ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವರದಾನವಾದ ವಿವಾಹವನ್ನು ಗೌರವಿಸಿರಿ

ದೇವರ ವರದಾನವಾದ ವಿವಾಹವನ್ನು ಗೌರವಿಸಿರಿ

ದೇವರ ವರದಾನವಾದ ವಿವಾಹವನ್ನು ಗೌರವಿಸಿರಿ

“ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.”—ಆದಿ. 2:24.

1. ಯೆಹೋವನು ನಮ್ಮ ಗೌರವಕ್ಕೆ ಅರ್ಹನೇಕೆ?

ವಿವಾಹದ ಮೂಲಕರ್ತನಾದ ಯೆಹೋವನು ನಿಶ್ಚಯವಾಗಿಯೂ ನಮ್ಮ ಗೌರವಕ್ಕೆ ಅರ್ಹನು. ನಮ್ಮ ಸೃಷ್ಟಿಕರ್ತನೂ ಪರಮಾಧಿಕಾರಿಯೂ ಸ್ವರ್ಗೀಯ ತಂದೆಯೂ ಆಗಿರುವ ಆತನನ್ನು ‘ಪ್ರತಿಯೊಂದು ಒಳ್ಳೆಯ ದಾನದ ಪ್ರತಿಯೊಂದು ಪರಿಪೂರ್ಣ ವರದ’ ದಾತನು ಎಂದು ವರ್ಣಿಸಿರುವುದು ತಕ್ಕದ್ದೇ. (ಯಾಕೋ. 1:17; ಪ್ರಕ. 4:11) ಇದು ಆತನ ಮಹಾ ಪ್ರೀತಿಯ ಅಭಿವ್ಯಕ್ತಿ. (1 ಯೋಹಾ. 4:8) ಆತನು ನಮಗೆ ಬೋಧಿಸಿದ ಎಲ್ಲವೂ, ನಮ್ಮಿಂದ ಕೇಳಿಕೊಂಡ ಎಲ್ಲವೂ, ನಮಗೆ ಕೊಟ್ಟಿರುವ ಎಲ್ಲವೂ ನಮ್ಮ ಒಳ್ಳೇದಕ್ಕಾಗಿವೆ ಮತ್ತು ನಮ್ಮ ಪ್ರಯೋಜನಕ್ಕಾಗಿವೆ.—ಯೆಶಾ. 48:17.

2. ಮೊದಲ ದಂಪತಿಗೆ ಯೆಹೋವನು ಯಾವ ಸೂಚನೆಗಳನ್ನು ಕೊಟ್ಟನು?

2 ದೇವರು ಕೊಟ್ಟಿರುವ ಈ “ಒಳ್ಳೆಯ” ವರದಾನಗಳಲ್ಲಿ ವಿವಾಹವು ಒಂದೆಂದು ಬೈಬಲ್‌ ಹೇಳುತ್ತದೆ. (ರೂತ. 1:9; 2:12) ಯೆಹೋವನು ಮೊತ್ತಮೊದಲ ವಿವಾಹವನ್ನು ನಡಿಸಿದಾಗ ದಂಪತಿಯಾದ ಆದಾಮಹವ್ವರಿಗೆ ವಿವಾಹದ ಯಶಸ್ಸಿಗೆ ಬೇಕಾದ ನಿರ್ದಿಷ್ಟ ಸೂಚನೆಗಳನ್ನು ಕೊಟ್ಟನು. (ಮತ್ತಾಯ 19:4-6 ಓದಿ.) ಅವರು ದೇವರ ಮಾರ್ಗದರ್ಶನೆಯನ್ನು ಪಾಲಿಸಿದ್ದಲ್ಲಿ ಸದಾ ಸಂತೋಷವಾಗಿರುತ್ತಿದ್ದರು. ಆದರೆ ಅವರು ಅವಿವೇಕದಿಂದ ದೇವರ ಆಜ್ಞೆಯನ್ನು ಕಡೆಗಣಿಸಿದ್ದರಿಂದ ದುಃಖಕರ ಪರಿಣಾಮಗಳನ್ನು ಅನುಭವಿಸಿದರು.—ಆದಿ. 3:6-13, 16-19, 23.

3, 4. (ಎ) ಅನೇಕರು ಇಂದು ವಿವಾಹಕ್ಕೂ ಯೆಹೋವ ದೇವರಿಗೂ ಹೇಗೆ ಅಗೌರವ ತೋರಿಸುತ್ತಿದ್ದಾರೆ? (ಬಿ) ಈ ಲೇಖನದಲ್ಲಿ ನಾವು ಯಾವ ಉದಾಹರಣೆಗಳನ್ನು ಪರಿಗಣಿಸುವೆವು?

3 ಆ ಮೊದಲ ದಂಪತಿಯಂತೆ ಇಂದು ಸಹ ಅನೇಕರು ತಮ್ಮ ದಾಂಪತ್ಯ ಜೀವನದ ನಿರ್ಣಯಗಳನ್ನು ಮಾಡುವಾಗ ಯೆಹೋವನ ಮಾರ್ಗದರ್ಶನೆಗೆ ಲಕ್ಷ್ಯವೇ ಕೊಡುವುದಿಲ್ಲ. ಕೆಲವರು ವಿವಾಹಬಂಧವನ್ನು ತಿರಸ್ಕರಿಸಿ ಮದುವೆಯಾಗದೆ ಜೊತೆಯಾಗಿ ವಾಸಿಸುತ್ತಾರೆ. ಇನ್ನಿತರರು ಮದುವೆಯ ವಿಷಯದಲ್ಲಿ ತಮ್ಮ ಸ್ವಂತ ಇಷ್ಟಗಳಿಗನುಸಾರ ನಡೆಯುತ್ತಾರೆ ಅಂದರೆ ಸಮಲಿಂಗ ವಿವಾಹಕ್ಕೆ ಎಡೆಕೊಡುತ್ತಾರೆ, ಬಳಸಿಬಿಸಾಡುವ ವಸ್ತುವಿನಂತೆ ವಿವಾಹವನ್ನು ಕ್ಷುಲ್ಲಕವಾಗಿ ವೀಕ್ಷಿಸುತ್ತಾರೆ. (ರೋಮ. 1:24-32; 2 ತಿಮೊ. 3:1-5) ವಿವಾಹವು ದೇವರ ವರದಾನವೆಂಬ ನಿಜತ್ವವನ್ನು ಅವರು ಅಸಡ್ಡೆಮಾಡುತ್ತಾರೆ. ಈ ವರದಾನವನ್ನು ಅಗೌರವಿಸುವ ಮೂಲಕ ಅದರ ದಾತನಾದ ಯೆಹೋವ ದೇವರನ್ನು ಸಹ ಅವರು ಅಗೌರವಿಸುತ್ತಾರೆ.

