ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು “ಶಾಂತಿಯನ್ನು ದಯಪಾಲಿಸುವ ದೇವರು”

ಯೆಹೋವನು “ಶಾಂತಿಯನ್ನು ದಯಪಾಲಿಸುವ ದೇವರು”

ಯೆಹೋವನು “ಶಾಂತಿಯನ್ನು ದಯಪಾಲಿಸುವ ದೇವರು”

“ಶಾಂತಿಯನ್ನು ದಯಪಾಲಿಸುವ ದೇವರು ನಿಮ್ಮೆಲ್ಲರೊಂದಿಗಿರಲಿ.”—ರೋಮ. 15:33.

1, 2. ಆದಿಕಾಂಡ ಪುಸ್ತಕದ 32 ಮತ್ತು 33ನೇ ಅಧ್ಯಾಯದಲ್ಲಿ ಯಾವ ಉದ್ವಿಗ್ನ ಸನ್ನಿವೇಶವನ್ನು ವರ್ಣಿಸಲಾಗಿದೆ? ಈ ಸನ್ನಿವೇಶ ಹೇಗೆ ಕೊನೆಗೊಂಡಿತು?

ಸ್ಥಳ, ಯೊರ್ದನ್‌ ನದಿಯ ಪೂರ್ವಕ್ಕಿರುವ ಯಬ್ಬೋಕ್‌ ಹೊಳೆಯ ಹತ್ತಿರದ ಪೆನೂವೇಲ ಊರಿನ ಸಮೀಪ. ಏಸಾವನಿಗೆ ತನ್ನ ಅವಳಿ ಸಹೋದರ ಯಾಕೋಬ ಬರುತ್ತಿದ್ದಾನೆ ಎಂಬ ಸುದ್ದಿ ಮುಟ್ಟಿದೆ. ಅವನು ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಮಾರಿ 20 ವರ್ಷಗಳೇ ಕಳೆದಿವೆ. ಅಷ್ಟು ಸಮಯ ಕಳೆದಿದ್ದರೂ ಏಸಾವನು ತನ್ನ ಮೇಲೆ ಇನ್ನೂ ಸಿಟ್ಟು ಇಟ್ಟುಕೊಂಡಿದ್ದಾನೋ ತನ್ನನ್ನು ಕೊಲ್ಲುವನೋ ಎಂಬ ಭೀತಿ ಯಾಕೋಬನನ್ನು ಆವರಿಸಿದೆ. ಏಸಾವನು 400 ಮಂದಿಯೊಂದಿಗೆ ಬರುತ್ತಿದ್ದಾನೆ ಎಂದು ತಿಳಿದಾಗಲಂತೂ ಯಾಕೋಬನ ಭಯ ದ್ವಿಗುಣಗೊಳ್ಳುತ್ತದೆ. ಅನಾಹುತವನ್ನು ಎದುರುನೋಡಿದ ಯಾಕೋಬ ಒಂದರ ನಂತರ ಒಂದರಂತೆ ಉಡುಗೊರೆಯ ಮಹಾಪೂರವನ್ನೇ ಏಸಾವನಿಗಾಗಿ ಕಳುಹಿಸಿಕೊಡುತ್ತಾನೆ. ಅಷ್ಟಿಷ್ಟಲ್ಲ, 550ಕ್ಕಿಂತಲೂ ಅಧಿಕ ಸಾಕುಪ್ರಾಣಿಗಳು! ಪ್ರತಿಯೊಂದು ಹಿಂಡನ್ನು ಒಪ್ಪಿಸಿದ ನಂತರ, ಇದು ಯಾಕೋಬನು ಕಳುಹಿಸಿದ ಉಡುಗೊರೆ ಎಂದು ಸೇವಕರು ಏಸಾವನಿಗೆ ತಿಳಿಸುವಂತೆ ಅಪ್ಪಣೆಕೊಡುತ್ತಾನೆ.

2 ಎದುರುನೋಡಿದ ಆ ಕ್ಷಣ ಬಂದೇಬಿಟ್ಟಿತು! ಧೈರ್ಯ ತಂದುಕೊಂಡು ಯಾಕೋಬ ಏಸಾವನ ಕಡೆಗೆ ಹೆಜ್ಜೆಹಾಕುತ್ತಾನೆ. ಹತ್ತಿರ ಹೋದಂತೆ ಬೊಗ್ಗಿ ಅವನಿಗೆ ನಮಸ್ಕರಿಸುತ್ತಾನೆ. ಒಮ್ಮೆಯಲ್ಲ, ಏಳುಸಾರಿ! ಈಗಾಗಲೇ ಅವನು ಏಸಾವನ ಕೋಪವನ್ನು ತಣಿಸಲು ತನ್ನಿಂದಾಗುವ ಒಂದು ಪ್ರಮುಖ ಹೆಜ್ಜೆಯನ್ನು ತೆಗೆದುಕೊಂಡಿದ್ದನು. ಏಸಾವನ ಕೈಯಿಂದ ತನ್ನನ್ನು ಪಾರುಮಾಡುವಂತೆ ಯೆಹೋವ ದೇವರ ಹತ್ತಿರ ಪ್ರಾರ್ಥಿಸಿದ್ದನು. ದೇವರು ಯಾಕೋಬನ ಪ್ರಾರ್ಥನೆ ಆಲಿಸಿದನೋ? ಹೌದು, “ಏಸಾವನು ಅವನನ್ನು ಎದುರುಗೊಳ್ಳುವದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಕಣ್ಣೀರುಸುರಿಸಿದರು.”—ಆದಿ. 32:11-20; 33:1-4.

3. ಯಾಕೋಬ ಮತ್ತು ಏಸಾವನ ವೃತ್ತಾಂತದಿಂದ ನಮಗೆ ಯಾವ ಪಾಠವಿದೆ?

