ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಆಹಾ! ದೇವರ ವಿವೇಕ ಎಷ್ಟೋ ಅಗಾಧ!’

‘ಆಹಾ! ದೇವರ ವಿವೇಕ ಎಷ್ಟೋ ಅಗಾಧ!’

‘ಆಹಾ! ದೇವರ ವಿವೇಕ ಎಷ್ಟೋ ಅಗಾಧ!’

“ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ! ಆತನ ನ್ಯಾಯತೀರ್ಪುಗಳು ಎಷ್ಟೋ ಅಗಮ್ಯ ಮತ್ತು ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎಷ್ಟೋ ಅಸಾಧ್ಯ!” —ರೋಮ. 11:33.

1. ದೀಕ್ಷಾಸ್ನಾನ ಪಡೆದಿರುವ ಕ್ರೈಸ್ತರಿಗೆ ಯಾವುದು ಅತಿ ದೊಡ್ಡ ಸುಯೋಗವಾಗಿದೆ?

ನಿಮಗೆ ಸಿಕ್ಕಿರುವುದರಲ್ಲೇ ಅತಿ ದೊಡ್ಡ ಸುಯೋಗ ಯಾವುದು? ಈ ಪ್ರಶ್ನೆ ಓದಿದ ಕೂಡಲೇ ನಿಮಗೆ ಸಭೆಯಲ್ಲಿ ದೊರೆತ ಒಂದು ನೇಮಕದ ನೆನಪಾಗಬಹುದು. ಅಥವಾ ಶಾಲೆಯಲ್ಲೋ ಉದ್ಯೋಗದ ಸ್ಥಳದಲ್ಲೋ ಸಿಕ್ಕಿದ ಬಹುಮಾನದ ನೆನಪಾಗಬಹುದು. ಆದರೆ, ದೀಕ್ಷಾಸ್ನಾನ ಪಡೆದಿರುವ ಕ್ರೈಸ್ತರಿಗೆ, ಒಬ್ಬನೇ ಸತ್ಯದೇವರಾದ ಯೆಹೋವನೊಟ್ಟಿಗೆ ಅತ್ಯಾಪ್ತ ಸಂಬಂಧವನ್ನು ಬೆಳೆಸಿಕೊಳ್ಳುವ ಸದವಕಾಶವೇ ಅತಿ ದೊಡ್ಡ ಸುಯೋಗವಾಗಿದೆ. ನಮ್ಮ ಆ ಸಂಬಂಧದ ಆಧಾರದ ಮೇಲೆ ದೇವರು ನಮ್ಮನ್ನು ‘ತಿಳಿದುಕೊಳ್ಳುತ್ತಾನೆ.’—1 ಕೊರಿಂ. 8:3; ಗಲಾ. 4:9.

2. ನಾವು ಯೆಹೋವನನ್ನು ತಿಳಿದುಕೊಳ್ಳುವುದು ಹಾಗೂ ಯೆಹೋವನು ನಮ್ಮನ್ನು ತಿಳಿದುಕೊಳ್ಳುವುದು ಏಕೆ ದೊಡ್ಡ ಸುಯೋಗವಾಗಿದೆ?

2 ನಾವು ಯೆಹೋವನನ್ನು ತಿಳಿದುಕೊಳ್ಳುವುದು ಹಾಗೂ ಯೆಹೋವನು ನಮ್ಮನ್ನು ತಿಳಿದುಕೊಳ್ಳುವುದು ಏಕೆ ದೊಡ್ಡ ಸುಯೋಗವಾಗಿದೆ? ಏಕೆಂದರೆ ಇಡೀ ವಿಶ್ವದಲ್ಲೇ ಯೆಹೋವನು ಅತಿ ಶ್ರೇಷ್ಠ ವ್ಯಕ್ತಿಯಾಗಿದ್ದಾನೆ. ಹಾಗೂ ತಾನು ಪ್ರೀತಿಸುವವರನ್ನು ಸಂರಕ್ಷಿಸಿ ಕಾಪಾಡುವ ದೇವರಾಗಿದ್ದಾನೆ. ಪ್ರವಾದಿ ನಹೂಮನು ದೇವಪ್ರೇರಣೆಯಿಂದ ಏನು ಬರೆದನೆಂದು ಗಮನಿಸಿ: “ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮರೆಹೊಕ್ಕವರನ್ನು ಬಲ್ಲನು.” (ನಹೂ. 1:7; ಕೀರ್ತ. 1:6) ನಾವು ನಿತ್ಯಜೀವವನ್ನು ಪಡೆದುಕೊಳ್ಳುವುದು ಸಹ ಸತ್ಯ ದೇವರನ್ನು ಹಾಗೂ ಆತನ ಮಗನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೇಲೆ ಅವಲಂಬಿಸಿದೆ.—ಯೋಹಾ. 17:3.

3. ದೇವರನ್ನು ತಿಳಿದುಕೊಳ್ಳುವುದರ ಅರ್ಥವೇನು?

3 ದೇವರನ್ನು ತಿಳಿದುಕೊಳ್ಳುವುದೆಂದರೆ ಬರೀ ಆತನ ಹೆಸರನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ. ಒಬ್ಬ ಸ್ನೇಹಿತನನ್ನು ಹೇಗೋ ಹಾಗೇ ಆತನನ್ನು ತಿಳಿದುಕೊಂಡು ಆತನ ಇಷ್ಟಾನಿಷ್ಟಗಳನ್ನು ನಾವು ಅರಿಯಬೇಕು. ತದನಂತರ ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸಬೇಕು. ಇದು ನಾವು ದೇವರನ್ನು ಆತ್ಮೀಯವಾಗಿ ತಿಳಿದಿದ್ದೇವೆ ಎಂಬದನ್ನು ತೋರಿಸಿಕೊಡುತ್ತದೆ. (1 ಯೋಹಾ. 2:4) ಆದರೆ ನಾವು ದೇವರನ್ನು ತಿಳಿದುಕೊಳ್ಳಲು ಬಯಸುವಲ್ಲಿ ಇನ್ನೊಂದು ವಿಷಯವನ್ನೂ ಮಾಡಬೇಕು. ಆತನು ಏನೆಲ್ಲ ಮಾಡಿದ್ದಾನೆಂಬದನ್ನು ಮಾತ್ರವಲ್ಲ ಹೇಗೆ ಮತ್ತು ಏಕೆ ಹಾಗೆ ಮಾಡಿದ್ದಾನೆಂಬದನ್ನೂ ತಿಳಿದುಕೊಳ್ಳಬೇಕು. ಯೆಹೋವನ ಉದ್ದೇಶಗಳನ್ನು ನಾವೆಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೋ ಅಷ್ಟೇ ಹೆಚ್ಚಾಗಿ ‘ದೇವರ ವಿವೇಕದ ಅಗಾಧತೆಯನ್ನು’ ಕಂಡು ವಿಸ್ಮಯಗೊಳ್ಳುತ್ತೇವೆ.—ರೋಮ. 11:33.