4 ಕೆಲವೊಮ್ಮೆ, ದೇವರ ಸೇವಕರಲ್ಲಿ ಕೆಲವರು ಸಹ ವಿವಾಹದ ಕುರಿತಾದ ಯೆಹೋವನ ದೃಷ್ಟಿಕೋನವನ್ನು ಸ್ಪಷ್ಟವಾಗಿ ನೋಡಲು ತಪ್ಪಬಹುದು. ಕೆಲವು ಕ್ರೈಸ್ತ ದಂಪತಿಗಳು ಪ್ರತ್ಯೇಕವಾಸ ಮಾಡಲು ಅಥವಾ ಬೈಬಲಾಧಾರಿತ ಕಾರಣವಿಲ್ಲದೆ ವಿಚ್ಛೇದನ ಕೊಡಲು ನಿರ್ಣಯಿಸುತ್ತಾರೆ. ಇದನ್ನು ಹೇಗೆ ತಡೆಯಬಹುದು? ಆದಿಕಾಂಡ 2:24ರಲ್ಲಿರುವ ದೇವದತ್ತ ಮಾರ್ಗದರ್ಶನವು ವಿವಾಹಿತ ಕ್ರೈಸ್ತರಿಗೆ ತಮ್ಮ ವೈವಾಹಿಕ ಬಂಧವನ್ನು ಬಲಪಡಿಸಲು ಹೇಗೆ ಸಹಾಯಮಾಡುತ್ತದೆ? ವಿವಾಹವಾಗಲು ಯೋಚಿಸುತ್ತಿರುವವರು ಹೇಗೆ ಅದಕ್ಕೆ ಸಿದ್ಧರಾಗಬಲ್ಲರು? ಬೈಬಲ್‌ ಸಮಯದಲ್ಲಿನ ಮೂರು ಯಶಸ್ವೀ ವಿವಾಹಗಳನ್ನು ಉದಾಹರಣೆಯಾಗಿ ನಾವೀಗ ಪರಿಗಣಿಸೋಣ. ಬಾಳುವ ವಿವಾಹಕ್ಕೆ ಯೆಹೋವನಿಗೆ ಗೌರವ ತೋರಿಸುವುದು ಎಷ್ಟು ಮಹತ್ವ ಎಂಬುದನ್ನು ಅವು ತೋರಿಸುತ್ತವೆ.

ನಿಷ್ಠೆಯುಳ್ಳವರಾಗಿರ್ರಿ

5, 6. ಯಾವ ಸನ್ನಿವೇಶವು ಜಕರೀಯ ಮತ್ತು ಎಲಿಸಬೇತಳನ್ನು ಪರೀಕ್ಷೆಗೆ ಒಳಪಡಿಸಿದ್ದಿರಬಹುದು? ಅವರ ನಿಷ್ಠೆಗೆ ಯಾವ ಪ್ರತಿಫಲ ದೊರಕಿತು?

5 ಜಕರೀಯ ಮತ್ತು ಎಲಿಸಬೇತ್‌ ಸರಿಯಾದ ನಿರ್ಣಯಗಳನ್ನು ಮಾಡಿದ ದಂಪತಿಯಾಗಿದ್ದರು. ಉದಾಹರಣೆಗೆ, ಅವರು ಯೆಹೋವನ ನಿಷ್ಠಾವಂತ ಸೇವಕರನ್ನೇ ತಮ್ಮ ಸಂಗಾತಿಯಾಗಿ ಆರಿಸಿಕೊಂಡಿದ್ದರು. ಜಕರೀಯನು ತನ್ನ ಯಾಜಕೋದ್ಯೋಗವನ್ನು ನಂಬಿಗಸ್ತಿಕೆಯಿಂದ ಮಾಡುತ್ತಿದ್ದನು. ಇಬ್ಬರೂ ದೇವರ ನಿಯಮಗಳನ್ನು ತಮ್ಮಿಂದಾದಷ್ಟು ಉತ್ತಮವಾಗಿ ಪಾಲಿಸಿದರು. ಯೆಹೋವನಿಗೆ ಕೃತಜ್ಞರಾಗಿರಲು ಅವರಿಗೆ ಅನೇಕ ಕಾರಣಗಳಿದ್ದವು. ಆದರೂ ಯೂದಾಯದ ಅವರ ಮನೆಗೆ ಹೋದವರಿಗೆ ಅವರ ಕುಟುಂಬದಲ್ಲಿ ಏನೋ ಒಂದು ಕೊರತೆಯಿದ್ದಂತೆ ಕಾಣುತ್ತಿತ್ತು. ಏಕೆಂದರೆ ಅವರಿಗೆ ಮಕ್ಕಳಿರಲಿಲ್ಲ. ಎಲಿಸಬೇತ್‌ ಬಂಜೆಯಾಗಿದ್ದಳು, ಅಲ್ಲದೆ ಅವರಿಬ್ಬರಿಗೂ ತುಂಬ ವಯಸ್ಸಾಗಿತ್ತು.—ಲೂಕ 1:5-7.

6 ಮಕ್ಕಳನ್ನು ಹಡೆಯುವುದನ್ನು ಪುರಾತನ ಇಸ್ರಾಯೇಲಿನಲ್ಲಿ ತುಂಬ ಘನತೆಯದ್ದಾಗಿ ಪರಿಗಣಿಸುತ್ತಿದ್ದರು, ಕುಟುಂಬಗಳು ಹೆಚ್ಚಾಗಿ ದೊಡ್ಡದಾಗಿರುತ್ತಿದ್ದವು. (1 ಸಮು. 1:2, 6, 10; ಕೀರ್ತ. 128:3, 4) ಆ ಸಮಯದಲ್ಲಿನ ಇಸ್ರಾಯೇಲ್ಯ ಪುರುಷನೊಬ್ಬನು ತನ್ನ ಪತ್ನಿ ಬಂಜೆಯಾಗಿದ್ದಲ್ಲಿ ಆಕೆಗೆ ಕುಟಿಲ ರೀತಿಯಲ್ಲಿ ವಿಚ್ಛೇದನವನ್ನು ಕೊಡುತ್ತಿದ್ದನು. ಜಕರೀಯನಾದರೋ ನಿಷ್ಠೆಯಿಂದ ಎಲಿಸಬೇತಳೊಂದಿಗೇ ಬಾಳ್ವೆ ನಡೆಸಿದನು. ಅವನಾಗಲಿ ಅವನ ಪತ್ನಿಯಾಗಲಿ ತಮ್ಮ ವಿವಾಹಬಂಧವನ್ನು ಸುಲಭವಾಗಿ ಮುರಿದುಬಿಡಲು ಯೋಚಿಸಲಿಲ್ಲ. ಮಕ್ಕಳಿಲ್ಲವೆಂಬ ಕೊರಗು ಅವರಿಗಿತ್ತಾದರೂ ಪರಸ್ಪರ ನಿಷ್ಠೆಯಿಂದಿದ್ದು ಜೊತೆಯಾಗಿ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿದರು. ಆದಕಾರಣ ಯೆಹೋವನು ಅದ್ಭುತಕರವಾಗಿ ಅವರ ಮುಪ್ಪಿನಲ್ಲಿ ಒಬ್ಬ ಮಗನು ಹುಟ್ಟುವಂತೆ ಮಾಡಿ ತಕ್ಕ ಸಮಯದಲ್ಲಿ ಅವರನ್ನು ಹೇರಳವಾಗಿ ಆಶೀರ್ವದಿಸಿದನು.—ಲೂಕ 1:8-14.

7. ಯಾವ ಇನ್ನೊಂದು ವಿಧದಲ್ಲಿ ಎಲಿಸಬೇತಳು ತನ್ನ ಪತಿಗೆ ನಿಷ್ಠೆ ತೋರಿಸಿದಳು?

