ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿ ತಿಳಿಸಲಾಗಿರುವ ಪರದೈಸ್‌ ಏಲ್ಲಿದೆ?

ಬೈಬಲಿನಲ್ಲಿ ತಿಳಿಸಲಾಗಿರುವ ಪರದೈಸ್‌ ಏಲ್ಲಿದೆ?

ನಮ್ಮ ಓದುಗರ ಪ್ರಶ್ನೆ

ಬೈಬಲಿನಲ್ಲಿ ತಿಳಿಸಲಾಗಿರುವ ಪರದೈಸ್‌ ಏಲ್ಲಿದೆ?

▪ ಸಾಯುತ್ತಿದ್ದ ಒಬ್ಬ ವ್ಯಕ್ತಿ ಧೈರ್ಯದಿಂದ ಯೇಸುವಿನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದಾಗ ಯೇಸು ಅವನಿಗೆ: “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂದು ಹೇಳಿದನು. (ಲೂಕ 23:43) ಆ ಮನುಷ್ಯನು ಎಲ್ಲಿ ಇರಲಿದ್ದನು? ಪರದೈಸ್‌ ಎಂಬುದು ಸ್ವರ್ಗದಲ್ಲಿರುತ್ತದೋ? ಭೂಮಿಯಲ್ಲಿರುತ್ತದೋ? ಅಥವಾ ಅವೆರಡರ ನಡುವೆ ಅಂದರೆ ಜನರು ಎಲ್ಲಿ ತಮಗೆ ನ್ಯಾಯತೀರ್ಪಾಗುವುದೆಂದು ನೆನಸುತ್ತಾರೋ ಆ ಸ್ಥಳದಲ್ಲಿರುತ್ತದೋ?

ಒಂದೊಮ್ಮೆ ನಮ್ಮ ಪೂರ್ವಜರು ಪರದೈಸಿನಲ್ಲಿದ್ದರು. ಬೈಬಲ್‌ ನಮಗನ್ನುವುದು: “ಯೆಹೋವ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್‌ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು . . . ಯೆಹೋವದೇವರು ಆ ಮನುಷ್ಯನನ್ನು ಕರಕೊಂಡು ಹೋಗಿ ಏದೆನ್‌ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು.” (ಆದಿ. 2:8, 15) ಈ ಮಾತುಗಳನ್ನು ಮೂಲ ಹೀಬ್ರುವಿನಿಂದ ಗ್ರೀಕ್‌ ಭಾಷೆಗೆ ತರ್ಜುಮೆಮಾಡಿದಾಗ “ತೋಟ” ಎಂಬ ಪದ “ಪರದೈಸ್‌” ಎಂದು ಕರೆಯಲ್ಪಟ್ಟಿತು.

ಒಂದು ದಂಪತಿ ತಮಗೆ ಮಕ್ಕಳು ಹುಟ್ಟುವಾಗ ತಮ್ಮ ಮನೆಗೆ ಇನ್ನಷ್ಟು ಕೋಣೆಗಳನ್ನು ಸೇರಿಸಿ ಅದನ್ನು ವಿಶಾಲಗೊಳಿಸುವಂತೆಯೇ ನಮ್ಮ ಪ್ರಥಮ ಹೆತ್ತವರು ಮಾನವ ಕುಟುಂಬ ದೊಡ್ಡದಾದಂತೆ ಪರದೈಸನ್ನು ಏದೆನ್‌ ತೋಟದ ಗಡಿಯಿಂದಾಚೆಗೂ ವಿಸ್ತರಿಸಬೇಕಿತ್ತು. ದೇವರು ಅವರಿಗೆ, “ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದನು.—ಆದಿ. 1:28.

ಮಾನವರು ಭೂಮಿಯಲ್ಲಿರುವ ಪರದೈಸಿನಲ್ಲಿ ಜೀವಿಸುತ್ತಾ ಮಕ್ಕಳನ್ನು ಹಡೆಯಬೇಕು ಎಂಬುದೇ ಸೃಷ್ಟಿಕರ್ತನ ಉದ್ದೇಶವಾಗಿತ್ತು. ಅವರು ಆ ತೋಟದಲ್ಲಿ ಶಾಶ್ವತವಾಗಿ ಜೀವಿಸಲಿಕ್ಕಿದ್ದರು, ಗೋರಿಗಳ ಆವಶ್ಯಕತೆಯೇ ಇರಲಿಲ್ಲ. ಈ ಭೂಮಿ ಇಡೀ ಮಾನವಕುಲದ ಖಾಯಂ ಬೀಡಾಗಲಿಕ್ಕಿತ್ತು. ಭೂಮಿಯ ಪ್ರಕೃತಿ ಸೌಂದರ್ಯವನ್ನು ನೋಡುವಾಗ ನಾವು ಮನಸೋತು ಹರ್ಷಾನಂದಗೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ! ಸುಂದರ ಭೂಮಿಯಲ್ಲಿ ಜೀವಿಸಲೆಂದೇ ನಮ್ಮನ್ನು ಸೃಷ್ಟಿಸಲಾಯಿತು.

