ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀರ್ಘಾವಧಿಯ ಕಾನೂನು ಹೋರಾಟಕ್ಕೆ ಸಂದ ಜಯ!

ದೀರ್ಘಾವಧಿಯ ಕಾನೂನು ಹೋರಾಟಕ್ಕೆ ಸಂದ ಜಯ!

ದೀರ್ಘಾವಧಿಯ ಕಾನೂನು ಹೋರಾಟಕ್ಕೆ ಸಂದ ಜಯ!

ಆಹೋರಾಟ ಆರಂಭಗೊಂಡದ್ದು 1995ರಲ್ಲಿ. 15 ವರ್ಷಗಳ ವರೆಗೆ ಮುಂದುವರಿಯಿತು. ಅಷ್ಟೂ ವರ್ಷ ರಷ್ಯಾದಲ್ಲಿದ್ದ ನಿಜ ಕ್ರೈಸ್ತರು ನಿರಂತರವಾಗಿ ಧಾರ್ಮಿಕ ಸ್ವಾತಂತ್ರ್ಯದ ವಿರೋಧಿಗಳಿಂದ ದಾಳಿಗೊಳಗಾಗುತ್ತಿದ್ದರು. ಮಾಸ್ಕೋ ಹಾಗೂ ಹೊರವಲಯಗಳಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ಹೇರಲೇಬೇಕೆಂಬ ದೃಢಸಂಕಲ್ಪ ವಿರೋಧಿಗಳದ್ದಾಗಿತ್ತು. ಇಂಥ ಕರಾಳ ಪರಿಸ್ಥಿತಿಯಲ್ಲೂ ಸಮಗ್ರತೆಯನ್ನು ಕಾಪಾಡಿಕೊಂಡ ರಷ್ಯಾದ ನಮ್ಮ ಪ್ರಿಯ ಸಹೋದರ ಸಹೋದರಿಯರನ್ನು ಯೆಹೋವನು ಕಾನೂನು ವಿಜಯದೊಂದಿಗೆ ಆಶೀರ್ವದಿಸಿದನು. ಆದರೆ ಈ ಹೋರಾಟ ಆರಂಭವಾದದ್ದು ಹೇಗೆ?

ಕೊನೆಗೂ ಸ್ವಾತಂತ್ರ್ಯ!

ರಷ್ಯಾದ ನಮ್ಮ ಸಹೋದರರು 1917ರಲ್ಲಿ ಕಳೆದುಕೊಂಡಿದ್ದ ಧಾರ್ಮಿಕ ಸ್ವಾತಂತ್ರ್ಯಗಳನ್ನು 1990ರ ದಶಕಾರ್ಧದಲ್ಲಿ ಮರಳಿ ಪಡೆದರು. 1991ರಲ್ಲಿ ಸೋವಿಯಟ್‌ ಒಕ್ಕೂಟದ ಸರ್ಕಾರವು ಅವರನ್ನು ಒಂದು ಅಧಿಕೃತ ಧರ್ಮವಾಗಿ ನೋಂದಾಯಿಸಿತು. ಸೋವಿಯಟ್‌ ಒಕ್ಕೂಟವು ವಿಭಜನೆಗೊಂಡಾಗ ರಷ್ಯಾ ಪ್ರತ್ಯೇಕ ದೇಶವಾಯಿತು. ಆಗ ರಷ್ಯಾದ ಹೊಸ ಸರ್ಕಾರವು ಸಹ ಯೆಹೋವನ ಸಾಕ್ಷಿಗಳನ್ನು ಅಧಿಕೃತ ಧರ್ಮವಾಗಿ ನೋಂದಾಯಿಸಿತು. ಮಾತ್ರವಲ್ಲ, ಮುಂಚಿನ ಸರ್ಕಾರವು ಸಾಕ್ಷಿಗಳನ್ನು ಹಿಂಸೆಗೊಳಪಡಿಸುತ್ತಿತ್ತೆಂದು ಒಪ್ಪಿಕೊಂಡಿತು. 1993ರಲ್ಲಿ ಮಾಸ್ಕೋದ ನ್ಯಾಯಾಂಗ ಇಲಾಖೆಯು ಸಾಕ್ಷಿಗಳನ್ನು ‘ಮಾಸ್ಕೋದ ಯೆಹೋವನ ಸಾಕ್ಷಿಗಳ ಸಮುದಾಯ’ ಎಂದು ಕಾನೂನುಬದ್ಧವಾಗಿ ನೋಂದಣಿಮಾಡಿತು. ಅದೇ ವರ್ಷದಲ್ಲಿ ರಷ್ಯಾದ ಹೊಸ ಸಂವಿಧಾನ ಜಾರಿಗೆ ಬಂತು ಮತ್ತು ಅದು ಧಾರ್ಮಿಕ ಸ್ವಾತಂತ್ರ್ಯದ ಭರವಸೆಯನ್ನಿತ್ತಿತು. ಆಗ ಒಬ್ಬ ಸಹೋದರರು ಆನಂದಾಶ್ಚರ್ಯದಿಂದ, “ನಾವಿಂಥ ಸ್ವಾತಂತ್ರ್ಯವನ್ನು ನೋಡುವೆವೆಂದು ಕನಸ್ಸುಮನಸ್ಸಲ್ಲೂ ನೆನಸಿರಲಿಲ್ಲ. ಇದಕ್ಕಾಗಿ ನಾವು 50 ವರ್ಷಗಳಿಂದ ಕಾಯುತ್ತಿದ್ದೆವು.” ಎಂದು ಹೇಳಿದರು.

ರಷ್ಯಾದ ಸಹೋದರ ಸಹೋದರಿಯರು ಆ ‘ಅನುಕೂಲ ಸಮಯವನ್ನು’ ಸದುಪಯೋಗಿಸುತ್ತಾ ಕೂಡಲೆ ತಮ್ಮ ಸಾರುವ ಚಟುವಟಿಕೆಗಳನ್ನು ತೀವ್ರಗೊಳಿಸಿದರು. ಅನೇಕ ಜನರು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. (2 ತಿಮೊ. 4:2) “ಜನರು ಧರ್ಮದಲ್ಲಿ ತುಂಬ ಆಸಕ್ತರಾಗಿದ್ದರು” ಎಂದಳು ಒಬ್ಬಾಕೆ. ಸ್ವಲ್ಪದರಲ್ಲೇ ಪ್ರಚಾರಕರ, ಪಯನೀಯರರ, ಸಭೆಗಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಎಷ್ಟೆಂದರೆ 1990ರಲ್ಲಿ ಮಾಸ್ಕೋದಲ್ಲಿ ಕೇವಲ 300ರಷ್ಟಿದ್ದ ಸಾಕ್ಷಿಗಳ ಸಂಖ್ಯೆ 1995ರೊಳಗೆ 5,000ಕ್ಕಿಂತ ಹೆಚ್ಚಾಯಿತು! ಹೀಗೆ ಯೆಹೋವನ ಸೇವಕರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಧಾರ್ಮಿಕ ಸ್ವಾತಂತ್ರ್ಯದ ವಿರೋಧಿಗಳು ಚುರುಕುಗೊಂಡರು. ಇವರು 1990ನೇ ದಶಕದ ಮಧ್ಯಭಾಗದಲ್ಲಿ ಕಾನೂನು ಕದನವನ್ನು ಚಿತಾಯಿಸುವ ಮೂಲಕ ಸಾಕ್ಷಿಗಳ ಮೇಲೆ ಆಕ್ರಮಣಮಾಡಿದರು. ಈ ಕಾನೂನು ಹೋರಾಟಕ್ಕೆ ತೆರೆಬೀಳುವ ಮುಂಚೆ ಅದು ದೀರ್ಘಕಾಲೀನ ನಾಲ್ಕು ಹಂತಗಳಲ್ಲಿ ತೆವಳುತ್ತಾ ಸಾಗಿತು.

