ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪ್ರಾಮಾಣಿಕ ಲೋಕದಲ್ಲಿ ಪ್ರಾಮಾಣಿಕರಾಗಿರಿ

ಅಪ್ರಾಮಾಣಿಕ ಲೋಕದಲ್ಲಿ ಪ್ರಾಮಾಣಿಕರಾಗಿರಿ

ಅಪ್ರಾಮಾಣಿಕ ಲೋಕದಲ್ಲಿ ಪ್ರಾಮಾಣಿಕರಾಗಿರಿ

ಲೋಕದಲ್ಲಿ ಅಪ್ರಾಮಾಣಿಕತೆ ಎಷ್ಟಿದೆಯೆಂದರೆ ಉಸಿರಾಡುವ ಗಾಳಿಯಂತೆ ಅದು ಎಲ್ಲೆಡೆ ಹರಡಿಕೊಂಡಿದೆ. ಜನರು ಸುಳ್ಳು ಹೇಳುತ್ತಾರೆ, ಒಂದಕ್ಕೆರಡು ಬೆಲೆ ಹೇಳಿ ಹಣ ಲಪಟಾಯಿಸುತ್ತಾರೆ, ಕದಿಯುತ್ತಾರೆ, ಸಾಲವನ್ನು ಹಿಂದಿರುಗಿಸದೆ ಮೋಸಮಾಡುತ್ತಾರೆ, ವ್ಯಾಪಾರವಹಿವಾಟುಗಳಲ್ಲಿ ಕೃತ್ರಿಮ ಕೃತ್ಯಗಳನ್ನು ಮಾಡಿ ಬೀಗುತ್ತಾರೆ. ಇಂಥ ಪರಿಸರವು ಪ್ರಾಮಾಣಿಕರಾಗಿರಬೇಕೆಂಬ ನಮ್ಮ ದೃಢಸಂಕಲ್ಪಕ್ಕೆ ಅನೇಕವೇಳೆ ಸವಾಲೊಡ್ಡುತ್ತದೆ. ಅಪ್ರಾಮಾಣಿಕತೆಯ ಕಡೆ ನಮ್ಮ ಮನಸ್ಸು ವಾಲದಂತೆ ಹೇಗೆ ನೋಡಿಕೊಳ್ಳಬಹುದು? ಈ ನಿಟ್ಟಿನಲ್ಲಿ ನಮಗೆ ಸಹಾಯಮಾಡುವ ಮೂರು ಮುಖ್ಯ ಅಂಶಗಳನ್ನು ನೋಡೋಣ. ಅವು ಯಾವುವೆಂದರೆ ಯೆಹೋವನ ಭಯ, ಒಳ್ಳೇ ಮನಸ್ಸಾಕ್ಷಿ, ಸಂತೃಪ್ತಭಾವನೆ.

ಯೆಹೋವನ ಮೇಲಿನ ಹಿತಕರ ಭಯ

ಪ್ರವಾದಿ ಯೆಶಾಯನು ಹೀಗೆ ಬರೆದನು: “ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ.” (ಯೆಶಾ. 33:22) ಯೆಹೋವನ ಈ ಅಧಿಕಾರಸ್ಥಾನವನ್ನು ಅಂಗೀಕರಿಸುವುದು ನಮ್ಮಲ್ಲಿ ದೇವಭಯವನ್ನು ಹುಟ್ಟಿಸುತ್ತದೆ. ದೇವಭಯವು ಅಪ್ರಾಮಾಣಿಕತೆಯನ್ನು ಪ್ರತಿರೋಧಿಸಲು ನಾವು ಮಾಡಿರುವ ದೃಢಸಂಕಲ್ಪವನ್ನು ಪುಷ್ಟೀಕರಿಸುವ ಚಾಲಕಶಕ್ತಿ. “ಯೆಹೋವನಲ್ಲಿ ಭಯಭಕ್ತಿಯಿಂದಿರಿ, ಆಗ ನೀವು ದುಷ್ಟತನಕ್ಕೆ ದೂರವಾಗುವಿರಿ” ಎನ್ನುತ್ತದೆ ಜ್ಞಾನೋಕ್ತಿ 16:6 (ಪರಿಶುದ್ಧ ಬೈಬಲ್‌ *). ಈ ಭಯವು ದೇವರು ನಮ್ಮನ್ನೆಲ್ಲಿ ಶಿಕ್ಷಿಸುತ್ತಾನೋ ಎಂಬ ವಿಕೃತ ಭಯವಲ್ಲ. ಬದಲಾಗಿ ನಮ್ಮ ಹಿತಕ್ಷೇಮದಲ್ಲಿ ಗಾಢ ಆಸಕ್ತಿವಹಿಸುವ ಸ್ವರ್ಗೀಯ ತಂದೆಯಾದ ಯೆಹೋವನನ್ನು ಅಸಂತೋಷಗೊಳಿಸದಿರುವ ಹಿತಕರ ಭಯವಾಗಿದೆ.—1 ಪೇತ್ರ 3:12.

