ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಕುಟುಂಬಗಳೇ, ‘ಎಚ್ಚರವಾಗಿರಿ’

ಕ್ರೈಸ್ತ ಕುಟುಂಬಗಳೇ, ‘ಎಚ್ಚರವಾಗಿರಿ’

ಕ್ರೈಸ್ತ ಕುಟುಂಬಗಳೇ, ‘ಎಚ್ಚರವಾಗಿರಿ’

“ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ ಇರೋಣ.”—1 ಥೆಸ. 5:6.

1, 2. ಕುಟುಂಬವು ಆಧ್ಯಾತ್ಮಿಕವಾಗಿ ಎಚ್ಚರವಾಗಿರಬೇಕಾದರೆ ಏನು ಮಾಡಬೇಕು?

‘ಯೆಹೋವನ ಭಯಂಕರವಾದ ಮಹಾದಿನದ’ ಕುರಿತು ತಿಳಿಸುತ್ತಾ ಅಪೊಸ್ತಲ ಪೌಲನು ಥೆಸಲೊನೀಕದ ಕ್ರೈಸ್ತರಿಗೆ ಬರೆದದ್ದು: “ಸಹೋದರರೇ, ಆ ದಿನವು ಕಳ್ಳರ ಮೇಲೆ ಬರುವಂತೆ ನಿಮ್ಮ ಮೇಲೆ ಫಕ್ಕನೆ ಬರಬಾರದು, ಏಕೆಂದರೆ ನೀವು ಕತ್ತಲೆಯಲ್ಲಿಲ್ಲ. ನೀವೆಲ್ಲರೂ ಬೆಳಕಿನ ಪುತ್ರರೂ ಹಗಲಿನ ಪುತ್ರರೂ ಆಗಿದ್ದೀರಿ. ನಾವು ರಾತ್ರಿಗಾಗಲಿ ಕತ್ತಲೆಗಾಗಲಿ ಸೇರಿದವರಲ್ಲ.” ಪೌಲನು ಕೂಡಿಸಿ ಹೇಳಿದ್ದು: “ಆದುದರಿಂದ ಉಳಿದವರಂತೆ ನಾವು ನಿದ್ರೆಮಾಡದೆ ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ ಇರೋಣ.”—ಯೋವೇ. 2:30; 1 ಥೆಸ. 5:4-6.

2 ಪೌಲನು ಥೆಸಲೊನೀಕದವರಿಗೆ ಕೊಟ್ಟ ಆ ಬುದ್ಧಿವಾದವು ‘ಅಂತ್ಯಕಾಲದಲ್ಲಿ’ ಜೀವಿಸುತ್ತಿರುವ ಕ್ರೈಸ್ತರಿಗೆ ಹೆಚ್ಚು ಸೂಕ್ತವಾಗಿದೆ. (ದಾನಿ. 12:4) ಸೈತಾನನಿಗೆ ತನ್ನ ದುಷ್ಟ ಲೋಕದ ಅಂತ್ಯ ಹತ್ತಿರವಾಗುತ್ತಿದೆಯೆಂದು ತಿಳಿದಿರುವುದರಿಂದ ಸಾಧ್ಯವಾದಷ್ಟು ಹೆಚ್ಚು ಸತ್ಯಾರಾಧಕರನ್ನು ದೇವರಿಂದ ವಿಮುಖಗೊಳಿಸಲು ಅವನು ಪಣತೊಟ್ಟಿದ್ದಾನೆ. ಆದ್ದರಿಂದ, ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯಬೇಕೆಂಬ ಪೌಲನ ಬುದ್ಧಿವಾದವನ್ನು ನಾವು ಹೃದಯಕ್ಕೆ ತೆಗೆದುಕೊಳ್ಳುವುದು ವಿವೇಕಯುತ. ಕ್ರೈಸ್ತ ಕುಟುಂಬವು ಎಚ್ಚರವಾಗಿರಬೇಕಾದರೆ, ಕುಟುಂಬದ ಪ್ರತಿ ಸದಸ್ಯನು ತನ್ನ ತನ್ನ ಶಾಸ್ತ್ರಾಧಾರಿತ ಜವಾಬ್ದಾರಿಯನ್ನು ಪೂರೈಸಲೇಬೇಕು. ಹಾಗಾದರೆ, ತಮ್ಮ ಕುಟುಂಬ ‘ಎಚ್ಚರವಾಗಿರುವಂತೆ’ ಸಹಾಯಮಾಡುವುದರಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳಿಗೆ ಯಾವ ಪಾಲಿದೆ?

ಗಂಡಂದಿರೇ, ‘ಒಳ್ಳೆಯ ಕುರುಬನನ್ನು’ ಅನುಕರಿಸಿ

3. ಒಂದನೇ ತಿಮೊಥೆಯ 5:8ಕ್ಕನುಸಾರ ಕುಟುಂಬದ ತಲೆಯಾಗಿರುವ ಪುರುಷನಿಗೆ ಯಾವ ಜವಾಬ್ದಾರಿಯಿದೆ?

3 “ಸ್ತ್ರೀಗೆ ಪುರುಷನು ತಲೆ” ಎನ್ನುತ್ತದೆ ಬೈಬಲ್‌. (1 ಕೊರಿಂ. 11:3) ಕುಟುಂಬದ ತಲೆಯಾಗಿರುವ ಪುರುಷನಿಗೆ ಯಾವ ಜವಾಬ್ದಾರಿಯಿದೆ? ತಲೆತನದ ಒಂದು ಅಂಶವನ್ನು ಒತ್ತಿಹೇಳುತ್ತಾ ಬೈಬಲ್‌ ತಿಳಿಸುವುದು: “ಯಾವನಾದರೂ ತನ್ನ ಸ್ವಂತದವರಿಗೆ, ವಿಶೇಷವಾಗಿ ತನ್ನ ಮನೆವಾರ್ತೆಯ ಸದಸ್ಯರಿಗೆ ಅಗತ್ಯವಿರುವುದನ್ನು ಒದಗಿಸದಿದ್ದರೆ ಅವನು ನಂಬಿಕೆಯನ್ನು ನಿರಾಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊ. 5:8) ಹೌದು, ಪುರುಷನು ತನ್ನ ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸಲೇಬೇಕು. ಆದರೆ ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯುವಂತೆ ತನ್ನ ಕುಟುಂಬಕ್ಕೆ ಸಹಾಯ ಮಾಡಬೇಕಾದರೆ, ಅವನು ಕುಟುಂಬಕ್ಕೆ ಕೇವಲ ಅನ್ನವಸ್ತ್ರಗಳನ್ನು ಒದಗಿಸಿದರಷ್ಟೇ ಸಾಲದು. ಅವನು ತನ್ನ ಕುಟುಂಬವನ್ನು ಆಧ್ಯಾತ್ಮಿಕವಾಗಿ ಕಟ್ಟಬೇಕು, ಅಂದರೆ ದೇವರೊಂದಿಗೆ ಸುಸಂಬಂಧವನ್ನು ಇಟ್ಟುಕೊಳ್ಳುವಂತೆ ಮನೆಮಂದಿಯೆಲ್ಲರಿಗೂ ಸಹಾಯಮಾಡಬೇಕು. (ಜ್ಞಾನೋ. 24:3, 4) ಅವನದನ್ನು ಹೇಗೆ ಮಾಡಬಹುದು?

