ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಂಟರ್‌ನೆಟ್‌ ಅಂಗೈಯಲ್ಲಿ ಪ್ರಪಂಚ ಆದರೆ ಎಚ್ಚರ!

ಇಂಟರ್‌ನೆಟ್‌ ಅಂಗೈಯಲ್ಲಿ ಪ್ರಪಂಚ ಆದರೆ ಎಚ್ಚರ!

ಇಂಟರ್‌ನೆಟ್‌ ಅಂಗೈಯಲ್ಲಿ ಪ್ರಪಂಚ ಆದರೆ ಎಚ್ಚರ!

ನೂರಾರು ವರ್ಷಗಳ ಹಿಂದೆ ಮುದ್ರಣ ಯಂತ್ರ ಆವಿಷ್ಕಾರಗೊಂಡಾಗ ಜನರ ಸಂವಹನದ ವಿಧಾನವೇ ಬದಲಾಯಿತು. ಇಂಟರ್‌ನೆಟ್‌ ಎಂಬ ಸಂಪರ್ಕಜಾಲದ ಆವಿಷ್ಕಾರ ಕೂಡ ಆಧುನಿಕ ಜಗತ್ತಿನಲ್ಲಿ ಅಂಥದ್ದೇ ಕ್ರಾಂತಿ ಉಂಟುಮಾಡಿದೆ. ಅಂಗೈಯಲ್ಲೇ ಪ್ರಪಂಚವನ್ನು ತೆರೆದಿಡುವ ಈ ಸಾಧನದಿಂದ ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕ ಬೆಸೆಯಸಾಧ್ಯ. ಅದರಲ್ಲಿ ಹರಿದುಬರುವ ಮಾಹಿತಿಯ ಮಹಾಪೂರದಲ್ಲಿ ನಿಮಗೆ ಬೇಕಾದ ವಿಷಯಗಳನ್ನು ಹೆಕ್ಕಿಕೊಳ್ಳಬಹುದು.

ಸಂವಹನ ಸಾಮರ್ಥ್ಯ ಸೃಷ್ಟಿಕರ್ತನಿಂದ ನಮಗೆ ದೊರೆತಿರುವ ಅದ್ಭುತ ಕೊಡುಗೆ. ಇದರಿಂದಾಗಿ ನಾವು ನಮ್ಮ ಯೋಚನೆಗಳನ್ನು ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಸಾಧ್ಯ. ಮೊದಮೊದಲು ಮನುಷ್ಯರೊಂದಿಗೆ ಸಂವಹನ ಮಾಡಿದವರು ಬೇರೆ ಯಾರೂ ಅಲ್ಲ, ಯೆಹೋವ ದೇವರೇ. ಒಂದು ಉದ್ದೇಶಭರಿತ ಜೀವನವನ್ನು ನಡೆಸಲು ಬೇಕಾದ ಸ್ಪಷ್ಟ ಹಾಗೂ ನಿಷ್ಕೃಷ್ಟ ಮಾಹಿತಿಯನ್ನು ಆತನು ಅವರಿಗೆ ಕೊಟ್ಟನು. (ಆದಿ. 1:28-30) ಆದರೆ ಮಾನವ ಇತಿಹಾಸದ ಆರಂಭದಲ್ಲಿ ನಡೆದ ಒಂದು ಸಂಗತಿ ಮಾನವರು ಈ ಕೊಡುಗೆಯನ್ನು ದುರುಪಯೋಗಿಸಲೂ ಸಾಧ್ಯವಿದೆ ಎಂದು ತೋರಿಸುತ್ತದೆ. ಏದೆನ್‌ ತೋಟದಲ್ಲಿ ಹವ್ವಳಿಗೆ ಸೈತಾನನು ಸಂಪೂರ್ಣ ಸುಳ್ಳು ಮಾಹಿತಿ ಕೊಟ್ಟನು. ಆಕೆ ಅದನ್ನು ನಂಬಿಬಿಟ್ಟಳು, ಗಂಡನಿಗೂ ತಿಳಿಸಿದಳು. ಇಡೀ ಮಾನವಕುಲದ ಅಧಃಪತನಕ್ಕೆ ಇದು ಕಾರಣವಾಯಿತು.—ಆದಿ. 3:1-6; ರೋಮ. 5:12.