ಈ ಹಿತಕರ ಭಯ ಪ್ರಾಮಾಣಿಕರಾಗಿರಲು ಹೇಗೆ ಸಹಾಯಮಾಡುತ್ತದೆಂದು ನಿಜಜೀವನ ಅನುಭವವೊಂದು ತಿಳಿಸುತ್ತದೆ. ರಿಚರ್ಡ್‌ ಮತ್ತು ಅವನ ಪತ್ನಿ ಫೆಲಿನಾ ತಮ್ಮ ಬ್ಯಾಂಕ್‌ ಖಾತೆಯಿಂದ ಸುಮಾರು ಮೂವತ್ತು ಸಾವಿರ ಮೊತ್ತದ ಹಣವನ್ನು ಡ್ರಾ ಮಾಡಿದರು. * ಫೆಲಿನಾ ಪರ್ಸ್‌ನಲ್ಲಿ ಹಣ ಇಡುವಾಗ ನೋಟಿನ ಕಂತೆಗಳನ್ನು ಎಣಿಸಲಿಲ್ಲ. ಅನೇಕ ಬಿಲ್‌ಗಳನ್ನು ಪಾವತಿಸಿ ಮನೆಗೆ ಹಿಂದಿರುಗಿದ ಅವರು ಪರ್ಸ್‌ನಲ್ಲಿದ್ದ ಉಳಿದ ಹಣವನ್ನು ಲೆಕ್ಕಿಸಿದಾಗ ಆಶ್ಚರ್ಯ ಕಾದಿತ್ತು. ಬ್ಯಾಂಕಿನಿಂದ ಡ್ರಾ ಮಾಡಿದಷ್ಟೇ ಹಣ ಇನ್ನೂ ಅದರಲ್ಲಿ ಉಳಿದಿತ್ತು. ವಾಸ್ತವದಲ್ಲಿ ಬ್ಯಾಂಕ್‌ ಕ್ಯಾಷಿಯರ್‌ ಅವರಿಗೆ ಜಾಸ್ತಿ ಹಣ ಕೊಟ್ಟಿದ್ದರು. ಮೊದಮೊದಲು ಅವರಿಗೆ ಆ ಹೆಚ್ಚಿನ ಹಣವನ್ನು ಇಟ್ಟುಕೊಳ್ಳಲು ಮನಸ್ಸಾಯಿತು. ಏಕೆಂದರೆ ಅವರು ಇನ್ನೂ ತುಂಬ ಬಿಲ್‌ಗಳನ್ನು ಕಟ್ಟಬೇಕಿತ್ತು. ರಿಚರ್ಡ್‌ ವಿವರಿಸಿದ್ದು: “ಹಣವನ್ನು ಹಿಂದಿರುಗಿಸಲು ಮನೋಬಲಕ್ಕಾಗಿ ನಾವು ಯೆಹೋವನ ಬಳಿ ಪ್ರಾರ್ಥಿಸಿದೆವು. ಜ್ಞಾನೋಕ್ತಿ 27:11ರಲ್ಲಿರುವ ಕರೆಗನುಸಾರ ಆತನ ಮನಸ್ಸನ್ನು ಸಂತೋಷಪಡಿಸಲು ನಾವು ಇಚ್ಛಿಸಿದೆವು. ಇದು ಆ ಹಣವನ್ನು ವಾಪಸ್ಸು ಕೊಡುವಂತೆ ನಮ್ಮನ್ನು ಪ್ರೇರಿಸಿತು.”

ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ

ಬೈಬಲನ್ನು ಅಧ್ಯಯನ ಮಾಡುವ ಮತ್ತು ಕಲಿತದ್ದನ್ನು ಅನ್ವಯಿಸಲು ಪ್ರಯತ್ನಿಸುವ ಮೂಲಕ ನಾವು ನಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸಬಲ್ಲೆವು. ಹೀಗೆ ಮಾಡುವಾಗ ‘ಸಜೀವವೂ ಪ್ರಬಲವೂ ಆದ ದೇವರ ವಾಕ್ಯವು’ ನಮ್ಮ ಮನಸ್ಸನ್ನು ಮಾತ್ರವಲ್ಲ ಹೃದಯಾಂತರಾಳವನ್ನೂ ತಲಪುವುದು. ಇದು “ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು” ನಮ್ಮನ್ನು ಪ್ರಚೋದಿಸುವುದು.—ಇಬ್ರಿ. 4:12; 13:18.

ಜೋಸೆಫ್‌ ಎಂಬವನ ಉದಾಹರಣೆ ಪರಿಗಣಿಸಿ. ಅವನು ಕುತ್ತಿಗೆ ವರೆಗೆ ಸಾಲ ಮಾಡಿಕೊಂಡಿದ್ದ. ಬರೋಬ್ಬರಿ ಎರಡೂವರೆ ಲಕ್ಷ! ಆ ಸಾಲ ತೀರಿಸಲಾಗದೆ ಹೇಳದೆ ಕೇಳದೆ ಊರು ಬಿಟ್ಟುಹೋದ. ಎಂಟು ವರ್ಷಗಳ ನಂತರ ಜೋಸೆಫ್‌ಗೆ ಸತ್ಯ ಸಿಕ್ಕಿತು. ಆಗ ಅವನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ತನಗೆ ಸಾಲ ಕೊಟ್ಟಿದ್ದ ಕಂಪನಿ ಮಾಲೀಕನನ್ನು ಭೇಟಿಯಾಗಿ ಸಾಲತೀರಿಸುವಂತೆ ಪ್ರಚೋದಿಸಿತು! ಜೋಸೆಫ್‌ ಕಡಿಮೆ ಸಂಬಳದಲ್ಲಿ ಹೆಂಡತಿ ಮತ್ತು ನಾಲ್ಕು ಮಕ್ಕಳನ್ನು ಸಾಕಬೇಕಿದೆ ಎಂದು ಮನಗಂಡ ಮಾಲೀಕನು ಮಾಸಿಕ ಕಂತುಗಳಲ್ಲಿ ಸಾಲ ತೀರಿಸುವ ಜೋಸೆಫ್‌ನ ವಿನಂತಿಗೆ ಸಮ್ಮತಿಸಿದನು.

ಸಂತೃಪ್ತಭಾವನೆ

ಅಪೊಸ್ತಲ ಪೌಲನು ಬರೆದದ್ದು: “ಸ್ವಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭವಾಗಿದೆ . . . ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು.” (1 ತಿಮೊ. 6:6-8) ಪೌಲನ ಈ ವಿವೇಕಯುತ ಸಲಹೆಯನ್ನು ನಾವು ಹೃದಯಕ್ಕೆ ತಕ್ಕೊಳ್ಳುವಲ್ಲಿ ಅತ್ಯಾಶೆಯಿಂದ ಕೂಡಿದ ಅಪ್ರಾಮಾಣಿಕ ವ್ಯಾಪಾರವಹಿವಾಟುಗಳಲ್ಲಿ ಅಥವಾ ದಿಢೀರ್‌ ಶ್ರೀಮಂತರಾಗುವ ಪೊಳ್ಳು ಸ್ಕೀಮ್‌ಗಳಲ್ಲಿ ಸಿಕ್ಕಿಕೊಳ್ಳುವ ಅಪಾಯದಿಂದ ದೂರವಿರುವೆವು. (ಜ್ಞಾನೋ. 28:20) ಮಾತ್ರವಲ್ಲ, ದೇವರು ನಮ್ಮ ಮೂಲಭೂತ ಅಗತ್ಯಗಳನ್ನು ಒದಗಿಸುವನೆಂಬ ಭರವಸೆಯಿಂದ ಆತನ ರಾಜ್ಯವನ್ನು ಪ್ರಥಮವಾಗಿಡುವೆವು.—ಮತ್ತಾ. 6:25-34.

