ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸುರುಳಿಗಳನ್ನು, ಮುಖ್ಯವಾಗಿ ಚರ್ಮದ ಹಾಳೆಗಳನ್ನು ತೆಗೆದುಕೊಂಡು ಬಾ’

‘ಸುರುಳಿಗಳನ್ನು, ಮುಖ್ಯವಾಗಿ ಚರ್ಮದ ಹಾಳೆಗಳನ್ನು ತೆಗೆದುಕೊಂಡು ಬಾ’

‘ಸುರುಳಿಗಳನ್ನು, ಮುಖ್ಯವಾಗಿ ಚರ್ಮದ ಹಾಳೆಗಳನ್ನು ತೆಗೆದುಕೊಂಡು ಬಾ’

ಈ ಮೇಲಿನಂತೆ ಹೇಳುವ ಮೂಲಕ ಪೌಲನು ತನ್ನ ಜೊತೆ ಮಿಷನೆರಿಯಾದ ತಿಮೊಥೆಯನ ಬಳಿ ಕೆಲವು ಬರಹಗಳನ್ನು ತರುವಂತೆ ವಿನಂತಿಸಿಕೊಂಡನು. ಪೌಲನು ಯಾವ ಸುರುಳಿಗಳ ಹಾಗೂ ಚರ್ಮದ ಹಾಳೆಗಳ ಬಗ್ಗೆ ಹೇಳುತ್ತಿದ್ದನು? ಅವನು ಹಾಗೆ ವಿನಂತಿಸಲು ಕಾರಣವೇನು? ನಾವು ಅದರಿಂದ ಏನನ್ನು ಕಲಿಯಬಹುದು?

ಪೌಲನು ಈ ಮಾತುಗಳನ್ನು ಬರೆದದ್ದು ಒಂದನೇ ಶತಮಾನದ ಮಧ್ಯಭಾಗದಲ್ಲಿ. ಆಗ ಹೀಬ್ರೂ ಶಾಸ್ತ್ರಗ್ರಂಥದ 39 ಪುಸ್ತಕಗಳನ್ನು 22 ಅಥವಾ 24 ಪುಸ್ತಕಗಳಾಗಿ ವಿಂಗಡಿಸಲಾಗಿತ್ತು ಹಾಗೂ ಹೆಚ್ಚಿನವು ಪ್ರತ್ಯೇಕ ಸುರುಳಿಗಳಲ್ಲಿದ್ದವು. ಆ ಸುರುಳಿಗಳು ತುಂಬ ದುಬಾರಿಯಾಗಿದ್ದವೇನೋ ನಿಜ. ಆದರೆ “ಮಧ್ಯಮವರ್ಗದವರ ಕೈಗೆ ನಿಲುಕುವಂತಿದ್ದವು” ಎಂದು ಪ್ರೊಫೆಸರ್‌ ಆ್ಯಲನ್‌ ಮಿಲರ್ಡ್‌ ಹೇಳುತ್ತಾರೆ. ಕೆಲವರ ಬಳಿ ಕಡಿಮೆಪಕ್ಷ ಒಂದು ಸುರುಳಿಯಾದರೂ ಇರುತ್ತಿತ್ತು. ಉದಾಹರಣೆಗೆ, ಇಥಿಯೋಪ್ಯದ ಕಂಚುಕಿಯು ತನ್ನ ರಥದಲ್ಲಿ ಸುರುಳಿಯನ್ನು ಇಟ್ಟುಕೊಂಡಿದ್ದನು. ಪ್ರಯಾಣಮಾಡುವಾಗ “ಯೆಶಾಯ ಪ್ರವಾದಿಯ ಗ್ರಂಥವನ್ನು ಗಟ್ಟಿಯಾಗಿ ಓದುತ್ತಿದ್ದನು.” ಅವನು “ಇಥಿಯೋಪ್ಯದ ರಾಣಿಯಾದ ಕಂದಾಕೆಯ ಕೆಳಗೆ ಅಧಿಕಾರದಲ್ಲಿದ್ದ ಮತ್ತು ಅವಳ ಕೋಶಾಗಾರವೆಲ್ಲದರ ಮುಖ್ಯ ಅಧಿಕಾರಿಯಾಗಿದ್ದ.” ಹಾಗಾದರೆ ಅವನು ಶಾಸ್ತ್ರಗ್ರಂಥದ ಕೆಲವು ಭಾಗಗಳನ್ನು ಕೊಳ್ಳುವಷ್ಟು ಸ್ಥಿತಿವಂತನಾಗಿದ್ದಿರಬೇಕು.—ಅ. ಕಾ. 8:27, 28.

