ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವಿವಾಹಿತ ಸ್ಥಿತಿಯನ್ನು ಆದಷ್ಟು ಹೆಚ್ಚು ಸದುಪಯೋಗಿಸಿರಿ

ಅವಿವಾಹಿತ ಸ್ಥಿತಿಯನ್ನು ಆದಷ್ಟು ಹೆಚ್ಚು ಸದುಪಯೋಗಿಸಿರಿ

ಅವಿವಾಹಿತ ಸ್ಥಿತಿಯನ್ನು ಆದಷ್ಟು ಹೆಚ್ಚು ಸದುಪಯೋಗಿಸಿರಿ

“ಇದಕ್ಕೆ ಆಸ್ಪದಮಾಡಿಕೊಳ್ಳಬಲ್ಲವನು ಆಸ್ಪದಮಾಡಿಕೊಳ್ಳಲಿ.”—ಮತ್ತಾ. 19:12.

1, 2. (ಎ) ಯೇಸು, ಪೌಲ ಮತ್ತು ಇತರರು ಅವಿವಾಹಿತ ಸ್ಥಿತಿಯನ್ನು ಹೇಗೆ ವೀಕ್ಷಿಸಿದರು? (ಬಿ) ಅವಿವಾಹಿತ ಸ್ಥಿತಿಯನ್ನು ಕೆಲವರು ವರದಾನವಾಗಿ ಪರಿಗಣಿಸದೇ ಇರಬಹುದು ಏಕೆ?

ವಿವಾಹವು ದೇವರು ಮಾನವಕುಲಕ್ಕೆ ಕೊಟ್ಟಿರುವ ಅಮೂಲ್ಯ ವರದಾನಗಳಲ್ಲಿ ಒಂದು ಎಂಬುದರಲ್ಲಿ ಸಂಶಯವೇ ಇಲ್ಲ. (ಜ್ಞಾನೋ. 19:14) ಆದರೂ ಅನೇಕ ಅವಿವಾಹಿತ ಕ್ರೈಸ್ತರು ಸಹ ಪ್ರತಿಫಲದಾಯಕ ಹಾಗೂ ಸಂತೃಪ್ತಿಕರ ಜೀವನವನ್ನು ನಡೆಸುತ್ತಾರೆ. ಮದುವೆಯಾಗದೇ ಉಳಿದ 95 ವರ್ಷದ ಹ್ಯಾರಲ್ಡ್‌ ಎಂಬ ಸಹೋದರನು ಹೇಳುವುದು: “ಇತರರೊಂದಿಗಿರುವುದು, ಅತಿಥಿಸತ್ಕಾರ ಮಾಡುವುದು ನನಗೆ ಬಲು ಇಷ್ಟ. ಒಬ್ಬಂಟಿಗನಾಗಿದ್ದರೂ ಒಂಟಿತನ ನನ್ನನ್ನು ಕಾಡುವುದಿಲ್ಲ. ನನಗೆ ಅವಿವಾಹಿತ ಸ್ಥಿತಿಯ ವರದಾನವಿದೆ ಎಂದು ನಿಜವಾಗಿ ಹೇಳಸಾಧ್ಯವಿದೆ.”

2 ವಿವಾಹವು ಒಂದು ವರದಾನ ನಿಜ. ಆದರೆ ಯೇಸು ಕ್ರಿಸ್ತ ಮತ್ತು ಅಪೊಸ್ತಲ ಪೌಲನು ಅವಿವಾಹಿತ ಸ್ಥಿತಿಯನ್ನು ಸಹ ದೇವರ ವರದಾನವೆಂದು ಸೂಚಿಸಿದರು. (ಮತ್ತಾಯ 19:11, 12; 1 ಕೊರಿಂಥ 7:7 ಓದಿ.) ಆದರೂ ಅವಿವಾಹಿತರಾಗಿ ಉಳಿಯುವ ಪ್ರತಿಯೊಬ್ಬರು ತಮ್ಮ ಸ್ವಇಷ್ಟದಿಂದಲೇ ಒಂಟಿಗರಾಗಿರುತ್ತಾರೆಂದು ಇದರರ್ಥವಲ್ಲ. ಕೆಲವೊಮ್ಮೆ ಪರಿಸ್ಥಿತಿಗಳಿಂದಾಗಿ ಯೋಗ್ಯ ಸಂಗಾತಿ ಸಿಗುವುದು ಕಷ್ಟ. ಅಥವಾ ಮದುವೆಯಾಗಿ ವರ್ಷಗಳ ನಂತರ ವಿಚ್ಛೇದನದ ಕಾರಣದಿಂದಲೋ ತಮ್ಮ ಸಂಗಾತಿ ಮರಣಪಟ್ಟದ್ದರಿಂದಲೋ ಕೆಲವರು ಅನಿರೀಕ್ಷಿತವಾಗಿ ಒಂಟಿಗರಾಗುತ್ತಾರೆ. ಹೀಗಿರಲಾಗಿ ಅವಿವಾಹಿತ ಸ್ಥಿತಿ ಒಂದು ವರದಾನವಾಗಿರುವುದು ಹೇಗೆ? ಹಾಗೂ ಒಂಟಿಗ ಕ್ರೈಸ್ತರು ತಮ್ಮ ಅವಿವಾಹಿತ ಸ್ಥಿತಿಯನ್ನು ಹೇಗೆ ಸದುಪಯೋಗಿಸಿಕೊಳ್ಳಬಲ್ಲರು?

ಒಂದು ವಿಶೇಷ ವರದಾನ

3. ಅವಿವಾಹಿತ ಕ್ರೈಸ್ತರಿಗೆ ಹೆಚ್ಚಾಗಿ ಯಾವ ಅನುಕೂಲತೆಗಳಿವೆ?

3 ಅವಿವಾಹಿತ ವ್ಯಕ್ತಿಗೆ ಹೆಚ್ಚಾಗಿ ವಿವಾಹಿತನಿಗಿಂತ ಹೆಚ್ಚು ಸಮಯ ಹಾಗೂ ಹೆಚ್ಚಿನ ವೈಯಕ್ತಿಕ ಸ್ವಾತಂತ್ರ್ಯ ಇರುತ್ತದೆ. (1 ಕೊರಿಂ. 7:32-35) ಈ ವಿಶೇಷ ಅನುಕೂಲತೆಗಳು ಅವನು ತನ್ನ ಶುಶ್ರೂಷೆಯನ್ನು ಹೆಚ್ಚಿಸಲು, ಇತರರಿಗೆ ಪ್ರೀತಿ ತೋರಿಸುವುದರಲ್ಲಿ ವಿಶಾಲಗೊಳ್ಳಲು ಹಾಗೂ ಯೆಹೋವನಿಗೆ ಆಪ್ತನಾಗಲು ಅವಕಾಶ ಕೊಡುತ್ತವೆ. ಆದುದರಿಂದ ಹಲವಾರು ಕ್ರೈಸ್ತರು ಅವಿವಾಹಿತ ಸ್ಥಿತಿಯ ಪ್ರಯೋಜನಗಳನ್ನು ಮನಗಂಡು ಕಡಿಮೆಪಕ್ಷ ಸ್ವಲ್ಪ ಸಮಯಕ್ಕಾದರೂ ಅದಕ್ಕೆ ‘ಆಸ್ಪದಮಾಡಿಕೊಳ್ಳಲು’ ನಿರ್ಧರಿಸಿದ್ದಾರೆ. ಇನ್ನಿತರರು ಅವಿವಾಹಿತರಾಗಿರಲು ಮೊದಲು ಯೋಜಿಸಿರಲಿಕ್ಕಿಲ್ಲ. ಆದರೆ ಅವರ ಸನ್ನಿವೇಶಗಳು ಬದಲಾದಾಗ ಅವರು ತಮ್ಮ ಪರಿಸ್ಥಿತಿಯ ಕುರಿತು ಪ್ರಾರ್ಥನಾಪೂರ್ವಕವಾಗಿ ಪರ್ಯಾಲೋಚಿಸಿ ಯೆಹೋವನ ಸಹಾಯದಿಂದ ತಾವು ಸಹ ಅವಿವಾಹಿತ ಸ್ಥಿತಿಯನ್ನು ಕಾಪಾಡಿಕೊಳ್ಳಲು ಹೃದಯದಲ್ಲಿ ನಿರ್ಧರಿಸಶಕ್ತರು ಎಂದು ಮನಗಂಡರು. ಹೀಗೆ ಅವರು ತಮ್ಮ ಬದಲಾದ ಪರಿಸ್ಥಿತಿಗಳನ್ನು ಸ್ವೀಕರಿಸಿ ಅವಿವಾಹಿತ ಸ್ಥಿತಿಗೆ ಆಸ್ಪದಮಾಡಿಕೊಂಡಿದ್ದಾರೆ ಅಥವಾ ಅವಿವಾಹಿತ ಸ್ಥಿತಿಯಲ್ಲೇ ಮುಂದುವರಿದಿದ್ದಾರೆ.—1 ಕೊರಿಂ. 7:37, 38.

