ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಲ್ಲಿ ಸಂಪೂರ್ಣ ಭರವಸೆ ಸುಭದ್ರ ಭಾವನೆಯನ್ನು ಮೂಡಿಸುತ್ತದೆ

ಯೆಹೋವನಲ್ಲಿ ಸಂಪೂರ್ಣ ಭರವಸೆ ಸುಭದ್ರ ಭಾವನೆಯನ್ನು ಮೂಡಿಸುತ್ತದೆ

ಯೆಹೋವನಲ್ಲಿ ಸಂಪೂರ್ಣ ಭರವಸೆ ಸುಭದ್ರ ಭಾವನೆಯನ್ನು ಮೂಡಿಸುತ್ತದೆ

“ನಾನು . . . ಮೊರೆಯಿಡುವಾಗೆಲ್ಲಾ [ಯೆಹೋವನು] ಕೇಳುತ್ತಾನೆ.”—ಕೀರ್ತ. 4:3.

1, 2. (ಎ) ದಾವೀದನು ಯಾವ ಗಂಡಾಂತರವನ್ನು ಎದುರಿಸಿದನು? (ಬಿ) ನಾವೀಗ ಯಾವ ಕೀರ್ತನೆಗಳನ್ನು ಚರ್ಚಿಸುವೆವು?

ರಾಜ ದಾವೀದನು ಹಲವಾರು ವರ್ಷಗಳಿಂದ ಇಸ್ರಾಯೇಲಿನಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಆದರೆ ಈಗ ಮಗನಿಂದಲೇ ಅವನಿಗೆ ಗಂಡಾಂತರವೊಂದು ಎದುರಾಯಿತು. ಅವನ ಮಗನಾದ ಅಬ್ಷಾಲೋಮನು ಪಿತೂರಿ ನಡೆಸಿ ತಾನೇ ರಾಜನೆಂದು ಘೋಷಿಸಿಕೊಂಡನು. ದಾವೀದನಿಗೆ ಆಗ ಯೆರೂಸಲೇಮನ್ನು ಬಿಟ್ಟು ಓಡಿಹೋಗದೆ ಬೇರೆ ದಾರಿಯಿರಲಿಲ್ಲ. ಅವನ ಆಪ್ತ ಸ್ನೇಹಿತನು ಸಹ ಅವನಿಗೆ ದ್ರೋಹಬಗೆದನು. ದಾವೀದನ ಪಕ್ಷದಲ್ಲಿ ಉಳಿದುಕೊಂಡವರು ಕೆಲವೇ ಮಂದಿ. ಅವರೊಂದಿಗೆ ಬರಿಗಾಲಲ್ಲೇ ನಡೆದುಬಂದ ದಾವೀದನು ಅಳುತ್ತಾ, ಎಣ್ಣೇ ಮರಗಳ ಗುಡ್ಡವನ್ನೇರಿದನು. ಅವರು ಅಲ್ಲಿಂದ ಮುಂದಕ್ಕೆ ಹೋದಾಗ ರಾಜ ಸೌಲನ ವಂಶದವನಾದ ಶಿಮ್ಮೀ ಕಲ್ಲುಗಳನ್ನು ಎಸೆಯುತ್ತಾ ಧೂಳೆರಚುತ್ತಾ ದಾವೀದನನ್ನು ಶಪಿಸಿದನು.—2 ಸಮು. 15:30, 31; 16:5-14.

2 ಈ ಸನ್ನಿವೇಶಗಳಲ್ಲಾದ ಅವಮಾನ, ದುಃಖದಿಂದ ಕೊರಗಿ ಕೊರಗಿ ದಾವೀದನು ಸಾವಿನಂಚಿಗೆ ತಲಪಿದನೋ? ಖಂಡಿತ ಇಲ್ಲ. ಏಕೆಂದರೆ ಅವನು ಯೆಹೋವನಲ್ಲಿ ಭರವಸೆಯನ್ನಿಟ್ಟಿದ್ದನು. ಇದು, ದಾವೀದನು ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ 3ನೇ ಕೀರ್ತನೆಯಿಂದ ವ್ಯಕ್ತವಾಗುತ್ತದೆ. ಅವನು 4ನೇ ಕೀರ್ತನೆಯನ್ನೂ ಬರೆದನು. ಈ ಎರಡೂ ಕೀರ್ತನೆಗಳು, ದೇವರು ಪ್ರಾರ್ಥನೆಗಳನ್ನು ಕೇಳುತ್ತಾನೆ ಮಾತ್ರವಲ್ಲ ಸದುತ್ತರವನ್ನೂ ದಯಪಾಲಿಸುತ್ತಾನೆ ಎಂಬ ನಿಶ್ಚಿತಾಭಿಪ್ರಾಯವನ್ನು ಕನ್ನಡಿಯಷ್ಟೇ ನಿಚ್ಚಳವಾಗಿ ಪ್ರತಿಬಿಂಬಿಸುತ್ತವೆ. (ಕೀರ್ತ. 3:4; 4:3) ಅಲ್ಲದೆ, ಯೆಹೋವನು ಹಗಲಿರುಳೂ ತನ್ನ ನಂಬಿಗಸ್ತ ಸೇವಕರೊಂದಿಗಿದ್ದು ಅವರನ್ನು ಬೆಂಬಲಿಸುತ್ತಾ, ಸಮಾಧಾನ, ಭದ್ರತೆಯನ್ನು ನೀಡುತ್ತಾ ಆಶೀರ್ವದಿಸುತ್ತಾನೆ ಎಂಬ ಆಶ್ವಾಸನೆಯನ್ನೂ ಕೊಡುತ್ತವೆ. (ಕೀರ್ತ. 3:5; 4:8) ಆದ್ದರಿಂದ ನಾವೀಗ ಆ ಎರಡು ಕೀರ್ತನೆಗಳನ್ನು ಪರಿಶೀಲಿಸೋಣ. ಅವು ನಮ್ಮಲ್ಲಿ ಸುಭದ್ರ ಅನಿಸಿಕೆಯನ್ನು ಹೇಗೆ ಮೂಡಿಸುತ್ತವೆ ಮತ್ತು ದೇವರಲ್ಲಿನ ನಮ್ಮ ಭರವಸೆಯನ್ನು ಹೇಗೆ ಕಟ್ಟುತ್ತವೆ ಎನ್ನುವುದನ್ನು ಗಮನಿಸೋಣ.

‘ನಮಗೆ ಬಹಳ ಮಂದಿ ವೈರಿಗಳಾಗಿ ನಿಂತಾಗ’

3. ದಾವೀದನ ಪರಿಸ್ಥಿತಿ ಹೇಗಿತ್ತೆಂದು ಕೀರ್ತನೆ 3:1, 2 ತಿಳಿಸುತ್ತದೆ?