3 ಯಾಕೋಬ ಮತ್ತು ಏಸಾವರ ಈ ವೃತ್ತಾಂತದಿಂದ ನಾವೇನನ್ನು ಕಲಿಯಬಹುದು? ಕ್ರೈಸ್ತ ಸಭೆಯ ಶಾಂತಿಯನ್ನು ಕದಡಿಸುವಂಥ ಒಂದು ಸಮಸ್ಯೆ ಉದ್ಭವಿಸುವಲ್ಲಿ ಅದನ್ನು ಇತ್ಯರ್ಥಗೊಳಿಸಲು ನಾವು ಶ್ರಮಿಸಬೇಕು. ತಕ್ಕ ಹೆಜ್ಜೆಗಳನ್ನು ತಕ್ಕೊಳ್ಳಬೇಕು. ಯಾಕೋಬನು ಹಾಗೆಯೇ ಮಾಡಿದನು. ಆದರೆ ಅವನೇನೂ ಏಸಾವನ ವಿರುದ್ಧ ತಪ್ಪುಮಾಡಿರಲಿಲ್ಲ, ಕ್ಷಮೆಯಾಚಿಸುವ ಅಗತ್ಯವೂ ಇರಲಿಲ್ಲ. ಏಸಾವನೇ ಕೇವಲ ಒಂದು ಹೊತ್ತು ಆಹಾರಕ್ಕಾಗಿ ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಮಾರಿಬಿಟ್ಟಿದ್ದನು. (ಆದಿ. 25:31-34; ಇಬ್ರಿ. 12:16) ಯಾಕೋಬ ತೆಗೆದುಕೊಂಡ ಹೆಜ್ಜೆಯು ನಾವು ಕ್ರೈಸ್ತ ಸಹೋದರರೊಂದಿಗೆ ಶಾಂತಿಸಂಬಂಧವನ್ನು ಕಾಪಾಡಿಕೊಳ್ಳಲು ಎಷ್ಟರ ಮಟ್ಟಿಗಿನ ಪ್ರಯತ್ನ ನಡೆಸಬೇಕೆಂದು ತೋರಿಸಿಕೊಡುತ್ತದೆ. ಅಲ್ಲದೆ ನಾವು ಪ್ರಾರ್ಥನೆಮಾಡಿ ಪ್ರಯತ್ನಿಸುವಾಗ ದೇವರು ನಮ್ಮನ್ನು ಆಶೀರ್ವದಿಸುತ್ತಾನೆ ಎಂದೂ ತಿಳಿಸುತ್ತದೆ. ಶಾಂತಿ ಕಾಪಾಡಿಕೊಳ್ಳಲು ಸಹಾಯಮಾಡುವ ಇನ್ನಿತರ ಉದಾಹರಣೆಗಳು ಬೈಬಲಿನಲ್ಲಿವೆ. ಅವನ್ನೀಗ ನೋಡೋಣ.

ಪರಮಶ್ರೇಷ್ಠ ಮಾದರಿ ನಮಗೆ ಸ್ಫೂರ್ತಿ

4. ಮನುಷ್ಯರನ್ನು ಪಾಪ ಮತ್ತು ಮರಣದಿಂದ ಬಿಡಿಸಿ ರಕ್ಷಿಸಲು ದೇವರು ಯಾವ ಏರ್ಪಾಡು ಮಾಡಿದನು?

4 ಶಾಂತಿ ಕಾಪಾಡಿಕೊಳ್ಳುವುದರಲ್ಲಿ ಪರಮಶ್ರೇಷ್ಠ ಮಾದರಿ ಯೆಹೋವನಾಗಿದ್ದಾನೆ. ಆತನು “ಶಾಂತಿಯನ್ನು ದಯಪಾಲಿಸುವ ದೇವರು.” (ರೋಮ. 15:33) ಸ್ವಲ್ಪ ಯೋಚಿಸಿ! ಮಾನವರು ತನ್ನೊಂದಿಗೆ ಶಾಂತಿಸಂಬಂಧಕ್ಕೆ ಬರಬೇಕೆಂದು ದೇವರು ಏನೆಲ್ಲ ಮಾಡಿದನು. ಆದಾಮಹವ್ವರ ಸಂತತಿಯಾದ ನಾವು “ಪಾಪವು ಕೊಡುವ ಸಂಬಳ” ಪಡೆಯಲು ಪಾತ್ರರೇ. (ರೋಮ. 6:23) ಆದರೂ ದೇವರೇ ಹೆಜ್ಜೆ ತಕ್ಕೊಂಡು ನಾವು ರಕ್ಷಣೆ ಹೊಂದಲು ಸಾಧ್ಯವಾಗುವಂತೆ ತನ್ನ ಪ್ರೀತಿಯ ಮಗನನ್ನು ಪರಿಪೂರ್ಣ ಮನುಷ್ಯನಾಗಿ ಹುಟ್ಟುವಂತೆ ಭೂಮಿಗೆ ಕಳುಹಿಸಿದನು. ಯೇಸು ಸಹ ಅದಕ್ಕೆ ಮನಸಾರೆ ಒಪ್ಪಿದನು. ನಮಗೋಸ್ಕರ ತನ್ನ ಜೀವವನ್ನು ತೆತ್ತನು. (ಯೋಹಾ. 10:17, 18) ದೇವರು ತನ್ನ ಪ್ರಿಯ ಪುತ್ರನನ್ನು ಪುನರುತ್ಥಾನಗೊಳಿಸಿದನು. ನಂತರ ಯೇಸು ತನ್ನ ಯಜ್ಞದ ಮೌಲ್ಯವನ್ನು ತಂದೆಗೆ ಸ್ವರ್ಗದಲ್ಲಿ ಒಪ್ಪಿಸಿದನು. ಈ ವಿಮೋಚನಾ ಮೌಲ್ಯ ಯಜ್ಞವು ಪಶ್ಚಾತ್ತಾಪಪಡುವ ಪಾಪಿಗಳು ಶಾಶ್ವತ ಮರಣಕ್ಕೀಡಾಗದಂತೆ ರಕ್ಷಣೆ ಒದಗಿಸುವುದು.—ಇಬ್ರಿಯ 9:14, 24 ಓದಿ.

5, 6. ದೇವರ ಮತ್ತು ಪಾಪಿ ಮಾನವರ ನಡುವಿನ ಮುರಿದುಹೋದ ಸಂಬಂಧವನ್ನು ಯೇಸುವಿನ ರಕ್ತ ಹೇಗೆ ಸರಿಪಡಿಸುತ್ತದೆ?