4. ಕುಟುಂಬವನ್ನು ಆಧ್ಯಾತ್ಮಿಕವಾಗಿ ಕಟ್ಟುವುದರಲ್ಲಿ ಸಫಲನಾಗಬೇಕಾದರೆ ಪುರುಷನೊಬ್ಬನು ಏನು ಮಾಡಬೇಕು?

4 “ಕ್ರಿಸ್ತನು ಸಭೆಯೆಂಬ ದೇಹದ . . . ಶಿರಸ್ಸಾಗಿರುವಂತೆಯೇ ಗಂಡನು ತನ್ನ ಹೆಂಡತಿಗೆ ಶಿರಸ್ಸಾಗಿದ್ದಾನೆ.” ಆದ್ದರಿಂದ ಯೇಸು ಸಭೆಯ ಮೇಲೆ ತಲೆತನವನ್ನು ನಿರ್ವಹಿಸುತ್ತಿರುವ ವಿಧವನ್ನು ವಿವಾಹಿತ ಪುರುಷನು ಪರಿಶೀಲಿಸಿ ಅನುಕರಿಸಬೇಕು. (ಎಫೆ. 5:23) ತನ್ನ ಹಿಂಬಾಲಕರೊಂದಿಗೆ ತನಗಿದ್ದ ಸಂಬಂಧವನ್ನು ಯೇಸು ಹೇಗೆ ವಿವರಿಸಿದನೆಂಬದನ್ನು ಪರಿಗಣಿಸಿ. (ಯೋಹಾನ 10:14, 15 ಓದಿ.) ತನ್ನ ಕುಟುಂಬವನ್ನು ಆಧ್ಯಾತ್ಮಿಕವಾಗಿ ಕಟ್ಟಲಿಚ್ಛಿಸುವ ಪುರುಷನು ಅದರಲ್ಲಿ ಸಫಲನಾಗಬೇಕಾದರೆ ಏನು ಮಾಡಬೇಕು? ‘ಒಳ್ಳೆಯ ಕುರುಬನಾದ’ ಯೇಸುವಿನ ಮಾತುಗಳನ್ನೂ ಕ್ರಿಯೆಗಳನ್ನೂ ಅಧ್ಯಯನಮಾಡಿ ಅವನ ‘ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಬೇಕು.’—1 ಪೇತ್ರ 2:21.

5. ಒಳ್ಳೆಯ ಕುರುಬನಿಗೆ ಸಭೆಯ ಬಗ್ಗೆ ಎಷ್ಟು ತಿಳಿದಿದೆ?

5 ಕುಟುಂಬದ ಶಿರಸ್ಸು ಕ್ರಿಸ್ತನ ಮಾದರಿಯಿಂದ ಯಾವ ಪಾಠಗಳನ್ನು ಕಲಿಯಬಹುದೆಂಬದನ್ನು ನಾವೀಗ ಪರಿಗಣಿಸೋಣ. ಕುರುಬ ಹಾಗೂ ಅವನ ಕುರಿಗಳ ನಡುವಣ ಸಂಬಂಧವು ತಿಳುವಳಿಕೆ ಮತ್ತು ಭರವಸೆಯ ಮೇಲೆ ಆಧರಿತವಾಗಿರುತ್ತದೆ. ಕುರುಬನಿಗೆ ತನ್ನ ಕುರಿಗಳ ಬಗ್ಗೆ ಎಲ್ಲವೂ ತಿಳಿದಿರುತ್ತದೆ. ಅಂತೆಯೇ ಕುರಿಗಳೂ ತಮ್ಮ ಕುರುಬನನ್ನು ತಿಳಿದಿರುತ್ತವೆ ಹಾಗೂ ಅವನ ಮೇಲೆ ಭರವಸೆಯಿಡುತ್ತವೆ. ಅವು ಅವನ ಸ್ವರವನ್ನು ಗುರುತಿಸಿ ಅವನು ಹೇಳಿದಂತೆ ಕೇಳುತ್ತವೆ. ಯೇಸು ಹೇಳಿದ್ದು: “ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ ಮತ್ತು ನನ್ನ ಕುರಿಗಳು ನನ್ನನ್ನು ತಿಳಿದಿವೆ.” ಸಭೆಯ ಬಗ್ಗೆ ಯೇಸುವಿಗಿರುವ ಪರಿಚಯ ಕೇವಲ ಮೇಲ್ನೋಟದ್ದಲ್ಲ. ಈ ವಚನದಲ್ಲಿ “ತಿಳಿದಿದ್ದೇನೆ” ಎಂಬುದಕ್ಕೆ ಗ್ರೀಕ್‌ ಭಾಷೆಯಲ್ಲಿ ಉಪಯೋಗಿಸಲಾದ ಪದವು, “ವೈಯಕ್ತಿಕವಾದ, ಆಪ್ತ ಪರಿಚಯವನ್ನು” ಸೂಚಿಸುತ್ತದೆ. ಹೌದು, ಒಳ್ಳೆಯ ಕುರುಬನಾದ ಯೇಸು ತನ್ನ ಕುರಿಗಳಲ್ಲಿ ಪ್ರತಿಯೊಂದನ್ನು ವೈಯಕ್ತಿಕವಾಗಿ ಬಲ್ಲನು. ಅವುಗಳಲ್ಲಿ ಪ್ರತಿಯೊಂದರ ಅಗತ್ಯಗಳು, ಬಲಹೀನತೆಗಳು, ಸಾಮರ್ಥ್ಯಗಳು ಅವನಿಗೆ ಗೊತ್ತು. ನಮಗೆ ಮಾದರಿಯಾಗಿರುವ ಯೇಸುವಿಗೆ, ತನ್ನ ಕುರಿಗಳ ಬಗ್ಗೆ ತಿಳಿಯದಿರುವ ವಿಷಯ ಒಂದೂ ಇಲ್ಲ. ಕುರಿಗಳೂ ಕುರುಬನನ್ನು ಚೆನ್ನಾಗಿ ತಿಳಿದಿವೆ. ಅವು ಅವನ ಮುಂದಾಳುತ್ವದಲ್ಲಿ ಭರವಸೆಯಿಡುತ್ತವೆ.