4. ದೇವರ ಸೇವೆಯನ್ನು ತಾವು ಪೂರ್ಣತೆಯಿಂದ ಮಾಡಬಲ್ಲೆವೆಂದು ಅವಿವಾಹಿತ ಕ್ರೈಸ್ತರು ನೆನಸಬಹುದೇಕೆ?

4 ಯೆಹೋವನಿಂದಾಗಲಿ ಆತನ ಸಂಘಟನೆಯಿಂದಾಗಲಿ ಒಪ್ಪಿಗೆ ಅಥವಾ ಗಣ್ಯತೆ ಪಡೆಯಲು ಮದುವೆಯಾಗಲೇ ಬೇಕೆಂದಿಲ್ಲ ಎಂಬುದು ಅವಿವಾಹಿತ ಕ್ರೈಸ್ತರಿಗೆ ತಿಳಿದಿದೆ. ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಪ್ರೀತಿಸುತ್ತಾನೆ. (ಮತ್ತಾ. 10:29-31) ದೇವರ ಪ್ರೀತಿಯಿಂದ ನಮ್ಮನ್ನು ಯಾರೂ ಯಾವುದೂ ಅಗಲಿಸಲಾರದು. (ರೋಮ. 8:38, 39) ನಾವು ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ ದೇವರ ಸೇವೆಯನ್ನು ಪೂರ್ಣತೆಯಿಂದ ಮಾಡಬಲ್ಲೆವೆಂದು ನೆನಸಲು ನಮಗೆ ಸಕಾರಣವಿದೆ.

5. ಅವಿವಾಹಿತತನದ ಪೂರ್ಣ ಪ್ರಯೋಜನಗಳನ್ನು ಪಡೆಯಲು ಏನು ಅಗತ್ಯ?

5 ಕೆಲವರಿಗೆ ಸಂಗೀತ ಅಥವಾ ಕ್ರೀಡೆಯ ವರ ಅಥವಾ ಪ್ರತಿಭೆಯಿದೆ. ಆದರೂ ಅದನ್ನು ಪೂರ್ಣವಾಗಿ ಬೆಳೆಸಿಕೊಳ್ಳಲು ಪ್ರಯತ್ನ ಬೇಕು. ಅಂತೆಯೇ ಅವಿವಾಹಿತ ಸ್ಥಿತಿಯೆಂಬ ವರದಾನವನ್ನು ಪೂರ್ಣವಾಗಿ ಬೆಳೆಸಿಕೊಳ್ಳಲು ಸಹ ಪ್ರಯತ್ನ ಬೇಕೇ ಬೇಕು. ಹಾಗಾದರೆ ಇಂದು ಅವಿವಾಹಿತ ಕ್ರೈಸ್ತರು, ಸಹೋದರರಾಗಿರಲಿ ಸಹೋದರಿಯರಾಗಿರಲಿ ಯೌವನಸ್ಥರಾಗಿರಲಿ ಪ್ರಾಯಸ್ಥರಾಗಿರಲಿ, ಸ್ವಇಷ್ಟದಿಂದಲೊ ಪರಿಸ್ಥಿತಿಗಳಿಂದಾಗಿಯೊ ಅವಿವಾಹಿತರಾಗಿರುವವರೇ ಆಗಿರಲಿ, ಇವರೆಲ್ಲರೂ ತಮ್ಮ ಜೀವನ ಪರಿಸ್ಥಿತಿಯನ್ನು ಹೇಗೆ ಸದುಪಯೋಗಿಸಬಲ್ಲರು? ಆರಂಭದ ಕ್ರೈಸ್ತ ಸಭೆಯ ಕೆಲವು ಪ್ರೋತ್ಸಾಹದಾಯಕ ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ ಹಾಗೂ ಅದರಿಂದ ನಾವೇನು ಕಲಿಯಬಹುದೆಂದು ನೋಡೋಣ.

ಅವಿವಾಹಿತ ಯೌವನಸ್ಥರು

6, 7. (ಎ) ಫಿಲಿಪ್ಪನ ಅವಿವಾಹಿತ ಹೆಣ್ಣುಮಕ್ಕಳಿಗೆ ದೇವರ ಸೇವೆಯಲ್ಲಿ ಯಾವ ಸದವಕಾಶ ದೊರಕಿತು? (ಬಿ) ತಿಮೊಥೆಯನು ತನ್ನ ಅವಿವಾಹಿತ ವರ್ಷಗಳನ್ನು ಹೇಗೆ ಸದುಪಯೋಗಿಸಿಕೊಂಡನು? ಯೌವನದಲ್ಲಿ ದೇವರ ಸೇವೆ ಮಾಡಲು ಸಿದ್ಧಮನಸ್ಸು ತೋರಿಸಿದ್ದರಿಂದ ಅವನು ಯಾವ ಆಶೀರ್ವಾದಗಳನ್ನು ಪಡೆದನು?

6 ಸೌವಾರ್ತಿಕ ಫಿಲಿಪ್ಪನಿಗೆ ಕನ್ಯೆಯರಾದ ನಾಲ್ಕು ಮಂದಿ ಹೆಣ್ಣುಮಕ್ಕಳಿದ್ದರು. ಅವರು ತಮ್ಮ ತಂದೆಯಂತೆಯೇ ಹುರುಪಿನಿಂದ ಸುವಾರ್ತೆ ಸಾರುತ್ತಿದ್ದರು. (ಅ. ಕಾ. 21:8, 9) ಪ್ರವಾದಿಸುವುದು ಪವಿತ್ರಾತ್ಮದ ಅದ್ಭುತಕರ ವರಗಳಲ್ಲಿ ಒಂದಾಗಿತ್ತು. ಈ ಯುವತಿಯರು ಆ ವರವನ್ನು ಯೋವೇಲ 2:28, 29ರ ನೆರವೇರಿಕೆಯಲ್ಲಿ ಸದುಪಯೋಗಿಸಿದರು.