3 “ಇಸ್ರಾಯೇಲ್ಯರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ” ಸುದ್ದಿಯನ್ನು ಒಬ್ಬ ದೂತನು ದಾವೀದನಿಗೆ ಮುಟ್ಟಿಸಿದನು. (2 ಸಮು. 15:13) ಅಬ್ಷಾಲೋಮನು ಅಷ್ಟು ಜನರನ್ನು ಕೂಡಿಸಿಕೊಂಡಿರುವುದಕ್ಕೆ ದಾವೀದನು ಆಶ್ಚರ್ಯಪಡುತ್ತಾ ಕೇಳಿದ್ದು: “ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ; ನನಗೆ ವೈರಿಗಳಾಗಿ ನಿಂತವರು ಬಹಳ ಮಂದಿ. ಅನೇಕರು ನನ್ನ ವಿಷಯದಲ್ಲಿ—ಅವನಿಗೆ ದೇವರಿಂದ ಸಹಾಯವು ಆಗುವದೇ ಇಲ್ಲವೆಂದು ಹೇಳಿಕೊಳ್ಳುತ್ತಾರೆ.” (ಕೀರ್ತ. 3:1, 2) ಅಬ್ಷಾಲೋಮನೂ ಅವನ ಸೈನಿಕರೂ ತಂದೊಡ್ಡಿದ ಸಂಕಟದಿಂದ ಯೆಹೋವನು ದಾವೀದನನ್ನು ಖಂಡಿತ ವಿಮೋಚಿಸನೆಂದು ಇಸ್ರಾಯೇಲ್ಯರಲ್ಲಿ ಅನೇಕರು ನೆನಸಿದ್ದರು.

4, 5. (ಎ) ದಾವೀದನಿಗೆ ಯಾವ ಖಾತ್ರಿಯಿತ್ತು? (ಬಿ) ‘ನನ್ನ ತಲೆಯನ್ನು ಎತ್ತುವಂತೆ ಮಾಡುವವನು’ ಎಂಬ ಮಾತುಗಳ ಮಹತ್ವಾರ್ಥವೇನು?

4 ಆದರೆ ದಾವೀದನು ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟಿದ್ದ ಕಾರಣ ಆತನು ತನ್ನನ್ನು ಕಾಪಾಡುವನೆಂಬ ವಿಷಯದಲ್ಲಿ ಅವನಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. “ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿ; ನೀನು ನನ್ನ ಗೌರವಕ್ಕೆ ಆಧಾರನೂ ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ” ಎಂದು ಹಾಡಿದನವನು. (ಕೀರ್ತ. 3:3) ಸೈನಿಕನಿಗೆ ಗುರಾಣಿಯು ರಕ್ಷಣೆ ನೀಡುವಂತೆ ಯೆಹೋವನು ತನ್ನನ್ನು ರಕ್ಷಿಸುವನೆಂಬ ನಂಬಿಕೆ ದಾವೀದನಿಗಿತ್ತು. ಹೌದು, ವೃದ್ಧ ರಾಜನು ಪಲಾಯನ ಮಾಡುವ, ಅವಮಾನದಿಂದ ತಲೆತಗ್ಗಿಸುವ ಸ್ಥಿತಿಗೆ ಬಂದಿದ್ದರೂ ಮಹೋನ್ನತ ದೇವರು ಅವನನ್ನು ಖಂಡಿತ ಮಹಿಮೆಗೇರಿಸಲಿದ್ದನು. ಯೆಹೋವನು ಪುನಃ ಅವನನ್ನು ತಲೆಯೆತ್ತಿ ನಡೆಯುವ ಉನ್ನತ ಸ್ಥಿತಿಗೆ ತರಲಿದ್ದನು. ಆತನು ತನಗೆ ಖಂಡಿತ ಉತ್ತರ ಕೊಡುವನೆಂಬ ಭರವಸೆಯಿಂದ ದಾವೀದನು ಪ್ರಾರ್ಥಿಸಿದನು. ನಿಮಗೂ ಯೆಹೋವನಲ್ಲಿ ಅಂಥ ಭರವಸೆಯಿದೆಯೋ?

5 ‘ನನ್ನ ತಲೆಯನ್ನು ಎತ್ತುವಂತೆ ಮಾಡುವವನು’ ಎಂಬ ಪದಗಳನ್ನು ಉಪಯೋಗಿಸುವ ಮೂಲಕ ಯೆಹೋವನೇ ತನಗೆ ಸಹಾಯ ಮಾಡುವನೆಂದು ದಾವೀದನು ಹೇಳಿದನು. ಟುಡೇಸ್‌ ಇಂಗ್ಲಿಷ್‌ ವರ್ಷನ್‌ನಲ್ಲಿ ಆ ವಚನ ಹೀಗಿದೆ: ‘ಆದರೆ ಕರ್ತನೇ, ನೀನು ಯಾವಾಗಲೂ ಅಪಾಯದ ಸಮಯದಲ್ಲಿ ನನಗೆ ಗುರಾಣಿಯಾಗಿದ್ದಿ. ನೀನು ನನಗೆ ವಿಜಯವನ್ನು ಕೊಟ್ಟು ನನ್ನಲ್ಲಿ ಧೈರ್ಯವನ್ನು ತುಂಬಿಸು.’ ಒಂದು ಪರಾಮರ್ಶನ ಗ್ರಂಥ ‘ತಲೆಯನ್ನು ಎತ್ತುವಂತೆ ಮಾಡುವವನು’ ಎಂಬ ಅಭಿವ್ಯಕ್ತಿಯ ಕುರಿತು ಹೀಗನ್ನುತ್ತದೆ: “ದೇವರು ಒಬ್ಬನ . . . ‘ತಲೆಯನ್ನು’ ಎತ್ತುವಾಗ ಅವನಲ್ಲಿ ನಿರೀಕ್ಷೆ, ಭರವಸೆಯನ್ನು ತುಂಬುತ್ತಾನೆ.” ಅಬ್ಷಾಲೋಮನು ಬಲವಂತವಾಗಿ ರಾಜ್ಯಾಧಿಕಾರವನ್ನು ಕಿತ್ತುಕೊಂಡಾಗ ದಾವೀದನು ಎದೆಗುಂದಿದನು. ಹಾಗಿದ್ದರೂ, ‘ಅವನ ತಲೆ ಎತ್ತಲ್ಪಡುವಾಗ’ ಇನ್ನೂ ಹೆಚ್ಚಿನ ಧೈರ್ಯ, ಸುಭದ್ರ ಅನಿಸಿಕೆ ಹಾಗೂ ದೇವರಲ್ಲಿ ಸಂಪೂರ್ಣ ಭರವಸೆಯನ್ನು ಅವನು ಹೊಂದಲಿದ್ದನು.

‘ಯೆಹೋವನು ಸದುತ್ತರವನ್ನು ಅನುಗ್ರಹಿಸುತ್ತಾನೆ’

6. ತನ್ನ ಪ್ರಾರ್ಥನೆಗೆ ಯೆಹೋವನು ಪರಿಶುದ್ಧಪರ್ವತದಿಂದ ಸದುತ್ತರವನ್ನು ಅನುಗ್ರಹಿಸುವನೆಂದು ದಾವೀದನು ಹೇಳಿದ್ದೇಕೆ?