6. ಗಂಡಂದಿರು ಒಳ್ಳೆಯ ಕುರುಬನನ್ನು ಹೇಗೆ ಅನುಕರಿಸಬಹುದು?

6 ಗಂಡನು ತಲೆತನವನ್ನು ನಿರ್ವಹಿಸುವಾಗ ಕ್ರಿಸ್ತನನ್ನು ಅನುಕರಿಸಬೇಕಾದರೆ, ತನ್ನನ್ನು ಕುರುಬನೋಪಾದಿಯೂ ತನ್ನ ಪರಾಮರಿಕೆಯ ಕೆಳಗಿರುವವರನ್ನು ಕುರಿಗಳೋಪಾದಿಯೂ ಪರಿಗಣಿಸಲು ಕಲಿಯಬೇಕು. ತನ್ನ ಕುಟುಂಬದವರನ್ನು ಚೆನ್ನಾಗಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇದು ಸಾಧ್ಯವೋ? ಖಂಡಿತ ಸಾಧ್ಯ. ಅವನು ತನ್ನ ಕುಟುಂಬದ ಎಲ್ಲ ಸದಸ್ಯರೊಂದಿಗೆ ಉತ್ತಮವಾಗಿ ಸಂವಾದಿಸುವಲ್ಲಿ, ಅವರ ಅನಿಸಿಕೆಗಳಿಗೆ ಕಿವಿಗೊಡುವಲ್ಲಿ ಮತ್ತು ಕುಟುಂಬದ ಕಾರ್ಯಕಲಾಪಗಳಲ್ಲಿ ಮುಂದಾಳುತ್ವ ವಹಿಸುವಲ್ಲಿ ಅದು ಸಾಧ್ಯ. ಅಲ್ಲದೆ ಕುಟುಂಬ ಆರಾಧನೆ, ಕೂಟಗಳ ಹಾಜರಿ, ಕ್ಷೇತ್ರ ಸೇವೆ, ವಿನೋದವಿಹಾರ ಹಾಗೂ ಮನೋರಂಜನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ನಿರ್ಣಯಗಳನ್ನು ಮಾಡುವಾಗಲೂ ಅವನು ತನ್ನ ಕುಟುಂಬ ಸದಸ್ಯರ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಕ್ರೈಸ್ತ ಗಂಡನು, ದೇವರ ವಾಕ್ಯದ ತಿಳುವಳಿಕೆ ಹಾಗೂ ಕುಟುಂಬದ ಸದಸ್ಯರ ಒಳ್ಳೆಯ ಪರಿಚಯದೊಂದಿಗೆ ಮುಂದಾಳುತ್ವ ವಹಿಸುವಲ್ಲಿ ಕುಟುಂಬ ಸದಸ್ಯರು ಅವನ ತಲೆತನದಲ್ಲಿ ಭರವಸೆಯಿಡುವರು. ಅಷ್ಟೇ ಅಲ್ಲ, ತನ್ನ ಕುಟುಂಬವು ಸತ್ಯಾರಾಧನೆಯಲ್ಲಿ ಐಕ್ಯವಾಗಿರುವುದನ್ನು ನೋಡುವ ಸಂತೃಪ್ತಿ ಅವನದ್ದಾಗುವುದು.

7, 8. ಗಂಡನು ತನ್ನ ಪರಾಮರಿಕೆಯ ಕೆಳಗಿರುವವರಿಗೆ ಪ್ರೀತಿ ತೋರಿಸುವ ವಿಷಯದಲ್ಲಿ ಒಳ್ಳೆಯ ಕುರುಬನನ್ನು ಹೇಗೆ ಅನುಕರಿಸಬಹುದು?

7 ಒಳ್ಳೆಯ ಕುರುಬನು ತನ್ನ ಕುರಿಗಳನ್ನು ಪ್ರೀತಿಸುತ್ತಾನೆ ಸಹ. ಯೇಸುವಿನ ಜೀವನ ಹಾಗೂ ಶುಶ್ರೂಷೆಯ ಕುರಿತ ಸುವಾರ್ತಾ ವೃತ್ತಾಂತಗಳನ್ನು ನಾವು ಅಧ್ಯಯನ ಮಾಡುವಾಗ ಅವನು ತನ್ನ ಶಿಷ್ಯರಿಗೆ ತೋರಿಸಿದ ಪ್ರೀತಿಯನ್ನು ನೋಡಿ ನಮ್ಮ ಹೃದಯವು ಗಣ್ಯತೆಯಿಂದ ಉಕ್ಕುವುದು. ಅವನು ‘ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಟ್ಟನು.’ ಗಂಡಂದಿರು ತಮ್ಮ ಪರಾಮರಿಕೆಯ ಕೆಳಗಿರುವವರಿಗೆ ಪ್ರೀತಿ ತೋರಿಸುವುದರಲ್ಲಿ ಯೇಸುವನ್ನು ಅನುಕರಿಸಬೇಕು. ದೇವರ ಅನುಗ್ರಹವನ್ನು ಪಡೆಯಲಿಚ್ಛಿಸುವ ಗಂಡನು ತನ್ನ ಹೆಂಡತಿಯ ಮೇಲೆ ನಿರ್ದಯವಾಗಿ ಅಧಿಕಾರ ಚಲಾಯಿಸುವುದಿಲ್ಲ. ಬದಲಾಗಿ, ‘ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆಯೇ’ ಅವನು ತನ್ನ ಹೆಂಡತಿಯನ್ನು ಪ್ರೀತಿಸುವನು. (ಎಫೆ. 5:25) ಅವನು ಆಕೆಯೊಂದಿಗೆ ದಯಾಪೂರ್ವಕವಾಗಿಯೂ ಪರಿಗಣನೆಯಿಂದಲೂ ಮಾತಾಡಬೇಕು. ಏಕೆಂದರೆ ಆಕೆ ಗೌರವಕ್ಕೆ ಅರ್ಹಳು.—1 ಪೇತ್ರ 3:7.

