ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮ”

“ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮ”

“ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮ”

ಸೌಲನು ಪುರಾತನ ಇಸ್ರಾಯೇಲ್‌ನ ಪ್ರಪ್ರಥಮ ಅರಸನಾಗಿದ್ದನು. ಸತ್ಯದೇವರೇ ಅವನನ್ನು ಆಯ್ಕೆಮಾಡಿದ್ದನಾದರೂ ಕಾಲಕ್ರಮೇಣ ಅವನು ಅವಿಧೇಯನಾದನು.

ಸೌಲನು ಮಾಡಿದ ತಪ್ಪುಗಳು ಯಾವುವು? ಅವನು ಆ ತಪ್ಪುಗಳನ್ನು ಮಾಡದೇ ಇರಬಹುದಿತ್ತೋ? ಅವನ ಉದಾಹರಣೆಯನ್ನು ಪರಿಗಣಿಸುವುದರಿಂದ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು?

ತನ್ನಾಯ್ಕೆಯ ರಾಜನನ್ನು ಯೆಹೋವನು ಪ್ರಕಟಿಸಿದನು

ಸೌಲನು ಅರಸನಾಗುವ ಮುನ್ನ ಪ್ರವಾದಿ ಸಮುವೇಲನು ಇಸ್ರಾಯೇಲಿನಲ್ಲಿ ದೇವರ ಪ್ರತಿನಿಧಿಯಾಗಿ ಸೇವೆಮಾಡುತ್ತಿದ್ದನು. ಈಗ ಸಮುವೇಲನು ಮುದುಕನಾಗಿದ್ದನು ಹಾಗೂ ಅವನ ಪುತ್ರರು ಅಪನಂಬಿಗಸ್ತರಾಗಿದ್ದರು. ಅದೇ ಸಮಯದಲ್ಲಿ ಇಸ್ರಾಯೇಲ್‌ ಜನಾಂಗಕ್ಕೆ ವೈರಿ ರಾಷ್ಟ್ರಗಳಿಂದ ಆಕ್ರಮಣದ ಬೆದರಿಕೆಯೂ ಇತ್ತು. ಆಗ ಇಸ್ರಾಯೇಲ್ಯರ ಹಿರಿಯರು ಯುದ್ಧದಲ್ಲಿ ನಾಯಕತ್ವ ವಹಿಸಬಲ್ಲ ಹಾಗೂ ಅವರ ನ್ಯಾಯತೀರಿಸಬಲ್ಲ ಒಬ್ಬ ಅರಸನನ್ನು ನೇಮಿಸಬೇಕೆಂದು ಸಮುವೇಲನಿಗೆ ವಿನಂತಿಸಿದರು. ಯೆಹೋವನು ಪ್ರವಾದಿ ಸಮುವೇಲನಿಗೆ ಸೌಲನನ್ನು ಅರಸನಾಗಿ ಅಭಿಷೇಕಿಸುವಂತೆ ಮಾರ್ಗದರ್ಶಿಸುತ್ತಾ ಅಂದದ್ದು: “ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು.”—1 ಸಮು. 8:4-7, 20; 9:16.

ಸೌಲನು ಯುವಕನೂ “ಅತಿಸುಂದರನೂ” ಆಗಿದ್ದನು. ಸೌಂದರ್ಯ ಮಾತ್ರವೇ ಅಲ್ಲ ಸದ್ಗುಣಗಳೂ ಅವನಲ್ಲಿದ್ದವು. ದೀನಭಾವ ಕೂಡ ಇತ್ತು. ಉದಾಹರಣೆಗೆ ಸೌಲನು ಸಮುವೇಲನನ್ನು ಕೇಳಿದ್ದು: “ನಾನು ಇಸ್ರಾಯೇಲ್‌ ಕುಲಗಳಲ್ಲಿ ಅಲ್ಪವಾಗಿರುವ ಬೆನ್ಯಾಮೀನ್‌ ಕುಲದವನಲ್ಲವೋ? ಬೆನ್ಯಾಮೀನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಯಾಕೆ ಹೇಳುತ್ತೀ.” ತನ್ನ ತಂದೆ ಕೀಷನು ‘ಐಶ್ವರ್ಯವಂತನಾಗಿದ್ದರೂ’ ಸೌಲನಿಗೆ ತನ್ನ ಮತ್ತು ತನ್ನ ಕುಟುಂಬದ ಬಗ್ಗೆ ಕೊಂಚವೂ ಹೆಗ್ಗಳಿಕೆ ಇರಲಿಲ್ಲ.—1 ಸಮು. 9:1, 2, 21.

