆಯಲ್ಲ!
ದಕ್ಷಿಣ ಸ್ಪೆಯಿನ್‌ನ ಮಾಲಗ ಎಂಬಲ್ಲಿ ಒಬ್ಬಾಕೆ ತಾಯಿ ಮತ್ತು ಮಗಳು 2009, ಡಿಸೆಂಬರ್ 19ರಂದು ದೀಕ್ಷಾಸ್ನಾನ ಪಡೆದರು. ಅವರಿಬ್ಬರ ಹೆಸರೂ ಆ್ಯನ ಎಂದಾಗಿತ್ತು. 2009ರಲ್ಲಿ ಸ್ಪೆಯಿನ್‌ನಲ್ಲಿ ದೀಕ್ಷಾಸ್ನಾನದ ಹೆಜ್ಜೆಯನ್ನು ತೆಗೆದುಕೊಂಡ 2,352 ಮಂದಿಯಲ್ಲಿ ಇವರೂ ಸೇರಿದ್ದರು. ಈ ತಾಯಿ-ಮಗಳ ಕುರಿತ ವಿಶೇಷತೆ ಏನೆಂದರೆ ಅವರಿಬ್ಬರ ವಯಸ್ಸು! ತಾಯಿಗೆ 107 ವಯಸ್ಸಾದರೆ ಮಗಳಿಗೆ 83!
ಯೆಹೋವನಿಗೆ ಸಮರ್ಪಣೆಯ ಸಂಕೇತವಾಗಿ ಅವರು ದೀಕ್ಷಾಸ್ನಾನ ಪಡೆಯುವಂತೆ ಮಾಡಿದ್ದು ಯಾವುದು? ಮಗಳು ಆ್ಯನಳನ್ನು 1970ರ ದಶಕದ ಆರಂಭದಲ್ಲಿ ನೆರೆಮನೆಯ ಸಾಕ್ಷಿಯೊಬ್ಬಳು ತನ್ನ ಮನೆಯಲ್ಲಿ ನಡೆಯುತ್ತಿದ್ದ ಸಭಾಪುಸ್ತಕ ಅಧ್ಯಯನಕ್ಕೆ ಹಾಜರಾಗಲು ಆಮಂತ್ರಿಸಿದ್ದಳು. ಆ್ಯನಳು ಆಗಿಂದಾಗ್ಗೆ ಅದಕ್ಕೆ ಹಾಜರಾಗುತ್ತಿದ್ದಳು. ಆದರೂ ತನ್ನ ಐಹಿಕ ಉದ್ಯೋಗದ ಕಾರಣ ಆಕೆ ಹೆಚ್ಚೇನೂ ಪ್ರಗತಿಯನ್ನು ಮಾಡಲಿಲ್ಲ.
ಸುಮಾರು ಹತ್ತು ವರ್ಷಗಳ ತರುವಾಯ ಆ್ಯನಳ ಮಕ್ಕಳಲ್ಲಿ ಕೆಲವರು ಬೈಬಲನ್ನು ಅಧ್ಯಯನ ಮಾಡಲಾರಂಭಿಸಿ ಸಮಯಾನಂತರ ಯೆಹೋವನ ಸೇವಕರಾದರು. ಅವರಲ್ಲಿ ಒಬ್ಬಳಾದ ಮಾರಿ ಕಾರ್ಮೆನ್ ಕೊನೆಗೂ ತನ್ನ ತಾಯಿ ಆ್ಯನಳಲ್ಲಿ ಬೈಬಲ್ ಸತ್ಯದ ಕಡೆಗಿದ್ದ ಪ್ರೀತಿಯನ್ನು ಪುನಃ ಚೇತರಿಸಲು ಶಕ್ತಳಾಗಿ ಬೈಬಲ್ ಅಧ್ಯಯನ ಸ್ವೀಕರಿಸುವಂತೆ ಸಹಾಯಮಾಡಿದಳು. ತದನಂತರ, ಮಾರಿ ಕಾರ್ಮನ್‌ಳ ಅಜ್ಜಿ ಆ್ಯನಳು ಸಹ ಬೈಬಲಿನಲ್ಲಿ ಆಸಕ್ತಿ ತೋರಿಸತೊಡಗಿದಳು. ಕಟ್ಟಕಡೆಗೆ ಈ ಕುಟುಂಬದ ಹತ್ತು ಮಂದಿ ಸದಸ್ಯರು ದೀಕ್ಷಾಸ್ನಾನದ ಹೆಜ್ಜೆಯನ್ನು ತಕ್ಕೊಂಡರು.
