ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯದಲ್ಲಿ ನೀವು ಆನಂದಿಸುತ್ತೀರೋ?

ದೇವರ ವಾಕ್ಯದಲ್ಲಿ ನೀವು ಆನಂದಿಸುತ್ತೀರೋ?

ದೇವರ ವಾಕ್ಯದಲ್ಲಿ ನೀವು ಆನಂದಿಸುತ್ತೀರೋ?

“ಮೊದಮೊದಲು ಏನೋ ಬೈಬಲ್‌ ಓದಬೇಕಲ್ಲ ಅಂತ ಓದುತ್ತಿದ್ದೆ. ಒಂಚೂರೂ ಖುಷಿಯಾಗುತ್ತಿರಲಿಲ್ಲ. ತಲೆಯೊಳಗೆ ಏನೂ ಹೋಗುತ್ತಿರಲಿಲ್ಲ. ಹಾಗಾಗಿ ನನ್ನ ಮನಸ್ಸು ಅತ್ತಿತ್ತ ಅಲೆದಾಡುತ್ತಿತ್ತು” ಎನ್ನುತ್ತಾಳೆ ಲಾರೈನ್‌.

ಬೈಬಲನ್ನು ಓದಲು ಆರಂಭಿಸಿದಾಗ ತಾವು ಸಹ ಅಷ್ಟಾಗಿ ಆನಂದಿಸುತ್ತಿರಲಿಲ್ಲವೆಂದು ಇನ್ನಿತರರೂ ಒಪ್ಪುತ್ತಾರೆ. ಹಾಗಿದ್ದರೂ ಅವರು ಓದುವುದನ್ನು ನಿಲ್ಲಿಸಲಿಲ್ಲ. ಏಕೆಂದರೆ ಪವಿತ್ರ ಶಾಸ್ತ್ರಗ್ರಂಥವನ್ನು ಓದುವುದೇ ಅತ್ಯುತ್ತಮ ರೂಢಿಯೆಂದು ಅವರಿಗೆ ಗೊತ್ತಿತ್ತು. ಮಾರ್ಕ್‌ ಹೇಳುವುದು: “ಬೈಬಲ್‌ ಓದುವಾಗ ಹಾಗೂ ವೈಯಕ್ತಿಕ ಅಧ್ಯಯನ ಮಾಡುವಾಗ ಸುಲಭವಾಗಿ ಅಪಕರ್ಷಿತನಾಗುತ್ತಿದ್ದೆ. ಆದಾಗ್ಯೂ ಬೈಬಲ್‌ ಓದುವಿಕೆಯನ್ನು ನನ್ನ ದಿನಚರಿಯ ಭಾಗವನ್ನಾಗಿ ಮಾಡಲು ಪ್ರಾರ್ಥನೆ, ಪರಿಶ್ರಮ ಸಹಾಯಮಾಡಿತು.”

ದೇವರ ಲಿಖಿತ ವಾಕ್ಯವಾದ ಬೈಬಲಿಗಾಗಿ ನಿಮಗಿರುವ ಗಣ್ಯತೆಯನ್ನು ಹೆಚ್ಚಿಸಲು ನೀವೇನು ಮಾಡಬಹುದು? ಅದನ್ನು ಓದುವಾಗ ನೀವು ಹೇಗೆ ಆನಂದಿಸಬಲ್ಲಿರಿ? ಇಲ್ಲಿವೆ ಕೆಲವು ಸಲಹೆಗಳು.

