ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಹಾಡಿರಿ!

ಯೆಹೋವನಿಗೆ ಹಾಡಿರಿ!

ಯೆಹೋವನಿಗೆ ಹಾಡಿರಿ!

“ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು.”—ಕೀರ್ತ. 146:2.

1. ತನ್ನ ಕೀರ್ತನೆಗಳಲ್ಲಿ ಕೆಲವನ್ನು ರಚಿಸಲು ಯುವ ದಾವೀದನನ್ನು ಯಾವುದು ಪ್ರಚೋದಿಸಿತು?

ದಾವೀದನು ಯುವಕನಾಗಿದ್ದಾಗ ತನ್ನ ತಂದೆಯ ಕುರಿಮಂದೆಯನ್ನು ಕಾಯುತ್ತಾ ಬೇತ್ಲೆಹೇಮ್‌ನ ಸಮೀಪದ ಹೊಲಗಳಲ್ಲಿ ತುಂಬ ಸಮಯವನ್ನು ಕಳೆದನು. ಕುರಿಗಳನ್ನು ಕಾಯುತ್ತಿದ್ದಾಗ ಅವನು ತಾರಾರಂಜಿತ ಆಕಾಶ, “ಕಾಡುಮೃಗಗಳು, ಆಕಾಶಪಕ್ಷಿಗಳು” ಮುಂತಾದ ಯೆಹೋವನ ಆಶ್ಚರ್ಯಕರ ಸೃಷ್ಟಿಕಾರ್ಯಗಳನ್ನು ಗಮನಿಸಸಾಧ್ಯವಿತ್ತು. ಅವನು ವೀಕ್ಷಿಸಿದ ವಿಷಯಗಳು ಅವನ ಮನಸ್ಸನ್ನು ತಟ್ಟಿದವು. ಎಷ್ಟರ ಮಟ್ಟಿಗೆಂದರೆ ಆ ಅದ್ಭುತಕರ ಸೃಷ್ಟಿಯ ನಿರ್ಮಾಣಿಕನನ್ನು ಸ್ತುತಿಸುವ ಹೃದಯಸ್ಪರ್ಶಿ ಗೀತೆಗಳನ್ನು ರಚಿಸುವಂತೆ ಅವನು ಪ್ರೇರಿಸಲ್ಪಟ್ಟನು. ದಾವೀದನು ರಚಿಸಿದ ಅನೇಕ ಗೀತೆಗಳು ಕೀರ್ತನೆ ಪುಸ್ತಕದಲ್ಲಿ ದಾಖಲಾಗಿವೆ. *ಕೀರ್ತನೆ 8:3, 4, 7-9 ಓದಿ.

2. (ಎ) ಸಂಗೀತವು ವ್ಯಕ್ತಿಯೊಬ್ಬನ ಮೇಲೆ ಯಾವ ಪರಿಣಾಮ ಬೀರಬಲ್ಲದು? ಉದಾಹರಣೆ ಕೊಡಿ. (ಬಿ) ಯೆಹೋವನೊಂದಿಗೆ ದಾವೀದನಿಗಿದ್ದ ಸುಸಂಬಂಧದ ಕುರಿತು ಕೀರ್ತನೆ 34:7, 8 ಹಾಗೂ 139:2-8 ನಮಗೇನನ್ನು ಕಲಿಸುತ್ತದೆ?

2 ತನ್ನ ಜೀವಿತದ ಈ ಸಮಯದಲ್ಲೇ ದಾವೀದನು ತನ್ನ ಸಂಗೀತಕಲೆಯಲ್ಲಿ ಪ್ರವೀಣತೆ ಹೊಂದಿದ್ದಿರಬೇಕು. ಅವನು ಎಷ್ಟು ಪ್ರವೀಣನಾದನೆಂದರೆ ರಾಜ ಸೌಲನ ಮುಂದೆ ಕಿನ್ನರಿ ಬಾರಿಸಲು ಅವನನ್ನು ಆಮಂತ್ರಿಸಲಾಯಿತು. (ಜ್ಞಾನೋ. 22:29) ಇಂದು ಕೂಡ ಇಂಪಾದ ಸಂಗೀತವು ಜನರಿಗೆ ಹೇಗೆ ಮುದನೀಡುತ್ತದೋ ಅಂತೆಯೇ ಪೀಡಿತನಾಗಿದ್ದ ರಾಜ ಸೌಲನಿಗೆ ದಾವೀದನು ನುಡಿಸಿದ ಸಂಗೀತವು ಉಪಶಮನ ಕೊಡುತ್ತಿತ್ತು. ದಾವೀದನು ಕಿನ್ನರಿ ಬಾರಿಸಿದಾಗಲೆಲ್ಲ ‘ಸೌಲನು ಉಪಶಮನಹೊಂದಿ ಚೆನ್ನಾಗಿರುತ್ತಿದ್ದನು.’ (1 ಸಮು. 16:23) ಈ ದೇವಭೀರು ಸಂಗೀತಗಾರ ಹಾಗೂ ಗೀತೆರಚಕನು ರಚಿಸಿದ ಗೀತೆಗಳು ಇಂದಿಗೂ ಬಹುಮೂಲ್ಯವಾಗಿವೆ. ತುಸು ಯೋಚಿಸಿ! ದಾವೀದನು ಹುಟ್ಟಿ 3,000ಕ್ಕಿಂತಲೂ ಹೆಚ್ಚು ವರ್ಷಗಳೇ ಕಳೆದರೂ ಇಂದು ಲೋಕದೆಲ್ಲೆಡೆ ಭಿನ್ನಭಿನ್ನ ಪರಿಸ್ಥಿತಿಗಳ ಕೆಳಗೆ ಜೀವಿಸುವ ಲಕ್ಷಾಂತರ ಜನರು ಸಾಂತ್ವನ, ನಿರೀಕ್ಷೆಗಾಗಿ ಯಾವಾಗಲೂ ದಾವೀದನ ಕೀರ್ತನೆಗಳನ್ನು ಓದುತ್ತಾ ಇರುತ್ತಾರೆ.—2 ಪೂರ್ವ. 7:6; ಕೀರ್ತನೆ 34:7, 8; 139:2-8 ಓದಿ; ಆಮೋ. 6:5.

ಸತ್ಯಾರಾಧನೆಯಲ್ಲಿ ಸಂಗೀತಕ್ಕಿರುವ ಗೌರವದ ಸ್ಥಾನ

3, 4. ದಾವೀದನ ದಿನಗಳಲ್ಲಿ ಪವಿತ್ರ ಸಂಗೀತವನ್ನು ನುಡಿಸಿ ಹಾಡಲು ಯಾವ ಏರ್ಪಾಡುಗಳನ್ನು ಮಾಡಲಾಗಿತ್ತು?

