ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವುದೇ ಸಂಕಷ್ಟವನ್ನು ಜಯಿಸಲು ಬಲಹೊಂದಿರಿ

ಯಾವುದೇ ಸಂಕಷ್ಟವನ್ನು ಜಯಿಸಲು ಬಲಹೊಂದಿರಿ

ಯಾವುದೇ ಸಂಕಷ್ಟವನ್ನು ಜಯಿಸಲು ಬಲಹೊಂದಿರಿ

“ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿ. 4:13.

1. ಯೆಹೋವನ ಜನರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಾರೆ ಏಕೆ?

ಒಂದಲ್ಲ ಒಂದು ರೀತಿಯ ಸಂಕಷ್ಟವನ್ನು ಅನುಭವಿಸುವುದು ಯೆಹೋವನ ಜನರಿಗೆ ಹೊಸತೇನಲ್ಲ. ಕೆಲವು ಸಂಕಷ್ಟಗಳು ನಮ್ಮ ಸ್ವಂತ ಅಪರಿಪೂರ್ಣತೆಯಿಂದಲೋ ನಾವು ಜೀವಿಸುತ್ತಿರುವ ಭ್ರಷ್ಟ ಲೋಕದಿಂದಲೋ ಬಂದದ್ದಾಗಿವೆ. ಇನ್ನೂ ಕೆಲವು ಸಂಕಷ್ಟಗಳಾದರೋ ದೇವರನ್ನು ಸೇವಿಸುವ ಮತ್ತು ಸೇವಿಸದಿರುವ ಜನರ ಮಧ್ಯೆಯಿರುವ ವೈರತ್ವದಿಂದ ಬರುತ್ತವೆ. (ಆದಿ. 3:15) ಆದರೆ ಮಾನವ ಇತಿಹಾಸದ ಆರಂಭದಿಂದಲೇ ದೇವರು ತನ್ನ ನಂಬಿಗಸ್ತ ಸೇವಕರಿಗೆ ಧಾರ್ಮಿಕ ಹಿಂಸೆಯನ್ನು ಸಹಿಸಿಕೊಳ್ಳಲು, ಸಮಾನಸ್ಥರ ಹಾನಿಕರ ಒತ್ತಡವನ್ನು ಎದುರಿಸಲು ಹಾಗೂ ಬೇರೆಲ್ಲಾ ರೀತಿಯ ಸಂಕಷ್ಟಗಳನ್ನು ತಾಳಿಕೊಳ್ಳಲು ಸಹಾಯಮಾಡಿದ್ದಾನೆ. ನಾವು ಕೂಡ ತಾಳಿಕೊಳ್ಳುವಂತೆ ಆತನ ಪವಿತ್ರಾತ್ಮವು ನಮಗೆ ಬಲವನ್ನು ಕೊಡಬಲ್ಲದು.

ಧಾರ್ಮಿಕ ಹಿಂಸೆಯನ್ನು ಎದುರಿಸಲು ಸಹಾಯ

2. ಧಾರ್ಮಿಕ ಹಿಂಸೆಯ ಉದ್ದೇಶವೇನು? ಅದು ಯಾವ ವಿವಿಧ ರೀತಿಗಳಲ್ಲಿ ಬರುತ್ತದೆ?

2 ಜನರ ಧಾರ್ಮಿಕ ನಂಬಿಕೆ ಅಥವಾ ವಿಶ್ವಾಸಗಳಿಗಾಗಿ ಅವರಿಗೆ ಉದ್ದೇಶಪೂರ್ವಕವಾಗಿ ಕಿರುಕುಳಕೊಟ್ಟು ಹಾನಿ ಮಾಡುವುದೇ ಧಾರ್ಮಿಕ ಹಿಂಸೆ. ಅದರ ಉದ್ದೇಶವು, ಅಂಥ ಧಾರ್ಮಿಕ ನಂಬಿಕೆಗಳನ್ನು ಮಟ್ಟಹಾಕಿ, ಅದರ ಹಬ್ಬುವಿಕೆಯನ್ನು ತಡೆದು, ವಿಶ್ವಾಸಿಗಳ ಸಮಗ್ರತೆಯನ್ನು ಮುರಿಯುವುದೇ ಆಗಿದೆ. ಹಿಂಸೆಯು ವಿವಿಧ ರೀತಿಗಳಲ್ಲಿ ಬರಸಾಧ್ಯವಿದೆ. ಕೆಲವು ನೇರವಾಗಿ ಮತ್ತು ಇನ್ನು ಕೆಲವು ಮರೆಯಾಗಿ ಬರಸಾಧ್ಯ. ಸೈತಾನನ ಇಂಥ ಆಕ್ರಮಣಗಳನ್ನು ಪ್ರಾಯದ ಸಿಂಹ ಮತ್ತು ಸರ್ಪದ ಆಕ್ರಮಣಕ್ಕೆ ಬೈಬಲ್‌ ಹೋಲಿಸುತ್ತದೆ.—ಕೀರ್ತನೆ 91:13 ಓದಿ.

3. ಸಿಂಹದಂತಹ ಮತ್ತು ಸರ್ಪದಂತಹ ಹಿಂಸೆಯ ವಿಧಗಳು ಯಾವುವು?

3 ಕೆರಳಿದ ಕ್ರೂರ ಸಿಂಹದಂತೆ ಸೈತಾನನು ಅನೇಕವೇಳೆ ಹಿಂಸೆ, ಸೆರೆವಾಸ, ನಿಷೇಧಗಳ ಮೂಲಕ ನೇರವಾದ ಮುಖಾಕ್ರಮಣಗಳನ್ನು ಮಾಡಿದ್ದಾನೆ. (ಕೀರ್ತ. 94:20) ಸೈತಾನನು ಬಳಸಿದ ಅಂಥ ಕುತಂತ್ರಗಳ ಹಲವಾರು ವೃತ್ತಾಂತಗಳನ್ನು ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಕೆಲಸಕಾರ್ಯಗಳನ್ನು ವರ್ಣಿಸುವ ವರ್ಷಪುಸ್ತಕವು (ಇಂಗ್ಲಿಷ್‌) ವರದಿಸುತ್ತದೆ. ಕೆಲವೊಮ್ಮೆ ಪಾದ್ರಿಗಳಿಂದ ಅಥವಾ ರಾಜಕೀಯ ದುರಭಿಮಾನಿಗಳಿಂದ ಪ್ರೇರಿಸಲ್ಪಟ್ಟ ಪುಂಡರ ದೊಂಬಿಗಳು ದೇವಜನರನ್ನು ಅನೇಕ ಸ್ಥಳಗಳಲ್ಲಿ ದುರುಪಚರಿಸಿವೆ. ಈ ಸಿಂಹಸದೃಶ ಆಕ್ರಮಣಗಳು ಸ್ವಲ್ಪ ಜನರನ್ನು ಯೆಹೋವನ ಸೇವೆಯನ್ನು ಬಿಟ್ಟುಬಿಡುವಂತೆಯೂ ಮಾಡಿವೆ. ಪಿಶಾಚನು ಸರ್ಪದ ಹಾಗೆ ಮರೆಯಾದ ಸ್ಥಳಗಳಲ್ಲಿ ಅವಿತುಕೊಂಡು ಕುಟಿಲ ರೀತಿಯಲ್ಲಿ ಸಹ ಆಕ್ರಮಣ ಮಾಡುತ್ತಾನೆ. ಹೀಗೆ ತನ್ನ ಚಿತ್ತವನ್ನು ಮಾಡುವುದಕ್ಕೋಸ್ಕರ ಜನರ ಮನಸ್ಸನ್ನು ಕೆಡಿಸಿ ವಂಚಿಸುತ್ತಾನೆ. ಇಂಥ ಆಕ್ರಮಣಗಳ ಉದ್ದೇಶವೇನು? ನಮ್ಮ ಆಧ್ಯಾತ್ಮಿಕತೆಯನ್ನು ದುರ್ಬಲಗೊಳಿಸಿ, ಭ್ರಷ್ಟಗೊಳಿಸುವುದೇ. ಆದರೆ ದೇವರ ಪವಿತ್ರಾತ್ಮದ ಮೂಲಕವಾಗಿ ಆ ಎರಡೂ ರೀತಿಯ ಹಿಂಸೆಯನ್ನು ನಾವು ಜಯಿಸಬಲ್ಲೆವು.