ಗುರಿಗಳು ಹಾಗೂ ವಿಧಾನಗಳು

ಪ್ರಾರ್ಥನಾಪೂರ್ವಕವಾಗಿಯೂ ಏಕಾಗ್ರಚಿತ್ತದಿಂದಲೂ ಬೈಬಲನ್ನು ಓದಿ. ಆತನ ವಾಕ್ಯವನ್ನು ಅಧ್ಯಯನ ಮಾಡುವ ವಾಂಛೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವಂತೆ ಯೆಹೋವನ ಬಳಿ ಬೇಡಿ. ಆತನ ವಿವೇಕವನ್ನು ಹೆಚ್ಚು ಪೂರ್ಣವಾಗಿ ಗ್ರಹಿಸಲು ನಿಮ್ಮ ಹೃದಮನಗಳನ್ನು ತೆರೆಯುವಂತೆ ಬಿನ್ನೈಸಿರಿ. (ಕೀರ್ತ. 119:34) ಬೈಬಲ್‌ ಅಧ್ಯಯನವನ್ನು ಈ ರೀತಿಯಲ್ಲಿ ಆರಂಭಿಸದಿದ್ದಲ್ಲಿ ಅದು ಯಾಂತ್ರಿಕವಾಗಿಬಿಡುತ್ತದೆ. ಕ್ರಮೇಣ ಓದುವ ಇಚ್ಛೆಯನ್ನೇ ಕಳೆದುಕೊಳ್ಳುವಿರಿ. ಲಿನ್‌ ಎಂಬಾಕೆ ಹೇಳುವುದು: “ನಾನು ಕೆಲವೊಮ್ಮೆ ಅವಸರವಸರವಾಗಿ ಓದುತ್ತಿದ್ದೆ. ಆದ್ದರಿಂದ ಆಸಕ್ತಿಕರ ಅಂಶಗಳು ನನ್ನ ಗಮನಕ್ಕೆ ಬರುತ್ತಿರಲಿಲ್ಲ. ಎಷ್ಟೋ ಸಲ ಮುಖ್ಯ ವಿಚಾರಗಳೇ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ನಾನು ಸ್ವನಿಯಂತ್ರಣಕ್ಕಾಗಿ ಪ್ರಾರ್ಥಿಸುತ್ತೇನೆ. ಇದು, ಮನಸ್ಸಿಗೆ ಲಗಾಮುಹಾಕಿ ಏಕಾಗ್ರತೆಯಿಂದ ಓದಲು ನನಗೆ ಸಹಾಯಮಾಡುತ್ತದೆ.”

ಕಲಿಯುವ ವಿಚಾರಗಳನ್ನು ಅಮೂಲ್ಯವೆಂದೆಣಿಸಿ. ನಿತ್ಯಜೀವ ಪಡೆಯಲು ಬೈಬಲ್‌ ಸತ್ಯಗಳನ್ನು ಅರ್ಥಮಾಡಿಕೊಂಡು ಅನ್ವಯಿಸಿಕೊಳ್ಳುವುದು ಪ್ರಾಮುಖ್ಯ ಎಂಬದನ್ನು ನೆನಪಿನಲ್ಲಿಡಿ. ಹಾಗಾಗಿ ವ್ಯಾವಹಾರಿಕ ಅಂಶಗಳನ್ನು ಕಂಡುಕೊಳ್ಳಲು ಹಾಗೂ ಅನ್ವಯಿಸಿಕೊಳ್ಳಲು ಶ್ರದ್ಧೆಯಿಂದ ಪ್ರಯತ್ನಿಸಿ. ಕ್ರಿಸ್‌ ಅನ್ನುವುದು: “ನನ್ನಲ್ಲಿರುವ ಕೆಟ್ಟ ಮನೋಭಾವಗಳನ್ನು ಹಾಗೂ ಹೇತುಗಳನ್ನು ಗುರುತಿಸಲು ಸಹಾಯಮಾಡುವಂಥ ವಿಷಯಗಳನ್ನು ನಾನು ಹುಡುಕುತ್ತಿರುತ್ತೇನೆ. ಬೈಬಲ್‌ ಹಾಗೂ ನಮ್ಮ ಇತರೆ ಪ್ರಕಾಶನಗಳ ಬರಹಗಾರರಿಗೆ ನನ್ನ ಪರಿಚಯವಿಲ್ಲದಿದ್ದರೂ ಅವುಗಳಲ್ಲಿ ನನಗೆ ವೈಯಕ್ತಿಕವಾಗಿ ಪ್ರಯೋಜನವಾಗುವಂಥ ವಿಷಯಗಳಿವೆ. ಅದು ನಿಜಕ್ಕೂ ಚೈತನ್ಯದಾಯಕ ಸಂಗತಿ.”

