ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೃಷ್ಟಿಕ್ರಿಯೆಯಲ್ಲಿ ಪವಿತ್ರಾತ್ಮದ ಪಾತ್ರ!

ಸೃಷ್ಟಿಕ್ರಿಯೆಯಲ್ಲಿ ಪವಿತ್ರಾತ್ಮದ ಪಾತ್ರ!

ಸೃಷ್ಟಿಕ್ರಿಯೆಯಲ್ಲಿ ಪವಿತ್ರಾತ್ಮದ ಪಾತ್ರ!

“ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವದೆಲ್ಲವೂ ಆತನ ಶ್ವಾಸದಿಂದ [“ಪವಿತ್ರಾತ್ಮದಿಂದ,” NW] ನಿರ್ಮಿತವಾಯಿತು.”—ಕೀರ್ತ. 33:6.

1, 2. (ಎ) ವಿಶ್ವ ಮತ್ತು ಭೂಮಿಯ ಕುರಿತ ಮಾನವನ ಜ್ಞಾನವು ಸಮಯ ದಾಟಿದಂತೆ ಹೇಗೆ ಹೆಚ್ಚಾಗಿದೆ? (ಬಿ) ಯಾವ ಪ್ರಶ್ನೆಗೆ ಉತ್ತರ ಅವಶ್ಯ?

ಆಲ್ಬರ್ಟ್‌ ಐನ್‌ಸ್ಟೈನ್‌ 1905ರಲ್ಲಿ ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತವನ್ನು ಪ್ರಕಟಿಸಿದನು. ಆಗ ಅವನು ಮತ್ತು ಇತರ ಅನೇಕ ವಿಜ್ಞಾನಿಗಳು ಇಡೀ ವಿಶ್ವದಲ್ಲಿ ಕೇವಲ ಒಂದೇ ಒಂದು ಗ್ಯಾಲಕ್ಸಿ ಅಂದರೆ ಕ್ಷೀರಪಥ ಗ್ಯಾಲಕ್ಸಿ ಮಾತ್ರ ಇದೆಯೆಂದು ನಂಬಿದ್ದರು. ವಿಶ್ವದ ಬೃಹತ್‌ ಗಾತ್ರದ ಕುರಿತು ಇದೆಷ್ಟು ಕಡಿಮೆ ಅಂದಾಜು! ಏಕೆಂದರೆ ಈಗ ತಿಳಿದಿರುವ ಪ್ರಕಾರ ವಿಶ್ವದಲ್ಲಿ 10,000 ಕೋಟಿಗಿಂತಲೂ ಹೆಚ್ಚು ಗ್ಯಾಲಕ್ಸಿಗಳಿವೆ ಮತ್ತು ಕೆಲವು ಗ್ಯಾಲಕ್ಸಿಗಳಲ್ಲಿರುವ ನಕ್ಷತ್ರಗಳು ನೂರಾರು ಕೋಟಿ. ಇನ್ನಷ್ಟು ಸೂಕ್ಷ್ಮಾತಿಸೂಕ್ಷ್ಮ ದೂರದರ್ಶಕಗಳನ್ನು ಬಳಸಿದಂತೆ ಅಥವಾ ಭೂಗ್ರಹದ ಸುತ್ತಲು ದೂರದರ್ಶಕಗಳನ್ನು ಆವರ್ತಿಸಲಾದಂತೆ ಜ್ಞಾತ ಗ್ಯಾಲಕ್ಸಿಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತಾ ಹೆಚ್ಚುತ್ತಾ ಬರುತ್ತಿದೆ.

2 ಇಸವಿ 1905ರಲ್ಲಿ ವಿಶ್ವದ ಕುರಿತ ವೈಜ್ಞಾನಿಕ ಜ್ಞಾನ ಹೇಗೋ ಹಾಗೆಯೇ ಭೂಮಿಯ ಕುರಿತ ಜ್ಞಾನವೂ ಸೀಮಿತವಾಗಿತ್ತು. ಆಗ ಇದ್ದ ಜನರಿಗೆ ಅವರ ಮೊದಲಿದ್ದವರಿಗಿಂತ ಹೆಚ್ಚು ಜ್ಞಾನವಿತ್ತು ನಿಜ. ಆದರೆ ಇಂದು ಜನರಿಗೆ ಜೀವಸಂಕುಲದ ವೈಶಿಷ್ಟ್ಯ, ಸಂಕೀರ್ಣತೆ ಹಾಗೂ ಭೂವ್ಯವಸ್ಥೆಯ ಜೀವಪೋಷಣೆಯ ಬಗ್ಗೆ ಎಷ್ಟೋ ಹೆಚ್ಚು ತಿಳುವಳಿಕೆ ಇದೆ. ಮುಂದಣ ವರ್ಷಗಳಲ್ಲಂತೂ ನಾವು ಭೂಮಿ ಮತ್ತು ವಿಶ್ವದ ಬಗ್ಗೆ ಇನ್ನೂ ಹೆಚ್ಚೆಚ್ಚನ್ನು ಕಲಿಯುವೆವು ನಿಶ್ಚಯ. ಆದರೆ ಪ್ರಶ್ನೆಯೇನಂದರೆ ಇವೆಲ್ಲವೂ ಮೊದಲಾಗಿ ಉಂಟಾದದ್ದು ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ನಾವು ತಿಳಿಯಲು ಸಾಧ್ಯ, ಏಕೆಂದರೆ ಸೃಷ್ಟಿಕರ್ತನು ತನ್ನ ಪವಿತ್ರ ಶಾಸ್ತ್ರಗ್ರಂಥದಲ್ಲಿ ಅದನ್ನು ಪ್ರಕಟಿಸಿದ್ದಾನೆ.

ಸೃಷ್ಟಿಯ ಅದ್ಭುತ

3, 4. ದೇವರು ವಿಶ್ವವನ್ನು ಹೇಗೆ ನಿರ್ಮಿಸಿದನು? ಆತನ ಕೈಕೆಲಸವು ಆತನನ್ನು ಹೇಗೆ ಮಹಿಮೆಪಡಿಸುತ್ತದೆ?

