ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಹೀಬ್ರು ಶಾಸ್ತ್ರಗ್ರಂಥದಲ್ಲಿ ಮೆಸ್ಸೀಯನ ಕುರಿತ ಎಷ್ಟು ಪ್ರವಾದನೆಗಳಿವೆ ಎಂದು ನಿಷ್ಕೃಷ್ಟವಾಗಿ ಹೇಳಸಾಧ್ಯನಾ?

ಹೀಬ್ರು ಶಾಸ್ತ್ರಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುವಲ್ಲಿ ಯೇಸು ಕ್ರಿಸ್ತನಲ್ಲಿ ನೆರವೇರಿದ ಡಜನ್‌ಗಟ್ಟಲೆ ಪ್ರವಾದನೆಗಳು ನಮ್ಮ ಕಣ್ಣಿಗೆ ಬೀಳುವವು. ಈ ಪ್ರವಾದನೆಗಳು ಮೆಸ್ಸೀಯನ ಹಿನ್ನೆಲೆ, ಆಗಮನದ ಸಮಯ, ಅವನ ಕಾರ್ಯಗಳು, ಜನರು ಅವನನ್ನು ಉಪಚರಿಸುವ ರೀತಿ ಹಾಗೂ ಯೆಹೋವ ದೇವರ ಏರ್ಪಾಡಿನಲ್ಲಿ ಆತನಿಗಿರುವ ಪಾತ್ರದ ಕುರಿತು ವಿವರ ನೀಡುತ್ತವೆ. ಈ ಎಲ್ಲ ಪ್ರವಾದನೆಗಳನ್ನು ಒಟ್ಟು ಸೇರಿಸುವುದಾದರೆ ನಮಗೆ ಮೆಸ್ಸೀಯನ ಪೂರ್ಣ ಚಿತ್ರಣ ಸಿಗುತ್ತದೆ ಹಾಗೂ ಯೇಸುವೇ ಮೆಸ್ಸೀಯನೆಂದು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ನಾವು ಒಂದುವೇಳೆ ಮೆಸ್ಸೀಯನ ಕುರಿತಾದ ಎಷ್ಟು ಪ್ರವಾದನೆಗಳು ಹೀಬ್ರು ಶಾಸ್ತ್ರಗ್ರಂಥದಲ್ಲಿ ಇವೆ ಎಂದು ನಿಷ್ಕೃಷ್ಟವಾಗಿ ಲೆಕ್ಕಹಾಕಲು ಯತ್ನಿಸುವಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ.