6 ಯೆಹೋವನಲ್ಲಿದ್ದ ಭರವಸೆಯ ನಿಮಿತ್ತ ದಾವೀದನು ದೃಢನಿಶ್ಚಯದಿಂದ ಮುಂದುವರಿಸುತ್ತಾ ಹೇಳಿದ್ದು: “ಯೆಹೋವನಿಗೆ ಮೊರೆಯಿಡುವಾಗ ಆತನು ತನ್ನ ಪರಿಶುದ್ಧಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ.” (ಕೀರ್ತ. 3:4) ದಾವೀದನ ಅಪ್ಪಣೆಯ ಮೇರೆಗೆ ದೇವರ ಸಾನ್ನಿಧ್ಯವನ್ನು ಸೂಚಿಸುತ್ತಿದ್ದ ಒಡಂಬಡಿಕೆಯ ಮಂಜೂಷವನ್ನು ಚಿಯೋನ್‌ ಪರ್ವತಕ್ಕೆ ಒಯ್ಯಲಾಗಿತ್ತು. (2 ಸಮುವೇಲ 15:23-25 ಓದಿ.) ಹಾಗಾಗಿಯೇ ತನ್ನ ಪ್ರಾರ್ಥನೆಗೆ ಯೆಹೋವನು ಪರಿಶುದ್ಧಪರ್ವತದಿಂದ ಸದುತ್ತರವನ್ನು ಅನುಗ್ರಹಿಸುವನೆಂದು ದಾವೀದನು ಹೇಳಿದನು.

7. ದಾವೀದನು ನಿರ್ಭಯದಿಂದಿರಲು ಕಾರಣವೇನು?

7 ದಾವೀದನ ಆ ಪ್ರಾರ್ಥನೆ ಖಂಡಿತ ವ್ಯರ್ಥವಾಗಲಿಲ್ಲ. ಅವನು ನಿರ್ಭಯದಿಂದಿದ್ದನು. “ಯೆಹೋವನು ನನ್ನನ್ನು ಕಾಪಾಡುವವನಾದ್ದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು” ಎಂದು ಹಾಡಿದನು ಅವನು. (ಕೀರ್ತ. 3:5) ಅಪಾಯವು ಹಠಾತ್ತನೆ ಬಂದೆರಗುವ ರಾತ್ರಿ ವೇಳೆಯಲ್ಲಿಯೂ ದಾವೀದನು ನಿದ್ದೆಮಾಡಲು ಹೆದರಲಿಲ್ಲ. ಮರುದಿನ ಬೆಳಿಗ್ಗೆ ತಾನು ಖಂಡಿತ ಎದ್ದೇಳುವೆನೆಂಬ ನಂಬಿಕೆ ಅವನಿಗಿತ್ತು. ಏಕೆಂದರೆ ಈ ಹಿಂದೆ ಅವನಿಗಾದ ಅನುಭವಗಳು ದೇವರು ತನಗೆ ಸದಾ ಸಹಾಯಮಾಡುವನೆಂಬ ಸಂಪೂರ್ಣ ಖಾತ್ರಿಯನ್ನು ಅವನಿಗೆ ಕೊಟ್ಟಿದ್ದವು. “ಯೆಹೋವನ ಮಾರ್ಗವನ್ನೇ” ಅನುಸರಿಸಿ ಆತನನ್ನು ಎಂದಿಗೂ ಬಿಟ್ಟು ಹೋಗದಿದ್ದರೆ ನಮಗೂ ಆ ಖಾತ್ರಿ ಇರಬಲ್ಲದು.—2 ಸಮುವೇಲ 22:21, 22 ಓದಿ.

8. ದಾವೀದನು ದೇವರಲ್ಲಿ ಭರವಸೆಯನ್ನಿಟ್ಟಿದ್ದನೆಂದು ಕೀರ್ತನೆ 27:1-4 ಹೇಗೆ ತೋರಿಸುತ್ತದೆ?

8 ದಾವೀದನಿಗೆ ದೇವರಲ್ಲಿದ್ದ ದೃಢವಿಶ್ವಾಸ, ಸಂಪೂರ್ಣ ಭರವಸೆ ಇನ್ನೊಂದು ಕೀರ್ತನೆಯಲ್ಲೂ ಸುವ್ಯಕ್ತವಾಗಿದೆ. ಅದರಲ್ಲಿರುವ ಪ್ರೇರಿತ ನುಡಿಗಳು ಹೀಗಿವೆ: “ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೇನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು? . . . ನನಗೆ ವಿರೋಧವಾಗಿ ದಂಡುಬಂದಿಳಿದರೂ ನನಗೇನೂ ಭಯವಿಲ್ಲ; . . . ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.” (ಕೀರ್ತ. 27:1-4) ನಿಮಗೂ ಇಂಥ ಅನಿಸಿಕೆಗಳಿರುವಲ್ಲಿ ಮತ್ತು ನಿಮ್ಮ ಸನ್ನಿವೇಶಗಳು ಅನುಮತಿಸುವಲ್ಲಿ ಜೊತೆ ವಿಶ್ವಾಸಿಗಳೊಂದಿಗೆ ಕೂಟಗಳಿಗೆ ಕ್ರಮವಾಗಿ ಹಾಜರಾಗುವಿರಿ.—ಇಬ್ರಿ. 10:23-25.

9, 10. ಕೀರ್ತನೆ 3:6, 7ರಿಂದಲ್ಲದೆ ಬೇರೆ ಯಾವ ವಾಸ್ತವಾಂಶಗಳಿಂದಲೂ ದಾವೀದನಲ್ಲಿ ಸೇಡುತೀರಿಸುವ ಮನೋಭಾವ ಇರಲಿಲ್ಲವೆಂದು ಹೇಳಸಾಧ್ಯ?

9 ಅಬ್ಷಾಲೋಮನು ದ್ರೋಹವೆಸಗಿದ್ದರೂ ಇನ್ನೂ ಅನೇಕರು ವಿಶ್ವಾಸಘಾತ ಮಾಡಿದ್ದರೂ ದಾವೀದನು ಹಾಡಿದ್ದು: “ನನ್ನ ಸುತ್ತಲು ಸನ್ನದ್ಧರಾಗಿ ನಿಂತಿರುವ ಸಾವಿರಾರು ವೈರಿಗಳಿಗಾದರೂ ನಾನು ಹೆದರೆನು. ಯೆಹೋವನೇ, ನನ್ನ ದೇವರೇ, ನನ್ನ ಎಲ್ಲಾ ಶತ್ರುಗಳ ದವಡೆಯ ಮೇಲೆ ಬಡಿದು ಅವರ [ದುಷ್ಟರ, NW] ಹಲ್ಲುಗಳನ್ನು ಉದುರಿಸಿಬಿಟ್ಟವನೇ, ಎದ್ದು ಬಂದು ನನ್ನನ್ನು ರಕ್ಷಿಸು.”ಕೀರ್ತ. 3:6, 7.