3 ದಾವೀದನಲ್ಲಿ ಪ್ರತಿಭೆಯಿತ್ತು. ಅವನದನ್ನು ಅತ್ಯುತ್ತಮ ವಿಧದಲ್ಲಿ ಅಂದರೆ ಯೆಹೋವನನ್ನು ಮಹಿಮೆಪಡಿಸಲು ಉಪಯೋಗಿಸಿದನು. ಇಸ್ರಾಯೇಲಿನ ರಾಜನಾದ ಬಳಿಕ ದಾವೀದನು ಗುಡಾರದ ಸೇವೆಗಳಲ್ಲಿ ಸುಮಧುರ ಸಂಗೀತವೂ ಒಳಗೂಡಿರುವಂತೆ ಏರ್ಪಡಿಸಿದನು. ಆಲಯದಲ್ಲಿ ಕೆಲಸಮಾಡುತ್ತಿದ್ದ ಎಲ್ಲ ಲೇವಿಯರಲ್ಲಿ ದಶಮಭಾಗಕ್ಕಿಂತ ಹೆಚ್ಚು ಮಂದಿ ಅಂದರೆ 4,000 ಮಂದಿಯನ್ನು ‘ವಾದ್ಯಗಳಿಂದ ಭಜಿಸುವದಕ್ಕಾಗಿ’ ನೇಮಿಸಲಾಗಿತ್ತು. ಅವರಲ್ಲಿ 288 ಮಂದಿ ‘ಯೆಹೋವಕೀರ್ತನೆಗಳನ್ನು ಕಲಿತ ಗಾಯನಪ್ರವೀಣರಾಗಿದ್ದರು.’—1 ಪೂರ್ವ. 23:3, 5; 25:7.

4 ಲೇವಿಯರು ವಾದ್ಯಗಳೊಂದಿಗೆ ಹಾಡಿದ ಗೀತೆಗಳಲ್ಲಿ ಅನೇಕ ಗೀತೆಗಳನ್ನು ದಾವೀದನೇ ರಚಿಸಿದ್ದನು. ಅವನ ಕೀರ್ತನೆಗಳನ್ನು ಹಾಡಲಾಗುತ್ತಿದ್ದಾಗ ಅಲ್ಲಿ ಉಪಸ್ಥಿತರಿದ್ದ ಇಸ್ರಾಯೇಲ್ಯರ ಮನಸ್ಸನ್ನು ಆ ಗೀತೆಗಳು ಆಳವಾಗಿ ಸ್ಪರ್ಶಿಸಿದ್ದಿರಬೇಕು. ತದನಂತರ ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತಂದಾಗ ‘ದಾವೀದನು ಲೇವಿಯರ ಪ್ರಧಾನರಿಗೆ—ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ ಕಿನ್ನರಿ ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹಧ್ವನಿಮಾಡುವದಕ್ಕಾಗಿ ನೇಮಿಸಿರಿ ಎಂದು ಆಜ್ಞಾಪಿಸಿದನು.’—1 ಪೂರ್ವ. 15:16.

5, 6. (ಎ) ದಾವೀದನ ಆಳ್ವಿಕೆಯ ಸಮಯದಲ್ಲಿ ಸಂಗೀತಕ್ಕೆ ಅಷ್ಟೊಂದು ಮಹತ್ವವನ್ನು ಏಕೆ ಕೊಡಲಾಗಿತ್ತು? (ಬಿ) ಪುರಾತನ ಇಸ್ರಾಯೇಲಿನ ಆರಾಧನೆಯಲ್ಲಿ ಸಂಗೀತಕ್ಕೆ ಪ್ರಮುಖ ಸ್ಥಾನವಿತ್ತೆಂದು ನಮಗೆ ಹೇಗೆ ಗೊತ್ತು?

5 ದಾವೀದನ ದಿನಗಳಲ್ಲಿ ಸಂಗೀತಕ್ಕೆ ಅಷ್ಟೊಂದು ಮಹತ್ವವನ್ನು ಏಕೆ ಕೊಡಲಾಗಿತ್ತು? ರಾಜನು ಒಬ್ಬ ಸಂಗೀತಗಾರನಾಗಿದ್ದ ಕಾರಣಮಾತ್ರದಿಂದಲೋ? ಇಲ್ಲ, ಅದಕ್ಕೆ ಬೇರೊಂದು ಕಾರಣವಿತ್ತು. ಅದು ಶತಮಾನಗಳ ನಂತರ ನೀತಿವಂತ ರಾಜ ಹಿಜ್ಕೀಯನು ದೇವಾಲಯದ ಸೇವೆಗಳನ್ನು ಪುನಃ ಊರ್ಜಿತಗೊಳಿಸಿದಾಗ ತಿಳಿದುಬಂತು. 2 ಪೂರ್ವಕಾಲವೃತ್ತಾಂತ 29:25ರಲ್ಲಿ ಹೀಗೆ ಹೇಳಲಾಗಿದೆ: “ಅವನು [ಹಿಜ್ಕೀಯನು] ತಾಳ ಸ್ವರಮಂಡಲ ಕಿನ್ನರಿ ಇವುಗಳಿಂದ ಭಜಿಸುವದಕ್ಕೋಸ್ಕರ ಲೇವಿಯರನ್ನು ದಾವೀದ, ರಾಜದರ್ಶಿಯಾದ ಗಾದ್‌, ಪ್ರವಾದಿಯಾದ ನಾತಾನ್‌ ಇವರ ಆಜ್ಞಾನುಸಾರವಾಗಿ ಯೆಹೋವನ ಆಲಯದಲ್ಲಿ ಇರಿಸಿದನು. ಯೆಹೋವನು ತಾನೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದನು.”

6 ಹೌದು, ಗೀತೆಗಳಿಂದ ತನ್ನನ್ನು ಸ್ತುತಿಸಬೇಕೆಂದು ಯೆಹೋವನು ತಾನೇ ಪ್ರವಾದಿಗಳ ಮೂಲಕ ತನ್ನ ಆರಾಧಕರಿಗೆ ಆಜ್ಞಾಪಿಸಿದ್ದನು. ಗೀತೆ ರಚನೆಗೆ ಮತ್ತು ಪ್ರಾಯಶಃ ಸಂಗೀತದ ಪೂರ್ವಾಭ್ಯಾಸಕ್ಕೆ ಸಾಕಷ್ಟು ಸಮಯವನ್ನು ಕೊಡಲಾಗುವಂತೆ ಲೇವಿಯರು ಮಾಡಬೇಕಿದ್ದ ಸೇವೆಗಳಿಂದ ಗಾಯಕರಾದ ಲೇವಿಯರಿಗೆ ವಿನಾಯಿತಿ ಕೂಡ ದೊರೆಯುತ್ತಿತ್ತು.—1 ಪೂರ್ವ. 9:33.