ಮುಟ್ಟಬಲ್ಲ ಗುರಿಗಳನ್ನಿಡಿ. ಬೈಬಲಿನಲ್ಲಿ ತಿಳಿಸಲಾಗಿರುವ ವ್ಯಕ್ತಿಗಳ ಬಗ್ಗೆ ಹೊಸ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ. ನಮ್ಮ ಪ್ರಕಾಶನಗಳಲ್ಲಿ ಅವರ ಬಗ್ಗೆ ಸ್ವಾರಸ್ಯಕರ ಅಂಶಗಳನ್ನು ನೀವು ಕಂಡುಕೊಳ್ಳಬಲ್ಲಿರಿ. ಬೈಬಲಿನಲ್ಲಿ ತಿಳಿಸಲಾಗಿರುವ ಸ್ತ್ರೀಪುರುಷರು ವ್ಯಕ್ತಿತ್ವ ಮತ್ತು ಭಾವನೆಗಳುಳ್ಳ ನೈಜ ವ್ಯಕ್ತಿಗಳಾಗಿದ್ದಾರೆಂಬುದನ್ನು ನೀವು ಎಷ್ಟು ಹೆಚ್ಚಾಗಿ ಅರ್ಥಮಾಡಿಕೊಳ್ಳುತ್ತೀರೋ ಅಷ್ಟೇ ಹೆಚ್ಚಾಗಿ ಅವರು ನಿಮ್ಮ ಮೇಲೆ ಪ್ರಭಾವಬೀರುವರು.

ಶಾಸ್ತ್ರಗ್ರಂಥದಿಂದ ತರ್ಕಿಸಬಹುದಾದ ಹೊಸ ವಿಧಾನಗಳ ಬಗ್ಗೆ ಯೋಚಿಸಿ. (ಅ. ಕಾ. 17:2, 3) ಇದನ್ನೇ ಮನಸ್ಸಿನಲ್ಲಿಟ್ಟು ಸೋಫಿಯಾ ಎಂಬಾಕೆ ಅಧ್ಯಯನ ಮಾಡುತ್ತಾಳೆ. “ಬೈಬಲ್‌ ಸತ್ಯಗಳನ್ನು ಸ್ಪಷ್ಟವಾಗಿ ತಿಳಿಸಲು ತರ್ಕಬದ್ಧವಾಗಿ ಮಾತಾಡುವ ಹೊಸ ವಿಧಾನಗಳನ್ನು ಕಲಿಯುವುದೇ ನನ್ನ ಗುರಿ. ಇದನ್ನು ಸಾಧಿಸಲು ಕಾವಲಿನಬುರುಜು ಪತ್ರಿಕೆ ಅತ್ಯುತ್ತಮ ಸಾಧನ” ಎನ್ನುತ್ತಾಳೆ ಆಕೆ.—2 ತಿಮೊ. 2:15.

ಬೈಬಲ್‌ ವೃತ್ತಾಂತಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ‘ದೇವರ ವಾಕ್ಯವು ಸಜೀವವಾದದ್ದು’ ಎನ್ನುತ್ತದೆ ಇಬ್ರಿಯ 4:12. ನೀವು ಬೈಬಲ್‌ ವೃತ್ತಾಂತಗಳನ್ನು ಓದುವಾಗ ಆ ದೃಶ್ಯವನ್ನು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳಿ. ಆಗ ದೇವರ ಸಂದೇಶವು ನಿಮ್ಮ ಮನಸ್ಸಿನಲ್ಲಿ ಸಜೀವವಾಗಿರುವುದು. ಅವರೇನನ್ನು ನೋಡುತ್ತಿದ್ದಾರೋ ಅದನ್ನು ನೋಡಲು, ಏನನ್ನು ಕೇಳಿಸಿಕೊಳ್ಳುತ್ತಿದ್ದಾರೋ ಅದನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿ. ಅವರ ಭಾವನೆ ಅನಿಸಿಕೆಗಳನ್ನು ನಿಮ್ಮಲ್ಲೂ ತಂದುಕೊಳ್ಳಿ. ಅವರ ಸನ್ನಿವೇಶಗಳನ್ನು ನಿಮ್ಮ ಸನ್ನಿವೇಶಗಳೊಂದಿಗೆ ಹೋಲಿಸಿ ನೋಡಿ. ಅವರು ಆ ಸನ್ನಿವೇಶಗಳನ್ನು ನಿಭಾಯಿಸಿದ ವಿಧದಿಂದ ಕಲಿತುಕೊಳ್ಳಿ. ಹೀಗೆ ಮಾಡುವಾಗ ಬೈಬಲ್‌ ವೃತ್ತಾಂತಗಳು ನಿಮಗೆ ಚೆನ್ನಾಗಿ ಅರ್ಥವಾಗುವವು ಮಾತ್ರವಲ್ಲ ಮನಸ್ಸಿನಲ್ಲಿ ಹಚ್ಚಹಸುರಾಗಿರುವವು.

