ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಲೋಭನೆ ಮತ್ತು ನಿರುತ್ಸಾಹವನ್ನು ಜಯಿಸಲು ಬಲಹೊಂದಿರಿ

ಪ್ರಲೋಭನೆ ಮತ್ತು ನಿರುತ್ಸಾಹವನ್ನು ಜಯಿಸಲು ಬಲಹೊಂದಿರಿ

ಪ್ರಲೋಭನೆ ಮತ್ತು ನಿರುತ್ಸಾಹವನ್ನು ಜಯಿಸಲು ಬಲಹೊಂದಿರಿ

‘ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದುವಿರಿ.’—ಅ. ಕಾ. 1:8.

1, 2. ಯೇಸು ತನ್ನ ಶಿಷ್ಯರಿಗೆ ಯಾವ ಸಹಾಯವನ್ನೀಯುವ ವಚನವಿತ್ತನು? ಅದು ಅವರಿಗೆ ಅವಶ್ಯವಾಗಿತ್ತು ಏಕೆ?

ಶಿಷ್ಯರು ತಮ್ಮ ಸ್ವಂತ ಶಕ್ತಿಯಿಂದ ತನ್ನೆಲ್ಲಾ ಆಜ್ಞೆಗಳನ್ನು ಪಾಲಿಸಲು ಶಕ್ತರಲ್ಲವೆಂದು ಯೇಸುವಿಗೆ ತಿಳಿದಿತ್ತು. ಅವರು ಸಾರಲಿಕ್ಕಿದ್ದ ಕ್ಷೇತ್ರದ ವ್ಯಾಪ್ತಿ, ಅವರ ವಿರೋಧಿಗಳಿಗಿದ್ದ ಶಕ್ತಿ, ಮಾನವರಲ್ಲಿರುವ ದೌರ್ಬಲ್ಯ ಇದನ್ನೆಲ್ಲಾ ಪರಿಗಣಿಸುವಾಗ ಅವರಿಗೆ ಮನುಷ್ಯಾತೀತ ಬಲ ಅವಶ್ಯವಾಗಿ ಬೇಕಿತ್ತೆಂಬುದು ಸ್ಪಷ್ಟ. ಆದ್ದರಿಂದಲೇ ಯೇಸು ಸ್ವರ್ಗಾರೋಹಣಕ್ಕೆ ಸ್ವಲ್ಪ ಮುಂಚೆ ತನ್ನ ಶಿಷ್ಯರಿಗೆ ಈ ಆಶ್ವಾಸನೆ ಕೊಟ್ಟನು: “ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.”—ಅ. ಕಾ. 1:8.

2 ಯೇಸು ಕೊಟ್ಟ ಆ ಮಾತು ನೆರವೇರಿಕೆ ಹೊಂದಲು ಆರಂಭವಾದದ್ದು ಕ್ರಿ.ಶ. 33ರ ಪಂಚಾಶತ್ತಮದಲ್ಲಿ. ಆಗ ಯೇಸು ಕ್ರಿಸ್ತನ ಶಿಷ್ಯರು ತಮ್ಮ ಸಾರುವ ಕೆಲಸದಿಂದ ಯೆರೂಸಲೇಮನ್ನು ತುಂಬಿಸುವಂತೆ ಪವಿತ್ರಾತ್ಮವು ಅವರಿಗೆ ಬಲವನ್ನು ಕೊಟ್ಟಿತು. ಇದನ್ನು ಯಾವ ವಿರೋಧವೂ ತಡೆಯಶಕ್ತವಾಗಿರಲಿಲ್ಲ. (ಅ. ಕಾ. 4:20) ನಾವೂ ಸೇರಿದಂತೆ ಯೇಸುವಿನ ಎಲ್ಲ ನಂಬಿಗಸ್ತ ಹಿಂಬಾಲಕರಿಗೆ ಆ ದೇವದತ್ತ ಬಲವೇ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ” ಜರೂರಿಯಾಗಿ ಬೇಕಾಗಿರುವುದು!—ಮತ್ತಾ. 28:20.

3. (ಎ) ಪವಿತ್ರಾತ್ಮ ಮತ್ತು ಅದರಿಂದ ಸಿಗುವ ಬಲದ ನಡುವಣ ವ್ಯತ್ಯಾಸವನ್ನು ವಿವರಿಸಿ. (ಬಿ) ಯೆಹೋವನು ಕೊಡುವ ಬಲವು ಏನನ್ನು ಮಾಡಲು ನಮಗೆ ಸಹಾಯಮಾಡುತ್ತದೆ?

3 ತನ್ನ ಶಿಷ್ಯರ ಮೇಲೆ ‘ಪವಿತ್ರಾತ್ಮವು ಬರಲು ಅವರು ಬಲವನ್ನು ಹೊಂದುವರೆಂದು’ ಯೇಸು ವಚನವಿತ್ತನು. ಪವಿತ್ರಾತ್ಮವು ನಮ್ಮ ಮೇಲೆ ಕಾರ್ಯನಡೆಸುತ್ತದೆಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಪರಿಣಾಮವಾಗಿ ನಾವು ಬಲವನ್ನು ಹೊಂದುತ್ತೇವೆ. ಹೀಗೆ ದೇವರ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮವು ದೇವರ ಚಿತ್ತವನ್ನು ಮಾಡಲು ಜನರ ಅಥವಾ ವಿಷಯಗಳ ಮೇಲೆ ಪ್ರಭಾವಬೀರುತ್ತದೆ ಅಥವಾ ಉತ್ತೇಜನ ಕೊಡುತ್ತದೆ. ಪವಿತ್ರಾತ್ಮದಿಂದ ಸಿಗುವ ಬಲವನ್ನಾದರೋ “ಕ್ರಿಯೆನಡೆಸುವ ಅಥವಾ ಪರಿಣಾಮವನ್ನು ಉಂಟುಮಾಡುವ ಸಾಮರ್ಥ್ಯಕ್ಕೆ” ಹೋಲಿಸಬಹುದು. ಒಂದು ನಿರ್ದಿಷ್ಟ ಫಲಿತಾಂಶವನ್ನು ಉತ್ಪಾದಿಸುವ ತನಕ ಈ ಬಲವು ಯಾರಲ್ಲಾದರೂ ಯಾವುದರಲ್ಲಾದರೂ ಸುಪ್ತವಾಗಿ ಅಡಗಿರಬಲ್ಲದು. ಹೀಗೆ ಪವಿತ್ರಾತ್ಮವನ್ನು ರೀಚಾರ್ಜಬಲ್‌ ಬ್ಯಾಟರಿಗೆ ಶಕ್ತಿತುಂಬುವ ವಿದ್ಯುಚ್ಫಕ್ತಿಗೆ ಹೋಲಿಸಬಹುದು. ಆ ವಿದ್ಯುಚ್ಛಕ್ತಿಯು ಬ್ಯಾಟರಿಯಲ್ಲಿ ಪ್ರವೇಶಿಸಿ ಸುಪ್ತವಾಗಿ ಅಡಗಿರುತ್ತದೆ. ಆಗ ಬ್ಯಾಟರಿಗೆ ಅಸಾಧಾರಣ ಶಕ್ತಿ ಬರುತ್ತದೆ. ಇದನ್ನೇ ಪವಿತ್ರಾತ್ಮದಿಂದ ಸಿಗುವ ಬಲಕ್ಕೆ ಹೋಲಿಸಬಹುದು. ಯೆಹೋವನು ಪವಿತ್ರಾತ್ಮದ ಮೂಲಕ ದಯಪಾಲಿಸುವ ಬಲವು ನಮ್ಮಲ್ಲಿ ಪ್ರತಿಯೊಬ್ಬರಿಗೆ ನಮ್ಮ ಕ್ರೈಸ್ತ ಸಮರ್ಪಣೆಯನ್ನು ನೆರವೇರಿಸಲು ಹಾಗೂ ನಮ್ಮ ಮೇಲೆ ಹೇರಲಾಗುವ ನಕಾರಾತ್ಮಕ ಪ್ರಭಾವಗಳನ್ನು ಪ್ರತಿರೋಧಿಸಲು ಬೇಕಾದ ಸಾಮರ್ಥ್ಯವನ್ನು ಅವಶ್ಯವಿದ್ದಾಗ ಕೊಡುತ್ತದೆ.—ಮೀಕ 3:8; ಕೊಲೊಸ್ಸೆ 1:29 ಓದಿ.

