ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ

ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ

ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ

“ಜಾಣನು ತನ್ನ ನಡತೆಯನ್ನು [“ಹೆಜ್ಜೆಗಳನ್ನು,” NW] ಚೆನ್ನಾಗಿ ಗಮನಿಸುವನು.”—ಜ್ಞಾನೋ. 14:15.

1, 2. (ಎ) ನಿರ್ಣಯಗಳನ್ನು ಮಾಡುವಾಗ ನಮ್ಮ ಮುಖ್ಯ ಗುರಿ ಏನಾಗಿರಬೇಕು? (ಬಿ) ನಾವು ಯಾವೆಲ್ಲ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

ನಿರ್ಣಯ. ಪ್ರತಿದಿನ ಹಲವಾರು ಬಾರಿ ನಾವದನ್ನು ಮಾಡುತ್ತೇವೆ. ಕೆಲವೊಂದು ನಮ್ಮನ್ನು ಅಷ್ಟು ಪ್ರಭಾವಿಸಲಿಕ್ಕಿಲ್ಲ. ಇನ್ನು ಕೆಲವಾದರೋ ನಮ್ಮ ಜೀವನದ ಮೇಲೆ ಆಳವಾದ ಪರಿಣಾಮಬೀರಬಲ್ಲವು. ನಾವು ಮಾಡುವ ನಿರ್ಣಯಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ ದೇವರಿಗೆ ಮಹಿಮೆ ತರುವುದೇ ನಮ್ಮ ಮುಖ್ಯ ಚಿಂತೆಯಾಗಿರಬೇಕು.—1 ಕೊರಿಂಥ 10:31 ಓದಿ.

2 ನಿರ್ಣಯಗಳನ್ನು ಮಾಡುವುದು ನಿಮಗೆ ಸುಲಭವೆನಿಸುತ್ತದೋ ಕಷ್ಟವೆನಿಸುತ್ತದೋ? ನಾವು ಪ್ರೌಢ ಕ್ರೈಸ್ತರಾಗಬೇಕಾದರೆ ಸರಿತಪ್ಪುಗಳ ಭೇದವನ್ನು ಗ್ರಹಿಸಲು ಕಲಿಯಬೇಕು. ಅನಂತರ ಸ್ವತಃ ನಾವೇ ನಿರ್ಣಯ ಮಾಡಬೇಕು. ನಮ್ಮ ನಿರ್ಣಯ ನಮ್ಮ ನಿಶ್ಚಿತಾಭಿಪ್ರಾಯಗಳನ್ನು ಪ್ರತಿಬಿಂಬಿಸಬೇಕೇ ವಿನಃ ಇತರರದ್ದಲ್ಲ. (ರೋಮ. 12:1, 2; ಇಬ್ರಿ. 5:14) ಒಳ್ಳೇ ನಿರ್ಣಯಗಳನ್ನು ಮಾಡಲು ಕಲಿಯಬೇಕೆನ್ನುವುದಕ್ಕೆ ಇನ್ಯಾವ ಪ್ರಬಲ ಕಾರಣಗಳಿವೆ? ಕೆಲವೊಮ್ಮೆ ನಿರ್ಣಯ ಮಾಡಲು ಕಷ್ಟವಾಗುವುದೇಕೆ? ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಲು ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು?

ನಿರ್ಣಯಗಳನ್ನು ಮಾಡಲೇಬೇಕೋ?

3. ನಾವು ನಿರ್ಣಯಗಳನ್ನು ಮಾಡುವಾಗ ಯಾವುದು ಅಡ್ಡಬರದಂತೆ ನೋಡಿಕೊಳ್ಳಬೇಕು?

3 ಬೈಬಲ್‌ ಮಟ್ಟಗಳಿಗೆ ಹೊಂದಿಕೆಯಲ್ಲಿ ನಿರ್ಣಯಗಳನ್ನು ಮಾಡುವ ವಿಷಯದಲ್ಲಿ ನಾವು ಎರಡು ಮನಸ್ಸುಳ್ಳವರಾಗಿರುವಲ್ಲಿ ನಮ್ಮ ನಂಬಿಕೆಗಳು ನಮಗೇ ಸರಿಯಾಗಿ ತಿಳಿದಿಲ್ಲ ಎಂಬ ತೀರ್ಮಾನಕ್ಕೆ ನಮ್ಮ ಸಹಪಾಠಿಗಳು, ಸಹೋದ್ಯೋಗಿಗಳು ಬಂದಾರು. ಆಗ ನಾವು ಸುಲಭವಾಗಿ ಅವರ ಪ್ರಭಾವಕ್ಕೊಳಗಾಗುವೆವು. ಅವರು ಸುಳ್ಳು ಹೇಳಬಹುದು, ಮೋಸ ಮಾಡಬಹುದು, ಕದಿಯಬಹುದು ಮತ್ತು ‘ತಮ್ಮ ಜೊತೆಯಲ್ಲಿ ಸೇರುವಂತೆ’ ಇಲ್ಲವೆ ತಾವು ಮಾಡಿದ ತಪ್ಪನ್ನು ಮರೆಮಾಚುವಂತೆ ನಮಗೆ ದುಂಬಾಲುಬೀಳಬಹುದು. (ವಿಮೋ. 23:2) ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಲು ತಿಳಿದಿರುವ ವ್ಯಕ್ತಿಯಾದರೋ ಭಯದಿಂದಾಗಲಿ ಇತರರ ಮೆಚ್ಚಿಗೆ ಗಳಿಸುವ ಅಪೇಕ್ಷೆಯಿಂದಾಗಲಿ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗೆ ವಿರುದ್ಧವಾಗಿ ಕ್ರಿಯೆಗೈಯನು.—ರೋಮ. 13:5.

4. ಕೆಲವರು ನಮಗಾಗಿ ನಿರ್ಣಯಗಳನ್ನು ಮಾಡಬಯಸುವುದೇಕೆ?

