ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಕಾಲದಲ್ಲಿ ಸಾವಿಗೆ ಹೆದರುತ್ತಿದ್ದೆ!

ಒಂದು ಕಾಲದಲ್ಲಿ ಸಾವಿಗೆ ಹೆದರುತ್ತಿದ್ದೆ!

ಒಂದು ಕಾಲದಲ್ಲಿ ಸಾವಿಗೆ ಹೆದರುತ್ತಿದ್ದೆ!

ಪ್ಯಾರೊ ಗಾಟ್ಟೀ ಹೇಳಿದಂತೆ

ದೂರದಲ್ಲಿ ಕೇಳಿಬರುತ್ತಿದ್ದ ವಿಮಾನದ ಮೆತ್ತಗಿನ ಗುಡುಗುಡು ಸದ್ದು ನಿಧಾನವಾಗಿ ಗಟ್ಟಿಯಾಗುತ್ತಿತ್ತು. ತಕ್ಷಣವೇ ಜನರಿಗೆ ಅಡಗಿಕೊಳ್ಳಲು ಸೂಚನೆಯಾಗಿ ಸೈರನ್‌ಗಳ ಸದ್ದು ಕೇಳಿಬರುತ್ತಿತ್ತು. ಅದರ ಬೆನ್ನಿಗೇ ಬಾಂಬ್‌ಗಳು ಬೀಳುವ, ಸ್ಫೋಟಗೊಳ್ಳುವ, ವಿನಾಶಮಾಡುವ ಸದ್ದು, ಭೀತಿಯಿಂದ ಕಂಗಾಲಾಗಿದ್ದವರ ಕಿವಿಯ ತಮಟೆಗಳನ್ನು ಒಡೆಯುವಷ್ಟು ಜೋರಾಗಿತ್ತು.

ಇದು ಇಟಲಿಯ ಮಿಲಾನ್‌ ಎಂಬಲ್ಲಿನ 1943/1944ರ ಸನ್ನಿವೇಶ. ಯುವ ಸೈನಿಕನಾಗಿದ್ದ ನನ್ನನ್ನು ಅಲ್ಲಿ ನೇಮಿಸಲಾಗಿತ್ತು. ಹೆಚ್ಚಾಗಿ ನನಗೆ ಮಾನವ ದೇಹಾವಶೇಷಗಳನ್ನು ಸಂಗ್ರಹಿಸುವ ಅಪ್ಪಣೆ ಸಿಗುತ್ತಿತ್ತು. ಈ ದೇಹಾವಶೇಷಗಳು, ವಿಮಾನದಾಳಿಗಳಿಂದ ರಕ್ಷಣೆಕೊಡುವ ಆಶ್ರಯದಾಣಗಳ ಮೇಲೆ ಬಾಂಬ್‌ಗಳು ಬಿದ್ದಾಗ ಒಳಗೆ ಸಿಕ್ಕಿಬಿದ್ದ ಜನರದ್ದಾಗಿರುತ್ತಿತ್ತು. ಅವರ ದೇಹಗಳು ಛಿದ್ರಛಿದ್ರಗೊಂಡು, ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ನಾನು ಕಂಡದ್ದು ಬರೇ ಬೇರೆಯವರ ಸಾವನ್ನು ಮಾತ್ರವಲ್ಲ. ಸ್ವತಃ ನಾನೇ ಕೆಲವೊಂದು ಬಾರಿ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ತಪ್ಪಿಸಿಕೊಂಡದ್ದುಂಟು. ಅಂಥೆಲ್ಲ ಸಂದರ್ಭಗಳಲ್ಲಿ ನಾನು ಪ್ರಾರ್ಥಿಸುತ್ತಾ, ಈ ಹತ್ಯಾಕಾಂಡಗಳಿಂದ ಬಚಾವಾದರೆ ಖಂಡಿತ ನಿನ್ನ ಚಿತ್ತ ಮಾಡುವೆನೆಂದು ದೇವರಿಗೆ ಮಾತುಕೊಟ್ಟಿದ್ದೆ.

ಮರಣಭಯ ತೊಲಗಿತು

ನಾನು ಬೆಳೆದದ್ದು, ಸ್ವಿಸ್‌ ಗಡಿಯ ಬಳಿಯಿರುವ ಇಟಲಿಯ ಕೊಮೊ ಪಟ್ಟಣದಿಂದ ಸುಮಾರು 10 ಕಿ.ಮೀ. ದೂರದ ಹಳ್ಳಿಯೊಂದರಲ್ಲಿ. ಸ್ಪ್ಯಾನಿಷ್‌ ಫ್ಲು ರೋಗ ನನ್ನ ಒಡಹುಟ್ಟಿದವರಲ್ಲಿ ಇಬ್ಬರು ಅಕ್ಕಂದಿರನ್ನು ಬಲಿತೆಗೆದುಕೊಂಡಿತ್ತು. ಬಳಿಕ ನಾನು ಬರೀ 6 ವರ್ಷದವನಾಗಿದ್ದಾಗ ಅಂದರೆ 1930ರಲ್ಲಿ ನನ್ನ ಅಮ್ಮ ಲೂಯಿಜಾ ಸಾವನ್ನಪ್ಪಿದರು. ಹೀಗೆ, ಸಾವು ತರುವ ನೋವು ಹಾಗೂ ಮರಣಭಯ ಎಳೇ ವಯಸ್ಸಿನಲ್ಲೇ ನನ್ನಲ್ಲಿ ಮನೆಮಾಡಿತ್ತು. ಕ್ಯಾಥೊಲಿಕನಾಗಿ ಬೆಳೆಯುತ್ತಿದ್ದ ನಾನು ಎಲ್ಲಾ ಧಾರ್ಮಿಕ ವಿಧಿನಿಯಮಗಳನ್ನು ಪಾಲಿಸುತ್ತಿದ್ದೆ. ಪ್ರತಿವಾರ ತಪ್ಪದೆ ಮಾಸ್‌ಗೆ ಹಾಜರಾಗುತ್ತಿದ್ದೆ. ಆದರೆ ನನಗಿದ್ದ ಮರಣಭಯವು ತೊಲಗಿದ್ದು ಚರ್ಚಿನಲ್ಲಲ್ಲ ಬದಲಾಗಿ ವರ್ಷಗಳಾನಂತರ ಕ್ಷೌರದಂಗಡಿಯಲ್ಲಿ.