ಯೆಹೋವನು ಇಸ್ರಾಯೇಲಿನ ಅರಸನನ್ನು ಆರಿಸಿಕೊಂಡದ್ದರ ಕುರಿತು ಸಮುವೇಲನು ಜನರೆಲ್ಲರಿಗೆ ಪ್ರಕಟಿಸಿದಾಗ ಸೌಲನು ಹೇಗೆ ಪ್ರತಿಕ್ರಿಯಿಸಿದನೆಂದೂ ಪರಿಗಣಿಸಿ. ಮೊದಲು ಸಮುವೇಲನು ಪ್ರತ್ಯೇಕವಾಗಿ ಸೌಲನನ್ನು ಅಭಿಷೇಕಿಸಿ ಅವನಿಗಂದದ್ದು: “ನಿನಗೆ ಅನುಕೂಲವಿದ್ದದ್ದನ್ನು ನಡಿಸು; ದೇವರು ನಿನ್ನ ಸಂಗಡ ಇದ್ದಾನೆ.” ತದನಂತರ, ಯೆಹೋವನು ಆರಿಸಿಕೊಂಡ ಅರಸನ ಬಗ್ಗೆ ಪ್ರಕಟಿಸಲು ಸಮುವೇಲನು ಜನರೆಲ್ಲರನ್ನು ಒಟ್ಟುಗೂಡಿಸಿದನು. ಸೌಲನು ಅರಸನೆಂದು ಗೊತ್ತಾದಾಗ ಅವನೆಲ್ಲೂ ಕಾಣಸಿಗಲಿಲ್ಲ. ನಿಜವೇನೆಂದರೆ ಸೌಲನು ಸಂಕೋಚದಿಂದ ಅಡಗಿಕೊಂಡಿದ್ದನು. ಅವನು ಎಲ್ಲಿದ್ದನೆಂದು ತದನಂತರ ಯೆಹೋವನು ತೋರಿಸಿಕೊಟ್ಟನು, ಬಳಿಕ ಅವನನ್ನು ಅರಸನೆಂದು ಘೋಷಿಸಲಾಯಿತು.—1 ಸಮು. 10:7, 20-24.

ರಣರಂಗದಲ್ಲಿ

ಸೌಲನ ಅರ್ಹತೆಗಳನ್ನು ಸಂಶಯಿಸಿದ್ದಿರಬಹುದಾದ ಜನರಿಗೆ ತಾವು ನೆನಸಿದ್ದು ತಪ್ಪೆಂದು ಬೇಗನೆ ತಿಳಿದುಬಂತು. ಹೇಗಂದರೆ ಅಮ್ಮೋನಿಯರು ಇಸ್ರಾಯೇಲ್ಯ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ “ಯೆಹೋವನ ಆತ್ಮವು [ಸೌಲನ] ಮೇಲೆ ಬಂದಿತು.” ಅವನು ಕೂಡಲೆ ದೇಶದ ಸೈನಿಕರನ್ನು ಒಟ್ಟುಗೂಡಿಸಲು ಆಜ್ಞಾಪಿಸಿ, ಕ್ರಮಬದ್ಧವಾಗಿ ಏರ್ಪಡಿಸಿ ಅಮ್ಮೋನಿಯರನ್ನು ಸೋಲಿಸಿಬಿಟ್ಟನು. ಈ ವಿಜಯಕ್ಕೆ ಕಾರಣನು ದೇವರೇ ಎಂದು ಸೌಲನು ತಿಳಿಸುತ್ತಾ ಅಂದದ್ದು: ‘ಯೆಹೋವನು ಈ ಹೊತ್ತು ಇಸ್ರಾಯೇಲ್ಯರಿಗೆ ಜಯವನ್ನುಂಟುಮಾಡಿದನು.’—1 ಸಮು. 11:1-13.

