ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಪ್ರೀತಿಪರ ಮಾರ್ಗದರ್ಶನವನ್ನು ಅನುಸರಿಸುತ್ತೀರೋ?

ಯೆಹೋವನ ಪ್ರೀತಿಪರ ಮಾರ್ಗದರ್ಶನವನ್ನು ಅನುಸರಿಸುತ್ತೀರೋ?

ಯೆಹೋವನ ಪ್ರೀತಿಪರ ಮಾರ್ಗದರ್ಶನವನ್ನು ಅನುಸರಿಸುತ್ತೀರೋ?

“ಎಲ್ಲಾ ಮಿಥ್ಯಾಮಾರ್ಗಗಳನ್ನು ಹಗೆಮಾಡುತ್ತೇನೆ.”—ಕೀರ್ತ. 119:128.

1, 2. (ಎ) ಒಂದು ಸ್ಥಳಕ್ಕೆ ತಲುಪಲು ಮಾರ್ಗದರ್ಶನ ಕೇಳುವಾಗ ಯಾವ ರೀತಿಯ ಎಚ್ಚರಿಕೆಯನ್ನು ನೀವು ಗಣ್ಯಮಾಡುವಿರಿ? ಏಕೆ? (ಬಿ) ಯೆಹೋವನು ತನ್ನ ಸೇವಕರಿಗೆ ಯಾವ ರೀತಿಯ ಎಚ್ಚರಿಕೆಗಳನ್ನು ಕೊಡುತ್ತಾನೆ? ಏಕೆ?

ನೀವು ಒಂದು ಸ್ಥಳಕ್ಕೆ ಪ್ರಯಾಣಿಸಬೇಕಿದೆ ಎಂದು ನೆನಸಿ. ಆದರೆ ನಿಮಗೆ ದಾರಿ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ದಾರಿ ಚೆನ್ನಾಗಿ ಗೊತ್ತಿರುವ ಭರವಸಾರ್ಹ ಸ್ನೇಹಿತನ ಬಳಿ ನೀವು ಮಾರ್ಗದರ್ಶನ ಕೇಳುತ್ತೀರಿ. ಆಗ ಅವನು ಮಾರ್ಗದ ಪೂರ್ಣ ವಿವರವನ್ನು ತಿಳಿಸುವುದರ ಜೊತೆಗೆ, “ಜಾಗ್ರತೆ! ಮುಂದೆ ಒಂದು ತಿರುವು ಸಿಗುತ್ತೆ. ಅಲ್ಲಿರುವ ಸೂಚನಾಫಲಕ ನೋಡಿ ಆ ಕಡೆ ತಿರುಗಬೇಡ. ಎಷ್ಟೋ ಜನರು ಆ ಕಡೆ ಹೋಗಿ ದಾರಿತಪ್ಪಿದ್ದಾರೆ” ಎಂಬ ಎಚ್ಚರಿಕೆಯನ್ನೂ ಕೊಡುತ್ತಾನೆ. ನಿಮ್ಮ ಬಗ್ಗೆ ಅವನಿಗಿರುವ ಕಾಳಜಿಯನ್ನು ಗಣ್ಯಮಾಡುತ್ತಾ ಅವನ ಎಚ್ಚರಿಕೆಯನ್ನು ನೀವು ಪಾಲಿಸುವಿರೋ? ಕೆಲವು ವಿಧಗಳಲ್ಲಿ ಯೆಹೋವನು ಸಹ ಆ ಸ್ನೇಹಿತನಂತಿದ್ದಾನೆ. ನಿತ್ಯಜೀವವೆಂಬ ನಮ್ಮ ಗಮ್ಯಸ್ಥಾನವನ್ನು ತಲುಪುವುದು ಹೇಗೆಂಬ ಬಗ್ಗೆ ಆತನು ನಮಗೆ ಸ್ಪಷ್ಟ ಮಾರ್ಗದರ್ಶನಗಳನ್ನು ಕೊಡುತ್ತಾನೆ. ಜೊತೆಗೆ ದಾರಿತಪ್ಪುವಂತೆ ಮಾಡಬಲ್ಲ ದುಷ್ಪ್ರಭಾವಗಳ ವಿಷಯದಲ್ಲಿ ನಮಗೆ ಎಚ್ಚರಿಕೆಯನ್ನೂ ಕೊಡುತ್ತಾನೆ.—ಧರ್ಮೋ. 5:32; ಯೆಶಾ. 30:21.

2 ಅವುಗಳಲ್ಲಿ ಕೆಲವು ಪ್ರಭಾವಗಳ ಬಗ್ಗೆ ನಾವು ಈ ಲೇಖನದಲ್ಲೂ ಮುಂದಿನ ಲೇಖನದಲ್ಲೂ ಚರ್ಚಿಸಲಿರುವೆವು. ನಮ್ಮ ಸ್ನೇಹಿತನಾದ ಯೆಹೋವ ದೇವರು ಎಚ್ಚರಿಕೆಗಳನ್ನು ಕೊಡುವುದು ನಮ್ಮ ಮೇಲಿನ ಕಾಳಜಿ ಮತ್ತು ಪ್ರೀತಿಯಿಂದಲೇ ಎನ್ನುವುದನ್ನು ಮನಸ್ಸಿನಲ್ಲಿಡೋಣ. ನಾವು ನಮ್ಮ ಗಮ್ಯಸ್ಥಾನವನ್ನು ತಲುಪಬೇಕೆನ್ನುವುದೇ ಆತನ ಅಪೇಕ್ಷೆ. ದುಷ್ಪ್ರಭಾವಗಳಿಗೆ ಒಳಗಾಗಿ ಜನರು ದಾರಿತಪ್ಪುವುದನ್ನು ನೋಡುವಾಗ ಆತನಿಗೆ ತುಂಬ ನೋವಾಗುತ್ತದೆ. (ಯೆಹೆ. 33:11) ಈ ಲೇಖನದಲ್ಲಿ ನಾವು ಮೂರು ಕೆಟ್ಟ ಪ್ರಭಾವಗಳ ಬಗ್ಗೆ ಚರ್ಚಿಸಲಿದ್ದೇವೆ. ಮೊದಲನೆಯದು ಬಾಹ್ಯ ಪ್ರಭಾವ, ಎರಡನೆಯದು ಆಂತರಿಕ ಪ್ರಭಾವ, ಮೂರನೆಯದು ಅವಾಸ್ತವಿಕ ಆದರೆ ತುಂಬ ಅಪಾಯಕಾರಿ ಪ್ರಭಾವ. ಈ ಪ್ರಭಾವಗಳು ಯಾವುವು? ಅವುಗಳನ್ನು ಪ್ರತಿರೋಧಿಸಲು ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ? ಈ ಪ್ರಶ್ನೆಗಳಿಗೆ ನಾವು ಉತ್ತರ ತಿಳಿಯಬೇಕಾಗಿದೆ. ಈ ಪ್ರಭಾವಗಳ ಕುರಿತು ತಿಳಿದಿದ್ದ ಬೈಬಲ್‌ ಬರಹಗಾರನೊಬ್ಬನು ಬರೆದದ್ದು: “ಎಲ್ಲಾ ಮಿಥ್ಯಾಮಾರ್ಗಗಳನ್ನು ಹಗೆಮಾಡುತ್ತೇನೆ.” (ಕೀರ್ತ. 119:128) ನಿಮ್ಮಲ್ಲೂ ಅಂಥ ಹಗೆತನವಿದೆಯೋ? ಎಲ್ಲಾ “ಮಿಥ್ಯಾಮಾರ್ಗಗಳನ್ನು” ತೊರೆಯಲು ನಾವು ಹೇಗೆ ದೃಢನಿರ್ಧಾರ ಮಾಡಬಹುದೆಂಬದನ್ನು ಈಗ ನೋಡೋಣ.

