ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಒಂದು ಕೂಟ

ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಒಂದು ಕೂಟ

ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಒಂದು ಕೂಟ

ಅಕ್ಟೋಬರ್‌ 2, 2010. ಅಮೆರಿಕದ ನ್ಯೂ ಜೆರ್ಸಿ ಎಂಬಲ್ಲಿರುವ ಜೆರ್ಸಿ ಸಿಟಿಯಲ್ಲಿನ ಯೆಹೋವನ ಸಾಕ್ಷಿಗಳ ಅಸೆಂಬ್ಲಿ ಹಾಲ್‌ ತುಂಬಿ ತುಳುಕುತ್ತಿತ್ತು. ಅಂದು ನಡೆಯುತ್ತಿದ್ದದ್ದು ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ 126ನೇ ವಾರ್ಷಿಕ ಕೂಟ. ಮೊದಲ ಭಾಷಣಕ್ಕಾಗಿ ಆಗಮಿಸಿದ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಸ್ಟೀಫನ್‌ ಲೆಟ್‌ರವರ ಪ್ರಾರಂಭದ ಮಾತು ಹೀಗಿತ್ತು: “ಈ ಕೂಟ ಮುಗಿದ ನಂತರ ನೀವೆಲ್ಲರೂ ‘ದೇವಪ್ರಭುತ್ವಾತ್ಮಕ ಇತಿಹಾಸದಲ್ಲೇ ಇದೊಂದು ಅಚ್ಚಳಿಯದ ವಾರ್ಷಿಕ ಕೂಟವಾಗಿತ್ತು’ ಎಂದು ಹೇಳುವಿರಿ.” ಈ ಮಾತು ನೆರೆದಿದ್ದ ಸಭಿಕರಲ್ಲಿ ಭಾರೀ ಕುತೂಹಲ ಮೂಡಿಸಿತು. ಆ ಅವಿಸ್ಮರಣೀಯ ಕೂಟದ ಕೆಲವು ಸ್ವಾರಸ್ಯಕರ ತುಣುಕುಗಳು ನಿಮ್ಮ ಮುಂದಿವೆ.

ಸಹೋದರ ಲೆಟ್‌ ಆರಂಭದ ಭಾಷಣದಲ್ಲಿ ಯೆಹೆಜ್ಕೇಲ ಪುಸ್ತಕದಿಂದ ಯೆಹೋವನ ಸ್ವರ್ಗೀಯ ರಥದ ಕುರಿತು ಸಭಿಕರ ಮೈ ಜುಮ್ಮೆನ್ನಿಸುವ ವಿವರಣೆ ನೀಡಿದರು! ಯೆಹೋವನ ಸಂಘಟನೆಯನ್ನು ಸೂಚಿಸುವ ಆ ಬೃಹತ್ತಾದ ಮಹಿಮಾಭರಿತ ರಥ ಆತನ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದವರು ಹೇಳಿದರು. ಈ ಸಂಘಟನೆಯ ಸ್ವರ್ಗೀಯ ಭಾಗ ಆತ್ಮಜೀವಿಗಳನ್ನು ಒಳಗೂಡಿದ್ದು ಮಿಂಚಿನ ವೇಗದಲ್ಲಿ ಅಂದರೆ ಯೆಹೋವನ ಆಲೋಚನೆಯ ವೇಗದಲ್ಲಿ ಚಲಿಸುತ್ತಿದೆ ಎಂದು ಅವರು ತಿಳಿಸಿದರು. ಈ ಸಂಘಟನೆಯ ಭೂಭಾಗ ಸಹ ಅದೇ ರೀತಿ ಮುನ್ನುಗ್ಗುತ್ತಿದೆ. ದೇವರ ಸಂಘಟನೆಯ ಈ ದೃಶ್ಯ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಾದ ಅನೇಕ ರೋಮಾಂಚಕ ಬೆಳವಣಿಗೆಗಳ ಕಡೆಗೆ ಸಹೋದರರು ಗಮನಸೆಳೆದರು.

ಉದಾಹರಣೆಗೆ, ಅನೇಕ ಕಡೆಗಳಲ್ಲಿ ಒಂದು ಬ್ರಾಂಚ್‌ ಆಫೀಸನ್ನು ಇನ್ನೊಂದು ಬ್ರಾಂಚ್‌ ಆಫೀಸಿನೊಟ್ಟಿಗೆ ವಿಲೀನಗೊಳಿಸಲಾಗಿದೆ. ಹಾಗಾಗಿ ಆ ದೇಶಗಳ ಬೆತೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅನೇಕರನ್ನು ಸಾರುವ ಕಾರ್ಯಕ್ಕಾಗಿ ಕಳುಹಿಸಲು ಸಾಧ್ಯವಾಗಿದೆ. ಆಡಳಿತ ಮಂಡಲಿಯ ಕಾರ್ಯಕ್ಷಮತೆಗಾಗಿ ಸದಾ ಪ್ರಾರ್ಥಿಸುವಂತೆ ಸಹೋದರ ಲೆಟ್‌ ಸಭಿಕರನ್ನು ವಿನಂತಿಸಿಕೊಂಡರು. ಆಳು ವರ್ಗದ ಪ್ರತಿನಿಧಿಯಾಗಿರುವ ಈ ಮಂಡಲಿ ನಂಬಿಗಸ್ತರಾಗಿ ಮಾತ್ರವಲ್ಲ, ವಿವೇಕಿಗಳೂ ವಿವೇಚನೆಯುಳ್ಳವರೂ ಆಗಿರುವಂತೆ ಬೇಡಿಕೊಳ್ಳಲು ಕೇಳಿಕೊಂಡರು.—ಮತ್ತಾ. 24:45-47.