ಪೌಲನು ತಿಮೊಥೆಯನಿಗೆ ಬರೆದ ಪತ್ರದಲ್ಲಿ, “ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟುಬಂದಿರುವ ಮೇಲಂಗಿಯನ್ನೂ ಸುರುಳಿಗಳನ್ನೂ, ಮುಖ್ಯವಾಗಿ ಚರ್ಮದ ಹಾಳೆಗಳನ್ನು ತೆಗೆದುಕೊಂಡು ಬಾ” ಎಂದು ವಿನಂತಿಸಿಕೊಂಡನು. (2 ತಿಮೊ. 4:13) ಇದು ತಾನೇ ಪೌಲನ ಬಳಿ ಅನೇಕ ಪುಸ್ತಕಗಳಿದ್ದವೆಂದು ತೋರಿಸುತ್ತದೆ. ಈ ಎಲ್ಲ ಪುಸ್ತಕಗಳಲ್ಲಿ ಪೌಲನಿಗೆ ದೇವರ ವಾಕ್ಯಕ್ಕಿಂತ ಬೇರೆ ಯಾವ ಪುಸ್ತಕವು ತಾನೇ ಅಮೂಲ್ಯವಾಗಿದ್ದಿರಸಾಧ್ಯವಿತ್ತು? ಆ ವಚನದಲ್ಲಿ ಉಪಯೋಗಿಸಲಾಗಿರುವ ‘ಚರ್ಮದ ಹಾಳೆಗಳು’ ಎಂಬ ಪದದ ಬಗ್ಗೆ ಬೈಬಲ್‌ ವಿದ್ವಾಂಸರಾದ ಎ.ಟಿ. ರಾಬರ್ಟ್‌ಸನ್‌ ಹೀಗೆ ಹೇಳಿದರು: “ಪಪೈರಸ್‌ಗಿಂತ ದುಬಾರಿಯಾದ ಈ ಚರ್ಮದ ಹಾಳೆಗಳು ಬಹುಶಃ ಹಳೆಯ ಒಡಂಬಡಿಕೆಯ ಪುಸ್ತಕಗಳ ಪ್ರತಿಗಳಾಗಿರಬೇಕು.” ಚಿಕ್ಕಂದಿನಲ್ಲೇ ಪೌಲನು ‘ಗಮಲಿಯೇಲನ ಪಾದಸನ್ನಿಧಿಯಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದನು.’ ಎಲ್ಲ ಜನರಿಂದ ಗೌರವಿಸಲ್ಪಡುತ್ತಿದ್ದ ಗಮಲಿಯೇಲನು ಪೌಲನಿಗೆ ಮೋಶೆಯ ಧರ್ಮಶಾಸ್ತ್ರದ ಬಗ್ಗೆ ಕಲಿಸಿಕೊಟ್ಟನು. ಹಾಗಾದರೆ ಪೌಲನು ದೇವರ ವಾಕ್ಯದ ಸುರುಳಿಗಳ ವೈಯಕ್ತಿಕ ಪ್ರತಿಗಳನ್ನು ಹೊಂದಿರಲೇಬೇಕು.—ಅ. ಕಾ. 5:34; 22:3.

