ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಿನಗಾಗಿ ಮಾಡಿರುವ ಉಪಕಾರಗಳನ್ನು ಧ್ಯಾನಿಸು

ಯೆಹೋವನು ನಿನಗಾಗಿ ಮಾಡಿರುವ ಉಪಕಾರಗಳನ್ನು ಧ್ಯಾನಿಸು

ಯೆಹೋವನು ನಿನಗಾಗಿ ಮಾಡಿರುವ ಉಪಕಾರಗಳನ್ನು ಧ್ಯಾನಿಸು

ಯೇಸುವಿನ ಪುನರುತ್ಥಾನದ ನಂತರ ಸ್ವಲ್ಪದರಲ್ಲೇ ಅವನ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಎಮ್ಮಾಹು ಕಡೆ ನಡೆಯುತ್ತಾ ಹೋಗುತ್ತಿದ್ದರು. ಲೂಕನ ಸುವಾರ್ತಾ ವೃತ್ತಾಂತ ಹೇಳುವುದು: “ಅವರು ಸಂಭಾಷಿಸುತ್ತಾ ಚರ್ಚಿಸುತ್ತಾ ಇದ್ದಾಗ ಯೇಸು ಅವರ ಹತ್ತಿರಕ್ಕೆ ಬಂದು ಅವರೊಂದಿಗೆ ನಡೆಯತೊಡಗಿದನು; ಆದರೆ ಅವರ ಕಣ್ಣುಗಳು ಅವನನ್ನು ಗುರುತಿಸದಿರುವಂತೆ ಮಾಡಲ್ಪಟ್ಟವು.” ಆಗ ಯೇಸು ಅವರಿಗೆ, “‘ನೀವು ನಡೆಯುತ್ತಾ ನಿಮ್ಮ ಮಧ್ಯೆ ಚರ್ಚಿಸಿಕೊಳ್ಳುತ್ತಿರುವ ಈ ವಿಷಯಗಳು ಯಾವುವು?’ ಎಂದಾಗ ಅವರು ದುಃಖದ ಮುಖವುಳ್ಳವರಾಗಿ ಅಲ್ಲೇ ನಿಂತರು.” ಆ ಶಿಷ್ಯರು ದುಃಖದಿಂದ ಇದ್ದದ್ದೇಕೆ? ಯೇಸು ಇಸ್ರಾಯೇಲ್ಯರನ್ನು ಅನ್ಯಜನರ ಆಳಿಕೆಯಿಂದ ಆ ಸಮಯದಲ್ಲಿ ಬಿಡಿಸಲಿದ್ದನು ಎಂದು ಆ ಶಿಷ್ಯರು ನೆನಸಿದ್ದರು. ಆದರೆ ಆ ಬಿಡುಗಡೆ ಇನ್ನೂ ಬಂದಿರಲಿಲ್ಲ. ಬದಲಾಗಿ ಯೇಸುವನ್ನು ಮರಣಕ್ಕೆ ಒಪ್ಪಿಸಲಾಗಿತ್ತು. ಆದಕಾರಣ ಅವರ ಮುಖ ದುಃಖದಿಂದ ಬಾಡಿತ್ತು.—ಲೂಕ 24:15-21; ಅ. ಕಾ. 1:6.