ಸೌಲನಲ್ಲಿ ಸದ್ಗುಣಗಳಿದ್ದವು, ದೇವರ ಆಶೀರ್ವಾದವೂ ಇತ್ತು. ಯೆಹೋವನಿಗಿದ್ದ ಶಕ್ತಿಯನ್ನು ಕೂಡ ಅವನು ಅಂಗೀಕರಿಸಿದ್ದನು. ಆದರೂ ಇಸ್ರಾಯೇಲ್ಯರ ಮತ್ತು ಅವರ ಅರಸರ ಯಶಸ್ಸು ಒಂದು ಅತಿ ಪ್ರಾಮುಖ್ಯ ಅಂಶದ ಮೇಲೆ ಆತುಕೊಂಡಿತ್ತು. ಅದನ್ನು ತಿಳಿಸುತ್ತಾ ಸಮುವೇಲನು ಇಸ್ರಾಯೇಲ್ಯ ಜನರಿಗೆ ಅಂದದ್ದು: “ನೀವೂ ನಿಮ್ಮ ಅರಸನೂ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು ವಿಧೇಯರಾಗಿ ಆತನನ್ನು ಸೇವಿಸುತ್ತಾ ತಪ್ಪದೆ ಆತನ ಮಾತು ಕೇಳುವವರಾಗಿ ಆತನನ್ನೇ ಹೊಂದಿಕೊಂಡಿರುವದಾದರೆ ಎಷ್ಟೋ ಒಳ್ಳೇದು.” ಇಸ್ರಾಯೇಲ್ಯರು ದೇವರಿಗೆ ನಂಬಿಗಸ್ತರಾಗಿದ್ದಲ್ಲಿ ಯಾವ ವಿಷಯದಲ್ಲಿ ಖಾತ್ರಿಯಿಂದಿರಸಾಧ್ಯವಿತ್ತು? ಸಮುವೇಲನು ಅಂದದ್ದು: “ಯೆಹೋವನು ದಯದಿಂದ ನಿಮ್ಮನ್ನು ಸ್ವಕೀಯಜನವನ್ನಾಗಿ ಆರಿಸಿಕೊಂಡ ಮೇಲೆ ಆತನು ತನ್ನ ಮಹೋನ್ನತ ನಾಮದ ನಿಮಿತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ.”—1 ಸಮು. 12:14, 22.

ವಿಧೇಯತೆಯು ದೇವರ ಮೆಚ್ಚಿಗೆಯನ್ನು ಗಳಿಸಲು ಅತಿ ಪ್ರಾಮುಖ್ಯ ಅಂಶವಾಗಿತ್ತು. ಇಂದು ಕೂಡ ಅದು ಸತ್ಯ. ಯೆಹೋವನ ಸೇವಕರು ಆತನ ಆಜ್ಞೆಗೆ ವಿಧೇಯರಾಗುವಾಗ ಆತನು ಅವರನ್ನು ಆಶೀರ್ವದಿಸುತ್ತಾನೆ. ಆದರೆ ಅವರು ಯೆಹೋವನಿಗೆ ಅವಿಧೇಯರಾದರೆ ಆಗೇನು?

“ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ”

ಫಿಲಿಷ್ಟಿಯರು ತಮ್ಮ ವಿರುದ್ಧವಾಗಿ ಸೌಲನು ಮಾಡಿದ ಮುಂದಿನ ಕೃತ್ಯವನ್ನು ಬಲವಾಗಿ ಪ್ರತಿಭಟಿಸಿದರು. “ಸಮುದ್ರದ ಮರಳಿನಷ್ಟು ಅಸಂಖ್ಯವಾದ” ಪ್ರಬಲ ಸೇನೆ ಸೌಲನ ವಿರುದ್ಧವಾಗಿ ಯುದ್ಧಕ್ಕೆ ಬಂತು. “ಇಸ್ರಾಯೇಲ್ಯರಿಗೆ ಕೇಡು ಬಂದಿತು. ತಾವು ಇಕ್ಕಟ್ಟಿನಲ್ಲಿದ್ದೇವೆಂದು ಅವರು ತಿಳಿದು ಗವಿ, ಕಾಡು, ಬಂಡೆ, ನೆಲಮನೆ, ಗುಂಡಿ ಇವುಗಳಲ್ಲಿ ಅಡಗಿಕೊಂಡರು.” (1 ಸಮು. 13:5, 6) ಸೌಲನು ಈಗೇನು ಮಾಡಲಿದ್ದನು?