7 ಯುವಕ ತಿಮೊಥೆಯನು ಸಹ ತನ್ನ ಅವಿವಾಹಿತ ಸ್ಥಿತಿಯನ್ನು ಸದುಪಯೋಗಿಸಿಕೊಂಡನು. ಶೈಶವದಿಂದಲೇ ಅವನ ತಾಯಿ ಯೂನಿಕೆ ಹಾಗೂ ಅಜ್ಜಿ ಲೋವಿ “ಪವಿತ್ರ ಬರಹಗಳನ್ನು” ಅವನಿಗೆ ಕಲಿಸಿದ್ದರು. (2 ತಿಮೊ. 1:5; 3:14, 15) ಆದರೆ ಅವರು ಕ್ರೈಸ್ತರಾದದ್ದು ಬಹುಶಃ ಕ್ರಿ.ಶ. 47ರ ಸುಮಾರಿಗೆ ಅಂದರೆ ಪೌಲನು ಅವರ ಸ್ವಂತ ಊರಾದ ಲುಸ್ತ್ರವನ್ನು ಮೊದಲ ಬಾರಿ ಸಂದರ್ಶಿಸಿದಾಗಲೇ. ಎರಡು ವರ್ಷಗಳ ನಂತರ ಪೌಲನು ಆ ಪಟ್ಟಣವನ್ನು ಎರಡನೇ ಬಾರಿ ಸಂದರ್ಶಿಸಿದಾಗ ತಿಮೊಥೆಯನು ಪ್ರಾಯಶಃ 19-21ರ ಪ್ರಾಯದವನಾಗಿದ್ದಿರಬೇಕು. ವಯಸ್ಸಿನಲ್ಲಿ ಚಿಕ್ಕವನೂ ಸತ್ಯದಲ್ಲಿ ಹೊಸಬನೂ ಆಗಿದ್ದರೂ ಲುಸ್ತ್ರ ಮತ್ತು ನೆರೆಯ ಊರಾದ ಇಕೋನ್ಯದ ಕ್ರೈಸ್ತ ಹಿರಿಯರು ಅವನ ಕುರಿತಾಗಿ “ಒಳ್ಳೇ ಸಾಕ್ಷಿಹೇಳುತ್ತಿದ್ದರು.” (ಅ. ಕಾ. 16:1, 2) ಆದುದರಿಂದ ತಿಮೊಥೆಯನನ್ನು ಪೌಲನು ತನ್ನ ಸಂಚರಣ ಸಂಗಡಿಗನಾಗುವಂತೆ ಕರೆದನು. (1 ತಿಮೊ. 1:18; 4:14) ತಿಮೊಥೆಯನಿಗೆ ಮದುವೆಯೇ ಆಗಿರಲಿಲ್ಲ ಎಂದು ನಾವು ನಿಶ್ಚಯವಾಗಿ ಹೇಳಸಾಧ್ಯವಿಲ್ಲ. ಆದರೂ ಯುವಕನಾಗಿದ್ದ ತಿಮೊಥೆಯನು ಪೌಲನು ಕೊಟ್ಟ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದನು ಮತ್ತು ತದನಂತರ ಅನೇಕ ವರ್ಷಗಳ ಕಾಲ ಅವಿವಾಹಿತ ಮಿಷನೆರಿಯಾಗಿ ಹಾಗೂ ಮೇಲ್ವಿಚಾರಕನಾಗಿ ಸೇವೆಸಲ್ಲಿಸಿದನು ಎಂಬುದು ನಮಗೆ ತಿಳಿದಿದೆ.—ಫಿಲಿ. 2:20-22.

8. ಮಾರ್ಕನಿಗೆ ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟಲು ಯಾವುದು ಸಹಾಯಮಾಡಿತು? ಹಾಗೆ ಮಾಡಿದ್ದರಿಂದ ಅವನು ಯಾವ ಆಶೀರ್ವಾದಗಳನ್ನು ಪಡೆದನು?

8 ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹ ಯೌವನದಲ್ಲಿ ತನ್ನ ಅವಿವಾಹಿತ ವರ್ಷಗಳನ್ನು ಸದುಪಯೋಗಿಸಿಕೊಂಡನು. ಅವನು, ಅವನ ತಾಯಿ ಮರಿಯ, ಸೋದರಸಂಬಂಧಿ ಬಾರ್ನಬ ಯೆರೂಸಲೇಮ್‌ ಸಭೆಯ ಆರಂಭದ ಸದಸ್ಯರಾಗಿದ್ದರು. ಮಾರ್ಕನ ಕುಟುಂಬವು ಪ್ರಾಯಶಃ ಅನುಕೂಲಸ್ಥ ಕುಟುಂಬವಾಗಿದ್ದಿರಬೇಕು, ಏಕೆಂದರೆ ಅವರಿಗೆ ಪಟ್ಟಣದಲ್ಲಿ ಸ್ವಂತ ಮನೆ ಇತ್ತು, ಸೇವಕಿಯೂ ಇದ್ದಳು. (ಅ. ಕಾ. 12:12, 13) ಇಷ್ಟೆಲ್ಲ ಅನುಕೂಲತೆಗಳಿದ್ದರೂ ಮಾರ್ಕನು ಯುವಕನಾಗಿದ್ದಾಗ ಭೋಗಾಸಕ್ತನು ಅಥವಾ ಸ್ವಹಿತಾಸಕ್ತನು ಆಗಿರಲಿಲ್ಲ. ಇಲ್ಲವೆ ಬೇರೆಲ್ಲವನ್ನು ಬಿಟ್ಟು ಮದುವೆಯಾಗಿ ಆರಾಮದ ಕುಟುಂಬ ಜೀವನ ನಡೆಸುವುದನ್ನೂ ಅವನು ಯೋಚಿಸಲಿಲ್ಲ. ಚಿಕ್ಕ ಪ್ರಾಯದಲ್ಲಿ ಅಪೊಸ್ತಲರೊಂದಿಗಿನ ಅವನ ಸಹವಾಸವು ಮಿಷನೆರಿ ಸೇವೆ ಮಾಡುವ ಬಯಕೆಯನ್ನು ಅವನಲ್ಲಿ ಹುಟ್ಟಿಸಿದ್ದಿರಬೇಕು. ಆದುದರಿಂದ ಅವನು ಉತ್ಸಾಹದಿಂದ ಪೌಲ ಬಾರ್ನಬರೊಂದಿಗೆ ಅವರ ಮೊದಲ ಮಿಷನೆರಿ ಪ್ರಯಾಣದಲ್ಲಿ ಜೊತೆಗೂಡಿದನು ಹಾಗೂ ಅವರ ಪರಿಚಾರಕನಾಗಿ ಸೇವೆಮಾಡಿದನು. (ಅ. ಕಾ. 13:5) ನಂತರ ಅವನು ಬಾರ್ನಬನೊಂದಿಗೆ ಮಿಷನೆರಿ ಪ್ರಯಾಣ ಮಾಡಿ, ಸಮಯಾನಂತರ ಬಾಬೆಲಿನಲ್ಲಿ ಪೇತ್ರನೊಂದಿಗೂ ಸೇವೆಮಾಡಿದನು. (ಅ. ಕಾ. 15:39; 1 ಪೇತ್ರ 5:13) ಮಾರ್ಕನು ಎಷ್ಟು ಸಮಯ ಅವಿವಾಹಿತನಾಗಿ ಉಳಿದನು ಎಂಬುದು ನಮಗೆ ತಿಳಿದಿಲ್ಲ. ಆದರೆ ಇತರರ ಸೇವೆಮಾಡಲು ಹಾಗೂ ದೇವರ ಸೇವೆಯಲ್ಲಿ ಹೆಚ್ಚನ್ನು ಮಾಡಲು ಯಾವಾಗಲೂ ಸಿದ್ಧನು ಎಂಬ ಅತ್ಯುತ್ತಮ ಕೀರ್ತಿಯನ್ನು ಅವನು ಗಳಿಸಿದನು.