4 ನಮಗಾಗಿ ನಿರ್ಣಯಗಳನ್ನು ಮಾಡಲಿಚ್ಛಿಸುವ ಎಲ್ಲರೂ ನಮಗೆ ಕೆಟ್ಟದ್ದನ್ನು ಬಯಸಲಿಕ್ಕಿಲ್ಲ ನಿಜ. ಹಿತೈಷಿಗಳಾಗಿರುವ ಸ್ನೇಹಿತರು ನಮಗೆ ಸಹಾಯಮಾಡಬೇಕೆಂಬ ಉದ್ದೇಶದಿಂದ ತಮ್ಮ ಸಲಹೆಗಳನ್ನು ಪಾಲಿಸುವಂತೆ ಒತ್ತಾಯಿಸಬಹುದು. ನಾವು ಮನೆಯಿಂದ ದೂರ ವಾಸಿಸುತ್ತಿರುವುದಾದರೂ ನಮ್ಮ ಸಂಬಂಧಿಕರಿಗೆ ನಮ್ಮ ಬಗ್ಗೆ ಬಹಳಷ್ಟು ಕಾಳಜಿಯಿರುತ್ತದೆ. ಹಾಗಾಗಿ ನಾವು ಕೆಲವೊಂದು ಪ್ರಾಮುಖ್ಯ ನಿರ್ಣಯಗಳನ್ನು ಮಾಡಲಿಕ್ಕಿರುವಾಗ ಅವರೂ ಒಳಗೂಡಲು ಇಚ್ಛಿಸಬಹುದು. ಉದಾಹರಣೆಗೆ, ವೈದ್ಯಕೀಯ ಚಿಕಿತ್ಸೆಯ ವಿಷಯವನ್ನು ತೆಗೆದುಕೊಳ್ಳಿ. ರಕ್ತದ ದುರುಪಯೋಗವನ್ನು ಬೈಬಲ್‌ ಸ್ಪಷ್ಟವಾಗಿ ಖಂಡಿಸುತ್ತದೆ. (ಅ. ಕಾ. 15:28, 29) ಆದರೆ ಆರೋಗ್ಯಾರೈಕೆಗೆ ಸಂಬಂಧಪಟ್ಟ ಇತರ ವಿಷಯಗಳ ಬಗ್ಗೆ ಅದು ನೇರವಾಗಿ ಏನನ್ನೂ ಹೇಳುವುದಿಲ್ಲ. ಆ ಸಂದರ್ಭದಲ್ಲಿ ಯಾವ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು ಯಾವುದನ್ನು ತೆಗೆದುಕೊಳ್ಳಬಾರದು ಎನ್ನುವುದನ್ನು ಪ್ರತಿಯೊಬ್ಬರೂ ವೈಯಕ್ತಿಕವಾಗಿ ನಿರ್ಣಯಿಸಬೇಕಾಗುತ್ತದೆ. * ನಮ್ಮ ಆತ್ಮೀಯರಾದರೋ ಇಂಥ ವಿಷಯಗಳ ಬಗ್ಗೆ ಕೆಲವೊಂದು ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಆದರೆ ಈ ವಿಷಯಗಳ ಕುರಿತು ನಿರ್ಣಯಿಸುವಾಗ ಸಮರ್ಪಿತನೂ ದೀಕ್ಷಾಸ್ನಾನಿತನೂ ಆದ ಕ್ರೈಸ್ತನು ಜವಾಬ್ದಾರಿಯ “ತನ್ನ ಸ್ವಂತ ಹೊರೆಯನ್ನು” ತಾನೇ ಹೊತ್ತುಕೊಳ್ಳಬೇಕು. (ಗಲಾ. 6:4, 5) ನಮ್ಮ ಮುಖ್ಯ ಚಿಂತೆ ದೇವರ ಮುಂದೆ ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದಾಗಿರಬೇಕೇ ವಿನಃ ಮನುಷ್ಯರ ಮೆಚ್ಚಿಗೆ ಗಳಿಸುವುದಲ್ಲ.—1 ತಿಮೊ. 1:5

5. ನಾವು ನಂಬಿಕೆಯ ಹಡಗೊಡೆತಕ್ಕೆ ಸಿಕ್ಕಿಕೊಳ್ಳದಿರಲು ಏನು ಮಾಡಬೇಕು?

5 ಯಾವುದೇ ನಿರ್ಣಯಗಳನ್ನು ಮಾಡದಿರುವಲ್ಲಿಯೂ ನಮಗೆ ಗಂಡಾಂತರವಿದೆ. ನಿರ್ಣಯ ಮಾಡದ ಅಸ್ಥಿರ ಮನಸ್ಸಿನ ವ್ಯಕ್ತಿ “ತನ್ನ ಎಲ್ಲ ಮಾರ್ಗಗಳಲ್ಲಿ ಚಂಚಲನೂ ಆಗಿದ್ದಾನೆ” ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋ. 1:8) ಅಂಥವನು ಅಲ್ಲೋಲಕಲ್ಲೋಲವಾದ ಸಮುದ್ರದಲ್ಲಿರುವ ಚುಕ್ಕಾಣಿಯಿಲ್ಲದ ದೋಣಿಯಂತಿದ್ದಾನೆ. ಅವನು ಸದಾ ಬದಲಾಗುತ್ತಿರುವ ಮಾನವ ಅಭಿಪ್ರಾಯಗಳಿಂದ ಅತ್ತಿತ್ತ ಹೊಯ್ದಾಡುತ್ತಿರುತ್ತಾನೆ. ಇಂಥ ವ್ಯಕ್ತಿಯು ನಂಬಿಕೆಯ ಹಡಗೊಡೆತಕ್ಕೆ ಸುಲಭವಾಗಿ ಸಿಕ್ಕಿಕೊಳ್ಳುತ್ತಾನೆ. ಅನಂತರ ತನ್ನ ದುಃಖಕರ ಪರಿಸ್ಥಿತಿಗಾಗಿ ಇತರರನ್ನು ದೂರುತ್ತಾನೆ. (1 ತಿಮೊ. 1:19) ಈ ದುಸ್ಥಿತಿಗೆ ತಲಪದಿರಲು ನಾವೇನು ಮಾಡಬೇಕು? ನಾವು ‘ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡಬೇಕು.’ (ಕೊಲೊಸ್ಸೆ 2:6, 7 ಓದಿ.) ಸ್ಥಿರತೆಯನ್ನು ಹೊಂದಬೇಕಾದರೆ ದೇವರ ಪ್ರೇರಿತ ವಾಕ್ಯದಲ್ಲಿ ನಮಗಿರುವ ನಂಬಿಕೆಯನ್ನು ಪ್ರದರ್ಶಿಸುವಂಥ ನಿರ್ಣಯಗಳನ್ನು ಮಾಡಲು ನಾವು ಕಲಿಯಬೇಕು. (2 ತಿಮೊ. 3:14-17) ಹಾಗಾದರೆ ಒಳ್ಳೇ ನಿರ್ಣಯಗಳನ್ನು ಮಾಡಲು ಯಾವುದು ಅಡ್ಡಿಯಾಗಬಹುದು?

ನಿರ್ಣಯಗಳನ್ನು ಮಾಡಲು ಕಷ್ಟವಾಗುವುದೇಕೆ?

6. ಭಯವು ನಮ್ಮನ್ನು ಹೇಗೆ ಬಾಧಿಸಬಹುದು?