4. ಈ ಲೇಖನದಲ್ಲಿ ನಾವೇನನ್ನು ಪರಿಗಣಿಸುವೆವು? ಏಕೆ?

4 ನಮಗೆ ಪವಿತ್ರಾತ್ಮದ ಮೂಲಕ ಬಲ ಸಿಕ್ಕಿದೆಯೆಂದು ಹೇಗೆ ತೋರಿಬರುತ್ತದೆ? ಅದರ ಪ್ರಭಾವದಿಂದಾಗಿ ಯಾವ ರೀತಿಯ ಕ್ರಿಯೆಗಳೂ ಪ್ರತಿಕ್ರಿಯೆಗಳೂ ಉಂಟಾಗಬಹುದು? ದೇವರಿಗೆ ನಂಬಿಗಸ್ತಿಕೆಯಿಂದ ನಾವು ಸೇವೆಸಲ್ಲಿಸುವಾಗ ಸೈತಾನನಿಂದಲೊ ಅವನ ಲೋಕದಿಂದಲೊ ನಮ್ಮ ಸ್ವಂತ ಅಪರಿಪೂರ್ಣ ಶರೀರದಿಂದಲೊ ಬರುವ ಅನೇಕಾನೇಕ ಅಡೆತಡೆಗಳನ್ನು ಎದುರಿಸುತ್ತೇವೆ. ಆದ್ದರಿಂದ ನಾವು ಕ್ರೈಸ್ತರಾಗಿ ಎಡೆಬಿಡದೆ ಮುಂದುವರಿಯಲು, ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲಿಗರಾಗಲು, ಯೆಹೋವನೊಂದಿಗೆ ಸುಸಂಬಂಧವನ್ನು ಕಾಪಾಡಿಕೊಳ್ಳಲು ಅಂಥ ಅಡೆತಡೆಗಳನ್ನು ಜಯಿಸುವುದು ಅತ್ಯಾವಶ್ಯಕ. ಪ್ರಲೋಭನೆ, ಆಯಾಸ, ನಿರುತ್ಸಾಹವನ್ನು ಜಯಿಸುವುದಕ್ಕೆ ಪವಿತ್ರಾತ್ಮ ಹೇಗೆ ಸಹಾಯಮಾಡುತ್ತದೆ ಎಂದು ನಾವೀಗ ತಿಳಿಯೋಣ.

ಪ್ರಲೋಭನೆಯನ್ನು ಜಯಿಸಲು ಬಲ

5. ಪ್ರಾರ್ಥನೆಯಿಂದ ನಾವು ಹೇಗೆ ಬಲ ಹೊಂದಬಲ್ಲೆವು?

5 ಯೇಸು ತನ್ನ ಹಿಂಬಾಲಕರಿಗೆ ಪ್ರಾರ್ಥಿಸಲು ಕಲಿಸಿದ್ದು: “ನಮ್ಮನ್ನು ಪ್ರಲೋಭನೆಯೊಳಗೆ ಸೇರಿಸದೆ ಕೆಡುಕನಿಂದ ನಮ್ಮನ್ನು ತಪ್ಪಿಸು.” (ಮತ್ತಾ. 6:13) ಹೀಗೆ ಪ್ರಾರ್ಥನೆ ಮಾಡುವ ತನ್ನ ನಂಬಿಗಸ್ತ ಸೇವಕರನ್ನು ಯೆಹೋವನು ಎಂದೂ ಕೈಬಿಡನು. ‘ಸ್ವರ್ಗದಲ್ಲಿರುವ ತಂದೆಯು ತನ್ನನ್ನು ಕೇಳುವವರಿಗೆ ಪವಿತ್ರಾತ್ಮವನ್ನು ಕೊಡುವನು’ ಎಂದನು ಯೇಸು ಇನ್ನೊಂದು ಸಂದರ್ಭದಲ್ಲಿ. (ಲೂಕ 11:13) ನೀತಿಯ ಕ್ರಿಯೆಗಳನ್ನು ನಡೆಸಲು ಈ ಪ್ರಬಲ ಸಹಾಯವನ್ನು ದಯಪಾಲಿಸುವನೆಂದು ಯೆಹೋವನು ವಚನವಿತ್ತಿರುವುದು ಎಷ್ಟು ಸಾಂತ್ವನಕರ! ಇದರರ್ಥ ನಾವು ಪ್ರಲೋಭನೆಗೆ ಒಳಗಾಗದಂತೆ ಯೆಹೋವನು ತಡೆಯುತ್ತಾನೆಂದಲ್ಲ ನಿಶ್ಚಯ. (1 ಕೊರಿಂ. 10:13) ಆದರೆ ಪ್ರಲೋಭನೆ ನಮಗೆ ಎದುರಾಗುವಾಗ ಇನ್ನಷ್ಟು ಹೆಚ್ಚು ಕಟ್ಟಾಸಕ್ತಿಯಿಂದ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವ ಸಮಯವು ಅದಾಗಿದೆ.—ಮತ್ತಾ. 26:42.

