ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿಮ್ಮ ಮಾರ್ಗವನ್ನು ಸಫಲಗೊಳಿಸುವುದು’ ಹೇಗೆ?

‘ನಿಮ್ಮ ಮಾರ್ಗವನ್ನು ಸಫಲಗೊಳಿಸುವುದು’ ಹೇಗೆ?

‘ನಿಮ್ಮ ಮಾರ್ಗವನ್ನು ಸಫಲಗೊಳಿಸುವುದು’ ಹೇಗೆ?

‘ಸಫಲತೆ’ ಇಲ್ಲವೆ ಯಶಸ್ಸು ಎಂಬ ಪದವೇ ಎಲ್ಲರ ಕಣ್ಸೆಳೆಯುತ್ತದೆ! ಕೆಲವರು ವ್ಯಾಪಾರೋದ್ದಿಮೆಗಳಲ್ಲಿ ಅಭಿವೃದ್ಧಿಯ ಉತ್ತುಂಗಕ್ಕೇರಿ ಐಶ್ವರ್ಯ, ಖ್ಯಾತಿ ಗಳಿಸುವುದರಲ್ಲಿ ಭಾರೀ ಯಶಸ್ಸನ್ನು ಕಂಡಿದ್ದಾರೆ. ಇತರರಿಗೆ ಯಶಸ್ಸೆಂಬದು ಬರೀ ಕನಸಾಗಿಯೇ ಉಳಿದಿದೆ. ಅವರ ಜೀವನದಲ್ಲಿ ಸೋಲೇ ಮೇಲುಗೈ ಸಾಧಿಸಿದೆ.

ಯಶಸ್ಸು ಎಂಬುದು ನೀವು ಯಾವುದಕ್ಕೆ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡುತ್ತೀರೋ ಅದರ ಮೇಲೆ ಬಹುಮಟ್ಟಿಗೆ ಹೊಂದಿಕೊಂಡಿದೆ. ಮಾತ್ರವಲ್ಲ ನೀವು ನಿಮ್ಮ ಸಮಯ, ಶಕ್ತಿ ಹೇಗೆ ಉಪಯೋಗಿಸುತ್ತೀರಿ ಮತ್ತು ಪ್ರಾರಂಭದ ಹೆಜ್ಜೆಯನ್ನು ತೆಗೆದುಕೊಳ್ಳಲು ನಿಮಗೆ ಮನಸ್ಸಿದೆಯೋ ಎಂಬದು ಸಹ ಪ್ರಾಮುಖ್ಯ.

ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸುವುದು ಬಹಳ ಸಂತೃಪ್ತಿಯನ್ನು ತರುತ್ತದೆ ಎಂಬದನ್ನು ಅನೇಕ ಕ್ರೈಸ್ತರು ಕಂಡುಕೊಂಡಿದ್ದಾರೆ. ಪೂರ್ಣ ಸಮಯದ ಸೇವೆಯನ್ನು ಜೀವನಮಾರ್ಗವನ್ನಾಗಿ ಆರಿಸಿಕೊಂಡ ಆಬಾಲವೃದ್ಧರೆಲ್ಲರೂ ಯಶಸ್ಸನ್ನು ಗಳಿಸಿದ್ದಾರೆ. ಆದರೂ ಕೆಲವರು ಶುಶ್ರೂಷೆಯನ್ನು ಬೇಸರಕರ ಕೆಲಸವೆಂದೆಣಿಸಿ ಇತರ ಗುರಿಗಳನ್ನು ತಲುಪಲು ಹೋಗಿ ಶುಶ್ರೂಷೆಯನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದ್ದಾರೆ. ಹೀಗಾಗಲು ಕಾರಣವೇನು? ನಿಜವಾಗಿಯೂ ಯಾವುದು ಅಮೂಲ್ಯವಾಗಿದೆಯೋ ಅದನ್ನು ಕಡೆಗಣಿಸದಿರಲು ನೀವೇನು ಮಾಡಬಲ್ಲಿರಿ? ನೀವು ಹೇಗೆ ‘ನಿಮ್ಮ ಮಾರ್ಗವನ್ನು ಸಫಲಗೊಳಿಸಬಲ್ಲಿರಿ?’—ಯೆಹೋ. 1:8.

ಪಠ್ಯೇತರ ಚಟುವಟಿಕೆ ಮತ್ತು ಹವ್ಯಾಸಗಳು

ಸತ್ಯ ದೇವರ ಸೇವೆ ಮತ್ತು ಇತರ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆಗಳ ನಡುವೆ ಕ್ರೈಸ್ತ ಮಕ್ಕಳು ಯೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಹೀಗೆ ಮಾಡುವವರು ಜೀವನದಲ್ಲಿ ಖಂಡಿತ ಯಶಸ್ಸನ್ನು ಕಾಣುವರು ಹಾಗೂ ಅಭಿನಂದನಾರ್ಹರು ಸಹ.