ಪ್ರೋತ್ಸಾಹಕರ ವರದಿಗಳು

ಮನಃಸ್ಪರ್ಶಿ ಇಂಟರ್‌ವ್ಯೂಗಳು

ಜನವರಿ 12, 2010ರಂದು ಹೇಟೀ ದೇಶದಲ್ಲಾದ ಭೂಕಂಪದ ಪರಿಣಾಮಗಳ ಕುರಿತು ಅಲ್ಲಿನ ಬ್ರಾಂಚ್‌ ಕಮಿಟಿಯ ಸದಸ್ಯರಾದ ಸಹೋದರ ಟ್ಯಾಬ್‌ ಹಾನ್ಸ್‌ಬರ್ಗರ್‌ರವರು ನೀಡಿದ ವರದಿ ಮನಃಸ್ಪರ್ಶಿಯಾಗಿತ್ತು. ಆ ಭೂಕಂಪಕ್ಕೆ ಸುಮಾರು 3 ಲಕ್ಷ ಜನರು ಬಲಿಯಾಗಿದ್ದರು. ದೇವರು ನಂಬಿಕೆಯಿಲ್ಲದ ಕೆಟ್ಟ ಜನರನ್ನು ನಾಶಮಾಡಿ ಒಳ್ಳೆಯವರನ್ನು ರಕ್ಷಿಸಿದನೆಂದು ಅಲ್ಲಿನ ಪಾದ್ರಿಗಳು ಜನರಿಗೆ ಹೇಳುತ್ತಿದ್ದರಂತೆ. ಆದರೆ ಭೂಕಂಪನದಿಂದ ಸೆರೆಮನೆಯ ಗೋಡೆಗಳು ಕುಸಿದುಬಿದ್ದಾಗ ಸಾವಿರಾರು ಅಪರಾಧಿಗಳು ತಪ್ಪಿಸಿಕೊಂಡಿದ್ದರು!! ನಮ್ಮ ದಿನಗಳಲ್ಲಿ ಏಕೆ ಇಷ್ಟೊಂದು ಕಷ್ಟತೊಂದರೆಗಳಿವೆ ಎಂಬ ಸತ್ಯ ತಿಳಿದು ಹೇಟೀಯ ಅನೇಕ ಯಥಾರ್ಥ ಹೃದಯದ ಜನರು ಸಾಂತ್ವನ ಪಡೆದಿದ್ದಾರೆ. ಭೂಕಂಪದಲ್ಲಿ ಪತ್ನಿಯನ್ನು ಕಳೆದುಕೊಂಡ ಒಬ್ಬ ನಿಷ್ಠಾವಂತ ಸಹೋದರನ ಮಾತುಗಳನ್ನು ಹಾನ್ಸ್‌ಬರ್ಗರ್‌ರವರು ತಿಳಿಸಿದರು. “ಇವತ್ತಿಗೂ ನನಗೆ ಅಳುಬರುತ್ತದೆ. ಇನ್ನೆಷ್ಟು ದಿನ ನಾನು ಹೀಗೆ ಕಣ್ಣೀರಿಡುತ್ತೇನೋ ಗೊತ್ತಿಲ್ಲ. ಆದರೆ ಯೆಹೋವನ ಸಂಘಟನೆ ತೋರಿಸಿದ ಪ್ರೀತಿ ನನ್ನನ್ನು ಸಂತೋಷದಿಂದಿರುವಂತೆ ಮಾಡಿದೆ. ನನ್ನಾಕೆಯನ್ನು ಪುನಃ ನೋಡುವ ನಿರೀಕ್ಷೆ ನನಗಿದೆ. ಈ ನಿರೀಕ್ಷೆಯನ್ನು ನಾನು ಇತರರಿಗೆ ತಿಳಿಸಲೇಬೇಕು.”

ಈಗ ಬ್ರೂಕ್ಲಿನ್‌ ಬೆತೆಲ್‌ ಕುಟುಂಬದ ಸದಸ್ಯರಾಗಿರುವ ಸಹೋದರ ಮಾರ್ಕ್‌ ಸ್ಯಾಂಡರ್‌ಸನ್‌ ಫಿಲಿಪ್ಪೀನ್ಸ್‌ ದೇಶದ ವರದಿಯನ್ನು ಸಭಿಕರ ಮುಂದೆ ತೆರೆದಿಟ್ಟರು. ಅವರು ಈ ಹಿಂದೆ ಅದೇ ದೇಶದ ಬ್ರಾಂಚ್‌ ಕಮಿಟಿ ಸದಸ್ಯರಾಗಿದ್ದರು. ಅಲ್ಲಿನ ರಾಜ್ಯ ಪ್ರಚಾರಕರ ಸಂಖ್ಯೆ 32 ವರ್ಷಗಳಿಂದಲೂ ಹೆಚ್ಚುತ್ತಾ ಇದೆ ಹಾಗೂ ಬೈಬಲ್‌ ಅಧ್ಯಯನಗಳ ಸಂಖ್ಯೆ ಪ್ರಚಾರಕರ ಸಂಖ್ಯೆಗಿಂತ ಹೆಚ್ಚೆಚ್ಚಾಗುತ್ತಿದೆ ಎಂದು ಹೇಳುವಾಗ ಅವರ ಮುಖದಲ್ಲಿ ಹೊಳಪಿತ್ತು. ಮೀಗೆಲ್‌ ಎಂಬ ಸಹೋದರನ ಅನುಭವವನ್ನು ಅವರು ಹಂಚಿಕೊಂಡರು. ಮೀಗೆಲ್‌ರ ಮೊಮ್ಮಗನ ಕೊಲೆಯಾಗಿತ್ತು. ಕೊಲೆಗಾರನನ್ನು ಪತ್ತೆಹಚ್ಚಿ ಜೈಲಿಗೆ ಅಟ್ಟಿಸಲು ಮೀಗೆಲ್‌ ತುಂಬ ಪ್ರಯಾಸಪಟ್ಟಿದ್ದರು. ಒಂದು ದಿನ ಸೆರೆಮನೆಯಲ್ಲಿ ಸಾಕ್ಷಿ ನೀಡುತ್ತಿದ್ದಾಗ ಮೀಗೆಲ್‌ ಆ ಕೊಲೆಗಾರನನ್ನು ಸಂಧಿಸಿದರು. ಭಯವಿದ್ದರೂ ಶಾಂತವಾಗಿ ಪ್ರೀತಿಯಿಂದ ಅವನೊಂದಿಗೆ ಮಾತಾಡಿದರು. ಬೈಬಲ್‌ ಅಧ್ಯಯನವನ್ನೂ ಆರಂಭಿಸಿದರು. ಆ ವ್ಯಕ್ತಿ ಸತ್ಯ ಕಲಿಯಲಾರಂಭಿಸಿದನು. ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಂಡನು. ದೀಕ್ಷಾಸ್ನಾನ ಸಹ ಪಡಕೊಂಡನು. ಈಗ ಮೀಗೆಲ್‌ ಆತನ ಆಪ್ತ ಸ್ನೇಹಿತರು ಮಾತ್ರವಲ್ಲ ಆತನನ್ನು ಆದಷ್ಟು ಬೇಗ ಸೆರೆಮನೆಯಿಂದ ಬಿಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. *

