ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಿಶ್ರಾಂತಿ ದಿನ ಅಂದರೇನು?

ದೇವರ ವಿಶ್ರಾಂತಿ ದಿನ ಅಂದರೇನು?

ದೇವರ ವಿಶ್ರಾಂತಿ ದಿನ ಅಂದರೇನು?

“ದೇವರ ಜನರಿಗೆ ಒಂದು ಸಬ್ಬತ್‌ ವಿಶ್ರಾಂತಿಯು ಇನ್ನೂ ಇದೆ.”—ಇಬ್ರಿ. 4:9.

1, 2. ಏಳನೆಯ ದಿನದ ಬಗ್ಗೆ ಆದಿಕಾಂಡ 2:3ರಿಂದ ನಾವೇನನ್ನು ಕಲಿಯುತ್ತೇವೆ? ಯಾವ ಪ್ರಶ್ನೆಗಳು ಏಳುತ್ತವೆ?

ದೇವರು ಆರು ಸಾಂಕೇತಿಕ ದಿನಗಳಲ್ಲಿ ಈ ಭೂಮಿಯನ್ನು ಜನನಿವಾಸಕ್ಕಾಗಿ ಅಣಿಗೊಳಿಸಿದನೆಂದು ನಾವು ಆದಿಕಾಂಡ ಪುಸ್ತಕದ ಮೊದಲನೇ ಅಧ್ಯಾಯದಲ್ಲಿ ಕಲಿಯುತ್ತೇವೆ. ಆ ಆರು ದಿನಗಳಲ್ಲಿ ಪ್ರತಿದಿನವೂ “ಸಾಯಂಕಾಲವೂ ಪ್ರಾತಃಕಾಲವೂ ಆಗಿ” ಕೊನೆಗೊಂಡಿತೆಂದು ಬೈಬಲ್‌ ಹೇಳುತ್ತದೆ. (ಆದಿ. 1:5, 8, 13, 19, 23, 31) ಆದರೆ ಏಳನೆಯ ದಿನದ ಬಗ್ಗೆ ಆದಿಕಾಂಡ 2:1-3ರಲ್ಲಿ ಹೀಗೇನೂ ಹೇಳಲಾಗಿಲ್ಲ.

2 ಇದು, ಏಳನೆಯ ದಿನ ಅಂದರೆ ದೇವರು ವಿಶ್ರಮಿಸಿಕೊಂಡ ‘ದಿನವು’ ಮೋಶೆ ಕ್ರಿ. ಪೂ. 1513ರಲ್ಲಿ ಆದಿಕಾಂಡ ಪುಸ್ತಕವನ್ನು ಬರೆದಾಗ ಕೊನೆಗೊಂಡಿರಲಿಲ್ಲ ಎಂಬದನ್ನು ಸ್ಪಷ್ಟಪಡಿಸುತ್ತದೆ. ದೇವರ ವಿಶ್ರಾಂತಿ ದಿನ ಇನ್ನೂ ಮುಂದುವರಿಯುತ್ತಿದೆಯೋ? ಹೌದಾದಲ್ಲಿ, ನಾವು ಅದರಲ್ಲಿ ಸೇರಸಾಧ್ಯವೋ? ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳುವುದು ಬಹಳ ಪ್ರಾಮುಖ್ಯ.

ಯೆಹೋವನು ಇನ್ನೂ ‘ವಿಶ್ರಮಿಸುತ್ತಿದ್ದಾನೋ’?

3. ಒಂದನೆಯ ಶತಮಾನದಲ್ಲೂ ಏಳನೆಯ ದಿನ ಮುಂದುವರಿಯುತ್ತಿತ್ತು ಎಂಬದನ್ನು ಯೋಹಾನ 5:16, 17ರಲ್ಲಿರುವ ಯೇಸುವಿನ ಮಾತುಗಳು ಹೇಗೆ ತೋರಿಸುತ್ತವೆ?

3 ಏಳನೆಯ ದಿನವು ಕ್ರಿ.ಶ ಒಂದನೆಯ ಶತಮಾನದಲ್ಲೂ ಮುಂದುವರಿಯುತ್ತಿತ್ತು. ಈ ನಿರ್ಣಯಕ್ಕೆ ಬರಲು ನಮಗೆ ಎರಡು ಪುರಾವೆಗಳಿವೆ. ಮೊದಲನೆಯ ಪುರಾವೆಯು ಯೇಸು ತನ್ನ ವಿರೋಧಿಗಳಿಗೆ ಕೊಟ್ಟ ಉತ್ತರದಲ್ಲಿದೆ. ಯೇಸು ಸಬ್ಬತ್‌ ದಿನದಲ್ಲಿ ವಾಸಿಮಾಡಿದ್ದಕ್ಕಾಗಿ ಅವರು ಅವನನ್ನು ಟೀಕಿಸಿದರು. ಏಕೆಂದರೆ ಸಬ್ಬತ್‌ ದಿನದಂದು ವಾಸಿಮಾಡುವುದನ್ನು ಸಹ ಅವರು ಒಂದು ಕೆಲಸವಾಗಿ ಪರಿಗಣಿಸುತ್ತಿದ್ದರು. ಯೇಸು ಅವರಿಗೆ ಉತ್ತರ ಕೊಡುತ್ತಾ “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾ ಇದ್ದಾನೆ ಮತ್ತು ನಾನೂ ಕೆಲಸಮಾಡುತ್ತಿದ್ದೇನೆ” ಎಂದು ಹೇಳಿದನು. (ಯೋಹಾ. 5:16, 17) ಅದರ ಅರ್ಥವೇನು? ಸಬ್ಬತ್‌ ದಿನದಲ್ಲಿ ಕೆಲಸಮಾಡಿದ ಆರೋಪವನ್ನು ಯೇಸುವಿನ ಮೇಲೆ ಹೊರಿಸಲಾಗಿತ್ತು. ಅವರ ಆರೋಪಕ್ಕೆ, “ನನ್ನ ತಂದೆಯು . . . ಕೆಲಸಮಾಡುತ್ತಾ ಇದ್ದಾನೆ” ಎಂಬ ಅವನ ಮಾತು ಉತ್ತರ ಕೊಟ್ಟಿತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಯೇಸು ತನ್ನ ಟೀಕಾಕಾರರಿಗೆ ಹೀಗನ್ನುತ್ತಿದ್ದನು: ‘ನಾನೂ ನನ್ನ ತಂದೆಯೂ ಒಂದೇ ರೀತಿಯ ಕೆಲಸವನ್ನು ಮಾಡುತ್ತಿದ್ದೇವೆ. ಸಾವಿರಾರು ವರ್ಷಗಳಷ್ಟು ದೀರ್ಘದ ಸಬ್ಬತ್‌ ದಿನದಲ್ಲಿ ನನ್ನ ತಂದೆಯು ಕೆಲಸಮಾಡುತ್ತಿದ್ದಾನೆ. ಆದ್ದರಿಂದ ನಾನು ಸಬ್ಬತ್‌ ದಿನದಲ್ಲಿ ಕೆಲಸಮಾಡುವುದರಲ್ಲಿ ತಪ್ಪಿಲ್ಲ.’ ಹೀಗೆ, ಭೂಮಿಯ ಸಂಬಂಧದಲ್ಲಿ ಏಳನೆಯ ದಿನವು ಅಂದರೆ ದೇವರ ವಿಶ್ರಾಂತಿಯ ಮಹಾ ಸಬ್ಬತ್‌ ದಿನವು ತನ್ನ ಸಮಯದಲ್ಲೂ ಮುಂದುವರಿಯುತ್ತಿದೆ ಎಂದು ಯೇಸು ಸೂಚಿಸುತ್ತಿದ್ದನು. *