ಉದ್ದೇಶವುಳ್ಳ ದೇವರು

4, 5. (ಎ) ಬೈಬಲಿನಲ್ಲಿ ಬಳಸಲಾಗಿರುವ “ಉದ್ದೇಶ” ಎಂಬ ಪದದ ಅರ್ಥವೇನು? (ಬಿ) ಒಂದು ಉದ್ದೇಶವನ್ನು ಒಂದಕ್ಕಿಂತ ಹೆಚ್ಚು ವಿಧಗಳಲ್ಲಿ ಹೇಗೆ ಪೂರೈಸಬಹುದೆಂದು ದೃಷ್ಟಾಂತಿಸಿ.

4 ಯೆಹೋವನು ಉದ್ದೇಶವುಳ್ಳ ದೇವರು. ಬೈಬಲ್‌ ಆತನ ಅನಾದಿಕಾಲದ ‘ಉದ್ದೇಶದ’ ಬಗ್ಗೆ ಹೇಳುತ್ತದೆ. (ಎಫೆ. 3:10, 11) ಉದ್ದೇಶ ಎಂದರೇನು? ಬೈಬಲಿನಲ್ಲಿ ಬಳಸಲಾಗಿರುವ “ಉದ್ದೇಶ” ಎಂಬ ಪದವು ಒಂದಕ್ಕಿಂತಲೂ ಹೆಚ್ಚು ವಿಧಗಳಲ್ಲಿ ಮುಟ್ಟಬಹುದಾದ ನಿರ್ದಿಷ್ಟ ಗುರಿ ಅಥವಾ ಧ್ಯೇಯಕ್ಕೆ ಸೂಚಿಸುತ್ತದೆ.

5 ದೃಷ್ಟಾಂತಕ್ಕೆ, ಒಬ್ಬ ವ್ಯಕ್ತಿ ಒಂದು ಊರಿಗೆ ಪ್ರಯಾಣಿಸಲು ಇಚ್ಛಿಸುತ್ತಾನೆ ಎಂದಿಟ್ಟುಕೊಳ್ಳಿ. ಆ ಸ್ಥಳವನ್ನು ತಲುಪುವುದೇ ಅವನ ಗುರಿ ಅಥವಾ ಉದ್ದೇಶವಾಗುತ್ತದೆ. ಅಲ್ಲಿಗೆ ಹೇಗೆ ಪ್ರಯಾಣಿಸಬೇಕು, ಯಾವ ಮಾರ್ಗದಲ್ಲಿ ಸಾಗಬೇಕು ಎಂಬ ಬಗ್ಗೆ ಅವನಿಗೆ ಅನೇಕ ಆಯ್ಕೆಗಳಿರಬಹುದು. ಅವನು ಒಂದು ರಸ್ತೆಯನ್ನು ಆರಿಸಿಕೊಂಡು ಈಗ ಪ್ರಯಾಣ ಆರಂಭಿಸುತ್ತಾನೆ. ಆದರೆ ಅನಿರೀಕ್ಷಿತವಾಗಿ ಪ್ರತಿಕೂಲ ಹವಾಮಾನ, ಕಿಕ್ಕಿರಿದ ವಾಹನ ಸಂಚಾರ ಅಥವಾ ರಸ್ತೆ ತಡೆ ಎದುರಾಗಿ ಬೇರೊಂದು ಮಾರ್ಗವಾಗಿ ಚಲಿಸಬೇಕಾಗುತ್ತದೆ. ಅವನು ಏನೇ ಹೊಂದಾಣಿಕೆಗಳನ್ನು ಮಾಡಿರಲಿ ಗಮ್ಯಸ್ಥಾನವನ್ನು ಮುಟ್ಟಿದರೆ ಗುರಿಯನ್ನು ಮುಟ್ಟಿದಂತೆ.

6. ಯೆಹೋವನು ತನ್ನ ಉದ್ದೇಶವನ್ನು ಪೂರೈಸುವ ವಿಷಯದಲ್ಲಿ ಯಾವ ಹೊಂದಾಣಿಕೆಯನ್ನು ಮಾಡಿದ್ದಾನೆ?

6 ಯೆಹೋವನು ಸಹ ತನ್ನ ಅನಾದಿಕಾಲದ ಉದ್ದೇಶವನ್ನು ಪೂರೈಸಲು ಅನೇಕ ಹೊಂದಾಣಿಕೆಗಳನ್ನು ಮಾಡಿದ್ದಾನೆ. ಬುದ್ಧಿಶಕ್ತಿಯಿರುವ ತನ್ನ ಸೃಷ್ಟಿಜೀವಿಗಳ ಇಚ್ಛಾಸ್ವಾತಂತ್ರ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತಾ ತನ್ನ ಉದ್ದೇಶವನ್ನು ಪೂರೈಸುವ ವಿಧದಲ್ಲಿ ಕೂಡಲೆ ಹೊಂದಾಣಿಕೆಗಳನ್ನು ಮಾಡುತ್ತಾನೆ. ಉದಾಹರಣೆಗೆ, ವಾಗ್ದತ್ತ ಸಂತತಿಯ ಕುರಿತ ತನ್ನ ಉದ್ದೇಶವನ್ನು ಯೆಹೋವನು ಹೇಗೆ ಪೂರೈಸುವನು ಎಂಬದನ್ನು ನಾವೀಗ ಪರಿಗಣಿಸೋಣ. ಆದಿಯಲ್ಲಿ ಯೆಹೋವನು ಮೊದಲ ಮಾನವ ದಂಪತಿಗೆ “ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದು ಹೇಳಿದನು. (ಆದಿ. 1:28) ಏದೆನ್‌ ತೋಟದಲ್ಲೆದ್ದ ದಂಗೆಯಿಂದಾಗಿ ಆ ಉದ್ದೇಶ ವಿಫಲಗೊಂಡಿತೋ? ಖಂಡಿತ ಇಲ್ಲ! ಉದ್ಭವಿಸಿದ ಆ ಹೊಸ ಪರಿಸ್ಥಿತಿಗೆ ಯೆಹೋವನು ಕೂಡಲೆ ಪ್ರತಿಕ್ರಿಯಿಸುತ್ತಾ ತನ್ನ ಉದ್ದೇಶವನ್ನು ಪೂರೈಸಲು ಬದಲಿ “ಮಾರ್ಗವನ್ನು” ಉಪಯೋಗಿಸಿದನು. ಆ ದಂಗೆಕೋರರು ಮಾಡಿರುವ ಹಾನಿಯನ್ನು ತೊಡೆದುಹಾಕಲಿರುವ ‘ಸಂತತಿ’ ಬರಲಿದೆಯೆಂದು ಆತನು ಮುಂತಿಳಿಸಿದನು.—ಆದಿ. 3:15; ಇಬ್ರಿ. 2:14-17; 1 ಯೋಹಾ. 3:8.

7. ವಿಮೋಚನಕಾಂಡ 3:14ರಲ್ಲಿ ಯೆಹೋವನು ತನ್ನ ಬಗ್ಗೆ ಕೊಟ್ಟಿರುವ ವರ್ಣನೆಯಿಂದ ನಾವೇನನ್ನು ಕಲಿಯಬಲ್ಲೆವು?