7 ಎಲಿಸಬೇತ್‌ ಇನ್ನೊಂದು ವಿಧದಲ್ಲೂ ನಿಷ್ಠೆ ತೋರಿಸಿದ್ದು ಪ್ರಶಂಸನೀಯ. ಆಕೆಗೆ ಮಗ ಹುಟ್ಟಿದಾಗ ಜಕರೀಯನು ಮಾತಾಡಶಕ್ತನಾಗಿರಲಿಲ್ಲ. ಜಕರೀಯನು ದೇವರ ದೂತನ ಮಾತುಗಳನ್ನು ನಂಬದೇ ಹೋದದರಿಂದ ಅವನನ್ನು ಮೂಕನನ್ನಾಗಿ ಮಾಡಲಾಗಿತ್ತು. ಆದರೂ ಮಗುವಿಗೆ “ಯೋಹಾನ” ಎಂದು ಹೆಸರಿಡುವಂತೆ ಯೆಹೋವನ ದೂತನು ಹೇಳಿದ್ದಾನೆಂದು ಜಕರೀಯನು ಎಲಿಜಬೇತಳಿಗೆ ಹೇಗೋ ಹೇಳಿದ್ದಿರಬೇಕು. ಮಗುವಿಗೆ ತಂದೆಯ ಹೆಸರನ್ನೇ ಇಡಬೇಕೆಂಬುದು ಸಂಬಂಧಿಕರ ಹಾಗೂ ನೆರೆಯವರ ಇಚ್ಛೆಯಾಗಿತ್ತು. ಆದರೆ ಎಲಿಸಬೇತಳು ತನ್ನ ಪತಿಯ ನಿರ್ದೇಶನವನ್ನೇ ನಿಷ್ಠೆಯಿಂದ ಪಾಲಿಸಿದಳು. “ಬೇಡ, ಇವನಿಗೆ ಯೋಹಾನನೆಂದು ಹೆಸರಿಡಬೇಕು” ಎಂದು ಹೇಳಿದಳಾಕೆ.—ಲೂಕ 1:59-63.

8, 9. (ಎ) ನಿಷ್ಠೆಯು ಹೇಗೆ ವಿವಾಹಬಂಧವನ್ನು ಬಲಪಡಿಸುತ್ತದೆ? (ಬಿ) ಪತಿಪತ್ನಿಯರು ಪರಸ್ಪರ ನಿಷ್ಠೆ ತೋರಿಸಬಹುದಾದ ಕೆಲವು ನಿರ್ದಿಷ್ಟ ವಿಧಗಳಾವುವು?

8 ಜಕರೀಯ ಎಲಿಸಬೇತರಂತೆ ಇಂದಿನ ದಂಪತಿಗಳು ಸಹ ನಿರುತ್ತೇಜನ ಹಾಗೂ ಇನ್ನಿತರ ಸವಾಲುಗಳನ್ನು ಎದುರಿಸುತ್ತಾರೆ. ನಿಷ್ಠೆಯಿಲ್ಲದಿದ್ದರೆ ವಿವಾಹಜೀವನವು ಯಶಸ್ವಿಯಾಗಲಾರದು. ಚೆಲ್ಲಾಟ, ಕಾಮಪ್ರಚೋದಕ ಸಾಹಿತ್ಯ, ವ್ಯಭಿಚಾರ ಮತ್ತಿತರ ವಿಷಯಗಳು ಸುಖೀ ವಿವಾಹಕ್ಕೆ ಬೆದರಿಕೆಯೊಡ್ಡಿ ಪತಿಪತ್ನಿಯರ ನಡುವಣ ಭರವಸೆಯನ್ನು ನುಚ್ಚುನೂರಾಗಿಸುತ್ತವೆ. ಅವರ ನಡುವೆ ಭರವಸೆಯು ಮುರಿದುಹೋಗುವಾಗ ಪ್ರೀತಿಯು ಕುಂದಿಹೋಗುತ್ತದೆ. ಕೆಲವು ವಿಧಗಳಲ್ಲಿ ನಿಷ್ಠೆಯು ಕುಟುಂಬವೃತ್ತಕ್ಕೆ ಸಂರಕ್ಷಣಾ ಬೇಲಿಯಿದ್ದಂತೆ. ಅದು ಅಯೋಗ್ಯ ವ್ಯಕ್ತಿಗಳನ್ನು, ಅಪಾಯಗಳನ್ನು ತಡೆಗಟ್ಟಿ ಮನೆಯೊಳಗಣ ವ್ಯಕ್ತಿಗಳಿಗೆ ತಕ್ಕಮಟ್ಟಿಗಿನ ಸುರಕ್ಷೆಯನ್ನು ಕೊಡುತ್ತದೆ. ಹೀಗೆ ಪತಿಪತ್ನಿಯರು ಒಬ್ಬರಿಗೊಬ್ಬರು ನಿಷ್ಠೆಯುಳ್ಳವರಾಗಿರುವಾಗ ಅವರು ಮನಬಿಚ್ಚಿ ಮಾತಾಡುತ್ತಾ ಸುರಕ್ಷೆಯಿಂದ ಬಾಳುವರು. ಹೀಗೆ ಅವರ ಪ್ರೀತಿಯು ಗಾಢವಾಗುವುದು. ಹೌದು, ವಿವಾಹದಲ್ಲಿ ನಿಷ್ಠೆ ಬಹುಮುಖ್ಯ.

9 ಯೆಹೋವನು ಆದಾಮನಿಗೆ ಹೇಳಿದ್ದು: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.” (ಆದಿ. 2:24) ಇದರ ಅರ್ಥವೇನು? ಮದುವೆಯ ನಂತರ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗಿನ ಹಿಂದಣ ಸ್ನೇಹ-ಸಂಬಂಧದಲ್ಲಿ ಹೊಂದಾಣಿಕೆ ಮಾಡಬೇಕಾಗುತ್ತದೆ. ಪತಿಪತ್ನಿ ಇಬ್ಬರೂ ತಮ್ಮ ಸಮಯ ಮತ್ತು ಗಮನವನ್ನು ಪ್ರಥಮವಾಗಿ ಪರಸ್ಪರರಿಗೆ ಕೊಡುತ್ತಿರಬೇಕು. ನವದಂಪತಿಗಳು ತಮ್ಮ ಹೊಸ ಸಂಬಂಧಕ್ಕಿಂತ ಸ್ನೇಹಿತರಿಗೆ ಮತ್ತು ಬಂಧುಬಳಗಕ್ಕೆ ಹೆಚ್ಚು ಪ್ರಾಧಾನ್ಯ ಕೊಡಸಾಧ್ಯವಿಲ್ಲ. ಅಲ್ಲದೆ ಕುಟುಂಬದ ನಿರ್ಣಯಗಳಲ್ಲಿ ಅಥವಾ ಭಿನ್ನಾಭಿಪ್ರಾಯಗಳಲ್ಲಿ ಹೆತ್ತವರು ಮಧ್ಯೆಪ್ರವೇಶಿಸುವಂತೆ ಅವರು ಬಿಡಲೂಬಾರದು. ಪತಿಪತ್ನಿಯರು ಈಗ ಒಬ್ಬರಿಗೊಬ್ಬರು ಆಪ್ತರಾಗಿ ಒಗ್ಗಟ್ಟಿನಲ್ಲಿರಬೇಕು. ಇದು ದಂಪತಿಗಳಿಗೆ ದೇವರು ಕೊಟ್ಟಿರುವ ಮಾರ್ಗದರ್ಶನ.

10. ನಿಷ್ಠೆಯುಳ್ಳವರಾಗಿರಲು ವಿವಾಹ ಸಂಗಾತಿಗಳಿಗೆ ಯಾವುದು ಸಹಾಯಮಾಡುವುದು?