4, 5. ಹಿಂಸೆಗಾಗಿ ಸಿದ್ಧರಾಗುವ ಅತ್ಯುತ್ತಮ ವಿಧಾನ ಯಾವುದು? ಏಕೆ? ಒಂದು ಉದಾಹರಣೆ ಕೊಡಿ.

4 ಭವಿಷ್ಯತ್ತಿನಲ್ಲಿ ಬರಬಹುದಾದ ಹಿಂಸೆಯ ಸನ್ನಿವೇಶಗಳನ್ನು ಊಹಿಸಿಕೊಳ್ಳುವುದು ಅದಕ್ಕಾಗಿ ಸಿದ್ಧರಾಗಿರುವ ಅತ್ಯುತ್ತಮ ವಿಧಾನವಲ್ಲ. ನಿಜ ಸಂಗತಿಯೇನೆಂದರೆ ನಾವು ಯಾವ ರೀತಿಯ ಹಿಂಸೆಯನ್ನು ಎದುರಿಸಬಹುದು ಎಂಬುದೇ ನಮಗೆ ಗೊತ್ತಿಲ್ಲ. ಆದ್ದರಿಂದ ಎಂದೂ ಸಂಭವಿಸದಿರಬಹುದಾದ ಸಂಗತಿಯ ಕುರಿತು ಚಿಂತಿಸುವುದರಿಂದ ಏನೂ ಪ್ರಯೋಜನವಿಲ್ಲ. ಆದರೂ ನಾವು ಮಾಡಸಾಧ್ಯವಿರುವ ಒಂದು ಸಂಗತಿಯಿದೆ. ಹೆಚ್ಚಿನವರು ಹಿಂಸೆಯನ್ನು ಯಶಸ್ವಿಕರವಾಗಿ ತಾಳಿಕೊಂಡದ್ದು ಬೈಬಲಿನಲ್ಲಿ ದಾಖಲಾದ ಸಮಗ್ರತೆ ಪಾಲಕರ ನಂಬಿಗಸ್ತ ಜೀವನಮಾರ್ಗವನ್ನೂ ಹಾಗೂ ಯೇಸುವಿನ ಬೋಧನೆಗಳನ್ನೂ ಮಾದರಿಯನ್ನೂ ಧ್ಯಾನಿಸುವ ಮೂಲಕವೇ. ಇದು ಯೆಹೋವನ ಮೇಲಣ ಅವರ ಪ್ರೀತಿಯನ್ನು ಗಾಢಗೊಳಿಸಿದೆ. ಎದುರಾದ ಯಾವುದೇ ಸಂಕಷ್ಟಗಳನ್ನು ಜಯಿಸಲು ಈ ಪ್ರೀತಿಯೇ ಅವರಿಗೆ ಸಹಾಯಮಾಡಿದೆ.

5 ಮಲಾವಿ ದೇಶದ ನಮ್ಮ ಇಬ್ಬರು ಸಹೋದರಿಯರ ಉದಾಹರಣೆಯನ್ನು ಪರಿಗಣಿಸಿ. ರಾಜಕೀಯ ಪಾರ್ಟಿ ಕಾರ್ಡ್‌ಗಳನ್ನು ಅವರು ಖರೀದಿಸುವಂತೆ ಮಾಡಲು ಪಾತಕಿಗಳ ದೊಂಬಿಯೊಂದು ಅವರನ್ನು ಹೊಡೆದು, ವಿವಸ್ತ್ರಮಾಡಿ, ಮಾನಭಂಗಮಾಡುವ ಬೆದರಿಕೆ ಹಾಕಿತು. ಬೆತೆಲ್‌ ಕುಟುಂಬದ ಸದಸ್ಯರು ಕೂಡ ಪಾರ್ಟಿ ಕಾರ್ಡ್‌ಗಳನ್ನು ಖರೀದಿಸಿದ್ದಾರೆ ಎಂದು ಆ ದೊಂಬಿಯು ಸುಳ್ಳು ಹೇಳಿತು. ಸಹೋದರಿಯರ ಪ್ರತಿಕ್ರಿಯೆ ಏನಾಗಿತ್ತು? “ನಾವು ಯೆಹೋವ ದೇವರನ್ನು ಮಾತ್ರ ಸೇವಿಸುತ್ತೇವೆ, ಮನುಷ್ಯರನ್ನಲ್ಲ. ಆದ್ದರಿಂದ ಬ್ರಾಂಚ್‌ ಆಫೀಸ್‌ನ ಸಹೋದರರು ಕಾರ್ಡನ್ನು ಖರೀದಿಸಲಿ ಖರೀದಿಸದಿರಲಿ, ನಾವಂತೂ ಖರೀದಿಸುವುದೇ ಇಲ್ಲ. ನಮ್ಮನ್ನು ಕೊಂದರೂ ಸರಿಯೇ!” ಈ ಧೀರ ನಿಲುವನ್ನು ತೆಗೆದುಕೊಂಡ ನಂತರ ಆ ಸಹೋದರಿಯರನ್ನು ಬಿಟ್ಟುಬಿಡಲಾಯಿತು.

6, 7. ಹಿಂಸೆಯನ್ನು ಎದುರಿಸಲು ಯೆಹೋವನು ತನ್ನ ಸೇವಕರಿಗೆ ಹೇಗೆ ಬಲಕೊಡುತ್ತಾನೆ?