4. ಏಳನೆಯ ದಿನವು ತನ್ನ ಸಮಯದಲ್ಲೂ ಮುಂದುವರಿಯುತ್ತಿತ್ತು ಎಂಬದಕ್ಕೆ ಪೌಲನು ಯಾವ ಪುರಾವೆ ಕೊಡುತ್ತಾನೆ?

4 ಎರಡನೆಯ ಪುರಾವೆಯನ್ನು ಅಪೊಸ್ತಲ ಪೌಲನು ಕೊಟ್ಟಿದ್ದಾನೆ. ದೇವರ ವಿಶ್ರಾಂತಿಯ ಬಗ್ಗೆ ಆದಿಕಾಂಡ 2:2ರಿಂದ ಉಲ್ಲೇಖಿಸುವಾಗ ಪೌಲನು ದೇವಪ್ರೇರಣೆಯಿಂದ ಹೀಗೆ ಬರೆದನು: “ನಂಬಿಕೆಯಿಟ್ಟವರಾದ ನಾವಾದರೋ ಆತನ ವಿಶ್ರಾಂತಿಯಲ್ಲಿ ನಿಶ್ಚಯ ಸೇರುತ್ತೇವೆ.” (ಇಬ್ರಿ. 4:3, 4, 6, 9) ಹಾಗಾದರೆ ಏಳನೆಯ ದಿನವು ಪೌಲನ ಸಮಯದಲ್ಲೂ ಮುಂದುವರಿಯುತ್ತಿತ್ತು. ಇನ್ನು ಎಷ್ಟು ಸಮಯದ ವರೆಗೆ ದೇವರ ವಿಶ್ರಾಂತಿಯ ದಿನವು ಮುಂದುವರಿಯಲಿದೆ?

5. ಏಳನೆಯ ದಿನದ ಉದ್ದೇಶವೇನು? ಆ ಉದ್ದೇಶ ಯಾವಾಗ ಸಂಪೂರ್ಣವಾಗಿ ನೆರವೇರುವುದು?

5 ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಮೊದಲು ಏಳನೆಯ ದಿನದ ಉದ್ದೇಶವನ್ನು ನೆನಪಿಗೆ ತಂದುಕೊಳ್ಳಬೇಕು. ಅದನ್ನು ಆದಿಕಾಂಡ 2:3 ಹೀಗೆ ವಿವರಿಸುತ್ತದೆ: “ದೇವರು . . . ಆ [ಏಳನೆಯ] ದಿನವನ್ನು ಪರಿಶುದ್ಧದಿನವಾಗಿರಲಿ ಎಂದು ಆಶೀರ್ವದಿಸಿದನು.” ಯೆಹೋವನು ಆ ದಿನವನ್ನು ಪರಿಶುದ್ಧದಿನವಾಗಿ ಮಾಡಿದ್ದು ಅಂದರೆ ಪವಿತ್ರೀಕರಿಸಿದ್ದು ಇಲ್ಲವೆ ಪ್ರತ್ಯೇಕವಾಗಿರಿಸಿದ್ದು ಭೂಮಿಗಾಗಿರುವ ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿಯೇ. ಆತನ ಉದ್ದೇಶ, ಭೂಮಿಯು ವಿಧೇಯ ಸ್ತ್ರೀಪುರುಷರಿಂದ ತುಂಬಿಕೊಳ್ಳಬೇಕು ಹಾಗೂ ಅವರು ಭೂಮಿಯನ್ನೂ ಅದರಲ್ಲಿರುವ ಸಕಲ ಜೀವಿಗಳನ್ನೂ ನೋಡಿಕೊಳ್ಳಬೇಕು ಎಂಬುದೇ. (ಆದಿ. 1:28) ಈ ಉದ್ದೇಶವನ್ನು ಪೂರೈಸಲಿಕ್ಕಾಗಿಯೇ ಯೆಹೋವ ದೇವರು ಮತ್ತು ‘ಸಬ್ಬತ್ತಿನ ಒಡೆಯನಾಗಿರುವ’ ಯೇಸು ಕ್ರಿಸ್ತನು “ಇಂದಿನ ವರೆಗೂ ಕೆಲಸಮಾಡುತ್ತಾ” ಇದ್ದಾರೆ. (ಮತ್ತಾ. 12:8) ಭೂಮಿಗಾಗಿರುವ ಆ ಉದ್ದೇಶವು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಸಂಪೂರ್ಣವಾಗಿ ನೆರವೇರುವ ತನಕ ದೇವರ ವಿಶ್ರಾಂತಿಯ ದಿನ ಮುಂದುವರಿಯುವುದು.

‘ಅದೇ ನಮೂನೆಯ ಅವಿಧೇಯತೆಗೆ ಬೀಳಬೇಡಿ’

6. ಯಾವ ಉದಾಹರಣೆಗಳು ನಮಗೆ ಎಚ್ಚರಿಕೆಯೋಪಾದಿ ಕೊಡಲ್ಪಟ್ಟಿವೆ? ಅವುಗಳಿಂದ ನಾವೇನನ್ನು ಕಲಿಯುತ್ತೇವೆ?

