ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಾಂತಿ ಕಾಪಾಡಲು ಸರ್ವ ಪ್ರಯತ್ನಮಾಡಿ

ಶಾಂತಿ ಕಾಪಾಡಲು ಸರ್ವ ಪ್ರಯತ್ನಮಾಡಿ

ಶಾಂತಿ ಕಾಪಾಡಲು ಸರ್ವ ಪ್ರಯತ್ನಮಾಡಿ

“ಶಾಂತಿಯನ್ನು ಉಂಟುಮಾಡುವ . . . ವಿಷಯಗಳನ್ನು ಬೆನ್ನಟ್ಟೋಣ.”—ರೋಮ. 14:19.

1, 2. ಯೆಹೋವನ ಸಾಕ್ಷಿಗಳ ಮಧ್ಯೆ ಶಾಂತಿ ನೆಲಸಿರಲು ಕಾರಣವೇನು?

ನಿಜ ಶಾಂತಿ ಈ ಪ್ರಪಂಚದಲ್ಲಿ ಕಾಣಸಿಗುವುದೇ ವಿರಳ. ಧರ್ಮ, ರಾಜಕೀಯ, ಸಾಮಾಜಿಕ ವಿಷಯಗಳು ಒಂದೇ ದೇಶದ ಒಂದೇ ಭಾಷೆಯ ಜನರನ್ನು ವಿಭಜಿಸಿಬಿಟ್ಟಿವೆ. ಆದರೆ ಯೆಹೋವನ ಆರಾಧಕರ ಮಧ್ಯೆ ಶಾಂತಿಸಮಾಧಾನ ಸಮೃದ್ಧವಾಗಿದೆ! “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಬಂದವರಾಗಿದ್ದರೂ ಇವರಲ್ಲಿ ಶಾಂತಿ ಐಕ್ಯ ನೆಲಸಿದೆ.—ಪ್ರಕ. 7:9.

2 ನಮ್ಮಲ್ಲಿರುವ ಈ ಶಾಂತಿ ಅಚಾನಕ್ಕಾಗಿ ಬಂದದ್ದಲ್ಲ. ನಾವು “ದೇವರೊಂದಿಗೆ ಸಮಾಧಾನ” ಸಂಬಂಧ ಹೊಂದಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ಪಾಪಗಳಿಗಾಗಿ ರಕ್ತವನ್ನು ಸುರಿಸಿದ ಯೇಸುವಿನಲ್ಲಿ ನಂಬಿಕೆಯಿಟ್ಟದ್ದರಿಂದ ನಾವು ಈ ಸಮಾಧಾನದ ಸಂಬಂಧ ಹೊಂದಿದ್ದೇವೆ. (ರೋಮ. 5:1; ಎಫೆ. 1:7) ಮಾತ್ರವಲ್ಲ, ಸತ್ಯದೇವರು ನಮಗೆ ಪವಿತ್ರಾತ್ಮ ಶಕ್ತಿಯನ್ನು ಕೊಡುತ್ತಾನೆ. ಮತ್ತು ಶಾಂತಿ ಎನ್ನುವುದು ಪವಿತ್ರಾತ್ಮದ ಒಂದು ಗುಣವಾಗಿದೆ. (ಗಲಾ. 5:22) ನಮ್ಮಲ್ಲಿ ಶಾಂತಿ ನೆಲಸಿರಲು ಇನ್ನೊಂದು ಕಾರಣ ನಾವು ಲೋಕದ ಭಾಗವಾಗಿಲ್ಲದಿರುವುದೇ. (ಯೋಹಾ. 15:19) ಅಂದರೆ ನಾವು ರಾಜಕೀಯ ವಿಷಯದಲ್ಲಿ ಯಾವುದೇ ಪಕ್ಷದ ಪರವಹಿಸುವುದಿಲ್ಲ, ತಟಸ್ಥರಾಗಿರುತ್ತೇವೆ. ಬೈಬಲ್‌ ಹೇಳುವಂತೆ ನಮ್ಮ “ಕತ್ತಿಗಳನ್ನು ಗುಳಗಳನ್ನಾಗಿ” ಮಾಡಿಕೊಂಡಿದ್ದೇವೆ. ಇದರರ್ಥ ಅಂತರ್ಯುದ್ಧಗಳಲ್ಲಾಗಲಿ ದೇಶ ದೇಶಗಳ ಮಧ್ಯೆ ನಡೆಯುವ ಯುದ್ಧಗಳಲ್ಲಾಗಲಿ ನಾವು ಭಾಗಿಗಳಾಗುವುದಿಲ್ಲ.—ಯೆಶಾ. 2:4.

3. ನಮ್ಮಲ್ಲಿರುವ ಶಾಂತಿ ಏನನ್ನು ಮಾಡುವಂತೆ ಪ್ರೇರೇಪಿಸಬೇಕು? ಈ ಲೇಖನದಲ್ಲಿ ನಾವೇನನ್ನು ಕಲಿಯಲಿದ್ದೇವೆ?

