ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಒಳ್ಳೆಯ ಮೇಲ್ವಿಚಾರಕ, ಪ್ರಿಯ ಸ್ನೇಹಿತ”

“ಒಳ್ಳೆಯ ಮೇಲ್ವಿಚಾರಕ, ಪ್ರಿಯ ಸ್ನೇಹಿತ”

“ಒಳ್ಳೆಯ ಮೇಲ್ವಿಚಾರಕ, ಪ್ರಿಯ ಸ್ನೇಹಿತ”

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದ ಜಾನ್‌ (ಜ್ಯಾಕ್‌) ಬಾರ್‌ರವರು 2010, ಡಿಸೆಂಬರ್‌ 4ರ ಶನಿವಾರ ಬೆಳಿಗ್ಗೆ ತಮ್ಮ ಭೂಜೀವಿತವನ್ನು ಮುಗಿಸಿದರು. ಅವರಿಗೆ 97 ವರ್ಷವಾಗಿತ್ತು. ಅವರನ್ನು “ಒಳ್ಳೆಯ ಮೇಲ್ವಿಚಾರಕ, ಪ್ರಿಯ ಸ್ನೇಹಿತ” ಎಂದು ವರ್ಣಿಸಲಾಗುತ್ತಿತ್ತು.

ಸ್ಕಾಟ್ಲೆಂಡ್‌ನ ಅಬರ್ಡೀನ್‌ನಲ್ಲಿ ಜನಿಸಿದ ಸಹೋದರ ಜ್ಯಾಕ್‌ ಬಾರ್‌ರವರು ಮೂರು ಮಂದಿ ಮಕ್ಕಳಲ್ಲಿ ಕೊನೆಯವರು. ಅಪ್ಪಅಮ್ಮ ಇಬ್ಬರೂ ಅಭಿಷಿಕ್ತರು. ಸಹೋದರ ಬಾರ್‌ರವರು ತಮ್ಮ ಬಾಲ್ಯದ ಕುರಿತು ಮೆಚ್ಚುಗೆಯಿಂದ ಮಾತಾಡುತ್ತಿದ್ದರು. ಅಲ್ಲದೆ ತಮ್ಮ ಪ್ರೀತಿಯ ತಂದೆತಾಯಿ ಇಟ್ಟ ಅತ್ಯುತ್ಕೃಷ್ಟ ಮಾದರಿಗೆ ಆಭಾರಿಯಾಗಿದ್ದರು.

ಹದಿವಯಸ್ಸಿಗೆ ಕಾಲಿಟ್ಟಾಗ ಜ್ಯಾಕ್‌ರವರಿಗೆ ಅಪರಿಚಿತರ ಬಳಿ ಹೋಗಿ ಮಾತಾಡಲು ತುಂಬ ಕಷ್ಟವೆನಿಸುತ್ತಿತ್ತು. ಆದರೆ ಅವರು ಆ ಸಮಸ್ಯೆಯನ್ನು ಮೆಟ್ಟಿನಿಲ್ಲಲು ಶ್ರಮಿಸಿದರು. ಅವರು ತಮ್ಮ 14ನೇ ವಯಸ್ಸಿನಲ್ಲಿ ಅಂದರೆ 1927ರ ಒಂದು ಭಾನುವಾರ ಮಧ್ಯಾಹ್ನದಂದು ತಂದೆಯ ಬಳಿ ಹೋಗಿ ಮನೆಮನೆಯ ಸಾರುವಿಕೆಯಲ್ಲಿ ತಾನೂ ಜೊತೆಗೂಡುವುದಾಗಿ ತಿಳಿಸಿದರು. ಅದೇ ಆರಂಭ. ಅಂದಿನಿಂದ ಹಿಡಿದು ಮರಣದ ತನಕ ಅವರು ಸುವಾರ್ತೆಯ ಹುರುಪಿನ ಘೋಷಕರಾಗಿದ್ದರು.

1929ರಲ್ಲಿ ಅವರ ಪ್ರೀತಿಯ ತಾಯಿ ದುರಂತಕರ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡರು. ಈ ಘಟನೆ ಜ್ಯಾಕ್‌ರನ್ನು ಜೀವನದ ಉದ್ದೇಶದ ಕುರಿತು ಗಂಭೀರವಾಗಿ ಆಲೋಚಿಸುವಂತೆ ಮಾಡಿತು. ಅದೇ ವರ್ಷ ಅವರು ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡರು. 1934ರಲ್ಲಿ ಅವರಿಗೆ ಅವಕಾಶ ಸಿಕ್ಕಿದಾಗ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನಹೊಂದಿದರು. ತದನಂತರ 1939ರಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ಬೆತೆಲ್‌ ಕುಟುಂಬದ ಸದಸ್ಯರಾದರು. ಹೀಗೆ ಅವರ 71 ವರ್ಷಗಳ ಪೂರ್ಣ ಸಮಯದ ಸೇವೆ ಆರಂಭವಾಯಿತು.