ಹಾಗಿದ್ದರೂ “ಐಶ್ವರ್ಯದ ಮೋಸಕರವಾದ ಪ್ರಭಾವ” ತೀಕ್ಷ್ಣವಾಗಿರುವ ಕಾರಣ ಲೋಭ ಮತ್ತು ದುರಾಶೆಯ ಪಾಶಕ್ಕೆ ಒಳಗಾಗುವ ಅಪಾಯವನ್ನು ನಾವೆಂದೂ ಕೀಳಂದಾಜು ಮಾಡಬಾರದು. (ಮತ್ತಾ. 13:22) ಆಕಾನನ ಉದಾಹರಣೆಯನ್ನು ನೆನಪಿಸಿಕೊಳ್ಳಿ. ಇಸ್ರಾಯೇಲ್ಯರು ಯೊರ್ದನ್‌ ಹೊಳೆ ದಾಟುವಂತೆ ಯೆಹೋವನು ನಡೆಸಿದ ಅದ್ಭುತವನ್ನು ಅವನು ಕಣ್ಣಾರೆಕಂಡಿದ್ದನು. ಆದರೂ ಅವನು ದುರಾಶೆಯ ಪಾಶಕ್ಕೆ ಬಲಿಯಾಗಿ ಯೆರಿಕೋ ಪಟ್ಟಣದ ಕೊಳ್ಳೆಯಿಂದ ಸ್ವಲ್ಪ ಬೆಳ್ಳಿ, ಚಿನ್ನ ಮತ್ತು ದುಬಾರಿ ವಸ್ತ್ರವೊಂದನ್ನು ಕದ್ದನು. ಇದರಿಂದ ಅವನು ತನ್ನ ಜೀವವನ್ನೇ ಕಳಕೊಳ್ಳಬೇಕಾಯಿತು. (ಯೆಹೋ. 7:1, 20-26) ಆದ್ದರಿಂದಲೇ ಶತಮಾನಗಳ ಬಳಿಕ ಯೇಸು ಈ ಎಚ್ಚರಿಕೆ ಕೊಟ್ಟನು: ‘ನಿಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಂಡು ಯಾವುದೇ ರೀತಿಯ ದುರಾಶೆಗೆ ಒಳಗಾಗದಂತೆ ನಿಮ್ಮನ್ನು ಕಾಪಾಡಿಕೊಳ್ಳಿ.’—ಲೂಕ 12:15.

