ಅಗೋ ಆ ನಾಮ—ಕಣಿವೆಯ ತಗ್ಗಿನಲ್ಲಿ!
ಅಗೋ ಆ ನಾಮ—ಕಣಿವೆಯ ತಗ್ಗಿನಲ್ಲಿ!
ಸೇಂಟ್ ಮಾರಿಸ್. ಈ ಹೆಸರು ನಿಮಗೆ ಪರಿಚಿತವೋ? ಇರಬಹುದು. ಏಕೆಂದರೆ ಇದು ಸ್ವಿಟ್ಸರ್ಲೆಂಡ್‌ನ ಎನ್‌ಗಾಡೀನ್ ಕಣಿವೆಯಲ್ಲಿರುವ ವಿಶ್ವವಿಖ್ಯಾತ ಪ್ರವಾಸಿ ತಾಣ. ಇದು ಇಟಲಿಯ ಗಡಿಪ್ರದೇಶದ ಸಮೀಪವಿರುವ ಸ್ವಿಟ್ಸರ್ಲೆಂಡಿನ ಆಗ್ನೇಯ ದಿಕ್ಕಿನಲ್ಲಿರುವ ಹಿಮಾವೃತ ಆ್ಯಲ್ಪ್ಸ್ ಪರ್ವತಗಳ ನಡುವೆ ಇದೆ. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಈ ಕಣಿವೆಯು ಎಷ್ಟೋ ವರ್ಷಗಳಿಂದ ಪ್ರವಾಸಿಗರನ್ನು ಕೈಬೀಸಿ ಕರೆದಿದೆ. ಸ್ವಿಸ್ ರಾಷ್ಟ್ರೀಯ ಉದ್ಯಾನ ಸಹ ಇರುವುದು ಇಲ್ಲಿಯೇ. ಈ ಉದ್ಯಾನದಲ್ಲಿರುವ ನಿಸರ್ಗದ ಸೊಬಗು, ಪ್ರಾಣಿ ಮತ್ತು ಸಸ್ಯಸಂಪತ್ತಿನ ವೈವಿಧ್ಯತೆ ನಮ್ಮ ಮಹಾನ್ ಸೃಷ್ಟಿಕರ್ತನಾದ ಯೆಹೋವನನ್ನು ಸ್ತುತಿಸುತ್ತವೆ. (ಕೀರ್ತ. 148:7-10) ಅದರೊಂದಿಗೆ 17ನೇ ಶತಮಾನದಲ್ಲಿನ ನಡುವಣ ಅಳಿದುಳಿದ ಸಂಸ್ಕೃತಿ ಸಹ ಅಲ್ಲಿ ಯೆಹೋವನನ್ನು ಸ್ತುತಿಸುತ್ತಿದೆ. ಹೇಗೆ?
ಈ ಕಣಿವೇ ತಗ್ಗಿನ ಅನೇಕ ಮನೆಗಳಲ್ಲಿರುವ ಅಪೂರ್ವ ಕೆತ್ತನೆಯು ನಿಮ್ಮ ಮನಸ್ಸನ್ನು ಸೆಳೆಯದೇ ಇರಲಾರದು. ಮನೇ ಮುಂಭಾಗದಲ್ಲಿ ಅಂದರೆ ಹೆಬ್ಬಾಗಿಲೇ ಮುಂತಾದವುಗಳ ಮೇಲೆ ದೇವರ ನಾಮವು ಕೆತ್ತಲ್ಪಟ್ಟಿರುವುದನ್ನು ಕಾಣುವುದೇನೂ ಇಲ್ಲಿ ಅಪರೂಪವಲ್ಲ. ದಾಟಿದ ಶತಮಾನಗಳಲ್ಲಿ ಮನೆಯ ಹೊರಗೋಡೆಗಳನ್ನು
ಕೆತ್ತನೆಯ ಬರಹಗಳಿಂದ ಅಲಂಕರಿಸುವ ಸಂಪ್ರದಾಯವಿತ್ತು. ಅವನ್ನು ಗೋಡೆಯ ಮೇಲೆ ಬಣ್ಣದಿಂದ ಬರೆದೋ, ನುಣುಪಾದ ಗಾರೆಯ ಮೇಲೆ ಕೊರೆದೋ, ಕಲ್ಲಿನ ಮೇಲೆ ಕೆತ್ತಿಯೋ ರಚಿಸಲಾಗುತ್ತಿತ್ತು. ಈ ಕೆಳಗೆ, ಬಾವರ್ ಎಂಬ ಹಳ್ಳಿಯ ಮನೆಯೊಂದರ ಚಿತ್ರವನ್ನು ನೀವು ನೋಡುತ್ತೀರಿ. ಆ ಮನೆಯ ಮುಂಭಾಗದಲ್ಲಿರುವ ಕೆತ್ತನೆಯ ಬರಹದ ಅನುವಾದ ಹೀಗಿದೆ: “ಇಸವಿ 1715. ಯೆಹೋವನೇ ಆದಿಯೂ ಯೆಹೋವನೇ ಅಂತ್ಯವೂ ಆಗಿದ್ದಾನೆ. ದೇವರಿಗೆ ಎಲ್ಲವೂ ಸಾಧ್ಯ, ಆತನಿಗೆ ಅಸಾಧ್ಯವಾದದ್ದು ಒಂದೂ ಇಲ್ಲ.” ಹೌದು, ಈ ಹಳೇ ಲಿಪಿಯು ಯೆಹೋವನ ವೈಯಕ್ತಿಕ ನಾಮವನ್ನು ಎರಡು ಸಾರಿ ನಮೂದಿಸುತ್ತದೆ.