ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಕಷ್ಟಗಳ ಕೆಳಗೂ ಯೆಹೋವನ ಸೇವೆಗಾಗಿ ಕೃತಜ್ಞಳು

ಸಂಕಷ್ಟಗಳ ಕೆಳಗೂ ಯೆಹೋವನ ಸೇವೆಗಾಗಿ ಕೃತಜ್ಞಳು

ಸಂಕಷ್ಟಗಳ ಕೆಳಗೂ ಯೆಹೋವನ ಸೇವೆಗಾಗಿ ಕೃತಜ್ಞಳು

ಮಾರ್ಚ ಡ ಯಾಂಗ್‌ ವಾಂಡನ್‌ ಹ್ಯೂವಲ್‌ ಹೇಳಿದಂತೆ

ನಾನು ತೊಂಬತ್ತೆಂಟರ ವಯೋವೃದ್ಧೆ. ಇದರಲ್ಲಿ 70 ವರ್ಷಗಳನ್ನು ಯೆಹೋವನ ಸೇವೆಯಲ್ಲಿ ಕಳೆದ ಆನಂದವು ನನ್ನದು. ಆದರೂ ಅದು ನನ್ನ ನಂಬಿಕೆಯ ಪರೀಕ್ಷೆಗಳ ಹೊರತಾಗಿರಲಿಲ್ಲ. ಎರಡನೇ ಲೋಕಯುದ್ಧದ ಸಮಯದಲ್ಲಿ ನಾನು ಸೆರೆಶಿಬಿರ ಸೇರಿದೆ. ಅಲ್ಲಿ ಒಂದು ಹಂತದಲ್ಲಿ ನಾನು ನಿರುತ್ತೇಜನಗೊಂಡು ಮಾಡಿದ ನಿರ್ಣಯವು ನಂತರ ಪಶ್ಚಾತ್ತಾಪಪಡುವಂತೆ ನಡಿಸಿತು. ಕೆಲವು ವರ್ಷಗಳ ನಂತರ ನಾನು ಇನ್ನೊಂದು ದುಃಖಕರ ಪರೀಕ್ಷೆಯನ್ನು ಎದುರಿಸಿದೆ. ಹಾಗಿದ್ದರೂ ನಾನು ಯೆಹೋವನಿಗೆ ಕೃತಜ್ಞಳು, ನಂಬಿಕೆಯ ಪರೀಕ್ಷೆಗಳ ಕೆಳಗೂ ಆತನ ಸೇವೆಮಾಡಲು ಕೊಟ್ಟ ಸುಯೋಗಕ್ಕಾಗಿ ಆಭಾರಿ.

1940ರ ಅಕ್ಟೋಬರ್‌ನಲ್ಲಿ ನನ್ನ ಇಡೀ ಜೀವನವೇ ಬದಲಾಯಿತು. ನಾನು ವಾಸಿಸಿದ್ದು ಹಿಲ್ವರ್ಸಮ್‌ ಎಂಬ ಊರಿನಲ್ಲಿ. ಇದು ನೆದರ್ಲೆಂಡ್ಸ್‌ನ ಆ್ಯಮ್‌ಸ್ಟರ್‌ಡ್ಯಾಮ್‌ನ 24 ಕಿ.ಮೀ. ಆಗ್ನೇಯ ದಿಕ್ಕಿನಲ್ಲಿದೆ. ದೇಶವು ನಾಸೀಗಳ ಆಡಳಿತದ ಕೆಳಗಿತ್ತು. ನನಗೆ ಮದುವೆಯಾಗಿ ಐದು ವರ್ಷವಾಗಿತ್ತು. ನನ್ನ ಪತಿ ಯಾಪ್‌ ಡ ಯಾಂಗ್‌ ತುಂಬಾ ದಯಾಳು. ನಮಗೆ ವಿಲೀ ಎಂಬ ಮೂರು ವರ್ಷದ ಮಗಳಿದ್ದಳು. ನಮ್ಮ ನೆರೆಯವರದ್ದು ಎಂಟು ಮಕ್ಕಳ ಬಡಕುಟುಂಬ, ಕಷ್ಟದ ಜೀವನೋಪಾಯ. ಆದರೂ ಖಾಯಂ ಅತಿಥಿಯಾಗಿದ್ದ ಯೌವನಸ್ಥನೊಬ್ಬನಿಗೆ ಅವರು ಊಟವಸತಿ ಒದಗಿಸುತ್ತಿದ್ದರು. ‘ಈ ಹೆಚ್ಚಿನ ಹೊರೆ ಅವರಿಗೇಕೆ ಬೇಕು’ ಎಂದು ನಾನು ಯೋಚಿಸುತ್ತಲಿದ್ದೆ. ಒಂದು ದಿನ ನಾನು ಅವರಿಗೆ ಸ್ವಲ್ಪ ತಿಂಡಿಯನ್ನು ಒಯ್ದಾಗ ಆ ಯೌವನಸ್ಥನು ಒಬ್ಬ ಪಯನೀಯರನೆಂದು ನನಗೆ ತಿಳಿಯಿತು. ದೇವರ ರಾಜ್ಯದ ಕುರಿತು ಮತ್ತು ಅದು ತರಲಿರುವ ಆಶೀರ್ವಾದಗಳ ಕುರಿತು ಅವ ನನಗೆ ಹೇಳಿದ. ಅದು ನನ್ನ ಮೇಲೆ ಆಳವಾದ ಪ್ರಭಾವ ಬೀರಿತು. ಕೂಡಲೇ ನಾನು ಸತ್ಯ ಸ್ವೀಕರಿಸಿದೆ. ಅದೇ ವರ್ಷ ನಾನು ಯೆಹೋವನಿಗೆ ನನ್ನನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನಪಡೆದೆ. ನನ್ನ ದೀಕ್ಷಾಸ್ನಾನದ ಮರುವರ್ಷವೇ ನನ್ನ ಪತಿ ಸಹ ಸತ್ಯ ಸ್ವೀಕರಿಸಿ ದೀಕ್ಷಾಸ್ನಾನ ಪಡೆದರು.

