ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನಗೆ ಎಷ್ಟೋ ಒಳ್ಳೇ ವಿಷಯಗಳು ಸಿಕ್ಕಿದವು

ನನಗೆ ಎಷ್ಟೋ ಒಳ್ಳೇ ವಿಷಯಗಳು ಸಿಕ್ಕಿದವು

ನನಗೆ ಎಷ್ಟೋ ಒಳ್ಳೇ ವಿಷಯಗಳು ಸಿಕ್ಕಿದವು

ಆರ್ತರ್‌ ಬೋನೋರವರು ಹೇಳಿದಂತೆ

ಇಸವಿ 1951. ನಾನು ಮತ್ತು ನನ್ನ ಪತ್ನಿ ಈಡಿತ್‌ ಒಂದು ಜಿಲ್ಲಾ ಅಧಿವೇಶನಕ್ಕೆ ಹೋಗಿದ್ದೆವು. ಆಗ ಮಿಷನೆರಿ ಸೇವೆಮಾಡಲು ಬಯಸುವವರಿಗಾಗಿ ಒಂದು ಕೂಟ ಏರ್ಪಡಿಸಲಾಗಿದೆ ಎಂಬ ಪ್ರಕಟನೆ ಮಾಡಲಾಯಿತು.

“ಬಾ ನಾವೂ ಹೋಗೋಣ” ಎಂದು ಕೂಡಲೆ ನಾನು ಹೇಳಿದೆ.

ಅದಕ್ಕೆ “ಆರ್ಟ್‌, ನಾವು ಮಿಷನೆರಿಯಾಗಲು ಸಾಧ್ಯವಿಲ್ಲ” ಎಂದಳು ಈಡಿತ್‌.

“ಪರ್ವಾಗಿಲ್ಲ ಈಡೀ, ಸುಮ್ಮನೆ ಹೋಗಿ ಕೇಳಿಸಿಕೊಳ್ಳೋಣ ಬಾ” ಎಂದೆ ನಾನು.

ಆ ಕೂಟದ ಬಳಿಕ ಗಿಲ್ಯಡ್‌ ಶಾಲೆಯ ಅರ್ಜಿಗಳನ್ನು ಕೊಡಲಾಯಿತು.

ತಕ್ಷಣ ನಾನು, “ನಾವೂ ಅರ್ಜಿ ಹಾಕೋಣ” ಎಂದೆ.

“ಆದರೆ ನಮ್ಮ ಕುಟುಂಬಗಳನ್ನು ಬಿಟ್ಟು ಹೋಗುವುದು ಹೇಗೆ ಆರ್ಟ್‌?” ಎಂದಳು ಈಡೀ.

ಆ ಅಧಿವೇಶನವಾಗಿ ಒಂದೂವರೆ ವರ್ಷದ ಬಳಿಕ ನಾವು ಗಿಲ್ಯಡ್‌ ಶಾಲೆಗೆ ಹಾಜರಾದೆವು ಮತ್ತು ದಕ್ಷಿಣ ಅಮೆರಿಕದ ಎಕ್ವಡಾರ್‌ನಲ್ಲಿ ಮಿಷನೆರಿಗಳಾಗಿ ನೇಮಿಸಲ್ಪಟ್ಟೆವು.

ಆ ಅಧಿವೇಶನದಲ್ಲಿ ನನ್ನ ಮತ್ತು ಈಡಿತ್‌ ಮಧ್ಯೆ ನಡೆದ ಆ ಸಂಭಾಷಣೆಯಿಂದಲೇ ನಮ್ಮಿಬ್ಬರ ವ್ಯಕ್ತಿತ್ವದ ಬಗ್ಗೆ ನಿಮಗೆ ಸುಳಿವು ಸಿಕ್ಕಿರಬೇಕು. ಹಿಂದೆ ಮುಂದೆ ಆಲೋಚಿಸದೆ ಏನೇ ಆದರೂ ಒಂದು ಕೈ ನೋಡಿಯೇ ಬಿಡೋಣ ಅನ್ನುವ ಸ್ವಭಾವ ನನ್ನದು. ಆದರೆ ಈಡಿತ್‌ ಸಾಧು ಸ್ವಭಾವದವಳು, ಶಕ್ತಿಗೆ ಮೀರಿದ ವಿಷಯಕ್ಕೆ ಕೈಹಾಕಲು ಹೋಗದವಳು. ಅಮೆರಿಕದಲ್ಲಿರುವ ಪೆನ್ಸಿಲ್ವೇನಿಯದ ಇಲಿಸಬತ್‌ ಎಂಬ ಸಣ್ಣ ಊರಿನಲ್ಲಿ ಅವಳು ಬೆಳೆದದ್ದು. ಚಿಕ್ಕವಳಿದ್ದಾಗ ಅವಳು ಮನೆ ಬಿಟ್ಟು ತುಂಬ ದೂರ ಹೋದದ್ದೂ ಇಲ್ಲ, ಒಬ್ಬ ವಿದೇಶಿಗನನ್ನು ಭೇಟಿಮಾಡಿದ್ದೂ ಇಲ್ಲ. ಆದ್ದರಿಂದ ಅವಳಿಗೆ ಮನೆ ಬಿಟ್ಟು ಬರುವುದು ಕಷ್ಟವಾಯಿತು. ಆದರೂ ಬೇರೊಂದು ದೇಶಕ್ಕೆ ಹೋಗಿ ಸೇವೆಮಾಡುವ ನೇಮಕವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದಳು. 1954ರಲ್ಲಿ ನಾವು ಎಕ್ವಡಾರ್‌ಗೆ ಕಾಲಿಟ್ಟೆವು. ಅಂದಿನಿಂದ ಇಂದಿನ ತನಕ ನಾವು ಇಲ್ಲೇ ಮಿಷನೆರಿ ಸೇವೆ ಮಾಡುತ್ತಿದ್ದೇವೆ. ಈ ಎಲ್ಲಾ ವರ್ಷಗಳಲ್ಲಿ ನಮಗೆ ಅನೇಕ ಒಳ್ಳೇ ವಿಷಯಗಳು ಸಿಕ್ಕಿದವು. ಅವುಗಳಲ್ಲಿ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಸವಿನೆನಪುಗಳು

ನಮ್ಮನ್ನು ಮೊದಲು ಎಕ್ವಡಾರ್‌ನ ರಾಜಧಾನಿ ಕೀಟೋಗೆ ನೇಮಿಸಲಾಯಿತು. ಈ ನಗರ 9,000 ಅಡಿ ಎತ್ತರದಲ್ಲಿ ಆ್ಯಂಡಿಸ್‌ ಪರ್ವತದಲ್ಲಿದೆ. ಕರಾವಳಿ ಪ್ರದೇಶದಲ್ಲಿದ್ದ ಗಯಾಕ್ವಿಲ್‌ ನಗರದಿಂದ ಕೀಟೋಗೆ ತಲಪಲು ನಾವು ರೈಲಿನಲ್ಲಿ ಮತ್ತು ಟ್ರಕ್‌ನಲ್ಲಿ ಎರಡು ದಿನ ಪ್ರಯಾಣಿಸಬೇಕಾಯಿತು. ಈಗಲಂತೂ ವಿಮಾನದಲ್ಲಿ ಮೂವತ್ತೇ ನಿಮಿಷದಲ್ಲಿ ಅಲ್ಲಿಗೆ ತಲಪಬಹುದು. ನಾವು ಕೀಟೋವಿನಲ್ಲಿದ್ದ ನಾಲ್ಕು ವರ್ಷಗಳನ್ನು ಎಂದಿಗೂ ಮರೆಯಲಾರೆವು. ಅನಂತರ 1958ರಲ್ಲಿ ಮತ್ತೊಂದು ಒಳ್ಳೇ ವಿಷಯ ನಡೆಯಿತು: ನಮಗೆ ಸರ್ಕಿಟ್‌ ಕೆಲಸ ಮಾಡುವ ನೇಮಕ ಸಿಕ್ಕಿತು.

ಆಗ ಇಡೀ ದೇಶದಲ್ಲಿ ಎರಡೇ ಎರಡು ಸರ್ಕಿಟ್‌ಗಳಿದ್ದವು. ಆದಕಾರಣ ಸಭೆಗಳ ಸಂದರ್ಶನ ಮಾಡುವುದರೊಂದಿಗೆ ನಾವು ವರ್ಷದಲ್ಲಿ ಅನೇಕ ವಾರಗಳು ಸಾಕ್ಷಿಗಳೇ ಇಲ್ಲದ ಸಣ್ಣ ಪಟ್ಟಣಗಳಲ್ಲಿ ಸಾರುತ್ತಿದ್ದೆವು. ಇಲ್ಲಿ ಸಾಮಾನ್ಯವಾಗಿ ಕಿಟಕಿಗಳಿಲ್ಲದ ಸಣ್ಣ ಕೋಣೆಗಳು ಮಾತ್ರ ಉಳುಕೊಳ್ಳಲು ಸಿಗುತ್ತಿದ್ದವು. ಅದರಲ್ಲಿ ಒಂದು ಮಂಚ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ನಾವು ನಮ್ಮೊಂದಿಗೆ ಒಂದು ಮರದ ಪೆಟ್ಟಿಗೆಯನ್ನು ಕೊಂಡೊಯ್ಯುತ್ತಿದ್ದೆವು. ಅದರಲ್ಲಿ ಸೀಮೆಎಣ್ಣೆ ಸ್ಟವ್‌, ಕಡಾಯಿ, ತಟ್ಟೆಗಳು, ಬೋಗುಣಿ, ಹೊದಿಕೆಗಳು, ಸೊಳ್ಳೆ ಪರದೆ, ಬಟ್ಟೆಬರೆ, ಹಳೇ ನ್ಯೂಸ್‌ಪೇಪರ್‌ ಮತ್ತು ಇತರ ಕೆಲವು ವಸ್ತುಗಳು ಇದ್ದವು. ನಾವು ನ್ಯೂಸ್‌ಪೇಪರನ್ನು ಗೋಡೆಯಲ್ಲಿದ್ದ ತೂತುಗಳನ್ನು ಮುಚ್ಚಲು ಬಳಸುತ್ತಿದ್ದೆವು. ಇಲಿಗಳ ಕಾಟವನ್ನು ತಪ್ಪಿಸಲು. ಆದರೂ ಕೆಲವೊಮ್ಮೆ ಇಲಿಗಳು ಒಳಗೆ ನುಗ್ಗಿಬಿಡುತ್ತಿದ್ದವು.