ಅಪರಾಧಿಗಳೆಂಬ ಆರೋಪದ ಮೇರೆಗೆ ತನಿಖೆ

ಕಾನೂನು ಕದನದ ಮೊದಲನೇ ಹಂತವು 1995ರ ಜೂನ್‌ನಲ್ಲಿ ಆರಂಭಗೊಂಡಿತು. ರಷ್ಯಾದ ಆರ್ತಡಾಕ್ಸ್‌ ಚರ್ಚ್‌ನ ಬೆಂಬಲಿಗರಾಗಿದ್ದ ಮಾಸ್ಕೋದ ಜನರ ಗುಂಪೊಂದು ನಮ್ಮ ಸಹೋದರರು ಅಪರಾಧ ಕೃತ್ಯಗಳಲ್ಲಿ ಒಳಗೂಡಿದ್ದಾರೆಂಬ ದೂರು ದಾಖಲಿಸಿತು. ಹೆಂಡತಿ ಅಥವಾ ಮಕ್ಕಳು ಸಾಕ್ಷಿಗಳಾದ ಕಾರಣ ಸಿಟ್ಟುಗೊಂಡ ಕುಟುಂಬ ಸದಸ್ಯರ ಪರವಾಗಿ ತಾವು ಧ್ವನಿಯೆತ್ತುತ್ತಿದ್ದೇವೆಂದು ಆ ಗುಂಪಿನವರು ಹೇಳಿಕೊಂಡರು. 1996ರ ಜೂನ್‌ನಲ್ಲಿ ಸರ್ಕಾರಿ ಅಧಿಕಾರಿಗಳು ಆ ದೂರಿನ ಮೇರೆಗೆ ತನಿಖೆ ಆರಂಭಿಸಿದರು. ಆದರೆ ಅದನ್ನು ಬೆಂಬಲಿಸುವ ಯಾವುದೇ ಪುರಾವೆ ಅವರಿಗೆ ಸಿಗಲಿಲ್ಲ. ಹಾಗಿದ್ದರೂ ಆ ಗುಂಪು ಪುನಃ ನಮ್ಮ ಸಹೋದರರ ಮೇಲೆ ಅಪರಾಧ ಕೃತ್ಯದ ಆರೋಪ ಹೊರಿಸಿ ಇನ್ನೊಂದು ದೂರು ದಾಖಲಿಸಿತು. ಸರ್ಕಾರಿ ಅಧಿಕಾರಿಗಳು ಮತ್ತೊಂದು ವಿಚಾರಣೆ ನಡೆಸಿದರು. ಆದರೆ ಎಲ್ಲ ದೋಷಾರೋಪಗಳು ಸುಳ್ಳೆಂದು ರುಜುವಾದವು. ಇಷ್ಟಾದರೂ ಆ ವಿರೋಧಿಗಳು ಮತ್ತೆ ಅದೇ ಆಪಾದನೆಯ ಮೇಲೆ ಮೂರನೇ ಬಾರಿ ದೂರು ದಾಖಲಿಸಿದರು. ಮಾಸ್ಕೋದ ಯೆಹೋವನ ಸಾಕ್ಷಿಗಳನ್ನು ಪುನಃ ತನಿಖೆ ಮಾಡಲಾಯಿತು. ಆದರೆ ಅಭಿಯೋಜಕರು (ಪ್ರಾಸಿಕ್ಯೂಟರ್‌) ಮತ್ತದೇ ತೀರ್ಮಾನಕ್ಕೆ ಬಂದರು. ಅಂದರೆ ಕ್ರಿಮಿನಲ್‌ ಮೊಕದ್ದಮೆ ಹೂಡಲು ಯಾವುದೇ ಆಧಾರಗಳಿಲ್ಲವೆಂದು ಹೇಳಿದರು. ಆ ವಿರೋಧಿಗಳು ಅಷ್ಟಕ್ಕೆ ಸುಮ್ಮನಾಗಲಿಲ್ಲ. ನಾಲ್ಕನೇ ಬಾರಿಯೂ ಅದೇ ದೂರು ದಾಖಲಿಸಿದರು. ಆಗಲೂ ಅಭಿಯೋಜಕರಿಗೆ ಯಾವ ಸಾಕ್ಷ್ಯಾಧಾರಗಳು ಸಿಗಲಿಲ್ಲ. ಆಶ್ಚರ್ಯವೇನೆಂದರೆ ಆ ಗುಂಪು ಪುನಃ ವಿಚಾರಣೆ ನಡೆಸುವಂತೆ ಕೇಳಿಕೊಂಡಿತು. ಕೊನೆಗೆ 1998, ಏಪ್ರಿಲ್‌ 13ರಂದು ಹೊಸ ತನಿಖೆದಾರರು ಆ ಪ್ರಕರಣವನ್ನು ಕೊನೆಗೊಳಿಸಿದರು.

“ಆದರೆ ತದನಂತರ ವಿಚಿತ್ರವಾದದ್ದೇನೋ ಸಂಭವಿಸಿತು” ಎನ್ನುತ್ತಾರೆ ಆ ಪ್ರಕರಣವನ್ನು ನಿರ್ವಹಿಸುತ್ತಿದ್ದ ವಕೀಲರೊಬ್ಬರು. ಐದನೇ ಬಾರಿ ತನಿಖೆ ನಡೆಸಿದ ಅಭಿಯೋಜಕರ ಕಛೇರಿಯ ಪ್ರತಿನಿಧಿಯೊಬ್ಬಾಕೆ ನಮ್ಮ ಸಹೋದರರ ಮೇಲಿದ್ದ ಅಪರಾಧ ಕೃತ್ಯದ ಆರೋಪಕ್ಕೆ ಯಾವುದೇ ಆಧಾರವಿಲ್ಲವೆಂದು ಒಪ್ಪಿಕೊಂಡರೂ ಅವರ ವಿರುದ್ಧ ಸಿವಿಲ್‌ ದಾವೆಯನ್ನು ಹೂಡಬಹುದೆಂದು ಸಲಹೆಯಿತ್ತರು. ಮಾಸ್ಕೋದ ಯೆಹೋವನ ಸಾಕ್ಷಿಗಳ ಸಮುದಾಯವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆಯೆಂದು ಆ ಪ್ರತಿನಿಧಿ ಆಪಾದನೆ ಹೊರಿಸಿದರು. ನಾರ್ದರ್ನ್‌ ಅಡ್‌ಮಿನಿಸ್ಟ್ರೇಟಿವ್‌ ಸರ್ಕಿಟ್‌ ಆಫ್‌ ಮಾಸ್ಕೋವಿನ ಅಭಿಯೋಜಕರು ಅದನ್ನು ಅನುಮೋದಿಸಿ ಸಿವಿಲ್‌ ದಾವೆಯನ್ನು ದಾಖಲಿಸಿದರು. * 1998, ಸೆಪ್ಟೆಂಬರ್‌ 29ರಂದು ಮಾಸ್ಕೋದ ಗೊಲೊವಿನ್‌ಸ್ಕಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಯಿತು. ಇದುವೇ ಎರಡನೇ ಹಂತದ ಆರಂಭ.

ನ್ಯಾಯಾಲಯದಲ್ಲಿ ಬೈಬಲ್‌

ಅಂದು ಉತ್ತರ ಮಾಸ್ಕೋದ ನ್ಯಾಯಾಲಯ ಜನರಿಂದ ಕಿಕ್ಕಿರಿದಿತ್ತು. ಅಭಿಯೋಜಕರಾದ ಟಾಟ್ಯಾನ ಕನ್ಡ್ರಟ್ಯೇವ ಅವರು ಸಾಕ್ಷಿಗಳ ವಿರುದ್ಧ ತಮ್ಮ ವಾದ ಮಂಡಿಸಲು 1997ರಲ್ಲಿ ಅನುಮೋದಿಸಲಾದ ರಾಷ್ಟ್ರೀಯ ನಿಯಮವನ್ನು ಉಪಯೋಗಿಸಿದರು. * ಆ ನಿಯಮವು ಆರ್ತಡಾಕ್ಸ್‌ ಕ್ರೈಸ್ತತ್ವ, ಇಸ್ಲಾಂ ಧರ್ಮ, ಯೆಹೂದಿಮತ ಮತ್ತು ಬೌದ್ಧಮತಗಳಷ್ಟೇ ಪರಂಪರಾಗತವಾಗಿ ಬಂದ ಧರ್ಮಗಳೆಂದು ಹೇಳುತ್ತದೆ. ಈ ನಿಯಮದಿಂದಾಗಿ ಇತರ ಧರ್ಮಗಳಿಗೆ ಕಾನೂನುಬದ್ಧ ಮನ್ನಣೆ ಪಡೆಯಲು ಕಷ್ಟವಾಯಿತು. ಮಾತ್ರವಲ್ಲ ಹಗೆತನವನ್ನು ವರ್ಧಿಸುವ ಧರ್ಮಗಳ ಮೇಲೆ ನಿಷೇಧ ಹೇರಲು ಆ ನಿಯಮ ನ್ಯಾಯಾಲಯಕ್ಕೆ ಅನುಮತಿ ನೀಡುತ್ತದೆ. ಯೆಹೋವನ ಸಾಕ್ಷಿಗಳು ದ್ವೇಷವನ್ನು ಪ್ರವರ್ಧಿಸುತ್ತಾರೆ, ಕುಟುಂಬಗಳನ್ನು ಒಡೆಯುತ್ತಾರೆ ಎಂದು ಅಭಿಯೋಜಕರು ಸುಳ್ಳಾರೋಪ ಹೊರಿಸುತ್ತಾ ಮೇಲ್ಕಂಡ ನಿಯಮದಡಿಯಲ್ಲಿ ಅವರ ಮೇಲೆ ನಿಷೇಧ ಹೇರಬೇಕೆಂದು ಕೇಳಿಕೊಂಡರು.

