ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಕ್ಕಳು ಉತ್ತರ ಕೊಡಬಲ್ಲರೋ?

ನಿಮ್ಮ ಮಕ್ಕಳು ಉತ್ತರ ಕೊಡಬಲ್ಲರೋ?

ನಿಮ್ಮ ಮಕ್ಕಳು ಉತ್ತರ ಕೊಡಬಲ್ಲರೋ?

ಹೆತ್ತವರೇ, ಮಕ್ಕಳೊಂದಿಗೆ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ನಡೆಸುವುದರ ಕುರಿತು ನಾವು 2010, ಜನವರಿ 15ರ ಕಾವಲಿನಬುರುಜು ಸಂಚಿಕೆಯ ಪುಟ 16-20ರಲ್ಲಿ ತಿಳಿಸಿದ್ದೆವು. ಆದರೆ ಈ ಲೇಖನದಲ್ಲಿ, ನಿಮ್ಮ ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುವಂತೆ ನೆರವಾಗುವ ಅಂಶಗಳನ್ನು ಕೊಡಲಾಗಿದೆ. ಇದರಲ್ಲಿರುವ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ನೀವು ನಿಮ್ಮ ಕುಟುಂಬ ಆರಾಧನೆಯ ಸಂಜೆಯಂದು ನಡೆಸಬಹುದು.

ಯೆಹೋವನ ಸಾಕ್ಷಿಗಳಾಗಿರುವ ನಮ್ಮ ಮಕ್ಕಳು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಧ್ವಜವಂದನೆ, ಹುಟ್ಟುಹಬ್ಬದ ಆಚರಣೆ, ರಜಾದಿನಗಳ ಪ್ರಾಜೆಕ್ಟ್‌ಗಳಂಥ ಕೆಲವು ವಿಷಯಗಳಲ್ಲಿ ಅವರೇಕೆ ಭಾಗವಹಿಸುವುದಿಲ್ಲ ಎಂದು ಸಹಪಾಠಿಗಳು ಅವರನ್ನು ಆಗಾಗ್ಗೆ ಪ್ರಶ್ನಿಸುತ್ತಾರೆ. ನಿಮ್ಮ ಮಗ/ಮಗಳಿಗೆ ಅಂಥ ಪ್ರಶ್ನೆಯನ್ನು ಕೇಳುವಲ್ಲಿ ಅವರು ಹೇಗೆ ಉತ್ತರಿಸುವರು?

ಕೆಲವು ಕ್ರೈಸ್ತ ಮಕ್ಕಳು, “ನಾನದನ್ನು ಮಾಡಲಾರೆ. ಇದು ನನ್ನ ಧರ್ಮಕ್ಕೆ ವಿರುದ್ಧ” ಎಂದಷ್ಟೇ ಹೇಳಿದ್ದಾರೆ. ಆ ಮಕ್ಕಳ ದೃಢ ನಿಲುವು ಪ್ರಶಂಸಿಸತಕ್ಕದ್ದೇ. ಹಾಗಿದ್ದರೂ ಇಂಥ ಉತ್ತರವು ಸಹಪಾಠಿಗಳು ಹೆಚ್ಚಿನ ಪ್ರಶ್ನೆಗಳನ್ನು ಕೇಳದಂತೆ ತಡೆಯುತ್ತದೆ. ಆದರೆ ‘ನಮ್ಮಲ್ಲಿರುವ ನಿರೀಕ್ಷೆಗೆ ಕಾರಣವನ್ನು ಕೇಳುವ ಪ್ರತಿಯೊಬ್ಬರ ಮುಂದೆ ಉತ್ತರ ಹೇಳುವುದಕ್ಕೆ ನಾವು ಯಾವಾಗಲೂ ಸಿದ್ಧರಾಗಿರಬೇಕೆಂದು’ ಬೈಬಲ್‌ ಬುದ್ಧಿಹೇಳುತ್ತದೆ. (1 ಪೇತ್ರ 3:15) ಅಂದರೆ ಕೇವಲ “ನಾನದನ್ನು ಮಾಡಲಾರೆ” ಎಂದು ಹೇಳುವುದಷ್ಟೇ ಅಲ್ಲ, ಹೆಚ್ಚನ್ನು ಹೇಳಬೇಕು. ನಾವು ಹೇಳುವ ವಿಷಯವನ್ನು ಇತರರು ಒಪ್ಪದಿದ್ದರೂ ನಮ್ಮ ನಿರ್ಣಯಗಳಿಗೆ ಕಾರಣವೇನೆಂದು ತಿಳಿಯಲು ಕೆಲವರು ಇಷ್ಟಪಡಬಹುದು.