ನಂತರ ತೀಯಾಕ್ರ್ಯಾಟಿಕ್‌ ಸ್ಕೂಲ್ಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಬೋಧಕರಾಗಿರುವ ಸಹೋದರ ಮಾರ್ಕ್‌ ನೂಮ್ಯಾರ್‌ ಇಂಟರ್‌ವ್ಯೂಗಳನ್ನು ನಡೆಸಿದರು. ಆ್ಯಲಿಕ್ಸ್‌ ಮತ್ತು ಸೇರಾ ರೈನ್‌ಮ್ಯೂಲರ್‌, ಡೇವಿಡ್‌ ಮತ್ತು ಕ್ರಿಸ್ಟಾ ಶೇಫರ್‌, ರಾಬರ್ಟ್‌ ಮತ್ತು ಕೆಟ್ರಾ ಸಿರಾಂಕೋ ಎಂಬ ದಂಪತಿಗಳ ಇಂಟರ್‌ವ್ಯೂ ಇತ್ತು. ಪಬ್ಲಿಷಿಂಗ್‌ ಕಮಿಟಿಯಲ್ಲಿ ಸಹಾಯಕರಾಗಿರುವ ಆ್ಯಲಿಕ್ಸ್‌ ರೈನ್‌ಮ್ಯೂಲರ್‌ ಸತ್ಯವನ್ನು ತಮ್ಮದಾಗಿಸಿಕೊಂಡ ಅನುಭವ ಹಂಚಿಕೊಂಡರು. 15ರ ವಯಸ್ಸಿನಲ್ಲಿ ಕೆನಡದಲ್ಲಿ ಪಯನೀಯರ್‌ ಸೇವೆ ಸಲ್ಲಿಸುತ್ತಿದ್ದಾಗ ಯೆಹೋವನಿಗೆ ಇನ್ನಷ್ಟು ಆಪ್ತವಾದ ಕುರಿತು ಹಾಗೂ ಆ ಸಮಯದಲ್ಲಿ ಹೆಚ್ಚಾಗಿ ಒಬ್ಬರೇ ಸೇವೆಗೆ ಹೋಗುತ್ತಿದ್ದುದರ ಅನುಭವ ಹಂಚಿಕೊಂಡರು. ಬೆತೆಲ್‌ನಲ್ಲಿ ಯಾರ ಮಾದರಿ ಅವರ ಮೇಲೆ ಹೆಚ್ಚು ಪ್ರಭಾವ ಬೀರಿತೆಂದು ಕೇಳಿದ ಪ್ರಶ್ನೆಗೆ ಮೂವರು ನಂಬಿಗಸ್ತ ಸಹೋದರರ ಬಗ್ಗೆ ತಿಳಿಸಿ ಅವರು ನೀಡಿದ ಆಧ್ಯಾತ್ಮಿಕ ಸಹಾಯವನ್ನು ಬಿಡಿಸಿಹೇಳಿದರು. ಪತ್ನಿ ಸೇರಾರನ್ನು ಕೇಳಿದಾಗ, ನಂಬಿಕೆಗಾಗಿ ಹಲವಾರು ವರ್ಷ ಚೀನಾದ ಸೆರೆಮನೆಗಳಲ್ಲಿದ್ದ ಒಬ್ಬ ಸಹೋದರಿಯೊಂದಿಗಿನ ತಮ್ಮ ಸ್ನೇಹದ ಕುರಿತು ಹೇಳಿದರು. ಪ್ರಾರ್ಥನೆಯಲ್ಲಿ ಯೆಹೋವನ ಮೇಲೆ ಆತುಕೊಳ್ಳಲು ತಾನು ಕಲಿತಿರುವುದಾಗಿಯೂ ಸೇರಾ ಹೇಳಿದರು.