ಗಿಲ್ಗಾಲಿನಲ್ಲಿ ತನಗೆ ಸಿಗುವಂತೆ ಸಮುವೇಲನು ಸೌಲನಿಗೆ ಹೇಳಿದ್ದನು. ಇಲ್ಲಿಯೇ ಪ್ರವಾದಿಯು ಯಜ್ಞಗಳನ್ನು ಅರ್ಪಿಸಲಿಕ್ಕಿದ್ದನು. ಸೌಲನು ಅವನಿಗಾಗಿ ಕಾದನು. ಆದರೆ ಸಮುವೇಲನಿಗೆ ಬರಲಿಕ್ಕೆ ತಡವಾಯಿತು. ಆಗ ಸೌಲನ ಸೇನೆಯಾದರೋ ಚದರಿಹೋಗತೊಡಗಿತು. ಆದ್ದರಿಂದ ಸೌಲನು ತಾನೇ ಮುಂದೊತ್ತಿ ಯಜ್ಞಗಳನ್ನು ಅರ್ಪಿಸಿದನು. ಅವನು ಹಾಗೆ ಮಾಡುತ್ತಿರುವಾಗಲೇ ಸಮುವೇಲನು ಬಂದುಬಿಟ್ಟನು. ಸೌಲನು ಮಾಡಿದ್ದನ್ನು ಕೇಳಿ ಸಮುವೇಲನು ಅವನಿಗೆ ಅಂದದ್ದು: “ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು. ಈಗಲಾದರೋ ನಿನ್ನ ಅರಸುತನವು ನಿಲ್ಲುವದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಹೋದದರಿಂದ ಆತನು ತನಗೆ ಒಪ್ಪುವ ಬೇರೊಬ್ಬ ಪುರುಷನನ್ನು ತನ್ನ ಪ್ರಜೆಯ ಮೇಲೆ ಪ್ರಭುವಾಗಿ ನೇಮಿಸಿದ್ದಾನೆ.”—1 ಸಮು. 10:8; 13:8, 13, 14.

ಯಜ್ಞವನ್ನು ಅರ್ಪಿಸಲು ಸಮುವೇಲನಿಗಾಗಿ ಕಾಯುವಂತೆ ದೇವರು ಕೊಟ್ಟ ಆಜ್ಞೆಗೆ ಸೌಲನು ದುರಹಂಕಾರದಿಂದ ಅವಿಧೇಯನಾಗುವ ಮೂಲಕ ನಂಬಿಕೆಯ ಕೊರತೆಯನ್ನು ತೋರಿಸಿದನು. ಸೌಲನ ಈ ಕೃತ್ಯವು ಇಸ್ರಾಯೇಲ್‌ ಸೈನ್ಯದ ಹಿಂದಿನ ಸೇನಾಧಿಪತಿ ಗಿದ್ಯೋನನು ಮಾಡಿದ ವಿಷಯಕ್ಕಿಂತ ಎಷ್ಟು ಭಿನ್ನವಾಗಿತ್ತು! ಗಿದ್ಯೋನನು ತನ್ನ ಸೈನ್ಯವನ್ನು 32,000ದಿಂದ 300ಕ್ಕೆ ಕಡಿಮೆಮಾಡುವಂತೆ ಯೆಹೋವನು ಹೇಳಿದಾಗ ಅವನು ವಿಧೇಯನಾದನು. ಏಕೆ? ಏಕೆಂದರೆ ಅವನಿಗೆ ಯೆಹೋವನಲ್ಲಿ ನಂಬಿಕೆಯಿತ್ತು. ಆತನ ಸಹಾಯದಿಂದ ಗಿದ್ಯೋನನು 1,35,000 ಶತ್ರುಗಳನ್ನು ಸೋಲಿಸಿದನು. (ನ್ಯಾಯ. 7:1-7, 17-22; 8:10) ಸೌಲನಿಗೆ ಕೂಡ ಯೆಹೋವನು ಸಹಾಯಮಾಡಶಕ್ತನಿದ್ದನು. ಆದರೆ ಸೌಲನು ಅವಿಧೇಯನಾದ ಕಾರಣ ಫಿಲಿಷ್ಟಿಯರು ಇಸ್ರಾಯೇಲ್ಯರನ್ನು ಸೋಲಿಸಿಬಿಟ್ಟರು.—1 ಸಮು. 13:17, 18.