3 ಈ ವಿಶ್ವ ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದನ್ನು ಬೈಬಲಿನ ಆರಂಭದ ಮಾತುಗಳೇ ವಿವರಿಸುತ್ತವೆ. ಅದನ್ನುವುದು: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” (ಆದಿ. 1:1) ಆರಂಭದಲ್ಲಿ ಯಾವುದೂ ಅಸ್ತಿತ್ವದಲ್ಲಿರಲಿಲ್ಲ. ಆಗ ಯೆಹೋವನು ತನ್ನ ಬಲಾಢ್ಯ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮದ ಮೂಲಕ ವಿಶ್ವ, ಭೂಮಿ ಮತ್ತು ವಿಶ್ವದಲ್ಲಿರುವ ಬೇರೆ ಎಲ್ಲವನ್ನೂ ಸೃಷ್ಟಿಸಿದನು. ಒಬ್ಬ ಮಾನವ ಕುಶಲಶಿಲ್ಪಿ ವಸ್ತುಗಳನ್ನು ರೂಪಿಸಲು ತನ್ನ ಕೈಗಳನ್ನು ಮತ್ತು ಸಾಧನಗಳನ್ನು ಬಳಸುವಂತೆಯೇ ದೇವರು ತನ್ನ ಮಹತ್ಕಾರ್ಯಗಳನ್ನು ಮಾಡಲು ಪವಿತ್ರಾತ್ಮವನ್ನು ಕಳುಹಿಸುತ್ತಾನೆ.

4 ಬೈಬಲ್‌ ಸಾಂಕೇತಿಕವಾಗಿ ಪವಿತ್ರಾತ್ಮವನ್ನು ದೇವರ ‘ಬೆರಳು’ ಎಂದು ಸೂಚಿಸುತ್ತದೆ. (ಲೂಕ 11:20, ಪಾದಟಿಪ್ಪಣಿ; ಮತ್ತಾ. 12:28) ಯೆಹೋವನ “ಕೈಕೆಲಸ” ಅಂದರೆ ಆತನು ತನ್ನ ಪವಿತ್ರಾತ್ಮದ ಮೂಲಕ ಸೃಷ್ಟಿಸಿದ ವಿಷಯಗಳು ಆತನಿಗೆ ಮಹಾ ಮಹಿಮೆಯನ್ನು ತರುತ್ತವೆ. ಕೀರ್ತನೆಗಾರ ದಾವೀದನು ಹಾಡಿದ್ದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” (ಕೀರ್ತ. 19:1) ನಿಶ್ಚಯವಾಗಿಯೂ ಭೌತಿಕ ಸೃಷ್ಟಿಯು ದೇವರ ಪವಿತ್ರಾತ್ಮದ ಪ್ರಚಂಡ ಶಕ್ತಿಗೆ ಸಾಕ್ಷ್ಯ ಕೊಡುತ್ತದೆ. (ರೋಮ. 1:20) ಹೇಗೆ?

ದೇವರ ಅಪರಿಮಿತ ಶಕ್ತಿ

5. ಯೆಹೋವನ ಪವಿತ್ರಾತ್ಮದ ಸೃಷ್ಟಿಕಾರಕ ಶಕ್ತಿಗೆ ದೃಷ್ಟಾಂತ ಕೊಡಿ.

5 ನಮ್ಮ ಊಹೆಗೂ ನಿಲುಕದಷ್ಟು ವಿಶಾಲವಾದ ವಿಶ್ವವು ಯೆಹೋವನ ಅಪರಿಮಿತ ಬಲ ಮತ್ತು ಶಕ್ತಿಗೆ ಪುರಾವೆಯನ್ನು ನೀಡುತ್ತದೆ. (ಯೆಶಾಯ 40:26 ಓದಿ.) ಭೌತದ್ರವ್ಯವನ್ನು ಶಕ್ತಿಯನ್ನಾಗಿ, ಶಕ್ತಿಯನ್ನು ಭೌತದ್ರವ್ಯವನ್ನಾಗಿ ಪರಿವರ್ತಿಸಸಾಧ್ಯವೆಂದು ಆಧುನಿಕ ವಿಜ್ಞಾನವು ತೋರಿಸಿಕೊಟ್ಟಿದೆ. ನಕ್ಷತ್ರವಾಗಿರುವ ಸೂರ್ಯನು ಭೌತದ್ರವ್ಯವನ್ನು ಶಕ್ತಿಯಾಗಿ ಪರಿವರ್ತಿಸುವುದಕ್ಕೆ ಒಂದು ಉದಾಹರಣೆ. ಪ್ರತಿ ಸೆಕೆಂಡಿಗೆ ಸೂರ್ಯನು ಸುಮಾರು ನಲವತ್ತು ಲಕ್ಷ ಟನ್‌ಗಳಷ್ಟು ದ್ರವ್ಯವನ್ನು ಬೆಳಕು, ಉಷ್ಣ, ಮತ್ತು ಬೇರೆ ರೀತಿಯ ವಿಕಿರಣಶಕ್ತಿಯನ್ನಾಗಿ ಪರಿವರ್ತಿಸುತ್ತಾನೆ. ಆ ಸೌರಶಕ್ತಿಯಲ್ಲಿ ಅತಿ ಚಿಕ್ಕ ಅಂಶ ಮಾತ್ರ ನಮ್ಮ ಭೂಮಿಗೆ ತಲಪುತ್ತದೆ. ಆದರೆ ಇದು ಭೂಗ್ರಹದ ಜೀವಿಗಳ ಪೋಷಣೆಗೆ ಸಾಕಾಗುವಷ್ಟಿದೆ. ಇಷ್ಟು ಶಕ್ತಿಯುಳ್ಳ ಸೂರ್ಯನನ್ನು ಮಾತ್ರವಲ್ಲ ಕೋಟ್ಯಾನುಕೋಟಿ ನಕ್ಷತ್ರಗಳನ್ನೂ ಸೃಷ್ಟಿಸಲು ಅಪಾರ ಬಲ, ಶಕ್ತಿ ಅವಶ್ಯವಿತ್ತೆಂಬುದು ಸ್ಪಷ್ಟ. ಅಷ್ಟು ಶಕ್ತಿ ಯೆಹೋವನಿಗಿದೆ ಮಾತ್ರವಲ್ಲ ಅದಕ್ಕಿಂತಲೂ ಎಷ್ಟೋ ಮಹತ್ತಾದ ಶಕ್ತಿ ಆತನದ್ದು.

6, 7. (ಎ) ದೇವರು ತನ್ನ ಪವಿತ್ರಾತ್ಮವನ್ನು ಸುವ್ಯವಸ್ಥಿತ ರೀತಿಯಲ್ಲಿ ಬಳಸಿದ್ದಾನೆಂದು ನಾವು ಏಕೆ ಹೇಳಸಾಧ್ಯ? (ಬಿ) ವಿಶ್ವವು ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬರಲಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ?