ಕ್ರೈಸ್ತರು ಸುರುಳಿಗಳನ್ನು ಉಪಯೋಗಿಸಿದ ವಿಧ

ಆದರೆ ಹೆಚ್ಚಿನವರ ಬಳಿ ಪವಿತ್ರ ಶಾಸ್ತ್ರವಚನಗಳ ಸುರುಳಿಗಳಿರಲಿಲ್ಲ. ಹಾಗಾದರೆ ಆ ಕಾಲದಲ್ಲಿದ್ದ ಕ್ರೈಸ್ತರು ದೇವರ ವಾಕ್ಯವನ್ನು ಹೇಗೆ ತಿಳಿದುಕೊಳ್ಳುತ್ತಿದ್ದರು? ಪೌಲನು ತಿಮೊಥೆಯನಿಗೆ ಬರೆದ ಮೊದಲ ಪತ್ರವು ಈ ಬಗ್ಗೆ ಸುಳಿವು ನೀಡುತ್ತದೆ. ಅವನು ಬರೆದದ್ದು: ‘ನಾನು ಬರುವ ತನಕ ಸಾರ್ವಜನಿಕ ವಾಚನದಲ್ಲಿ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು.’ (1 ತಿಮೊ. 4:13) ಹಾಗಾದರೆ ಆಗಿನ ಕ್ರೈಸ್ತ ಕೂಟಗಳಲ್ಲಿ ಸಾರ್ವಜನಿಕ ವಾಚನವೂ ಇರುತ್ತಿತ್ತು. ದೇವಜನರಲ್ಲಿ ಮೋಶೆಯ ಕಾಲದಿಂದಲೂ ನಡೆದುಬಂದ ರೂಢಿಯಿದು.—ಅ. ಕಾ. 13:15; 15:21; 2 ಕೊರಿಂ. 3:15.

ಸಭೆಯ ಹಿರಿಯನಾಗಿದ್ದ ತಿಮೊಥೆಯನು ಗಟ್ಟಿಯಾಗಿ ಓದುವುದರಲ್ಲಿ ‘ತನ್ನನ್ನು ತೊಡಗಿಸಿಕೊಳ್ಳಬೇಕಿತ್ತು.’ ಇದರಿಂದ ಯಾರ ಬಳಿ ಶಾಸ್ತ್ರಗ್ರಂಥದ ಪ್ರತಿಯಿರಲಿಲ್ಲವೋ ಅವರಿಗೆ ಪ್ರಯೋಜನವಾಗುತ್ತಿತ್ತು. ಹೀಗೆ ದೇವರ ವಾಕ್ಯವನ್ನು ಸಾರ್ವಜನಿಕವಾಗಿ ಓದಲಾಗುತ್ತಿದ್ದಾಗ ಸಭಿಕರೆಲ್ಲರೂ ಮೈಯೆಲ್ಲಾ ಕಿವಿಯಾಗಿಸಿ ಒಂದು ಪದವನ್ನೂ ಬಿಡದೆ ಕೇಳಿಸಿಕೊಳ್ಳುತ್ತಿದ್ದರು. ಅಲ್ಲದೆ ಕೂಟಗಳಲ್ಲಿ ಓದಲಾದ ವಿಷಯಗಳನ್ನು ಹೆತ್ತವರು ಮತ್ತು ಮಕ್ಕಳು ಮನೆಯಲ್ಲಿ ಚರ್ಚಿಸುತ್ತಿದ್ದಿರಲೇಬೇಕು.