ಯೇಸು ತನ್ನ ಶಿಷ್ಯರೊಂದಿಗೆ ತರ್ಕಬದ್ಧವಾಗಿ ಮಾತಾಡಲಾರಂಭಿಸುತ್ತಾ, “ಮೋಶೆಯ ಮತ್ತು ಎಲ್ಲ ಪ್ರವಾದಿಗಳ ಗ್ರಂಥದಿಂದ ಆರಂಭಿಸಿ, ಶಾಸ್ತ್ರಗ್ರಂಥದಾದ್ಯಂತ ತನ್ನ ಕುರಿತು ತಿಳಿಸಲ್ಪಟ್ಟಿರುವ ವಿಷಯಗಳನ್ನು ಅವರಿಗೆ ವಿವರಿಸಿದನು.” ನಿಶ್ಚಯವಾಗಿಯೂ ಯೇಸುವಿನ ಶುಶ್ರೂಷೆಯ ಸಮಯದಲ್ಲಿ ಅನೇಕ ಮಹತ್ವಪೂರ್ಣ ನಂಬಿಕೆವರ್ಧಕ ಘಟನೆಗಳು ಸಂಭವಿಸಿದ್ದವು! ಯೇಸು ಕೊಟ್ಟ ವಿವರಣೆಯನ್ನು ಶಿಷ್ಯರು ಕೇಳಿದಷ್ಟಕ್ಕೆ ಅವರ ದುಃಖಿತ ಮುಖವು ಹರ್ಷಾನಂದದಿಂದ ಅರಳಿತು. ತದನಂತರ ಅದೇ ಸಂಜೆ ಅವರಂದದ್ದು: “ಅವನು ದಾರಿಯಲ್ಲಿ ನಮ್ಮೊಂದಿಗೆ ಮಾತಾಡುತ್ತಿದ್ದಾಗಲೂ ನಮಗೆ ಶಾಸ್ತ್ರಗ್ರಂಥವನ್ನು ಸಂಪೂರ್ಣವಾಗಿ ವಿವರಿಸಿ ಹೇಳುತ್ತಿದ್ದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ?” (ಲೂಕ 24:27, 32) ಯೇಸುವಿನ ಶಿಷ್ಯರ ಪ್ರತಿಕ್ರಿಯೆಯಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?

ಕೈಗೂಡದ ನಿರೀಕ್ಷಣೆಗಳ ಪರಿಣಾಮ

ಎಮ್ಮಾಹುಗೆ ಹೋಗುತ್ತಿದ್ದ ಆ ಇಬ್ಬರು ಶಿಷ್ಯರು ದುಃಖಪಡಲು ಕಾರಣ ಅವರು ನಿರೀಕ್ಷಿಸಿದ್ದ ವಿಷಯಗಳು ಸಂಭವಿಸದಿದ್ದದ್ದೇ. “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು” ಎಂಬ ಜ್ಞಾನೋಕ್ತಿ 13:12ರ ಮಾತುಗಳನ್ನು ಅವರು ಅನುಭವಿಸಿದರು. ತದ್ರೀತಿಯಲ್ಲಿ ಯೆಹೋವನನ್ನು ದಶಕಗಳಿಂದ ನಂಬಿಗಸ್ತರಾಗಿ ಸೇವಿಸುತ್ತಿರುವ ನಮ್ಮಲ್ಲಿ ಕೆಲವರು “ಮಹಾ ಸಂಕಟವು” ಇಷ್ಟರೊಳಗೆ ಬಂದಿರಬೇಕಿತ್ತೆಂದು ನೆನಸಿದ್ದೆವು. (ಮತ್ತಾ. 24:21; ಪ್ರಕ. 7:14) ಅಂಥ ಕೈಗೂಡದ ನಿರೀಕ್ಷಣೆಯು ಸದ್ಯಕ್ಕೆ ದುಃಖವನ್ನು ಉಂಟುಮಾಡಬಹುದು ಎಂಬದು ಒಪ್ಪತಕ್ಕದ್ದೇ.

ಆದರೆ ನೆನಪಿಡಿ, ಆ ಇಬ್ಬರು ಶಿಷ್ಯರಿಗೆ ಯೇಸು ಆ ಮೊದಲೇ ಅಂದರೆ ಅವರ ಜೀವಮಾನದಲ್ಲೇ ನೆರವೇರಿದ ಪ್ರವಾದನೆಗಳನ್ನು ವಿವರಿಸಿ ಹೇಳಿದಾಗ ಅವರು ಹರ್ಷಾನಂದಗೊಂಡರು. ತದ್ರೀತಿಯಲ್ಲಿ ನಾವು ಸಹ ನಮ್ಮ ಆಂತರ್ಯದ ಸಂತೋಷವನ್ನು ಕಾಪಾಡಿಕೊಂಡು ನಿರಾಶೆಯ ಭಾವನೆಗಳನ್ನು ನೀಗಿಸಬಲ್ಲೆವು. ಮೈಕಲ್‌ ಎಂಬ ಅನುಭವಸ್ಥ ಕ್ರೈಸ್ತ ಹಿರಿಯನು ಅಂದದ್ದು: “ಯೆಹೋವನು ಇನ್ನೂ ಮಾಡದಿರುವ ವಿಷಯಗಳ ಮೇಲೆ ಮನಸ್ಸಿಡಬೇಡಿ. ಈಗಾಗಲೇ ಮಾಡಿರುವ ವಿಷಯಗಳ ಮೇಲೆ ಮನಸ್ಸಿಡಿರಿ.” ಇದು ನಿಶ್ಚಯವಾಗಿಯೂ ಒಳ್ಳೇ ಸಲಹೆ!