ಇಂಟರ್‌ನೆಟ್‌ ವಿಷಯದಲ್ಲೂ ಇದು ಸತ್ಯವೋ? ಇಂಟರ್‌ನೆಟ್‌ ನಮಗೆ ಬಹುಪಯೋಗಿ. ಅಮೂಲ್ಯ ಮಾಹಿತಿ ಒದಗಿಸುತ್ತದೆ. ನಮ್ಮ ಸಮಯವನ್ನು ಉಳಿಸುತ್ತದೆ. ಆದರೆ ಅದೇ ಬಹುಪಯೋಗಿ ಸಾಧನ ತಪ್ಪು ಮಾಹಿತಿಯನ್ನೂ ಕೊಡಬಹುದು. ನಮ್ಮ ಅಮೂಲ್ಯ ಸಮಯದ ಸಿಂಹಪಾಲನ್ನೇ ಕಬಳಿಸಿಬಿಡಬಹುದು. ನಮ್ಮ ನೈತಿಕತೆಯನ್ನೇ ಬುಡಮೇಲು ಮಾಡಬಲ್ಲದು. ಹೀಗಿರುವಾಗ ಈ ಸಂಪರ್ಕಜಾಲವನ್ನು ಪ್ರಯೋಜನವಾಗುವಂಥ ರೀತಿಯಲ್ಲಿ ಹೇಗೆ ಬಳಸಬಲ್ಲೆವು?

ಮಾಹಿತಿ—ಸತ್ಯವೆಷ್ಟು? ಸುಳ್ಳೆಷ್ಟು?

ಇಂಟರ್‌ನೆಟ್‌ನಲ್ಲಿ ಸುಲಭವಾಗಿ ದಕ್ಕಬಲ್ಲ ಮಾಹಿತಿಯ ಮಹಾಪೂರದಲ್ಲಿ ಎಲ್ಲವನ್ನು ಒಳ್ಳೆಯದೆಂದು ನೆನಸಬೇಡಿ. ಇದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಗಮನಿಸಿ. ಮಾರುಕಟ್ಟೆಯಿಂದ ನೀವು ಕೊಂಡುಕೊಂಡ ಅಣಬೆ ಕಲಬೆರಕೆಯಾಗಿದೆ. ತಿನ್ನಲು ಯೋಗ್ಯವಾದ ಅಣಬೆಗಳೊಂದಿಗೆ ವಿಷಕಾರಿ ಅಣಬೆಗಳು ಸೇರಿಕೊಂಡಿವೆ. ಅವುಗಳನ್ನು ಬೇರ್ಪಡಿಸದೆ ಎಲ್ಲವನ್ನು ಒಟ್ಟಿಗೆ ಅಡುಗೆ ಮಾಡಿ ನೀವು ತಿನ್ನುವಿರಾ? ಇಲ್ಲವಲ್ಲವೆ. ಪ್ರತಿಯೊಂದನ್ನು ಜಾಗ್ರತೆಯಿಂದ ಪರೀಕ್ಷಿಸಿ ಒಳ್ಳೇದನ್ನು ಮಾತ್ರ ಆಯ್ದುಕೊಳ್ಳುತ್ತೀರಿ. ಇಂಟರ್‌ನೆಟ್‌ನಲ್ಲಿ ಇರುವಂಥ ಮಾಹಿತಿಯೂ ಹೀಗೆಯೇ. ಇಂಟರ್‌ನೆಟ್‌ ಅನೇಕ ಕಂಪ್ಯೂಟರ್‌ಗಳನ್ನು ಬಳಸಿ ಕೋಟಿಗಟ್ಟಲೆ ವೆಬ್‌ ಪುಟಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ. ಅದರಲ್ಲಿ ಎಲ್ಲ ರೀತಿಯ ಮಾಹಿತಿ ಇರುತ್ತದೆ. ಅತ್ಯುತ್ತಮವಾದದ್ದರಿಂದ ಹಿಡಿದು ತೀರಾ ಕಳಪೆ ಮಾಹಿತಿಯೂ ತುಂಬಿರುತ್ತದೆ. ಆದ್ದರಿಂದ ವಿವೇಚನೆ ಅಗತ್ಯ. ಬತ್ತ ಮತ್ತು ಹೊಟ್ಟನ್ನು ಬೇರ್ಪಡಿಸುವಂತೆ ಒಳ್ಳೇದು ಮತ್ತು ಕೆಟ್ಟದ್ದನ್ನು ಬೇರ್ಪಡಿಸಿಕೊಳ್ಳಬೇಕು. ಇಲ್ಲವಾದರೆ ವಿಷಪೂರಿತ ಮಾಹಿತಿ ನಮ್ಮ ಮನಸ್ಸನ್ನು ಹೊಕ್ಕು ಕಲುಷಿತಗೊಳಿಸುತ್ತದೆ.