10 ದಾವೀದನು ಸೇಡುತೀರಿಸಲು ಹೋಗಲಿಲ್ಲ. ತನ್ನೆಲ್ಲಾ ‘ಶತ್ರುಗಳ ದವಡೆಯ ಮೇಲೆ ಬಡಿಯುವುದು’ ದೇವರ ಕೆಲಸವೆಂದು ಅವನಿಗೆ ಗೊತ್ತಿತ್ತು. ರಾಜ ದಾವೀದನು ಧರ್ಮಶಾಸ್ತ್ರದ ವೈಯಕ್ತಿಕ ಪ್ರತಿಯನ್ನು ಬರೆದಿಟ್ಟುಕೊಂಡಿದ್ದರಿಂದ “ಪ್ರತೀಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ” ಎಂಬ ಯೆಹೋವನ ಮಾತು ಅವನಿಗೆ ಗೊತ್ತಿತ್ತು. (ಧರ್ಮೋ. 17:14, 15, 18; 32:35) ಮಾತ್ರವಲ್ಲ ‘ದುಷ್ಟರ ಹಲ್ಲುಗಳನ್ನು ಉದುರಿಸಿಬಿಡುವ’ ಕೆಲಸ ಸಹ ದೇವರದ್ದು. ಅವರ ಹಲ್ಲುಗಳನ್ನು ಉದುರಿಸಿಬಿಡುವುದರ ಅರ್ಥ, ಯಾವುದೇ ಹಾನಿಮಾಡಲಾಗದಂತೆ ಅವರನ್ನು ನಿಷ್ಕ್ರಿಯಗೊಳಿಸುವುದೆಂದೇ. ಯಾರು ದುಷ್ಟರೆಂಬುದು ಯೆಹೋವನಿಗೆ ಗೊತ್ತು. ಏಕೆಂದರೆ ‘ಆತನು ಹೃದಯವನ್ನು ನೋಡುತ್ತಾನೆ.’ (1 ಸಮು. 16:7) ಪ್ರಧಾನ ದುಷ್ಟನಾದ ಸೈತಾನನ ವಿರುದ್ಧ ಸ್ಥಿರವಾಗಿ ನಿಲ್ಲಲು ದೇವರು ನಮಗೆ ನಂಬಿಕೆ, ಬಲವನ್ನು ಕೊಡುತ್ತಾನೆ ಎಂಬುದಕ್ಕೆ ನಾವು ಬಹಳ ಕೃತಜ್ಞರು! ಬೇಗನೆ ಸೈತಾನನನ್ನು ಅಗಾಧ ಸ್ಥಳಕ್ಕೆ ದೊಬ್ಬಿ ನಿಷ್ಕ್ರಿಯಗೊಳಿಸಲಾಗುವುದು. ಹಲ್ಲು ಕೀಳಲ್ಪಟ್ಟ ಸಿಂಹ ತನ್ನಿಂದೇನೂ ಮಾಡಲಾಗದೆ ಹೇಗೆ ಸುಮ್ಮನೆ ಗರ್ಜಿಸುತ್ತಿರುವುದೋ ಹಾಗೇ ಸೈತಾನನಿರುವನು. ಅವನು ಕೇವಲ ನಾಶಕ್ಕೆ ಅರ್ಹನು!—1 ಪೇತ್ರ 5:8, 9; ಪ್ರಕ. 20:1, 2, 7-10.

“ರಕ್ಷಣೆಯು ಯೆಹೋವನಿಂದಲೇ”

11. ನಾವು ಜೊತೆ ವಿಶ್ವಾಸಿಗಳಿಗಾಗಿ ಪ್ರಾರ್ಥಿಸಬೇಕು ಏಕೆ?

11 ತನಗೆ ಅವಶ್ಯವಾಗಿ ಬೇಕಿದ್ದ ವಿಮೋಚನೆಯನ್ನು ಯೆಹೋವನು ಮಾತ್ರ ಕೊಡಶಕ್ತನೆಂದು ದಾವೀದನು ಪೂರ್ಣವಾಗಿ ಅರಿತಿದ್ದನು. ಆದರೆ ಈ ಕೀರ್ತನೆಗಾರನು ಕೇವಲ ತನ್ನ ಬಗ್ಗೆ ಮಾತ್ರ ಯೋಚಿಸಿದನೋ? ಯೆಹೋವನ ಅನುಗ್ರಹಕ್ಕೆ ಪಾತ್ರವಾದ ಇಡೀ ಸಮೂಹದ ಕುರಿತೇನು? ಸೂಕ್ತವಾಗಿಯೇ ದಾವೀದನು ತನ್ನ ಪ್ರೇರಿತ ಕೀರ್ತನೆಯನ್ನು ಹೀಗೆ ಕೊನೆಗೊಳಿಸಿದನು: “ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು. [ಯೆಹೋವನೇ,] ನಿನ್ನ ಆಶೀರ್ವಾದವು ನಿನ್ನ ಪ್ರಜೆಯ ಮೇಲೆ ಇರಲಿ.” (ಕೀರ್ತ. 3:8) ದಾವೀದನು ಸ್ವತಃ ತತ್ತರಗೊಳಿಸುವಂಥ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯೆಹೋವನ ಜನರ ಬಗ್ಗೆಯೂ ಯೋಚಿಸುತ್ತಿದ್ದನು. ಅಲ್ಲದೆ ಆತನು ಅವರನ್ನು ಆಶೀರ್ವದಿಸುವನೆಂಬ ಭರವಸೆಯೂ ದಾವೀದನಿಗಿತ್ತು. ನಾವು ಕೂಡ ನಮ್ಮ ಜೊತೆ ವಿಶ್ವಾಸಿಗಳ ಬಗ್ಗೆ ಯೋಚಿಸಬೇಕಲ್ಲವೇ? ಸುವಾರ್ತೆಯನ್ನು ಧೈರ್ಯದಿಂದಲೂ ದೃಢಭರವಸೆಯಿಂದಲೂ ಪ್ರಚುರಪಡಿಸಲಿಕ್ಕಾಗಿ ಅವರಿಗೆ ಪವಿತ್ರಾತ್ಮವನ್ನು ಕೊಡುವಂತೆ ಯೆಹೋವನಿಗೆ ಬೇಡಲು ನಾವೆಂದೂ ಮರೆಯದಿರೋಣ.—ಎಫೆ. 6:17-20.

12, 13. ಅಬ್ಷಾಲೋಮನಿಗೆ ಏನು ಸಂಭವಿಸಿತು? ದಾವೀದನು ಹೇಗೆ ಪ್ರತಿಕ್ರಿಯಿಸಿದನು?

12 ಅಬ್ಷಾಲೋಮನ ಜೀವನ ಅವಮಾನಕರ ರೀತಿಯಲ್ಲಿ ಕೊನೆಗೊಳ್ಳುತ್ತದೆ. ಇತರರನ್ನು ಅದರಲ್ಲೂ ದಾವೀದನಂಥ ಯೆಹೋವನ ಅಭಿಷಿಕ್ತ ಸೇವಕರನ್ನು ನಿಂದಿಸುವವರೆಲ್ಲರಿಗೆ ಇದೊಂದು ಎಚ್ಚರಿಕೆಯ ಪಾಠ! (ಜ್ಞಾನೋಕ್ತಿ 3:31-35 ಓದಿ.) ಯುದ್ಧವೊಂದರಲ್ಲಿ ಅಬ್ಷಾಲೋಮನ ಸೈನ್ಯ ಸೋಲುಣ್ಣುತ್ತದೆ. ಅವನು ಸವಾರಿಮಾಡುತ್ತಿದ್ದ ಹೇಸರಕತ್ತೆಯು ಒಂದು ದೊಡ್ಡ ಮರದ ಕೆಳಗೆ ಹಾದು ಹೋಗುತ್ತಿದ್ದಾಗ ಕೆಳಗೆ ಚಾಚಿಕೊಂಡಿದ್ದ ಕೊಂಬೆಗೆ ಅವನ ದಟ್ಟ ಕೂದಲು ಸಿಕ್ಕಿಕೊಂಡಿತು. ಅವನು ನಿಸ್ಸಹಾಯಕ ಸ್ಥಿತಿಯಲ್ಲಿ ಒದ್ದಾಡುತ್ತಾ ನೇತಾಡುತ್ತಿದ್ದನು. ಆಗ ಯೋವಾಬನು ಅವನ ಎದೆಗೆ ಮೂರು ಈಟಿಗಳನ್ನು ತಿವಿದು ಅವನನ್ನು ಕೊಂದನು.—2 ಸಮು. 18:6-17.