ನನಗೆ ಬೈಬಲಿನ ಕೊಂಚವೇ ಜ್ಞಾನವಿದ್ದರೂ, ಸಾಕ್ಷಿಯಾಗುವ ಮೂಲಕ ನಾನು ಒಂದು ನಿಷೇಧಿತ ಸಂಘಟನೆಯ ಭಾಗವಾಗಿದ್ದೇನೆಂಬ ಪೂರ್ಣ ಮನವರಿಕೆ ನನಗಾಗಿತ್ತು. ರಾಜ್ಯ ಸಂದೇಶವನ್ನು ಸಾರಿದ್ದರಿಂದಾಗಿ ಅನೇಕಾನೇಕ ಸಾಕ್ಷಿಗಳನ್ನು ಸೆರೆಮನೆಗೆ ಹಾಕಲಾಗಿದೆ ಎಂಬದೂ ನನಗೆ ತಿಳಿದಿತ್ತು. ಆದರೂ ನಾನು ಕೂಡಲೇ ಮನೆಮನೆಯ ಸೇವೆಗಿಳಿದೆ. ನಾನು ಮತ್ತು ನನ್ನ ಪತಿ ನಮ್ಮ ಮನೆಯನ್ನು ಪಯನೀಯರರ, ಸಂಚರಣ ಮೇಲ್ವಿಚಾರಕರ ವಸತಿಗಾಗಿ ತೆರೆದಿಟ್ಟೆವು. ಬೈಬಲ್‌ ಸಾಹಿತ್ಯವನ್ನು ಸಂಗ್ರಹಿಸಿಡುವ ಸ್ಥಳವಾಗಿಯೂ ಪರಿಣಮಿಸಿತು ನಮ್ಮ ಮನೆ. ಆ್ಯಮ್‌ಸ್ಟರ್‌ಡ್ಯಾಮ್‌ನ ಸಹೋದರ ಸಹೋದರಿಯರು ಆ ಸಾಹಿತ್ಯವನ್ನು ನಮಗೆ ರವಾನಿಸುತ್ತಿದ್ದರು. ಪುಸ್ತಕಗಳ ಭಾರವಾದ ಹೊರೆಯ ಮೇಲೆ ಟಾರ್ಪಲ್‌ ಹೊದಿಸಿ ಅದನ್ನು ಸೈಕಲ್‌ಗಳ ಮೇಲೆ ಸಾಗಿಸಲಾಗುತ್ತಿತ್ತು. ಆ ಸಾಹಿತ್ಯ ಸಾಗಣೆಗಾರರಿಗಿದ್ದ ಧೈರ್ಯ ಮತ್ತು ಪ್ರೀತಿಯೆಷ್ಟು! ತಮ್ಮ ಸಹೋದರರಿಗಾಗಿ ಪ್ರಾಣವನ್ನು ಅಪಾಯಕ್ಕೊಡ್ಡಲೂ ಅವರು ಸಿದ್ಧರಿದ್ದರು.—1 ಯೋಹಾನ 3:16.

“ಅಮ್ಮಾ, ಬೇಗ ಬಾಮ್ಮಾ!”

ನನ್ನ ದೀಕ್ಷಾಸ್ನಾನದ ಸುಮಾರು ಆರು ತಿಂಗಳ ನಂತರ ಮೂವರು ಪೊಲೀಸ್‌ ಅಧಿಕಾರಿಗಳು ನನ್ನ ಮನೆಗೆ ನುಗ್ಗಿ ಅದನ್ನು ಜಪ್ತಿಮಾಡಿದರು. ಪ್ರಕಾಶನಗಳಿಂದ ತುಂಬಿದ್ದ ಅಲಮಾರು ಅವರಿಗೆ ಸಿಕ್ಕದಿದ್ದರೂ ನಮ್ಮ ಮಂಚದ ಕೆಳಗೆ ಅಡಗಿಸಿಟ್ಟಿದ್ದ ಕೆಲವು ಪುಸ್ತಕಗಳು ಅವರ ಕಣ್ಣಿಗೆ ಬಿದ್ದವು. ಕೂಡಲೆ ನನ್ನನ್ನು ಹಿಲ್ವರ್ಸಮ್‌ ಪೊಲೀಸ್‌ ಸ್ಟೇಶನ್‌ಗೆ ಹಿಡಿದೊಯ್ದರು. ಅಗಲುವ ಮುಂಚೆ ಮಗಳನ್ನು ಅಪ್ಪಿಕೊಂಡಾಗ, “ಅಮ್ಮಾ, ಬೇಗ ಬಾಮ್ಮಾ” ಎಂದಳು ಮಗಳು ಗಾಬರಿಯಿಂದ. “ಬರುತ್ತೇನೆ ಚಿನ್ನು, ಬೇಗ ಬಂದುಬಿಡ್ತೀನಿ” ಎಂದೆ ನಾನು. ಆದರೆ ಪುನಃ ಅವಳನ್ನು ನಾನು ತೋಳಲ್ಲೆತ್ತಿ ಮುದ್ದಿಸಿದ್ದು 18 ಸಂಕಷ್ಟದ ತಿಂಗಳುಗಳು ದಾಟಿದ ಬಳಿಕವೇ!