6 ದೇವರು ತನ್ನ ಉದ್ದೇಶದ ಬಗ್ಗೆ ಆದಾಮಹವ್ವರಿಗೆ ಸ್ಪಷ್ಟವಾಗಿ ತಿಳಿಸಿದ್ದನು. ಅವರಾದರೋ ಆ ಉದ್ದೇಶಕ್ಕೆ ವಿರುದ್ಧವಾಗಿ ಕ್ರಿಯೆಗೈದರು. ಆದರೆ ಅವಿಧೇಯ ಮಾರ್ಗವನ್ನು ಹಿಡಿದವರು ಪ್ರಥಮ ಮಾನವರಾದ ಆದಾಮಹವ್ವರು ಮಾತ್ರವೇ ಆಗಿರಲಿಲ್ಲ. ಅವರ ನಂತರ ಲಕ್ಷಾಂತರ ಮಂದಿ ಅದೇ ಮಾರ್ಗವನ್ನು ಆಯ್ಕೆಮಾಡಿದ್ದಾರೆ. ಅಷ್ಟೇಕೆ ದೇವರಾದುಕೊಂಡ ಜನರು ಅಂದರೆ ಇಸ್ರಾಯೇಲ್ಯರು ಸಹ ಪದೇ ಪದೇ ಅವಿಧೇಯ ಮಾರ್ಗದಲ್ಲಿ ನಡೆದರು. ಒಂದನೇ ಶತಮಾನದಲ್ಲಿದ್ದ ಕೆಲವು ಕ್ರೈಸ್ತರೂ ಆ ಪ್ರಾಚೀನ ಇಸ್ರಾಯೇಲ್ಯರಂತೆ ಅವಿಧೇಯರಾಗುವ ಸಾಧ್ಯತೆಯಿತ್ತು. ಹಾಗಾಗಿಯೇ ಪೌಲನು ಅವರನ್ನು ಹೀಗೆ ಎಚ್ಚರಿಸಿದನು: “ಆದುದರಿಂದ ಯಾವನಾದರೂ ಅದೇ ನಮೂನೆಯ ಅವಿಧೇಯತೆಯಿಂದ ಬಿದ್ದಾನೆಂಬ ಭಯದಿಂದ, ಆ ವಿಶ್ರಾಂತಿಯಲ್ಲಿ ಸೇರುವುದಕ್ಕೆ ನಮ್ಮಿಂದಾಗುವ ಪರಮ ಪ್ರಯತ್ನವನ್ನು ಮಾಡೋಣ.” (ಇಬ್ರಿ. 4:11) ಪೌಲನ ಈ ಮಾತುಗಳು ತೋರಿಸುವಂತೆ, ಅವಿಧೇಯ ಜನರು ದೇವರ ವಿಶ್ರಾಂತಿಯ ದಿನವನ್ನು ಸೇರಲಾರರು. ಇದು ನಮಗೆ ಯಾವ ಅರ್ಥದಲ್ಲಿದೆ? ನಾವು ಯಾವುದೇ ವಿಧದಲ್ಲಿ ದೇವರ ಉದ್ದೇಶಕ್ಕೆ ತಿರುಗಿಬಿದ್ದರೂ ದೇವರ ವಿಶ್ರಾಂತಿಯ ದಿನವನ್ನು ಸೇರುವುದಿಲ್ಲವೆಂದೋ? ಈ ಪ್ರಶ್ನೆಗೆ ಉತ್ತರವು ನಮಗೆ ತುಂಬ ಪ್ರಾಮುಖ್ಯ ಮತ್ತು ಈ ಲೇಖನದಲ್ಲಿ ನಾವದರ ಬಗ್ಗೆ ಹೆಚ್ಚನ್ನು ಕಲಿಯಲಿದ್ದೇವೆ. ಆದರೆ ಅದಕ್ಕೂ ಮುಂಚೆ, ಇಸ್ರಾಯೇಲ್ಯರ ಕೆಟ್ಟ ಮಾದರಿಯನ್ನು ಮತ್ತು ಅವರು ಏಕೆ ದೇವರ ವಿಶ್ರಾಂತಿಯ ದಿನವನ್ನು ಸೇರಲಿಲ್ಲ ಎಂಬದನ್ನು ಪರಿಗಣಿಸೋಣ.

“ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದಿಲ್ಲ”

7. ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡುಗಡೆಮಾಡಿದ್ದರ ಉದ್ದೇಶವೇನಾಗಿತ್ತು? ಇಸ್ರಾಯೇಲ್ಯರು ಏನು ಮಾಡಬೇಕಿತ್ತು?

7 ಇಸ್ರಾಯೇಲ್ಯರ ಸಂಬಂಧದಲ್ಲಿದ್ದ ತನ್ನ ಉದ್ದೇಶವನ್ನು ಯೆಹೋವನು ಕ್ರಿ. ಪೂ. 1513ರಲ್ಲಿ ತನ್ನ ಸೇವಕನಾದ ಮೋಶೆಗೆ ತಿಳಿಯಪಡಿಸಿದನು. ದೇವರಂದದ್ದು: “ಅವರನ್ನು ಐಗುಪ್ತ್ಯರ ಕೈಯೊಳಗಿಂದ ತಪ್ಪಿಸುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ . . . ನಡಿಸಿಕೊಂಡು ಹೋಗುವದಕ್ಕೂ ಇಳಿದುಬಂದಿದ್ದೇನೆ.” (ವಿಮೋ. 3:8) ಅವರ ಪೂರ್ವಜನಾದ ಅಬ್ರಹಾಮನಿಗೆ ವಾಗ್ದಾನ ಮಾಡಿದಂತೆ ಯೆಹೋವನು ಇಸ್ರಾಯೇಲ್ಯರನ್ನು “ಐಗುಪ್ತ್ಯರ ಕೈಯೊಳಗಿಂದ” ಬಿಡುಗಡೆಮಾಡಿದ್ದರ ಉದ್ದೇಶ ಅವರನ್ನು ತನ್ನ ಜನರಾಗಿ ಮಾಡುವುದಾಗಿತ್ತು. (ಆದಿ. 22:17) ದೇವರು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಟ್ಟಿದ್ದನು. ಆತನೊಂದಿಗೆ ಸಮಾಧಾನದ ಸಂಬಂಧವನ್ನು ಹೊಂದಲು ಅದು ಅವರಿಗೆ ಸಹಾಯಮಾಡಲಿತ್ತು. (ಯೆಶಾ. 48:17, 18) ಆತನು ಇಸ್ರಾಯೇಲ್ಯರಿಗೆ, “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ [ಧರ್ಮಶಾಸ್ತ್ರದಲ್ಲಿ ಕೊಟ್ಟಿರುವ] ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ” ಎಂದು ಹೇಳಿದನು. (ವಿಮೋ. 19:5, 6) ಹಾಗಾದರೆ, ಇಸ್ರಾಯೇಲ್ಯರು ದೇವರ ಮಾತನ್ನು ಅನುಸರಿಸಿ ನಡೆದಲ್ಲಿ ಮಾತ್ರ ಆತನೊಂದಿಗೆ ಸುಸಂಬಂಧವನ್ನು ಹೊಂದಸಾಧ್ಯವಿತ್ತು.