10 ಧಾರ್ಮಿಕವಾಗಿ ವಿಭಜಿತ ಕುಟುಂಬಗಳಲ್ಲಿಯೂ ನಿಷ್ಠೆಯು ಪ್ರತಿಫಲಗಳನ್ನು ತರುತ್ತದೆ. ಅವಿಶ್ವಾಸಿ ಪತಿಯಿರುವ ಒಬ್ಬಾಕೆ ಸಹೋದರಿ ಹೇಳಿದ್ದು: “ನನ್ನ ಗಂಡನಿಗೆ ಅಧೀನಳಾಗಿರುವುದು ಹಾಗೂ ಆಳವಾದ ಗೌರವ ತೋರಿಸುವುದು ಹೇಗೆಂದು ಕಲಿಸಿಕೊಟ್ಟದ್ದಕ್ಕಾಗಿ ನಾನು ಯೆಹೋವನಿಗೆ ಅತ್ಯಂತ ಆಭಾರಿ. ಹೀಗೆ ನಿಷ್ಠೆ ತೋರಿಸಿದ್ದರಿಂದಾಗಿ 47 ವರ್ಷಗಳ ತನಕ ಪ್ರೀತಿ ಹಾಗೂ ಗೌರವವನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಿದೆ.” (1 ಕೊರಿಂ. 7:10, 11; 1 ಪೇತ್ರ 3:1, 2) ಆದುದರಿಂದ ನಿಮ್ಮ ವಿವಾಹ ಸಂಗಾತಿಗೆ ಸುರಕ್ಷೆಯ ಅನಿಸಿಕೆಯಾಗುವಂತೆ ಮಾಡಲು ಶ್ರಮಪಡಿರಿ. ಅವನು/ಳು ಭೂಮಿಯಲ್ಲಿ ಬೇರೆಲ್ಲರಿಗಿಂತ ನಿಮಗೆ ಹೆಚ್ಚು ನೆಚ್ಚಿನವರು ಎಂದು ನಿಮ್ಮ ಮಾತುಗಳ ಹಾಗೂ ಕ್ರಿಯೆಗಳ ಮೂಲಕ ಆಶ್ವಾಸನೆ ಕೊಡಿರಿ. ಅದಕ್ಕಾಗಿ ಅವಕಾಶಗಳನ್ನು ಹುಡುಕಿರಿ. ನಿಮ್ಮಿಬ್ಬರ ಮಧ್ಯೆ ಬೇರೆ ಯಾರೊಬ್ಬರೂ ಅಥವಾ ಯಾವುದೇ ವಿಷಯವು ಬರುವಂತೆ ಬಿಡದಿರಲು ಆದಷ್ಟು ಪ್ರಯತ್ನಿಸಿರಿ. (ಜ್ಞಾನೋಕ್ತಿ 5:15-20 ಓದಿ.) 35 ವರ್ಷಗಳಿಂದಲೂ ಸುಖೀ ಸತಿಪತಿಗಳಾಗಿರುವ ರಾನ್‌ ಮತ್ತು ಜನೆಟ್‌ ಹೇಳುವುದು: “ದೇವರು ನಮ್ಮಿಂದ ಕೇಳಿಕೊಳ್ಳುವುದನ್ನು ನಿಷ್ಠೆಯಿಂದ ಮಾಡುತ್ತೇವಾದ್ದರಿಂದ ನಾವು ಸಂತೋಷಭರಿತ ಹಾಗೂ ಯಶಸ್ವೀ ವಿವಾಹಜೀವನವನ್ನು ನಡೆಸುತ್ತಿದ್ದೇವೆ.”

ಒಗ್ಗಟ್ಟು ವಿವಾಹವನ್ನು ಬಲಪಡಿಸುತ್ತದೆ

11, 12. ಅಕ್ವಿಲ ಪ್ರಿಸ್ಕಿಲ್ಲರು (ಎ) ಮನೆಯಲ್ಲಿ, (ಬಿ) ಐಹಿಕ ಕೆಲಸದಲ್ಲಿ (ಸಿ) ಕ್ರೈಸ್ತ ಶುಶ್ರೂಷೆಯಲ್ಲಿ ಹೇಗೆ ಒಬ್ಬರಿಗೊಬ್ಬರು ಸಹಕರಿಸುತ್ತಾ ಕೆಲಸಮಾಡಿದರು?

11 ಅಪೊಸ್ತಲ ಪೌಲನು ತನ್ನ ಆಪ್ತ ಸ್ನೇಹಿತರಾದ ಅಕ್ವಿಲ ಮತ್ತು ಪ್ರಿಸ್ಕಿಲ್ಲಳ ಕುರಿತು ಹೇಳಿದಾಗ ಅವರಲ್ಲಿ ಒಬ್ಬರನ್ನು ಬಿಟ್ಟು ಒಬ್ಬರನ್ನು ಬೇರೆಬೇರೆಯಾಗಿ ಹೆಸರಿಸದೆ ಯಾವಾಗಲೂ ಒಟ್ಟೊಟ್ಟಿಗೆ ಹೆಸರಿಸಿದನು. ಗಂಡಹೆಂಡತಿ “ಒಂದೇ ಶರೀರವಾಗಿರುವರು” ಎಂಬುದನ್ನು ದೇವರು ಯಾವ ಅರ್ಥದಲ್ಲಿ ಹೇಳಿದನೊ ಅದಕ್ಕೆ ಈ ಒಗ್ಗಟ್ಟಿನ ದಂಪತಿ ಒಳ್ಳೇ ಉದಾಹರಣೆ. (ಆದಿ. 2:24) ಅವರಿಬ್ಬರೂ ಯಾವಾಗಲೂ ತಮ್ಮ ಮನೆಯಲ್ಲಿ, ಐಹಿಕ ಕೆಲಸದಲ್ಲಿ, ಕ್ರೈಸ್ತ ಶುಶ್ರೂಷೆಯಲ್ಲಿ ಜೊತೆಯಾಗಿ ದುಡಿದರು. ಉದಾಹರಣೆಗಾಗಿ ಪೌಲನು ಮೊದಲ ಬಾರಿಗೆ ಕೊರಿಂಥಕ್ಕೆ ಬಂದಾಗ ಅಕ್ವಿಲ ಪ್ರಿಸ್ಕಿಲ್ಲರಿಬ್ಬರೂ ಅವನನ್ನು ಪ್ರೀತಿಯಿಂದ ತಮ್ಮ ಮನೆಗೆ ಆಮಂತ್ರಿಸಿದರು. ತದನಂತರ ಪೌಲನು ಸ್ವಲ್ಪ ಸಮಯ ಅಲ್ಲಿದ್ದುಕೊಂಡೇ ತನ್ನೆಲ್ಲಾ ಸೇವಾಚಟುವಟಿಕೆಗಳನ್ನು ನಡೆಸುತ್ತಿದ್ದನು. ನಂತರ ಅಕ್ವಿಲ ಪ್ರಿಸ್ಕಿಲ್ಲರು ಎಫೆಸಕ್ಕೆ ಹೋದಾಗ ಅಲ್ಲಿಯೂ ತಮ್ಮ ಮನೆಯನ್ನು ಸಭಾಕೂಟಗಳನ್ನು ನಡೆಸಲು ಬಳಸಿದರು. ಅಪೊಲ್ಲೋಸನಂಥ ಕೆಲವು ಹೊಸಬರಿಗೆ ಆಧ್ಯಾತ್ಮಿಕವಾಗಿ ಹೆಚ್ಚು ಬೆಳೆಯಲು ಅವರು ಸಹಾಯಮಾಡುತ್ತಾ ಜೊತೆಗೂಡಿ ಕೆಲಸಮಾಡುತ್ತಿದ್ದರು. (ಅ. ಕಾ. 18:2, 18-26) ಈ ಹುರುಪಿನ ದಂಪತಿ ನಂತರ ರೋಮಿಗೆ ಸ್ಥಳಾಂತರಿಸಿದರು. ಅಲ್ಲಿಯೂ ಸಭಾಕೂಟಗಳಿಗಾಗಿ ಪುನಃ ತಮ್ಮ ಮನೆಯನ್ನು ಉಪಯೋಗಿಸಿದರು. ತದನಂತರ ಪುನಃ ಎಫೆಸಕ್ಕೆ ಹಿಂತಿರುಗಿ ಸಹೋದರರನ್ನು ಬಲಪಡಿಸಿದರು.—ರೋಮ. 16:3-5.