IIನೇ ಮಹಾಯುದ್ಧದಿಂದಾಗಿ 1944ರಲ್ಲಿ ಅಪಾರ ಪ್ರಾಣಹಾನಿಯಾಗುತ್ತಾ ಇತ್ತು. ಸಾವಿರಾರು ಇಟ್ಯಾಲಿಯನ್‌ ಸೈನಿಕರು ಯುದ್ಧ ವಲಯದಿಂದ ಪಲಾಯನಗೈದು ಆ ಯುದ್ಧದಲ್ಲಿ ತಟಸ್ಥವಾಗಿ ಉಳಿದಿದ್ದ ಸ್ವಿಟ್ಜರ್‌ಲೆಂಡ್‌ಗೆ ಹೋದರು. ನಾನೂ ಹೋದೆ. ಸ್ವಿಟ್ಜರ್‌ಲೆಂಡ್‌ನಲ್ಲಿ ನಮ್ಮನ್ನು ಬೇರೆಬೇರೆ ನಿರಾಶ್ರಿತರ ಶಿಬಿರಗಳಿಗೆ ಕೊಂಡೊಯ್ಯಲಾಯಿತು. ನನ್ನನ್ನು ಆ ದೇಶದ ಈಶಾನ್ಯಕ್ಕಿರುವ ಶ್ಟಿನಾಕ್‌ ಎಂಬ ಹಳ್ಳಿಯ ಹತ್ತಿರದಲ್ಲಿದ್ದ ಶಿಬಿರಕ್ಕೆ ಕಳುಹಿಸಲಾಯಿತು. ಅಲ್ಲಿ ನಮಗೆ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯ ಕೊಡಲಾಯಿತು. ಶ್ಟಿನಾಕ್‌ನಲ್ಲಿದ್ದ ಕ್ಷೌರಿಕನಿಗೆ ತನ್ನ ಅಂಗಡಿಯಲ್ಲಿ ತಾತ್ಕಾಲಿಕವಾಗಿ ಕೆಲಸಮಾಡಲು ಒಬ್ಬ ಸಹಾಯಕ ಬೇಕಾಗಿದ್ದ. ಆದ್ದರಿಂದ ಒಂದು ತಿಂಗಳ ಮಟ್ಟಿಗೆ ಅವನೊಂದಿಗೆ ವಾಸಮಾಡಿ ಕೆಲಸಮಾಡಲು ನನ್ನನ್ನು ಕಳುಹಿಸಲಾಯಿತು. ನನ್ನ ಬದುಕನ್ನೇ ಬದಲಾಯಿಸಿದ ಒಬ್ಬರ ಪರಿಚಯವಾಗಲು ಆ ಒಂದು ತಿಂಗಳು ಸಾಕಾಗಿತ್ತು.

ಆ ವ್ಯಕ್ತಿಯ ಹೆಸರು ಅಡಾಲ್ಫೊ ಟೆಲಿನಿ. ಅವರು ಆ ಕ್ಷೌರಿಕನ ಗಿರಾಕಿಯಾಗಿದ್ದರು. ಅವರು ಸ್ವಿಟ್ಜರ್‌ಲೆಂಡಿನಲ್ಲಿ ವಾಸಿಸುತ್ತಿದ್ದ ಇಟ್ಯಾಲಿಯನ್‌ ಆಗಿದ್ದರು. ಯೆಹೋವನ ಸಾಕ್ಷಿಯಾಗಿದ್ದರು. ಯೆಹೋವನ ಸಾಕ್ಷಿಗಳ ಬಗ್ಗೆ ನಾನು ಕೇಳಿಯೇ ಇರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಇಟಲಿಯಲ್ಲಿ ಹತ್ತಿರಹತ್ತಿರ 150 ಸಾಕ್ಷಿಗಳು ಇದ್ದರಷ್ಟೇ. ಅಡಾಲ್ಫೊರವರು ನನಗೆ ಬೈಬಲಿನ ಅದ್ಭುತ ಸತ್ಯಗಳು, ಬಹುಕಾಲದ ಜೀವನ ಹಾಗೂ ಶಾಂತಿಯ ಕುರಿತ ಅದರ ವಾಗ್ದಾನಗಳ ಬಗ್ಗೆ ತಿಳಿಸಿದರು. (ಯೋಹಾ. 10:10; ಪ್ರಕ. 21:3, 4) ಯುದ್ಧ, ಮರಣ ಇಲ್ಲದ ಭವಿಷ್ಯತ್ತಿನ ಕುರಿತ ಈ ಸಂದೇಶ ನನಗೆ ತುಂಬ ಇಷ್ಟವಾಯಿತು. ನಿರಾಶ್ರಿತರ ಶಿಬಿರಕ್ಕೆ ಹಿಂದಿರುಗಿದ ಬಳಿಕ ನಾನು ಈ ನಿರೀಕ್ಷೆಯ ಬಗ್ಗೆ ನನ್ನಂಥ ಇನ್ನೊಬ್ಬ ಯುವ ಇಟ್ಯಾಲಿಯನ್‌ಗೆ, ಜುಸ್ಸೆಪ್ಪೆ ಟುಬೀನಿಗೆ ತಿಳಿಸಿದೆ. ಅವನಿಗೂ ಇದು ತುಂಬ ಹಿಡಿಸಿತು. ಅಡಾಲ್ಫೊ ಮತ್ತು ಇತರ ಸಾಕ್ಷಿಗಳು ಆಗಾಗ್ಗೆ ಶಿಬಿರಕ್ಕೆ ಬಂದು ನಮ್ಮನ್ನು ಭೇಟಿಮಾಡುತ್ತಿದ್ದರು.