8 ಮಕ್ಕಳನ್ನು ತರಬೇತುಗೊಳಿಸುವಾಗ ಕುಟುಂಬದ ಶಿರಸ್ಸು ದೈವಿಕ ಮೂಲತತ್ತ್ವಗಳಿಗೆ ಅಂಟಿಕೊಳ್ಳಬೇಕು. ಹಾಗಿದ್ದರೂ ತನ್ನ ಮಕ್ಕಳಿಗೆ ಪ್ರೀತಿ ತೋರಿಸಲು ಅವನು ಮರೆಯಬಾರದು. ಅಗತ್ಯಬಿದ್ದಲ್ಲಿ ಶಿಸ್ತನ್ನು ಕೊಡಬೇಕಾದರೂ ಅದು ಸಹ ಪ್ರೀತಿಯಿಂದ ಕೂಡಿರಬೇಕು. ಹೆತ್ತವರು ತಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆಂಬುದನ್ನು ಅರ್ಥಮಾಡಿಕೊಳ್ಳಲು ಕೆಲವು ಮಕ್ಕಳು ತುಂಬ ಸಮಯ ತೆಗೆದುಕೊಳ್ಳಬಹುದು. ಅಂಥ ಮಕ್ಕಳಿಗೆ ತಂದೆ ಹೆಚ್ಚಿನ ತಾಳ್ಮೆ ತೋರಿಸಬೇಕು. ಪುರುಷರು ಯೇಸುವಿನ ಮಾದರಿಯನ್ನು ಸದಾ ಅನುಸರಿಸುವಾಗ ಮನೆಯಲ್ಲಿ ಸುರಕ್ಷಿತವೂ ಸುಭದ್ರವೂ ಆದ ಪರಿಸರವನ್ನು ಸೃಷ್ಟಿಸುವರು. ಕೀರ್ತನೆಗಾರನು ಯಾವ ಆಧ್ಯಾತ್ಮಿಕ ಸುಭದ್ರತೆಯ ಬಗ್ಗೆ ಹಾಡಿದನೋ ಅದನ್ನು ಅವರ ಕುಟುಂಬಗಳೂ ಆನಂದಿಸುವವು.—ಕೀರ್ತನೆ 23:1-6 ಓದಿ.

9. ಪೂರ್ವಜನಾದ ನೋಹನಿಗಿದ್ದಂತೆ ಕ್ರೈಸ್ತ ಗಂಡಂದಿರಿಗೆ ಯಾವ ಜವಾಬ್ದಾರಿಯಿದೆ? ಅದನ್ನು ನಿರ್ವಹಿಸಲು ಅವರಿಗೆ ಯಾವುದು ಸಹಾಯಮಾಡುತ್ತದೆ?

9 ಕುಟುಂಬದ ಶಿರಸ್ಸುಗಳಿಗೆ ನೋಹನು ಸಹ ಉತ್ತಮ ಮಾದರಿಯಾಗಿದ್ದಾನೆ. ಪೂರ್ವಜನಾದ ನೋಹನು ತನ್ನ ದಿನಗಳಲ್ಲಿನ ಲೋಕವು ಅಂತ್ಯಗೊಳ್ಳುವ ಸಮಯಾವಧಿಯಲ್ಲಿ ಜೀವಿಸಿದ್ದನು. ಯೆಹೋವನು ‘ಭಕ್ತಿಹೀನ ಜನರ ಆ ಲೋಕದ ಮೇಲೆ ಜಲಪ್ರಳಯವನ್ನು ಬರಮಾಡಿದಾಗ’ ನೋಹನನ್ನೂ ಅವನೊಂದಿಗೆ “ಬೇರೆ ಏಳು ಮಂದಿಯನ್ನೂ ರಕ್ಷಿಸಿದನು.” (2 ಪೇತ್ರ 2:5) ಜಲಪ್ರಳಯದಿಂದ ಪಾರಾಗಲು ತನ್ನ ಕುಟುಂಬಕ್ಕೆ ಸಹಾಯಮಾಡುವ ಜವಾಬ್ದಾರಿ ನೋಹನಿಗಿತ್ತು. ಈ ಕಡೇ ದಿವಸಗಳಲ್ಲಿ ಕ್ರೈಸ್ತ ಕುಟುಂಬದ ಶಿರಸ್ಸುಗಳಿಗೂ ತದ್ರೀತಿಯ ಜವಾಬ್ದಾರಿಯಿದೆ. (ಮತ್ತಾ. 24:37) ಆದ್ದರಿಂದ ಅವರು ‘ಒಳ್ಳೆಯ ಕುರುಬನ’ ಮಾದರಿಯನ್ನು ಅಧ್ಯಯನಮಾಡಿ ಅವನನ್ನು ಅನುಕರಿಸುವುದು ಅತ್ಯಾವಶ್ಯಕವೇ ಸರಿ!

ಹೆಂಡತಿಯರೇ, ‘ನಿಮ್ಮ ಮನೆಯನ್ನು ಕಟ್ಟಿರಿ’

10. ಹೆಂಡತಿ ಗಂಡನಿಗೆ ಅಧೀನಳಾಗಿರಬೇಕು ಎಂಬುದರ ಅರ್ಥವೇನು?

10 “ಕರ್ತನಿಗೆ ಹೇಗೋ ಹಾಗೆಯೇ ಹೆಂಡತಿಯರು ತಮ್ಮತಮ್ಮ ಗಂಡಂದಿರಿಗೆ ಅಧೀನರಾಗಿರಲಿ” ಎಂದು ಅಪೊಸ್ತಲ ಪೌಲನು ಬರೆದನು. (ಎಫೆ. 5:22) ಈ ಹೇಳಿಕೆ ಯಾವುದೇ ರೀತಿಯಲ್ಲಿ ಸ್ತ್ರೀಯ ಸ್ಥಾನವನ್ನು ಅಗೌರವಯುತವಾಗಿ ಬಿಂಬಿಸುವುದಿಲ್ಲ. ಪ್ರಥಮ ಸ್ತ್ರೀಯಾದ ಹವ್ವಳನ್ನು ಸೃಷ್ಟಿಸುವುದಕ್ಕೂ ಮುನ್ನ ಸತ್ಯದೇವರು ತಿಳಿಸಿದ್ದು: “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು.” (ಆದಿ. 2:18) ಹೌದು, ‘ಸಹಕಾರಿಣಿಯಾಗಿರುವ’ ಅಂದರೆ ಗಂಡನು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅವನಿಗೆ ಸಹಕಾರ ನೀಡುವ ಸದವಕಾಶ ಹೆಂಡತಿಗಿದೆ. ಇದು ನಿಜಕ್ಕೂ ಗೌರವಯುತ ಸ್ಥಾನವಾಗಿದೆ.

11. ಆದರ್ಶ ಪತ್ನಿ ಹೇಗೆ ‘ತನ್ನ ಮನೆಯನ್ನು ಕಟ್ಟಿಕೊಳ್ಳುವಳು?’