ಮಾಡೂಲೈನ್ ಎಂಬ ಹಳ್ಳಿಯಲ್ಲಿ ಇನ್ನೂ ಹಳೆಯದಾದ ಕೆತ್ತನೆಯ ಬರಹವನ್ನು ನೀವು ನೋಡಬಲ್ಲಿರಿ. ಈ ಹಳೇ ಲಿಪಿಯು ಹೇಳುವುದು: “ಕೀರ್ತನೆ 127. ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ. ಲೂಕ್ಯಸ್ ರೂಮಾಡೈಸ್. ಇಸವಿ 1654.”
ಈ ಕಣಿವೆಯಲ್ಲಿ ದೇವರ ನಾಮದ ಇಂಥ ಬಹಿರಂಗ ಪ್ರದರ್ಶನಗಳಿರುವುದೇಕೆ? ಏಕೆಂದರೆ ಹಿಂದೆ ಮತಸುಧಾರಣೆಯ ಸಮಯದಲ್ಲಿ ಬೈಬಲನ್ನು ಎನ್‌ಗಾಡೀನ್ ಕಣಿವೆಯಲ್ಲಿ ಆಡಲ್ಪಡುವ ಲ್ಯಾಟಿನ್ ಮೂಲದ ರೋಮಾಂಚ್ ಎಂಬ ಭಾಷೆಯಲ್ಲಿ ಪ್ರಕಟಿಸಲಾಗಿತ್ತು. ವಾಸ್ತವದಲ್ಲಿ ಆ ಭಾಷೆಯಲ್ಲಿ ಭಾಷಾಂತರವಾದ ಮೊದಲ ಪುಸ್ತಕವೇ ಬೈಬಲ್. ದೇವರ ವಾಕ್ಯವನ್ನು ಓದಿದ ಅನೇಕ ಸ್ಥಳೀಯ ಜನರು ಅದರಿಂದ ಪ್ರಭಾವಿತರಾಗಿ ತಮ್ಮ ಮನೆಗಳ ಹೊರಭಾಗಗಳಲ್ಲಿ ತಮ್ಮ ಹೆಸರನ್ನು ಬರೆದುದು ಮಾತ್ರವಲ್ಲ ದೇವರ ವೈಯಕ್ತಿಕ ಹೆಸರಿರುವ ಬೈಬಲ್ ವಚನಗಳನ್ನೂ ಬರೆದರು.
ಈ ಕೆತ್ತನೆಯ ಬರಹಗಳು ಮನೆಗಳ ಮೇಲೆ ಬರೆಯಲ್ಪಟ್ಟು ಶತಮಾನಗಳು ಕಳೆದರೂ ಈ ದಿನದ ತನಕವೂ ಅವು ಯೆಹೋವನ ನಾಮವನ್ನು ಪ್ರಕಟಿಸುತ್ತಾ ಆತನನ್ನು ಸ್ತುತಿಸುತ್ತಿವೆ. ಈ ಕಣಿವೆಯ ನಿವಾಸಿಗಳಿಗೆ ಹಾಗೂ ಪ್ರವಾಸಿಗಳಿಗೆ ಯೆಹೋವನ ನಾಮವಿರುವ ಅಲ್ಲಿನ ಇನ್ನೊಂದು ಕಟ್ಟಡವನ್ನು ಸಂದರ್ಶಿಸುವ ಮೂಲಕ ಆ ಮಹೋನ್ನತ ದೇವರಾದ ಯೆಹೋವನ ಕುರಿತು ಕಲಿಯಲು ಆಮಂತ್ರಣವಿದೆ. ಅದೇ ಬಾವರ್‌ನಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ.
[ಪುಟ 7ರಲ್ಲಿರುವ ಚಿತ್ರ ಕೃಪೆ]
© Stähli Rolf A/age fotostock