ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಕುಟುಂಬಗಳೇ, “ಸಿದ್ಧರಾಗಿರಿ”

ಕ್ರೈಸ್ತ ಕುಟುಂಬಗಳೇ, “ಸಿದ್ಧರಾಗಿರಿ”

ಕ್ರೈಸ್ತ ಕುಟುಂಬಗಳೇ, “ಸಿದ್ಧರಾಗಿರಿ”

“ಸಿದ್ಧರಾಗಿರಿ, ಏಕೆಂದರೆ ಸಂಭವನೀಯವೆಂದು ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”—ಲೂಕ 12:40.

1, 2. “ಸಿದ್ಧರಾಗಿರಿ” ಎಂದು ಯೇಸು ಕೊಟ್ಟ ಎಚ್ಚರಿಕೆಯನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳಬೇಕು?

“ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ . . . ಬರುವಾಗ” ಮತ್ತು “ಜನರನ್ನು” ಪ್ರತ್ಯೇಕಿಸುವಾಗ ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಯಾವ ಕಡೆಯಲ್ಲಿರುವಿರಿ? (ಮತ್ತಾ. 25:31, 32) ಮನುಷ್ಯಕುಮಾರನು ನಾವು ನೆನಸದ ಗಳಿಗೆಯಲ್ಲಿ ಬರುವುದರಿಂದ “ಸಿದ್ಧರಾಗಿರಿ” ಎಂಬ ಯೇಸುವಿನ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಎಷ್ಟೊಂದು ಪ್ರಾಮುಖ್ಯ!—ಲೂಕ 12:40.

2 ಇಡೀ ಕುಟುಂಬ ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯಲು ಕುಟುಂಬದಲ್ಲಿರುವ ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಗಳನ್ನು ಹೇಗೆ ಗಂಭೀರವಾಗಿ ತೆಗೆದುಕೊಳ್ಳಬಹುದು ಎನ್ನುವುದನ್ನು ಹಿಂದಿನ ಲೇಖನ ಚರ್ಚಿಸಿತು. ನಮ್ಮ ಕುಟುಂಬದ ಆಧ್ಯಾತ್ಮಿಕ ಹಿತಕ್ಷೇಮಕ್ಕಾಗಿ ನಾವು ಇನ್ನೇನು ಮಾಡಸಾಧ್ಯ ಎನ್ನುವುದನ್ನು ಈಗ ಪರಿಗಣಿಸೋಣ.

ನಿಮ್ಮ ಕಣ್ಣನ್ನು ‘ಸರಳವಾಗಿಡಿ’

3, 4. (ಎ) ಕ್ರೈಸ್ತ ಕುಟುಂಬಗಳು ಯಾವ ವಿಷಯದಲ್ಲಿ ಎಚ್ಚರವಾಗಿರಬೇಕು? (ಬಿ) ನಮ್ಮ ಕಣ್ಣನ್ನು ‘ಸರಳವಾಗಿಡುವುದರ’ ಅರ್ಥವೇನು?

3 ಕುಟುಂಬಗಳು ಕ್ರಿಸ್ತನ ಬರೋಣಕ್ಕಾಗಿ ಸಿದ್ಧವಾಗಿರಬೇಕಾದರೆ, ಸತ್ಯಾರಾಧನೆಗೆ ಸಂಬಂಧಿಸಿದ ವಿಷಯಗಳಿಂದ ದಿಕ್ಕುತಪ್ಪದಂತೆ ಜಾಗರೂಕವಾಗಿರಬೇಕು. ಅಪಕರ್ಷಿತರಾಗದಂತೆ ಎಚ್ಚರವಹಿಸಬೇಕು. ಪ್ರಾಪಂಚಿಕತೆಯು ತನ್ನ ಪಾಶದ ತೆಕ್ಕೆಯಲ್ಲಿ ಅನೇಕ ಕುಟುಂಬಗಳನ್ನು ಬೀಳಿಸಿರುವುದರಿಂದ ಕಣ್ಣನ್ನು ‘ಸರಳವಾಗಿಡುವ’ ವಿಷಯದಲ್ಲಿ ಯೇಸು ಏನು ಹೇಳಿದನೆಂಬುದನ್ನು ಪರಿಗಣಿಸಿ. (ಮತ್ತಾಯ 6:22, 23 ಓದಿ.) ದೀಪವು ದಾರಿಯನ್ನು ಬೆಳಗಿಸಿ ನಾವು ಮುಗ್ಗರಿಸದೆ ನಡೆಯಲು ಸಹಾಯಮಾಡುವಂತೆಯೇ, ನಮ್ಮ “ಹೃದಯದ ಕಣ್ಣುಗಳು” ನಮಗೆ ಜ್ಞಾನೋದಯವನ್ನು ಉಂಟುಮಾಡಿ ಎಡವದೆ ನಡೆಯಲು ಸಹಾಯಮಾಡುತ್ತವೆ.—ಎಫೆ. 1:18.

4 ಹೃದಯದ ಕಣ್ಣುಗಳನ್ನು ಸರಳವಾಗಿಡುವುದರ ಅರ್ಥವೇನು? ಅದರರ್ಥ, ಕೇವಲ ಒಂದು ಉದ್ದೇಶದ ಮೇಲೆ ಗಮನ ನೆಡುವುದೆಂದೇ. ಆಗ ನಾವು ನಮ್ಮ ಕಣ್ಣನ್ನು ಆಧ್ಯಾತ್ಮಿಕ ವಿಚಾರಗಳ ಮೇಲೆ ಕೇಂದ್ರೀಕರಿಸುತ್ತೇವೇ ವಿನಾ ಪ್ರಾಪಂಚಿಕ ವಸ್ತುಗಳ ಮೇಲೆ ಕೇಂದ್ರೀಕರಿಸುವುದಿಲ್ಲ ಇಲ್ಲವೆ ಕುಟುಂಬದ ಭೌತಿಕ ಅಗತ್ಯಗಳ ಬಗ್ಗೆ ಅತಿಯಾಗಿ ಚಿಂತಿಸುವುದಿಲ್ಲ. (ಮತ್ತಾ. 6:33) ಅಂದರೆ ನಮ್ಮ ಬಳಿ ಏನಿದೆಯೋ ಅದರಲ್ಲೇ ತೃಪ್ತರಾಗಿದ್ದು ದೇವರ ಸೇವೆಗೆ ಜೀವನದಲ್ಲಿ ಪ್ರಥಮ ಸ್ಥಾನ ಕೊಡುತ್ತೇವೆ.—ಇಬ್ರಿ. 13:5.