ಟೀಚಿಂಗ್‌ ಕಮಿಟಿಗೆ ಸಹಾಯಕರಾಗಿರುವ ಸಹೋದರ ಡೇವಿಡ್‌ ಶೇಫರ್‌ ತಮ್ಮ ತಾಯಿಯ ದೃಢ ನಂಬಿಕೆಯ ಕುರಿತು ಹೊಗಳಿದರು. ಮರಕಡಿಯುವ ಉದ್ಯೋಗ ಮಾಡುತ್ತಿದ್ದ ಸಭೆಯ ಸಹೋದರರು ಯುವಪ್ರಾಯದಲ್ಲಿ ತನಗೆ ಆಕ್ಸಿಲಿಯರಿ ಪಯನೀಯರ್‌ ಸೇವೆಮಾಡಲು ಹೇಗೆ ಸಹಾಯ ಮಾಡಿದರೆಂದೂ ಹೇಳಿದರು. ಅವರ ಪತ್ನಿ ಕ್ರಿಸ್ಟಾ ತಮ್ಮ ನೆನಪಿನಾಳವನ್ನು ಕೆದಕುತ್ತಾ, ಅನೇಕ ವರ್ಷಗಳಿಂದ ಬೆತೆಲ್‌ನಲ್ಲಿ ಸೇವೆಮಾಡುತ್ತಿದ್ದ ಸಹೋದರ ಸಹೋದರಿಯರು ಹೇಗೆ ಚಿಕ್ಕಪುಟ್ಟ ವಿಷಯಗಳಲ್ಲೂ ನಂಬಿಗಸ್ತರಾಗಿದ್ದರು ಮತ್ತು ಅದು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿತೆಂದು ಹೇಳಿದರು.—ಲೂಕ 16:10.

ರೈಟಿಂಗ್‌ ಕಮಿಟಿಯ ಸಹಾಯಕರಾಗಿರುವ ರಾಬರ್ಟ್‌ ಸಿರಾಂಕೋ, ಹಂಗೇರಿಯದ ವಲಸೆಗಾರರಾದ ಹಾಗೂ ಅಭಿಷಿಕ್ತರಾದ ತಮ್ಮ ಇಬ್ಬರು ಅಜ್ಜಂದಿರ ಇಬ್ಬರು ಅಜ್ಜಿಯಂದಿರ ಕುರಿತು ಹೇಳಿದರು. ಸಿರಾಂಕೋ ಬಾಲ್ಯದ ದಿನಗಳಲ್ಲಿ, 1950ರ ದಶಕದಲ್ಲಿ ಜರುಗಿದ ದೊಡ್ಡ ದೊಡ್ಡ ಅಧಿವೇಶನಗಳನ್ನು ಹಾಜರಾಗಿ ಯೆಹೋವನ ಸಂಘಟನೆ ತಮ್ಮ ಸಭೆಗಿಂತ ಎಷ್ಟೋ ದೊಡ್ಡದು ಎಂದು ತಿಳಿದು ಪುಳಕಿತರಾದರಂತೆ. ಅವರ ಪತ್ನಿ ಕೆಟ್ರಾ, ತಾವು ಪಯನೀಯರರಾಗಿದ್ದ ಸಭೆಯಲ್ಲಿ ಧರ್ಮಭ್ರಷ್ಟತೆಯಂಥ ಅನೇಕ ಸಮಸ್ಯೆಗಳಿದ್ದವೆಂದೂ ಇಂಥ ಪರಿಸರದಲ್ಲೂ ನಂಬಿಕೆ ಕಾಪಾಡಿಕೊಂಡು ನಿಷ್ಠೆ ತೋರಿಸುವುದು ಹೇಗೆಂದು ಕಲಿತುಕೊಂಡು ತಮ್ಮ ಸೇವೆಯನ್ನು ಮುಂದುವರಿಸಿದ್ದರ ಕುರಿತು ಮಾತಾಡಿದರು. ಅವರು ನಂತರ ಬೇರೊಂದು ಸಭೆಯಲ್ಲಿ ವಿಶೇಷ ಪಯನೀಯರರಾಗಿ ನೇಮಕಗೊಂಡಾಗ ಅಲ್ಲಿನ ಸಹೋದರ ಸಹೋದರಿಯ ನಡುವೆ ಇದ್ದ ಐಕ್ಯತೆ ನೋಡಿ ಮೂಕವಿಸ್ಮಿತರಾಗಿದ್ದರು.

ನಂತರ ಸಹೋದರ ಮಾನ್‌ಫ್ರೆಡ್‌ ಟೋನಾಕ್‌ ಇಥಿಯೋಪಿಯದ ವರದಿ ನೀಡಿದರು. ಈ ದೇಶ ಬೈಬಲ್‌ ಸಮಯದಿಂದಲೂ ಇದೆ. ಈಗ ಅಲ್ಲಿ ಸುಮಾರು 9,000 ಪ್ರಚಾರಕರಿದ್ದಾರೆ. ಇವರಲ್ಲಿ ಹೆಚ್ಚಿನವರು ರಾಜಧಾನಿ ಆ್ಯಡಿಸ್‌ ಆ್ಯಬಬದಲ್ಲಿ ಅಥವಾ ಸಮೀಪದಲ್ಲಿ ವಾಸಿಸುತ್ತಾರೆ. ಹಾಗಾಗಿ ದೂರದೂರದ ಪ್ರದೇಶಗಳಲ್ಲಿ ಸುವಾರ್ತೆ ಸಾರಲು ಪ್ರಚಾರಕರ ಅಗತ್ಯವಿತ್ತು. ಅದಕ್ಕಾಗಿ ಬೇರೆ ದೇಶದಲ್ಲಿರುವ ಇಥಿಯೋಪಿಯ ಸಾಕ್ಷಿಗಳ ಸಹಾಯ ಕೋರಲಾಯಿತು. ಅನೇಕರು ಸಂತೋಷದಿಂದ ಮುಂಬಂದು ಸುವಾರ್ತೆ ಸಾರಿದ್ದಲ್ಲದೆ ಸ್ಥಳೀಯ ಸಾಕ್ಷಿಗಳನ್ನು ಉತ್ತೇಜಿಸಿದರು. ಸಾರುವಿಕೆ ಉತ್ತಮ ಫಲಿತಾಂಶ ಕೊಟ್ಟಿತು.