ಅಡಾಲ್ಫೊ ನನ್ನನ್ನು ಶ್ಟಿನಾಕ್‌ನಿಂದ ಸುಮಾರು 10 ಕಿ.ಮೀ. ದೂರದಲ್ಲಿದ್ದ ಆರ್ಬೊನ್‌ ಎಂಬಲ್ಲಿಗೆ ಕೊಂಡೊಯ್ದರು. ಅಲ್ಲಿ ಸಾಕ್ಷಿಗಳ ಒಂದು ಚಿಕ್ಕ ಗುಂಪು ಇಟ್ಯಾಲಿಯನ್‌ ಭಾಷೆಯಲ್ಲಿ ಕೂಟಗಳನ್ನು ನಡೆಸುತ್ತಿತ್ತು. ಆ ಕೂಟಗಳಲ್ಲಿ ನಾನು ಕೇಳಿದ ಸಂಗತಿಗಳು ಎಷ್ಟು ಇಷ್ಟವಾದವೆಂದರೆ ಮುಂದಿನ ವಾರವೂ ಅಲ್ಲಿಗೆ ನಡೆದುಕೊಂಡು ಹೋದೆ. ಮುಂದೆ, ಜೂರಿಕ್‌ ನಗರದಲ್ಲಿನ ಅಧಿವೇಶನ ಹಾಲ್‌ನಲ್ಲಿ ಸಾಕ್ಷಿಗಳ ಒಂದು ಸಮ್ಮೇಳನಕ್ಕೆ ಹಾಜರಾದೆ. ಅಲ್ಲಿ ಸ್ಲೈಡ್‌ ಕಾರ್ಯಕ್ರಮದಲ್ಲಿ ಹೆಣಗಳ ರಾಶಿಗಳು ಬಿದ್ದಿದ್ದ ಹತ್ಯಾ ಶಿಬಿರಗಳ ಚಿತ್ರಗಳನ್ನು ತೋರಿಸಲಾಯಿತು. ಅದು ನನ್ನ ಮನಕಲಕಿತು. ಅನೇಕ ಮಂದಿ ಜರ್ಮನ್‌ ಸಾಕ್ಷಿಗಳು ಹೀಗೆ ತಮ್ಮ ನಂಬಿಕೆಗಾಗಿ ಹುತಾತ್ಮರಾದರೆಂದು ನನಗೆ ತಿಳಿದುಬಂತು. ಅದೇ ಸಮ್ಮೇಳನದಲ್ಲಿ ನನಗೆ ಮಾರಿಯಾ ಪಿಟ್ಸಾಟೊ ಎಂಬವರ ಪರಿಚಯವಾಯಿತು. ಸಾಕ್ಷಿಯೋಪಾದಿ ಅವರು ಮಾಡುತ್ತಿದ್ದ ಕೆಲಸಗಳ ಕಾರಣ ಇಟಲಿಯ ಫ್ಯಾಸಿಸ್ಟ್‌ ಅಧಿಕಾರಿಗಳು ವಿಧಿಸಿದ್ದ 11 ವರ್ಷದ ಜೈಲುವಾಸವನ್ನು ಅವರು ಅನುಭವಿಸಿದ್ದರು.

ಯುದ್ಧ ಮುಗಿದ ಬಳಿಕ ನಾನು ಇಟಲಿಗೆ ವಾಪಸ್ಸು ಹೋದೆ. ಕೊಮೊ ಪಟ್ಟಣದಲ್ಲಿದ್ದ ಚಿಕ್ಕ ಸಭೆಗೆ ಸೇರಿದೆ. ನನಗೆ ವ್ಯವಸ್ಥಿತಕ್ರಮದಲ್ಲಿ ಬೈಬಲ್‌ ಅಧ್ಯಯನ ನಡೆದಿರದಿದ್ದರೂ ಮೂಲಭೂತ ಸತ್ಯಗಳು ಮನಸ್ಸಿನಲ್ಲಿ ನಿಚ್ಚಳವಾಗಿದ್ದವು. ಮಾರಿಯಾ ಪಿಟ್ಸಾಟೊರವರೂ ಅದೇ ಸಭೆಯಲ್ಲಿದ್ದರು. ಕ್ರೈಸ್ತ ದೀಕ್ಷಾಸ್ನಾನ ಪಡೆದುಕೊಳ್ಳುವುದರ ಅಗತ್ಯದ ಕುರಿತು ನನ್ನೊಂದಿಗೆ ಮಾತಾಡಿದರು. ಅವರು ಸೊಂಡ್ರಿಯೊ ಪ್ರಾಂತದಲ್ಲಿ ಕಾಸ್ಟ್ಯೊನ್‌ ಆಂಡೆವೆನೊ ಎಂಬಲ್ಲಿ ವಾಸಿಸುತ್ತಿದ್ದ ಮಾರ್ಸೆಲೊ ಮಾರ್ಟಿನೆಲಿ ಎಂಬವರನ್ನು ಭೇಟಿಯಾಗುವಂತೆ ನನಗೆ ಹೇಳಿದರು. ಮಾರ್ಸೆಲೊ ಒಬ್ಬ ನಂಬಿಗಸ್ತ ಅಭಿಷಿಕ್ತ ಸಹೋದರರಾಗಿದ್ದರು. ಅವರು ಇಟಲಿಯ ಸರ್ವಾಧಿಕಾರದ ಆಳ್ವಿಕೆಯ ಸಮಯದಲ್ಲಿ 11 ವರ್ಷ ಸೆರೆವಾಸದ ಶಿಕ್ಷೆ ಅನುಭವಿಸಿದ್ದರು. ಸೈಕಲಲ್ಲಿ 80 ಕಿ.ಮೀ. ಕ್ರಮಿಸಿ ಅವರನ್ನು ಭೇಟಿಯಾದೆ.

ಮಾರ್ಸೆಲೊರವರು ನನಗೆ ದೀಕ್ಷಾಸ್ನಾನಕ್ಕಾಗಿರುವ ಅರ್ಹತೆಗಳನ್ನು ಬೈಬಲಿನಿಂದ ವಿವರಿಸಿದರು. ಆಮೇಲೆ ನಾವು ಪ್ರಾರ್ಥನೆಮಾಡಿ, ಆಡ್ಡಾ ನದಿಗೆ ಹೋದೆವು. ಅಲ್ಲಿ ನನ್ನ ದೀಕ್ಷಾಸ್ನಾನವಾಯಿತು. 1946ರ ಸೆಪ್ಟೆಂಬರ್‌ ತಿಂಗಳ ಆ ದಿನ ನನಗೆ ಬಹು ವಿಶೇಷವಾಗಿತ್ತು! ಯೆಹೋವನ ಸೇವೆಮಾಡುವ ನಿರ್ಣಯ ತೆಗೆದುಕೊಂಡದ್ದರಿಂದ ಮತ್ತು ನನಗೀಗ ಭವಿಷ್ಯಕ್ಕಾಗಿ ದೃಢವಾದ ನಿರೀಕ್ಷೆಯಿದೆಯೆಂಬ ಸಂಗತಿಯಿಂದ ಎಷ್ಟು ಸಂಭ್ರಮದಿಂದಿದ್ದೆ ಎಂದರೆ ನಾನು ಆ ದಿನ 160 ಕಿ.ಮೀ. ದೂರ ಸೈಕಲ್‌ ತುಳಿದದ್ದೇ ಗೊತ್ತಾಗಲಿಲ್ಲ!