8. ಇಸ್ರಾಯೇಲ್ಯರು ದೇವರಿಗೆ ವಿಧೇಯರಾಗಿದ್ದಲ್ಲಿ ಅವರ ಜೀವನ ಹೇಗಿರುತ್ತಿತ್ತು?

8 ಇಸ್ರಾಯೇಲ್ಯರು ದೇವರ ಮಾತಿಗೆ ವಿಧೇಯರಾಗಿದ್ದಲ್ಲಿ ಅವರ ಬದುಕೆಷ್ಟು ಹಸನಾಗಿರುತ್ತಿತ್ತೆಂಬದನ್ನು ಸ್ವಲ್ಪ ಯೋಚಿಸಿ ನೋಡಿ! ಯೆಹೋವನು ಅವರ ಹೊಲಗದ್ದೆಗಳನ್ನು, ದ್ರಾಕ್ಷೇತೋಟಗಳನ್ನು ಮತ್ತು ಕುರಿದನಗಳನ್ನು ಹೇರಳವಾಗಿ ಆಶೀರ್ವದಿಸುತ್ತಿದ್ದನು. ಅವರನ್ನು ಶತ್ರುಗಳಿಂದಲೂ ಕಾಪಾಡುತ್ತಿದ್ದನು. (1 ಅರಸುಗಳು 10:23-27 ಓದಿ.) ಅಲ್ಲದೆ, ಮೆಸ್ಸೀಯನು ಬಂದಾಗ ಇಸ್ತ್ರಾಯೇಲ್‌ ಸ್ವತಂತ್ರ ಜನಾಂಗವಾಗಿರುತ್ತಿತ್ತು, ರೋಮನ್ನರ ಕೈಕೆಳಗಿರುತ್ತಿರಲಿಲ್ಲ. ಮಾತ್ರವಲ್ಲ ಸತ್ಯ ದೇವರಿಗೆ ವಿಧೇಯತೆ ತೋರಿಸುವುದು ಆಧ್ಯಾತ್ಮಿಕ ಹಾಗೂ ಭೌತಿಕ ಆಶೀರ್ವಾದಗಳನ್ನು ತರುತ್ತದೆ ಎಂಬ ರುಜುವಾತನ್ನು ಕೊಡುತ್ತಾ ಸುತ್ತಲಿನ ಜನಾಂಗಗಳಿಗೆ ಅದು ಮಾದರಿಯಾಗಿರಸಾಧ್ಯವಿತ್ತು.

9, 10. (ಎ) ಇಸ್ರಾಯೇಲ್ಯರು ಐಗುಪ್ತಕ್ಕೆ ಹಿಂದಿರುಗಲು ಬಯಸಿದ್ದು ತಪ್ಪಾಗಿತ್ತೇಕೆ? (ಬಿ) ಇಸ್ರಾಯೇಲ್ಯರು ಐಗುಪ್ತಕ್ಕೆ ಹಿಂದಿರುಗುವುದು ಅವರ ಆರಾಧನೆಯ ಮೇಲೆ ಯಾವ ಪರಿಣಾಮಬೀರಲಿತ್ತು?

9 ಯೆಹೋವನು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ತಮ್ಮನ್ನು ಉಪಯೋಗಿಸುವಂತೆ ಬಿಟ್ಟುಕೊಡುವ ವಿಶೇಷ ಅವಕಾಶ ಇಸ್ರಾಯೇಲ್ಯರಿಗಿತ್ತು. ಅವರು ಹೇರಳ ಆಶೀರ್ವಾದಗಳನ್ನು ಪಡೆಯಲಿದ್ದರು ಹಾಗೂ ಭೂಮಿಯ ಎಲ್ಲ ಜನಾಂಗಗಳಿಗೂ ಆಶೀರ್ವಾದಗಳನ್ನು ತರಸಾಧ್ಯವಿತ್ತು. (ಆದಿ. 22:18) ಆದರೆ ದೇವರ ಜನಾಂಗವಾಗುವ ಹಾಗೂ ಇತರ ಜನಾಂಗಗಳಿಗೆ ಮಾದರಿಯಾಗುವ ಸದವಕಾಶಕ್ಕೆ ಹೆಚ್ಚಿನ ಇಸ್ರಾಯೇಲ್ಯರು ಪ್ರಾಮುಖ್ಯತೆ ಕೊಡಲಿಲ್ಲ. ಅಷ್ಟೇಕೆ ಅವರು ಐಗುಪ್ತಕ್ಕೆ ಹಿಂದಿರುಗಿ ಹೋಗಲು ಹಠಹಿಡಿದರು! (ಅರಣ್ಯಕಾಂಡ 14:2-4 ಓದಿ.) ಆದರೆ ಐಗುಪ್ತಕ್ಕೆ ಹಿಂದಿರುಗಿದ್ದಲ್ಲಿ ಯೆಹೋವನು ಅಪೇಕ್ಷಿಸುವಂಥ ರೀತಿಯಲ್ಲಿ ಆರಾಧನೆ ಸಲ್ಲಿಸಲು ಅವರಿಂದಾಗುತ್ತಿರಲಿಲ್ಲ ಮತ್ತು ಇತರ ಜನಾಂಗಗಳಿಗೆ ಮಾದರಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಅವರು ವಿಧರ್ಮಿ ಶತ್ರುಗಳ ಕೈಕೆಳಗೆ ಹೋಗುವಲ್ಲಿ ಮೋಶೆಯ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯಲು ಅವರಿಂದಾಗುತ್ತಿರಲಿಲ್ಲ ಹಾಗೂ ಪಾಪಗಳ ಕ್ಷಮಾಪಣೆಗಾಗಿ ಯೆಹೋವನು ಮಾಡಿರುವ ಏರ್ಪಾಡಿನಿಂದ ಪ್ರಯೋಜನ ಪಡೆಯಲಾಗುತ್ತಿರಲಿಲ್ಲ. ಎಷ್ಟು ಅಜ್ಞಾನಿಗಳೂ ಸ್ವಾರ್ಥಿಗಳೂ ಆಗಿದ್ದರವರು! ಆದ್ದರಿಂದ ಯೆಹೋವನು ಆ ದಂಗೆಕೋರ ಜನರ ಬಗ್ಗೆ, “ನಾನು ಈ ಸಂತತಿಯವರ ವಿಷಯದಲ್ಲಿ ಜಿಗುಪ್ಸೆಗೊಂಡು, ‘ಅವರು ಯಾವಾಗಲೂ ತಮ್ಮ ಹೃದಯಗಳಲ್ಲಿ ತಪ್ಪಿಹೋಗುತ್ತಾರೆ ಮತ್ತು ಅವರು ನನ್ನ ಮಾರ್ಗಗಳನ್ನು ತಿಳಿದುಕೊಂಡಿಲ್ಲ’ ಎಂದು ಹೇಳಿದೆನು. ಆದುದರಿಂದ ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದಿಲ್ಲ’ ಎಂದು ನಾನು ಕೋಪದಿಂದ ಪ್ರಮಾಣಮಾಡಿದೆನು” ಎಂದು ಹೇಳಿದ್ದರಲ್ಲಿ ಆಶ್ಚರ್ಯವಿಲ್ಲ.—ಇಬ್ರಿ. 3:10, 11; ಕೀರ್ತ. 95:10, 11.