5 ಈ ವಿಮೋಚನಾ ಮೌಲ್ಯವು ದೇವರು ಮತ್ತು ಪಾಪಿ ಮಾನವರ ನಡುವಿನ ಮುರಿದುಹೋದ ಸಂಬಂಧವನ್ನು ಹೇಗೆ ಸರಿಮಾಡುವುದು? ಯೆಶಾಯ 53:5 ಹೇಳುವುದನ್ನು ಗಮನಿಸಿ. “ನಮಗೆ ಸುಶಾಂತಿಯನ್ನುಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು.” ಹೌದು, ಪಶ್ಚಾತ್ತಾಪಪಡುವ ಮಾನವರು ಈಗ ದೇವರ ವೈರಿಗಳಾಗಿರುವುದಿಲ್ಲ. ಬದಲಿಗೆ ದೇವರೊಂದಿಗೆ ಶಾಂತಿಸಂಬಂಧ ಹೊಂದಸಾಧ್ಯವಿದೆ. “[ಯೇಸುವಿನ] ಮೂಲಕ ಅಂದರೆ ಆ ಒಬ್ಬನ ರಕ್ತದ ಮೂಲಕ ದೊರೆತ ವಿಮೋಚನಾ ಮೌಲ್ಯದ ಮುಖಾಂತರ ನಮಗೆ ಬಿಡುಗಡೆಯಾಯಿತು; ಹೌದು, . . . ನಮ್ಮ ಅಪರಾಧಗಳು ಕ್ಷಮಿಸಲ್ಪಟ್ಟವು.”—ಎಫೆ. 1:7.

6 ಕ್ರಿಸ್ತನ ಕುರಿತು ಬೈಬಲ್‌ ಹೀಗೆ ಹೇಳುತ್ತದೆ: ‘ಅವನಲ್ಲಿ ಸರ್ವ ಸಂಪೂರ್ಣತೆಯು ವಾಸವಾಗಿರುವುದು ಒಳ್ಳೇದೆಂದು ದೇವರಿಗೆ ಅನಿಸಿತು.’ ಹಾಗೇಕೆ? ಏಕೆಂದರೆ ದೇವರ ಉದ್ದೇಶಗಳನ್ನು ಪೂರೈಸುವುದರಲ್ಲಿ ಕ್ರಿಸ್ತನೇ ಮುಖ್ಯ ಪಾತ್ರಧಾರಿಯಾಗಿದ್ದಾನೆ. ದೇವರ ಆ ಉದ್ದೇಶ ಏನಾಗಿದೆ? ಯೇಸು ಕ್ರಿಸ್ತನ “ರಕ್ತದ ಮೂಲಕ ಶಾಂತಿಯನ್ನು ಮಾಡಿಕೊಂಡು, . . . ಎಲ್ಲವನ್ನೂ ಅವನ ಮೂಲಕ ಪುನಃ ತನ್ನೊಂದಿಗೆ ಸಮಾಧಾನದ ಸಂಬಂಧಕ್ಕೆ ತರುವುದು” ದೇವರ ಉದ್ದೇಶ. ದೇವರು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ತರುವ ವಿಷಯಗಳಲ್ಲಿ “ಸ್ವರ್ಗದಲ್ಲಿರುವ” ಹಾಗೂ “ಭೂಮಿಯಲ್ಲಿರುವ” ವಿಷಯಗಳು ಸೇರಿವೆ. ಅವು ಯಾವುವು?ಕೊಲೊಸ್ಸೆ 1:19, 20 ಓದಿ.

7. ದೇವರೊಂದಿಗೆ ಶಾಂತಿಸಂಬಂಧಕ್ಕೆ ತರಲಾದ “ಸ್ವರ್ಗದಲ್ಲಿರುವ” ಮತ್ತು “ಭೂಮಿಯಲ್ಲಿರುವ” ವಿಷಯಗಳು ಯಾರನ್ನು ಸೂಚಿಸುತ್ತವೆ?

7 ವಿಮೋಚನಾ ಮೌಲ್ಯದಿಂದಲೇ ಅಭಿಷಿಕ್ತ ಕ್ರೈಸ್ತರು ನೀತಿವಂತರೆಂದು ಅಂದರೆ ದೇವರ ಪುತ್ರರೆಂದು ನಿರ್ಣಯಿಸಲ್ಪಟ್ಟಿದ್ದಾರೆ ಹಾಗೂ ದೇವರೊಂದಿಗೆ ಸಮಾಧಾನ ಸಂಬಂಧ ಹೊಂದಿದ್ದಾರೆ. (ರೋಮನ್ನರಿಗೆ 5:1 ಓದಿ.) ಇವರೇ “ಸ್ವರ್ಗದಲ್ಲಿರುವ” ವಿಷಯಗಳು. ಏಕೆಂದರೆ ಇವರಿಗೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇದೆ ಮಾತ್ರವಲ್ಲ ರಾಜರಾಗಿ ಭೂಮಿಯನ್ನು ಆಳುತ್ತಾರೆ ಹಾಗೂ ಯಾಜಕರಾಗಿ ಸೇವೆ ಸಲ್ಲಿಸುತ್ತಾರೆ. (ಪ್ರಕ. 5:10) “ಭೂಮಿಯಲ್ಲಿರುವ” ವಿಷಯಗಳು ಯಾರೆಂದರೆ ಪಶ್ಚಾತ್ತಾಪಪಡುವ ಹಾಗೂ ಭವಿಷ್ಯತ್ತಿನಲ್ಲಿ ಇದೇ ಭೂಮಿಯಲ್ಲಿ ಸದಾಕಾಲ ಜೀವಿಸುವ ಮಾನವರೇ.—ಕೀರ್ತ. 37:29.

8. ಮಾನವರು ತನ್ನೊಂದಿಗೆ ಶಾಂತಿಸಂಬಂಧ ಹೊಂದಲಿಕ್ಕಾಗಿ ಯೆಹೋವನು ಎಷ್ಟರ ಮಟ್ಟಿಗಿನ ತ್ಯಾಗ ಮಾಡಿದ್ದಾನೆ ಎಂದು ಆಲೋಚಿಸುವಾಗ ನಿಮಗೇನನಿಸುತ್ತದೆ?