ಇಸವಿ 1993ರಲ್ಲಿ ಜನಪ್ರಿಯ ಪತ್ರಿಕೆಯೊಂದರಲ್ಲಿ ಒಂದು ಕಾರ್ಟೂನ್‌ ಬಂದಿತ್ತು. ಕಂಪ್ಯೂಟರ್‌ ಮುಂದೆ ಎರಡು ನಾಯಿಗಳು ಕುಳಿತಿರುವ ಕಾರ್ಟೂನ್‌ ಅದು. ಒಂದು ನಾಯಿ ಪಕ್ಕದಲ್ಲಿದ್ದ ನಾಯಿಗೆ, “ಇಂಟರ್‌ನೆಟ್‌ನಲ್ಲಿ ನೀನು ನಾಯಿಯಂತ ಯಾರಿಗೂ ಗೊತ್ತಾಗುದಿಲ್ಲ” ಎಂದು ಹೇಳುವ ಬರವಣಿಗೆಯಿತ್ತು. ಬಹುದೀರ್ಘ ಕಾಲದ ಹಿಂದೆ ಸೈತಾನನು ಸರ್ಪದ ಹಿಂದೆ ಅಡಗಿಕೊಂಡು ಹವ್ವಳನ್ನು “ಚ್ಯಾಟ್‌ಗೆ” ಎಳೆಯುತ್ತಾ ಅವಳು ದೇವರಂತೆ ಆಗಬಹುದೆಂದು ಹೇಳಿದನು. ಇಂದು ಸಹ, ಯಾರು ಬೇಕಾದರೂ ಇಂಟರ್‌ನೆಟ್‌ ಪರದೆಯ ಮೇಲೆ ಪ್ರೊಫೆಸರ್‌ ಆಗಿಬಿಡಬಹುದು. ಹೆಸರನ್ನು ಬಹಿರಂಗಪಡಿಸದೆ ತಮಗೆ ಮಾಹಿತಿ ಗೊತ್ತಿದೆಯೆಂಬಂತೆ ನಟಿಸಬಹುದು. ಇಂಟರ್‌ನೆಟ್‌ನಲ್ಲಿ ವಿಚಾರಗಳನ್ನು, ಮಾಹಿತಿಯನ್ನು, ಚಿತ್ರಗಳನ್ನು, ಸಲಹೆಗಳನ್ನು ಯಾರು ಬೇಕಾದರೂ ಪ್ರಸರಣ ಮಾಡಬಹುದು. ಯಾವುದೇ ನಿರ್ಬಂಧವಿಲ್ಲ!

ಇಂಟರ್‌ನೆಟ್‌ ಉಪಯೋಗದ ವಿಷಯದಲ್ಲಿ ನೀವೆಂದಿಗೂ “ಹವ್ವ” ಆಗದಿರಿ! ಪರದೆಯ ಮೇಲೆ ಮೂಡುವ ಎಲ್ಲ ಮಾಹಿತಿಯನ್ನು ನಂಬಬೇಡಿ. ಅದನ್ನು ನಂಬುವ ಮೊದಲು ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ: (1) ಈ ಮಾಹಿತಿ ಪ್ರಕಟಿಸಿದವರು ಯಾರು? ಅವರಿಗೆ ಅಧಿಕೃತ ಹಕ್ಕಿದೆಯಾ? (2) ಏಕೆ ಪ್ರಕಟಿಸಲಾಗಿದೆ? ಪ್ರಕಟಿಸಿದವರ ಇರಾದೆಯೇನು? ಮಾಹಿತಿಯನ್ನು ತಿರುಚಲಾಗಿದೆಯಾ? (3) ಈ ಮಾಹಿತಿಯನ್ನು ಅವರು ಎಲ್ಲಿಂದ ಕಲೆಹಾಕಿದ್ದಾರೆ? ನಾವದನ್ನು ಪರೀಕ್ಷಿಸುವಂತೆ ಮಾಹಿತಿಯ ಮೂಲಗಳನ್ನು ಕೊಡಲಾಗಿದೆಯೇ? (4) ಮಾಹಿತಿ ಪ್ರಸ್ತುತವೋ ಅಥವಾ ಹಳೆಯದೋ? ಒಂದನೇ ಶತಮಾನದಲ್ಲಿ ಅಪೊಸ್ತಲ ಪೌಲನು ತಿಮೊಥೆಯನಿಗೆ ಒಂದು ಸಲಹೆ ಕೊಟ್ಟನು. “ಪವಿತ್ರವಾದದ್ದನ್ನು ಹೊಲೆಮಾಡುವ ವ್ಯರ್ಥಮಾತುಗಳಿಂದಲೂ ‘ಜ್ಞಾನ’ ಎಂಬುದಾಗಿ ಸುಳ್ಳಾಗಿ ಕರೆಯಲ್ಪಡುವ ವಿರೋಧೋಕ್ತಿಗಳಿಂದಲೂ ದೂರವಾಗಿದ್ದು ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡಿಕೊ.” ಈ ಸಲಹೆ ನಮಗಿಂದು ಅಷ್ಟೇ ಸೂಕ್ತವಾಗಿದೆ.—1 ತಿಮೊ. 6:20.