11 ಆದರ್ಶ ಪತ್ನಿ ತನ್ನ ಮನೆಮಂದಿಯ ಒಳಿತಿಗಾಗಿ ಶ್ರಮಿಸುವಳು. (ಜ್ಞಾನೋಕ್ತಿ 14:1 ಓದಿ.) ಜ್ಞಾನಹೀನಳು ತಲೆತನದ ಏರ್ಪಾಡಿಗೆ ಅಗೌರವ ತೋರಿಸುವಳು. ಜ್ಞಾನವಂತೆಯಾದರೋ ಆ ಏರ್ಪಾಡನ್ನು ಆಳವಾಗಿ ಗೌರವಿಸುವಳು. ಲೋಕದ ಅವಿಧೇಯ ಮತ್ತು ಸ್ವತಂತ್ರ ಮನೋಭಾವವನ್ನು ತೋರಿಸದೆ ತನ್ನ ಬಾಳಸಂಗಾತಿಗೆ ಅಧೀನಳಾಗಿರುವಳು. (ಎಫೆ. 2:2) ಜ್ಞಾನಹೀನಳಾದ ಪತ್ನಿಯು ಇತರರ ಮುಂದೆ ತನ್ನ ಗಂಡನನ್ನು ಅವಮಾನಿಸಲೂ ಹೇಸಳು. ಆದರೆ ಜ್ಞಾನವಂತೆಯಾದರೋ ತನ್ನ ಗಂಡನ ಮೇಲೆ ಮಕ್ಕಳಿಗೂ ಇತರರಿಗೂ ಇರುವ ಗೌರವವನ್ನು ಇನ್ನಷ್ಟು ಹೆಚ್ಚಿಸುವಳು. ಅಂಥ ಪತ್ನಿಯು ಗಂಡನಿಗೆ ಬೈಯುತ್ತಾ ಅಥವಾ ಅವನೊಂದಿಗೆ ವಾಗ್ವಾದ ಮಾಡುತ್ತಾ ತಲೆತನವನ್ನು ಎಂದೂ ಅಗೌರವಿಸಳು. ಆಕೆ ಮಿತವ್ಯಯಿಯೂ ಆಗಿರುವಳು. ಜ್ಞಾನಹೀನಳಾದ ಸ್ತ್ರೀಯು ದುಂದುವೆಚ್ಚ ಮಾಡಿ ಕುಟುಂಬವು ಕಷ್ಟಪಟ್ಟು ಸಂಪಾದಿಸಿದ್ದೆಲ್ಲವನ್ನೂ ಹಾಳುಮಾಡುವಳು. ಆದರೆ ಒಳ್ಳೆಯ ಸಹಕಾರಿಣಿಯಾಗಿರುವ ಹೆಂಡತಿಯು ಹಾಗಿರದೆ ಹಣಕಾಸಿನ ವಿಚಾರಗಳಲ್ಲಿ ಗಂಡನೊಂದಿಗೆ ಸಹಕರಿಸುವಳು. ವಿವೇಕ ಹಾಗೂ ಮಿತವ್ಯಯದಿಂದ ಆಕೆ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಳು. ಅಧಿಕಾವಧಿಯ ಕೆಲಸ ಮಾಡುವಂತೆಯೂ ತನ್ನ ಗಂಡನನ್ನು ಒತ್ತಾಯಿಸಳು.

12. ಕುಟುಂಬವು “ಎಚ್ಚರವಾಗಿ” ಉಳಿಯಲು ಹೆಂಡತಿ ಏನು ಮಾಡಬಲ್ಲಳು?

12 ಆದರ್ಶ ಹೆಂಡತಿಯು, ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣ ಒದಗಿಸುವುದರಲ್ಲಿ ಗಂಡನಿಗೆ ನೆರವು ನೀಡುವಳು. ಹೀಗೆ ಇಡೀ ಕುಟುಂಬ “ಎಚ್ಚರವಾಗಿ” ಉಳಿಯಲು ಸಹಾಯ ಮಾಡುವಳು. (ಜ್ಞಾನೋ. 1:8) ಕುಟುಂಬ ಆರಾಧನೆಯ ಏರ್ಪಾಡನ್ನು ಆಕೆ ಸಕ್ರಿಯವಾಗಿ ಬೆಂಬಲಿಸುವಳು. ಜೊತೆಗೆ, ಗಂಡನು ಮಕ್ಕಳಿಗೆ ಸಲಹೆ ಹಾಗೂ ಶಿಸ್ತನ್ನು ನೀಡುವಾಗ ಅವನೊಂದಿಗೆ ಸಹಕರಿಸುವಳು. ಗಂಡನೊಂದಿಗೆ ಸಹಕರಿಸದ ಸ್ತ್ರೀಯ ಮಕ್ಕಳಾದರೋ ದೈಹಿಕವಾಗಿಯೂ ಆಧ್ಯಾತ್ಮಿಕವಾಗಿಯೂ ನರಳುವರು! ಜ್ಞಾನವಂತೆಗೂ ಜ್ಞಾನಹೀನಳಿಗೂ ಎಷ್ಟೊಂದು ವ್ಯತ್ಯಾಸ!

13. ಗಂಡನು ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಒಳಗೂಡಿರುವಾಗ ಹೆಂಡತಿಯು ಅವನನ್ನು ಬೆಂಬಲಿಸುವುದು ಪ್ರಾಮುಖ್ಯವೇಕೆ?

13 ತನ್ನ ಗಂಡನು ಕ್ರೈಸ್ತ ಸಭೆಯಲ್ಲಿ ಸಕ್ರಿಯ ಪಾತ್ರವಹಿಸುತ್ತಿರುವುದನ್ನು ನೋಡುವಾಗ ಬೆಂಬಲ ನೀಡುವ ಹೆಂಡತಿಗೆ ಹೇಗನಿಸುತ್ತದೆ? ಆಕೆ ತುಂಬ ಹರ್ಷಿಸುತ್ತಾಳೆ! ತನ್ನ ಗಂಡ ಶುಶ್ರೂಷಾ ಸೇವಕನಾಗಿರಲಿ, ಹಿರಿಯನಾಗಿರಲಿ ಇಲ್ಲವೆ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿ ಅಥವಾ ಕಿಂಗ್‌ಡಮ್‌ ಹಾಲ್‌ ಆಪರೇಟಿಂಗ್‌ ಕಮಿಟಿಯ ಸದಸ್ಯರಲ್ಲೊಬ್ಬನಾಗಿರಲಿ, ಆಕೆ ಅವನ ಸುಯೋಗವನ್ನು ನೋಡಿ ಸಂತೋಷಪಡುತ್ತಾಳೆ. ಆಕೆ ತನ್ನ ಮಾತುಗಳಿಂದಲೂ ಕ್ರಿಯೆಗಳಿಂದಲೂ ಗಂಡನನ್ನು ಸದಾ ಬೆಂಬಲಿಸಲು ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ ನಿಜ. ಹಾಗಿದ್ದರೂ ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ತನ್ನ ಗಂಡ ಒಳಗೂಡಿರುವುದರಿಂದಲೇ ಆಧ್ಯಾತ್ಮಿಕವಾಗಿ ಎಚ್ಚರವಾಗಿರಲು ಇಡೀ ಕುಟುಂಬಕ್ಕೆ ಸಹಾಯ ಸಿಗುತ್ತಿದೆ ಎನ್ನುವುದನ್ನು ಆಕೆ ಅರ್ಥಮಾಡಿಕೊಳ್ಳುತ್ತಾಳೆ.