8 ಯೆಹೋವ ದೇವರು ಮಾಡಿರುವ ಈ ಏರ್ಪಾಡಿಗಾಗಿ ಹೃದಯಾಳದ ಕೃತಜ್ಞತೆ ವ್ಯಕ್ತಪಡಿಸುತ್ತಾ ಪೌಲನು ಎಫೆಸದ ಅಭಿಷಿಕ್ತ ಕ್ರೈಸ್ತರಿಗೆ ಹೀಗೆ ಬರೆದನು: “ಕರುಣಾಭರಿತನಾಗಿರುವ ದೇವರು . . . ನಾವು ಅಪರಾಧಗಳಲ್ಲಿ ಸತ್ತವರಾಗಿದ್ದಾಗಲೇ ಕ್ರಿಸ್ತನೊಂದಿಗೆ ನಮ್ಮನ್ನು ಬದುಕಿಸಿದನು—ದೇವರ ಅಪಾತ್ರ ದಯೆಯಿಂದಲೇ ನೀವು ರಕ್ಷಿಸಲ್ಪಟ್ಟಿದ್ದೀರಿ.” (ಎಫೆ. 2:4, 5) ನಮಗೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆಯಿರಲಿ ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯಿರಲಿ, ನಮ್ಮೆಲ್ಲರಿಗೂ ದೇವರು ಎಷ್ಟೊಂದು ಕರುಣೆ, ಅಪಾತ್ರ ದಯೆ ತೋರಿಸಿದ್ದಾನೆಂದರೆ ಆ ಋಣವನ್ನು ನಾವೆಂದೂ ತೀರಿಸಲಾರೆವು. ಹೌದು, ತನ್ನೊಂದಿಗೆ ಶಾಂತಿಸಂಬಂಧ ಹೊಂದಲಿಕ್ಕಾಗಿ ದೇವರು ಎಷ್ಟರ ಮಟ್ಟಿಗಿನ ತ್ಯಾಗ ಮಾಡಿದ್ದಾನೆ ಎಂದು ನಾವು ಯೋಚಿಸುವಾಗ ನಮ್ಮ ಹೃದಯದಲ್ಲಿ ಕೃತಜ್ಞತೆ ಉಕ್ಕದೆ ಇರಲಾರದು. ಸಭೆಯ ಶಾಂತಿಯನ್ನು ಭಂಗಪಡಿಸುವ ಯಾವುದೇ ಸನ್ನಿವೇಶ ತಲೆದೋರುವಾಗ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ದೇವರ ಈ ಮಾದರಿ ನಮ್ಮನ್ನು ಪ್ರಚೋದಿಸುವುದಿಲ್ಲವೇ?

ಅಬ್ರಹಾಮ ಮತ್ತು ಇಸಾಕನ ಮಾದರಿ

9, 10. ಅಬ್ರಹಾಮ ಮತ್ತು ಲೋಟನ ದಯಕಾಯುವವರ ಮಧ್ಯೆ ಜಗಳವುಂಟಾದಾಗ ಅಬ್ರಹಾಮನು ತನ್ನ ಶಾಂತಿಪ್ರಿಯ ಮನೋಭಾವವನ್ನು ಹೇಗೆ ತೋರಿಸಿದನು?

9 ಬೈಬಲ್‌ ಅಬ್ರಹಾಮನ ಕುರಿತು, “‘ಅಬ್ರಹಾಮನು ಯೆಹೋವನಲ್ಲಿ ನಂಬಿಕೆಯನ್ನಿಟ್ಟನು ಮತ್ತು ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು’ ಎಂಬ ಶಾಸ್ತ್ರವಚನವು ನೆರವೇರಿತು ಮತ್ತು ಅವನು ‘ಯೆಹೋವನ ಸ್ನೇಹಿತನು’ ಎಂದು ಕರೆಯಲ್ಪಟ್ಟನು” ಎಂದು ಹೇಳುತ್ತದೆ. (ಯಾಕೋ. 2:23) ಅಬ್ರಹಾಮನ ಈ ನಂಬಿಕೆ ಇತರರೊಂದಿಗೆ ಶಾಂತಿಯುತ ಸಂಬಂಧವನ್ನು ಕಾಪಾಡಿಕೊಂಡದ್ದರಲ್ಲಿ ಸಹ ತೋರಿಬಂತು. ಒಮ್ಮೆ ಸಂದರ್ಭ ಹೀಗಿತ್ತು. ಅಬ್ರಹಾಮನ ಮತ್ತು ಅವನ ತಮ್ಮನ ಮಗನಾದ ಲೋಟನ ದನಕುರಿಗಳು ಹೇರಳವಾದಾಗ ಅವರಿಬ್ಬರ ದನಕಾಯುವವರ ಮಧ್ಯೆ ಜಗಳ ಉಂಟಾಯಿತು. (ಆದಿ. 12:5; 13:7) ಈ ಸಮಸ್ಯೆಗೆ ಇದ್ದ ಒಂದೇ ಪರಿಹಾರವೆಂದರೆ ಅಬ್ರಹಾಮ ಹಾಗೂ ಲೋಟ ಬೇರೆ ಬೇರೆ ದಿಕ್ಕಿಗೆ ಹೋಗಿ ನೆಲಸುವುದಾಗಿತ್ತು. ನಯನಾಜೂಕಾದ ಈ ವಿಷಯವನ್ನು ಅಬ್ರಹಾಮನು ಹೇಗೆ ನಿಭಾಯಿಸಿದನು? ವಯಸ್ಸಿನಲ್ಲಿ ತಾನು ದೊಡ್ಡವನೂ ದೇವರ ಸ್ನೇಹಿತನೂ ಆಗಿದ್ದರಿಂದ ಲೋಟನ ಮೇಲೆ ಅಧಿಕಾರ ಚಲಾಯಿಸಿ ಅವನೇನು ಮಾಡಬೇಕೆಂದು ಆಜ್ಞಾಪಿಸಬಹುದಿತ್ತು. ಆದರೆ ಹಾಗೆ ಮಾಡದೆ ತಾನು ಶಾಂತಿಪ್ರಿಯ ವ್ಯಕ್ತಿಯೆಂದು ತೋರಿಸಿಕೊಟ್ಟನು.