6 ದೇವರು ತನ್ನ ಪವಿತ್ರಾತ್ಮವನ್ನು ಅತಿ ಸುವ್ಯವಸ್ಥಿತ, ಕ್ರಮಬದ್ಧ ರೀತಿಯಲ್ಲಿ ಬಳಸಿದನು ಎಂಬುದಕ್ಕೆ ನಮ್ಮ ಸುತ್ತಮುತ್ತಲು ಪುರಾವೆಗಳಿವೆ. ದೃಷ್ಟಾಂತಕ್ಕಾಗಿ, ನಿಮ್ಮ ಬಳಿಯಿರುವ ಒಂದು ಬಾಕ್ಸ್‌ನಲ್ಲಿ ಬಣ್ಣ ಬಣ್ಣದ ಚೆಂಡುಗಳಿವೆ ಎಂದು ನೆನಸಿ. ನೀವು ಬಾಕ್ಸನ್ನು ಚೆನ್ನಾಗಿ ಕುಲುಕಿಸಿ ಚೆಂಡುಗಳನ್ನು ಒಮ್ಮೆಲೆ ನೆಲದ ಮೇಲೆ ಎಸೆಯುತ್ತೀರಿ. ಆಗ ನೀಲಿ ಚೆಂಡುಗಳು, ಹಳದಿ ಚೆಂಡುಗಳು ಹೀಗೆ ಆಯಾ ಬಣ್ಣದ ಚೆಂಡುಗಳು ಗುಂಪುಗುಂಪಾಗಿ ಒಂದೊಂದೆಡೆ ಪ್ರತ್ಯೇಕವಾಗಿ ನಿಲ್ಲುತ್ತವೋ? ಖಂಡಿತ ಇಲ್ಲ! ಏಕೆಂದರೆ ನಿಯಂತ್ರಣವಿಲ್ಲದ ಕ್ರಿಯೆಗಳು ಯಾವಾಗಲೂ ಅಸ್ತವ್ಯಸ್ತವಾಗುತ್ತವೇ ಹೊರತು ಕ್ರಮಬದ್ಧವಾಗಿರುವುದಿಲ್ಲ. ಇದು ಪ್ರಕೃತಿ ನಿಯಮ. *

7 ಆದರೂ ನಾವು ವಿಶ್ವವನ್ನೂ ಅದರಲ್ಲಿರುವುದನ್ನೂ ಕಣ್ಣೆತ್ತಿ ನೋಡುವಾಗ ಹಾಗೂ ಅಧ್ಯಯನ ಮಾಡುವಾಗ ಏನನ್ನು ಗಮನಿಸುತ್ತೇವೆ? ಗ್ಯಾಲಕ್ಸಿ, ನಕ್ಷತ್ರಸಮೂಹ, ಗ್ರಹಗಳನ್ನು ಒಳಗೊಂಡ ವಿಶಾಲ ವಿಶ್ವವನ್ನು ಕಾಣುತ್ತೇವಲ್ಲಾ! ಅವೆಲ್ಲವೂ ನಿಖರ ನಿಷ್ಕೃಷ್ಟತೆಯಿಂದ ಚಲಿಸುತ್ತಾ ಇವೆ. ಅವು ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂದಿಲ್ಲ ಅಥವಾ ಅನಿಯೋಜಿತ ಅನಿಯಂತ್ರಿತ ಆಕಸ್ಮಿಕ ಘಟನೆಗಳೂ ಅವಲ್ಲ. ಆದುದರಿಂದ, ‘ನಮ್ಮ ಸುವ್ಯವಸ್ಥಿತ ವಿಶ್ವವನ್ನು ಸೃಷ್ಟಿಸಲಿಕ್ಕಾಗಿ ಆದಿಯಲ್ಲಿ ಯಾವ ಶಕ್ತಿಯನ್ನು ಬಳಸಲಾಯಿತು?’ ಎಂದು ನಾವು ಕೇಳಲೇಬೇಕು. ಕೇವಲ ವೈಜ್ಞಾನಿಕ ಸಂಶೋಧನೆ ಮತ್ತು ಪ್ರಯೋಗಗಳಿಂದ ಆ ಶಕ್ತಿಯನ್ನು ಗುರುತಿಸಲು ಮಾನವರಾದ ನಮಗಿರುವ ಸಾಮರ್ಥ್ಯವು ಸೀಮಿತವೇ. ಬೈಬಲ್‌ ಆ ಶಕ್ತಿಯನ್ನು ದೇವರ ಪವಿತ್ರಾತ್ಮ ಎಂದು ಗುರುತಿಸಿದೆ; ವಿಶ್ವದಲ್ಲೇ ಅತಿ ಬಲಾಢ್ಯ ಶಕ್ತಿ ಅದಾಗಿದೆ. ಕೀರ್ತನೆಗಾರನು ಹಾಡಿದ್ದು: “ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವದೆಲ್ಲವೂ ಆತನ ಶ್ವಾಸದಿಂದ [“ಪವಿತ್ರಾತ್ಮದಿಂದ,” NW] ನಿರ್ಮಿತವಾಯಿತು.” (ಕೀರ್ತ. 33:6) ಇರುಳಲ್ಲಿ ಆಕಾಶವನ್ನು ವೀಕ್ಷಿಸುವಾಗ ನಾವು ಕಾಣಶಕ್ತರಾಗುವುದು ‘ಆಕಾಶದಲ್ಲಿರುವುದೆಲ್ಲದರ’ ಅತಿ ಚಿಕ್ಕ ಅಂಶವನ್ನು ಮಾತ್ರವಷ್ಟೇ.

ಪವಿತ್ರಾತ್ಮ ಮತ್ತು ಭೂಮಿ

8. ಯೆಹೋವನ ಸೃಷ್ಟಿಕಾರ್ಯಗಳ ಬಗ್ಗೆ ನಿಜವಾಗಿ ನಮಗೆಷ್ಟು ತಿಳಿದಿದೆ?

8 ಪ್ರಕೃತಿಯ ಕುರಿತು ಈಗ ತಿಳಿದಿರುವ ವಿಷಯಗಳು ನಾವಿನ್ನೂ ತಿಳಿಯಲಿಕ್ಕಿರುವ ಸಕಲ ವಿಷಯಗಳಿಗೆ ಹೋಲಿಸುವಾಗ ಅವು ಅತ್ಯಲ್ಪವೇ ಸರಿ. ನಂಬಿಗಸ್ತ ಮನುಷ್ಯ ಯೋಬನು ಹೇಳಿದಂತೆ ದೇವರ ಸೃಷ್ಟಿಕಾರ್ಯದ ಬಗ್ಗೆ ನಮಗಿರುವ ಜ್ಞಾನದ ವ್ಯಾಪ್ತಿ ಅಲ್ಪವೇ. ಅವನಂದದ್ದು: “ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ [“ಅಂಚು ಮಾತ್ರವಷ್ಟೇ,” NW]. ಆತನ ವಿಷಯವಾಗಿ ಸೂಕ್ಷ್ಮಶಬ್ದವನ್ನು ಮಾತ್ರ ಕೇಳಿದ್ದೇವೆ.” (ಯೋಬ 26:14) ಯೆಹೋವನ ಸೃಷ್ಟಿಯನ್ನು ಚೆನ್ನಾಗಿ ತಿಳುಕೊಳ್ಳುವ ಉದ್ದೇಶದಿಂದ ಅದನ್ನು ಅವಲೋಕಿಸಿದ್ದ ರಾಜ ಸೊಲೊಮೋನನು ಶತಮಾನಗಳ ನಂತರ ಹೇಳಿದಂತೆ, “ಒಂದೊಂದು ವಸ್ತುವನ್ನು [ದೇವರು] ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.”—ಪ್ರಸಂ. 3:11; 8:17.