ದೇವರ ಉದ್ದೇಶ ಬದಲಾಗಿದೆಯೋ? ಖಂಡಿತ ಇಲ್ಲ! ಏಕೆಂದರೆ ಯೆಹೋವನು ಆಶ್ವಾಸನೆ ಕೊಡುವುದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” (ಯೆಶಾ. 55:11) ಮಾನವರು ಸೃಷ್ಟಿಸಲ್ಪಟ್ಟು ಸುಮಾರು 3,000 ವರ್ಷಗಳ ಬಳಿಕ, ‘ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದಾತನು ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು’ ಎಂದು ಬೈಬಲ್‌ ಹೇಳಿತು. (ಯೆಶಾ. 45:18) ದೇವರ ಉದ್ದೇಶ ಬದಲಾಗಿಲ್ಲ. ಭೂಮಿ ನಿಶ್ಚಯವಾಗಿಯೂ ಪರದೈಸಾಗಲಿದೆ.

ಆಸಕ್ತಿಕರವಾಗಿ ಬೈಬಲ್‌ ಪರದೈಸಿನ ಬಗ್ಗೆ ತಿಳಿಸುವಾಗೆಲ್ಲ ಹೆಚ್ಚಿನ ಸಂದರ್ಭಗಳಲ್ಲಿ ಭೂಮಿಯಲ್ಲಿನ ಜೀವನವನ್ನೇ ಚಿತ್ರಿಸುತ್ತದೆ. ಉದಾಹರಣೆಗೆ, ಯೆಶಾಯ ಪುಸ್ತಕದಲ್ಲಿರುವ ಪ್ರವಾದನೆ ಹೀಗನ್ನುತ್ತದೆ: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.” (ಯೆಶಾ. 65:21) ಮನೆಗಳನ್ನು ಎಲ್ಲಿ ಕಟ್ಟಲಾಗುತ್ತದೆ? ತೋಟಗಳು ಎಲ್ಲಿ ಇರುತ್ತವೆ? ಹಣ್ಣುಗಳನ್ನು ಎಲ್ಲಿ ತಿನ್ನಲಾಗುತ್ತದೆ? ಭೂಮಿಯಲ್ಲೇ ಅಲ್ಲವೇ. ಇದನ್ನು ಜ್ಞಾನೋಕ್ತಿ 2:21 ಹೀಗೆ ವಿವರಿಸುತ್ತದೆ: “ಯಥಾರ್ಥವಂತರು ದೇಶದಲ್ಲಿ [“ಭೂಮಿಯಲ್ಲಿ,” NW] ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.”

ಯೇಸು ಸಹ ಭೂಪರದೈಸಿನ ಬಗ್ಗೆ ಮಾತಾಡಿದನು. ಅವನು ಸ್ವರ್ಗೀಯ ಪರದೈಸಿನ ಬಗ್ಗೆಯೂ ವಾಗ್ದಾನ ಮಾಡಿದ್ದಾನೆ ಎಂಬುದು ನಿಜ ಆದರೆ ಅದು ಆರಿಸಲ್ಪಟ್ಟ ಕೆಲವು ಜನರಿಗೆ ಮಾತ್ರ. (ಲೂಕ 12:32) ಇವರು ಮರಣದ ನಂತರ ಪುನರುತ್ಥಾನಗೊಂಡು ಸ್ವರ್ಗೀಯ ಪರದೈಸಿನಲ್ಲಿ ಕ್ರಿಸ್ತನೊಂದಿಗೆ ಸೇರಿ ಭೂಪರದೈಸಿನ ಮೇಲೆ ಆಳ್ವಿಕೆ ನಡೆಸುವರು. (ಪ್ರಕ. 5:10; 14:1-3) ಭೂಪರದೈಸಿನಲ್ಲಿ ಎಲ್ಲಾ ವಿಷಯಗಳು ದೇವರ ಮಟ್ಟಕ್ಕನುಸಾರವಾಗಿ ನಿರ್ವಹಿಸಲ್ಪಡುತ್ತಿವೆ ಎಂಬುದನ್ನು ಈ ಸ್ವರ್ಗೀಯ ಜೊತೆ ಅರಸರು ಖಚಿತಪಡಿಸಿಕೊಳ್ಳುತ್ತಾರೆ.

ಭೂಮಿಗಾಗಿ ದೇವರ ಉದ್ದೇಶ ಇದೇ ಆಗಿದೆಯೆಂಬುದು ಯೇಸುವಿಗೆ ಗೊತ್ತಿತ್ತು. ಎಷ್ಟೆಂದರೂ ದೇವರು ಏದೆನ್‌ ತೋಟವನ್ನು ಸೃಷ್ಟಿಸುವಾಗ ಯೇಸು ಸಹ ಆತನೊಂದಿಗೆ ಸ್ವರ್ಗದಲ್ಲಿದ್ದನಲ್ಲಾ. ಯೇಸುವಿನಲ್ಲಿ ನಂಬಿಕೆಯನ್ನು ಇಡುವವರೆಲ್ಲರಿಗೆ ಬರಲಿರುವ ಭೂಪರದೈಸಿನಲ್ಲಿ ಜೀವಿಸುವ ಸದವಕಾಶವಿದೆ. (ಯೋಹಾ. 3:16) ಅಂಥವರಿಗೆ, “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂಬುದಾಗಿ ಯೇಸು ವಾಗ್ದಾನಿಸುತ್ತಾನೆ.—ಲೂಕ 23:43. (w10-E 12/01)

[ಪುಟ 10ರಲ್ಲಿರುವ ಚಿತ್ರ ಕೃಪೆ]

© FORGET Patrick/SAGAPHOTO.COM/Alamy