ಆದರೆ ನಮ್ಮ ಸಹೋದರರ ಪರವಾಗಿ ವಾದಿಸಿದ ವಕೀಲರೊಬ್ಬರು ಆ ಅಭಿಯೋಜಕರಿಗೆ, “ಮಾಸ್ಕೋ ಕ್ರೈಸ್ತ ಸಭೆಯಲ್ಲಿ ಯಾರು ನಿಯಮವನ್ನು ಉಲ್ಲಂಘಿಸಿದ್ದಾರೆ ಮತ್ತು ದ್ವೇಷಕ್ಕೆ ಪ್ರಚೋದನೆ ಕೊಟ್ಟಿದ್ದಾರೆಂದು ಹೇಳುವಿರಾ?” ಎಂದು ಕೇಳಿದಾಗ ಅವರಿಂದ ಒಬ್ಬರ ಹೆಸರನ್ನೂ ಹೇಳಲಾಗಲಿಲ್ಲ. ಪ್ರತಿಯಾಗಿ ಯೆಹೋವನ ಸಾಕ್ಷಿಗಳ ಸಾಹಿತ್ಯ ಧಾರ್ಮಿಕ ವೈರತ್ವವನ್ನು ಪ್ರೇರಿಸುತ್ತದೆಂದು ವಾದಿಸತೊಡಗಿದರು. ಮತ್ತದನ್ನು ಸಾಬೀತುಪಡಿಸಲು ಕಾವಲಿನಬುರುಜು, ಎಚ್ಚರ! ಪತ್ರಿಕೆಗಳಿಂದ ಮತ್ತು ಇತರ ಪ್ರಕಾಶನಗಳಿಂದ (ಮೇಲಿನ ಚಿತ್ರ ನೋಡಿ) ಕೆಲವು ಭಾಗಗಳನ್ನು ಓದಿಹೇಳಿದರು. ಈ ಪ್ರಕಾಶನಗಳು ಯಾವ ವಿಧದಲ್ಲಿ ವೈರತ್ವಕ್ಕೆ ಕಾರಣವಾಗಿವೆ ಎಂದು ಕೇಳಿದಾಗ ಅವರು, “ಯೆಹೋವನ ಸಾಕ್ಷಿಗಳದ್ದು ಮಾತ್ರ ಸತ್ಯ ಧರ್ಮವೆಂದು ಅವು ಕಲಿಸುತ್ತವೆ” ಎಂದರು.

ಆಗ ನಮ್ಮ ಸಹೋದರರೇ ಆದ ವಕೀಲರೊಬ್ಬರು ಒಂದು ಬೈಬಲನ್ನು ನ್ಯಾಯಾಧೀಶರಿಗೂ ಇನ್ನೊಂದನ್ನು ಅಭಿಯೋಜಕರಿಗೂ ಕೊಟ್ಟು ಎಫೆಸ 4:5 ಓದಿದರು. “ಒಬ್ಬನೇ ಕರ್ತ, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ” ಎಂದು ಆ ವಚನ ಹೇಳುತ್ತದೆ. ನ್ಯಾಯಾಧೀಶ, ಅಭಿಯೋಜಕ, ವಕೀಲ ಎಲ್ಲರೂ ತಮ್ಮ ಕೈಯಲ್ಲಿದ್ದ ಬೈಬಲಿನಿಂದ ಯೋಹಾನ 17:18, ಯಾಕೋಬ 1:27 ಮತ್ತು ಇತರ ವಚನಗಳನ್ನು ಚರ್ಚಿಸಿದರು. ಅನಂತರ ನ್ಯಾಯಾಧೀಶರು ಆ ಅಭಿಯೋಜಕರಿಗೆ, “ಈ ವಚನಗಳು ಧಾರ್ಮಿಕ ವೈಷಮ್ಯವನ್ನು ಪ್ರೇರಿಸುತ್ತವೋ?” ಎಂದು ಕೇಳಿದರು. ಅದಕ್ಕವರು, ಬೈಬಲಿನ ಬಗ್ಗೆ ತನಗೆ ಅಷ್ಟೇನೂ ಗೊತ್ತಿಲ್ಲವೆಂದು ಹೇಳಿದರು. ಆಗ ನಮ್ಮ ವಕೀಲರು ಯೆಹೋವನ ಸಾಕ್ಷಿಗಳನ್ನು ತೀವ್ರವಾಗಿ ಟೀಕಿಸುವ ರಷ್ಯಾದ ಆರ್ತಡಾಕ್ಸ್‌ ಚರ್ಚ್‌ನ ಸಾಹಿತ್ಯವನ್ನು ತೋರಿಸಿ, “ಈ ಹೇಳಿಕೆಗಳು ನಿಯಮೋಲ್ಲಂಘನೆ ಆಗಿವೆಯೋ?” ಎಂದು ಕೇಳಿದರು. ಅದಕ್ಕೆ ಆ ಅಭಿಯೋಜಕರು “ಈ ಬಗ್ಗೆ ತನಗೆ ಹೆಚ್ಚು ಗೊತ್ತಿಲ್ಲ” ಎಂದರು.

ಮುಗ್ಗರಿಸಿದ ಆಪಾದನೆ

ಸಾಕ್ಷಿಗಳು ಕುಟುಂಬಗಳನ್ನು ಮುರಿಯುತ್ತಾರೆಂದು ಆ ಅಭಿಯೋಜಕರು ದೂರುಹೊರಿಸಿದರು. ಅದಕ್ಕೊಂದು ಉದಾಹರಣೆ ಕೊಡುತ್ತಾ ಸಾಕ್ಷಿಗಳು ಕ್ರಿಸ್ಮಸ್‌ ಹಾಗೂ ಇತರ ಹಬ್ಬಗಳನ್ನು ಆಚರಿಸುವುದಿಲ್ಲವೆಂದು ಹೇಳಿದರು. ಆದರೆ, ಬಳಿಕ ಅವರು ರಷ್ಯಾದ ಕಾನೂನು ಪ್ರಜೆಗಳು ಕ್ರಿಸ್ಮಸ್‌ ಆಚರಿಸಲೇಬೇಕೆಂದು ಕಡ್ಡಾಯಪಡಿಸುವುದಿಲ್ಲವೆಂದು ಒಪ್ಪಿಕೊಂಡರು. ರಷ್ಯಾದ ಪ್ರಜೆಗಳೆಲ್ಲರಿಗೆ, ರಷ್ಯಾದ ಯೆಹೋವನ ಸಾಕ್ಷಿಗಳಿಗೆ ಸಹ ಆ ವಿಷಯದಲ್ಲಿ ಆಯ್ಕೆಯಿದೆ. ಆ ಅಭಿಯೋಜಕರು ಮತ್ತೆ ವಾದಿಸುತ್ತಾ, ‘ಸಾಕ್ಷಿಗಳು ಮಕ್ಕಳಿಗೆ ಸಾಮಾನ್ಯವಾಗಿ ಬೇಕಾದ ವಿಶ್ರಾಂತಿಯನ್ನೇ ತಕ್ಕೊಳ್ಳಲು ಬಿಡುವುದಿಲ್ಲ ಮತ್ತು ಅವರಿಗೆ ಮೋಜುಮಾಡಲೂ ಸ್ವಾತಂತ್ರ್ಯ ಕೊಡುವುದಿಲ್ಲ’ ಎಂದು ಹೇಳಿದರು. ಆದರೆ ಆ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಸಾಕ್ಷಿ ಹೆತ್ತವರಿಂದ ಬೆಳೆಸಲ್ಪಟ್ಟ ಮಕ್ಕಳನ್ನು ತಾನೆಂದೂ ಮಾತಾಡಿಸಿಲ್ಲವೆಂದು ಒಪ್ಪಿಕೊಂಡರು. ಯೆಹೋವನ ಸಾಕ್ಷಿಗಳ ಕೂಟಗಳಿಗೆ ಎಂದಾದರೂ ಹಾಜರಾದದ್ದುಂಟೋ ಎಂದು ವಕೀಲೆಯೊಬ್ಬಳು ಕೇಳಿದಾಗ ಅವರು, “ಅದರ ಆವಶ್ಯಕತೆ ನನಗಿಲ್ಲ” ಎಂದರು.

ಅಲ್ಲದೆ ಅಭಿಯೋಜಕರು ಮನೋಶಾಸ್ತ್ರದ ಪ್ರೊಫೆಸರರನ್ನು ಸಾಕ್ಷಿಯಾಗಿ ಮುಂತಂದರು. ಆ ಪ್ರೊಫೆಸರರು ನಮ್ಮ ಸಾಹಿತ್ಯದ ಓದುವಿಕೆಯು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆಂದು ಹೇಳಿದರು. ಆದರೆ ಅವರು ನ್ಯಾಯಾಲಯಕ್ಕೆ ಕೊಟ್ಟ ಲಿಖಿತ ಹೇಳಿಕೆಗಳು ಮಾಸ್ಕೋದ ಆರ್ತಡಾಕ್ಸ್‌ ಚರ್ಚ್‌ನ ಮುಖಂಡರು ತಯಾರಿಸಿದ ದಸ್ತಾವೇಜಿನಲ್ಲಿರುವ ಹೇಳಿಕೆಗಳಂತೆಯೇ ಇರುವುದನ್ನು ನಮ್ಮ ಪರವಾಗಿ ವಾದಿಸುತ್ತಿದ್ದ ವಕೀಲೆ ಕಂಡುಹಿಡಿದರು. ಆಗ ಪ್ರೊಫೆಸರರು ಕೆಲವು ಭಾಗಗಳನ್ನು ಅದರಿಂದ ನಕಲು ಮಾಡಿರುವುದಾಗಿ ಒಪ್ಪಿಕೊಂಡರು. ಇನ್ನೂ ಪ್ರಶ್ನಿಸಲಾದಾಗ ತಾನು ಇದುವರೆಗೆ ಯಾವುದೇ ಯೆಹೋವನ ಸಾಕ್ಷಿಗೆ ಚಿಕಿತ್ಸೆ ನೀಡಿಲ್ಲವೆಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಮನೋಶಾಸ್ತ್ರದ ಇನ್ನೊಬ್ಬ ಪ್ರೊಫೆಸರರು ತಾನು ಮಾಸ್ಕೋದಲ್ಲಿ ನೂರಕ್ಕಿಂತಲೂ ಹೆಚ್ಚು ಸಾಕ್ಷಿಗಳನ್ನು ಅಧ್ಯಯನಮಾಡಿರುವ ಸಾಕ್ಷ್ಯ ಒದಗಿಸಿದರು. ಅವರು ಉತ್ತಮ ಮಾನಸಿಕ ಸ್ವಾಸ್ಥ್ಯ ಉಳ್ಳವರೆಂದೂ ಸಾಕ್ಷಿಗಳಾದ ನಂತರ ಇತರ ಧರ್ಮಗಳ ಬಗ್ಗೆ ಮುಂಚೆಗಿಂತ ಹೆಚ್ಚು ಸಹಿಷ್ಣುತೆಯುಳ್ಳವರಾಗಿದ್ದಾರೆಂದೂ ಹೇಳಿದರು.