10 ಐಗುಪ್ತಕ್ಕೆ ಹಿಂದಿರುಗಲು ಬಯಸುವ ಮೂಲಕ ಆ ಮೊಂಡ ಜನರು ತಮಗೆ ಸಿಕ್ಕಿದ ಆಧ್ಯಾತ್ಮಿಕ ಆಶೀರ್ವಾದಗಳಿಗಿಂತ ಐಗುಪ್ತದಲ್ಲಿ ಸಿಗುತ್ತಿದ್ದ ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿಯೇ ತಮಗೆ ಹೆಚ್ಚು ಪ್ರಾಮುಖ್ಯವೆಂದು ತೋರಿಸಿಕೊಟ್ಟರು. (ಅರ. 11:5) ಕೃತಘ್ನ ಏಸಾವನಂತೆ ಆ ದಂಗೆಕೋರರು ರುಚಿಕರ ಊಟಕ್ಕಾಗಿ ಆಧ್ಯಾತ್ಮಿಕ ಸ್ವಾಸ್ತ್ಯವನ್ನೇ ತೊರೆಯಲು ಸಿದ್ಧರಿದ್ದರು!—ಆದಿ. 25:30-32; ಇಬ್ರಿ. 12:16.

11. ಮೋಶೆಯ ದಿನಗಳಲ್ಲಿನ ಇಸ್ರಾಯೇಲ್ಯರು ಅಪನಂಬಿಗಸ್ತರಾದ ಕಾರಣ ಯೆಹೋವನ ಉದ್ದೇಶ ಬಾಧಿಸಲ್ಪಟ್ಟಿತೋ?

11 ಐಗುಪ್ತವನ್ನು ಬಿಟ್ಟುಬಂದ ಇಸ್ರಾಯೇಲ್ಯರು ಯೆಹೋವನಿಗೆ ಅಪನಂಬಿಗಸ್ತರಾದರೂ ಆತನು ತನ್ನ ಉದ್ದೇಶವನ್ನು ನೆರವೇರಿಸುವ ಸಲುವಾಗಿ ತಾಳ್ಮೆಯಿಂದ ‘ಕೆಲಸಮಾಡುತ್ತಾ ಇದ್ದನು’ ಮತ್ತು ಮುಂದೆ ಬರಲಿದ್ದ ಪೀಳಿಗೆಯ ಕಡೆಗೆ ಗಮನಹರಿಸಿದನು. ಆ ಹೊಸ ಪೀಳಿಗೆಯವರು ತಮ್ಮ ಹೆತ್ತವರಿಗಿಂತಲೂ ಹೆಚ್ಚು ವಿಧೇಯರಾಗಿದ್ದರು. ಅವರು ಯೆಹೋವನ ಆಜ್ಞೆಗನುಸಾರ ನಡೆದು ವಾಗ್ದತ್ತ ದೇಶವನ್ನು ಪ್ರವೇಶಿಸಿದರು ಮತ್ತು ವಶಪಡಿಸಿಕೊಳ್ಳಲಾರಂಭಿಸಿದರು. ಯೆಹೋಶುವ 24:31ರಲ್ಲಿ ನಾವು ಓದುವುದು: “ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲ್ಯರಿಗೋಸ್ಕರ ನಡಿಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಸೇವಿಸುತ್ತಿದ್ದರು.”

12. ಇಂದು ದೇವರ ವಿಶ್ರಾಂತಿಯಲ್ಲಿ ಸೇರಲು ಸಾಧ್ಯವೆಂದು ನಾವು ಹೇಗೆ ಹೇಳಬಲ್ಲೆವು?