7, 8. ರಾಜ್ಯಗೀತೆಗಳನ್ನು ಹಾಡುವ ವಿಷಯದಲ್ಲಾದರೋ ಪ್ರವೀಣತೆಗಿಂತ ಯಾವುದು ಹೆಚ್ಚು ಪ್ರಾಮುಖ್ಯ?

7 ನೀವು ಒಂದುವೇಳೆ ಹೀಗನ್ನಬಹುದು: “ನನಗೆಲ್ಲಿ ಅಷ್ಟು ಸಂಗೀತ ಗೊತ್ತು? ದೇವದರ್ಶನ ಗುಡಾರದಲ್ಲಿ ಹಾಡುತ್ತಿದ್ದ ಗಾಯಕರಾದರೋ ತುಂಬ ಪ್ರವೀಣರು. ನಾನೆಲ್ಲಿ ಅವರೆಲ್ಲಿ?” ಆದರೆ ನೆನಪಿಡಿ, ಲೇವಿಕುಲದ ಗಾಯಕರೆಲ್ಲರೂ ಪ್ರವೀಣರಾಗಿರಲಿಲ್ಲ! 1 ಪೂರ್ವಕಾಲವೃತ್ತಾಂತ 25:8ಕ್ಕನುಸಾರ ಅಲ್ಲಿ ‘ಶಿಷ್ಯರೂ’ ಅಂದರೆ ಕಲಿಯುವವರೂ ಇದ್ದರು. ಇಸ್ರಾಯೇಲ್‌ ಜನಾಂಗದ ಬೇರೆ ಕುಲಗಳಲ್ಲಿ ಅತಿ ನುರಿತ ಸಂಗೀತಗಾರರು, ಗಾಯಕರು ಇದ್ದಿರಬಹುದಾದರೂ ಸಂಗೀತದ ಮೇಲ್ವಿಚಾರವನ್ನು ಯೆಹೋವನು ಲೇವಿಯರಿಗೆ ಮಾತ್ರ ವಹಿಸಿದ್ದನು ಎಂಬುದನ್ನೂ ಗಮನಿಸತಕ್ಕದ್ದು. ಆದ್ದರಿಂದ ‘ಗಾಯನಪ್ರವೀಣರೇ’ ಆಗಿದ್ದಿರಲಿ ಅಥವಾ ಕಲಿಯುತ್ತಾ ಇದ್ದ ‘ಶಿಷ್ಯರೇ’ ಆಗಿದ್ದಿರಲಿ ನಂಬಿಗಸ್ತ ಲೇವಿಯರೆಲ್ಲರು ತಮ್ಮ ನೇಮಕಗಳನ್ನು ಪೂರೈಸಲು ಪ್ರಯಾಸಪಟ್ಟರು.

8 ದಾವೀದನು ಸಂಗೀತಪ್ರೇಮಿ, ಅದರಲ್ಲಿ ಪ್ರವೀಣನೂ ಆಗಿದ್ದನು. ಆದರೆ ದೇವರು ಮುಖ್ಯವೆಂದೆಣಿಸುವುದು ನಮ್ಮ ಪ್ರವೀಣತೆಯನ್ನು ಮಾತ್ರವೊ? ಕೀರ್ತನೆ 33:3ರಲ್ಲಿ (NW) ದಾವೀದನು ಬರೆದದ್ದು: “ಉತ್ಸಾಹಧ್ವನಿಯೊಡನೆ ಬಾರಿಸಲು ಆದಷ್ಟು ಹೆಚ್ಚು ಪ್ರಯತ್ನಮಾಡಿರಿ.” ಇದರಲ್ಲಿರುವ ಸಂದೇಶವು ಅತಿ ಸ್ಪಷ್ಟ: ಯೆಹೋವನ ದೃಷ್ಟಿಯಲ್ಲಿ ಮುಖ್ಯವಾಗಿರುವುದು ಗೀತೆಗಳೊಂದಿಗೆ ಆತನನ್ನು ಸ್ತುತಿಸಲು ನಾವು ‘ಆದಷ್ಟು ಹೆಚ್ಚು ಪ್ರಯತ್ನಮಾಡುವುದೇ.’

ಸಂಗೀತ—ದಾವೀದನ ದಿನಗಳ ನಂತರ

9. ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ ಆಲಯ ಪ್ರತಿಷ್ಠಾಪನೆಗೆ ನೀವು ಹಾಜರಾಗಿದ್ದಲ್ಲಿ ಏನನ್ನು ನೋಡುತ್ತಿದ್ದಿರಿ ಹಾಗೂ ಕೇಳಿಸಿಕೊಳ್ಳುತ್ತಿದ್ದಿರಿ ಎಂಬುದನ್ನು ವರ್ಣಿಸಿ.

9 ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ ಸಂಗೀತವು ಶುದ್ಧಾರಾಧನೆಯಲ್ಲಿ ಮಹತ್ವದ ಪಾತ್ರವಹಿಸಿತು. ಆಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಪೂರ್ಣ ವಾದ್ಯವೃಂದವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ 120 ತುತೂರಿಗಳನ್ನು ಒಳಗೊಂಡ ಹಿತ್ತಾಳೆ ವಾದ್ಯಮೇಳವಿತ್ತು. (2 ಪೂರ್ವಕಾಲವೃತ್ತಾಂತ 5:12 ಓದಿ.) ಬೈಬಲ್‌ ನಮಗನ್ನುವುದು: ‘ಒಬ್ಬನೋ ಎಂಬಂತೆ ಸ್ವರವೆತ್ತಿ ಯೆಹೋವನನ್ನು ಕೀರ್ತಿಸುವದಕ್ಕಾಗಿ ತುತೂರಿ ಊದುವವರೂ [ಅವರೆಲ್ಲರೂ ಯಾಜಕರು] ಗಾಯನಮಾಡುವವರೂ ಅಲ್ಲಿ ನಿಂತಿದ್ದರು. ಯೆಹೋವನು ಒಳ್ಳೆಯವನು, ಆತನ ಕೃಪೆಯು ಶಾಶ್ವತವಾಗಿರುವದು ಎಂದು ಕೃತಜ್ಞತಾಸ್ತುತಿಮಾಡುವವರೂ ಅಲ್ಲಿದ್ದರು.’ ಆ ಉತ್ಸಾಹ ಗಾಯನವು ಕೇಳಿಸಿದೊಡನೆ “ಮೇಘವು ಯೆಹೋವನ ಆಲಯದಲ್ಲಿ ತುಂಬಿಕೊಂಡಿತು.” ಇದು ಯೆಹೋವನ ಮೆಚ್ಚಿಕೆಯನ್ನು ಸೂಚಿಸಿತು. ಆ ಎಲ್ಲ ತುತೂರಿಗಳ ಶಬ್ದದೊಂದಿಗೆ ಸಾವಿರಾರು ಗಾಯಕರು ಒಂದುಗೂಡಿ ಸ್ವರವೆತ್ತಿ ಹಾಡುವುದನ್ನು ಕೇಳುವುದು ಎಷ್ಟೊಂದು ರೋಮಾಂಚಕವೂ ಭಯಭಕ್ತಿಪ್ರೇರಕವೂ ಆಗಿದ್ದಿರಬೇಕು!—2 ಪೂರ್ವ. 5:13.