ದೀರ್ಘ ಸಮಯದಿಂದ ಹುರುಪಿನ ಪಯನೀಯರ್‌ ಮತ್ತು ಮಿಷನೆರಿಯಾಗಿದ್ದ ಮಿಲ್ಡ್ರಡ್‌ ವಿಲೆಟ್‌ರನ್ನು 1960ರ ಅಕ್ಟೋಬರ್‌ 29ರಂದು ಅವರು ಮದುವೆಯಾದರು. ಅವರು ತಮ್ಮ ವೈವಾಹಿಕ ಸಂಬಂಧವನ್ನು “ವಿಶೇಷವಾದ ಅಮೂಲ್ಯ ಸಂಬಂಧ” ಎಂದು ಕರೆಯುತ್ತಿದ್ದರು. ಸಹೋದರ ಮತ್ತು ಸಹೋದರಿ ಬಾರ್‌ ನಿಷ್ಠೆಯುಳ್ಳ ಆದರ್ಶ ದಂಪತಿಯಾಗಿದ್ದರು. 2004ರ ಅಕ್ಟೋಬರ್‌ನಲ್ಲಿ ಮಿಲ್ಡ್ರಡ್‌ರವರು ತಮ್ಮ ಭೂಜೀವಿತವನ್ನು ಮುಗಿಸುವವರೆಗೂ ಅವರು ಹಾಗೇ ಉಳಿದರು. ಸಹೋದರ ಮತ್ತು ಸಹೋದರಿ ಬಾರ್‌ರವರು ತಮ್ಮ ವೈವಾಹಿಕ ಜೀವಿತದ ಪ್ರತಿಯೊಂದು ದಿನವೂ ಬೈಬಲನ್ನು ಒಟ್ಟಿಗೆ ಓದುತ್ತಿದ್ದರು.

ಜ್ಯಾಕ್‌ ಬಾರ್‌ ಬಗ್ಗೆ ತಿಳಿದಿರುವವರಿಗೆ ಅವರ ಹೆಸರನ್ನು ಕೇಳಿದೊಡನೆ ಅವರು ಕೊಡುತ್ತಿದ್ದ ವಿಚಾರಪರ ಬುದ್ಧಿವಾದ ಮನಸ್ಸಿಗೆ ಬರುತ್ತದೆ. ಅವರು ಯಾವಾಗಲೂ ಸಮತೂಕದ, ಪ್ರೀತಿಪರ ಹಾಗೂ ಶಾಸ್ತ್ರಗ್ರಂಥದ ಮೇಲೆ ಆಧರಿತವಾದ ಬುದ್ಧಿವಾದವನ್ನು ಕೊಡುತ್ತಿದ್ದರು. ಅವರು ಶ್ರಮಜೀವಿ, ಪರಿಗಣನೆಯುಳ್ಳ ಪ್ರೀತಿಪರ ಮೇಲ್ವಿಚಾರಕ ಮಾತ್ರವಲ್ಲ ನಿಷ್ಠಾವಂತ ಸ್ನೇಹಿತರೂ ಹೌದು. ಸತ್ಯಕ್ಕಾಗಿ ಅವರಿಗೆಷ್ಟು ಪ್ರೀತಿಯಿತ್ತು ಮತ್ತು ಯೆಹೋವನೊಂದಿಗಿನ ಅವರ ಸಂಬಂಧ ಎಷ್ಟು ಆಪ್ತವಾಗಿತ್ತು ಎನ್ನುವುದನ್ನು ಅವರ ಉತ್ತರಗಳು, ಭಾಷಣಗಳು, ಪ್ರಾರ್ಥನೆಗಳು ಸ್ಪಷ್ಟವಾಗಿ ತೋರಿಸುತ್ತಿದ್ದವು.

ಸಹೋದರ ಬಾರ್‌ರ ಅಗಲಿಕೆಯು ನಮಗೆ ದುಃಖವನ್ನು ತಂದಿದೆಯಾದರೂ ಅಮರತ್ವದ ಬಹುಮಾನವನ್ನು ಅವರು ಪಡೆದಿದ್ದಾರೆಂಬದಕ್ಕೆ ನಾವು ಹರ್ಷಿಸುತ್ತೇವೆ. ಆ ಸದವಕಾಶವನ್ನು ಅವರು ಎದುರುನೋಡುತ್ತಿದ್ದರು ಮತ್ತು ಅದರ ಬಗ್ಗೆ ಆಗಾಗ್ಗೆ ಮಾತಾಡುತ್ತಿದ್ದರು. ಅವರು ಅದಕ್ಕಾಗಿಯೇ ಹಾತೊರೆಯುತ್ತಿದ್ದರು.—1 ಕೊರಿಂ. 15:53, 54. *

[ಪಾದಟಿಪ್ಪಣಿ]

^ ಪ್ಯಾರ. 8 ಜಾನ್‌ ಇ. ಬಾರ್‌ರವರ ಜೀವನಕಥೆಗಾಗಿ 1987, ಜುಲೈ 1ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಪುಟ 26-31 ನೋಡಿ.