ಬಹುಮಂದಿಯನ್ನು ಹಿಂಬಾಲಿಸಬೇಡಿ

3. (ಎ) ದಾರಿ ತಿಳಿಯದಾಗುವಾಗ ಇತರ ಪ್ರಯಾಣಿಕರನ್ನು ಹಿಂಬಾಲಿಸುವುದು ಅಪಾಯಕರವೇಕೆ? (ಬಿ) ವಿಮೋಚನಕಾಂಡ 23:2ರಲ್ಲಿ ಯಾವ ಪ್ರಾಮುಖ್ಯ ಮೂಲತತ್ತ್ವವಿದೆ?

3 ದೀರ್ಘ ಪ್ರಯಾಣವನ್ನು ಮಾಡುತ್ತಿರುವಾಗ ಮಧ್ಯೆ ದಾರಿ ತಿಳಿಯದಾಗುವಲ್ಲಿ ನೀವೇನು ಮಾಡುವಿರಿ? ಇತರ ಪ್ರಯಾಣಿಕರನ್ನು ಹಿಂಬಾಲಿಸುವ ಮನಸ್ಸು ನಿಮಗಾಗಬಹುದು. ಅದರಲ್ಲೂ ಅನೇಕ ಜನರು ಒಂದೇ ದಾರಿಯಲ್ಲಿ ಹೋಗುತ್ತಿರುವುದನ್ನು ನೋಡುವಾಗ ಅದೇ ಸರಿಯಾದ ದಾರಿಯೆಂದೆಣಿಸಿ ನೀವೂ ಅವರ ಹಿಂದೆ ಹೋಗುವ ಸಾಧ್ಯತೆ ಹೆಚ್ಚು. ಆದರೆ ಹಾಗೆ ಮಾಡುವುದು ಅಪಾಯಕರ! ಏಕೆಂದರೆ ಆ ಪ್ರಯಾಣಿಕರು ನೀವು ಎಲ್ಲಿಗೆ ಹೋಗಬೇಕೆಂದಿದ್ದೀರೋ ಅಲ್ಲಿಗೆ ಹೋಗುತ್ತಿರಲಿಕ್ಕಿಲ್ಲ. ಅಥವಾ ನಿಮ್ಮಂತೆಯೇ ಅವರೂ ದಾರಿತಪ್ಪಿರಬಹುದು. ಈ ದೃಷ್ಟಾಂತವು ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮವೊಂದರಲ್ಲಿನ ಮೂಲತತ್ತ್ವವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ನ್ಯಾಯನಿರ್ಣಾಯಕ ವಿಷಯಗಳಲ್ಲಿ ನ್ಯಾಯಾಧಿಪತಿಗಳಾಗಿ ಇಲ್ಲವೆ ಸಾಕ್ಷಿಗಳಾಗಿ ಕಾರ್ಯನಿರ್ವಹಿಸುವವರಿಗೆ ಬಹುಮಂದಿಯನ್ನು ಹಿಂಬಾಲಿಸಬಾರದೆಂಬ ಎಚ್ಚರಿಕೆಯನ್ನು ಕೊಡಲಾಗಿತ್ತು. (ವಿಮೋಚನಕಾಂಡ 23:2 ಓದಿ.) ಏಕೆಂದರೆ ಸಮಾನಸ್ಥರ ಒತ್ತಡಕ್ಕೆ ಮಣಿದು ನ್ಯಾಯವನ್ನು ವಕ್ರಗೊಳಿಸುವ ಪ್ರವೃತ್ತಿ ಅಪರಿಪೂರ್ಣ ಮಾನವರಲ್ಲಿದೆ. ಆದರೆ ಬಹುಮಂದಿಯನ್ನು ಹಿಂಬಾಲಿಸಬಾರದು ಎನ್ನುವ ಮೂಲತತ್ತ್ವ ಕೇವಲ ನ್ಯಾಯನಿರ್ಣಾಯಕ ವಿಷಯಗಳಿಗೆ ಮಾತ್ರ ಅನ್ವಯಿಸುತ್ತದೋ? ಖಂಡಿತ ಇಲ್ಲ!

4, 5. ಯೆಹೋಶುವ ಮತ್ತು ಕಾಲೇಬರು ಬಹುಮಂದಿಯನ್ನು ಹಿಂಬಾಲಿಸುವ ಒತ್ತಡಕ್ಕೊಳಗಾಗಿದ್ದು ಹೇಗೆ? ಅದನ್ನು ಪ್ರತಿರೋಧಿಸಲು ಯಾವುದು ಅವರನ್ನು ಶಕ್ತಗೊಳಿಸಿತು?

4 ವಾಸ್ತವದಲ್ಲಿ, ಬಹುಮಂದಿಯನ್ನು ಹಿಂಬಾಲಿಸುವ ಒತ್ತಡ ನಮ್ಮ ಮೇಲೆ ಯಾವುದೇ ಸಮಯದಲ್ಲಿ ಬರಬಹುದು. ಅದು ದಿಢೀರನೆ ಏಳಬಹುದು ಮತ್ತು ಪ್ರತಿರೋಧಿಸಲು ತುಂಬ ಕಷ್ಟವಾಗಿರಬಹುದು. ಯೆಹೋಶುವ ಮತ್ತು ಕಾಲೇಬರು ಒಮ್ಮೆ ಎದುರಿಸಿದ ಸಮಾನಸ್ಥರ ಒತ್ತಡವನ್ನು ಪರಿಗಣಿಸಿ. ವಾಗ್ದತ್ತ ದೇಶವನ್ನು ಸಂಚರಿಸಿ ನೋಡಲು ಹೋದ 12 ಮಂದಿಯಲ್ಲಿ ಇವರಿಬ್ಬರೂ ಇದ್ದರು. ಹಿಂದಿರುಗಿ ಬಂದ ನಂತರ ಉಳಿದ 10 ಮಂದಿ ಧೈರ್ಯಗೆಡಿಸುವ ತೀರಾ ನಕಾರಾತ್ಮಕ ವರದಿಯನ್ನು ನೀಡಿದರು. ಉದಾಹರಣೆಗೆ, ನೆಫೀಲಿಯ ವಂಶದವರಾದ ದೈತ್ಯ ಪುರುಷರು ಅಲ್ಲಿದ್ದಾರೆಂದು ಅವರು ತಿಳಿಸಿದರು. (ಆದಿ. 6:4) ಈ ವರದಿಯಲ್ಲಿ ಯಾವುದೇ ಹುರುಳಿರಲಿಲ್ಲ. ಏಕೆಂದರೆ ಮಿಶ್ರಸಂತತಿಯವರೆಲ್ಲರೂ ಅನೇಕ ಶತಮಾನಗಳ ಮುಂಚೆಯೇ ಜಲಪ್ರಳಯದಲ್ಲಿ ನಾಶವಾಗಿ ಹೋಗಿದ್ದರು, ಒಬ್ಬರೂ ಉಳಿದಿರಲಿಲ್ಲ. ಆದರೆ ಯಾವುದೇ ಆಧಾರವಿಲ್ಲದ ಅಭಿಪ್ರಾಯಗಳು ಸಹ ದುರ್ಬಲ ನಂಬಿಕೆಯುಳ್ಳವರ ಮೇಲೆ ಪ್ರಭಾವಬೀರಬಲ್ಲವು. ಇಸ್ರಾಯೇಲ್ಯರ ವಿಷಯದಲ್ಲೂ ಅದೇ ಸಂಭವಿಸಿತು. ಆ ಹತ್ತು ಗೂಢಚಾರರು ಕೊಟ್ಟ ನಕಾರಾತ್ಮಕ ವರದಿ ಜನರೆಲ್ಲರಲ್ಲಿ ಭಯಭೀತಿಯನ್ನು ಹುಟ್ಟಿಸಿತು. ಅನೇಕರು, ಯೆಹೋವನ ಮಾರ್ಗದರ್ಶನವನ್ನು ಅನುಸರಿಸಿ ವಾಗ್ದತ್ತ ದೇಶವನ್ನು ಪ್ರವೇಶಿಸುವುದು ದೊಡ್ಡ ತಪ್ಪೆಂಬ ಅಭಿಪ್ರಾಯ ತಾಳಿದರು. ಆ ಕಷ್ಟಕರ ಸನ್ನಿವೇಶದಲ್ಲಿ ಯೆಹೋಶುವ ಮತ್ತು ಕಾಲೇಬರು ಏನು ಮಾಡಿದರು?—ಅರ. 13:25-33.