6 ಥೆಸಲೊನೀಕದ ಕ್ರೈಸ್ತರು “ಬಹಳ ಸಂಕಟದ ಕೆಳಗೆ” ಸತ್ಯದ ಸಂದೇಶವನ್ನು ಸ್ವೀಕರಿಸಿದ್ದರು, ಆದರೂ “ಪವಿತ್ರಾತ್ಮದಿಂದ ಉಂಟಾಗುವ ಆನಂದದಿಂದ” ಎಂಬುದಾಗಿ ಅಪೊಸ್ತಲ ಪೌಲನು ಗಮನಿಸಿದನು. (1 ಥೆಸ. 1:6) ನಿಶ್ಚಯವಾಗಿಯೂ ಹಿಂಸೆಯನ್ನು ಎದುರಿಸಿದ ಮತ್ತು ಜಯಿಸಿದ ಹಿಂದಿನ ಹಾಗೂ ಇಂದಿನ ಅನೇಕ ಕ್ರೈಸ್ತರು ತಮಗೆ ಎದುರಾದ ಅನೇಕ ಕಷ್ಟಸಂಕಟಗಳ ಉತ್ತುಂಗದಲ್ಲಿಯೂ ಆಂತರಿಕ ಶಾಂತಿಯನ್ನು ಅನುಭವಿಸಿದರೆಂದು ವರದಿಸಿದ್ದಾರೆ. ಈ ಶಾಂತಿಯು ದೇವರ ಪವಿತ್ರಾತ್ಮದ ಫಲದ ಒಂದು ಅಂಶ. (ಗಲಾ. 5:22) ಫಲಿತಾಂಶವಾಗಿ ಆ ಶಾಂತಿಯು ಅವರ ಹೃದಯವನ್ನೂ ಮಾನಸಿಕ ಶಕ್ತಿಯನ್ನೂ ಕಾಪಾಡಿತು. ಹೌದು ತನ್ನ ಸೇವಕರು ಸಂಕಷ್ಟಗಳನ್ನು ನಿಭಾಯಿಸುವಂತೆ ಹಾಗೂ ಹಠಾತ್ತನೆ ವಿಪತ್ತುಗಳು ಬಂದೆರಗುವಾಗ ವಿವೇಕದಿಂದ ಕ್ರಿಯೆಗೈಯುವಂತೆ ಬೇಕಾದ ಬಲವನ್ನು ಕೊಡಲು ಯೆಹೋವನು ತನ್ನ ಕಾರ್ಯಕಾರಿ ಶಕ್ತಿಯನ್ನು ಬಳಸುತ್ತಾನೆ. *

7 ಕ್ರೂರ ಹಿಂಸೆಯ ಎದುರಲ್ಲೂ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ದೇವಜನರು ತೋರಿಸಿದ ದೃಢಸಂಕಲ್ಪವನ್ನು ಕಂಡು ಅನೇಕ ಜನರು ಬೆರಗಾಗಿದ್ದಾರೆ. ಅವರಿಗೆ ಆ ಸಾಕ್ಷಿಗಳು ಮನುಷ್ಯಾತೀತ ಬಲದಿಂದ ತುಂಬಿದವರಂತೆ ಕಂಡುಬಂದರು. ವಾಸ್ತವದಲ್ಲಿ ಅವರು ಮನುಷ್ಯಾತೀತ ಬಲದಿಂದಲೇ ತುಂಬಿದ್ದರು! ಅಪೊಸ್ತಲ ಪೇತ್ರನು ಈ ಆಶ್ವಾಸನೆಯನ್ನಿತ್ತನು: “ಕ್ರಿಸ್ತನ ಹೆಸರಿನ ನಿಮಿತ್ತ ನೀವು ನಿಂದಿಸಲ್ಪಡುತ್ತಿರುವುದಾದರೆ ಸಂತೋಷಿತರು; ಏಕೆಂದರೆ ಮಹಿಮೆಯ ಆತ್ಮವು, ದೇವರ ಪವಿತ್ರಾತ್ಮವು ಸಹ ನಿಮ್ಮಲ್ಲಿ ನೆಲೆಗೊಂಡಿದೆ.” (1 ಪೇತ್ರ 4:14) ನಾವು ನೀತಿಯ ಮಟ್ಟಗಳನ್ನು ಪಾಲಿಸಿದ್ದಕ್ಕಾಗಿ ಹಿಂಸಿಸಲ್ಪಡುತ್ತೇವೆ ಎಂಬ ನಿಜತ್ವವು ತಾನೇ ನಮಗೆ ದೇವರ ಮೆಚ್ಚಿಗೆಯಿದೆ ಎಂಬುದನ್ನು ತೋರಿಸಿಕೊಡುತ್ತದೆ. (ಮತ್ತಾ. 5:10-12; ಯೋಹಾ. 15:20) ಯೆಹೋವನ ಆಶೀರ್ವಾದದ ಈ ರುಜುವಾತು ಎಷ್ಟೊಂದು ಸಂತೋಷ ತರುತ್ತದೆ!

ಸಮಾನಸ್ಥರ ಒತ್ತಡವನ್ನು ಎದುರಿಸಲು ಸಹಾಯ

8. (ಎ) ಸಮಾನಸ್ಥರ ಒತ್ತಡವನ್ನು ಜಯಿಸಲು ಯೆಹೋಶುವ ಕಾಲೇಬರು ಹೇಗೆ ಶಕ್ತರಾದರು? (ಬಿ) ಯೆಹೋಶುವ ಕಾಲೇಬರ ಉದಾಹರಣೆಯಿಂದ ನಾವೇನು ಕಲಿಯುತ್ತೇವೆ?

8 ಮರೆಯಾಗಿ ಬರುವ ವಿರೋಧವೂ ಒಂದಿದೆ. ಅದನ್ನೂ ಕ್ರೈಸ್ತರು ಎದುರಿಸಬೇಕು. ಅದು ಯಾವುದೆಂದರೆ ಸಮಾನಸ್ಥರ ನಕಾರಾತ್ಮಕ ಒತ್ತಡವೇ. ಆದರೂ ಈ ಲೋಕದ ಆತ್ಮಕ್ಕಿಂತ ಯೆಹೋವನ ಪವಿತ್ರಾತ್ಮವು ಹೆಚ್ಚು ಬಲಾಢ್ಯವಾಗಿರುವುದರಿಂದ ನಮ್ಮನ್ನು ಪರಿಹಾಸ್ಯ ಮಾಡುವ, ನಮ್ಮ ಕುರಿತು ಸುಳ್ಳುಗಳನ್ನು ಹಬ್ಬಿಸುವ ಅಥವಾ ತಮ್ಮ ಮಟ್ಟಗಳಿಗೆ ನಮ್ಮನ್ನು ಹೊಂದಿಸಿಕೊಳ್ಳಲು ಬಲವಂತಪಡಿಸುವ ಜನರ ವಿರೋಧವನ್ನು ನಾವು ಜಯಿಸಬಲ್ಲೆವು. ಉದಾಹರಣೆಗೆ ಯೆಹೋಶುವ ಮತ್ತು ಕಾಲೇಬರನ್ನು ತಕ್ಕೊಳ್ಳಿ. ಕಾನಾನ್‌ ದೇಶಕ್ಕೆ ಕಳುಹಿಸಲಾದ ಬೇರೆ ಹತ್ತು ಗೂಢಚಾರರ ಅಭಿಪ್ರಾಯವನ್ನು ಅವರು ಒಪ್ಪದಿರುವಂತೆ ಮಾಡಿದ್ದು ಯಾವುದು? ಪವಿತ್ರಾತ್ಮವು ಅವರ ಆಂತರ್ಯವನ್ನು ಪ್ರೇರಿಸಿ ಬೇರೊಂದು ‘ಮನಸ್ಸನ್ನು’ ಉಂಟುಮಾಡಿದ್ದೇ.—ಅರಣ್ಯಕಾಂಡ 13:30; 14:6-10, 24 ಓದಿ.