3 ಶಾಂತಿ ಅಂದರೆ ನಮ್ಮ ಸಹೋದರರಿಗೆ ಹಾನಿ ಮಾಡದಿರುವುದಷ್ಟೇ ಅಲ್ಲ. ಅದಕ್ಕಿಂತಲೂ ಹೆಚ್ಚು. ಯೆಹೋವನ ಸಾಕ್ಷಿಗಳ ಸಭೆಯಲ್ಲಿರುವ ನಾವು ಬೇರೆ ಬೇರೆ ಜಾತಿ, ಹಿನ್ನೆಲೆಗಳಿಂದ ಬಂದವರಾದರೂ ‘ಒಬ್ಬರನ್ನೊಬ್ಬರು ಪ್ರೀತಿಸುವ’ ಆಜ್ಞೆ ಹೊಂದಿದ್ದೇವೆ. (ಯೋಹಾ. 15:17) ಹಾಗಾಗಿ ನಾವು ‘ಎಲ್ಲರಿಗೂ ಒಳ್ಳೇದನ್ನು ಮಾಡುವಂತೆ, ಅದರಲ್ಲೂ ವಿಶೇಷವಾಗಿ ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತೆ ಇರುವವರಿಗೆ’ ಒಳ್ಳೇದನ್ನು ಮಾಡುವಂತೆ ಶಾಂತಿ ಪ್ರೇರೇಪಿಸಬೇಕು. (ಗಲಾ. 6:10) ದೇವರೊಂದಿಗೆ ಹಾಗೂ ನಮ್ಮ ಸಹೋದರ ಸಹೋದರಿಯರೊಂದಿಗೆ ನಾವು ಹೊಂದಿರುವ ಶಾಂತಿಯುತ ಸಂಬಂಧ ತುಂಬ ಅಪೂರ್ವವಾದದ್ದು! ಅದನ್ನು ನಾವು ಸದಾ ಕಾಪಾಡಿಕೊಳ್ಳಬೇಕು. ಆದ್ದರಿಂದ ಸಭೆಯಲ್ಲಿ ನಾವು ಹೇಗೆ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಯೋಣ.

ನಾವು ಎಡವಿದಾಗ . . .

4. ನಾವು ಮತ್ತೊಬ್ಬರ ಮನನೋಯಿಸಿದಾಗ ಶಾಂತಿಯನ್ನು ಕಾಪಾಡಲು ಏನು ಮಾಡಬೇಕು?

4 “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ. ಯಾವನಾದರೂ ಮಾತಿನಲ್ಲಿ ಎಡವದಿರುವುದಾದರೆ ಅಂಥವನು ಪರಿಪೂರ್ಣ” ಮನುಷ್ಯನು ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋ. 3:2) ಆದ್ದರಿಂದ ನಮ್ಮ ಮಧ್ಯೆ ಮನಸ್ತಾಪಗಳು, ಅಪಾರ್ಥಗಳು ಸಹಜ. (ಫಿಲಿ. 4:2, 3) ಹಾಗಿದ್ದರೂ ತಲೆದೋರುವ ಸಮಸ್ಯೆಗಳನ್ನು ಸಭೆಯ ಶಾಂತಿ ಭಂಗವಾಗದಂತೆ ಪರಿಹರಿಸಲು ಸಾಧ್ಯವಿದೆ. ಉದಾಹರಣೆಗೆ, ನಾವು ಮತ್ತೊಬ್ಬರ ಮನನೋಯಿಸುವಲ್ಲಿ ಏನು ಮಾಡಬೇಕೆಂಬ ಈ ಸಲಹೆಯನ್ನು ಪರಿಗಣಿಸಿ.ಮತ್ತಾಯ 5:23, 24 ಓದಿ.

5. ಯಾರಾದರೂ ನಮ್ಮ ಮನನೋಯಿಸಿದಾಗ ಶಾಂತಿ ಕಾಪಾಡಲು ನಾವೇನು ಮಾಡಬೇಕು?

5 ಆದರೆ ಇತರರು ನಮ್ಮ ಮನನೋಯಿಸಿರುವಲ್ಲಿ ಆಗೇನು? ಅವರೇ ಬಂದು ಕ್ಷಮೆ ಕೇಳಬೇಕೆಂದು ನೆನಸುತ್ತೇವಾ? “[ಪ್ರೀತಿ] ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ” ಎಂದು 1 ಕೊರಿಂಥ 13:5 ಹೇಳುತ್ತದೆ. ಅಂದ ಮೇಲೆ ಯಾರಾದರೂ ನಮ್ಮ ಮನನೋಯಿಸಿರುವಲ್ಲಿ ನಾವು ಅವರನ್ನು ಕ್ಷಮಿಸಿ ತಪ್ಪನ್ನು ಮರೆತುಬಿಡಬೇಕು. ಹೀಗೆ “ಅನ್ಯಾಯದ ಲೆಕ್ಕವನ್ನು” ಇಟ್ಟುಕೊಳ್ಳದೇ ಶಾಂತಿಯನ್ನು ಕಾಪಾಡುತ್ತೇವೆ. (ಕೊಲೊಸ್ಸೆ 3:13 ಓದಿ.) ಚಿಕ್ಕಪುಟ್ಟ ಮನಸ್ತಾಪಗಳು ತಲೆದೋರುವಾಗ ಹೀಗೆ ಪರಿಹರಿಸಿಕೊಳ್ಳುವುದು ಉಚಿತ. ಆಗ ಸಹೋದರ ಸಹೋದರಿಯರ ಮಧ್ಯೆ ಶಾಂತಿಸಮಾಧಾನವಿರುತ್ತದೆ. ನಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಒಂದು ಜ್ಞಾನೋಕ್ತಿ ಹೀಗೆ ಹೇಳುತ್ತದೆ: “ದೋಷವನ್ನು ಲಕ್ಷಿಸದಿರುವುದು [ನಮಗೆ] ಭೂಷಣ.”—ಜ್ಞಾನೋ. 19:11.

6. ಇನ್ನೊಬ್ಬರು ಮನನೋಯಿಸಿದ್ದನ್ನು ಅಲಕ್ಷಿಸಲು ನಮಗೆ ಕಷ್ಟವಾಗುವಲ್ಲಿ ನಾವೇನು ಮಾಡಬೇಕು?