ಅನೇಕ ಸಾಕ್ಷಿ ಮಕ್ಕಳು, ಮಹಾ ಬೋಧಕನಿಂದ ಕಲಿಯಿರಿ ಎಂಬ ಪುಸ್ತಕದಂಥ ಪ್ರಕಾಶನಗಳಿಂದ ಬೈಬಲ್‌ ಕಥೆಗಳನ್ನು ಸಹಪಾಠಿಗಳಿಗೆ ವಿವರಿಸಿದ್ದಾರೆ. ಸಾಕ್ಷಿ ಮಕ್ಕಳು ಕೆಲವು ವಿಷಯಗಳನ್ನು ಏಕೆ ಮಾಡುತ್ತಾರೆ, ಏಕೆ ಮಾಡುವುದಿಲ್ಲ ಎಂಬುದನ್ನು ವಿವರಿಸಲು ಈ ಕಥೆಗಳು ಸಹಾಯಕರ. ಬೈಬಲ್‌ ಕಥೆಗಳನ್ನು ಕೆಲವು ವಿದ್ಯಾರ್ಥಿಗಳು ಆಸಕ್ತಿಯಿಂದ ಆಲಿಸುತ್ತಾರೆ. ಹೀಗೆ ಅನೇಕ ಬೈಬಲ್‌ ಅಧ್ಯಯನಗಳೂ ಆರಂಭವಾಗಿವೆ. ಆದರೆ ಇತರ ವಿದ್ಯಾರ್ಥಿಗಳಿಗೆ ಒಮ್ಮೆಗೇ ಇಡೀ ಕಥೆಯನ್ನು ಕೇಳಿಸಿಕೊಳ್ಳಲು ಕಷ್ಟವಾಗಬಹುದು. ಪೂರ್ತಿಯಾಗಿ ವಿವರಿಸದಿದ್ದಲ್ಲಿ ಶಾಲಾಮಕ್ಕಳಿಗೆ ಕೆಲವು ಬೈಬಲ್‌ ಕಥೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟ. ಮಿನ್ಹೇ ಎಂಬ ಹುಡುಗಿಯನ್ನು ಅವಳ ಸ್ನೇಹಿತೆ ಬರ್ತ್‌ಡೇ ಪಾರ್ಟಿಗೆ ಕರೆದಾಗ, “ಹುಟ್ಟುಹಬ್ಬವನ್ನು ಆಚರಿಸಬೇಕೆಂದು ಬೈಬಲ್‌ ಹೇಳುವುದಿಲ್ಲ. ಸ್ನಾನಿಕ ಯೋಹಾನನನ್ನು ಒಂದು ಹುಟ್ಟುಹಬ್ಬದ ದಿನದಂದೇ ಕೊಲ್ಲಲಾಯಿತು” ಎಂದವಳು ತಿಳಿಸಿದಳು. ಆದರೆ ತಾನು ಹೇಳಿದ್ದು ಅವಳ ಸ್ನೇಹಿತೆಗೆ ಅರ್ಥವಾಗಲಿಲ್ಲ ಎಂದು ಮಿನ್ಹೇ ಹೇಳುತ್ತಾಳೆ.