9. ಅಧಿಕಾಂಶ ಜನರಿಗಿಂತ ಭಿನ್ನರಾಗಿರಲು ಕ್ರೈಸ್ತರು ಬಯಸಬೇಕು ಏಕೆ?

9 ತದ್ರೀತಿಯಲ್ಲಿ ಪವಿತ್ರಾತ್ಮವು ಯೇಸುವಿನ ಅಪೊಸ್ತಲರಿಗೆ ಬಲವನ್ನು ಕೊಟ್ಟಿತು. ಆದ್ದರಿಂದ ಅನೇಕರು ಯಾರನ್ನು ನಿಜಧರ್ಮದ ಬೋಧಕರಾಗಿ ಸನ್ಮಾನಿಸುತ್ತಿದ್ದರೊ ಅವರಿಗಿಂತ ಹೆಚ್ಚಾಗಿ ದೇವರಿಗೆ ಅಪೊಸ್ತಲರು ವಿಧೇಯರಾದರು. (ಅ. ಕಾ. 4:21, 31; 5:29, 32) ಇಂದು ಹೆಚ್ಚಿನವರು ಜಗಳ, ಎದುರಾಟಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ತಮ್ಮ ಸುತ್ತಮುತ್ತಲಿರುವ ಅಧಿಕಾಂಶ ಜನರು ಏನು ಮಾಡುತ್ತಾರೋ ಅದನ್ನೇ ಮಾಡಬಯಸುತ್ತಾರೆ. ನಿಜ ಕ್ರೈಸ್ತರಾದರೋ ಸರಿಯೆಂದು ತಮಗೆ ಮನವರಿಕೆಯಾಗಿರುವ ವಿಷಯದಲ್ಲಿ ಸ್ಥಿರವಾದ ನಿಲುವನ್ನು ತಕ್ಕೊಳ್ಳಬೇಕಾಗಿದೆ. ಹಾಗಿದ್ದರೂ ದೇವರ ಕಾರ್ಯಕಾರಿ ಶಕ್ತಿಯು ಕೊಡುವ ಬಲದಿಂದಾಗಿ ಅವರು ಲೋಕದ ಜನರಿಗಿಂತ ಭಿನ್ನರಾಗಿರಲು ಹೆದರುವುದಿಲ್ಲ. (2 ತಿಮೊ. 1:7) ಸಮಾನಸ್ಥರ ಒತ್ತಡಕ್ಕೆ ಮಣಿಯಬಾರದಾದ ಒಂದು ಕ್ಷೇತ್ರವನ್ನು ನಾವೀಗ ಪರಿಗಣಿಸೋಣ.

10. ಕೆಲವು ಕ್ರೈಸ್ತರು ಯಾವ ಉಭಯಸಂಕಟಕ್ಕೆ ಗುರಿಯಾಗಬಹುದು?

10 ಕೆಲವು ಯೌವನಸ್ಥರು ತಮ್ಮ ಸ್ನೇಹಿತನೊಬ್ಬನು ಬೈಬಲಿಗೆ ವಿರುದ್ಧವಾದ ನಡತೆಯಲ್ಲಿ ಒಳಗೂಡಿದ್ದಾನೆಂದು ಗೊತ್ತಾದಾಗ ಉಭಯಸಂಕಟಕ್ಕೆ ಗುರಿಯಾಗುತ್ತಾರೆ. ತಮ್ಮ ಸ್ನೇಹಿತನಿಗಾಗಿ ಹಿರಿಯರಿಂದ ಆಧ್ಯಾತ್ಮಿಕ ಸಹಾಯವನ್ನು ಕೋರುವುದು ಅವನಿಗೆ ತಮ್ಮಲ್ಲಿರುವ ಭರವಸೆಗೆ ದ್ರೋಹಬಗೆದಂತೆ ಎಂದು ಅವರು ನೆನಸಬಹುದು. ಆದ್ದರಿಂದ ಒಂದು ಬಗೆಯ ತಪ್ಪಾದ ನಿಷ್ಠೆಯು ಹಿರಿಯರಿಗೆ ವಿಷಯವನ್ನು ತಿಳಿಸುವುದರಿಂದ ಅವರನ್ನು ಹಿಮ್ಮೆಟ್ಟಿಸುತ್ತದೆ. ತನ್ನ ಪಾಪವನ್ನು ಅಡಗಿಸಿಡುವಂತೆ ತಪ್ಪಿತಸ್ಥನು ಸ್ನೇಹಿತರ ಮೇಲೆ ಒತ್ತಡವನ್ನು ಸಹ ಹಾಕಬಹುದು. ನಿಶ್ಚಯವಾಗಿಯೂ ಈ ರೀತಿಯ ಸಮಸ್ಯೆಯು ಯೌವನಸ್ಥರಿಗೆ ಮಾತ್ರ ಬರುವುದಿಲ್ಲ, ಪ್ರಾಯಸ್ಥರಿಗೆ ಸಹ ಬರುತ್ತದೆ. ತಮ್ಮ ಸ್ನೇಹಿತನ ಅಥವಾ ಕುಟುಂಬ ಸದಸ್ಯನ ತಪ್ಪನ್ನು ಸಭೆಯ ಹಿರಿಯರಿಗೆ ತಿಳಿಸಲು ಅವರಿಗೂ ಕಷ್ಟವಾಗಬಹುದು. ಆದರೆ ನಿಜ ಕ್ರೈಸ್ತರು ಇಂಥ ಒತ್ತಡಕ್ಕೆ ಹೇಗೆ ಪ್ರತಿಕ್ರಿಯಿಸಬೇಕು?

11, 12. ಸಭೆಯ ಸದಸ್ಯನೊಬ್ಬನು ತನ್ನ ತಪ್ಪನ್ನು ಮುಚ್ಚಿಡುವಂತೆ ನಮ್ಮನ್ನು ಒತ್ತಾಯಿಸುವುದಾದರೆ ಯೋಗ್ಯ ಪ್ರತಿಕ್ರಿಯೆಯು ಯಾವುದು? ಏಕೆ?