5 ಅವರು ಬಹುಮಂದಿಯನ್ನು ಹಿಂಬಾಲಿಸಲಿಲ್ಲ. ಇಸ್ರಾಯೇಲ್ಯರು ಸತ್ಯವನ್ನು ಕೇಳಲು ಇಷ್ಟಪಡಲಿಲ್ಲವಾದರೂ ಅವರಿಬ್ಬರು ಅದನ್ನು ಹೇಳಲು ಭಯಪಡಲಿಲ್ಲ. ಕಲ್ಲೆಸೆದು ಕೊಲ್ಲಲ್ಪಡುವ ಬೆದರಿಕೆಯಿದ್ದರೂ ಅವರದನ್ನು ಹೇಳಲು ಹಿಂದೆಸರಿಯಲಿಲ್ಲ. ಅಂಥ ಧೈರ್ಯ ಅವರಿಗೆ ಬಂದದ್ದಾದರೂ ಎಲ್ಲಿಂದ? ಯೆಹೋವನಲ್ಲಿ ಅವರಿಗಿದ್ದ ನಂಬಿಕೆಯಿಂದಲೇ. ನಂಬಿಕೆಯುಳ್ಳವರು ಮನುಷ್ಯರ ಆಧಾರರಹಿತ ಮಾತುಗಳು ಮತ್ತು ಯೆಹೋವ ದೇವರ ಪವಿತ್ರ ವಾಗ್ದಾನಗಳ ನಡುವಣ ವ್ಯತ್ಯಾಸವನ್ನು ಸ್ಪಷ್ಟವಾಗಿ ಗ್ರಹಿಸಬಲ್ಲರು. ಯೆಹೋಶುವ ಕಾಲೇಬರು ಯೆಹೋವನಲ್ಲಿ ತಮಗಿದ್ದ ನಂಬಿಕೆಯ ಬಗ್ಗೆ ಸಮಯಾನಂತರ ಮಾತಾಡುವಾಗ ಆತನು ತನ್ನ ವಾಗ್ದಾನಗಳನ್ನು ತಪ್ಪದೆ ಪೂರೈಸುತ್ತಾನೆಂದು ಎಲ್ಲರಿಗೂ ತಿಳಿಸಿದರು. (ಯೆಹೋಶುವ 14:6, 8; 23:2, 14 ಓದಿ.) ಅವರಿಬ್ಬರೂ ತಮ್ಮ ನಂಬಿಗಸ್ತ ದೇವರಿಗೆ ಸದಾ ಅಂಟಿಕೊಂಡಿದ್ದರು. ಅಪನಂಬಿಗಸ್ತರಾದ ಬಹುಮಂದಿಯನ್ನು ಹಿಂಬಾಲಿಸಲು ಹೋಗಿ ದೇವರನ್ನು ನೋಯಿಸುವುದನ್ನು ಅವರು ನೆನಸಿಯೂ ಇರಲಿಕ್ಕಿಲ್ಲ. ಹಾಗಾಗಿ ಅವರು ದೃಢವಾಗಿ ನಿಂತರು ಮತ್ತು ಇಂದು ನಮ್ಮೆಲ್ಲರಿಗಾಗಿ ಅತ್ಯುತ್ಕೃಷ್ಟ ಮಾದರಿಯನ್ನಿಟ್ಟರು.—ಅರ. 14:1-10.

6. ನಾವು ಯಾವ ವಿಷಯಗಳಲ್ಲಿ ಬಹುಮಂದಿಯನ್ನು ಹಿಂಬಾಲಿಸುವ ಅಪಾಯವಿದೆ?

6 ನಿಮಗೆಂದಾದರೂ ಬಹುಮಂದಿಯನ್ನು ಹಿಂಬಾಲಿಸುವ ಮನಸ್ಸಾದದ್ದುಂಟೋ? ಇಂದು ಯೆಹೋವನಿಂದ ದೂರಸರಿದಿರುವ ಮತ್ತು ಆತನ ನೈತಿಕ ಮಟ್ಟಗಳನ್ನು ಕಡೆಗಣಿಸುವ ಜನರು ಬಹುಮಂದಿ ಇದ್ದಾರೆ. ಈ ಬಹುಮಂದಿ ಮನೋರಂಜನೆ ಮತ್ತು ವಿನೋದವಿಹಾರಗಳ ಸಂಬಂಧದಲ್ಲಿ ಆಧಾರರಹಿತ ವಿಚಾರಗಳನ್ನು ಹಬ್ಬಿಸುತ್ತಾರೆ. ಉದಾಹರಣೆಗೆ, ಅನೈತಿಕತೆ, ಹಿಂಸೆ ಮತ್ತು ಪ್ರೇತವ್ಯವಹಾರ ಸಂಬಂಧಿತ ದೂರದರ್ಶನದ ಕಾರ್ಯಕ್ರಮಗಳನ್ನು ಮತ್ತು ಚಲನಚಿತ್ರಗಳನ್ನು ನೋಡುವುದರಲ್ಲಾಗಲಿ ಅಂಥ ವಿಡಿಯೋ ಗೇಮ್‌ಗಳನ್ನು ಆಡುವುದರಲ್ಲಾಗಲಿ ಯಾವುದೇ ತಪ್ಪಿಲ್ಲವೆಂದು ಹೇಳುತ್ತಾರೆ. (2 ತಿಮೊ. 3:1-5) ನಿಮಗಾಗಿಯೂ ನಿಮ್ಮ ಕುಟುಂಬಕ್ಕಾಗಿಯೂ ಮನೋರಂಜನೆ ಮತ್ತು ವಿನೋದವಿಹಾರವನ್ನು ಆಯ್ಕೆಮಾಡುವಾಗ ಇತರರ ಸಡಿಲ ಮನಸ್ಸಾಕ್ಷಿ ನಿಮ್ಮ ನಿರ್ಣಯಗಳ ಮೇಲೆ ಪ್ರಭಾವಬೀರುವಂತೆಯೂ ನಿಮ್ಮ ಮನಸ್ಸಾಕ್ಷಿಯನ್ನು ರೂಪಿಸುವಂತೆಯೂ ಬಿಡುತ್ತೀರೋ? ಹಾಗೆ ಮಾಡುವಲ್ಲಿ ನೀವು ಬಹುಮಂದಿಯನ್ನು ಹಿಂಬಾಲಿಸಿದಂತಾಗುವುದಲ್ಲವೇ?