12 ಅಕ್ವಿಲ ಪ್ರಿಸ್ಕಿಲ್ಲರು ಡೇರೆಮಾಡುವ ಕೆಲಸದಲ್ಲಿ ಸ್ವಲ್ಪ ಸಮಯ ಪೌಲನೊಂದಿಗೆ ಜೊತೆಗೂಡಿದರು. ಡೇರೆಮಾಡುವುದು ಈ ಮೂವರ ವೃತ್ತಿಯಾಗಿತ್ತು. ಈ ಐಹಿಕ ಕೆಲಸದಲ್ಲೂ ಆ ದಂಪತಿ ಜೊತೆಯಾಗಿದ್ದರು. ಅವರ ಮಧ್ಯೆ ಯಾವುದೇ ಜಗಳ ಪೈಪೋಟಿಯಿರಲಿಲ್ಲ, ಪರಸ್ಪರ ಸಹಕರಿಸಿದರು. (ಅ. ಕಾ. 18:3) ನಿಜವಾಗಿಯೂ, ಅವರು ಕ್ರೈಸ್ತ ಚಟುವಟಿಕೆಗಳಲ್ಲಿ ಜೊತೆಯಾಗಿ ಸಮಯ ಕಳೆದದ್ದೇ ಆಧ್ಯಾತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನಕೊಡುವಂತೆಯೂ ಸುಖೀಸಂಸಾರವನ್ನು ನಡೆಸುವಂತೆಯೂ ಸಹಾಯಮಾಡಿತು. ಕೊರಿಂಥ, ಎಫೆಸ ಮತ್ತು ರೋಮಿನಲ್ಲಿ ಅವರು ‘ಕ್ರಿಸ್ತ ಯೇಸುವಿನಲ್ಲಿ ಜೊತೆ ಕೆಲಸಗಾರರೆಂದೇ’ ಪ್ರಸಿದ್ಧರಾಗಿದ್ದರು. (ರೋಮ. 16:3) ಅವರು ಸೇವೆಮಾಡಿದ ಎಲ್ಲೆಡೆಯೂ ರಾಜ್ಯ ಸಾರುವ ಕೆಲಸದ ಅಭಿವೃದ್ಧಿಗಾಗಿ ಒಟ್ಟೊಟ್ಟಿಗೆ ಕೂಡಿ ದುಡಿದರು.

13, 14. (ಎ) ಯಾವ ಪರಿಸ್ಥಿತಿಗಳು ವಿವಾಹದ ಒಗ್ಗಟ್ಟಿನಲ್ಲಿ ಒಡಕನ್ನು ತರಬಲ್ಲವು? (ಬಿ) “ಒಂದೇ ಶರೀರವಾಗಿರುವ” ವಿವಾಹಬಂಧವನ್ನು ಬಲಗೊಳಿಸಲು ವಿವಾಹದಂಪತಿ ಮಾಡಬಲ್ಲ ಕೆಲವು ವಿಷಯಗಳು ಯಾವುವು?

13 ಗುರಿಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ಇಬ್ಬರೂ ಏಕತೆಯಿಂದಿರುವುದು ವಿವಾಹಬಂಧವನ್ನು ಬಲವಾಗಿರಿಸುತ್ತದೆ. (ಪ್ರಸಂ. 4:9, 10) ಆದರೆ ಇಂದು ಅನೇಕ ದಂಪತಿಗಳು ಒಬ್ಬರಿಗೊಬ್ಬರು ಸಮಯಕೊಡುವುದು ಅತಿ ವಿರಳ. ಅವರು ಹೆಚ್ಚಿನ ಸಮಯ ಬೇರೆ ಬೇರೆ ಐಹಿಕ ಕೆಲಸಗಳಲ್ಲಿ ಕಾರ್ಯಮಗ್ನರಾಗಿರುತ್ತಾರೆ. ಇನ್ನು ಕೆಲವರು ಕೆಲಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ ಅಥವಾ ಒಬ್ಬರೇ ವಿದೇಶಕ್ಕೆ ಹೋಗಿ ಕೆಲಸಮಾಡುತ್ತಾ ಮನೆಗೆ ಹಣವನ್ನು ಕಳುಹಿಸುತ್ತಿರುತ್ತಾರೆ. ಬೇರೆ ಕೆಲವರು ಮನೆಯಲ್ಲಿದ್ದರೂ ತಮ್ಮಷ್ಟಕ್ಕೆ ತಾವೇ ಟಿವಿ, ಹವ್ಯಾಸಗಳು, ಆಟೋಟ, ವಿಡಿಯೋ ಗೇಮ್ಸ್‌ ಅಥವಾ ಇಂಟರ್‌ನೆಟ್‌ಗಳಿಗೇ ಸಮಯಕೊಡುತ್ತಾ ಸಂಗಾತಿಗಾಗಿ ಏನೂ ಸಮಯಕೊಡದೇ ಇದ್ದಾರೆ. ನಿಮ್ಮ ಮನೆಯ ಕಥೆಯೂ ಇದೇಯೊ? ಹೌದಾದಲ್ಲಿ, ಒಬ್ಬರಿಗೊಬ್ಬರು ಹೆಚ್ಚು ಸಮಯ ಕೊಡಲಾಗುವಂತೆ ನಿಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಳ್ಳಸಾಧ್ಯವೊ? ಅಡಿಗೆಮಾಡುವುದು, ಪಾತ್ರೆ ತೊಳೆಯುವುದು, ತೋಟದ ಕೆಲಸ ಮುಂತಾದ ದಿನನಿತ್ಯದ ಕೆಲಸಗಳನ್ನು ನೀವು ಜೊತೆಗೂಡಿ ಮಾಡಬಹುದಲ್ಲವೆ? ನಿಮ್ಮ ಮಕ್ಕಳ ಅಥವಾ ವೃದ್ಧ ಹೆತ್ತವರ ಆರೈಕೆಮಾಡುವುದರಲ್ಲೂ ಇಬ್ಬರೂ ಜೊತೆಗೂಡಬಹುದಲ್ಲವೇ?