ಕೆಲವೊಮ್ಮೆ ನಮ್ಮ ಪುಸ್ತಕದಿಂದ ಒಂದು ಚಿತ್ರವನ್ನೋ ಕಥೆಯನ್ನೋ ತೋರಿಸುವುದು ಸಹಾಯವಾದೀತು. ಆದರೆ ಶಾಲೆಯಲ್ಲಿ ಮಕ್ಕಳು ಇತರ ವಿದ್ಯಾರ್ಥಿಗಳಿಗೆ ಧಾರ್ಮಿಕ ಪುಸ್ತಕಗಳನ್ನು ತೋರಿಸಬಾರದೆಂದು ಶಾಲಾ ಅಧಿಕಾರಿಗಳು ಹೇಳಿರುವಲ್ಲಿ ಆಗೇನು? ಪ್ರಕಾಶನವಿಲ್ಲದೇ ನಮ್ಮ ಮಕ್ಕಳು ಪರಿಣಾಮಕಾರಿಯಾಗಿ ಸಾಕ್ಷಿಕೊಡಬಲ್ಲರೋ? ಮಕ್ಕಳು ತಮ್ಮ ನಂಬಿಕೆಯನ್ನು ಸಮರ್ಥಿಸಶಕ್ತರಾಗುವಂತೆ ನೀವು ಹೇಗೆ ಸಹಾಯಮಾಡಬಹುದು?

ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ಮಾಡಿ

ಮನೆಯಲ್ಲಿ ಪ್ರ್ಯಾಕ್ಟಿಸ್‌ ಸೆಷನ್‌ಗಳನ್ನು ಮಾಡುವುದು ತುಂಬ ಸಹಾಯಕರ. ಹೆತ್ತವರು ಸಹಪಾಠಿಗಳ ಪಾತ್ರವಹಿಸಬಹುದು. ಮಕ್ಕಳು ತಮ್ಮ ನಂಬಿಕೆಯನ್ನು ಸಮರ್ಥಿಸಲು ಪ್ರಯತ್ನಿಸುವಾಗ ಅವರನ್ನು ಪ್ರಶಂಸಿಸಬೇಕು. ಅದಲ್ಲದೆ ಅವರು ಇನ್ನೂ ಹೆಚ್ಚು ತರ್ಕಬದ್ಧವಾಗಿ ಹೇಗೆ ಮಾತಾಡಬಹುದು ಮತ್ತು ಅದೇಕೆ ಮಹತ್ವ ಎಂದು ವಿವರಿಸಬೇಕು. ಉದಾಹರಣೆಗೆ, ತಮ್ಮ ವಯಸ್ಸಿನ ಮಕ್ಕಳಿಗೆ ಅರ್ಥವಾಗುವಂಥ ಪದಗಳನ್ನು ಬಳಸುವಂತೆ ಹೇಳಿರಿ. “ಮನಸ್ಸಾಕ್ಷಿ,” “ನಿಷ್ಠೆ” ಎಂಬಂಥ ಪದಗಳು ತನ್ನ ಸಹಪಾಠಿಗಳಿಗೆ ಅರ್ಥವಾಗಲಿಲ್ಲ ಎನ್ನುತ್ತಾನೆ ಒಂಬತ್ತು ವರ್ಷದ ಜೋಶ್ವ. ಆದುದರಿಂದ ಅವನು ಸಹಪಾಠಿಗಳೊಂದಿಗೆ ತರ್ಕಿಸುವಾಗ ಹೆಚ್ಚು ಸುಲಭವಾದ ಪದಗಳನ್ನು ಬಳಸುತ್ತಿದ್ದನು.—1 ಕೊರಿಂ. 14:9.