6 ಭಯ ಅದಕ್ಕೆ ಕಾರಣವಾಗಿರಬಹುದು. ಉದಾಹರಣೆಗೆ, ತಪ್ಪು ನಿರ್ಣಯ ಮಾಡಿಬಿಡುವೆವೊ, ವಿಫಲಗೊಳ್ಳುವೆವೊ ಎಂಬ ಭಯ ಅಥವಾ ಇತರರು ನಮ್ಮನ್ನು ದಡ್ಡರೆಂದೆಣಿಸಬಹುದೆಂಬ ಭಯ ನಮಗಿರಬಹುದು. ನಮಗೆ ಹೀಗನಿಸುವುದು ಸಹಜವೇ. ನಮ್ಮನ್ನು ತೊಂದರೆಗೆ ಸಿಲುಕಿಸುವ ಅಥವಾ ಅವಮಾನಕ್ಕೆ ಗುರಿಮಾಡುವಂಥ ತಪ್ಪು ನಿರ್ಣಯಗಳನ್ನು ನಾವ್ಯಾರೂ ಮಾಡಬಯಸುವುದಿಲ್ಲ. ಹಾಗಿದ್ದರೂ ದೇವರ ಮೇಲಿನ ಪ್ರೀತಿ ಹಾಗೂ ಆತನ ವಾಕ್ಯವು ಈ ಭಯವನ್ನು ತಗ್ಗಿಸಬಲ್ಲದು. ಅದು ಹೇಗೆ? ದೇವರ ಮೇಲಿನ ಪ್ರೀತಿ ನಾವು ಯಾವುದೇ ಪ್ರಾಮುಖ್ಯ ನಿರ್ಣಯಗಳನ್ನು ಮಾಡುವ ಮುಂಚೆ ದೇವರ ವಾಕ್ಯವನ್ನೂ ಬೈಬಲಾಧರಿತ ಪ್ರಕಾಶನಗಳನ್ನೂ ಪರಿಶೀಲಿಸುವಂತೆ ಪ್ರಚೋದಿಸುವುದು. ಆಗ ನಾವು ತಪ್ಪು ನಿರ್ಣಯ ಮಾಡುವ ಸಂಭವ ಕಡಿಮೆ. ಏಕೆ? ಏಕೆಂದರೆ ಬೈಬಲ್‌, “ಮೂಢರಿಗೆ [“ಅನನುಭವಿಗೆ,” NW] ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ” ಕೊಡುತ್ತದೆ.—ಜ್ಞಾನೋ. 1:4.

7. ರಾಜ ದಾವೀದನ ಉದಾಹರಣೆ ನಮಗೇನನ್ನು ಕಲಿಸುತ್ತದೆ?

7 ನಾವು ಮಾಡುವ ಎಲ್ಲ ನಿರ್ಣಯಗಳು ಸರಿಯಾಗಿರುತ್ತವೋ? ಇಲ್ಲ. ನಾವೆಲ್ಲರೂ ತಪ್ಪುಮಾಡುತ್ತೇವೆ. (ರೋಮ. 3:23) ರಾಜ ದಾವೀದನ ಉದಾಹರಣೆಯನ್ನು ಪರಿಗಣಿಸಿ. ಅವನು ವಿವೇಕಿಯೂ ನಂಬಿಗಸ್ತನೂ ಆಗಿದ್ದನು. ಹಾಗಿದ್ದರೂ ಕೆಲವೊಮ್ಮೆ ಅವನು ತಪ್ಪಾದ ನಿರ್ಣಯಗಳನ್ನು ಮಾಡಿದನು. ಇದರಿಂದ ಅವನೂ ಇತರರೂ ಕಷ್ಟತೊಂದರೆಗಳನ್ನು ಅನುಭವಿಸಿದರು. (2 ಸಮು. 12:9-12) ಆದರೂ ಅವನು ನಿರ್ಣಯಗಳನ್ನು ಮಾಡುವುದನ್ನು ನಿಲ್ಲಿಸಿಬಿಡಲಿಲ್ಲ. ದೇವರಿಗೆ ಮೆಚ್ಚಿಗೆಯಾಗುವಂಥ ನಿರ್ಣಯಗಳನ್ನು ಮುಂದೆಯೂ ಮಾಡಿದನು. (1 ಅರ. 15:4, 5) ದಾವೀದನಂತೆ ನಾವು ಸಹ ಯೆಹೋವನು ನಮ್ಮ ತಪ್ಪುಗಳನ್ನು ದೊಡ್ಡದು ಮಾಡುವುದಿಲ್ಲ ಮತ್ತು ಪಾಪಗಳನ್ನು ಕ್ಷಮಿಸುತ್ತಾನೆಂಬ ಸಂಗತಿಯನ್ನು ಮನಸ್ಸಿನಲ್ಲಿಡುವಲ್ಲಿ ನಾವು ಈ ಹಿಂದೆ ತಪ್ಪು ನಿರ್ಣಯಗಳನ್ನು ಮಾಡಿದ್ದರೂ ನಿರ್ಣಯಮಾಡುವುದನ್ನು ನಿಲ್ಲಿಸುವುದಿಲ್ಲ. ಯಾರು ಯೆಹೋವನನ್ನು ಪ್ರೀತಿಸಿ ಆತನಿಗೆ ವಿಧೇಯರಾಗುತ್ತಾರೋ ಅವರನ್ನು ಆತನು ಸದಾ ಬೆಂಬಲಿಸುವನು.—ಕೀರ್ತ. 51:1-4, 7-10.

8. ವಿವಾಹದ ಕುರಿತಾದ ಅಪೊಸ್ತಲ ಪೌಲನ ಹೇಳಿಕೆಯಿಂದ ನಾವೇನನ್ನು ಕಲಿಯುತ್ತೇವೆ?

8 ನಿರ್ಣಯಮಾಡುವಂಥ ವಿಷಯದಲ್ಲಿ ನಮಗಿರುವ ಕಳವಳವನ್ನು ನಾವು ಕಡಿಮೆಮಾಡಬಹುದು. ಹೇಗೆ? ಕೆಲವೊಮ್ಮೆ ಸರಿಯಾದ ಮಾರ್ಗಗಳು ಒಂದಕ್ಕಿಂತ ಹೆಚ್ಚಿರುತ್ತವೆ ಎಂಬದನ್ನು ಗ್ರಹಿಸುವ ಮೂಲಕವೇ. ಉದಾಹರಣೆಗೆ, ವಿವಾಹದ ವಿಷಯದಲ್ಲಿ ಅಪೊಸ್ತಲ ಪೌಲನು ಹೇಗೆ ತರ್ಕಿಸಿದನು ಎಂಬದನ್ನು ಗಮನಿಸಿ. “ಯಾವನಾದರೂ ತನ್ನ ಅವಿವಾಹಿತ ಸ್ಥಿತಿಯ ವಿಷಯದಲ್ಲಿ ತಾನು ಅಯೋಗ್ಯವಾಗಿ ವರ್ತಿಸುತ್ತಿದ್ದೇನೆಂದು ಭಾವಿಸುವುದಾದರೆ ಮತ್ತು ಅವನು ತನ್ನ ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿರುವುದಾದರೆ, ಅವನು ಮದುವೆಮಾಡಿಕೊಳ್ಳುವುದು ಅಗತ್ಯವೆಂದು ಅವನಿಗೆ ಕಂಡುಬಂದರೆ ಅವನು ತನ್ನಿಷ್ಟದಂತೆಯೇ ಮಾಡಲಿ; ಹಾಗೆ ಮಾಡಿದರೆ ಅವನು ಪಾಪಮಾಡುವುದಿಲ್ಲ. ಅಂಥವರು ಮದುವೆಮಾಡಿಕೊಳ್ಳಲಿ. ಆದರೆ ಯಾವನಾದರೂ ತನ್ನ ಅವಿವಾಹಿತ ಸ್ಥಿತಿಯನ್ನು ಕಾಪಾಡಿಕೊಳ್ಳಲು ಹೃದಯದಲ್ಲಿ ನಿರ್ಧರಿಸಿರುವಲ್ಲಿ ಮತ್ತು ಅವನು ಮದುವೆಮಾಡಿಕೊಳ್ಳಬೇಕೆಂಬ ಅನಿಸಿಕೆ ಇಲ್ಲದವನೂ ತನ್ನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಶಕ್ತನಾದವನೂ ಆಗಿದ್ದು ತನ್ನ ಹೃದಯದಲ್ಲಿ ಈ ನಿರ್ಧಾರವನ್ನು ಮಾಡಿಕೊಂಡಿರುವಲ್ಲಿ ಅವನು ಒಳ್ಳೇದನ್ನೇ ಮಾಡುವವನಾಗಿದ್ದಾನೆ” ಎಂದು ದೇವಪ್ರೇರಣೆಯಿಂದ ಅವನು ಬರೆದನು. (1 ಕೊರಿಂ. 7:36-38) ಅವಿವಾಹಿತರಾಗಿ ಉಳಿಯುವುದೇ ಉತ್ತಮ ಎಂಬುದಾಗಿ ಪೌಲನು ಶಿಫಾರಸ್ಸು ಮಾಡಿದನಾದರೂ ಕೇವಲ ಅದೊಂದೇ ಸರಿಯಾದ ಆಯ್ಕೆಯೆಂದು ಅವನು ಹೇಳಲಿಲ್ಲ.