ಕ್ರೈಸ್ತ ಮಕ್ಕಳಲ್ಲಿ ಕೆಲವರು ಪಠ್ಯೇತರ ಚಟುವಟಿಕೆಗಳಲ್ಲೂ ಹವ್ಯಾಸಗಳಲ್ಲೂ ತಮ್ಮನ್ನು ವಿಪರೀತವಾಗಿ ತೊಡಗಿಸಿಕೊಂಡಿದ್ದಾರೆ. ಹಾಗಂತ ಅಂಥ ಚಟುವಟಿಕೆಗಳಲ್ಲಿ ಭಾಗವಹಿಸುವುದು ತಪ್ಪೆಂದು ಹೇಳಲಾಗದು. ಆದರೂ ಕ್ರೈಸ್ತ ಮಕ್ಕಳು ಹೀಗೆ ಕೇಳಿಕೊಳ್ಳತಕ್ಕದ್ದು: ‘ಆ ಚಟುವಟಿಕೆಗಳಿಗಾಗಿ ನಾನು ಎಷ್ಟು ಸಮಯ ಕೊಡಬೇಕಾಗಬಹುದು? ಸಹವಾಸಗಳ ಕುರಿತೇನು? ಆ ಚಟುವಟಿಕೆಗಳಲ್ಲಿ ಒಳಗೂಡುವಾಗ ಎಂಥ ಮನೋಭಾವವಿರುವ ಜನರೊಂದಿಗೆ ನಾನು ಬೆರೆಯಬೇಕಾಗುತ್ತದೆ? ನನ್ನ ಜೀವನದ ಗುರಿ ಬದಲಾಗುವ ಸಾಧ್ಯತೆಯಿದೆಯೋ?’ ಇಂಥ ಚಟುವಟಿಕೆಗಳಲ್ಲಿ ನೀವು ತೀರ ಮುಳುಗಿಹೋಗುವಲ್ಲಿ ದೇವರೊಂದಿಗಿನ ಸಂಬಂಧವನ್ನು ಕಾಪಾಡಿಕೊಳ್ಳಲು ನಿಮ್ಮ ಬಳಿ ಸಮಯವಾಗಲಿ ಶಕ್ತಿಯಾಗಲಿ ಉಳಿದಿರುವುದಿಲ್ಲ. ಹಾಗಾದರೆ ಆದ್ಯತೆಗಳನ್ನಿಡುವುದು ಪ್ರಾಮುಖ್ಯವಲ್ಲವೇ?—ಎಫೆ. 5:15-17.

ವಿಕ್ಟರ್‌ನ ಉದಾಹರಣೆಯನ್ನು ತೆಗೆದುಕೊಳ್ಳಿ. * ಅವನು ಹೇಳುವುದು: “ನಾನು 12 ವರ್ಷದವನಾಗಿದ್ದಾಗ ವಾಲಿಬಾಲ್‌ ತಂಡವೊಂದನ್ನು ಸೇರಿದೆ. ಕಾಲಕ್ರಮೇಣ ಅನೇಕ ಬಹುಮಾನಗಳನ್ನೂ ಪ್ರಶಸ್ತಿಗಳನ್ನೂ ಪಡೆದೆ. ನಾನೊಬ್ಬ ಸ್ಟಾರ್‌ ಆಗುವ ಸದವಕಾಶವೂ ದೊರಕಿತ್ತು.” ಆದರೆ ಈ ಕ್ರೀಡೆಯು ತನ್ನ ಆಧ್ಯಾತ್ಮಿಕತೆಯನ್ನು ಬಾಧಿಸುತ್ತಿದ್ದರಿಂದ ವಿಕ್ಟರ್‌ ಚಿಂತಿತನಾದನು. ಏಕೆಂದರೆ ಒಂದು ದಿನ ಬೈಬಲ್‌ ಓದುತ್ತಿದ್ದಾಗ ಹಾಗೆಯೇ ನಿದ್ದೆ ಮಾಡಿಬಿಟ್ಟಿದ್ದನು. ಹಾಗೂ ತಾನು ಈ ನಡುವೆ ಕ್ಷೇತ್ರ ಸೇವೆಯಲ್ಲಿ ಅಷ್ಟೇನು ಆನಂದಿಸುತ್ತಿಲ್ಲವೆಂಬದನ್ನೂ ಗಮನಿಸಿದನು. “ಈ ಕ್ರೀಡೆ ನನ್ನ ಶಕ್ತಿಯನ್ನು ಬಸಿದು ಬರಿದುಮಾಡಿತು. ಅಲ್ಲದೆ ನನ್ನ ಆಧ್ಯಾತ್ಮಿಕ ಹುರುಪನ್ನೂ ಕುಂದಿಸಿತು. ನಾನು ಯೆಹೋವನ ಸೇವೆಯನ್ನು ಪೂರ್ಣವಾಗಿ ಮಾಡುತ್ತಿರಲಿಲ್ಲ” ಎಂದು ಹೇಳಿದನವನು.

ಉನ್ನತ ಶಿಕ್ಷಣ

ಒಬ್ಬ ಕ್ರೈಸ್ತನಿಗೆ ತನ್ನ ಕುಟುಂಬವನ್ನು ಪರಾಮರಿಸುವ ಶಾಸ್ತ್ರಾಧಾರಿತ ಜವಾಬ್ದಾರಿಯಿದೆ. ಇದರಲ್ಲಿ ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸುವುದೂ ಸೇರಿದೆ. (1 ತಿಮೊ. 5:8) ಇದಕ್ಕಾಗಿ ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಪದವಿ ಪಡೆಯುವುದು ನಿಜವಾಗಿಯೂ ಅಗತ್ಯವೋ?