13 ಈ ಸುದ್ದಿ ಕೇಳಿ ದಾವೀದನು ಹರ್ಷಿಸಿದನೋ? ಖಂಡಿತ ಇಲ್ಲ. ಬದಲಾಗಿ ತೀವ್ರ ದುಃಖದಿಂದ “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ಮಗನೇ” ಎಂದು ಗೋಳಾಡುತ್ತಾ ಅತ್ತನು. (2 ಸಮು. 18:24-33) ಯೋವಾಬನು ಅವನೊಂದಿಗೆ ಮಾತಾಡಿದ ಬಳಿಕವೇ ಅವನು ದುಃಖದ ಮಡುವಿನಿಂದ ಹೊರಬಂದನು. ಅಬ್ಷಾಲೋಮನ ಅಂತ್ಯ ಎಷ್ಟೊಂದು ದುರಂತಮಯವಾಗಿತ್ತು! ಹೆಬ್ಬಯಕೆಯಿಂದ ಕುರುಡಾಗಿ ತನ್ನ ಸ್ವಂತ ತಂದೆಗೆ ಅದೂ ಯೆಹೋವನ ಅಭಿಷಿಕ್ತನಿಗೆ ತಿರುಗಿಬಿದ್ದು ಅವನು ತನ್ನ ಮೇಲೆಯೇ ವಿಪತ್ತನ್ನು ಬರಮಾಡಿಕೊಂಡನು!—2 ಸಮು. 19:1-8; ಜ್ಞಾನೋ. 12:21; 24:21, 22.

ದಾವೀದನು ದೇವರಲ್ಲಿ ಪುನಃ ಭರವಸೆ ವ್ಯಕ್ತಪಡಿಸಿದನು

14. ಕೀರ್ತನೆ 4ನ್ನು ರಚಿಸಿದ್ದರ ಉದ್ದೇಶ ಏನಾಗಿದ್ದಿರಬಹುದು?

14 ಕೀರ್ತನೆ 3ರಂತೆ ಕೀರ್ತನೆ 4 ಕೂಡ ದಾವೀದನ ಶ್ರದ್ಧಾಪೂರ್ವಕ ಪ್ರಾರ್ಥನೆಯಾಗಿದ್ದು, ಯೆಹೋವನಲ್ಲಿ ಅವನಿಗಿದ್ದ ಪೂರ್ಣ ಭರವಸೆಯನ್ನು ವ್ಯಕ್ತಪಡಿಸುತ್ತದೆ. (ಕೀರ್ತ. 3:4; 4:3) ಅಬ್ಷಾಲೋಮನ ಒಳಸಂಚು ವಿಫಲವಾದಾಗ ತನಗಾದ ನೆಮ್ಮದಿಯನ್ನು ವ್ಯಕ್ತಪಡಿಸಲು ಮತ್ತು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ದಾವೀದನು ಈ ಗೀತೆಯನ್ನು ರಚಿಸಿದ್ದಿರಬಹುದು. ಅಥವಾ ಲೇವಿಯ ಗಾಯಕರನ್ನು ಮನಸ್ಸಿನಲ್ಲಿಟ್ಟು ರಚಿಸಿದ್ದಿರಬಹುದು. ಏನೇ ಆಗಿರಲಿ ಅದನ್ನು ಧ್ಯಾನಿಸುವುದು ಯೆಹೋವನಲ್ಲಿನ ನಮ್ಮ ಭರವಸೆಯನ್ನು ಬಲಪಡಿಸುತ್ತದೆ.

15. ನಾವು ಯೇಸುವಿನ ಮೂಲಕ ಯೆಹೋವನಿಗೆ ದೃಢಭರವಸೆಯಿಂದ ಪ್ರಾರ್ಥಿಸಬಹುದೇಕೆ?

15 ದೇವರಲ್ಲಿ ತನಗಿರುವ ಪೂರ್ಣ ಭರವಸೆಯನ್ನು ಮತ್ತು ಆತನು ತನ್ನ ಪ್ರಾರ್ಥನೆಗಳನ್ನು ಕೇಳಿ ಸದುತ್ತರ ಕೊಡುವನೆಂಬ ದೃಢನಿಶ್ಚಯವನ್ನು ದಾವೀದನು ಪುನಃ ವ್ಯಕ್ತಪಡಿಸಿದನು. “ನ್ಯಾಯವನ್ನು [ನೀತಿಯನ್ನು, NW] ಸ್ಥಾಪಿಸುವ ನನ್ನ ದೇವರೇ, ನಿನಗೆ ಮೊರೆಯಿಡುತ್ತೇನೆ; ಸದುತ್ತರವನ್ನು ದಯಪಾಲಿಸು. ನನ್ನನ್ನು ಇಕ್ಕಟ್ಟಿನಿಂದ ಬಿಡಿಸಿ ಇಂಬಾದ ಸ್ಥಳದಲ್ಲಿ ಸೇರಿಸಿದಾತನೇ, ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಅಂಗೀಕರಿಸು” ಎಂದವನು ಹಾಡಿದನು. (ಕೀರ್ತ. 4:1) ನೀತಿಯನ್ನು ಅನುಸರಿಸಿ ನಡೆದರೆ ಇಂಥದ್ದೇ ಖಾತ್ರಿ ನಮಗೂ ಇರಬಲ್ಲದು. ಏಕೆಂದರೆ ‘ನೀತಿಯ ದೇವರಾದ’ ಯೆಹೋವನು ತನ್ನ ನೀತಿವಂತ ಜನರನ್ನು ಆಶೀರ್ವದಿಸುತ್ತಾನೆ ಎಂಬದು ನಮಗೆ ಗೊತ್ತಿದೆ. ಆದ್ದರಿಂದ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯನ್ನಿಡುತ್ತಾ ಅವನ ಮೂಲಕ ದೇವರಿಗೆ ನಾವು ದೃಢಭರವಸೆಯಿಂದ ಪ್ರಾರ್ಥಿಸಬಹುದು. (ಯೋಹಾ. 3:16, 36) ಇದು ನಮಗೆ ಎಷ್ಟೊಂದು ಉಪಶಮನ ಕೊಡುತ್ತದೆ!