ಕಷ್ಟಕರವಾಗಿರುವ ವಚನಗಳನ್ನು ಹಾಗೂ ಅವುಗಳ ವಿವರಣೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ವ್ಯಯಿಸಿ. ಪ್ರತಿ ಬಾರಿ ಅಧ್ಯಯನ ಮಾಡುವಾಗ ಸಾಕಷ್ಟು ಸಮಯ ವ್ಯಯಿಸಿ. ಕೆಲವೊಮ್ಮೆ ನಿಮ್ಮ ಮನಸ್ಸಿನಲ್ಲಿ ಆಸಕ್ತಿಕರ ಪ್ರಶ್ನೆಗಳೇಳಬಹುದು ಅಥವಾ ಕೆಲವೊಂದು ವಚನಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟವಾಗಬಹುದು. ಆಗ ಸಂಘಟನೆಯ ಇತರ ಪ್ರಕಾಶನಗಳಲ್ಲಿ ನೀವು ಹೆಚ್ಚು ಸಂಶೋಧನೆ ಮಾಡಬೇಕಾದೀತು. ನೀವು ದೇವರ ವಾಕ್ಯದಲ್ಲಿ ಓದುವ ವಿಷಯವನ್ನು ಎಷ್ಟು ಹೆಚ್ಚಾಗಿ ಅರ್ಥಮಾಡಿಕೊಂಡು ಅನ್ವಯಿಸಿಕೊಳ್ಳುತ್ತೀರೋ ಅಷ್ಟೇ ಹೆಚ್ಚಾಗಿ ಅದರಲ್ಲಿ ಆನಂದಿಸುವಿರಿ. ಆಗ ಕೀರ್ತನೆಗಾರನಂತೆ ನೀವು ಸಹ, “[ಯೆಹೋವನ] ಕಟ್ಟಳೆಗಳನ್ನು ನನ್ನ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ; ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ” ಎಂದು ಹೇಳಬಲ್ಲಿರಿ.—ಕೀರ್ತ. 119:111.

ಅವಸರವಸರವಾಗಿ ಓದಿಮುಗಿಸಬೇಡಿ. ವೈಯಕ್ತಿಕ ಅಧ್ಯಯನ ಮಾಡಲಿಕ್ಕಾಗಿ ನೀವು ಕಾಲತಖ್ತೆ ಮಾಡುವಾಗ ನ್ಯಾಯಸಮ್ಮತರಾಗಿರಿ. ಇದಕ್ಕೂ ಸಭಾ ಕೂಟಗಳಿಗಾಗಿ ತಯಾರಿಮಾಡಲು ವ್ಯಯಿಸುವ ಸಮಯಕ್ಕೂ ನಡುವೆ ಸಮತೋಲನವಿರಲಿ. ರಾಕೆಲ್‌ ಎಂಬಾಕೆ ಹೇಳುವುದು: “ಕೆಲವೊಮ್ಮೆ ನನಗೆ ಎಷ್ಟು ತಲೆಬಿಸಿಯಿರುತ್ತದೆಂದರೆ ಗಮನಕೊಟ್ಟು ಓದಲಿಕ್ಕೇ ಆಗುವುದಿಲ್ಲ. ಆದ್ದರಿಂದ ನಾನು ಒಮ್ಮೆಗೇ ಬಹಳ ವಿಷಯಗಳನ್ನು ಆವರಿಸದೆ ಸ್ವಲ್ಪ ಸ್ವಲ್ಪವಾಗಿ ಅಧ್ಯಯನ ಮಾಡುತ್ತೇನೆ. ಇದರಿಂದ ಬಹಳ ಪ್ರಯೋಜನ ಪಡೆದಿದ್ದೇನೆ.” ಕ್ರಿಸ್‌ ಹೀಗನ್ನುತ್ತಾನೆ: “ನಾನು ಅವಸರವಸರವಾಗಿ ಓದುವಾಗ ನನ್ನ ಮನಸ್ಸಾಕ್ಷಿ ಚುಚ್ಚುತ್ತದೆ. ಏಕೆಂದರೆ ಓದಿದ್ದೇನೂ ನೆನಪಿನಲ್ಲಿ ಉಳಿಯೋದಿಲ್ಲ, ಹೃದಯಕ್ಕೂ ನಾಟುವುದಿಲ್ಲ.” ಹಾಗಾಗಿ, ಸಮಯ ತೆಗೆದುಕೊಳ್ಳಿ.