ಉನ್ನತ ಶಿಕ್ಷಣ ಪಡೆಯುವುದು ಯೆಹೋವನೊಟ್ಟಿಗಿನ ನಮ್ಮ ಸಂಬಂಧದ ಮೇಲೆ ಯಾವ ಪರಿಣಾಮಬೀರಬಲ್ಲದು ಎಂಬದನ್ನು ಪರಿಗಣಿಸುವುದು ಒಳ್ಳೆಯದು. ಈ ಸಂಬಂಧದಲ್ಲಿ ಬೈಬಲ್‌ ಉದಾಹರಣೆಯೊಂದನ್ನು ಪರಿಗಣಿಸೋಣ.

ಬಾರೂಕನು ಪ್ರವಾದಿಯಾದ ಯೆರೆಮೀಯನ ಕಾರ್ಯದರ್ಶಿಯಾಗಿದ್ದನು. ಒಮ್ಮೆ ಅವನು ಯೆಹೋವನ ಸೇವೆಯಲ್ಲಿ ತನಗಿದ್ದ ಸುಯೋಗದ ಮೇಲೆ ಗಮನ ಕೇಂದ್ರೀಕರಿಸುವ ಬದಲು ಹೆಬ್ಬಯಕೆಯನ್ನು ಬೆಳೆಸಿಕೊಂಡನು. ಇದನ್ನು ಯೆಹೋವನು ಗಮನಿಸಿದನು ಹಾಗೂ “ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸಬೇಡ” ಎಂದು ಯೆರೆಮೀಯನ ಮೂಲಕ ಅವನನ್ನು ಎಚ್ಚರಿಸಿದನು.—ಯೆರೆ. 45:5.

ಬಾರೂಕನು ನಿರೀಕ್ಷಿಸುತ್ತಿದ್ದ “ಮಹಾಪದವಿ” ಯಾವುದು? ಅವನು ಯೆಹೂದಿ ಸಮುದಾಯದಲ್ಲಿ ತನಗಾಗಿ ಹೆಸರು ಮಾಡಿಕೊಳ್ಳಲು ಆಶಿಸಿದ್ದಿರಬಹುದು ಅಥವಾ ಐಶ್ವರ್ಯವಂತನಾಗಲು ಬಯಸಿದ್ದಿರಬಹುದು. ಏನೇ ಇರಲಿ, ಅವನು ಹೆಚ್ಚು ಪ್ರಾಮುಖ್ಯವಾದ ವಿಷಯಗಳಿಗೆ ಅಂದರೆ ಆಧ್ಯಾತ್ಮಿಕ ವಿಷಯಗಳಿಗೆ ಪ್ರಾಮುಖ್ಯತೆ ಕೊಡಲಿಲ್ಲ. (ಫಿಲಿ. 1:10) ಆದರೆ ಯೆರೆಮೀಯನ ಮೂಲಕ ಯೆಹೋವನು ಕೊಟ್ಟ ಎಚ್ಚರಿಕೆಗೆ ಬಾರೂಕನು ಕಿವಿಗೊಟ್ಟನು ಹಾಗೂ ಯೆರೂಸಲೇಮಿನ ನಾಶನದಿಂದ ಪಾರಾದನು.—ಯೆರೆ. 43:6.

ಈ ವೃತ್ತಾಂತದಿಂದ ನಾವೇನನ್ನು ಕಲಿಯುತ್ತೇವೆ? ಬಾರೂಕನಿಗೆ ಸಲಹೆ ಸಿಕ್ಕಿದ ಸಂಗತಿ ಅವನು ಏನೋ ತಪ್ಪು ಮಾಡಿದನೆಂಬದನ್ನು ಸೂಚಿಸುತ್ತದೆ. ಹೌದು, ಅವನು ಮಹಾಪದವಿಯನ್ನು ಆಶಿಸುತ್ತಿದ್ದನು. ಈಗಾಗಲೇ ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ನಿಮ್ಮಿಂದಾಗುತ್ತಿರುವಲ್ಲಿ ಕೇವಲ ನಿಮ್ಮ, ನಿಮ್ಮ ಹೆತ್ತವರ ಅಥವಾ ಸಂಬಂಧಿಕರ ಆಕಾಂಕ್ಷೆಗಳನ್ನು ಈಡೇರಿಸಲಿಕ್ಕಾಗಿ ಸಮಯ, ಶಕ್ತಿ ಹಾಗೂ ಹಣವನ್ನು ವ್ಯಯಿಸುತ್ತಾ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಪಡೆಯುವ ಅಗತ್ಯ ನಿಜವಾಗಿಯೂ ನಿಮಗಿದೆಯೋ?

ಕಂಪ್ಯೂಟರ್‌ ಪ್ರೋಗ್ರ್ಯಾಮರ್‌ ಆಗಿರುವ ಚೇತನ್‌ ಎಂಬವನ ಉದಾಹರಣೆಯನ್ನು ಪರಿಗಣಿಸಿ. ಇನ್ನೂ ಹೆಚ್ಚಿನ ತರಬೇತಿ ಪಡೆದುಕೊಳ್ಳುವಂತೆ ಸಹೋದ್ಯೋಗಿಗಳು ಅವನನ್ನು ಒತ್ತಾಯಿಸಿದರು. ಅದಕ್ಕೆ ಮಣಿದು ಅವನು ವಿಶಿಷ್ಟ ಕೋರ್ಸ್‌ ಒಂದನ್ನು ತೆಗೆದುಕೊಂಡನು. ಇದರಿಂದಾಗಿ ಅವನಿಗೆ ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಸಮಯವೇ ಇಲ್ಲದಾಯಿತು. ಅವನು ನೆನಪಿಸಿಕೊಳ್ಳುವುದು: “ನಾನು ಯಾವಾಗಲೂ ಟೆನ್ಷನ್‌ನಲ್ಲಿರುತ್ತಿದ್ದೆ. ನಾನು ಇಟ್ಟಿದ್ದ ಆಧ್ಯಾತ್ಮಿಕ ಗುರಿಗಳನ್ನು ನನ್ನಿಂದ ಮುಟ್ಟಲಾಗುತ್ತಿರಲಿಲ್ಲ. ಹಾಗಾಗಿ ಮನಸ್ಸಾಕ್ಷಿ ನನ್ನನ್ನು ಚುಚ್ಚುತ್ತಿತ್ತು.”