7 ತನ್ನ ಉದ್ದೇಶವನ್ನು ಪೂರೈಸುವಾಗ ಏಳುವ ಸನ್ನಿವೇಶಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಯೆಹೋವನಿಗಿರುವ ಸಾಮರ್ಥ್ಯವು ಆತನ ಬಗ್ಗೆ ಆತನೇ ಕೊಟ್ಟ ವರ್ಣನೆಗೆ ಪೂರ್ತಿ ಹೋಲುತ್ತದೆ. ಮೋಶೆ ತನ್ನ ನೇಮಕದ ವಿಷಯದಲ್ಲಿ ಏಳಬಹುದಾದ ಅಡ್ಡಿತಡೆಗಳ ಬಗ್ಗೆ ಯೆಹೋವನಿಗೆ ತಿಳಿಸಿದಾಗ ಆತನು, ‘ನಾನು ಏನಾಗಿ ಪರಿಣಮಿಸಬೇಕೋ ಅದಾಗಿ ಪರಿಣಮಿಸುತ್ತೇನೆ. ನೀನು ಇಸ್ರಾಯೇಲ್ಯರಿಗೆ—ಏನಾಗಿ ಪರಿಣಮಿಸಬೇಕೋ ಅದಾಗಿ ಪರಿಣಮಿಸುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳಬೇಕು’ ಎನ್ನುತ್ತಾ ಅವನಲ್ಲಿ ಭರವಸೆ ತುಂಬಿದನು. (ವಿಮೋ. 3:14, NW) ಹೌದು, ಯೆಹೋವನು ತನ್ನ ಉದ್ದೇಶವನ್ನು ಪೂರ್ಣವಾಗಿ ಪೂರೈಸಲು ಏನಾಗಿ ಪರಿಣಮಿಸುವ ಅಗತ್ಯವಿದೆಯೋ ಅದಾಗಿ ಪರಿಣಮಿಸಶಕ್ತನು! ಇದನ್ನು ಅಪೊಸ್ತಲ ಪೌಲನು ರೋಮನ್ನರಿಗೆ 11ನೇ ಅಧ್ಯಾಯದಲ್ಲಿ ಚೆನ್ನಾಗಿ ದೃಷ್ಟಾಂತಿಸಿದ್ದಾನೆ. ಅಲ್ಲಿ ಅವನು ಸಾಂಕೇತಿಕ ಆಲೀವ್‌ ಮರದ ಬಗ್ಗೆ ತಿಳಿಸುತ್ತಾನೆ. ನಮಗೆ ಸ್ವರ್ಗೀಯ ನಿರೀಕ್ಷೆಯಿರಲಿ ಭೂನಿರೀಕ್ಷೆಯಿರಲಿ ಆ ದೃಷ್ಟಾಂತವನ್ನು ಪರಿಗಣಿಸುವಲ್ಲಿ ಯೆಹೋವನ ಅಗಾಧ ವಿವೇಕಕ್ಕಾಗಿ ನಮಗಿರುವ ಕೃತಜ್ಞತೆಯು ಇನ್ನಷ್ಟು ಹೆಚ್ಚುತ್ತದೆ.

ಮುಂತಿಳಿಸಲ್ಪಟ್ಟ ಸಂತತಿಯ ಕುರಿತ ಯೆಹೋವನ ಉದ್ದೇಶ

8, 9. (ಎ) ಆಲೀವ್‌ ಮರದ ದೃಷ್ಟಾಂತವನ್ನು ಅರ್ಥಮಾಡಿಕೊಳ್ಳಲು ಯಾವ ನಾಲ್ಕು ಅಂಶಗಳು ಸಹಾಯಮಾಡುತ್ತವೆ? (ಬಿ) ನಾವೀಗ ಯಾವ ಪ್ರಶ್ನೆಯನ್ನು ಪರಿಗಣಿಸಲಿದ್ದೇವೆ? ಅದು ಯೆಹೋವನ ಕುರಿತು ಏನನ್ನು ತಿಳಿಯಪಡಿಸುತ್ತದೆ?

8 ಆಲೀವ್‌ ಮರದ ಕುರಿತ ದೃಷ್ಟಾಂತವನ್ನು ಅರ್ಥಮಾಡಿಕೊಳ್ಳುವ ಮುನ್ನ, ಮುಂತಿಳಿಸಲ್ಪಟ್ಟ ಸಂತತಿಯ ಕುರಿತ ಯೆಹೋವನ ಉದ್ದೇಶದ ವಿಕಸನಕ್ಕೆ ಸಂಬಂಧಿಸಿದ ನಾಲ್ಕು ಅಂಶಗಳನ್ನು ನಾವು ತಿಳಿದುಕೊಳ್ಳಬೇಕು. ಮೊದಲನೆಯದಾಗಿ, ಯೆಹೋವನು ಅಬ್ರಹಾಮನಿಗೆ, ಅವನ ಸಂತತಿಯ ಅಥವಾ ವಂಶಜರ ಮೂಲಕ ‘ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗುವದು’ ಎಂದು ವಾಗ್ದಾನಿಸಿದನು. (ಆದಿ. 22:17, 18) ಎರಡನೆಯದಾಗಿ, ಅಬ್ರಹಾಮನ ವಂಶದಿಂದ ಹುಟ್ಟಿಕೊಂಡ ಇಸ್ರಾಯೇಲ್‌ ಜನಾಂಗಕ್ಕೆ ‘ಯಾಜಕರಾಜ್ಯವನ್ನು’ ಉಂಟುಮಾಡುವ ಸದವಕಾಶ ಕೊಡಲಾಯಿತು. (ವಿಮೋ. 19:5, 6) ಮೂರನೆಯದಾಗಿ, ಇಸ್ರಾಯೇಲ್‌ ಜನಾಂಗದಲ್ಲಿ ಹೆಚ್ಚಿನವರು ಮೆಸ್ಸೀಯನನ್ನು ಸ್ವೀಕರಿಸದಿದ್ದಾಗ ‘ಯಾಜಕರಾಜ್ಯವನ್ನು’ ಉಂಟುಮಾಡಲು ಯೆಹೋವನು ಬೇರೆ ಹೆಜ್ಜೆಗಳನ್ನು ತೆಗೆದುಕೊಂಡನು. (ಮತ್ತಾ. 21:43; ರೋಮ. 9:27-29) ಕೊನೆಯದಾಗಿ, ಅಬ್ರಹಾಮನ ಸಂತತಿಯ ಪ್ರಧಾನ ಭಾಗ ಯೇಸುವಾಗಿದ್ದರೂ ಇತರರಿಗೂ ಆ ಸಂತತಿಯ ಭಾಗವಾಗುವ ಸದವಕಾಶ ಕೊಡಲಾಯಿತು.—ಗಲಾ. 3:16, 29.