ನಾವು ಕಷ್ಟಗಳನ್ನು ಎದುರಿಸುವಾಗ ಹೇಗೆ ನಿರ್ಣಯಗಳನ್ನು ಮಾಡುತ್ತೇವೆ? ದೈವಿಕ ಮೂಲತತ್ತ್ವಗಳನ್ನು ನಿರ್ಲಕ್ಷಿಸುವುದು ಅಲ್ಪನಂಬಿಕೆಯ ಜನರ ದೃಷ್ಟಿಯಲ್ಲಿ ವ್ಯಾವಹಾರಿಕವೆಂದು ಕಂಡೀತು. ಸಮುವೇಲನು ಬರಲು ತಡಮಾಡಿದ್ದರಿಂದ ತಾನು ಮಾಡಿದ್ದೇ ಸರಿಯೆಂದು ಸೌಲನು ಯೋಚಿಸಿದ್ದಿರಬಹುದು. ಆದರೆ ದೇವರ ಮೆಚ್ಚಿಕೆಯನ್ನು ಗಳಿಸಲು ದೃಢನಿಶ್ಚಯ ಮಾಡಿರುವವರಿಗಾದರೋ ಪ್ರಸ್ತುತ ಸನ್ನಿವೇಶಕ್ಕೆ ಅನ್ವಯವಾಗುವ ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸುವುದೊಂದೇ ಯೋಗ್ಯ ಮಾರ್ಗ.

ಯೆಹೋವನು ಸೌಲನನ್ನು ತಿರಸ್ಕರಿಸುತ್ತಾನೆ

ಅಮಾಲೇಕ್ಯರ ವಿರುದ್ಧದ ಯುದ್ಧದಲ್ಲಿ ಸೌಲನು ಇನ್ನೊಂದು ಗಂಭೀರ ತಪ್ಪಿಗೂ ದೋಷಿಯಾದನು. ಇಸ್ರಾಯೇಲ್ಯರು ಈಜಿಪ್ಟ್‌ನಿಂದ ಬಿಡುಗಡೆಹೊಂದಿದಾಗ ಅಮಾಲೇಕ್ಯರು ಅವರ ಮೇಲೆ ಮಾಡಿದ ವಿನಾಕಾರಣ ಆಕ್ರಮಣಕ್ಕಾಗಿ ದೇವರು ಆ ಜನರನ್ನು ಖಂಡಿಸಿದನು. (ವಿಮೋ. 17:8; ಧರ್ಮೋ. 25:17, 18) ಅದಲ್ಲದೆ ಅಮಾಲೇಕ್ಯರು ದೇವರಾದುಕೊಂಡ ಜನರ ವಿರುದ್ಧವಾಗಿ ನ್ಯಾಯಸ್ಥಾಪಕರ ಸಮಯದಲ್ಲಿ ಪುನಃ ಯುದ್ಧಮಾಡಲು ಇತರರೊಂದಿಗೆ ಕೂಡಿಕೊಂಡರು. (ನ್ಯಾಯ. 3:12, 13; 6:1-3, 33) ಆದ್ದರಿಂದ ಯೆಹೋವನು ಅಮಾಲೇಕ್ಯರಿಗೆ ಮುಯ್ಯಿತೀರಿಸಲು ನಿಶ್ಚಯಿಸಿ ಅವರನ್ನು ನಾಶಮಾಡುವಂತೆ ಸೌಲನಿಗೆ ಆಜ್ಞಾಪಿಸಿದನು.—1 ಸಮು. 15:1-3.