ಯುದ್ಧ ನಿಂತ ನಂತರ ಇಟಲಿಯಲ್ಲಿ ಮೊದಲ ಸಮ್ಮೇಳನವು 1947ರ ಮೇ ತಿಂಗಳಲ್ಲಿ ಮಿಲಾನ್‌ನಲ್ಲಿ ನಡೆಯಿತು. ಸುಮಾರು 700 ಮಂದಿ ಹಾಜರಿದ್ದರು. ಅವರಲ್ಲಿ ಅನೇಕರು ಫ್ಯಾಸಿಸ್ಟ್‌ ಆಳ್ವಿಕೆಯಿಂದ ಹಿಂಸೆಗೊಳಗಾಗಿದ್ದ ಸಾಕ್ಷಿಗಳಾಗಿದ್ದರು. ಈ ಸಮ್ಮೇಳನದಲ್ಲಿ ಒಂದು ಅಸಾಮಾನ್ಯ ಸಂಗತಿ ನಡೆಯಿತು. ನಿರಾಶ್ರಿತರ ಶಿಬಿರದಲ್ಲಿ ನಾನು ಯಾರಿಗೆ ಸಾಕ್ಷಿಕೊಟ್ಟಿದ್ದೆನೊ ಆ ಜುಸ್ಸೆಪ್ಪೆ ಟುಬೀನಿ ದೀಕ್ಷಾಸ್ನಾನದ ಭಾಷಣ ಕೊಟ್ಟು, ಆಮೇಲೆ ತಾನೂ ದೀಕ್ಷಾಸ್ನಾನ ತೆಗೆದುಕೊಂಡ!

ಆ ಸಮ್ಮೇಳನದಲ್ಲಿ ನನಗೆ, ಬ್ರೂಕ್ಲಿನ್‌ ಬೆತೆಲಿನಿಂದ ಬಂದಿದ್ದ ಸಹೋದರ ನೇತನ್‌ ನಾರ್‌ರನ್ನು ಭೇಟಿಯಾಗುವ ಸದವಕಾಶ ಸಿಕ್ಕಿತು. ಅವರು ನನಗೂ ಜುಸ್ಸೆಪ್ಪೆಗೂ ನಮ್ಮ ಬದುಕನ್ನು ದೇವರ ಸೇವೆಯಲ್ಲಿ ಬಳಸುವಂತೆ ಪ್ರೋತ್ಸಾಹಿಸಿದರು. ಆದ್ದರಿಂದ ಪೂರ್ಣ ಸಮಯದ ಸೇವೆಯನ್ನು ಒಂದು ತಿಂಗಳೊಳಗೆ ಆರಂಭಿಸಲು ನಿರ್ಣಯಿಸಿದೆ. ಮನೆಗೆ ಬಂದ ತಕ್ಷಣ ಈ ನಿರ್ಣಯದ ಬಗ್ಗೆ ನನ್ನ ಕುಟುಂಬದವರಿಗೆ ಹೇಳಿದೆ. ಅವರೆಲ್ಲರೂ ನನ್ನ ಮನಸ್ಸು ಬದಲಾಯಿಸಲು ಪ್ರಯತ್ನಿಸಿದರು. ಆದರೆ ನನ್ನ ನಿರ್ಣಯ ದೃಢವಾಗಿತ್ತು. ಆದ್ದರಿಂದ ಒಂದು ತಿಂಗಳ ಬಳಿಕ ಮಿಲಾನ್‌ನಲ್ಲಿದ್ದ ಬೆತೆಲಿನಲ್ಲಿ ನನ್ನ ಸೇವೆ ಆರಂಭಿಸಿದೆ. ಅಲ್ಲಿ ನಾಲ್ಕು ಮಂದಿ ಮಿಷನೆರಿಗಳಿದ್ದರು: ಜುಸ್ಸೆಪ್ಪೆ (ಜೋಸೆಫ್‌) ರೊಮಾನೊ ಮತ್ತವರ ಪತ್ನಿ ಆ್ಯಂಜಲೀನಾ; ಕಾರ್ಲೊ ಬೆನಾಂಟೀ ಮತ್ತವರ ಪತ್ನಿ ಕೊಸ್ಟಾನ್ಸಾ. ಆ ಬೆತೆಲ್‌ ಕುಟುಂಬದ ಐದನೇ ಸದಸ್ಯ ಆಗಷ್ಟೇ ಸೇರಿಕೊಂಡಿದ್ದ ಜುಸ್ಸೆಪ್ಪೆ ಟುಬೀನಿ ಆಗಿದ್ದ. ಆರನೆಯವ ನಾನು.