ಸಾಕಷ್ಟು ಬೆಳಕಿಲ್ಲದೆ ಕತ್ತಲೆ ಕತ್ತಲೆ ಕಾಣುತ್ತಿದ್ದ ಆ ಕೋಣೆಗಳಲ್ಲಿ ನಾವು ಮಂಚದ ಮೇಲೆ ಕುಳಿತು ಮಾತಾಡುತ್ತಾ ಕಳೆದ ರಾತ್ರಿಯ ವೇಳೆ ಸವಿನೆನಪಾಗಿ ಉಳಿದಿದೆ. ನಮ್ಮ ಸೀಮೆಎಣ್ಣೆ ಸ್ಟವ್‌ನಲ್ಲಿ ಮಾಡಿದ ಒಂದು ಸಾದಾ ಊಟವನ್ನು ತಿನ್ನುವಾಗ ನಾವು ಮಾತಾಡುತ್ತಾ ಕುಳಿತಿರುತ್ತಿದ್ದೆವು. ನನ್ನ ದುಡುಕಿನ ಸ್ವಭಾವದಿಂದ ನಾನು ಅನೇಕವೇಳೆ ಯೋಚಿಸದೆ ಮಾತಾಡಿಬಿಡುತ್ತಿದ್ದೆ. ಆದರೆ ನಾವು ಸಹೋದರರನ್ನು ಭೇಟಿಮಾಡುವಾಗ ಹೇಗೆ ಇನ್ನು ಸ್ವಲ್ಪ ಜಾಣ್ಮೆಯಿಂದ ಮಾತಾಡಬಹುದು ಎಂದು ತಿಳಿಸಲು ಈಡೀ ಕೆಲವೊಮ್ಮೆ ರಾತ್ರಿಯ ಈ ಪ್ರಶಾಂತ ವೇಳೆಯನ್ನು ಆರಿಸಿಕೊಳ್ಳುತ್ತಿದ್ದಳು. ನಾನು ಅವಳ ಮಾತಿಗೆ ಕಿವಿಗೊಟ್ಟೆ. ಇದರಿಂದ ನನ್ನ ಭೇಟಿಗಳು ಸಭೆಗೆ ಇನ್ನಷ್ಟು ಪ್ರೋತ್ಸಾಹಕರವಾದವು. ಅಷ್ಟೇ ಅಲ್ಲ, ಕೆಲವೊಮ್ಮೆ ನಾನು ಯಾರನ್ನಾದರೂ ಟೀಕಿಸಿ ಮಾತಾಡಿದಲ್ಲಿ ಅವಳು ಆ ಸಂಭಾಷಣೆಯಲ್ಲಿ ತೊಡಗುತ್ತಿರಲಿಲ್ಲ. ಇದರಿಂದ ನಾನು ಸಹೋದರರಲ್ಲಿ ಒಳ್ಳೇ ವಿಷಯಗಳನ್ನು ನೋಡಲು ಕಲಿತೆ. ಹೆಚ್ಚಾಗಿ ನಾವು ರಾತ್ರಿವೇಳೆಯಲ್ಲಿ ಕಾವಲಿನಬುರುಜು ಪತ್ರಿಕೆಯಲ್ಲಿ ಓದಿದ ಲೇಖನಗಳ ಕುರಿತು ಮತ್ತು ಆ ದಿನ ಕ್ಷೇತ್ರ ಸೇವೆಯಲ್ಲಿ ಸಿಕ್ಕಿದ ಅನುಭವಗಳ ಕುರಿತು ಮಾತಾಡುತ್ತಿದ್ದೆವು. ನಮಗೆ ಸಿಕ್ಕಿದ ಅನುಭವಗಳು ನಮ್ಮನ್ನು ರೋಮಾಂಚನಗೊಳಿಸುತ್ತಿದ್ದವು.

ನಾವು ಕಾರ್ಲೋಸ್‌ನನ್ನು ಕಂಡುಹಿಡಿದ ವಿಧ

ಪಶ್ಚಿಮ ಎಕ್ವಡಾರ್‌ನ ಹೀಪೀಹಾಪ ಪಟ್ಟಣದಲ್ಲಿ ನಮಗೆ ಕಾರ್ಲೋಸ್‌ ಮೆಹೀಯ ಎಂಬ ಒಬ್ಬ ಆಸಕ್ತ ವ್ಯಕ್ತಿಯ ಹೆಸರು ಸಿಕ್ಕಿತು. ಆದರೆ ವಿಳಾಸ ಸಿಗಲಿಲ್ಲ. ಎಲ್ಲಿ ಎತ್ತ ಹುಡುಕುವುದು ಎಂದು ತಿಳಿಯದೇ ಒಂದು ದಿನ ಬೆಳಗ್ಗೆ ನಾವು ಬಾಡಿಗೆಗೆ ತೆಗೆದುಕೊಂಡಿದ್ದ ಕೋಣೆಯಿಂದ ಹೊರಟೆವು. ಯಾವುದೋ ದಾರಿಯನ್ನು ಹಿಡಿದು ನಡೆಯಲಾರಂಭಿಸಿದೆವು. ಹಿಂದಿನ ರಾತ್ರಿ ಬಿದ್ದ ಜೋರು ಮಳೆಯಿಂದ ಮಣ್ಣಿನ ರಸ್ತೆಯಲ್ಲಿದ್ದ ಕೆಸರಿನ ಗುಂಡಿಗಳಲ್ಲಿ ಸಿಕ್ಕಿಕೊಳ್ಳದಂತೆ ಜಾಗ್ರತೆವಹಿಸಿ ನಡೆಯಬೇಕಿತ್ತು. ನಾನು ಈಡೀಯ ಮುಂದೆ ನಡೆಯುತ್ತಿದ್ದಾಗ ಅವಳು ಒಮ್ಮೆಲೆ “ಆರ್ಟ್‌!” ಎಂದು ಕೂಗಿಕೊಂಡಳು. ತಿರುಗಿನೋಡಿದಾಗ ಅವಳು ಮೊಣಕಾಲಿನ ತನಕ ಕಪ್ಪು ಕೆಸರಿನಲ್ಲಿ ಹೂತುಹೋಗಿರುವುದನ್ನು ಕಂಡೆ. ಅವಳ ಅವಸ್ಥೆ ನೋಡಿ ನನಗೆ ತುಂಬ ನಗು ಬಂತು. ಆದರೆ ಅವಳ ಕಣ್ಣಲ್ಲಿ ನೀರನ್ನು ನೋಡಿ ನಗಾಡಲಿಲ್ಲ.