6. ಸೈತಾನನ ಪ್ರಲೋಭನೆಗಳನ್ನು ಎದುರಿಸುವಾಗ ಯೇಸು ಯಾವ ಆಧಾರದಿಂದ ಉತ್ತರ ಕೊಟ್ಟನು?

6 ಪಿಶಾಚನ ಪ್ರಲೋಭನೆಗಳನ್ನು ಎದುರಿಸುವಾಗ ಯೇಸು ಶಾಸ್ತ್ರವಚನಗಳನ್ನು ಉಪಯೋಗಿಸಿ ಉತ್ತರ ಕೊಟ್ಟನು. ಅವನು ಹಾಗೆ ಪ್ರತಿಕ್ರಿಯಿಸುವಾಗ ದೇವರ ವಾಕ್ಯವು ಸ್ಪಷ್ಟವಾಗಿ ಅವನ ಮನಸ್ಸಿನಲ್ಲಿತ್ತು. ಆ ವಾಕ್ಯಕ್ಕೆ ಸೂಚಿಸುತ್ತಾ “ಎಂದು ಬರೆದಿದೆ . . . ಎಂದು ಸಹ ಬರೆದಿದೆ . . . ಸೈತಾನನೇ ತೊಲಗಿಹೋಗು! ‘ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು’ ಎಂದು ಬರೆದಿದೆ” ಎಂದನು ಯೇಸು. ಯೆಹೋವನ ಮತ್ತು ಆತನ ವಾಕ್ಯದ ಮೇಲಣ ಪ್ರೀತಿಯು ಸೈತಾನನು ತಂದ ಪ್ರಲೋಭನೆಗಳನ್ನು ತಿರಸ್ಕರಿಸಲು ಯೇಸುವನ್ನು ಪ್ರಚೋದಿಸಿತು. (ಮತ್ತಾ. 4:1-10) ಯೇಸು ಮತ್ತೆ ಮತ್ತೆ ಪ್ರಲೋಭನೆಯನ್ನು ಪ್ರತಿರೋಧಿಸಿದ ಬಳಿಕ ಸೈತಾನನು ಅವನನ್ನು ಬಿಟ್ಟುಹೋದನು.

7. ಪ್ರಲೋಭನೆಯನ್ನು ಎದುರಿಸಲು ಬೈಬಲ್‌ ನಮಗೆ ಹೇಗೆ ಸಹಾಯಮಾಡುತ್ತದೆ?

7 ಪಿಶಾಚನ ಪ್ರಲೋಭನೆಗಳನ್ನು ಪ್ರತಿರೋಧಿಸಲು ಯೇಸು ದೇವರ ವಾಕ್ಯದ ಮೇಲೆ ಆತುಕೊಂಡನು. ಹೀಗಿರುವಾಗ ನಾವು ಅದರ ಮೇಲೆ ಇನ್ನೆಷ್ಟು ಹೆಚ್ಚು ಆತುಕೊಂಡಿರಬೇಕು! ಹಾಗಾದರೆ ಪಿಶಾಚನನ್ನೂ ಅವನ ಕಾರುಬಾರಿಗಳನ್ನೂ ಎದುರಿಸಲು ಮೊದಲಾಗಿ ನಾವು ದೇವರ ನೀತಿನಿಯಮಗಳನ್ನು ತಿಳಿದುಕೊಂಡು ಅವನ್ನು ಪೂರ್ಣವಾಗಿ ಪಾಲಿಸಲು ದೃಢಸಂಕಲ್ಪದಿಂದಿರಬೇಕು. ದೇವರ ವಾಕ್ಯವನ್ನು ಅಧ್ಯಯನ ಮಾಡಿ ದೇವರ ವಿವೇಕ, ನೀತಿಯನ್ನು ಗಣ್ಯಮಾಡಿದ ಅನೇಕ ಜನರು ಅದರಲ್ಲಿರುವ ನೀತಿಯ ಮಟ್ಟಗಳಿಗನುಸಾರ ಜೀವಿಸಲು ಪ್ರೇರಿಸಲ್ಪಟ್ಟಿದ್ದಾರೆ. ವಾಸ್ತವದಲ್ಲಿ “ದೇವರ ವಾಕ್ಯವು” ‘ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ’ ವಿವೇಚಿಸಲು ಶಕ್ತವಾಗಿರುವಷ್ಟು ಪ್ರಬಲವಾಗಿದೆ. (ಇಬ್ರಿ. 4:12) ಆದ್ದರಿಂದ ಒಬ್ಬನು ಬೈಬಲನ್ನು ಎಷ್ಟು ಹೆಚ್ಚು ಓದಿ ಪರ್ಯಾಲೋಚಿಸುತ್ತಾನೋ ಅಷ್ಟು ಹೆಚ್ಚಾಗಿ ಅವನು ಯೆಹೋವನ ‘ಸತ್ಯೋಪದೇಶವನ್ನು ಗ್ರಹಿಸಲು’ ಶಕ್ತನಾಗುವನು. (ದಾನಿ. 9:13) ಹೀಗಿರಲಾಗಿ ನಮ್ಮ ನಿರ್ದಿಷ್ಟ ಬಲಹೀನತೆಗಳನ್ನು ಜಯಿಸಲು ನೆರವಾಗುವ ಬೈಬಲ್‌ ವಚನಗಳನ್ನು ನಾವು ಧ್ಯಾನಿಸಬೇಕು.

8. ನಾವು ಯಾವುದರ ಮೂಲಕವಾಗಿ ಪವಿತ್ರಾತ್ಮವನ್ನು ಪಡೆದುಕೊಳ್ಳಬಲ್ಲೆವು?