14 ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಆರಾಧನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಜೊತೆಯಾಗಿ ಕೆಲಸಮಾಡುವ ರೂಢಿ ಮಾಡಿಕೊಳ್ಳಿ. ದಿನದ ವಚನವನ್ನು ಒಟ್ಟಾಗಿ ಚರ್ಚಿಸುವುದು, ಒಟ್ಟಾಗಿ ಕುಟುಂಬ ಆರಾಧನೆಯನ್ನು ಮಾಡುವುದು ನಿಮ್ಮ ಕುಟುಂಬದ ಯೋಚನಾಧಾಟಿ ಹಾಗೂ ಗುರಿಗಳನ್ನು ಸರಿಹೊಂದಿಸಲು ಅತ್ಯುತ್ತಮ ಅವಕಾಶಗಳನ್ನು ಕೊಡುತ್ತವೆ. ಅಲ್ಲದೆ ಶುಶ್ರೂಷೆಯಲ್ಲೂ ಒಟ್ಟಾಗಿ ಭಾಗವಹಿಸಿರಿ. ಸಾಧ್ಯವಾದಲ್ಲಿ ಜೊತೆಯಾಗಿ ಪಯನೀಯರ್‌ ಸೇವೆಮಾಡಲೂ ಪ್ರಯತ್ನಿಸಿ. ನಿಮ್ಮ ಪರಿಸ್ಥಿತಿಗಳಿಂದಾಗಿ ಕೇವಲ ಒಂದೇ ತಿಂಗಳು ಅಥವಾ ಒಂದು ವರ್ಷವಾದರೂ ಸರಿಯೇ, ಒಟ್ಟಾಗಿ ಪಯನೀಯರ್‌ ಸೇವೆಮಾಡಿ. (1 ಕೊರಿಂಥ 15:58 ಓದಿ.) ತನ್ನ ಪತಿಯೊಂದಿಗೆ ಪಯನೀಯರ್‌ ಸೇವೆ ಮಾಡಿದ ಒಬ್ಬ ಸಹೋದರಿ ಹೇಳುವುದು: “ಶುಶ್ರೂಷೆಯು ಒಟ್ಟಾಗಿ ಸಮಯಕಳೆಯಲು ಹಾಗೂ ಮನಬಿಚ್ಚಿ ಮಾತಾಡಲು ಒಂದು ಸಂದರ್ಭ ಕೊಡುತ್ತಿತ್ತು. ಇತರರಿಗೆ ಆಧ್ಯಾತ್ಮಿಕ ನೆರವು ನೀಡುವುದು ನಮ್ಮಿಬ್ಬರ ಗುರಿಯಾಗಿದ್ದರಿಂದ ನಾವು ಶುಶ್ರೂಷೆಯಲ್ಲಿ ಒಳ್ಳೇ ಜೊತೆಗಾರರಾಗಿದ್ದೆವು. ನಾನು ನನ್ನ ಪತಿಗೆ ಇನ್ನೂ ಹೆಚ್ಚು ಆಪ್ತಳಾದೆ. ಅವರು ನನಗೆ ಕೇವಲ ಪತಿ ಮಾತ್ರವಲ್ಲ, ಒಳ್ಳೇ ಸ್ನೇಹಿತರೂ ಆದರು.” ಸಾರ್ಥಕ ಗುರಿಗಳನ್ನು ಒಟ್ಟಾಗಿ ಬೆನ್ನಟ್ಟುವಾಗ ನಿಮ್ಮ ಮತ್ತು ನಿಮ್ಮ ಸಂಗಾತಿಯ ಅಭಿರುಚಿಗಳು, ಆದ್ಯತೆಗಳು, ಹವ್ಯಾಸಗಳು ಕಾಲಕ್ರಮೇಣ ಸಾಮರಸ್ಯಗೊಂಡು ನೀವು ಸಹ ಅಕ್ವಿಲ ಪ್ರಿಸ್ಕಿಲ್ಲರಂತೆ ಒಂದೇ ರೀತಿಯ ಆಲೋಚನೆ, ಭಾವನೆ, ಕ್ರಿಯೆಗಳಿಂದ ಕೂಡಿದವರಾಗಿ ‘ಒಂದೇ ಶರೀರವಾಗುವಿರಿ.’

ಆಧ್ಯಾತ್ಮಿಕತೆಯು ನಿಮ್ಮನ್ನು ಮಾರ್ಗದರ್ಶಿಸಲಿ

15. ಯಶಸ್ವೀ ವಿವಾಹಕ್ಕೆ ಯಾವುದು ಕೀಲಿಕೈ? ವಿವರಿಸಿರಿ.

15 ವಿವಾಹ ಜೀವನದಲ್ಲಿ ದೇವರಿಗೆ ಪ್ರಥಮ ಸ್ಥಾನ ಕೊಡುವುದರ ಮಹತ್ವವನ್ನು ಯೇಸು ಅರಿತಿದ್ದನು. ಯೆಹೋವನು ಪ್ರಪ್ರಥಮ ವಿವಾಹವನ್ನು ನಡೆಸಿದ್ದನ್ನು ಯೇಸು ನೋಡಿದ್ದನು. ಆದಾಮಹವ್ವರು ದೇವರ ಮಾರ್ಗದರ್ಶನವನ್ನು ಅನುಸರಿಸಿ ನಡೆದಾಗ ಎಷ್ಟೊಂದು ಸಂತೋಷದಿಂದಿದ್ದರು ಹಾಗೂ ಅದನ್ನು ಅಸಡ್ಡೆಮಾಡಿದಾಗ ಯಾವ ವಿಪತ್ಕಾರಕ ಪರಿಣಾಮವನ್ನು ಅನುಭವಿಸಿದರು ಎಂಬುದನ್ನು ಅವನು ಸ್ವತಃ ನೋಡಿದ್ದನು. ಆದುದರಿಂದ ಯೇಸು ಜನರಿಗೆ ಬೋಧಿಸುವಾಗ ಆದಿಕಾಂಡ 2:24ರಲ್ಲಿ ದಾಖಲಾಗಿರುವ ತನ್ನ ತಂದೆಯ ಮಾತುಗಳನ್ನು ಪುನರಾವರ್ತಿಸಿದನು. ಅದಕ್ಕೆ ಈ ಮಾತನ್ನೂ ಅವನು ಜೋಡಿಸಿದನು: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” (ಮತ್ತಾ. 19:6) ಆದುದರಿಂದ ಯೆಹೋವನ ಕಡೆಗಿರುವ ಆಳವಾದ ಗೌರವವು ಇಂದು ಸಹ ಸಂತೋಷಭರಿತ, ಯಶಸ್ವೀ ವಿವಾಹಕ್ಕೆ ಮುಖ್ಯ ಕೀಲಿಕೈ. ಈ ವಿಷಯದಲ್ಲಿ ಯೇಸುವಿನ ಭೂಹೆತ್ತವರಾದ ಯೋಸೇಫ ಮರಿಯರು ಉತ್ತಮ ಮಾದರಿಯನ್ನಿಟ್ಟಿದ್ದಾರೆ.

16. ಯೋಸೇಫ ಮರಿಯರು ತಮ್ಮ ಕುಟುಂಬ ಜೀವಿತದಲ್ಲಿ ಆಧ್ಯಾತ್ಮಿಕತೆಯನ್ನು ಹೇಗೆ ತೋರಿಸಿದರು?