ಅನಂತರ ಒಬ್ಬ ಪೊಲೀಸ್‌ ಅಧಿಕಾರಿ ವಿಚಾರಣೆಗಾಗಿ ನನ್ನನ್ನು ಟ್ರೈನ್‌ನಲ್ಲಿ ಆ್ಯಮ್‌ಸ್ಟರ್‌ಡ್ಯಾಮ್‌ಗೆ ಒಯ್ದನು. ಅಲ್ಲಿ ನನ್ನನ್ನು ಪ್ರಶ್ನಿಸುತ್ತಾ ಹಿಲ್ವರ್ಸಮ್‌ನ ಮೂವರು ಸಹೋದರರನ್ನು ಕರತಂದು ಅವರು ಯೆಹೋವನ ಸಾಕ್ಷಿಗಳೊ ಅಲ್ಲವೊ ಎಂದು ಗುರುತಿಸುವಂತೆ ಹೇಳಿದರು. ಅದಕ್ಕೆ ನಾನು “ಅವರು ಯಾರೋ ನನಗೆ ಗೊತ್ತಿಲ್ಲ. ಒಬ್ಬನ ಪರಿಚಯ ಮಾತ್ರ ಇದೆ, ಅವನು ಹಾಲು ಮಾರುವವ” ಎಂದೆ. ಅದು ಸತ್ಯವಾಗಿತ್ತು, ಆ ಸಹೋದರನು ನಮಗೆ ಹಾಲು ತಂದುಕೊಡುತ್ತಿದ್ದ. “ಆದರೆ ಅವನು ಯೆಹೋವನ ಸಾಕ್ಷಿಯೊ ಅಲ್ಲವೊ ಎಂದು ನೀವು ಅವನನ್ನು ಕೇಳಬೇಕು, ನನ್ನನ್ನಲ್ಲ” ಎಂದೆ ನಾನು. ಬೇರೇನನ್ನೂ ತಿಳಿಸಲು ನಿರಾಕರಿಸಿದ್ದಕ್ಕಾಗಿ ಅವರು ನನ್ನ ಮುಖಕ್ಕೆ ಗುದ್ದಿ ಎರಡು ತಿಂಗಳ ತನಕ ಸೆರೆಕೋಣೆಯಲ್ಲಿ ಬಂಧಿಸಿಟ್ಟರು. ನಾನೆಲ್ಲಿದ್ದೇನೆಂದು ಗಂಡನಿಗೆ ತಿಳಿದಾಗ ಅವರು ಸ್ವಲ್ವ ಊಟ-ಬಟ್ಟೆ ತಂದುಕೊಟ್ಟರು. ಅನಂತರ 1941ರ ಆಗಸ್ಟ್‌ನಲ್ಲಿ ಜರ್ಮನಿಯ ಬರ್ಲಿನ್‌ನ 80 ಕಿ.ಮೀ. ಉತ್ತರಕ್ಕೆ ರಾವನ್ಸ್‌ಬ್ರೂಕ್‌ನಲ್ಲಿ ಸ್ತ್ರೀಖೈದಿಗಳ ಕುಪ್ರಸಿದ್ಧ ಸೆರೆಶಿಬಿರಕ್ಕೆ ನನ್ನನ್ನು ಕಳುಹಿಸಿದರು.

“ಸಹೋದರಿ, ಗೆಲುವಾಗಿರು ಹೆದರಬೇಡ”

ಸೆರೆಶಿಬಿರಕ್ಕೆ ಬಂದ ಕೂಡಲೆ ಒಂದು ಪರೀಕ್ಷೆ. ನಂಬಿಕೆಯನ್ನು ತ್ಯಜಿಸುತ್ತೇವೆಂಬ ಹೇಳಿಕೆಯಿರುವ ಪತ್ರಕ್ಕೆ ಸಹಿಹಾಕಿದರೆ ಬಿಡುಗಡೆಹೊಂದಿ ಸೀದಾ ಮನೆಗೆ ಹೋಗಬಹುದೆಂದು ಹೇಳಲಾಯಿತು. ಆದರೆ ನಾನದಕ್ಕೆ ಸಹಿಹಾಕಲಿಲ್ಲ. ನನ್ನ ವಸ್ತುಗಳನ್ನು ಅವರ ಬಳಿ ಇಟ್ಟು, ವಸ್ತ್ರ ಬದಲಾಯಿಸಿ, ಖೈದಿಗಳ ಬಟ್ಟೆಯನ್ನು ಹಾಕಿದ ಮೇಲೆ ಅಲ್ಲಿ ನೆದರ್ಲೆಂಡ್ಸ್‌ನ ಕೆಲವು ಸಹೋದರಿಯರು ನನಗೆ ಸಿಕ್ಕಿದರು. ನಮಗೆ ಕೊಟ್ಟ ಬಟ್ಟೆಗಳ ಮೇಲೆ ಕೆನ್ನೀಲಿ ತ್ರಿಕೋನವನ್ನು ಹೊಲಿಯಲಾಗಿತ್ತು. ಒಂದು ತಟ್ಟೆ, ಒಂದು ಲೋಟ, ಒಂದು ಚಮಚ ಕೊಡಲಾಯಿತು. ಮೊದಲನೇ ರಾತ್ರಿಯಲ್ಲಿ ನಮ್ಮನ್ನು ಖೈದಿಗಳ ಸಾಲುಮನೆಯಲ್ಲಿ ಇಡಲಾಯಿತು. ಅಲ್ಲಿ ಮೊತ್ತಮೊದಲ ಬಾರಿ ನಾನು ದುಃಖ ತಡೆಯಲಾರದೆ ಗಳಗಳನೆ ಅತ್ತುಬಿಟ್ಟೆ. ‘ಏನಾಗಲಿದೆಯಪ್ಪಾ? ಇನ್ನೆಷ್ಟು ದಿನ ಇಲ್ಲಿರಬೇಕೋ?’ ಎಂದು ನೆನಸಿ ಬಿಕ್ಕಿ ಬಿಕ್ಕಿ ಅತ್ತೆ. ನಿಜ ಹೇಳಬೇಕಾದರೆ ಆ ಸಮಯದಲ್ಲಿ ಯೆಹೋವನೊಂದಿಗಿನ ನನ್ನ ಸುಸಂಬಂಧ ಅಷ್ಟೇನು ದೃಢವಾಗಿರಲಿಲ್ಲ. ಏಕೆಂದರೆ ಸತ್ಯವನ್ನು ಸ್ವೀಕರಿಸಿ ಕೇವಲ ಕೆಲವೇ ತಿಂಗಳಾಗಿದ್ದವಷ್ಟೇ. ಕಲಿಯಲು ಇನ್ನು ಎಷ್ಟೋ ವಿಷಯಗಳಿದ್ದವು ನನಗೆ. ಮರುದಿನ ಹಾಜರಿ ಕರೆಯುವ ಸಮಯದಲ್ಲಿ ಡಚ್‌ ಸಹೋದರಿಯೊಬ್ಬರು ದುಃಖದಿಂದ ಬಾಡಿದ ನನ್ನ ಮೋರೆಯನ್ನು ಕಂಡು “ಸಹೋದರಿ, ಗೆಲುವಾಗಿರು ಹೆದರಬೇಡ. ನಮಗೇನೂ ಕೇಡಾಗದು” ಎಂದರು.