ಕೆಲಸದ ಸ್ಥಳದಲ್ಲಿ ಪ್ರಾಮಾಣಿಕರಾಗಿರಿ

ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿರಬೇಕೆಂಬ ನಮ್ಮ ದೃಢಸಂಕಲ್ಪವನ್ನು ಪರೀಕ್ಷೆಗೊಳಪಡಿಸುವ ಕೆಲವು ಸನ್ನಿವೇಶಗಳನ್ನು ನಾವೀಗ ಪರಿಗಣಿಸೋಣ. ಕೆಲಸದ ಸ್ಥಳದಲ್ಲಿ ಪ್ರಾಮಾಣಿಕರಾಗಿರುವುದರಲ್ಲಿ “ಕಳ್ಳತನಮಾಡದೆ” ಇರುವುದೂ ಸೇರಿದೆ. ಒಂದುವೇಳೆ ಕಳ್ಳತನ ಅಲ್ಲಿ ಸರ್ವಸಾಮಾನ್ಯವಾಗಿದ್ದರೂ ಸರಿಯೇ. (ತೀತ 2:9, 10) ಸರ್ಕಾರಿ ನೌಕರನಾಗಿರುವ ಜೊಯೆಲ್‌ ಉದ್ಯೋಗದ ಸಂಬಂಧದಲ್ಲಿ ಮಾಡಿದ ಪ್ರಯಾಣದ ವೆಚ್ಚವನ್ನು ಕಛೇರಿಗೆ ಪ್ರಾಮಾಣಿಕವಾಗಿ ವರದಿಸುತ್ತಿದ್ದನು. ಅವನ ಸಹೋದ್ಯೋಗಿಗಳಾದರೋ ತಾವು ವ್ಯಯಿಸಿದ್ದಕ್ಕಿಂತಲೂ ಹೆಚ್ಚನ್ನು ವರದಿಸಿ ಹಣ ಜೇಬಿಗಿಳಿಸುತ್ತಿದ್ದರು. ಅವರಿಗೆ ಇದೆಲ್ಲ ಮಾಮೂಲಾಗಿತ್ತು. ಏಕೆಂದರೆ ಅವರ ಮೇಲಧಿಕಾರಿಯೇ ಆ ಅಪ್ರಾಮಾಣಿಕ ಕೃತ್ಯಗಳನ್ನು ಮುಚ್ಚಿಹಾಕುತ್ತಿದ್ದನು. ಅಷ್ಟೇಕೆ ಪ್ರಾಮಾಣಿಕನಾಗಿದ್ದಾನೆಂಬ ಕಾರಣಕ್ಕೆ ಜೊಯೆಲ್‌ಗೆ ಛೀಮಾರಿ ಹಾಕಿದನು. ಕಛೇರಿ ಕೆಲಸಕ್ಕೆಂದು ಅವನನ್ನು ಹೊರಗೆ ಕಳುಹಿಸುವುದನ್ನೂ ನಿಲ್ಲಿಸಿದನು. ಒಮ್ಮೆ ಆ ಕಛೇರಿಯ ಲೆಕ್ಕಪರಿಶೋಧನೆ ಮಾಡಲಾಯಿತು. ಆಗ ಜೊಯೆಲ್‌ನ ಪ್ರಾಮಾಣಿಕತೆಯನ್ನು ಗುರುತಿಸಲಾಯಿತು ಹಾಗೂ ಪ್ರಶಂಸಿಸಿ, ಬಡತಿ ನೀಡಲಾಯಿತು.

ಆ್ಯಂಡ್ರೂ ಎಂಬ ಸಹೋದರನು ಒಬ್ಬ ಸೇಲ್ಸ್‌ಮ್ಯಾನ್‌. ಅವನ ಧಣಿ ಗ್ರಾಹಕರ ಖಾತೆಗೆ ಎರಡು ಬಾರಿ ಸೇವಾಶುಲ್ಕವನ್ನು ವಿಧಿಸುವಂತೆ ಆ್ಯಂಡ್ರೂಗೆ ಸೂಚಿಸಿದನು. ಪ್ರಾಮಾಣಿಕನಾಗಿರಲು ಬಯಸಿದ ಆ್ಯಂಡ್ರೂ ಬೈಬಲ್‌ ಮೂಲತತ್ತ್ವಗಳಿಗನುಸಾರ ನಡೆಯಲು ಧೈರ್ಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದನು. (ಕೀರ್ತ. 145:18-20) ಮತ್ತು ತಾನೇಕೆ ಹಾಗೆ ಮಾಡಲಾರೆನೆಂದು ಧಣಿಗೆ ವಿವರಿಸಿದನು. ಆದರೆ ಏನೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಒಳ್ಳೇ ಸಂಬಳ ಸಿಗುತ್ತಿದ್ದ ಆ ಕೆಲಸವನ್ನು ಆ್ಯಂಡ್ರೂ ಬಿಟ್ಟುಬಿಟ್ಟ. ಸುಮಾರು ಒಂದು ವರ್ಷದ ನಂತರ ಅದೇ ಧಣಿ ಆ್ಯಂಡ್ರೂವನ್ನು ಪುನಃ ಕೆಲಸಕ್ಕೆ ಕರೆದ ಮತ್ತು ಇನ್ನು ಮುಂದೆ ಆ ರೀತಿ ಅಪ್ರಾಮಾಣಿಕ ಕೆಲಸ ಮಾಡಲು ಹೇಳುವುದಿಲ್ಲವೆಂದು ಮಾತುಕೊಟ್ಟ. ಆ್ಯಂಡ್ರೂಗೆ ಮ್ಯಾನೇಜರ್‌ ಸ್ಥಾನಕ್ಕೆ ಬಡತಿ ಸಿಕ್ಕಿತು.