ಇಡೀ ಕಾರ್ಯಕ್ರಮದಲ್ಲಿ ಹೆಚ್ಚು ಗಮನಸೆಳೆದದ್ದು ರಷ್ಯಾದ ಯೆಹೋವನ ಸಾಕ್ಷಿಗಳ ಹಾಗೂ ಅವರ ಕಾನೂನು ಸಂಬಂಧಿತ ಹೋರಾಟದ ಕುರಿತಾದ ಭಾಷಣಮಾಲೆ! ರಷ್ಯಾದ ಬ್ರಾಂಚ್‌ ಕಮಿಟಿಯ ಸದಸ್ಯರಾಗಿರುವ ಔಲಿಸ್‌ ಬರ್ಗ್‌ಡಾಲ್‌ ಎಂಬವರು, ರಷ್ಯಾದ ಸಾಕ್ಷಿಗಳು ಅದರಲ್ಲೂ ವಿಶೇಷವಾಗಿ ಮಾಸ್ಕೋದಲ್ಲಿದ್ದ ಸಾಕ್ಷಿಗಳು ಒಂದರ ನಂತರ ಒಂದರಂತೆ ಅನುಭವಿಸಿದ ಹಿಂಸೆಯ ಇತಿಹಾಸವನ್ನೇ ತೆರೆದಿಟ್ಟರು. ಅಮೆರಿಕದ ಬ್ರಾಂಚ್‌ನ ಲೀಗಲ್‌ ಡಿಪಾರ್ಟ್‌ಮೆಂಟ್‌ನಲ್ಲಿ ಸೇವೆಮಾಡುತ್ತಿರುವ ಸಹೋದರ ಫಿಲಿಪ್‌ ಬ್ರಮ್ಲೀ ಇತ್ತೀಚಿನ ತಿಂಗಳುಗಳಲ್ಲಾದ ಕಾನೂನುರೀತ್ಯ ರೋಚಕ ಸಂಗತಿಗಳನ್ನು ವಿವರಿಸಿದರು. ಇತ್ತೀಚಿಗೆ ಮಾನವ ಹಕ್ಕುಗಳ ಯುರೋಪಿಯನ್‌ ಕೋರ್ಟ್‌ (ECHR) ಯೆಹೋವನ ಸಾಕ್ಷಿಗಳ ವಿರುದ್ಧ ದಾಖಲಾಗಿರುವ ಒಂಬತ್ತು ಕೇಸುಗಳನ್ನು ಪರಿಗಣಿಸಿತು. ಸಾಕ್ಷಿಗಳ ವಿರುದ್ಧ ಮಾಡಲಾಗಿರುವ ಈ ಆರೋಪಗಳಿಗೆ ಯಾವುದೇ ಹುರುಳಿಲ್ಲವೆಂದು ಕೋರ್ಟ್‌ ಸರ್ವಾನುಮತದಿಂದ ಒಪ್ಪಿಕೊಂಡಿತು. ಮಾತ್ರವಲ್ಲ, ಅನೇಕ ಕೇಸುಗಳ ವಿಷಯವಾಗಿ ಹೊರಿಸಲಾಗಿರುವ ಆರೋಪಗಳು ಏಕೆ ತಪ್ಪಾಗಿವೆ ಎಂದು ವಿವರಿಸಿತು. ಕೋರ್ಟ್‌ ನೀಡಿದ ತೀರ್ಪು ಯಾವ ಪರಿಣಾಮ ಬೀರಲಿದೆ ಎಂದು ನಾವು ಕಾದು ನೋಡಬೇಕಾಗಿದೆಯಾದರೂ ಅದು ಯೆಹೋವನ ಸಾಕ್ಷಿಗಳ ವಿರುದ್ಧ ಬೇರೆ ದೇಶಗಳಲ್ಲಿರುವ ಕೇಸ್‌ಗಳ ಮೇಲೆ ಒಳ್ಳೇ ಪ್ರಭಾವ ಬೀರಬಹುದೆಂದು ಸಹೋದರ ಬ್ರಮ್ಲೀ ಆಶಾಭಾವನೆ ವ್ಯಕ್ತಪಡಿಸಿದರು.

ಈ ಪ್ರೋತ್ಸಾಹಕರ ವರದಿಯ ನಂತರ ಸಹೋದರ ಲೆಟ್‌ರವರು ಇನ್ನೊಂದು ಸಂತಸದ ಸುದ್ದಿ ತಿಳಿಸಿದರು. ಫ್ರಾನ್ಸ್‌ ಸರಕಾರ ಹಾಗೂ ಯೆಹೋವನ ಸಾಕ್ಷಿಗಳ ಮಧ್ಯೆ ಬಹು ಸಮಯದಿಂದಿದ್ದ ತೆರಿಗೆಯ ಕುರಿತಾದ ಕೇಸನ್ನು ECHR ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು. ಗೌರವ ಮನ್ನಣೆಗೆ ಪಾತ್ರವಾಗಿರುವ ಈ ಕೋರ್ಟ್‌ ನೋಂದಣಿಯಾಗುವ ಎಲ್ಲ ಕೇಸುಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಕೆಲವೇ ಕೆಲವು ಕೇಸ್‌ಗಳು ವಿಚಾರಣೆಯ ಅವಕಾಶ ಪಡೆದುಕೊಳ್ಳುತ್ತವಷ್ಟೆ. ಹಾಗಿದ್ದರೂ ಈ ಕೋರ್ಟ್‌ ಇಷ್ಟರ ವರೆಗೆ ಯೆಹೋವನ ಸಾಕ್ಷಿಗಳಿಗೆ ಸಂಬಂಧಿಸಿದ 39 ಕೇಸ್‌ಗಳ ವಿಚಾರಣೆ ನಡೆಸಿದೆ. ಅವುಗಳಲ್ಲಿ 37 ಕೇಸ್‌ಗಳಲ್ಲಿ ಸಾಕ್ಷಿಗಳ ಪರ ತೀರ್ಪು ಕೊಟ್ಟಿದೆ. ತೆರಿಗೆ ಕುರಿತಾದ ಕೇಸಿನ ವಿಷಯವಾಗಿ ದೇವಜನರಾದ ನಾವೆಲ್ಲರೂ ಯೆಹೋವ ದೇವರನ್ನು ಪ್ರಾರ್ಥಿಸುವಂತೆ ಸಹೋದರ ಲೆಟ್‌ ಬಿನ್ನಹಿಸಿಕೊಂಡರು.