9, 10. ಇಂದು ಯುವ ಅವಿವಾಹಿತ ಕ್ರೈಸ್ತರಿಗೆ ತಮ್ಮ ಶುಶ್ರೂಷೆಯನ್ನು ವಿಸ್ತರಿಸಲು ಯಾವ ಅವಕಾಶಗಳಿವೆ? ಒಂದು ಉದಾಹರಣೆ ಕೊಡಿ.

9 ಇಂದು ಸಭೆಯಲ್ಲಿರುವ ಅನೇಕ ಯುವ ಜನರು ಸಹ ತಮ್ಮ ಅವಿವಾಹಿತ ವರ್ಷಗಳನ್ನು ದೇವರ ಸೇವೆಯಲ್ಲಿ ಹೆಚ್ಚೆಚ್ಚಾಗಿ ಕಳೆಯಲು ಸಂತೋಷಪಡುತ್ತಾರೆ. ಅವಿವಾಹಿತ ಸ್ಥಿತಿಯು “ಯಾವುದೇ ಅಪಕರ್ಷಣೆಯಿಲ್ಲದೆ ಸತತವಾಗಿ ಕರ್ತನ ಸೇವೆಮಾಡುವ” ಅವಕಾಶಕೊಡುತ್ತದೆ ಎಂಬುದನ್ನು ಮಾರ್ಕ ತಿಮೊಥೆಯರಂತೆ ಇವರು ಸಹ ಗಣ್ಯಮಾಡುತ್ತಾರೆ. (1 ಕೊರಿಂ. 7:35) ಅವಿವಾಹಿತರಾಗಿರುವುದು ಒಂದು ಉತ್ತಮ ಅವಕಾಶ. ಪಯನೀಯರ್‌ ಸೇವೆ, ರಾಜ್ಯ ಘೋಷಕರ ಹೆಚ್ಚು ಅಗತ್ಯವಿರುವಲ್ಲಿ ಸೇವೆ, ವಿದೇಶೀ ಭಾಷೆ ಕಲಿಯುವುದು, ರಾಜ್ಯ ಸಭಾಗೃಹ ಅಥವಾ ಬ್ರಾಂಚ್‌ ನಿರ್ಮಾಣಕಾರ್ಯದಲ್ಲಿ ನೆರವು ನೀಡುವುದು, ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗುವುದು, ಬೆತೆಲ್‌ನಲ್ಲಿ ಸೇವೆ ಮುಂತಾದ ಅನೇಕ ಸದವಕಾಶಗಳು ನಿಮ್ಮ ಮುಂದಿವೆ. ನೀವಿನ್ನೂ ಯೌವನಸ್ಥರೂ ಅವಿವಾಹಿತರೂ ಆಗಿರುವಲ್ಲಿ ನಿಮಗಿರುವ ಅವಕಾಶಗಳನ್ನು ಆದಷ್ಟು ಹೆಚ್ಚು ಸದುಪಯೋಗಿಸುತ್ತೀರೋ?

10 ಮಾರ್ಕ್‌ ಎಂಬ ಸಹೋದರನೊಬ್ಬನು ತನ್ನ ಹದಿವಯಸ್ಸಿನ ಕೊನೆಯಷ್ಟಕ್ಕೆ ಪಯನೀಯರ್‌ ಸೇವೆ ಆರಂಭಿಸಿದನು, ಶುಶ್ರೂಷಾ ತರಬೇತಿ ಶಾಲೆಯನ್ನು ಹಾಜರಾದನು, ಮಾತ್ರವಲ್ಲ ಲೋಕವ್ಯಾಪಕವಾಗಿ ಅನೇಕ ನೇಮಕಗಳಲ್ಲಿ ಸೇವೆಮಾಡಿದನು. 25 ವರ್ಷಗಳ ಪೂರ್ಣ ಸಮಯದ ಸೇವೆಯೆಡೆಗೆ ಹಿನ್ನೋಟ ಬೀರುತ್ತಾ ಅವನು ಹೇಳುವುದು: “ಸಭೆಯಲ್ಲಿರುವ ಎಲ್ಲರನ್ನು ಆಧ್ಯಾತ್ಮಿಕವಾಗಿ ಪ್ರೋತ್ಸಾಹಿಸಲು ನಾನು ಪ್ರಯತ್ನಿಸಿದ್ದೇನೆ. ಅವರೊಂದಿಗೆ ಶುಶ್ರೂಷೆಯಲ್ಲಿ ಭಾಗವಹಿಸಿದ್ದೇನೆ, ಅವರಿಗೆ ಪರಿಪಾಲನೆಯ ಭೇಟಿಗಳನ್ನು ಮಾಡಿದ್ದೇನೆ, ಅವರನ್ನು ಊಟಕ್ಕಾಗಿ ಮನೆಗೆ ಆಮಂತ್ರಿಸಿದ್ದೇನೆ, ಆಧ್ಯಾತ್ಮಿಕ ಭಕ್ತಿವೃದ್ಧಿಯನ್ನು ಮನಸ್ಸಿನಲ್ಲಿಟ್ಟು ಗೋಷ್ಠಿಗಳನ್ನೂ ಏರ್ಪಡಿಸಿದ್ದೇನೆ. ಇವೆಲ್ಲವೂ ನನಗೆ ಮಹದಾನಂದವನ್ನು ತಂದಿವೆ.” ಸಹೋದರ ಮಾರ್ಕ್‌ ಹೇಳಿದ ಮಾತುಗಳು ತೋರಿಸುವ ಪ್ರಕಾರ, ನಮಗೆ ಅತ್ಯಂತ ಮಹತ್ತಾದ ಆನಂದ ಸಿಗುವುದು ಇತರರಿಗೆ ಕೊಡುವುದರಲ್ಲೇ. ಪವಿತ್ರ ಸೇವೆಯನ್ನು ಜೀವನಪೂರ್ತಿ ಮಾಡುವದು ಇತರರಿಗೆ ಕೊಡುವ ಅನೇಕ ಅವಕಾಶಗಳನ್ನು ನಮ್ಮ ಮುಂದಿಡುತ್ತದೆ. (ಅ. ಕಾ. 20:35) ನಿಮ್ಮ ವೈಯಕ್ತಿಕ ಅಭಿರುಚಿ, ಪ್ರತಿಭೆ, ಜೀವನದ ಅನುಭವ ಯಾವುದೇ ಆಗಿರಲಿ, ಯುವ ಜನರಾದ ನಿಮಗೆ ಕರ್ತನ ಕೆಲಸವನ್ನು ಹೇರಳವಾಗಿ ಮಾಡಲಿಕ್ಕಿದೆ.—1 ಕೊರಿಂ. 15:58.

11. ಮದುವೆಯಾಗಲು ಅವಸರಪಡದೇ ಇರುವುದರ ಕೆಲವು ಪ್ರಯೋಜನಗಳಾವುವು?