11 ಈ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಸಭೆಯಲ್ಲಿರುವ ತನ್ನ ಸ್ನೇಹಿತ ಜೇಮ್ಸ್‌ಗೆ ಕಾಮಪ್ರಚೋದಕ ಚಿತ್ರಗಳನ್ನು ನೋಡುವ ಹವ್ಯಾಸವಿದೆಯೆಂದು ಜಾನ್‌ ಎಂಬ ಯುವ ಸಹೋದರನಿಗೆ ಗೊತ್ತಾಗುತ್ತದೆ ಎಂದು ನೆನಸಿ. ಜೇಮ್ಸ್‌ ಈ ತಪ್ಪನ್ನು ಮಾಡುತ್ತಿರುವುದರಿಂದ ತನಗೆ ತುಂಬ ಚಿಂತೆಯಾಗಿದೆ ಎಂದು ಜಾನ್‌ ಅವನಿಗೆ ಹೇಳುತ್ತಾನೆ. ಆದರೂ ಜೇಮ್ಸ್‌ ಅವನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಜೇಮ್ಸ್‌ ಆ ವಿಷಯವನ್ನು ಸಭಾ ಹಿರಿಯರಿಗೆ ತಿಳಿಸಬೇಕೆಂದು ಜಾನ್‌ ಅವನಿಗೆ ಹೇಳುವಾಗ, ತಾವು ನಿಜ ಮಿತ್ರರಾಗಿದ್ದಲ್ಲಿ ಆ ಬಗ್ಗೆ ಯಾರಿಗೂ ಬಾಯ್ಬಿಡಬಾರದೆಂದು ಜೇಮ್ಸ್‌ ಹೇಳುತ್ತಾನೆ. ಎಲ್ಲಿ ತಮ್ಮ ಸ್ನೇಹ ಕಡಿದುಹೋಗುತ್ತದೋ ಎಂದು ಜಾನ್‌ ಹೆದರಬೇಕೋ? ತಪ್ಪನ್ನು ಹಿರಿಯರಿಗೆ ತಿಳಿಸಿದಾಗ ಜೇಮ್ಸ್‌ ಒಂದುವೇಳೆ ಎಲ್ಲವನ್ನೂ ಅಲ್ಲಗಳೆದರೆ ಅವರು ತನ್ನನ್ನು ನಂಬುವರೋ ಎಂದು ಜಾನ್‌ ಯೋಚಿಸುತ್ತಾನೆ. ಆದರೂ ಜಾನ್‌ ಆ ಬಗ್ಗೆ ಏನೂ ಹೇಳದಿದ್ದಲ್ಲಿ ಸನ್ನಿವೇಶವು ಸುಧಾರಿಸಲಾರದು. ನಿಶ್ಚಯವಾಗಿಯೂ ಅದು ಯೆಹೋವನೊಂದಿಗಿನ ಸುಸಂಬಂಧವನ್ನು ಜೇಮ್ಸ್‌ ಕಳಕೊಳ್ಳುವಂತೆ ಮಾಡುವುದು. “ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ” ಎಂಬ ವಚನವನ್ನು ಜಾನ್‌ ನೆನಪಿಸಿಕೊಳ್ಳಬೇಕು. (ಜ್ಞಾನೋ. 29:25) ಬೇರೇನನ್ನು ಅವನು ಮಾಡಸಾಧ್ಯ? ಅವನು ಪುನಃ ಸ್ನೇಹದಿಂದ ಜೇಮ್ಸ್‌ನನ್ನು ಸಮೀಪಿಸಿ ಅವನ ತಪ್ಪನ್ನು ತೋರಿಸಿಕೊಡಬಹುದು. ಹಾಗೆ ಮಾಡಲು ಧೈರ್ಯ ಬೇಕು ನಿಜ. ಆದರೆ ಈ ಸಾರಿ ತನ್ನ ಸಮಸ್ಯೆಯ ಕುರಿತು ಮಾತಾಡುವ ಅವಕಾಶಕ್ಕಾಗಿ ಜೇಮ್ಸ್‌ ಸಂತೋಷಿಸಲೂಬಹುದು. ಜೇಮ್ಸ್‌ ಹಿರಿಯರೊಂದಿಗೆ ಮಾತಾಡುವಂತೆ ಜಾನ್‌ ಅವನನ್ನು ಪುನಃ ಉತ್ತೇಜಿಸಬೇಕು. ಅವನು ನಿರ್ದಿಷ್ಟ ಸಮಯದೊಳಗೆ ಹಾಗೆ ಮಾಡದಿದ್ದಲ್ಲಿ ತಾನೇ ಅದನ್ನು ಹಿರಿಯರಿಗೆ ತಿಳಿಸುವೆನೆಂದು ಜಾನ್‌ ಹೇಳಬೇಕು.—ಯಾಜ. 5:1.

12 ಇಂಥ ಒಂದು ಸನ್ನಿವೇಶವನ್ನು ನಿಮಗೆಂದಾದರೂ ನಿರ್ವಹಿಸಲು ಇರುವುದಾದರೆ ನೀವು ಕೊಡುವ ಸಹಾಯಹಸ್ತವನ್ನು ನಿಮ್ಮ ಮಿತ್ರನು ಮೊದಮೊದಲು ಗಣ್ಯಮಾಡಲಿಕ್ಕಿಲ್ಲ. ಆದರೆ ನೀವು ಅವನ ಹಿತಾಸಕ್ತಿಯಿಂದಲೇ ಹಾಗೆ ಮಾಡುತ್ತಿದ್ದೀರಿ ಎಂಬುದನ್ನು ಅವನು ತಕ್ಕ ಸಮಯದಲ್ಲಿ ಮನಗಾಣಬಹುದು. ತಪ್ಪಿತಸ್ಥನು ಸಹಾಯವನ್ನು ಸ್ವೀಕರಿಸಿದಲ್ಲಿ ನಿಮ್ಮ ಧೈರ್ಯ ಮತ್ತು ನಿಷ್ಠೆಗಾಗಿ ಅವನು ಸದಾ ಕೃತಜ್ಞನಾಗಿರುವನು. ಅಥವಾ ನಿಮ್ಮ ಮೇಲೆ ಅವನು ಸಿಟ್ಟಿಗೆದ್ದಲ್ಲಿ, ಅಂಥ ಸ್ನೇಹಿತನು ನಿಮಗೆ ನಿಜವಾಗಿ ಬೇಕನಿಸುತ್ತದೋ? ನಮ್ಮ ಮಹಾನ್‌ ಮಿತ್ರನಾದ ಯೆಹೋವನನ್ನು ಮೆಚ್ಚಿಸುವುದೇ ಯಾವಾಗಲೂ ಸೂಕ್ತ. ಆತನನ್ನು ನಾವು ಪ್ರಥಮವಾಗಿ ಇರಿಸಿದ್ದಲ್ಲಿ ಆತನನ್ನು ಪ್ರೀತಿಸುವ ಇತರರು ಕೂಡ ನಮ್ಮ ನಿಷ್ಠೆಗಾಗಿ ನಮ್ಮನ್ನು ಗೌರವಿಸಿ ನಮ್ಮ ನಿಜ ಸ್ನೇಹಿತರಾಗುವರು. ಕ್ರೈಸ್ತ ಸಭೆಯಲ್ಲಿ ನಾವು ಪಿಶಾಚನಿಗೆಂದಿಗೂ ಅವಕಾಶ ಕೊಡಬಾರದು. ನಾವು ಹಾಗೆ ಮಾಡಿದಲ್ಲಿ ಯೆಹೋವನ ಪವಿತ್ರಾತ್ಮವನ್ನು ನಿಜವಾಗಿಯೂ ದುಃಖಪಡಿಸುವೆವು. ಆದರೆ ಕ್ರೈಸ್ತ ಸಭೆಯನ್ನು ಶುದ್ಧವಾಗಿಡುವ ಮೂಲಕ ನಾವು ಪವಿತ್ರಾತ್ಮಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸುವೆವು.—ಎಫೆ. 4:27, 30.