6 ಆದರೆ ನಮಗೆ ತುಂಬ ನೋವಾಗಿದ್ದು ಅದನ್ನು ಅಲಕ್ಷಿಸಲು ಕಷ್ಟವಾಗುವುದಾದರೆ ಏನು ಮಾಡಬೇಕು? ಇಷ್ಟಗಲ ಕಿವಿ ಮಾಡಿ ಕೇಳುವವರಿಗೆ ವಿಷಯವನ್ನು ದಾಟಿಸುವುದು ಖಂಡಿತ ವಿವೇಕದ ಕಾರ್ಯವಾಗಿರುವುದಿಲ್ಲ. ಅದು ಸಭೆಯ ಶಾಂತಿಯನ್ನು ಭಂಗಪಡಿಸುತ್ತದಷ್ಟೆ. ಹಾಗಾದರೆ ಶಾಂತಿಯುತವಾಗಿ ಬಗೆಹರಿಸಲು ಏನು ಮಾಡಬೇಕು? ಮತ್ತಾಯ 18:15, “ನಿನ್ನ ಸಹೋದರನು ಪಾಪಮಾಡಿದರೆ, ನೀನು ಮತ್ತು ಅವನು ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ” ಎಂದು ಹೇಳುತ್ತದೆ. ಮತ್ತಾಯ 18:15-17ರಲ್ಲಿ ಕೊಡಲಾಗಿರುವ ಸಲಹೆ ಗಂಭೀರ ತಪ್ಪುಗಳಿಗೆ ಅನ್ವಯವಾಗುವುದಾದರೂ 15ನೇ ವಚನದಲ್ಲಿರುವ ಮೂಲತತ್ತ್ವವನ್ನು ನಾವು ಈ ಸಂದರ್ಭದಲ್ಲಿ ಉಪಯೋಗಿಸಬೇಕು. ನಮ್ಮ ಮನನೋಯಿಸಿದವರು ಒಬ್ಬರೇ ಇರುವಾಗ ಅವರ ಬಳಿ ಹೋಗಿ ಪ್ರೀತಿಯಿಂದ ಮಾತಾಡಿಸಿ ಒಂದಾಗಬೇಕು. *

7. ಮನಸ್ತಾಪಗಳನ್ನು ತಕ್ಷಣವೇ ಬಗೆಹರಿಸಬೇಕು ಏಕೆ?

7 ಅಪೊಸ್ತಲ ಪೌಲನು ಹೀಗೆ ಬರೆದನು: “ಕೋಪಗೊಂಡರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ. ಪಿಶಾಚನಿಗೆ ಅವಕಾಶಕೊಡಬೇಡಿ.” (ಎಫೆ. 4:26, 27) ಯೇಸು ಹೀಗೆ ಹೇಳಿದನು: “ನಿನ್ನ ವಿರುದ್ಧ ಮೊಕದ್ದಮೆ ಹೂಡುವವನ ಸಂಗಡ . . . ಬೇಗನೆ ವಿಷಯಗಳನ್ನು ಇತ್ಯರ್ಥಮಾಡಿಕೊ.” (ಮತ್ತಾ. 5:25) ಹಾಗಾದರೆ ಶಾಂತಿಯನ್ನು ಕಾಪಾಡಿಕೊಳ್ಳಲು ನಾವು ಮನಸ್ತಾಪಗಳನ್ನು ಬೇಗನೆ ಇತ್ಯರ್ಥಮಾಡಿಕೊಳ್ಳಬೇಕು. ಏಕೆ? ಇಲ್ಲದಿದ್ದರೆ ಮುಲಾಮು ಹಚ್ಚದೆ ಅಲಕ್ಷ್ಯಕ್ಕೊಳಗಾದ ಗಾಯವು ಹೇಗೆ ಸೋಂಕಿನಿಂದ ಉಲ್ಬಣಗೊಳ್ಳುವುದೋ ಹಾಗೆಯೇ ಚಿಕ್ಕ ಮನಸ್ತಾಪವು ತೀರಾ ದೊಡ್ಡದಾಗಿ ಬಿಡುವುದು. ಆದ್ದರಿಂದ ಮನಸ್ತಾಪ ಉಂಟಾದಾಗ ಅದನ್ನು ತಕ್ಷಣ ಬಗೆಹರಿಸೋಣ. ಅಹಂಕಾರ, ಅಸೂಯೆ ಅಥವಾ ವಸ್ತು ವ್ಯಾಮೋಹ ಅದಕ್ಕೆ ಅಡ್ಡಬರದಂತೆ ನೋಡಿಕೊಳ್ಳೋಣ.—ಯಾಕೋ. 4:1-6.

ಅನೇಕರು ಒಳಗೂಡಿರುವ ಸಮಸ್ಯೆಯಾಗಿರುವಲ್ಲಿ . . .

8, 9. (ಎ) ಒಂದನೇ ಶತಮಾನದ ರೋಮ್‌ ಸಭೆಯಲ್ಲಿ ಯಾವ ಭಿನ್ನಾಭಿಪ್ರಾಯವಿತ್ತು? (ಬಿ) ಆ ಸಮಸ್ಯೆಯ ಕುರಿತು ಪೌಲನು ಯಾವ ಬುದ್ಧಿವಾದ ಕೊಟ್ಟನು?

8 ಕೆಲವೊಮ್ಮೆ ಸಮಸ್ಯೆ ಕೇವಲ ಇಬ್ಬರ ನಡುವೆ ಆಗಿರದೆ ಸಭೆಯ ಅನೇಕರು ಒಳಗೂಡಿರುತ್ತಾರೆ. ರೋಮ್‌ನ ಸಭೆಯಲ್ಲಿ ಇಂಥ ಒಂದು ಸಮಸ್ಯೆಯಿತ್ತು. ಆ ಸಭೆಯಲ್ಲಿನ ಯೆಹೂದಿ ಹಾಗೂ ಅನ್ಯಜನಾಂಗಗಳ ಕ್ರೈಸ್ತರ ಮಧ್ಯೆ ಭಿನ್ನಾಭಿಪ್ರಾಯವೆದ್ದಿತು. ಕೆಲವರು ದುರ್ಬಲ ಮನಸ್ಸಾಕ್ಷಿ ಹೊಂದಿದ್ದರು. ಶಾಸ್ತ್ರವಚನಗಳು ತಪ್ಪೆಂದು ಹೇಳದ ಕೆಲವು ವಿಷಯಗಳಿಗೆ ಸ್ವತಃ ನಿರ್ಬಂಧ ಹಾಕಿಕೊಂಡಿದ್ದರು. ಅಂಥವರನ್ನು ಇತರ ಕೆಲವರು ಹೀನವಾಗಿ ಕಾಣತೊಡಗಿದರು. ಅವರ ವೈಯಕ್ತಿಕ ವಿಷಯಗಳ ಕುರಿತು ಇವರು ತೀರ್ಪುಮಾಡುತ್ತಿದ್ದರು. ಅದು ತಪ್ಪಾಗಿತ್ತು. ಅವರಿಗೆ ಪೌಲನು ಯಾವ ಬುದ್ಧಿವಾದ ಕೊಟ್ಟನು?—ರೋಮ. 14:1-6.