14. (ಎ) ಬೆಂಬಲ ನೀಡುವ ಹೆಂಡತಿಗೆ ಯಾವಾಗ ಸವಾಲೆದುರಾಗಬಹುದು? ಆಕೆ ಅದನ್ನು ಹೇಗೆ ನಿಭಾಯಿಸಬಲ್ಲಳು? (ಬಿ) ಹೆಂಡತಿಯು ಹೇಗೆ ಇಡೀ ಕುಟುಂಬದ ಹಿತಕ್ಷೇಮಕ್ಕೆ ನೆರವಾಗಬಲ್ಲಳು?

14 ಗಂಡನು ಮಾಡುವ ನಿರ್ಣಯ ತನಗೆ ಒಪ್ಪಿಗೆಯಾಗದಿದ್ದಾಗ ಸಹಾಯಕ ಪಾತ್ರದಲ್ಲಿ ಆದರ್ಶಪ್ರಾಯಳಾಗಿ ಮುಂದುವರಿಯಲು ಹೆಂಡತಿಗೆ ಕಷ್ಟವಾಗಬಹುದು. ಆಗಲೂ ಆಕೆ “ಶಾಂತ ಮತ್ತು ಸೌಮ್ಯಭಾವ” ತೋರಿಸುತ್ತಾ ಅವನು ಮಾಡಿದ ನಿರ್ಣಯ ಸಫಲವಾಗಲು ಸಹಕರಿಸುವಳು. (1 ಪೇತ್ರ 3:4) ಅಲ್ಲದೆ, ಒಳ್ಳೆಯ ಹೆಂಡತಿಯು ಸಾರ, ರೂತ್‌, ಅಬೀಗೈಲ್‌ ಮತ್ತು ಯೇಸುವಿನ ತಾಯಿಯಾದ ಮರಿಯಳಂಥ ಗತಕಾಲದ ದೇವಭಕ್ತ ಸ್ತ್ರೀಯರ ಉತ್ತಮ ಮಾದರಿಗಳನ್ನು ಅನುಸರಿಸಲು ಪ್ರಯತ್ನಿಸುವಳು. (1 ಪೇತ್ರ 3:5, 6) ಜೊತೆಗೆ, ‘ಪೂಜ್ಯಭಾವದ ನಡವಳಿಕೆಯುಳ್ಳ’ ಪ್ರಸ್ತುತ ದಿನಗಳ ವೃದ್ಧ ಸ್ತ್ರೀಯರ ಮಾದರಿಯನ್ನೂ ಆಕೆ ಅನುಕರಿಸುವಳು. (ತೀತ 2:3, 4) ಆದರ್ಶ ಹೆಂಡತಿ ತನ್ನ ಗಂಡನನ್ನು ಪ್ರೀತಿಸುವ ಹಾಗೂ ಗೌರವಿಸುವ ಮೂಲಕ ವಿವಾಹದ ಸಾಫಲ್ಯಕ್ಕೂ ಇಡೀ ಕುಟುಂಬದ ಹಿತಕ್ಷೇಮಕ್ಕೂ ನೆರವಾಗುವಳು. ಆಕೆಯ ಮನೆಯು ಸಾಂತ್ವನ, ಸುರಕ್ಷೆಯ ಬೀಡಾಗಿರುವುದು. ಆಧ್ಯಾತ್ಮಿಕ ಪುರುಷನಿಗೆ ಸಹಕಾರಿಣಿ ಹೆಂಡತಿ ನಿಜಕ್ಕೂ ಅತ್ಯಮೂಲ್ಯಳು!—ಜ್ಞಾನೋ. 18:22.

ಯೌವನಸ್ಥರೇ, ‘ನಿಮ್ಮ ಕಣ್ಣುಗಳನ್ನು ಕಾಣದಿರುವಂಥ ಸಂಗತಿಗಳ ಮೇಲಿಡಿ’

15. ಕುಟುಂಬವು “ಎಚ್ಚರವಾಗಿ” ಉಳಿಯಲು ಯೌವನಸ್ಥರು ಹೆತ್ತವರೊಂದಿಗೆ ಹೇಗೆ ಸಹಕರಿಸಬಲ್ಲರು?

15 ಯೌವನಸ್ಥರೇ, ನಿಮ್ಮ ಕುಟುಂಬವು ಆಧ್ಯಾತ್ಮಿಕವಾಗಿ “ಎಚ್ಚರವಾಗಿ” ಉಳಿಯಲು ನೀವು ಹೆತ್ತವರೊಂದಿಗೆ ಹೇಗೆ ಸಹಕರಿಸಬಲ್ಲಿರಿ? ಯೆಹೋವನು ನಿಮ್ಮ ಮುಂದಿಟ್ಟಿರುವ ಬಹುಮಾನದ ಬಗ್ಗೆ ಯೋಚಿಸಿನೋಡಿ. ಪರದೈಸ್‌ನ ಜೀವನವನ್ನು ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ವರ್ಣಿಸುವ ಅನೇಕ ಚಿತ್ರಗಳನ್ನು ನಿಮ್ಮ ಹೆತ್ತವರು ನಿಮಗೆ ಬಾಲ್ಯದಲ್ಲೇ ತೋರಿಸಿರಬಹುದು. ನೀವು ಬೆಳೆದಂತೆ, ಬೈಬಲ್‌ ಹಾಗೂ ಕ್ರೈಸ್ತ ಪ್ರಕಾಶನಗಳನ್ನು ಬಳಸುತ್ತಾ ನೂತನ ಲೋಕದಲ್ಲಿ ನಿತ್ಯಜೀವ ಹೇಗಿರಬಹುದೆಂಬುದನ್ನು ಚಿತ್ರಿಸಿಕೊಳ್ಳುವಂತೆ ಅವರು ನಿಮಗೆ ಸಹಾಯ ಮಾಡಿರಬಹುದು. ಯೆಹೋವನ ಸೇವೆ ಮಾಡುವುದರ ಮೇಲೆ ಕಣ್ಣನ್ನು ಕೇಂದ್ರೀಕರಿಸುತ್ತಾ ನಿಮ್ಮ ಜೀವನವನ್ನು ಅದಕ್ಕೆ ಹೊಂದಿಕೆಯಲ್ಲಿ ರೂಪಿಸುವಲ್ಲಿ ‘ಎಚ್ಚರವಾಗಿರಲು’ ನಿಮಗೆ ಸಾಧ್ಯವಾಗುವುದು.