12 ಕಾಲಕ್ರಮೇಣ ಆ ವಿಧೇಯ ಜನಾಂಗವು ಗತಿಸಿಹೋಯಿತು. ತದನಂತರ ಹುಟ್ಟಿಕೊಂಡ ಜನಾಂಗವು ‘ಯೆಹೋವನನ್ನೂ ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯಲಿಲ್ಲ.’ ಪರಿಣಾಮವಾಗಿ “ಈ ಇಸ್ರಾಯೇಲ್ಯರು ಬಾಳನ ಪ್ರತಿಮೆಗಳನ್ನು ಪೂಜಿಸಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು.” (ನ್ಯಾಯ. 2:10, 11) ಅವರಿಗೆ ವಾಗ್ದತ್ತ ದೇಶವು ನಿಜವಾಗಿಯೂ “ವಿಶ್ರಾಂತಿಯ ಸ್ಥಳ” ಆಗಿರಲಿಲ್ಲ. ಅವರು ಅವಿಧೇಯರಾದ ಕಾರಣ ದೇವರೊಂದಿಗಿನ ಸಮಾಧಾನ ಸಂಬಂಧವನ್ನು ಕಳಕೊಂಡರು. ಈ ಇಸ್ರಾಯೇಲ್ಯರ ಬಗ್ಗೆ ಪೌಲನು ಬರೆದದ್ದು; “ಯೆಹೋಶುವನು ಅವರನ್ನು ವಿಶ್ರಾಂತಿಯ ಸ್ಥಳಕ್ಕೆ ನಡೆಸಿರುತ್ತಿದ್ದರೆ ತರುವಾಯ ದೇವರು ಇನ್ನೊಂದು ದಿನದ ಕುರಿತು ಹೇಳುತ್ತಿರಲಿಲ್ಲ. ಆದುದರಿಂದ ದೇವರ ಜನರಿಗೆ ಒಂದು ಸಬ್ಬತ್‌ ವಿಶ್ರಾಂತಿಯು ಇನ್ನೂ ಇದೆ.” (ಇಬ್ರಿ. 4:8, 9) ಪೌಲನು ಇಲ್ಲಿ ಸೂಚಿಸಿರುವ ‘ದೇವರ ಜನರು’ ಕ್ರೈಸ್ತರಾಗಿದ್ದಾರೆ. ಅದರರ್ಥ ಕ್ರೈಸ್ತರು ದೇವರ ವಿಶ್ರಾಂತಿಯಲ್ಲಿ ಸೇರಸಾಧ್ಯವೆಂದೋ? ನಿಶ್ಚಯವಾಗಿಯೂ! ಯೆಹೂದಿ ಕ್ರೈಸ್ತರೂ ಯೆಹೂದ್ಯೇತರ ಕ್ರೈಸ್ತರೂ ದೇವರ ವಿಶ್ರಾಂತಿಯಲ್ಲಿ ಸೇರುವರು!

ದೇವರ ವಿಶ್ರಾಂತಿಯಲ್ಲಿ ಸೇರಲು ತಪ್ಪಿಹೋದ ಕೆಲವರು

13, 14. (ಎ) ಮೋಶೆಯ ದಿನಗಳಲ್ಲಿದ್ದ ಇಸ್ರಾಯೇಲ್ಯರು ದೇವರ ವಿಶ್ರಾಂತಿಯಲ್ಲಿ ಸೇರಲು ಏನು ಮಾಡಬೇಕಿತ್ತು? (ಬಿ) ಪೌಲನ ದಿನಗಳಲ್ಲಿದ್ದ ಕ್ರೈಸ್ತರು ದೇವರ ವಿಶ್ರಾಂತಿಯಲ್ಲಿ ಸೇರಲು ಏನು ಮಾಡಬೇಕಿತ್ತು?

13 ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದ ಪತ್ರದಲ್ಲಿ, ಅಲ್ಲಿದ್ದ ಕೆಲವರು ದೇವರ ಉದ್ದೇಶಕ್ಕೆ ವಿರುದ್ಧವಾಗಿ ಕ್ರಿಯೆಗೈಯುತ್ತಿದ್ದ ಬಗ್ಗೆ ಚಿಂತೆ ವ್ಯಕ್ತಪಡಿಸಿದನು. (ಇಬ್ರಿಯ 4:1 ಓದಿ.) ಅವರೇನು ಮಾಡುತ್ತಿದ್ದರು? ಅವರಿನ್ನೂ ಮೋಶೆಯ ಧರ್ಮಶಾಸ್ತ್ರದಲ್ಲಿನ ಕೆಲವು ವಿಷಯಗಳನ್ನು ಪಾಲಿಸುತ್ತಿದ್ದರು. ಈ ಹಿಂದೆ ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಜೀವಿಸಲಿಚ್ಛಿಸಿದ ಇಸ್ರಾಯೇಲ್ಯರು ಮೋಶೆಯ ಧರ್ಮಶಾಸ್ತ್ರವನ್ನು ಕೈಗೊಂಡು ನಡೆಯಬೇಕಾಗಿತ್ತು ನಿಜ. ಆದರೆ ಅದು ಸುಮಾರು 1,500 ವರ್ಷಗಳ ವರೆಗೆ ಅಷ್ಟೇ. ಯೇಸುವಿನ ಮರಣಾನಂತರ ಆ ಧರ್ಮಶಾಸ್ತ್ರ ತೆಗೆದುಹಾಕಲ್ಪಟ್ಟಿತು. ಕೆಲವು ಕ್ರೈಸ್ತರು ಇದನ್ನು ಮನಗಾಣಲು ತಪ್ಪಿಹೋದರು ಹಾಗೂ ಧರ್ಮಶಾಸ್ತ್ರದಲ್ಲಿನ ಕೆಲವೊಂದು ವಿಷಯಗಳನ್ನು ಇನ್ನೂ ಪಾಲಿಸುತ್ತಿದ್ದರು. *