9 ಪೌಲನು ಎರಡು ಪಕ್ಷದವರಿಗೂ ಬುದ್ಧಿವಾದ ಕೊಟ್ಟನು. ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿರುವ ಅಗತ್ಯವಿಲ್ಲವೆಂದು ಮನಗಂಡವರು ದುರ್ಬಲ ಮನಸ್ಸಾಕ್ಷಿಯ ಸಹೋದರರನ್ನು ಹೀನವಾಗಿ ಕಾಣಬಾರದೆಂದು ಹೇಳಿದನು. (ರೋಮ. 14:2, 10) ಏಕೆಂದರೆ ಅವರ ಅಂಥ ವರ್ತನೆಯು ಧರ್ಮಶಾಸ್ತ್ರ ನಿರ್ಬಂಧಿಸಿದ ಆಹಾರವನ್ನು ತಿನ್ನುವುದು ಸರಿಯಲ್ಲವೆಂದು ಭಾವಿಸಿದವರನ್ನು ಎಡವಿಸಸಾಧ್ಯವಿತ್ತು. “ಕೇವಲ ಆಹಾರದ ನಿಮಿತ್ತ ದೇವರ ಕೆಲಸವನ್ನು ಕೆಡವಿಹಾಕಬೇಡ” ಎಂದು ಪೌಲನು ಅದಕ್ಕೇ ಹೇಳಿದನು. “ಮಾಂಸಭಕ್ಷಣೆಯಾಗಲಿ ದ್ರಾಕ್ಷಾಮದ್ಯ ಸೇವನೆಯಾಗಲಿ ಅಥವಾ ಇನ್ನಾವುದೇ ಆಗಲಿ ನಿನ್ನ ಸಹೋದರನನ್ನು ಎಡವುವಂತೆ ಮಾಡುವುದಾದರೆ ಅದನ್ನು ಮಾಡದಿರುವುದೇ ಒಳ್ಳೇದು.” (ರೋಮ. 14:14, 15, 20, 21) ಪೌಲನು ದುರ್ಬಲ ಮನಸ್ಸಾಕ್ಷಿಯ ಸಹೋದರರಿಗೂ ಬುದ್ಧಿವಾದ ನೀಡಿದನು. ಮೋಶೆಯ ಧರ್ಮಶಾಸ್ತ್ರಕ್ಕೆ ಕ್ರೈಸ್ತರು ಅಧೀನತೆ ತೋರಿಸುವ ಅಗತ್ಯವಿಲ್ಲ ಎಂದು ಹೇಳುವವರನ್ನು ಅಪನಂಬಿಗಸ್ತ ಜನರೆಂದು ತೀರ್ಮಾನಿಸಬಾರದೆಂದು ಅವರಿಗೆ ಹೇಳಿದನು. (ರೋಮ. 14:13) “ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು” ಎಂಬ ಎಚ್ಚರಿಕೆ ನೀಡಿದನು. (ರೋಮ. 12:3) ಹೀಗೆ ಪೌಲನು ಭಿನ್ನ ಧೋರಣೆಗಳಿದ್ದ ಸಹೋದರರಿಗೆ, “ಆದುದರಿಂದ ನಾವು ಶಾಂತಿಯನ್ನು ಉಂಟುಮಾಡುವ ಮತ್ತು ಪರಸ್ಪರ ಭಕ್ತಿವೃದ್ಧಿಮಾಡುವ ವಿಷಯಗಳನ್ನು ಬೆನ್ನಟ್ಟೋಣ” ಎಂದು ಪ್ರೋತ್ಸಾಹಿಸಿದನು.—ರೋಮ. 14:19.

10. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ರೋಮ್‌ನ ಸಭೆಯವರಂತೆ ಇಂದು ನಾವೇನು ಮಾಡಬೇಕು?

10 ರೋಮ್‌ನ ಸಭೆಯವರು ಖಂಡಿತ ಪೌಲನು ಕೊಟ್ಟ ಸಲಹೆಗನುಸಾರ ತಮ್ಮನ್ನು ಸರಿಪಡಿಸಿಕೊಂಡಿರಬೇಕು. ಹಾಗಾದರೆ ನಾವು ಸಹ ನಮ್ಮ ಮಧ್ಯೆ ಉಂಟಾಗುವ ಸಮಸ್ಯೆಗಳನ್ನು ಸ್ನೇಹಪೂರ್ವಕವಾಗಿ ಬಗೆಹರಿಸಲು ಬೈಬಲ್‌ ಸಲಹೆಯನ್ನು ಅನ್ವಯಿಸಿಕೊಳ್ಳಬೇಕಲ್ಲವೆ? ‘ಒಬ್ಬರೊಡನೊಬ್ಬರು ಶಾಂತಿಯಿಂದಿರಬೇಕಾದರೆ’ ರೋಮ್‌ನ ಸಭೆಯವರಂತೆ ಎರಡೂ ಪಕ್ಷದವರು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು.—ಮಾರ್ಕ 9:50.

ಹಿರಿಯರ ನೆರವನ್ನು ಅರಸಿ ಬಂದಾಗ . . .

11. ಒಬ್ಬ ಕ್ರೈಸ್ತನು ಇನ್ನೊಬ್ಬ ಸಹೋದರನೊಂದಿಗೆ ಆದ ಮನಸ್ತಾಪದ ಕುರಿತು ಹಿರಿಯನೊಂದಿಗೆ ಮಾತಾಡಲು ಬಂದಾಗ ಹಿರಿಯನು ಯಾವ ಮುನ್ನೆಚ್ಚರಿಕೆ ವಹಿಸಬೇಕು?