5. ದೇವರ ಸೇವೆಮಾಡುವುದರ ಮೇಲೆ ತನ್ನ “ಕಣ್ಣು” ನೆಟ್ಟಿದೆಯೆಂದು ಹದಿವಯಸ್ಕಳೊಬ್ಬಳು ಹೇಗೆ ತೋರಿಸಿದಳು?

5 ಮಕ್ಕಳಿಗೆ ಕಣ್ಣನ್ನು ಸರಳವಾಗಿಡಲು ತರಬೇತಿ ನೀಡುವಾಗ ಎಷ್ಟೊಂದು ಉತ್ತಮ ಫಲಿತಾಂಶಗಳು ಸಿಗಬಲ್ಲವು! ಇಥಿಯೋಪಿಯದಲ್ಲಿರುವ ಹದಿವಯಸ್ಕಳೊಬ್ಬಳ ಉದಾಹರಣೆ ಪರಿಗಣಿಸಿ. ಆಕೆ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ್ದರಿಂದ ಮೂಲಭೂತ ಶಿಕ್ಷಣದ ಬಳಿಕ ವಿದ್ಯಾಭ್ಯಾಸ ಮುಂದುವರಿಸಲು ಆಕೆಗೆ ವಿದ್ಯಾರ್ಥಿವೇತನ ಸಿಕ್ಕಿತು. ಆದರೆ ಆಕೆ ಯೆಹೋವನ ಸೇವೆಮಾಡುವುದರ ಮೇಲೆ ತನ್ನ ಕಣ್ಣನ್ನು ನೆಟ್ಟಿದ್ದಳು. ಆದ್ದರಿಂದ ಆ ವಿದ್ಯಾರ್ಥಿವೇತನವನ್ನು ನಿರಾಕರಿಸಿದಳು. ಸ್ವಲ್ಪದರಲ್ಲೇ, ಆಕೆಗೆ ತಿಂಗಳಿಗೆ 4,200 ಡಾಲರ್‌ ಸಂಬಳದ ಉದ್ಯೋಗಾವಕಾಶ ಲಭಿಸಿತು. ಆಕೆಯ ದೇಶದಲ್ಲಿ ಜನರಿಗೆ ಸಿಗುವ ಸಂಬಳಕ್ಕೆ ಹೋಲಿಸುವಾಗ ಇದು ಭಾರೀ ದೊಡ್ಡ ಮೊತ್ತವಾಗಿತ್ತು. ಆದರೆ ಈ ಹುಡುಗಿ ನಿರ್ಣಯ ತೆಗೆದುಕೊಳ್ಳಲು ಯೋಚಿಸುತ್ತಾ ಕುಳಿತುಕೊಳ್ಳಲಿಲ್ಲ. ಇಲ್ಲವೆ ಹೆತ್ತವರ ಬಳಿ ಕೇಳಲು ಹೋಗಲಿಲ್ಲ. ತನ್ನ ‘ಕಣ್ಣನ್ನು’ ಪಯನೀಯರ್‌ ಸೇವೆಯ ಮೇಲೆ ನೆಟ್ಟಿದ್ದ ಕಾರಣ ತಕ್ಷಣವೇ ಆ ಕೆಲಸವನ್ನು ನಿರಾಕರಿಸಿದಳು. ಆಕೆಯ ಹೆತ್ತವರಿಗೆ ತಮ್ಮ ಮಗಳ ನಿರ್ಣಯ ತಿಳಿದಾಗ ಹೇಗನಿಸಿತು? ಆಕೆಯೊಂದಿಗೆ ಅವರೂ ಖುಷಿಪಟ್ಟರು. ತಮ್ಮ ಮಗಳ ಬಗ್ಗೆ ಅವರಿಗೆ ಹೆಮ್ಮೆಯೆನಿಸಿತು!

6, 7. ಯಾವ ಅಪಾಯವಿರುವುದರಿಂದ ನಾವು ‘ನಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಳ್ಳಬೇಕು’?

6ಮತ್ತಾಯ 6:22, 23ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳಲ್ಲಿ ಲೋಭದ ಕುರಿತ ಎಚ್ಚರಿಕೆಯೂ ಅಡಕವಾಗಿದೆ. ಯೇಸು “ಸರಳ” ಎಂಬ ಪದವನ್ನು ಅದರ ವಿರುದ್ಧಪದವಾದ “ಜಟಿಲ” ಎಂಬ ಪದದೊಂದಿಗೆ ಹೋಲಿಸಲಿಲ್ಲ. ಬದಲಾಗಿ “ಕೆಟ್ಟ” ಎಂಬ ಪದದೊಂದಿಗೆ ಹೋಲಿಸಿದನು. “ಕೆಟ್ಟ” ಎಂಬದಕ್ಕೆ ಗ್ರೀಕ್‌ ಭಾಷೆಯಲ್ಲಿ ಉಪಯೋಗಿಸಲಾದ ಪದಕ್ಕೆ “ದುರಾಸೆ” ಅಥವಾ “ಲೋಭ” ಎಂಬರ್ಥವೂ ಇದೆ. ಈ ದುರಾಸೆ ಅಥವಾ ಲೋಭದ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ? “ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು” ಎನ್ನುತ್ತದೆ ಬೈಬಲ್‌.—ಎಫೆ. 5:3.