ಎಲ್ಲ ತರದ ಸಂಕಷ್ಟಗಳನ್ನು ತಾಳಿಕೊಳ್ಳಲು ಬಲ

13. ಯಾವ ತರದ ಸಂಕಷ್ಟಗಳನ್ನು ಯೆಹೋವನ ಜನರು ಎದುರಿಸುತ್ತಾ ಇದ್ದಾರೆ? ಆ ಕಷ್ಟಗಳು ಅಷ್ಟು ವ್ಯಾಪಕವಾಗಿರುವುದೇಕೆ?

13 ಸಂಕಷ್ಟವು ಅನೇಕ ರೀತಿಯಲ್ಲಿ ಬರಬಹುದು. ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ, ನೈಸರ್ಗಿಕ ವಿಪತ್ತು, ಪ್ರಿಯರೊಬ್ಬರ ಮರಣ, ಆರೋಗ್ಯ ಸಮಸ್ಯೆ ಇತ್ಯಾದಿ ಅದರಲ್ಲಿ ಸೇರಿವೆ. ನಾವು ‘ಕಠಿನಕಾಲಗಳಲ್ಲಿ’ ಜೀವಿಸುತ್ತಿರುವುದರಿಂದ ಇಂದೋ ನಾಳೆಯೋ ಎಲ್ಲರೂ ಒಂದಲ್ಲ ಒಂದು ತರದ ಸಂಕಷ್ಟವನ್ನು ಎದುರಿಸಲೇಬೇಕೆಂಬುದು ನಿಜ. (2 ತಿಮೊ. 3:1) ಅದು ಸಂಭವಿಸುವಾಗ ನಾವು ಧೈರ್ಯಗೆಡದಿರುವುದು ಪ್ರಾಮುಖ್ಯ. ಯಾವುದೇ ತರದ ಸಂಕಷ್ಟ ಬರಲಿ ಅದನ್ನು ತಾಳಿಕೊಳ್ಳಲು ಪವಿತ್ರಾತ್ಮವು ನಮಗೆ ಬಲವನ್ನು ಕೊಡಬಲ್ಲದು.

14. ಯೋಬನು ತನ್ನ ಸಂಕಷ್ಟಗಳನ್ನು ಸಹಿಸಿಕೊಳ್ಳಲು ಶಕ್ತನಾದದ್ದು ಹೇಗೆ?

14 ಯೋಬನು ಒಂದರ ಮೇಲೊಂದು ಸಂಕಷ್ಟಗಳನ್ನು ಅನುಭವಿಸಿದನು. ಅವನು ತನ್ನ ಸರ್ವಸ್ವವನ್ನು ಅಂದರೆ ಮಕ್ಕಳು, ಸ್ನೇಹಿತರು, ಆರೋಗ್ಯ ಹೀಗೆ ಎಲ್ಲವನ್ನು ಕಳಕೊಂಡನು. ಅವನ ಪತ್ನಿಯು ಸಹ ಯೆಹೋವನಲ್ಲಿ ತನ್ನ ಭರವಸೆಯನ್ನು ಕಳಕೊಂಡಳು. (ಯೋಬ 1:13-19; 2:7-9) ಆದರೂ ಯೋಬನು ಎಲೀಹುವಿನಲ್ಲಿ ನಿಜ ಸಾಂತ್ವನವನ್ನು ಕಂಡುಕೊಂಡನು. ಎಲೀಹುವಿನ ಮತ್ತು ಯೆಹೋವನ ಸ್ವಂತ ಮಾತಿನ ಸಾರಾಂಶ ಹೀಗಿತ್ತು: “ಯೋಬನೇ, ಇದನ್ನು ಕೇಳು! ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿಸು.” (ಯೋಬ 37:14) ತನಗೆ ಬಂದ ಸಂಕಷ್ಟಗಳನ್ನು ತಾಳಿಕೊಳ್ಳಲು ಯೋಬನಿಗೆ ಯಾವುದು ಸಹಾಯಮಾಡಿತು? ನಾವು ನಮ್ಮ ಕಷ್ಟಗಳನ್ನು ತಾಳಿಕೊಳ್ಳುವಂತೆ ಯಾವುದು ಸಹಾಯಮಾಡುತ್ತದೆ? ಯೆಹೋವನ ಶಕ್ತಿ ಮತ್ತು ಪವಿತ್ರಾತ್ಮದ ಅನೇಕಾನೇಕ ರುಜುವಾತುಗಳನ್ನು ನಾವು ನೆನಪಿಸಿಕೊಳ್ಳುತ್ತಾ, ಧ್ಯಾನಿಸುತ್ತಾ ಇರುವುದೇ. (ಯೋಬ 38:1-41; 42:1, 2) ದೇವರು ನಮ್ಮಲ್ಲಿ ತೋರಿಸಿದ ಆಸಕ್ತಿಯ ರುಜುವಾತನ್ನು ನಾವು ವೈಯಕ್ತಿಕವಾಗಿ ಅನುಭವಿಸಿದ ಸಮಯದ ಕುರಿತು ಸಹ ನೆನಪಿಸಿಕೊಳ್ಳಬಹುದು. ಆತನು ನಮ್ಮಲ್ಲಿ ಇನ್ನೂ ಆಸಕ್ತನಾಗಿದ್ದಾನೆ ಎಂಬುದು ನಿಶ್ಚಯ.

15. ಸಂಕಷ್ಟಗಳನ್ನು ತಾಳಿಕೊಳ್ಳಲು ಅಪೊಸ್ತಲ ಪೌಲನಿಗೆ ಬಲ ಕೊಟ್ಟದ್ದು ಯಾವುದು?