ಹಾಜರಿ ಕರೆದ ನಂತರ ನಮ್ಮನ್ನು ಇನ್ನೊಂದು ಸಾಲುಮನೆಗೆ ಒಯ್ಯಲಾಯಿತು. ಅಲ್ಲಿ ಜರ್ಮನಿ ಮತ್ತು ನೆದರ್ಲೆಂಡ್ಸ್‌ನ ನೂರಾರು ಮಂದಿ ಕ್ರೈಸ್ತ ಸಹೋದರಿಯರು ನಮ್ಮನ್ನು ಸ್ವಾಗತಿಸಿದರು. ಕೆಲವು ಜರ್ಮನ್‌ ಸಹೋದರಿಯರು ಈಗಾಗಲೇ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಅಲ್ಲಿದ್ದರು. ಅವರ ಸಹವಾಸವು ನನ್ನನ್ನು ಬಲಪಡಿಸಿತು. ನಾನು ನಿಜವಾಗಿಯೂ ಗೆಲುವಾದೆ. ನಮ್ಮ ಈ ಸಹೋದರಿಯರಿದ್ದ ಸಾಲುಮನೆಗಳು ಸೆರೆಶಿಬಿರದಲ್ಲಿದ್ದ ಬೇರೆ ಖೈದಿಮನೆಗಳಿಗಿಂತ ತುಂಬ ಶುಚಿಯಾಗಿದ್ದ ವಿಷಯವೂ ನನಗೆ ಹಿಡಿಸಿತು. ಮಾತ್ರವಲ್ಲ, ನಮ್ಮ ಮನೆಗಳು ಕಳ್ಳತನ, ದುರ್ಭಾಷೆ, ಜಗಳಗಳೇ ಇಲ್ಲದ ಸ್ಥಳವೆಂದು ಖ್ಯಾತವಾಗಿದ್ದವು. ಸೆರೆಶಿಬಿರದಲ್ಲಿ ಎದುರಿಸಿದ ಕ್ರೂರ ಪರಿಸ್ಥಿತಿಗಳಲ್ಲೂ ನಾವು ನಮ್ಮ ಮನೆಗಳನ್ನು ಶುದ್ಧವಾಗಿಡುತ್ತಿದ್ದೆವು. ಅವು ಹೊಲಸು ಸಮುದ್ರದಿಂದ ಆವರಿತವಾದ ಶುಭ್ರ ದ್ವೀಪವೊ ಎಂಬಂತೆ ಹೊಳೆಯುತ್ತಿದ್ದವು.

ಸೆರೆಶಿಬಿರದ ದಿನಚರಿ

ಸೆರೆಶಿಬಿರದಲ್ಲಿನ ಕೆಲಸ ಸೊಂಟಮುರಿಯುವಷ್ಟಾದರೆ ಊಟ ಅರೆಹೊಟ್ಟೆಯೂ ಇಲ್ಲ. ಮುಂಜಾನೆ 5 ಗಂಟೆಗೆ ಏಳಬೇಕಿತ್ತು. ನಂತರ ಸ್ವಲ್ಪದರಲ್ಲೇ ಹಾಜರಿ ಕೂಗುತ್ತಿದ್ದರು. ಸಿಪಾಯಿಗಳು ನಮ್ಮನ್ನು ಮಳೆಬಿಸಿಲೆನ್ನದೆ ಹೊರಗೆ ಸುಮಾರು ಒಂದು ತಾಸು ನಿಲ್ಲಿಸುತ್ತಿದ್ದರು. ಸಂಜೆ 5 ಗಂಟೆಗೆ ನಾವು ಕೆಲಸದಿಂದ ಬಳಲಿ ಬೆಂಡಾಗಿರುವಾಗ ಪುನಃ ಹಾಜರಿ ಕೂಗುತ್ತಿದ್ದರು. ಅನಂತರ ಸಿಕ್ಕಿದ ಸ್ವಲ್ಪವೇ ರೊಟ್ಟಿ, ಸಾರು ತಿಂದು ಆಯಾಸದಿಂದ ದೊಪ್ಪನೆ ಮಲಗಿಬಿಡುತ್ತಿದ್ದೆವು.