ಕೆಲವು ಶಾಲಾಮಕ್ಕಳು ಪ್ರಶ್ನೆಯೊಂದನ್ನು ಕೇಳಿಯಾರು. ಆದರೆ ಅದಕ್ಕೆ ಉದ್ದುದ್ದ ಉತ್ತರಗಳನ್ನು ನಾವು ಕೊಡುವಲ್ಲಿ ಆಸಕ್ತಿಯನ್ನು ಕೂಡಲೇ ಕಳಕೊಳ್ಳಬಹುದು. ಆದ್ದರಿಂದ ಅವರನ್ನು ಸಂಭಾಷಣೆಯಲ್ಲಿ ಒಳಗೂಡಿಸಿ ತರ್ಕಿಸುವ ಮೂಲಕ ಸಾಕ್ಷಿ ಮಕ್ಕಳು ಅವರ ಆಸಕ್ತಿಯನ್ನು ಹಿಡಿದಿಡಬಹುದು. 10 ವಯಸ್ಸಿನ ಹ್ಯಾನ್ಯುಲ್‌ ಹೀಗೆ ಹೇಳುತ್ತಾಳೆ: “ನನ್ನ ಸಹಪಾಠಿಗಳಿಗೆ ಸಂಭಾಷಣೆ ಇಷ್ಟ. ಉದ್ದ ವಿವರಣೆ ಬೇಡ.” ಆದುದರಿಂದ ಸಂಭಾಷಣೆ ಮಾಡಲಿಕ್ಕಾಗಿ ಪ್ರಶ್ನೆಗಳನ್ನು ಕೇಳಿರಿ ಮತ್ತು ಅವರ ಅಭಿಪ್ರಾಯಗಳಿಗೆ ಚೆನ್ನಾಗಿ ಕಿವಿಗೊಡಿ.

ಕ್ರೈಸ್ತ ಮಕ್ಕಳು ತಮ್ಮ ಸಹಪಾಠಿಗಳೊಂದಿಗೆ ತರ್ಕಿಸಬಹುದಾದ ವಿಧವನ್ನು ಕೆಳಗಿನ ಸಂಭಾಷಣೆಗಳು ತೋರಿಸುತ್ತವೆ. ಅವನ್ನು ಬಾಯಿಪಾಠ ಮಾಡುವ ಅಗತ್ಯವಿಲ್ಲ. ಏಕೆಂದರೆ ಎಲ್ಲ ಮಕ್ಕಳು ಕೇಳುವ ಪ್ರಶ್ನೆ, ಪ್ರತಿಕ್ರಿಯಿಸುವ ವಿಧ ಬೇರೆ ಬೇರೆ. ಸನ್ನಿವೇಶಗಳಿಗೆ ಸರಿಯಾಗಿ ಮಾತಾಡುವುದು ಅವಶ್ಯ. ನಿಮ್ಮ ಚಿಕ್ಕ ಮಕ್ಕಳು ತಾವು ನಂಬುವ ವಿಷಯಗಳನ್ನು ಮನಸ್ಸಿನಲ್ಲಿಟ್ಟು, ಅವನ್ನು ತಮ್ಮ ಸ್ವಂತ ಮಾತುಗಳಲ್ಲಿ ತಿಳಿಸಬೇಕು, ಸನ್ನಿವೇಶಕ್ಕೆ ಹಾಗೂ ಸಹಪಾಠಿಗೆ ತಕ್ಕದಾದ ರೀತಿಯಲ್ಲಿ ಹೇಳಬೇಕು. ಶಾಲಾ ವಯಸ್ಸಿನ ಮಕ್ಕಳು ನಿಮಗಿರುವುದಾದರೆ ಈ ಸಂಭಾಷಣೆಗಳನ್ನು ಅವರೊಂದಿಗೆ ಅಭಿನಯಿಸಲು ಪ್ರಯತ್ನಿಸಿ.

ಮಕ್ಕಳನ್ನು ತರಬೇತು ಮಾಡುವುದೇನೂ ಸುಲಭದ ಕೆಲಸವಲ್ಲ, ಅದಕ್ಕೆ ಸಮಯ, ಪ್ರಯತ್ನ ಬೇಕು. ಕ್ರೈಸ್ತ ಹೆತ್ತವರು ಬೈಬಲ್‌ ಮೂಲತತ್ತ್ವಗಳನ್ನು ತಮ್ಮ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿಸಬೇಕು ಹಾಗೂ ಅವುಗಳ ಪ್ರಕಾರ ಜೀವಿಸುವಂತೆ ಒಡಂಬಡಿಸಬೇಕು.—ಧರ್ಮೋ. 6:7; 2 ತಿಮೊ. 3:14.