ಸಭಾ ಹಿರಿಯರಿಗಾಗಿರುವ ಶಾಲೆಯ ಬೋಧಕರಾಗಿರುವ ಸಹೋದರ ರಿಚರ್ಡ್‌ ಮಾರ್ಲನ್‌ ಕೊನೆಯ ವರದಿ ನೀಡಿದರು. ಇವರು ಆ ಶಾಲೆಯ ಕುರಿತು ಹಾಗೂ ಶಾಲೆಗೆ ಹಾಜರಾದ ಹಿರಿಯರು ವ್ಯಕ್ತಪಡಿಸಿದ ಗಣ್ಯತೆಯ ಕುರಿತು ಅತ್ಯುತ್ಸಾಹದಿಂದ ಮಾತಾಡಿದರು.

ಆಡಳಿತ ಮಂಡಲಿ ಸದಸ್ಯರ ಇತರ ಭಾಷಣಗಳು

ಆಡಳಿತ ಮಂಡಲಿ ಸದಸ್ಯರಾಗಿರುವ ಸಹೋದರ ಗೈ ಪಿಯರ್ಸ್‌ ಕೊಟ್ಟ ಭಾಷಣ “ಯೆಹೋವನ ನಾಮವನ್ನು ಆಶ್ರಯಿಸಿ” ಎಂಬ 2011ರ ವರ್ಷವಚನದ ಮೇಲೆ ಕೇಂದ್ರೀಕೃತವಾಗಿತ್ತು. (ಚೆಫ. 3:12) ಈಗಿನ ಕಾಲ ಯೆಹೋವನ ಜನರಿಗೆ ಹಲವಾರು ವಿಧಗಳಲ್ಲಿ ಸಂತೋಷ ನೀಡುತ್ತಿರುವುದಾದರೂ ಇದು ಗಂಭೀರ ಹಾಗೂ ಆಲೋಚಿಸಬೇಕಾದ ಸಮಯವೂ ಆಗಿದೆ ಎಂದವರು ತಿಳಿಸಿದರು. ಏಕೆಂದರೆ ಯೆಹೋವನ ಮಹಾ ದಿನ ಹತ್ತಿರದಲ್ಲಿದೆ. ಜನರಿನ್ನೂ ಸುಳ್ಳುಧರ್ಮ, ರಾಜಕೀಯ ಸಂಘಟನೆಗಳು, ಸಂಪತ್ತು ಇತ್ಯಾದಿಗಳನ್ನೇ ಆಶ್ರಯಿಸಿಕೊಂಡಿದ್ದಾರೆ. ಕೆಲವರು ವಾಸ್ತವವನ್ನು ತಳ್ಳಿಹಾಕಿ ತಮಗಿಷ್ಟವಾದಂತೆ ಬದುಕುತ್ತಿದ್ದಾರೆ. ನಮಗೆ ನಿಜವಾದ ಆಶ್ರಯ ಬೇಕಾದಲ್ಲಿ ನಾವು ಯೆಹೋವನ ನಾಮದಲ್ಲಿ ಕೋರಬೇಕು. ಅಂದರೆ ನಾವು ಆತನನ್ನು ತಿಳಿದುಕೊಳ್ಳಬೇಕು, ಗಾಢವಾಗಿ ಗೌರವಿಸಬೇಕು, ಆತನಲ್ಲಿ ಭರವಸೆಯಿಡಬೇಕು, ಸಕಲ ವಿಷಯಗಳಿಂದ ಆತನ ಮೇಲೆ ಪ್ರೀತಿ ಇದೆಯೆಂದು ತೋರಿಸಿಕೊಡಬೇಕು.