9. ನಮ್ಮ ನಿರ್ಣಯಗಳನ್ನು ಇತರರು ಹೇಗೆ ವೀಕ್ಷಿಸುವರು ಎಂಬ ಬಗ್ಗೆ ನಾವು ಚಿಂತಿಸಬೇಕೋ? ವಿವರಿಸಿ.

9 ನಾವು ಮಾಡುವ ನಿರ್ಣಯಗಳನ್ನು ಇತರರು ಹೇಗೆ ವೀಕ್ಷಿಸುವರು ಎಂಬ ಬಗ್ಗೆ ನಾವು ಚಿಂತಿಸಬೇಕೋ? ಸ್ವಲ್ಪಮಟ್ಟಿಗೆ ಹೌದು. ಉದಾಹರಣೆಗೆ, ವಿಗ್ರಹಗಳಿಗೆ ನೈವೇದ್ಯ ಮಾಡಿರಬಹುದಾದ ಆಹಾರಪದಾರ್ಥವನ್ನು ತಿನ್ನುವ ವಿಷಯದಲ್ಲಿ ಪೌಲನು ಏನು ಹೇಳಿದನೆಂದು ಗಮನಿಸಿ. ಅದನ್ನು ತಿನ್ನಲು ನಿರ್ಣಯಿಸುವಲ್ಲಿ ಅದು ತಪ್ಪಾಗಲಾರದಾದರೂ ಆ ನಿರ್ಣಯ ದುರ್ಬಲ ಮನಸ್ಸಾಕ್ಷಿಯಿರುವವರ ಮೇಲೆ ವ್ಯತಿರಿಕ್ತ ಪರಿಣಾಮಬೀರಬಲ್ಲದು ಎಂದವನು ಒಪ್ಪಿಕೊಂಡನು. ಹಾಗಾದರೆ ಪೌಲನು ಯಾವ ನಿರ್ಣಯಕ್ಕೆ ಬಂದನು? “ಒಂದುವೇಳೆ ಆಹಾರಪದಾರ್ಥವು ನನ್ನ ಸಹೋದರನನ್ನು ಎಡವಿಸುವುದಾದರೆ ನಾನು ನನ್ನ ಸಹೋದರನನ್ನು ಎಡವಿಸದೇ ಇರಲಿಕ್ಕಾಗಿ ಪುನಃ ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ” ಎಂದು ಬರೆದನವನು. (1 ಕೊರಿಂ. 8:4-13) ನಾವು ಸಹ ನಮ್ಮ ನಿರ್ಣಯಗಳು ಇತರರ ಮನಸ್ಸಾಕ್ಷಿಯ ಮೇಲೆ ಯಾವ ಪ್ರಭಾವಬೀರುತ್ತವೆ ಎಂಬದನ್ನು ಪರಿಗಣಿಸಬೇಕು. ಆದರೂ ಯೆಹೋವನೊಂದಿಗಿನ ನಮ್ಮ ಸ್ನೇಹಸಂಬಂಧದ ಮೇಲೆ ಅವು ಯಾವ ಪರಿಣಾಮಬೀರುತ್ತವೆ ಎಂಬುದೇ ನಮ್ಮ ಮುಖ್ಯ ಚಿಂತೆಯಾಗಿರಬೇಕು. (ರೋಮನ್ನರಿಗೆ 14:1-4 ಓದಿ.) ದೇವರಿಗೆ ಮಹಿಮೆ ತರುವ ನಿರ್ಣಯಗಳನ್ನು ಮಾಡಲು ಯಾವ ಬೈಬಲ್‌ ಮೂಲತತ್ತ್ವಗಳು ನಮಗೆ ಸಹಾಯಮಾಡುತ್ತವೆ?

ಒಳ್ಳೇ ನಿರ್ಣಯ ಮಾಡಲು ಆರು ಹೆಜ್ಜೆಗಳು

10, 11. (ಎ) ಕುಟುಂಬವೃತ್ತದಲ್ಲಿ ದುರಹಂಕಾರದಿಂದ ವರ್ತಿಸುವುದನ್ನು ನಾವು ಹೇಗೆ ವರ್ಜಿಸಬಲ್ಲೆವು? (ಬಿ) ಹಿರಿಯರು ಸಭೆಯ ಪರವಾಗಿ ನಿರ್ಣಯಗಳನ್ನು ಮಾಡುವಾಗ ಏನನ್ನು ಮನಸ್ಸಿನಲ್ಲಿಡಬೇಕು?

10ದುರಹಂಕಾರಿಗಳಾಗಬೇಡಿ. ಯಾವುದೇ ನಿರ್ಣಯ ಮಾಡುವ ಮುಂಚೆ, ‘ಈ ನಿರ್ಣಯ ಮಾಡಲು ನನಗೆ ಅಧಿಕಾರವಿದೆಯೋ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. ರಾಜ ಸೊಲೊಮೋನನು ಬರೆದದ್ದು: “ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ; ದೀನರಲ್ಲಿ ಜ್ಞಾನ.”—ಜ್ಞಾನೋ. 11:2.