ಬೆತೆಲ್‌ ಸೇವೆಯ ಒಂದು ತಿಂಗಳ ಬಳಿಕ ನನ್ನನ್ನು ಸರ್ಕಿಟ್‌ ಮೇಲ್ವಿಚಾರಕನಾಗಿ ನೇಮಿಸಲಾಯಿತು. ಹೀಗೆ ಆ ದೇಶದ ಪ್ರಪ್ರಥಮ ಇಟ್ಯಾಲಿಯನ್‌ ಸರ್ಕಿಟ್‌ ಮೇಲ್ವಿಚಾರಕನಾದೆ. 1946ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಿಂದ ಇಟಲಿಗೆ ಬಂದಿದ್ದ ಮೊಟ್ಟಮೊದಲ ಮಿಷನೆರಿ ಸಹೋದರ ಜಾರ್ಜ್‌ ಫ್ರೇಡ್ಯಾನೆಲಿ ಈಗಾಗಲೇ ಸಂಚರಣ ಕೆಲಸದಲ್ಲಿದ್ದರು. ಅವರು ಕೆಲವು ವಾರಗಳ ವರೆಗೆ ನನಗೆ ತರಬೇತಿ ಕೊಟ್ಟರು. ಆಮೇಲೆ ನಾನೇ ಈ ಕೆಲಸ ನಿಭಾಯಿಸಲಾರಂಭಿಸಿದೆ. ನಾನು ಭೇಟಿಯಿತ್ತ ಪ್ರಥಮ ಸಭೆ ಫಯನ್ಸಾ ನನಗಿನ್ನೂ ನೆನಪಿದೆ. ಯಾಕೆ ಗೊತ್ತಾ? ಅಲ್ಲಿ ವರೆಗೆ ನಾನು ಯಾವುದೇ ಸಭೆಯಲ್ಲಿ ಒಂದೇ ಒಂದು ಭಾಷಣ ಕೊಟ್ಟಿರಲಿಲ್ಲ! ಹಾಗಿದ್ದರೂ ಹಾಜರಿದ್ದವರೆಲ್ಲರಿಗೆ ಪೂರ್ಣ ಸಮಯದ ಸೇವೆ ಮಾಡುವುದರ ಬಗ್ಗೆ ಯೋಚಿಸುವಂತೆ ಪ್ರೋತ್ಸಾಹಿಸಿದೆ. ಅಲ್ಲಿ ಯುವಜನರೂ ಇದ್ದರು. ಸಮಯಾನಂತರ ಅವರಲ್ಲಿ ಕೆಲವರು ಇಟ್ಯಾಲಿಯನ್‌ ಕ್ಷೇತ್ರದಲ್ಲಿ ಭಾರೀ ಜವಾಬ್ದಾರಿಯ ನೇಮಕಗಳನ್ನು ನಿರ್ವಹಿಸಿದರು.

ಸಂಚರಣ ಮೇಲ್ವಿಚಾರಕನಾಗಿ ನಾನು ಆರಂಭಿಸಿದ ಜೀವನ ರೋಮಾಂಚಕಾರಿಯಾಗಿತ್ತು. ಅದರಲ್ಲಿ ಅಚ್ಚರಿಗಳು, ಹೊಂದಾಣಿಕೆಗಳು, ಸವಾಲುಗಳು, ಆನಂದ ತುಂಬಿತ್ತು. ಈ ನೇಮಕದಲ್ಲಿ ಪ್ರಿಯ ಸೋದರಸೋದರಿಯರಿಂದ ತುಂಬ ಪ್ರೀತಿಯನ್ನೂ ಪಡೆದೆ.

ಯುದ್ಧಾನಂತರ ಇಟಲಿಯ ಧಾರ್ಮಿಕ ಸನ್ನಿವೇಶ

ಆ ಕಾಲದಲ್ಲಿ ಇಟಲಿಯಲ್ಲಿದ್ದ ಧಾರ್ಮಿಕ ಸನ್ನಿವೇಶದ ಬಗ್ಗೆ ಸ್ವಲ್ಪ ಹೇಳುತ್ತೇನೆ. ಆಗೆಲ್ಲ ಕ್ಯಾಥೊಲಿಕ್‌ ಚರ್ಚಿನದ್ದೇ ದರ್ಬಾರು. ಅದರ ವಿರುದ್ಧ ಯಾರೂ ಸೊಲ್ಲೆತ್ತುತ್ತಿರಲಿಲ್ಲ. ಹೀಗಿರಲಾಗಿ, 1948ರಲ್ಲಿ ಒಂದು ಹೊಸ ಶಾಸನವನ್ನು ಜಾರಿಗೆ ತರಲಾಯಿತಾದರೂ ಸಾಕ್ಷಿಗಳು ಮುಕ್ತವಾಗಿ ಸಾರುವುದನ್ನು ತಡೆಗಟ್ಟುವ ಫ್ಯಾಸಿಸ್ಟ್‌ ನಿಯಮಗಳನ್ನು ಹಿಂದೆಗೆಯಲಾದದ್ದು 1956ರಲ್ಲೇ. ಎಷ್ಟೋ ಸಲ ಸರ್ಕಿಟ್‌ ಸಮ್ಮೇಳನಗಳು ಪಾದ್ರಿಗಳಿಂದಾಗಿ ಅರ್ಧಕ್ಕೆ ನಿಂತುಹೋಗುತ್ತಿದ್ದವು. ಆದರೆ ಕೆಲವೊಮ್ಮೆ ಅವರ ಪ್ರಯತ್ನಗಳು ನೆಲಕಚ್ಚುತ್ತಿದ್ದವು. 1948ರಲ್ಲಿ ಮಧ್ಯ ಇಟಲಿಯ ಒಂದು ಚಿಕ್ಕ ಪಟ್ಟಣವಾದ ಸಲ್ಮೊನಾ ಎಂಬಲ್ಲಿ ಹೀಗೆಯೇ ಆಯಿತು.

ಒಂದು ನಾಟಕ ಮಂದಿರದಲ್ಲಿ ಸಮ್ಮೇಳನ ನಡೆಯುತ್ತಾ ಇತ್ತು. ಭಾನುವಾರ ಬೆಳಗ್ಗಿನ ಕಾರ್ಯಕ್ರಮಕ್ಕೆ ನಾನು ಅಧ್ಯಕ್ಷನಾಗಿದ್ದೆ. ಜುಸ್ಸೆಪ್ಪೆ ರೊಮಾನೊ ಸಾರ್ವಜನಿಕ ಭಾಷಣ ಕೊಟ್ಟರು. ಅಲ್ಲಿ ಸೇರಿಬಂದಿದ್ದ ಜನರ ಸಂಖ್ಯೆ 2,000. ಆ ಕಾಲಕ್ಕೆ ಸಭಿಕರ ಸಂಖ್ಯೆ ತುಂಬ ದೊಡ್ಡದ್ದೇ. ಏಕೆಂದರೆ ಇಡೀ ದೇಶದ ಪ್ರಚಾರಕರ ಸಂಖ್ಯೆ 500ನ್ನೂ ತಲಪಿರಲಿಲ್ಲ! ಭಾಷಣವು ಕೊನೆಗೊಳ್ಳುತ್ತಿದ್ದಂತೆ, ಸಭಿಕರಲ್ಲಿದ್ದ ಇಬ್ಬರು ಪಾದ್ರಿಗಳು ಛೂಬಿಟ್ಟ ಯುವಕನೊಬ್ಬ ವೇದಿಕೆಗೆ ಹಾರಿದ. ಗಲಭೆ ಹುಟ್ಟಿಸುವ ಉದ್ದೇಶದಿಂದ ಗಟ್ಟಿಯಾಗಿ ಅರಚಲಾರಂಭಿಸಿದ. ನಾನು ಕೂಡಲೇ ಅವನಿಗೆ, “ನಿನಗೇನಾದರೂ ಹೇಳಲಿಕ್ಕಿದ್ದರೆ ನೀನೇ ಒಂದು ಹಾಲ್‌ ಬಾಡಿಗೆಗೆ ತೆಗೆದುಕೊಂಡು ಅದನ್ನು ಅಲ್ಲಿ ಹೇಳು” ಎಂದೆ. ಸಭಿಕರಿಗೂ ಅವನು ಇಷ್ಟವಾಗಲಿಲ್ಲ. ಅವನಿಗೆ ಧಿಕ್ಕಾರ ಸೂಚಿಸುವ ಅವರೆಲ್ಲರ ಗಟ್ಟಿಯಾದ ಧ್ವನಿಯಲ್ಲಿ ಅವನ ಧ್ವನಿ ಅಡಗಿಹೋಯಿತು. ಆಗ ಆ ಯುವಕ ವೇದಿಕೆಯಿಂದ ಜಿಗಿದು ಎಲ್ಲೊ ಮಾಯವಾದ.