ಸಾಲ ತೀರಿಸಿ

“ಯಾವ ಸಾಲವೂ ನಿಮಗೆ ಇರಬಾರದು” ಎಂದು ಅಪೊಸ್ತಲ ಪೌಲನು ಕ್ರೈಸ್ತರಿಗೆ ಸಲಹೆಯಿತ್ತಿದ್ದಾನೆ. (ರೋಮ. 13:8) ಸಾಲಕೊಟ್ಟವನು ಶ್ರೀಮಂತ, ಅವನಿಗೆ ದುಡ್ಡಿಗೇನು ಬರವಿಲ್ಲ ಎಂದೆಣಿಸುತ್ತಾ ಸಾಲ ತೀರಿಸದಿರಲು ನಮಗೆ ಮನಸ್ಸಾದೀತು. ಆದರೆ ಬೈಬಲ್‌ ಹೀಗೆ ಎಚ್ಚರಿಸುತ್ತದೆ: ‘ದುಷ್ಟನು ಸಾಲಮಾಡಿಕೊಂಡು ತೀರಿಸನು.’—ಕೀರ್ತ. 37:21.

ಒಂದುವೇಳೆ, ‘ಮುಂಗಾಣದ ಘಟನೆಯಿಂದಾಗಿ’ ಸಾಲ ತೀರಿಸಲು ಆಗದಿದ್ದಲ್ಲಿ ಆಗೇನು? (ಪ್ರಸಂ. 9:11, NW) ಫ್ರಾನ್ಸಿಸ್‌ ಎಂಬವನು ಬ್ಯಾಂಕ್‌ ಸಾಲ ತೀರಿಸಲು ಆಲ್ಫ್ರೆಡ್‌ನಿಂದ ಸುಮಾರು ಮೂರು ಲಕ್ಷ ಮೊತ್ತದ ಹಣವನ್ನು ಎರವಲು ಪಡೆದನು. ಆದರೆ ವ್ಯಾಪಾರದಲ್ಲಿ ನಷ್ಟವಾದ್ದರಿಂದ ಹೇಳಿದ ಸಮಯಕ್ಕೆ ಹಣವನ್ನು ಹಿಂದಿರುಗಿಸಲು ಅವನಿಂದಾಗಲಿಲ್ಲ. ಆಗ ಫ್ರಾನ್ಸಿಸ್‌ ಆಲ್ಫ್ರೆಡ್‌ನ ಬಳಿ ಹೋಗಿ ಪ್ರಾಮಾಣಿಕವಾಗಿ ವಿಷಯ ತಿಳಿಸಿದನು ಮತ್ತು ಸ್ವಲ್ಪ ಸ್ವಲ್ಪವಾಗಿ ಹಣ ಹಿಂದಿರುಗಿಸುವುದಾಗಿ ಕೇಳಿಕೊಂಡನು. ಆಲ್ಫ್ರೆಡ್‌ ಅದಕ್ಕೆ ಒಪ್ಪಿದನು.

ಸುಳ್ಳು ವರದಿ ಕೊಡಬೇಡಿ

ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿದ್ದ ಅನನೀಯ ಮತ್ತು ಸಪ್ಫೈರ ದಂಪತಿಯ ಕೆಟ್ಟ ಮಾದರಿಯನ್ನು ನೆನಪಿಸಿಕೊಳ್ಳಿ. ಅವರು ತಮ್ಮ ಹೊಲ ಮಾರಿ ಬಂದ ಹಣದಲ್ಲಿ ಒಂದು ಭಾಗವನ್ನು ಮಾತ್ರ ತಂದು ಅಪೊಸ್ತಲರಿಗೆ ಕೊಟ್ಟರು ಮತ್ತು ಹೊಲ ಮಾರಿದಾಗ ಸಿಕ್ಕಿದ ಹಣ ಅಷ್ಟೇ ಎಂದು ಸುಳ್ಳುಹೇಳಿದರು. ತಾವು ದೊಡ್ಡ ದಾನಿಗಳೆಂದು ಡಂಬಾಚಾರದ ಪ್ರದರ್ಶನಮಾಡಿ ಬೇರೆಯವರಿಂದ ಹೊಗಳಿಕೆ ಗಳಿಸಲು ಆಶಿಸಿದರು. ಆದರೆ ದೇವರ ಪವಿತ್ರಾತ್ಮದ ಪ್ರೇರಣೆಯಿಂದ ಅಪೊಸ್ತಲ ಪೇತ್ರನು ಅವರ ವಂಚನೆಯನ್ನು ಬಯಲಿಗೆಳೆದನು. ಕೂಡಲೆ ಅವರು ಯೆಹೋವನಿಂದ ಹತರಾದರು.—ಅ. ಕಾ. 5:1-11.