ಕೆಳಗಿರುವ ಸಂಭಾಷಣೆಗಳನ್ನು ಮುಂದಿನ ಕುಟುಂಬ ಆರಾಧನೆ ಸಂಜೆಯಲ್ಲಿ ಮಕ್ಕಳೊಂದಿಗೆ ಪ್ರ್ಯಾಕ್ಟಿಸ್‌ ಮಾಡಲು ಪ್ರಯತ್ನಿಸಿ. ಅವು ಎಷ್ಟೊಂದು ಪರಿಣಾಮಕಾರಿಯೆಂದು ಸ್ವತಃ ನೀವೇ ನೋಡಿ. ಉತ್ತರಗಳನ್ನೂ ಪದಗಳನ್ನೂ ಬಾಯಿಪಾಠ ಮಾಡಿಸುವುದು ನಿಮ್ಮ ಗುರಿಯಲ್ಲ ಎಂಬುದನ್ನು ನೆನಪಿಡಿ. ಒಂದು ಸನ್ನಿವೇಶವನ್ನು ಹಲವಾರು ಬಾರಿ ಅಭಿನಯಿಸಬಹುದು. ಪ್ರತಿಯೊಂದು ಸಾರಿ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಿರಿ. ಅದಕ್ಕೆ ನಿಮ್ಮ ಮಕ್ಕಳು ತಕ್ಕದಾಗಿ ಹೇಗೆ ಉತ್ತರಿಸುವರೆಂದು ನೋಡಿ. ಅವರು ತಮ್ಮ ನಂಬಿಕೆಗಳಿಗಿರುವ ಆಧಾರವನ್ನು ವಿವರಿಸಲು ಪ್ರಯತ್ನಿಸುವಾಗ ತರ್ಕಬದ್ಧವಾಗಿ ಹಾಗೂ ಜಾಣ್ಮೆಯಿಂದ ಮಾತಾಡಲು ಸಹಾಯಮಾಡಿ. ಹೀಗೆ ಮಾಡುತ್ತಾ ಹೋದಂತೆ ಮುಂದೆ ನೀವು ನಿಮ್ಮ ಮಕ್ಕಳಿಗೆ ಸಹಪಾಠಿಗಳ, ನೆರೆಯವರ ಮತ್ತು ಶಿಕ್ಷಕರ ಮುಂದೆ ತಮ್ಮ ನಂಬಿಕೆಯನ್ನು ಸಮರ್ಥಿಸಲು ಕಲಿಸುವಿರಿ.

[ಪುಟ 4, 5ರಲ್ಲಿರುವ ಚೌಕ/ ಚಿತ್ರಗಳು]

ಹುಟ್ಟುಹಬ್ಬದ ಆಚರಣೆಗಳು

ಮೇರಿ: ನನ್ನ ಬರ್ತ್‌ಡೇ ಪಾರ್ಟಿ ಇದೆ ಜಾನ್‌, ನೀನು ಬರಲೇಬೇಕು.

ಜಾನ್‌: ನನ್ನನ್ನು ಕರೆದದ್ದಕ್ಕೆ ಥ್ಯಾಂಕ್ಸ್‌ ಮೇರಿ. ಆದರೆ ಬರ್ತ್‌ಡೇ ಪಾರ್ಟಿ ನೀನ್ಯಾಕೆ ಮಾಡ್ತಿ?

ಮೇರಿ: ನನ್ನ ಹುಟ್ಟುಹಬ್ಬ ಆಚರಿಸಲಿಕ್ಕೆ. ನೀನು ಮಾಡುವುದಿಲ್ವಾ?

ಜಾನ್‌: ಇಲ್ಲ.