ಸಮಯ ಉಳಿತಾಯ? ಸಮಯ ಪೋಲು?

ಇಂಟರ್‌ನೆಟ್‌ ಅನ್ನು ವಿವೇಚನೆಯಿಂದ ಉಪಯೋಗಿಸುವಲ್ಲಿ ಸಮಯ, ಶ್ರಮ ಹಾಗೂ ಹಣ ಉಳಿತಾಯ ಖಂಡಿತ. ನಾವು ಮನೆಯಲ್ಲೇ ಕೂತು ನಮಗೆ ಬೇಕಾದುದನ್ನು ಸುಲಭವಾಗಿ ಖರೀದಿಸಬಹುದು. ಬೆಲೆಗಳನ್ನು ಹೋಲಿಸಿನೋಡಿ ಹಣ ಉಳಿಸಬಹುದು. ಆನ್‌ಲೈನ್‌ ಬ್ಯಾಂಕಿಂಗ್‌ ತುಂಬ ಜನರ ಬದುಕನ್ನು ಸುಗಮಗೊಳಿಸಿದೆ. ಮನೆಯೊಳಗಿದ್ದೇ ಯಾವ ಸಮಯದಲ್ಲಿ ಬೇಕಾದರೂ ಹಣಕಾಸಿನ ವಹಿವಾಟನ್ನು ನೋಡಿಕೊಳ್ಳಬಹುದು. ಪ್ರವಾಸ ಹೋಗುವ ಮನಸ್ಸಿದ್ದರೆ ಇಂಟರ್‌ನೆಟ್‌ ಉಪಯೋಗಿಸಿ ನಮ್ಮ ಬಜೆಟಿಗೆ ಹೊಂದುವ ಅನುಕೂಲಕರ ಪ್ರವಾಸವನ್ನು ಯೋಜಿಸಬಹುದು. ಅಗತ್ಯವಿರುವ ಬುಕಿಂಗ್‌ ಕೂಡ ಕೂತಲ್ಲಿಯೇ ಮಾಡಿಮುಗಿಸಬಹುದು. ಸ್ವಲ್ಪ ಜಾಲಾಡಿದಲ್ಲಿ ಬೇಕಾದ ಫೋನ್‌ ನಂಬರ್‌ಗಳು, ವಿಳಾಸಗಳು ರೆಡಿ. ಅಷ್ಟೇ ಏಕೆ, ನೀವು ಹೋಗಲಿಚ್ಛಿಸುವ ಸ್ಥಳಕ್ಕೆ ಇರುವ ಬೇರೆ ಬೇರೆ ಮಾರ್ಗಗಳ ಮಾಹಿತಿಯೂ ನಿಮಗೆ ದೊರಕುವುದು. ಪ್ರಪಂಚದ ಎಲ್ಲೆಡೆಯಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳಲ್ಲಿಯೂ ಇಂಥ ಅನೇಕ ಸೌಕರ್ಯಗಳನ್ನು ಸದುಪಯೋಗಿಸಿಕೊಳ್ಳಲಾಗಿದೆ. ಇದರಿಂದ ಕೆಲಸಗಾರರು, ಹಣ ಹಾಗೂ ಸಮಯ ಉಳಿತಾಯವಾಗುತ್ತದೆ.