9, 10. ದೇವರು ಭೂಮಿಯನ್ನು ಸೃಷ್ಟಿಸಲು ಯಾವ ಶಕ್ತಿಯನ್ನು ಉಪಯೋಗಿಸಿದನು? ಮೊದಲನೇ ಮೂರು ಸೃಷ್ಟಿಕಾರಕ ದಿನಗಳಲ್ಲಿ ಸೃಷ್ಟಿಸಲ್ಪಟ್ಟ ವಿಷಯಗಳು ಯಾವುವು?

9 ಹಾಗಿದ್ದರೂ ಯೆಹೋವನು ತನ್ನ ಸೃಷ್ಟಿಕಾರ್ಯಗಳ ಕುರಿತ ಆವಶ್ಯಕ ವಿವರಣೆಗಳನ್ನು ತಿಳಿಯಪಡಿಸಿದ್ದಾನೆ. ಉದಾಹರಣೆಗೆ, ದೇವರ ಪವಿತ್ರಾತ್ಮವು ಭೂಮಿಯ ಮೇಲೆ ಅಗಣಿತ ಯುಗಾಂತರಗಳ ಹಿಂದೆ ಕ್ರಿಯಾಶೀಲವಾಗಿತ್ತು ಎಂದು ಬೈಬಲ್‌ ತಿಳಿಸುತ್ತದೆ. (ಆದಿಕಾಂಡ 1:2 ಓದಿ.) ಆ ಸಮಯದಲ್ಲಿ ಭೂಮಿಯ ಮೇಲೆ ಒಣನೆಲವಾಗಲಿ ಬೆಳಕಾಗಲಿ ಪ್ರಾಯಶಃ ಉಸಿರಾಡತಕ್ಕ ಗಾಳಿಯಾಗಲಿ ಇರಲಿಲ್ಲ.

10 ಸೃಷ್ಟಿಕಾರಕ ದಿನಗಳಲ್ಲಿ ದೇವರು ಏನೆಲ್ಲಾ ಮಾಡಿದನು ಎಂಬುದರ ವರ್ಣನೆಯನ್ನು ಬೈಬಲ್‌ ಕೊಡುತ್ತದೆ. ಈ ದಿನಗಳು ಬರೇ 24 ತಾಸುಗಳ ದಿನಗಳಲ್ಲ, ಅನಿರ್ದಿಷ್ಟ ದೀರ್ಘಕಾಲಾವಧಿ. ಮೊದಲನೇ ಸೃಷ್ಟಿಕಾರಕ ದಿನದಲ್ಲಿ ಯೆಹೋವನು ಭೂಮಿಯ ಮೇಲೆ ಬೆಳಕು ತೋರಿಬರುವಂತೆ ಮಾಡಿದನು. ಆ ಪ್ರಕ್ರಿಯೆಯು ತದನಂತರ ಸೂರ್ಯಚಂದ್ರರು ಭೂಮಿಯ ಮೇಲಿಂದ ಪ್ರತ್ಯಕ್ಷವಾಗಿ ಗೋಚರವಾಗುವಾಗ ಪೂರ್ಣಗೊಳ್ಳಲಿತ್ತು. (ಆದಿ. 1:3, 14) ಎರಡನೇ ದಿನದಲ್ಲಿ ವಾತಾವರಣವು ರೂಪುಗೊಳ್ಳತೊಡಗಿತು. (ಆದಿ. 1:6) ಆಗ ಭೂಮಿಯ ಮೇಲೆ ನೀರು, ಬೆಳಕು, ಗಾಳಿ ಇತ್ತಾದರೂ ಇನ್ನೂ ಒಣನೆಲವಿರಲಿಲ್ಲ. ಮೂರನೇ ಸೃಷ್ಟಿಕಾರಕ ದಿನದ ಆರಂಭದಲ್ಲಿ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಒಣನೆಲವನ್ನು ಉಂಟುಮಾಡಿದನು; ಪ್ರಾಯಶಃ ಭೂಮಿಯೊಳಗಣ ಬಲಾಡ್ಯ ನೈಸರ್ಗಿಕ ಶಕ್ತಿಗಳನ್ನು ಬಳಸಿ ಭೂಖಂಡಗಳನ್ನು ಸಾಗರದಿಂದ ಮೇಲಕ್ಕೆತ್ತಿರಬಹುದು. (ಆದಿ. 1:9) ಮೂರನೇ ದಿನದಲ್ಲಿ ಮತ್ತು ನಂತರದ ಸೃಷ್ಟಿಕಾರಕ ಅವಧಿಗಳಲ್ಲಿ ಇತರ ವಿಸ್ಮಯಕರ ಸೃಷ್ಟಿಕ್ರಿಯೆಗಳನ್ನು ದೇವರು ಮಾಡಲಿದ್ದನು.

ಪವಿತ್ರಾತ್ಮ ಮತ್ತು ಜೀವಂತ ಜೀವಿಗಳು

11. ಸಜೀವ ಜೀವಿಗಳ ಸಂಕೀರ್ಣತೆ, ಸಾಮರಸ್ಯ ಮತ್ತು ಸೌಂದರ್ಯದಿಂದ ಯಾವುದು ಖಚಿತವಾಗುತ್ತದೆ?

11 ಸೃಷ್ಟಿಯ ಜೀವಸಂಕುಲದಲ್ಲಿ ದೇವರ ಪವಿತ್ರಾತ್ಮವು ಉತ್ಕೃಷ್ಟ ಕ್ರಮಬದ್ಧತೆಯನ್ನು ಸಹ ಉಂಟುಮಾಡಿತು. ಮೂರರಿಂದ ಆರನೇ ಸೃಷ್ಟಿಕಾರಕ ದಿನಗಳಲ್ಲಿ ದೇವರು ಸಸ್ಯ ಮತ್ತು ಪ್ರಾಣಿಗಳನ್ನು ವಿಸ್ಮಯಕರ ವೈವಿಧ್ಯತೆಯೊಂದಿಗೆ ಸೃಷ್ಟಿಸಿದ್ದೂ ಪವಿತ್ರಾತ್ಮದ ಮೂಲಕವೇ. (ಆದಿ. 1:11, 20-25) ಹೀಗೆ ಸಜೀವ ಜೀವಿಗಳು ಸಂಕೀರ್ಣತೆ, ಸಾಮರಸ್ಯ ಮತ್ತು ಸೌಂದರ್ಯದ ಅಗಣಿತ ಮಾದರಿಗಳನ್ನು ಒದಗಿಸುತ್ತಾ ಉತ್ಕೃಷ್ಟ ಮಟ್ಟದ ವಿನ್ಯಾಸವನ್ನು ತೋರಿಸುತ್ತವೆ.