11 ಹೆಚ್ಚಿನ ಯುವ ಜನರು ಕ್ರಮೇಣ ಮದುವೆಯಾಗಲು ಬಯಸುತ್ತಾರಾದರೂ ಅವರು ಮದುವೆಯಾಗಲು ಅವಸರಪಡದೇ ಇರುವುದು ಒಳ್ಳೇದು. ಯುವ ಜನರು ಕಡಿಮೆಪಕ್ಷ “ಯೌವನದ ಪರಿಪಕ್ವ ಸ್ಥಿತಿ” ಅಂದರೆ ಲೈಂಗಿಕ ಬಯಕೆಗಳು ಅತ್ಯಂತ ಪ್ರಬಲವಾಗಿರುವ ಸಮಯವನ್ನು ದಾಟುವ ವರೆಗೆ ಕಾಯುವುದು ಒಳ್ಳೇದೆಂದು ಪೌಲನು ಉತ್ತೇಜಿಸುತ್ತಾನೆ. (1 ಕೊರಿಂ. 7:36) ಸ್ವತಃ ನಿಮ್ಮನ್ನೇ ಅರ್ಥಮಾಡಿಕೊಳ್ಳಲು ಹಾಗೂ ಯೋಗ್ಯ ಸಂಗಾತಿಯನ್ನು ಆಯ್ಕೆಮಾಡಲು ಬೇಕಾದ ಜೀವನಾನುಭವವನ್ನು ಪಡಕೊಳ್ಳಲು ಸಮಯ ಬೇಕು. ಏಕೆಂದರೆ ವಿವಾಹದ ಪ್ರತಿಜ್ಞೆಯನ್ನು ಮಾಡುವುದು ಗಂಭೀರ ನಿರ್ಣಯ. ಅದು ಜೀವನಪರ್ಯಂತ ಬಾಳುವ ನಿರ್ಣಯವಾಗಿರಬೇಕು.—ಪ್ರಸಂ. 5:2-5.

ಬಾಳಲ್ಲಿ ಬರುವ ಅನಿರೀಕ್ಷಿತ ಒಂಟಿಗತನ

12. (ಎ) ವಿಧವೆ ಅನ್ನಳು ತನ್ನ ಬದಲಾದ ಸನ್ನಿವೇಶಗಳನ್ನು ಹೇಗೆ ನಿಭಾಯಿಸಿದಳು? (ಬಿ) ಆಕೆಗೆ ಯಾವ ಸದವಕಾಶ ದೊರಕಿತು?

12 ಲೂಕನ ವೃತ್ತಾಂತದಲ್ಲಿ ಹೇಳಲಾಗಿರುವ ಅನ್ನಳು ಮದುವೆಯಾದ ಏಳು ವರ್ಷಗಳಲ್ಲೇ ಆಕೆಯ ಗಂಡನು ಅನಿರೀಕ್ಷಿತವಾಗಿ ತೀರಿಕೊಂಡನು. ಆಗ ಆಕೆ ಅತೀವ ದುಃಖಕ್ಕೆ ಒಳಗಾಗಿದ್ದಿರಬೇಕು. ಅವರಿಗೆ ಮಕ್ಕಳಿದ್ದರೋ ಅಥವಾ ಆಕೆ ಮರುವಿವಾಹವಾಗಲು ಯೋಚಿಸಿದ್ದಳೋ ಎಂಬುದು ನಮಗೆ ಗೊತ್ತಿಲ್ಲ. ಆದರೆ ಆಕೆ ತನ್ನ 84 ವರ್ಷ ಪ್ರಾಯದಲ್ಲಿ ಇನ್ನೂ ವಿಧವೆಯಾಗಿದ್ದಳು ಎಂದು ಬೈಬಲ್‌ ಹೇಳುತ್ತದೆ. ಆಕೆಯ ಕುರಿತು ಬೈಬಲ್‌ ಏನನ್ನುತ್ತದೋ ಅದರಿಂದ ನಮಗೆ ತಿಳಿಯುವುದೇನೆಂದರೆ ಆಕೆಯು ತನ್ನ ಬದಲಾದ ಸನ್ನಿವೇಶಗಳನ್ನು ಯೆಹೋವನಿಗೆ ಆಪ್ತಳಾಗಲು ಸದುಪಯೋಗಿಸಿಕೊಂಡಳು. ಆಕೆ “ದೇವಾಲಯವನ್ನು ಬಿಟ್ಟುಹೋಗದೆ ಹಗಲಿರುಳು ಉಪವಾಸ ಮತ್ತು ಯಾಚನೆಗಳಿಂದ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಳು.” (ಲೂಕ 2:36, 37) ಹೀಗೆ ಆಧ್ಯಾತ್ಮಿಕ ವಿಷಯಗಳು ಆಕೆಯ ಜೀವನದಲ್ಲಿ ಪ್ರಥಮವಾಗಿದ್ದವು. ಇದಕ್ಕಾಗಿ ಅವಳು ದೃಢನಿಶ್ಚಯ ಹಾಗೂ ಪ್ರಯತ್ನ ಮಾಡಿರಬೇಕು. ಮತ್ತು ಅದಕ್ಕಾಗಿ ಆಕೆಯು ಆಶೀರ್ವಾದ ಹೊಂದಿದಳು. ಹೇಗೆಂದರೆ ಕೂಸಾಗಿದ್ದ ಯೇಸುವನ್ನು ನೋಡುವ ಸದವಕಾಶ ಆಕೆಗೆ ದೊರಕಿತು ಮಾತ್ರವಲ್ಲ ಮುಂದೆ ಮೆಸ್ಸೀಯನಾಗಿ ಅವನು ತರಲಿದ್ದ ಬಿಡುಗಡೆಯ ಕುರಿತು ಇತರರಿಗೆ ಸಾಕ್ಷಿಹೇಳುವ ಸಂದರ್ಭವೂ ದೊರಕಿತು.—ಲೂಕ 2:38.

13. (ಎ) ದೊರ್ಕಳು ಸಭೆಯಲ್ಲಿ ಸಕ್ರಿಯಳಾಗಿದ್ದಳೆಂದು ಯಾವುದು ತೋರಿಸುತ್ತದೆ? (ಬಿ) ದೊರ್ಕಳ ಒಳ್ಳೇತನ ಹಾಗೂ ದಯಾಭಾವದಿಂದಾಗಿ ಯಾವ ಪ್ರತಿಫಲ ಸಿಕ್ಕಿತು?

13 ಯೆರೂಸಲೇಮಿನ ವಾಯುವ್ಯದ ಪುರಾತನ ರೇವುಪಟ್ಟಣ ಯೊಪ್ಪದಲ್ಲಿ ತಬಿಥಾ ಅಥವಾ ದೊರ್ಕ ಎಂಬ ಹೆಸರಿನ ಸ್ತ್ರೀ ಇದ್ದಳು. ಆಕೆಯ ಪತಿಯ ಕುರಿತು ಬೈಬಲ್‌ ಏನೂ ಹೇಳುವುದಿಲ್ಲವಾದ್ದರಿಂದ ಆ ಸಮಯದಲ್ಲಿ ಆಕೆ ಅವಿವಾಹಿತಳಾಗಿದ್ದಿರಬಹುದು. “ಸತ್ಕ್ರಿಯೆಗಳಲ್ಲಿಯೂ ದಾನಧರ್ಮಗಳಲ್ಲಿಯೂ ಸದಾ ನಿರತಳಾಗಿದ್ದ” ದೊರ್ಕಳು ಕಷ್ಟದಲ್ಲಿದ್ದ ವಿಧವೆಯರಿಗೆ ಮತ್ತು ಇತರರಿಗೆ ಅನೇಕ ಅಂಗಿಗಳನ್ನು ಹೊಲಿದುಕೊಡುತ್ತಿದ್ದಳು. ಇದರಿಂದಾಗಿ ಅವರು ಅವಳನ್ನು ತುಂಬ ಪ್ರೀತಿಸಿದರು. ಆದುದರಿಂದ ದೊರ್ಕಳು ಒಮ್ಮೆಲೆ ಅಸ್ವಸ್ಥಳಾಗಿ ತೀರಿಕೊಂಡಾಗ ಇಡೀ ಸಭೆಯು ಪೇತ್ರನನ್ನು ಕರೇಕಳುಹಿಸಿ ತಮ್ಮ ಪ್ರಿಯ ಸಹೋದರಿಯನ್ನು ಪುನರುತ್ಥಾನಗೊಳಿಸುವಂತೆ ಬೇಡಿಕೊಂಡರು. ಆಕೆಯ ಪುನರುತ್ಥಾನದ ಸುದ್ದಿ ಯೊಪ್ಪದಲ್ಲೆಲ್ಲ ಹರಡಿದಾಗ ಅನೇಕರು ವಿಶ್ವಾಸಿಗಳಾದರು. (ಅ. ಕಾ. 9:36-42) ಇವರಲ್ಲಿ ಕೆಲವರಿಗೆ ಸ್ವತಃ ದೊರ್ಕಳು ತನ್ನ ಸತ್ಕ್ರಿಯೆಗಳ ಮೂಲಕ ಸಹಾಯಮಾಡಿದ್ದಿರಬಹುದು.