11 ಒಬ್ಬ ಕ್ರೈಸ್ತನು ತನ್ನ ಸಂಬಂಧಿಕನೊಂದಿಗೋ ಸಹೋದರನೊಂದಿಗೋ ಆದ ಮನಸ್ತಾಪದ ಕುರಿತು ಹಿರಿಯನೊಂದಿಗೆ ಮಾತಾಡಲು ಬಂದಾಗ ಏನು ಮಾಡಬೇಕು? ಜ್ಞಾನೋಕ್ತಿ 21:13 ಉತ್ತರ ಕೊಡುತ್ತದೆ. “ಬಡವನ ಮೊರೆಗೆ ಕಿವಿಮುಚ್ಚಿಕೊಳ್ಳುವವನು ತಾನೇ ಮೊರೆಯಿಡುವಾಗ ಯಾರೂ ಉತ್ತರಕೊಡರು.” ಯಾವತ್ತೂ ಹಿರಿಯರು ಸಹೋದರರ ಮೊರೆಗೆ ‘ಕಿವಿಮುಚ್ಚಿಕೊಳ್ಳುವುದಿಲ್ಲ.’ ಆದರೆ ಇನ್ನೊಂದು ಜ್ಞಾನೋಕ್ತಿಯ ಎಚ್ಚರಿಕೆ ಗಮನಿಸಿ. “ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು; ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವದು.” (ಜ್ಞಾನೋ. 18:17) ಅಂದರೆ ಹಿರಿಯರು ಗಮನಕೊಟ್ಟು ಕೇಳಬೇಕಾದರೂ ಸಮಸ್ಯೆ ಕುರಿತು ಮೊದಲು ವರದಿಸಿದವನ ಪಕ್ಷ ವಹಿಸದಂತೆ ಜಾಗ್ರತೆಯಿಂದಿರಬೇಕು. ಸಮಸ್ಯೆಯನ್ನು ಆಲಿಸಿದ ಬಳಿಕ ಹಿರಿಯನು ಆ ಸಹೋದರನು ತನ್ನ ಮನನೋಯಿಸಿದವನನ್ನು ಭೇಟಿಯಾಗಿ ಮಾತಾಡಿದ್ದಾನೋ ಎಂದು ಕೇಳಬೇಕು. ಮಾತ್ರವಲ್ಲ ಇಂಥ ಸಂದರ್ಭದಲ್ಲಿ ಶಾಂತಿಯನ್ನು ಕಾಪಾಡಲು ಯಾವ ಬೈಬಲಾಧರಿತ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದೆಂದೂ ವಿವರಿಸಬಹುದು.

12. ದೂರನ್ನು ಕೇಳಿಸಿಕೊಂಡ ಕೂಡಲೇ ದುಡುಕಿ ನಿರ್ಣಯ ಮಾಡುವುದರಲ್ಲಿ ಯಾವ ಅಪಾಯವಿದೆ? ಉದಾಹರಣೆ ಕೊಡಿ.

12 ಸಮಸ್ಯೆಯನ್ನು ಒಬ್ಬನಿಂದ ಮಾತ್ರ ಕೇಳಿ ಕೂಡಲೇ ನಿರ್ಧಾರ ತಕ್ಕೊಳ್ಳುವುದು ಎಷ್ಟು ಅಪಾಯಕಾರಿ ಎಂದು ಬೈಬಲಿನಲ್ಲಿರುವ ಮೂರು ಘಟನೆಗಳು ತೋರಿಸಿಕೊಡುತ್ತವೆ. ಪೋಟೀಫರನ ಹೆಂಡತಿ ಯೋಸೇಫನು ತನ್ನ ಮಾನಭಂಗಮಾಡಲು ಪ್ರಯತ್ನಿಸಿದನು ಎಂದು ದೂರಿದಾಗ ಪೋಟೀಫರ ನಂಬಿಬಿಟ್ಟನು. ಕೋಪದಿಂದ ಯೋಸೇಫನನ್ನು ಸೆರೆಮನೆಗೆ ತಳ್ಳಿದನು. (ಆದಿ. 39:19, 20) ಚೀಬನು ರಾಜ ದಾವೀದನ ಹತ್ತಿರ ಬಂದು ತನ್ನ ಯಜಮಾನನಾದ ಮೆಫೀಬೋಶೆತನು ದಾವೀದನ ವೈರಿಗಳೊಂದಿಗೆ ಸೇರಿಕೊಂಡಿದ್ದಾನೆಂದು ಹೇಳಿದನು. ಆಗ ದಾವೀದನು ಹಿಂದೆ ಮುಂದೆ ಯೋಚಿಸದೆ, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ” ಎಂದು ತೀರ್ಪು ಕೊಟ್ಟುಬಿಟ್ಟನು. (2 ಸಮು. 16:4; 19:25-27) ಯೆರೂಸಲೇಮಿನ ಗೋಡೆಯನ್ನು ಯೆಹೂದಿಗಳು ಕಟ್ಟುತ್ತಿದ್ದಾರೆ ಹಾಗೂ ಪಾರಸಿಯ ರಾಜ್ಯದ ವಿರುದ್ಧ ದಂಗೆಯೇಳಲಿದ್ದಾರೆ ಎಂಬ ಸುದ್ದಿ ಕೇಳಿದಾಗ ರಾಜ ಅರ್ತಷಸ್ತನು ಆ ಸುಳ್ಳು ವದಂತಿಯನ್ನು ನಂಬಿದನು. ಕೂಡಲೆ ಆಲಯದ ಪುನರ್ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಜ್ಞೆ ಹೊರಡಿಸಿದನು. ಇದರಿಂದಾಗಿ ಆ ಕೆಲಸ ನಿಂತುಹೋಯಿತು. (ಎಜ್ರ 4:11-13, 23, 24) ದುಡುಕಿ ನಿರ್ಣಯಗಳನ್ನು ಮಾಡದಿರುವಂತೆ ಪೌಲನು ತಿಮೊಥೆಯನಿಗೆ ಕೊಟ್ಟ ಸಲಹೆಯನ್ನು ಸಭಾ ಹಿರಿಯರು ಪಾಲಿಸುತ್ತಾರೆ.1 ತಿಮೊಥೆಯ 5:21 ಓದಿ.