9 ಪ್ರಕಟಣೆ ಪುಸ್ತಕವು ಆ ನಾಲ್ಕು ಮೂಲಭೂತ ಅಂಶಗಳಿಗೆ ಕೂಡಿಸುತ್ತಾ, ಸ್ವರ್ಗದಲ್ಲಿ ಯೇಸುವಿನೊಂದಿಗೆ ರಾಜರಾಗಿಯೂ ಯಾಜಕರಾಗಿಯೂ ಆಳುವವರ ಸಂಖ್ಯೆ 1,44,000 ಎಂದು ತಿಳಿಸುತ್ತದೆ. (ಪ್ರಕ. 14:1-4) ಇವರನ್ನು ‘ಇಸ್ರಾಯೇಲ್ಯರು’ ಎಂದೂ ಕರೆಯಲಾಗಿದೆ. (ಪ್ರಕ. 7:4-8) ಆದರೆ 1,44,000 ಮಂದಿಯಲ್ಲಿ ಎಲ್ಲರೂ ಇಸ್ರಾಯೇಲ್‌ ಜನಾಂಗದವರೋ ಅಂದರೆ ಯೆಹೂದ್ಯರೋ? ಈ ಪ್ರಶ್ನೆಗೆ ಉತ್ತರವು ಯೆಹೋವನು ತನ್ನ ಉದ್ದೇಶವನ್ನು ಪೂರೈಸಲು ಹೇಗೆ ಹೊಂದಾಣಿಕೆಗಳನ್ನು ಮಾಡುತ್ತಾನೆ ಎಂದು ತೋರಿಸಿಕೊಡುತ್ತದೆ. ಈ ಉತ್ತರ ಕಂಡುಕೊಳ್ಳಲು ಅಪೊಸ್ತಲ ಪೌಲನು ರೋಮನ್ನರಿಗೆ ಬರೆದ ಪತ್ರ ಹೇಗೆ ಸಹಾಯಮಾಡುತ್ತದೆ ಎನ್ನುವುದನ್ನು ನಾವೀಗ ನೋಡೋಣ.

“ಯಾಜಕರಾಜ್ಯ”

10. ಇಸ್ರಾಯೇಲ್‌ ಜನಾಂಗಕ್ಕೆ ಯಾವ ಸದವಕಾಶವಿತ್ತು?

10 ಈ ಮುಂಚೆ ತಿಳಿಸಲಾದಂತೆ ‘ಯಾಜಕರಾಜ್ಯ ಮತ್ತು ಪರಿಶುದ್ಧಜನಾಂಗಕ್ಕೆ’ ಬೇಕಾದ ಜನರನ್ನು ಒದಗಿಸುವ ಸದವಕಾಶ ಇಸ್ರಾಯೇಲ್‌ ಜನಾಂಗಕ್ಕೆ ಮಾತ್ರ ಇತ್ತು. (ರೋಮನ್ನರಿಗೆ 9:4, 5 ಓದಿ.) ಆದರೆ ವಾಗ್ದತ್ತ ಸಂತತಿ ಬಂದಾಗ ಏನು ಸಂಭವಿಸಿತು? ಈ ಇಸ್ರಾಯೇಲ್‌ ಜನಾಂಗವು ಅಬ್ರಹಾಮನ ಸಂತತಿಯ ದ್ವಿತೀಯ ಭಾಗವಾಗಲಿದ್ದ ಆಧ್ಯಾತ್ಮಿಕ ಇಸ್ರಾಯೇಲ್ಯರ ಪೂರ್ಣ ಸಂಖ್ಯೆಯನ್ನು ಅಂದರೆ 1,44,000 ಮಂದಿಯನ್ನು ಉತ್ಪಾದಿಸಿತೋ?

11, 12. (ಎ) ಸ್ವರ್ಗೀಯ ರಾಜ್ಯದ ಭಾಗವಾಗಲಿರುವವರ ಆಯ್ಕೆ ಯಾವಾಗ ಪ್ರಾರಂಭವಾಯಿತು? ಆ ಸಮಯದಲ್ಲಿ ಜೀವಿಸುತ್ತಿದ್ದ ಯೆಹೂದ್ಯರಲ್ಲಿ ಹೆಚ್ಚಿನವರು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದರು? (ಬಿ) ಅಬ್ರಹಾಮನ ಸಂತತಿಯ ಭಾಗವಾಗಲಿರುವವರ ‘ಪೂರ್ಣ ಸಂಖ್ಯೆಯನ್ನು’ ಯೆಹೋವನು ಹೇಗೆ ಭರ್ತಿಮಾಡಿದನು?

11ರೋಮನ್ನರಿಗೆ 11:7-10 ಓದಿ. ಒಂದನೇ ಶತಮಾನದ ಯೆಹೂದಿ ಜನಾಂಗ ಯೇಸುವನ್ನು ತಿರಸ್ಕರಿಸಿತು. ಹಾಗಾಗಿ ಅಬ್ರಹಾಮನ ಸಂತತಿಯನ್ನು ಉಂಟುಮಾಡಲು ಅವರಿಗೆ ಮಾತ್ರ ಕೊಡಲಾಗಿದ್ದ ಆ ಸದವಕಾಶವನ್ನು ಅವರಿಂದ ಹಿಂತೆಗೆದುಕೊಳ್ಳಲಾಯಿತು. ಹಾಗಿದ್ದರೂ ಸ್ವರ್ಗೀಯ ‘ಯಾಜಕರಾಜ್ಯದ’ ಭಾಗವಾಗಲಿಕ್ಕಿರುವವರ ಆಯ್ಕೆಯು ಪಂಚಾಶತ್ತಮ 33ರಲ್ಲಿ ಆರಂಭವಾದಾಗ ಕೆಲವು ಸಹೃದಯಿ ಯೆಹೂದ್ಯರು ಆ ಆಮಂತ್ರಣವನ್ನು ಸ್ವೀಕರಿಸಿದರು. ಕೆಲವೇ ಸಾವಿರ ಮಂದಿ ಇದ್ದ ಇವರು ಇಡೀ ಯೆಹೂದಿ ಜನಾಂಗಕ್ಕೆ ಹೋಲಿಸುವಾಗ ‘ಜನಶೇಷದಂತೆ’ ಇದ್ದರು.—ರೋಮ. 11:5.

