ಅಬ್ರಹಾಮನ ಬಳಿ ಒಂಟೆಗಳಿದ್ದದ್ದು ನಿಜವೋ?
ಅಬ್ರಹಾಮನ ಬಳಿ ಒಂಟೆಗಳಿದ್ದದ್ದು ನಿಜವೋ?
ಅಬ್ರಹಾಮನಿಗೆ ಫರೋಹನಿಂದ ದೊರೆತ ಸಾಕು ಪ್ರಾಣಿಗಳಲ್ಲಿ ಒಂಟೆಗಳೂ ಇದ್ದವೆಂದು ಬೈಬಲ್ ತಿಳಿಸುತ್ತದೆ. (ಆದಿ. 12:16) ಅಬ್ರಹಾಮನ ಸೇವಕನು ದೂರದ ಮೆಸಪಟೇಮ್ಯಕ್ಕೆ (ಅರಾಮ್ ಸೀಮೆಗೆ) ಪ್ರಯಾಣಿಸುವಾಗ “ದಣಿಯ ಒಂಟೆಗಳಲ್ಲಿ ಹತ್ತು ಒಂಟೆಗಳನ್ನು” ತೆಗೆದುಕೊಂಡು ಹೋದನು. ಹಾಗಾದರೆ ಸುಮಾರು 4,000 ವರ್ಷಗಳ ಹಿಂದೆ ಜೀವಿಸಿದ್ದ ಅಬ್ರಹಾಮನ ಬಳಿ ಒಂಟೆಗಳಿದ್ದವು ಎಂದು ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ.—ಆದಿ. 24:10.
ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ. ನ್ಯೂ ಇಂಟರ್‌ನ್ಯಾಷನಲ್ ವರ್ಷನ್ ಆರ್ಕಿಅಲಾಜಿಕಲ್ ಸ್ಟಡಿ ಬೈಬಲ್ ಹೇಳುವುದು: “ಒಂಟೆಗಳ ಕುರಿತ ಆ ಉಲ್ಲೇಖಗಳು ಐತಿಹಾಸಿಕವಾಗಿ
ನಿಜವಲ್ಲವೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಏಕೆಂದರೆ ಸರಿಸುಮಾರು ಕ್ರಿ.ಪೂ. 1200ರ ತನಕವೂ ಅಂದರೆ ಅಬ್ರಹಾಮನ ಸಮಯದ ಎಷ್ಟೋ ವರ್ಷಗಳ ನಂತರದ ತನಕವೂ ಸಾಮಾನ್ಯವಾಗಿ ಒಂಟೆಗಳನ್ನು ಸಾಕುಪ್ರಾಣಿಯಾಗಿ ಬಳಸಲಾಗುತ್ತಿರಲಿಲ್ಲ.” ಹೀಗೆ ಒಂಟೆಗಳ ಕುರಿತ ಆ ಬೈಬಲ್ ಉಲ್ಲೇಖಗಳು ಕಾಲಗಣನಶಾಸ್ತ್ರಕ್ಕೆ ಸರಿಹೊಂದದ ಕಾರಣ ಅವು ನಂಬಲರ್ಹವಲ್ಲವೆಂದು ಅವರು ಹೇಳುತ್ತಾರೆ.ಒಂಟೆಗಳನ್ನು ಸಾಕುಪ್ರಾಣಿಯಾಗಿ ವ್ಯಾಪಕವಾಗಿ ಬಳಸಲಾರಂಭಿಸಿದ್ದು ಕ್ರಿ.ಪೂ 1200ರ ನಂತರವಾದರೂ ಅದಕ್ಕೂ ಮುಂಚೆ ಒಂಟೆಗಳನ್ನೇ ಉಪಯೋಗಿಸಲಾಗುತ್ತಿರಲಿಲ್ಲ ಎಂದು ಹೇಳಲಾಗದು ಎಂಬುದು ಇತರ ವಿದ್ವಾಂಸರ ವಾದ. ಸಿವಿಲೈಸೇಷನ್ಸ್ ಆಫ್ ದಿ ಏನ್‌ಷಂಟ್ ನಿಯರ್ ಈಸ್ಟ್ ಎಂಬ ಪುಸ್ತಕ ಹೀಗನ್ನುತ್ತದೆ: “ಆಗ್ನೇಯ ಅರೆಬೀಯದಲ್ಲಿ 4,000 ವರ್ಷಗಳ ಹಿಂದೆಯೇ ಒಂಟೆಗಳನ್ನು ಸಾಕುಪ್ರಾಣಿಯಾಗಿ ಬಳಸಲಾಗುತ್ತಿತ್ತು ಎಂಬದಾಗಿ ಇತ್ತೀಚಿನ ಕೆಲವು ಸಂಶೋಧನೆಗಳು ಸ್ಪಷ್ಟಪಡಿಸುತ್ತವೆ. ಜನರು ಮೊದಮೊದಲು ಈ ಪ್ರಾಣಿಗಳನ್ನು ಹಾಲು, ಕೂದಲು, ಚರ್ಮ ಹಾಗೂ ಮಾಂಸಕ್ಕಾಗಿ ಪಳಗಿಸುತ್ತಿದ್ದರು. ಅವು ಸರಕು ಸಾಗಣೆಗೂ ಉಪಯುಕ್ತವೆಂಬುದು ಅವರಿಗೆ ಸ್ವಲ್ಪದರಲ್ಲೇ ತಿಳಿದುಬಂತು.” ಈ ಎಲ್ಲಾ ವಿಧಗಳಲ್ಲಿ ಒಂಟೆಗಳನ್ನು ಅಬ್ರಹಾಮನ ಕಾಲಕ್ಕಿಂತಲೂ ಮುಂಚೆಯೇ ಬಳಸುತ್ತಿದ್ದರು ಎಂಬದನ್ನು ಅಸ್ಥಿ ಅವಶೇಷಗಳು ಹಾಗೂ ಪ್ರಾಕ್ತನಶಾಸ್ತ್ರಜ್ಞರಿಗೆ ಸಿಕ್ಕಿದ ಅವಶೇಷಗಳು ದೃಢೀಕರಿಸುತ್ತವೆ.