15 ಅಪೊಸ್ತಲ ಪೌಲನು ತನ್ನ ನಂಬಿಕೆಗೋಸ್ಕರ ಪ್ರಾಣಾಪಾಯದ ಅನೇಕ ಸಂಕಷ್ಟಗಳನ್ನು ತಾಳಿಕೊಂಡನು. (2 ಕೊರಿಂ. 11:23-28) ಆ ಕಷ್ಟಕರ ಸನ್ನಿವೇಶಗಳಲ್ಲಿ ಅವನು ತನ್ನ ಸಮತೋಲನ ಮತ್ತು ಭಾವನಾತ್ಮಕ ಸ್ಥೈರ್ಯವನ್ನು ಕಾಪಾಡಿಕೊಂಡದ್ದು ಹೇಗೆ? ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾಗಿ ಆತುಕೊಂಡದ್ದರಿಂದಲೇ. ಪ್ರಾಯಶಃ ತನ್ನ ಹುತಾತ್ಮ ಮರಣಕ್ಕೆ ಮುಂಚಿನ ಕಷ್ಟಕರ ಪರೀಕ್ಷೆಯ ಸಮಯದಲ್ಲಿ ಪೌಲನು ಬರೆದದ್ದು: “ನನ್ನ ಮೂಲಕವಾಗಿ ಸಾರುವಿಕೆಯು ಪೂರ್ಣವಾಗಿ ನೆರವೇರುವಂತೆಯೂ ಎಲ್ಲ ಜನಾಂಗಗಳವರು ಅದನ್ನು ಕೇಳಿಸಿಕೊಳ್ಳುವಂತೆಯೂ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನಲ್ಲಿ ಶಕ್ತಿಯನ್ನು ತುಂಬಿಸಿದನು; ಮತ್ತು ನಾನು ಸಿಂಹದ ಬಾಯಿಂದ ಬಿಡಿಸಲ್ಪಟ್ಟೆನು.” (2 ತಿಮೊ. 4:17) ಆದ್ದರಿಂದ ‘ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡುವ’ ಅಗತ್ಯವಿಲ್ಲ ಎಂದು ಪೌಲನು ತನ್ನ ವೈಯಕ್ತಿಕ ಅನುಭವದಿಂದ ಜೊತೆವಿಶ್ವಾಸಿಗಳಿಗೆ ಆಶ್ವಾಸನೆ ಕೊಡಶಕ್ತನಾದನು.—ಫಿಲಿಪ್ಪಿ 4:6, 7, 13 ಓದಿ.

16, 17. ಇಂದು ಸಂಕಷ್ಟಗಳನ್ನು ಎದುರಿಸಲು ತನ್ನ ಜನರಿಗೆ ಯೆಹೋವನು ಹೇಗೆ ಬಲಕೊಡುತ್ತಿದ್ದಾನೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.

16 ಯೆಹೋವನು ತನ್ನ ಜನರಿಗೆ ಹೇಗೆ ಸಹಾಯ ಕೊಡುತ್ತಾನೆ ಎಂಬುದನ್ನು ಕಣ್ಣಾರೆ ಕಂಡ ಪಯನೀಯರಳು ರೋಕ್ಸಾನಾ ಎಂಬಾಕೆ. ನಮ್ಮ ಅಧಿವೇಶನವನ್ನು ಹಾಜರಾಗಲು ಕೆಲವು ದಿವಸ ರಜೆಕೊಡಬೇಕೆಂದು ಅವಳು ತನ್ನ ಕೆಲಸದ ಮಾಲೀಕನನ್ನು ಕೇಳಿದಾಗ ಅವನು ಸಿಟ್ಟಿಗೇರಿದನು. ‘ನೀನು ಹೋದರೆ ನಿನ್ನ ಕೆಲಸ ಹೋಯ್ತು ಅಂತ ನೆನಸಿಕೋ’ ಎಂದು ಗುಡುಗಿದನು. ಆದರೆ ರೋಕ್ಸಾನಾ ತನ್ನ ಕೆಲಸ ಹೋಗಬಾರದೆಂದು ಯೆಹೋವನಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದಳು. ಬಳಿಕ ಅವಳ ಮನಸ್ಸು ಶಾಂತವಾಯಿತು, ಅವಳು ಅಧಿವೇಶನಕ್ಕೆ ಹೋದಳು. ಅಧಿವೇಶನದ ಬಳಿಕ ಸೋಮವಾರದಂದು ಕೆಲಸಕ್ಕೆ ಬಂದಾಗ ಅವಳ ಕೆಲಸ ಹೋಗಿಯೇ ಬಿಟ್ಟಿತು. ರೋಕ್ಸಾನಾ ತುಂಬ ಚಿಂತೆಗೀಡಾದಳು. ಸಂಬಳ ಕಡಿಮೆಯಿದ್ದರೂ ಕುಟುಂಬದ ಪೋಷಣೆಗಾಗಿ ಅವಳಿಗೆ ಆ ಕೆಲಸ ಬೇಕಿತ್ತು. ಪುನಃ ಅವಳು ಪ್ರಾರ್ಥಿಸಿದಳು. ಅಧಿವೇಶನದಲ್ಲಿ ದೇವರು ಆಧ್ಯಾತ್ಮಿಕವಾಗಿ ಒದಗಿಸಿರುವಾಗ ನಿಶ್ಚಯವಾಗಿ ಶಾರೀರಿಕವಾಗಿಯೂ ಒದಗಿಸುವನು ಎಂದು ಅವಳು ಆಲೋಚಿಸಿದಳು. ಮನೆಗೆ ಹಿಂದೆ ಹೋಗುತ್ತಿದ್ದಾಗ, “ಬೇಕಾಗಿದ್ದಾರೆ” ಎಂಬ ಫಲಕ ರೋಕ್ಸಾನಾಳ ಕಣ್ಣಿಗೆ ಬಿತ್ತು. ಒಂದು ಕಂಪನಿಯಲ್ಲಿ ಹೊಲಿಗೆ ಯಂತ್ರವನ್ನು ನಡೆಸಲು ಅನುಭವಸ್ಥ ಕೆಲಸಗಾರರು ಬೇಕಾಗಿದ್ದರು. ಅವಳು ಅರ್ಜಿಹಾಕಿದಳು. ಅವಳಿಗೆ ಯಾವ ಅನುಭವವೂ ಇಲ್ಲ ಎಂದು ಮ್ಯಾನೇಜರ್‌ಗೆ ತಿಳಿದರೂ ಅವನು ಅವಳಿಗೆ ಕೆಲಸ ಕೊಟ್ಟ. ಹಿಂದಿನ ಸಂಬಳಕ್ಕಿಂತ ಇದು ಇಮ್ಮಡಿಯಾಗಿತ್ತು. ತನ್ನ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿತು ಎಂಬ ಮನವರಿಕೆ ರೋಕ್ಸಾನಾಳಿಗೆ ಆಯಿತು. ಆದರೆ ಮಹತ್ತಾದ ಆಶೀರ್ವಾದವೆಂದರೆ ಅಲ್ಲಿ ತನ್ನ ಅನೇಕ ಸಹೋದ್ಯೋಗಿಗಳಿಗೆ ಅವಳು ಸುವಾರ್ತೆಯನ್ನು ತಿಳಿಸಲು ಸಾಧ್ಯವಾದದ್ದೇ. ಒಟ್ಟು ಐದು ಮಂದಿ ಸತ್ಯವನ್ನು ಸ್ವೀಕರಿಸಿ ದೀಕ್ಷಾಸ್ನಾನ ಪಡೆದರು, ಆ ಮ್ಯಾನೇಜರ್‌ ಕೂಡ ಅವರಲ್ಲಿ ಒಬ್ಬನಾಗಿದ್ದನು.