ಶತ್ರುಗಳಾಗಿದ್ದ ಅಮಾಲೇಕ್ಯರನ್ನು ನಿರ್ಮೂಲಮಾಡಿ ಅವರ ಸರ್ವ ಸೊತ್ತುಗಳನ್ನು ನಾಶಮಾಡುವಂತೆ ಯೆಹೋವನು ಕೊಟ್ಟ ಆಜ್ಞೆಗೆ ಸೌಲನು ವಿಧೇಯನಾಗದೆ ಅವರ ಅರಸನನ್ನು ಸೆರೆಹಿಡಿದು ಅವನನ್ನೂ ಮೇಲ್ತರದ ಪಶುಗಳನ್ನೂ ಉಳಿಸಿದನು. ಈ ವಿಷಯದಲ್ಲಿ ಸೌಲನನ್ನು ಸಮುವೇಲನು ಪ್ರಶ್ನಿಸಿದಾಗ ಏನಾಯಿತು? ಅವನು ಬೇರೆಯವರ ಮೇಲೆ ದೋಷಹೊರಿಸಲು ಪ್ರಯತ್ನಿಸುತ್ತಾ, “ಜನರು ನಿನ್ನ ದೇವರಾದ ಯೆಹೋವನಿಗೋಸ್ಕರ ಯಜ್ಞಸಲ್ಲಿಸುವದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಮೇಲ್ತರದವುಗಳನ್ನು ಉಳಿಸಿ ತಂದಿದ್ದಾರೆ” ಎಂದನು. ಸೌಲನು ನಿಜವಾಗಿಯೂ ಆ ಪ್ರಾಣಿಗಳನ್ನು ಯಜ್ಞಾರ್ಪಿಸಲಿದ್ದನೋ ಇಲ್ಲವೋ ನಮಗೆ ಗೊತ್ತಿಲ್ಲ, ಆದರೆ ಅವನು ಅವಿಧೇಯನಾದನೆಂಬುದು ನಿಜ. ಅವನೀಗ ‘ತನ್ನ ದೃಷ್ಟಿಯಲ್ಲಿ [ಅಷ್ಟು] ಅಲ್ಪನಾಗಿರಲಿಲ್ಲ.’ ಆದಕಾರಣ ಅವನು ದೇವರಿಗೆ ಅವಿಧೇಯನೆಂದು ದೇವರ ಪ್ರವಾದಿ ಸ್ಪಷ್ಟವಾಗಿ ತಿಳಿಸಿದನು. ಅನಂತರ ಸಮುವೇಲನು ಅಂದದ್ದು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; . . . ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟದ್ದರಿಂದ ಆತನು ನಿನ್ನನ್ನು ಅರಸುತನದಿಂದ ತಳ್ಳಿಬಿಟ್ಟಿದ್ದಾನೆ.”—1 ಸಮು. 15:15, 17, 22, 23.

ಯೆಹೋವನು ಸೌಲನಿಂದ ತನ್ನ ಪವಿತ್ರಾತ್ಮವನ್ನು ಮತ್ತು ಆಶೀರ್ವಾದವನ್ನು ಹಿಂದೆಗೆದಾಗ ಇಸ್ರಾಯೇಲಿನ ಪ್ರಥಮ ಅರಸನನ್ನು “ದುರಾತ್ಮವು” ಪೀಡಿಸಿ ಅಧೀನದಲ್ಲಿಟ್ಟಿತು. ಮುಂದಕ್ಕೆ ಯೆಹೋವನು ಯಾರಿಗೆ ರಾಜ್ಯಪದವನ್ನು ಕೊಡಲಿದ್ದನೋ ಆ ದಾವೀದನ ಕಡೆಗೆ ಸೌಲನಿಗೆ ಉಂಟಾದ ಸಂಶಯ ಮತ್ತು ಹೊಟ್ಟೆಕಿಚ್ಚಿನ ಮನೋವೃತ್ತಿಯಿಂದ ಇದು ವ್ಯಕ್ತವಾಯಿತು. ಒಂದಕ್ಕಿಂತ ಹೆಚ್ಚು ಸಲ ಅವನು ದಾವೀದನನ್ನು ಕೊಲ್ಲಲು ಪ್ರಯತ್ನಿಸಿದನು. “ಯೆಹೋವನು ದಾವೀದನ ಸಂಗಡ ಇದ್ದಾನೆಂದು” ಸೌಲನು ನೋಡಿ ದಾವೀದನ “ನಿತ್ಯವೈರಿಯಾದನು” ಎನ್ನುತ್ತದೆ ಬೈಬಲ್‌. ಅವನು ದಾವೀದನ ಪ್ರಾಣವನ್ನು ತೆಗೆಯಲಿಕ್ಕಾಗಿ ಬಿಡದೆ ಬೆನ್ನಟ್ಟಿದನು. ಅಲ್ಲದೆ ದಾವೀದನಿಗೆ ಸಹಾಯಮಾಡಿದ 85 ಯಾಜಕರನ್ನೂ ಇತರರನ್ನೂ ಕೊಲ್ಲಿಸಿದನು. ಹೀಗೆ ಯೆಹೋವನು ಸೌಲನನ್ನು ತಿರಸ್ಕರಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ!—1 ಸಮು. 16:14; 18:11, 25, 28, 29; 19:10, 11; 20:32, 33; 22:16-19.