ಮೇರಿ: ಯಾಕೆ ಮಾಡುವುದಿಲ್ಲ? ನಾನು ಹುಟ್ಟಿದಾಗ ಅಪ್ಪಅಮ್ಮಗೆ ತುಂಬ ಖುಷಿಯಾಗಿತ್ತು. ಅದಕ್ಕೆನೆ ಪ್ರತಿವರ್ಷ ಬರ್ತ್‌ಡೇ ಮಾಡ್ತೇವೆ.

ಜಾನ್‌: ನನ್ನ ಅಪ್ಪಅಮ್ಮಗೂ ತುಂಬ ಖುಷಿಯಾಗಿತ್ತು ನಾನು ಹುಟ್ಟಿದಾಗ. ಹಾಗಂತ ಪ್ರತಿವರ್ಷ ಅದನ್ನು ಆಚರಿಸಬೇಕೆಂದು ನನಗೆ ಅನಿಸುವುದಿಲ್ಲ. ತಮ್ಮ ಬರ್ತ್‌ಡೇ ಪಾರ್ಟಿಗಳಲ್ಲಿ ಅನೇಕರು ತಾವೇ ಪ್ರಾಮುಖ್ಯರೆಂದು ನೆನಸುತ್ತಾರೆ. ಆದರೆ ಎಲ್ಲರಿಗಿಂತ ಪ್ರಾಮುಖ್ಯನು ದೇವರೇ ಅಲ್ವಾ? ನಮಗೆ ಜೀವ ಕೊಟ್ಟವನು ಆತನೇ. ಆದ್ದರಿಂದ ಆತನಿಗೆ ನಾವು ಥ್ಯಾಂಕ್ಸ್‌ ಹೇಳಬೇಕಲ್ವಾ?

ಮೇರಿ: ಹಾಗಾದ್ರೆ ನಾನು ಬರ್ತ್‌ಡೇ ಪಾರ್ಟಿ ಮಾಡಬಾರದಾ?

ಜಾನ್‌: ಅದು ನಿನ್ನಿಷ್ಟ. ಆದರೆ ಒಂದು ವಿಷಯ ಯೋಚಿಸು. ಹೆಚ್ಚು ಜನರಿಗೆ ಬರ್ತ್‌ಡೇ ಗಿಫ್ಟ್‌ ಪಡೆಯೋದು ಅಂದ್ರೆ ತುಂಬ ಇಷ್ಟ. ಆದರೆ ತಕ್ಕೊಳ್ಳೋದಕ್ಕಿಂತ ಕೊಡುವುದರಲ್ಲೇ ಹೆಚ್ಚು ಸಂತೋಷ ಇದೆ ಎಂದು ಬೈಬಲ್‌ ಹೇಳುತ್ತದೆ. ಬರ್ತ್‌ಡೇಯಲ್ಲಿ ನಮಗೇ ಪ್ರಾಮುಖ್ಯ ಕೊಡುವ ಬದಲು ದೇವರಿಗೆ ಥ್ಯಾಂಕ್ಸ್‌ ಹೇಳಿ, ಬೇರೆಯವರ ಬಗ್ಗೆ ಯೋಚಿಸುತ್ತಾ ಅವರಿಗೆ ಒಳ್ಳೇದನ್ನು ಮಾಡುವುದು ಮೇಲಲ್ವಾ?

ಮೇರಿ: ಅದನ್ನೆಲ್ಲ ನಾನು ಯಾವತ್ತೂ ಯೋಚನೆ ಮಾಡ್ಲಿಲ್ಲ. ಹಾಗಾದ್ರೆ ನಿನ್ನ ಅಪ್ಪಅಮ್ಮ ನಿನಗೆ ಗಿಫ್ಟೇ ಕೊಡುವುದಿಲ್ವಾ?

ಜಾನ್‌: ಕೊಡ್ತಾರೆ. ಆದರೆ ಗಿಫ್ಟ್‌ ಕೊಡಲಿಕ್ಕೆ ಬರ್ತ್‌ಡೇನೇ ಬರಲಿ ಅಂತ ಕಾಯುವುದಿಲ್ಲ. ಇಷ್ಟವಾದಾಗೆಲ್ಲ ಗಿಫ್ಟ್‌ ಕೊಡ್ತಾರೆ. ಮೇರಿ, ಈ ಬರ್ತ್‌ಡೇ ಪಾರ್ಟಿಗಳು ಹೇಗೆ ಆರಂಭವಾದವು ಅಂತ ನಿನಗೆ ತಿಳುಕೊಳ್ಳಲು ಇಷ್ಟ ಇದೆಯಾ?