16. ದಾವೀದನು ಯಾವ ಕಾರಣಕ್ಕಾಗಿ ನಿರುತ್ತೇಜನಗೊಂಡಿದ್ದಿರಬಹುದು?

16 ಕೆಲವೊಮ್ಮೆ ನಿರುತ್ತೇಜನಕರ ಸನ್ನಿವೇಶವು ನಾವು ದೃಢವಿಶ್ವಾಸವನ್ನು ಕಳಕೊಳ್ಳುವಂತೆ ಮಾಡೀತು. ದಾವೀದನು ಸಹ ಸ್ವಲ್ಪ ಸಮಯ ನಿರುತ್ತೇಜನಗೊಂಡಿದ್ದಿರಬಹುದು. ಏಕೆಂದರೆ ಅವನು ಹಾಡಿದ್ದು: “ಮಹನೀಯರೇ, ನೀವು ಎಷ್ಟರ ವರೆಗೆ ನನ್ನ ಗೌರವವನ್ನು ಕೆಡಿಸಿ ನನ್ನನ್ನು ಅವಮಾನಪಡಿಸುವಿರಿ? ಯಾಕೆ ನಿರರ್ಥಕವಾದದ್ದನ್ನು ಪ್ರೀತಿಸಿ ಸುಳ್ಳನ್ನು ಹಿಂಬಾಲಿಸುವಿರಿ?” (ಕೀರ್ತ. 4:2) ಇಲ್ಲಿ “ಮಹನೀಯರೇ” ಎಂಬ ಪದವನ್ನು ಅಸಮ್ಮತಿಸೂಚಕ ಅರ್ಥದಲ್ಲಿ ಬಳಸಲಾಗಿದೆ. ದಾವೀದನ ವೈರಿಗಳು ‘ನಿರರ್ಥಕವಾದದ್ದನ್ನು ಪ್ರೀತಿಸಿದರು.’ ಈ ವಾಕ್ಯವನ್ನು ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌ ಹೀಗೆ ಭಾಷಾಂತರಿಸುತ್ತದೆ: “ನೀವು ಎಷ್ಟರ ವರೆಗೆ ತಪ್ಪುಕಲ್ಪನೆಗಳನ್ನು ಪ್ರೀತಿಸಿ, ಸುಳ್ಳು ದೇವರುಗಳನ್ನು ಆಶ್ರಯಿಸುವಿರಿ.” ಇತರರ ಕ್ರಿಯೆಗಳು ನಮ್ಮನ್ನು ನಿರುತ್ತೇಜಿಸುವುದಾದರೂ ಒಬ್ಬನೇ ಸತ್ಯ ದೇವರಿಗೆ ಶ್ರದ್ಧೆಯಿಂದ ಪ್ರಾರ್ಥಿಸುತ್ತಾ ಆತನಲ್ಲಿ ಸಂಪೂರ್ಣ ಭರವಸೆಯನ್ನು ತೋರಿಸೋಣ.

17. ಕೀರ್ತನೆ 4:3ಕ್ಕೆ ಹೊಂದಿಕೆಯಲ್ಲಿ ನಾವು ಹೇಗೆ ಕ್ರಿಯೆಗೈಯಬಹುದು ಎನ್ನುವುದನ್ನು ವಿವರಿಸಿರಿ.

17 ದಾವೀದನಿಗೆ ದೇವರಲ್ಲಿದ್ದ ಭರವಸೆ ಈ ಮಾತುಗಳಿಂದ ಸ್ಪಷ್ಟವಾಗುತ್ತದೆ: “ಯೆಹೋವನು ತನ್ನ ಭಕ್ತನನ್ನು [ನಿಷ್ಠಾವಂತನನ್ನು, NW] ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂದು ತಿಳಿದುಕೊಳ್ಳಿರಿ. ನಾನು ಆತನಿಗೆ ಮೊರೆಯಿಡುವಾಗೆಲ್ಲಾ ಆತನು ಕೇಳುತ್ತಾನೆ.” (ಕೀರ್ತ. 4:3) ಯೆಹೋವನಿಗೆ ನಿಷ್ಠರಾಗಿ ಉಳಿಯಲು ಧೈರ್ಯ ಮತ್ತು ಆತನಲ್ಲಿ ಸಂಪೂರ್ಣ ಭರವಸೆ ಅತ್ಯಾವಶ್ಯಕ. ಉದಾಹರಣೆಗೆ, ಪಶ್ಚಾತ್ತಾಪಪಡದ ಸಂಬಂಧಿಕನೊಬ್ಬನು ಬಹಿಷ್ಕರಿಸಲ್ಪಟ್ಟಾಗ ಕ್ರೈಸ್ತ ಕುಟುಂಬದವರು ಯೆಹೋವನಿಗೆ ನಿಷ್ಠರಾಗಿ ಉಳಿಯಲು ಆ ಗುಣಗಳು ಅಗತ್ಯ. ತನಗೂ ತನ್ನ ಮಾರ್ಗಗಳಿಗೂ ನಿಷ್ಠೆಯಿಂದ ಅಂಟಿಕೊಳ್ಳುವವರನ್ನು ದೇವರು ಆಶೀರ್ವದಿಸುತ್ತಾನೆ. ಈ ರೀತಿಯಲ್ಲಿ ನಿಷ್ಠೆ ಮತ್ತು ಯೆಹೋವನಲ್ಲಿ ಸಂಪೂರ್ಣ ಭರವಸೆ ಆತನ ಜನರಲ್ಲಿ ಹರ್ಷಾನಂದವನ್ನು ವರ್ಧಿಸುತ್ತವೆ.—ಕೀರ್ತ. 84:11, 12.

18. ಯಾರಾದರೂ ನಮ್ಮೊಂದಿಗೆ ನಿರ್ದಯವಾಗಿ ಮಾತಾಡಿದ್ದಲ್ಲಿ ಅಥವಾ ನಡಕೊಂಡಿರುವಲ್ಲಿ ಕೀರ್ತನೆ 4:4ಕ್ಕನುಸಾರ ನಾವೇನು ಮಾಡಬೇಕು?