11 ಹೆತ್ತವರು ತಮ್ಮ ಮಕ್ಕಳಿಗೆ ಕೆಲವೊಂದು ನಿರ್ಣಯಗಳನ್ನು ಮಾಡಲು ಅವಕಾಶ ಕೊಟ್ಟಿರಬಹುದು. ಹಾಗೆಂದಮಾತ್ರಕ್ಕೆ ಮಕ್ಕಳು ತಮಗೆ ಆ ಅಧಿಕಾರವಿದೆ ಎಂದು ನೆನಸಬಾರದು. (ಕೊಲೊ. 3:20) ಹೆಂಡತಿಯರು ಹಾಗೂ ತಾಯಂದಿರಿಗೆ ಕುಟುಂಬದಲ್ಲಿ ಸ್ವಲ್ಪಮಟ್ಟಿಗಿನ ಅಧಿಕಾರವಿರುತ್ತದೆ. ಆದರೂ ತನ್ನ ಶಿರಸ್ಸು ಗಂಡನೆಂಬುದನ್ನು ಅವರು ಯಾವಾಗಲೂ ಮನಸ್ಸಿನಲ್ಲಿಡಬೇಕು. (ಜ್ಞಾನೋ. 1:8; 31:10-18; ಎಫೆ. 5:23) ಹಾಗೆಯೇ ಗಂಡಂದಿರು ಸಹ ತಮ್ಮ ಅಧಿಕಾರಕ್ಕೆ ಇತಿಮಿತಿಯಿದೆ ಹಾಗೂ ತಾವು ಕ್ರಿಸ್ತನಿಗೆ ಅಧೀನರಾಗಿರಬೇಕು ಎಂಬ ಸಂಗತಿಯನ್ನು ಮರೆಯಬಾರದು. (1 ಕೊರಿಂ. 11:3) ಹಿರಿಯರು ಸಭೆಯ ಪರವಾಗಿ ನಿರ್ಣಯಗಳನ್ನು ಮಾಡುತ್ತಾರೆ. ಹಾಗೆ ಮಾಡುವಾಗ ದೇವರ ವಾಕ್ಯದಲ್ಲಿ ‘ಬರೆದಿರುವ ಸಂಗತಿಗಳನ್ನು ಮೀರಿಹೋಗದಂತೆ’ ಅವರು ಜಾಗ್ರತೆವಹಿಸುತ್ತಾರೆ. (1 ಕೊರಿಂ. 4:6) ಅಲ್ಲದೆ, ನಂಬಿಗಸ್ತ ಆಳಿನಿಂದ ಪಡೆಯುವ ಮಾರ್ಗದರ್ಶನವನ್ನು ನಿಕಟವಾಗಿ ಪಾಲಿಸುತ್ತಾರೆ. (ಮತ್ತಾ. 24:45-47) ನಾವು ದೀನತೆಯಿಂದ ಕೇವಲ ನಮಗೆ ಅಧಿಕಾರವಿದ್ದಾಗ ಮಾತ್ರ ನಿರ್ಣಯಗಳನ್ನು ಮಾಡುವಲ್ಲಿ ನಮ್ಮ ಮೇಲೂ ಇತರರ ಮೇಲೂ ಹೆಚ್ಚು ಚಿಂತೆ ಮತ್ತು ವ್ಯಾಕುಲತೆಯನ್ನು ತರೆವು.

12. (ಎ) ನಾವೇಕೆ ಸಂಶೋಧನೆ ಮಾಡಬೇಕು? (ಬಿ) ಒಬ್ಬನು ಹೇಗೆ ಸಂಶೋಧನೆ ಮಾಡಬಹುದೆಂಬದನ್ನು ವಿವರಿಸಿ.

12ಸಂಶೋಧನೆ ಮಾಡಿ. “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ” ಎಂದು ಬರೆದನು ಸೊಲೊಮೋನನು. (ಜ್ಞಾನೋ. 21:5) ಉದಾಹರಣೆಗೆ, ನೀವು ಒಂದು ವ್ಯಾಪಾರವನ್ನು ಆರಂಭಿಸಲು ಯೋಚಿಸುತ್ತಿದ್ದೀರೋ? ಹಾಗಿದ್ದಲ್ಲಿ ನಿಮ್ಮ ಭಾವನೆಗಳು ನಿಮ್ಮ ಮೇಲೆ ಜಯಸಾಧಿಸುವಂತೆ ಬಿಡಬೇಡಿ. ಬದಲಾಗಿ ಅದಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಒಟ್ಟುಸೇರಿಸಿ. ಈ ವಿಷಯದ ಬಗ್ಗೆ ಹೆಚ್ಚು ತಿಳಿದಿರುವವರ ಬಳಿ ಸಲಹೆ ಕೇಳಿ. ಅನ್ವಯವಾಗುವ ನಿರ್ದಿಷ್ಟ ಬೈಬಲ್‌ ಮೂಲತತ್ತ್ವಗಳನ್ನು ಕಂಡುಕೊಳ್ಳಿ. (ಜ್ಞಾನೋ. 20:18) ನೀವು ಮಾಡಿರುವ ಸಂಶೋಧನೆಯನ್ನು ಕ್ರಮಬದ್ಧವಾಗಿ ಸಂಘಟಿಸಲು ಎರಡು ಪಟ್ಟಿಗಳನ್ನು ಮಾಡಿರಿ. ಒಂದರಲ್ಲಿ ಸವಾಲುಗಳನ್ನೂ ಇನ್ನೊಂದರಲ್ಲಿ ಪ್ರಯೋಜನಗಳನ್ನೂ ಬರೆಯಿರಿ. ಒಂದು ನಿರ್ಣಯಕ್ಕೆ ಬರುವ ಮುಂಚೆ ಖರ್ಚುವೆಚ್ಚಗಳನ್ನು ‘ಲೆಕ್ಕಮಾಡಿರಿ.’ (ಲೂಕ 14:28) ನಿಮ್ಮ ನಿರ್ಣಯ ನಿಮ್ಮ ಆರ್ಥಿಕ ಸ್ಥಿತಿಗತಿ ಮೇಲೆ ಮಾತ್ರವಲ್ಲ ನಿಮ್ಮ ಆಧ್ಯಾತ್ಮಿಕ ಸ್ಥಿತಿಗತಿಯ ಮೇಲೂ ಯಾವ ಪರಿಣಾಮಬೀರಬಹುದು ಎಂಬದನ್ನು ಪರಿಗಣಿಸಿ. ಸಂಶೋಧನೆ ಮಾಡಲು ಹೆಚ್ಚೆಚ್ಚು ಸಮಯ, ಪ್ರಯತ್ನ ಬೇಕಾಗುತ್ತದೆ ನಿಜ. ಹಾಗಿದ್ದರೂ ನೀವದನ್ನು ಮಾಡುವಲ್ಲಿ ದುಡುಕಿ ನಿರ್ಣಯಗಳನ್ನು ಮಾಡದಿರುವಿರಿ ಹಾಗೂ ಅನಾವಶ್ಯಕ ತೊಂದರೆಗಳಿಂದಲೂ ತಪ್ಪಿಸಿಕೊಳ್ಳುವಿರಿ.