ಇಷ್ಟೆಲ್ಲ ಪ್ರಯೋಜನವಿದ್ದರೂ ಇದರಲ್ಲಿ ಅಪಾಯವೂ ಅಡಗಿದೆ. ಇದು ಇಂಟರ್‌ನೆಟ್‌ ಬಳಕೆಯಲ್ಲಿ ವ್ಯಯವಾಗುವ ಸಮಯದ ಕುರಿತಾಗಿದೆ. ಇಂಟರ್‌ನೆಟ್‌ ಕೆಲವರಿಗೆ ಸಹಾಯಕಾರಿ ಸಾಧನವಾಗಿರುವ ಬದಲು ಒಂದು ಆಕರ್ಷಕ ಆಟಿಕೆಯಾಗಿದೆ. ಅಂಥವರು ತಮ್ಮ ಬಹುಪಾಲು ಸಮಯವನ್ನು ಗೇಮ್ಸ್‌, ಶಾಪಿಂಗ್‌, ಚ್ಯಾಟಿಂಗ್‌, ಇ-ಮೇಲ್‌ ಎನ್ನುತ್ತಾ ಭರಪೂರ ಮಾಹಿತಿಯಲ್ಲಿ ಮುಳುಗೇಳುತ್ತಾ ಕಾಲ ಕಳೆಯುತ್ತಾರೆ. ಕ್ರಮೇಣ ಕುಟುಂಬ, ಸ್ನೇಹಿತರು, ಸಭೆ ಮುಂತಾದ ಅತಿ ಪ್ರಮುಖ ವಿಷಯಗಳು ಅವರಿಗೆ ಮೂಲೆಗುಂಪಾಗಬಹುದು. ಅಷ್ಟರಮಟ್ಟಿಗೆ ಇಂಟರ್‌ನೆಟ್‌ ವ್ಯಸನಿಗಳಾಗುತ್ತಾರೆ. ಉದಾಹರಣೆಗೆ, 2010ರಲ್ಲಿ ಮಾಡಲಾದ ಒಂದು ಅಂದಾಜಿಗನುಸಾರ ಕೊರಿಯದ ಹದಿಹರೆಯದವರಲ್ಲಿ ಶೇಕಡ 18.4 ಮಕ್ಕಳು ಇಂಟರ್‌ನೆಟ್‌ ವ್ಯಸನಿಗಳು. ಜರ್ಮನಿಯ ಸಂಶೋಧಕರು ಹೇಳುವ ಪ್ರಕಾರ, “ತಮ್ಮ ಗಂಡಂದಿರ ಇಂಟರ್‌ನೆಟ್‌ ವ್ಯಸನದ ಕುರಿತು ದೂರುವ ಸ್ತ್ರೀಯರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.” ಇಂಟರ್‌ನೆಟ್‌ ಗೀಳಿನಿಂದಾಗಿ ತನ್ನ ಗಂಡ ಇದ್ದಕ್ಕಿದ್ದಂತೆ ಬದಲಾದನು ಮತ್ತು ಇದು ತಮ್ಮ ವಿವಾಹ ಸಂಬಂಧವನ್ನೇ ನುಚ್ಚುನೂರು ಮಾಡುವಷ್ಟರ ಮಟ್ಟಿಗೆ ಪರಿಣಾಮ ಬೀರಿತು ಎಂದು ಒಬ್ಬಳು ದೂರಿದಳು.