ಭಾನುವಾರವನ್ನು ಬಿಟ್ಟು ಇನ್ನುಳಿದ ದಿನಗಳಲ್ಲಿ ನಾನು ಹೊಲದಲ್ಲಿ ಕುಡುಗೋಲಿನಿಂದ ಗೋದಿ ಫಸಲನ್ನು ಕೊಯ್ಯಬೇಕಿತ್ತು, ನಾಲೆಗಳಿಂದ ಕೆಸರನ್ನು ಎತ್ತಿಹಾಕಬೇಕಿತ್ತು, ಹಂದಿಗೂಡುಗಳನ್ನು ತಿಕ್ಕಿ ತೊಳೆಯಬೇಕಿತ್ತು. ಮೈಮುರಿಯುವಷ್ಟು ಕೆಲಸ, ಗಲೀಜು ಕೂಡ. ನಾನಾಗ ಇನ್ನೂ ಯೌವನಸ್ಥೆ, ಸುದೃಢಳಾಗಿದ್ದೆ, ಆದಕಾರಣ ಪ್ರತಿದಿನ ಆ ಕೆಲಸವನ್ನು ಮಾಡಿಮುಗಿಸುತ್ತಿದ್ದೆ. ಕೆಲಸ ಮಾಡುವಾಗ ಬೈಬಲ್‌ ಸಂದೇಶದ ಗೀತೆಗಳನ್ನು ಹಾಡುವ ಮೂಲಕ ನಾನು ನನ್ನನ್ನು ಬಲಪಡಿಸಿಕೊಳ್ಳುತ್ತಿದ್ದೆ. ಆದರೂ ನನ್ನ ಪತಿಯನ್ನೂ ಮುದ್ದು ಮಗುವನ್ನೂ ನೋಡಬೇಕೆಂದು ದಿನದಿನವೂ ಮನ ಹಂಬಲಿಸುತ್ತಿತ್ತು.

ನಮಗೆ ಹೊಟ್ಟೆತುಂಬ ಆಹಾರ ದೊರೆಯದಿದ್ದರೂ ನಾವು ಸಹೋದರಿಯರೆಲ್ಲ ಕೂಡಿ ಪ್ರತಿದಿನ ಒಂದೊಂದು ತುಂಡು ರೊಟ್ಟಿಯನ್ನು ಕೂಡಿಸಿಡುತ್ತಿದ್ದೆವು. ಭಾನುವಾರಗಳಂದು ಬೈಬಲ್‌ ವಿಷಯಗಳನ್ನು ಒಟ್ಟಿಗೆ ಚರ್ಚಿಸುವ ಅವಕಾಶ ಸಿಕ್ಕಿದಾಗ ಆ ರೊಟ್ಟಿ ತುಂಡುಗಳನ್ನು ತಿನ್ನುತ್ತಿದ್ದೆವು. ನಮ್ಮಲ್ಲಿ ಬೈಬಲ್‌ ಸಾಹಿತ್ಯವಿರಲಿಲ್ಲ. ಆದರೆ ಪ್ರಾಯಸ್ಥರಾದ ನಂಬಿಗಸ್ತ ಜರ್ಮನ್‌ ಸಹೋದರಿಯರು ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುವಾಗ ನಾನು ಉತ್ಸಾಹದಿಂದ ಕಿವಿಗೊಡುತ್ತಿದ್ದೆ. ಕ್ರಿಸ್ತನ ಮರಣದ ಜ್ಞಾಪಕಾಚರಣೆಯನ್ನು ಕೂಡ ನಾವು ಮಾಡಿದೆವು.

ವೇದನೆ, ವಿಷಾದ, ಉತ್ತೇಜನ

ಕೆಲವೊಮ್ಮೆ ನಾಸೀಗಳ ಯುದ್ಧೋದ್ಯಮಕ್ಕೆ ನೇರವಾಗಿ ಬೆಂಬಲವನ್ನೀಯುವ ಕೆಲಸವನ್ನು ಮಾಡಲು ನಮಗೆ ಅಪ್ಪಣೆಮಾಡುತ್ತಿದ್ದರು. ರಾಜಕೀಯ ವಿಷಯಗಳಲ್ಲಿ ನಮ್ಮ ತಾಟಸ್ಥ್ಯದ ಕಾರಣ ಸಹೋದರಿಯರೆಲ್ಲರೂ ಆ ಕೆಲಸವನ್ನು ಮಾಡಲು ನಿರಾಕರಿಸಿದರು. ನಾನು ಸಹ ಅವರ ಧೀರ ಮಾದರಿಯನ್ನು ಅನುಸರಿಸಿದೆ. ನಮಗೆ ಶಿಕ್ಷೆ ಸಿಕ್ಕಿತು. ಎಷ್ಟೋ ದಿನ ನಮ್ಮನ್ನು ಉಪವಾಸ ಹಾಕಿದರು. ಹಾಜರಿ ಕೂಗುವಾಗ ತಾಸುಗಟ್ಟಲೆ ನಿಂತೇ ಇರಬೇಕಿತ್ತು. ಒಮ್ಮೆ ಚಳಿಗಾಲದಲ್ಲಿ ಚಳಿಯಿಂದ ಕೊರೆಯುತ್ತಿದ್ದ ಕೊಠಡಿಗಳಲ್ಲಿ 40 ದಿನಗಳ ವರೆಗೆ ನಮ್ಮನ್ನು ಬಂದಿಸಿಡಲಾಗಿತ್ತು.

ಯೆಹೋವನ ಸಾಕ್ಷಿಗಳಾದ ನಾವು ನಮ್ಮ ನಂಬಿಕೆಯನ್ನು ತಿರಸ್ಕರಿಸಿ ಪತ್ರಕ್ಕೆ ಸಹಿಹಾಕಿದಲ್ಲಿ ಬಿಡುಗಡೆಹೊಂದಿ ಮನೆಗೆ ಹೋಗಬಹುದು ಎಂದು ನಮಗೆ ಕಿರಿಕಿರಿಯಾಗುವಷ್ಟು ಒತ್ತಾಯಿಸುತ್ತಿದ್ದರು. ರಾವನ್ಸ್‌ಬ್ರೂಕ್‌ನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಇದ್ದ ಬಳಿಕ ನಾನು ತುಂಬ ನಿರಾಶೆಗೊಂಡೆ. ನನ್ನ ಪತಿಯನ್ನೂ ಮಗಳನ್ನೂ ನೋಡುವ ಅಪೇಕ್ಷೆಯು ಎಷ್ಟು ತೀವ್ರವಾಯಿತೆಂದರೆ ನಾನು ಸಿಪಾಯಿಗಳ ಬಳಿಗೆ ಹೋಗಿ, ಇನ್ನು ಮುಂದೆ ನಾನು ಬೈಬಲ್‌ ವಿದ್ಯಾರ್ಥಿಯಲ್ಲ ಎಂದು ಹೇಳುವ ಪತ್ರಕ್ಕಾಗಿ ಕೇಳಿಕೊಂಡು ಅದಕ್ಕೆ ಸಹಿ ಹಾಕಿಬಿಟ್ಟೆ.