ಲಿಖಿತ ಪುರಾವೆಯೂ ಸಿಕ್ಕಿದೆ. ಮೇಲಿನ ಪುಸ್ತಕ ಹೇಳುವದು: “ಮೆಸಪಟೇಮ್ಯದ ಕ್ಯೂನಿಫಾರಂ (ಬೆಣೆಲಿಪಿ) ಫಲಕಗಳಲ್ಲಿ ಒಂಟೆಯ ಬಗ್ಗೆ ಉಲ್ಲೇಖವಿದೆ ಹಾಗೂ ಅವುಗಳನ್ನು ಚಿತ್ರಿಸುವ ಚಿಹ್ನೆಗಳು ಕಂಡುಬಂದಿವೆ. ಇವು ಮೆಸಪಟೇಮ್ಯದಲ್ಲಿ ಸುಮಾರು 4,000 ವರ್ಷಗಳ ಹಿಂದೆಯೇ ಒಂಟೆಗಳಿದ್ದವು ಎಂಬದನ್ನು ಸೂಚಿಸುತ್ತವೆ.” ಅಬ್ರಹಾಮನು ಜೀವಿಸಿದ್ದೂ ಆ ಸಮಯದಲ್ಲೇ.
ಕೆಲವು ವಿದ್ವಾಂಸರಿಗನುಸಾರ ದಕ್ಷಿಣ ಅರೇಬಿಯದ ಧೂಪದ್ರವ್ಯ ವರ್ತಕರು ಮರುಭೂಮಿಯ ಮೂಲಕ ಈಜಿಪ್ಟ್, ಸಿರಿಯಾದಂಥ ಉತ್ತರದ ಪ್ರದೇಶಗಳಿಗೆ ತಮ್ಮ ಸರಕುಗಳನ್ನು ಸಾಗಣೆ ಮಾಡಲು ಒಂಟೆಗಳನ್ನು ಉಪಯೋಗಿಸುತ್ತಿದ್ದರು, ಹೀಗೆ ಒಂಟೆಗಳನ್ನು ಆ ಪ್ರದೇಶಗಳಿಗೂ ಪರಿಚಯಪಡಿಸಿದರು; ಈ ವ್ಯಾಪಾರವು ಸರಿಸುಮಾರು ಕ್ರಿ.ಪೂ. 2000ದಲ್ಲೇ ಆರಂಭವಾಗಿದ್ದಿರಬಹುದು. ಆಸಕ್ತಿಕರ ಸಂಗತಿಯೇನೆಂದರೆ ಅಬ್ರಹಾಮನ ಸಮಯದ ಸುಮಾರು 100 ವರ್ಷಗಳ ನಂತರದ ವೃತ್ತಾಂತವನ್ನು ತಿಳಿಸುವ ಆದಿಕಾಂಡ 37:25-28ರಲ್ಲಿ ಈಜಿಪ್ಟ್‌ಗೆ ಧೂಪದ್ರವ್ಯಗಳನ್ನು ಒಂಟೆಗಳ ಮೇಲೆ ಸಾಗಿಸುತ್ತಿದ್ದ ಇಷ್ಮಾಯೇಲ್ಯ ವರ್ತಕರ ಉಲ್ಲೇಖವಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ 4,000 ವರ್ಷಗಳ ಹಿಂದೆ ಒಂಟೆಗಳನ್ನು ಅಷ್ಟು ಹೆಚ್ಚಾಗಿ ಉಪಯೋಗಿಸದೆ ಇದ್ದಿರಬಹುದಾದರೂ ಒಂಟೆಗಳು ಸಂಪೂರ್ಣವಾಗಿ ಅಜ್ಞಾತವಾಗಿದ್ದವೆಂದು ಹೇಳಸಾಧ್ಯವಿಲ್ಲ. ಮೇಲಿನ ಪುರಾವೆಗಳು ಬಹುಮಟ್ಟಿಗೆ ಇದನ್ನೇ ಸ್ಪಷ್ಟಪಡಿಸುತ್ತವೆ. ಹಾಗಾಗಿಯೇ ದಿ ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್‌ಸೈಕ್ಲಪೀಡಿಯ ಅಂತಿಮವಾಗಿ ಹೀಗೆ ಹೇಳುತ್ತದೆ: “ಬೈಬಲಿನ ಆರಂಭದ ಭಾಗದಲ್ಲಿ ಒಂಟೆಗಳ ಕುರಿತು ಇರುವ ಉಲ್ಲೇಖಗಳು ತಪ್ಪೆಂದು ಹೇಳಸಾಧ್ಯವಿಲ್ಲ. ಏಕೆಂದರೆ ಅದಕ್ಕೂ ಮುಂಚೆಯೇ ಒಂಟೆಗಳನ್ನು ಸಾಕುಪ್ರಾಣಿಯಾಗಿ ಉಪಯೋಗಿಸಲಾಗುತ್ತಿತ್ತು ಎಂಬದಕ್ಕೆ ಪ್ರಾಕ್ತನಶಾಸ್ತ್ರವು ಹೇರಳ ಪುರಾವೆಯನ್ನು ಕೊಡುತ್ತದೆ.”