8 ಯೇಸು ಪ್ರಲೋಭನೆಯನ್ನು ಎದುರಿಸಶಕ್ತನಾಗಿದ್ದನು ಏಕೆಂದರೆ ಅವನಿಗೆ ದೇವರ ವಾಕ್ಯವು ತಿಳಿದಿತ್ತು ಮಾತ್ರವಲ್ಲ ಅವನು ‘ಪವಿತ್ರಾತ್ಮಭರಿತನಾಗಿದ್ದನು’ ಕೂಡ. (ಲೂಕ 4:1) ತದ್ರೀತಿಯ ಬಲ ಮತ್ತು ಸಾಮರ್ಥ್ಯ ನಮಗಿರಬೇಕಾದರೆ ನಾವು ಯೆಹೋವನಿಗೆ ಆಪ್ತರಾಗಿರಬೇಕು. ಅದಕ್ಕಾಗಿ ಪವಿತ್ರಾತ್ಮದಿಂದ ನಾವು ತುಂಬುವಂತೆ ಆತನು ಮಾಡಿರುವ ಸಕಲ ಏರ್ಪಾಡುಗಳ ಪೂರ್ಣ ಪ್ರಯೋಜನವನ್ನು ತಕ್ಕೊಳ್ಳುವ ಅಗತ್ಯವಿದೆ. (ಯಾಕೋ. 4:7, 8) ಇವುಗಳಲ್ಲಿ ಬೈಬಲ್‌ ಅಧ್ಯಯನ, ಪ್ರಾರ್ಥನೆ, ಜೊತೆವಿಶ್ವಾಸಿಗಳೊಂದಿಗಿನ ಸಹವಾಸವೂ ಸೇರಿರುತ್ತದೆ. ಅನೇಕರು ಕ್ರೈಸ್ತ ಚಟುವಟಿಕೆಗಳಲ್ಲಿ ಪೂರ್ಣ ಕಾರ್ಯಮಗ್ನರಾಗಿರುವುದರ ಪ್ರಯೋಜನವನ್ನು ಸಹ ಗಣ್ಯಮಾಡಿದ್ದಾರೆ. ಇದು ಭಕ್ತಿವರ್ಧಕವಾದ ಆಧ್ಯಾತ್ಮಿಕ ವಿಷಯಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಹಾಯಮಾಡುತ್ತದೆ.

9, 10. (ಎ) ನಿಮ್ಮ ಕ್ಷೇತ್ರದಲ್ಲಿ ಯಾವ ಪ್ರಲೋಭನೆಗಳು ಸರ್ವಸಾಮಾನ್ಯ? (ಬಿ) ನೀವು ಆಯಾಸದಿಂದ ಬಳಲಿರುವಾಗಲೂ ಪ್ರಲೋಭನೆಯನ್ನು ಎದುರಿಸಲು ಧ್ಯಾನ ಮತ್ತು ಪ್ರಾರ್ಥನೆಯು ಹೇಗೆ ನಿಮಗೆ ಬಲ ಕೊಡಬಲ್ಲದು?

9 ತಪ್ಪುದಾರಿಗೆಳೆಯುವ ಯಾವ ಪ್ರಲೋಭನೆಗಳನ್ನು ನೀವು ಎದುರಿಸಬೇಕಾಗಿದೆ? ನಿಮ್ಮ ವಿವಾಹ ಸಂಗಾತಿಯಲ್ಲದ ವ್ಯಕ್ತಿಯೊಂದಿಗೆ ಚೆಲ್ಲಾಟವಾಡುವ ಪ್ರಲೋಭನೆ ನಿಮಗಾಗಿದೆಯೇ? ನೀವು ಮದುವೆಯಾಗಿರದಿದ್ದಲ್ಲಿ ಒಬ್ಬ ಅವಿಶ್ವಾಸಿಯೊಂದಿಗೆ ಡೇಟಿಂಗ್‌ ಮಾಡುವ ಪ್ರೇರಣೆ ನಿಮಗಾಗಿದೆಯೇ? ಟಿವಿ ನೋಡುವಾಗ ಅಥವಾ ಇಂಟರ್‌ನೆಟ್‌ ಅನ್ನು ಬಳಸುವಾಗ ಕೆಲವು ಸಾರಿ ಹೊಲಸು ಚಿತ್ರಗಳನ್ನು ವೀಕ್ಷಿಸುವ ಪ್ರಲೋಭನೆಗೆ ಕ್ರೈಸ್ತರು ಥಟ್ಟನೆ ಗುರಿಯಾಗಬಹುದು. ನಿಮಗೆ ಹಾಗಾಗಿದೆಯೊ? ಹೌದಾದರೆ ನೀವು ಹೇಗೆ ಪ್ರತಿಕ್ರಿಯಿಸಿದ್ದೀರಿ? ಒಂದು ತಪ್ಪು ಇನ್ನೊಂದು ತಪ್ಪಿಗೆ ನಡೆಸಿ ಗಂಭೀರ ಪಾಪ ಮಾಡುವ ಆಳವಾದ ಗುಂಡಿಗೆ ನಾವು ಹೇಗೆ ಬೀಳಸಾಧ್ಯವಿದೆ ಎಂದು ಧ್ಯಾನಿಸುವುದು ವಿವೇಕಪ್ರದ. (ಯಾಕೋ. 1:14, 15) ಒಂದು ಅಪನಂಬಿಕೆಯ ಕೃತ್ಯವು ಯೆಹೋವನಿಗೆ, ಸಭೆಗೆ ಮತ್ತು ನಿಮ್ಮ ಕುಟುಂಬಕ್ಕೆ ಅದೆಷ್ಟು ನೋವನ್ನು ತರಬಲ್ಲದೆಂದು ಯೋಚಿಸಿರಿ. ಇನ್ನೊಂದು ಕಡೆ, ದೈವಿಕ ಮೂಲತತ್ತ್ವಗಳಿಗೆ ನಿಷ್ಠೆಯಿಂದಿರುವ ಮೂಲಕ ಶುದ್ಧ ಮನಸ್ಸಾಕ್ಷಿಯು ಲಭಿಸುತ್ತದೆ. (ಕೀರ್ತನೆ 119:37; ಜ್ಞಾನೋಕ್ತಿ 22:3 ಓದಿ.) ನೀವು ಅಂಥ ಪರೀಕ್ಷೆಗಳನ್ನು ಎದುರಿಸಿದಾಗೆಲ್ಲಾ ಅವುಗಳನ್ನು ಪ್ರತಿರೋಧಿಸುವಂತೆ ಬಲಕ್ಕಾಗಿ ಪ್ರಾರ್ಥಿಸಲು ದೃಢನಿಶ್ಚಯದಿಂದಿರ್ರಿ.