“ದೇವರ ವಿಶ್ರಾಂತಿಯಲ್ಲಿ ನೀವು ಸೇರಿದ್ದೀರಾ?” ಇದು ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಡೇವಿಡ್‌ ಸ್ಪ್ಲೇನ್‌ ನೀಡಿದ ಆಸಕ್ತಿಕರ ಭಾಷಣದ ಮುಖ್ಯ ವಿಷಯವಾಗಿತ್ತು. ದೇವರ ವಿಶ್ರಾಂತಿ ಎಂದರೆ ನಿಷ್ಕ್ರಿಯತೆ ಅಲ್ಲ ಎಂದವರು ಹೇಳಿದರು. ಏಕೆಂದರೆ ಬೈಬಲ್‌ ತಿಳಿಸುವ ಸಾಂಕೇತಿಕ ವಿಶ್ರಾಂತಿಯ ದಿನದುದ್ದಕ್ಕೂ ಯೆಹೋವ ದೇವರು ಹಾಗೂ ಆತನ ಮಗನು ಭೂಮಿಗಾಗಿರುವ ನಿಜ ಉದ್ದೇಶವನ್ನು ಸಫಲಗೊಳಿಸುವ ನಿಟ್ಟಿನಲ್ಲಿ ‘ಕೆಲಸಮಾಡುತ್ತಾ ಇದ್ದಾರೆ.’ (ಯೋಹಾ. 5:17) ದೇವರ ವಿಶ್ರಾಂತಿಯಲ್ಲಿ ಸೇರಲಿಕ್ಕಾಗಿ ನಾವೇನು ಮಾಡಬೇಕು? ಒಂದು ವಿಧ ಪಾಪ ಮಾಡುವುದರಿಂದ ಹಾಗೂ ‘ನಾನೇ ಸರಿ’ ಎಂಬ ಮನೋಭಾವದಿಂದ ದೂರವಿರುವುದೇ. ಮಾತ್ರವಲ್ಲ, ನಂಬಿಗಸ್ತರಾಗಿ ಜೀವಿಸುತ್ತಾ ದೇವರ ಉದ್ದೇಶವನ್ನು ಮನಸ್ಸಲ್ಲಿಟ್ಟು ಅದರ ಸಫಲತೆಗೆ ನಮ್ಮ ಕಾಣಿಕೆ ನೀಡುವುದೇ. ಹಾಗೆ ಮಾಡುವುದು ಕೆಲವೊಮ್ಮೆ ಸವಾಲಾಗಿರಬಹುದು. ಆದರೂ ಯೆಹೋವನ ಸಂಘಟನೆ ಕೊಡುವ ಸಲಹೆಸೂಚನೆಗಳನ್ನು ಅನುಸರಿಸುತ್ತಾ ಮುಂದೊತ್ತುತ್ತಾ ಹೋಗಬೇಕು. ದೇವರ ವಿಶ್ರಾಂತಿಯಲ್ಲಿ ಸೇರಲು ತಕ್ಕಷ್ಟು ಶ್ರಮಿಸಿರಿ ಎಂದು ಸಹೋದರ ಸ್ಪ್ಲೇನ್‌ ಸಭಿಕರನ್ನು ಪ್ರೋತ್ಸಾಹಿಸಿದರು.

ಸಮಾಪ್ತಿ ಭಾಷಣವನ್ನು ಆಡಳಿತ ಮಂಡಲಿ ಸದಸ್ಯರಾದ ಸಹೋದರ ಆ್ಯಂಥನಿ ಮಾರಿಸ್‌ ಸಾದರಪಡಿಸಿದರು. ಮುಖ್ಯ ವಿಷಯ “ನಾವು ಯಾವುದಕ್ಕಾಗಿ ಕಾಯುತ್ತಿದ್ದೇವೆ?” ಎಂದಾಗಿತ್ತು. ತುರ್ತು ಹಾಗೂ ವಾತ್ಸಲ್ಯ ತುಂಬಿದ ಮಾತುಗಳಲ್ಲಿ ಅವರು, ಎಲ್ಲ ನಂಬಿಗಸ್ತರು ಎದುರುನೋಡುತ್ತಿರುವ ಹಾಗೂ ಮುಂದೆ ಸಂಭವಿಸಲಿರುವ ಪ್ರವಾದನಾತ್ಮಕ ಘಟನೆಗಳನ್ನು ನೆನಪಿಸಿದರು. “ಶಾಂತಿ ಮತ್ತು ಭದ್ರತೆ” ಎಂಬ ಕೂಗು ಹಾಗೂ ಸುಳ್ಳುಧರ್ಮದ ನಾಶನ ಇವುಗಳಲ್ಲಿ ಎರಡು. (1 ಥೆಸ. 5:2, 3; ಪ್ರಕ. 17:15-17) ವಾರ್ತಾಮಾಧ್ಯಮ ಬಿತ್ತರಿಸುವ ಘಟನೆಗಳನ್ನು ನೋಡಿ “ಅರ್ಮಗೆದೋನ್‌ ಬಂತೆಂದು ಕಾಣುತ್ತದೆ” ಎಂದು ಹೇಳದಿರುವಂತೆ ಸಹೋದರ ಮಾರಿಸ್‌ ಎಚ್ಚರಿಸಿದರು. ಬದಲಿಗೆ ಮೀಕ 7:7ರಲ್ಲಿ ಹೇಳಿರುವಂತೆ ಸಂತೋಷದಿಂದ ಮತ್ತು ತಾಳ್ಮೆಯಿಂದ ರಕ್ಷಕನಾದ ದೇವರನ್ನು ಕಾದುಕೊಳ್ಳುವಂತೆ ಉತ್ತೇಜಿಸಿದರು. ಅಲ್ಲದೆ ನಾವು ಮಾಡಬೇಕಾದ ಇನ್ನೊಂದು ವಿಷಯವನ್ನೂ ಹೇಳಿದರು. ಯುದ್ಧ ತೀವ್ರಗೊಂಡು ಘೋರರೂಪ ತಾಳುವಾಗ ಹೇಗೆ ಸೈನಿಕರು ಒತ್ತಾಗಿ ಹತ್ತಿರ ಬರುತ್ತಾರೋ ಹಾಗೆಯೇ ನಾವು ಈಗ ಆಡಳಿತ ಮಂಡಲಿಗೆ ಹೆಚ್ಚು ಒತ್ತಾಗಿ ಅಂಟಿಕೊಳ್ಳುವಂತೆ ಕೇಳಿಕೊಂಡರು. “ಯೆಹೋವನನ್ನು ನಿರೀಕ್ಷಿಸುವವರೇ, . . . ನಿಮ್ಮ ಹೃದಯವು ಧೈರ್ಯದಿಂದಿರಲಿ.” ಇದು ಅವರ ಬುದ್ಧಿವಾದವಾಗಿತ್ತು.—ಕೀರ್ತ. 31:24.