7, 8. (ಎ) ನಮ್ಮ “ಗ್ರಹಣ ಶಕ್ತಿಗಳನ್ನು” ಹೇಗೆ ತರಬೇತುಗೊಳಿಸಸಾಧ್ಯ? ಅಂಥ ತರಬೇತಿಯು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದಕ್ಕಿಂತ ಹೆಚ್ಚು ಉಪಯುಕ್ತವೇಕೆ? (ಬಿ) ಕ್ರೈಸ್ತ ಮಕ್ಕಳಲ್ಲಿ ಅನೇಕರ ಉದಾಹರಣೆ ಹೃದಯಸ್ಪರ್ಶಿಯಾಗಿರುವುದೇಕೆ?

7 ನಿರ್ಣಯಗಳನ್ನು ಮಾಡಲು ಸಹಾಯಕ್ಕಾಗಿ ಯೆಹೋವನು ನಮಗೆ ಅಮೂಲ್ಯ ಉಡುಗೊರೆಯನ್ನು ಅಂದರೆ “ಗ್ರಹಣ ಶಕ್ತಿಗಳನ್ನು” ಕೊಟ್ಟಿದ್ದಾನೆ. ಆದರೆ ಆ ಶಕ್ತಿಗಳನ್ನು “ಉಪಯೋಗದ ಮೂಲಕ” ತರಬೇತುಗೊಳಿಸುವ ಅಗತ್ಯವಿದೆ. (ಇಬ್ರಿ. 5:14) ಒಂದುವೇಳೆ ನಾವು ಬಹುಮಂದಿ ಮಾಡುವುದನ್ನೇ ಮಾಡುವಲ್ಲಿ ಇಲ್ಲವೆ ಪ್ರತಿಯೊಂದು ವಿಷಯಕ್ಕೂ ಸ್ಪಷ್ಟವಾದ ನಿಯಮಗಳಿರಬೇಕೆಂದು ನಿರೀಕ್ಷಿಸುವಲ್ಲಿ ನಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಲಾರೆವು. ಆದ್ದರಿಂದಲೇ ಯೆಹೋವನ ಸೇವಕರಿಗೆ ಪ್ರತಿಯೊಂದು ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಕೊಡಲಾಗಿಲ್ಲ. ಉದಾಹರಣೆಗೆ, ಯಾವೆಲ್ಲ ಚಲನಚಿತ್ರಗಳನ್ನು, ಪುಸ್ತಕಗಳನ್ನು ಮತ್ತು ಇಂಟರ್‌ನೆಟ್‌ ಸೈಟ್‌ಗಳನ್ನು ನೋಡಬಾರದೆಂಬ ಬಗ್ಗೆ ಯಾವುದೇ ಪಟ್ಟಿ ಇಲ್ಲ. ಏಕೆಂದರೆ, ಈ ಲೋಕವು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಹಾಗಾಗಿ ಅಂಥ ಪಟ್ಟಿಯು ನಿಮಿಷಮಾತ್ರದಲ್ಲೇ ಹಳತಾಗುವುದು. (1 ಕೊರಿಂ. 7:31) ಅಲ್ಲದೆ, ಬೈಬಲ್‌ ಮೂಲತತ್ತ್ವಗಳನ್ನು ಜಾಗರೂಕತೆಯಿಂದಲೂ ಪ್ರಾರ್ಥನಾಪೂರ್ವಕವಾಗಿಯೂ ತೂಗಿನೋಡಿ ಅವುಗಳಿಗನುಸಾರ ನಿರ್ಣಯ ಮಾಡುವ ನಮ್ಮ ಸಾಮರ್ಥ್ಯವನ್ನು ಅದು ಕಸಿದುಕೊಳ್ಳುತ್ತದೆ.—ಎಫೆ. 5:10.

8 ನಾವು ಬೈಬಲಾಧಾರಿತ ನಿರ್ಣಯಗಳನ್ನು ಮಾಡುವಾಗ ಅನೇಕರಿಗೆ ಅದು ಇಷ್ಟವಾಗಲಿಕ್ಕಿಲ್ಲ ನಿಜ. ಶಾಲೆಯಲ್ಲಿ ಕ್ರೈಸ್ತ ಮಕ್ಕಳಿಗೆ, ಬಹುಮಂದಿ ನೋಡುವುದನ್ನು ನೋಡುವ ಮತ್ತು ಮಾಡುವುದನ್ನು ಮಾಡುವ ಒತ್ತಡ ಎದುರಾಗಬಹುದು. (1 ಪೇತ್ರ 4:4) ಹಾಗಿದ್ದರೂ ಕ್ರೈಸ್ತ ಆಬಾಲವೃದ್ಧರೆಲ್ಲರೂ ಯೆಹೋಶುವ ಮತ್ತು ಕಾಲೇಬರ ನಂಬಿಕೆಯನ್ನು ಅನುಕರಿಸುತ್ತಾ ಬಹುಮಂದಿಯನ್ನು ಹಿಂಬಾಲಿಸದಿರುವುದನ್ನು ನೋಡುವುದು ಎಷ್ಟೊಂದು ಆನಂದಕರ!

‘ಹೃದಯಕ್ಕೂ ಕಣ್ಣಿಗೂ ತೋರಿದಂತೆ’ ನಡೆಯಬೇಡಿ

9. (ಎ) ಪ್ರಯಾಣದ ಸಮಯದಲ್ಲಿ ಇಷ್ಟಬಂದಂತೆ ಎಲ್ಲೆಂದರಲ್ಲಿ ಹೋಗುವುದು ಅಪಾಯಕಾರಿಯೇಕೆ? (ಬಿ) ಅರಣ್ಯಕಾಂಡ 15:37-39ರಲ್ಲಿನ ನಿಯಮವು ಪ್ರಾಚೀನ ಸಮಯದ ದೇವಜನರಿಗೆ ಪ್ರಾಮುಖ್ಯವಾಗಿತ್ತೇಕೆ?