ಆ ದಿನಗಳಲ್ಲಿ ಪ್ರಯಾಣ ಮಾಡುವುದೇ ಒಂದು ದೊಡ್ಡ ಸಾಹಸ. ಕೆಲವೊಮ್ಮೆ ನಾನು ಒಂದು ಸಭೆಯಿಂದ ಇನ್ನೊಂದು ಸಭೆಗೆ ನಡೆದುಕೊಂಡೇ ಹೋಗುತ್ತಿದ್ದೆ, ಇಲ್ಲವೆ ಸೈಕಲಿನಲ್ಲಿ ಹೋಗುತ್ತಿದ್ದೆ, ಸುಸ್ಥಿತಿಯಲ್ಲಿಲ್ಲದ ಮತ್ತು ಜನರಿಂದ ಕಿಕ್ಕಿರಿದಿರುವ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದೆ ಇಲ್ಲವೆ ಟ್ರೇನ್‌ನಲ್ಲಿ ಹೋಗುತ್ತಿದ್ದೆ. ಒಮ್ಮೊಮ್ಮೆ ಕುದುರೆಲಾಯದಲ್ಲೊ, ಷೆಡ್ಡುಗಳಲ್ಲೊ ಉಳುಕೊಳ್ಳುತ್ತಿದ್ದೆ. ಯುದ್ಧ ಅಂತ್ಯಗೊಂಡು ಹೆಚ್ಚು ಸಮಯ ಕಳೆದಿರಲಿಲ್ಲ. ಹೆಚ್ಚಿನ ಇಟ್ಯಾಲಿಯನರು ಬಡವರಾಗಿದ್ದರು. ಅಲ್ಲದೆ ಸಹೋದರರೂ ಕಡಿಮೆಯಿದ್ದರು ಮತ್ತು ಅವರೂ ಅನುಕೂಲಸ್ಥರಾಗಿರಲಿಲ್ಲ. ಹೀಗಿದ್ದರೂ ನಾನು ಯೆಹೋವನ ಸೇವೆಯಲ್ಲಿ ನನ್ನ ಬದುಕನ್ನು ಆನಂದಿಸುತ್ತಿದ್ದೆ.

ಗಿಲ್ಯಡ್‌ ತರಬೇತಿ

1950ರಲ್ಲಿ ನನಗೂ ಜುಸ್ಸೆಪ್ಪೆ ಟುಬೀನಿಗೂ ಗಿಲ್ಯಡ್‌ ಮಿಷನೆರಿ ಶಾಲೆಯ 16ನೇ ತರಗತಿಗೆ ಹಾಜರಾಗುವ ಆಮಂತ್ರಣ ಸಿಕ್ಕಿತು. ಇಂಗ್ಲಿಷ್‌ ಭಾಷೆ ನನಗೆ ಆರಂಭದಿಂದಲೇ ಕಬ್ಬಿಣದ ಕಡಲೆಯಂತಿತ್ತು. ಅದನ್ನು ಅರ್ಥಮಾಡಲು ಕೈಲಾದುದೆಲ್ಲವನ್ನೂ ಮಾಡಿದೆ. ಹಾಗಿದ್ದರೂ ಅದೊಂದು ದೊಡ್ಡ ಸವಾಲಾಗಿತ್ತು. ನಾವು ಇಡೀ ಬೈಬಲನ್ನು ಇಂಗ್ಲಿಷ್‌ನಲ್ಲಿ ಓದಬೇಕಾಗಿತ್ತು. ಗಟ್ಟಿಯಾಗಿ ಓದಿ ಪ್ರ್ಯಾಕ್ಟಿಸ್‌ ಮಾಡಲೆಂದು ನಾನು ಒಮ್ಮೊಮ್ಮೆ ಮಧ್ಯಾಹ್ನದೂಟಕ್ಕೂ ಹೋಗುತ್ತಿರಲಿಲ್ಲ. ನಾನು ಭಾಷಣ ಕೊಡುವ ಸರದಿಯೂ ಬಂತು. ನನ್ನ ಭಾಷಣದ ಬಗ್ಗೆ ನಮ್ಮ ಶಿಕ್ಷಕರು ಹೇಳಿದ ಮಾತು ಈಗಲೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ: “ನಿಮ್ಮ ಹಾವಭಾವಗಳು, ಉತ್ಸಾಹ ಅತ್ಯುತ್ತಮವಾಗಿತ್ತು. ಆದರೆ ನಿಮ್ಮ ಇಂಗ್ಲಿಷ್‌ ಸ್ವಲ್ಪವೂ ಅರ್ಥವಾಗಲಿಲ್ಲ!” ನನ್ನ ಸ್ಥಿತಿ ಹೀಗಿದ್ದರೂ ಗಿಲ್ಯಡ್‌ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಆ ಬಳಿಕ ನನ್ನನ್ನೂ ಜುಸ್ಸೆಪ್ಪೆಯನ್ನೂ ವಾಪಸ್‌ ಇಟಲಿಗೆ ನೇಮಿಸಲಾಯಿತು. ನಮಗೆ ಸಿಕ್ಕಿದ ಈ ಹೆಚ್ಚಿನ ತರಬೇತಿಯಿಂದ ಸಹೋದರರ ಸೇವೆಮಾಡಲು ನಾವಿಬ್ಬರೂ ಹೆಚ್ಚು ಸನ್ನದ್ಧರಾಗಿದ್ದೆವು.