16 ಯೋಸೇಫನಿಗೆ ಮರಿಯಳ ಕಡೆಗೆ ದಯೆ ಹಾಗೂ ಗೌರವವಿತ್ತು. ಆಕೆ ಗರ್ಭಿಣಿಯೆಂದು ಅವನಿಗೆ ಮೊದಲಾಗಿ ತಿಳಿದುಬಂದಾಗಲೇ ಅವನು ಆಕೆಯೊಂದಿಗೆ ಕರುಣೆಯಿಂದ ವ್ಯವಹರಿಸಲು ಬಯಸಿದನು. ಗರ್ಭಿಣಿಯಾದ ಕಾರಣವನ್ನು ದೇವದೂತನು ವಿವರಿಸುವ ಮುಂಚೆಯೇ ಅವನು ಹಾಗೆ ಮಾಡಲು ಯೋಚಿಸಿದ್ದನು. (ಮತ್ತಾ. 1:18-20) ದಂಪತಿಯಾದ ಅವರಿಬ್ಬರೂ ಕೈಸರನ ಆಜ್ಞೆಗೆ ವಿಧೇಯರಾದರು ಮಾತ್ರವಲ್ಲ ಮೋಶೆಯ ಧರ್ಮಶಾಸ್ತ್ರವನ್ನು ನಿಕಟವಾಗಿ ಪಾಲಿಸಿದರು. (ಲೂಕ 2:1-5, 21, 22) ಯೆರೂಸಲೇಮಿನಲ್ಲಿ ನಡೆಯುತ್ತಿದ್ದ ದೊಡ್ಡ ಧಾರ್ಮಿಕ ಹಬ್ಬಗಳಿಗೆ ಹಾಜರಾಗಬೇಕೆಂಬ ಆಜ್ಞೆ ಪುರುಷರಿಗೆ ಮಾತ್ರವಿದ್ದರೂ ಯೋಸೇಫ ಮರಿಯರು ತಮ್ಮ ಕುಟುಂಬ ಸಮೇತವಾಗಿ ಪ್ರತಿವರ್ಷ ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗುತ್ತಿದ್ದರು. (ಧರ್ಮೋ. 16:16; ಲೂಕ 2:41) ಹೀಗೆ ಮತ್ತು ಇತರ ವಿಧಗಳಲ್ಲಿ ಈ ದೇವಭಕ್ತ ದಂಪತಿ ಯೆಹೋವನನ್ನು ಸಂತೋಷಪಡಿಸಲು ಶ್ರಮಿಸಿದರು ಹಾಗೂ ಆಧ್ಯಾತ್ಮಿಕ ವಿಷಯಗಳಿಗೆ ಆಳವಾದ ಗೌರವ ತೋರಿಸಿದರು. ಆದ್ದರಿಂದ ತನ್ನ ಮಗನನ್ನು ಅವನ ಭೂಜೀವಿತದ ಪ್ರಥಮ ಭಾಗದಲ್ಲಿ ಪರಾಮರಿಸುವಂತೆ ಯೆಹೋವನು ಅವರನ್ನು ಆಯ್ಕೆಮಾಡಿದ್ದರಲ್ಲಿ ಆಶ್ಚರ್ಯವಿಲ್ಲ.

17, 18. (ಎ) ಯಾವ ವಿಧಗಳಲ್ಲಿ ದಂಪತಿಯು ತಮ್ಮ ಕುಟುಂಬದಲ್ಲಿ ಆಧ್ಯಾತ್ಮಿಕತೆಯನ್ನು ಪ್ರಥಮವಾಗಿಡಬಲ್ಲರು? (ಬಿ) ಅದು ಅವರಿಗೆ ಹೇಗೆ ಪ್ರಯೋಜನ ತರುವುದು?

17 ನಿಮ್ಮ ಕುಟುಂಬ ಜೀವನವನ್ನು ಸಹ ಆಧ್ಯಾತ್ಮಿಕತೆಯು ಮಾರ್ಗದರ್ಶಿಸುತ್ತದೋ? ಉದಾಹರಣೆಗೆ, ಯಾವುದಾದರೂ ಪ್ರಮುಖ ನಿರ್ಣಯಗಳನ್ನು ಮಾಡುವಾಗ ಬೈಬಲ್‌ ಮೂಲತತ್ತ್ವ ಏನಿದೆ ಎಂದು ಮೊದಲು ಸಂಶೋಧನೆ ಮಾಡಿ, ಆ ವಿಷಯದ ಕುರಿತು ಪ್ರಾರ್ಥಿಸಿ, ನಂತರ ಪ್ರೌಢ ಕ್ರೈಸ್ತನಿಂದ ಸಲಹೆಯನ್ನು ಪಡೆಯುತ್ತೀರೋ? ಅಥವಾ ನಿಮ್ಮದೇ ಸ್ವಂತ ಅನಿಸಿಕೆಗನುಸಾರ ಅಥವಾ ಕುಟುಂಬದವರ, ಸ್ನೇಹಿತರ ಅಭಿಪ್ರಾಯಕ್ಕನುಸಾರ ಸಮಸ್ಯೆಯನ್ನು ಪರಿಹರಿಸುವ ಸ್ವಭಾವ ನಿಮಗಿದೆಯೋ? ವಿವಾಹ ಮತ್ತು ಕುಟುಂಬ ಜೀವನದ ಕುರಿತು ನಂಬಿಗಸ್ತ ಆಳು ಪ್ರಕಾಶಿಸಿರುವ ಅನೇಕ ಪ್ರಾಯೋಗಿಕ ಸಲಹೆಗಳನ್ನು ಕಾರ್ಯರೂಪಕ್ಕೆ ಹಾಕಲು ನೀವು ಶ್ರಮಿಸುತ್ತೀರೋ? ಅಥವಾ ಸ್ಥಳೀಯ ಪದ್ಧತಿಗಳು ಹಾಗೂ ಪ್ರಸಿದ್ಧ ಐಹಿಕ ಸಲಹೆಗಳನ್ನು ಅನುಸರಿಸುತ್ತಿದ್ದೀರೋ? ಪ್ರತಿದಿನ ಜೊತೆಯಾಗಿ ಪ್ರಾರ್ಥನೆ ಮತ್ತು ಅಧ್ಯಯನ ಮಾಡುವ ರೂಢಿ ನಿಮಗಿದೆಯೋ? ಆಧ್ಯಾತ್ಮಿಕ ಗುರಿಗಳನ್ನಿಡುತ್ತೀರೋ? ಕುಟುಂಬದ ಆದ್ಯತೆಗಳ ಕುರಿತು ಜೊತೆಯಾಗಿ ಕುಳಿತು ಮಾತಾಡುತ್ತೀರೋ?

18 “ನಮ್ಮ ವಿವಾಹದ ‘ಮೂರು ಹುರಿಯ ಹಗ್ಗದಲ್ಲಿ’ ಯೆಹೋವನು ಒಂದು ಹುರಿಯೆಂದು ನಾವು ಪರಿಗಣಿಸಿರುವುದರಿಂದ ಬಗೆಹರಿಸಲು ಸಾಧ್ಯವಿಲ್ಲದ ಯಾವುದೇ ಸಮಸ್ಯೆಯನ್ನು ನಾವೆಂದೂ ಎದುರಿಸಿಲ್ಲ” ಎಂದು ತಮ್ಮ 50 ವರ್ಷಗಳ ಸಂತೋಷಭರಿತ ವೈವಾಹಿಕ ಸಹಬಾಳ್ವೆಯ ಕುರಿತು ರೇ ಎಂಬ ಸಹೋದರನು ಹೇಳುತ್ತಾನೆ. (ಪ್ರಸಂಗಿ 4:12 ಓದಿ.) ಡ್ಯಾನೀ ಮತ್ತು ಟ್ರೀನ ಸಹ ಇದನ್ನು ಒಪ್ಪುತ್ತಾರೆ. 34 ವರ್ಷಗಳಿಗೂ ಹೆಚ್ಚು ಸಮಯದಿಂದ ಸುಖೀ ಸತಿಪತಿಗಳಾಗಿರುವ ಅವರನ್ನುವುದು: “ದೇವರ ಸೇವೆಯನ್ನು ನಾವು ಒಟ್ಟಿಗೆ ಮಾಡಿದ ಕಾರಣ ನಮ್ಮ ವಿವಾಹಬಂಧವು ಇನ್ನಷ್ಟು ಬಲವಾಗಿದೆ.” ನೀವು ಸಹ ನಿಮ್ಮ ವಿವಾಹದಲ್ಲಿ ಯಾವಾಗಲೂ ಯೆಹೋವನಿಗೆ ಪ್ರಥಮ ಸ್ಥಾನ ಕೊಡುವುದಾದರೆ ನೀವು ಯಶಸ್ವಿಗಳಾಗುವಂತೆ ಆತನು ಸಹಾಯಮಾಡುವನು ಹಾಗೂ ನಿಮ್ಮನ್ನು ಸಮೃದ್ಧವಾಗಿ ಆಶೀರ್ವದಿಸುವನು.—ಕೀರ್ತ. 127:1.