ವಿಜಯ—ಆದರೆ ಅಂತಿಮವಲ್ಲ

ಯೆಹೋವನ ಸಾಕ್ಷಿಗಳ ಸಾಹಿತ್ಯವನ್ನು ಅಧ್ಯಯನಮಾಡಿ ಪರೀಕ್ಷಿಸಲು 1999ರ ಮಾರ್ಚ್‌ 12ರಂದು ನ್ಯಾಯಾಧೀಶರು ಐದು ಮಂದಿ ಸುಶಿಕ್ಷಿತ ವ್ಯಕ್ತಿಗಳನ್ನು ನೇಮಿಸಿದರು ಮತ್ತು ತೀರ್ಪನ್ನು ತಡೆಹಿಡಿದರು. ಆದರೆ ಇದಕ್ಕೂ ಮುಂಚೆ ರಷ್ಯಾದ ನ್ಯಾಯಾಂಗ ಇಲಾಖೆ ಸಹ ನಮ್ಮ ಸಾಹಿತ್ಯವನ್ನು ಅಧ್ಯಯನ ಮಾಡಲು ಸುಶಿಕ್ಷಿತರ ಗುಂಪೊಂದಕ್ಕೆ ಆದೇಶ ಕೊಟ್ಟಿತ್ತು. ಈ ಗುಂಪು ನಮ್ಮ ಪ್ರಕಾಶನಗಳಲ್ಲಿ ಹಾನಿಕರವಾದದ್ದೇನೂ ಇಲ್ಲವೆಂದು 1999ರ ಏಪ್ರಿಲ್‌ 15ರಂದು ವರದಿ ಒಪ್ಪಿಸಿತು. ಆದ್ದರಿಂದ 1999, ಏಪ್ರಿಲ್‌ 29ರಂದು ನ್ಯಾಯಾಂಗ ಇಲಾಖೆಯು ಯೆಹೋವನ ಸಾಕ್ಷಿಗಳ ರಾಷ್ಟ್ರೀಯ ನೋಂದಣಿಯನ್ನು ನವೀಕರಿಸಿತು. ಈ ಹೊಸ ಧನಾತ್ಮಕ ವರದಿ ಬಂದ ನಂತರವೂ ಮಾಸ್ಕೋ ನ್ಯಾಯಾಲಯವು ಆ ಐದು ಜನರ ಗುಂಪು ಸಾಕ್ಷಿಗಳ ಸಾಹಿತ್ಯವನ್ನು ಪರೀಕ್ಷಿಸಬೇಕೆಂದು ಪಟ್ಟುಹಿಡಿಯಿತು. ಇದೆಂಥ ವಿಪರ್ಯಾಸ! ಒಂದೆಡೆ ರಷ್ಯಾದ ನ್ಯಾಯಾಂಗ ಇಲಾಖೆಯು ಯೆಹೋವನ ಸಾಕ್ಷಿಗಳು ನಿಯಮಪಾಲಕರಾಗಿದ್ದಾರೆಂದೂ ಅವರದ್ದು ಅಧಿಕೃತ ಧರ್ಮವೆಂದೂ ರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಿತ್ತು. ಆದರೆ ಅದೇ ಸಮಯದಲ್ಲಿ ಇನ್ನೊಂದೆಡೆ ಮಾಸ್ಕೋದ ನ್ಯಾಯಾಂಗ ಇಲಾಖೆಯು, ಸಾಕ್ಷಿಗಳು ನಿಯಮ ಉಲ್ಲಂಘಿಸುತ್ತಿದ್ದಾರೆಂಬ ದೋಷಾರೋಪದ ಮೇರೆಗೆ ಅವರನ್ನು ತನಿಖೆ ಮಾಡುತ್ತಿತ್ತು!

ವಿಚಾರಣೆ ಪುನಃ ಆರಂಭವಾಗಲು ಸುಮಾರು ಎರಡು ವರ್ಷ ಹಿಡಿಯಿತು. 2001, ಫೆಬ್ರವರಿ 23ರಂದು ನ್ಯಾಯಾಧೀಶರಾದ ಎಲೀನ ಪ್ರಕೋರೀಚೇವ ಅವರು ತೀರ್ಪು ಕೊಟ್ಟರು. ಅಧ್ಯಯನ ಮಾಡಲು ನೇಮಿಸಲಾಗಿದ್ದ ಆ ಐದು ಮಂದಿ ಕೊಟ್ಟ ವರದಿಯ ಮೇರೆಗೆ, “ಮಾಸ್ಕೋದಲ್ಲಿ ಯೆಹೋವನ ಸಾಕ್ಷಿಗಳ ಧಾರ್ಮಿಕ ಸಮುದಾಯದ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ಅವರ ಮೇಲೆ ನಿಷೇಧ ಹೇರಲು ಯಾವುದೇ ಆಧಾರಗಳಿಲ್ಲ” ಎಂದು ಹೇಳಿದರು. ಕೊನೆಗೂ ನಮ್ಮ ಸಹೋದರರು ನಿರಪರಾಧಿಗಳೆಂಬದು ಕಾನೂನುಬದ್ಧವಾಗಿ ಸಾಬೀತಾಯಿತು! ಹಾಗಿದ್ದರೂ ಅಭಿಯೋಜಕರು ಆ ತೀರ್ಪನ್ನು ಒಪ್ಪದೆ ಮಾಸ್ಕೋ ನಗರ ನ್ಯಾಯಾಲಯಕ್ಕೆ ಅಪೀಲು ಮಾಡಿದರು. ಮೂರು ತಿಂಗಳ ನಂತರ ಅಂದರೆ 2001, ಮೇ 30ರಂದು ನ್ಯಾಯಾಧೀಶರಾದ ಪ್ರಕೋರೀಚೇವ ಅವರ ತೀರ್ಪನ್ನು ನಗರ ನ್ಯಾಯಾಲಯವು ರದ್ದುಮಾಡಿತು. ಮಾತ್ರವಲ್ಲ, ಬೇರೊಬ್ಬ ನ್ಯಾಯಾಧೀಶರ ಮೇಲ್ವಿಚಾರಣೆಯಡಿಯಲ್ಲಿ ಅದೇ ಅಭಿಯೋಜಕರು ಮರುವಿಚಾರಣೆ ಆರಂಭಿಸುವಂತೆ ಆದೇಶ ಕೊಟ್ಟಿತು. ಮೂರನೇ ಹಂತವು ಆರಂಭವಾಗಲಿತ್ತು.

ಸೋಲು—ಆದರೆ ಅಂತಿಮವಲ್ಲ

2001, ಅಕ್ಟೋಬರ್‌ 30ರಂದು ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶ ವಿರಾ ಡುಬಿನ್‌ಸ್ಕಿಯ ಅವರು ಮರುವಿಚಾರಣೆ ಆರಂಭಿಸಿದರು. * ಯೆಹೋವನ ಸಾಕ್ಷಿಗಳು ದ್ವೇಷವನ್ನು ಪ್ರವರ್ಧಿಸುತ್ತಾರೆಂದು ಅಭಿಯೋಜಕರಾದ ಕನ್ಡ್ರಟ್ಯೇವರವರು ಪುನಃ ಆರೋಪ ಹೊರಿಸಿದರು. ಈ ಬಾರಿ ಆ ಆರೋಪಕ್ಕೆ ಹೊಸರೂಪ ಕೊಡುತ್ತಾ ಸಾಕ್ಷಿಗಳ ಮೇಲೆ ನಿಷೇಧ ತರಬೇಕೆಂಬ ತನ್ನ ಮನವಿಗೆ ಕಾರಣ ಮಾಸ್ಕೋದಲ್ಲಿನ ಸಾಕ್ಷಿಗಳ ಹಕ್ಕುಗಳನ್ನು ಸಂರಕ್ಷಿಸುವುದೇ ಎಂದು ಹೇಳಿದರು. ಈ ಅಸಂಬದ್ಧ ಹೇಳಿಕೆಗೆ ಪ್ರತಿಯಾಗಿ ಮಾಸ್ಕೋದಲ್ಲಿದ್ದ ಎಲ್ಲ 10,000 ಸಾಕ್ಷಿಗಳು ಕೂಡಲೆ ಒಂದು ಅಹವಾಲಿಗೆ ಸಹಿಹಾಕಿ ಅಭಿಯೋಜಕರು ಪ್ರಸ್ತಾಪಿಸಿದ ಆ “ಸುರಕ್ಷೆ” ತಮಗೆ ಬೇಡವೆಂದು ನ್ಯಾಯಾಲಯಕ್ಕೆ ಮನವಿಮಾಡಿದರು.