ನಾನು ಮಾಡಿದ ಸಂಗತಿ ಸಹೋದರಿಯರಿಗೆ ತಿಳಿದಾಗ ಕೆಲವರು ನನ್ನಿಂದ ದೂರವಾಗತೊಡಗಿದರು. ಆದರೂ ಇಬ್ಬರು ವೃದ್ಧ ಜರ್ಮನ್‌ ಸಹೋದರಿಯರಾದ ಹೇಟ್ವಿಕ್‌ ಮತ್ತು ಗರ್ಟ್ರೂಟ್‌ ನನ್ನನ್ನು ಹುಡುಕಿಕೊಂಡು ಬಂದು ತಮ್ಮ ಪ್ರೀತಿಯ ಆಶ್ವಾಸನೆಯನ್ನು ಕೊಟ್ಟರು. ನಾವು ಹಂದಿಗೂಡುಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಅವರು ದಯೆಯಿಂದ ಮಾತಾಡುತ್ತಾ ಯೆಹೋವನಿಗೆ ಸಮಗ್ರತೆಯನ್ನು ತೋರಿಸುವ ಮಹತ್ವವನ್ನೂ ಯಾವುದೇ ರೀತಿಯಲ್ಲಿ ರಾಜಿಮಾಡದಿರುವ ಮೂಲಕ ಆತನಿಗೆ ಪ್ರೀತಿ ತೋರಿಸುವ ವಿಧವನ್ನೂ ವಿವರಿಸಿದರು. ಅವರ ಮಾತೃಸಮಾನ ವಾತ್ಸಲ್ಯ, ಕೋಮಲ ಮಮತೆಯು ನನ್ನನ್ನು ಆಳವಾಗಿ ಸ್ಪರ್ಶಿಸಿತು. * ನಾನು ಮಾಡಿದ್ದು ತಪ್ಪೆಂದು ನನಗೆ ತಿಳಿಯಿತು. ನಾನು ಸಹಿಹಾಕಿದ ಪತ್ರವನ್ನು ರದ್ದುಮಾಡುವ ನಿರ್ಣಯದ ಬಗ್ಗೆ ಒಬ್ಬಾಕೆ ಸಹೋದರಿಯೊಂದಿಗೆ ಮಾತಾಡಿದೆ. ಅದನ್ನು ಶಿಬಿರದ ಅಧಿಕಾರಿ ಕೇಳಿಸಿಕೊಂಡಿದ್ದಿರಬೇಕು. ಏಕೆಂದರೆ ಅದೇ ಸಂಜೆ ಸೆರೆಶಿಬಿರದಿಂದ ನನ್ನನ್ನು ಹೊರಡಿಸಿ ಟ್ರೈನ್‌ನಲ್ಲಿ ಹಾಕಿ ಹಿಂದೆ ನೆದರ್ಲೆಂಡ್ಸ್‌ಗೆ ಕಳುಹಿಸಿಬಿಟ್ಟರು. ಆ ಸೆರೆಶಿಬಿರದ ಮೇಲ್ವಿಚಾರಕಳ ಮುಖ ನನಗಿನ್ನೂ ನೆನಪಿದೆ. ಆಕೆ ನನಗಂದದ್ದು: “ನೀನೀಗಲೂ ಬೀಬಲ್‌ಫಾರ್ಶರ್‌ (ಬೈಬಲ್‌ ವಿದ್ಯಾರ್ಥಿ), ಯಾವಾಗಲೂ ಹಾಗೆಯೇ ಇರುವಿ.” ನಾನು ಉತ್ತರಿಸಿದ್ದು: “ಹೌದು ಯೆಹೋವನ ಚಿತ್ತವಾದರೆ ಹಾಗಿರುವೆ.” ಆದರೂ ನಾನು ಯೋಚಿಸುತ್ತಿದ್ದದ್ದು, ‘ಆ ಪತ್ರಕ್ಕೆ ಸಹಿಹಾಕಿದ್ದನ್ನು ಹೇಗೆ ರದ್ದುಮಾಡಲಿ?’ ಅಂತ.

ಆ ಪತ್ರದಲ್ಲಿದ್ದ ಒಂದು ವಿಷಯವೆಂದರೆ, “ನಾನು ಇನ್ನೆಂದೂ ಅಂತಾರಾಷ್ಟ್ರೀಯ ಬೈಬಲ್‌ ವಿದ್ಯಾರ್ಥಿಗಳ ಸಂಸ್ಥೆಯಲ್ಲಿ ಕ್ರಿಯಾಶೀಲವಾಗಿ ಕೆಲಸಮಾಡುವುದಿಲ್ಲವೆಂದು ಈ ಮೂಲಕ ಮಾತುಕೊಡುತ್ತೇನೆ” ಎಂಬುದೇ. ಹಾಂ . . . ಈಗ ಏನು ಮಾಡಬೇಕೆಂದು ಗೊತ್ತಾಯಿತು! 1943ರ ಜನವರಿಯಲ್ಲಿ ನಾನು ಮನೆ ಸೇರಿದ ಸ್ವಲ್ಪದರಲ್ಲೇ ಪುನಃ ಸಾರಲು ಶುರುಮಾಡಿದೆ. ನಾನು ದೇವರ ರಾಜ್ಯದ ಸುವಾರ್ತೆ ಸಾರುವಾಗ ನಾಸೀ ಅಧಿಕಾರಿಗಳ ಕೈಗೆ ಎರಡನೇ ಬಾರಿ ಸಿಕ್ಕಿಬಿದ್ದಲ್ಲಿ ಸಿಗುವ ಶಿಕ್ಷೆ ಎಷ್ಟು ಕಠಿಣವಾಗಿರುವುದೆಂದು ನನಗೆ ತಿಳಿದಿತ್ತು, ಆದರೂ ಹಿಂಜರಿಯಲಿಲ್ಲ.