12. (ಎ) ಡಿಎನ್‌ಎ ಯಾವ ಕಾರ್ಯಾಚರಣೆಯನ್ನು ನಡೆಸುತ್ತದೆ? (ಬಿ) ಡಿಎನ್‌ಎಯ ಯಶಸ್ವಿಕರ ಕೆಲಸದ ಮುಂದುವರಿಕೆಯಿಂದ ನಾವು ಏನನ್ನು ಕಲಿಯಬೇಕು?

12 ಡಿಎನ್‌ಎ (ಡಿಆಕ್ಸಿರೈಬೊ ನ್ಯೂಕ್ಲಿಯಿಕ್‌ ಆಮ್ಲ) ಅನ್ನು ತುಸು ಪರಿಗಣಿಸಿರಿ. ಇದು ಆನುವಂಶೀಯ ಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಒಂದು. ಮಾನವರು, ಸೂಕ್ಷ್ಮಜೀವಿ, ಹಸಿರುಹುಲ್ಲು, ಆನೆ, ನೀಲತಿಮಿಂಗಿಲ ಸೇರಿದಂತೆ ಭೂಮಿಯಲ್ಲಿರುವ ಜೀವಂತ ಜೀವಿಗಳೆಲ್ಲವು ಡಿಎನ್‌ಎ ಬಳಸಿ ಸಂತಾನೋತ್ಪತ್ತಿ ಮಾಡುತ್ತವೆ. ಭೂಮಿಯ ಜೀವಿಗಳು ತೀರ ಭಿನ್ನಭಿನ್ನವಾಗಿದ್ದರೂ ಅವುಗಳ ಆನುವಂಶೀಯ ಗುಣಲಕ್ಷಣಗಳನ್ನು ದಾಟಿಸುವ ಡಿಎನ್‌ಎಯು ಮಾರ್ಪಡುವುದಿಲ್ಲ, ಸ್ಥಿರವಾಗಿರುತ್ತದೆ. ಹೀಗೆ ಯುಗಾಂತರಗಳಿಂದ ಬಂದಿರುವ ಸೃಷ್ಟಿಜೀವಿಗಳ ನಡುವಣ ಮೂಲಭೂತ ಭೇದವನ್ನು ಕಾಪಾಡಲು ಡಿಎನ್‌ಎ ಸಹಾಯಕ. ಯೆಹೋವ ದೇವರ ಉದ್ದೇಶಕ್ಕನುಸಾರ ಭೂಮಿಯ ವಿವಿಧ ಜೀವಿಗಳಲ್ಲಿ ಪ್ರತಿಯೊಂದು ತಮ್ಮ ತಮ್ಮ ಜಾತಿಗನುಸಾರ ತಮ್ಮ ಜಟಿಲ ಕಾರ್ಯಾಚರಣೆಗಳನ್ನು ಮುಂದುವರಿಸುತ್ತಾ ಇವೆ. (ಕೀರ್ತ. 139:16) ಈ ಅತಿ ಪರಿಣಾಮಕಾರಿ ಹಾಗೂ ಸುವ್ಯವಸ್ಥಿತ ಏರ್ಪಾಡು ಸೃಷ್ಟಿಯು ದೇವರ ‘ಬೆರಳಿನ’ ಅಥವಾ ಪವಿತ್ರಾತ್ಮದ ಕೆಲಸ ಎಂಬುದಕ್ಕೆ ಇನ್ನಷ್ಟು ಪುರಾವೆಯನ್ನು ಕೊಡುತ್ತದೆ.

ಉತ್ಕೃಷ್ಟ ಭೂಸೃಷ್ಟಿ

13. ದೇವರು ಮನುಷ್ಯನನ್ನು ಸೃಷ್ಟಿಸಿದ್ದು ಹೇಗೆ?

13 ಅನಿರ್ದಿಷ್ಟ ಕಾಲಾವಧಿಯ ನಂತರ ಮತ್ತು ಅಸಂಖ್ಯಾತ ಸಜೀವ-ನಿರ್ಜೀವ ವಸ್ತುಗಳನ್ನು ದೇವರು ನಿರ್ಮಿಸಿದ ಬಳಿಕ ಭೂಮಿಯು “ಕ್ರಮವಿಲ್ಲದೆಯೂ ಬರಿದಾಗಿಯೂ” ಇರಲಿಲ್ಲ. ಆದರೂ ಯೆಹೋವನು ಸೃಷ್ಟಿಕಾರಕ ಕೆಲಸಗಳಿಗಾಗಿ ತನ್ನ ಪವಿತ್ರಾತ್ಮವನ್ನು ಬಳಸುವುದನ್ನು ಇನ್ನೂ ಮುಂದುವರಿಸಲಿದ್ದನು. ಭೂಸೃಷ್ಟಿಯಲ್ಲಿ ಅತ್ಯುತ್ಕೃಷ್ಟ ಜೀವಿಯನ್ನು ಅಂದರೆ ಮನುಷ್ಯನನ್ನು ಆತನು ಆಗ ತಾನೇ ಸೃಷ್ಟಿಸಲಿದ್ದನು. ಆರನೇ ಸೃಷ್ಟಿಕಾರಕ ದಿನದ ಅಂತ್ಯದ ಸುಮಾರಿಗೆ ದೇವರು ಮನುಷ್ಯನನ್ನು ಸೃಷ್ಟಿಸಿದನು. ಯೆಹೋವನು ಅದನ್ನು ಮಾಡಿದ್ದು ಹೇಗೆ? ತನ್ನ ಪವಿತ್ರಾತ್ಮವನ್ನು ಮತ್ತು ಭೂಮಿಯ ಘಟಕಾಂಶಗಳನ್ನು ಬಳಸುವ ಮೂಲಕವೇ.—ಆದಿ. 2:7.

14. ಯಾವ ಮುಖ್ಯ ವಿಧದಲ್ಲಿ ಮಾನವರು ಪ್ರಾಣಿಗಳಿಗಿಂತ ಭಿನ್ನರಾಗಿದ್ದಾರೆ?