ದೇವರ ವರದಾನವನ್ನು ಗೌರವಿಸುತ್ತಾ ಇರಿ

19. ವಿವಾಹದ ವರದಾನವನ್ನು ದೇವರು ಕೊಟ್ಟದ್ದೇಕೆ?

19 ಇಂದು ಅನೇಕರಿಗೆ ವಿವಾಹದಲ್ಲಿ ತಮ್ಮ ವೈಯಕ್ತಿಕ ಸಂತೋಷವೇ ಅತಿ ಮಹತ್ವದ್ದು. ಅವರು ದೇವರ ಕುರಿತು ಯೋಚಿಸುವುದಿಲ್ಲ. ಆದರೆ ಯೆಹೋವನ ಸೇವಕರ ವೀಕ್ಷಣೆಯೇ ಬೇರೆ. ದೇವರು ತನ್ನ ಉದ್ದೇಶವನ್ನು ಪೂರೈಸಲು ವಿವಾಹವನ್ನು ವರದಾನವಾಗಿ ಕೊಟ್ಟಿದ್ದಾನೆಂದು ದೇವಸೇವಕರು ಗ್ರಹಿಸುತ್ತಾರೆ. (ಆದಿ. 1:26-28) ಆದಾಮಹವ್ವರು ಆ ವರದಾನವನ್ನು ಗೌರವಿಸಿದ್ದಲ್ಲಿ ಇಡೀ ಭೂಮಿಯು ಪರದೈಸವಾಗಿ ಸಂತೋಷಭರಿತರೂ ನೀತಿವಂತರೂ ಆದ ದೇವಜನರಿಂದ ತುಂಬಿರುತ್ತಿತ್ತು.

20, 21. (ಎ) ನಾವು ವಿವಾಹವನ್ನು ಪವಿತ್ರವಾದದ್ದಾಗಿ ಪರಿಗಣಿಸಬೇಕು ಏಕೆ? (ಬಿ) ಮುಂದಿನ ವಾರ ನಾವು ಯಾವ ವರದಾನದ ಕುರಿತು ಕಲಿಯುವೆವು?

20 ಎಲ್ಲಕ್ಕಿಂತಲೂ ಮುಖ್ಯವಾಗಿ ದೇವರ ಸೇವಕರು ವಿವಾಹವನ್ನು ಯೆಹೋವನಿಗೆ ಘನತೆ ತರುವ ಒಂದು ಅವಕಾಶವಾಗಿ ವೀಕ್ಷಿಸುತ್ತಾರೆ. (1 ಕೊರಿಂಥ 10:31 ಓದಿ.) ನಾವು ಕಲಿತಂತೆ ನಿಷ್ಠೆ, ಒಗ್ಗಟ್ಟು, ಆಧ್ಯಾತ್ಮಿಕತೆಯಂಥ ದೈವಿಕ ಗುಣಗಳು ವಿವಾಹಬಂಧವನ್ನು ಬಲಪಡಿಸುತ್ತವೆ. ಆದುದರಿಂದ ನಾವು ವಿವಾಹಕ್ಕೆ ಸಿದ್ಧರಾಗುತ್ತಿರಲಿ, ವಿವಾಹವನ್ನು ಬಲಗೊಳಿಸುತ್ತಿರಲಿ ಅಥವಾ ವಿವಾಹವನ್ನು ಉಳಿಸಲು ಪ್ರಯತ್ನಿಸುತ್ತಿರಲಿ ಮೊದಲಾಗಿ ವಿವಾಹದ ಉದ್ದೇಶವೇನೆಂದು ಗ್ರಹಿಸಬೇಕು. ಅದೇನೆಂದರೆ, ವಿವಾಹವು ಒಂದು ದೈವಿಕ ಹಾಗೂ ಪವಿತ್ರ ಏರ್ಪಾಡು ಎಂಬದೇ. ಈ ಸತ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ನಾವು ವಿವಾಹದ ಕುರಿತಾದ ಯಾವುದೇ ನಿರ್ಣಯಗಳನ್ನು ದೇವರ ವಾಕ್ಯದ ಆಧಾರದಲ್ಲೇ ಮಾಡಲು ನಮ್ಮಿಂದಾದ ಪ್ರಯತ್ನವನ್ನೆಲ್ಲ ಮಾಡುವಂತೆ ಪ್ರಚೋದಿಸುತ್ತದೆ. ಹೀಗೆ ನಾವು ವಿವಾಹದ ವರದಾನಕ್ಕೆ ಮಾತ್ರವಲ್ಲ, ಆ ವರದಾನದ ದಾತನಾದ ಯೆಹೋವ ದೇವರಿಗೂ ಗೌರವವನ್ನು ತೋರಿಸುವೆವು.

21 ಆದರೆ ಯೆಹೋವನು ನಮಗೆ ಕೊಟ್ಟಿರುವ ವರದಾನ ವಿವಾಹ ಮಾತ್ರವೇ ಅಲ್ಲ. ಜೀವನದಲ್ಲಿ ಸಂತೋಷಕ್ಕೆ ನಡೆಸುವ ಏಕೈಕ ಮಾರ್ಗವೂ ಅದಲ್ಲ. ದೇವರು ಕೊಟ್ಟಿರುವ ಇನ್ನೊಂದು ಅತ್ಯಮೂಲ್ಯ ವರದಾನದ ಕುರಿತು ನಾವು ಮುಂದಿನ ಲೇಖನದಲ್ಲಿ ಕಲಿಯಲಿದ್ದೇವೆ. ಅದು ಯಾವುದೆಂದರೆ ಅವಿವಾಹಿತ ಸ್ಥಿತಿಯೇ.

ನಿಮ್ಮ ಉತ್ತರವೇನು?

• ನಿಷ್ಠೆಯು ವಿವಾಹಿತ ಕ್ರೈಸ್ತರನ್ನು ಹೇಗೆ ಪ್ರಭಾವಿಸಬೇಕು?

• ಒಗ್ಗಟ್ಟಿನಿಂದ ಕೂಡಿ ಕೆಲಸಮಾಡುವುದು ವಿವಾಹಬಂಧವನ್ನು ಹೇಗೆ ಬಲಪಡಿಸುತ್ತದೆ?

• ಯಾವ ಕೆಲವು ವಿಧಗಳಲ್ಲಿ ವಿವಾಹಿತ ದಂಪತಿಗಳು ಆಧ್ಯಾತ್ಮಿಕತೆಯು ತಮ್ಮನ್ನು ಮಾರ್ಗದರ್ಶಿಸುವಂತೆ ಬಿಡಬಲ್ಲರು?

• ವಿವಾಹದ ಮೂಲಕರ್ತನಾದ ಯೆಹೋವನಿಗೆ ನಾವು ಹೇಗೆ ಗೌರವ ತೋರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರಗಳು]

ಜೊತೆಯಾಗಿ ಕೆಲಸಮಾಡುವುದು ದಂಪತಿಗಳು ಒಗ್ಗಟ್ಟಿನಿಂದಿರುವಂತೆ ಸಹಾಯಮಾಡುತ್ತದೆ