10 ಅಬ್ರಹಾಮನು, “ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರಲ್ಲವೇ” ಎಂದು ಲೋಟನಲ್ಲಿ ಬಿನ್ನಹಿಸಿಕೊಂಡನು. ಮಾತ್ರವಲ್ಲ, “ದೇಶವೆಲ್ಲಾ ನಿನ್ನೆದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು” ಎಂದು ಆಯ್ಕೆಯನ್ನು ಲೋಟನಿಗೆ ಬಿಟ್ಟುಕೊಟ್ಟನು. ಲೋಟ ಅತ್ಯಂತ ಫಲವತ್ತಾದ ಪ್ರದೇಶವನ್ನು ಆರಿಸಿಕೊಂಡನು. ಅದಕ್ಕಾಗಿ ಅಬ್ರಹಾಮನೇನೂ ಮುಖ ಕಿವುಚಿಕೊಳ್ಳಲಿಲ್ಲ. (ಆದಿ. 13:8-11) ಮುಂದೊಮ್ಮೆ ಶತ್ರುಗಳು ಮುತ್ತಿಗೆ ಹಾಕಿ ಲೋಟನನ್ನು ಸೆರೆಹಿಡಿದುಕೊಂಡು ಹೋದಾಗ ಅಬ್ರಹಾಮನೇ ಖುದ್ದಾಗಿ ಹೋಗಿ ಅವನನ್ನು ಶತ್ರುಗಳಿಂದ ತಪ್ಪಿಸಿ ರಕ್ಷಿಸಿದನು.—ಆದಿ. 14:14-16.

11. ಯಾವ ರೀತಿಯಲ್ಲಿ ಅಬ್ರಹಾಮನು ಫಿಲಿಷ್ಟಿಯರೊಂದಿಗೆ ಶಾಂತಿ ಕಾಪಾಡಿಕೊಂಡನು?

11 ಅಬ್ರಹಾಮ ಕಾನಾನ್‌ ದೇಶದಲ್ಲಿ ಫಿಲಿಷ್ಟಿಯರೊಂದಿಗೆ ಶಾಂತಿ ಕಾಪಾಡಿಕೊಂಡದ್ದು ಹೇಗೆಂದು ಗಮನಿಸಿ. ಅಬ್ರಹಾಮನ ಸೇವಕರು ಬೇರ್ಷೆಬದಲ್ಲಿ ತೋಡಿದ್ದ ಬಾವಿಯನ್ನು ಫಿಲಿಷ್ಟಿಯರು “ಬಲಾತ್ಕಾರದಿಂದ” ಸ್ವಾಧೀನಪಡಿಸಿಕೊಂಡರು. ಈ ಮುಂಚೆ ಲೋಟನನ್ನು ರಕ್ಷಿಸಲು ನಾಲ್ಕು ರಾಜರೊಂದಿಗೆ ಹೋರಾಡಿ ಜಯಸಾಧಿಸಿದ ಅಬ್ರಹಾಮನು ಈ ಫಿಲಿಷ್ಟಿಯರಿಗೆ ಸುಲಭವಾಗಿ ಬುದ್ಧಿಕಲಿಸಬಹುದಿತ್ತು. ಆದರೆ ಬಾವಿಗಾಗಿ ಅವರೊಂದಿಗೆ ಜಗಳಕಾಯಲು ಹೋಗಲಿಲ್ಲ. ಸುಮ್ಮನಿದ್ದನು. ಸಮಯಾನಂತರ ಫಿಲಿಷ್ಟಿಯ ರಾಜನು ಅಬ್ರಹಾಮನೊಂದಿಗೆ ಶಾಂತಿಯ ಒಡಂಬಡಿಕೆ ಮಾಡಿಕೊಳ್ಳಲು ಆಗಮಿಸಿದನು. ಅವನ ಪುತ್ರಪೌತ್ರರಿಗೆ ಯಾವ ಕೇಡನ್ನೂ ಮಾಡುವುದಿಲ್ಲವೆಂದು ಅಬ್ರಹಾಮನು ಪ್ರಮಾಣ ಮಾಡಿದ ನಂತರವೇ ಅಬ್ರಹಾಮನು ಬಾವಿಯ ವಿಷಯದ ಪ್ರಸ್ತಾಪವೆತ್ತಿದನು. ಘಟನೆಯ ಸುಳಿವೇ ಇದ್ದಿರದ ರಾಜನು ಕೂಡಲೆ ಆ ಬಾವಿಯನ್ನು ಅಬ್ರಹಾಮನಿಗೆ ಕೊಡಿಸಿದನು. ಅಬ್ರಹಾಮ ಆ ದೇಶದಲ್ಲಿ ಬಹುದಿವಸ ಶಾಂತಿಯುತ ಬಾಳ್ವೆ ನಡೆಸಿದನು.—ಆದಿ. 21:22-31, 34.

12, 13. (ಎ) ಇಸಾಕ ತನ್ನ ತಂದೆಯ ಮಾದರಿಯನ್ನು ಹೇಗೆ ಪಾಲಿಸಿದನು? (ಬಿ) ಇಸಾಕ ಶಾಂತಿ ಕಾಪಾಡಲು ಶ್ರಮಿಸಿದ್ದನ್ನು ಯೆಹೋವನು ಹೇಗೆ ಆಶೀರ್ವದಿಸಿದನು?