ದೀಕ್ಷಾಸ್ನಾನದ ದಿನದಂದು ತಾಯಿ ಮತ್ತು ಮಗಳ ಅಂದರೆ ಈ ಇಬ್ಬರು ಆ್ಯನರ ವದನಗಳು ಸಂತಸದಿಂದ ಬೆಳಗುತ್ತಿದ್ದವು. “ತನ್ನನ್ನು ತಿಳಿಯುವಂತೆ ನನಗೆ ಸಹಾಯಮಾಡಿದ ಯೆಹೋವ ದೇವರು ಅದೆಷ್ಟು ಒಳ್ಳೆಯವನು!” ಎಂದು ಉದ್ಗರಿಸಿದಳು 107 ವಯಸ್ಸಿನ ವೃದ್ಧೆ ಆ್ಯನ. “ಪರದೈಸ್ ಬರುವುದಕ್ಕೆ ಮುಂಚೆ ನಾನು ಯೆಹೋವನ ಸೇವೆಮಾಡಬೇಕು, ಸುವಾರ್ತೆಯನ್ನು ನನ್ನಿಂದಾದಷ್ಟು ಹೆಚ್ಚೆಚ್ಚು ಸಾರುತ್ತಾ ಆತನ ಚಿತ್ತವನ್ನು ಮಾಡಬೇಕು” ಎಂದು ಕೂಡಿಸಿ ಹೇಳಿದಳು ಅವಳ 87 ವಯಸ್ಸಿನ ಸುಪುತ್ರಿ.
ಈ ಇಬ್ಬರು ವಿಧವೆಯರಿಗೆ ಯಾವಾಗಲೂ ವಿಶೇಷ ಸಂತೋಷವನ್ನು ತರುವಂಥ ವಿಷಯವೆಂದರೆ ಕೂಟಗಳಿಗೆ ಹಾಜರಾಗುವುದೇ. “ಇವರಿಬ್ಬರು ಒಂದೇ ಒಂದು ಕೂಟವನ್ನಾದರೂ ತಪ್ಪಿಸುವುದಿಲ್ಲ. ಕಾವಲಿನಬುರುಜು ಅಧ್ಯಯನದಲ್ಲೂ ಉತ್ತರ ಹೇಳಲು ಅವರು ಸದಾ ಸಿದ್ಧರು” ಎನ್ನುತ್ತಾರೆ ಅವರ ಸಭಾ ಹಿರಿಯರಲ್ಲೊಬ್ಬರು.
ಇವರ ನಂಬಿಗಸ್ತ ಮಾದರಿ, “ದೇವಾಲಯವನ್ನು ಬಿಟ್ಟುಹೋಗದೆ ಹಗಲಿರುಳು ಉಪವಾಸ ಮತ್ತು ಯಾಚನೆಗಳಿಂದ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದ” ವಿಧವೆ ಅನ್ನಳನ್ನು ನಮ್ಮ ನೆನಪಿಗೆ ತರುತ್ತದೆ. ಆ ಸೇವೆಯಿಂದಾಗಿ ಆಕೆಗೆ ಚಿಕ್ಕ ಕೂಸಾಗಿದ್ದ ಯೇಸುವನ್ನು ನೋಡುವಂಥ ಸೌಭಾಗ್ಯ ಸಿಕ್ಕಿತು. (ಲೂಕ 2:36-38) ಎಂಬತ್ತನಾಲ್ಕು ಪ್ರಾಯದ ಆ ವಯೋವೃದ್ಧೆ ಅನ್ನಳಿಗೆ ಯೆಹೋವನ ಸೇವೆಮಾಡಲು ಮುಪ್ಪು ಅಡ್ಡಿಯಾಗಿರಲಿಲ್ಲ, ಅಂತೆಯೇ ಮೇಲೆ ತಿಳಿಸಲಾದ ಇಂದಿನ ಆ ಇಬ್ಬರು ಆ್ಯನರಿಗೂ ದೇವರ ಸೇವೆಮಾಡಲು ಮುಪ್ಪು ತಡೆಯಾಗಿಲ್ಲ.
ಬೈಬಲಿನ ಸಂದೇಶವನ್ನು ಕೇಳಲು ಸಿದ್ಧಮನಸ್ಕರಾದ ಸಂಬಂಧಿಕರು ನಿಮಗಿದ್ದಾರೊ? ಮನೆಮನೆಯ ಸೇವೆಯಲ್ಲಿ ನಿಮ್ಮ ಸಂದೇಶವನ್ನು ಕೇಳಲಿಚ್ಛಿಸುವ ಆಸಕ್ತ ವಯೋವೃದ್ಧರು ನಿಮಗೆ ಸಿಕ್ಕಿದ್ದಾರೊ? ಅವರು ಸಹ ಈ ಅನುಭವದಲ್ಲಿರುವ ಇಬ್ಬರು ಆ್ಯನರಂತೆ ಆಗಬಲ್ಲರು. ಏಕೆಂದರೆ ಸತ್ಯದೇವರಾದ ಯೆಹೋವನನ್ನು ಸೇವಿಸಲು ಕಾಲವಿನ್ನೂ ಮಿಂಚಿಲ್ಲ, ದೇವರ ಸೇವೆಗೆ ಮುಪ್ಪು ತಡೆಯಲ್ಲ!
[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]
“ತನ್ನನ್ನು ತಿಳಿಯುವಂತೆ ನನಗೆ ಸಹಾಯಮಾಡಿದ ಯೆಹೋವ ದೇವರು ಅದೆಷ್ಟು ಒಳ್ಳೆಯವನು!”
[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪರದೈಸ್ ಬರುವುದಕ್ಕೆ ಮುಂಚೆ ನಾನು ಯೆಹೋವನ ಸೇವೆಮಾಡಬೇಕು”