13, 14. (ಎ) ಇತರರ ನಡುವೆ ಸಮಸ್ಯೆ ಉಂಟಾಗಿ ತೀರ್ಪಿಗಾಗಿ ನಮ್ಮ ಬಳಿ ಬರುವಲ್ಲಿ ನಾವೇನನ್ನು ನೆನಪಿನಲ್ಲಿಡಬೇಕು? (ಬಿ) ಸರಿಯಾದ ತೀರ್ಪು ಮಾಡಲು ಹಿರಿಯರಿಗೆ ಯಾವ ಸಹಾಯ ಲಭ್ಯವಿದೆ?

13 ಎರಡೂ ಕಡೆಯಿಂದ ಸಮಸ್ಯೆಯ ವಿವರಗಳನ್ನು ಪಡೆದ ನಂತರವೂ ಬೈಬಲ್‌ ತಿಳಿಸುವ ಈ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. “ಯಾವುದೇ ವಿಷಯದ ಜ್ಞಾನವನ್ನು ತಾನು ಪಡೆದಿದ್ದೇನೆ ಎಂದು ಒಬ್ಬನು ನೆನಸುವುದಾದರೆ ಅವನು ಅದನ್ನು ತಿಳಿದುಕೊಳ್ಳಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿರುವುದಿಲ್ಲ.” (1 ಕೊರಿಂ. 8:2) ಯಾವ ಕಾರಣಕ್ಕಾಗಿ ಸಮಸ್ಯೆ ಉಂಟಾಯಿತು ಎಂಬ ಸಂಪೂರ್ಣ ಮಾಹಿತಿ ನಮಗೆ ತಿಳಿದಿದೆಯೋ? ಒಳಗೂಡಿದವರ ಹಿನ್ನೆಲೆ, ಸ್ವಭಾವವನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೋ? ತೀರ್ಪು ನೀಡಬೇಕಾದ ಸಂದರ್ಭದಲ್ಲಿ ಹಿರಿಯರು ಸುಳ್ಳು ಮಾಹಿತಿ, ಕುತಂತ್ರ ಅಥವಾ ಗಾಳಿಸುದ್ದಿಯಿಂದ ಮೋಸಹೋಗಬಾರದು. ದೇವರು ನೇಮಿಸಿರುವ ನ್ಯಾಯಾಧೀಶನಾದ ಯೇಸು ಕ್ರಿಸ್ತನು ನೀತಿಯಿಂದ ನ್ಯಾಯತೀರಿಸುತ್ತಾನೆ. “ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ.” (ಯೆಶಾ. 11:3, 4) ಆತನು ಎಲ್ಲವನ್ನು ಯೆಹೋವ ದೇವರ ಪವಿತ್ರಾತ್ಮದ ಮಾರ್ಗದರ್ಶನದ ಪ್ರಕಾರ ಮಾಡುತ್ತಾನೆ. ಆತನಂತೆಯೇ ಕ್ರೈಸ್ತ ಹಿರಿಯರು ಸಹ ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸಬೇಕು.

14 ಹಿರಿಯರು ತೀರ್ಪು ನೀಡುವ ಮೊದಲು ಯೆಹೋವ ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು. ದೇವರ ವಾಕ್ಯವನ್ನು ಹಾಗೂ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ವರ್ಗ ಕೊಟ್ಟಿರುವ ಪ್ರಕಾಶನಗಳನ್ನು ಪರೀಕ್ಷಿಸಿ ನೋಡುವ ಮೂಲಕ ಪವಿತ್ರಾತ್ಮದ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.—ಮತ್ತಾ. 24:45.

ಶಾಂತಿ ಕಾಪಾಡುವುದಕ್ಕಿಂತಲೂ ಮುಖ್ಯವಾದ ವಿಷಯ?

15. ಬೇರೆಯವರು ಗಂಭೀರ ತಪ್ಪನ್ನು ಮಾಡಿದ್ದಾರೆಂದು ತಿಳಿದುಬರುವಲ್ಲಿ ನಾವದನ್ನು ಯಾವಾಗ ಹಿರಿಯರಿಗೆ ತಿಳಿಸಬೇಕು?

15 ಕ್ರೈಸ್ತರಾದ ನಾವು ಶಾಂತಿ ಕಾಪಾಡಿಕೊಳ್ಳಬೇಕೆಂದು ಬೈಬಲ್‌ ಉಪದೇಶಿಸುತ್ತದೆ. ಆದರೆ ಮತ್ತೊಂದು ವಿಷಯವನ್ನೂ ಹೇಳುತ್ತದೆ, “ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು.” (ಯಾಕೋ. 3:17) ಆದ್ದರಿಂದ ನಾವು ಮೊದಲು ಶುದ್ಧರಾಗಿರಬೇಕು, ನಂತರ ಶಾಂತಿಶೀಲರಾಗಿರಬೇಕು. ಶುದ್ಧರಾಗಿರಬೇಕಾದರೆ ದೇವರ ಶುದ್ಧ ನೈತಿಕ ಮಟ್ಟಗಳಿಗೆ ಅಂಟಿಕೊಂಡಿರಬೇಕು ಹಾಗೂ ಆತನ ನೀತಿಯ ಮಟ್ಟಗಳಿಗನುಸಾರ ನಡೆಯಬೇಕು. ಸಹೋದರನೊಬ್ಬನು ಗಂಭೀರ ತಪ್ಪು ಮಾಡಿರುವುದು ಮತ್ತೊಬ್ಬ ಸಹೋದರನಿಗೆ ತಿಳಿದುಬರುವಲ್ಲಿ ಆ ತಪ್ಪನ್ನು ಹಿರಿಯರಲ್ಲಿ ನಿವೇದಿಸಿಕೊಳ್ಳುವಂತೆ ಅವನು ಆ ಸಹೋದರನನ್ನು ಉತ್ತೇಜಿಸಬೇಕು. (1 ಕೊರಿಂ. 6:9, 10; ಯಾಕೋ. 5:14-16) ಅಪರಾಧಿಯು ತಪ್ಪನ್ನು ತಿಳಿಸದಿರುವಲ್ಲಿ ಈ ಸಹೋದರನೇ ಅದನ್ನು ಹಿರಿಯರಿಗೆ ತಿಳಿಸಬೇಕು. ತಪ್ಪು ಮಾಡಿದ ಸಹೋದರನೊಂದಿಗೆ ಶಾಂತಿಯಿಂದ ಇರುವ ಸಲುವಾಗಿ ಅವನ ತಪ್ಪನ್ನು ಹಿರಿಯರಿಗೆ ತಿಳಿಸದಿದ್ದರೆ ಅದು ಸಹ ಪಾಪವಾಗುತ್ತದೆ.ಯಾಜಕಕಾಂಡ 5:1 ಓದಿ; ಜ್ಞಾನೋ. 29:24.