9 ನಾವು ಚರ್ಚಿಸಲಿರುವ ಅಪಾಯಕಾರಿ ಪ್ರಭಾವಗಳಲ್ಲಿ ಎರಡನೆಯದು ಆಂತರಿಕ ಪ್ರಭಾವವಾಗಿದೆ. ಅದನ್ನು ಹೀಗೆ ದೃಷ್ಟಾಂತಿಸಬಹುದು: ನೀವೊಂದು ಸ್ಥಳಕ್ಕೆ ಪ್ರಯಾಣಿಸುತ್ತಿರುವಲ್ಲಿ, ನಿಮ್ಮ ಬಳಿಯಿರುವ ನಕ್ಷೆಯನ್ನು ಬಿಸಾಡಿ ಇಷ್ಟಬಂದಂತೆ ಅಂದವಾದ ದೃಶ್ಯಗಳಿರುವಂತೆ ತೋರುವ ರಸ್ತೆಗಳಲ್ಲೆಲ್ಲ ಚಲಿಸುವಿರೋ? ಹಾಗೆ ಇಷ್ಟಬಂದೆಡೆ ಹೋಗುವಲ್ಲಿ ನೀವು ಖಂಡಿತ ಗುರಿ ತಲುಪಲಾರಿರಿ. ಈ ದೃಷ್ಟಾಂತವು ಯೆಹೋವನು ಪ್ರಾಚೀನ ಇಸ್ರಾಯೇಲ್ಯರಿಗೆ ಕೊಟ್ಟ ಇನ್ನೊಂದು ನಿಯಮದಲ್ಲಿನ ಮೂಲತತ್ತ್ವವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ಆ ನಿಯಮವು ಅರಣ್ಯಕಾಂಡ 15:37-39ರಲ್ಲಿದೆ. (ಓದಿ.) ಗೊಂಡೆಗಳ ಮತ್ತು ನೀಲಿದಾರಗಳ ಕುರಿತಾದ ಈ ನಿಯಮವನ್ನು ಕೊಡಲು ಕಾರಣವೇನೆಂಬದು ಇಂದು ಅನೇಕರಿಗೆ ತಿಳಿದಿಲ್ಲ. ನೀವು ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೀರೋ? ಇಂಥ ನಿಯಮಕ್ಕೆ ವಿಧೇಯತೆ ತೋರಿಸುವುದು, ಸುತ್ತಲಿದ್ದ ವಿಧರ್ಮಿ ಜನರಿಂದ ಭಿನ್ನರಾಗಿರಲು ಮತ್ತು ಪ್ರತ್ಯೇಕವಾಗಿರಲು ದೇವಜನರಿಗೆ ಸಹಾಯಮಾಡಿತು. ಯೆಹೋವನ ಅನುಗ್ರಹವನ್ನು ಪಡೆಯಲು ಮತ್ತು ಅದನ್ನು ಕಾಪಾಡಿಕೊಳ್ಳಲು ಇದು ಅತ್ಯಾವಶ್ಯಕವಾಗಿತ್ತು. (ಯಾಜ. 18:24, 25) ಅಲ್ಲದೆ, ನಿತ್ಯಜೀವವೆಂಬ ಗಮ್ಯಸ್ಥಾನವನ್ನು ನಾವು ತಲುಪದಂತೆ ಮಾಡುವ ಅಪಾಯಕರ ಆಂತರಿಕ ಪ್ರಭಾವವನ್ನೂ ಆ ನಿಯಮವು ಹೊರಗೆಡಹುತ್ತದೆ. ಹೇಗೆ?

10. ಮಾನವರ ಸ್ವಭಾವ ತನಗೆ ಚೆನ್ನಾಗಿ ತಿಳಿದಿದೆಯೆಂದು ಯೆಹೋವನು ಹೇಗೆ ತೋರಿಸಿದ್ದಾನೆ?

10 ಯೆಹೋವನು ಆ ನಿಯಮವನ್ನು ಕೊಟ್ಟದ್ದಕ್ಕೆ ಕಾರಣವನ್ನು ತಿಳಿಸುತ್ತಾ ತನ್ನ ಜನರಿಗೆ ಹೀಗಂದನು: ‘ನೀವು ಮನಸ್ಸಿಗೂ [ಹೃದಯಕ್ಕೂ, NW] ಕಣ್ಣಿಗೂ ತೋರಿದಂತೆ ದಾರಿತಪ್ಪಿ ನಡೆಯಬಾರದು.’ ಯೆಹೋವನು ಮಾನವರ ಸ್ವಭಾವವನ್ನು ಚೆನ್ನಾಗಿ ಬಲ್ಲನು. ನಮ್ಮ ಕಣ್ಣುಗಳು ನೋಡುವಂಥ ವಿಷಯಗಳು ನಮ್ಮ ಹೃದಯವನ್ನು ಅಥವಾ ಆಂತರ್ಯವನ್ನು ಬಹಳ ಸುಲಭವಾಗಿ ತಪ್ಪುಮಾರ್ಗಕ್ಕೆ ನಡಿಸಬಲ್ಲವು ಎಂಬದು ಆತನಿಗೆ ಚೆನ್ನಾಗಿ ತಿಳಿದಿದೆ. ಹಾಗಾಗಿಯೇ ಬೈಬಲ್‌ ಎಚ್ಚರಿಸುವುದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆ. 17:9) ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಎಚ್ಚರಿಕೆ ಎಷ್ಟು ತಕ್ಕದ್ದಾಗಿತ್ತು ಎಂಬದು ನಿಮಗೀಗ ತಿಳಿಯಿತೋ? ತಮ್ಮ ಸುತ್ತಲಿದ್ದ ವಿಧರ್ಮಿ ಜನರನ್ನು ನೋಡಿ ಅವರಂತಾಗುವ ಆಸೆ ಇಸ್ರಾಯೇಲ್ಯರಲ್ಲಿ ಹುಟ್ಟಸಾಧ್ಯವಿದೆ ಎನ್ನುವುದು ಯೆಹೋವನಿಗೆ ತಿಳಿದಿತ್ತು. ಇಸ್ರಾಯೇಲ್ಯರು ಅವರಂತಾಗಲು ಬಯಸಿ ಅವರಂತೆ ಯೋಚಿಸುವ ಮತ್ತು ಕ್ರಿಯೆಗೈಯುವ ಸಾಧ್ಯತೆಯಿತ್ತು.—ಜ್ಞಾನೋ. 13:20.

11. ನಮ್ಮ ಹೃದಯಕ್ಕೂ ಕಣ್ಣಿಗೂ ತೋರಿದಂತೆ ನಡೆಯುವ ಅಪಾಯ ಯಾವಾಗ ಎದುರಾಗಬಹುದು?

11 ನಮ್ಮ ಕಣ್ಣುಗಳು ಏನನ್ನು ನೋಡುತ್ತವೋ ಅದರಿಂದ ನಮ್ಮ ವಂಚಕ ಹೃದಯ ತಪ್ಪುದಾರಿಗೆ ಸೆಳೆಯಲ್ಪಡುವುದು ಇಂದು ಇನ್ನೂ ಸುಲಭ. ಶಾರೀರಿಕ ಇಚ್ಛೆಗಳನ್ನು ಪೂರೈಸಿಕೊಳ್ಳಲು ಕುಮ್ಮಕ್ಕುಕೊಡುವ ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. ಹೀಗಿರುವಾಗ ಅರಣ್ಯಕಾಂಡ 15:39ರಲ್ಲಿರುವ ಮೂಲತತ್ತ್ವವನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು? ಉದಾಹರಣೆಗೆ, ಉಡುಪಿನ ವಿಷಯದಲ್ಲಿ ನಮ್ಮ ಹೃದಯಕ್ಕೂ ಕಣ್ಣಿಗೂ ತೋರಿದಂತೆ ನಡೆಯುವ ಅಪಾಯವಿದೆ. ನಮ್ಮ ಸುತ್ತಲಿರುವ ಜನರು ಇತರರಲ್ಲಿ ಅನೈತಿಕ ಯೋಚನೆಗಳನ್ನು ಹುಟ್ಟಿಸುವಂಥ ರೀತಿಯಲ್ಲಿ ಉಡುಪನ್ನು ಧರಿಸುತ್ತಾರೆ. ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ನಮ್ಮ ಅಕ್ಕಪಕ್ಕ ವಾಸಿಸುವ ಜನರು ಈ ವಿಧದ ಉಡುಪನ್ನು ಧರಿಸುತ್ತಾರೆ. ನಾವು ಯಾವಾಗಲೂ ಇಂಥ ಜನರನ್ನು ನೋಡುವುದರಿಂದ ಅವರಂತಾಗುವ ಇಚ್ಛೆ ನಮ್ಮಲ್ಲಿ ಬಲವಾಗಬಹುದು. ತದನಂತರ ನಾವು ಕ್ರೈಸ್ತರಂತಲ್ಲ ಬದಲಾಗಿ ಅವರಂತೆ ಬಟ್ಟೆ ಧರಿಸಲಾರಂಭಿಸುವೆವು.—ರೋಮ. 12:1, 2.