14ಆದಿಕಾಂಡ 1:27 ಹೀಗನ್ನುತ್ತದೆ: “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” ದೇವಸ್ವರೂಪದಲ್ಲಿ ಉಂಟುಮಾಡಲ್ಪಟ್ಟದ್ದರ ಅರ್ಥವೇನೆಂದರೆ ಪ್ರೀತಿ ತೋರಿಸುವ, ಇಚ್ಛಾಸ್ವಾತಂತ್ರ್ಯವನ್ನು ಬಳಸುವ ಮತ್ತು ನಿರ್ಮಾಣಿಕನೊಂದಿಗೆ ವೈಯಕ್ತಿಕ ಸುಸಂಬಂಧವನ್ನು ಸಹ ಸ್ಥಾಪಿಸುವ ಸಾಮರ್ಥ್ಯದೊಂದಿಗೆ ಯೆಹೋವನು ನಮ್ಮನ್ನು ಸೃಷ್ಟಿಸಿದನು ಎಂದಾಗಿದೆ. ಆದ್ದರಿಂದ ನಮ್ಮ ಮಿದುಳು ಪ್ರಾಣಿಗಳ ಮಿದುಳಿಗಿಂತ ತುಂಬ ಬೇರೆಯಾಗಿದೆ. ನಾವು ಯೆಹೋವನ ಮತ್ತು ಆತನ ಕಾರ್ಯಗಳ ಕುರಿತು ಸದಾ ಹರ್ಷದಿಂದ ಕಲಿಯುತ್ತಾ ಇರುವಂತೆ ಆತನು ಮಾನವನ ಮಿದುಳನ್ನು ವಿಶಿಷ್ಟ ರೀತಿಯಲ್ಲಿ ರಚಿಸಿದನು.

15. ಆದಾಮಹವ್ವರ ಮುಂದೆ ಯಾವ ಪ್ರತೀಕ್ಷೆ ಇಡಲ್ಪಟ್ಟಿತ್ತು?

15 ಮಾನವಕುಲದ ಆರಂಭದಲ್ಲಿ ದೇವರು ಆದಾಮ ಮತ್ತು ಅವನ ಪತ್ನಿ ಹವ್ವಳಿಗೆ ಭೂಮಿಯನ್ನು ಕೊಟ್ಟು ಅದರ ಸಕಲ ವಿಸ್ಮಯಗಳನ್ನೂ ಸಂಶೋಧಿಸಿ ಆನಂದಿಸುವ ಸದವಕಾಶವಿತ್ತನು. (ಆದಿ. 1:28) ಯೆಹೋವನು ಅವರಿಗೆ ಹೇರಳ ಆಹಾರವನ್ನೂ ಪರದೈಸ ಮನೆಯನ್ನೂ ಒದಗಿಸಿದನು. ಸದಾ ಜೀವಿಸುವ ಹಾಗೂ ಕೋಟಿಗಟ್ಟಲೆ ಪರಿಪೂರ್ಣ ವಂಶಜರಿಗೆ ಪ್ರೀತಿಪರ ಹೆತ್ತವರಾಗುವ ಸದವಕಾಶವೂ ಅವರಿಗಿತ್ತು. ಆದರೆ ವಿಷಯಗಳು ಹಾಗೆ ಸಂಭವಿಸಲಿಲ್ಲ.

ಪವಿತ್ರಾತ್ಮದ ಪಾತ್ರವನ್ನು ಅಂಗೀಕರಿಸಿರಿ

16. ಪ್ರಥಮ ಮಾನವರು ದಂಗೆ ಎದ್ದಾಗ್ಯೂ ನಮಗೆ ಯಾವ ನಿರೀಕ್ಷೆ ಇನ್ನೂ ಇದೆ?

16 ಆದಾಮಹವ್ವರು ತಮ್ಮ ನಿರ್ಮಾಣಿಕನಿಗೆ ಕೃತಜ್ಞತೆಯಿಂದ ವಿಧೇಯರಾಗುವ ಬದಲಿಗೆ ಸ್ವಾರ್ಥಪರರಾಗಿ ದಂಗೆಯೆದ್ದರು. ಅಪರಿಪೂರ್ಣ ಮನುಷ್ಯರೆಲ್ಲರೂ ಅವರ ವಂಶಜರಾದ ಕಾರಣ ಕಷ್ಟವನ್ನು ಅನುಭವಿಸಿದರು. ಆದರೆ ನಮ್ಮ ಮೊದಲನೇ ಹೆತ್ತವರ ಪಾಪಪೂರ್ಣ ಮಾರ್ಗದಿಂದ ಉಂಟಾದ ಸಮಸ್ತ ಹಾನಿಯನ್ನು ದೇವರು ಹೇಗೆ ತೆಗೆದುಬಿಡುವನು ಎಂದು ಬೈಬಲ್‌ ವಿವರಿಸುತ್ತದೆ. ಯೆಹೋವನು ತನ್ನ ಮೂಲ ಉದ್ದೇಶವನ್ನು ಕೈಗೂಡಿಸುವನು ಎಂದು ಸಹ ಬೈಬಲ್‌ ತೋರಿಸುತ್ತದೆ. ಭೂಮಿಯು ಪರದೈಸವಾಗಿ ಮಾರ್ಪಟ್ಟು ಆನಂದಿತರೂ ಆರೋಗ್ಯವಂತರೂ ಆದ ಜನರಿಂದ ತುಂಬುವುದು. ಅವರು ನಿತ್ಯಜೀವದ ಆಶೀರ್ವಾದವನ್ನು ಪಡೆಯುವರು. (ಆದಿ. 3:15) ಆ ಹೃದಯೋತ್ತೇಜಕ ಪ್ರತೀಕ್ಷೆಯಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಲು ನಮಗೆ ದೇವರ ಪವಿತ್ರಾತ್ಮದ ಸಹಾಯ ಬೇಕು.

17. ನಾವು ಯಾವ ರೀತಿಯ ಬೋಧನೆಯನ್ನು ವರ್ಜಿಸಬೇಕು?

17 ನಾವು ಪವಿತ್ರಾತ್ಮಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು. (ಲೂಕ 11:13) ಹಾಗೆ ಮಾಡುವುದು ಸೃಷ್ಟಿಯು ದೇವರ ಕೈಕೆಲಸ ಎಂಬ ನಮ್ಮ ಭರವಸೆಯನ್ನು ಇನ್ನಷ್ಟು ಬಲಪಡಿಸಲು ಸಹಾಯಕರ. ಇಂದು ಲೋಕದಲ್ಲಿ ನಾಸ್ತಿಕತೆ ಮತ್ತು ವಿಕಾಸವಾದದ ಉಬ್ಬರವು ಹೆಚ್ಚುತ್ತಾ ಇದೆ. ಈ ಅಪಪ್ರಚಾರವು ತಪ್ಪಾದ ನಿರಾಧಾರ ತರ್ಕದ ಮೇಲೆ ಆಧರಿಸಿದೆ. ಈ ತಪ್ಪಾದ ಬೋಧನೆಯ ಉಬ್ಬರವು ನಮ್ಮನ್ನು ಗೊಂದಲಕ್ಕೆ ಅಥವಾ ಬೆದರಿಕೆಗೆ ಒಳಪಡಿಸಬಾರದು. ಕ್ರೈಸ್ತರೆಲ್ಲರು ಅಂತಹ ಆಕ್ರಮಣ, ಒತ್ತಡವನ್ನು ಎದುರಿಸಲು ತಮ್ಮನ್ನು ಸಿದ್ಧಗೊಳಿಸುವುದು ಅತ್ಯಾವಶ್ಯಕ.—ಕೊಲೊಸ್ಸೆ 2:8 ಓದಿ.