ಇಂಟರ್‌ನೆಟ್‌ ವ್ಯಸನಕ್ಕೆ ಬಲಿಬಿದ್ದ ಒಬ್ಬ ವ್ಯಕ್ತಿಯಿಂದ ಯೆಹೋವನ ಸಾಕ್ಷಿಗಳ ಒಂದು ಬ್ರಾಂಚ್‌ ಆಫೀಸಿಗೆ ಪತ್ರ ಬಂತು. ಈ ವ್ಯಕ್ತಿ ಕೆಲವೊಮ್ಮೆ ದಿನಕ್ಕೆ ಹತ್ತು ತಾಸು ಇಂಟರ್‌ನೆಟ್‌ ಮುಂದೆಯೇ ಕುಳಿತಿರುತ್ತಿದ್ದನಂತೆ. “ಮೊದಮೊದಲು ಅದಕ್ಕಿದ್ದ ಪ್ರಭಾವ ಗೊತ್ತಾಗಲಿಲ್ಲ. ಹೋಗುತ್ತಾ ಹೋಗುತ್ತಾ ಕೂಟದ ಹಾಜರಿ ಕಡಿಮೆಯಾಯಿತು ಮತ್ತು ಪ್ರಾರ್ಥಿಸುವುದನ್ನೇ ಬಿಟ್ಟುಬಿಟ್ಟೆ” ಎಂದವನು ಒಪ್ಪಿಕೊಂಡನು. ಕೂಟಗಳಿಗೆ ಹೋದ ದಿನಗಳಲ್ಲೂ ಯಾವುದೇ ತಯಾರಿ ಮಾಡಿ ಹೋಗುತ್ತಿರಲಿಲ್ಲ. ಅಲ್ಲಿ ಕುಳಿತಿದ್ದರೂ ಮನಸ್ಸೆಲ್ಲ ಮನೆಯ ಕಡೆಗೇ ಗಿರಕಿ ಹೊಡೆಯುತ್ತಾ ಪುನಃ “ಇಂಟರ್‌ನೆಟ್‌ ಮುಂದೆ ಕೂರಲು” ಹಾತೊರೆಯುತ್ತಿತ್ತು. ಸಂತಸದ ವಿಷಯವೇನೆಂದರೆ ಅವನು ಬೇಗನೆ ಎಚ್ಚೆತ್ತುಕೊಂಡನು. ಈ ಸಮಸ್ಯೆ ಎಲ್ಲಿಗೆ ನಡಿಸುತ್ತಿದೆ ಎಂದು ಅರಿತು ಸರಿಪಡಿಸಲು ಕ್ರಮ ಕೈಗೊಂಡನು. ವ್ಯಸನಿಗಳಾಗುವ ಮಟ್ಟಿಗೆ ನಾವು ಯಾವತ್ತೂ ಇಂಟರ್‌ನೆಟ್‌ ಅನ್ನು ಉಪಯೋಗಿಸದಿರೋಣ.

ಮಾಹಿತಿ—ಯೋಗ್ಯ? ಅಯೋಗ್ಯ?

1 ಥೆಸಲೊನೀಕ 5:21, 22ರಲ್ಲಿ ಹೀಗೆ ಹೇಳಲಾಗಿದೆ: “ಎಲ್ಲ ವಿಷಯಗಳನ್ನು ಪರಿಶೋಧಿಸಿ ಖಚಿತಪಡಿಸಿಕೊಂಡು ಒಳ್ಳೇದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ಎಲ್ಲ ರೀತಿಯ ಕೆಟ್ಟತನದಿಂದ ದೂರವಿರಿ.” ಆದುದರಿಂದ ಇಂಟರ್‌ನೆಟ್‌ನಲ್ಲಿ ದೊರೆಯುವ ಯಾವುದೇ ಮಾಹಿತಿ ದೇವರ ದೃಷ್ಟಿಯಲ್ಲಿ ಯೋಗ್ಯವಾಗಿದೆಯೇ, ಆತನ ಉನ್ನತ ಮಟ್ಟಗಳಿಗೆ ಅನುಗುಣವಾಗಿದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಿ. ಅದು ನೈತಿಕವಾಗಿ ಆಕ್ಷೇಪಾರ್ಹ ಆಗಿರಬಾರದು, ಕ್ರೈಸ್ತನಿಗೆ ಯೋಗ್ಯವಾದದ್ದಾಗಿರಬೇಕು. ಇಂಟರ್‌ನೆಟ್‌ನಲ್ಲಿ ಅಶ್ಲೀಲ ವಿಷಯಗಳು ಎಷ್ಟು ಹರಡಿವೆಯೆಂದರೆ ಸ್ವಲ್ಪ ಎಚ್ಚರ ತಪ್ಪಿದಲ್ಲಿ ನಾವು ಅದರ ಬಲೆಗೆ ಸಿಲುಕಿಕೊಳ್ಳುತ್ತೇವೆ.