7 ಬಹುಶಃ ಇತರರಲ್ಲಿನ ಲೋಭವನ್ನು ಪತ್ತೆಹಚ್ಚುವುದು ಸುಲಭವಾಗಿರಬಹುದು. ಆದರೆ ನಮ್ಮಲ್ಲಿನ ಲೋಭವನ್ನು ಗುರುತಿಸುವುದು ಅಷ್ಟೇನೂ ಸುಲಭವಲ್ಲ. ಆದ್ದರಿಂದ, “ನಿಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಂಡು ಪ್ರತಿಯೊಂದು ರೀತಿಯ ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ” ಎಂದು ಯೇಸು ಕೊಟ್ಟ ಸಲಹೆಯನ್ನು ಪಾಲಿಸುವುದು ವಿವೇಕಯುತ. (ಲೂಕ 12:15) ಹಾಗೆ ಮಾಡಬೇಕಾದರೆ ನಾವು ನಮ್ಮ ಹೃದಯವನ್ನು ಯಾವುದರ ಮೇಲೆ ಕೇಂದ್ರೀಕರಿಸಿದ್ದೇವೆ ಎನ್ನುವ ಬಗ್ಗೆ ಸ್ವಪರೀಕ್ಷೆ ಮಾಡಿಕೊಳ್ಳಬೇಕು. ಮನೋರಂಜನೆಗೆ, ವಿನೋದವಿಹಾರಕ್ಕೆ ಮತ್ತು ಭೌತಿಕ ವಸ್ತುಗಳನ್ನು ಸಂಗ್ರಹಿಸಲಿಕ್ಕೆ ಎಷ್ಟು ಸಮಯ ಹಾಗೂ ಹಣವನ್ನು ವಿನಿಯೋಗಿಸುತ್ತಿದ್ದೇವೆ ಎಂಬ ಬಗ್ಗೆ ಕ್ರೈಸ್ತ ಕುಟುಂಬಗಳು ಗಂಭೀರವಾಗಿ ಯೋಚಿಸಬೇಕು.

8. ವಸ್ತುಗಳನ್ನು ಖರೀದಿಸುವ ವಿಷಯದಲ್ಲಿ ನಾವು ಹೇಗೆ ವಿವೇಚನೆಯನ್ನು ತೋರಿಸಬಹುದು?

8 ಒಂದು ವಸ್ತುವನ್ನು ಕೊಳ್ಳುವ ಮುಂಚೆ ಅದಕ್ಕೆ ಸಾಲುವಷ್ಟು ಹಣ ನಮ್ಮಲ್ಲಿದೆಯೋ ಎಂದು ಯೋಚಿಸಿದರಷ್ಟೇ ಸಾಲದು. ಈ ಮುಂದಿನ ಅಂಶಗಳನ್ನೂ ಪರಿಗಣಿಸಬೇಕು: ‘ಆ ವಸ್ತುವನ್ನು ಕ್ರಮವಾಗಿ ಬಳಸಲು ಹಾಗೂ ಸುವ್ಯವಸ್ಥಿತವಾಗಿಡಲು ಬೇಕಾದ ಸಮಯ ನನ್ನಲ್ಲಿದೆಯೋ? ಅದನ್ನು ಸರಿಯಾಗಿ ಉಪಯೋಗಿಸಲು ಕಲಿಯಲಿಕ್ಕೆ ಎಷ್ಟು ಸಮಯ ಹಿಡಿದೀತು?’ ಯೌವನಸ್ಥರೇ, ಜಾಹೀರಾತುಗಳ ಮೋಡಿಗೆ ಮರುಳಾಗಿ ಪ್ರತಿಷ್ಠಿತ ಕಂಪೆನಿಗಳ ಬಟ್ಟೆಗಳೇ ಬೇಕು, ದುಬಾರಿ ವಸ್ತುಗಳೇ ಬೇಕು ಎಂದು ಹಠಹಿಡಿಯಬೇಡಿ, ಸ್ವನಿಯಂತ್ರಣವಿರಲಿ. ಯಾವುದೇ ವಸ್ತುವನ್ನು ಕೊಂಡುಕೊಳ್ಳುವ ಮುಂಚೆ ಅದರಿಂದ ಮನುಷ್ಯಕುಮಾರನ ಬರೋಣಕ್ಕಾಗಿ ಸಿದ್ಧರಾಗಿರಲು ನನ್ನ ಕುಟುಂಬಕ್ಕೇನಾದರೂ ಸಹಾಯವಾಗುವುದೋ ಎಂದು ಪ್ರತಿಯೊಬ್ಬರೂ ಯೋಚಿಸಿನೋಡಿ. “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ಯೆಹೋವನು ಮಾಡಿರುವ ವಾಗ್ದಾನದಲ್ಲಿ ನಂಬಿಕೆಯಿಡಿ.—ಇಬ್ರಿ. 13:5.

ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಿರಿ

9. ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಪ್ರಯತ್ನಿಸುವುದು ಕುಟುಂಬಕ್ಕೆ ಹೇಗೆ ನೆರವಾಗುತ್ತದೆ?

9 ಕುಟುಂಬ ಸದಸ್ಯರು ತಮ್ಮ ನಂಬಿಕೆಯನ್ನು ಬಲಗೊಳಿಸಬಲ್ಲ ಮತ್ತು ಕುಟುಂಬದ ಆಧ್ಯಾತ್ಮಿಕ ಹಿತಕ್ಷೇಮಕ್ಕೆ ನೆರವಾಗಬಲ್ಲ ಇನ್ನೊಂದು ಮಾರ್ಗವು, ಆಧ್ಯಾತ್ಮಿಕ ಗುರಿಗಳನ್ನಿಟ್ಟು ಅವುಗಳನ್ನು ಮುಟ್ಟಲು ಪ್ರಯತ್ನಿಸುವುದೇ. ಇದು ಯೆಹೋವನ ಸೇವೆಯನ್ನು ತಾವು ಎಷ್ಟು ಉತ್ತಮವಾಗಿ ಮಾಡುತ್ತಿದ್ದೇವೆ ಎನ್ನುವುದನ್ನು ಪರೀಕ್ಷಿಸಲು ಹಾಗೂ ಯಾವ ಚಟುವಟಿಕೆಗಳು ತಮ್ಮ ಜೀವನದಲ್ಲಿ ಪ್ರಾಮುಖ್ಯವಾಗಿರಬೇಕು ಎನ್ನುವುದನ್ನು ನಿರ್ಣಯಿಸಲು ಕುಟುಂಬಕ್ಕೆ ಸಹಾಯ ಮಾಡುವುದು.—ಫಿಲಿಪ್ಪಿ 1:10, 11 ಓದಿ.

10, 11. ಕುಟುಂಬವಾಗಿ ನೀವು ಯಾವ ಆಧ್ಯಾತ್ಮಿಕ ಗುರಿಗಳನ್ನು ತಲುಪಲು ಪ್ರಯತ್ನಿಸುತ್ತಿದ್ದೀರಿ? ಭವಿಷ್ಯಕ್ಕಾಗಿ ಯಾವ ಗುರಿಗಳನ್ನಿಡಲು ಬಯಸುತ್ತೀರಿ?