ಯೆಹೋವನು ಮಾಡಿರುವ ವಿಷಯಗಳು

ಯೆಹೋವನು ಈ ಮೊದಲೇ ಮಾಡಿರುವ ಕೆಲವು ಮಹತ್ತಾದ ವಿಷಯಗಳನ್ನು ಪರಿಗಣಿಸಿರಿ. ಯೇಸು ಹೇಳಿದ್ದು: “ನನ್ನಲ್ಲಿ ನಂಬಿಕೆಯಿಡುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು ಮತ್ತು ಅವುಗಳಿಗಿಂತಲೂ ಮಹತ್ತಾದ ಕ್ರಿಯೆಗಳನ್ನು ನಡಿಸುವನು.” (ಯೋಹಾ. 14:12) ಇಂದು ದೇವರ ಸೇವಕರು, ಕ್ರೈಸ್ತರಿಂದ ಹಿಂದೆಂದೂ ಮಾಡಲ್ಪಡದ ಮಹಾ ಕೆಲಸವನ್ನು ಪೂರೈಸುತ್ತಿದ್ದಾರೆ. ಎಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಮಹಾ ಸಂಕಟವನ್ನು ಪಾರಾಗಲು ಎದುರುನೋಡುತ್ತಿದ್ದಾರೆ. ಊಹಿಸಿ, ಹಿಂದೆಂದೂ ಭೂಮ್ಯಾದ್ಯಂತ ಇಷ್ಟು ದೇಶಗಳಲ್ಲಿ ಇಷ್ಟೊಂದು ಯೆಹೋವನ ನಂಬಿಗಸ್ತ ಸೇವಕರು ಕ್ರಿಯಾಶೀಲವಾಗಿರಲಿಲ್ಲ! “ಅವುಗಳಿಗಿಂತಲೂ ಮಹತ್ತಾದ ಕ್ರಿಯೆಗಳ” ಕುರಿತಾದ ಯೇಸುವಿನ ಪ್ರವಾದನಾ ಮಾತುಗಳನ್ನು ಯೆಹೋವನು ಇಂದು ಈಡೇರಿಸಿದ್ದಾನೆ.