10 ಸೈತಾನನ ಪ್ರಲೋಭನೆಗಳ ಕುರಿತು ನಾವು ನೆನಪಿನಲ್ಲಿಡಬೇಕಾದ ಇನ್ನೊಂದು ವಿಷಯವಿದೆ. ಸೈತಾನನು ಯೇಸುವನ್ನು ಸಮೀಪಿಸಿದ್ದು ಅವನು ಅರಣ್ಯದಲ್ಲಿ 40 ದಿನಗಳ ವರೆಗೆ ಉಪವಾಸ ಮಾಡಿದ ಬಳಿಕವೇ. ಯೇಸುವಿನ ಸಮಗ್ರತೆಯನ್ನು ಪರೀಕ್ಷೆಗೊಡ್ಡಲು ಅದೇ ವಿಶೇಷವಾಗಿ “ಅನುಕೂಲವಾದ ಸಂದರ್ಭ” ಎಂದು ಪಿಶಾಚನು ನೆನಸಿದ್ದನೆಂಬುದು ನಿಸ್ಸಂಶಯ. (ಲೂಕ 4:13) ನಮ್ಮ ಸಮಗ್ರತೆಯನ್ನು ಕೂಡ ಪರೀಕ್ಷೆಗೊಡ್ಡಲು ಸೈತಾನನು ಅನುಕೂಲ ಸಂದರ್ಭಗಳನ್ನು ಹುಡುಕುತ್ತಾನೆ. ಆದ್ದರಿಂದ ನಾವು ಆಧ್ಯಾತ್ಮಿಕವಾಗಿ ದೃಢರಾಗಿರುವುದು ಅತ್ಯಾವಶ್ಯಕ. ಸೈತಾನನು ಹೆಚ್ಚಾಗಿ ಆಕ್ರಮಣಮಾಡುವುದು ತನ್ನ ಬಲಿಪಶು ಅತಿ ಬಲಹೀನವಾಗಿ ಇರುವುದನ್ನು ಕಾಣುವಾಗಲೇ. ಆದ್ದರಿಂದ ನಾವು ಆಯಾಸದಿಂದ ಬಳಲಿದಾಗ ಅಥವಾ ನಿರುತ್ಸಾಹಗೊಂಡಿರುವಾಗ ಯೆಹೋವನ ಸುರಕ್ಷಾ ಸಹಾಯ ಮತ್ತು ಪವಿತ್ರಾತ್ಮಕ್ಕಾಗಿ ಎಡೆಬಿಡದೆ ವಿನಂತಿಸಲು ಎಂದಿಗಿಂತಲೂ ಹೆಚ್ಚು ದೃಢಸಂಕಲ್ಪವುಳ್ಳವರಾಗಿರಬೇಕು.—2 ಕೊರಿಂ. 12:8-10.

ಆಯಾಸ ಮತ್ತು ನಿರುತ್ಸಾಹ ಜಯಿಸಲು ಬಲ

11, 12. (ಎ) ಇಂದು ಅನೇಕರು ನಿರುತ್ಸಾಹಗೊಳ್ಳುತ್ತಾರೆ ಏಕೆ? (ಬಿ) ನಿರುತ್ಸಾಹವನ್ನು ಜಯಿಸಲು ನಮಗೆ ಯಾವುದು ಬಲವನ್ನು ಕೊಡಬಲ್ಲದು?

11 ಅಪರಿಪೂರ್ಣರಾದ ನಾವು ಆಗಾಗ್ಗೆ ನಿರುತ್ಸಾಹಗೊಳ್ಳುತ್ತೇವೆ. ಮುಖ್ಯವಾಗಿ ಇಂದು ಅದು ಸತ್ಯವಾಗಿರಬಹುದು, ಏಕೆಂದರೆ ನಾವಿಂದು ಹೆಚ್ಚು ಒತ್ತಡಭರಿತ ಸಮಯದಲ್ಲಿ ಜೀವಿಸುತ್ತಿದ್ದೇವೆ. ಇಡೀ ಮಾನವಕುಲವು ಹಿಂದೆಂದೂ ಅನುಭವಿಸಿದ್ದಿರದ ಅತಿ ಕಷ್ಟಕರ ಸಮಯವನ್ನು ನಾವು ದಾಟುತ್ತಾ ಇದ್ದೇವೆ. (2 ತಿಮೊ. 3:1-5) ಅರ್ಮಗೆದೋನ್‌ ಸಮೀಪಿಸುತ್ತಾ ಬರುವಾಗ ಆರ್ಥಿಕ, ಭಾವನಾತ್ಮಕ ಮತ್ತು ಇನ್ನಿತರ ಒತ್ತಡಗಳು ಹೆಚ್ಚೆಚ್ಚಾಗುತ್ತಾ ಬರುತ್ತಿವೆ. ಆದಕಾರಣ ತಮ್ಮ ಕುಟುಂಬವನ್ನು ಸಾಕಿಸಲಹುವ ಜವಾಬ್ದಾರಿಯನ್ನು ಪೂರೈಸಲು ಕೆಲವರಿಗೆ ತುಂಬ ಕಷ್ಟಕರವಾಗಿರುವುದು ಆಶ್ಚರ್ಯವೇನಲ್ಲ. ಅವರು ಆಯಾಸಗೊಂಡು, ಬಸವಳಿದು, ಬಳಲಿಬೆಂಡಾಗುತ್ತಾರೆ, ಅವರ ಶಕ್ತಿಯೆಲ್ಲಾ ಉಡುಗಿಹೋಗುತ್ತದೆ. ಇದು ನಿಮ್ಮ ವಿಷಯದಲ್ಲೂ ನಿಜವಾಗಿರುವಲ್ಲಿ ನೀವು ಆ ಒತ್ತಡವನ್ನು ಹೇಗೆ ನಿಭಾಯಿಸಬಲ್ಲಿರಿ?

12 ಯೇಸು ತನ್ನ ಶಿಷ್ಯರಿಗೆ ಸಹಾಯಕನನ್ನು ಅಂದರೆ ದೇವರ ಪವಿತ್ರಾತ್ಮವನ್ನು ಕೊಡುವೆನೆಂದು ವಚನವಿತ್ತದ್ದನ್ನು ನೆನಪಿಸಿಕೊಳ್ಳಿ. (ಯೋಹಾನ 14:16, 17 ಓದಿ.) ಅದು ಇಡೀ ವಿಶ್ವದಲ್ಲೇ ಅತಿ ಬಲಾಢ್ಯವಾದ ಶಕ್ತಿ. ಅದರ ಮೂಲಕ ನಾವು ಯಾವುದೇ ಕಷ್ಟಪರೀಕ್ಷೆಯನ್ನು ತಾಳಿಕೊಳ್ಳಲು ಬೇಕಾದ “ಅತ್ಯಧಿಕ” ಬಲವನ್ನು ಯೆಹೋವನು ನೀಡಬಲ್ಲನು. (ಎಫೆ. 3:20) ಈ ಬಲಾಢ್ಯ ಶಕ್ತಿಯ ಮೇಲೆ ಆತುಕೊಂಡಲ್ಲಿ, ನಾವು ‘ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದರೂ’ ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ಪಡಕೊಳ್ಳುತ್ತೇವೆ ಎಂದು ಅಪೊಸ್ತಲ ಪೌಲನು ಹೇಳಿದನು. (2 ಕೊರಿಂ. 4:7, 8) ಯೆಹೋವನು ಒತ್ತಡವನ್ನು ತೆಗೆದುಹಾಕುತ್ತೇನೆಂದು ಮಾತುಕೊಡುವುದಿಲ್ಲ, ಆದರೆ ಅದನ್ನು ನಿಭಾಯಿಸಲು ಬೇಕಾದ ಬಲವನ್ನು ತನ್ನ ಪವಿತ್ರಾತ್ಮದ ಮೂಲಕ ಕೊಡುವೆನೆಂದು ನಮಗೆ ಆಶ್ವಾಸನೆ ನೀಡುತ್ತಾನೆ.—ಫಿಲಿ. 4:13.