1955ರಲ್ಲಿ ನಾನು ಲಿಡ್ಯಾಳನ್ನು ಮದುವೆಯಾದೆ. ಏಳು ವರ್ಷಗಳ ಹಿಂದೆ ನಾನೇ ಅವಳ ದೀಕ್ಷಾಸ್ನಾನದ ಭಾಷಣ ಕೊಟ್ಟಿದ್ದೆ. ಆಕೆಯ ತಂದೆ ಡೊಮೆನಿಕೊ, ಫ್ಯಾಸಿಸ್ಟ್‌ ಆಳ್ವಿಕೆಯ ಸಮಯದಲ್ಲಿ ಹಿಂಸೆಗೊಳಗಾಗಿದ್ದರು ಮತ್ತು ಮೂರು ವರ್ಷ ಗಡೀಪಾರು ಮಾಡಲ್ಪಟ್ಟಿದ್ದರು. ಹಾಗಿದ್ದರೂ ಈ ನಮ್ಮ ಪ್ರಿಯ ಸಹೋದರರು ತಮ್ಮ ಏಳೂ ಮಂದಿ ಮಕ್ಕಳು ಸತ್ಯವನ್ನು ತಮ್ಮದಾಗಿಸುವಂತೆ ಸಹಾಯಮಾಡಿದ್ದರು. ಲಿಡ್ಯಾಳೂ ಸತ್ಯದ ಪರವಾಗಿ ತುಂಬ ಹೋರಾಡಿದಾಕೆ. ಮನೆಮನೆ ಹೋಗಿ ಸಾರಲು ಸಾಕ್ಷಿಗಳಿಗಿರುವ ಕಾನೂನುಬದ್ಧ ಹಕ್ಕಿಗೆ ಅಂಗೀಕಾರ ಸಿಗುವ ಎಷ್ಟೋ ಮುಂಚೆ ಆಕೆ ಮೂರು ಕೋರ್ಟ್‌ ಕೇಸ್‌ಗಳಲ್ಲಿ ಒಳಗೂಡಿದ್ದಳು. ನಮ್ಮ ಮದುವೆಯ ಆರು ವರ್ಷಗಳ ಬಳಿಕ ನಮ್ಮ ಮೊದಲ ಮಗ ಬೆನ್ಯಾಮೀನೊ ಹುಟ್ಟಿದ. 1972ರಲ್ಲಿ ಇನ್ನೊಬ್ಬ ಮಗ ಮಾರ್ಕೊ ಹುಟ್ಟಿದ. ಅವರಿಬ್ಬರೂ ತಮ್ಮ ಕುಟುಂಬಗಳ ಸಮೇತ ಯೆಹೋವನನ್ನು ಹುರುಪಿನಿಂದ ಸೇವಿಸುತ್ತಿರುವುದನ್ನು ನೋಡುವಾಗ ನನಗೆ ತುಂಬ ಹರ್ಷವಾಗುತ್ತದೆ.

ಯೆಹೋವನ ಸೇವೆಯಲ್ಲಿ ಸಕ್ರಿಯನು

ಇತರರ ಸೇವೆಯಲ್ಲಿ ಕಳೆದಂಥ ಸಂತೋಷಭರಿತ ಬದುಕಿನಲ್ಲಿ ನನಗೆ ಅನೇಕ ಸ್ಮರಣೀಯ ಅನುಭವಗಳಿವೆ. ಉದಾಹರಣೆಗೆ 1980ರ ದಶಕದ ಆರಂಭದಲ್ಲಿ ಇಟಲಿಯ ಆಗಿನ ಅಧ್ಯಕ್ಷ ಸಾಂಡ್ರೊ ಪರ್ಟಿನಿಯವರಿಗೆ ನನ್ನ ಮಾವ ಸಾಕ್ಷಿಕೊಡುವ ಉದ್ದೇಶದಿಂದ ಅವರನ್ನು ಭೇಟಿಯಾಗುವ ಅವಕಾಶಕ್ಕಾಗಿ ವಿನಂತಿಸಿ ಪತ್ರಬರೆದರು. ನನ್ನ ಮಾವನಿಗೆ ಶ್ರೀಮಾನ್‌ ಸಾಂಡ್ರೊರವರ ಪರಿಚಯವಿದದ್ದು ಹೇಗೆಂದರೆ, ಫ್ಯಾಸಿಸ್ಟ್‌ ಸರ್ವಾಧಿಕಾರದ ಆಳ್ವಿಕೆಯ ಕಾಲದಲ್ಲಿ ವೆಂಟೊಟೆನೆ ಎಂಬ ದ್ವೀಪದಲ್ಲಿ ಅವರಿಬ್ಬರೂ ಸೆರೆವಾಸಿಗಳಾಗಿದ್ದರು. ಆ ಆಳ್ವಿಕೆಯ ಶತ್ರುಗಳೆಂದು ನೆನಸಲಾಗುತ್ತಿದ್ದವರನ್ನು ಅಲ್ಲಿ ಬಂಧಿಸಿಡಲಾಗಿತ್ತು. ನನ್ನ ಮಾವನವರಿಗೆ ಅಧ್ಯಕ್ಷರನ್ನು ಭೇಟಿಯಾಗಲು ಅನುಮತಿ ಸಿಕ್ಕಿದಾಗ ನಾನೂ ಅವರ ಜೊತೆ ಹೋದೆ. ಅಲ್ಲಿ ನಮ್ಮನ್ನು ಆದರದಿಂದ ಬರಮಾಡಲಾಯಿತು. ನಮಗೆ ಈ ರೀತಿಯ ಉಪಚಾರ ಎಂದೂ ಸಿಕ್ಕಿರಲಿಲ್ಲ. ಅಧ್ಯಕ್ಷರು ನನ್ನ ಮಾವನನ್ನು ಆಲಿಂಗಿಸಿ ವಂದಿಸಿದರು. ನಂತರ ನಾವು ಅವರೊಂದಿಗೆ ನಮ್ಮ ನಂಬಿಕೆಯ ಬಗ್ಗೆ ಮಾತಾಡಿ ಕೆಲವು ಸಾಹಿತ್ಯ ಕೊಟ್ಟು ಬಂದೆವು.