ಯೆಹೋವನ ನಿಷ್ಠೆಯುಳ್ಳ ಸೇವಕಿ ನಾನು ಎಂಬ ಹೃದಯಾಪೇಕ್ಷೆಯನ್ನು ಆತನಿಗೆ ಇನ್ನಷ್ಟು ರುಜುಪಡಿಸಲು ನಾವು ನಮ್ಮ ಮನೆಯನ್ನು ನಮ್ಮ ಸಾಹಿತ್ಯ ಸಾಗಣೆಗಾರರಿಗೆ ಮತ್ತು ಸಂಚರಣ ಮೇಲ್ವಿಚಾರಕರಿಗೆ ವಸತಿಗಾಗಿ ಪುನಃ ತೆರೆದೆವು. ಯೆಹೋವನಿಗಾಗಿ ಮತ್ತು ಆತನ ಜನರಿಗಾಗಿ ನನ್ನ ಪ್ರೀತಿಯನ್ನು ರುಜುಪಡಿಸಲು ದೊರೆತ ಈ ಇನ್ನೊಂದು ಅವಕಾಶಕ್ಕಾಗಿ ನಾನು ಕೃತಜ್ಞಳು!

ಅತೀವ ದುಃಖದ ಪರೀಕ್ಷೆ

ಯುದ್ಧ ಮುಗಿಯುವ ಕೆಲವೇ ತಿಂಗಳ ಮುಂಚೆ ನಾನೂ ನನ್ನ ಪತಿಯೂ ಅತೀವ ದುಃಖಕ್ಕೆ ಗುರಿಯಾದೆವು. 1944ರ ಅಕ್ಟೋಬರ್‌ನಲ್ಲಿ ನಮ್ಮ ಮುದ್ದು ಮಗಳಾದ ವಿಲೀ ಇದ್ದಕ್ಕಿದ್ದ ಹಾಗೆ ಅಸ್ವಸ್ಥಳಾದಳು. ಅವಳಿಗೆ ಡಿಫ್ತೀರಿಯ ರೋಗ ತಗಲಿತು. ಅವಳ ರೋಗಸ್ಥಿತಿ ಬೇಗನೆ ಉಲ್ಬಣಗೊಂಡು ಮೂರೇ ದಿನಗಳಲ್ಲಿ ತೀರಿಕೊಂಡಳು. ಅವಳಿಗೆ ಕೇವಲ ಏಳು ವರ್ಷವಾಗಿತ್ತಷ್ಟೇ.

ಇದ್ದ ಒಬ್ಬಳೇ ಮಗಳನ್ನು ಕಳಕೊಂಡಾಗ ನಮಗಾದ ದುಃಖ ಅಷ್ಟಿಷ್ಟಲ್ಲ. ಆ ಕಡುವೇದನೆಗೆ ಹೋಲಿಸುವಾಗ ರಾವನ್ಸ್‌ಬ್ರೂಕ್‌ನ ಸೆರೆಶಿಬಿರದಲ್ಲಾದ ನಂಬಿಕೆಯ ಪರೀಕ್ಷೆ ಏನೂ ಅಲ್ಲ ಎನ್ನಬೇಕು. ಆದರೂ ಕಷ್ಟದ ಸಮಯದಲ್ಲಿ ನಾವು ಯಾವಾಗಲೂ ಕೀರ್ತನೆ 16:8ರಿಂದ ಸಾಂತ್ವನ ಪಡೆದುಕೊಂಡೆವು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.” ಯೆಹೋವನು ಕೊಟ್ಟಿರುವ ಪುನರುತ್ಥಾನದ ವಾಗ್ದಾನದಲ್ಲಿ ನನಗೂ ನನ್ನ ಪತಿಗೂ ಪೂರ್ಣ ಭರವಸೆಯಿತ್ತು. ನಾವು ಸತ್ಯದಲ್ಲಿ ನೆಲೆನಿಂತೆವು, ಅಲ್ಲದೆ ಸುವಾರ್ತೆಯನ್ನು ಯಾವಾಗಲೂ ಹುರುಪಿನಿಂದ ಸಾರಿದೆವು. ನನ್ನ ಪತಿ 1969ರಲ್ಲಿ ತೀರಿಹೋದರು. ಆ ತನಕವೂ ಯೆಹೋವನನ್ನು ಕೃತಜ್ಞತೆಯಿಂದ ಸೇವಿಸಲು ಅವರು ನನಗೆ ನೆರವಾದರು.