13. (ಎ) ಯಾಕೋಬ 1:5ರಲ್ಲಿ ಯಾವ ಆಶ್ವಾಸನೆಯಿದೆ? (ಬಿ) ವಿವೇಕಕ್ಕಾಗಿ ಪ್ರಾರ್ಥಿಸುವುದು ನಮಗೆ ಹೇಗೆ ನೆರವಾಗುತ್ತದೆ?

13ವಿವೇಕಕ್ಕಾಗಿ ಪ್ರಾರ್ಥಿಸಿ. ನಾವು ದೇವರ ಸಹಾಯ ಕೇಳಿಕೊಳ್ಳುವಲ್ಲಿ ಮಾತ್ರ ಆತನಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಸಾಧ್ಯ. ಶಿಷ್ಯ ಯಾಕೋಬನು ಬರೆದದ್ದು: “ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಆಗ ಅದು ಅವನಿಗೆ ಕೊಡಲ್ಪಡುವುದು; ಏಕೆಂದರೆ ದೇವರು ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ ಕೊಡುವವನಾಗಿದ್ದಾನೆ.” (ಯಾಕೋ. 1:5) ನಿರ್ಣಯಗಳನ್ನು ಮಾಡಲು ನಮಗೆ ದೇವರ ವಿವೇಕ ಅತ್ಯಗತ್ಯ ಎಂಬದನ್ನು ಒಪ್ಪಿಕೊಳ್ಳಲು ನಾವು ನಾಚಿಕೆಪಡಬೇಕಾಗಿಲ್ಲ. (ಜ್ಞಾನೋ. 3:5, 6) ಏಕೆಂದರೆ ಸಂಪೂರ್ಣವಾಗಿ ನಮ್ಮ ಸ್ವಂತ ಬುದ್ಧಿಯ ಮೇಲೆ ಆತುಕೊಳ್ಳುವಲ್ಲಿ ಅದು ನಮ್ಮನ್ನು ಸುಲಭವಾಗಿ ತಪ್ಪುದಾರಿಗೆ ನಡೆಸಬಲ್ಲದು. ಆದರೆ ನಾವು ವಿವೇಕಕ್ಕಾಗಿ ಪ್ರಾರ್ಥಿಸಿ ದೇವರ ವಾಕ್ಯದಲ್ಲಿರುವ ಮೂಲತತ್ತ್ವಗಳನ್ನು ಹುಡುಕುವಲ್ಲಿ, ನಾವು ಯಾವ ಹೇತುವಿನೊಂದಿಗೆ ನಿರ್ದಿಷ್ಟ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ಗ್ರಹಿಸಲು ನಮಗೆ ಸಹಾಯಮಾಡುವಂತೆ ಪವಿತ್ರಾತ್ಮವನ್ನು ಅನುಮತಿಸುತ್ತಿದ್ದೇವೆ ಎಂದರ್ಥ.—ಇಬ್ರಿ. 4:12; ಯಾಕೋಬ 1:22-25 ಓದಿ.

14. ನಾವು ಸುಮ್ಮನೆ ವಿಳಂಬಿಸಬಾರದೇಕೆ?

14ನಿರ್ಣಯ ಮಾಡಿ. ಸಂಶೋಧನೆ ಮಾಡದೆ, ವಿವೇಕಕ್ಕಾಗಿ ಪ್ರಾರ್ಥಿಸದೆ ನೇರವಾಗಿ ಈ ಹೆಜ್ಜೆಗೆ ಧುಮುಕಬೇಡಿ. ವಿವೇಕಿಯು ‘ತನ್ನ ಹೆಜ್ಜೆಗಳನ್ನು ಗಮನಿಸಲು’ ಸಮಯ ತೆಗೆದುಕೊಳ್ಳುವನು. (ಜ್ಞಾನೋ. 14:15, NW) ಹಾಗಂತ ಸುಮ್ಮನೆ ವಿಳಂಬಿಸಬೇಡಿ. ಹಾಗೆ ಮಾಡುವವನು ಕ್ರಿಯೆಗೈಯದಿರಲು ಇಲ್ಲಸಲ್ಲದ ನೆವಗಳನ್ನು ಕೊಡುತ್ತಾನೆ. (ಜ್ಞಾನೋ. 22:13) ವಾಸ್ತವದಲ್ಲಿ ಅವನು ಯಾವುದೇ ನಿರ್ಣಯಮಾಡದೆ ವಿಳಂಬಿಸುತ್ತಿರುವುದಾದರೂ ಅವನೊಂದು ನಿರ್ಣಯಮಾಡಿದ್ದಾನೆಂದೇ ಹೇಳಬಹುದು. ಏಕೆಂದರೆ ಯಾವುದೇ ನಿರ್ಣಯಮಾಡದಿರುವ ಮೂಲಕ ಇತರರು ತನ್ನ ಜೀವನವನ್ನು ನಿಯಂತ್ರಿಸುವಂತೆ ಅವನು ಬಿಟ್ಟಿದ್ದಾನೆ.

15, 16. ಒಂದು ನಿರ್ಣಯವನ್ನು ಕಾರ್ಯಗತಗೊಳಿಸುವುದರಲ್ಲಿ ಏನು ಒಳಗೂಡಿದೆ?

15ನಿರ್ಣಯವನ್ನು ಕಾರ್ಯಗತಗೊಳಿಸಿ. ಮಾಡಿದ ನಿರ್ಣಯವನ್ನು ಹುರುಪಿನಿಂದ ಕಾರ್ಯಗತಗೊಳಿಸದಿರುವಲ್ಲಿ ಒಳ್ಳೇ ನಿರ್ಣಯ ತೆಗೆದುಕೊಳ್ಳಲು ನಾವು ಪಟ್ಟ ಶ್ರಮವೆಲ್ಲ ವ್ಯರ್ಥವಾಗುವುದು. ಸೊಲೊಮೋನನು ಬರೆದದ್ದು: “ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು.” (ಪ್ರಸಂ. 9:10) ನಾವು ಮಾಡಿದ ನಿರ್ಣಯವನ್ನು ಕಾರ್ಯಗತಗೊಳಿಸಲು ಅಗತ್ಯವಿರುವುದೆಲ್ಲವನ್ನು ಮಾಡಲು ನಾವು ಸಿದ್ಧರಿರುವಲ್ಲಿ ಮಾತ್ರ ಯಶಸ್ಸು ಸಾಧ್ಯ. ಉದಾಹರಣೆಗೆ, ಸಭೆಯಲ್ಲಿರುವ ಪ್ರಚಾರಕನೊಬ್ಬನು ಪಯನೀಯರ್‌ ಸೇವೆಮಾಡಲು ನಿರ್ಣಯಿಸಬಹುದು. ಅವನು ಸಫಲನಾಗುವನೋ? ಒಂದುವೇಳೆ ಉದ್ಯೋಗ ಮತ್ತು ವಿನೋದವಿಹಾರವು ತನ್ನ ಬಲವನ್ನೆಲ್ಲ ಉಡುಗಿಸದಂತೆ ಹಾಗೂ ಶುಶ್ರೂಷೆಗೆ ಕೊಡುವ ಸಮಯವನ್ನು ಕಸಿದುಕೊಳ್ಳದಂತೆ ನೋಡಿಕೊಳ್ಳುವಲ್ಲಿ ಅವನು ಸಫಲನಾಗುವನು.