16. ಯೋರಾಮನ ವಿಷಯದಲ್ಲಿ ಯೇಹು ತೆಗೆದುಕೊಂಡ ಕ್ರಮದಿಂದ ನಮಗೆ ಯಾವ ಪಾಠವಿದೆ?

16 ಪಾಪಿಗಳೊಂದಿಗೆ ಶಾಂತಿಯನ್ನು ಕಾಪಾಡಲು ಬಯಸುವುದಕ್ಕಿಂತ ದೇವರ ನೀತಿಗನುಸಾರ ನಡೆಯುವುದೇ ಅತಿ ಪ್ರಾಮುಖ್ಯ ಎಂದು ಯೇಹುವಿನ ಕಾರ್ಯದಿಂದ ತಿಳಿದುಬರುತ್ತದೆ. ದೇವರು ರಾಜ ಅಹಾಬನ ಮನೆಯವರಿಗೆ ತನ್ನ ತೀರ್ಪನ್ನು ವಿಧಿಸಲು ಯೇಹುವನ್ನು ಕಳುಹಿಸಿದನು. ಯೇಹುವನ್ನು ಭೇಟಿಯಾಗಲಿಕ್ಕಾಗಿ ಅಹಾಬ ಮತ್ತು ಈಜಬೆಲಳ ಮಗನಾದ ರಾಜ ಯೋರಾಮನು ರಥದಲ್ಲಿ ಧಾವಿಸಿ ಬಂದು, “ಯೇಹುವೇ, ಸಮಾಧಾನವೋ?” ಎಂದು ಕೇಳಿದನು. ಯೇಹು ಏನೆಂದು ಉತ್ತರಿಸಿದನು ಗೊತ್ತಾ? “ನಿನ್ನ ತಾಯಿಯಾದ ಇಜೆಬೇಲಳ ಜಾರತ್ವವೂ ಅವಳ ಮಾಟಗಳೂ ಅಧಿಕವಾಗಿರುವಾಗ ಸಮಾಧಾನವೆಲ್ಲಿ?” ಎಂದು ಉತ್ತರಕೊಟ್ಟನು. (2 ಅರ. 9:22, NIBV) ಅನಂತರ ತನ್ನ ಬಿಲ್ಲನ್ನು ಬೊಗ್ಗಿಸಿ ಯೋರಾಮನ ಹೃದಯವನ್ನು ತೂರಿ ಬರುವಂತೆ ಬಾಣ ಹೊಡೆದನು. ಹಿರಿಯರು ಸಹ ಯೇಹುವಿನಂತಿರಬೇಕು. ಶಾಂತಿಯನ್ನು ಕಾಪಾಡುವ ಸಲುವಾಗಿ ತಪ್ಪುಮಾಡಿ ಪಶ್ಚಾತ್ತಾಪಪಡದ ವ್ಯಕ್ತಿಗಳ ವಿಷಯವಾಗಿ ಸುಮ್ಮನಿರಬಾರದು. ಪಶ್ಚಾತ್ತಾಪಪಡದ ಆ ಅಪರಾಧಿಯನ್ನು ಸಭೆಯಿಂದ ತೆಗೆದುಹಾಕಬೇಕು. ಇಡೀ ಸಭೆಯು ಯೆಹೋವನೊಂದಿಗೆ ಸಮಾಧಾನದ ಸಂಬಂಧದಲ್ಲಿ ಉಳಿಯಲಿಕ್ಕಾಗಿ ಹೀಗೆ ಮಾಡಬೇಕು.—1 ಕೊರಿಂ. 5:1, 2, 11-13.

17. ಶಾಂತಿಯನ್ನು ಕಾಪಾಡುವುದರಲ್ಲಿ ಕ್ರೈಸ್ತರೆಲ್ಲರಿಗೆ ಯಾವ ಪಾತ್ರವಿದೆ?

17 ಸಹೋದರರ ಮಧ್ಯೆ ತಲೆದೋರುವ ಹೆಚ್ಚಿನ ಮನಸ್ತಾಪಗಳು ನ್ಯಾಯನಿರ್ಣಾಯಕ ಕ್ರಮ ಅಗತ್ಯಪಡಿಸುವ ಗಂಭೀರ ತಪ್ಪುಗಳಾಗಿರುವುದಿಲ್ಲ. ಹಾಗಾಗಿ ತಪ್ಪುಗಳನ್ನು ಮನ್ನಿಸಿ ಅಲ್ಲೇ ಮುಚ್ಚಿಬಿಟ್ಟು ಪ್ರೀತಿ ತೋರಿಸುವುದು ಒಳ್ಳೇದಲ್ಲವೆ? “ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು; ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು” ಎಂದು ದೇವರ ವಾಕ್ಯ ಹೇಳುತ್ತದೆ. (ಜ್ಞಾನೋ. 17:9) ಈ ಮಾತುಗಳನ್ನು ನೆನಪಿನಲ್ಲಿಟ್ಟು ಪಾಲಿಸುವುದಾದರೆ ಸಭೆಯಲ್ಲಿ ಯಾವಾಗಲೂ ಶಾಂತಿ ನೆಲಸಿರುವುದು ಹಾಗೂ ಯೆಹೋವ ದೇವರಿಗೆ ನಾವು ಆಪ್ತ ಸ್ನೇಹಿತರಾಗಿರುವೆವು!—ಮತ್ತಾ. 6:14, 15.