ಕಾರ್ಯಕ್ರಮದ ಕೊನೆಯಲ್ಲಿ ಮೈ ನವಿರೇಳಿಸುವ ಅನೇಕ ಪ್ರಕಟನೆಗಳಿದ್ದವು. ಇಂಗ್ಲಿಷ್‌ ಭಾಷಾಜ್ಞಾನ ಕಡಿಮೆ ಇರುವವರಿಗಾಗಿ ಕಾವಲಿನಬುರುಜು ಪತ್ರಿಕೆಯ ಸರಳೀಕೃತ ಅಧ್ಯಯನ ಆವೃತ್ತಿಯನ್ನು ಪ್ರಾಯೋಗಿಕ ಕಾರ್ಯವಾಗಿ ಮುದ್ರಿಸುವ ಯೋಜನೆಯನ್ನು ಆಡಳಿತ ಮಂಡಲಿ ಸದಸ್ಯರಾದ ಜೆಫ್ರಿ ಜಾಕ್ಸನ್‌ ಪ್ರಕಟಿಸಿದರು. ಅಮೆರಿಕದಲ್ಲಿರುವ ಜಿಲ್ಲಾ ಮೇಲ್ವಿಚಾರಕರು ಹಾಗೂ ಅವರ ಪತ್ನಿಯರಿಗಾಗಿ ಪರಿಪಾಲನಾ ಭೇಟಿಗಳನ್ನು ಆಡಳಿತ ಮಂಡಲಿ ಆಯೋಜಿಸುವುದೆಂದು ಸಹೋದರ ಸ್ಟೀಫನ್‌ ಲೆಟ್‌ ಪ್ರಕಟಿಸಿದರು. ಶುಶ್ರೂಷಾ ತರಬೇತಿ ಶಾಲೆಯನ್ನು ಇನ್ನು ಮುಂದೆ ‘ಅವಿವಾಹಿತ ಸಹೋದರರಿಗಾಗಿ ಬೈಬಲ್‌ ಶಾಲೆ’ ಎಂಬ ಹೊಸ ಹೆಸರಿನಿಂದ ಕರೆಯಲಾಗುವುದೆಂದೂ ಅವರು ಪ್ರಕಟಿಸಿದರು. ಇದರೊಂದಿಗೆ ಬೇಗನೆ ಕ್ರೈಸ್ತ ದಂಪತಿಗಳಿಗಾಗಿ ಬೈಬಲ್‌ ಶಾಲೆ ಸಹ ಆರಂಭವಾಗಲಿದೆ ಎಂದರು. ಈ ಶಾಲೆಯಲ್ಲಿ ಕ್ರೈಸ್ತ ದಂಪತಿಗಳಿಗೆ ಯೆಹೋವನ ಸೇವೆಯನ್ನು ಇನ್ನೂ ಅಧಿಕಗೊಳಿಸುವಂತೆ ತರಬೇತಿ ಕೊಡಲಾಗುವುದು. ಮಾತ್ರವಲ್ಲ ಸಂಚರಣ ಮೇಲ್ವಿಚಾರಕರು ಹಾಗೂ ಅವರ ಪತ್ನಿಯರಿಗಾಗಿ ಮತ್ತು ಬ್ರಾಂಚ್‌ ಕಮಿಟಿ ಸದಸ್ಯರು ಹಾಗೂ ಅವರ ಪತ್ನಿಯರಿಗಾಗಿ ವರ್ಷಕ್ಕೆ ಎರಡು ಸಾರಿ ಶಾಲೆಯನ್ನು ಪ್ಯಾಟರ್‌ಸನ್‌ನಲ್ಲಿ ಆಯೋಜಿಸಲಾಗುವುದು. ಈ ಮುಂಚೆ ಹಾಜರಾದವರೂ ಪುನಃ ಈ ಶಾಲೆಗೆ ಹಾಜರಾಗಲು ಅವಕಾಶವಿರುವುದು ಎಂದು ಸಹೋದರ ಲೆಟ್‌ ಪ್ರಕಟಿಸಿದರು.

ಅನೇಕ ವರ್ಷಗಳಿಂದ ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ 97 ವರ್ಷದ ಸಹೋದರ ಜಾನ್‌ ಇ. ಬಾರ್‌ರ ನಮ್ರ ಹಾಗೂ ಹೃತ್ಪೂರ್ವಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮಕ್ತಾಯಗೊಂಡಿತು. * ಹೌದು, ಇದು ನಿಜವಾಗಿಯೂ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಒಂದು ಕೂಟ ಎಂದು ಎಲ್ಲರ ಮನ ನುಡಿಯಿತು!

[ಪಾದಟಿಪ್ಪಣಿಗಳು]

^ ಪ್ಯಾರ. 8 ಯೆಹೋವನ ಸಾಕ್ಷಿಗಳ 2011 ವರ್ಷಪುಸ್ತಕ (ಇಂಗ್ಲಿಷ್‌) ಪುಟ 62-63 ನೋಡಿ.

^ ಪ್ಯಾರ. 21 ಸಹೋದರ ಬಾರ್‌ರವರ ಭೂಜೀವಿತ ಡಿಸೆಂಬರ್‌ 4, 2010ರಂದು ಕೊನೆಗೊಂಡಿತು.

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪ್ರೇಕ್ಷಕರ ಮನರಂಜಿಸಿದ ಇಂಟರ್‌ವ್ಯೂ

[ಪುಟ 20ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇಥಿಯೋಪಿಯದಲ್ಲಿ ಸಾರುವ ಕೆಲಸವನ್ನು ಯೆಹೋವನು ಆಶೀರ್ವದಿಸಿದ್ದಾನೆ