14. ಒಂಟಿಗ ಕ್ರೈಸ್ತರು ಯೆಹೋವನಿಗೆ ಆಪ್ತರಾಗುವಂತೆ ಯಾವುದು ಪ್ರಚೋದಿಸುತ್ತದೆ?

14 ಅನ್ನ ಮತ್ತು ದೊರ್ಕಳಂತೆ ಇಂದು ಸಹ ಸಭೆಯಲ್ಲಿ ಅನೇಕರು ತಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಏಕಾಂಗಿ ಸ್ಥಿತಿಗೆ ಬರಬಹುದು. ಕೆಲವರಿಗೆ ಯೋಗ್ಯ ವಿವಾಹಸಂಗಾತಿ ದೊರಕದೇ ಇದ್ದದರಿಂದ ಹಾಗಾಗಬಹುದು. ಇನ್ನು ಕೆಲವರು ವಿವಾಹ ವಿಚ್ಛೇದಿತರೂ ವಿಧುರ-ವಿಧವೆಯರೂ ಆಗಿರಬಹುದು. ತಮ್ಮ ಮನಸ್ಸನ್ನು ತೋಡಿಕೊಳ್ಳಲು ವಿವಾಹಸಂಗಾತಿ ಇಲ್ಲದಿರುವುದರಿಂದ ಈ ಒಂಟಿ ಕ್ರೈಸ್ತರು ಹೆಚ್ಚಾಗಿ ಯೆಹೋವನ ಮೇಲೆ ಅಧಿಕವಾಗಿ ಆತುಕೊಳ್ಳಲು ಕಲಿಯುತ್ತಾರೆ. (ಜ್ಞಾನೋ. 16:3) ಬೆತೆಲ್‌ನಲ್ಲಿ 38ಕ್ಕಿಂತಲೂ ಹೆಚ್ಚು ವರ್ಷ ಸೇವೆ ಮಾಡಿದ ಸಿಲ್ವೀಯಾ ಎಂಬ ಅವಿವಾಹಿತ ಸಹೋದರಿ ಅದನ್ನೊಂದು ಆಶೀರ್ವಾದವಾಗಿ ನೋಡುತ್ತಾಳೆ. “ನಾನು ದೃಢಮನಸ್ಕಳಾಗಿದ್ದರೂ ಕೆಲವೊಮ್ಮೆ ಬೇಸತ್ತು ಹೋಗುತ್ತೇನೆ” ಎಂದು ಒಪ್ಪಿಕೊಳ್ಳುತ್ತಾಳೆ ಆಕೆ. “‘ನನಗೂ ಉತ್ತೇಜನ ಬೇಕಲ್ಲವೇ?’ ಎಂಬ ಅನಿಸಿಕೆಯೂ ಆಗುತ್ತದೆ. ಆದರೆ ನನಗೇನು ಬೇಕು ಎಂಬುದು ನನಗಿಂತ ಉತ್ತಮವಾಗಿ ಯೆಹೋವನಿಗೆ ತಿಳಿದಿದೆ ಎಂಬ ನಂಬಿಕೆಯು ಆತನಿಗೆ ಆಪ್ತಳಾಗುವಂತೆ ಸಹಾಯಮಾಡುತ್ತದೆ. ನನಗೆ ಯಾವಾಗಲೂ ಉತ್ತೇಜನ ಸಿಕ್ಕೇಸಿಗುತ್ತದೆ, ಕೆಲವೊಮ್ಮೆ ಪೂರಾ ಅನಿರೀಕ್ಷಿತ ಮೂಲಗಳಿಂದ” ಎನ್ನುತ್ತಾಳೆ ಆ ಸಹೋದರಿ. ಯೆಹೋವನಿಗೆ ಆಪ್ತರಾದರೆ ಆತನು ಯಾವಾಗಲೂ ಅತ್ಯಂತ ಕೋಮಲವಾಗಿ ಹಾಗೂ ಪ್ರೀತಿಯಿಂದ ಸ್ಪಂದಿಸುತ್ತಾನೆ.

15. ಅವಿವಾಹಿತ ಕ್ರೈಸ್ತರು ಪ್ರೀತಿಯಲ್ಲಿ ಹೇಗೆ ‘ವಿಶಾಲಗೊಳ್ಳಬಲ್ಲರು’?

15 ಒಂಟಿಗತನವು ಪ್ರೀತಿಯಲ್ಲಿ “ವಿಶಾಲಗೊಳ್ಳಲು” ವಿಶೇಷ ಅವಕಾಶ ಕೊಡುತ್ತದೆ. (2 ಕೊರಿಂಥ 6:11-13 ಓದಿ.) ಕಳೆದ 34 ವರ್ಷ ಪೂರ್ಣ ಸಮಯದ ಸೇವೆಮಾಡಿದ ಜೊಲೀನ್‌ ಎಂಬ ಅವಿವಾಹಿತ ಸಹೋದರಿ ಹೇಳುವುದು: “ನಾನು ಕೇವಲ ನನ್ನ ಪ್ರಾಯದವರೊಂದಿಗಲ್ಲ, ಎಲ್ಲ ಪ್ರಾಯದ ಜನರೊಂದಿಗೆ ಆಪ್ತಬಂಧವನ್ನು ಬೆಸೆಯಲು ಸತತ ಪ್ರಯತ್ನ ಮಾಡಿದ್ದೇನೆ. ಅವಿವಾಹಿತ ಸ್ಥಿತಿಯು ನಾವು ಯೆಹೋವನಿಗೆ, ನಮ್ಮ ಕುಟುಂಬಕ್ಕೆ, ಸಹೋದರ ಸಹೋದರಿಯರಿಗೆ, ಮಾತ್ರವಲ್ಲ ನಮ್ಮ ನೆರೆಯವರಿಗೆ ‘ಕೊಡುವುದರಲ್ಲಿ’ ಸಂತೋಷಪಡಲು ಅವಕಾಶಕೊಡುತ್ತದೆ. ವಯಸ್ಸು ಹೆಚ್ಚಾಗುತ್ತಾ ಬಂದಂತೆ ಅವಿವಾಹಿತಳಾಗಿ ಉಳಿದದ್ದಕ್ಕಾಗಿ ಹೆಚ್ಚೆಚ್ಚು ಸಂತೋಷ ಲಭಿಸುತ್ತದೆ.” ಅವಿವಾಹಿತರು ಕೊಡುವ ನಿಸ್ವಾರ್ಥ ಬೆಂಬಲವನ್ನು ಸಭೆಯಲ್ಲಿರುವ ವೃದ್ಧರು, ಅಶಕ್ತರು, ಒಂಟಿ ಹೆತ್ತವರು, ಯೌವನಸ್ಥರು ಹಾಗೂ ಇತರರು ನಿಶ್ಚಯವಾಗಿಯೂ ಗಣ್ಯಮಾಡುತ್ತಾರೆ. ನಿಜಸಂಗತಿಯೇನೆಂದರೆ ನಾವು ಇತರರಿಗೆ ಪ್ರೀತಿ ತೋರಿಸಿದಂತೆಲ್ಲ ನಮ್ಮ ಕುರಿತು ನಮಗೆ ಒಳ್ಳೇದೆನಿಸುತ್ತದೆ. ಹಾಗಾದರೆ ನೀವೂ ಇತರರ ಕಡೆಗೆ ಪ್ರೀತಿ ತೋರಿಸುವುದರಲ್ಲಿ ‘ವಿಶಾಲಗೊಳ್ಳಸಾಧ್ಯವೋ?’