16 ಉತ್ತಮವಾದ ನಿರ್ಣಯಗಳನ್ನು ಕಾರ್ಯಗತಗೊಳಿಸುವುದು ಯಾವಾಗಲೂ ಸುಲಭವಲ್ಲ. ಏಕೆ? ಏಕೆಂದರೆ “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾ. 5:19) ನಾವು “ಈ ಅಂಧಕಾರದ ಲೋಕಾಧಿಪತಿಗಳ ವಿರುದ್ಧವಾಗಿಯೂ ಸ್ವರ್ಗೀಯ ಸ್ಥಳಗಳಲ್ಲಿ ಇರುವ ದುಷ್ಟಾತ್ಮ ಸೇನೆಗಳ ವಿರುದ್ಧವಾಗಿಯೂ” ಹೋರಾಡಬೇಕಾಗಿದೆ. (ಎಫೆ. 6:12) ದೇವರಿಗೆ ಮಹಿಮೆ ತರುವ ನಿರ್ಣಯಗಳನ್ನು ಮಾಡುವವರೆಲ್ಲರಿಗೂ ಹೋರಾಟ ಇದ್ದೇ ಇರುತ್ತದೆಂದು ಅಪೊಸ್ತಲ ಪೌಲ ಹಾಗೂ ಶಿಷ್ಯ ಯೂದನು ತಿಳಿಸಿದನು.—1 ತಿಮೊ. 6:12; ಯೂದ 3.

17. ನಾವು ಮಾಡುವ ನಿರ್ಣಯಗಳ ವಿಷಯದಲ್ಲಿ ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?

17ನಿರ್ಣಯವನ್ನು ಮರುಪರಿಶೀಲಿಸಿ ಹಾಗೂ ಬೇಕಾದಲ್ಲಿ ಹೊಂದಾಣಿಕೆಗಳನ್ನು ಮಾಡಿ. ಎಲ್ಲಾ ನಿರ್ಣಯಗಳನ್ನು ನಾವು ಯೋಜಿಸಿದಂತೆ ಕಾರ್ಯಗತಗೊಳಿಸಲು ಆಗುವುದಿಲ್ಲ. ಏಕೆಂದರೆ “ಕಾಲವೂ ಪ್ರಾಪ್ತಿಯೂ [“ಮುಂಗಾಣದ ಘಟನೆಯೂ,” NW] ಯಾರಿಗೂ ತಪ್ಪಿದ್ದಲ್ಲ.” (ಪ್ರಸಂ. 9:11) ಆದರೆ ನಮಗೆ ತೊಂದರೆಗಳು ಬಂದರೂ ನಾವು ಮಾಡಿರುವ ಕೆಲವೊಂದು ನಿರ್ಣಯಗಳಿಗೆ ಅಂಟಿಕೊಂಡಿರಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡಿರುವಲ್ಲಿ ಅಥವಾ ವಿವಾಹದ ಪ್ರತಿಜ್ಞೆಯನ್ನು ಮಾಡಿರುವಲ್ಲಿ ಅವನು ತನ್ನ ಆ ನಿರ್ಣಯವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಅಂಥ ನಿರ್ಣಯಗಳಿಗೆ ತಕ್ಕಂತೆ ಜೀವಿಸಬೇಕೆಂದು ದೇವರು ಬಯಸುತ್ತಾನೆ. (ಕೀರ್ತನೆ 15:1, 2, 4 ಓದಿ.) ಕೆಲವು ನಿರ್ಣಯಗಳು ಅಷ್ಟೊಂದು ಪ್ರಾಮುಖ್ಯವಾಗಿರುವುದಿಲ್ಲ. ವಿವೇಕಿಯು ತಾನು ಮಾಡಿರುವ ನಿರ್ಣಯಗಳನ್ನು ಆಗಾಗ್ಗೆ ಪರಿಶೀಲಿಸುತ್ತಿರುವನು. ಹಾಗೂ ಅದಕ್ಕೆ ತಕ್ಕಂತೆ ಕೆಲವೊಂದು ಹೊಂದಾಣಿಕೆಗಳನ್ನು ಮಾಡುವನು, ಅಗತ್ಯಬೀಳುವಲ್ಲಿ ಅದನ್ನು ಪೂರ್ತಿ ಬದಲಾಯಿಸುವನು. ಹೀಗೆ ಮಾಡುವಾಗ ಗರ್ವ ಅಥವಾ ಹಠಮಾರಿತನ ಅಡ್ಡಬರುವಂತೆ ಬಿಡನು. (ಜ್ಞಾನೋ. 16:18) ಅವನ ಮುಖ್ಯ ಚಿಂತೆ ತನ್ನ ಜೀವನಕ್ರಮವು ಯೆಹೋವನನ್ನು ಮಹಿಮೆಪಡಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದೇ ಆಗಿರುತ್ತದೆ.

ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಲು ಇತರರನ್ನು ತರಬೇತುಗೊಳಿಸಿ

18. ಒಳ್ಳೇ ನಿರ್ಣಯಗಳನ್ನು ಮಾಡಲು ಹೆತ್ತವರು ಮಕ್ಕಳಿಗೆ ಹೇಗೆ ತರಬೇತಿಕೊಡಬಹುದು?