10, 11. ಆರಂಭದ ಕ್ರೈಸ್ತರು ತಮ್ಮ ಆರಾಧನೆಯಲ್ಲಿ ಸಂಗೀತವನ್ನು ಉಪಯೋಗಿಸಿದ್ದರೆಂದು ಯಾವುದು ತೋರಿಸುತ್ತದೆ?

10 ಆರಂಭದ ಕ್ರೈಸ್ತರು ಸಹ ಆರಾಧನೆಯಲ್ಲಿ ಸಂಗೀತವನ್ನು ಉಪಯೋಗಿಸುತ್ತಿದ್ದರು. ಪ್ರಥಮ ಶತಮಾನದ ಆ ಕ್ರೈಸ್ತರು ಆರಾಧನೆಗಾಗಿ ಗುಡಾರಗಳಲ್ಲಿ ಅಥವಾ ದೇವಾಲಯಗಳಲ್ಲಿ ಒಟ್ಟುಗೂಡುತ್ತಿರಲಿಲ್ಲ, ಸ್ವಂತ ಮನೆಗಳಲ್ಲಿ ಕೂಡಿಬರುತ್ತಿದ್ದರು. ಏಕೆಂದರೆ ಹಿಂಸೆ ಮತ್ತು ಇತರ ಕಾರಣಗಳಿಂದಾಗಿ ಅವರು ಆರಾಧನೆಗಾಗಿ ಒಟ್ಟುಗೂಡಲು ಪರಿಸ್ಥಿತಿಗಳು ಅಷ್ಟು ಅನುಕೂಲವಾಗಿರಲಿಲ್ಲ. ಹಾಗಿದ್ದರೂ ಆ ಕ್ರೈಸ್ತರು ಹಾಡುಗಳ ಮೂಲಕ ದೇವರನ್ನು ಸ್ತುತಿಸುತ್ತಿದ್ದರು.

11 “ಕೀರ್ತನೆಗಳಿಂದಲೂ ದೇವರ ಸ್ತುತಿಗೀತೆಗಳಿಂದಲೂ ಸೌಜನ್ಯಭರಿತವಾದ ಆಧ್ಯಾತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು . . . ಬುದ್ಧಿಹೇಳುತ್ತಾ” ಇರಿ ಎಂದು ಅಪೊಸ್ತಲ ಪೌಲನು ಕೊಲೊಸ್ಸೆಯಲ್ಲಿನ ತನ್ನ ಕ್ರೈಸ್ತ ಸಹೋದರರನ್ನು ಪ್ರೋತ್ಸಾಹಿಸಿದನು. (ಕೊಲೊ. 3:16) ಪೌಲ, ಸೀಲರನ್ನು ಸೆರೆಮನೆಗೆ ಹಾಕಿದ ಬಳಿಕವೂ ಅವರು ‘ಪ್ರಾರ್ಥನೆ ಮಾಡುತ್ತಾ ಗೀತೆಯನ್ನು ಹಾಡುವ ಮೂಲಕ ದೇವರನ್ನು ಸ್ತುತಿಸುತ್ತಾ ಇದ್ದರು.’ ಅವರ ಬಳಿ ನೋಡಿಹಾಡಲು ಗೀತೆಪುಸ್ತಕ ಇರಲಿಲ್ಲ, ಆದರೂ ಅವರು ಹಾಡಶಕ್ತರಾದರು. (ಅ. ಕಾ. 16:25) ಒಂದುವೇಳೆ ನೀವು ಸೆರೆಮನೆಗೆ ಹಾಕಲ್ಪಟ್ಟಲ್ಲಿ ಎಷ್ಟು ರಾಜ್ಯಗೀತೆಗಳನ್ನು ಜ್ಞಾಪಕದಿಂದ ಹಾಡಬಲ್ಲಿರಿ? ಕೆಲವನ್ನಾದರೂ ಹಾಡಬಲ್ಲಿರೋ?

12. ನಮ್ಮ ರಾಜ್ಯಗೀತೆಗಳಿಗೆ ನಾವು ಹೇಗೆ ಗಣ್ಯತೆ ತೋರಿಸಬಹುದು?

12 ಸಂಗೀತಕ್ಕೆ ಆರಾಧನೆಯಲ್ಲಿ ಮಹತ್ವದ ಸ್ಥಾನವಿರುವುದರಿಂದ ನಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ರಾಜ್ಯಸಂಗೀತಕ್ಕೆ ನಾನು ಯೋಗ್ಯ ಗಣ್ಯತೆ ತೋರಿಸುತ್ತೇನೋ? ಕೂಟ, ಸಮ್ಮೇಳನ ಹಾಗೂ ಅಧಿವೇಶನಗಳಲ್ಲಿ ಆರಂಭದ ಗೀತೆಯನ್ನು ಸಹೋದರ ಸಹೋದರಿಯರೊಂದಿಗೆ ಕೂಡಿಹಾಡಲು ನಾನು ತಕ್ಕ ಸಮಯದಲ್ಲಿ ಬರಲು ಪ್ರಯತ್ನಿಸುತ್ತೇನೋ? ಮತ್ತು ನಾನದನ್ನು ಭಾವಪೂರ್ಣವಾಗಿ ಹಾಡುತ್ತೇನೋ? ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾಕೂಟದ ನಡುವೆ ಅಥವಾ ಸಾರ್ವಜನಿಕ ಭಾಷಣ ಮತ್ತು ಕಾವಲಿನಬುರುಜು ಅಧ್ಯಯನದ ನಡುವೆ ಗೀತೆಗಳನ್ನು ಹಾಡುವ ಸಮಯ ಬಂದಾಗ, ಅದನ್ನು ವಿರಾಮದ ಸಮಯವೆಂದು ಅಥವಾ ಕೈಕಾಲು ಸಡಿಲಿಸುವ ಸಮಯವೆಂದು ನನ್ನ ಮಕ್ಕಳು ವೀಕ್ಷಿಸದಂತೆ ಅವರನ್ನು ಎಚ್ಚರಿಸುತ್ತೇನೋ? ಹಾಗೆ ಅವರು ಅನಾವಶ್ಯಕವಾಗಿ ಎದ್ದು ಹೊರಗೆ ಹೋಗುವುದನ್ನು ನಾನು ತಡೆಯುತ್ತೇನೋ?’ ರಾಜ್ಯಗೀತೆಗಳನ್ನು ಹಾಡುವುದು ನಮ್ಮ ಆರಾಧನೆಯ ಭಾಗವಾಗಿದೆ! ಹೌದು, ನಾವು ‘ಗಾಯನಪ್ರವೀಣರೇ’ ಆಗಿರಲಿ ಇಲ್ಲವೆ ಕಲಿಯುತ್ತಿರುವ ‘ಶಿಷ್ಯರೇ’ ಆಗಿರಲಿ ನಾವೆಲ್ಲರೂ ಸ್ವರಮೇಳಿಸಿ ಯೆಹೋವನನ್ನು ಸ್ತುತಿಸಸಾಧ್ಯವಿದೆ, ಸ್ತುತಿಸಬೇಕು ಸಹ.—2 ಕೊರಿಂಥ 8:12 ಹೋಲಿಸಿ.