ಸಾಕ್ಷಿಗಳು ತಪ್ಪುಮಾಡಿದ್ದಾರೆಂಬದಕ್ಕೆ ತಾನು ಯಾವುದೇ ಸಾಕ್ಷ್ಯಗಳನ್ನು ಕೊಡುವ ಅಗತ್ಯವಿಲ್ಲವೆಂದು ಆ ಅಭಿಯೋಜಕರು ಹೇಳಿದರು. ಏಕೆಂದರೆ ಈ ಮೊಕದ್ದಮೆ ಸಾಕ್ಷಿಗಳ ವಿರುದ್ಧವಲ್ಲ ಬದಲಾಗಿ ಅವರ ಸಾಹಿತ್ಯ ಮತ್ತು ನಂಬಿಕೆಗಳ ವಿರುದ್ಧವಾಗಿದೆ ಎಂದು ಹೇಳಿದರು. ಮಾತ್ರವಲ್ಲ ಸಾಕ್ಷಿ ಹೇಳಲು ರಷ್ಯಾದ ಆರ್ತಡಾಕ್ಸ್‌ ಚರ್ಚ್‌ನ ಸದಸ್ಯನೊಬ್ಬನನ್ನು ಕರೆಯುವುದಾಗಿ ಹೇಳಿದರು. ಇದು ತಾನೇ, ಸಾಕ್ಷಿಗಳ ಮೇಲೆ ನಿಷೇಧ ತರುವ ಸಂಚಿನ ಹಿಂದೆ ಪಾದ್ರಿವರ್ಗದವರ ಕೈವಾಡವಿದೆಯೆಂದು ತೋರಿಸಿಕೊಟ್ಟಿತು. 2003, ಮೇ 22ರಂದು ನ್ಯಾಯಾಧೀಶರು ಪುನಃ ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ಅಧ್ಯಯನಮಾಡುವಂತೆ ಪರಿಣತರ ತಂಡವೊಂದಕ್ಕೆ ಆದೇಶವಿತ್ತರು.

ಆ ತಂಡ ಕೊಟ್ಟ ವರದಿಯನ್ನು ಪರಿಶೀಲಿಸುವ ನಿಟ್ಟಿನಲ್ಲಿ 2004ರ ಫೆಬ್ರವರಿ 17ರಂದು ವಿಚಾರಣೆ ಪುನಃ ಆರಂಭವಾಯಿತು. ನಮ್ಮ ಪ್ರಕಾಶನಗಳು “ಕುಟುಂಬವನ್ನು ಮತ್ತು ವಿವಾಹದ ಏರ್ಪಾಡನ್ನು ಸಂರಕ್ಷಿಸುವಂತೆ” ಓದುಗರನ್ನು ಪ್ರೋತ್ಸಾಹಿಸುತ್ತವೆ ಎಂದೂ ನಮ್ಮ ಪ್ರಕಾಶನಗಳು ದ್ವೇಷವನ್ನು ಹುಟ್ಟಿಸುತ್ತವೆಂಬ ಆರೋಪ “ನಿರಾಧಾರ” ಎಂದೂ ಆ ಪರಿಣತರು ಕಂಡುಕೊಂಡರು. ಇತರ ವಿದ್ವಾಂಸರೂ ಅದನ್ನು ಒಪ್ಪಿದರು. ಬಳಿಕ ನ್ಯಾಯಾಧೀಶರು ಧಾರ್ಮಿಕ ಇತಿಹಾಸದ ಪ್ರೊಫೆಸರರೊಬ್ಬರಿಗೆ, “ಯೆಹೋವನ ಸಾಕ್ಷಿಗಳು ಸಾರುವುದೇಕೆ?” ಎಂದು ಕೇಳಿದರು. ಅದಕ್ಕವರು “ಅದು ಕ್ರೈಸ್ತನೊಬ್ಬನು ಮಾಡಲೇಬೇಕಾದ ಕೆಲಸ. ಸುವಾರ್ತಾ ಪುಸ್ತಕಗಳು ಸಹ ಅದನ್ನು ಒತ್ತಿಹೇಳುತ್ತವೆ. ‘ಎಲ್ಲ ದೇಶಗಳಿಗೆ ಹೋಗಿ ಸಾರಿರಿ’ ಎಂದು ಸ್ವತಃ ಕ್ರಿಸ್ತನು ತನ್ನ ಶಿಷ್ಯರಿಗೆ ಆಜ್ಞಾಪಿಸಿದ್ದಾನೆ” ಎಂದುತ್ತರಿಸಿದರು. ಹಾಗಿದ್ದರೂ 2004ರ ಮಾರ್ಚ್‌ 26ರಂದು ನ್ಯಾಯಾಧೀಶರು ಮಾಸ್ಕೋದಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ನಿಷೇಧಿಸಿದರು. 2004, ಜೂನ್‌ 16ರಂದು ಮಾಸ್ಕೋ ನಗರ ನ್ಯಾಯಾಲಯವು ಆ ತೀರ್ಪನ್ನು ಎತ್ತಿಹಿಡಿಯಿತು. * ಆ ತೀರ್ಪಿನ ಕುರಿತು ಹೇಳಿಕೆ ನೀಡುತ್ತಾ ದೀರ್ಘ ಸಮಯದ ಸಾಕ್ಷಿಯೊಬ್ಬರು ಹೇಳಿದ್ದು: “ಅಂದು ಸೋವಿಯಟ್‌ ಆಳ್ವಿಕೆಯಡಿಯಲ್ಲಿ ರಷ್ಯಾದವನೊಬ್ಬನು ನಾಸ್ತಿಕನಾಗಿರಬೇಕಿತ್ತು. ಆದರೆ ಇಂದು ರಷ್ಯಾದವನು ಆರ್ತಡಾಕ್ಸ್‌ನವನಾಗಿರಬೇಕಾಗಿದೆ.”

ಈ ನಿಷೇಧಕ್ಕೆ ಸಹೋದರರು ಹೇಗೆ ಪ್ರತಿಕ್ರಿಯಿಸಿದರು? ಪ್ರಾಚೀನ ಸಮಯದ ನೆಹೆಮೀಯನಂತೆಯೇ ಅವರು ಪ್ರತಿಕ್ರಿಯಿಸಿದರು. ಅವನ ಸಮಯದಲ್ಲಿ ದೇವಜನರ ಶತ್ರುಗಳು ಯೆರೂಸಲೇಮಿನ ಗೋಡೆಯ ಪುನರ್‌ನಿರ್ಮಾಣ ಕೆಲಸವನ್ನು ವಿರೋಧಿಸಿದರು. ಆದರೆ ನೆಹೆಮೀಯನಾಗಲಿ ಅವನ ಜನರಾಗಲಿ ಯಾವುದೇ ರೀತಿಯ ವಿರೋಧಕ್ಕೆ ಜಗ್ಗಲಿಲ್ಲ. ‘ಮನಸ್ಸುಕೊಟ್ಟು ಕಟ್ಟುವ ಕೆಲಸವನ್ನು ಮುಂದುವರಿಸಿದರು.’ (ನೆಹೆ. 4:1-6) ತದ್ರೀತಿಯಲ್ಲಿ ಮಾಸ್ಕೋದಲ್ಲಿರುವ ನಮ್ಮ ಸಹೋದರರು ವಿರೋಧಕ್ಕೆ ಮಣಿಯದೆ ಮಾಡಲೇಬೇಕಾದ ಸಾರುವ ಕೆಲಸವನ್ನು ಮುಂದುವರಿಸಿದರು. (1 ಪೇತ್ರ 4:12, 16) ತಮ್ಮನ್ನು ಯೆಹೋವನು ಖಂಡಿತ ಪರಾಮರಿಸುವನೆಂಬ ಭರವಸೆ ಅವರಿಗಿತ್ತು. ಹೀಗೆ ದೀರ್ಘಾವಧಿಯ ಹೋರಾಟದಲ್ಲಿ ನಾಲ್ಕನೇ ಹಂತವನ್ನು ಎದುರಿಸಲು ಅವರು ಸಿದ್ಧರಾದರು.