ಉದ್ಯೋಗದಲ್ಲೇ ಮುಳುಗಿರುವುದು

ಸತ್ಯ ಕ್ರೈಸ್ತರು ಶ್ರಮಜೀವಿಗಳಾಗಿರಬೇಕು ಹಾಗೂ ಜವಾಬ್ದಾರಿಯುತ ಕೆಲಸಗಾರರೂ ಧಣಿಗಳೂ ಆಗಿರಬೇಕೆಂಬದಾಗಿ ದೇವರ ವಾಕ್ಯ ಉತ್ತೇಜಿಸುತ್ತದೆ. “ನೀವು ಏನೇ ಮಾಡುವುದಾದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಯೆಹೋವನಿಗೋಸ್ಕರವೇ ಎಂದು ಪೂರ್ಣ ಪ್ರಾಣದಿಂದ ಮಾಡುವವರಾಗಿರಿ” ಎಂದು ಪೌಲನು ಬರೆದನು. (ಕೊಲೊ. 3:22, 23) ಕಷ್ಟಪಟ್ಟು ಕೆಲಸಮಾಡುವುದು ಶ್ಲಾಘನೀಯವಾದರೂ ಸೃಷ್ಟಿಕರ್ತನೊಂದಿಗೆ ಸುಸಂಬಂಧವನ್ನು ಕಾಪಾಡಿಕೊಳ್ಳುವುದೂ ಅಗತ್ಯ. (ಪ್ರಸಂ. 12:13) ಕ್ರೈಸ್ತನೊಬ್ಬನು ಉದ್ಯೋಗದಲ್ಲಿ ಮುಳುಗಿಹೋಗುವಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ಬದಿಗೊತ್ತಲ್ಪಡುವವು.

ಕ್ರೈಸ್ತನೊಬ್ಬನು ಉದ್ಯೋಗದಲ್ಲಿ ಪೂರ್ತಿ ಮಗ್ನನಾಗಿರುವಲ್ಲಿ ಅವನಿಗೆ ತನ್ನ ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಹಾಗೂ ತನ್ನ ಕುಟುಂಬಕ್ಕೆ ನೆರವು ನೀಡಲು ಕಷ್ಟವಾದೀತು. ಏಕೆಂದರೆ ಹಾಗೆ ಕೆಲಸಮಾಡುವುದು ಅವನ ಬಲವನ್ನೆಲ್ಲಾ ಇಂಗಿಸಿಬಿಡುತ್ತದೆ. ಹೀಗೆ ಉದ್ಯೋಗದಲ್ಲೇ ಮಗ್ನರಾಗಿರುವುದು “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸ” ಎಂದು ರಾಜ ಸೊಲೊಮೋನನು ಬರೆದನು. ಕ್ರೈಸ್ತನೊಬ್ಬನು ಉದ್ಯೋಗದಲ್ಲಿ ಪೂರ್ತಿ ಮುಳುಗಿರುವಲ್ಲಿ ದೀರ್ಘ ಸಮಯದವರೆಗೆ ತೀವ್ರ ಒತ್ತಡಕ್ಕೆ ಒಳಗಾಗಬಹುದು. ಅಂಥ ವ್ಯಕ್ತಿ ಕೆಲಸಕ್ಕೆ ದಾಸನಾಗಿಬಿಡುತ್ತಾನೆ, ಪೂರ್ತಿ ಬಳಲಿಹೋಗುತ್ತಾನೆ. ಹೀಗಾದರೆ ‘ಉಲ್ಲಾಸದಿಂದ ತನ್ನ ನಾನಾ ಪ್ರಯಾಸಗಳಲ್ಲಿ ಸುಖವನ್ನನುಭವಿಸಲು’ ಅವನಿಂದಾಗುವುದೋ? (ಪ್ರಸಂ. 3:12, 13; 4:6) ಎಲ್ಲಕ್ಕಿಂತ ಪ್ರಾಮುಖ್ಯವಾಗಿ, ಕುಟುಂಬದಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಬೇಕಾದ ಶಾರೀರಿಕ ಮತ್ತು ಭಾವನಾತ್ಮಕ ಬಲ ಅವನಲ್ಲಿರುವುದೋ?