18 ಇತರರು ನಮಗೆ ನೋವಾಗುವಂಥ ರೀತಿಯಲ್ಲಿ ಏನನ್ನಾದರೂ ಹೇಳುವಲ್ಲಿ ಅಥವಾ ಮಾಡುವಲ್ಲಿ ಆಗೇನು? ಆಗಲೂ ನಾವು ಸಂತೋಷದಿಂದಿರಬೇಕಾದರೆ ದಾವೀದನು ಹೇಳಿದಂತೆ ಮಾಡಬೇಕು. ಅವನಂದದ್ದು: “ನಿಮ್ಮ ಕೋಪದಲ್ಲಿ ಪಾಪ ಮಾಡಬೇಡಿರಿ; ನಿಮ್ಮ ಹಾಸಿಗೆಗಳ ಮೇಲೆ ಇರುವಾಗ ನಿಮ್ಮ ಸ್ವಂತ ಹೃದಯಗಳನ್ನು ಪರಿಶೀಲಿಸಿಕೊಂಡು ಮೌನವಾಗಿರಿ.” (ಕೀರ್ತ. 4:4, NIBV) ಯಾರಾದರೂ ನಮ್ಮೊಂದಿಗೆ ನಿರ್ದಯವಾಗಿ ಮಾತಾಡಿದ್ದಲ್ಲಿ ಅಥವಾ ನಡಕೊಂಡಲ್ಲಿ ಮುಯ್ಯಿ ತೀರಿಸಲು ಹೋಗಿ ಪಾಪಮಾಡದಿರೋಣ. (ರೋಮ. 12:17-19) ಹಾಸಿಗೆಯ ಮೇಲೆ ಇರುವಾಗ ವೈಯಕ್ತಿಕ ಪ್ರಾರ್ಥನೆಯಲ್ಲಿ ನಮ್ಮ ಅನಿಸಿಕೆಗಳನ್ನು ಯೆಹೋವನ ಬಳಿ ತೋಡಿಕೊಳ್ಳೋಣ. ಹಾಗೆ ಪ್ರಾರ್ಥಿಸುವಾಗ ಆ ವಿಚಾರದ ಬಗ್ಗೆ ನಮಗಿರುವ ದೃಷ್ಟಿಕೋನ ಬದಲಾದೀತು. ಮಾತ್ರವಲ್ಲ ಪ್ರೀತಿಯಿಂದ ಕ್ಷಮಿಸುವಂತೆ ಪ್ರೇರಿಸಲ್ಪಡುವೆವು. (1 ಪೇತ್ರ 4:8) ಈ ಸಂಬಂಧದಲ್ಲಿ ಪ್ರಾಯಶಃ ಕೀರ್ತನೆ 4:4ರ ಮೇಲೆ ಆಧರಿತವಾದ ಅಪೊಸ್ತಲ ಪೌಲನ ಸಲಹೆ ಗಮನಾರ್ಹ. ಅವನಂದದ್ದು: “ನೀವು ಕೋಪಗೊಂಡರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ. ಪಿಶಾಚನಿಗೆ ಅವಕಾಶಕೊಡಬೇಡಿ.”—ಎಫೆ. 4:26, 27.

19. ನಮ್ಮ ಆಧ್ಯಾತ್ಮಿಕ ಯಜ್ಞಗಳ ಸಂಬಂಧದಲ್ಲಿ ಕೀರ್ತನೆ 4:5 ನಮಗೇನನ್ನು ತಿಳಿಸುತ್ತದೆ?

19 ದೇವರಲ್ಲಿ ಭರವಸೆಯಿಡುವ ಅಗತ್ಯವನ್ನು ಒತ್ತಿಹೇಳುತ್ತಾ ದಾವೀದನು ಹಾಡಿದ್ದು: “ನ್ಯಾಯವಾದ ಯಜ್ಞಗಳನ್ನು ಸಮರ್ಪಿಸಿರಿ; ಯೆಹೋವನಲ್ಲಿಯೇ ಭರವಸವಿಡಿರಿ.” (ಕೀರ್ತ. 4:5) ಇಸ್ರಾಯೇಲ್ಯರು ಯೋಗ್ಯ ಹೇತುವಿನಿಂದ ಅರ್ಪಿಸಿದ ಯಜ್ಞಗಳನ್ನು ಮಾತ್ರ ಯೆಹೋವನು ಸ್ವೀಕರಿಸುತ್ತಿದ್ದನು. (ಯೆಶಾ. 1:11-17) ಅದೇರೀತಿ ನಮ್ಮ ಆಧ್ಯಾತ್ಮಿಕ ಯಜ್ಞಗಳನ್ನು ದೇವರು ಸ್ವೀಕರಿಸಬೇಕಾದರೆ ನಮ್ಮ ಹೇತುಗಳು ಯೋಗ್ಯವಾಗಿರಬೇಕು ಮತ್ತು ನಮಗೆ ಆತನಲ್ಲಿ ಸಂಪೂರ್ಣ ಭರವಸೆಯಿರಬೇಕು.ಜ್ಞಾನೋಕ್ತಿ 3:5, 6; ಇಬ್ರಿಯ 13:15, 16 ಓದಿ.

20. ‘ಯೆಹೋವನ ಪ್ರಸನ್ನಮುಖವು’ ಏನನ್ನು ಸೂಚಿಸುತ್ತದೆ?

20 ದಾವೀದನು ಮುಂದುವರಿಸಿದ್ದು: “ನಮಗೆ ಒಳ್ಳೆಯದನ್ನು ಮಾಡುವವರು ಯಾರಿದ್ದಾರೆಂದು ಅನೇಕರು ಹೇಳಿಕೊಳ್ಳುತ್ತಾರೆ. ಯೆಹೋವನೇ, ನೀನು ಪ್ರಸನ್ನಮುಖದಿಂದ ನಮ್ಮನ್ನು ನೋಡಬೇಕು.” (ಕೀರ್ತ. 4:6) ‘ಯೆಹೋವನ ಪ್ರಸನ್ನಮುಖವು’ ಆತನ ಅನುಗ್ರಹವನ್ನು ಸೂಚಿಸುತ್ತದೆ. (ಕೀರ್ತ. 89:15) ಹಾಗಾದರೆ, ದಾವೀದನು “ಯೆಹೋವನೇ, ನೀನು ಪ್ರಸನ್ನಮುಖದಿಂದ ನಮ್ಮನ್ನು ನೋಡಬೇಕು” ಎಂದು ಬೇಡಿದ್ದರ ಅರ್ಥ, ‘ನಮಗೆ ಅನುಗ್ರಹ ತೋರಿಸು’ ಎಂದಾಗಿದೆ. ನಾವು ಯೆಹೋವನಲ್ಲಿ ಭರವಸೆಯಿಡುವುದರಿಂದ ಆತನ ಅನುಗ್ರಹ ನಮಗಿದೆ ಮತ್ತು ದೃಢನಿಶ್ಚಯದಿಂದ ಆತನ ಚಿತ್ತವನ್ನು ಮಾಡುತ್ತಾ ಮುಂದುವರಿಯುವಾಗ ಅಪಾರ ಆನಂದ ನಮ್ಮದಾಗುತ್ತದೆ.

21. ಇಂದಿನ ಆಧ್ಯಾತ್ಮಿಕ ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವಲ್ಲಿ ನಮಗೆ ಯಾವ ಖಾತ್ರಿಯಿರಬಲ್ಲದು?