10 ಕುಟುಂಬದ ಪ್ರತಿ ಸದಸ್ಯನಿಗೂ ತಲುಪಲು ಸಾಧ್ಯವಾಗುವಂಥ ಚಿಕ್ಕಪುಟ್ಟ ಗುರಿಗಳನ್ನಿಡುವುದು ಸಹ ಹೇರಳ ಪ್ರಯೋಜನಗಳನ್ನು ತರುತ್ತದೆ. ಉದಾಹರಣೆಗೆ, ಪ್ರತಿದಿನ ದಿನವಚನವನ್ನು ಚರ್ಚಿಸುವ ಗುರಿಯನ್ನೇ ತೆಗೆದುಕೊಳ್ಳಿ. ಆ ಸಂದರ್ಭಗಳಲ್ಲಿ ಕುಟುಂಬ ಸದಸ್ಯರು ಕೊಡುವ ಹೇಳಿಕೆಗಳು ಅವರ ಆಧ್ಯಾತ್ಮಿಕತೆಯ ಮಟ್ಟವನ್ನು ತಿಳಿದುಕೊಳ್ಳಲು ಕುಟುಂಬದ ತಲೆಗೆ ಸಹಾಯ ಮಾಡುವವು. ಕುಟುಂಬ ಸಮೇತ ದಿನಾಲೂ ಬೈಬಲ್‌ ಓದುವ ಗುರಿಯನ್ನಿಡುವುದು, ಓದುವ ಕೌಶಲವನ್ನು ಉತ್ತಮಗೊಳಿಸಲು ಮತ್ತು ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸುವರ್ಣಾವಕಾಶವನ್ನು ಒದಗಿಸುವುದು. (ಕೀರ್ತ. 1:1, 2) ನಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸುವ ಗುರಿಯನ್ನಿಡಬಹುದಲ್ಲವೇ? ಪವಿತ್ರಾತ್ಮದ ಫಲದ ಅಂಶಗಳನ್ನು ನಮ್ಮಲ್ಲಿ ಇನ್ನೂ ಹೆಚ್ಚಾಗಿ ಬೆಳೆಸಿಕೊಳ್ಳಲು ಪ್ರಯತ್ನಿಸುವುದೂ ಅತ್ಯುತ್ತಮ ಗುರಿಯಾಗಿದೆ. (ಗಲಾ. 5:22, 23) ಶುಶ್ರೂಷೆಯಲ್ಲಿ ನಾವು ಭೇಟಿಮಾಡುವ ಜನರೆಡೆಗೆ ಅನುಕಂಪ ತೋರಿಸುವ ಮಾರ್ಗಗಳಿಗಾಗಿ ಹುಡುಕುವ ಕುರಿತೇನು? ಕುಟುಂಬವಾಗಿ ಇದನ್ನು ಮಾಡಲು ಪ್ರಯತ್ನಿಸುವಲ್ಲಿ ಮಕ್ಕಳು ಸಹಾನುಭೂತಿಯುಳ್ಳವರಾಗಲು ಕಲಿಯುವರು. ಅಷ್ಟೇ ಅಲ್ಲ ಅವರು ರೆಗ್ಯುಲರ್‌ ಪಯನೀಯರರಾಗುವ ಇಲ್ಲವೆ ಮಿಷನೆರಿಗಳಾಗುವ ಅಪೇಕ್ಷೆಯನ್ನು ಬೆಳೆಸಿಕೊಳ್ಳುವ ಸಂಭಾವ್ಯತೆ ಹೆಚ್ಚು.

11 ನೀವು ಮತ್ತು ನಿಮ್ಮ ಕುಟುಂಬ ಸಹ ಇಂಥ ಕೆಲವು ಗುರಿಗಳನ್ನಿಡಬಹುದಲ್ಲವೇ? ಶುಶ್ರೂಷೆಯಲ್ಲಿ ಹೆಚ್ಚು ಸಮಯ ಕಳೆಯುವ ಗುರಿಯನ್ನು ನೀವಿಡಬಹುದೋ? ಟೆಲಿಫೋನಿನಲ್ಲಿ, ಬೀದಿಯಲ್ಲಿ ಇಲ್ಲವೆ ವ್ಯಾಪಾರದ ಸ್ಥಳದಲ್ಲಿ ಸಾಕ್ಷಿನೀಡಲಿಕ್ಕಾಗಿ ನಿಮಗಿರುವ ಭಯವನ್ನು ಹೊಡೆದೋಡಿಸಲು ನೀವು ಪ್ರಯತ್ನಿಸಬಹುದೋ? ಹೆಚ್ಚಿನ ರಾಜ್ಯ ಪ್ರಚಾರಕರ ಅಗತ್ಯವಿರುವ ಸ್ಥಳದಲ್ಲಿ ಸೇವೆಸಲ್ಲಿಸುವುದರ ಕುರಿತು ಯೋಚಿಸಬಹುದೋ? ಪರಭಾಷೆ ಮಾತಾಡುವವರೊಂದಿಗೆ ಸುವಾರ್ತೆಯನ್ನು ಸಾರಲು ನಿಮ್ಮ ಕುಟುಂಬದಲ್ಲಿ ಯಾರಾದರೊಬ್ಬರು ಆ ಭಾಷೆಯನ್ನು ಕಲಿಯಬಲ್ಲರೋ?

12. ಕುಟುಂಬದ ಶಿರಸ್ಸು ತನ್ನ ಕುಟುಂಬ ಆಧ್ಯಾತ್ಮಿಕವಾಗಿ ಬೆಳೆಯಲು ಹೇಗೆ ಸಹಾಯ ಮಾಡಬಲ್ಲನು?