ಮೇರಿ: ಹಾಂ . . . ಹೇಗೆ ಆರಂಭವಾಯಿತು?

ಜಾನ್‌: ಬಹಳ ಕಾಲದ ಹಿಂದೆ ಮಾಡಿದ್ದ ಒಂದು ಬರ್ತ್‌ಡೇ ಪಾರ್ಟಿ ಬಗ್ಗೆ ನಾನು ನಿನಗೆ ನಾಳೆ ಹೇಳ್ತೇನೆ.

ರಾಷ್ಟ್ರಗೀತೆ

ಗೀತಾ: ರೂತ್‌, ಕ್ಲಾಸ್‌ನಲ್ಲಿ ಎಲ್ಲರೂ ರಾಷ್ಟ್ರಗೀತೆ ಹಾಡುತ್ತಾರೆ, ನೀನು ಹಾಡುವುದಿಲ್ವಲ್ಲಾ ಏಕೆ?

ರೂತ್‌: ಮೊದಲು ನೀನೇ ನನಗೆ ಹೇಳು, ನೀನ್ಯಾಕೆ ರಾಷ್ಟ್ರಗೀತೆ ಹಾಡುತ್ತೀ ಅಂತ?

ಗೀತಾ: ನನ್ನ ದೇಶದ ಬಗ್ಗೆ ನನಗೆ ಅಭಿಮಾನ ಇದೆ ಅದಕ್ಕಾಗಿ.

ರೂತ್‌: ನನಗೂ ನನ್ನ ದೇಶದ ಬಗ್ಗೆ ಗೌರವ ಇದೆ. ಆದರೆ ಒಂದು ದೇಶ ಇನ್ನೊಂದು ದೇಶಕ್ಕಿಂತ ಶ್ರೇಷ್ಠ ಎಂದು ನಾನೆಣಿಸುವುದಿಲ್ಲ.

ಗೀತಾ: ನನಗೆ ನನ್ನ ದೇಶವೇ ಶ್ರೇಷ್ಠಪ್ಪಾ.

ರೂತ್‌: ಆದರೆ ಗೀತಾ, ನಾನು ಯಾವಾಗಲೂ ದೇವರಿಗೆ ಇಷ್ಟವಾದದ್ದನ್ನೇ ಮಾಡುತ್ತೇನೆ. ದೇವರಿಗೆ ಆ ದೇಶ ಈ ದೇಶ ಅಂತ ಏನೂ ಭಿನ್ನಭೇದಗಳಿಲ್ಲ ಎಂದು ಬೈಬಲ್‌ ಹೇಳುತ್ತದೆ. ಜನರು ಯಾವ ದೇಶದವರೇ ಆಗಿರಲಿ ಅವರನ್ನು ಆತನು ಪ್ರೀತಿಸುತ್ತಾನೆ. ಆದ್ದರಿಂದಲೇ ನಾನು ನನ್ನ ದೇಶವನ್ನು ಗೌರವಿಸುತ್ತೇನಾದರೂ ರಾಷ್ಟ್ರಗೀತೆಯನ್ನು ಹಾಡುವುದಿಲ್ಲ, ರಾಷ್ಟ್ರಧ್ವಜಕ್ಕೆ ಸೆಲ್ಯೂಟ್‌ ಮಾಡುವುದೂ ಇಲ್ಲ.

ಗೀತಾ: ಆ ವಿಷಯವನ್ನು ಏಕೆ ಸುಮ್ಮನೇ ಅಷ್ಟು ದೊಡ್ಡದು ಮಾಡ್ತಿಯಾ? ಇದೆಲ್ಲಾ ತುಂಬ ಅತಿಯಾಯಿತು.