ಹೆಚ್ಚಿದ ವಿರೋಧ

2004, ಆಗಸ್ಟ್‌ 25ರಂದು ನಮ್ಮ ಸಹೋದರರು ರಷ್ಯಾದ ಅಂದಿನ ಅಧ್ಯಕ್ಷರಾದ ವ್ಲಾದಿಮಿರ್‌ ಪುತಿನ್‌ರಿಗೆ ಮನವಿ ಸಲ್ಲಿಸಿದರು. 76 ಸಂಪುಟಗಳಷ್ಟಿದ್ದ ಆ ಮನವಿಯಲ್ಲಿ ನಿಷೇಧದ ವಿಷಯದಲ್ಲಿ ತೀವ್ರ ವಿಷಾದವನ್ನು ವ್ಯಕ್ತಪಡಿಸಲಾಗಿತ್ತು ಹಾಗೂ ಅದಕ್ಕೆ 3,15,000ಕ್ಕೂ ಹೆಚ್ಚು ಮಂದಿ ಸಹಿಹಾಕಿದ್ದರು. ಅಷ್ಟರಲ್ಲಿ ರಷ್ಯಾದ ಆರ್ತಡಾಕ್ಸ್‌ ಪಾದ್ರಿಗಳ ನಿಜಬಣ್ಣ ಬಯಲಾಯಿತು. ಅವರ ವಕ್ತಾರನೊಬ್ಬನು, “ನಾವು ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ಕಟುವಾಗಿ ವಿರೋಧಿಸುತ್ತೇವೆ” ಎಂದು ಘೋಷಿಸಿದ. ಜಾರಿಗೆ ಬಂದ ನಿಷೇಧದ ಕುರಿತು ಮುಸ್ಲಿಮ್‌ ಮುಖಂಡರೊಬ್ಬರು “ಅದೊಂದು ಮೈಲಿಗಲ್ಲು ಹಾಗೂ ಅತ್ಯುತ್ತಮ ಹೆಜ್ಜೆ” ಎಂದರು.

ಯೆಹೋವನ ಸಾಕ್ಷಿಗಳ ವಿರುದ್ಧದ ಸುಳ್ಳಾರೋಪಗಳನ್ನು ರಷ್ಯಾದ ಜನಸಾಮಾನ್ಯರು ಕೂಡ ನಂಬಿದರು ಮತ್ತು ಅವರ ಮೇಲೆ ಆಕ್ರಮಣ ಮಾಡಲಾರಂಭಿಸಿದರು. ಮಾಸ್ಕೋದಲ್ಲಿ ಸಾರುತ್ತಿದ್ದ ಕೆಲವು ಸಾಕ್ಷಿಗಳನ್ನು ವಿರೋಧಿಗಳು ಮುಷ್ಟಿಯಿಂದ ಗುದ್ದಿ, ಕಾಲಿಂದ ಒದ್ದರು. ಒಮ್ಮೆ ಒಬ್ಬನು ಕೋಪದಿಂದ ಕಿಡಿಕಾರುತ್ತಾ ನಮ್ಮ ಸಹೋದರಿಯೊಬ್ಬರನ್ನು ಅಟ್ಟಿಸಿಕೊಂಡು ಬಂದು ಬಿರುಸಾಗಿ ಬೆನ್ನಿಗೆ ಒದ್ದನು. ಆಕೆ ಕೆಳಗೆ ಬಿದ್ದು ತಲೆಗೆ ತುಂಬ ಪೆಟ್ಟಾಯಿತು ಹಾಗೂ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಆದರೂ ಪೊಲೀಸರು ಆ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇನ್ನೂ ಕೆಲವು ಸಾಕ್ಷಿಗಳನ್ನು ಪೊಲೀಸರು ದಸ್ತಗಿರಿ ಮಾಡಿದರು, ಅವರ ಬೆರಳುಗುರುತುಗಳನ್ನೂ ಫೋಟೋಗಳನ್ನೂ ತೆಗೆದುಕೊಂಡರು ಮತ್ತು ರಾತ್ರಿಯಿಡೀ ಅವರನ್ನು ಜೈಲಿನಲ್ಲಿಟ್ಟರು. ಕೂಟಗಳನ್ನು ನಡೆಸಲು ಬಾಡಿಗೆಗೆ ಉಪಯೋಗಿಸಲಾಗುತ್ತಿದ್ದ ಕಟ್ಟಡಗಳಿಂದ ಸಾಕ್ಷಿಗಳನ್ನು ಹೊರದೊಬ್ಬುವಂತೆ ಒತ್ತಾಯಿಸಲಾಯಿತು. ಇಲ್ಲದಿದ್ದಲ್ಲಿ ಕೆಲಸದಿಂದ ವಜಾಮಾಡುವುದಾಗಿ ಆ ಕಟ್ಟಡಗಳ ವ್ಯವಸ್ಥಾಪಕರಿಗೆ ಬೆದರಿಕೆಯೊಡ್ಡಲಾಯಿತು. ಹಾಗಾಗಿ ಅನೇಕ ಸಭೆಗಳಿಗೆ ಕೂಟಗಳನ್ನು ನಡೆಸಲು ಸ್ಥಳವಿರಲಿಲ್ಲ. ನಾಲ್ಕು ರಾಜ್ಯ ಸಭಾಗೃಹಗಳುಳ್ಳ ಒಂದು ಕಟ್ಟಡವನ್ನು ನಲ್ವತ್ತು ಸಭೆಗಳು ಉಪಯೋಗಿಸಬೇಕಾಯಿತು. ಆ ಸೌಕರ್ಯವನ್ನು ಉಪಯೋಗಿಸುತ್ತಿದ್ದ ಒಂದು ಸಭೆಯು ಸಾರ್ವಜನಿಕ ಕೂಟಕ್ಕಾಗಿ ಬೆಳಿಗ್ಗೆ 7.30ಕ್ಕೆ ಕೂಡಿಬರಬೇಕಾಯಿತು. “ಕೂಟಗಳಿಗೆ ಹಾಜರಾಗಲು ಪ್ರಚಾರಕರು ಮುಂಜಾನೆ 5 ಗಂಟೆಗೇ ಎದ್ದು ಸಿದ್ಧರಾಗಬೇಕಿತ್ತು. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಅವರು ಹೀಗೆ ಮಾಡಬೇಕಾಯಿತು. ಆದರೂ ಅವರು ಸಂತೋಷದಿಂದ ಹಾಜರಾಗುತ್ತಿದ್ದರು” ಎಂದು ಹೇಳಿದರು ಸಂಚರಣ ಮೇಲ್ವಿಚಾರಕರೊಬ್ಬರು.

“ಸಾಕ್ಷಿಗಾಗಿ”

ಮಾಸ್ಕೋದಲ್ಲಿ ಸಾಕ್ಷಿಗಳ ಮೇಲೆ ಹೇರಲಾದ ನಿಷೇಧವು ಕಾನೂನುಬಾಹಿರ ಎಂಬುದನ್ನು ರುಜುಪಡಿಸಲು 2004ರ ಡಿಸೆಂಬರ್‌ನಲ್ಲಿ ನಮ್ಮ ವಕೀಲರು ಮಾನವ ಹಕ್ಕುಗಳ ಯೂರೋಪಿಯನ್‌ ಕೋರ್ಟ್‌ನ ಮೊರೆಹೋದರು. (ಪುಟ 6ರಲ್ಲಿರುವ “ರಷ್ಯಾದ ತೀರ್ಪನ್ನು ಫ್ರಾನ್ಸ್‌ನಲ್ಲಿ ಮರುಪರಿಶೀಲಿಸಲು ಕಾರಣ” ಎಂಬ ಚೌಕ ನೋಡಿ.) ಆರು ವರ್ಷಗಳ ನಂತರ, 2010ರ ಜೂನ್‌ 10ರಂದು ಯೆಹೋವನ ಸಾಕ್ಷಿಗಳು ಸಂಪೂರ್ಣವಾಗಿ ನಿರ್ದೋಷಿಗಳೆಂದು ಆ ನ್ಯಾಯಾಲಯ ತೀರ್ಪನ್ನಿತ್ತಿತು! * ಮಾತ್ರವಲ್ಲ ನಮ್ಮ ಮೇಲಿದ್ದ ಎಲ್ಲ ದೋಷಾರೋಪಗಳನ್ನು ಪರಿಶೀಲಿಸಿ ಅವೆಲ್ಲವೂ ನಿರಾಧಾರವೆಂದು ಘೋಷಿಸಿತು. ಜೊತೆಗೆ, ಸಾಕ್ಷಿಗಳ ಮೇಲಿನ ನಿಷೇಧವನ್ನು ತೆಗೆದುಹಾಕಿ ಅವರಿಗಾದ ನಷ್ಟವನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಷ್ಯಾ ಸರ್ಕಾರಕ್ಕೆ ಅಪ್ಪಣೆಕೊಟ್ಟಿತು.—ಪುಟ 8ರಲ್ಲಿರುವ “ನ್ಯಾಯಾಲಯದ ತೀರ್ಪು” ಎಂಬ ಚೌಕ ನೋಡಿ.

ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ಮಾನವ ಹಕ್ಕುಗಳ ಯೂರೋಪಿಯನ್‌ ಒಪ್ಪಂದವು ಸಂರಕ್ಷಿಸುತ್ತದೆಂಬ ಬಗ್ಗೆ ಆ ನ್ಯಾಯಾಲಯ ಕೊಟ್ಟ ತೀರ್ಪಿಗೆ ಕೇವಲ ರಷ್ಯಾ ಮಾತ್ರವಲ್ಲ ಕೌನ್ಸಿಲ್‌ ಆಫ್‌ ಯೂರೋಪ್‌ನ ಸದಸ್ಯತ್ವವನ್ನು ಹೊಂದಿರುವ ಇತರ 46 ರಾಷ್ಟ್ರಗಳೂ ಬದ್ಧವಾಗಿವೆ. ಮಾನವ ಹಕ್ಕುಗಳ ಬಗ್ಗೆ ಅಧ್ಯಯನ ಮಾಡುವ ಭೂಸುತ್ತಲಿನ ಅನೇಕಾನೇಕ ನ್ಯಾಯಾಧೀಶರು, ಕಾನೂನು ರಚಕರು ಮತ್ತು ಜನರು ಕೂಡ ಆ ತೀರ್ಪಿನಲ್ಲಿ ಆಸಕ್ತರಾಗಿರುವರು. ಏಕೆ? ಏಕೆಂದರೆ ನ್ಯಾಯಾಲಯ ಆ ತೀರ್ಪು ಕೊಟ್ಟಾಗ ಅದು ಈ ಹಿಂದೆ ಯೆಹೋವನ ಸಾಕ್ಷಿಗಳ ಪರವಾಗಿ ಕೊಟ್ಟಿದ್ದ ಎಂಟು ತೀರ್ಪುಗಳನ್ನು ಉದಾಹರಣೆಯಾಗಿ ಉಪಯೋಗಿಸಿತು. ಮಾತ್ರವಲ್ಲ ಅರ್ಜೆಂಟೀನಾ, ಅಮೆರಿಕ, ಕೆನಡ, ಜಪಾನ್‌, ದಕ್ಷಿಣ ಆಫ್ರಿಕ, ಯುನೈಟೆಡ್‌ ಕಿಂಗ್‌ಡಮ್‌, ರಷ್ಯಾ ಮತ್ತು ಸ್ಪೇನ್‌ನ ಅತ್ಯುಚ್ಚ ನ್ಯಾಯಾಲಯಗಳು ಯೆಹೋವನ ಸಾಕ್ಷಿಗಳ ಪರವಾಗಿ ಕೊಟ್ಟಿದ್ದ ತೀರ್ಪುಗಳನ್ನೂ ಉಪಯೋಗಿಸಿತು. ಲೋಕದ ಸುತ್ತಲೂ ಇರುವ ಯೆಹೋವನ ಸಾಕ್ಷಿಗಳು ಈಗ ತಮ್ಮ ನಂಬಿಕೆ ಮತ್ತು ಚಟುವಟಿಕೆಗಳನ್ನು ಸಮರ್ಥಿಸಲು ನ್ಯಾಯಾಲಯದ ಈ ತೀರ್ಪನ್ನು ಬಳಸಿಕೊಳ್ಳಸಾಧ್ಯವಿದೆ.

ಯೇಸು ತನ್ನ ಹಿಂಬಾಲಕರಿಗೆ ಅಂದದ್ದು: “ನನ್ನ ನಿಮಿತ್ತವಾಗಿ ನೀವು ರಾಜ್ಯಪಾಲರ ಮುಂದೆಯೂ ಅರಸರ ಮುಂದೆಯೂ ಎಳೆದೊಯ್ಯಲ್ಪಡುವಿರಿ; ಇದು ಅವರಿಗೂ ಅನ್ಯಜನಾಂಗಗಳಿಗೂ ಸಾಕ್ಷಿಗಾಗಿರುವುದು.” (ಮತ್ತಾ. 10:18) ಕಳೆದ ಒಂದೂವರೆ ದಶಕಗಳಲ್ಲಿ ನಡೆದ ಆ ಕಾನೂನು ಹೋರಾಟವು ಮಾಸ್ಕೋದಲ್ಲೂ ಅದರಿಂದಾಚೆಗೂ ಯೆಹೋವನ ಹೆಸರನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರಸಿದ್ಧಿಪಡಿಸಲು ನಮ್ಮ ಸಹೋದರರಿಗೆ ಅವಕಾಶ ನೀಡಿತು. ತನಿಖೆಗಳು, ಮೊಕದ್ದಮೆಗಳು ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯ ಕೊಟ್ಟ ತೀರ್ಪು ಯೆಹೋವನ ಸಾಕ್ಷಿಗಳ ಮೇಲೆ ಗಮನಸೆಳೆದು ಮಹತ್ತರ “ಸಾಕ್ಷಿ” ನೀಡಿತು. ಫಲಿತಾಂಶವಾಗಿ “ಸುವಾರ್ತೆಯು ಅಭಿವೃದ್ಧಿ” ಹೊಂದಿತು. (ಫಿಲಿ. 1:12) ಇಂದು ಮಾಸ್ಕೋದ ಸಾಕ್ಷಿಗಳು ಸಾರುವ ಕೆಲಸದಲ್ಲಿ ಒಳಗೂಡುತ್ತಿರುವಾಗ ಅನೇಕ ಮನೆಯವರು, “ನಿಮ್ಮ ಮೇಲೆ ನಿಷೇಧ ಹೇರಲಾಗಿತ್ತಲ್ಲವೇ?” ಎಂದು ಕೇಳುತ್ತಾರೆ. ಈ ಪ್ರಶ್ನೆಯು ಅನೇಕವೇಳೆ ತಮ್ಮ ನಂಬಿಕೆಗಳ ಬಗ್ಗೆ ಹೆಚ್ಚು ವಿಷಯಗಳನ್ನು ಮನೆಯವರಿಗೆ ತಿಳಿಸಲು ಸಹೋದರರಿಗೆ ಅವಕಾಶ ಕೊಡುತ್ತದೆ. ಹೌದು ರಾಜ್ಯದ ಸುವಾರ್ತೆಯನ್ನು ಸಾರದಂತೆ ನಮ್ಮನ್ನು ಯಾರೂ ತಡೆಯಸಾಧ್ಯವಿಲ್ಲ. ರಷ್ಯಾದಲ್ಲಿರುವ ನಮ್ಮ ಪ್ರಿಯ, ಧೀರ ಸಹೋದರ ಸಹೋದರಿಯರನ್ನು ಯೆಹೋವನು ಸದಾ ಬಲಪಡಿಸಿ ಆಶೀರ್ವದಿಸಲಿ ಎಂಬುದೇ ನಮ್ಮ ಪ್ರಾರ್ಥನೆ.

[ಪಾದಟಿಪ್ಪಣಿಗಳು]

^ ಪ್ಯಾರ. 8 1998, ಏಪ್ರಿಲ್‌ 20ರಂದು ದೂರನ್ನು ದಾಖಲಿಸಲಾಯಿತು. ಎರಡು ವಾರಗಳ ನಂತರ ಅಂದರೆ ಮೇ 5ರಂದು ಮಾನವ ಹಕ್ಕುಗಳ ಯೂರೋಪಿಯನ್‌ ಒಪ್ಪಂದವನ್ನು ರಷ್ಯಾ ಅಂಗೀಕರಿಸಿತು.

^ ಪ್ಯಾರ. 10 ಒಂದು ವಾರ್ತಾಪತ್ರಿಕೆ ಹೇಳಿದ್ದು: “ಆ ನಿಯಮವನ್ನು ರಷ್ಯಾದ ಆರ್ತಡಾಕ್ಸ್‌ ಚರ್ಚ್‌ನ ಒತ್ತಾಯದ ಮೇರೆಗೆ ಅಂಗೀಕರಿಸಲಾಗಿತ್ತು. ಆರ್ತಡಾಕ್ಸ್‌ ಚರ್ಚ್‌ ರಷ್ಯಾದಲ್ಲಿ ತನ್ನ ಅಧಿಕಾರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು ಮತ್ತು ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ತರಲು ತುದಿಗಾಲಲ್ಲಿ ನಿಂತಿತ್ತು.”—1999, ಜೂನ್‌ 25ರ ಅಸೋಸಿಯೇಟೆಡ್‌ ಪ್ರೆಸ್‌.

^ ಪ್ಯಾರ. 20 ಆಸಕ್ತಿಕರವಾಗಿ, ಹತ್ತು ವರ್ಷಗಳ ಹಿಂದೆ ಇದೇ ತಾರೀಖಿನಂದು ಯೆಹೋವನ ಸಾಕ್ಷಿಗಳು ಸೋವಿಯಟ್‌ ಆಳ್ವಿಕೆಯಡಿಯಲ್ಲಿ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ದಬ್ಬಾಳಿಕೆಗೆ ಗುರಿಯಾಗಿದ್ದರೆಂದು ರಷ್ಯಾ ಸರ್ಕಾರವು ಅಧಿಕೃತವಾಗಿ ಒಪ್ಪಿಕೊಂಡಿತ್ತು.

^ ಪ್ಯಾರ. 22 ಮಾಸ್ಕೋದ ಸಭೆಗಳಿಗೆ ಸಿಕ್ಕಿದ್ದ ಕಾನೂನುಬದ್ಧ ನೋಂದಣಿ ಈ ನಿಷೇಧದಿಂದಾಗಿ ರದ್ದಾಯಿತು. ಇದು ನಮ್ಮ ಸಹೋದರರ ಶುಶ್ರೂಷೆಗೆ ತಡೆಯೊಡ್ಡಬಹುದೆಂದು ವಿರೋಧಿಗಳು ನೆನಸಿದ್ದರು.