ಶಾಂತಿ ಕಾಪಾಡಿ ಆಶೀರ್ವಾದ ಕೊಯ್ಯಿರಿ

18, 19. ಶಾಂತಿ ಕಾಪಾಡಿಕೊಳ್ಳುವುದರಿಂದ ಯಾವ ಪ್ರಯೋಜನಗಳಿವೆ?

18 ಶಾಂತಿ ಕಾಪಾಡಿಕೊಳ್ಳಲು ನಾವು ಪ್ರಯತ್ನಿಸುತ್ತಾ ಇರುವುದಾದರೆ ಯೆಹೋವನು ನಮ್ಮನ್ನು ಆಶೀರ್ವದಿಸುವನು. ಯೆಹೋವ ದೇವರ ಮಾದರಿಯನ್ನು ಅನುಕರಿಸುವಾಗ ಆತನಿಗೆ ಇನ್ನೂ ಆಪ್ತರಾಗುವೆವು ಮತ್ತು ಆಧ್ಯಾತ್ಮಿಕ ಪರದೈಸಿನ ಶಾಂತಿಯನ್ನು ವರ್ಧಿಸುವೆವು. ಸಭೆಯ ಸದಸ್ಯರೊಂದಿಗೆ ನಾವು ಶಾಂತಿಯಿಂದ ಇರುವುದಾದರೆ ಯಾರಿಗೆ “ಶಾಂತಿಯ ಸುವಾರ್ತೆ” ಸಾರುತ್ತೇವೋ ಅವರೊಂದಿಗೂ ಶಾಂತಿಯಿಂದಿರಲು ಸಾಧ್ಯವಾಗುತ್ತದೆ. (ಎಫೆ. 6:15) ಆಗ ನಾವು ‘ಎಲ್ಲರೊಂದಿಗೆ ಕೋಮಲಭಾವದಿಂದಿರಲು ಮತ್ತು ಕೇಡನ್ನು ಅನುಭವಿಸುತ್ತಿರುವಾಗಲೂ ತಾಳಿಕೊಂಡಿರಲು’ ಶಕ್ತರಾಗುವೆವು.—2 ತಿಮೊ. 2:24.

19 “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು” ನೆನಪಿಡಿ. (ಅ. ಕಾ. 24:15) ಆಗ “ಲೋಕದ ಆದಿಯಿಂದ” ಜೀವಿಸಿದ್ದ ಬೇರೆ ಬೇರೆ ಪ್ರವೃತ್ತಿಯ, ಭಿನ್ನ ವ್ಯಕ್ತಿತ್ವ ಹಿನ್ನೆಲೆಯ ಲಕ್ಷಗಟ್ಟಲೆ ಜನರು ಪುನರುತ್ಥಾನಗೊಳ್ಳುವರು! (ಲೂಕ 11:50, 51) ಅವರಿಗೆ ಶಾಂತಿಯ ಮಾರ್ಗಗಳನ್ನು ಕಲಿಸುವ ಭವ್ಯ ಅವಕಾಶ ನಮಗಿರುವುದು! ಶಾಂತಿಶೀಲರಾಗಿರಲು ನಮಗೀಗ ಸಿಗುತ್ತಿರುವ ತರಬೇತಿಯು ಆ ಸಮಯದಲ್ಲಿ ನಮಗೆ ಪ್ರಯೋಜನಕ್ಕೆ ಬಂದೇ ಬರುವುದು!

[ಪಾದಟಿಪ್ಪಣಿ]

^ ಪ್ಯಾರ. 6 ಸುಳ್ಳುಮಾಹಿತಿ ಹಬ್ಬಿಸುವುದು, ವಂಚನೆ ಮುಂತಾದ ಗಂಭೀರ ತಪ್ಪು ಸಂಭವಿಸಿದಾಗ ಏನು ಮಾಡಬೇಕೆಂಬ ಬೈಬಲಾಧರಿತ ಸಲಹೆಗಳಿಗಾಗಿ 1999, ಅಕ್ಟೋಬರ್‌ 15ರ ಕಾವಲಿನಬುರುಜು, ಪುಟ 17-22 ನೋಡಿ.

ನೀವೇನು ಕಲಿತಿರಿ?

• ನಾವು ಇತರರ ಮನನೋಯಿಸಿರುವಲ್ಲಿ ಶಾಂತಿ ಕಾಪಾಡಿಕೊಳ್ಳಲು ಏನು ಮಾಡಬೇಕು?

• ಇತರರು ನಮ್ಮ ಮನನೋಯಿಸಿದಾಗ ಶಾಂತಿ ಕಾಪಾಡಿಕೊಳ್ಳಲು ನಾವೇನು ಮಾಡಬೇಕು?

• ಇಬ್ಬರ ನಡುವೆ ಮನಸ್ತಾಪವಿರುವಲ್ಲಿ ನಾವು ಒಬ್ಬರ ಪಕ್ಷವಹಿಸುವುದು ವಿವೇಕದ ಲಕ್ಷಣವಲ್ಲವೇಕೆ?

• ಪಾಪ ಮಾಡಿದವನೊಂದಿಗೆ ಶಾಂತಿಯನ್ನು ಕಾಪಾಡುವುದಕ್ಕಿಂತ ಸರಿಯಾದದ್ದನ್ನು ಮಾಡುವುದು ಪ್ರಾಮುಖ್ಯವೇಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 29ರಲ್ಲಿರುವ ಚಿತ್ರಗಳು]

ಮನಸಾರೆ ಕ್ಷಮಿಸುವವರನ್ನು ಯೆಹೋವ ದೇವರು ಪ್ರೀತಿಸುತ್ತಾನೆ