18. ವಿಶ್ವ ಮತ್ತು ಮಾನವಕುಲದ ಉಗಮವನ್ನು ಪರಿಗಣಿಸುವಲ್ಲಿ ಬುದ್ಧಿಶಕ್ತಿಯುಳ್ಳ ನಿರ್ಮಾಣಿಕನು ಇಲ್ಲವೆಂದು ಹೇಳುವುದು ಏಕೆ ಅವಿವೇಕತನ?

18 ಸೃಷ್ಟಿಕ್ರಿಯೆಗಿರುವ ಪುರಾವೆಯ ಪ್ರಾಮಾಣಿಕ ಪರೀಕ್ಷೆಯಿಂದ ಬೈಬಲಿನಲ್ಲಿ ಮತ್ತು ಸ್ವತಃ ದೇವರಲ್ಲಿ ನಮಗಿರುವ ನಂಬಿಕೆ ಬಲಗೊಳ್ಳುವುದು ಖಂಡಿತ. ವಿಶ್ವದ ಮತ್ತು ಮಾನವಕುಲದ ಉಗಮವನ್ನು ಪರ್ಯಾಲೋಚಿಸುವಾಗ ಅನೇಕರು ಭೌತಶಕ್ತಿಯೇ ಸೃಷ್ಟಿಗೆ ಕಾರಣ ಹೊರತು ಬೇರೆ ಯಾವುದೇ ಶಕ್ತಿಯ ಅಲ್ಲ ಎಂದು ನಂಬುತ್ತಾರೆ. ಆ ದೃಷ್ಟಿಕೋನದಿಂದ ವಿಷಯಗಳನ್ನು ಅಳೆಯುವಲ್ಲಿ ಇರುವ ಎಲ್ಲ ಪುರಾವೆಗಳನ್ನು ಅವರು ನಿಷ್ಪಕ್ಷಪಾತದಿಂದ ತೂಗಿನೋಡುತ್ತಿಲ್ಲ ಎಂದರ್ಥ. ಏಕೆಂದರೆ “ಲೆಕ್ಕವಿಲ್ಲದಷ್ಟು” ಸುವ್ಯವಸ್ಥಿತ ಹಾಗೂ ಉದ್ದೇಶಭರಿತ ಸೃಷ್ಟಿಗಳನ್ನು ಅವರು ಪ್ರತ್ಯಕ್ಷವಾಗಿ ಕಂಡರೂ ಅದರ ಅಸ್ತಿತ್ವವನ್ನು ಅಲ್ಲಗಳೆಯುತ್ತಾರೆ. (ಯೋಬ 9:10; ಕೀರ್ತ. 104:25) ಆದರೆ ಕ್ರೈಸ್ತರಾದ ನಮಗಾದರೋ ಖಾತ್ರಿಯಿದೆ ಏನೆಂದರೆ ಯೆಹೋವನ ವಿವೇಕಯುತ ಮಾರ್ಗದರ್ಶನದ ಕೆಳಗೆ ಆತನ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮವು ಸೃಷ್ಟಿಕ್ರಿಯೆಯಲ್ಲಿ ಒಳಗೂಡಿತ್ತೆಂದೇ.

ಪವಿತ್ರಾತ್ಮ ಮತ್ತು ದೇವರಲ್ಲಿ ನಂಬಿಕೆ

19. ದೇವರ ಅಸ್ತಿತ್ವಕ್ಕೆ ಮತ್ತು ಆತನ ಪವಿತ್ರಾತ್ಮದ ಕಾರ್ಯಾಚರಣೆಗೆ ಯಾವುದು ವೈಯಕ್ತಿಕ ಪುರಾವೆಯನ್ನು ಒದಗಿಸುತ್ತದೆ?

19 ದೇವರಲ್ಲಿ ನಂಬಿಕೆಯನ್ನಿಡಲು, ಆತನನ್ನು ಪ್ರೀತಿಸಲು ಹಾಗೂ ಪರಮಪೂಜ್ಯಭಾವನೆಯನ್ನು ಹೊಂದಿರಲು ಸೃಷ್ಟಿಯ ಕುರಿತು ಸಮಗ್ರವಾಗಿ ತಿಳಿಯಬೇಕೆಂಬ ಆವಶ್ಯಕತೆ ನಮಗಿಲ್ಲ. ಮನುಷ್ಯ ಮನುಷ್ಯರೊಳಗಿನ ಸ್ನೇಹಕ್ಕೆ ಒಳ್ಳೆಯ ಪರಿಚಯವು ಆಧಾರ. ಹಾಗೆಯೇ ಯೆಹೋವನ ಒಳ್ಳೇ ಪರಿಚಯವು ಆತನಲ್ಲಿ ನಂಬಿಕೆಗೆ ಆಧಾರ. ಸ್ನೇಹಿತರಿಬ್ಬರು ಪರಸ್ಪರರನ್ನು ಚೆನ್ನಾಗಿ ತಿಳಿದುಕೊಳ್ಳುವಾಗ ಅವರ ಮಧ್ಯೆಯಿರುವ ಸ್ನೇಹಬಂಧ ಬಲವಾಗುವಂತೆಯೇ ನಾವು ದೇವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಂತೆ ಆತನ ಮೇಲಿರುವ ನಂಬಿಕೆ ಇನ್ನೂ ಬಲವಾಗುತ್ತದೆ. ಆತನು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುವಾಗ ಮತ್ತು ಆತನ ಮೂಲತತ್ತ್ವಗಳನ್ನು ನಮ್ಮ ಜೀವಿತದಲ್ಲಿ ಅನ್ವಯಿಸುವುದರಿಂದ ಸಿಗುವ ಸುಪರಿಣಾಮಗಳನ್ನು ಗಮನಿಸುವಾಗ ಆತನ ಅಸ್ತಿತ್ವದ ಖಾಚಿತ್ಯವು ನಮಗಾಗುತ್ತದೆ. ಆತನು ನಮ್ಮನ್ನು ಮಾರ್ಗದರ್ಶಿಸಿ, ಸಂರಕ್ಷಿಸಿ, ಸೇವೆಯಲ್ಲಿ ನಮ್ಮ ಪ್ರಯತ್ನಗಳನ್ನು ಆಶೀರ್ವದಿಸಿ, ಅವಶ್ಯವಿರುವುದನ್ನು ಒದಗಿಸುತ್ತಿದ್ದಾನೆ ಎಂಬುದಕ್ಕೆ ಬೆಟ್ಟದಷ್ಟು ಪುರಾವೆಗಳನ್ನು ನೋಡುವಾಗ ನಾವು ಯೆಹೋವನಿಗೆ ಹೆಚ್ಚೆಚ್ಚು ಆಪ್ತರಾಗುತ್ತೇವೆ. ಇವೆಲ್ಲವೂ ದೇವರ ಅಸ್ತಿತ್ವಕ್ಕೆ ಮತ್ತು ಆತನ ಪವಿತ್ರಾತ್ಮದ ಕಾರ್ಯಾಚರಣೆಗೆ ಪ್ರಬಲ ಆಧಾರವನ್ನು ಒದಗಿಸುತ್ತವೆ.