ನಾನು ಹೇಗೋ ಮಾಡಿ ಅವಳನ್ನು ಆ ಕೆಸರಿನಿಂದ ಹೊರಗೆಳೆದೆ, ಆದರೆ ಅವಳ ಶೂಸ್‌ ಅಲ್ಲೇ ಸಿಕ್ಕಿಕೊಂಡಿತು. ಪಕ್ಕದಲ್ಲೇ ಒಬ್ಬ ಹುಡುಗ ಮತ್ತು ಹುಡುಗಿ ನಮ್ಮನ್ನು ನೋಡುತ್ತಾ ನಿಂತಿದ್ದರು. “ನೀವು ಆ ಶೂಸನ್ನು ತೆಗೆದುಕೊಡುವಲ್ಲಿ ಹಣ ಕೊಡುತ್ತೇನೆ” ಎಂದು ನಾನು ಮಕ್ಕಳಿಗೆ ಹೇಳಿದೆ. ಮಕ್ಕಳು ಮಿಂಚಿನ ವೇಗದಲ್ಲಿ ಶೂಸನ್ನು ತೆಗೆದುಕೊಟ್ಟರು. ಆದರೆ ಈಡೀಗೆ ಕೆಸರನ್ನು ತೊಳಕೊಳ್ಳಬೇಕಿತ್ತು. ಇಲ್ಲಿ ನಡೆಯುತ್ತಿರುವುದನ್ನು ನೋಡುತ್ತಾ ನಿಂತಿದ್ದ ಆ ಮಕ್ಕಳ ತಾಯಿ ನಮ್ಮನ್ನು ಅವಳ ಮನೆಗೆ ಕರೆಸಿಕೊಂಡಳು. ಈಡೀಗೆ ಕಾಲು ತೊಳಕೊಳ್ಳಲು ಅವಳು ನೀರು ಕೊಟ್ಟಳು. ಮಕ್ಕಳು ಕೊಳೆಯಾಗಿದ್ದ ಶೂಸನ್ನು ತೊಳೆದರು. ನಾವು ಹೊರಡುವ ಮುನ್ನ ಒಂದು ಒಳ್ಳೇ ಕೆಲಸ ಮಾಡಿದೆವು. ‘ಕಾರ್ಲೋಸ್‌ ಮೆಹೀಯ ಅನ್ನೋರು ನಿಮಗೆ ಗೊತ್ತುಂಟಾ?’ ಎಂದು ನಾನು ಆ ಸ್ತ್ರೀಗೆ ಕೇಳಿದೆ. ಆಶ್ಚರ್ಯಚಕಿತಳಾದ ಅವಳು, “ಅವರು ನನ್ನ ಯಜಮಾನ್ರು” ಎಂದು ಹೇಳಿದಳು. ಸ್ವಲ್ಪದರಲ್ಲಿ ಅವರೊಂದಿಗೆ ಬೈಬಲ್‌ ಅಧ್ಯಯನ ಆರಂಭಿಸಿದೆವು. ಸಮಯಾನಂತರ ಈ ಕುಟುಂಬದ ಸದಸ್ಯರೆಲ್ಲರೂ ದೀಕ್ಷಾಸ್ನಾನ ಪಡೆದುಕೊಂಡರು. ಕೆಲವು ವರ್ಷಗಳ ಬಳಿಕ ಕಾರ್ಲೋಸ್‌, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ವಿಶೇಷ ಪಯನೀಯರರಾದರು.

ಕಷ್ಟಕರ ಪ್ರಯಾಣ—ಖುಷಿ ತಂದ ಅತಿಥಿಸತ್ಕಾರ

ಸರ್ಕಿಟ್‌ ಕೆಲಸದ ಭಾಗವಾಗಿ ಸಭೆಗಳನ್ನು ಸಂದರ್ಶಿಸಲು ಪ್ರಯಾಣಿಸುವುದು ಕಷ್ಟಕರವಾಗಿತ್ತು. ನಾವು ಬಸ್ಸುಗಳಲ್ಲಿ, ರೈಲುಗಳಲ್ಲಿ, ಟ್ರಕ್‌ಗಳಲ್ಲಿ, ದೋಣಿಗಳಲ್ಲಿ ಮತ್ತು ಸಣ್ಣ ವಿಮಾನಗಳಲ್ಲಿ ಪ್ರಯಾಣಿಸಿದೆವು. ಒಂದು ಸಂದರ್ಭದಲ್ಲಿ ಜಿಲ್ಲಾ ಮೇಲ್ವಿಚಾರಕರಾಗಿದ್ದ ಜಾನ್‌ ಮಕ್ಲೆನಕನ್‌ ಮತ್ತು ಅವರ ಪತ್ನಿ ಡಾರತೀ ಕೊಲಂಬಿಯದ ಗಡಿಪ್ರದೇಶದಲ್ಲಿದ್ದ ಮೀನುಗಾರರ ಹಳ್ಳಿಗಳಿಗೆ ಹೋಗಿ ಸಾರಲು ನಮ್ಮೊಂದಿಗೆ ಬಂದರು. ಮೋಟಾರು ಚಾಲಿತ ದೋಣಿಯೊಂದರಲ್ಲಿ ನಾವು ಹೋದೆವು. ಆ ದೋಣಿಯಷ್ಟೇ ದೊಡ್ಡದಾದ ಶಾರ್ಕ್‌ ಮೀನುಗಳು ನಮ್ಮ ಅಕ್ಕಪಕ್ಕದಲ್ಲೇ ಸುಳಿದಾಡುತ್ತಿದ್ದವು. ನಮ್ಮೊಂದಿಗಿದ್ದ ಅನುಭವೀ ನಾವಿಕನಿಗೇ ಅವುಗಳನ್ನು ನೋಡಿ ಗಾಬರಿಯಾಯಿತು. ತಕ್ಷಣ ಅವನು ದೋಣಿಯನ್ನು ತೀರದ ಹತ್ತಿರಕ್ಕೆ ತಂದನು.