12 ಹಾಗಾದರೆ ಅಬ್ರಹಾಮನ ಸಂತತಿಯ ಭಾಗವಾಗಲಿರುವವರ ‘ಪೂರ್ಣ ಸಂಖ್ಯೆಯನ್ನು’ ಯೆಹೋವನು ಹೇಗೆ ಭರ್ತಿಮಾಡಿದನು? (ರೋಮ. 11:12, 25) ಅಪೊಸ್ತಲ ಪೌಲನು ಕೊಟ್ಟ ಉತ್ತರವನ್ನು ಗಮನಿಸಿ: “ದೇವರ ಮಾತು ವಿಫಲಗೊಂಡಿತೆಂದು ಇದರ ಅರ್ಥವಲ್ಲ. ಇಸ್ರಾಯೇಲನಿಂದ ಹುಟ್ಟಿದವರೆಲ್ಲರೂ ನಿಜವಾಗಿ [ಆಧ್ಯಾತ್ಮಿಕ] ಇಸ್ರಾಯೇಲ್ಯರಲ್ಲ. ಅಥವಾ ಅಬ್ರಹಾಮನ ಸಂತತಿಯವರಾಗಿ ಹುಟ್ಟಿದ ಮಾತ್ರಕ್ಕೆ ಅವರೆಲ್ಲರು [ಆಧ್ಯಾತ್ಮಿಕ] ಮಕ್ಕಳೆಂದು ಎಣಿಸಲ್ಪಡುವುದಿಲ್ಲ; . . . ಅಂದರೆ ಶರೀರ ಸಂಬಂಧವಾಗಿ ಹುಟ್ಟಿದ ಮಕ್ಕಳು ವಾಸ್ತವದಲ್ಲಿ ದೇವರ ಮಕ್ಕಳಾಗಿರುವುದಿಲ್ಲ, ಬದಲಿಗೆ ವಾಗ್ದಾನದ ಮೂಲಕ ಹುಟ್ಟಿದ ಮಕ್ಕಳು ಆ ಸಂತತಿಯಾಗಿ ಎಣಿಸಲ್ಪಡುತ್ತಾರೆ.” (ರೋಮ. 9:6-8) ಹಾಗಾದರೆ ಆ ಸಂತತಿಯ ಭಾಗವಾಗಲಿರುವವರು ಅಬ್ರಹಾಮನ ವಂಶಜರೇ ಆಗಿರಬೇಕೆಂದು ಯೆಹೋವನು ಅವಶ್ಯಪಡಿಸಲಿಲ್ಲ.

ಸಾಂಕೇತಿಕ ಆಲೀವ್‌ ಮರ

13. (ಎ) ಆಲೀವ್‌ ಮರ, (ಬಿ) ಅದರ ಬೇರು, (ಸಿ) ಅದರ ಕಾಂಡ, (ಡಿ) ಅದರ ಕೊಂಬೆಗಳು ಏನನ್ನು ಪ್ರತಿನಿಧಿಸುತ್ತವೆ?

13 ಅಬ್ರಹಾಮನ ಸಂತತಿಯ ಭಾಗವಾಗಿರುವವರನ್ನು ಪೌಲನು ಸಾಂಕೇತಿಕ ಆಲೀವ್‌ ಮರದ ಕೊಂಬೆಗಳಿಗೆ ಹೋಲಿಸುತ್ತಾನೆ. * (ರೋಮ. 11:21) ಆಲೀವ್‌ ಮರ ಅಬ್ರಹಾಮನ ಒಡಂಬಡಿಕೆಯ ಸಂಬಂಧದಲ್ಲಿ ದೇವರ ಉದ್ದೇಶದ ನೆರವೇರಿಕೆಯನ್ನು ಪ್ರತಿನಿಧಿಸುತ್ತದೆ. ಅದರ ಬೇರು ಪವಿತ್ರವಾಗಿದೆ. ಆದ್ದರಿಂದ ಆಧ್ಯಾತ್ಮಿಕ ಇಸ್ರಾಯೇಲ್ಯರಿಗೆ ಜೀವವನ್ನು ಕೊಡುವ ಯೆಹೋವನನ್ನು ಅದು ಪ್ರತಿನಿಧಿಸುತ್ತದೆ. (ಯೆಶಾ. 10:20; ರೋಮ. 11:16) ಅದರ ಕಾಂಡ ಅಬ್ರಹಾಮನ ಸಂತತಿಯ ಪ್ರಧಾನ ಭಾಗವಾದ ಯೇಸುವನ್ನು ಪ್ರತಿನಿಧಿಸುತ್ತದೆ. ಅದರ ಕೊಂಬೆಗಳು ಅಬ್ರಹಾಮನ ಸಂತತಿಯ ದ್ವಿತೀಯ ಭಾಗವಾಗಿರುವವರ ‘ಪೂರ್ಣ ಸಂಖ್ಯೆಯನ್ನು’ ಪ್ರತಿನಿಧಿಸುತ್ತದೆ.

14, 15. ಆಲೀವ್‌ ಮರದ ದೃಷ್ಟಾಂತದಲ್ಲಿ ‘ಮುರಿದುಹಾಕಲ್ಪಟ್ಟ’ ಕೊಂಬೆಗಳು ಯಾರನ್ನು ಸೂಚಿಸುತ್ತವೆ? ಕಸಿಕಟ್ಟಲ್ಪಟ್ಟ ಕೊಂಬೆಗಳು ಯಾರನ್ನು ಸೂಚಿಸುತ್ತವೆ?

14 ಆಲಿವ್‌ ಮರದ ದೃಷ್ಟಾಂತದಲ್ಲಿ, ಯೇಸುವನ್ನು ತಿರಸ್ಕರಿಸಿದ ಯೆಹೂದ್ಯರನ್ನು ‘ಮುರಿದುಹಾಕಲ್ಪಟ್ಟ’ ಕೊಂಬೆಗಳಿಗೆ ಹೋಲಿಸಲಾಗಿದೆ. (ರೋಮ. 11:17) ಹೀಗೆ ಅವರು ಅಬ್ರಹಾಮನ ಸಂತತಿಯ ಭಾಗವಾಗುವ ಸದವಕಾಶವನ್ನು ಕಳೆದುಕೊಂಡರು. ಹಾಗಾದರೆ ಅವರ ಸ್ಥಾನವನ್ನು ಯಾರು ಭರ್ತಿಮಾಡಲಿದ್ದರು? ಇದಕ್ಕೆ ಉತ್ತರವನ್ನು ಅಬ್ರಹಾಮನ ವಂಶಜರೆಂದು ಗರ್ವದಿಂದ ಕೊಚ್ಚಿಕೊಳ್ಳುತ್ತಿದ್ದ ಯೆಹೂದ್ಯರು ಯೋಚಿಸಿಯೂ ಇರಲಿಕ್ಕಿಲ್ಲ. ಆದರೆ ದೇವರು ಬಯಸಿದರೆ ಅಬ್ರಹಾಮನಿಗೆ ಕಲ್ಲುಗಳಿಂದ ಮಕ್ಕಳನ್ನು ಉಂಟುಮಾಡಲು ಶಕ್ತನೆಂದು ಸ್ನಾನಿಕನಾದ ಯೋಹಾನನು ಮುಂಚೆಯೇ ಅವರಿಗೆ ಎಚ್ಚರಿಸಿದ್ದನು.—ಲೂಕ 3:8.