12, 13. (ಎ) ಕಣ್ಣುಹಾಯಿಸಬಾರದಾದ ಕಡೆಗಳಲ್ಲಿ ನಮ್ಮ ಕಣ್ಣುಗಳು ಅಲೆದಾಡುತ್ತಿರುವಲ್ಲಿ ನಾವೇನು ಮಾಡಬೇಕು? (ಬಿ) ಇತರರಿಗೆ ಪ್ರಲೋಭನೆಯೊಡ್ಡದಿರಲು ನಮ್ಮನ್ನು ಯಾವುದು ಪ್ರಚೋದಿಸುತ್ತದೆ?

12 ನಾವು ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವ ಜರೂರಿಯಿದೆ. ಕಣ್ಣುಹಾಯಿಸಬಾರದಾದ ಕಡೆಗಳಲ್ಲಿ ನಮ್ಮ ಕಣ್ಣುಗಳು ಅಲೆದಾಡುತ್ತಿರುವಲ್ಲಿ, ನಂಬಿಗಸ್ತ ಯೋಬನು ಮಾಡಿದ ದೃಢಸಂಕಲ್ಪವನ್ನು ನಾವು ಜ್ಞಾಪಿಸಿಕೊಳ್ಳಬೇಕು. ಅವನು ತನ್ನ ಕಣ್ಣುಗಳೊಡನೆ ಕಟ್ಟುನಿಟ್ಟಿನ ನಿಬಂಧನೆಯನ್ನು ಮಾಡಿಕೊಂಡಿದ್ದನು. ಪರಸ್ತ್ರೀಯನ್ನು ಪ್ರಣಯಾಸಕ್ತಿಯಿಂದ ನೋಡದಿರುವ ದೃಢತೀರ್ಮಾನ ಮಾಡಿದ್ದನು. (ಯೋಬ 31:1) ತದ್ರೀತಿಯ ದೃಢಸಂಕಲ್ಪವನ್ನು ರಾಜ ದಾವೀದನೂ ಮಾಡಿಕೊಂಡಿದ್ದನು. “ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವದಿಲ್ಲ” ಎಂದನವನು. (ಕೀರ್ತ. 101:3) ನಮ್ಮ ಶುದ್ಧ ಮನಸ್ಸಾಕ್ಷಿ ಮತ್ತು ಯೆಹೋವನೊಂದಿನ ನಮ್ಮ ಸಂಬಂಧವನ್ನು ಹಾಳುಮಾಡುವ ವಿಷಯಗಳೆಲ್ಲವೂ ‘ನೀಚ ಕಾರ್ಯಗಳಾಗಿವೆ’ ಇಲ್ಲವೆ ನಿಷ್ಪ್ರಯೋಜಕ ವಿಷಯಗಳಾಗಿವೆ. ಇದರಲ್ಲಿ ನಮ್ಮ ಕಣ್ಣುಗಳಿಗೆ ಆಕರ್ಷಕವಾಗಿ ತೋರುವ ಮತ್ತು ಕೆಟ್ಟದ್ದನ್ನು ಮಾಡುವಂತೆ ಹೃದಯವನ್ನು ಪ್ರೇರಿಸುವ ಎಲ್ಲ ಪ್ರಲೋಭನೆಗಳು ಸೇರಿವೆ.

13 ಇನ್ನೊಂದು ಪಕ್ಕದಲ್ಲಿ, ತಪ್ಪುಕೃತ್ಯಗಳನ್ನು ಯೋಚಿಸುವಂತೆ ನಾವು ಇತರರನ್ನು ಪ್ರಲೋಭಿಸುವಲ್ಲಿ ಒಂದರ್ಥದಲ್ಲಿ ನಾವೇ ಅವರಿಗೆ ನಿಷ್ಪ್ರಯೋಜಕ ವಸ್ತುಗಳಾಗಿಬಿಡುತ್ತೇವೆ. ಆದ್ದರಿಂದಲೇ ಸಭ್ಯವಾದ, ಮರ್ಯಾದೆಗೆ ತಕ್ಕ ಉಡುಪು ಧರಿಸುವಂತೆ ಬೈಬಲ್‌ ಕೊಡುವ ಪ್ರೇರಿತ ಸಲಹೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. (1 ತಿಮೊ. 2:9) ಸಭ್ಯತೆಯನ್ನು ನಮಗೆ ಸರಿಹೊಂದುವಂಥ ರೀತಿಯಲ್ಲಿ ನಿರೂಪಿಸಸಾಧ್ಯವಿಲ್ಲ. ನಾವು ನಮ್ಮ ಸುತ್ತಲಿರುವವರ ಮನಸ್ಸಾಕ್ಷಿ ಮತ್ತು ಸೂಕ್ಷ್ಮಸ್ವಭಾವವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ನಮ್ಮ ವೈಯಕ್ತಿಕ ಇಚ್ಛೆಗಳನ್ನು ಬದಿಗೊತ್ತಿ ಅವರ ಸಂತೋಷ ಮತ್ತು ಹಿತಕ್ಷೇಮಕ್ಕೆ ಆದ್ಯತೆ ಕೊಡಬೇಕು. (ರೋಮ. 15:1, 2) ಈ ವಿಷಯದಲ್ಲಿ ಉತ್ತಮ ಮಾದರಿಗಳಾಗಿರುವ ಸಾವಿರಾರು ಯುವ ಜನರು ಕ್ರೈಸ್ತ ಸಭೆಗಳಲ್ಲಿದ್ದಾರೆ. ಅವರು ಹೃದಯಕ್ಕೂ ಕಣ್ಣಿಗೂ ತೋರಿದಂತೆ ಮಾಡದಿರುವುದನ್ನು ನೋಡುವಾಗ ನಮಗೆ ಬಹಳ ಸಂತೋಷವಾಗುತ್ತದೆ. ಎಲ್ಲ ವಿಷಯಗಳಲ್ಲಿ, ಉಡುಪಿನ ವಿಷಯದಲ್ಲಿ ಸಹ ಅವರು ಯೆಹೋವನನ್ನು ಸಂತೋಷಪಡಿಸಲು ಬಯಸುತ್ತಾರೆ.

ಅವಾಸ್ತವಿಕತೆಗಳನ್ನು ಹಿಂಬಾಲಿಸಬೇಡಿ

14. ಅವಾಸ್ತವಿಕತೆಗಳನ್ನು ಹಿಂಬಾಲಿಸುವ ವಿಷಯದಲ್ಲಿ ಸಮುವೇಲನು ಯಾವ ಎಚ್ಚರಿಕೆಯನ್ನು ಕೊಟ್ಟನು?