13. (ಎ) ಒಬ್ಬಾಕೆ ಯುವ ಸಹೋದರಿ ಕಷ್ಟಕರ ಸನ್ನಿವೇಶವನ್ನು ನಿಭಾಯಿಸಲು ಬಲಹೊಂದಿರುವುದು ಹೇಗೆ? (ಬಿ) ತದ್ರೀತಿಯ ಯಾವ ಉದಾಹರಣೆಗಳು ನಿಮಗೆ ಗೊತ್ತು?

13 ಸ್ಟೆಫಾನೀ ಎಂಬ 19 ವರ್ಷದ ರೆಗ್ಯುಲರ್‌ ಪಯನೀಯರಳ ಉದಾಹರಣೆಯನ್ನು ಗಮನಿಸಿ. 12ನೇ ವಯಸ್ಸಿನಲ್ಲಿ ಅವಳಿಗೆ ಲಕ್ವ ಹೊಡೆಯಿತು. ಆಕೆಗೆ ಬ್ರೇನ್‌ ಟ್ಯೂಮರ್‌ ಇದೆಯೆಂದು ತಪಾಸಣೆಯಿಂದ ತಿಳಿದುಬಂತು. ಅಂದಿನಿಂದ ಈ ವರೆಗೆ ಅವಳಿಗೆ ಎರಡು ಶಸ್ತ್ರಕ್ರಿಯೆಗಳು ನಡೆದಿವೆ, ವಿಕಿರಣ ಚಿಕಿತ್ಸೆಯನ್ನೂ ಪಡೆದಿದ್ದಾಳೆ. ಬಳಿಕ ಇನ್ನೆರಡು ಸಾರಿ ಲಕ್ವಹೊಡೆಯಿತು. ಇದರಿಂದ ಆಕೆಯ ದೇಹದ ಎಡಭಾಗವು ಸ್ವಲ್ಪವೇ ಚಲಿಸುತ್ತದೆ ಮತ್ತು ದೃಷ್ಟಿ ಕಡಿಮೆಯಾಗಿದೆ. ಹಾಗಿದ್ದರೂ ಸ್ಟೆಫಾನೀಗೆ ಕ್ರೈಸ್ತ ಕೂಟ, ಕ್ಷೇತ್ರ ಸೇವೆ ಮುಂತಾದ ಹೆಚ್ಚು ಪ್ರಮುಖ ವಿಷಯಗಳಲ್ಲಿ ಪಾಲ್ಗೊಳ್ಳಲು ಶಕ್ತಿಯಿದೆ. ಯೆಹೋವನ ಪವಿತ್ರಾತ್ಮವು ತನಗೆ ಅನೇಕ ವಿಧಗಳಲ್ಲಿ ತಾಳಿಕೊಳ್ಳಲು ಸಹಾಯಮಾಡುತ್ತದೆಂದು ಅವಳು ಗ್ರಹಿಸುತ್ತಾಳೆ. ಅವಳು ಎದೆಗುಂದಿ ಹೋದಾಗ ಬೈಬಲಾಧರಿತ ಪ್ರಕಾಶನಗಳಲ್ಲಿರುವ ಜೊತೆಕ್ರೈಸ್ತರ ಅನುಭವಗಳು ಅವಳಲ್ಲಿ ನವಚೈತನ್ಯವನ್ನು ತುಂಬುತ್ತವೆ. ಸಹೋದರ ಸಹೋದರಿಯರು ಪತ್ರಗಳನ್ನು ಕಳುಹಿಸುವ ಮೂಲಕ ಅವಳಿಗೆ ಉತ್ತೇಜನಕೊಡುತ್ತಾರೆ. ಕೂಟಗಳಿಗೆ ಮುಂಚೆ, ನಂತರ ಪ್ರೋತ್ಸಾಹದಾಯಕ ಮಾತುಗಳನ್ನಾಡುವ ಮೂಲಕ ಧೈರ್ಯಕೊಡುತ್ತಾರೆ. ಆಸಕ್ತ ವ್ಯಕ್ತಿಗಳು ಸಹ ಬೈಬಲ್‌ ಅಧ್ಯಯನವನ್ನು ಪಡಕೊಳ್ಳಲು ಅವಳ ಮನೆಗೆ ಹೋಗುವ ಮೂಲಕ ಅವಳು ಕಲಿಸುವ ವಿಷಯಗಳನ್ನು ಗಣ್ಯಮಾಡುತ್ತಾರೆ. ಇವೆಲ್ಲವುಗಳಿಗಾಗಿ ಸ್ಟೆಫಾನೀ ಯೆಹೋವನಿಗೆ ಹೃದಯದಾಳದಿಂದ ಆಭಾರಿ. ತನ್ನ ನೆಚ್ಚಿನ ವಚನವಾದ ಕೀರ್ತನೆ 41:3 ತನ್ನ ವಿಷಯದಲ್ಲಿ ನೆರವೇರಿದೆ ಎಂಬುದು ಅವಳ ನಂಬಿಕೆ.

14. ನಾವು ನಿರುತ್ಸಾಹಗೊಂಡಿರುವಾಗ ಏನನ್ನು ಮಾಡಲೇಬಾರದು? ಏಕೆ?