ಯೆಶಾಯನ ಪುಸ್ತಕದ ಪ್ರಖ್ಯಾತ ಮೃತಸಮುದ್ರ ಸುರುಳಿಯು ಹೆಚ್ಚುಕಡಿಮೆ 24 ಅಡಿ (7.3 ಮಿ) ಉದ್ದವಿದೆ. ಹೆಚ್ಚಾಗಿ ಸುರುಳಿಯ ಎರಡೂ ಅಂಚುಗಳಲ್ಲಿ ಕೋಲು ಇರುತ್ತಿತ್ತು. ಹಾಗೂ ಅದನ್ನು ಜೋಪಾನವಾಗಿಡಲು ಬಟ್ಟೆಯಲ್ಲಿ ಸುತ್ತಿಡಲಾಗುತ್ತಿತ್ತು ಇಲ್ಲವೆ ಜಾಡಿಯಲ್ಲಿಡಲಾಗುತ್ತಿತ್ತು. ಹಾಗಾಗಿ ಸುರುಳಿಗಳು ತುಂಬ ಭಾರವಾಗಿರುತ್ತಿದ್ದವು. ಸಾಮಾನ್ಯವಾಗಿ ಸಾರಲು ಹೋಗುವಾಗ ಕ್ರೈಸ್ತರಿಗೆ ಹೆಚ್ಚು ಸುರುಳಿಗಳನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿರಲಿಲ್ಲ. ಪೌಲನ ಬಳಿ ವೈಯಕ್ತಿಕ ಉಪಯೋಗಕ್ಕಾಗಿ ಶಾಸ್ತ್ರವಚನಗಳ ಕೆಲವು ಸುರುಳಿಗಳು ಇದ್ದವಾದರೂ ಪ್ರಯಾಣಿಸುವಾಗ ಆ ಎಲ್ಲ ಸುರುಳಿಗಳನ್ನು ಕೊಂಡೊಯ್ಯುಲು ಅವನಿಗೆ ಸಾಧ್ಯವಾಗಿರಲಿಕ್ಕಿಲ್ಲ. ಆದ್ದರಿಂದಲೇ ತ್ರೋವದಲ್ಲಿರುವ ತನ್ನ ಮಿತ್ರನಾದ ಕರ್ಪನ ಬಳಿಯಲ್ಲಿ ಅವನು ಕೆಲವೊಂದು ಸುರುಳಿಗಳನ್ನು ಬಿಟ್ಟುಬಂದಿದ್ದನು.

ಪೌಲನ ಮಾದರಿಯಿಂದ ನಾವು ಕಲಿಯುವ ಪಾಠ

ಪೌಲನು ಆ ವಿನಂತಿಯನ್ನು ಮಾಡಿದ್ದು ಎರಡನೇ ಬಾರಿ ರೋಮ್‌ನಲ್ಲಿ ಸೆರೆವಾಸಿಯಾಗಿದ್ದಾಗ. ಆ ವಿನಂತಿಗೂ ಸ್ವಲ್ಪ ಮುನ್ನ ಅವನು ಬರೆದದ್ದು; “ನಾನು ಉತ್ತಮ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕೊನೆಗಾಣಿಸಿದ್ದೇನೆ, . . . ಈ ಸಮಯದಿಂದ ನೀತಿಯ ಕಿರೀಟವು ನನಗಾಗಿ ಕಾದಿರಿಸಲ್ಪಟ್ಟಿದೆ.” (2 ತಿಮೊ. 4:7, 8) ಸಾಮ್ರಾಟ ನೀರೊ ಉಗ್ರ ಹಿಂಸೆ ತಂದ ಸಮಯಾವಧಿಯಲ್ಲಿ ಅಂದರೆ ಸುಮಾರು ಕ್ರಿ.ಶ. 65ರಲ್ಲಿ ಆ ಮಾತುಗಳನ್ನು ಪೌಲನು ಬರೆದನು. ಈ ಸಲ ಸೆರೆವಾಸವು ತುಂಬ ಕಠಿಣವಾಗಿತ್ತು ಮತ್ತು ತನಗೆ ಮರಣದಂಡನೆ ಖಚಿತವೆಂದು ಅವನು ತಿಳಿದಿದ್ದನು. (2 ತಿಮೊ. 1:16; 4:6) ಹಾಗಾದರೆ ತನ್ನ ಬಳಿ ಸುರುಳಿಗಳಿರಬೇಕೆಂಬ ಪೌಲನ ಮನದಾಸೆಗೆ ಕಾರಣವೇನೆಂಬುದು ಸುಸ್ಪಷ್ಟ. ತಾನು ಕೊನೆ ತನಕ ಉತ್ತಮ ಹೋರಾಟವನ್ನು ಮಾಡಿದ್ದೇನೆಂಬ ಭರವಸೆ ಅವನಿಗಿತ್ತಾದರೂ ದೇವರ ವಾಕ್ಯದ ಅಧ್ಯಯನದ ಮೂಲಕ ತನ್ನನ್ನು ಬಲಪಡಿಸಿಕೊಳ್ಳುತ್ತಾ ಇರಲು ಅವನು ಹಂಬಲಿಸಿದನು.