17 ಕೆಲವೊಮ್ಮೆ ನಮ್ಮ ಪ್ರಾರ್ಥನೆಗಳಿಗೆ ತಕ್ಷಣವೇ ಅಥವಾ ನಾವು ನಿರೀಕ್ಷಿಸಿದ ರೀತಿಯಲ್ಲೇ ಉತ್ತರ ಸಿಗುವುದಿಲ್ಲವೆಂಬ ಭಾವನೆ ಬಂದೀತು. ಹಾಗಿದ್ದಲ್ಲಿ ಅದಕ್ಕೊಂದು ಸಕಾರಣವಿದೆ ಎಂಬುದು ನಿಸ್ಸಂಶಯ. ಅದೇನೆಂದು ಯೆಹೋವನಿಗೆ ತಿಳಿದಿದೆ. ಆದರೆ ಅದು ನಮಗೆ ಸ್ಪಷ್ಟವಾಗುವುದು ಮುಂದಿನ ದಿನಗಳಲ್ಲಿ ಮಾತ್ರ. ಒಂದು ವಿಷಯದಲ್ಲಿ ನಾವು ನಿಶ್ಚಯದಿಂದ ಇರಬಲ್ಲೆವು ಏನೆಂದರೆ ದೇವರು ತನ್ನ ನಂಬಿಗಸ್ತರನ್ನು ಕೈಬಿಡನು ಎಂಬುದೇ.—ಇಬ್ರಿ. 6:10.

ಸಂಕಷ್ಟಗಳನ್ನೂ ಪ್ರಲೋಭನೆಗಳನ್ನೂ ಎದುರಿಸಲು ಸಹಾಯ

18, 19. (ಎ) ಸಂಕಷ್ಟಗಳನ್ನೂ ಪ್ರಲೋಭನೆಗಳನ್ನೂ ಎದುರಿಸುವುದನ್ನು ನಾವು ನಿರೀಕ್ಷಿಸಸಾಧ್ಯವಿದೆ ಏಕೆ? (ಬಿ) ನೀವು ಸಂಕಷ್ಟಗಳನ್ನು ಯಶಸ್ವಿಕರವಾಗಿ ಹೇಗೆ ನಿಭಾಯಿಸಬಲ್ಲಿರಿ?

18 ಪ್ರಲೋಭನೆ, ನಿರುತ್ಸಾಹ, ಹಿಂಸೆ, ಸಮಾನಸ್ಥರ ಒತ್ತಡವನ್ನು ಎದುರಿಸುವುದು ಯೆಹೋವನ ಜನರಿಗೆ ಆಶ್ಚರ್ಯದ ಸಂಗತಿಯೇನಲ್ಲ. ಮೂಲತಃ ಇಡೀ ಲೋಕವೇ ನಮ್ಮನ್ನು ದ್ವೇಷಿಸುತ್ತದೆ. (ಯೋಹಾ. 15:17-19) ಆದರೂ ದೇವರ ಸೇವೆಯಲ್ಲಿ ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ಪವಿತ್ರಾತ್ಮ ನಮಗೆ ಸಹಾಯ ಮಾಡಬಲ್ಲದು. ನಮಗೆ ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನಾವು ಪ್ರಲೋಭನೆಗೆ ಒಳಗಾಗುವಂತೆ ಯೆಹೋವನು ಬಿಡಲಾರನು. (1 ಕೊರಿಂ. 10:13) ಆತನು ನಮ್ಮನ್ನು ಎಷ್ಟು ಮಾತ್ರಕ್ಕೂ ಕೈಬಿಡನು, ಎಂದೂ ತೊರೆಯಲಾರನು. (ಇಬ್ರಿ. 13:5) ಆತನ ಪ್ರೇರಿತ ವಾಕ್ಯಕ್ಕೆ ವಿಧೇಯತೆಯು ನಮ್ಮನ್ನು ಸಂರಕ್ಷಿಸುತ್ತದೆ, ಬಲಪಡಿಸುತ್ತದೆ. ಅದಲ್ಲದೆ ನಮಗೆ ಅತ್ಯಾವಶ್ಯಕವಾಗಿ ಬೇಕಾದ ಸಹಾಯವನ್ನು ಕೊಡುವಂತೆ ನಮ್ಮ ಜೊತೆವಿಶ್ವಾಸಿಗಳನ್ನು ದೇವರ ಪವಿತ್ರಾತ್ಮವು ಪ್ರೇರಿಸಬಲ್ಲದು.

19 ಆದ್ದರಿಂದ ನಾವೆಲ್ಲರೂ ಪ್ರಾರ್ಥನೆಯ ಮೂಲಕ ಮತ್ತು ಬೈಬಲಿನ ಅಧ್ಯಯನದ ಮೂಲಕ ಪವಿತ್ರಾತ್ಮದ ಸಹಾಯ ಕೋರುವುದನ್ನು ಮುಂದುವರಿಸೋಣ. ನಾವು ‘[ದೇವರ] ಮಹಿಮಾಭರಿತ ಶಕ್ತಿಯಿಂದಾಗಿ ಪೂರ್ಣ ಬಲವನ್ನು ಹೊಂದಿ ಬಲಿಷ್ಠರಾಗಿ ಸಂಪೂರ್ಣವಾಗಿ ತಾಳಿಕೊಂಡು ಮತ್ತು ಆನಂದದಿಂದ ದೀರ್ಘ ಸಹನೆಯುಳ್ಳವರಾಗಿ’ ಮುಂದೆ ಸಾಗುತ್ತಾ ಇರೋಣ.—ಕೊಲೊ. 1:11.

[ಪಾದಟಿಪ್ಪಣಿ]

^ ಪ್ಯಾರ. 6 ಉದಾಹರಣೆಗಳಿಗಾಗಿ ಕಾವಲಿನಬುರುಜು 2001, ಮೇ 1 ಪುಟ 16 ಮತ್ತು 2005, ಮೇ 1 ಪುಟ 24-28 ನೋಡಿ.

ನಿಮ್ಮ ಉತ್ತರವೇನು?

• ಹಿಂಸೆಯನ್ನು ತಾಳಿಕೊಳ್ಳಲು ನೀವು ಹೇಗೆ ಸಿದ್ಧರಾಗಬಲ್ಲಿರಿ?

• ತಪ್ಪನ್ನು ಮುಚ್ಚಿಡುವಂತೆ ಯಾರಾದರೂ ನಿಮ್ಮನ್ನು ಒತ್ತಾಯಿಸುವಲ್ಲಿ ನೀವು ಹೇಗೆ ಪ್ರತಿಕ್ರಿಯಿಸಬೇಕು?

• ಯಾವುದೇ ರೀತಿಯ ಸಂಕಷ್ಟವು ಎದುರಾದಾಗ ಯಾವ ಭರವಸೆ ನಿಮಗಿರಬಲ್ಲದು?

[ಅಧ್ಯಯನ ಪ್ರಶ್ನೆಗಳು]

[ಪುಟ 28ರಲ್ಲಿರುವ ಚಿತ್ರ]

ಯೆಹೋಶುವ ಮತ್ತು ಕಾಲೇಬರಿಂದ ನಾವೇನನ್ನು ಕಲಿಯುತ್ತೇವೆ?

[ಪುಟ 29ರಲ್ಲಿರುವ ಚಿತ್ರ]

ತಪ್ಪನ್ನು ಮಾಡಿರುವ ಮಿತ್ರನಿಗೆ ನೀವು ಹೇಗೆ ಸಹಾಯ ಮಾಡಬಲ್ಲಿರಿ?