ಇವರಿಗೆ ವ್ಯತಿರಿಕ್ತವಾಗಿ ಬೈಬಲ್‌ ಬರಹಗಾರರು ಪ್ರಾಮಾಣಿಕರಾಗಿದ್ದರು ಮತ್ತು ತಮ್ಮ ತಪ್ಪುಗಳನ್ನು ಮರೆಮಾಚದೆ ವರದಿಸಿದರು. ಉದಾಹರಣೆಗೆ ಮೋಶೆ ತಾನು ತಾಳ್ಮೆಗೆಟ್ಟು ಸಿಟ್ಟುಗೊಂಡದ್ದರಿಂದ ವಾಗ್ದತ್ತ ದೇಶಕ್ಕೆ ಹೋಗುವ ಅವಕಾಶವನ್ನು ಕಳಕೊಂಡದ್ದನ್ನು ಪ್ರಾಮಾಣಿಕವಾಗಿ ವರದಿಸಿದನು. (ಅರ. 20:7-13) ಅದೇ ರೀತಿ ಯೋನನು ನಿನವೆ ಪಟ್ಟಣದಲ್ಲಿ ಸಾರುವುದಕ್ಕೆ ಮುಂಚೆ ಮತ್ತು ನಂತರ ತಾನು ತೋರಿಸಿದ ಬಲಹೀನತೆಗಳನ್ನು ಮರೆಮಾಚಲಿಲ್ಲ. ಇದ್ದ ಹಾಗೇ ದಾಖಲಿಸಿದನು.—ಯೋನ 1:1-3; 4:1-3.

ಸತ್ಯವನ್ನು ಹೇಳಲು ಧೈರ್ಯ ಬೇಕೇ ಬೇಕು. ಸತ್ಯ ಹೇಳಿದರೆ ಕೆಲವೊಮ್ಮೆ ನಷ್ಟವನ್ನೂ ಅನುಭವಿಸಬೇಕಾಗಬಹುದು. 14ರ ಪ್ರಾಯದ ನಮಿತಳಿಗೆ ಶಾಲೆಯಲ್ಲಿ ಹೀಗೆಯೇ ಸಂಭವಿಸಿತು. ಪರೀಕ್ಷೆಯ ಉತ್ತರ ಪತ್ರಿಕೆ ದೊರೆತಾಗ ಒಂದು ಕಡೆ ಅಧ್ಯಾಪಕನು ತಪ್ಪು ಉತ್ತರಕ್ಕೆ ತನಗೆ ಅಂಕಕೊಟ್ಟಿರುವುದನ್ನು ಗಮನಿಸಿದಳು. ಇದನ್ನು ಅಧ್ಯಾಪಕನಿಗೆ ತಿಳಿಸಿದರೆ ತನ್ನ ಶ್ರೇಣಿ ಕಡಿಮೆಯಾಗುವುದೆಂದು ಅವಳಿಗೆ ಗೊತ್ತಿತ್ತು. ಆದರೂ ಅವಳು ಹಿಂಜರಿಯಲಿಲ್ಲ. “ಯೆಹೋವನ ಮೆಚ್ಚಿಗೆ ಗಳಿಸಲು ಪ್ರಾಮಾಣಿಕರಾಗಿರಲೇಬೇಕು ಎಂದು ನನ್ನ ಹೆತ್ತವರು ಕಲಿಸಿದ್ದಾರೆ. ನಾನು ಅಧ್ಯಾಪಕನಿಗೆ ತಿಳಿಸದೆ ಹೋಗಿದ್ದರೆ ನನ್ನ ಮನಸ್ಸಾಕ್ಷಿ ಚುಚ್ಚುತಿತ್ತು” ಎನ್ನುತ್ತಾಳೆ ನಮಿತ. ಆಕೆಯ ಪ್ರಾಮಾಣಿಕತೆಯನ್ನು ಆ ಅಧ್ಯಾಪಕನು ಗಣ್ಯಮಾಡಿದನು.