16, 17. ಜೀವಕ್ಕಾಗಿರುವ ಓಟವನ್ನು ಯೌವನಸ್ಥರು ಹೇಗೆ ಯಶಸ್ವಿಯಾಗಿ ಓಡಬಲ್ಲರು?

16 ಒಂದನೆಯ ಕೊರಿಂಥ 9:24ರಲ್ಲಿರುವ (ಓದಿ.) ಅಪೊಸ್ತಲ ಪೌಲನ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳಿ. ಜೀವಕ್ಕಾಗಿರುವ ಓಟದಲ್ಲಿ ಜಯ ಗಳಿಸಲೇಬೇಕೆಂಬ ಉದ್ದೇಶದಿಂದ ಓಡಿರಿ. ನಿತ್ಯಜೀವವೆಂಬ ಬಹುಮಾನವನ್ನು ಪಡೆಯಲು ಸಾಧ್ಯಮಾಡಬಲ್ಲ ಮಾರ್ಗವನ್ನೇ ಆರಿಸಿಕೊಳ್ಳಿ. ಬಹುಮಾನದ ಮೇಲೆ ಕಣ್ಣಿಟ್ಟು ಓಡಲಾರಂಭಿಸಿದ ಅನೇಕರು ಭೌತಿಕ ವಸ್ತುಗಳ ಹಿಂದೆಬಿದ್ದು ಅಪಕರ್ಷಿತರಾಗಿದ್ದಾರೆ. ಇದೆಂಥ ಮೂರ್ಖತನ! ಕೇವಲ ಐಶ್ವರ್ಯವನ್ನು ಗಳಿಸುವ ಉದ್ದೇಶದ ಸುತ್ತ ಹೆಣೆದ ಜೀವನ ಎಂದೂ ನಿಜ ಸಂತೋಷವನ್ನು ಕೊಡಲಾರದು. ಹಣದಿಂದ ಕೊಂಡುಕೊಳ್ಳಲಾಗುವ ಯಾವುದೇ ವಸ್ತು ತಾತ್ಕಾಲಿಕವಷ್ಟೇ. ಆದ್ದರಿಂದ, ನಿಮ್ಮ ಕಣ್ಣುಗಳನ್ನು “ಕಾಣದಿರುವಂಥ ಸಂಗತಿಗಳ” ಮೇಲಿಡಿ. ಏಕೆ? ಏಕೆಂದರೆ, “ಕಾಣದಿರುವಂಥ ಸಂಗತಿಗಳು ನಿರಂತರವಾಗಿವೆ.”—2 ಕೊರಿಂ. 4:18.

17 ‘ಕಾಣದಿರುವಂಥ ಸಂಗತಿಗಳಲ್ಲಿ’ ದೇವರ ರಾಜ್ಯದ ಆಶೀರ್ವಾದಗಳು ಸೇರಿವೆ. ಅವುಗಳನ್ನು ಹೊಂದಲು ಸಾಧ್ಯವಾಗುವ ರೀತಿಯಲ್ಲಿ ಜೀವನ ನಡೆಸಿ. ನಿಮ್ಮ ಜೀವನವನ್ನು ಯೆಹೋವನ ಸೇವೆಯಲ್ಲಿ ವಿನಿಯೋಗಿಸುವಲ್ಲಿ ನಿಜ ಸಂತೋಷ ಲಭಿಸುತ್ತದೆ. ಸತ್ಯದೇವರ ಸೇವೆಮಾಡುವಾಗ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಗುರಿಗಳನ್ನು ತಲುಪಲು ಸದವಕಾಶಗಳು ದೊರೆಯುವವು. * ನಿಮಗೆ ಮುಟ್ಟಲು ಸಾಧ್ಯವಾಗುವಂಥ ಆಧ್ಯಾತ್ಮಿಕ ಗುರಿಗಳನ್ನಿಡುವಲ್ಲಿ, ನಿತ್ಯಜೀವದ ಬಹುಮಾನದ ಮೇಲೆ ಕಣ್ಣಿಟ್ಟು ಅಪಕರ್ಷಿತರಾಗದೆ ದೇವರ ಸೇವೆಮಾಡಲು ನಿಮಗೆ ಸಾಧ್ಯವಾಗುವುದು.—1 ಯೋಹಾ. 2:17.

18, 19. ಸತ್ಯವನ್ನು ತನ್ನದಾಗಿ ಮಾಡಿಕೊಂಡಿದ್ದೇನೋ ಇಲ್ಲವೋ ಎಂಬದನ್ನು ಒಬ್ಬ ಯೌವನಸ್ಥನು ಹೇಗೆ ಪರೀಕ್ಷಿಸಿಕೊಳ್ಳಬಲ್ಲನು?

18 ಯೌವನಸ್ಥರೇ, ಜೀವನದ ಹಾದಿಯಲ್ಲಿ ನೀವಿಡಬೇಕಾದ ಮೊದಲ ಹೆಜ್ಜೆ ಸತ್ಯವನ್ನು ನಿಮ್ಮದಾಗಿಸಿಕೊಳ್ಳುವುದೇ ಆಗಿದೆ. ನೀವು ಆ ಹೆಜ್ಜೆ ತೆಗೆದುಕೊಂಡಿದ್ದೀರೋ? ಹೀಗೆ ಕೇಳಿಕೊಳ್ಳಿ: ‘ನಾನು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದೇನೋ ಅಥವಾ ಹೆತ್ತವರು ಹೇಳುತ್ತಾರೆಂಬ ಕಾರಣಕ್ಕೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೋ? ದೇವರಿಗೆ ಸಂತೋಷ ತರುವ ಗುಣಗಳನ್ನು ನಾನು ಬೆಳೆಸಿಕೊಳ್ಳುತ್ತಿದ್ದೇನೋ? ಪ್ರಾರ್ಥನೆ, ಅಧ್ಯಯನ, ಕೂಟಗಳು ಮತ್ತು ಕ್ಷೇತ್ರ ಸೇವೆಯಂಥ ಸತ್ಯಾರಾಧನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು ನನ್ನ ರೂಢಿಯಾಗಿದೆಯೋ? ದೇವರೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವ ಮೂಲಕ ನಾನು ಆತನಿಗೆ ಆಪ್ತನಾಗುತ್ತಿದ್ದೇನೋ?’—ಯಾಕೋ. 4:8.