12 ಕುಟುಂಬದ ಶಿರಸ್ಸುಗಳೇ, ನಿಮ್ಮ ಕುಟುಂಬ ಆಧ್ಯಾತ್ಮಿಕವಾಗಿ ಪ್ರಗತಿಮಾಡಬೇಕಾದ ಕ್ಷೇತ್ರಗಳನ್ನು ಗುರುತಿಸಿ. ನಂತರ ಆ ಕ್ಷೇತ್ರಗಳಲ್ಲಿ ಪ್ರಗತಿ ಮಾಡಲು ನಿರ್ದಿಷ್ಟ ಗುರಿಗಳನ್ನಿಡಿ. ಕುಟುಂಬವಾಗಿ ನೀವಿಡುವಂಥ ಗುರಿಗಳು ವಾಸ್ತವಿಕವಾಗಿರಬೇಕು ಮತ್ತು ನಿಮ್ಮ ಸನ್ನಿವೇಶ, ಸಾಮರ್ಥ್ಯಕ್ಕೆ ನಿಲುಕುವಂತಿರಬೇಕು. (ಜ್ಞಾನೋ. 13:12) ಪ್ರಯೋಜನದಾಯಕ ಗುರಿಗಳನ್ನು ತಲುಪಲು ಸಮಯ ಬೇಕಾಗುತ್ತದೆ ನಿಜ. ಹಾಗಾಗಿ, ಟಿ.ವಿ ನೋಡಲು ವ್ಯಯಿಸುತ್ತಿದ್ದ ಸಮಯವನ್ನು ಖರೀದಿಸಿ ಅದನ್ನು ಆಧ್ಯಾತ್ಮಿಕ ವಿಷಯಗಳಿಗಾಗಿ ಬಳಸಿರಿ. (ಎಫೆ. 5:15, 16) ಕುಟುಂಬವಾಗಿ ನೀವಿಟ್ಟಿರುವ ಗುರಿಗಳನ್ನು ತಲುಪಲು ಶ್ರಮಿಸಿರಿ. (ಗಲಾ. 6:9) ಆಧ್ಯಾತ್ಮಿಕ ಗುರಿಗಳನ್ನು ತಲುಪಲು ಪ್ರಯತ್ನಿಸುವ ಕುಟುಂಬದ ಅಭಿವೃದ್ಧಿಯು “ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 4:15.

ಕುಟುಂಬ ಆರಾಧನೆಯನ್ನು ತಪ್ಪದೇ ಮಾಡಿ

13. ವಾರದ ಸಭಾ ಕೂಟಗಳಲ್ಲಿ ಯಾವ ಬದಲಾವಣೆಯನ್ನು ಮಾಡಲಾಯಿತು? ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

13 ಜನವರಿ 1, 2009ರಿಂದ ವಾರದ ಕೂಟಗಳಲ್ಲಾದ ಮಹತ್ತರ ಬದಲಾವಣೆಯು ಮನುಷ್ಯಕುಮಾರನ ಬರೋಣಕ್ಕಾಗಿ ‘ಸಿದ್ಧರಾಗಿರಲು’ ಕುಟುಂಬಗಳಿಗೆ ಬಹಳ ನೆರವಾಗುತ್ತಿದೆ. ಆ ಬದಲಾವಣೆಯ ಪ್ರಕಾರ, ಸಭಾ ಪುಸ್ತಕ ಅಧ್ಯಯನವೆಂದು ಕರೆಯಲಾಗುತ್ತಿದ್ದ ಕೂಟಕ್ಕೆ ಪ್ರತ್ಯೇಕ ದಿನದಂದು ನಾವು ಕೂಡಿಬರಬೇಕಾಗಿಲ್ಲ. ಏಕೆಂದರೆ ಅದನ್ನು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಹಾಗೂ ಸೇವಾ ಕೂಟವಿರುವ ದಿನದಂದೇ ನಡೆಸಲಾಗುತ್ತದೆ. ಈ ಬದಲಾವಣೆಗೆ ಮುಖ್ಯ ಕಾರಣ ಕುಟುಂಬಗಳು ವಾರದ ಒಂದು ಸಂಜೆಯನ್ನು ಕುಟುಂಬ ಆರಾಧನೆಯಲ್ಲಿ ವಿನಿಯೋಗಿಸಿ ಆಧ್ಯಾತ್ಮಿಕವಾಗಿ ಬಲಗೊಳ್ಳಬೇಕು ಎಂಬುದೇ. ಈಗ ಕೂಟಗಳಲ್ಲಿ ಬದಲಾವಣೆಯನ್ನು ಮಾಡಿ ಸ್ವಲ್ಪ ಸಮಯ ಗತಿಸಿದೆ. ಹಾಗಾಗಿ ನಮ್ಮನ್ನು ಹೀಗೆ ಕೇಳಿಕೊಳ್ಳೋಣ: ‘ಕುಟುಂಬ ಆರಾಧನೆಗಾಗಿ ಅಥವಾ ವೈಯಕ್ತಿಕ ಅಧ್ಯಯನಕ್ಕಾಗಿ ಕೊಟ್ಟಿರುವ ಸಮಯವನ್ನು ನಾನು ಸದುಪಯೋಗಿಸುತ್ತಿದ್ದೇನೋ? ಆ ಏರ್ಪಾಡಿನ ಉದ್ದೇಶ ಏನಿದೆಯೋ ಅದನ್ನು ಸಾಧಿಸುವುದರಲ್ಲಿ ನಾನು ಸಫಲನಾಗಿದ್ದೇನೋ?’

14. (ಎ) ವಾರದಲ್ಲಿ ಒಂದು ಸಂಜೆಯನ್ನು ಕುಟುಂಬ ಆರಾಧನೆ ಅಥವಾ ವೈಯಕ್ತಿಕ ಅಧ್ಯಯನಕ್ಕಾಗಿ ಬದಿಗಿರಿಸುವುದರ ಪ್ರಮುಖ ಉದ್ದೇಶವೇನು? (ಬಿ) ಅಧ್ಯಯನಕ್ಕಾಗಿ ಒಂದು ಸಂಜೆಯನ್ನು ಬದಿಗಿರಿಸುವುದು ಪ್ರಾಮುಖ್ಯವೇಕೆ?