21 ಕೊಯ್ಲಿನ ಸಮಯದ ಆನಂದಕ್ಕಿಂತಲೂ ಮಿಗಿಲಾದ ದೇವದತ್ತ ಆನಂದವನ್ನು ಎದುರುನೋಡುತ್ತಾ ದಾವೀದನು ಯೆಹೋವನಿಗೆ ಹಾಡಿದ್ದು: “ಧಾನ್ಯದ್ರಾಕ್ಷೆಗಳು ಸಮೃದ್ಧಿಯಾಗಿ ಬೆಳೆದ ಸುಗ್ಗಿ ಕಾಲದಲ್ಲಿ ಅವರಿಗಿರುವ ಸಂತೋಷಕ್ಕಿಂತಲೂ ನೀನು ನನ್ನ ಹೃದಯದಲ್ಲಿ ಹೆಚ್ಚಾದ ಆನಂದವನ್ನು ಉಂಟುಮಾಡಿದ್ದೀ.” (ಕೀರ್ತ. 4:7) ಇಂದು ನಡೆಯುತ್ತಿರುವ ಆಧ್ಯಾತ್ಮಿಕ ಕೊಯ್ಲಿನ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸುವಲ್ಲಿ ನಾವು ಸಹ ನಿಶ್ಚಯವಾಗಿಯೂ ಹೃದಯಾನಂದದಿಂದ ಸಂಭ್ರಮಿಸುವೆವು. (ಲೂಕ 10:2) ‘ವೃದ್ಧಿಗೊಂಡ’ ಅಭಿಷಿಕ್ತ ‘ಪ್ರಜೆಗಳು’ ಮುಂದಾಳುತ್ವ ವಹಿಸುತ್ತಿರುವ ಈ ಕೆಲಸದಲ್ಲಿ ‘ಕೊಯ್ಲಿನ ಕೆಲಸಗಾರರ’ ಸಂಖ್ಯೆ ಹೆಚ್ಚುತ್ತಿರುವುದರಿಂದ ನಾವಿಂದು ಹರ್ಷಿಸುತ್ತೇವೆ. (ಯೆಶಾ. 9:3) ಈ ಹರ್ಷಕರ ಕೊಯ್ಲಿನಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ನಿಜವಾಗಿಯೂ ನಿಮಗೆ ಸಂತೃಪ್ತಿ ತರುತ್ತಿದೆಯೋ? ಅಷ್ಟು ಪೂರ್ಣವಾಗಿ ನೀವದರಲ್ಲಿ ಪಾಲ್ಗೊಳ್ಳುತ್ತಿದ್ದೀರೋ?

ದೇವರಲ್ಲಿ ಸಂಪೂರ್ಣ ಭರವಸೆಯಿಟ್ಟು ಧೈರ್ಯದಿಂದ ಮುಂದುವರಿಯಿರಿ

22. ಕೀರ್ತನೆ 4:8ಕ್ಕನುಸಾರ ಇಸ್ರಾಯೇಲ್ಯರು ದೇವರ ಧರ್ಮಶಾಸ್ತ್ರವನ್ನು ಕೈಗೊಂಡು ನಡೆದಾಗ ಹೇಗಿದ್ದರು?

22 ನಾಲ್ಕನೇ ಕೀರ್ತನೆಯನ್ನು ದಾವೀದನು ಹೀಗೆ ಕೊನೆಗೊಳಿಸಿದನು: “ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ.” (ಕೀರ್ತ. 4:8) ಇಸ್ರಾಯೇಲ್ಯರು ಯೆಹೋವನ ಧರ್ಮಶಾಸ್ತ್ರವನ್ನು ಕೈಗೊಂಡು ನಡೆಯುತ್ತಿದ್ದಾಗ ಆತನೊಂದಿಗೆ ಶಾಂತಿಭರಿತ ಸಂಬಂಧವನ್ನು ಹೊಂದಿದ್ದರು. ಮಾತ್ರವಲ್ಲ ಸುಭದ್ರತೆಯ ಅನಿಸಿಕೆ ಅವರಿಗಿತ್ತು. ಉದಾಹರಣೆಗೆ, ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ “ಇಸ್ರಾಯೇಲ್ಯರೂ ಯೆಹೂದ್ಯರೂ . . . ಸುರಕ್ಷಿತರಾಗಿದ್ದರು.” (1 ಅರ. 4:25) ನೆರೆಹೊರೆಯಲ್ಲಿ ವೈರಿ ರಾಷ್ಟ್ರಗಳಿದ್ದರೂ ದೇವರಲ್ಲಿ ಭರವಸೆಯಿಟ್ಟಿದ್ದ ಇಸ್ರಾಯೇಲ್ಯರು ನಿರ್ಭಯವಾಗಿದ್ದರು. ದಾವೀದನಂತೆ ನಾವೂ ನಿರ್ಭಯವಾಗಿ ನಿದ್ರಿಸುತ್ತೇವೆ. ಏಕೆಂದರೆ ದೇವರಿಂದಾಗಿ ನಮಗೆ ಸುರಕ್ಷಿತತೆಯ ಭಾವನೆಯಿದೆ.

23. ದೇವರಲ್ಲಿ ಸಂಪೂರ್ಣ ಭರವಸೆಯಿಡುವಲ್ಲಿ ನಾವೇನನ್ನು ಅನುಭವಿಸುವೆವು?

23 ಸಂಪೂರ್ಣ ಭರವಸೆಯಿಂದ ನಾವು ಯೆಹೋವನ ಸೇವೆಯಲ್ಲಿ ಮುಂದುವರಿಯೋಣ. ಜೊತೆಗೆ ನಂಬಿಕೆಯಿಂದ ಪ್ರಾರ್ಥಿಸುತ್ತಾ ‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು’ ಹೊಂದೋಣ. (ಫಿಲಿ. 4:6, 7) ಅದು ನಮಗೆ ಅಪಾರ ಸಂತೋಷವನ್ನು ತರುವುದು. ನಾವು ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನು ಕಾಪಾಡಿಕೊಳ್ಳುವಲ್ಲಿ ಭವಿಷ್ಯವನ್ನು ಧೈರ್ಯದಿಂದ ಎದುರಿಸಬಲ್ಲೆವು.

ನಿಮ್ಮ ಉತ್ತರವೇನು?

• ಅಬ್ಷಾಲೋಮನಿಂದಾಗಿ ದಾವೀದನು ಯಾವ ಸಮಸ್ಯೆಗಳನ್ನು ಎದುರಿಸಿದನು?

• 3 ನೇ ಕೀರ್ತನೆ ಹೇಗೆ ನಮ್ಮಲ್ಲಿ ಸುಭದ್ರ ಭಾವನೆಯನ್ನು ಮೂಡಿಸುತ್ತದೆ?

• 4 ನೇ ಕೀರ್ತನೆ ಯೆಹೋವನಲ್ಲಿನ ನಮ್ಮ ಭರವಸೆಯನ್ನು ಯಾವ ವಿಧಗಳಲ್ಲಿ ಬಲಪಡಿಸುತ್ತದೆ?

• ದೇವರಲ್ಲಿ ಸಂಪೂರ್ಣ ಭರವಸೆಯಿಡುವಲ್ಲಿ ನಾವು ಯಾವ ಪ್ರಯೋಜನಗಳನ್ನು ಪಡೆಯಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 29ರಲ್ಲಿರುವ ಚಿತ್ರ]

ಅಬ್ಷಾಲೋಮನಿಂದಾಗಿ ಪಲಾಯನಗೈಯಬೇಕಾಗಿ ಬಂದರೂ ದಾವೀದನು ಯೆಹೋವನ ಮೇಲಿದ್ದ ಭರವಸೆಯನ್ನು ಕಳಕೊಳ್ಳಲಿಲ್ಲ

[ಪುಟ 32ರಲ್ಲಿರುವ ಚಿತ್ರಗಳು]

ನೀವು ಯೆಹೋವನಲ್ಲಿ ಸಂಪೂರ್ಣ ಭರವಸೆ ಇಡುತ್ತೀರೋ?