^ ಪ್ಯಾರ. 28 ರಷ್ಯಾ ಸರ್ಕಾರವು ಮೊಕದ್ದಮೆಯನ್ನು ಮರುಪರಿಶೀಲಿಸುವಂತೆ ಮಾನವ ಹಕ್ಕುಗಳ ಯೂರೋಪಿಯನ್‌ ಕೋರ್ಟ್‌ನ ಮುಖ್ಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಆದರೆ 2010ರ ನವೆಂಬರ್‌ 22ರಂದು ಮುಖ್ಯಪೀಠದ ಐದು ಮಂದಿ ನ್ಯಾಯಾಧೀಶರು ಆ ಮನವಿಯನ್ನು ತಿರಸ್ಕರಿಸಿದರು. ಹಾಗಾಗಿ 2010ರ ಜೂನ್‌ 10ರಂದು ಹೊರಬಿದ್ದ ತೀರ್ಪೇ ಅಂತಿಮವಾಗಿತ್ತು ಮತ್ತು ಅದನ್ನು ಪಾಲಿಸಲೇಬೇಕಿತ್ತು.

[ಪುಟ 6ರಲ್ಲಿರುವ ಚೌಕ/ಚಿತ್ರ]

ರಷ್ಯಾದ ತೀರ್ಪನ್ನು ಫ್ರಾನ್ಸ್‌ನಲ್ಲಿ ಮರುಪರಿಶೀಲಿಸಲು ಕಾರಣ

1996ರ ಫೆಬ್ರವರಿ 28ರಂದು ಮಾನವ ಹಕ್ಕುಗಳ ಯೂರೋಪಿಯನ್‌ ಒಪ್ಪಂದಕ್ಕೆ ರಷ್ಯಾ ಸಹಿಹಾಕಿತು. (1998, ಮೇ 5ರಂದು ರಷ್ಯಾ ಅದನ್ನು ಜಾರಿಗೆ ತಂದಿತು.) ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ರಷ್ಯಾದ ಸರ್ಕಾರವು ತಮ್ಮ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳನ್ನು ನೀಡಿತು.

‘ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಮನೆಯಲ್ಲೂ ಸಾರ್ವಜನಿಕವಾಗಿಯೂ ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಮತ್ತು ತಾವು ಬಯಸುವಲ್ಲಿ ಧರ್ಮವನ್ನು ಬದಲಾಯಿಸುವ ಹಕ್ಕು.’—ಅನುಚ್ಛೇದ 9.

‘ತಮ್ಮ ಅಭಿಪ್ರಾಯಗಳನ್ನು ಬಾಯಿಮಾತಿನಲ್ಲೂ ಲಿಖಿತ ರೂಪದಲ್ಲೂ ವ್ಯಕ್ತಪಡಿಸುವ ಹಕ್ಕು ಮತ್ತು ಅದರ ಬಗ್ಗೆ ಇತರರಿಗೆ ಮಾಹಿತಿ ನೀಡುವ ಹಕ್ಕು.’—ಅನುಚ್ಛೇದ 10.

‘ಶಾಂತಿಭರಿತ ಸಭೆಸಮಾರಂಭಗಳಲ್ಲಿ ಭಾಗವಹಿಸುವ ಹಕ್ಕು.’—ಅನುಚ್ಛೇದ 11.

ಈ ಒಪ್ಪಂದದ ಅನುಚ್ಛೇದಗಳಿಗನುಸಾರ ಒಬ್ಬ ವ್ಯಕ್ತಿ ಯಾ ಸಂಘಟನೆಗೆ ತಮ್ಮ ದೇಶೀಯ ಕಾನೂನು ವ್ಯವಸ್ಥೆಯಿಂದ ನ್ಯಾಯಸಿಗದ ಪಕ್ಷದಲ್ಲಿ ಫ್ರಾನ್ಸ್‌ನ ಸ್ಟ್ರಾಸ್ಬರ್ಗ್‌ನಲ್ಲಿರುವ ಮಾನವ ಹಕ್ಕುಗಳ ಯೂರೋಪಿಯನ್‌ ಕೋರ್ಟ್‌ನಲ್ಲಿ (ಮೇಲೆ ಅದರ ಚಿತ್ರವನ್ನು ಕೊಡಲಾಗಿದೆ) ಮೊಕದ್ದಮೆ ಹೂಡಬಹುದು. ಈ ನ್ಯಾಯಾಲಯದಲ್ಲಿ 47 ನ್ಯಾಯಾಧೀಶರಿದ್ದು, ಈ ಸಂಖ್ಯೆಯು ಮಾನವ ಹಕ್ಕುಗಳ ಯೂರೋಪಿಯನ್‌ ಒಪ್ಪಂದಕ್ಕೆ ಸಹಿಹಾಕಿದ ದೇಶಗಳ ಸಂಖ್ಯೆಗೆ ಸಮನಾಗಿದೆ. ಈ ನ್ಯಾಯಾಲಯದ ತೀರ್ಪನ್ನು ಬದಲಾಯಿಸಲಾಗದು. ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳೆಲ್ಲವೂ ಅದರ ತೀರ್ಪನ್ನು ಪಾಲಿಸಲು ಬದ್ಧವಾಗಿವೆ.

[ಪುಟ 8ರಲ್ಲಿರುವ ಚೌಕ]

ನ್ಯಾಯಾಲಯದ ತೀರ್ಪು

ನ್ಯಾಯಾಲಯದ ತೀರ್ಪಿನ ಮೂರು ತುಣುಕುಗಳು ಇಲ್ಲಿವೆ:

ಯೆಹೋವನ ಸಾಕ್ಷಿಗಳ ಮೇಲಿದ್ದ ಒಂದು ಆರೋಪವು ಅವರು ಕುಟುಂಬಗಳನ್ನು ಒಡೆಯುತ್ತಾರೆ ಎಂದಾಗಿತ್ತು. ಆದರೆ ನ್ಯಾಯಾಲಯ ಇದಕ್ಕೆ ತದ್ವಿರುದ್ಧವಾದ ತೀರ್ಪನ್ನು ಕೊಟ್ಟಿತು. ಅದು ಹೇಳಿದ್ದು:

“ತಮ್ಮ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಆದರೆ ಕುಟುಂಬದ ಸದಸ್ಯರು ಅದನ್ನು ಅಂಗೀಕರಿಸದಿರುವುದು ಮತ್ತು ಗೌರವಿಸದಿರುವುದೇ ಕುಟುಂಬದಲ್ಲಿ ಒಡಕುಂಟಾಗಲು ಮುಖ್ಯ ಕಾರಣ.”—ಪ್ಯಾರ. 111.

ಯೆಹೋವನ ಸಾಕ್ಷಿಗಳ ಮೇಲಿದ್ದ ಇನ್ನೊಂದು ಆರೋಪವು ಅವರು “ಮನಸ್ಸನ್ನು ನಿಯಂತ್ರಿಸುತ್ತಾರೆ” ಎಂದಾಗಿತ್ತು. ಅದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ನ್ಯಾಯಾಲಯ ಹೀಗಂದಿತು:

“ಸಾಕ್ಷಿಗಳು ಇತರರ ಮನಸ್ಸಾಕ್ಷಿಯ ಸ್ವಾತಂತ್ರ್ಯವನ್ನು ಅಪಹರಿಸಿದ್ದಾರೆ ಎಂಬ ಆರೋಪವನ್ನು ರುಜುಪಡಿಸಲು (ರಷ್ಯಾದ) ನ್ಯಾಯಾಲಯಗಳ ಬಳಿ ಒಂದು ಸಾಕ್ಷ್ಯವೂ ಇಲ್ಲ. ಈ ವಿಷಯವನ್ನು ನ್ಯಾಯಾಲಯ ಗಮನಾರ್ಹವೆಂದು ಪರಿಗಣಿಸುತ್ತದೆ.”—ಪ್ಯಾರ. 129.

ಮತ್ತೊಂದು ಆರೋಪವು ಯೆಹೋವನ ಸಾಕ್ಷಿಗಳು ರಕ್ತಪೂರಣಗಳನ್ನು ನಿರಾಕರಿಸುವ ಮೂಲಕ ತಮ್ಮ ಆರೋಗ್ಯವನ್ನು ಅಪಾಯಕ್ಕೊಡ್ಡುತ್ತಾರೆ ಎಂದಾಗಿತ್ತು. ಇದಕ್ಕೆ ವಿರುದ್ಧವಾಗಿ ನ್ಯಾಯಾಲಯ ಈ ತೀರ್ಪನ್ನಿತ್ತಿತು:

“ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಅಥವಾ ನಿರಾಕರಿಸುವ ಇಲ್ಲವೆ ಬದಲಿ ಚಿಕಿತ್ಸೆಯನ್ನು ಆಯ್ಕೆಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗಿದೆ. ಮಾನಸಿಕವಾಗಿ ಸುಸ್ಥಿತಿಯಲ್ಲಿರುವಂಥ ವಯಸ್ಕ ರೋಗಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಇಲ್ಲವೆ ಒಳಗಾಗದಿರುವ ಆಯ್ಕೆಮಾಡುವ ಹಕ್ಕು ಇರುವಂತೆಯೇ ರಕ್ತಪೂರಣಗಳನ್ನು ತೆಗೆದುಕೊಳ್ಳುವ ಅಥವಾ ನಿರಾಕರಿಸುವ ಹಕ್ಕಿದೆ.”—ಪ್ಯಾರ. 136.