ಪೌಲನ ಪತ್ರವು ಕೈಗೆ ಸಿಕ್ಕಿದಾಗ ತಿಮೊಥೆಯನು ಎಫೆಸದಲ್ಲಿಯೇ ಇದ್ದಿರಬೇಕು. (1 ತಿಮೊ. 1:3) ಎಫೆಸದಿಂದ ತ್ರೋವದ ಮಾರ್ಗವಾಗಿ ರೋಮ್‌ಗೆ ಹೋಗಲು ಅಂದಾಜು 1,000 ಮೈಲಿ (1,600 ಕಿ.ಮಿ.) ದೂರ ಪ್ರಯಾಣಿಸಬೇಕು. ಪೌಲನು ಅದೇ ಪತ್ರದಲ್ಲಿ, “ಚಳಿಗಾಲಕ್ಕಿಂತ ಮುಂಚೆಯೇ ಬರಲು ನಿನ್ನಿಂದಾದ ಪ್ರಯತ್ನವನ್ನು ಮಾಡು” ಎಂದು ತಿಮೊಥೆಯನಲ್ಲಿ ಕೇಳಿಕೊಂಡನು. (2 ತಿಮೊ. 4:21) ಪೌಲನು ಹೇಳಿದ ಸಮಯಕ್ಕೆ ಸರಿಯಾಗಿ ರೋಮ್‌ಗೆ ಹೋಗಿ ತಲುಪಲು ತಿಮೊಥೆಯನಿಗೆ ಹಡಗು ಸಿಕ್ಕಿತೋ ಇಲ್ಲವೋ ಎಂಬದರ ಬಗ್ಗೆ ಬೈಬಲಿನಲ್ಲಿ ಏನೂ ತಿಳಿಸಲಾಗಿಲ್ಲ.

‘ಸುರುಳಿಗಳನ್ನು, ಮುಖ್ಯವಾಗಿ ಚರ್ಮದ ಹಾಳೆಗಳನ್ನು’ ತರುವಂತೆ ಪೌಲನು ಮಾಡಿದ ವಿನಂತಿಯಿಂದ ನಾವೇನನ್ನು ಕಲಿಯಬಹುದು? ಅವನು ತನ್ನ ಜೀವನದ ಅತಿ ದುಃಖಕರ ಸನ್ನಿವೇಶದಲ್ಲಿದ್ದರೂ ದೇವರ ವಾಕ್ಯಕ್ಕಾಗಿ ಹಂಬಲವನ್ನು ಕಾಪಾಡಿಕೊಂಡಿದ್ದನು. ಅವನು ಯಾವಾಗಲೂ ಆಧ್ಯಾತ್ಮಿಕವಾಗಿ ಜೀವಂತವಾಗಿಯೂ ಕ್ರಿಯಾಶೀಲವಾಗಿಯೂ ಉಳಿದದ್ದರ ಹಾಗೂ ಅನೇಕರಿಗೆ ಉತ್ತೇಜನದ ಚಿಲುಮೆಯಾಗಿ ಇದ್ದದ್ದರ ಗುಟ್ಟು ಏನೆಂಬದು ನಿಮಗೀಗ ತಿಳಿಯಿತೋ?