ಸರ್ಕಿಟ್‌ ಕೆಲಸದಲ್ಲಿ ನಾವು ಈ ಎಲ್ಲ ಕಷ್ಟಗಳನ್ನು ಎದುರಿಸಿದ್ದು ತುಂಬ ಸಾರ್ಥಕವಾಗಿತ್ತು. ಏಕೆಂದರೆ ನಮಗೆ ಅತ್ಯುತ್ತಮ ಸಹೋದರರ ಪರಿಚಯವಾಯಿತು. ಅವರು ಅತಿಥಿಸತ್ಕಾರಕ್ಕೆ ಹೆಸರುವಾಸಿ. ನಾವು ಯಾರೊಂದಿಗೆ ಉಳಿಯುತ್ತಿದ್ದೆವೋ ಆ ಕುಟುಂಬದವರು ದಿನಕ್ಕೆ ಒಂದೇ ಹೊತ್ತು ಊಟ ಮಾಡಿದರೂ ನಾವು ಮೂರು ಹೊತ್ತೂ ಊಟ ಮಾಡುವಂತೆ ಒತ್ತಾಯಿಸುತ್ತಿದ್ದರು. ಮನೆಯಲ್ಲಿದ್ದ ಒಂದೇ ಮಂಚವನ್ನು ನಮಗೆ ಮಲಗಲು ಕೊಟ್ಟು ಅವರು ನೆಲದ ಮೇಲೆ ಮಲಗುತ್ತಿದ್ದರು. “ಜೀವನ ನಡಿಸ್ಲಿಕ್ಕೆ ನಮಗೆ ಕೆಲವೇ ವಸ್ತುಗಳು ಸಾಕೆಂದು ನಾನು ಈ ಪ್ರಿಯ ಸಹೋದರ ಸಹೋದರಿಯರಿಂದ ಕಲಿತೆ” ಎಂದು ನನ್ನ ಪತ್ನಿ ಆಗಾಗ್ಗೆ ಹೇಳುತ್ತಿದ್ದಳು.

“ನಾವು ಬಿಟ್ಟುಕೊಡಲು ಬಯಸುವುದಿಲ್ಲ”

ಇಸವಿ 1960ರಲ್ಲಿ ಮತ್ತೊಂದು ಒಳ್ಳೇ ವಿಷಯ ನಡೆಯಿತು. ಗಯಾಕ್ವಿಲ್‌ನಲ್ಲಿದ್ದ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆಮಾಡುವಂತೆ ನಮ್ಮನ್ನು ಆಮಂತ್ರಿಸಲಾಯಿತು. ನಾನು ಆಫೀಸ್‌ ಕೆಲಸ ಮಾಡಿದಾಗ ಈಡಿತ್‌ ಬ್ರಾಂಚ್‌ನ ಹತ್ತಿರದಲ್ಲಿದ್ದ ಒಂದು ಸಭೆಯೊಂದಿಗೆ ಸೇರಿ ಸೇವೆಗೆ ಹೋಗುತ್ತಿದ್ದಳು. ನಾನು ಆಫೀಸ್‌ ಕೆಲಸ ಮಾಡಲು ಸಮರ್ಥನೆಂದು ನನಗೆಂದೂ ಅನಿಸಿರಲಿಲ್ಲ. ಆದರೆ ಇಬ್ರಿಯ 13:21 ಹೇಳುವಂತೆ, ದೇವರು “ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ಸಕಲ ಒಳ್ಳೇ ವಿಷಯಗಳಿಂದ” ನಮ್ಮನ್ನು ಸಜ್ಜುಗೊಳಿಸುತ್ತಾನೆ. ಎರಡು ವರ್ಷಗಳ ನಂತರ ಹತ್ತು ತಿಂಗಳುಗಳ ಗಿಲ್ಯಡ್‌ ಕೋರ್ಸಿಗೆ ಹಾಜರಾಗುವಂತೆ ನನ್ನನ್ನು ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಬೆತೆಲ್‌ಗೆ ಕರೆಯಲಾಯಿತು. ಆಗೆಲ್ಲಾ ನಮ್ಮ ಪತ್ನಿಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಹಾಗೆ ಇರಲಿಲ್ಲ. ನನ್ನ ಪತ್ನಿಯನ್ನು ಉದ್ದೇಶಿಸಿ ಬ್ರೂಕ್ಲಿನ್‌ನಿಂದ ಒಂದು ಪತ್ರ ಬಂತು. ಹತ್ತು ತಿಂಗಳು ತನ್ನ ಗಂಡನನ್ನು ಬಿಟ್ಟಿರಲು ತನ್ನಿಂದ ಸಾಧ್ಯವಾಗುವುದೋ ಎಂಬುದನ್ನು ಗಂಭೀರವಾಗಿ ಪರಿಗಣಿಸುವಂತೆ ಅದರಲ್ಲಿ ಹೇಳಲಾಗಿತ್ತು.

ಅದಕ್ಕೆ ಉತ್ತರವಾಗಿ ಈಡಿತ್‌ ಬರೆದದ್ದು: “ಅವರನ್ನು ಬಿಟ್ಟಿರುವುದು ಕಷ್ಟಾನೇ. ಆದರೆ ನಮಗೆ ಎದುರಾಗುವ ಯಾವುದೇ ಕಷ್ಟವನ್ನು ನಿಭಾಯಿಸಲು ಯೆಹೋವನು ಸಹಾಯಮಾಡುವನು ಎಂಬ ದೃಢವಿಶ್ವಾಸ ನಮಗಿದೆ. . . . ನಮಗೆ ಸಿಗುವ ಯಾವುದೇ ಸುಯೋಗವನ್ನು ಅಥವಾ ನಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಲು ಸಿಗುವ ಯಾವುದೇ ಅವಕಾಶವನ್ನು ನಾವು ಬಿಟ್ಟುಕೊಡಲು ಬಯಸುವುದಿಲ್ಲ.” ನಾನು ಬ್ರೂಕ್ಲಿನ್‌ನಲ್ಲಿದ್ದಾಗ ಈಡಿತ್‌ ನನಗೆ ವಾರಕ್ಕೊಂದು ಪತ್ರ ಬರೆಯುತ್ತಿದ್ದಳು.