14 ನಾವು ದೇವರಿಗೆ ಹೆಚ್ಚೆಚ್ಚು ಆಪ್ತರಾಗಬೇಕೆನ್ನುವುದೇ ಕುಟುಂಬ ಆರಾಧನೆ ಅಥವಾ ವೈಯಕ್ತಿಕ ಅಧ್ಯಯನ ಮಾಡುವುದರ ಪ್ರಮುಖ ಉದ್ದೇಶ. (ಯಾಕೋ. 4:8) ನಾವು ಕ್ರಮವಾಗಿ ಬೈಬಲ್‌ ಅಧ್ಯಯನಕ್ಕಾಗಿ ಸಮಯವನ್ನು ವ್ಯಯಿಸುತ್ತಾ ಸೃಷ್ಟಿಕರ್ತನ ಕುರಿತ ಜ್ಞಾನವನ್ನು ಹೆಚ್ಚಿಸಿಕೊಳ್ಳುವಾಗ ಆತನೊಂದಿಗಿನ ನಮ್ಮ ಸಂಬಂಧ ಬಲಗೊಳ್ಳುತ್ತದೆ. ನಾವು ಯೆಹೋವನಿಗೆ ಎಷ್ಟು ಹೆಚ್ಚು ಆಪ್ತರಾಗುತ್ತೇವೋ ಅಷ್ಟೇ ಹೆಚ್ಚಾಗಿ ಆತನನ್ನು ‘ನಮ್ಮ ಪೂರ್ಣ ಹೃದಯದಿಂದಲೂ ನಮ್ಮ ಪೂರ್ಣ ಪ್ರಾಣದಿಂದಲೂ ನಮ್ಮ ಪೂರ್ಣ ಮನಸ್ಸಿನಿಂದಲೂ ನಮ್ಮ ಪೂರ್ಣ ಬಲದಿಂದಲೂ’ ಪ್ರೀತಿಸಲು ಪ್ರಚೋದಿಸಲ್ಪಡುತ್ತೇವೆ. (ಮಾರ್ಕ 12:30) ದೇವರಿಗೆ ವಿಧೇಯರಾಗಿ ಆತನನ್ನು ಅನುಕರಿಸಬೇಕು ಎನ್ನುವುದೇ ನಮ್ಮ ತೀವ್ರಾಪೇಕ್ಷೆಯಾಗಿದೆ. (ಎಫೆ. 5:1) ಹಾಗಾದರೆ ಮುಂತಿಳಿಸಲಾಗಿರುವ ‘ಮಹಾ ಸಂಕಟಕ್ಕಾಗಿ’ ಕಾಯುತ್ತಿರುವಾಗ ಆಧ್ಯಾತ್ಮಿಕವಾಗಿ ‘ಸಿದ್ಧರಾಗಿರಲಿಕ್ಕಾಗಿ’ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಸಹಾಯಮಾಡಲು ಕುಟುಂಬ ಆರಾಧನೆಯನ್ನು ಕ್ರಮವಾಗಿ ಮಾಡುವುದು ಅತ್ಯಾವಶ್ಯಕ. (ಮತ್ತಾ. 24:21) ನಮ್ಮ ಸಂರಕ್ಷಣೆಗೆ ಇದು ಅತಿಮುಖ್ಯ!

15. ಕುಟುಂಬ ಆರಾಧನೆಯ ಸಂಜೆ ಕುಟುಂಬ ಸದಸ್ಯರ ನಡುವಣ ಸಂಬಂಧದ ಮೇಲೆ ಯಾವ ಪರಿಣಾಮಬೀರುತ್ತದೆ?

15 ಕುಟುಂಬ ಆರಾಧನೆಯ ಏರ್ಪಾಡಿನ ಇನ್ನೊಂದು ಉದ್ದೇಶ, ಪರಸ್ಪರ ಆಪ್ತರಾಗಲು ಕುಟುಂಬದ ಸದಸ್ಯರಿಗೆ ಸಹಾಯಮಾಡುವುದೇ. ಪ್ರತಿ ವಾರ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುತ್ತಾ ಒಟ್ಟಿಗೆ ಸಮಯ ವ್ಯಯಿಸುವಾಗ ಕುಟುಂಬ ಸದಸ್ಯರ ನಡುವಣ ಸಂಬಂಧ ಬಲಗೊಳ್ಳುತ್ತದೆ. ವಿವಾಹ ಸಂಗಾತಿಗಳು ಆಧ್ಯಾತ್ಮಿಕ ನಿಕ್ಷೇಪವನ್ನು ಒಟ್ಟಿಗೆ ಕಂಡುಕೊಂಡು ತಮ್ಮ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುವಾಗ ಅವರು ತುಂಬ ಹತ್ತಿರವಾಗುತ್ತಾರೆ. (ಪ್ರಸಂಗಿ 4:12 ಓದಿ.) ಹೆತ್ತವರು ಹಾಗೂ ಮಕ್ಕಳು ಒಟ್ಟಿಗೆ ಆರಾಧನೆಯಲ್ಲಿ ಒಳಗೂಡುವಾಗ ‘ಐಕ್ಯದ ಪರಿಪೂರ್ಣ ಬಂಧವಾದ’ ಪ್ರೀತಿಯಲ್ಲಿ ಒಂದಾಗುತ್ತಾರೆ.—ಕೊಲೊ. 3:14.

16. ಮೂವರು ಆಧ್ಯಾತ್ಮಿಕ ಸಹೋದರಿಯರು ವಾರದಲ್ಲಿ ಒಂದು ಸಂಜೆಯನ್ನು ಬೈಬಲ್‌ ಅಧ್ಯಯನಕ್ಕಾಗಿ ಬದಿಗಿರಿಸಿ ಯಾವ ಪ್ರಯೋಜನ ಪಡೆಯುತ್ತಿದ್ದಾರೆಂಬದನ್ನು ತಿಳಿಸಿ.