ಇಂದು ನಮ್ಮ ಬಳಿ ಸಂಪೂರ್ಣ ಬೈಬಲಿನ ವೈಯಕ್ತಿಕ ಪ್ರತಿಯಿರುವುದು ಆಶೀರ್ವಾದವೇ ಸರಿ! ನಮ್ಮಲ್ಲಿ ಕೆಲವರು ಅನೇಕ ಪ್ರತಿಗಳು ಹಾಗೂ ಅನೇಕ ಭಾಷಾಂತರಗಳನ್ನು ಇಟ್ಟುಕೊಂಡಿದ್ದೇವೆ. ಪೌಲನಂತೆ ನಾವು ಶಾಸ್ತ್ರವಚನಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಹಂಬಲವನ್ನು ಬೆಳೆಸಿಕೊಳ್ಳಬೇಕು. ಪೌಲನು ಬರೆದ 14 ದೇವಪ್ರೇರಿತ ಪತ್ರಗಳಲ್ಲಿ ತಿಮೊಥೆಯನಿಗೆ ಬರೆದ ಎರಡನೇ ಪತ್ರ ಕೊನೆಯದ್ದು. ಅವನ ವಿನಂತಿಯು ಆ ಪುಸ್ತಕದ ಕೊನೆಯಲ್ಲಿ ಕಂಡುಬರುತ್ತದೆ. ‘ಸುರುಳಿಗಳನ್ನು, ಮುಖ್ಯವಾಗಿ ಚರ್ಮದ ಹಾಳೆಗಳನ್ನು ತೆಗೆದುಕೊಂಡು ಬಾ’ ಎಂದು ಪೌಲನು ತಿಮೊಥೆಯನಿಗೆ ಮಾಡಿದ ವಿನಂತಿಯು ಬೈಬಲಿನಲ್ಲಿ ದಾಖಲಾಗಿರುವ ಅವನ ಕೊನೆಯ ಆಸೆಗಳಲ್ಲಿ ಒಂದು.

ಪೌಲನಂತೆ ನಂಬಿಕೆಗಾಗಿ ಕೊನೆಯ ತನಕ ಉತ್ತಮವಾದ ಹೋರಾಟವನ್ನು ಮಾಡುವ ಉತ್ಕಟ ಬಯಕೆ ನಿಮಗೂ ಇದೆಯೋ? ಯೆಹೋವನ ಸೇವೆಯಲ್ಲಿ ಕ್ರಿಯಾಶೀಲರಾಗಿರಲು ಹಾಗೂ ಆತನು ಬಯಸುವ ವರೆಗೂ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುತ್ತಾ ಇರಲು ಬಯಸುತ್ತೀರೋ? ಹಾಗಾದರೆ ಪೌಲನು ಕ್ರೈಸ್ತರಿಗೆ ಏನು ಮಾಡುವಂತೆ ಪ್ರೋತ್ಸಾಹಿಸಿದನೋ ಅದನ್ನು ನೀವೂ ಯಾಕೆ ಮಾಡಬಾರದು? ‘ನಿಮ್ಮ ವಿಷಯದಲ್ಲಿಯೂ ನಿಮ್ಮ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವರಾಗಿರಿ’ ಎಂದನವನು. ಹೌದು ಸುರುಳಿಗಳಿಗಿಂತ ಹೆಚ್ಚು ಸುಲಭರೂಪದಲ್ಲಿ, ಹೆಚ್ಚೆಚ್ಚು ಜನರಿಗೆ ಲಭ್ಯವಿರುವ ಬೈಬಲನ್ನು ತ್ರೀವಾಪೇಕ್ಷೆಯಿಂದಲೂ ಕ್ರಮವಾಗಿಯೂ ಅಧ್ಯಯನ ಮಾಡುವ ಮೂಲಕ ನಾವದನ್ನು ಮಾಡೋಣ.—1 ತಿಮೊ. 4:16.

[ಪುಟ 18, 19ರಲ್ಲಿರುವ ಭೂಪಟ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಎಫೆಸ

ತ್ರೋವ

ರೋಮ್‌