ಪೂರ್ವ ಯೂರೋಪ್‌ನಲ್ಲಿ ವಾಸಿಸುವ ರಿಚರ್ಡ್‌ ಎಂಬವನು ತನ್ನ ವ್ಯಾಪಾರದಲ್ಲಿ ತುಂಬ ಮುಳುಗಿಹೋಗಿದ್ದನು. ಅವನು ಹೇಳಿದ್ದು: “ನಾನು ಯಾವಾಗಲೂ ಎಲ್ಲಾದರಲ್ಲೂ ಮೊದಲ ಹೆಜ್ಜೆ ತೆಗೆದುಕೊಳ್ಳುತ್ತಿದ್ದೆ. ನಾನು ಪ್ರತಿಯೊಂದು ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿಮುಗಿಸುತ್ತಿದ್ದೆ. ಲೋಕದ ಜನರು ನನ್ನನ್ನು ತುಂಬ ಮೆಚ್ಚುತ್ತಿದ್ದರು. ಆದರೆ ನನ್ನ ಆಧ್ಯಾತ್ಮಿಕತೆಗೆ ಧಕ್ಕೆ ಉಂಟಾಯಿತು ಮತ್ತು ನಾನು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿಬಿಟ್ಟೆ. ಸ್ವಲ್ಪದರಲ್ಲಿ ಕೂಟಗಳಿಗೆ ಹೋಗುವುದನ್ನೂ ನಿಲ್ಲಿಸಿದೆ. ನಾನು ಎಷ್ಟರ ಮಟ್ಟಿಗೆ ಅಹಂಕಾರಿಯಾದೆನೆಂದರೆ ಹಿರಿಯರು ಕೊಟ್ಟ ಸಲಹೆಗಳನ್ನು ಅಸಡ್ಡೆಮಾಡಿದೆ ಹಾಗೂ ಸಭೆಯಿಂದ ತುಂಬ ದೂರಹೋದೆ.”

ನೀವು ನಿಮ್ಮ ಜೀವನವನ್ನು ಸಫಲಗೊಳಿಸಬಲ್ಲಿರಿ

ಕ್ರೈಸ್ತರು ಆಧ್ಯಾತ್ಮಿಕತೆಯನ್ನೂ ಕಡೆಗಣಿಸುವಷ್ಟರ ಮಟ್ಟಿಗೆ ಮುಳುಗಿಹೋಗಬಹುದಾದ ಮೂರು ಕ್ಷೇತ್ರಗಳ ಬಗ್ಗೆ ನಾವು ಪರಿಗಣಿಸಿದೆವು. ಅವುಗಳಲ್ಲಿ ಯಾವುದರಲ್ಲಾದರೂ ನೀವು ಒಳಗೂಡಿದ್ದೀರೋ? ಹೌದಾದರೆ, ಮುಂದಿನ ಪ್ರಶ್ನೆಗಳು, ವಚನಗಳು ಹಾಗೂ ಹೇಳಿಕೆಗಳು ನೀವು ನಿಜವಾಗಿಯೂ ಸಾಫಲ್ಯದ ಹಾದಿಯಲ್ಲಿದ್ದೀರೋ ಎಂಬದನ್ನು ಖಚಿತಪಡಿಸಿಕೊಳ್ಳಲು ಸಹಾಯಮಾಡುತ್ತವೆ.

ಪಠ್ಯೇತರ ಚಟುವಟಿಕೆ ಮತ್ತು ಹವ್ಯಾಸಗಳು: ನೀವು ಈ ಚಟುವಟಿಕೆಗಳಲ್ಲಿ ಎಷ್ಟು ಮಗ್ನರಾಗಿದ್ದೀರಿ? ಇವು, ನೀವು ಈ ಮುಂಚೆ ಆಧ್ಯಾತ್ಮಿಕ ವಿಷಯಗಳಿಗೆ ಕೊಡುತ್ತಿದ್ದ ಸಮಯವನ್ನು ಕಬಳಿಸುತ್ತಿವೆಯೋ? ಜೊತೆವಿಶ್ವಾಸಿಗಳೊಂದಿಗಿನ ಸಹವಾಸದಲ್ಲಿ ನೀವು ಅಷ್ಟಾಗಿ ಆನಂದಿಸುತ್ತಿಲ್ಲವೆಂದು ನಿಮಗನಿಸುತ್ತಿದೆಯೋ? ಹಾಗಿರುವಲ್ಲಿ, ರಾಜ ದಾವೀದನಂತೆ, “ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು” ಎಂದು ಯೆಹೋವನಲ್ಲಿ ಬೇಡಿಕೊಳ್ಳಿ.—ಕೀರ್ತ. 143:8.

ಈ ಮುಂಚೆ ತಿಳಿಸಲಾದ ವಿಕ್ಟರ್‌ಗೆ ಒಬ್ಬ ಸಂಚರಣ ಮೇಲ್ವಿಚಾರಕನು ಸಹಾಯಮಾಡಿದನು. ಆ ಸಹೋದರನು ವಿಕ್ಟರ್‌ಗೆ “ನೀನು ನಿನ್ನ ವಾಲಿಬಾಲ್‌ ಆಟದ ಬಗ್ಗೆ ತುಂಬಾ ಆವೇಶದಿಂದ ಮಾತಾಡುತ್ತಿ” ಎಂದು ಹೇಳಿದನು. “ಇದು ನನ್ನನ್ನು ಯೋಚಿಸುವಂತೆ ಮಾಡಿತು. ನಾನು ಸಭೆಯಿಂದ ತುಂಬ ದೂರ ಹೋಗಿರುವುದು ನನ್ನ ಅರಿವಿಗೆ ಬಂತು. ಕೂಡಲೆ ನಾನು ವಾಲಿಬಾಲ್‌ ತಂಡದಲ್ಲಿದ್ದ ಸ್ನೇಹಿತರೊಂದಿಗಿನ ಸಹವಾಸವನ್ನು ಕಡಿದುಹಾಕಿದೆ ಮತ್ತು ಸಭೆಯಲ್ಲಿ ಸ್ನೇಹಿತರನ್ನು ಹುಡುಕಿದೆ.” ಇಂದು ವಿಕ್ಟರ್‌ ಸಭೆಯಲ್ಲಿ ಹುರುಪಿನಿಂದ ಯೆಹೋವನ ಸೇವೆಮಾಡುತ್ತಿದ್ದಾನೆ. ಅವನು ಇತರರಿಗೆ ಸಲಹೆ ಕೊಡುವುದು: “‘ಶಾಲಾ ಚಟುವಟಿಕೆಗಳು ನನ್ನನ್ನು ಯೆಹೋವನಿಗೆ ಆಪ್ತನನ್ನಾಗಿ ಮಾಡಿವೆಯೋ ಅಥವಾ ಆತನಿಂದ ದೂರ ಮಾಡಿವೆಯೋ? ಈ ಬಗ್ಗೆ ನನ್ನಲ್ಲಿ ನೀವೇನನ್ನು ಗಮನಿಸಿದ್ದೀರಿ?’ ಎಂದು ನಿಮ್ಮ ಸ್ನೇಹಿತರನ್ನೋ, ಹೆತ್ತವರನ್ನೋ ಅಥವಾ ಸಭಾ ಹಿರಿಯರನ್ನೋ ಕೇಳಿ ತಿಳಿದುಕೊಳ್ಳಿ.”