15 ಹಾಗಾದರೆ ಯೆಹೋವನು ತನ್ನ ಉದ್ದೇಶವನ್ನು ಪೂರೈಸಲು ಏನು ಮಾಡಿದನು? ಆಲೀವ್‌ ಮರದ ಮುರಿದ ಕೊಂಬೆಗಳ ಜಾಗದಲ್ಲಿ ಕಾಡು ಆಲೀವ್‌ ಮರದ ಕೊಂಬೆಗಳನ್ನು ಕಸಿಕಟ್ಟಲಾಯಿತು ಎಂದು ಅಪೊಸ್ತಲ ಪೌಲನು ವಿವರಿಸಿದನು. (ರೋಮನ್ನರಿಗೆ 11:17, 18 ಓದಿ.) ಹೀಗೆ ಅನ್ಯಜನಾಂಗಗಳ ಆತ್ಮಾಭಿಷಿಕ್ತ ಕ್ರೈಸ್ತರನ್ನು, ಉದಾಹರಣೆಗೆ ರೋಮ್‌ ಸಭೆಯಲ್ಲಿದ್ದ ಕೆಲವರನ್ನು ಸಾಂಕೇತಿಕ ಅರ್ಥದಲ್ಲಿ ಆಲೀವ್‌ ಮರಕ್ಕೆ ಕಸಿಕಟ್ಟಲಾಯಿತು. ಈ ಮೂಲಕ ಅವರು ಅಬ್ರಹಾಮನ ಸಂತತಿಯ ಭಾಗವಾದರು. ಮೂಲತಃ ಅವರು ಕಾಡು ಆಲೀವ್‌ ಮರದ ಕೊಂಬೆಗಳಂತಿದ್ದರು. ಅಂದರೆ ಈ ವಿಶೇಷ ಒಡಂಬಡಿಕೆಯ ಭಾಗವಾಗುವ ಅವಕಾಶವೇ ಅವರಿಗಿರಲಿಲ್ಲ. ಆದರೆ ಯೆಹೋವನು ಅವರಿಗೆ ಆಧ್ಯಾತ್ಮಿಕ ಯೆಹೂದ್ಯರಾಗುವ ಸದವಕಾಶವನ್ನು ಕೊಟ್ಟನು.—ರೋಮ. 2:28, 29.

16. ಹೊಸ ಆಧ್ಯಾತ್ಮಿಕ ಜನಾಂಗದ ರಚನೆಯನ್ನು ಅಪೊಸ್ತಲ ಪೇತ್ರನು ಹೇಗೆ ವಿವರಿಸಿದನು?

16 ಈ ಸನ್ನಿವೇಶವನ್ನು ಅಪೊಸ್ತಲ ಪೇತ್ರನು ಹೀಗೆ ವಿವರಿಸಿದನು: “ಆದುದರಿಂದ, ನೀವು [ಅನ್ಯಜನಾಂಗದ ಕ್ರೈಸ್ತರನ್ನೂ ಸೇರಿಸಿ ಆಧ್ಯಾತ್ಮಿಕ ಇಸ್ರಾಯೇಲ್ಯರು] ವಿಶ್ವಾಸಿಗಳಾಗಿರುವ ಕಾರಣ ಅವನು [ಯೇಸು ಕ್ರಿಸ್ತನು] ನಿಮಗೆ ಅಮೂಲ್ಯನಾಗಿದ್ದಾನೆ. ಆದರೆ ವಿಶ್ವಾಸವಿಡದವರ ಸಂಬಂಧದಲ್ಲಿ, ‘ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು’ ಮತ್ತು ‘ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಯಿತು’ ಎಂದು ಬರೆಯಲ್ಪಟ್ಟಿದೆ. . . . ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ‘ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವುದಕ್ಕಾಗಿ ಆರಿಸಿಕೊಳ್ಳಲ್ಪಟ್ಟಿರುವ ಕುಲವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನಾಂಗವೂ ವಿಶೇಷ ಒಡೆತನಕ್ಕಾಗಿರುವ ಜನರೂ’ ಆಗಿದ್ದೀರಿ. ಮೊದಲು ನೀವು ಜನರಾಗಿರಲಿಲ್ಲ, ಆದರೆ ಈಗ ದೇವರ ಜನರಾಗಿದ್ದೀರಿ; ಮೊದಲು ಕರುಣೆ ತೋರಿಸಲ್ಪಡದ ಜನರಾಗಿದ್ದಿರಿ, ಆದರೆ ಈಗ ಕರುಣೆಹೊಂದಿದವರಾಗಿದ್ದೀರಿ.”—1 ಪೇತ್ರ 2:7-10.

17. ಯೆಹೋವನು ಮಾಡಿದ್ದು “ಅಸ್ವಾಭಾವಿಕ” ಸಂಗತಿಯಾಗಿತ್ತು ಏಕೆ?

17 ಅನೇಕರು ಎಂದೂ ನಿರೀಕ್ಷಿಸಿರದ ವಿಷಯವನ್ನು ಯೆಹೋವನು ಮಾಡಿದನು. ಇದನ್ನು ಪೌಲನು “ಅಸ್ವಾಭಾವಿಕ” ಸಂಗತಿಯೆಂದು ವರ್ಣಿಸುತ್ತಾನೆ. (ರೋಮ. 11:24) ಏಕೆ ಅಸ್ವಾಭಾವಿಕ? ಚೆನ್ನಾಗಿ ಬೆಳೆಸಲ್ಪಟ್ಟ ಮರಕ್ಕೆ ಕಾಡು ಮರದ ಕೊಂಬೆಯನ್ನು ಕಸಿಕಟ್ಟುವುದು ಅಸಾಮಾನ್ಯ ಮಾತ್ರವಲ್ಲ ಅಸ್ವಾಭಾವಿಕವೂ ಹೌದು. ಆದರೂ ಒಂದನೇ ಶತಮಾನದಲ್ಲಿ ಕೆಲವು ರೈತರು ಅದನ್ನೇ ಮಾಡುತ್ತಿದ್ದರು. * ಅದೇ ರೀತಿಯಲ್ಲಿ ಯೆಹೋವನು ಅಸಾಮಾನ್ಯ ಸಂಗತಿಯೊಂದನ್ನು ಮಾಡಿದನು. ಅನ್ಯಜನಾಂಗದವರು ಸ್ವೀಕೃತವಾದ ಫಲವನ್ನು ಕೊಡಲಾರರು ಎಂಬುದು ಯೆಹೂದ್ಯರ ಎಣಿಕೆಯಾಗಿತ್ತು. ಆದರೆ ಯೆಹೋವನು ಆ ಅನ್ಯಜನಾಂಗದವರನ್ನೇ ರಾಜ್ಯದ ಫಲವನ್ನು ಕೊಡುವ ‘ಜನಾಂಗದ’ ಭಾಗವನ್ನಾಗಿ ಮಾಡಿದನು. (ಮತ್ತಾ. 21:43) ಸುನ್ನತಿಯಾಗದ ಅನ್ಯಜನಾಂಗದಿಂದ ಕ್ರೈಸ್ತರಾದವರಲ್ಲಿ ಪ್ರಥಮ ವ್ಯಕ್ತಿ ಕೊರ್ನೇಲ್ಯ. ಕ್ರಿ.ಶ. 36ರಲ್ಲಿ ಅವನು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಂದಿನಿಂದ ಸಾಂಕೇತಿಕ ಆಲೀವ್‌ ಮರಕ್ಕೆ ಕಸಿಕಟ್ಟಲ್ಪಡುವ ಸದವಕಾಶ ಸುನ್ನತಿಯಾಗದ ಯೆಹೂದ್ಯೇತರರಿಗೆ ಸಿಕ್ಕಿತು.—ಅ.ಕಾ.10:4-48. *

18. ಕ್ರಿ.ಶ. 36ರ ನಂತರವೂ ಯೆಹೂದಿ ಜನಾಂಗಕ್ಕೆ ಯಾವ ಅವಕಾಶವಿತ್ತು?