12 ಅಬ್ರಹಾಮನ ಮಗ ಇಸಾಕನು ಸಹ ತಂದೆಯಂತೆಯೇ ಶಾಂತಿಪ್ರಿಯನಾಗಿದ್ದನು. ಅವನು ಫಿಲಿಷ್ಟಿಯರೊಂದಿಗೆ ನಡಕೊಂಡ ರೀತಿಯಿಂದಲೇ ಇದು ಗೊತ್ತಾಗುತ್ತದೆ. ಅವನಿದ್ದ ಪ್ರದೇಶದಲ್ಲಿ ಬರ ಬಂದ ಕಾರಣ ಇಸಾಕನು ಕಾನಾನ್‌ ದೇಶದ ದಕ್ಷಿಣ ಸೀಮೆಯಲ್ಲಿದ್ದ ಲಹೈರೋಯಿಯಿಂದ ಉತ್ತರಕ್ಕಿರುವ ಫಲವತ್ತಾದ ಪ್ರದೇಶವಾದ ಗೆರಾರಿಗೆ ಬಂದನು. ಅದು ಫಿಲಿಷ್ಟಿಯರ ಪ್ರದೇಶವಾಗಿತ್ತು. ಯೆಹೋವನ ಆಶೀರ್ವಾದದಿಂದ ಇಸಾಕನು ಉತ್ತಮ ಬೆಳೆ ಪಡೆದನು. ದನಕುರಿಗಳು ಹೆಚ್ಚಿದವು. ಇದನ್ನು ನೋಡಿ ಫಿಲಿಷ್ಟಿಯರಿಗೆ ಹೊಟ್ಟೆಕಿಚ್ಚಾಯಿತು. ಅಬ್ರಹಾಮನಂತೆ ಇಸಾಕನು ಧನವಂತನಾಗುವುದನ್ನು ಅವರಿಗೆ ಸಹಿಸಲಾಗಲಿಲ್ಲ. ಆದ್ದರಿಂದ ಆ ಪ್ರದೇಶದಲ್ಲಿ ಈ ಹಿಂದೆ ಅಬ್ರಹಾಮನ ಸೇವಕರು ತೋಡಿದ್ದ ಬಾವಿಗಳನ್ನು ಮುಚ್ಚಿಬಿಟ್ಟರು. ಮಾತ್ರವಲ್ಲ, ಕೊನೆಗೆ ಫಿಲಿಷ್ಟಿಯ ರಾಜನು ಇಸಾಕನಿಗೆ ತಮ್ಮ “ಬಳಿಯಿಂದ ಹೊರಟುಹೋಗಬೇಕೆಂದು” ಹೇಳಿದನು. ಶಾಂತಿಪ್ರಿಯ ಇಸಾಕ ಅಲ್ಲಿಂದ ಹೊರಟುಹೋದನು.—ಆದಿ. 24:62; 26:1, 12-17.

13 ಪರಿವಾರ ಸ್ವತ್ತುಗಳೊಂದಿಗೆ ಬಹಳಷ್ಟು ದೂರ ಬಂದ ಮೇಲೆ ಇಸಾಕನ ಸೇವಕರು ಇನ್ನೊಂದು ಬಾವಿಯನ್ನು ತೋಡಿದರು. ಆದರೆ ಫಿಲಿಷ್ಟಿಯ ದನಕಾಯುವವರು ಬಂದು ಅದು ತಮಗೆ ಸೇರಿದ್ದೆಂದು ಹೇಳಿದರು. ತಂದೆ ಅಬ್ರಹಾಮನ ಮಾದರಿಯನ್ನು ಪಾಲಿಸಿದ ಇಸಾಕ ಜಗಳಕಾಯಲಿಲ್ಲ. ಬದಲಿಗೆ ಇನ್ನೊಂದು ಬಾವಿಯನ್ನು ತೋಡಿಸಿದನು. ಅದನ್ನೂ ಫಿಲಿಷ್ಟಿಯರು ತಮ್ಮದೆಂದು ಹೇಳಿದರು. ಶಾಂತಿ ಕಾಯ್ದುಕೊಳ್ಳುವ ಸಲುವಾಗಿ ಇಸಾಕನು ತನ್ನ ಪರಿವಾರ ಸ್ವತ್ತನ್ನೆಲ್ಲ ಇನ್ನೊಂದು ಕಡೆ ಸಾಗಿಸಿದನು. ಅಲ್ಲಿ ಅವನ ಸೇವಕರು ಮತ್ತೊಂದು ಬಾವಿ ತೋಡಿದರು. ಅದಕ್ಕೆ ಅವನು ರೆಹೋಬೋತ್‌ ಎಂದು ಹೆಸರಿಟ್ಟನು. ಕಾಲಾನಂತರ ಇಸಾಕನು ಬೇರ್ಷೆಬ ಎಂಬ ಫಲವತ್ತಾದ ಪ್ರದೇಶಕ್ಕೆ ಸ್ಥಳಾಂತರಿಸಿದನು. ಯೆಹೋವನು ಅವನನ್ನು ಆಶೀರ್ವದಿಸಿ, “ನೀನು ಭಯಪಡಬೇಡ; ನಾನು ನಿನ್ನ ಬಳಿಯಲ್ಲಿದ್ದೇನೆ; ನನ್ನ ಸೇವಕನಾದ ಅಬ್ರಹಾಮನ ನಿಮಿತ್ತ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು” ಎಂದು ಭರವಸೆ ನೀಡಿದನು.—ಆದಿ. 26:17-25.

14. ಫಿಲಿಷ್ಟಿಯ ರಾಜನು ಒಡಂಬಡಿಕೆ ಮಾಡಿಕೊಳ್ಳಲು ಬಂದಾಗ ಇಸಾಕನು ಹೇಗೆ ಶಾಂತಿಯಿಂದ ವರ್ತಿಸಿದನು?

14 ತನ್ನ ಸೇವಕರು ತೋಡಿದ ಎಲ್ಲ ಬಾವಿಗಳನ್ನು ಮರಳಿ ಪಡೆಯಲು ಇಸಾಕ ಫಿಲಿಷ್ಟಿಯರೊಂದಿಗೆ ಯುದ್ಧಮಾಡಬಹುದಿತ್ತು. ಆದರೆ ಹಾಗೆ ಮಾಡದೆ ಅನೇಕ ಬಾರಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊರಟುಹೋದನು. ಹೀಗೆ ಅವರೊಂದಿಗೆ ಶಾಂತಿಯಿಂದಿದ್ದನು. ಕೊನೆಗೆ ಬೇರ್ಷೆಬದಲ್ಲಿದ್ದಾಗ ಫಿಲಿಷ್ಟಿಯ ರಾಜ ಹಾಗೂ ಮಂತ್ರಿಮಂಡಲದವರು ಅವನಿದ್ದಲ್ಲಿಗೆ ಬಂದು “ಯೆಹೋವನು ನಿನ್ನ ಸಂಗಡ ಇದ್ದಾನೆ ಎಂದು ನಮಗೆ ಸ್ಪಷ್ಟವಾಗಿ” ಕಂಡುಬಂದಿದೆ ಎಂದು ಹೇಳಿ ತಮ್ಮೊಂದಿಗೆ ಶಾಂತಿಯ ಒಡಂಬಡಿಕೆ ಮಾಡಿಕೊಳ್ಳುವಂತೆ ಕೇಳಿಕೊಂಡರು. ಆಗಲೂ ಅವನು ಜಗಳವಾಡದೆ ಸಮಾಧಾನದಿಂದ ಇದ್ದನು. ಆ ಕುರಿತು ಚರಿತ್ರೆ ಹೀಗೆ ಹೇಳುತ್ತದೆ: “ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು; ಅವರೆಲ್ಲರೂ ಭೋಜನೋಪಚಾರಗಳನ್ನು ತೀರಿಸಿಕೊಂಡು ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣಮಾಡಿಕೊಂಡರು. ಇಸಾಕನು ಅವರನ್ನು ಸಾಗಕಳುಹಿಸಲು ಅವರು ಸಮಾಧಾನದೊಡನೆ ಹೊರಟುಹೋದರು.”—ಆದಿ. 26:26-31.