18 ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡುವಂತೆ ಮಕ್ಕಳಿಗೆ ಅನೇಕ ವಿಧಗಳಲ್ಲಿ ಹೆತ್ತವರು ಕಲಿಸಬಹುದು. ಅವರಿಡುವ ಒಳ್ಳೇ ಮಾದರಿ ಉತ್ತಮ ಬೋಧಕನಂತಿರುವುದು. (ಲೂಕ 6:40) ಕೆಲವೊಂದು ನಿರ್ಣಯಗಳನ್ನು ಮಾಡುವಾಗ ತಾವು ಯಾವೆಲ್ಲ ಹೆಜ್ಜೆಗಳನ್ನು ತೆಗೆದುಕೊಂಡೆವೆಂಬದನ್ನು ಸೂಕ್ತವಾಗಿರುವಾಗ ಹೆತ್ತವರು ಮಕ್ಕಳಿಗೆ ವಿವರಿಸಬಹುದು. ಅಲ್ಲದೆ, ಕೆಲವು ನಿರ್ಣಯಗಳನ್ನು ಮಾಡುವಂತೆ ಮಕ್ಕಳಿಗೆ ಅವಕಾಶಕೊಡಿ ಮತ್ತು ಅವರ ನಿರ್ಣಯ ಸರಿಯಾಗಿರುವಲ್ಲಿ ಅವರನ್ನು ಶ್ಲಾಘಿಸಿರಿ. ಒಂದುವೇಳೆ ಮಗು ತಪ್ಪಾದ ನಿರ್ಣಯ ಮಾಡುವಲ್ಲಿ ಆಗೇನು? ಹೆತ್ತವರು ಹೆಚ್ಚಾಗಿ ಅದರ ದುಷ್ಪರಿಣಾಮಗಳಿಂದ ಮಕ್ಕಳನ್ನು ಕಾಪಾಡಲು ಮುಂದಾಗುತ್ತಾರೆ. ಆದರೆ ಹೀಗೆ ಮಾಡುವುದು ಯಾವಾಗಲೂ ಒಳ್ಳೇದಲ್ಲ. ಉದಾಹರಣೆಗೆ, ನಿಮ್ಮ ಮಗ ರಾತ್ರಿ ಬಹಳ ಹೊತ್ತು ಟಿ.ವಿ ನೋಡಿ ತಡವಾಗಿ ಮಲಗುತ್ತಾನೆ ಎಂದಿಟ್ಟುಕೊಳ್ಳಿ. ಇದರಿಂದಾಗಿ ಮರುದಿನ ಬೆಳಿಗ್ಗೆ ತಡವಾಗಿ ಏಳುತ್ತಾನೆ ಹಾಗೂ ಶಾಲೆಗೆ ಹೋಗುವ ಬಸ್‌ ತಪ್ಪಿಹೋಗುತ್ತದೆ. ಅವನ ತಂದೆ ತನ್ನ ವಾಹನದಲ್ಲಿ ಅವನನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಡಬಹುದು. ಆದರೆ ತಂದೆಯು ಇನ್ನೊಂದು ಬಸ್ಸನ್ನು ಹಿಡಿದುಕೊಂಡು ಹೋಗುವಂತೆ ಮಗನಿಗೆ ಹೇಳುವಲ್ಲಿ ಅವನು ಶಾಲೆಗೆ ತಡವಾಗಿ ತಲಪುವುದಾದರೂ ತನ್ನ ಕ್ರಿಯೆಗೆ ತಾನೆಷ್ಟು ಜವಾಬ್ದಾರನೆಂಬದನ್ನು ಕಲಿಯುತ್ತಾನೆ.—ರೋಮ. 13:4.

19. ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ನಾವೇನನ್ನು ಕಲಿಸಬೇಕು? ನಾವದನ್ನು ಹೇಗೆ ಮಾಡಬಹುದು?

19 ಇತರರಿಗೆ ಕಲಿಸುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 28:20) ನಾವು ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸಬಹುದಾದ ಒಂದು ಪ್ರಾಮುಖ್ಯ ವಿಷಯ ಯಾವುದೆಂದರೆ ಒಳ್ಳೇ ನಿರ್ಣಯಗಳನ್ನು ಹೇಗೆ ಮಾಡುವುದೆಂಬದನ್ನು ತಿಳಿಸಿಕೊಡುವುದೇ. ಹಾಗಂತ ಯಾವ ಕ್ರಿಯೆ ಕೈಗೊಳ್ಳಬೇಕೆಂದು ನಾವೇ ಅವರಿಗೆ ಹೇಳಲು ಹೋಗಬಾರದು. ಬದಲಾಗಿ ಬೈಬಲ್‌ ಮೂಲತತ್ತ್ವಗಳಿಗನುಸಾರ ಯೋಚಿಸಲು ಅವರಿಗೆ ಕಲಿಸಬೇಕು. ಹೀಗೆ ಮಾಡುವಲ್ಲಿ ಯಾವ ಕ್ರಿಯೆ ಕೈಗೊಳ್ಳಬೇಕೆಂಬದನ್ನು ಅವರೇ ನಿರ್ಣಯಿಸುವರು. ಎಷ್ಟೆಂದರೂ ‘ನಮ್ಮಲ್ಲಿ ಪ್ರತಿಯೊಬ್ಬನು ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕ ಒಪ್ಪಿಸಬೇಕಲ್ಲವೇ.’ (ರೋಮ. 14:12) ಹಾಗಾದರೆ, ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಲು ನಮ್ಮೆಲ್ಲರಿಗೂ ಬಲವಾದ ಕಾರಣಗಳಿವೆ ಎಂಬುದು ಸ್ಪಷ್ಟ.

[ಪಾದಟಿಪ್ಪಣಿ]

^ ಪ್ಯಾರ. 4 ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದೇವರ ಪ್ರೀತಿ ಪುಸ್ತಕದ ಪುಟ 246-249ರಲ್ಲಿರುವ “ರಕ್ತದ ಚಿಕ್ಕ ಅಂಶಗಳು ಮತ್ತು ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳು” ಎಂಬ ಪರಿಶಿಷ್ಟವನ್ನು ಮತ್ತು 2006, ನವೆಂಬರ್‌ ತಿಂಗಳ ನಮ್ಮ ರಾಜ್ಯ ಸೇವೆ ಪುಟ 3-6ರ ಪುರವಣಿಯಲ್ಲಿ ಮೂಡಿಬಂದ “ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?” ಎಂಬ ಲೇಖನವನ್ನು ನೋಡಿ.

ನಿಮ್ಮ ಉತ್ತರವೇನು?

• ನಿರ್ಣಯಮಾಡುವುದು ಹೇಗೆಂದು ನಾವೇಕೆ ಕಲಿಯಬೇಕು?

• ಭಯ ನಮ್ಮನ್ನು ಹೇಗೆ ಬಾಧಿಸಬಹುದು? ನಾವದನ್ನು ಹೇಗೆ ಮೆಟ್ಟಿನಿಲ್ಲಬಹುದು?

• ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಲು ನಾವು ಯಾವ ಆರು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚೌಕ/ಚಿತ್ರ]

ಒಳ್ಳೇ ನಿರ್ಣಯಗಳನ್ನು ಮಾಡಲು ಹೆಜ್ಜೆಗಳು

1 ದುರಹಂಕಾರಿಗಳಾಗಬೇಡಿ

2 ಸಂಶೋಧನೆ ಮಾಡಿ

3 ವಿವೇಕಕ್ಕಾಗಿ ಪ್ರಾರ್ಥಿಸಿ

4 ನಿರ್ಣಯಮಾಡಿ

5 ನಿರ್ಣಯವನ್ನು ಕಾರ್ಯಗತಗೊಳಿಸಿ

6 ಮರುಪರಿಶೀಲಿಸಿ ಹೊಂದಾಣಿಕೆಗಳನ್ನು ಮಾಡಿ

[ಪುಟ 15ರಲ್ಲಿರುವ ಚಿತ್ರ]

ನಿರ್ಣಯಮಾಡದ ಅಸ್ಥಿರ ಮನಸ್ಸಿನ ವ್ಯಕ್ತಿ ಅಲ್ಲೋಲಕಲ್ಲೋಲವಾದ ಸಮುದ್ರದಲ್ಲಿರುವ ಚುಕ್ಕಾಣಿಯಿಲ್ಲದ ದೋಣಿಯಂತಿದ್ದಾನೆ