14 ನೀವು ಪ್ರಯಾಣಿಸುತ್ತಿರುವಾಗ ಮರಳುಗಾಡನ್ನು ಹಾದುಹೋಗುತ್ತೀರೆಂದು ನೆನಸಿ. ದೂರದಲ್ಲಿ ನಿಮಗೆ ನೀರಿರುವಂತೆ ತೋರುತ್ತದೆ. ವಾಸ್ತವದಲ್ಲಿ ಅಲ್ಲಿ ನೀರೂ ಇಲ್ಲ, ಏನೂ ಇಲ್ಲ! ಆದರೆ ಅಲ್ಲಿ ನೀರಿದೆಯೆಂದುಕೊಂಡು ನೀವು ನಿಮ್ಮ ಪ್ರಯಾಣದ ಮಾರ್ಗವನ್ನು ಬಿಟ್ಟು ಅಲ್ಲಿಗೆ ಹೋಗುವಲ್ಲಿ ಏನಾಗಬಹುದು? ನೀವು ದಾರಿತಪ್ಪಿ ಮರುಭೂಮಿಯಲ್ಲಿ ಜೀವಕಳೆದುಕೊಳ್ಳುವ ಸಾಧ್ಯತೆಯಿದೆ. ಅದೇ ರೀತಿಯಲ್ಲಿ ನೈಜವಾಗಿರದ ಅವಾಸ್ತವಿಕ ವಿಷಯಗಳಲ್ಲಿ ಭರವಸೆಯಿಡುವುದು ಎಷ್ಟು ಅಪಾಯಕಾರಿಯೆಂಬದು ಯೆಹೋವನಿಗೆ ತಿಳಿದಿದೆ. ಇಸ್ರಾಯೇಲ್ಯರ ಉದಾಹರಣೆಯನ್ನು ಪರಿಗಣಿಸಿ. ಅವರು ಸುತ್ತಲಿನ ಜನಾಂಗಗಳಂತೆ ತಮಗೂ ಮಾನವ ಅರಸನಿರಬೇಕೆಂದು ಬಯಸಿದರು. ಇದು ಘೋರ ಪಾಪವಾಗಿತ್ತು. ಏಕೆಂದರೆ ವಾಸ್ತವದಲ್ಲಿ ಅವರು ತಮ್ಮ ಅರಸನಾದ ಯೆಹೋವನನ್ನು ತಿರಸ್ಕರಿಸಿದರು. ಮಾನವ ಅರಸನನ್ನು ಹೊಂದುವಂತೆ ಯೆಹೋವನು ಅನುಮತಿಸಿದನಾದರೂ, “ದೇವರಲ್ಲದವುಗಳನ್ನು” ಅಥವಾ ಅವಾಸ್ತವಿಕತೆಗಳನ್ನು ಹಿಂಬಾಲಿಸುವ ವಿಷಯದಲ್ಲಿ ಪ್ರವಾದಿ ಸಮುವೇಲನ ಮೂಲಕ ಆತನು ನೇರವಾದ ಎಚ್ಚರಿಕೆಯನ್ನು ಕೊಟ್ಟನು.1 ಸಮುವೇಲ 12:21 ಓದಿ.

15. ಇಸ್ರಾಯೇಲ್ಯರು ಯಾವ ರೀತಿಯಲ್ಲಿ ಅವಾಸ್ತವಿಕತೆಗಳನ್ನು ಹಿಂಬಾಲಿಸಿದರು?

15 ಮಾನವ ಅರಸನು ಯೆಹೋವನಿಗಿಂತ ಹೆಚ್ಚು ನೈಜನೂ ಹೆಚ್ಚು ಭರವಸಾರ್ಹನೂ ಆಗಿರಸಾಧ್ಯ ಎಂದು ಆ ಜನರು ನೆನಸಿದ್ದರೋ? ಹಾಗಿದ್ದಲ್ಲಿ ಅವರು ಅವಾಸ್ತವಿಕತೆಗಳನ್ನು ಹಿಂಬಾಲಿಸುತ್ತಿದ್ದರು! ಅಲ್ಲದೆ, ಸೈತಾನನು ಹುಟ್ಟುಹಾಕಿರುವ ಇತರ ತಪ್ಪುಕಲ್ಪನೆಗಳನ್ನು ಹಿಂಬಾಲಿಸುವ ಅಪಾಯದಲ್ಲಿದ್ದರು. ಮಾನವ ಅರಸರು ಅವರನ್ನು ಸುಲಭವಾಗಿಯೇ ವಿಗ್ರಹಾರಾಧನೆಗೆ ನಡೆಸುವ ಸಾಧ್ಯತೆಯಿತ್ತು. ವಿಗ್ರಹಾರಾಧಕರು, ಎಲ್ಲವನ್ನು ಸೃಷ್ಟಿಸಿದ ಅದೃಶ್ಯ ದೇವರಾದ ಯೆಹೋವನಿಗಿಂತ ಪ್ರಾಕೃತಿಕ ವಸ್ತುಗಳು ಅಂದರೆ ಮರ, ಕಲ್ಲುಗಳಿಂದ ಮಾಡಲ್ಪಟ್ಟ ದೇವರುಗಳು ಹೆಚ್ಚು ನೈಜವೂ ಹೆಚ್ಚು ಭರವಸಾರ್ಹವೂ ಎಂದು ನಂಬುತ್ತಾರೆ. ಆದರೆ ಅಪೊಸ್ತಲ ಪೌಲನು ಹೇಳುವಂತೆ ವಿಗ್ರಹಗಳು “ಏನೂ ಅಲ್ಲ.” (1 ಕೊರಿಂ. 8:4) ಅವು ನೋಡಲಾರವು, ಕೇಳಿಸಿಕೊಳ್ಳಲಾರವು, ಮಾತಾಡಲಾರವು ಮತ್ತು ಯಾವುದೇ ಕ್ರಿಯೆಗೈಯಲಾರವು. ನೀವು ಅವುಗಳನ್ನು ನೋಡಶಕ್ತರಿರಬಹುದು, ಮುಟ್ಟಶಕ್ತರಿರಬಹುದು. ಹಾಗೆಂದಮಾತ್ರಕ್ಕೆ ನೀವು ಅವುಗಳನ್ನು ಆರಾಧಿಸುವಲ್ಲಿ ನೀವು ಅವಾಸ್ತವಿಕತೆಗಳನ್ನು ಹಿಂಬಾಲಿಸುತ್ತಿದ್ದೀರಿ ಮತ್ತು ಅವು ಕೇವಲ ವಿಪತ್ತಿಗೆ ನಡೆಸುವವು.—ಕೀರ್ತ. 115:4-8.

16. (ಎ) ಅವಾಸ್ತವಿಕತೆಗಳನ್ನು ಹಿಂಬಾಲಿಸುವಂತೆ ಸೈತಾನನು ಇಂದು ಅನೇಕರನ್ನು ಹೇಗೆ ಪ್ರಲೋಭಿಸಿದ್ದಾನೆ? (ಬಿ) ಯೆಹೋವ ದೇವರಿಗೆ ಹೋಲಿಸುವಾಗ ಭೌತಿಕ ವಸ್ತುಗಳು ಅವಾಸ್ತವಿಕತೆಗಳೆಂದು ನಾವು ಹೇಗೆ ಹೇಳಸಾಧ್ಯ?