ಜೀವನಪೂರ್ತಿ ಅವಿವಾಹಿತರು

16. (ಎ) ಯೇಸು ಏಕೆ ಜೀವನಪೂರ್ತಿ ಅವಿವಾಹಿತನಾಗಿಯೇ ಉಳಿದನು? (ಬಿ) ಪೌಲನು ತನ್ನ ಒಂಟಿಗತನವನ್ನು ಹೇಗೆ ವಿವೇಕಯುತವಾಗಿ ಉಪಯೋಗಿಸಿದನು?

16 ಯೇಸು ಅವಿವಾಹಿತನಾಗಿಯೇ ಉಳಿದನು. ಅವನಿಗೆ ತನ್ನ ನೇಮಿತ ಶುಶ್ರೂಷೆಗೆ ಸಿದ್ಧತೆಮಾಡಿ ಅದನ್ನು ಪೂರ್ಣವಾಗಿ ನೆರವೇರಿಸಲಿಕ್ಕಿತ್ತು. ಅವನು ವ್ಯಾಪಕವಾಗಿ ಪ್ರಯಾಣ ಮಾಡಿದನು, ಮುಂಜಾನೆಯಿಂದ ತುಂಬ ರಾತ್ರಿಯ ತನಕ ಸೇವೆಮಾಡಿದನು. ಕೊನೆಗೆ ತನ್ನ ಜೀವವನ್ನೇ ಯಜ್ಞವಾಗಿ ಅರ್ಪಿಸಿದನು. ಅವನ ವಿಷಯದಲ್ಲಿ ಅವಿವಾಹಿತ ಸ್ಥಿತಿ ಒಂದು ಸದವಕಾಶವಾಗಿದ್ದು ನೇಮಿತ ಕೆಲಸವನ್ನೆಲ್ಲ ಮಾಡಲು ನೆರವಾಯಿತು. ಅಪೊಸ್ತಲ ಪೌಲನು ಸಾವಿರಾರು ಮೈಲಿಗಳಷ್ಟು ಪ್ರಯಾಣಿಸಿದನು, ಶುಶ್ರೂಷೆಯಲ್ಲಿ ತುಂಬ ಕಷ್ಟಗಳನ್ನು ಅನುಭವಿಸಿದನು. (2 ಕೊರಿಂ. 11:23-27) ಪೌಲನಿಗೆ ಒಂದುವೇಳೆ ವಿವಾಹವಾಗಿದ್ದಿರಬಹುದು. ಆದರೂ ಅವನು ಅಪೊಸ್ತಲನಾಗಿ ನೇಮಕ ಹೊಂದಿದಾಗ ಏಕಾಂಗಿಯಾಗಿ ಉಳಿದಿದ್ದನು ಎಂದು ತಿಳಿದುಬರುತ್ತದೆ. (1 ಕೊರಿಂ. 7:7, 8; 9:5) ಸಾಧ್ಯವಿರುವಲ್ಲೆಲ್ಲ ತಮ್ಮ ಮಾದರಿಯನ್ನು ಅನುಕರಿಸುತ್ತಾ ಶುಶ್ರೂಷೆಗೋಸ್ಕರ ಅವಿವಾಹಿತರಾಗಿ ಉಳಿಯುವಂತೆ ಯೇಸು ಮತ್ತು ಪೌಲರು ಇತರರನ್ನು ಉತ್ತೇಜಿಸಿದರು. ಆದರೂ ಕ್ರೈಸ್ತ ಶುಶ್ರೂಷಕರಿಗೆ ಅವಿವಾಹಿತ ಸ್ಥಿತಿಯನ್ನು ಕಡ್ಡಾಯಪಡಿಸಲಿಲ್ಲ.—1 ತಿಮೊ. 4:1-3.

17. ಇಂದು ಕೆಲವರು ಹೇಗೆ ಪೌಲ ಮತ್ತು ಯೇಸುವಿನ ಹೆಜ್ಜೆಜಾಡನ್ನು ಅನುಸರಿಸಿದ್ದಾರೆ? ಅಂಥ ತ್ಯಾಗ ಮಾಡುವವರನ್ನು ಯೆಹೋವನು ಗಣ್ಯಮಾಡುತ್ತಾನೆಂದು ನಾವೇಕೆ ಭರವಸೆಯಿಂದಿರಬಲ್ಲೆವು?

17 ಇಂದು ಕೆಲವರು ಅದೇರೀತಿ ಶುಶ್ರೂಷೆಯನ್ನು ಉತ್ತಮವಾಗಿ ಮುಂದುವರಿಸಲು ಅವಿವಾಹಿತರಾಗಿಯೇ ಉಳಿಯುವ ಆಯ್ಕೆಯನ್ನು ಸ್ವಇಷ್ಟದಿಂದ ಮಾಡಿದ್ದಾರೆ. ಈ ಮೊದಲು ಹೇಳಿದ ಸಹೋದರ ಹ್ಯಾರಲ್ಡ್‌ 56 ವರ್ಷಗಳ ಕಾಲ ಬೆತೆಲ್‌ ಸೇವೆಯಲ್ಲಿ ಆನಂದಿಸಿದ್ದಾರೆ. ಅವರನ್ನುವುದು: “ನಾನು ಬೆತೆಲಿನಲ್ಲಿ ಹತ್ತು ವರ್ಷದ ಸೇವೆ ಮುಗಿಸುವುದರೊಳಗೆ ಅನೇಕ ದಂಪತಿಗಳು ಅನಾರೋಗ್ಯದ ಕಾರಣ ಅಥವಾ ವೃದ್ಧ ಹೆತ್ತವರ ಆರೈಕೆ ಮಾಡಲಿರುವ ಕಾರಣ ಬೆತೆಲ್‌ ಬಿಟ್ಟುಹೋಗುವುದನ್ನು ನೋಡಿದ್ದೆನು. ನನ್ನ ಹೆತ್ತವರಿಬ್ಬರೂ ತೀರಿಕೊಂಡಿದ್ದರು. ನಾನು ಬೆತೆಲನ್ನು ಎಷ್ಟು ಪ್ರೀತಿಸಿದೆನೆಂದರೆ ಮದುವೆಮಾಡಿಕೊಂಡರೆ ಯಾವುದಾದರೂ ಕಾರಣಕ್ಕೆ ನನ್ನ ಬೆತೆಲ್‌ ಸೇವೆಯನ್ನು ಕಳಕೊಳ್ಳಬೇಕಾಗುತ್ತದೋ ಎಂದು ಯೋಚಿಸಿ ಅವಿವಾಹಿತನಾಗಿಯೇ ಉಳಿದೆ.” ದೀರ್ಘಕಾಲ ಪಯನೀಯರ್‌ ಸೇವೆಮಾಡಿದ ಮಾಗ್ರೆಟ್‌ ವರ್ಷಗಳ ಹಿಂದೆ ತದ್ರೀತಿಯಲ್ಲಿ ಹೇಳಿದ್ದು: “ನನಗೆ ಮದುವೆಯ ಅನೇಕ ಪ್ರಸ್ತಾಪಗಳು ಬಂದರೂ ಅದರ ಬಗ್ಗೆ ನಾನು ಯೋಚನೆ ಮಾಡಲಿಕ್ಕೇ ಹೋಗಲಿಲ್ಲ. ಏಕೆಂದರೆ ಅವಿವಾಹಿತ ಸ್ಥಿತಿಯು ಕೊಡುವ ಹೆಚ್ಚಿನ ಸ್ವಾತಂತ್ರ್ಯವು ಶುಶ್ರೂಷೆಯಲ್ಲಿ ನಿರತಳಾಗಿರಲು ಸಾಧ್ಯಮಾಡಿತು ಮತ್ತು ಇದು ನನಗೆ ಬಹುಸಂತೋಷ ತಂದಿದೆ.” ಸತ್ಯಾರಾಧನೆಗಾಗಿ ಇಂಥ ನಿಸ್ವಾರ್ಥ ತ್ಯಾಗಗಳನ್ನು ಮಾಡುವವರನ್ನು ಯೆಹೋವನು ಎಂದಿಗೂ ಮರೆಯನು!—ಯೆಶಾಯ 56:4, 5 ಓದಿ.