ನಾವು ಹೀಗೆ ಕೇಳಿಕೊಳ್ಳೋಣ, ‘ನಾನು ಪರದೆಯ ಮೇಲೆ ನೋಡುತ್ತಿರುವ ವಿಷಯವು ಆಕಸ್ಮಿಕವಾಗಿ ನನ್ನ ಕೋಣೆಗೆ ಬರುವ ನನ್ನ ಸಂಗಾತಿ, ಹೆತ್ತವರು ಅಥವಾ ಕ್ರೈಸ್ತ ಸಹೋದರರು ನೋಡಬಾರದೆಂದು ಮುಚ್ಚಿಡುವಂಥದ್ದಾಗಿದೆಯಾ?’ ಉತ್ತರವು ಹೌದಾಗಿರುವಲ್ಲಿ, ಇತರರು ಇರುವಾಗ ಮಾತ್ರ ನಾವು ಇಂಟರ್‌ನೆಟ್‌ ಉಪಯೋಗಿಸುವುದು ಒಳ್ಳೇದಾಗಿದೆ. ಇಂಟರ್‌ನೆಟ್‌ನಿಂದಾಗಿ ಸಂವಾದಿಸುವ, ವಸ್ತುಗಳನ್ನು ಖರೀದಿಸುವ ರೀತಿಯೇ ಬದಲಾಗಿದೆ ನಿಜ. ಆದರೆ ಇದಕ್ಕೆ ಇನ್ನೊಂದು ವಿಷಯವೂ ಸೇರಿಕೊಂಡಿದೆ. ಇದು ‘ಹೃದಯದಲ್ಲಿ ವ್ಯಭಿಚಾರ ಮಾಡುವ’ ಹೊಸ ವಿಧಾನವನ್ನೂ ಕಲಿಸಿಕೊಟ್ಟಿದೆ!—ಮತ್ತಾ. 5:27, 28.

ನಾನಿದನ್ನು ಕಳುಹಿಸಲಾ? ಬೇಡವಾ?

ಇಂಟರ್‌ನೆಟ್‌ ಬಳಸುವಾಗ ನಾವು ಮಾಹಿತಿಯನ್ನು ಪಡೆದುಕೊಳ್ಳುವುದಲ್ಲದೆ ಕೆಲವೊಮ್ಮೆ ಇತರರಿಗೂ ಕಳುಹಿಸುತ್ತೇವೆ. ಪಡೆದುಕೊಳ್ಳುವ ಕಳುಹಿಸುವ ಸ್ವಾತಂತ್ರ್ಯ ನಮಗಿರುವುದಾದರೂ ಬೇರೆಯವರಿಗೆ ಅದನ್ನು ಕಳುಹಿಸುವ ಮುಂಚೆ ಅದು ಸತ್ಯವಾಗಿದೆ ಹಾಗೂ ನೈತಿಕವಾಗಿ ಉತ್ತಮವಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆ ಮಾಹಿತಿಯು ನಿಷ್ಕೃಷ್ಟ ಎನ್ನುವುದಕ್ಕೆ ನಮ್ಮ ಹತ್ತಿರ ಪುರಾವೆಗಳಿವೆಯೆ? ಆ ಮಾಹಿತಿಯನ್ನು ಇತರರಿಗೆ ಕಳುಹಿಸಲು ನಮಗೆ ಅನುಮತಿಯಿದೆಯೇ? * ಅದು ಇತರರಿಗೆ ಪ್ರಯೋಜನಕಾರಿಯೋ? ಇತರರಿಗೆ ಕಳುಹಿಸುವ ನಮ್ಮ ಉದ್ದೇಶವೇನು? ಇತರರಿಂದ ಮೆಚ್ಚುಗೆ ಪಡೆಯುವುದಷ್ಟೆನಾ?