14 ಪೌಲನು ಇಬ್ರಿಯ ಕ್ರೈಸ್ತರಿಗೆ ಮಹಾ ಯಾಜಕನಾದ ಯೇಸುವೇ ಯಾವುದೇ ಅಪರಿಪೂರ್ಣ ಮಹಾ ಯಾಜಕನಿಗಿಂತ ಶ್ರೇಷ್ಠನೆಂದು ವಿವರಿಸಿದನು. ಇಸ್ರಾಯೇಲ್ಯರೊಂದಿಗಿನ ಒಡಂಬಡಿಕೆಗಿಂತ ಹೊಸ ಒಡಂಬಡಿಕೆಯೇ ಅತ್ಯುತ್ಕೃಷ್ಟವೆಂದು ತೋರಿಸಿದನು. ಹಾಗೂ ‘ಕೈಗಳಿಂದ ಕಟ್ಟಲ್ಪಟ್ಟಿರುವ’ ದೇವಾಲಯಕ್ಕಿಂತ ಯೆಹೋವನ ಮಹಾ ಆಲಯವೇ “ಅತಿ ಶ್ರೇಷ್ಠವೂ ಹೆಚ್ಚು ಪರಿಪೂರ್ಣವೂ” ಆಗಿದೆ ಎಂಬದನ್ನೂ ತೋರಿಸಿಕೊಟ್ಟನು. (ಇಬ್ರಿ. 7:26-28; 8:7-10; 9:11, 12) ಕ್ರೈಸ್ತರು ಹೇಗೆ ಯೆಹೋವನ ವಿಶ್ರಾಂತಿಯ ದಿನವನ್ನು ಸೇರಸಾಧ್ಯ ಎಂಬದನ್ನು ವಿವರಿಸಲು ಪೌಲನು ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ಸಬ್ಬತ್‌ನ ಉದಾಹರಣೆಯನ್ನು ಉಪಯೋಗಿಸಿದನು. ಅವನು ಬರೆದದ್ದು: “ದೇವರ ಜನರಿಗೆ ಒಂದು ಸಬ್ಬತ್‌ ವಿಶ್ರಾಂತಿಯು ಇನ್ನೂ ಇದೆ. ದೇವರು ತನ್ನ ಸ್ವಂತ ಕಾರ್ಯಗಳನ್ನು ಮುಗಿಸಿ ವಿಶ್ರಮಿಸಿಕೊಂಡಂತೆಯೇ, ದೇವರ ವಿಶ್ರಾಂತಿಯಲ್ಲಿ ಸೇರಿದವನು ಸಹ ತನ್ನ ಸ್ವಂತ ಕಾರ್ಯಗಳಿಂದ ವಿಶ್ರಮಿಸಿಕೊಂಡಿದ್ದಾನೆ.” (ಇಬ್ರಿ. 4:8-10) ಯೆಹೋವನ ಅನುಗ್ರಹಕ್ಕೆ ಪಾತ್ರರಾಗಲು ಮೋಶೆಯ ಧರ್ಮಶಾಸ್ತ್ರದಲ್ಲಿರುವ ನಿಯಮಗಳನ್ನು ಪಾಲಿಸಬೇಕೆಂಬ ತಪ್ಪುಕಲ್ಪನೆಯನ್ನು ಆ ಇಬ್ರಿಯ ಕ್ರೈಸ್ತರು ತಮ್ಮ ಮನಸ್ಸಿನಿಂದ ತೊಡೆದುಹಾಕಬೇಕಿತ್ತು. ಏಕೆಂದರೆ ಕ್ರಿ. ಶ. 33ರ ಪಂಚಾಶತ್ತಮ ದಿನದಿಂದ ದೇವರ ಅನುಗ್ರಹವು ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವವರ ಮೇಲೆ ಇರಲಿತ್ತು.

15. ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ವಿಧೇಯತೆ ಅತ್ಯಗತ್ಯ ಏಕೆ?

15 ಮೋಶೆಯ ದಿನಗಳಲ್ಲಿದ್ದ ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಏಕೆ ಸೇರಲಿಲ್ಲ? ಅವಿಧೇಯತೆಯಿಂದಾಗಿಯೇ. ಪೌಲನ ದಿನಗಳಲ್ಲಿದ್ದ ಕೆಲವು ಕ್ರೈಸ್ತರು ದೇವರ ವಿಶ್ರಾಂತಿಯಲ್ಲಿ ಏಕೆ ಸೇರಲಿಲ್ಲ? ಅದೇ ವಿಧೇಯತೆಯಿಂದಾಗಿ. ಧರ್ಮಶಾಸ್ತ್ರದ ಉದ್ದೇಶವು ಈಗಾಗಲೇ ಪೂರೈಸಲ್ಪಟ್ಟಿದೆ ಹಾಗೂ ದೇವರು ತನ್ನ ಜನರನ್ನು ಬೇರೊಂದು ಮಾರ್ಗವಾಗಿ ಮುನ್ನಡೆಸುತ್ತಿದ್ದಾನೆ ಎನ್ನುವುದನ್ನು ಅವರು ಗ್ರಹಿಸಲು ತಪ್ಪಿಹೋದರು.

ಇಂದು ದೇವರ ವಿಶ್ರಾಂತಿಯಲ್ಲಿ ಸೇರುವುದು ಹೇಗೆ?

16, 17. (ಎ) ಇಂದು ದೇವರ ವಿಶ್ರಾಂತಿಯಲ್ಲಿ ಸೇರುವುದು ಹೇಗೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

16 ರಕ್ಷಣೆ ಪಡೆಯಬೇಕಾದರೆ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸಲೇಬೇಕೆಂದು ನಮ್ಮಲ್ಲಿ ಯಾರೂ ನಂಬುವುದಿಲ್ಲ. ಪೌಲನು ಎಫೆಸ ಸಭೆಗೆ ಬರೆದ ಮಾತುಗಳು ಸ್ಪಷ್ಟವಾಗಿವೆ: “ಅಪಾತ್ರ ದಯೆಯಿಂದಾಗಿಯೇ ನೀವು ನಿಮ್ಮ ನಂಬಿಕೆಯ ಮೂಲಕ ರಕ್ಷಿಸಲ್ಪಟ್ಟಿದ್ದೀರಿ; ಇದು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ಉಡುಗೊರೆಯೇ. ಇದು ನಮ್ಮ ಕ್ರಿಯೆಗಳಿಂದ ಉಂಟಾದದ್ದೂ ಅಲ್ಲ; ಆದುದರಿಂದ ಹೊಗಳಿಕೊಳ್ಳುವುದಕ್ಕೆ ಯಾವ ಮನುಷ್ಯನಿಗೂ ಆಧಾರವಿಲ್ಲ.” (ಎಫೆ. 2:8, 9) ಹಾಗಾದರೆ ಇಂದು ಕ್ರೈಸ್ತರು ದೇವರ ವಿಶ್ರಾಂತಿಯಲ್ಲಿ ಹೇಗೆ ಸೇರಸಾಧ್ಯ? ಯೆಹೋವನು ಭೂಮಿಯ ಕಡೆಗಿನ ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ ಏಳನೆಯ ದಿನವನ್ನು ಅಂದರೆ ತನ್ನ ವಿಶ್ರಾಂತಿಯ ದಿನವನ್ನು ಬದಿಗಿಟ್ಟನು ಎಂಬದನ್ನು ನೆನಪಿಸಿಕೊಳ್ಳಿ. ಯೆಹೋವನು ತನ್ನ ಉದ್ದೇಶದ ಕುರಿತು ಹಾಗೂ ಆತನು ನಮ್ಮಿಂದ ಅಪೇಕ್ಷಿಸುವ ಸಂಗತಿಯ ಕುರಿತು ತನ್ನ ಸಂಘಟನೆಯ ಮೂಲಕ ನಮಗೆ ತಿಳಿಸುತ್ತಾನೆ. ನಾವು ಯೆಹೋವನಿಗೆ ವಿಧೇಯರಾಗುವಲ್ಲಿ ಮತ್ತು ಆತನ ಸಂಘಟನೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಲ್ಲಿ ಆತನ ವಿಶ್ರಾಂತಿಯಲ್ಲಿ ಸೇರುವೆವು.