ನಂಬಿಗಸ್ತ ಜೊತೆ ವಿಶ್ವಾಸಿಗಳೊಂದಿಗೆ ಸೇವೆ

ಇಸವಿ 1966ರಲ್ಲಿ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿದ್ದರಿಂದ ನಾವು ಕೀಟೋಗೆ ಹಿಂದಿರುಗಿ ಸ್ಥಳೀಕ ಸಹೋದರ ಸಹೋದರಿಯರೊಂದಿಗೆ ಸೇರಿ ಮಿಷನೆರಿ ಸೇವೆಯನ್ನು ಮುಂದುವರಿಸಿದೆವು. ಸಮಗ್ರತೆ ಕಾಪಾಡಿಕೊಳ್ಳುವುದರಲ್ಲಿ ಆ ಸಹೋದರ ಸಹೋದರಿಯರು ಉತ್ತಮ ಮಾದರಿಯನ್ನಿಟ್ಟರು.

ಒಬ್ಬ ನಂಬಿಗಸ್ತ ಸಹೋದರಿಯ ಅವಿಶ್ವಾಸಿ ಗಂಡನು ಆಕೆಯನ್ನು ಹಲವಾರು ಬಾರಿ ಹೊಡೆದುಬಿಡುತ್ತಿದ್ದನು. ಒಂದು ದಿನ ಬೆಳಗ್ಗೆ ಆರು ಗಂಟೆಗೆ ಅವನು ಆಕೆಯನ್ನು ಪುನಃ ಹೊಡೆದುಬಿಟ್ಟಿದ್ದಾನೆ ಎಂಬ ಸುದ್ದಿ ನಮಗೆ ಸಿಕ್ಕಿತು. ನಾನು ಕೂಡಲೆ ಆ ಸಹೋದರಿಯ ಮನೆಗೆ ಧಾವಿಸಿದೆ. ಆಕೆಯ ಪರಿಸ್ಥಿತಿಯನ್ನು ನೋಡಿ ಬೆಚ್ಚಿಬಿದ್ದೆ. ಆಕೆಯ ಮೈಮೇಲೆಲ್ಲಾ ಬಾಸುಂಡೆಗಳು ಮತ್ತು ಗಾಯಗಳಾಗಿ ಮಂಚದ ಮೇಲೆ ಮಲಗಿದ್ದಳು. ಆಕೆಯ ಗಂಡ ಆಕೆಯನ್ನು ಪೊರಕೆಯ ಹಿಡಿಯಲ್ಲಿ ಹೊಡೆದಿದ್ದನು. ಅದು ಎರಡು ತುಂಡಾಗುವ ತನಕ ಹೊಡೆದಿದ್ದನು. ಸ್ವಲ್ಪ ಹೊತ್ತಿನ ನಂತರ ಅವನು ಮನೆಗೆ ಬಂದಾಗ ಅವನೆಂಥ ಹೇಡಿ ಕೆಲಸ ಮಾಡಿದ್ದ ಎಂದು ನಾನು ತಿಳಿಸಿದೆ. ಅವನು ತನ್ನನ್ನು ಕ್ಷಮಿಸಿಬಿಡುವಂತೆ ತುಂಬ ಬೇಡಿಕೊಂಡ.

1970-71ರಲ್ಲಿ ನನ್ನ ಆರೋಗ್ಯ ಸ್ವಲ್ಪ ಸುಧಾರಿಸಿತು. ನಮ್ಮಿಂದ ಪುನಃ ಸರ್ಕಿಟ್‌ ಕೆಲಸದಲ್ಲಿ ತೊಡಗಲು ಸಾಧ್ಯವಾಯಿತು. ಈಬಾರಾ ನಗರವು ನಮ್ಮ ಸರ್ಕಿಟ್‌ನ ಭಾಗವಾಗಿತ್ತು. 1958-59ರಲ್ಲಿ ನಾವು ಆ ನಗರಕ್ಕೆ ಭೇಟಿಕೊಟ್ಟಾಗ ಅಲ್ಲಿ ಇಬ್ಬರು ಸಾಕ್ಷಿಗಳು ಮಾತ್ರ ಇದ್ದರು. ಒಬ್ಬರು ಮಿಷನೆರಿ, ಇನ್ನೊಬ್ಬರು ಸ್ಥಳೀಕ ಸಹೋದರ. ಈಗ ಸಭೆಯ ಭಾಗವಾಗಿರುವ ಅನೇಕ ಮಂದಿ ಹೊಸಬರನ್ನು ಭೇಟಿಮಾಡಲು ನಾವು ಕಾತರರಾಗಿದ್ದೆವು.