ಸಮಯ ಸಂದಂತೆ ಬದಲಾಗುತ್ತಿರುವ ಅಗತ್ಯಗಳು

13, 14. ಸಭಾ ಕೂಟಗಳಲ್ಲಿ ಮನಃಪೂರ್ವಕವಾಗಿ ಹಾಡುವುದರಿಂದ ಯಾವ ಪ್ರಯೋಜನವಿದೆ? ಉದಾಹರಣೆ ಕೊಡಿ.

13 ನಮ್ಮ ರಾಜ್ಯಗೀತೆಗಳು ಅಷ್ಟೊಂದು ಮಹತ್ವದ್ದೇಕೆ ಎಂಬುದಕ್ಕೆ ಒಂದು ಕಾರಣವನ್ನು ಝಯನ್ಸ್‌ ವಾಚ್‌ ಟವರ್‌ 100ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ವಿವರಿಸಿತ್ತು. ಅದು ಅಂದದ್ದು: “ಸತ್ಯವನ್ನು ದೇವಜನರ ಹೃದಮನದೊಳಗೆ ಅಚ್ಚೊತ್ತಿಸುವ ಉತ್ತಮ ವಿಧ ಯಾವುದೆಂದರೆ ಸತ್ಯವಾಕ್ಯವನ್ನು ಹಾಡುವುದಾಗಿದೆ.” ಅನೇಕ ರಾಜ್ಯಗೀತೆಗಳ ನುಡಿಗಳು ಬೈಬಲ್‌ ಭಾಗಗಳ ಮೇಲೆ ಆಧರಿತವಾಗಿವೆ. ಆದಕಾರಣ ಕೆಲವು ಗೀತೆಗಳನ್ನಾದರೂ ನೆನಪಿಟ್ಟುಕೊಳ್ಳುವುದರಿಂದ ಬೈಬಲ್‌ ಸತ್ಯಗಳು ನಮ್ಮ ಹೃದಯದಾಳಕ್ಕೆ ಇಳಿಯುತ್ತವೆ. ಸಭೆಯಲ್ಲಿ ಹೃತ್ಪೂರ್ವಕವಾಗಿ ಹಾಡಲಾಗುವ ರಾಜ್ಯಗೀತೆಗಳು ನಮ್ಮ ಕೂಟಗಳಿಗೆ ಮೊತ್ತಮೊದಲ ಬಾರಿ ಹಾಜರಾದವರ ಮನಸ್ಸನ್ನು ಅನೇಕವೇಳೆ ಗಾಢವಾಗಿ ಪ್ರಚೋದಿಸಿವೆ.

14 ಇಸವಿ 1869ರಲ್ಲಿ ಸಿ.ಟಿ. ರಸ್ಸಲ್‌ರವರು ಒಂದು ಸಂಜೆ ಕೆಲಸದಿಂದ ಹಿಂದಿರುಗುತ್ತಿದ್ದಾಗ ತಳಮನೆಯ ಹಾಲ್‌ ಒಂದರಲ್ಲಿ ಗೀತೆ ಹಾಡುತ್ತಿದ್ದದ್ದು ಕೇಳಿಬರುತ್ತಿತ್ತು. ತಮ್ಮ ಜೀವನದ ಆ ಹಂತದಷ್ಟಕ್ಕೆ ಸಿ.ಟಿ. ರಸ್ಸಲ್‌ರವರು ತಮಗೆ ದೇವರ ಕುರಿತು ಸತ್ಯವನ್ನು ಇನ್ನು ತಿಳಿಯಲು ಸಾಧ್ಯವಿಲ್ಲವೋ ಏನೋ ಎಂದೆನಿಸಿ ನಿರಾಶೆಗೊಂಡಿದ್ದರು. ಆದ್ದರಿಂದ ಇನ್ನು ಮುಂದೆ ವ್ಯಾಪಾರದಲ್ಲೇ ಮುಳುಗಿ ಹೆಚ್ಚು ಹಣ ಸಂಪಾದಿಸೋಣ ಎಂದವರು ನಿರ್ಣಯಿಸಿದ್ದರು. ಜನರಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡಲು ಆಗದಿದ್ದರೂ ಕಡಿಮೆಪಕ್ಷ ಭೌತಿಕವಾಗಿಯಾದರೂ ನೆರವಾಗಬಹುದೆಂದು ಅವರು ನೆನಸಿದ್ದರು. ಸಹೋದರ ರಸ್ಸಲ್‌ ಧೂಳುತುಂಬಿದ ಮಸುಕಾದ ಆ ತಳಮನೆಯ ಹಾಲ್‌ ಅನ್ನು ಪ್ರವೇಶಿಸಿದಾಗ ಅಲ್ಲಿ ಧಾರ್ಮಿಕ ಕೂಟವೊಂದು ನಡೆಯುತ್ತಿರುವುದನ್ನು ಕಂಡರು, ಕೂತು ಅದನ್ನು ಆಲಿಸಿದರು. ಆ ಕೂಟದ ಬಗ್ಗೆ ಅವರು ತದನಂತರ ಬರೆದದ್ದು: “ಬೈಬಲ್‌ ದೇವಪ್ರೇರಿತವೆಂಬ ವಿಷಯದಲ್ಲಿ ನನ್ನ ನಂಬಿಕೆ ದುರ್ಬಲವಾಗುತ್ತಾ ಇದ್ದ ಆ ಸಮಯದಲ್ಲಿ ದೇವರ ಮಾರ್ಗದರ್ಶನದಿಂದ ನನ್ನ ನಂಬಿಕೆಯನ್ನು ಪುನಃ ದೃಢಮಾಡಲು ಅಲ್ಲಿ ನಾನು ಆಲಿಸಿದ ಸಂಗತಿಯೇ ಸಾಕಾಯಿತು.” ಸಹೋದರ ರಸ್ಸಲ್‌ರನ್ನು ಆ ಕೂಟಕ್ಕೆ ಮೊದಲಾಗಿ ಸೆಳೆದ ವಿಷಯವು ಗೀತೆಗಳ ಹಾಡುವಿಕೆಯೇ ಎಂಬುದನ್ನು ಗಮನಿಸಿ.