16 ವಾರದಲ್ಲಿ ಒಂದು ಸಂಜೆಯನ್ನು ಬೈಬಲ್‌ ಅಧ್ಯಯನಕ್ಕಾಗಿ ಬದಿಗಿರಿಸಿದ್ದರಿಂದ ಮೂವರು ಆಧ್ಯಾತ್ಮಿಕ ಸಹೋದರಿಯರು ಹೇಗೆ ಪ್ರಯೋಜನ ಹೊಂದುತ್ತಿದ್ದಾರೆ ಎಂಬದನ್ನು ಗಮನಿಸಿ. ವಯಸ್ಸಾದ ಈ ವಿಧವೆಯರು ಒಬ್ಬರಿಗೊಬ್ಬರು ಸಂಬಂಧಿಕರೇನಲ್ಲ. ಒಂದೇ ಪಟ್ಟಣದಲ್ಲಿ ವಾಸಿಸುತ್ತಿರುವ ಇವರು ಅನೇಕ ವರ್ಷಗಳಿಂದ ಒಳ್ಳೇ ಮಿತ್ರರು. ಇವರು ತಮ್ಮ ಸಾಹಚರ್ಯವನ್ನು ಹೆಚ್ಚಿಸಲು ಬಯಸಿದರು. ಆ ಸಂದರ್ಭ ಬರೀ ಸಹವಾಸವನ್ನು ಒದಗಿಸಿದರಷ್ಟೇ ಸಾಲದು, ಆಧ್ಯಾತ್ಮಿಕವಾಗಿಯೂ ಪ್ರಯೋಜನ ತರಬೇಕು ಎಂಬ ಇಚ್ಛೆಯಿಂದ ಮೂವರು ಒಟ್ಟಿಗೆ ಬೈಬಲ್‌ ಅಧ್ಯಯನ ಮಾಡಲು ಒಂದು ಸಂಜೆಯನ್ನು ಬದಿಗಿರಿಸಿದರು. ‘ದೇವರ ರಾಜ್ಯದ ಕುರಿತು ಕೂಲಂಕಷ ಸಾಕ್ಷಿನೀಡಿ’ (ಇಂಗ್ಲಿಷ್‌) ಎಂಬ ಪುಸ್ತಕವನ್ನು ಅಧ್ಯಯನ ಮಾಡಲಾರಂಭಿಸಿದರು. ಅವರಲ್ಲಿ ಒಬ್ಬಾಕೆ ಸಹೋದರಿ ಹೇಳುವುದು: “ನಾವು ಆಗ ಎಷ್ಟು ಆನಂದಿಸುತ್ತೇವೆಂದರೆ ಒಂದು ತಾಸಿಗಿಂತಲೂ ಹೆಚ್ಚು ಸಮಯ ಕಳೆದಿರುವುದು ಗೊತ್ತೇ ಆಗುವುದಿಲ್ಲ. ಒಂದನೇ ಶತಮಾನದಲ್ಲಿದ್ದ ನಮ್ಮ ಸಹೋದರರ ಸನ್ನಿವೇಶಗಳನ್ನು ನಾವು ಚಿತ್ರಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಹಾಗೂ ಅಂಥ ಸನ್ನಿವೇಶಗಳಲ್ಲಿ ನಾವೇನು ಮಾಡಬಹುದು ಎಂಬದರ ಬಗ್ಗೆ ಚರ್ಚಿಸುತ್ತೇವೆ. ಕಲಿತ ವಿಷಯಗಳನ್ನು ಶುಶ್ರೂಷೆಯಲ್ಲಿ ಅನ್ವಯಿಸಿಕೊಳ್ಳುತ್ತೇವೆ. ಇದರಿಂದಾಗಿ ರಾಜ್ಯದ ಕುರಿತು ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹಿಂದೆಂದಿಗಿಂತಲೂ ಹೆಚ್ಚು ಆನಂದವನ್ನೂ ಪ್ರತಿಫಲವನ್ನೂ ಕಂಡುಕೊಳ್ಳುತ್ತಿದ್ದೇವೆ.” ಈ ಏರ್ಪಾಡು ಆಧ್ಯಾತ್ಮಿಕ ಪ್ರಯೋಜನಗಳನ್ನು ತಂದಿರುವುದಲ್ಲದೆ ಆ ಮೂವರು ಸ್ನೇಹಿತರನ್ನು ಇನ್ನಷ್ಟು ಆಪ್ತರನ್ನಾಗಿಸಿದೆ. “ನಾವು ಈ ಏರ್ಪಾಡನ್ನು ತುಂಬ ಮಾನ್ಯಮಾಡುತ್ತೇವೆ” ಎನ್ನುತ್ತಾರವರು.

17. ಕುಟುಂಬ ಆರಾಧನೆಯ ಸಂಜೆಯು ಯಶಸ್ವಿಯಾಗಬೇಕಾದರೆ ಏನು ಮಾಡಬೇಕು?

17 ನಿಮ್ಮ ಕುರಿತೇನು? ಕುಟುಂಬ ಆರಾಧನೆ ಅಥವಾ ವೈಯಕ್ತಿಕ ಅಧ್ಯಯನಕ್ಕಾಗಿ ಒಂದು ಸಂಜೆಯನ್ನು ಬದಿಗಿರಿಸುವ ಮೂಲಕ ನೀವು ಯಾವ ಪ್ರಯೋಜನಗಳನ್ನು ಪಡೆಯುತ್ತಿದ್ದೀರಿ? ಆಗೊಮ್ಮೆ ಈಗೊಮ್ಮೆ ಮಾಡಿದರೆ ನಾವು ಆ ಏರ್ಪಾಡಿನಿಂದ ಪೂರ್ಣ ಪ್ರಯೋಜನ ಪಡೆಯಲಾಗದು. ಗೊತ್ತುಪಡಿಸಿದ ಸಮಯದಲ್ಲೇ ಅಧ್ಯಯನ ಮಾಡಲು ಕುಟುಂಬದಲ್ಲಿ ಪ್ರತಿಯೊಬ್ಬರೂ ಸಿದ್ಧರಿರಬೇಕು. ಚಿಕ್ಕಪುಟ್ಟ ವಿಷಯಗಳಿಗಾಗಿ ಅಧ್ಯಯನವನ್ನು ರದ್ದುಮಾಡಬಾರದು. ಅಲ್ಲದೆ ಅಧ್ಯಯನಕ್ಕಾಗಿ ನೀವು ಆರಿಸಿಕೊಳ್ಳುವ ವಿಷಯವು ನಿಮ್ಮ ಕುಟುಂಬಕ್ಕೆ ಅನ್ವಯವಾಗುವಂತಿರಬೇಕು. ಈ ಅಧ್ಯಯನ ಅವಧಿಗಳನ್ನು ಆನಂದದಾಯಕವನ್ನಾಗಿ ಮಾಡಲು ನೀವೇನು ಮಾಡಬಹುದು? ಪರಿಣಾಮಕಾರಿಯಾದ ಬೋಧನಾ ವಿಧಾನಗಳನ್ನು ಬಳಸಿ. ಅಧ್ಯಯನದ ಅವಧಿಯಲ್ಲಿ ನಿಮ್ಮ ನಡೆನುಡಿ ಗೌರವದಿಂದ ತುಂಬಿರಲಿ, ಪ್ರಶಾಂತ ವಾತಾವರಣವಿರಲಿ.—ಯಾಕೋ. 3:18. *

ಎಚ್ಚರವಾಗಿರಿ ಮತ್ತು ಸಿದ್ಧರಾಗಿರಿ

18, 19. ಮನುಷ್ಯಕುಮಾರನು ಬೇಗನೆ ಬರಲಿದ್ದಾನೆಂಬ ಸಂಗತಿಯು ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಯಾವ ಪರಿಣಾಮಬೀರಬೇಕು?