ಅಲ್ಲಿ ನಡೆದ ಮೊದಲನೇ ಕೂಟದಲ್ಲಿ ಸಹೋದರ ರೋಡ್ರೀಗೋ ವಾಕಾ ವೇದಿಕೆ ಮೇಲೆ ನಿಂತು ಸಭಿಕರ ಚರ್ಚೆಯಿದ್ದ ಒಂದು ಭಾಗವನ್ನು ನಿರ್ವಹಿಸಿದರು. ಅವರೊಂದು ಪ್ರಶ್ನೆ ಕೇಳಿದ ಕೂಡಲೆ ಹಾಜರಿದ್ದವರು ಕೈ ಎತ್ತುವ ಬದಲು “ಯೋ, ಯೋ!” (ನಾನು, ನಾನು) ಎನ್ನುತ್ತಿದ್ದರು. ನನಗೂ ಈಡಿತ್‌ಗೂ ಇದನ್ನು ನಂಬಲಿಕ್ಕೇ ಆಗಲಿಲ್ಲ. ‘ಏನಪ್ಪಾ ನಡೀತಿದೆ’ ಎಂದು ನಾನು ಯೋಚಿಸಿದೆ. ಆಮೇಲೆ ನಮಗೆ ವಿಷಯ ಗೊತ್ತಾಯಿತು. ಸಹೋದರ ವಾಕಾರವರಿಗೆ ಕಣ್ಣು ಕಾಣುವುದಿಲ್ಲ. ಆದರೆ ಸಭೆಯ ಸದಸ್ಯರು “ಯೋ, ಯೋ!” ಎಂದು ಕೂಗಿಕೊಂಡಾಗ ಅವರ ಸ್ವರವನ್ನು ಗುರುತಿಸುತ್ತಿದ್ದರು. ತನ್ನ ಕುರಿಗಳ ಒಳ್ಳೇ ಪರಿಚಯವಿದ್ದ ಕುರುಬನಂತೆ ಅವರಿದ್ದರು! ಇದರಿಂದ ಯೋಹಾನ 10:3, 4, 14ರಲ್ಲಿ ಒಳ್ಳೆಯ ಕುರುಬ ಮತ್ತು ಅವನ ಕುರಿಗಳ ಮಧ್ಯೆ ಇದ್ದ ಒಳ್ಳೇ ಪರಿಚಯದ ಕುರಿತು ಯೇಸು ಹೇಳಿದ ಮಾತು ನೆನಪಿಗೆ ಬಂತು. ಇಂದು ಇಬಾರಾದಲ್ಲಿ ಸ್ಪ್ಯಾನಿಷ್‌ ಭಾಷೆಯಲ್ಲಿ ಆರು ಸಭೆಗಳು, ಕೆಚೂವಾ ಮತ್ತು ಸನ್ನೆ ಭಾಷೆಯಲ್ಲಿ ಒಂದೊಂದು ಸಭೆಗಳು ಇವೆ. ಸಹೋದರ ವಾಕಾ ಒಬ್ಬ ಹಿರಿಯರಾಗಿ ಮತ್ತು ವಿಶೇಷ ಪಯನೀಯರರಾಗಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿದ್ದಾರೆ. *

ಯೆಹೋವನ ಒಳ್ಳೇತನಕ್ಕಾಗಿ ಆಭಾರಿ

ಇಸವಿ 1974ರಲ್ಲಿ ನಾವು ಯೆಹೋವನ ಒಳ್ಳೇತನವನ್ನು ಪುನಃ ಸವಿಯುವಂತಾಯಿತು. ನಮ್ಮನ್ನು ಪುನಃ ಬೆತೆಲಿಗೆ ಆಮಂತ್ರಿಸಲಾಯಿತು. ನನಗೆ ಪುನಃ ಆಫೀಸ್‌ ಕೆಲಸ ಕೊಡಲಾಯಿತು, ನಂತರ ಬ್ರಾಂಚ್‌ ಕಮಿಟಿ ಸದಸ್ಯನನ್ನಾಗಿ ನೇಮಿಸಲಾಯಿತು. ಈಡಿತ್‌ ಮೊದಲು ಕಿಚನ್‌ನಲ್ಲಿ ಕೆಲಸಮಾಡಿದಳು. ಅನಂತರ ಆಫೀಸ್‌ನಲ್ಲಿ ಪತ್ರವ್ಯವಹಾರವನ್ನು ನೋಡಿಕೊಳ್ಳಲು ಆರಂಭಿಸಿದಳು. ಇಂದಿನ ತನಕ ಅದೇ ಕೆಲಸವನ್ನು ಮಾಡುತ್ತಾಳೆ.

ಈ ಎಲ್ಲಾ ವರ್ಷಗಳಲ್ಲಿ ಗಿಲ್ಯಡ್‌ ತರಬೇತಿ ಪಡೆದ ನೂರಾರು ಮಿಷನೆರಿಗಳನ್ನು ಬರಮಾಡಿಕೊಳ್ಳುವ ಸಂತೋಷ ನಮ್ಮದಾಯಿತು. ಈ ಮಿಷನೆರಿಗಳು ತಾವು ನೇಮಿಸಲ್ಪಡುವ ಸಭೆಗಳಲ್ಲಿ ಸಭಾ ಸದಸ್ಯರ ಪ್ರೌಢತೆ ಮತ್ತು ಹುರುಪನ್ನು ಹೆಚ್ಚಿಸಲು ಸಹಾಯಮಾಡುತ್ತಾರೆ. ಈ ದೇಶದಲ್ಲಿ ಸೇವೆಮಾಡಲೆಂದು 30ಕ್ಕಿಂತಲೂ ಹೆಚ್ಚು ದೇಶಗಳಿಂದ ಸಾವಿರಾರು ಮಂದಿ ಸಹೋದರ ಸಹೋದರಿಯರು ಬಂದಿದ್ದಾರೆ. ಅವರಿಂದಲೂ ನಾವು ಪ್ರೋತ್ಸಾಹ ಪಡೆಯುತ್ತೇವೆ. ಅವರು ತೋರಿಸುವ ಸ್ವತ್ಯಾಗ ಮನೋಭಾವ ನಮ್ಮನ್ನು ಹುರಿದುಂಬಿಸುತ್ತದೆ. ಅವರಲ್ಲಿ ಕೆಲವರು ತಮ್ಮ ಮನೆಗಳನ್ನು ಮಾರಿ, ವ್ಯಾಪಾರಗಳನ್ನು ಬಿಟ್ಟು ಹೆಚ್ಚಿನ ರಾಜ್ಯ ಪ್ರಚಾರಕರ ಅಗತ್ಯವಿರುವ ಈ ದೇಶದಲ್ಲಿ ಬಂದು ಸೇವೆಮಾಡುತ್ತಿದ್ದಾರೆ. ಅವರು ದೂರದಲ್ಲಿರುವ ಪ್ರದೇಶಗಳನ್ನು ತಲಪಲು ವಾಹನಗಳನ್ನು ಖರೀದಿಸಿದ್ದಾರೆ, ಹೊಸ ಸಭೆಗಳನ್ನು ಸ್ಥಾಪಿಸಿದ್ದಾರೆ, ರಾಜ್ಯ ಸಭಾಗೃಹಗಳನ್ನು ಕಟ್ಟಲು ಸಹಾಯಮಾಡಿದ್ದಾರೆ. ಎಷ್ಟೋ ಮಂದಿ ಅವಿವಾಹಿತ ಸಹೋದರಿಯರು ಪಯನೀಯರ್‌ ಸೇವೆಮಾಡಲು ಬೇರೆ ದೇಶಗಳಿಂದ ಬಂದಿದ್ದಾರೆ. ಅವರಲ್ಲಿ ಅದೆಷ್ಟು ಹುರುಪು ಮತ್ತು ಸಾಮರ್ಥ್ಯ ಇದೆ ಗೊತ್ತೇ!