20. (ಎ) ದೇವರು ವಿಶ್ವವನ್ನು ಮತ್ತು ಮನುಷ್ಯನನ್ನು ಸೃಷ್ಟಿಸಿದ್ದೇಕೆ? (ಬಿ) ನಾವು ದೇವರ ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸುತ್ತಾ ಇದ್ದರೆ ಏನು ಫಲಿಸುವುದು?

20 ಯೆಹೋವನು ತನ್ನ ಪವಿತ್ರಾತ್ಮವನ್ನು ಉಪಯೋಗಿಸಿದನು ಎಂಬುದಕ್ಕೆ ಬೈಬಲ್‌ ತಾನೇ ಒಂದು ಮಹತ್ತಾದ ಉದಾಹರಣೆ. ಏಕೆಂದರೆ ಅದರ ಲೇಖಕರು “ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:21) ಆದ್ದರಿಂದ ಬೈಬಲಿನ ಜಾಗರೂಕ ಅಧ್ಯಯನವು ಸಕಲವನ್ನು ನಿರ್ಮಿಸಿದಾತನಾದ ದೇವರಲ್ಲಿ ನಮ್ಮ ನಂಬಿಕೆಯನ್ನು ಕಟ್ಟಬಲ್ಲದು. (ಪ್ರಕ. 4:11) ಯೆಹೋವನು ಸೃಷ್ಟಿಕರ್ತನಾದದ್ದು ಆತನಲ್ಲಿರುವ ಅಪಾರ ಪ್ರೀತಿಯಿಂದಲೇ. (1 ಯೋಹಾ. 4:8) ಆದ್ದರಿಂದ ನಾವು ನಮ್ಮ ಪ್ರೀತಿಪರ ಸ್ವರ್ಗೀಯ ಪಿತನೂ ಮಿತ್ರನೂ ಆಗಿರುವಾತನ ಕುರಿತು ಇತರರಿಗೆ ಕಲಿಸಲು ಕೈಲಾದದ್ದೆಲ್ಲವನ್ನೂ ಮಾಡೋಣ. ನಮ್ಮ ವಿಷಯದಲ್ಲಾದರೋ ದೇವರಾತ್ಮದಿಂದ ನಡೆಸಲ್ಪಡಲು ನಮ್ಮನ್ನು ಬಿಟ್ಟುಕೊಡುವಲ್ಲಿ ದೇವರ ಕುರಿತು ನಿತ್ಯನಿರಂತರವೂ ಕಲಿಯುವ ಸದವಕಾಶ ನಮಗಿರುವುದು. (ಗಲಾ. 5:16, 25) ನಮ್ಮಲ್ಲಿ ಪ್ರತಿಯೊಬ್ಬರು ಯೆಹೋವನ ಮತ್ತು ಆತನ ಮಹತ್ಕಾರ್ಯಗಳ ಕುರಿತು ಕಲಿಯುವುದನ್ನು ಮುಂದುವರಿಸೋಣ. ಭೂಮ್ಯಾಕಾಶ ಮತ್ತು ಮಾನವಕುಲವನ್ನು ನಿರ್ಮಿಸಲು ತನ್ನ ಪವಿತ್ರಾತ್ಮವನ್ನು ಬಳಸಿದಾಗ ಆತನು ತೋರಿಸಿದ ಅಪರಿಮಿತ ಪ್ರೀತಿಯನ್ನು ನಾವು ನಮ್ಮ ಜೀವಿತದಲ್ಲಿ ಪ್ರತಿಬಿಂಬಿಸುತ್ತಿರೋಣ.

[ಪಾದಟಿಪ್ಪಣಿ]

^ ಪ್ಯಾರ. 6 ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೋ? (ಇಂಗ್ಲಿಷ್‌) ಎಂಬ ಪುಸ್ತಕದ ಪುಟ 24-25 ನೋಡಿ.

ವಿವರಿಸಬಲ್ಲಿರೋ?

• ಭೂಮ್ಯಾಕಾಶಗಳ ಅಸ್ತಿತ್ವವು ದೇವರು ಪವಿತ್ರಾತ್ಮವನ್ನು ಬಳಸಿದ್ದರ ಕುರಿತು ನಮಗೇನನ್ನು ಕಲಿಸುತ್ತದೆ?

• ನಾವು ದೇವಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟದ್ದರಿಂದ ಯಾವ ಸದವಕಾಶಗಳು ನಮಗಿವೆ?

• ಸೃಷ್ಟಿಯ ಕುರಿತ ಪುರಾವೆಗಳನ್ನು ನಾವೇಕೆ ಪರೀಶೀಲಿಸಬೇಕು?

• ಯೆಹೋವನೊಂದಿಗಿನ ನಮ್ಮ ಸುಸಂಬಂಧವು ಯಾವ ವಿಧಗಳಲ್ಲಿ ಬೆಳೆಯಬಲ್ಲದು?

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚಿತ್ರ]

ವಿಶ್ವದಲ್ಲಿ ಕಾಣುವ ಸುವ್ಯವಸ್ಥೆಯು ಸೃಷ್ಟಿಯ ಕುರಿತು ನಮಗೇನು ಕಲಿಸುತ್ತದೆ?

[ಕೃಪೆ]

Stars: Anglo-Australian Observatory/David Malin Images

[ಪುಟ 8ರಲ್ಲಿರುವ ಚಿತ್ರಗಳು]

ಇವೆಲ್ಲವುಗಳಲ್ಲಿ ಡಿಎನ್‌ಎ ಸಾಮಾನ್ಯವಾಗಿದೆ ಹೇಗೆ?

[ಪುಟ 10ರಲ್ಲಿರುವ ಚಿತ್ರ]

ನಿಮ್ಮ ನಂಬಿಕೆಯನ್ನು ಸಮರ್ಥಿಸಲು ನೀವು ಸಿದ್ಧರೋ?