ಯೆಹೋವನು ನಮಗಾಗಿ ಬೇರೇನನ್ನು ಮಾಡಿದ್ದಾನೆ? ಸಹೃದಯಿಗಳು ಈ ದುಷ್ಟಲೋಕದಿಂದ ಸಾಂಕೇತಿಕವಾಗಿ ಹೊರಬಂದು ತಾನು ನಿರ್ಮಿಸಿರುವ ಆಧ್ಯಾತ್ಮಿಕ ಪರದೈಸವನ್ನು ಪ್ರವೇಶಿಸುವಂತೆಯೂ ಆತನು ಸಾಧ್ಯಮಾಡಿದ್ದಾನೆ. (2 ಕೊರಿಂ. 12:1-4) ನಮಗೆ ಸುಲಭವಾಗಿ ಲಭ್ಯವಿರುವ ಆ ಪರದೈಸದ ಕೆಲವು ವೈಶಿಷ್ಟ್ಯಗಳನ್ನು ಪರ್ಯಾಲೋಚಿಸಲು ಸಮಯ ತಕ್ಕೊಳ್ಳಿ. ಉದಾಹರಣೆಗಾಗಿ ನಿಮ್ಮ ವೈಯಕ್ತಿಕ ಅಥವಾ ರಾಜ್ಯ ಸಭಾಗೃಹದ ಲೈಬ್ರರಿಯ ಕಡೆ ಕಣ್ಣು ಹಾಯಿಸಿರಿ. ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ಅನ್ನು ತೆರೆದು ನೋಡಿ. ವಾಚ್‌ಟವರ್‌ ಲೈಬ್ರರಿಯನ್ನು ಬ್ರೌಸ್‌ ಮಾಡಿ. ಬೈಬಲ್‌ ಡ್ರಾಮದ ರೆಕಾರ್ಡಿಂಗ್‌ಗೆ ಕಿವಿಗೊಡಿ. ಇತ್ತೀಚಿನ ಅಧಿವೇಶನದಲ್ಲಿ ನೀವೇನನ್ನು ಕೇಳಿಸಿಕೊಂಡಿದ್ದಿರೋ, ನೋಡಿದ್ದಿರೋ ಅದನ್ನು ಪುನಃ ಮನಸ್ಸಿಗೆ ತನ್ನಿರಿ. ಅದಲ್ಲದೆ ನಮ್ಮ ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ನಾವು ಆನಂದಿಸುವ ಹಿತಕರ ಸಹವಾಸದ ಕುರಿತು ಯೋಚಿಸಿ. ಈ ಹೇರಳವಾದ ಆಧ್ಯಾತ್ಮಿಕ ಆಹಾರ ಮತ್ತು ಪ್ರೀತಿಪರ ಸಹೋದರತ್ವವನ್ನು ಒದಗಿಸುವುದರಲ್ಲಿ ಯೆಹೋವನು ಎಷ್ಟೊಂದು ಔದಾರ್ಯ ತೋರಿಸಿದ್ದಾನೆ! ಖಂಡಿತವಾಗಿಯೂ ಆಧ್ಯಾತ್ಮಿಕ ಪರದೈಸವಿದು!

ಕೀರ್ತನೆಗಾರ ದಾವೀದನು ಹೇಳಿದ್ದು: “ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ.” (ಕೀರ್ತ. 40:5) ಹೌದು, ಯೆಹೋವನು ನಮಗಾಗಿ ಮಾಡಿರುವ ಆಶ್ಚರ್ಯಕರ ವಿಷಯಗಳನ್ನು ಧ್ಯಾನಿಸುವ ಮೂಲಕ ಮತ್ತು ನಮ್ಮ ಕಡೆಗಿರುವ ಆತನ ಪ್ರೀತಿಯ ಪರಿಗಣನೆಯನ್ನು ಪರ್ಯಾಲೋಚಿಸುವ ಮೂಲಕ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರ ಹೃತ್ಪೂರ್ವಕ ಸೇವೆಯಲ್ಲಿ ನಂಬಿಗಸ್ತಿಕೆಯಿಂದ ತಾಳಿಕೊಳ್ಳಲು ಹೊಸಬಲವನ್ನು ನಾವು ಕಂಡುಕೊಳ್ಳುವೆವು.—ಮತ್ತಾ. 24:13.

[ಪುಟ 31ರಲ್ಲಿರುವ ಚಿತ್ರ]

ಯೆಹೋವನು ಅವರಿಗಾಗಿ ಆ ಮೊದಲೇ ಮಾಡಿದ್ದ ವಿಷಯಗಳನ್ನು ಧ್ಯಾನಿಸಲು ಯೇಸು ತನ್ನ ಶಿಷ್ಯರಿಗೆ ಸಹಾಯಮಾಡಿದನು

[ಪುಟ 32ರಲ್ಲಿರುವ ಚಿತ್ರಗಳು]

ಇತ್ತೀಚಿನ ಅಧಿವೇಶನದಲ್ಲಿ ಕೇಳಿಸಿಕೊಂಡದ್ದನ್ನೂ ನೋಡಿದ್ದನ್ನೂ ಪುನಃ ಮನಸ್ಸಿಗೆ ತನ್ನಿರಿ