15. ಬೈಬಲಿನ ಕುರಿತ ನಮ್ಮ ತಿಳಿವಳಿಕೆಯಲ್ಲಾದ ಯಾವ ಬದಲಾವಣೆಗಳಿಂದಾಗಿ ಗೀತೆಪುಸ್ತಕವನ್ನು ಪರಿಷ್ಕರಿಸುವುದು ಸೂಕ್ತವಾಗಿತ್ತು?

15 ಸಮಯ ಸಂದಂತೆ ಬೈಬಲಿನ ಕುರಿತಾದ ನಮ್ಮ ತಿಳಿವಳಿಕೆಯಲ್ಲಿ ಪರಿಷ್ಕರಣೆಗಳನ್ನು ಮಾಡಲಾಗಿದೆ. “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ” ಎನ್ನುತ್ತದೆ ಜ್ಞಾನೋಕ್ತಿ 4:18. ಸತ್ಯದ ಬೆಳಕು ಹೆಚ್ಚುತ್ತಾ ಬಂದಂತೆ ‘ಸತ್ಯವಾಕ್ಯವನ್ನು ನಾವು ಹಾಡುವ’ ವಿಧದಲ್ಲಿ ಕೂಡ ಬದಲಾವಣೆ ಮಾಡಬೇಕಾಗುತ್ತದೆ. ಅನೇಕ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು ಕಳೆದ 25 ವರ್ಷಗಳಿಂದಲೂ ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ * ಎಂಬ ಗೀತೆಪುಸ್ತಕವನ್ನು ಸಂತೋಷದಿಂದ ಉಪಯೋಗಿಸಿದ್ದಾರೆ. ಆ ಪುಸ್ತಕವು ಪ್ರಕಾಶಿಸಲ್ಪಟ್ಟಂದಿನಿಂದ ಸಂದ ವರ್ಷಗಳಲ್ಲಿ ಹಲವಾರು ವಿಷಯಗಳ ಕುರಿತ ತಿಳಿವಳಿಕೆಯ ಬೆಳಕು ಹೆಚ್ಚುತ್ತಾ ಬಂದಿದೆ. ಮತ್ತು ನಮ್ಮ ಗೀತೆಪುಸ್ತಕದಲ್ಲಿ ಬಳಸಲಾಗಿರುವ ಕೆಲವು ಅಭಿವ್ಯಕ್ತಿಗಳು ಈಗ ಹಳೆಯದಾಗಿವೆ. ಉದಾಹರಣೆಗೆ, ನಾವು ಈಗ “ನೂತನ ವ್ಯವಸ್ಥೆ” ಎಂದು ಹೇಳುವುದಿಲ್ಲ, ಬದಲಾಗಿ “ಹೊಸ ಲೋಕ” ಅನ್ನುತ್ತೇವೆ. ಯೆಹೋವನ ನಾಮದ “ನಿರ್ದೋಷೀಕರಣ” ಎಂದು ಹೇಳುವುದಿಲ್ಲ, ಬದಲಾಗಿ “ಪವಿತ್ರೀಕರಣ” ಎಂದನ್ನುತ್ತೇವೆ. ಹೀಗೆ ಬೋಧನೆ ಸಂಬಂಧವಾದ ಬದಲಾವಣೆಗೆ ಅನುಸಾರ ನಮ್ಮ ಗೀತೆಪುಸ್ತಕವನ್ನು ಸಹ ಪರಿಷ್ಕೃತಗೊಳಿಸುವ ಅಗತ್ಯವುಂಟಾಯಿತು.

16. ಎಫೆಸ 5:19ರಲ್ಲಿರುವ ಪೌಲನ ಸಲಹೆಯನ್ನು ಪಾಲಿಸಲು ನಮ್ಮ ಹೊಸ ಗೀತೆಪುಸ್ತಕವು ಹೇಗೆ ಸಹಾಯಮಾಡುವುದು?

16 ಈ ಕಾರಣದಿಂದ ಮತ್ತು ಇತರ ಕಾರಣಗಳಿಂದಾಗಿ ಯೆಹೋವನಿಗೆ ಹಾಡಿರಿ ಎಂಬ ಹೊಸ ಗೀತೆಪುಸ್ತಕವನ್ನು ಪ್ರಕಾಶಿಸಲು ಆಡಳಿತ ಮಂಡಲಿಯು ಸಮ್ಮತಿಸಿತು. ನಮ್ಮ ಹೊಸ ಗೀತೆಪುಸ್ತಕದಲ್ಲಿ 135 ಗೀತೆಗಳಿವೆ. ಈಗ ಕಲಿಯಲು ಮೊದಲಿಗಿಂತ ಕಡಿಮೆ ಗೀತೆಗಳಿರುವುದರಿಂದ ಅವುಗಳಲ್ಲಿ ಕೆಲವನ್ನಾದರೂ ಬಾಯಿಪಾಠ ಮಾಡಲು ನಮಗೆ ಸಾಧ್ಯವಾಗಬೇಕು. ಇದು ಪೌಲನು ಎಫೆಸ 5:19ರಲ್ಲಿ (ಓದಿ) ಕೊಟ್ಟ ಸಲಹೆಗೆ ಅನುಗುಣವಾಗಿದೆ.

ಕೃತಜ್ಞತೆ ವ್ಯಕ್ತಪಡಿಸಿರಿ

17. ಸಭೆಯಲ್ಲಿ ಹಾಡಲು ನಮಗಿರುವ ಹಿಂಜರಿಕೆಯನ್ನು ಹೋಗಲಾಡಿಸಲು ಯಾವುದರ ಕುರಿತು ಯೋಚಿಸುವುದು ಸಹಾಯಕರ?