ರೂತ್‌: ಅತಿಯಲ್ಲ ಗೀತಾ. ನನಗೆ ಮಾತ್ರವಲ್ಲ, ನಮ್ಮಂಥ ಬೇರೆ ಮಕ್ಕಳಿಗೂ ಹಾಗನಿಸಿದೆ. ಬೈಬಲ್‌ ಹೇಳುವ ಪ್ರಕಾರ ಕೆಲವು ಯುವಕರಿಗೆ ಒಂದು ರಾಜಕೀಯ ಪ್ರತಿಮೆಗೆ ಅಡ್ಡಬೀಳಲು ಆಜ್ಞಾಪಿಸಲಾಯಿತು. ಆಗ ಅವರು ಏನು ಮಾಡಿದರು ಗೊತ್ತಾ? ಮರಣದ ಬೆದರಿಕೆ ಬಂದರೂ ಅವರು ಅಡ್ಡಬೀಳಲಿಲ್ಲ.

ಗೀತಾ: ಹೌದಾ, ನಾನೆಂದೂ ಇದನ್ನು ಕೇಳಲಿಲ್ಲಪ್ಪಾ.

ರೂತ್‌: ಹಾಗಾದರೆ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಅದರ ಬಗ್ಗೆ ಹೇಳುತ್ತೇನೆ.

ರಾಜಕೀಯ ಭಾವನೆ

ಮನೋಜ್‌: ಮೈಕಲ್‌, ನಿನಗೆ ವೋಟ್‌ ಹಾಕಲಿಕ್ಕೆ ಬಿಟ್ಟರೆ ಯಾರಿಗೆ ವೋಟ್‌ ಹಾಕ್ತಿಯಾ?

ಮೈಕಲ್‌: ಯಾರಿಗೂ ಹಾಕಲ್ಲ.

ಮನೋಜ್‌: ಏಕೆ?

ಮೈಕಲ್‌: ನಾನು ವೋಟ್‌ ಹಾಕಿಬಿಟ್ಟಿದ್ದೇನೆ ಕಣೋ.

ಮನೋಜ್‌: ನಿನಗೆ ವೋಟ್‌ ಹಾಕಲಿಕ್ಕೆ ಯಾರು ಬಿಡ್ತಾರೆ?

ಮೈಕಲ್‌: ಯಾರೂ ಬಿಡ್ಬೇಕು ಅಂತಿಲ್ಲ. ನಾನೇ ಒಂದು ಒಳ್ಳೆಯ ಸರ್ಕಾರವನ್ನು ಆರಿಸಿಕೊಂಡಿದ್ದೇನೆ.

ಮನೋಜ್‌: ಯಾವ ಸರ್ಕಾರಪ್ಪಾ ಅದು.

ಮೈಕಲ್‌: ಯೇಸುವಿನ ಸರ್ಕಾರ. ಅವನೇ ಅತ್ಯುತ್ತಮ ನಾಯಕ, ಯೋಗ್ಯನು ಸಹ. ಏಕೆ ಗೊತ್ತಾ?

ಮನೋಜ್‌: ಗೊತ್ತಿಲ್ಲ, ತಿಳಿಯಲು ಮನಸ್ಸೂ ಇಲ್ಲ.

ಮೈಕಲ್‌: ಸರಿ, ನಿನಗೆ ಮನಸ್ಸಾದರೆ ಕೇಳು, ತುಂಬ ಸಂತೋಷದಿಂದ ಹೇಳ್ತೇನೆ.

[ಚಿತ್ರ]

“ನನ್ನ ಬರ್ತ್‌ಡೇ ಪಾರ್ಟಿ ಇದೆ ಜಾನ್‌, ನೀನು ಬರಲೇಬೇಕು”

[ಪುಟ 3ರಲ್ಲಿರುವ ಚಿತ್ರ]

“ನೀನ್ಯಾಕೆ ರಾಷ್ಟ್ರಗೀತೆ ಹಾಡುವುದಿಲ್ಲ?”