14 ನಾವು ಆಯಾಸಗೊಂಡಿರುವಾಗ ಅಥವಾ ಒತ್ತಡದ ಕೆಳಗಿರುವಾಗ ಅದನ್ನು ನಿಭಾಯಿಸುವ ವಿಧವು ಆಧ್ಯಾತ್ಮಿಕ ಚಟುವಟಿಕೆಗಳನ್ನು ಕಡಿಮೆಗೊಳಿಸುವುದೇ ಎಂದು ನಾವು ನೆನಸಲೇಬಾರದು. ಅದು ತೀರ ಅವಿವೇಕತನ. ಏಕೆ? ಏಕೆಂದರೆ ನವಚೈತನ್ಯ ಕೊಡುವ ಪವಿತ್ರಾತ್ಮವನ್ನು ನಾವು ಪಡಕೊಳ್ಳುವುದು ವೈಯಕ್ತಿಕ ಮತ್ತು ಕುಟುಂಬ ಬೈಬಲ್‌ ಅಧ್ಯಯನ, ಕ್ಷೇತ್ರ ಸೇವೆ, ಕೂಟಗಳಿಗೆ ಹಾಜರಾಗುವ ಮೂಲಕವೇ. ಕ್ರೈಸ್ತ ಚಟುವಟಿಕೆಗಳು ಯಾವಾಗಲೂ ಚೈತನ್ಯಕರ. (ಮತ್ತಾಯ 11:28, 29 ಓದಿ.) ಎಷ್ಟೋ ಸಾರಿ ಸಹೋದರ ಸಹೋದರಿಯರು ಕೂಟಕ್ಕೆ ಬರುವಾಗ ಆಯಾಸದಿಂದ ಬಳಲಿರುತ್ತಾರೆ. ಆದರೆ ಕೂಟದಿಂದ ಮನೆಗೆ ಹಿಂತೆರಳುವಾಗ ನವಚೈತನ್ಯ ಹೊಂದಿ, ರೀಚಾರ್ಜ್‌ ಮಾಡಿದ ಬ್ಯಾಟರಿಯಂತೆ ಆಧ್ಯಾತ್ಮಿಕವಾಗಿ ಹೊಸ ಬಲವನ್ನು ಪಡೆದಿರುತ್ತಾರೆ!

15. (ಎ) ಕ್ರೈಸ್ತನ ಜೀವನವನ್ನು ಪ್ರಯತ್ನರಹಿತ ಜೀವನವಾಗಿ ಮಾಡುವೆನೆಂದು ಯೆಹೋವನು ವಾಗ್ದಾನಿಸುತ್ತಾನೋ? ಶಾಸ್ತ್ರಾಧಾರದಿಂದ ವಿವರಿಸಿರಿ. (ಬಿ) ದೇವರು ನಮಗೆ ಏನನ್ನು ವಾಗ್ದಾನಿಸುತ್ತಾನೆ? ಇದು ಯಾವ ಪ್ರಶ್ನೆಯನ್ನು ಕೇಳುವಂತೆ ಮಾಡುತ್ತದೆ?

15 ಕ್ರೈಸ್ತ ಶಿಷ್ಯತನದ ಹೊರೆಯು ಭಾರರಹಿತ ಎಂದು ಇದರ ಅರ್ಥವಲ್ಲ ನಿಶ್ಚಯ. ನಂಬಿಗಸ್ತ ಕ್ರೈಸ್ತರಾಗಿರಲು ಪ್ರಯತ್ನ ಬೇಕೇಬೇಕು. (ಮತ್ತಾ. 16:24-26; ಲೂಕ 13:24) ಆದರೂ ಪವಿತ್ರಾತ್ಮದ ಮೂಲಕವಾಗಿ ಯೆಹೋವನು ದಣಿದವನಿಗೆ ಬಲವನ್ನು ಕೊಡಶಕ್ತನು. “ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು” ಎಂದು ಬರೆದನು ಪ್ರವಾದಿ ಯೆಶಾಯನು. (ಯೆಶಾ. 40:29-31) ವಿಷಯವು ಹೀಗಿರುವಾಗ, ನಮ್ಮ ಕ್ರೈಸ್ತ ಚಟುವಟಿಕೆಗಳು ನಮ್ಮನ್ನು ಆಯಾಸಗೊಳಿಸುವುದಾದರೆ ಅದಕ್ಕೆ ನಿಜವಾದ ಮೂಲಕಾರಣ ಯಾವುದೆಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವುದು ಒಳ್ಳೇದು.

16. ಆಯಾಸ ಅಥವಾ ನಿರುತ್ಸಾಹಕ್ಕೆ ಕಾರಣವಾಗಿರುವ ವಿಷಯಗಳನ್ನು ವರ್ಜಿಸಲು ನಾವೇನು ಮಾಡಸಾಧ್ಯ?

16 ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವಂತೆ’ ಯೆಹೋವನ ವಾಕ್ಯವು ನಮ್ಮನ್ನು ಪ್ರೇರೇಪಿಸುತ್ತದೆ. (ಫಿಲಿ. 1:10) ಕ್ರೈಸ್ತ ಜೀವನಮಾರ್ಗವನ್ನು ಒಂದು ದೀರ್ಘ ಓಟಕ್ಕೆ ಹೋಲಿಸುತ್ತಾ ಅಪೊಸ್ತಲ ಪೌಲನು ದೇವಪ್ರೇರಣೆಯಿಂದ ಪ್ರಬೋಧಿಸಿದ್ದು: ‘ನಾವು ಎಲ್ಲ ಭಾರವನ್ನೂ ತೆಗೆದುಹಾಕಿ ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ.’ (ಇಬ್ರಿ. 12:1, 2) ನಮ್ಮನ್ನು ಆಯಾಸಗೊಳಿಸುವ ನಿರರ್ಥಕ ಬೆನ್ನಟ್ಟುವಿಕೆಗಳನ್ನು, ಅನಾವಶ್ಯಕ ಭಾರಗಳನ್ನು ವರ್ಜಿಸುವಂತೆ ಪೌಲನು ಇಲ್ಲಿ ತಿಳಿಸುತ್ತಾನೆ. ನಮ್ಮಲ್ಲಿ ಕೆಲವರು ಈಗಾಗಲೇ ಕಾರ್ಯಮಗ್ನವಾಗಿರುವ ತಮ್ಮ ಜೀವನಕ್ಕೆ ತೀರಾ ಹೆಚ್ಚನ್ನು ತುರುಕಿಸಲು ಒಂದುವೇಳೆ ಪ್ರಯತ್ನಿಸುತ್ತಿರಬಹುದು. ನಿಮಗೆ ಹೆಚ್ಚು ಆಯಾಸವಾದಂತೆ ಮತ್ತು ಒತ್ತಡದ ಕೆಳಗಿರುವಂತೆ ಭಾಸವಾಗುತ್ತದೋ? ಹಾಗಾದರೆ ಐಹಿಕ ಕೆಲಸಗಳಿಗೆ ಎಷ್ಟು ಸಮಯಶಕ್ತಿಯನ್ನು ಕೊಡುತ್ತಿದ್ದೀರಿ, ವಿನೋದವಿಹಾರಕ್ಕಾಗಿ ಎಷ್ಟು ಬಾರಿ ಪ್ರಯಾಣಿಸುತ್ತೀರಿ, ಕ್ರೀಡೆ ಹಾಗೂ ಇತರ ವಿನೋದಾವಳಿಗಳನ್ನು ಎಷ್ಟು ತೀವ್ರಾಸಕ್ತಿಯಿಂದ ಬೆನ್ನಟ್ಟುತ್ತೀರಿ ಎಂಬುದನ್ನು ಪರಿಶೀಲಿಸುವ ಮೂಲಕ ಪ್ರಯೋಜನ ಹೊಂದಸಾಧ್ಯವಿದೆ. ನಮ್ಮ ಇತಿಮಿತಿಗಳನ್ನು ಅರಿತುಕೊಂಡು ಅನಾವಶ್ಯಕ ಚಟುವಟಿಕೆಗಳನ್ನು ಕಡಿಮೆಗೊಳಿಸುವಂತೆ ವಿವೇಚನೆ ಹಾಗೂ ನಮ್ರತೆಯು ನಮ್ಮೆಲ್ಲರನ್ನು ಪ್ರೇರಿಸಬೇಕು.