ಒಬ್ಬರು ಒಂದು ಪ್ರವಾದನೆಯನ್ನು ಮೆಸ್ಸೀಯನ ಪ್ರವಾದನೆ ಎಂದರೆ ಇನ್ನೊಬ್ಬರು ಅದನ್ನು ಒಪ್ಪಲೇಬೇಕೆಂದಿಲ್ಲ. ಆಲ್‌ಫ್ರೆಡ್‌ ಎಡರ್‌ಶೈಮ್‌ ಎಂಬವರು ಮೆಸ್ಸೀಯನಾದ ಯೇಸುವಿನ ಬದುಕು ಹಾಗೂ ಜೀವಿಸಿದ್ದ ಕಾಲ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಹೇಳಿದ್ದನ್ನು ಗಮನಿಸಿ. ಪುರಾತನ ಯೆಹೂದ್ಯರ ರಬ್ಬಿಗಳು ಹೀಬ್ರು ಶಾಸ್ತ್ರಗ್ರಂಥದ 456 ಭಾಗಗಳನ್ನು (ಅನೇಕವು ನೇರವಾಗಿ ಮೆಸ್ಸೀಯನಿಗೆ ಸೂಚಿಸದಿದ್ದರೂ) ಮೆಸ್ಸೀಯನಿಗೆ ಸಂಬಂಧಿಸಿದ ಪ್ರವಾದನೆಗಳೆಂದು ವರ್ಗೀಕರಿಸಿದ್ದರು. ಈ 456 ಭಾಗಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರೆ ಕೆಲವೊಂದು ಭಾಗಗಳು ನಿಜವಾಗಿಯೂ ಯೇಸು ಕ್ರಿಸ್ತನ ಕುರಿತ ಪ್ರವಾದನೆಗಳಾ ಎಂಬ ಸಂದೇಹ ಉಳಿಯುತ್ತದೆ. ಉದಾಹರಣೆಗೆ, ಎಡರ್‌ಶೈಮ್‌ ಹೇಳಿದ್ದನ್ನು ಗಮನಿಸಿ. ಆದಿಕಾಂಡ 8:11ನ್ನು ಯೆಹೂದಿಗಳು ಮೆಸ್ಸೀಯನಿಗೆ ಸಂಬಂಧಿಸಿದ್ದೆಂದು ನಂಬಿದ್ದಲ್ಲದೆ “ಪಾರಿವಾಳವು ಎಣ್ಣೇಮರದ ಚಿಗುರನ್ನು ಮೆಸ್ಸೀಯನ ಬೆಟ್ಟದಿಂದ ತಂದಿತು” ಎಂದು ವಾದಿಸಿದರು. ವಿಮೋಚನಕಾಂಡ 12:42ನ್ನು ಸಹ ಯೆಹೂದಿಗಳು ಹೇಗೆ ತಪ್ಪರ್ಥ ಮಾಡಿಕೊಂಡರೆಂದು ಎಡರ್‌ಶೈಮ್‌ ಹೇಳುತ್ತಾರೆ: “ಮೋಶೆ ಮರುಭೂಮಿಯಿಂದ ಹೊರಟು ಬಂದಂತೆ ಮೆಸ್ಸೀಯನು ರೋಮ್‌ನಿಂದ ಆಗಮಿಸುವನು” ಎಂದು ಆ ಯೆಹೂದ್ಯರು ನಂಬಿದ್ದರು. ಈ ಎರಡು ವಚನಗಳನ್ನು ಹಾಗೂ ಅದಕ್ಕೆ ಕೊಡಲಾಗಿರುವ ತಪ್ಪು ವಿವರಣೆಯನ್ನು ಯೇಸು ಕ್ರಿಸ್ತನಿಗೆ ಜೋಡಿಸಲು ಅನೇಕ ವಿದ್ವಾಂಸರಿಗೆ ಹಾಗೂ ಇತರರಿಗೆ ಕಷ್ಟವಾಗುವುದರಲ್ಲಿ ಸಂದೇಹವಿಲ್ಲ.

ಅದು ಬಿಡಿ, ನಾವು ಯೇಸು ಕ್ರಿಸ್ತನಲ್ಲಿ ನೆರವೇರಿರುವ ಪ್ರವಾದನೆಗಳನ್ನು ಮಾತ್ರ ತೆಗೆದುಕೊಳ್ಳುವುದಾದರೂ ಅವುಗಳ ಒಟ್ಟು ಮೊತ್ತ ಇಷ್ಟೇ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಉದಾಹರಣೆಗೆ ಮೆಸ್ಸೀಯನ ಕುರಿತು ಅನೇಕ ಪ್ರವಾದನಾತ್ಮಕ ಹೇಳಿಕೆಗಳಿರುವ ಯೆಶಾಯ 53ನೇ ಅಧ್ಯಾಯವನ್ನು ತೆಗೆದುಕೊಳ್ಳಿ. ಯೆಶಾಯ 53:2-7ರಲ್ಲಿ ಮೆಸ್ಸೀಯನ ಕುರಿತು, “ಅವನಲ್ಲಿ ಯಾವ ಅಂದಚಂದಗಳೂ ಇರಲಿಲ್ಲ . . . ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು . . . ಅವನು ಹೊತ್ತ ಹೊರೆಯು ನಮ್ಮ ಸಂಕಟವೇ . . . ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು . . . ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ” ಇದ್ದನು ಎಂದು ಹೇಳಲಾಗಿದೆ. ಯೆಶಾಯ 53ನೇ ಅಧ್ಯಾಯದಲ್ಲಿರುವ ಈ ಭಾಗವನ್ನು ಒಂದು ಪ್ರವಾದನೆಯೆಂದು ಲೆಕ್ಕಿಸಬೇಕಾ ಅಥವಾ ಒಂದೊಂದು ವೈಶಿಷ್ಟ್ಯವನ್ನೂ ಬಿಡಿಬಿಡಿಯಾಗಿ ಒಂದೊಂದು ಪ್ರವಾದನೆಯೆಂದು ಲೆಕ್ಕಿಸಬೇಕಾ?