ನಿಮ್ಮ ಸನ್ನಿವೇಶವನ್ನು ಆದಷ್ಟು ಹೆಚ್ಚು ಸದುಪಯೋಗಿಸಿರಿ

18. ಒಂಟಿಗ ಕ್ರೈಸ್ತರನ್ನು ಇತರರು ಹೇಗೆ ಪ್ರೋತ್ಸಾಹಿಸಿ ಬೆಂಬಲಿಸಬಹುದು?

18 ಯೆಹೋವನ ಸೇವೆಯನ್ನು ಮಾಡಲು ತಮ್ಮಿಂದಾದದ್ದೆಲ್ಲವನ್ನು ಮಾಡುತ್ತಿರುವ ಅವಿವಾಹಿತ ಕ್ರೈಸ್ತರೆಲ್ಲರು ನಮ್ಮ ಹೃತ್ಪೂರ್ವಕ ಪ್ರಶಂಸೆ ಮತ್ತು ಪ್ರೋತ್ಸಾಹಕ್ಕೆ ಅರ್ಹರು. ಅವರಲ್ಲಿರುವ ಅತ್ಯುತ್ತಮ ಗುಣಗಳಿಗಾಗಿ ಹಾಗೂ ಸಭೆಗೆ ಅವರು ನೀಡುವ ಸಹಾಯಕ್ಕಾಗಿ ನಾವು ಅವರನ್ನು ಪ್ರೀತಿಸುತ್ತೇವೆ. ನಾವು ನಿಜವಾಗಿಯೂ ಅವರ ಆಧ್ಯಾತ್ಮಿಕ “ಅಣ್ಣತಮ್ಮಂದಿರೂ ಅಕ್ಕತಂಗಿಯರೂ ತಾಯಂದಿರೂ ಮಕ್ಕಳೂ” ಆಗುವಲ್ಲಿ ತಾವು ಒಂಟಿಗರೆಂಬ ಭಾವನೆ ಅವರಲ್ಲಿ ಎಂದಿಗೂ ಬಾರದು!—ಮಾರ್ಕ 10:28-30 ಓದಿ.

19. ನಿಮ್ಮ ಅವಿವಾಹಿತ ಸ್ಥಿತಿಯನ್ನು ಆದಷ್ಟು ಹೆಚ್ಚು ಸದುಪಯೋಗಿಸಿಕೊಳ್ಳಲು ನೀವೇನು ಮಾಡಬಲ್ಲಿರಿ?

19 ನೀವು ಒಂಟಿಗರಾಗಿರುವುದು ಸ್ವಇಚ್ಛೆಯಿಂದಾಗಲಿ ಅಥವಾ ಪರಿಸ್ಥಿತಿಗಳಿಂದಲೇ ಆಗಲಿ, ನೀವು ಸಂತೋಷಭರಿತ ಹಾಗೂ ಪ್ರತಿಫಲದಾಯಕ ಜೀವನವನ್ನು ನಡೆಸಸಾಧ್ಯ ಎಂಬುದಕ್ಕೆ ಈ ಬೈಬಲಾಧಾರಿತ ಹಾಗೂ ಆಧುನಿಕ ಉದಾಹರಣೆಗಳು ನಿಮಗೆ ಆಶ್ವಾಸನೆ ಕೊಡಲಿ. ಕೆಲವು ವರದಾನಗಳನ್ನು ನಾವು ಆತುರದಿಂದ ಎದುರುನೋಡುತ್ತೇವೆ, ಇನ್ನು ಕೆಲವು ಸಂಪೂರ್ಣವಾಗಿ ಅನಿರೀಕ್ಷಿತ. ಕೆಲವನ್ನು ತಕ್ಷಣ ಗಣ್ಯಮಾಡುತ್ತೇವೆ, ಆದರೆ ಬೇರೆಯವುಗಳ ಮೌಲ್ಯ ಕಾಲಕ್ರಮೇಣ ಮಾತ್ರ ತಿಳಿದುಬರುತ್ತದೆ. ಹೆಚ್ಚಾಗಿ ಎಲ್ಲವೂ ನಮ್ಮ ಮನೋಭಾವದ ಮೇಲೆ ಆತುಕೊಂಡಿರುತ್ತದೆ. ಹಾಗಾದರೆ ನಿಮ್ಮ ಅವಿವಾಹಿತ ಸ್ಥಿತಿಯನ್ನು ಆದಷ್ಟು ಹೆಚ್ಚು ಸದುಪಯೋಗಿಸಿಕೊಳ್ಳಲು ನೀವೇನು ಮಾಡಬಲ್ಲಿರಿ? ಯೆಹೋವ ದೇವರಿಗೆ ಆಪ್ತರಾಗಿರಿ, ದೇವರ ಸೇವೆಯನ್ನು ಹೇರಳವಾಗಿ ಮಾಡಿರಿ, ಇತರರಿಗೆ ಪ್ರೀತಿ ತೋರಿಸುವುದರಲ್ಲಿ ವಿಶಾಲಗೊಳ್ಳಿರಿ. ಅವಿವಾಹಿತ ಸ್ಥಿತಿಯನ್ನು ದೇವರ ದೃಷ್ಟಿಕೋನದಿಂದ ನೋಡುತ್ತಾ ಆ ವರದಾನವನ್ನು ವಿವೇಕಯುತವಾಗಿ ಉಪಯೋಗಿಸುವಾಗ ಅವಿವಾಹಿತ ಸ್ಥಿತಿಯು ವಿವಾಹದಂತೆಯೇ ಪ್ರತಿಫಲದಾಯಕವಾಗಿ ಇರಬಲ್ಲದು!

ನಿಮಗೆ ನೆನಪಿದೆಯೋ?

• ಅವಿವಾಹಿತ ಸ್ಥಿತಿ ಒಂದು ವರದಾನವಾಗಿದೆ ಹೇಗೆ?

• ಯೌವನದಲ್ಲಿ ಅವಿವಾಹಿತ ಸ್ಥಿತಿಯು ಒಂದು ಆಶೀರ್ವಾದವಾಗಿರಬಲ್ಲದು ಹೇಗೆ?

• ಅವಿವಾಹಿತರು ಯೆಹೋವನಿಗೆ ಆಪ್ತರಾಗಲು ಹಾಗೂ ಪ್ರೀತಿಯಲ್ಲಿ ವಿಶಾಲಗೊಳ್ಳಲು ಯಾವ ಅವಕಾಶಗಳಿವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರಗಳು]

ನಿಮಗಿರುವ ಅವಕಾಶಗಳನ್ನು ಆದಷ್ಟು ಹೆಚ್ಚು ಸದುಪಯೋಗಿಸುತ್ತೀರೊ?