ನೀವು ದೇವರ ಸೇವೆಯಲ್ಲಿ ಹೆಚ್ಚಿನ ಸುಯೋಗಗಳನ್ನು ಎಟುಕಿಸಿಕೊಳ್ಳಲು ಬಯಸುತ್ತೀರೆಂದು ನಿಮ್ಮ ಸಭೆಯ ಹಿರಿಯರಿಗೆ ಏಕೆ ತೋರಿಸಿಕೊಡಬಾರದು? ಸಹವಾಸ ಅಥವಾ ನೆರವಿನ ಅಗತ್ಯದಲ್ಲಿರುವ ವೃದ್ಧರಿಗೆ ನೀವು ಸಹಾಯ ಮಾಡಬಹುದೋ? ವಸ್ತುವನ್ನು ಖರೀದಿಸುವ ವಿಷಯದಲ್ಲಿ ಅಥವಾ ಮನೆಯ ದಿನನಿತ್ಯದ ಕೆಲಸಗಳಲ್ಲಿ ನೀವು ಅವರಿಗೆ ಸಹಾಯ ಮಾಡಬಹುದೋ? ನೀವು ಯಾವುದೇ ವಯಸ್ಸಿನವರಾಗಿದ್ದರೂ ಸರಿಯೇ ನೀವು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂತೋಷದ ಮೂಲವಾಗಿರುವ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.

ಉನ್ನತ ಶಿಕ್ಷಣ: “ಸ್ವಂತ ಮಹಿಮೆಯನ್ನು ಹುಡುಕುವ” ವಿಷಯದಲ್ಲಿ ಯೇಸು ಎಚ್ಚರಿಕೆ ಕೊಟ್ಟನು. (ಯೋಹಾ. 7:18) ನೀವು ಎಷ್ಟು ಐಹಿಕ ಶಿಕ್ಷಣ ಪಡೆಯಬೇಕೆಂದು ನಿರ್ಣಯಿಸುವ ಮುಂಚೆ ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಂಡಿದ್ದೀರೋ?’—ಫಿಲಿ. 1:9, 10.

ಕಂಪ್ಯೂಟರ್‌ ಪ್ರೋಗ್ರ್ಯಾಮರ್‌ ಆಗಿರುವ ಚೇತನ್‌ ತನ್ನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದನು. ಅವನು ಹೇಳಿದ್ದು: “ಹಿರಿಯರು ಕೊಟ್ಟ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ನನ್ನ ಜೀವನವನ್ನು ಸರಳಗೊಳಿಸಿದೆ. ನಾನು ಹೆಚ್ಚು ಶಿಕ್ಷಣ ಪಡೆಯುವಲ್ಲಿ ಅದು ನನ್ನ ಸಮಯ ಮತ್ತು ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂಬದನ್ನು ಮನಗಂಡೆ.” ಚೇತನ್‌ ಸಭಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಒಳಗೂಡಲಾರಂಭಿಸಿದನು. ಸ್ವಲ್ಪ ಸಮಯದ ನಂತರ ಅವನು ಶುಶ್ರೂಷಾ ತರಬೇತಿ ಶಾಲೆಯಿಂದ (ಈಗ ಅದು, ಅವಿವಾಹಿತ ಸಹೋದರರಿಗಾಗಿ ಬೈಬಲ್‌ ಶಾಲೆ ಎಂದು ಕರೆಯಲ್ಪಡುತ್ತಿದೆ.) ಪದವೀಧರನಾದನು. ಹೌದು ಅವನು ಇನ್ನೂ ಹೆಚ್ಚಿನ ದೈವಿಕ ಶಿಕ್ಷಣವನ್ನು ಪಡೆಯಲು ‘ಸುಸಮಯವನ್ನು ಖರೀದಿಸಿದನು.’—ಎಫೆ. 5:16.