ಯೆಶಾಯ 11:1ನ್ನೂ ನೋಡೋಣ. “ಇಷಯನ ಬುಡದಿಂದ ಒಂದು ಚಿಗುರು ಒಡೆಯುವದು, ಅದರ ಬೇರಿನಿಂದ ಹೊರಟ ತಳಿರು ಫಲಿಸುವದು” ಎಂದು ಅಲ್ಲಿ ತಿಳಿಸಲಾಗಿದೆ. ಅದೇ ಅಧ್ಯಾಯದ 10ನೇ ವಚನದಲ್ಲಿ ಇಂಥದ್ದೇ ಪದಗಳನ್ನು ಉಪಯೋಗಿಸಿ ಇದೇ ಪ್ರವಾದನೆಯನ್ನು ಪುನಃ ತಿಳಿಸಲಾಗಿದೆ. ಈಗ ಹೇಳಿ, ನಾವು ಈ ಎರಡೂ ವಚನಗಳನ್ನು ಎರಡು ಪ್ರವಾದನೆಗಳೆಂದು ಲೆಕ್ಕಿಸಬೇಕಾ ಅಥವಾ ಒಂದೇ ಪ್ರವಾದನೆಯೆಂದಾ? ಯೆಶಾಯ 53 ಹಾಗೂ 11ನೇ ಅಧ್ಯಾಯದ ಕುರಿತು ನಾವು ಯಾವ ತೀರ್ಮಾನಕ್ಕೆ ಬರುತ್ತೇವೋ ಅದರ ಮೇಲೆ ಪ್ರವಾದನೆಗಳ ಒಟ್ಟು ಮೊತ್ತ ಆಧರಿಸುತ್ತದಲ್ಲವೆ?

ಆದ್ದರಿಂದ ಹೀಬ್ರು ಶಾಸ್ತ್ರಗ್ರಂಥದಲ್ಲಿ ಮೆಸ್ಸೀಯನ ಕುರಿತು ಒಟ್ಟು ಎಷ್ಟು ಪ್ರವಾದನೆಗಳಿವೆ ಎಂದು ನಿಷ್ಕೃಷ್ಟವಾಗಿ ಕಂಡುಹಿಡಿಯಲು ಹೋಗದಿರುವುದು ಒಳ್ಳೇದು. ಯೆಹೋವನ ಸಂಘಟನೆಯು ಯೇಸು ಕ್ರಿಸ್ತನ ಕುರಿತಾದ ಡಜನ್‌ಗಟ್ಟಲೆ ಪ್ರವಾದನೆ ಹಾಗೂ ಅವುಗಳ ನೆರವೇರಿಕೆಯ ಪಟ್ಟಿಯನ್ನೇ ಒದಗಿಸಿದೆ. * ಇದನ್ನು ನಾವು ನಮ್ಮ ಕುಟುಂಬ ಆರಾಧನೆಯಲ್ಲಿ, ವೈಯಕ್ತಿಕ ಅಧ್ಯಯನದಲ್ಲಿ ಹಾಗೂ ಶುಶ್ರೂಷೆಯಲ್ಲಿ ಉಪಯೋಗಿಸಬಹುದು. ಇದರಿಂದ ದೇವರು ನುಡಿದದ್ದೆಲ್ಲವೂ ನಿಜವಾಗುತ್ತದೆ ಎಂಬ ನಮ್ಮ ನಂಬಿಕೆ ಇನ್ನೂ ಬಲಗೊಳ್ಳುವುದು. ಮೆಸ್ಸೀಯನ ಕುರಿತು ಪ್ರವಾದನೆಗಳು ಎಷ್ಟೇ ಇರಲಿ ಒಂದಂತೂ ನಿಜ. ಅವೆಲ್ಲವೂ ಯೇಸುವೇ ನಿಜವಾದ ಕ್ರಿಸ್ತನು ಅಥವಾ ಮೆಸ್ಸೀಯನು ಎಂಬ ಸತ್ಯಕ್ಕೆ ಬಲವಾದ ರುಜುವಾತನ್ನು ಕೊಡುತ್ತವೆ.

[ಪಾದಟಿಪ್ಪಣಿ]