ನಿಜಕ್ಕೂ ನನಗೆ ದೇವರ ಸೇವೆಯಲ್ಲಿ ಎಷ್ಟೋ ಒಳ್ಳೇ ವಿಷಯಗಳು ಸಿಕ್ಕಿದವು. ಇದರಲ್ಲಿ ಯೆಹೋವನೊಂದಿಗಿನ ನನ್ನ ಸಂಬಂಧ ಅತಿ ಪ್ರಮುಖವಾದದ್ದು. ಯೆಹೋವನು ನನಗೆ ಕೊಟ್ಟ ‘ಸಹಕಾರಿಣಿಗಾಗಿಯೂ’ ನಾನು ಆಭಾರಿ. (ಆದಿ. 2:18) ನಾವಿಬ್ಬರೂ ಗಂಡ ಹೆಂಡತಿಯಾಗಿ ನಡೆಸಿದ 69 ವರ್ಷಗಳ ಜೀವನವನ್ನು ತಿರುಗಿ ನೋಡುವಾಗ ನನಗೆ ಜ್ಞಾನೋಕ್ತಿ 18:22 ಮನಸ್ಸಿಗೆ ಬರುತ್ತದೆ. ‘ಒಳ್ಳೇ ಪತ್ನಿಯನ್ನು ಕಂಡುಕೊಂಡವನು ಒಳ್ಳೆಯದನ್ನು ಕಂಡುಕೊಂಡಿದ್ದಾನೆ’ (NW) ಎಂದಲ್ಲಿ ಹೇಳಲಾಗಿದೆ. ಈಡಿತ್‌ನೊಂದಿಗೆ ಎಂಥ ಸುಮಧುರ ಜೀವನವನ್ನು ನಡೆಸಿದ್ದೇನೆ! ಅವಳು ನನಗೆ ಎಷ್ಟೋ ವಿಧಗಳಲ್ಲಿ ಸಹಾಯಮಾಡಿದ್ದಾಳೆ. ತನ್ನ ತಾಯಿಗೆ ಒಬ್ಬ ಪ್ರೀತಿಯ ಮಗಳಾಗಿಯೂ ಇದ್ದಳು. ನಾವು ಎಕ್ವಡಾರ್‌ಗೆ ಬಂದ ಸಮಯದಿಂದ 1990ರಲ್ಲಿ ಅವಳ ತಾಯಿ ತೀರಿಕೊಳ್ಳುವ ತನಕ ಪ್ರತಿ ವಾರ ಅವಳು ಅವರಿಗೆ ಪತ್ರ ಬರೆಯುತ್ತಿದ್ದಳು. ಅವರು ತೀರಿಕೊಂಡಾಗ ಅವರಿಗೆ 97 ವರ್ಷ.

ನನಗೀಗ 90 ವರ್ಷ ಪ್ರಾಯ, ಈಡಿತ್‌ಗೆ 89. ಸುಮಾರು 70 ಮಂದಿಗೆ ಯೆಹೋವನ ಕುರಿತು ತಿಳಿದುಕೊಳ್ಳಲು ನಾವು ಸಹಾಯಮಾಡಿದೆವು. ಅದನ್ನು ನೆನಸುವಾಗ ಸಂತೋಷವಾಗುತ್ತದೆ. 60 ವರ್ಷಗಳ ಹಿಂದೆ ಗಿಲ್ಯಡ್‌ ಶಾಲೆಗೆ ಅರ್ಜಿ ಹಾಕಿದ್ದು ಎಷ್ಟು ಒಳ್ಳೇದಾಯಿತು! ಅಂದು ನಾವು ಮಾಡಿದ ಆ ತೀರ್ಮಾನವು ಒಳ್ಳೇ ವಿಷಯಗಳಿಂದ ತುಂಬಿದ್ದ ಜೀವನಕ್ಕೆ ದಾರಿಯನ್ನು ತೆರೆಯಿತು.

[ಪಾದಟಿಪ್ಪಣಿ]

^ ಪ್ಯಾರ. 29 ಸಹೋದರ ವಾಕಾರವರ ಜೀವನ ಕಥೆ 1985, ಸೆಪ್ಟೆಂಬರ್‌ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

[ಪುಟ 29ರಲ್ಲಿರುವ ಚಿತ್ರ]

ನಮ್ಮೊಂದಿಗೆ ಗಿಲ್ಯಡ್‌ಗೆ ಹಾಜರಾದ ಮಿಷನೆರಿಗಳೊಂದಿಗೆ ನ್ಯೂ ಯಾರ್ಕ್‌ನ ಯಾಂಕೀ ಸ್ಟೇಡಿಯಮ್‌ನಲ್ಲಿ – 1958

[ಪುಟ 31ರಲ್ಲಿರುವ ಚಿತ್ರ]

ಸರ್ಕಿಟ್‌ ಕೆಲಸದಲ್ಲಿ ಒಂದು ಸಾಕ್ಷಿ ಕುಟುಂಬವನ್ನು ಭೇಟಿಮಾಡಿದಾಗ – 1959

[ಪುಟ 32ರಲ್ಲಿರುವ ಚಿತ್ರ]

ಎಕ್ವಡಾರ್‌ನ ಬ್ರಾಂಚ್‌ನಲ್ಲಿ – 2002