ಫಿಲಿಷ್ಟಿಯರು ಪುನಃ ಇಸ್ರಾಯೇಲ್ಯರ ಮೇಲೆ ಆಕ್ರಮಣಮಾಡಿದಾಗ ಸಹಾಯಕ್ಕಾಗಿ ಸೌಲನು ಪ್ರೇತವ್ಯವಹಾರದ ಮೊರೆಹೊಕ್ಕಿದನು. ಅದು ನಿರರ್ಥಕವಾಯಿತು. ಏಕೆಂದರೆ ಮರುದಿನವೇ ಅವನು ಯುದ್ಧದಲ್ಲಿ ತೀವ್ರ ಗಾಯಗೊಂಡು ಆತ್ಮಹತ್ಯೆ ಮಾಡಿಕೊಂಡನು. (1 ಸಮು. 28:4-8; 31:3, 4) ಇಸ್ರಾಯೇಲಿನ ಪ್ರಥಮ ಅವಿಧೇಯ ರಾಜನ ಕುರಿತು ಬೈಬಲ್‌ ಅನ್ನುವುದು: “ಸೌಲನು ಯೆಹೋವನ ಮಾತನ್ನು ಕೇಳದೆ ಆತನಿಗೆ ವಿರೋಧವಾಗಿ ದ್ರೋಹಮಾಡಿದ್ದರಿಂದಲೂ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸದೆ ಪ್ರೇತಸಿದ್ಧರಲ್ಲಿ ವಿಚಾರಿಸಿದ್ದರಿಂದಲೂ ಅವನಿಗೆ ಇಂಥ ಮರಣವಾಯಿತು.”—1 ಪೂರ್ವ. 10:13, 14.

ಸೌಲನ ಕೆಟ್ಟ ಉದಾಹರಣೆಯು ನಮಗೇನನ್ನು ಸ್ಪಷ್ಟಪಡಿಸುತ್ತದೆ? ಯೆಹೋವನಿಗೆ ಯಾವುದೇ ಯಜ್ಞವನ್ನು ಅರ್ಪಿಸುವುದಕ್ಕಿಂತ ಆತನಿಗೆ ವಿಧೇಯರಾಗಿರುವುದೇ ಉತ್ತಮ ಎಂದೇ. ಅಪೊಸ್ತಲ ಯೋಹಾನನು ಬರೆದದ್ದು: “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾ. 5:3) ಈ ಪ್ರಮುಖ ಸತ್ಯವನ್ನು ನಾವೆಂದೂ ಮರೆಯದಿರೋಣ: ಅದೇನೆಂದರೆ ದೇವರೊಂದಿಗಿನ ಶಾಶ್ವತ ಸ್ನೇಹಕ್ಕೆ ಆತನಿಗೆ ವಿಧೇಯರಾಗಿರುವುದು ಅತಿ ಪ್ರಾಮುಖ್ಯ ಎಂಬುದೇ.

[ಪುಟ 21ರಲ್ಲಿರುವ ಚಿತ್ರ]

ಮೊದಮೊದಲಲ್ಲಿ ಸೌಲನು ದೀನ ನಾಯಕನಾಗಿದ್ದನು

[ಪುಟ 23ರಲ್ಲಿರುವ ಚಿತ್ರ]

“ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮ” ಎಂದು ಸಮುವೇಲನು ಸೌಲನಿಗೆ ಹೇಳಿದ್ದೇಕೆ?