ದೇವರ ವಾಕ್ಯಕ್ಕಾಗಿ ಉತ್ಕಟ ಹಂಬಲವನ್ನು ಬೆಳೆಸಿಕೊಳ್ಳಿ. “ನವಜಾತ ಶಿಶುಗಳಂತೆ ವಾಕ್ಯಕ್ಕೆ ಸಂಬಂಧಿಸಿದ ಕಲಬೆರಕೆಯಿಲ್ಲದ ಹಾಲಿಗಾಗಿ ಹಂಬಲವನ್ನು ಬೆಳೆಸಿಕೊಳ್ಳಿರಿ; ಅದರಿಂದ ನೀವು ಬೆಳೆದು ರಕ್ಷಣೆಯನ್ನು ಹೊಂದುವಂತಾಗುವುದು” ಎಂದನು ಅಪೊಸ್ತಲ ಪೇತ್ರನು. (1 ಪೇತ್ರ 2:2) ಎಳೆಯ ಮಕ್ಕಳು ಹಾಲಿಗಾಗಿ ಹಂಬಲವನ್ನು ಬೆಳೆಸಿಕೊಳ್ಳಬೇಕಾಗಿರುವುದಿಲ್ಲ. ಏಕೆಂದರೆ ಆ ಹಂಬಲ ಮಕ್ಕಳಲ್ಲಿ ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ ನಾವು ದೇವರ ವಾಕ್ಯಕ್ಕಾಗಿ ಹಂಬಲವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಬೈಬಲ್‌ ಹೇಳುತ್ತದೆ. ನೀವು ಪ್ರತಿ ದಿನ ಬೈಬಲಿನ ಒಂದು ಪುಟ ಓದಿದರೆ ಆ ಹಂಬಲ ನಿಮ್ಮಲ್ಲಿ ಹುಟ್ಟುತ್ತದೆ. ಮೊದಮೊದಲು ಯಾವುದು ಕಷ್ಟಕರವೆನಿಸುತ್ತಿತ್ತೋ ಅದೀಗ ಆನಂದಕರವಾಗುತ್ತದೆ.

ಓದಿದ್ದನ್ನು ಧ್ಯಾನಿಸಿ. ಓದಿದ ವಿಷಯಗಳನ್ನು ಧ್ಯಾನಿಸುವುದರಿಂದಲೂ ಹೆಚ್ಚು ಪ್ರಯೋಜನವಾಗುವುದು. ಇದು ಈಗ ತಾನೇ ಓದಿದ ಮಾಹಿತಿಯನ್ನು ಈಗಾಗಲೇ ತಿಳಿದಿರುವ ವಿಷಯಗಳೊಂದಿಗೆ ಜೊತೆಗೂಡಿಸಲು ಸಹಾಯಮಾಡುವುದು. ಹೀಗೆ ನೀವು ವಿಷಯಗಳನ್ನು ಪೋಣಿಸುತ್ತಾ ಹೋಗುವಲ್ಲಿ ವಿವೇಕವೆಂಬ ಆಧ್ಯಾತ್ಮಿಕ ಮುತ್ತಿನ ಹಾರ ನಿಮ್ಮದಾಗುವುದು. ಇದು ಬೆಲೆಕಟ್ಟಲಾಗದ ಸ್ವಾಸ್ತ್ಯವಲ್ಲವೇ!—ಕೀರ್ತ. 19:14; ಜ್ಞಾನೋ. 3:3.