ಉದ್ಯೋಗ: ಆಧ್ಯಾತ್ಮಿಕ ವಿಷಯಗಳನ್ನು ಬದಿಗೊತ್ತುವಷ್ಟರ ಮಟ್ಟಿಗೆ ನೀವು ನಿಮ್ಮ ಉದ್ಯೋಗದಲ್ಲಿ ಮಗ್ನರಾಗಿದ್ದೀರೋ? ಮನೆಮಂದಿಯೊಂದಿಗೆ ಸಂವಾದಿಸಲು ನೀವು ಸಾಕಷ್ಟು ಸಮಯ ಕೊಡುತ್ತೀರೋ? ಸಭೆಯಲ್ಲಿ ನಿಮಗೆ ಸಿಗುವ ನೇಮಕಗಳನ್ನು ಹೆಚ್ಚು ಉತ್ತಮವಾಗಿ ನಿರ್ವಹಿಸಲು ಪ್ರಯತ್ನಿಸುತ್ತೀರೋ? ಇತರರೊಂದಿಗೆ ಭಕ್ತಿವರ್ಧಕ ಸಂಭಾಷಣೆಗಳಲ್ಲಿ ಒಳಗೂಡುವ ಕುರಿತೇನು? ‘ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳುವಲ್ಲಿ’ ನೀವು ಹೇರಳ ಆಶೀರ್ವಾದಗಳನ್ನು ಪಡೆಯುವಿರಿ ಹಾಗೂ ‘ನಿಮ್ಮ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವಿರಿ.’—ಪ್ರಸಂ. 2:24; 12:13.

ಮುಂಚೆ ತಿಳಿಸಲಾದ ರಿಚರ್ಡ್‌ ತನ್ನ ವ್ಯಾಪಾರದಲ್ಲಿ ಯಶಸ್ಸು ಕಾಣಲಿಲ್ಲ, ನಷ್ಟವನ್ನನುಭವಿಸಿದನು. ಯಾವುದೇ ಆದಾಯವಿಲ್ಲದೆ ಪೂರ್ತಿ ಸಾಲದಲ್ಲಿ ಮುಳುಗಿದ ಅವನು ಯೆಹೋವನ ಬಳಿ ಹಿಂತಿರುಗಿದನು. ರಿಚರ್ಡ್‌ ತನ್ನ ಎಲ್ಲ ಕೆಲಸಗಳನ್ನು ಸಂಘಟಿಸಿದನು. ಈಗ ರೆಗ್ಯುಲರ್‌ ಪಯನಿಯರನಾಗಿಯೂ ಸಭಾ ಹಿರಿಯನಾಗಿಯೂ ಸೇವೆಸಲ್ಲಿಸುತ್ತಿದ್ದಾನೆ. ಅವನು ಹೇಳಿದ್ದು: “ಮೂಲಭೂತ ವಿಷಯಗಳಲ್ಲೇ ತೃಪ್ತನಾಗಿದ್ದು, ಆಧ್ಯಾತ್ಮಿಕ ವಿಷಯಗಳಿಗೆ ನನ್ನನ್ನೇ ನೀಡಿಕೊಳ್ಳುತ್ತಿರುವುದರಿಂದ ಮನಶ್ಶಾಂತಿ ಮತ್ತು ನೆಮ್ಮದಿ ನನ್ನದಾಗಿದೆ.”—ಫಿಲಿ. 4:6, 7.

ನಿಮ್ಮ ಇರಾದೆ ಹಾಗೂ ಆದ್ಯತೆಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸಲು ಸಮಯ ತೆಗೆದುಕೊಳ್ಳಿ. ಜೀವನಪರ್ಯಂತ ಯಶಸ್ಸನ್ನು ಕಂಡುಕೊಳ್ಳಲು ಇರುವ ಏಕೈಕ ಮಾರ್ಗ ಯೆಹೋವನ ಸೇವೆಯೇ. ಇದನ್ನು ನಿಮ್ಮ ಜೀವನದ ಕೇಂದ್ರಬಿಂದುವನ್ನಾಗಿ ಮಾಡಿರಿ.

‘ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವನ್ನು’ ಮಾಡಲಿಕ್ಕಾಗಿ ನೀವು ಹೊಂದಾಣಿಕೆಗಳನ್ನು ಮಾಡಬೇಕಾಗಬಹುದು. ಕೆಲವೊಮ್ಮೆ ಅನಾವಶ್ಯಕ ವಿಷಯಗಳನ್ನು ವರ್ಜಿಸಬೇಕಾಗಬಹುದು. (ರೋಮ. 12:2) ಆದರೆ ಪೂರ್ಣಮನಸ್ಸಿನಿಂದ ಯೆಹೋವನ ಸೇವೆಮಾಡುವ ಮೂಲಕ ನೀವು ‘ನಿಮ್ಮ ಮಾರ್ಗವನ್ನು ಸಫಲಗೊಳಿಸಬಲ್ಲಿರಿ.’

[ಪಾದಟಿಪ್ಪಣಿ]

^ ಪ್ಯಾರ. 8 ಹೆಸರುಗಳನ್ನು ಬದಲಾಯಿಸಲಾಗಿದೆ

[ಪುಟ 31ರಲ್ಲಿರುವ ಚೌಕ/ಚಿತ್ರ]

ನಿಮ್ಮ ಮಾರ್ಗವನ್ನು ಹೇಗೆ ಸಫಲಗೊಳಿಸಬಲ್ಲಿರಿ?

ನೀವು ನೂರೆಂಟು ವಿಷಯಗಳಿಂದ ಅಪಕರ್ಷಿತರಾಗುವ ಸಾಧ್ಯತೆಯಿರುವಾಗ ನಿಜವಾಗಿಯೂ ಪ್ರಾಮುಖ್ಯವಾದ ವಿಷಯಗಳಿಗೆ ಗಮನಕೊಡಲು ನೀವೇನು ಮಾಡಬಲ್ಲಿರಿ? ಕೆಳಗಿನ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳುವ ಮೂಲಕ ನಿಮ್ಮ ಇಚ್ಛೆಗಳನ್ನೂ ಆದ್ಯತೆಗಳನ್ನೂ ಪರಿಶೀಲಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ.