19 ಮೋಶೆಯ ಉದಾಹರಣೆಯನ್ನು ಪರ್ಯಾಲೋಚಿಸಿ. ಮೋಶೆ ವಿದೇಶಿ ಸಂಸ್ಕೃತಿಯ ಕೆಳಗೆ ಜೀವಿಸುತ್ತಿದ್ದರೂ ಯೆಹೋವನ ಆರಾಧಕನಾಗಿ ಗುರುತಿಸಿಕೊಳ್ಳುವ ಆಯ್ಕೆಮಾಡಿದನೇ ವಿನಾ ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಬಯಸಲಿಲ್ಲ. (ಇಬ್ರಿಯ 11:24-27 ಓದಿ.) ಕ್ರೈಸ್ತ ಯೌವನಸ್ಥರೇ, ನೀವು ಸಹ ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುವ ದೃಢನಿರ್ಣಯ ಮಾಡಿರಿ. ಆಗ ನೀವು ನಿಜ ಸಂತೋಷವನ್ನು ಪಡೆಯುವಿರಿ, ಅತ್ಯುತ್ತಮ ಜೀವನವನ್ನು ಆನಂದಿಸುವಿರಿ. ಮಾತ್ರವಲ್ಲ, ‘ವಾಸ್ತವವಾದ ಜೀವನದ ಮೇಲೆ ಭದ್ರವಾದ ಹಿಡಿತವನ್ನು’ ಸಾಧಿಸುವಿರಿ.—1 ತಿಮೊ. 6:19.

20. ಜೀವಕ್ಕಾಗಿರುವ ಓಟದಲ್ಲಿ ಯಾರು ಬಹುಮಾನ ಗೆಲ್ಲುವರು?

20 ಪುರಾತನ ಸಮಯಗಳಲ್ಲಿನ ಓಟದ ಸ್ಪರ್ಧೆಗಳಲ್ಲಿ ಕೇವಲ ಒಬ್ಬ ಓಟಗಾರನು ಜಯಗಳಿಸುತ್ತಿದ್ದನು. ಜೀವಕ್ಕಾಗಿರುವ ಓಟದಲ್ಲಿ ಹಾಗಿಲ್ಲ. “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎಂಬುದು ದೇವರ ಚಿತ್ತವಾಗಿದೆ. (1 ತಿಮೊ. 2:3, 4) ನಿಮಗಿಂತ ಮುಂಚೆ ಅನೇಕ ಮಂದಿ ಈ ಓಟವನ್ನು ಯಶಸ್ವಿಯಾಗಿ ಓಡಿ ಮುಗಿಸಿದ್ದಾರೆ. ಇನ್ನೂ ಅನೇಕರು ನಿಮ್ಮೊಂದಿಗೆ ನಿಮ್ಮ ಪಕ್ಕದಲ್ಲಿ ಓಡುತ್ತಿದ್ದಾರೆ. (ಇಬ್ರಿ. 12:1, 2) ಬಿಟ್ಟುಕೊಡದೆ ಕೊನೇ ತನಕ ಓಡುವವರೆಲ್ಲರಿಗೂ ಬಹುಮಾನ ಖಚಿತ. ಆದ್ದರಿಂದ ಗೆಲ್ಲುವುದೇ ನಿಮ್ಮ ದೃಢಸಂಕಲ್ಪವಾಗಿರಲಿ!

21. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

21 “ಯೆಹೋವನ ಆಗಮನದ ಭಯಂಕರವಾದ ಮಹಾದಿನ” ಖಂಡಿತ ಬರುವುದು. (ಮಲಾ. 4:5) ಆ ದಿನವು ಅನಿರೀಕ್ಷಿತವಾಗಿ ಬರುವಾಗ ಕ್ರೈಸ್ತ ಕುಟುಂಬಗಳು ಅಪಾಯದಲ್ಲಿ ಸಿಕ್ಕಿಕೊಳ್ಳಬಾರದು. ಹಾಗಾಗಿ ಕುಟುಂಬದಲ್ಲಿರುವ ಎಲ್ಲರೂ ತಮ್ಮ ತಮ್ಮ ಶಾಸ್ತ್ರಾಧಾರಿತ ಜವಾಬ್ದಾರಿಗಳನ್ನು ಪೂರೈಸುವುದು ಅತ್ಯಗತ್ಯ. ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯಲು ಮತ್ತು ದೇವರೊಂದಿಗಿನ ಸುಸಂಬಂಧವನ್ನು ಬಲಗೊಳಿಸಲು ನೀವು ಇನ್ನೇನು ಮಾಡಬಲ್ಲಿರಿ? ಇಡೀ ಕುಟುಂಬದ ಆಧ್ಯಾತ್ಮಿಕ ಹಿತಕ್ಷೇಮದ ಮೇಲೆ ಪ್ರಭಾವಬೀರುವ ಮೂರು ಅಂಶಗಳನ್ನು ಮುಂದಿನ ಲೇಖನವು ಚರ್ಚಿಸಲಿದೆ.

[ಪಾದಟಿಪ್ಪಣಿ]

^ ಪ್ಯಾರ. 17 ಕಾವಲಿನಬುರುಜು 2010, ನವೆಂಬರ್‌ 15, ಪುಟ 12-16 ಮತ್ತು 2004, ಜುಲೈ 15, ಪುಟ 21-23 ನೋಡಿ.

ನೀವೇನು ಕಲಿತಿರಿ?

• ಕ್ರೈಸ್ತ ಕುಟುಂಬಗಳು ‘ಎಚ್ಚರವಾಗಿರುವುದು’ ಏಕೆ ಅತ್ಯಗತ್ಯ?

• ಗಂಡನು ಒಳ್ಳೆಯ ಕುರುಬನನ್ನು ಹೇಗೆ ಅನುಕರಿಸಬಹುದು?

• ಗಂಡನಿಗೆ ಬೆಂಬಲ ನೀಡಲು ಆದರ್ಶ ಹೆಂಡತಿ ಏನು ಮಾಡಬಲ್ಲಳು?

• ತಮ್ಮ ಕುಟುಂಬವು ಆಧ್ಯಾತ್ಮಿಕವಾಗಿ ಎಚ್ಚರವಾಗಿರುವಂತೆ ಯೌವನಸ್ಥರು ಹೇಗೆ ಸಹಾಯಮಾಡಬಲ್ಲರು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಆಧ್ಯಾತ್ಮಿಕ ಪುರುಷನಿಗೆ ಸಹಕಾರಿಣಿ ಹೆಂಡತಿ ನಿಜಕ್ಕೂ ಅತ್ಯಮೂಲ್ಯಳು!