16 ಅವಾಸ್ತವಿಕತೆಗಳನ್ನು ಹಿಂಬಾಲಿಸುವಂತೆ ಜನರನ್ನು ಪುಸಲಾಯಿಸುವುದರಲ್ಲಿ ಸೈತಾನನು ಈಗಲೂ ನಿಸ್ಸೀಮನು. ಉದಾಹರಣೆಗೆ, ಭದ್ರತೆಗಾಗಿ ಭೌತಿಕ ವಸ್ತುಗಳ ಮೊರೆಹೋಗುವಂತೆ ಅವನು ಅಸಂಖ್ಯಾತ ಜನರನ್ನು ಪ್ರಲೋಭಿಸಿದ್ದಾನೆ. ಹಣ, ಸಿರಿಸಂಪತ್ತು, ಹೆಚ್ಚು ಸಂಬಳ ಸಿಗುವ ಉದ್ಯೋಗಗಳು ಪ್ರಯೋಜನಕರವೆಂಬಂತೆ ತೋರಬಹುದು. ಆದರೆ ಆರೋಗ್ಯ ಕೈಕೊಟ್ಟಾಗ, ಆರ್ಥಿಕ ವ್ಯವಸ್ಥೆ ಕುಸಿದಾಗ ಅಥವಾ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಈ ಭೌತಿಕ ವಸ್ತುಗಳು ನೆರವಾಗಬಲ್ಲವೋ? ಬದುಕಿನ ಉದ್ದೇಶ ತಿಳಿಯಲಾಗದೆ ಕಂಗಾಲಾದ ಜನರಿಗೆ ಆ ವಸ್ತುಗಳು ಸಹಾಯಮಾಡಬಲ್ಲವೋ? ಅವು ಜೀವನದಲ್ಲಿ ಏಳುವ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಕೊಡಬಲ್ಲವೋ? ಮರಣದಿಂದ ತಪ್ಪಿಸಬಲ್ಲವೋ? ಹಣ ಮತ್ತು ಭೌತಿಕ ವಸ್ತುಗಳ ಮೇಲೆ ಭರವಸೆಯಿಡುವಲ್ಲಿ ನಮಗೆ ಆಶಾಭಂಗವಾಗುವುದು ಖಂಡಿತ. ಏಕೆಂದರೆ ಅವು ಅವಾಸ್ತವಿಕತೆಗಳಾಗಿವೆ. ನಾವು ಸಂತೋಷವಾಗಿರಲು ಬೇಕಾದದ್ದನ್ನು ಅವು ಕೊಡಲಾರವು. ಅಲ್ಲದೆ ನಮ್ಮನ್ನು ಕಾಯಿಲೆಯಿಂದಾಗಲಿ ಮರಣದಿಂದಾಗಲಿ ರಕ್ಷಿಸಲಾರವು. (ಜ್ಞಾನೋ. 23:4, 5) ಆದರೆ ನಮ್ಮ ದೇವರಾದ ಯೆಹೋವನು ಅವೆಲ್ಲವುಗಳಿಗಿಂತ ಎಷ್ಟೋ ಹೆಚ್ಚು ನೈಜನಾಗಿದ್ದಾನೆ! ಆತನೊಂದಿಗೆ ಬಲವಾದ ಸಂಬಂಧ ಹೊಂದಿರುವಲ್ಲಿ ಮಾತ್ರ ನಾವು ನಿಜ ಭದ್ರತೆಯನ್ನು ಕಂಡುಕೊಳ್ಳಸಾಧ್ಯ. ಇದೆಷ್ಟು ಅಮೂಲ್ಯ ಆಶೀರ್ವಾದ! ಅವಾಸ್ತವಿಕತೆಗಳನ್ನು ಹಿಂಬಾಲಿಸಲು ಹೋಗಿ ಆತನನ್ನು ನಾವೆಂದೂ ತೊರೆಯದಿರೋಣ.

17. ನಾವೀಗಾಗಲೇ ಚರ್ಚಿಸಿರುವ ಕೆಟ್ಟ ಪ್ರಭಾವಗಳ ವಿಷಯದಲ್ಲಿ ನೀವು ಯಾವ ದೃಢಸಂಕಲ್ಪ ಮಾಡಿದ್ದೀರಿ?

17 ನಿತ್ಯಜೀವವೆಂಬ ಗಮ್ಯಸ್ಥಾನವನ್ನು ತಲುಪಲು ನಾವು ಮಾಡುತ್ತಿರುವ ಪಯಣದಲ್ಲಿ ಯೆಹೋವನನ್ನು ಸ್ನೇಹಿತನಾಗಿಯೂ ಮಾರ್ಗದರ್ಶಕನಾಗಿಯೂ ಹೊಂದಿರುವ ನಾವು ಆಶೀರ್ವದಿತರಲ್ಲವೇ? ಬಹುಮಂದಿಯ ಪ್ರಭಾವ, ಸ್ವಂತ ಹೃದಯದ ಪ್ರಭಾವ ಮತ್ತು ಅವಾಸ್ತವಿಕತೆಗಳೆಂಬ ಪ್ರಭಾವಗಳ ವಿರುದ್ಧ ಆತನು ಕೊಟ್ಟಿರುವ ಪ್ರೀತಿಪರ ಎಚ್ಚರಿಕೆಗಳಿಗೆ ಕಿವಿಗೊಡುತ್ತಾ ಮುಂದುವರಿಯುವಲ್ಲಿ ನಿತ್ಯಜೀವವೆಂಬ ಗಮ್ಯಸ್ಥಾನವನ್ನು ನಾವು ತಲುಪುವುದು ಖಚಿತ. ಅನೇಕರನ್ನು ದಾರಿತಪ್ಪಿಸಿರುವ ಮಿಥ್ಯಾಮಾರ್ಗಗಳನ್ನು ಹಗೆಮಾಡಲು ಮತ್ತು ತ್ಯಜಿಸಲು ನಮಗೆ ಸಹಾಯಕರವಾಗಿ ಯೆಹೋವನು ಕೊಡುವ ಇನ್ನೂ ಮೂರು ಎಚ್ಚರಿಕೆಗಳ ಬಗ್ಗೆ ನಾವು ಮುಂದಿನ ಲೇಖನದಲ್ಲಿ ಪರಿಗಣಿಸಲಿದ್ದೇವೆ.—ಕೀರ್ತ. 119:128.

ನಿಮ್ಮ ಉತ್ತರವೇನು?

ಈ ಕೆಳಗಿನ ವಚನಗಳಲ್ಲಿರುವ ಮೂಲತತ್ತ್ವಗಳನ್ನು ನೀವು ಹೇಗೆ ವೈಯಕ್ತಿಕವಾಗಿ ಅನ್ವಯಿಸಿಕೊಳ್ಳಬಲ್ಲಿರಿ?

ವಿಮೋಚನಕಾಂಡ 23:2

ಅರಣ್ಯಕಾಂಡ 15:37-39

1 ಸಮುವೇಲ 12:21

ಕೀರ್ತನೆ 119:128

[ಅಧ್ಯಯನ ಪ್ರಶ್ನೆಗಳು]

[ಪುಟ 11ರಲ್ಲಿರುವ ಚಿತ್ರ]

ನಿಮಗೆಂದಾದರೂ ಬಹುಮಂದಿಯನ್ನು ಹಿಂಬಾಲಿಸುವ ಮನಸ್ಸಾದದ್ದುಂಟೋ?

[ಪುಟ 13ರಲ್ಲಿರುವ ಚಿತ್ರ]

ಹೃದಯಕ್ಕೂ ಕಣ್ಣಿಗೂ ತೋರಿದಂತೆ ನಡೆಯುವುದು ಅಪಾಯಕರವೇಕೆ?

[ಪುಟ 14ರಲ್ಲಿರುವ ಚಿತ್ರ]

ನೀವು ಅವಾಸ್ತವಿಕತೆಗಳನ್ನು ಹಿಂಬಾಲಿಸುತ್ತಿದ್ದೀರೋ?