17 ಒಂದುವೇಳೆ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಕೊಡುವ ಬೈಬಲಾಧಾರಿತ ಸಲಹೆಗಳನ್ನು ಅಸಡ್ಡೆಮಾಡಿ ನಾವು ನಮ್ಮದೇ ಆದ ದಾರಿಯಲ್ಲಿ ನಡೆಯುವಲ್ಲಿ ದೇವರ ಉದ್ದೇಶದ ವಿರುದ್ಧ ತಿರುಗಿಬಿದ್ದಂತಿರುವುದು. ಇದು ಯೆಹೋವನೊಂದಿಗಿನ ನಮ್ಮ ಸಮಾಧಾನ ಸಂಬಂಧಕ್ಕೆ ಕುತ್ತುತರುವುದು. ಮುಂದಿನ ಲೇಖನದಲ್ಲಿ, ವಿಧೇಯತೆ ತೋರಿಸಲು ನಮಗೆ ಅವಕಾಶ ನೀಡುವ ಕೆಲವೊಂದು ಸನ್ನಿವೇಶಗಳನ್ನು ಪರಿಗಣಿಸುವೆವು. ಈ ಸನ್ನಿವೇಶಗಳಲ್ಲಿ ನಾವು ಮಾಡುವ ನಿರ್ಣಯಗಳು ನಾವು ದೇವರ ವಿಶ್ರಾಂತಿಯಲ್ಲಿ ಸೇರಿದ್ದೇವೋ ಇಲ್ಲವೋ ಎನ್ನುವುದನ್ನು ತೋರಿಸಿಕೊಡುತ್ತವೆ.

[ಪಾದಟಿಪ್ಪಣಿಗಳು]

^ ಪ್ಯಾರ. 3 ಸಬ್ಬತ್‌ ದಿನದಂದು ಯಾಜಕರೂ ಲೇವಿಯರೂ ದೇವಾಲಯದಲ್ಲಿ ಕೆಲಸಗಳನ್ನು ಮಾಡುತ್ತಿದ್ದರಾದರೂ ‘ನಿರ್ದೋಷಿಗಳಾಗಿಯೇ ಉಳಿದರು.’ ಯೇಸು ದೇವರ ಮಹಾ ಆಧ್ಯಾತ್ಮಿಕ ದೇವಾಲಯದ ಮಹಾ ಯಾಜಕನಾಗಿದ್ದಾನೆ. ಆದ್ದರಿಂದ ಅವನು ತನ್ನ ಆಧ್ಯಾತ್ಮಿಕ ನೇಮಕವನ್ನು ಸಬ್ಬತ್‌ ದಿನದಂದು ಪೂರೈಸಿದ್ದು ತಪ್ಪಾಗಿರಲಿಲ್ಲ.—ಮತ್ತಾ. 12:5, 6.

^ ಪ್ಯಾರ. 13 ಇಬ್ರಿಯ ಕ್ರೈಸ್ತರು ಕ್ರಿ. ಶ. 33ರ ಪಂಚಾಶತ್ತಮದ ನಂತರವೂ ದೋಷಪರಿಹಾರಕ ದಿನದಂದು ಯಜ್ಞಗಳನ್ನು ಅರ್ಪಿಸುತ್ತಿದ್ದರೋ ಇಲ್ಲವೋ ಎಂಬದು ನಮಗೆ ಸರಿಯಾಗಿ ತಿಳಿದಿಲ್ಲ. ಒಂದುವೇಳೆ ಹಾಗೆ ಮಾಡಿರುತ್ತಿದ್ದಲ್ಲಿ ಅವರು ಯೇಸುವಿನ ಯಜ್ಞಕ್ಕೆ ಅಗೌರವ ತೋರಿಸುತ್ತಿದ್ದರು. ಆದರೆ ಕೆಲವರು ಮೋಶೆಯ ಧರ್ಮಶಾಸ್ತ್ರದ ಬೇರೆ ಕೆಲವೊಂದು ಪದ್ಧತಿಗಳನ್ನು ಇನ್ನೂ ಪಾಲಿಸುತ್ತಿದ್ದರೆಂಬದಂತೂ ನಿಶ್ಚಯ.—ಗಲಾ. 4:9-11.

ಧ್ಯಾನಕ್ಕಾಗಿ ಪ್ರಶ್ನೆಗಳು

• ದೇವರು ವಿಶ್ರಮಿಸಿದ ಏಳನೆಯ ದಿನದ ಉದ್ದೇಶವೇನು?

• ಇಂದು ಸಹ ಏಳನೆಯ ದಿನ ಮುಂದುವರಿಯುತ್ತಿದೆ ಎಂದು ನಾವು ಹೇಗೆ ಹೇಳಬಲ್ಲೆವು?

• ಮೋಶೆಯ ದಿನಗಳಲ್ಲಿದ್ದ ಇಸ್ರಾಯೇಲ್ಯರು ಹಾಗೂ ಒಂದನೆಯ ಶತಮಾನದ ಕೆಲವು ಕ್ರೈಸ್ತರು ದೇವರ ವಿಶ್ರಾಂತಿಯಲ್ಲಿ ಏಕೆ ಸೇರಲಿಲ್ಲ?

• ಇಂದು ದೇವರ ವಿಶ್ರಾಂತಿಯಲ್ಲಿ ಸೇರುವುದು ಹೇಗೆ?

[ಅಧ್ಯಯನ ಪ್ರಶ್ನೆಗಳು]

[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಾವು ಯೆಹೋವನಿಗೆ ವಿಧೇಯರಾಗುವಲ್ಲಿ ಮತ್ತು ಆತನ ಸಂಘಟನೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಲ್ಲಿ ಆತನ ವಿಶ್ರಾಂತಿಯಲ್ಲಿ ಸೇರುವೆವು

[ಪುಟ 26, 27ರಲ್ಲಿರುವ ಚಿತ್ರಗಳು]

ದೇವಜನರು ಆತನ ವಿಶ್ರಾಂತಿಯಲ್ಲಿ ಸೇರಬೇಕಾದರೆ ಏನು ಮಾಡುತ್ತಿರಬೇಕು?