ಯಾಕೋಬನ ಅಚ್ಚುಮೆಚ್ಚಿನ ಮಗನ ಮಾದರಿ

15. ಯೋಸೇಫನೊಂದಿಗೆ ಅಣ್ಣಂದಿರಿಗೆ ಏಕೆ ಸಮಾಧಾನದಿಂದ ಮಾತಾಡಲು ಆಗುತ್ತಿರಲಿಲ್ಲ?

15 ಇಸಾಕನ ಮಗನಾದ ಯಾಕೋಬ ಒಬ್ಬ ‘ಸಾಧುಮನುಷ್ಯನಾಗಿದ್ದನು.’ (ಆದಿ. 25:27) ಲೇಖನದ ಆರಂಭದಲ್ಲಿ ಕಲಿತಂತೆ ಅವನು ಏಸಾವನೊಂದಿಗೆ ಸಮಾಧಾನ ಮಾಡಿಕೊಳ್ಳಲಿಕ್ಕಾಗಿ ದಾರಿಹುಡುಕಿದನು. ಖಂಡಿತವಾಗಿಯೂ ತಂದೆ ಇಸಾಕನಿಂದಲೇ ಈ ಗುಣವನ್ನು ಯಾಕೋಬನು ಕಲಿತಿರಬೇಕು. ಯಾಕೋಬನ ಮಕ್ಕಳ ಬಗ್ಗೆ ಏನು? ತನ್ನ 12 ಪುತ್ರರಲ್ಲಿ ಯೋಸೇಫನೆಂದರೆ ಯಾಕೋಬನಿಗೆ ಬಲು ಅಚ್ಚುಮೆಚ್ಚು. ಯೋಸೇಫನು ತಂದೆಗೆ ವಿಧೇಯತೆ ಹಾಗೂ ಗೌರವ ತೋರಿಸುತ್ತಿದ್ದನು, ತಂದೆ ಹೇಳಿದ ಕೆಲಸಗಳನ್ನು ಕಾಳಜಿಯಿಂದ ಮಾಡುತ್ತಿದ್ದನು. (ಆದಿ. 37:2, 14) ಆದರೆ ಯೋಸೇಫನೆಂದರೆ ಅವನ ಅಣ್ಣಂದಿರಿಗೆ ಹೊಟ್ಟೆಕಿಚ್ಚು. ಎಷ್ಟೆಂದರೆ ಅವನೊಡನೆ ಸಮಾಧಾನದಿಂದ ಮಾತಾಡಲೂ ಆಗುತ್ತಿರಲಿಲ್ಲ. ಅಷ್ಟೇನಾ? ಕಟುಹೃದಯದ ಈ ಅಣ್ಣಂದಿರು ಯೋಸೇಫನನ್ನು ದಾಸನಾಗಿ ಮಾರಿ ಕಾಡುಮೃಗ ಕೊಂದಿತು ಎಂದು ಸುಳ್ಳುಹೇಳಿ ತಂದೆಯನ್ನು ನಂಬಿಸಿದರು.—ಆದಿ. 37:4, 28, 31-33.

16, 17. ಯೋಸೇಫನು ತಾನೊಬ್ಬ ‘ಶಾಂತಿಪ್ರಿಯ ತಮ್ಮ’ ಎಂದು ಹೇಗೆ ತೋರಿಸಿಕೊಟ್ಟನು?

16 ಯೆಹೋವನು ಯೋಸೇಫನ ಕೈಬಿಡಲಿಲ್ಲ. ಸಮಯಾನಂತರ ಯೋಸೇಫನು ಈಜಿಪ್ಟಿನ ಮುಖ್ಯಾಧಿಕಾರಿಯಾದನು. ಫರೋಹನ ನಂತರದ ಸ್ಥಾನ ಅವನಿಗೆ ಸಿಕ್ಕಿತು. ಒಮ್ಮೆ ವಿಪರೀತ ಕ್ಷಾಮವುಂಟಾಗಿ ಯೋಸೇಫನ ಅಣ್ಣಂದಿರು ಆಹಾರಕ್ಕಾಗಿ ಈಜಿಪ್ಟಿಗೆ ಬಂದರು. ಯೋಸೇಫನು ಅಧಿಕಾರಿಯ ಧಿರಿಸಿನಲ್ಲಿದ್ದ ಕಾರಣ ಅವರಿಗೆ ಗುರುತು ಸಿಗಲಿಲ್ಲ. (ಆದಿ. 42:5-7) ಅಣ್ಣಂದಿರು ತನಗೆ ಹಾಗೂ ತಂದೆಗೆ ಮಾಡಿದ ದ್ರೋಹಕ್ಕೆ ಯೋಸೇಫನು ಸೇಡುತೀರಿಸಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡದೆ ಅವರೊಂದಿಗೆ ಪುನಃ ಶಾಂತಿಸಂಬಂಧ ಹೊಂದಲು ಬಯಸಿದನು. ಅವರು ಪಶ್ಚಾತ್ತಾಪಪಟ್ಟದ್ದು ಸ್ಪಷ್ಟವಾದಾಗ ತನ್ನ ಗುರುತನ್ನು ಹೊರಗೆಡಹುತ್ತಾ “ನೀವು ನನ್ನನ್ನು ಹಾಗೆ ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು” ಎಂದು ಹೇಳಿ ಅವರನ್ನು ಸಂತೈಸಿದನು. “ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು.”—ಆದಿ. 45:1, 5, 15.