ಆನಂದಾಶೀರ್ವಾದಗಳು

ಪೂರ್ಣ ಸಮಯದ ಸೇವಕರ ಆಪ್ತ ಸಹವಾಸವೇ ಕಳೆದ ದಶಕಗಳಲ್ಲೆಲ್ಲಾ ನನ್ನ ಸಂತೋಷದ ಮಹಾ ಮೂಲವಾಗಿತ್ತು. ಯುದ್ಧದ ಸಮಯದಲ್ಲಿ ಹೇಗೋ ಹಾಗೆಯೇ ನಮ್ಮ ಮನೆಯು ಸಭೆಯನ್ನು ಸಂದರ್ಶಿಸುವ ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರಿಗಾಗಿ ಯಾವಾಗಲೂ ತೆರೆದಿತ್ತು. ಸಂಚರಣ ಕೆಲಸದಲ್ಲಿದ್ದ ಮಾರ್ಟನ್‌ ಮತ್ತು ನೆಲ್‌ ಕಾಪ್ಟೈನ್‌ ಎಂಬ ದಂಪತಿ ನಮ್ಮ ಮನೆಯಲ್ಲಿ 13 ವರ್ಷಗಳ ವರೆಗೆ ಅತಿಥಿಗಳಾಗಿದ್ದರು! ನೆಲ್‌ ಗಂಭೀರವಾಗಿ ಅಸ್ವಸ್ಥಳಾದಾಗ ಆಕೆ ಸಾಯುವ ತನಕ ಮೂರು ತಿಂಗಳು ಅವಳ ಆರೈಕೆಮಾಡುವ ಸದವಕಾಶ ನನಗೆ ದೊರಕಿತು. ನಾವಿಂದು ಜೀವಿಸುವ ಆಧ್ಯಾತ್ಮಿಕ ಪರದೈಸಿನಲ್ಲಿ ಆನಂದಿಸಲು ಅವರೊಂದಿಗಿನ ಹಾಗೂ ಸ್ಥಳೀಯ ಪ್ರಿಯ ಸಹೋದರ ಸಹೋದರಿಯರೊಂದಿಗಿನ ಸಹವಾಸವು ನನಗೆ ಸಹಾಯಮಾಡಿತು.

1995ರಲ್ಲಿ ಒಂದು ಉಜ್ವಲ ಅವಕಾಶವು ನನಗೆ ಸಿಕ್ಕಿತು. ಅದು ರಾವನ್ಸ್‌ಬ್ರೂಕ್‌ ಸೆರೆಶಿಬಿರದ ಸ್ಮರಣೀಯ ದಿನಕ್ಕೆ ಹಾಜರಾಗುವ ಆಮಂತ್ರಣವೇ. ಸೆರೆಶಿಬಿರದಲ್ಲಿ ನನ್ನೊಂದಿಗಿದ್ದ ಸಹೋದರಿಯರನ್ನು ನಾನಲ್ಲಿ ಭೇಟಿಯಾದೆ. ಅವರನ್ನು ನೋಡಿ 50ಕ್ಕಿಂತ ಹೆಚ್ಚು ವರ್ಷಗಳೇ ಕಳೆದಿದ್ದವು! ಅವರೊಂದಿಗೆ ಒಟ್ಟಾಗಿ ಕೂಡಿದ್ದು ಒಂದು ಅವಿಸ್ಮರಣೀಯ ಹಾಗೂ ಹೃದಯಸ್ಪರ್ಶಕ ಅನುಭವ! ಮೃತರಾದ ನಮ್ಮ ಪ್ರಿಯರು ಪುನಃ ಎದ್ದುಬರುವುದನ್ನು ಮುನ್ನೋಡುತ್ತಾ ಇರುವಂತೆ ಒಬ್ಬರಿಗೊಬ್ಬರು ಆದರಣೆ ಕೊಟ್ಟ ಸುಸಂದರ್ಭ ಅದಾಗಿತ್ತು.

‘ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವೆವು’ ಎಂದು ರೋಮನ್ನರಿಗೆ 15:4ರಲ್ಲಿ ಅಪೊಸ್ತಲ ಪೌಲನು ಹೇಳಿದನು. ಈ ನಿರೀಕ್ಷೆಯನ್ನು ಒದಗಿಸಿದ್ದಕ್ಕಾಗಿ ನಾನು ಯೆಹೋವನಿಗೆ ಆಭಾರಿ. ಅದು ನನ್ನನ್ನು ನಂಬಿಕೆಯ ಪರೀಕ್ಷೆಗಳ ಕೆಳಗೂ ಕೃತಜ್ಞತೆಯಿಂದ ಆತನ ಸೇವೆಮಾಡಲು ಶಕ್ತಳನ್ನಾಗಿ ಮಾಡಿದೆ.

[ಪಾದಟಿಪ್ಪಣಿ]

^ ಪ್ಯಾರ. 19 ಆ ಸಮಯದಲ್ಲಿ ಮುಖ್ಯಕಾರ್ಯಾಲಯದೊಂದಿಗೆ ಸಂಪರ್ಕವಿರದಿದ್ದ ಕಾರಣ ಸಹೋದರರು ತಾಟಸ್ಥ್ಯದ ಕುರಿತಾದ ವಿಷಯಗಳನ್ನು ತಮಗಿದ್ದ ಜ್ಞಾನಾನುಸಾರ ಸಾಧ್ಯವಾದಷ್ಟು ಉತ್ತಮವಾಗಿ ನಿರ್ವಹಿಸಿದರು. ಆ ಕಾರಣದಿಂದಾಗಿ ಸಹೋದರಿ ಮಾರ್ಚರವರ ಸನ್ನಿವೇಶದಲ್ಲಿ ಇತರ ಸಹೋದರಿಯರು ಬೇರೆ ಬೇರೆ ರೀತಿಗಳಲ್ಲಿ ಪ್ರತಿಕ್ರಿಯಿಸಿದರು.

[ಪುಟ 10ರಲ್ಲಿರುವ ಚಿತ್ರ]

1930ರಲ್ಲಿ ನನ್ನ ಪತಿ ಯಾಪ್‌ರೊಂದಿಗೆ

[ಪುಟ 10ರಲ್ಲಿರುವ ಚಿತ್ರ]

ನಮ್ಮ ಏಳು ವರ್ಷದ ಮಗಳು ವಿಲೀ

[ಪುಟ 12ರಲ್ಲಿರುವ ಚಿತ್ರ]

1995ರಲ್ಲಿ ಹೃದಯಸ್ಪರ್ಶಿ ಪುನರ್ಮಿಲನ. ಮೊದಲನೇ ಸಾಲಿನಲ್ಲಿ ಎಡದಿಂದ ನಾನು ಎರಡನೆಯವಳು