1991ರಲ್ಲಿ ನನ್ನ ಸರ್ಕಿಟ್‌ ಕೆಲಸವನ್ನು ನಿಲ್ಲಿಸಿಬಿಟ್ಟೆ. ಸಂಚರಣ ಮೇಲ್ವಿಚಾರಕನಾಗಿ 44 ವರ್ಷಗಳ ಸೇವೆಯಲ್ಲಿ ಇಟಲಿಯಾದ್ಯಂತ ಸಭೆಗಳನ್ನು ಭೇಟಿಮಾಡಿದ್ದೆ. ಮುಂದಿನ ನಾಲ್ಕು ವರ್ಷ ಎಸೆಂಬ್ಲಿ ಹಾಲ್‌ ಮೇಲ್ವಿಚಾರಕನಾಗಿ ಸೇವೆಸಲ್ಲಿಸಿದೆ. ಗಂಭೀರ ಕಾಯಿಲೆಯಿಂದಾಗಿ ನನ್ನ ಚಟುವಟಿಕೆಯನ್ನು ಕಡಿಮೆಗೊಳಿಸಬೇಕಾಗಿ ಬಂದಾಗ ಆ ಸೇವೆಯನ್ನು ನಿಲ್ಲಿಸಿದೆ. ಹಾಗಿದ್ದರೂ ಯೆಹೋವನ ಅಪಾತ್ರ ದಯೆಯ ಕಾರಣ ನಾನೀಗಲೂ ಪೂರ್ಣ ಸಮಯದ ಸೇವೆಯಲ್ಲೇ ಇದ್ದೇನೆ. ಸುವಾರ್ತೆ ಸಾರಲು, ಬೋಧಿಸಲು ನನ್ನಿಂದಾದುದೆಲ್ಲವನ್ನು ಮಾಡಲು ಪ್ರಯತ್ನಿಸುತ್ತೇನೆ. ಸದ್ಯಕ್ಕೆ ಕೆಲವೊಂದು ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೇನೆ. ನನ್ನ ಭಾಷಣಗಳಲ್ಲಿ ಈಗಲೂ ಒಂದು ರೀತಿಯ ‘ಸ್ಫೋಟಕ’ ಉತ್ಸಾಹವಿದೆಯೆಂದು ಸಹೋದರರು ಹೇಳುತ್ತಾರೆ. ಈ ಇಳಿವಯಸ್ಸಿನಲ್ಲಿ ನನ್ನ ಚೈತನ್ಯ ಕುಂದದೇ ಇರುವುದಕ್ಕೆ ನಾನು ಯೆಹೋವನಿಗೆ ಆಭಾರಿ.

ಯುವಕನಾಗಿದ್ದಾಗ ನಾನು ಮರಣಭಯದ ಬಿಗಿಮುಷ್ಟಿಯಲ್ಲಿದ್ದೆ. ಆದರೆ ಬೈಬಲಿನ ನಿಷ್ಕೃಷ್ಟ ಜ್ಞಾನ ಗಳಿಸುವುದರಿಂದ ನನಗೆ ನಿತ್ಯಜೀವದ ಅಥವಾ ಯೇಸು ಹೇಳಿದಂಥ ಬಹುಕಾಲದ ಜೀವನದ ಖಚಿತ ನಿರೀಕ್ಷೆ ಸಿಕ್ಕಿದೆ. (ಯೋಹಾ. 10:10) ಅದಕ್ಕಾಗಿಯೇ ಅಂದರೆ ಶಾಂತಿ, ಭದ್ರತೆ, ಸಂತೋಷಭರಿತವಾದ ತುಂಬು ಜೀವನದ ಜೊತೆಗೆ ಯೆಹೋವನ ಹೇರಳ ಆಶೀರ್ವಾದಗಳಿಗಾಗಿ ಎದುರುನೋಡುತ್ತಿದ್ದೇನೆ. ಯಾರ ನಾಮಧಾರಿಗಳಾಗುವ ಸದವಕಾಶ ನಮಗಿದೆಯೊ ಆ ನಮ್ಮ ಪ್ರೀತಿಯ ಸೃಷ್ಟಿಕರ್ತನಿಗೆ ಘನಮಾನ ಸಲ್ಲುತ್ತಾ ಇರಲಿ.—ಕೀರ್ತ. 83:18.

[ಪುಟ 22, 23ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸ್ವಿಟ್ಜರ್‌ಲೆಂಡ್‌

ಬರ್ನ್‌

ಜೂರಿಕ್‌

ಆರ್ಬೊನ್‌

ಶ್ಟಿನಾಕ್‌

ಇಟಲಿ

ರೋಮ್‌

ಕೊಮೊ

ಮಿಲಾನ್‌

ಆಡ್ಡಾ ನದಿ

ಕಾಸ್ಟ್ಯೊನ್‌ ಆಂಡೆವೆನೊ

ಫಯನ್ಸಾ

ಸಲ್ಮೊನಾ

ವೆಂಟೊಟೆನೆ

[ಪುಟ 22ರಲ್ಲಿರುವ ಚಿತ್ರ]

ಗಿಲ್ಯಡ್‌ಗೆ ಹೋಗುತ್ತಿರುವಾಗ

[ಪುಟ 22ರಲ್ಲಿರುವ ಚಿತ್ರ]

ಗಿಲ್ಯಡ್‌ನಲ್ಲಿ ಜುಸ್ಸೆಪ್ಪೆಯೊಂದಿಗೆ

[ಪುಟ 23ರಲ್ಲಿರುವ ಚಿತ್ರ]

ನಮ್ಮ ಮದುವೆ ದಿನದಂದು

[ಪುಟ 23ರಲ್ಲಿರುವ ಚಿತ್ರ]

55ಕ್ಕೂ ಹೆಚ್ಚು ವರ್ಷಗಳಿಂದ ನನಗೆ ಒತ್ತಾಸೆ ನೀಡಿರುವ ಪ್ರೀತಿಯ ಮಡದಿ