17 ಸ್ವರ ಚೆನ್ನಾಗಿಲ್ಲ ಎಂಬ ಭಯದಿಂದ ನಾವು ಕ್ರೈಸ್ತ ಕೂಟಗಳಲ್ಲಿ ಸ್ವರವೆತ್ತಿ ಹಾಡಲು ಹಿಂಜರಿಯುತ್ತೇವೋ? ಇದನ್ನು ಯೋಚಿಸಿ: ಮಾತನಾಡುವಾಗ ನಾವೆಲ್ಲರೂ “ಅನೇಕ ಬಾರಿ ಎಡವುತ್ತೇವೆ” ಎಂಬುದು ನಿಜವಲ್ಲವೆ? (ಯಾಕೋ. 3:2) ಮಾತಿನಲ್ಲಿ ನಾವು ಪರಿಪೂರ್ಣರಲ್ಲದಿದ್ದರೂ ಮನೆ ಮನೆಯ ಸೇವೆಯಲ್ಲಿ ಯೆಹೋವನನ್ನು ಸ್ತುತಿಸುವುದರಿಂದ ಅದು ನಮ್ಮನ್ನು ತಡೆಯುವುದಿಲ್ಲ. ಹೀಗಿರಲಾಗಿ, ನಮ್ಮ ಸ್ವರವು ಹೇಗೆಯೇ ಇರಲಿ, ರಾಜ್ಯಗೀತೆಗಳನ್ನು ಹಾಡಿ ದೇವರನ್ನು ಸ್ತುತಿಸುವುದರಿಂದ ಅದು ನಮ್ಮನ್ನು ತಡೆಯಬೇಕೇಕೆ? ‘ಮನುಷ್ಯರಿಗೆ ಬಾಯಿ ಕೊಟ್ಟಾತನಾದ’ ಯೆಹೋವನು ನಾವು ಸ್ವರವೆತ್ತಿ ಆತನಿಗೆ ಸ್ತುತಿಗೀತೆ ಹಾಡುವುದನ್ನು ಕೇಳುವಾಗ ಅದೆಷ್ಟು ಸಂತೋಷಿಸುವನು!—ವಿಮೋ. 4:11.

18. ಹೊಸ ಗೀತೆಗಳನ್ನು ಕಲಿಯಲಿಕ್ಕಾಗಿ ಕೆಲವು ಸಲಹೆಗಳನ್ನು ಕೊಡಿರಿ.

18ಯೆಹೋವನಿಗೆ ಹಾಡಿರಿ—ವೋಕಲ್‌ ರೆಂಡಿಷನ್ಸ್‌ * ಎಂಬ ಸಿ.ಡಿ. ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಅದರಲ್ಲಿ ಗಾಯಕವೃಂದವು ಹೊಸ ಗೀತೆಗಳನ್ನು ವಾದ್ಯಗಳೊಂದಿಗೆ ಸುಮಧುರವಾಗಿ ಹಾಡಿದೆ. ಅದರಲ್ಲಿರುವ ಸಂಗೀತವನ್ನು ಕೇಳುವಾಗ ಮನಸ್ಸು ಹರ್ಷಗೊಳ್ಳುತ್ತದೆ. ಆಗಾಗ್ಗೆ ಅದನ್ನು ಆಲಿಸುತ್ತಾ ಇರಿ. ಆಗ ಹೊಸ ಗೀತೆಗಳಲ್ಲಿ ಕಡಿಮೆಪಕ್ಷ ಕೆಲವನ್ನಾದರೂ ನೀವು ಬೇಗನೆ ಕಲಿಯುವಿರಿ. ಅನೇಕ ಗೀತೆಗಳ ನುಡಿಗಳು ಹೇಗೆ ಜೋಡಿಸಲಾಗಿವೆಯೆಂದರೆ ನೀವು ಒಂದು ಸಾಲನ್ನು ಹಾಡುವಾಗ ಮುಂದಿನ ಸಾಲಿನಲ್ಲಿ ಏನಿದೆಯೆಂದು ಬಹುಮಟ್ಟಿಗೆ ನಿಮಗೆ ತಿಳಿದುಬರುವುದು. ಆದ್ದರಿಂದ ಸಿ.ಡಿ. ಅನ್ನು ನುಡಿಸುವಾಗ ನೀವು ಸಹ ಗಾಯಕರೊಂದಿಗೆ ಸ್ವರಜೋಡಿಸಬಹುದಲ್ಲವೇ? ನೀವು ಮನೆಯಲ್ಲೇ ಗೀತೆ ಮತ್ತು ಸ್ವರವನ್ನು ಸರಿಯಾಗಿ ಕಲಿಯುವುದಾದರೆ ರಾಜ್ಯ ಸಭಾಗೃಹದಲ್ಲಿ ಹಿಂಜರಿಕೆಯಿಲ್ಲದೆ ಹೆಚ್ಚು ಆತ್ಮವಿಶ್ವಾಸದಿಂದ ಹಾಡಬಲ್ಲಿರಿ ನಿಶ್ಚಯ.

19. ರಾಜ್ಯಗೀತೆಗಳ ವಾದ್ಯವೃಂದ ಸಂಗೀತವನ್ನು ತಯಾರಿಸಲು ಯಾವ ಪರಿಶ್ರಮದ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗುತ್ತದೆ?