18 ಇದರರ್ಥ, ಕ್ರಿ.ಶ. 36ರ ನಂತರ ಯೆಹೂದಿ ಜನಾಂಗಕ್ಕೆ ಅಬ್ರಹಾಮನ ಸಂತತಿಯ ಭಾಗವಾಗುವ ಸದವಕಾಶವೇ ಇರಲಿಲ್ಲವೆಂದೋ? ಹಾಗೇನಿಲ್ಲ. ಪೌಲನು ವಿವರಿಸುವುದು: “ಅವರು [ಯೆಹೂದ್ಯರು] ಸಹ ತಮ್ಮ ಅಪನಂಬಿಗಸ್ತಿಕೆಯಲ್ಲಿಯೇ ಉಳಿಯದಿದ್ದರೆ ಪುನಃ ಕಸಿಕಟ್ಟಲ್ಪಡುವರು; ಏಕೆಂದರೆ ದೇವರು ಅವರನ್ನು ಪುನಃ ಕಸಿಕಟ್ಟಲು ಶಕ್ತನಾಗಿದ್ದಾನೆ. ನೀನು ಸ್ವಾಭಾವಿಕವಾದ ಕಾಡು ಆಲೀವ್‌ ಮರದಿಂದ ಕಡಿಯಲ್ಪಟ್ಟು ತೋಟದ ಆಲೀವ್‌ ಮರಕ್ಕೆ ಅಸ್ವಾಭಾವಿಕವಾಗಿ ಕಸಿಕಟ್ಟಲ್ಪಟ್ಟಿರುವಲ್ಲಿ, ಸ್ವಾಭಾವಿಕವಾಗಿರುವ ಇವು ತಮ್ಮ ಸ್ವಂತ ಆಲೀವ್‌ ಮರಕ್ಕೆ ಕಸಿಕಟ್ಟಲ್ಪಡುವುದು ಎಷ್ಟೋ ಹೆಚ್ಚು ಸುಲಭವಾಗಿದೆ!” *ರೋಮ. 11:23, 24.

“ಇಸ್ರಾಯೇಲ್ಯರೆಲ್ಲರು ರಕ್ಷಿಸಲ್ಪಡುವರು”

19, 20. ಸಾಂಕೇತಿಕ ಆಲೀವ್‌ ಮರದಿಂದ ದೃಷ್ಟಾಂತಿಸಲ್ಪಟ್ಟಂತೆ ಯೆಹೋವನು ಏನನ್ನು ನೆರವೇರಿಸುತ್ತಾನೆ?

19 ಹೌದು, “ದೇವರ ಇಸ್ರಾಯೇಲ್ಯರ” ಸಂಬಂಧದಲ್ಲಿ ಯೆಹೋವನ ಉದ್ದೇಶವು ಅದ್ಭುತಕರವಾಗಿ ನೆರವೇರುತ್ತಿದೆ. (ಗಲಾ. 6:16) ಅಪೊಸ್ತಲ ಪೌಲನು ಹೇಳಿದಂತೆ, “ಇಸ್ರಾಯೇಲ್ಯರೆಲ್ಲರು ರಕ್ಷಿಸಲ್ಪಡುವರು.” (ರೋಮ. 11:26) ಯೆಹೋವನ ನೇಮಿತ ಸಮಯದಲ್ಲಿ “ಇಸ್ರಾಯೇಲ್ಯರೆಲ್ಲರು” ಅಂದರೆ ಪೂರ್ಣ ಸಂಖ್ಯೆಯ ಆಧ್ಯಾತ್ಮಿಕ ಇಸ್ರಾಯೇಲ್ಯರು ಸ್ವರ್ಗದಲ್ಲಿ ರಾಜರಾಗಿಯೂ ಯಾಜಕರಾಗಿಯೂ ಆಳುವರು. ಯೆಹೋವನ ಉದ್ದೇಶವನ್ನು ಯಾವುದೂ ಭಂಗಗೊಳಿಸಲಾರದು!

20 ಮುಂತಿಳಿಸಲ್ಪಟ್ಟಂತೆ ಅಬ್ರಹಾಮನ ಸಂತತಿಯ ಮೂಲಕ ಅಂದರೆ ಯೇಸು ಕ್ರಿಸ್ತ ಮತ್ತು 1,44,000 ಮಂದಿಯ ಮೂಲಕ “ಅನ್ಯಜನಾಂಗಗಳ ಜನರಿಗೆ” ಆಶೀರ್ವಾದವುಂಟಾಗುವುದು. (ರೋಮ. 11:12; ಆದಿ. 22:18) ಹೀಗೆ ಈ ಏರ್ಪಾಡಿನಿಂದ ದೇವಜನರೆಲ್ಲರೂ ಪ್ರಯೋಜನಹೊಂದುವರು. ಯೆಹೋವನು ತನ್ನ ಅನಾದಿಕಾಲದ ಉದ್ದೇಶವನ್ನು ಹೇಗೆ ನೆರವೇರಿಸಿದ್ದಾನೆ ಎಂಬದರ ಬಗ್ಗೆ ಕಲಿಯುವಾಗ ‘ದೇವರ ಐಶ್ವರ್ಯ, ವಿವೇಕ ಹಾಗೂ ಜ್ಞಾನದ ಅಗಾಧತೆಯನ್ನು’ ಕಂಡು ನಾವು ವಿಸ್ಮಯಗೊಳ್ಳದೇ ಇರಲಾರೆವು!—ರೋಮ. 11:33.

[ಪಾದಟಿಪ್ಪಣಿಗಳು]

^ ಪ್ಯಾರ. 13 ಪೌಲನು ಆಲೀವ್‌ ಮರವನ್ನು ಉಪಯೋಗಿಸಿದ್ದು ಇಸ್ರಾಯೇಲ್‌ ಜನಾಂಗವನ್ನು ಸೂಚಿಸಲಿಕ್ಕಲ್ಲ. ಇಸ್ರಾಯೇಲ್‌ ಜನಾಂಗದಲ್ಲಿ ರಾಜರೂ ಯಾಜಕರೂ ಇದ್ದರು ನಿಜ. ಆದರೆ ಅವರು ಯಾಜಕರಾಜ್ಯವಾಗಲಿಲ್ಲ. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಇಸ್ರಾಯೇಲಿನ ರಾಜರು ಯಾಜಕರಾಗಲು ಸಾಧ್ಯವಿರಲಿಲ್ಲ. ಆದ್ದರಿಂದ ಆಲೀವ್‌ ಮರ ಈ ಜನಾಂಗವನ್ನು ಸೂಚಿಸಸಾಧ್ಯವಿಲ್ಲ. ಹಾಗಾಗಿ ಪೌಲನು ಆ ದೃಷ್ಟಾಂತವನ್ನು ಉಪಯೋಗಿಸಿದ್ದು, ‘ಯಾಜಕರಾಜ್ಯವನ್ನು’ ಉಂಟುಮಾಡುವ ದೇವರ ಉದ್ದೇಶ ಆಧ್ಯಾತ್ಮಿಕ ಇಸ್ರಾಯೇಲಿನಲ್ಲಿ ಹೇಗೆ ನೆರವೇರಿತು ಎಂಬದನ್ನು ತೋರಿಸಲಿಕ್ಕಾಗಿಯೇ. ಇದು, 1983, ಆಗಸ್ಟ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಪುಟ 14-19ರಲ್ಲಿರುವ ವಿವರಣೆಯ ಪರಿಷ್ಕರಣೆಯಾಗಿದೆ.