ಪ್ರಾಮಾಣಿಕತೆಯೆಹೋವನಿಗೆ ಮಹಿಮೆ ತರುವ ಒಂದು ಗುಣ

ಜೆಸಿಕ ಎಂಬ 17 ವರ್ಷದ ಹುಡುಗಿಗೆ ಒಂದು ಪರ್ಸ್‌ ಸಿಕ್ಕಿತು. ಅದರಲ್ಲಿ ಕೆಲವು ದಾಖಲೆಪತ್ರಗಳು ಮತ್ತು ಸುಮಾರು 1,500 ಮೊತ್ತದ ಹಣವಿತ್ತು. ಆ ಪರ್ಸ್‌ ಅನ್ನು ಅದರ ವಾರಸುದಾರರಿಗೆ ತಲಪಿಸುವಂತೆ ಜೆಸಿಕ ಶಾಲಾ ಮೇಲಧಿಕಾರಿಗಳಿಗೆ ಅದನ್ನು ಕೊಟ್ಟಳು. ಒಂದು ತಿಂಗಳ ಬಳಿಕ ಉಪಪ್ರಾಂಶುಪಾಲರು ಇಡೀ ತರಗತಿಯ ಮುಂದೆ ಒಂದು ಮೆಚ್ಚುಗೆಯ ಪತ್ರ ಓದಿ ಜೆಸಿಕಳ ಪ್ರಾಮಾಣಿಕತೆಯನ್ನು ಹೊಗಳಿದರು. ಒಳ್ಳೇ ತರಬೇತಿ ಕೊಟ್ಟು ದೇವಭಯದಲ್ಲಿ ಬೆಳೆಸಿರುವುದಕ್ಕಾಗಿ ಅವಳ ಕುಟುಂಬವನ್ನೂ ಪ್ರಶಂಸಿಸಿದರು. ಅವಳ ‘ಒಳ್ಳೆಯ ಕ್ರಿಯೆಗಳು’ ಯೆಹೋವನಿಗೆ ಮಹಿಮೆ ತಂದವು.—ಮತ್ತಾ. 5:14-16.

ನಾವು ಪ್ರಾಮಾಣಿಕರಾಗಿರಲು ಪ್ರಯಾಸಪಡಬೇಕು. ಏಕೆಂದರೆ “ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ . . . ನಿಷ್ಠೆಯಿಲ್ಲದವರೂ” ಆದ ಜನರ ಮಧ್ಯೆ ನಾವು ಜೀವಿಸುತ್ತಿದ್ದೇವೆ. (2 ತಿಮೊ. 3:2) ಆದರೂ ಯೆಹೋವನ ಮೇಲಿನ ಹಿತಕರ ಭಯ, ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ, ಸಂತೃಪ್ತಭಾವನೆಯು ಅಪ್ರಾಮಾಣಿಕ ಲೋಕದಲ್ಲಿ ಪ್ರಾಮಾಣಿಕರಾಗಿರಲು ನಮಗೆ ನೆರವು ನೀಡುತ್ತದೆ. ಈ ಮೂಲಕ, ‘ನೀತಿಸ್ವರೂಪನೂ ನೀತಿಯನ್ನು ಮೆಚ್ಚುವವನೂ’ ಆದ ಯೆಹೋವನ ಅತ್ಯಾಪ್ತ ಸ್ನೇಹವನ್ನು ನಾವು ಸಂಪಾದಿಸಿಕೊಳ್ಳುತ್ತೇವೆ.—ಕೀರ್ತ. 11:7.

[ಪಾದಟಿಪ್ಪಣಿಗಳು]

^ ಪ್ಯಾರ. 4 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 5 ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 7ರಲ್ಲಿರುವ ಚಿತ್ರಗಳು]

ಯೆಹೋವನ ಮೇಲಿನ ಹಿತಕರ ಭಯವು ಪ್ರಾಮಾಣಿಕರಾಗಿರಬೇಕೆಂಬ ನಮ್ಮ ದೃಢಸಂಕಲ್ಪವನ್ನು ಬಲಪಡಿಸುತ್ತದೆ

[ಪುಟ 8ರಲ್ಲಿರುವ ಚಿತ್ರ]

ನಮ್ಮ ಪ್ರಾಮಾಣಿಕ ನಡತೆ ಯೆಹೋವನಿಗೆ ಮಹಿಮೆ ತರುತ್ತದೆ