ಇ-ಮೇಲ್‌ಗಳಿಂದಲೂ ಬಹಳ ಪ್ರಯೋಜನವಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಮಾತ್ರ. ಅವುಗಳಿಂದಲೂ ಹೇರಳ ಮಾಹಿತಿ ಲಭ್ಯ. ಹಾಗೆಂದ ಮಾತ್ರಕ್ಕೆ ನಮಗೆ ಸಿಕ್ಕಿದ ಎಲ್ಲ ಮಾಹಿತಿಯನ್ನು, ತೀರಾ ಕ್ಷುಲ್ಲಕ ಮಾಹಿತಿಯನ್ನೂ ಪರಿಚಯ ಇದ್ದವರಿಗೆಲ್ಲ ಕಳುಹಿಸಬೇಕಾ? ಅದು ಅವರ ಅಮೂಲ್ಯ ಸಮಯವನ್ನು ಹಾಳುಮಾಡುವುದಿಲ್ಲವಾ? ಕಳುಹಿಸುವ ಮುನ್ನ ನಮ್ಮ ಇರಾದೆಯೇನು ಎಂದು ಮೊದಲು ಆಲೋಚಿಸಬೇಕಲ್ಲವೆ? ನಮ್ಮ ಮುಖ್ಯ ಉದ್ದೇಶವೇನಾಗಿದೆ? ಮೊದಲೆಲ್ಲ ಜನರು ತಮ್ಮ ಕುಟುಂಬದವರಿಗೆ ಸ್ನೇಹಿತರಿಗೆ ಪತ್ರ ಬರೆದು ತಮ್ಮ ಬದುಕಿನ ಕುರಿತು, ತಮ್ಮ ಅನುಭವಗಳ ಕುರಿತು ತಿಳಿಸುತ್ತಿದ್ದರು. ಇ-ಮೇಲ್‌ ಕಳುಹಿಸುವ ನಮ್ಮ ಉದ್ದೇಶವೂ ಅದೇ ಆಗಿರಬೇಕಲ್ಲವೇ? ಸತ್ಯವೆಂದು ನಮಗೆ ಖಚಿತವಾಗಿರದ ವಿಷಯವನ್ನು ಯಾಕೆ ಸುಮ್ಮನೆ ಇತರರಿಗೆ ಕಳುಹಿಸಬೇಕು?

ಹಾಗಾದರೆ ನಾವೀಗ ಏನು ಮಾಡೋಣ? ಇಂಟರ್‌ನೆಟ್‌ ಉಪಯೋಗಿಸುವುದನ್ನೇ ನಿಲ್ಲಿಸಬೇಕಾ? ಕೆಲವೊಂದು ಸಂದರ್ಭದಲ್ಲಿ ಹಾಗೆ ಮಾಡಬೇಕಾಗುತ್ತದೆ. ಮೇಲೆ ಹೇಳಲಾದ ಇಂಟರ್‌ನೆಟ್‌ ವ್ಯಸನಿ ಅನೇಕ ವರ್ಷಗಳ ತನ್ನ ಚಟದಿಂದ ಹೊರಬರಲು ಅದನ್ನೇ ಮಾಡಿದನು. ಇನ್ನೊಂದೆಡೆ ಇಂಟರ್‌ನೆಟ್‌ನಿಂದ ನಮಗೆ ಪ್ರಯೋಜನವೂ ಇದೆ. ಆದರೆ ‘ಬುದ್ಧಿಯು ನಮಗೆ ಕಾವಲಾಗಿದ್ದು, ವಿವೇಕವು ನಮ್ಮನ್ನು ಕಾಪಾಡುವಂತೆ’ ಬಿಡುವುದಾದರೆ ಮಾತ್ರ ಇದು ನಮಗೆ ಬಹುಪಯೋಗಿ ಸಾಧನವಾಗಿರುವುದು.—ಜ್ಞಾನೋ. 2:10, 11.

[ಪಾದಟಿಪ್ಪಣಿ]

^ ಪ್ಯಾರ. 17 ಫೋಟೋಗಳ ವಿಷಯದಲ್ಲೂ ಇದು ಅನ್ವಯವಾಗುತ್ತದೆ. ಫೋಟೋಗಳನ್ನು ತೆಗೆದವರು ನಾವೇ ಆದರೂ ಅವುಗಳನ್ನು ಇತರರಿಗೆ ಕಳುಹಿಸಲು ನಮಗೆ ಹಕ್ಕಿರಲಿಕ್ಕಿಲ್ಲ. ಮಾತ್ರವಲ್ಲ ಫೋಟೋದಲ್ಲಿ ಇರುವವರ ಹೆಸರನ್ನೋ ಅವರು ವಾಸಿಸುವ ಸ್ಥಳವನ್ನೋ ತಿಳಿಸುವ ಸ್ವಾತಂತ್ರ್ಯವೂ ನಮಗಿಲ್ಲ.

[ಪುಟ 4ರಲ್ಲಿರುವ ಚಿತ್ರ]

ಸುಳ್ಳು ಮಾಹಿತಿಯಿಂದ ಮೋಸಹೋಗಬಾರದೆಂದರೆ ನೀವೇನು ಮಾಡಬೇಕು?

[ಪುಟ 5ರಲ್ಲಿರುವ ಚಿತ್ರ]

ಇತರರಿಗೆ ಮಾಹಿತಿ ಕಳುಹಿಸುವ ಮೊದಲು ಏನನ್ನು ಆಲೋಚಿಸಬೇಕು?