ವ್ಯಯಿಸಿದ ಸಮಯ ಸಾರ್ಥಕ

ಒಳ್ಳೇ ಅಧ್ಯಯನ ರೂಢಿಗಳಿಗೆ ಅಂಟಿಕೊಳ್ಳಲು ಬಹಳ ಪ್ರಯತ್ನಪಡಬೇಕು ನಿಜ. ಆದರೆ ಸಿಗುವ ಪ್ರಯೋಜನಗಳಾದರೋ ಅಪಾರ. ಶಾಸ್ತ್ರವಚನಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೀವು ಶಕ್ತರಾಗುವಿರಿ. (ಇಬ್ರಿ. 5:12-14) ಪ್ರೇರಿತ ಶಾಸ್ತ್ರಗ್ರಂಥದಿಂದ ಪಡೆದುಕೊಳ್ಳುವ ಜ್ಞಾನ, ವಿವೇಕವು ನಿಮಗೆ ಸುಖಸಂತೋಷ ಹಾಗೂ ಸಮಾಧಾನವನ್ನು ತರುತ್ತದೆ. ಯಾರು ದೇವಪ್ರೇರಿತ ವಾಕ್ಯದಲ್ಲಿರುವ ವಿವೇಕವನ್ನು ಕಂಡುಕೊಂಡು ಅನ್ವಯಿಸಿಕೊಳ್ಳುತ್ತಾರೋ ಅವರಿಗದು “ಜೀವದ ಮರವಾಗಿದೆ.”—ಜ್ಞಾನೋ. 3:13-18.

ದೇವರ ವಾಕ್ಯದ ಆಳವಾದ ಅಧ್ಯಯನ ನಿಮ್ಮಲ್ಲಿ ತಿಳುವಳಿಕೆಯನ್ನು ಹೆಚ್ಚಿಸುವುದು. (ಜ್ಞಾನೋ. 15:14) ಪೂರ್ಣವಾಗಿ ಬೈಬಲಿನ ಮೇಲೆ ಆಧರಿತವಾದ ಹೃತ್ಪೂರ್ವಕ ಸಲಹೆಯನ್ನು ಕೊಡಲು ನೀವು ಶಕ್ತರಾಗುವಿರಿ. ದೇವರ ವಾಕ್ಯದಲ್ಲಿ ಮತ್ತು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಕೊಡುವ ಪ್ರಕಾಶನಗಳಲ್ಲಿ ಓದುವ ವಿಷಯಗಳಿಗನುಸಾರ ನೀವು ನಿರ್ಣಯಗಳನ್ನು ಮಾಡುವಲ್ಲಿ ದೇವರ ವಾಕ್ಯದ ಸ್ಥಿರ ಹಾಗೂ ಚೈತನ್ಯದಾಯಕ ಪ್ರಭಾವವನ್ನು ಸ್ವತಃ ಅನುಭವಿಸುವಿರಿ. (ಮತ್ತಾ. 24:45) ನೀವು ಸಕಾರಾತ್ಮಕ ಮನೋಭಾವವುಳ್ಳವರೂ ಆಶಾವಾದಿಗಳೂ ಆಧ್ಯಾತ್ಮಿಕ ಮನಸ್ಸುಳ್ಳವರೂ ಆಗಿರುವಿರಿ. ಅಲ್ಲದೆ ದೇವರೊಂದಿಗೆ ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳಲು ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯೂ ಸಫಲವಾಗುವುದು.—ಕೀರ್ತ. 1:2, 3.

ದೇವರ ಮೇಲೆ ನಿಮಗಿರುವ ಹೃತ್ಪೂರ್ವಕ ಪ್ರೀತಿಯು ನಿಮ್ಮ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ನಿಮ್ಮನ್ನು ಪ್ರಚೋದಿಸುವುದು. ಇದು ಸಹ ತುಂಬ ಪ್ರತಿಫಲದಾಯಕ. ಈ ಮುಂಚೆ ತಿಳಿಸಲಾದ ಸೋಫಿಯಾ ತನ್ನ ಕೇಳುಗರ ಗಮನವನ್ನು ಸೆಳೆಯಲಿಕ್ಕಾಗಿ ಮತ್ತು ತನ್ನ ಕ್ರೈಸ್ತ ಶುಶ್ರೂಷೆಯನ್ನು ಹರ್ಷದಿಂದಲೂ ಪರಿಣಾಮಕಾರಿಯಾಗಿಯೂ ಮಾಡಲಿಕ್ಕಾಗಿ ವಚನಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹಾಗೂ ಉಪಯೋಗಿಸಲು ಪ್ರಯತ್ನಿಸುತ್ತಿದ್ದಾಳೆ. “ಬೈಬಲಿನಲ್ಲಿರುವ ಮಾತುಗಳಿಗೆ ಜನರು ಒಳ್ಳೇ ಪ್ರತಿಕ್ರಿಯೆ ತೋರಿಸುವಾಗ ಆಗುವ ಆನಂದಕ್ಕೆ ಪಾರವೇ ಇಲ್ಲ” ಎನ್ನುತ್ತಾಳೆ ಆಕೆ.