17 ಯಾಕೋಬನ ಮರಣದ ನಂತರ ಅಣ್ಣಂದಿರಿಗೆ ಭಯವುಂಟಾಯಿತು. ಯೋಸೇಫನೇನಾದರು ತಮ್ಮ ಮೇಲೆ ಸೇಡುತೀರಿಸಿಕೊಳ್ಳುವನೋ ಎಂದು ಅಂಜಿ ನಡುಗಿದರು. ಅದನ್ನವರು ಯೋಸೇಫನಿಗೆ ಹೇಳಿದಾಗ ಅವನು “ಕಣ್ಣೀರು ಸುರಿಸಿದನು.” ಮಾತ್ರವಲ್ಲ, “ನೀವು ಸ್ವಲ್ಪವೂ ಭಯಪಡಬೇಡಿರಿ; ನಾನು ನಿಮ್ಮನ್ನೂ ನಿಮಗೆ ಸೇರಿದವರೆಲ್ಲರನ್ನೂ ಪೋಷಿಸುವೆನು ಎಂದು ಹೇಳಿ ಅವರನ್ನು ಸಂತೈಸಿ ಅವರ ಸಂಗಡ ಪ್ರೀತಿಯಿಂದ ಮಾತಾಡಿದನು.”—ಆದಿ. 50:15-21.

ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟಿವೆ

18, 19. (ಎ) ಈ ಲೇಖನದಲ್ಲಿ ಚರ್ಚಿಸಿದ ಶಾಂತಿಪ್ರಿಯ ವ್ಯಕ್ತಿಗಳ ಉದಾಹರಣೆಗಳಿಂದ ನಿಮಗೇನು ಪ್ರಯೋಜನವಾಯಿತು? (ಬಿ) ಮುಂದಿನ ಲೇಖನದಲ್ಲಿ ನಾವೇನನ್ನು ಕಲಿಯುವೆವು?

18 ಪೌಲನು ಹೀಗೆ ಬರೆದನು: “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು.” (ರೋಮ. 15:4) ಹಾಗಾದರೆ ಯೆಹೋವ ದೇವರ ಪರಮಶ್ರೇಷ್ಠ ಮಾದರಿಯನ್ನು ಮತ್ತು ಅಬ್ರಹಾಮ, ಇಸಾಕ, ಯಾಕೋಬ, ಯೋಸೇಫರ ಮಾದರಿಯನ್ನು ಬೈಬಲ್‌ನಿಂದ ಪರೀಕ್ಷಿಸಿದ್ದು ನಮಗೆ ಯಾವ ಪ್ರಯೋಜನ ತಂದಿದೆ?

19 ಯೆಹೋವ ದೇವರು ತನ್ನ ಮತ್ತು ಪಾಪಿ ಮಾನವರ ಸಂಬಂಧವನ್ನು ಸರಿಪಡಿಸಲು ಮಾಡಿದ ವಿಷಯಗಳ ಕುರಿತು ನಾವು ಯೋಚಿಸುವಾಗ, ಇತರರೊಂದಿಗೆ ಶಾಂತಿಯಿಂದಿರಲು ಸಾಧ್ಯವಿರುವುದನ್ನೆಲ್ಲ ಮಾಡಬೇಕೆಂಬ ಮನಸ್ಸು ನಮಗೂ ಉಂಟಾಗುತ್ತದಲ್ಲವೆ? ಹೆತ್ತವರೇ, ಅಬ್ರಹಾಮ, ಇಸಾಕ, ಯಾಕೋಬ, ಯೋಸೇಫರ ಉದಾಹರಣೆಗಳು, ನಿಮ್ಮ ಮಾದರಿಯ ಮೂಲಕ ಮಕ್ಕಳಿಗೆ ಒಳ್ಳೇದನ್ನು ಕಲಿಸಲು ನಿಮಗೆ ಸಾಧ್ಯ ಎಂದು ತೋರಿಸುತ್ತವಲ್ಲವೆ? ಶಾಂತಿಸಂಬಂಧವನ್ನು ಕಾಪಾಡಲು ಶ್ರಮಿಸುವವರನ್ನು ಯೆಹೋವ ದೇವರು ಆಶೀರ್ವದಿಸುತ್ತಾನೆ ಎಂದು ಸಹ ಈ ಉದಾಹರಣೆಗಳು ತೋರಿಸಿಕೊಟ್ಟವು. ಆದ್ದರಿಂದಲೇ ಪೌಲನು ಯೆಹೋವ ದೇವರನ್ನು “ಶಾಂತಿಯನ್ನು ದಯಪಾಲಿಸುವ ದೇವರು” ಎಂದು ಕರೆದನು. (ರೋಮನ್ನರಿಗೆ 15:33; 16:20 ಓದಿ.) ಶಾಂತಿ ಕಾಪಾಡಲು ನಾವು ಶ್ರಮಿಸಬೇಕೆಂದು ಪೌಲನು ಒತ್ತಿಹೇಳಿರುವುದೇಕೆ ಹಾಗೂ ನಾವು ಹೇಗೆ ಶಾಂತಿ ಕಾಪಾಡಬಹುದು? ಮುಂದಿನ ಲೇಖನದಲ್ಲಿ ಕಲಿಯೋಣ.

ನೀವೇನು ಕಲಿತಿರಿ?

• ಯಾಕೋಬನು ತಾನು ಶಾಂತಿಪ್ರಿಯನೆಂದು ಏಸಾವನನ್ನು ಭೇಟಿಯಾಗುವ ಸಂದರ್ಭದಲ್ಲಿ ಹೇಗೆ ತೋರಿಸಿಕೊಟ್ಟನು?

• ಮನುಷ್ಯರು ತನ್ನೊಂದಿಗೆ ಶಾಂತಿಸಂಬಂಧ ಹೊಂದಿರಲು ಯೆಹೋವ ದೇವರು ಮಾಡಿದ ವಿಷಯಗಳನ್ನು ಕಲಿತ ಮೇಲೆ ನೀವೇನು ಮಾಡಲು ಬಯಸುತ್ತೀರಿ?

• ಶಾಂತಿಪ್ರಿಯರಾದ ಅಬ್ರಹಾಮ, ಇಸಾಕ, ಯಾಕೋಬ, ಯೋಸೇಫನಿಂದ ನೀವೇನು ಕಲಿತಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರಗಳು]

ಯಾಕೋಬನು ಏಸಾವನೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಲು ಯಾವ ಪ್ರಮುಖ ಹೆಜ್ಜೆ ತಕ್ಕೊಂಡನು?