ಪಠ್ಯೇತರ ಚಟುವಟಿಕೆ ಮತ್ತು ಹವ್ಯಾಸಗಳು

▪ ಆ ಚಟುವಟಿಕೆಗಳಲ್ಲಿ ಒಳಗೂಡುವಾಗ ಎಂಥ ಮನೋಭಾವವಿರುವ ಜನರೊಂದಿಗೆ ನೀವು ಬೆರೆಯಬೇಕಾಗುತ್ತದೆ?

▪ ಆ ಚಟುವಟಿಕೆಗಳಿಗಾಗಿ ಎಷ್ಟು ಸಮಯ ಕೊಡಬೇಕಾಗಬಹುದು?

▪ ಇವೇ ನಿಮ್ಮ ಜೀವನದ ಗುರಿಯಾಗಿಬಿಡುವ ಸಾಧ್ಯತೆಯಿದೆಯೋ?

▪ ಇವು, ನೀವು ಈ ಮುಂಚೆ ಆಧ್ಯಾತ್ಮಿಕ ವಿಷಯಗಳಿಗೆ ಕೊಡುತ್ತಿದ್ದ ಸಮಯವನ್ನು ಕಬಳಿಸುತ್ತಿವೆಯೋ?

▪ ಸಹವಾಸದ ಕುರಿತೇನು?

▪ ಜೊತೆ ವಿಶ್ವಾಸಿಗಳಿಗಿಂತಲೂ ನಿಮಗೆ ಆ ಸ್ನೇಹಿತರು ಹೆಚ್ಚು ಇಷ್ಟವಾಗುತ್ತಿದ್ದಾರೋ?

ಉನ್ನತ ಶಿಕ್ಷಣ

▪ ಈಗಾಗಲೇ ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ನಿಮ್ಮಿಂದಾಗುತ್ತಿರುವಲ್ಲಿ ಸಮಯ, ಶಕ್ತಿ ಹಾಗೂ ಹಣವನ್ನು ವ್ಯಯಿಸುತ್ತಾ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಪಡೆಯುವ ಅಗತ್ಯ ನಿಜವಾಗಿಯೂ ನಿಮಗಿದೆಯೋ?

▪ ನಿಮ್ಮ ಅಗತ್ಯಗಳನ್ನು ನೋಡಿಕೊಳ್ಳಲು ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಪದವಿ ಪಡೆಯುವುದು ನಿಜವಾಗಿಯೂ ಅಗತ್ಯವೋ?

▪ ಕೂಟಗಳಿಗೆ ಹಾಜರಾಗಲು ಅದು ತಡೆಯಾಗಿರಬಲ್ಲದೋ?

▪ ನೀವು ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಂಡಿದ್ದೀರೋ?’

▪ ನಿಮ್ಮ ಅಗತ್ಯಗಳನ್ನು ಯೆಹೋವನು ಪೂರೈಸುವನೆಂಬ ವಿಷಯದಲ್ಲಿ ನೀವು ನಿಮ್ಮ ಭರವಸೆಯನ್ನು ಇನ್ನಷ್ಟು ಬಲಗೊಳಿಸಬೇಕಿದೆಯೋ?

ಉದ್ಯೋಗ

▪ ‘ಉಲ್ಲಾಸದಿಂದ ನಿಮ್ಮ ನಾನಾ ಪ್ರಯಾಸಗಳಲ್ಲಿ ಸುಖವನ್ನನುಭವಿಸಲು’ ನಿಮ್ಮ ಉದ್ಯೋಗವು ಸಾಧ್ಯಮಾಡುವುದೋ?

▪ ಕುಟುಂಬದಲ್ಲಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಬೇಕಾದ ಶಾರೀರಿಕ ಮತ್ತು ಭಾವನಾತ್ಮಕ ಬಲ ನಿಮ್ಮಲ್ಲಿದೆಯೋ?

▪ ಮನೆಮಂದಿಯೊಂದಿಗೆ ಸಂವಾದಿಸಲು ನೀವು ಸಾಕಷ್ಟು ಸಮಯ ಕೊಡುತ್ತೀರೋ?

▪ ಆಧ್ಯಾತ್ಮಿಕ ವಿಷಯಗಳು ಬದಿಗೊತ್ತಲ್ಪಡುವಷ್ಟರ ಮಟ್ಟಿಗೆ ನೀವು ಉದ್ಯೋಗದಲ್ಲಿ ಮುಳುಗಿಹೋಗಿದ್ದೀರೋ?

▪ ಇದರಿಂದಾಗಿ ಕೂಟಗಳಲ್ಲಿನ ನಿಮ್ಮ ನೇಮಕಗಳ ಗುಣಮಟ್ಟವು ಕಡಿಮೆಯಾಗಿದೆಯೋ?

[ಪುಟ 30ರಲ್ಲಿರುವ ಚಿತ್ರ]

ಹೆಬ್ಬಯಕೆಯ ವಿಷಯದಲ್ಲಿ ಯೆಹೋವನು ಬಾರೂಕನಿಗೆ ಎಚ್ಚರಿಕೆ ಕೊಟ್ಟನು