^ ಪ್ಯಾರ. 17 “ಕಾಡು ಆಲೀವ್‌ ಮರದ ಕೊಂಬೆಗಳನ್ನು ಕಸಿಕಟ್ಟಲು ಕಾರಣ” ಎಂಬ ಚೌಕ ನೋಡಿ.

^ ಪ್ಯಾರ. 17 ಹೊಸ ಆಧ್ಯಾತ್ಮಿಕ ಜನಾಂಗದ ಭಾಗವಾಗಲು ಅಬ್ರಹಾಮನ ವಂಶಜರಾದ ಯೆಹೂದ್ಯರಿಗೆ ಕೊಡಲಾದ ಮೂರುವರೆ ವರ್ಷಗಳ ಅವಧಿಯ ಕೊನೆಯಲ್ಲಿ ಇದು ಸಂಭವಿಸಿತು. 70 ವಾರಗಳ ಕುರಿತ ಪ್ರವಾದನೆ ಈ ಬೆಳವಣಿಗೆಯನ್ನು ಮುಂತಿಳಿಸಿತು.—ದಾನಿ. 9:27.

^ ಪ್ಯಾರ. 18 ರೋಮನ್ನರಿಗೆ 11:24ರಲ್ಲಿರುವ “ತೋಟ” ಎಂಬ ಪದಕ್ಕೆ ಗ್ರೀಕ್‌ ಭಾಷೆಯಲ್ಲಿ ಉಪಯೋಗಿಸಲಾದ ಪದವು “ಒಳ್ಳೆಯ, ಅತ್ಯುತ್ತಮ” ಎಂಬರ್ಥವನ್ನು ಕೊಡುತ್ತದೆ. ತಾವು ರಚಿಸಲ್ಪಟ್ಟ ಉದ್ದೇಶವನ್ನು ಯಾವ ವಸ್ತುಗಳು ಪೂರೈಸುತ್ತವೋ ವಿಶೇಷವಾಗಿ ಆ ವಸ್ತುಗಳಿಗೆ ಸೂಚಿಸುವಾಗ ಈ ಪದವನ್ನು ಬಳಸಲಾಗುತ್ತದೆ.

ನಿಮಗೆ ನೆನಪಿದೆಯೇ?

• ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುವ ವಿಧದಿಂದ ನಾವಾತನ ಬಗ್ಗೆ ಏನನ್ನು ಕಲಿಯುತ್ತೇವೆ?

• ರೋಮನ್ನರಿಗೆ 11ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಈ ಕೆಳಗಿನ ವಿಷಯಗಳು ಏನನ್ನು ಪ್ರತಿನಿಧಿಸುತ್ತವೆ?

ಆಲೀವ್‌ ಮರ

ಅದರ ಬೇರು

ಅದರ ಕಾಂಡ

ಅದರ ಕೊಂಬೆಗಳು

• ಕಸಿಕಟ್ಟುವ ಪ್ರಕ್ರಿಯೆ “ಅಸ್ವಾಭಾವಿಕ” ಸಂಗತಿಯಾಗಿತ್ತು ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 24ರಲ್ಲಿರುವ ಚೌಕ/ಚಿತ್ರ]

“ಕಾಡು ಆಲೀವ್‌ ಮರದ ಕೊಂಬೆಗಳನ್ನು ಕಸಿಕಟ್ಟಲು ಕಾರಣ”

▪ ಒಂದನೇ ಶತಮಾನದಲ್ಲಿ ಜೀವಿಸಿದ ಲೂಷಿಯಸ್‌ ಜೂನ್ಯಸ್‌ ಮಾಡರೇಟಸ್‌ ಕಾಲ್ಯಮೀಲ ಎಂಬವರು ರೋಮನ್‌ ಸೈನಿಕರಾಗಿದ್ದರು ಹಾಗೂ ರೈತರಾಗಿದ್ದರು. ಇವರು ಹಳ್ಳಿ ಜೀವನ ಹಾಗೂ ವ್ಯವಸಾಯದ ಬಗ್ಗೆ 12 ಸುಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ.

ಅವರು ತಮ್ಮ ಐದನೇ ಪುಸ್ತಕದಲ್ಲಿ ಈ ಪ್ರಾಚೀನ ನಾಣ್ಣುಡಿಯನ್ನು ಉಲ್ಲೇಖಿಸಿದ್ದಾರೆ: “ಆಲೀವ್‌ ತೋಪುಗಳನ್ನು ನೆಡುವವರು ಅದರಿಂದ ಫಲವನ್ನು ನಿರೀಕ್ಷಿಸುತ್ತಾರೆ; ಅದಕ್ಕೆ ಗೊಬ್ಬರ ಹಾಕುವವರು ಅದರಿಂದ ಫಲವನ್ನು ಬೇಡುತ್ತಾರೆ; ಅದನ್ನು ಸಮರುವವರು ಫಲ ಕೊಡುವಂತೆ ಒತ್ತಾಯಮಾಡುತ್ತಾರೆ.”

ಸೊಂಪಾಗಿ ಬೆಳೆದಿದ್ದರೂ ಯಾವುದೇ ಫಲಕೊಡದ ಮರಗಳ ಬಗ್ಗೆ ವಿವರಿಸುವಾಗ ಅವರು ಶಿಫಾರಸ್ಸು ಮಾಡಿದ್ದೇನೆಂದರೆ: “ಫಲಕೊಡದ ಮರದಲ್ಲಿ ತೂತು ಕೊರೆದು ಆ ರಂಧ್ರದೊಳಗೆ ಕಾಡು ಆಲೀವ್‌ ಮರದ ಹಸಿರು ಕೊಂಬೆಯನ್ನು ಸೇರಿಸಿ. ಹೀಗೆ ಮಾಡುವುದಾದರೆ ಫಲಕೊಡದ ಮರವೂ ಫಲಕೊಡುತ್ತದೆ.”

[ಪುಟ 23ರಲ್ಲಿರುವ ಚಿತ್ರ]

ಸಾಂಕೇತಿಕ ಆಲೀವ್‌ ಮರದ ದೃಷ್ಟಾಂತವನ್ನು ನೀವು ಅರ್ಥಮಾಡಿಕೊಂಡಿರೋ?