19 ವಿಶೇಷ ಸಮ್ಮೇಳನ, ಸರ್ಕಿಟ್‌ ಸಮ್ಮೇಳನ ಹಾಗೂ ಜಿಲ್ಲಾ ಅಧಿವೇಶನಗಳಲ್ಲಿ ಕಾರ್ಯಕ್ರಮಕ್ಕೆ ಮುಂಚೆ ನುಡಿಸಲಾಗುವ ಸಂಗೀತದ ಹಿಮ್ಮೇಳವನ್ನು ನಾವು ಆನಂದಿಸುತ್ತೇವಾದರೂ ಅದನ್ನು ಅನೇಕಸಲ ಹಗುರವಾಗಿ ತಕ್ಕೊಳ್ಳುತ್ತೇವೆ. ಆದರೆ ಅದನ್ನು ತಯಾರಿಸಲು ತುಂಬ ಪರಿಶ್ರಮ ಪಡಬೇಕಾಗುತ್ತದೆ ಎಂಬುದನ್ನು ನೆನಪಿಡಿ. ಮೊದಲು ಸಂಗೀತವನ್ನು ಆರಿಸಿಕೊಳ್ಳಲಾಗುತ್ತದೆ, ನಂತರ ವಾಚ್‌ಟವರ್‌ ಆರ್ಕೆಸ್ಟ್ರದ 64 ಮಂದಿ ಅದನ್ನು ನುಡಿಸಲಾಗುವಂತೆ ವಾದ್ಯವೃಂದಕ್ಕಾಗಿ ಸ್ವರಲಿಪಿಯನ್ನು ಜಾಗ್ರತೆಯಿಂದ ಬರೆಯುತ್ತಾರೆ. ಆಮೇಲೆ ಆ ಸ್ವರಲಿಪಿಯನ್ನು ಸಂಗೀತಗಾರರು ಅನೇಕಾನೇಕ ತಾಸುಗಳ ಕಾಲ ವಿಮರ್ಶಿಸುತ್ತಾರೆ, ಪ್ರ್ಯಾಕ್ಟಿಸ್‌ ಮಾಡುತ್ತಾರೆ. ಕೊನೆಗೆ ನ್ಯೂ ಯಾರ್ಕ್‌ನ ಪ್ಯಾಟರ್‌ಸನ್‌ನಲ್ಲಿರುವ ನಮ್ಮ ಸ್ಟುಡಿಯೋದಲ್ಲಿ ಅದನ್ನು ರೆಕಾರ್ಡ್‌ ಮಾಡಲಾಗುತ್ತದೆ. ಈ ಆರ್ಕೆಸ್ಟ್ರದಲ್ಲಿರುವ 64 ಸಹೋದರ ಸಹೋದರಿಯರಲ್ಲಿ 10 ಮಂದಿ ವಾಸಿಸುವುದು ಅಮೆರಿಕದ ಹೊರಗೆ. ಆದರೂ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗಾಗಿ ಸುಮಧುರ ಸಂಗೀತವನ್ನು ಒದಗಿಸುವುದರಲ್ಲಿ ಭಾಗಿಗಳಾಗುವುದನ್ನು ಅವರು ಸದವಕಾಶವಾಗಿ ನೋಡುತ್ತಾರೆ. ಅವರ ಪ್ರೀತಿಪರ ಪ್ರಯತ್ನಗಳಿಗಾಗಿ ನಾವು ಕೃತಜ್ಞತೆ ತೋರಿಸಬಲ್ಲೆವು. ಸಮ್ಮೇಳನ ಅಥವಾ ಅಧಿವೇಶನದ ಅಧ್ಯಕ್ಷನು ಸಂಗೀತ ಆಲಿಸುವಂತೆ ಸೂಚನೆ ನೀಡುವಾಗ ನಾವು ಕೂಡಲೆ ನಮ್ಮ ಆಸನಗಳಲ್ಲಿ ಕೂತು ನಮಗಾಗಿ ಅಷ್ಟು ಪ್ರೀತಿಯಿಂದ ತಯಾರಿಸಲಾಗಿರುವ ಆ ಸಂಗೀತವನ್ನು ಮೌನವಾಗಿ ಆಲಿಸೋಣ.

20. ನೀವೇನು ಮಾಡಲು ನಿರ್ಧರಿಸಿದ್ದೀರಿ?

20 ನಾವು ಸ್ತುತಿಗೀತೆ ಹಾಡುವುದನ್ನು ಯೆಹೋವನು ಗಮನಿಸುತ್ತಾನೆ. ಅವು ಆತನಿಗೆ ಬಹುಮೂಲ್ಯ. ನಾವು ಆರಾಧನೆಗಾಗಿ ಜೊತೆಗೂಡಿದಾಗೆಲ್ಲ ಮನತುಂಬಿ ಉತ್ಸಾಹದಿಂದ ಹಾಡುವ ಮೂಲಕ ಯೆಹೋವನ ಹೃದಯವನ್ನು ಸಂತೋಷಪಡಿಸುತ್ತೇವೆ. ಹೌದು, ನಾವು ಗಾಯನಪ್ರವೀಣರೇ ಆಗಿರಲಿ, ಗಾಯನ ಕಲಿಯುತ್ತಿರುವವರೇ ಆಗಿರಲಿ ನಾವೆಲ್ಲರೂ ಯೆಹೋವನಿಗೆ ಹಾಡೋಣ!—ಕೀರ್ತ. 104:33.

[ಪಾದಟಿಪ್ಪಣಿಗಳು]

^ ಪ್ಯಾರ. 1 ಆಸಕ್ತಿಕರವಾಗಿ, ದಾವೀದನು ಮರಣಪಟ್ಟು ಒಂದು ಸಾವಿರ ವರ್ಷಗಳು ಕಳೆದ ನಂತರ ಬೇತ್ಲೆಹೇಮಿನ ಸಮೀಪದ ಹೊಲಗಳಲ್ಲಿ ಕುರಿಕಾಯುತ್ತಿದ್ದ ಕುರುಬರಿಗೆ ದೇವದೂತರ ಸಮೂಹವೊಂದು ಮೆಸ್ಸೀಯನ ಜನನದ ಕುರಿತು ಪ್ರಕಟನೆಯನ್ನು ಮಾಡಿತು.—ಲೂಕ 2:4, 8, 13, 14.

^ ಪ್ಯಾರ. 15 ಒಟ್ಟು 225 ಗೀತೆಗಳ ಗೀತೆಪುಸ್ತಕವು 100ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿತ್ತು.

^ ಪ್ಯಾರ. 18 ಕನ್ನಡದಲ್ಲಿ ಲಭ್ಯವಿಲ್ಲ.

ನಿಮ್ಮ ಉತ್ತರವೇನು?

• ನಮ್ಮ ಆರಾಧನೆಯಲ್ಲಿ ಸಂಗೀತಕ್ಕೆ ಪ್ರಮುಖ ಸ್ಥಾನವಿದೆಯೆಂದು ಬೈಬಲ್‌ ಸಮಯದ ಯಾವ ಉದಾಹರಣೆಗಳು ತೋರಿಸುತ್ತವೆ?

ಮತ್ತಾಯ 22:37ರಲ್ಲಿರುವ ಯೇಸುವಿನ ಆಜ್ಞೆಗೂ ರಾಜ್ಯಗೀತೆಗಳನ್ನು ಮನಃಪೂರ್ವಕವಾಗಿ ಹಾಡುವುದಕ್ಕೂ ಯಾವ ಸಂಬಂಧವಿದೆ?

• ನಮ್ಮ ರಾಜ್ಯಗೀತೆಗಳಿಗಾಗಿ ಯೋಗ್ಯ ಗಣ್ಯತೆ ತೋರಿಸುವ ಕೆಲವು ವಿಧಗಳಾವುವು?

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರ]

ಗೀತೆ ಹಾಡುವ ಸಮಯದಲ್ಲಿ ನಿಮ್ಮ ಮಕ್ಕಳು ಅನಾವಶ್ಯಕವಾಗಿ ಹೊರಗೆ ಹೋಗದಂತೆ ನೀವು ತಡೆಯುತ್ತೀರೋ?

[ಪುಟ 24ರಲ್ಲಿರುವ ಚಿತ್ರ]

ನಮ್ಮ ಹೊಸ ಗೀತೆಗಳನ್ನು ನೀವು ಮನೆಯಲ್ಲಿ ಕಲಿಯುತ್ತಿದ್ದೀರೋ?