18 ಇಂದು ಹದಗೆಡುತ್ತಿರುವ ಲೋಕದ ಪರಿಸ್ಥಿತಿಯು ತಾನೇ ಸೈತಾನನ ದುಷ್ಟ ಲೋಕದ ಕಡೇ ದಿವಸಗಳು 1914ರಿಂದ ಆರಂಭವಾಗಿವೆ ಎಂಬದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅರ್ಮಗೆದೋನ್‌ ತುಂಬ ಹತ್ತಿರದಲ್ಲಿದೆ. ಮನುಷ್ಯಕುಮಾರನು ಭಕ್ತಿಹೀನ ಜನರ ಮೇಲೆ ಯೆಹೋವನ ನ್ಯಾಯತೀರ್ಪನ್ನು ಜಾರಿಗೊಳಿಸಲು ಬೇಗನೆ ಬರಲಿದ್ದಾನೆ. (ಕೀರ್ತ. 37:10; ಜ್ಞಾನೋ. 2:21, 22) ಈ ತಿಳುವಳಿಕೆ ನಿಮ್ಮ ಮೇಲೂ ನಿಮ್ಮ ಕುಟುಂಬದ ಮೇಲೂ ಪ್ರಭಾವಬೀರಬೇಕಲ್ಲವೇ?

19 ಕಣ್ಣನ್ನು ‘ಸರಳವಾಗಿಡುವಂತೆ’ ಯೇಸು ಕೊಟ್ಟ ಬುದ್ಧಿವಾದವನ್ನು ನೀವು ಪಾಲಿಸುತ್ತಿದ್ದೀರೋ? ಈ ಲೋಕದ ಜನರು ಐಶ್ವರ್ಯ, ಪ್ರಖ್ಯಾತಿ, ಅಧಿಕಾರವೆಂಬ ಶಿಖರವನ್ನು ಹತ್ತಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಿಮ್ಮ ಕುಟುಂಬ ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಪ್ರಯತ್ನಿಸುತ್ತಿದೆಯೋ? ಕುಟುಂಬ ಆರಾಧನೆಯ ಸಂಜೆ ಅಥವಾ ವೈಯಕ್ತಿಕ ಅಧ್ಯಯನವನ್ನು ಯಶಸ್ವಿಯಾಗಿ ನಡೆಸಲು ನಿಮ್ಮಿಂದಾಗುತ್ತಿದೆಯೋ? ಆ ಏರ್ಪಾಡಿನ ಉದ್ದೇಶವೇನಿದೆಯೋ ಅದನ್ನು ಸಾಧಿಸುವುದರಲ್ಲಿ ನೀವು ಸಫಲರಾಗಿದ್ದೀರೋ? ಹಿಂದಿನ ಲೇಖನದಲ್ಲಿ ಚರ್ಚಿಸಿದ ರೀತಿಯಲ್ಲಿ ಗಂಡನಾಗಿಯೋ, ಹೆಂಡತಿಯಾಗಿಯೋ ಅಥವಾ ಮಕ್ಕಳಾಗಿಯೋ ನೀವು ನಿಮ್ಮ ಶಾಸ್ತ್ರಾಧಾರಿತ ಜವಾಬ್ದಾರಿಯನ್ನು ಪೂರೈಸುತ್ತಾ ‘ಎಚ್ಚರವಾಗಿರಲು’ ನಿಮ್ಮ ಇಡೀ ಕುಟುಂಬಕ್ಕೆ ಸಹಾಯಮಾಡುತ್ತಿದ್ದೀರೋ? (1 ಥೆಸ. 5:6) ಹಾಗೆ ಮಾಡುತ್ತಿರುವಲ್ಲಿ ಮನುಷ್ಯಕುಮಾರನ ಬರೋಣಕ್ಕೆ ನೀವು ‘ಸಿದ್ಧರಾಗಿರುವಿರಿ.’

[ಪಾದಟಿಪ್ಪಣಿ]

^ ಪ್ಯಾರ. 17 ಕುಟುಂಬ ಆರಾಧನೆಯ ಸಂಜೆಯಲ್ಲಿ ಏನನ್ನು ಅಧ್ಯಯನ ಮಾಡಬಹುದು ಹಾಗೂ ಅದನ್ನು ಹೇಗೆ ವ್ಯಾವಹಾರಿಕವಾಗಿಯೂ ಆನಂದದಾಯಕವಾಗಿಯೂ ಮಾಡಬಹುದು ಎಂಬದರ ಕುರಿತ ಮಾಹಿತಿಗಾಗಿ 2009 ಅಕ್ಟೋಬರ್‌ 15ರ ಕಾವಲಿನಬುರುಜು ಪತ್ರಿಕೆಯ ಪುಟ 29-31 ನೋಡಿ.

ನೀವೇನು ಕಲಿತಿರಿ?

• ಕ್ರೈಸ್ತ ಕುಟುಂಬಗಳು,

ಕಣ್ಣನ್ನು ‘ಸರಳವಾಗಿಡುವ’ ಮೂಲಕ

ಆಧ್ಯಾತ್ಮಿಕ ಗುರಿಗಳನ್ನಿಟ್ಟು ಅವನ್ನು ಮುಟ್ಟಲು ಪ್ರಯತ್ನಿಸುವ ಮೂಲಕ

ಕುಟುಂಬ ಆರಾಧನೆಯನ್ನು ತಪ್ಪದೇ ನಡೆಸುವ ಮೂಲಕ ಹೇಗೆ ‘ಸಿದ್ಧರಾಗಿರಬಹುದು’ ಎಂಬದನ್ನು ವಿವರಿಸಿ.

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

“ಸರಳ” ಕಣ್ಣು ಲೋಕದ ಅಪಕರ್ಷಣೆಗಳನ್ನು ಪ್ರತಿರೋಧಿಸುವಂತೆ ನಮ್ಮನ್ನು ಪ್ರೇರಿಸುವುದು