ದೇವರ ವಾಕ್ಯದಲ್ಲಿ ಆನಂದಿಸುವುದರಿಂದ ಇನ್ಯಾವ ಪ್ರಯೋಜನವಿದೆ? ನಾವು ಯೆಹೋವನೊಂದಿಗೆ ಅತ್ಯಾಪ್ತ ಸಂಬಂಧವನ್ನು ಹೊಂದಸಾಧ್ಯವಿದೆ. ಇದು ಅತೀ ದೊಡ್ಡ ಪ್ರಯೋಜನವೇ ಸರಿ! ಬೈಬಲ್‌ ಅಧ್ಯಯನವು ಆತನ ಮಟ್ಟಗಳನ್ನು ತಿಳಿದುಕೊಳ್ಳಲು ಹಾಗೂ ಆತನ ಪ್ರೀತಿ, ಉದಾರತೆ, ನ್ಯಾಯವನ್ನು ಗಣ್ಯಮಾಡಲು ನಿಮಗೆ ಸಹಾಯಮಾಡುತ್ತದೆ. ಬೈಬಲ್‌ ಅಧ್ಯಯನಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ಪ್ರತಿಫಲದಾಯಕವಾದ ವಿಷಯ ಬೇರೊಂದಿಲ್ಲ. ದೇವರ ವಾಕ್ಯದ ಅಧ್ಯಯನದಲ್ಲಿ ಪೂರ್ತಿ ಮಗ್ನರಾಗಿರಿ. ಹೀಗೆ ಮಾಡುವಲ್ಲಿ ನೀವು ವ್ಯಯಿಸಿದ ಸಮಯ ಸಾರ್ಥಕವೆನಿಸುವುದು.—ಕೀರ್ತ. 19:7-11.

[ಪುಟ 5ರಲ್ಲಿರುವ ಚೌಕ/ಚಿತ್ರಗಳು]

ದೇವರ ವಾಕ್ಯವನ್ನು ಓದಲು. . . ಗುರಿಗಳು ಹಾಗೂ ವಿಧಾನಗಳು

▪ ಪ್ರಾರ್ಥನಾಪೂರ್ವಕವಾಗಿಯೂ ಏಕಾಗ್ರಚಿತ್ತದಿಂದಲೂ ಬೈಬಲನ್ನು ಓದಿ.

▪ ಕಲಿಯುವ ವಿಚಾರಗಳನ್ನು ಅಮೂಲ್ಯವೆಂದೆಣಿಸಿ.

▪ ಮುಟ್ಟಬಲ್ಲ ಗುರಿಗಳನ್ನಿಡಿ.

▪ ಶಾಸ್ತ್ರಗ್ರಂಥದಿಂದ ತರ್ಕಿಸಬಹುದಾದ ಹೊಸ ವಿಧಾನಗಳ ಬಗ್ಗೆ ಯೋಚಿಸಿ.

▪ ಬೈಬಲ್‌ ವೃತ್ತಾಂತಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ.

▪ ಕಷ್ಟಕರವಾಗಿರುವ ವಚನಗಳನ್ನು ಹಾಗೂ ಅವುಗಳ ವಿವರಣೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ವ್ಯಯಿಸಿ.

▪ ಅವಸರವಸರವಾಗಿ ಓದಿಮುಗಿಸಬೇಡಿ.

▪ ದೇವರ ವಾಕ್ಯಕ್ಕಾಗಿ ಉತ್ಕಟ ಹಂಬಲವನ್ನು ಬೆಳೆಸಿಕೊಳ್ಳಿ.

▪ ಓದಿದ್ದನ್ನು ಧ್ಯಾನಿಸಿ.

[ಪುಟ 4ರಲ್ಲಿರುವ ಚಿತ್ರ]

ಬೈಬಲ್‌ ವೃತ್ತಾಂತ ಓದುವಾಗ ನೀವು ಸಹ ಆ ಸನ್ನಿವೇಶದಲ್ಲಿದ್ದೀರೋ ಎಂಬಂತೆ ಕಲ್ಪಿಸಿಕೊಳ್ಳಿ