17. ಕೆಲವರು ನಿರುತ್ಸಾಹಗೊಳ್ಳಬಹುದೇಕೆ? ಆದರೆ ಯೆಹೋವನು ಈ ವಿಷಯದಲ್ಲಿ ನಮಗೆ ಯಾವ ಆಶ್ವಾಸನೆ ಕೊಡುತ್ತಾನೆ?

17 ಈ ಲೋಕದ ಅಂತ್ಯವು ನಾವು ನಿರೀಕ್ಷಿಸಿದಷ್ಟು ಬೇಗನೆ ಬರಲಿಲ್ಲ ಎಂಬ ಕಾರಣದಿಂದಲೂ ನಮ್ಮಲ್ಲಿ ಕೆಲವರು ಸ್ವಲ್ಪಮಟ್ಟಿಗೆ ನಿರುತ್ಸಾಹಗೊಳ್ಳಬಹುದು. (ಜ್ಞಾನೋ. 13:12) ಈ ರೀತಿಯ ಭಾವನೆಯನ್ನು ಹೊಂದುವವರು ಹಬಕ್ಕೂಕ 2:3ರ ಈ ಮಾತುಗಳಿಂದ ಉತ್ತೇಜನ ಪಡಕೊಳ್ಳಸಾಧ್ಯವಿದೆ: “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” ಈ ಲೋಕದ ಅಂತ್ಯವು ನೇಮಿತ ಸಮಯದಲ್ಲಿ ಬಂದೇ ಬರುವುದೆಂಬ ಯೆಹೋವನ ಆಶ್ವಾಸನೆ ನಮಗಿದೆ!

18. (ಎ) ಯಾವ ವಾಗ್ದಾನಗಳು ನಿಮಗೆ ಬಲಕೊಡುತ್ತವೆ? (ಬಿ) ಮುಂದಿನ ಲೇಖನವು ನಮಗೆ ಹೇಗೆ ಪ್ರಯೋಜನಕರ?

18 ಆಯಾಸವೂ ನಿರುತ್ಸಾಹವೂ ಹೇಳಹೆಸರಿಲ್ಲದೆ ಹೋಗುವ ದಿನಕ್ಕಾಗಿ ಯೆಹೋವನ ನಂಬಿಗಸ್ತ ಸೇವಕರೆಲ್ಲರೂ ಆತುರದಿಂದ ಎದುರುನೋಡುತ್ತಾರೆ ನಿಶ್ಚಯ. ಆಗ ಜೀವಿತರೆಲ್ಲರೂ “ತಾರುಣ್ಯದ ಶಕ್ತಿಯನ್ನು” ಪಡೆದುಕೊಳ್ಳುವರು. (ಯೋಬ 33:25, NW) ಇಂದು ಕೂಡ ನಾವು ಚೈತನ್ಯಕರವಾದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಪವಿತ್ರಾತ್ಮದ ಶಕ್ತಿಯ ಮೂಲಕ ಆಂತರ್ಯದಲ್ಲಿ ಬಲಹೊಂದಸಾಧ್ಯವಿದೆ. (2 ಕೊರಿಂ. 4:16; ಎಫೆ. 3:16) ಆಯಾಸದ ಬಳಲಿಕೆಯು ನಿಮ್ಮನ್ನು ನಿತ್ಯನಿರಂತರ ಆಶೀರ್ವಾದವನ್ನು ಕಳಕೊಳ್ಳುವಂತೆ ಮಾಡದಿರಲಿ. ಪ್ರಲೋಭನೆ, ಆಯಾಸ, ನಿರುತ್ಸಾಹದಿಂದ ಬರುವ ಪ್ರತಿಯೊಂದು ಸಂಕಷ್ಟವು ಈ ಕೂಡಲೇ ಅಲ್ಲದಿದ್ದರೂ, ದೇವರ ಹೊಸಲೋಕದಲ್ಲಿ ನಿಶ್ಚಯವಾಗಿಯೂ ಇಲ್ಲವಾಗುವುದು. ಪವಿತ್ರಾತ್ಮವು ಕ್ರೈಸ್ತರಿಗೆ ಹಿಂಸೆಯನ್ನು ತಾಳಿಕೊಳ್ಳುವಂತೆ, ಸಮಾನಸ್ಥರ ಹಾನಿಕರ ಒತ್ತಡವನ್ನು ಎದುರಿಸುವಂತೆ ಹಾಗೂ ಬೇರೆ ಅನೇಕ ರೀತಿಯ ಸಂಕಷ್ಟಗಳನ್ನು ಸಹಿಸುವಂತೆ ಹೇಗೆ ಬಲಕೊಡುತ್ತದೆ ಎಂದು ನಾವು ಮುಂದಿನ ಲೇಖನದಲ್ಲಿ ಪರಿಶೀಲಿಸೋಣ.

ನಿಮ್ಮ ಉತ್ತರವೇನು?

• ಬೈಬಲ್‌ ಓದುವಿಕೆಯಿಂದ ನಾವು ಹೇಗೆ ಬಲಹೊಂದುತ್ತೇವೆ?

• ಪ್ರಾರ್ಥನೆ ಮತ್ತು ಧ್ಯಾನವು ನಮ್ಮನ್ನು ಹೇಗೆ ಬಲಪಡಿಸುತ್ತದೆ?

• ನಿರುತ್ಸಾಹಕ್ಕೆ ಕಾರಣವಾಗಬಹುದಾದ ವಿಷಯಗಳನ್ನು ನೀವು ಹೇಗೆ ವರ್ಜಿಸಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 24ರಲ್ಲಿರುವ ಚಿತ್ರ]

ಕ್ರೈಸ್ತ ಕೂಟಗಳು ನಮ್ಮನ್ನು ಆಧ್ಯಾತ್ಮಿಕವಾಗಿ ಚೈತನ್ಯಗೊಳಿಸುತ್ತವೆ